Aug 17, 2006

ಪತ್ರಿಕೆ ಬರಬೇಕಿದ್ದರೆ ಹೆಗಲು ಕೊಟ್ಟು ದುಡಿದವರು...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮೊದಲ ಸಂಚಿಕೆಯಲ್ಲಿ (ಆಗಸ್ಟ್ 25, 2006) ಪ್ರಕಟವಾದದ್ದು)

ಆತ್ಮೀಯರೇ,

ಕಳೆದೆರಡು ದಶಕಗಳಲ್ಲಿ ನನ್ನ ಅರಿವು ಮತ್ತು ತಿಳುವಳಿಕೆಯನ್ನು ಆಪ್ತವಾಗಿ ವಿಸ್ತರಿಸಿದ, ಪ್ರತಿವಾರವೂ ಅನೇಕ ಗಂಟೆಗಳ ಸಹಚರರಾಗಿದ್ದ ಸುಧಾ, ತರಂಗ, ಕರ್ಮವೀರ, ಲಂಕೇಶ್ ಪತ್ರಿಕೆ, ವಾರಪತ್ರಿಕೆ, ಹಾಯ್ ಬೆಂಗಳೂರು, ಅಗ್ನಿ, ಲಂಕೇಶ್, ಮತ್ತಿತರ ಕನ್ನಡ ವಾರಪತ್ರಿಕೆಗಳನ್ನು ಶಿಷ್ಯನಂತೆ ಪ್ರೀತಿಯಿಂದ ನೆನೆಯುತ್ತಾ...

ಈ ವರ್ಷದ ಆರಂಭದ ದಿನಗಳ ಕ್ಯಾಲಿಫೋರ್ನಿಯಾದ ಚಳಿಗಾಲದ ದೀರ್ಘ ರಾತ್ರಿಗಳಲ್ಲಿ, ಪ್ರಚಲಿತ ವಿದ್ಯಮಾನಗಳನ್ನು ಪ್ರಮುಖವಾಗಿ ಆಧರಿಸಿದ, ಜನಪರ ಕಾಳಜಿಯೇ ಮೂಲೋದ್ದೇಶವಾದ, ಒಂದು ಅತ್ಯುತ್ತಮ ಗುಣಮಟ್ಟದ ಸಮಗ್ರ ವಾರಪತ್ರಿಕೆಯನ್ನು ಕನ್ನಡದಲ್ಲಿ ಏಕೆ ತರಬಾರದು ಎಂದು ತೀವ್ರವಾಗಿ ಯೋಚಿಸಿದ್ದರ ಫಲ ಈಗ ನಿಮ್ಮ ಕೈಯಲ್ಲಿರುವ ವಿಕ್ರಾಂತ ಕರ್ನಾಟಕವಾರಪತ್ರಿಕೆ. ಈಗಾಗಲೆ ಪತ್ರಿಕೆ ಹೇಗಿದೆ ಎಂದು ನಿಮಗೆ ಗೊತ್ತಾಗಿರುವುದರಿಂದ ಇದು ಮುಂದಕ್ಕೆ ಹೇಗಿರುತ್ತದೆ ಎಂದು ಹೇಳಿಕೊಳ್ಳುವ ಅವಶ್ಯಕತೆ ಇಲ್ಲ ಎನಿಸುತ್ತದೆ.

ಸತ್ಯಮೂರ್ತಿ ಆನಂದೂರು ಅವರ ಸಂಪಾದಕತ್ವದಲ್ಲಿ ಒಂದು ಅತ್ಯುತ್ತಮ ತಂಡ, ಕನ್ನಡದ ಅನೇಕ ಶ್ರೇಷ್ಠ ಬರಹಗಾರರ, ಪತ್ರಕರ್ತರ, ಚಿಂತಕರ ಸಲಹೆ, ಸೂಚನೆ, ಸಹಕಾರಗಳೊಂದಿಗೆ ಕೆಲಸ ನಿರ್ವಹಿಸುತ್ತಿದೆ. ೮೦ರ ದಶಕದಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಲಂಕೇಶ್ ಪತ್ರಿಕೆಯಲ್ಲಿ ದುಡಿದು, ೧೯೯೪ರಲ್ಲಿ ತಮ್ಮದೇ ಸಂಪಾದಕತ್ವದಲ್ಲಿ ಈ ವಾರ ಕರ್ನಾಟಕ ವಾರಪತ್ರಿಕೆಯನ್ನು ನಡೆಸಿದ ಅನುಭವ ಸತ್ಯಮೂರ್ತಿಯವರದು. ಹಾಗೆಯೇ ಜನವಾಹಿನಿ,ಸೂರ್ಯೋದಯ ದಿನಪತ್ರಿಕೆಗಳಲ್ಲಿ ಸಹ ದುಡಿದಿದ್ದಾರೆ. ಮುದ್ರಣ ಮಾಧ್ಯಮದ ಜೊತೆಗೆ ದೃಶ್ಯ ಮಾಧ್ಯಮಗಳಾದ ಟಿವಿ ಧಾರಾವಾಹಿ, ಸಿನೆಮಾ, ಡಾಕ್ಯುಮೆಂಟರಿಗಳಲ್ಲಿ ದುಡಿದ ಅನೇಕ ಕ್ಷೇತ್ರಗಳ ಶ್ರೀಮಂತ ಅನುಭವ ಅವರದು. ಅವರ ಅಂಕಣ ಬರಹಗಳ ಸಂಕಲನ ರಗಳೆಗೆ ಪ್ರಸಿದ್ಧ ಹಾ.ಮಾ.ನಾ. ಅಂಕಣ ಸಾಹಿತ್ಯ ಪ್ರಶಸ್ತಿಸಹ ದೊರಕಿದೆ.

