ಸಾಧಕರ ಅಥವ ಯಶಸ್ವಿಗಳ ಬಗೆಗಿನ ಮನುಷ್ಯನ ಕುತೂಹಲ ಇಂದುನೆನ್ನೆಯದಲ್ಲ. ಇತಿಹಾಸವಂತೂ ಕೆಲವೊಮ್ಮೆ ಅವರದೇ ಚರಿತ್ರೆಯಿಂದ ತುಂಬಿಹೋಗಿದೆ. ಆರ್ಥಿಕವಾಗಿ ಬಹುಯಶಸ್ವಿಯಾದವರ ಬಗ್ಗೆ ತಿಳಿದುಕೊಳ್ಳಬೇಕೆಂಬ ಈಗಿನವರ ದಾಹವೂ ಕಳೆದೆರಡು ಶತಮಾನಗಳ ಹೊಸ ಆರ್ಥಿಕ ವ್ಯವಸ್ಥೆಯಲ್ಲಿ ಅರ್ಥಮಾಡಿಕೊಳ್ಳುವಂತಹುದೆ. ತಮ್ಮ ಜೀವನದಲ್ಲಿ ಸ್ಫೂರ್ತಿ-ಪ್ರೇರಣೆ ಪಡೆದುಕೊಳ್ಳಲು ಜನ ಇಂತಹವರ ಯಶಸ್ಸಿನ ಕತೆಗಳನ್ನು ಓದುತ್ತಾರೆ. ಅವರನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಮಾದರಿಯಾಗಿ ಮಾಡಿಕೊಳ್ಳುತ್ತಾರೆ. ಹೀಗೆ ಮಾಡುತ್ತ ಕೆಲವರು ಒಂದು ಹಂತದ ತನಕ ಯಶಸ್ಸನ್ನೂ ಪಡೆಯಬಹುದು. ಹಾಗೆಯೆ, ಬಹುಪಾಲು ಜನ ತಮ್ಮ ಮತ್ತದೇ ಜೀವನದ ಸುಳಿಯಲ್ಲಿ ಸುತ್ತುತ್ತಿರಬಹುದು.
ಜೀವನದಲ್ಲಿ ಅಪಾರ ಸಾಧನೆ ಮಾಡಿದ ಮತ್ತು ಅಸಾಮಾನ್ಯ ಯಶಸ್ಸು ಪಡೆದ ಜನರು (ಅಥವ ಸಮುದಾಯಗಳು) ಮಾಮೂಲಿ ಬಹುಸಂಖ್ಯಾತ ಜನರಿಗಿಂತ ಭಿನ್ನವಾದವರು. ಅವರು ಸಾಮಾನ್ಯರ ಗುಂಪಿಗಿಂತ "ಹೊರಗಣವರು." ಎಲ್ಲರೂ ಯಾವಾಗೆಂದರೆ ಆಗ ಈ "ಯಶಸ್ವಿ" ಹೊರಗಣವರಲ್ಲ್ಲಿ ಒಬ್ಬರಾಗಲು ಸಾಧ್ಯವಿಲ್ಲ. ಹಲವಾರು ಸಾಧಕರ ಜೀವನವನ್ನು ನಾವು ಗಮನಿಸಿದಾಗ ನಮಗೆ ಮೇಲ್ನೋಟಕ್ಕೆ ಕಾಣಿಸುವುದೇನೆಂದರೆ, ಸಾಧಕರಾಗಲು ಮೊದಲಿಗೆ ಪ್ರತಿಭೆ ಬೇಕು. ಬಹುಶಃ ಅದು ಜನ್ಮಜಾತವಾಗಿ ಬರಬೇಕು. ಹಾಗೆಯೆ ಕಠಿಣ ಪರಿಶ್ರಮ ಬೇಕು. ಜೊತೆಗೆ ವಿಪರೀತವೆನಿಸುವಷ್ಟು ಸಾಧಿಸುವ ಮನೋಬಲ ಅಥವ ಆಕಾಂಕ್ಷೆ ಇರಬೇಕು. ಅಂತಹವರು ಮಾತ್ರ "ಹೊರಗಣವ"ರಾಗಲು ಸಾಧ್ಯ.
ಹೌದೆ? ಪ್ರತಿಭೆ ಜನ್ಮಜಾತವೆ? ಆ ಪ್ರತಿಭೆಯಿಂದ, ಬುದ್ಧಿಯಿಂದ, ಮಹತ್ವಾಕಾಂಕ್ಷೆಯಿಂದ, ಪರಿಶ್ರಮದಿಂದ, ಯಾರು ಏನು ಬೇಕಾದರೂ ಸಾಧಿಸಲು ಸಾಧ್ಯವೆ? ಯಶಸ್ಸಿಗೆ ಅಥವ ಸಾಧನೆಗೆ ಇಷ್ಟೇ ಸಾಕೆ ಅಥವ ಇನ್ನೂ ಏನಾದರೂ ಬೇಕೆ?
ಒಬ್ಬ ವ್ಯಕ್ತಿಯ ಅಥವ ಸಮುದಾಯದ ಯಶಸ್ಸಿನಲ್ಲಿ ಆತನ ಕುಟುಂಬದ, ಸಮುದಾಯದ, ಸಂದರ್ಭದ ಪಾಲಿಲ್ಲವೆ? ಇದರಲ್ಲಿ ಒಬ್ಬನ ಸಾಂಸ್ಕೃತಿಕ ಹಿನ್ನೆಲೆ, ಕೌಟುಂಬಿಕ ಹಿನ್ನೆಲೆ ಯಾವ ಪಾತ್ರ ವಹಿಸುತ್ತದೆ? ಸಮುದಾಯವೊಂದರ ಯಶಸ್ಸಿನಲ್ಲಿ ಅದರ ಸಂಸ್ಕೃತಿ ಯಾ ಪರಂಪರೆಯ ಪಾತ್ರವೇನು?
ಹಾಗೆಯೆ, ಪ್ರತಿಭೆ, ಪರಿಶ್ರಮ, ಮಹಾತ್ವಾಕಾಂಕ್ಷೆ ಇರುವವರೆಂದು ಕಾಣಿಸುವ ಕೆಲವರು ಎಷ್ಟೆಲ್ಲಾ ಏಗಿದರೂ ಸಾಧನೆಯ ಶಿಖರ ಏರಲು ಸಾಧ್ಯವಾಗುವುದಿಲ್ಲವೇಕೆ?
ಈಗ ಕೆಲವೊಂದು ವ್ಯಕ್ತಿಗಳ ಉದಾಹರಣೆ ತೆಗೆದುಕೊಂಡು ಇದರ ಬಗ್ಗೆ ಆಲೋಚಿಸೋಣ.
ಇದೇ ಸಂದರ್ಭದಲ್ಲಿ, "ಅಮೆರಿಕದ ಅತಿ ಬುದ್ಧಿವಂತ ಮನುಷ್ಯ" ಎನಿಸಿಕೊಂಡಿರುವ, ಸುಮಾರು 195-210 ರ ಸುಮಾರಿನಲ್ಲಿ ಬುದ್ಧಿ ಪ್ರಮಾಣ (IQ) ಹೊಂದಿರುವ ಕ್ರಿಸ್ ಲ್ಯಾಂಗನ್ ಯಾಕೆ ಅಂತಹ ಹೇಳಿಕೊಳ್ಳುವಷ್ಟು ಸಾಧನೆ ಮಾಡಲಾಗಲಿಲ್ಲ, ಆಗುತ್ತಿಲ್ಲ? ಅವನ ಕತೆಯಾದರೂ ಏನು?
ಹಾಗೆಯೆ, ವಿಶ್ವಪ್ರಸಿದ್ಧ ಸಂಗೀತತಂಡ ಬೀಟಲ್ಸ್‌ಗೂ,
ಈಗ ಸಮುದಾಯಗಳ ವಿಷಯಕ್ಕೆ ಬರೋಣ. ಯಾಕೆ ಕೆಲವೊಂದು ದೇಶ-ಸಮುದಾಯಗಳ ಜನ ಕೆಲವು ವಿಷಯಗಳಲ್ಲಿ ಬೇರೆಲ್ಲರಿಗಿಂತ ಉತ್ತಮ ಸಾಧನೆ ತೋರುತ್ತಾರೆ? ಪೂರ್ವ ಏಷಿಯನ್ನರಿಗೆ ಗಣಿತ ಬಹಳ ಸುಲಭ. ನಮ್ಮದೇ ದೇಶವನ್ನು ಗಮನಿಸಿದಾಗ ಗಣಿತ ಮತ್ತು ವಿಜ್ಞಾನದಲ್ಲಿ ಪಕ್ಕದ ತಮಿಳುನಾಡಿನವರು ಎಲ್ಲರಿಗಿಂತ ಮುಂದಿರುತ್ತಾರೆ.
ಇನ್ನು ಕೆಲವು ಸಮುದಾಯಗಳು ಕೆಲವೊಂದು ಕೆಲಸಗಳಲ್ಲಿ ಕಳಪೆ ಸಾಧನೆ ತೋರುತ್ತಾರೆ. ಕಳೆದ ದಶಕದ ತನಕ ಕೊರಿಯನ್ನರ ವಿಮಾನ ಸಂಸ್ಥೆ ಬಹಳ ಕುಪ್ರಸಿದ್ಧಿ ಪಡೆದಿತ್ತು. ಬೇರೆ ಎಲ್ಲ ಏರ್‌ಲೈನ್ಸ್‌ನವರಿಗಿಂತ ಕೊರಿಯನ್ ಏರ್‌ಲೈನ್ಸ್‌ನ ಅಪಘಾತದ ಪ್ರಮಾಣ ಜಾಸ್ತಿ ಇತ್ತು. ಕೆಲವು ದೇಶಗಳಂತೂ ತಮ್ಮ ದೇಶದ ಮೇಲೆ ಕೊರಿಯನ್ ಏರ್‌ಲೈನ್ಸ್‌ನ ವಿಮಾನಗಳು ಹಾರದಂತೆ ನಿಷೇಧಿಸಿಯೂ ಬಿಟ್ಟಿದ್ದವು. ಅದಕ್ಕೆ ಕಾರಣ ಏನಿರಬಹುದು? ಕೊರಿಯನ್ನರದೂ ನಮ್ಮ ದೇಶದಂತೆಯೆ ಹಿರಿಯರನ್ನು, ತಮಗಿಂತ ಹೆಚ್ಚಿನ ಅಧಿಕಾರ ಉಳ್ಳವರನ್ನು ಗೌರವಿಸುವ, ತಗ್ಗಿಬಗ್ಗಿ ನಡೆಯುವ ಸಂಪ್ರದಾಯ. ಅವರ ಭಾಷೆಯೂ ಅಂತಹ "ಪಾಳೆಯಗಾರಿಕೆ/Feudal" ಗುಣಗಳನ್ನು ಹೊಂದಿದೆ. ನಮ್ಮ ಭಾಷೆಯನ್ನೆ ಗಮನಿಸಿ. ಇಲ್ಲಿ ಏಕವಚನ/ಬಹುವಚನಗಳು ಸ್ಪಷ್ಟವಾಗಿ ವಿಭಾಗವಾಗಿವೆ. ಹಿರಿಯರನ್ನು, ತಮಗಿಂತ ಮೇಲಿನವರನ್ನು ಬಹುವಚನದಲ್ಲಿ ಸಂಬೋಧಿಸಲು ಭಾಷೆ ಅವಕಾಶ ಮಾಡಿಕೊಟ್ಟಿದೆ. ಒಂದೇ ಅರ್ಥ ಕೊಡುವ ಪದದ ಬೇರೆಬೇರೆ ರೂಪವೆ (ನೀನು/ನೀವು, ಅವಳು/ಅವರು) ಯಾರು ಯಾರನ್ನು ಸಂಬೋಧಿಸುತ್ತಿದ್ದಾರೆ ಎನ್ನುವುದನ್ನೂ, ಸಮಾಜದಲ್ಲಿನ ಶ್ರೇಣಿಯನ್ನೂ ತಿಳಿಸಿಬಿಡುತ್ತದೆ. ಇಂತಹುದೆ ಸಂಪ್ರದಾಯ ಮತ್ತು ಭಾಷೆಯ ಕೊರಿಯನ್ನರಿಗೆ ಅವರ ಆ ಸಂಪ್ರದಾಯ ಮತ್ತು ಭಾಷೆಯೆ ಅವರು ಉತ್ತಮ ವಿಮಾನ ಪೈಲಟ್/ಸಹಪೈಲಟ್/ಫ್ಲೈಟ್ ಇಂಜಿನಿಯರ್‌ಗಳಾಗದಂತೆ ತಡೆದಿತ್ತೆ?
ಕಾನ್ವೆಂಟ್‌ಗಳಿಗೆ ಹೋಗುವ ನಮ್ಮ ಬಹುಪಾಲು ಮಧ್ಯಮ/ಮೇಲ್ಮಧ್ಯಮವರ್ಗದ ಮಕ್ಕಳಿಗಿಂತ ಸರ್ಕಾರಿ ಶಾಲೆಗಳಿಗೆ ಹೋಗುವ ನಮ್ಮ ಬಡಮಕ್ಕಳು ಓದಿನಲ್ಲಿ ಸಹಜವಾಗಿಯೆ ಹಿಂದುಳಿದಿರುತ್ತಾರೆ. ಅದಕ್ಕಿರಬಹುದಾದ ಮುಖ್ಯ ಕಾರಣಗಳಲ್ಲಿ ಆ ಮಕ್ಕಳಿಗೆ ಮನೆಯಲ್ಲಿ ಹೇಳಿಕೊಡಲಾಗದ ಅವಿದ್ಯಾವಂತ, ಬಡ ಪೋಷಕರೂ ಒಂದು. ಈ ಬಡ-ಅವಿದ್ಯಾವಂತ ಪೋಷಕರ ಮಕ್ಕಳು ಕಲಿಯುವುದಕ್ಕೂ ಮಧ್ಯಮವರ್ಗದ ವಿದ್ಯಾವಂತ ಪೋಷಕರ ಮಕ್ಕಳು ಕಲಿಯುತ್ತಿರುವುದಕ್ಕೂ ಇರುವ ಅಂತರವನ್ನು ನಮ್ಮ ಸಮಾಜ ತೊಡೆಯಲು ಸಾಧ್ಯವೆ? ನಮ್ಮ ಸರ್ಕಾರಿ ಶಾಲೆಗಳ ಬೇಸಿಗೆ ರಜೆಯನ್ನು ಕಡಿಮೆ ಮಾಡಿದರೆ, ಅಥವ ದೀರ್ಘ ರಜೆಗಳೆ ಇಲ್ಲದಂತೆ ಮಾಡಿದರೆ, ಸರ್ಕಾರಿ ಶಾಲೆಗಳ ಬಡಮಕ್ಕಳೂ ಓದಿನಲ್ಲಿ ಮುಂದಿರಬಲ್ಲರೆ? ಇಷ್ಟಕ್ಕೂ ಬೇಸಿಗೆ ರಜೆಗೂ ಬಡಮಕ್ಕಳ ಓದಿಗೂ ಹೇಗೆ ಎಲ್ಲಿಂದೆಲ್ಲಿಯ ಸಂಬಂಧ?
ಹೀಗೆ,
ಈಗ, "ಹೊರಗಣವರು" ನಲ್ಲಿ ಮೇಲಿನ ಆಯಾಮಗಳಿಗೆ ಪೂರಕವಾಗಿ ಗ್ಲಾಡ್‌ವೆಲ್ ಒದಗಿಸಿರುವ ಒಂದಷ್ಟು ಉದಾಹರಣೆಗಳನ್ನು, ಪುರಾವೆಗಳನ್ನು ಗಮನಿಸೋಣ.
(ಮುಂದುವರೆಯುವುದು...)
No comments:
Post a Comment