(ಇದು ಈ ಚುನಾವಣೆಯಲ್ಲಿ ನಾನು ಕೇಳಿದ ನನ್ನೂರಿನಲ್ಲಿ ನಡೆದ ಸತ್ಯಘಟನೆ. ಚುನಾವಣೆಯ ಹಿಂದಿನ ದಿನ ವ್ಯಕ್ತಿಯೊಬ್ಬ ಜನತಾದಳದ ಸ್ಥಳಿಯ ನಾಯಕನ ಮನೆಗೆ ಓಡಿ ಬರುತ್ತಾನೆ. ’ಅಣ್ಣಾ, ರಾತ್ರಿ ಕಾಂಗ್ರೆಸ್‍ನವರು ಮತ್ತು ಬಿಜೆಪಿಯವರು ಬಂದು ದುಡ್ಡು ಕೊಟ್ಟರಣ್ಣ. ದಳದವರೇ ಕೊಡಲಿಲ್ಲ. ಅದಕ್ಕೇ ಬಂದೆ ಅಣ್ಣ.’ ಹಿಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಮೂರೂ ಪಕ್ಷಗಳೂ ದುಡ್ಡು ಹಂಚಿದ್ದರು. ಈ ಸಾರಿ ಕೇವಲ ಇಬ್ಬರೇ ಕೊಟ್ಟಿದ್ದಾರೆ. ನನಗೆ ಎಲ್ಲಿಯಾದರೂ ಮೂರನೆಯವರದು ತಪ್ಪಿ ಹೋಯಿತಾ ಎನ್ನುವುದು ಅವನ ಸಂಶಯ. ಆದರೆ ಈತ ಎಷ್ಟು ಪ್ರಜ್ಞಾವಂತ ಮತ್ತು ನಮ್ಮ ಚುನಾವಣೆ ವ್ಯವಸ್ಥೆ ಯಾರುಯಾರು ಚುನಾವಣೆಗೆ ನಿಂತಿದ್ದಾರೆ ಎನ್ನುವುದನ್ನು ಜನಸಾಮಾನ್ಯರಿಗೆ ತಿಳಿಸುವಲ್ಲಿ ಸೋಲುತ್ತಿದೆ ಅಂದರೆ, ಈ ಕ್ಷೇತ್ರದಲ್ಲಿ ಈ ಚುನಾವಣೆಗೆ ದಳ ತನ್ನ ಅಭ್ಯರ್ಥಿಗಳನ್ನೇ ಹಾಕಿರಲಿಲ್ಲ; ಕಾಂಗ್ರೆಸ್‌ನೊಡನೆ ಆದ ಅಲಿಖಿತ ಒಪ್ಪಂದದಿಂದಾಗಿ. ಬಹುಶ: ಇದು ಕರ್ನಾಟಕದ ಹಲವಾರು ಕಡೆ ಎಲ್ಲೆಲ್ಲಿ ಕಾಂಗ್ರೆಸ್ ಮತ್ತು ಜನತಾದಳದ ನಡುವೆ ಒಪ್ಪಂದಗಳಾಗಿದ್ದವೊ ಅಲ್ಲೆಲ್ಲ ಸ್ಥಳೀಯ ನಾಯಕರಿಗೆ ಅಗಿರಬಹುದಾದ ಅನುಭವ. )
ಹಿರಿಯೂರು ಮತ್ತು ಚಳ್ಳಕೆರೆ ಮಧ್ಯೆ ಇರುವ ಹೆದ್ದಾರಿಗೆ ಹೊಂದಿಕೊಂಡಂತೆ ಚಂಬೆಯವರ ಶಾಲೆ ಇದೆ. ಬಹಳ ಕಡಿಮೆ ಖರ್ಚಿನಲ್ಲಿ, ಸೃಜನಶೀಲತೆಯಿಂದ ಅವರು ಕಟ್ಟಡ ಕಟ್ಟಿದ್ದಾರೆ. ಬಹುಶಃ ನಮ್ಮ ಸರ್ಕಾರಿ ಶಾಲೆಗಳ ಕಟ್ಟಡಗಳಿಗೆ ಆಗುವ ಅರ್ಧ ಖರ್ಚೂ ಇವರ ಕಟ್ಟಡಗಳಿಗೆ ಆಗಿಲ್ಲ.
ನಾವು ಸಂಜೆ ಮೊಳಕಾಲ್ಮೂರು ತಾಲ್ಲೂಕಿನ ರಾಮಪುರ ತಲುಪಿದಾಗ ಅಮೃತ ನಿದ್ದೆ ಮಾಡುತ್ತಿದ್ದಳು. ಡಿಪ್ಲೊಮ ಓದಿರುವ ಹುಡಗನೊಬ್ಬ ನಡೆಸುತ್ತಿದ್ದ ಕಂಪ್ಯೂಟರ್ ಸೆಂಟರ್‌ನಲ್ಲಿ ಖಾರ-ಮಂಡಕ್ಕಿ ಮತ್ತು ಬಜ್ಜಿ ತಿಂದೆವು. ಆತನ ಉದ್ದಿಮೆ ಮತ್ತು ವಾಣಿಜ್ಯದ ಒಂದಷ್ಟು ಪರಿಚಯ ಆಯಿತು. ಸೆಲ್‌ಫೋನ್‌ಗಳಿಗೆ ಹಾಡು ತುಂಬಿಸುವ (!) ಕೆಲಸದಿಂದ ತನ್ನ ಉದ್ದಿಮೆ ಆರಂಭಿಸಿದವನು ಆತ. ಈಗ ಆತನ ಸೆಂಟರ್‌ನಲ್ಲಿ ಕಿಯಾನಿಕ್ಸ್‌ನವರು ಕಂಪ್ಯೂಟರ್‌ಗಳನ್ನು ಬಾಡಿಗೆ ತೆಗೆದುಕೊಂಡು ಸ್ಥಳೀಯ ಗ್ರಾಮಪಂಚಾಯಿತಿ ನೌಕರರಿಗೆ ಕಂಪ್ಯೂಟರ್ ತರಬೇತಿ ನೀಡುತ್ತಿದ್ದಾರೆ. ಈ ತಲೆಮಾರಿನ ಆಶಾವಾದ, ಕ್ರಿಯಾಶೀಲತೆ ಮತ್ತು ಉದ್ದಿಮೆಶೀಲತೆಯ ಪ್ರತೀಕ ಆತ. Not everything is lost.
ಡಿಸೆಂಬರ್ 27ರ ಬೆಳಗ್ಗೆ ಅಲ್ಲಿಯ ಜಿಂದಾಲ್‌ನ ಒಂದೆರಡು ಪ್ರದೇಶ ನೋಡಿದೆವು. ಒಂದು ಹೊಸ ಪರಿಸರವನ್ನೇ ಅವರು ಸೃಷ್ಟಿಸಿಕೊಂಡಿದ್ದಾರೆ.
ಅಲ್ಲಿಂದ ನಮ್ಮ ಪ್ರಯಾಣ ಹಂಪಿ ಕನ್ನಡ ವಿಶ್ವವಿದ್ಯಾಲಯದತ್ತ. ಸ್ವಲ್ಪಹೊತ್ತು ಅಲ್ಲಿ ಅಡ್ಡಾಡಿದೆವು. ಈ ವಿಶ್ವವಿದ್ಯಾಲಯ ನನ್ನಲ್ಲಿ ಹುಮ್ಮಸ್ಸು ಹುಟ್ಟಿಸದೆ ನಿರಾಸೆ ಹುಟ್ಟಿಸುತ್ತದೆ. ಕಾರಣ ಹಲವಿವೆ. ಸದ್ಯಕ್ಕೆ ಇದು ಆಕಾಂಕ್ಷೆ, ಮಹತ್ವಾಕಾಂಕ್ಷೆಗಳಿಲ್ಲದ, ಇಂದು ಮತ್ತು ನಾಳೆಗೆ ಸಿದ್ಧವಾಗಿಲ್ಲದ ಕನ್ನಡ ವಿಶ್ವವಿದ್ಯಾಲಯ. ಬದಲಾದ ಈ ಕಾಲಘಟ್ಟದಲ್ಲಿ ಈ ವಿಶ್ವವಿದ್ಯಾಲಯ ತನ್ನ ಜವಾಬ್ದಾರಿ ಮತ್ತು ಆಶಯಗಳನ್ನು ಮತ್ತೊಮ್ಮೆ redefine ಮಾಡಿಕೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಹೆಸರಿಗೆ ಮತ್ತು ಆಶಯಕ್ಕೆ ಅಪಚಾರ.
ನಂತರ ಉಪಕುಲಪತಿಗಳನ್ನು ಕಂಡೆವು. ಬಳಿಕ ಅಲ್ಲಿಯ ಜಾನಪದ ಮ್ಯೂಸಿಯಮ್‌ನತ್ತ ಹೊರಟೆವು. ದಾರಿಯಲ್ಲಿ ಅಚಾನಕ್ಕಾಗಿ ಮೊಗಳ್ಳಿ ಗಣೇಶ್ ಸಿಕ್ಕರು. ಅವರ ಜೊತೆಯಲ್ಲಿ ಹಂಪಿಯ ವಿರೂಪಾಕ್ಷ ದೇವಾಲಯದ ಬಳಿ ಇರುವ "ಮ್ಯಾಂಗೊ ಟ್ರೀ"ಯಲ್ಲಿ ಊಟ. ತುಂಗಭದ್ರ ನದಿಯ ದಂಡೆಯ ಇಳಿಜಾರನ್ನೆ ಬಳಸಿಕೊಂಡು ನೆಲದ ಮೇಲೆ ಕುಳಿತು ಊಟ ಮಾಡುವ ವ್ಯವಸ್ಥೆ ಅಲ್ಲಿದೆ. ನಾವು ಹೋಗಿದ್ದೆ ತೀರಾ ತಡವಾಗಿ ಆಗಿದ್ದರಿಂದ ನಮಗೆ ದಕ್ಷಿಣ ಭಾರತೀಯ ಊಟ
ಅಂದು ರಾತ್ರಿ ಪೃಥ್ವಿ, ಅಮೃತ, ಮತ್ತು ನಾನು ಪ್ರಜಾವಾಣಿಯಲ್ಲಿ ಅಂಕಣ ಬರೆಯುವ ಪ್ರಾಧ್ಯಾಪಕ ಟಿ.ಆರ್.ಚಂದ್ರಶೇಖರ್‌ರವರನ್ನು ಅವರ ಹೊಸಪೇಟೆಯ ಮನೆಯಲ್ಲಿ ಕಂಡೆವು. ಬಹಳ ಹೊತ್ತು ಕರ್ನಾಟಕದ ರಾಜಕಾರಣ, ಅರ್ಥಿಕ ವಿಷಯಗಳು, ಪಾಲಿಸಿ ಮೇಕಿಂಗ್ ಬಗ್ಗೆ ಮಾತನಾಡಿದೆವು. ನಿದ್ದೆಯಿಂದ ಎಬ್ಬಿಸಿಕೊಂಡು ಹೋಗಿದ್ದರಿಂದ ಅಮೃತ ಸ್ವಲ್ಪ ಹೊತ್ತು ಅಲ್ಲಿ ಹೊಂದಿಕೊಳ್ಳಲಿಲ್ಲ. ನಂತರ ಟಿ.ಆರ್.ಚಂದ್ರಶೇಖರ್‌ರವರ ಪತ್ನಿಯ ಜೊತೆ ಮಾತನಾಡುತ್ತ, ಕತೆ ಹೇಳುತ್ತ, ಅವರಿಂದ ತಲೆ ಕೂಡ ಬಾಚಿಸಿಕೊಂಡಳು. ರಾತ್ರಿ ಹೊಸಪೇಟೆಯಲ್ಲಿ ಊಟ. ಅಂದು ಹೋಟೆಲ್‌ನಲ್ಲಿ ಊಟವಾದ ನಂತರ ಅಮೃತಳಿಗೆ ಅವಳು ಎಂದೂ ಹಾಡುವ ಅವಳ ಪಠ್ಯಪುಸ್ತಕದ ಪದ್ಯ "ನದಿಯಲೊಂದು ಬಕ, ಮುದುರಿಕೊಂಡು ಮೊಕ, ಕಾಲನೆತ್ತಿ ಕುಣಿಯುತಿತ್ತು, ಥಕ ಥಕ ಥಕ"ಗೆ ನಟನೆ ಸಮೇತ ಕುಣಿಯುತ್ತ ಹಾಡುವುದನ್ನು ಕಲಿಸಿದೆ. ಬಹಳ ಖುಷಿಯಿಂದ ಕಲಿತಳು. ಅಂದು ರಾತ್ರಿ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ (ಇದ್ದುದರಲ್ಲಿ ಸ್ವಲ್ಪ ತುಟ್ಟಿಯಾದ ಕೋಣೆಯಲ್ಲಿ) ಉಳಿದುಕೊಂಡೆವು.
ಡಿಸೆಂಬರ್ 28ರ ಬೆಳಗ್ಗೆ ಹೊರಡುವ ಮುಂಚೆ ಮತ್ತೊಮ್ಮೆ ಉಪಕುಲಪತಿಗಳನ್ನು ಕಂಡೆವು. ಅಮೃತ ಅಲ್ಲಿ ತನ್ನ ತುಂಟಾಟ ಮತ್ತು ಮುಗ್ಧತೆಯಿಂದ ಉಪಕುಲಪತಿಗಳ ಶ್ರೀಮತಿಯವರಿಂದ ಒಂದು ಗೊಂಬೆಯನ್ನು (ಬ್ಯಾಂಗ್‌ಕಾಕ್ ರಾಜಕುಮಾರಿ) ಉಡುಗೊರೆಯಾಗಿ ಪಡೆದಳು.
ಅಲ್ಲಿಂದ ನಾವು ಹೊರಟಿದ್ದು ಗುಲ್ಬರ್ಗದೆಡೆಗೆ. ದಾರಿಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ಸಿಗುತ್ತದೆ. ಇಲ್ಲಿ ಕತೆಗಾರ ಕಲಿಗಣನಾಥ ಗುಡದೂರು ಇದ್ದರು. ಅವರಿಗೆ ಫೋನ್ ಮಾಡಿ ಮಧ್ಯಾಹ್ನ ಊಟದ ಸಮಯಕ್ಕೆ ಅಲ್ಲಿರುತ್ತೇವೆ, ಒಂದು ಒಳ್ಳೆಯ ಜೋಳದ ರೊಟ್ಟಿ ಊಟಕ್ಕೆ ಕರೆದುಕೊಂಡು ಹೋಗಿ ಎಂದು ಕೇಳಿದ್ದೆ.
ರಾತ್ರಿ ಗುಲ್ಬರ್ಗದ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಉಳಿದುಕೊಂಡೆವು. ಗುಲ್ಬರ್ಗದಲಿ "ಕಲ್ಬುರ್ಗಿ ಕಂಪು" ನಡೆಯುತ್ತಿತ್ತು. ಹೊರ ಊರು/ರಾಜ್ಯಗಳಿಂದ ಬಂದ ಖಾವಿಧಾರಿಗಳು ಮತ್ತು ಇತರೆ ಜನರಿಂದ ವಿಶ್ವವಿದ್ಯಾಲಯದ ಗೆಸ್ಟ್‌ಹೌಸ್ ತುಂಬಿಹೋಗಿತ್ತು. ಹಾಗಾಗಿ ರೂಮು ದೊರಕಿಸಿಕೊಳ್ಳುವುದು ಸ್ವಲ್ಪ ಕಷ್ಟವೇ ಆಯಿತು. ಒಂದೇ ರೂಮ್ ಸಿಕ್ಕಿದ್ದು. ಅಮೃತ ಮತ್ತು ನಾನು ನೆಲದ ಮೇಲೆ ಎರಡು ಹಾಸಿಗೆ ಹಾಸಿಕೊಂಡು ಮಲಗಿದೆವು. ಅಲ್ಲಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ ಕತೆಗಾರ ವಿಕ್ರಮ್ ವಿಸಾಜಿಯವರ ಸ್ನೇಹಿತ ಶಾಂತಪ್ಪ ಡಂಬಳ ರಾತ್ರಿ ಬಂದು ಮಾತನಾಡಿಸಿಕೊಂಡು ಹೋಗಿದ್ದರು.
ಅವರು ಡಿಸೆಂಬರ್ 29ರ ಬೆಳಗ್ಗೆ ತಿಂಡಿಯ ಸಮಯಕ್ಕೆ ಒಂದು ಜಾಗದಲ್ಲಿ ಸಿಕ್ಕರು. ನಮಗೆ ಗುಲ್ಬರ್ಗ ತೋರಿಸಲು ಅವರು ಉತ್ಸುಕತೆ ತೋರಿದರು. ಆದರೆ ನಮಗೆ ನಗರ ನೋಡುವ ಮನಸ್ಸಿರಲಿಲ್ಲ. ಅವರ ಜೊತೆ ತಿಂಡಿ ಮುಗಿಸಿ ಶರಣರ ಕರ್ಮಭೂಮಿ (ಬಸವ)ಕಲ್ಯಾಣದತ್ತ ಹೊರಟೆವು. ಅಲ್ಲಿ ವಿಕ್ರಮ ವಿಸಾಜಿಯವರ ಗೆಳೆಯ ಮಹಾಂತೇಶ್ ನವಲಕಲ್ ಮನೆಗೆ ಹೋದೆವು. ಅಲ್ಲಿಯ ಗ್ರಾಮೀಣ ಮಹಿಳಾ ಬ್ಯಾಂಕಿನಲ್ಲಿ ಎಮ್.ಡಿ.ಯಾಗಿರುವ ನವಲಕಲ್ ಕತೆಗಾರರೂ ಸಹ. ಪೃಥ್ವಿಯವರ ಥೀಸಿಸ್ ಬಗ್ಗೆ ಮತ್ತು ಅದಕ್ಕೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ಅವರಿಬ್ಬರೂ ಮಾತನಾಡಿದರು. ನನಗೆ ಆ ಊರಿನ ಪರಿಚಯ ಇಲ್ಲದ್ದರಿಂದ ಮತ್ತು ಅಲ್ಲಿ ಕಾರು ಓಡಿಸುವ ಇಚ್ಛೆ ಇಲ್ಲದ್ದರಿಂದ ಮಹಾಂತೇಶ್‌ರನ್ನು ಸಾಧ್ಯವಾದರೆ ಅವರ ಡ್ರೈವರ್ ಅನ್ನೇ ಕಳಿಸುವಂತೆ ಕೇಳಿದ. ಆತ ಆ ಊರಿನ ರಸ್ತೆಯಲ್ಲಿ ಕಾರನ್ನು ಆಕಾಶಮಾರ್ಗದಲ್ಲಿ ಓಡಿಸುವಷ್ಟು ಚಾಣಾಕ್ಷ.
ನಂತರ ಅಲ್ಲಿಯ ಬಸವಣ್ಣನ ದೇವಸ್ಥಾನಕ್ಕೆ ಹೋದೆವು. ಚಂಬೆ ಗರ್ಭಗುಡಿಯ ಬಾಗಿಲಿನ ಮೆಟ್ಟಿಲಿಗೆ ನಮಸ್ಕರಿಸಿ ಅದರತ್ತ ನನ್ನ ಗಮನ ಸೆಳೆದರು. ಅದರ ಮೇಲೆಲ್ಲಾ ದಾನಿಗಳ ಹೆಸರು. ಅಲ್ಲಿರುವ ಪ್ರತಿಯೊಂದು ಚಿತ್ರಪಟದಲ್ಲೂ ಎಲ್ಲಕ್ಕಿಂತ ದೊಡ್ಡದಾಗಿ ಕಾಣುವುದು ಅದನ್ನು ಮಾಡಿಸಿದವರ, ಧನಸಹಾಯ ಮಾಡಿದವರ ಹೆಸರು. ನಾಚಿಕೆಗೇಡು. ಇದೊಂದು ರೋಗ. ನಂತರ ಅಕ್ಕ ನಾಗಮ್ಮನ ಗುಹೆ, ಅನುಭವ ಮಂಟಪ ನೋಡಿದೆವು. ಅಲ್ಲಿ ಅಮೃತ ಹುಳಿಯಾದ ಹುಣಿಸೆಕಾಯಿಯನ್ನು ಮರದಿಂದ ಕಿತ್ತು ಸವಿದಳು. ದಾರಿಯಲ್ಲಿ ಮಾತೆ ಮಹಾದೇವಿ ಕಟ್ಟಿಸುತ್ತಿರುವ ಸುಮಾರು ನೂರು ಅಡಿ (ಇನ್ನೂ ಹೆಚ್ಚು?) ಇದ್ದಿರಬಹುದಾದ ಬಸವಣ್ಣನ ಕಾಂಕ್ರಿಟ್ ವಿಗ್ರಹದ ಕಾಮಗಾರಿ ಕಾಣಿಸಿತು. ಬಸವಣ್ಣ ಬಹಳ ಜನರಿಂದ ಬಂಧಿಸಲ್ಪಟ್ಟಿದ್ದಾನೆ. ಜಂಗಮ ಬಸವಣ್ಣನಿಗಿಂತ ಸ್ಥಾವರ ಬಸವಣ್ಣ ಜನಪ್ರಿಯ. ತನ್ನ ಹಿಂಬಾಲಕರೆಂದು ಹೇಳಿಕೊಂಡವರಿಂದ ಬಸವಣ್ಣನಷ್ಟು ದುರುಪಯೋಗಕ್ಕೆ, ಅಪಾರ್ಥಕ್ಕೆ, ಅಪಚಾರಕ್ಕೆ ಒಳಗಾದ ಕರ್ನಾಟಕದ ಮತ್ತೊಬ್ಬ ಚಾರಿತ್ರಿಕ ವ್ಯಕ್ತಿ ಇಲ್ಲ.
ಮತ್ತೆ ಈ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಟ್ರಕ್‌ಗಳು. ಸಾರಿಗೆ ಈ ಊರಿನ ಬಹುದೊಡ್ದ ಉದ್ದಿಮೆ.
ನಂತರ ನವಲಕಲ್ ಕೆಲಸ ಮಾಡುವ GMASS ಮತ್ತು ಅದರ ಮಾತೃಸಂಸ್ಥೆ ಪ್ರವರ್ಧ (NGO) ಇರುವ ಹತ್ತಿರದ ಸಸ್ತಾಪುರಕ್ಕೆ ಹೋದೆವು. ಅಲ್ಲಿ ವಿಶಿಷ್ಟವಾದ ಸ್ಥಳೀಯ ಉಪ್ಪಿಟ್ಟು ತಿನ್ನುತ್ತ ಅವರ ಸಂಸ್ಥೆಗಳ ಬಗ್ಗೆ, micro-finance ಬಗ್ಗೆ, ಸ್ವಸಹಾಯ ಸಂಸ್ಥೆಗಳ ಬಗ್ಗೆ ಮಾತನಾಡಿದೆವು. ಮಧ್ಯದಲ್ಲಿ ಶಾಲೆ ನಿಲ್ಲಿಸಿದ ಸ್ಥಳೀಯ ಊರುಗಳ ಪ್ರಾಥಮಿಕ ಶಾಲಾ ವಯಸ್ಸಿನ ಗಂಡುಮಕ್ಕಳನ್ನು ಅಲ್ಲಿಯೇ ಒಂದು ವರ್ಷ ಇಟ್ಟುಕೊಂಡು ಅವರನ್ನು ಮತ್ತೆ regular ಶಾಲೆಗೆ ಸಿದ್ಧಪಡಿಸುವ ಶಿಕ್ಷಣವನ್ನೂ ಪ್ರವರ್ಧ ನೀಡುತ್ತಿದೆ. ಆ ಮಕ್ಕಳ ತರಗತಿಯಲ್ಲಿ ಒಂದೆರಡು ನಿಮಿಷ ಕಳೆದೆವು. ಹುಡುಗರು ಚೂಟಿ ಇದ್ದರು. ಅವರ ಕ್ಯಾಂಪಸ್‌ನಲ್ಲಿರುವ ನೂರಡಿ ಆಳದ ಭಾವಿ ನನ್ನನ್ನು ಬೆರಗುಗೊಳಿಸಿತು.
(ನವಲಕಲ್ ಕತೆಗಾರರು ಎಂದಿದ್ದೆ. ಅವರ ಕಥಾಸಂಕಲನ "ನೀರಿನ ನೆರಳು" ವಿನ ಒಂದೊಂದು ಪ್ರತಿಯನ್ನು ನಮಗೆ ಕೊಟ್ಟಿದ್ದರು. ಅದರಲ್ಲಿ ’ಗಾಂಧಿ.... ಬಂದಾನೆ’ ಮತ್ತು ’ಅಕ್ರಾಂತ’ ಓದಿದೆ. ’ಅಕ್ರಾಂತ’ 2003ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಚಿನ್ನದ ಪದಕ ಹಾಗೂ ಪ್ರಥಮ ಬಹುಮಾನ ಪಡೆದ ಕತೆ. ಪಾಳೆಯಗಾರಿಕೆ ಹಿನ್ನೆಲೆಯಿಂದ ಬಂದ ಯುವಕರಿಗೆ ಆ ಪ್ರತಿಗಾಮಿ ಧೋರಣೆಯನ್ನು ಹತ್ತಿಕ್ಕುವುದು ಎಷ್ಟು ಕಷ್ಟ ಮತ್ತು ಅವರಿಗೆ ಎಷ್ಟೆಲ್ಲ ಓದಿದರೂ ಆ ಪರಿಸರದಲ್ಲಿ feudal ಧೋರಣೆ ಎಷ್ಟೊಂದು ಅಪ್ಯಾಯಮಾನವಾಗುತ್ತದೆ. ಮತ್ತು ಅದು ಹೇಗೆ ವಿಷಸುಳಿಯಾಗಿ ಸುತ್ತುತ್ತದೆ ಎನ್ನುವುದನ್ನು ನಿರೂಪಿಸುತ್ತದೆ. ನವಲಕಲ್ ಮನಸ್ಸು ಮಾಡಿದರೆ ನಮ್ಮ ಗ್ರಾಮೀಣ ಪರಿಸರ ಮತ್ತು SHG/NGOಗಳ ಸುತ್ತ ಇರುವ ವಿಶಿಷ್ಟ ಪ್ರಪಂಚವನ್ನು ಮತ್ತು ವಾಸ್ತವವನ್ನು ತೆರೆದಿಡಬಲ್ಲರು.)
ನಾವು ಅಲ್ಲಿಂದ ರಾತ್ರಿಯ ಹೊತ್ತಿಗೆ ಆಲಮಟ್ಟಿಗೆ ಹೋಗಬೇಕಿತ್ತು. ಚಂಬೆಯವರು ಹೋಗುವ ದಾರಿಯಲ್ಲಿ ಅಮೃತಳಿಗೆ ವಿಜಾಪುರದ ಗೋಳಗುಮ್ಮಟವನ್ನು ತೋರಿಸೋಣ ಎಂದಿದ್ದರಿಂದ ನಾವು ನವಲಕಲ್ ಮತ್ತು ಅವರ ಸಹೊದ್ಯೊಗಿ ಬಸವರಾಜುರವರಿಂದ ಬೀಳ್ಕೊಂಡು ಮಹಾರಾಷ್ಟ್ರದ ಸೋಲಾಪುರದತ್ತ ಹೊರಟೆವು.
ಬಿಜಾಪುರ ಮುಟ್ಟುವಷ್ಟೊತ್ತಿಗೆ ಸಂಜೆ ಆರೂವರೆ. ಗೋಳಗುಮ್ಮಟ ಐದಕ್ಕೆ ಮುಚ್ಚುವುದರಿಂದ ಅತ್ತ ಹೋಗಲಿಲ್ಲ. ಹೆದ್ದಾರಿಯಲ್ಲಿ ಹೋಗುತ್ತಲೆ ಒಂದೆರಡು ಕಿಲೋಮೀಟರ್ ದೂರದಲ್ಲಿದ್ದ ಗುಮ್ಮಟವನ್ನು ಅಮೃತಳಿಗೆ ತೋರಿಸಿದೆವು. ಆ ಕಟ್ಟಡದ ಗುಮ್ಮಟದ ಆರಂಭವಾಗುವ ಜಾಗದಲ್ಲಿ ಓಡಾಡಬಹುದು ಎಂದಿದ್ದಕ್ಕೆ ಅವಳು ’ಅಬ್ಬಬ್ಬ’ ಎಂದಳು.
ರಾತ್ರಿ ಆಲಮಟ್ಟಿಗೆ ಬಂದಾಗ ಅಣೆಕಟ್ಟೆಯ ಕೆಳಗಿನ ಉದ್ಯಾನವನಕ್ಕೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗಳು ಹೋಗುತ್ತಿದ್ದರು. ಬಹುಶಃ ಸಂಗೀತ ಕಾರಂಜಿಯ ಸಮಯ. ನಮಗೆ ವಸತಿಯ ಯೋಚನೆ. ಹಾಗಾಗಿ ಅತ್ತ ಹೋಗಲಾಗಲಿಲ್ಲ. ರಾತ್ರಿ ಐಬಿಯಲ್ಲಿ ವಸತಿ. ಅಮೃತಳಿಗೆ ಅಲ್ಲಿ ತಲೆಸ್ನಾನ ಮಾಡಿಸಿದೆ. ಮತ್ತೆ ರೂಮಿನ ಸಮಸ್ಯೆಯಿಂದಾಗಿ ನಮಗಿಬ್ಬರಿಗೂ ನೆಲದ ಮೇಲೆ ಎರಡು ಹಾಸಿಗೆಗಳು.
ಕೂಡಲಸಂಗಮದ ಕ್ರಾಸಿನಲ್ಲಿ ಚಂಬೆ ಹೊಸಪೇಟೆ ಬಸ್ಸು ಹಿಡಿದರು. ನಾವು ಸಂಗಮಕ್ಕೆ ಹೋದೆವು. ನಾರಾಯಣಪುರ ಅಣೆಕಟ್ಟು ತುಂಬಿದ್ದರಿಂದ ಅದರ ಹಿನ್ನೀರು ಬಹಳ ಇತ್ತು. ಅಮೃತ ಅಲ್ಲಿ ಸಂಗಮದಲ್ಲಿ ಕೃಷ್ಣೆಯ ಭಾಗದಲ್ಲಿ ಜಳಕ ಮಾಡುತ್ತಿದ್ದವರನ್ನು ನೋಡುತ್ತ ನಿಂತಳು.
ಅಲ್ಲಿಂದ ಮೇಲಕ್ಕೆ ಬಂದು ಹೊರಗೆ ಬರುವಷ್ಟರಲ್ಲಿ ಅಮೃತ ’ಕೊಕ್ಕ ಮಾಡಬೇಕು’ ಎಂದಳು. ಅಲ್ಲೆಲ್ಲಾ ಹುಡುಕಾಡಿ ಸುಮಾರು 300-400 ಮೀಟರ್ ದೂರವಿದ್ದ ಶಾಚಾಲಯದತ್ತ ಓಡಿದೆವು. ಯಾವನೊ ತಲೆಕೆಟ್ಟ ಮೂಢ ಮಾಡಿರುವ ವ್ಯವಸ್ಥೆ ಅದು. ಅದಕ್ಕಾಗಿಯೆ ಜನ ಅಲ್ಲಿಗೆ ಹೋಗುವ ದಾರಿಯುದ್ದಕ್ಕೂ ಕಕ್ಕಸ್ಸು ಮಾಡಿ ಆ ಮೂಲಕ ಅವನ ಕಾರ್ಯಕ್ಕೆ ಪ್ರಶಂಸೆ ತೋರುತ್ತಿದ್ದಾರೆ; ಪ್ರತಿದಿನ. ಹೋಗುತ್ತಲೆ ಅಲ್ಲಿದ್ದವನೊಬ್ಬ ದುಡ್ದು ಕೇಳಿದ. ಬಂದೆ ಇರು ಎಂದು ಹೇಳಿ ಎರಡು ಅಂತಸ್ತು ಹತ್ತಿಹೋಗಿ ಅವಳನ್ನು ಟಾಯ್ಲೆಟ್‌ನಲ್ಲಿ ಬಿಟ್ಟೆ. ಯಾವನೊ ಸೂಕ್ಷ್ನತೆ ಇಲ್ಲದ ಮುಟ್ಟಾಳನ ಯೋಜನೆ ಕೂಡಲಸಂಗಮದಲ್ಲಿನ ಶೌಚಾಲಯ.
ನಂತರ ಅಲ್ಲಿಂದ ಹೊರಟು ಅಲ್ಲಿಯ ಬೃಹತ್ ಸಭಾಂಗಣ ನೋಡಿದೆವು. ನಾನು ಅದನ್ನು ಈ ಮುಂಚೆಯೆ 2005ರಲ್ಲಿ ನೋಡಿದ್ದೆ. ಪೃಥ್ವಿಯವರು ನೋಡಿರಲಿಲ್ಲ. ಮತ್ತೆ ಅಲ್ಲಿಯ ಇನ್ನೊಂದು 80-100 ಅಡಿಯ ದೊಡ್ಡ ಗೋಪುರಾಕಾರದ ಕಟ್ಟಡದತ್ತ ಹೋದೆವು. ಅದು ಏನು ಎಂದು ಗೊತ್ತಾಗಲೇ ಇಲ್ಲ. ಎಲ್ಲಿಯೂ ಬೋರ್ಡ್ ಇರಲಿಲ್ಲ. ಕೆಲಸ ನಿಂತಿದ್ದ ಕಾರಣ ಜನರೂ ಕಾಣಿಸಲಿಲ್ಲ. ದೂರದಲ್ಲಿ ಉದ್ಯಾನದ ಕೆಲಸ ಮಾಡುತ್ತ ಇದ್ದ ಒಬ್ಬಾತನನ್ನು ಕೂಗಿ ಕರೆದು ಕೇಳಿದೆ. ಅದು ಮ್ಯೂಸಿಯಮ್ ಅಂದ. ಏನಿಲ್ಲವೆಂದರೂ ಅದಕ್ಕೀಗಾಗಲೆ ಆರೇಳು ಕೋಟಿ ಖರ್ಚಾಗಿರಬೇಕು. ಭೂತಕಟ್ಟಡವಾಗುವ ಎಲ್ಲಾ ಲಕ್ಷಣಗಳೂ ಅಲ್ಲಿದ್ದವು. ಈ ವ್ಯವಸ್ಥೆಯಲ್ಲಿ ಯಾರನ್ನು ಇದಕ್ಕೆ ಹೊಣೆಗಾರನಾಗಿಸುವುದು?
ಸಂಗಮದಿಂದ ಹೊರಟು ಗುರುವನ್ನು ಹೆದ್ದಾರಿಯ ಕ್ರಾಸ್‌ನಲ್ಲಿ ಬಿಟ್ಟು ನಾವು ಮೂವರೆ ಐಹೊಳೆಯತ್ತ ಹೊರಟೆವು. ದಾರಿಯಲ್ಲಿ ಅಮೀನಗಡ ಪಟ್ಟಣದಲ್ಲಿ ಪೃಥ್ವಿ ಅಲ್ಲಿಯ ಪ್ರಸಿದ್ಧ ಕರದಂಟು ಕೊಂಡರು.
ನಂತರ ಅಲ್ಲಿಂದ ಬಾದಾಮಿಗೆ ಹೋದೆವು. ಮೊದಲು ಅಲ್ಲಿಯ KSTDC ಹೋಟೆಲ್‌ಗೆ ಊಟಕ್ಕೆ ಹೋದೆವು. ಅಲ್ಲಿ ಅಮೃತ ಅವಳ ಪರಮಪ್ರಿಯ ಮೊಸರನ್ನವನ್ನು ಸವಿದಳು. ಅದು ನಿಜಕ್ಕೂ ಚೆನ್ನಾಗಿತ್ತು. ಅದರಲ್ಲಿದ್ದ ಉಳ್ಳಾಗಡ್ಡಿಯ ಪ್ರಮಾಣ ನೋಡಿ ಪೃಥ್ವಿ ಇವರಿಗೆ ಈರುಳ್ಳಿ ಬೆಲೆ ಹೆಚ್ಛಾಗಿರುವ ಸುದ್ದಿ ಇನ್ನೂ ತಲುಪಿಲ್ಲ ಎಂದು ತಮಾಷೆ ಮಾಡಿದರು.
ನಂತರ ಬಾದಾಮಿಯ ಗುಹೆಗಳಿಗೆ ಹೋದೆವು.
ಅಲ್ಲಿಂದ ನಾವು ಗದಗ್‍ನತ್ತ ಹೊರಟೆವು. ಗದಗಿನ ತೋಂಟದಾರ್ಯ ಡಂಬಳ ಮಠದ ಮುಖ್ಯಸ್ಥರು ಪ್ರಗತಿಪರ ಮಠಾಧೀಶರಾಗಿ ಹೆಸರಾದವರು. ಗದಗಿನಲ್ಲಿರುವ ಸಾಹಿತಿ, ಮತ್ತು ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ ವಸ್ತ್ರದ ಮಠದ ಛತ್ರದಲ್ಲಿ ವಸತಿ ವ್ಯವಸ್ಥೆ ಮಾಡಿದ್ದರು. ಅಲ್ಲಿಗೆ ಸಂಜೆ ಬೆಳಕಿರುವ ಹಾಗೇ ತಲುಪಿದ್ದರಿಂದ ಮಠದ ಮುಂದಿನ ರಸ್ತೆಯಲ್ಲಿ ತಿರುಗಾಡಲು ಹೋದೆವು. ನನಗೆ ಹಿಂದಿನ ದಿನ ಹಸಿಕಡಲೆ ತಿನ್ನಲು ಸಿಕ್ಕಿರಲಿಲ್ಲವಾದ್ದರಿಂದ ಅಲ್ಲಿ ಮಾರುತ್ತಿದ್ದ ಮರಳಿನಲ್ಲಿ ಉಪ್ಪು ಬೆರಸಿ ಬೇಯಿಸಿದ್ದ ಹಸಿರುಕಡಲೆಯನ್ನು ಕಾಲು ಕೇಜಿ ಕೊಂಡೆ. ಉಪ್ಪುಪಾಗಿದ್ದ ಅದನ್ನು ಅಮೃತ ಸಿಪ್ಪೆ ಸಮೇತ ಅಗಿಯಲು ಆರಂಭಿಸಿದಳು.
ಸಂಜೆ ಏಳೂವರೆ ಸುಮಾರಿಗೆ ಚಂದ್ರಶೇಖರ ವಸ್ತ್ರದ ಛತ್ರದ ಕೋಣೆಗೆ ತಮ್ಮ ಸ್ನೇಹಿತರೊಡನೆ ಬಂದರು. ಅವರೊಂದಿಗೆ ಒಂದಷ್ಟು ಮಾತುಕತೆಯಾಯಿತು. ಅವರು ಹೋದ ಬಳಿಕ ನಾವು ಮಠಕ್ಕೆ ಹೋಗಿ ಊಟ ಮಾಡಿದೆವು. ಅಂದು ಅಮೃತ ಹಿಂದಿನ ಎಲ್ಲಾ ದಿನಗಳಿಗಿಂತ ಚೆನ್ನಾಗಿ ಉಂಡಳು. ಚಪಾತಿ, ಹುಚ್ಚೆಳ್ಳು (ಗುರೆಳ್ಳು)ಚಟ್ನಿ, ಮೊಸರನ್ನ ಮುಂತಾದವನ್ನು ಚಪ್ಪರಿಸಿಕೊಂಡು ಖಾಲಿ ಮಾಡಿದಳು.
ಅಂದಿನ ರಾತ್ರಿಯ ನಿದ್ರೆ ಎಂದಿನಂತಿರಲಿಲ್ಲ. ಒಮ್ಮೆ ಮಲಗಿದ ಮೇಲೆ ಬೆಳಗ್ಗೆಯ ತನಕ ಸದ್ದುಗದ್ದಲ ಇಲ್ಲದೆ ಮಲಗುವ ನನ್ನ ಮಗಳು ಅಂದು ಬಹುಶಃ ನಡುರಾತ್ರಿಯಾದ ಮೇಲೆ ಹೊರಳಾಡಲು ಪದೆಪದೆ ತ್ಚು,ತ್ಚು ಎನ್ನಲು ಆರಂಭಿಸಿದಳು. ನಿದ್ದೆ ಬರುತ್ತಿಲ್ಲವೇನೊ ಎಂದು ನಾನು ಅವಳ ಬೆನ್ನು ತಟ್ತುತ್ತ, ಎದೆಯ ಮೇಲೆ ಎಳೆದುಕೊಳ್ಳುತ್ತ, ತಲೆ ಸವರುತ್ತ ಮಲಗಿಸಲು ಯತ್ನಿಸಿದೆ. ನನಗೂ ನಿದ್ದೆ ಕೆಡುತ್ತಿತ್ತು. ಒಮ್ಮೆ ಗದರಿದೆ ಕೂಡ. ಆಗ, ’ಅಬ್ಬು ಆಗಿದೆ ಅಬ್ಬ," ಎಂದು ಕತ್ತಲಿನಲ್ಲ್ಲಿ ನನ್ನ ಬೆರಳಿಡಿದು ಅವಳ ಕೆಳದುಟಿಯ ಮೇಲೆ ಬಲಗಣ್ಣಿನ ರೆಪ್ಪೆಯ ಮೇಲೆ ಆಡಿಸಿದಳು. ಅಲ್ಲೆಲ ಸ್ವಲ್ಪ ಊದಿಕೊಂಡಿತ್ತು. ಸೊಳ್ಳೆಪರದೆ ಇರಲಿಲ್ಲ. ಸೊಳ್ಳೆ ಕಡಿದಿರಬಹುದೆಂದು ಭಾವಿಸಿ ಏನೂ ಆಗಲ್ಲ, ಈಗ ನಿದ್ದೆ ಮಾಡು ಎಂದೆ. ಹಣೆ, ಕುತ್ತಿಗೆ ಮುಟ್ಟಿ ನೋಡಿದೆ. ಜ್ವರ ಇರಲಿಲ್ಲ. ನಂತರ ಯಾವುದೊ ಹೊತ್ತಿನಲ್ಲಿ ಹೊರಳಾಡುತ್ತ ಮಲಗಿಬಿಟ್ಟಳು.
ನಾವು ಕೂಡಲೆ ರೆಡಿಯಾಗಿ ಅವಳ ಮುಖ ತೊಳೆಸಿ ಹೊರಟೆವು. ತೋಂಟದಾರ್ಯರ ಭೇಟಿ ಮಾಡುವ ಮನಸ್ಸಿತ್ತು. ಮಠದ ಬಳಿ ಎಂಟಕ್ಕೆ ಹೋದೆವು. ಹತ್ತಕ್ಕೆ ಭೇಟಿ ಎಂದರು. ನಾವು ಅಲ್ಲಿಯ ಹತ್ತಿರದ ಹೋಟೆಲಿಗೆ ಹೋಗಿ ತಿಂಡಿ ತಿಂದು ಅಮೃತಳಿಗೆ ನನ್ನ ಬಳಿಯಿದ್ದ ಸಿಟ್ರಿಜಿನ್ ಮಾತ್ರೆ ಕೊಟ್ಟೆ. ನಂತರ ಡ್ರಗ್ ಹೌಸಿನಲ್ಲಿ ಮಾತ್ರೆ ಮತ್ತು ಕ್ರೀಮ್ ತೆಗೆದುಕೊಂಡು ಅವಳಿಗೆ ಉಪಚರಿಸಿದೆವು. ಮುಖ ಉದಿಕೊಂಡದ್ದು ಬಿಟ್ಟರೆ ಅವಳಿಗೆ ಯಾವುದೆ ನೋವು ಇರಲಿಲ್ಲ. ಮಾಮೂಲಿಯ ಹಾಗೆ ಇದ್ದಳು. ಅಲ್ಲಿ ಕಾಯುವ ಮನಸ್ಸಾಗಲಿಲ್ಲ. ಚಿತ್ರದುರ್ಗದತ್ತ ಹೊರಟೆವು. ಅಂದು ರಾತ್ರಿ ಚಂಬೆಯವರ ಊರಾದ ರಾಮಜೋಗಿ ಹಳ್ಳಿಯಲ್ಲಿ ಉಳಿಯುವ ಯೋಜನೆ ಇತ್ತು. ಆದರೆ ಯಾವುದೂ ನಿಶ್ಚಿತವಾಗಿರಲಿಲ್ಲ.
ದಾರಿಯಲ್ಲಿ ಮೂರುನಾಲ್ಕು ಫೋನ್ ಮಾಡಿದೆ. ಅವುಗಳ ಪ್ರಭಾವದಿಂದಾಗಿ ಅಮೃತಳನ್ನು ಆ ಸ್ಥಿತಿಯಲ್ಲಿ ಮನೆಗೆ ಕರೆದುಕೊಂಡು ಹೋಗುವ ಮನಸ್ಸಾಗಲಿಲ್ಲ. ಹಾಗಾಗಿ ಹಿರಿಯೂರಿನಿಂದ ನೈಋತ್ಯಕ್ಕೆ ತಿಪಟೂರಿನತ್ತ ಹೊರಟೆವು. ಅಂದು ರಾತ್ರಿ ತಿಪಟೂರಿನ ನೆಂಟರ ಮನೆಯಲ್ಲಿ ಉಳಿದುಕೊಂಡು, ವೈದ್ಯರಿಗೆ ತೋರಿಸುವ ಹಾಗಿದ್ದರೆ ಅಲ್ಲಿಯೇ ತೊರಿಸೋಣ ಎಂದು ಯೋಜನೆ ಹಾಕಿಕೊಂಡೆ.
ದಾರಿಯಲ್ಲಿ ಬರುವ ಹುಳಿಯಾರಿನಲ್ಲಿ ಅಮೃತಳಿಗೆ ಬ್ರೆಡ್ ಕೊಡಿಸಿದೆ. ಅವಳಿಗೆ ಊಟದ ವಿಷಯದಲ್ಲಿ ಇಂತಹುದೇ ಬೇಕು ಎನ್ನುವ ಹಟ ಇಲ್ಲ. ಬ್ರೆಡ್ ಅನ್ನು ನನ್ನೊಂದಿಗೆ ಹಂಚಿಕೊಂಡು ತಿಂದಳು. ಸಂಜೆ ತಿಪಟೂರು ತಲುಪಿದೆವು. ಅಲ್ಲಿ ತಿಂಡಿ ಮತ್ತು ಕಾಫಿ ಮುಗಿದ ನಂತರ ಪೃಥ್ವಿಯವರನ್ನು ಬಸ್‌ಸ್ಟ್ಯಾಂಡಿಗೆ ಕರೆದುಕೊಂಡು ಹೋದೆ. ಅಲ್ಲಿಂದ ಅವರು ಅರಸೀಕೆರೆ ಮಾರ್ಗವಾಗಿ ಮೈಸೂರಿಗೆ ಹೋದರು.
ತಿಪಟೂರಿನ ನೆಂಟರನ್ನು ಅಮೃತ ನೋಡುತ್ತಿದ್ದದ್ದು ಮೊದಲ ಬಾರಿ. ನಾನು ಬಸ್ ಸ್ಟೇಷನ್‌ನಿಂದ ಬರುವಷ್ಟರಲ್ಲಿ ಅವಳು ಹೊಂದಿಕೊಂಡಿದ್ದಳು. ಅಲರ್ಜಿಗೆ ಹಸಿ ಈರುಳ್ಳಿ ಒಳ್ಳೆಯದು ಎಂದು ಅಲ್ಲಿ ನಾಟಿ ವೈದ್ಯ ಮಾಡಿದರು. ಅವಳು ಮೊದಮೊದಲು ಬೇಡ ಎಂದವಳು ಅದು ಒಳ್ಳೆಯದೆಂಬ ವಿಷಯ ಮನದಟ್ಟಾದ ಮೇಲೆ ತಿಂದಳು. ಅಂದು ರಾತ್ರಿ ಚೆನ್ನಾಗಿ ನಿದ್ದೆ ಮಾಡಿದಳು.
ಆ ಮನೆಯೊಡತಿ ಪ್ರತಿಶನಿವಾರ ದೇವಸ್ಥಾನಕ್ಕೆ ಹೋಗುವವರಂತೆ. ಬೆಳಗ್ಗೆ ದೇವಸ್ಥಾನಕ್ಕೆ ಡ್ರಾಪ್ ಕೊಡು ಎಂದು ಕೇಳಿದ್ದರು. ಬೆಳಗ್ಗೆ ಅವರದು ನಿಧಾನ ಆಯಿತು. ಅಷ್ಟೊತ್ತಿಗೆ ಅಮೃತಳೂ ಎದ್ದಳು. ಬಹುಪಾಲು ಊತ ಹೋಗಿತ್ತು. ಗುಳ್ಳೆಗಳು ಮಾತ್ರ ಇದ್ದವು. ನಾನೂ ದೇವಸ್ಥಾನಕ್ಕೆ ಬರುತ್ತೇನೆ ಎಂದಳು. ನಾನು ಮುಖ ತೊಳೆದುಕೊಂಡು ಅವಳಿಗೆ ಸ್ನಾನ ಮಾಡಿಸಿ ಲಂಗ ಮತ್ತು ರವಿಕೆ ಹಾಕಿದೆ.
ಮಧ್ಯಾಹ್ನ ಹನ್ನೆರಡಕ್ಕೆ ತಿಪಟೂರಿನಿಂದ ಅಲ್ಲಿಯೇ ಇದ್ದ ನನ್ನ ಚಿಕ್ಕಮ್ಮನ ಮಗನನ್ನು ಕೂರಿಸಿಕೊಂಡು ಬೆಂಗಳೂರಿಗೆ ಹೊರಟೆವು. ಹಿಂದಿನ ದಿನವೇ ಊರಿಗೆ ಹೋಗೋಣ ಎನ್ನುವ ಸಮಯದಲ್ಲಿ ಹೋಮ್ ಸ್ವೀಟ್ ಹೋಮ್ ಅಲ್ಲವಾ ಅಪ್ಪಾ ಅಂದಿದ್ದಳು ಅಮೃತ. ಹಾಗೆನ್ನುತ್ತಲೇ ನನಗೆ ಸೋಮವಾರದ ತನಕ ಶಾಲೆಯಿಲ್ಲ, ಭಾನುವಾರ ಮನೆಗೆ ಹೋಗೋಣ ಎಂದಿದ್ದಳು. ಎಲ್ಲೇ ಇರಲಿ, ಓದಲು ಪುಸ್ತಕ, ಪ್ರೀತಿಯಿಂದ ಮಾತನಾಡಿಸುವ ಜನ, ಆಗಾಗ ಆಡಲು ಸ್ನೇಹಿತರು ಇದ್ದರೆ ಇರುವ ಜಾಗದಲ್ಲೇ ಸಂತೋಷ ಕಾಣುವವಳು ಅವಳು.
ಹಲವಾರು ಕಾರಣಗಳಿಗೆ ಈ ಪ್ರವಾಸ ನನಗೆ ಮುಖ್ಯ. ಈ 1900 ಕಿ.ಮೀ.ಗಳ ಪ್ರವಾಸದುದ್ದಕ್ಕೂ ನಾನು ಹಲವಾರು ವಿಷಯಗಳನ್ನು ಕಲಿಯುತ್ತ ನೋಡುತ್ತ ಹೋದೆ. ಅವೆಲ್ಲ ಮನಸ್ಸಿನಾಳದಲ್ಲಿ ಇವೆ. ಪೃಥ್ವಿ ಅನೇಕ ವಿಷಯಗಳ ಬಗ್ಗೆ ವಿಸ್ತಾರವಾಗಿ ತಿಳಿಸುತ್ತಿದ್ದರು. ಚರ್ಚಿಸುತ್ತಿದ್ದೆವು. ಚಂಬೆ ತಮಾಷೆ ಮಾಡುತ್ತಲೆ ವಾಸ್ತವದ ಪರಿಚಯ ಮಾಡಿಕೊಡುತ್ತಿದ್ದರು. ಭೇಟಿಯಾದ ಅನೇಕ ಜನ ಮತ್ತು ಅವರೊಡನೆಯ ಮಾತು, ದಾರಿಯಲ್ಲಿನ ನಿಸರ್ಗ, ಕಂಡ ಜನ, ಇವೆಲ್ಲದರಿಂದ ಕಲಿತದ್ದು ನನ್ನ ಮುಂದಿನ ದಿನಗಳನ್ನು ಮತ್ತು ನನ್ನ ತೀರ್ಮಾನಗಳನ್ನು ತೀರ್ಮಾನಿಸಲಿವೆ.
ಮತ್ತೆ, ಅಮೃತಳ ಉಪಸ್ಥಿತಿ. ಐಫೋನಿನಲ್ಲಿ ಅವಳ ಫೋಟೊ ತೆಗೆಯುವುದು, ಅದರಲ್ಲಿ ಉತ್ತಮವಾದದ್ದನ್ನು ಕೂಡಲೆ ಐಫೋನ್ app ಮೂಲಕ ಫೇಸ್‌ಬುಕ್‌ಗೆ ಹಾಕುವುದು ಬಹುಶಃ ಹುಮ್ಮಸ್ಸಿನಿಂದ ಮಾಡಿದ ಇನ್ನೊಂದು ಕೆಲಸ.
ಉತ್ತರ ಕರ್ನಾಟಕದ ಬಗ್ಗೆ ಇಲ್ಲೊಂದು ಟಿಪ್ಪಣಿ. ಹಿಂದೆ ನೋಡದ ರಾಯಚೂರು ಮತ್ತು ಬೀದರ್ ಜಿಲ್ಲೆಗಳನ್ನು ಈ ಸಾರಿ ನೋಡಿದೆ. ಉತ್ತರ ಕರ್ನಾಟಕದ ಬಡತನ ನಿಸರ್ಗ ನಿರ್ಮಿತವಲ್ಲ. ಅದು ಮನುಷ್ಯ ನಿರ್ಮಿತ. ನನ್ನ ಪ್ರಕಾರ ಪಾಳೆಯಗಾರಿಕೆ ಸಂಸ್ಕೃತಿ, ನೆಲ ಮತ್ತು ಜಲದ ಅಸಮಾನ ಹಂಚಿಕೆ, ಸಮುದಾಯದ ಅಜ್ಞಾನ, ಸ್ವಹಿತಾಸಕ್ತಿಯ ರಾಜಕಾರಣಿ ಮತ್ತು ಅಧಿಕಾರಿವರ್ಗ, ಇವೇ ಅಲ್ಲಿನ ಬಡತನ ಮತ್ತು ಹಿಂದುಳಿದಿರುವಿಕೆಗೆ ಕಾರಣ. ಭೂಹೀನರಿಗೆ ಭೂಹಂಚಿಕೆ, ಪಂಚಾಯತ್ ವ್ಯವಸ್ಥೆಯಲ್ಲಿನ ಸುಧಾರಣೆಗಳು ಮತ್ತು ನಾಗರಿಕ ಹಕ್ಕುಗಳ ರಕ್ಷಣೆ, ಮತ್ತು ವೈಜ್ಞಾನಿಕ ನೆಲೆಯಲ್ಲಿ ಜನಜಾಗೃತಿ ಮತ್ತು ತಿಳಿವಳಿಕೆ, ಇವು ಈ ಪ್ರದೇಶದ ಸುಧಾರಣೆಗೆ ಕರ್ನಾಟಕ ಮತ್ತು ಭಾರತ ಸರ್ಕಾರ ಮಾಡಬೇಕಾದ, ಜನರು ಒತ್ತಾಯಿಸಬೇಕಾದ ಕೆಲಸಗಳು.
[ಫೇಸ್‌ಬುಕ್‌ನಲ್ಲಿರುವ ಈ ಪ್ರವಾಸದ ಅಮೃತಳ ಫೋಟೊ ಆಲ್ಬಮ್]
No comments:
Post a Comment