ನನ್ನ ಪ್ರೀತಿಯ ಅಣ್ಣ ಬಿ.ಕೆ. ಸುರೇಶ್‌ರವರು ಪ್ರಕಾಶನದ ಮಾಲೀಕರು. ತೀವ್ರ ದುಡಿಮೆಯ, ಸೂಕ್ಷ್ಮ ಮನಸ್ಸಿನ, ಜನಪರ ಕಾಳಜಿಗಳ, ನೇರ ನಡೆನುಡಿಯ ಮನುಷ್ಯ ಅವರು. ಕಳೆದ ಮೂರು ತಿಂಗಳಲ್ಲಿ ತಮ್ಮ ಎಲ್ಲಾ ಸಮಯ, ಚಿಂತನೆ ಮತ್ತು ಶ್ರಮವನ್ನು ಪತ್ರಿಕೆಗೆ ವಿನಿಯೋಗಿಸಿದ್ದಾರೆ. ಪತ್ರಿಕೆಯನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿ ಮಾಡಲು ಇರಬೇಕಾದ ಎಚ್ಚರಗಳನ್ನು ಈಗಾಗಲೇ ರೂಢಿಸಿಕೊಂಡಿದ್ದಾರೆ. ಪ್ರಸರಣ, ಮುದ್ರಣ, ಜಾಹೀರಾತು, ಹೀಗೆ ಅನೇಕ ಇತರ ವಿಭಾಗಗಳಲ್ಲಿ ಅವರಿಗೆ ನೆರವಾಗುತ್ತಿರುವ ಆತ್ಮೀಯ ಸ್ನೇಹಿತ ಆನಂದ್‌ರವರನ್ನು, ವ್ಯವಸ್ಥಾಪಕ ಸಂಪಾದಕ ಬಿ.ಎಸ್. ವಿದ್ಯಾರಣ್ಯ ಅವರನ್ನು ಇಲ್ಲಿ ಸ್ಮರಿಸುತ್ತೇನೆ.

'ವಿಕ್ರಾಂತ ಕರ್ನಾಟಕ' ಆರ್ಥಿಕವಾಗಿ ಸ್ವಾವಲಂಬಿ ಆಗಲು ಪ್ರಮುಖವಾಗಿ ಬೇಕಾಗಿರುವುದು ಪ್ರಸರಣ ವ್ಯವಸ್ಥೆ ಮತ್ತು ಜಾಹೀರಾತುಗಳು. ಹಾಗಾಗಿ, ಪ್ರಾರಂಭದ ಹಲವು ಸಂಚಿಕೆಗಳಲ್ಲಿ ಶುಭ ಹಾರೈಕೆಜಾಹೀರಾತುಗಳ ಪಾತ್ರ ಬಹಳ ದೊಡ್ಡದು. ಇದಕ್ಕೆ ಪೂರಕವಾಗಿ ಅನೇಕ ಸ್ನೇಹಿತರು, ಬಂಧುಗಳು, ಉದ್ಯಮಿಗಳು, ಜಾಹೀರಾತುದಾರರು ಪ್ರೋತ್ಸಾಹ ನೀಡುತ್ತಿದ್ದಾರೆ. ಕರ್ನಾಟಕದಲ್ಲಿನ ಮತ್ತು ಅಮೇರಿಕದಲ್ಲಿನ ಅನೇಕ ಆತ್ಮಬಂಧುಗಳು ತಾವಾಗಿಯೇ ಸಂಪರ್ಕಿಸಿ, ಪ್ರೋತ್ಸಾಹಿಸುತ್ತಿದ್ದಾರೆ. ಇದು ಎದೆ ಬಿರಿಯುವ ಸಮಯ. ಅವರೆಲ್ಲರಿಗೂ ಕೃತಜ್ಞತೆಯ ನಮನಗಳು.

ವಿಷಯದ ಆಯ್ಕೆ, ಬರಹದ ಶೈಲಿ, ವಿಶ್ಲೇಷಣಾ ಸಾಮರ್ಥ್ಯದಲ್ಲಾಗಲಿ, ಮುದ್ರಣದ ಗುಣಮಟ್ಟದಲ್ಲಾಗಲಿ ಯಾವುದೇ ರಾಷ್ಟ್ರೀಯ ಪತ್ರಿಕೆಗೆ ಸರಿಸಾಟಿಯಾಗಿರಬೇಕು; ಓದುಗನಲ್ಲಿ ಜೀವನ ಪ್ರೀತಿಯನ್ನು, ಆತ್ಮವಿಶ್ವಾಸವನ್ನು, ಜ್ಞಾನದಾಹವನ್ನು, ಹೃದಯ ವೈಶಾಲ್ಯತೆಯನ್ನು ಬೆಳೆಸಬೇಕು; ಮುಖ್ಯವಾಗಿ, ಜನಪರವಾಗಿರಬೇಕು, ಜವಾಬ್ದಾರಿಯುತವಾಗಿರಬೇಕು, ಎಂಬ ಕಾಳಜಿಗಳೊಂದಿಗೆ ಪತ್ರಿಕೆ ಆರಂಭಗೊಂಡಿದೆ. ಅಂತ್ಯವಿಲ್ಲದ ಈ ಯಾತ್ರೆ ಆರಂಭಿಸಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರನ್ನೂ ಸ್ಮರಿಸುತ್ತಾ...

ವಿಕ್ರಾಂತ ಪ್ರಕಾಶನದ ಪರವಾಗಿ,
ರವಿ ಕೃಷ್ಣಾ ರೆಡ್ಡಿ
ಕ್ಯಾಲಿಫೋರ್ನಿಯ, ಅಮೆರಿಕ

No comments: