Oct 20, 2008

ಗೋಮೂತ್ರ, ಗೋಹತ್ಯೆ, ಮತಾಂತರ - ಅವಧಿ, ಜೋಗಿ, ಕೆಂಡಸಂಪಿಗೆ

ಕನ್ನಡದ ಅಂತರ್ಜಾಲ ಪ್ರಪಂಚ ಬದಲಾದ ಕಾಲಘಟ್ಟವನ್ನು ದಾಖಲಿಸುತ್ತ ಎರಡು ವಾರಗಳ ಹಿಂದೆ "ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ," ಎಂಬ ಬ್ಲಾಗ್ ಲೇಖನ ಬರೆದಿದ್ದೆ. ಆ ಲೇಖನದಲ್ಲಿ ಪ್ರಾಸಂಗಿಕವಾಗಿ ಮಂಗಳೂರಿನ ಡಾ. ಕಕ್ಕಿಲಾಯರ "ಆರೋಗ್ಯ ಸಂಪದ" ತಾಣವನ್ನು ಉದಾಹರಿಸಿದ್ದೆ. ಡಾ. ಕಕ್ಕಿಲಾಯರ ಹಲವಾರು ಲೇಖನಗಳನ್ನು ಓದಿದ್ದ ನನಗೆ ಅವರ ಇತ್ತೀಚಿನ ಲೇಖನವಾದ "ಗೋಮಯ, ಗೋಮೂತ್ರ: ಔಷಧಗಳೋ, ಅಪಮಾನವೋ?" ನಮ್ಮ ಸದ್ಯದ ಸ್ಥಿತಿಗೆ ಬಹಳ ಪ್ರಸ್ತುತವಾಗಿ ಕಂಡಿತು. ಖುಷಿಯ ವಿಚಾರ ಏನೆಂದರೆ, ಇದಾದ ನಂತರ ಅವಧಿಯವರೂ ಕಕ್ಕಿಲಾಯರವರ ಈ ಲೇಖನವನ್ನು ಅವರ ಬ್ಲಾಗಿನಲ್ಲಿಯೂ ಪ್ರಕಟಿಸಿ ಅದಕ್ಕೆ ಅಂತರ್ಜಾಲದ ಕನ್ನಡ ಓದುಗರಲ್ಲಿ ವಿಸ್ತೃತವಾದ ವೇದಿಕೆ ಒದಗಿಸಿಕೊಟ್ಟರು. ತನ್ನ ಓದುಗ ವಲಯದಲ್ಲಿ ಜನಪ್ರಿಯವಲ್ಲದ ಇಂತಹ ಲೇಖನವನ್ನು ಚರ್ಚೆಗೆ ತೆರೆದಿಟ್ಟ ಅವಧಿಯ ಕಾರ್ಯ ಶ್ಲಾಘನೀಯವಾದದ್ದು.

ಇವತ್ತು ಬೆಳಿಗ್ಗೆಯ "ಕೆಂಡಸಂಪಿಗೆ" ಮುಖಪುಟ ನಿಜಕ್ಕೂ ಶಾಕ್ ಉಂಟುಮಾಡಿತು. ಪ್ರತಿದಿನವೂ ಓದುವ ಮತ್ತು ಪ್ರತಿದಿನವೂ ಬರೆಯುವ ಕನ್ನಡದ ಇತ್ತೀಚಿನ ಜನಪ್ರಿಯ ಲೇಖಕ ಜೋಗಿ ಇಲ್ಲಿಯತನಕ ಎಲ್ಲರ ಪರವೂ ಇರುವಂತೆ ಬರೆದುಕೊಂಡು ಬಂದವರು. ಕವಿ, ಕವಿತೆ, ಕವಿಸಮಯ, ಕತೆ, ಕಾದಂಬರಿ, ಸಾಹಿತ್ಯ್ಯ, ರಸಾನುಭವ, ಇಂತಹ ಯಾರಿಗೂ ನೋವುಂಟು ಮಾಡದ, ಆದರೆ ಓದುಗರನ್ನು ಯಾವುದೊ ಒಂದು ತೃಪ್ತಿಯಲ್ಲಿ ನಿಲ್ಲಿಸುವ ಬರವಣಿಗೆ ಮಾಡಿಕೊಂಡು ಬಂದವರು. ಮತ್ತು ಅದೇ ಕಾರಣಕ್ಕೆ ಅಪಾರ ಓದುಗರನ್ನು (ವಿಶೇಷವಾಗಿ ಯುವಓದುಗರನ್ನು) ಸೃಷ್ಟಿಸಿಕೊಂಡವರು. ವಿವಾದಾಸ್ಪದ ವಿಷಯಗಳಿಂದ ದೂರ ಉಳಿದವರು. ಆದರೆ ಅವರು ತಮ್ಮ ಇವತ್ತಿನ ಲೇಖನದಲ್ಲಿ ಒಂದಲ್ಲ, ಹಲವಾರು ವಿಷಯಗಳ ಮೇಲೆ ತಮ್ಮ ಖಚಿತ ನಿಲುವುಗಳನ್ನು ಜಾಹೀರು ಮಾಡಿಬಿಟ್ಟಿದ್ದಾರೆ. ಗೋಮೂತ್ರದ craze ಗೆ ಹಿನ್ನೆಲೆ, "ಗೋವಿನ ಪಾವಿತ್ರ್ಯವನ್ನು ಸಾರಲು ಗೋಮೂತ್ರಕ್ಕೆ ವೈದ್ಯಕೀಯ ಗುಣಗಳನ್ನು ಆರೋಪಿಸಿರುವುದು" ಎಂದು ಬರೆದಿದ್ದಾರೆ. ಬಹುಶ: ಭೈರಪ್ಪನವರ ಇತ್ತೀಚಿನ ಅಭೂತಪೂರ್ವ-ಸತ್ಯಸ್ಯಸತ್ಯ-ದಾರ್ಶನಿಕ-ಬೋಲ್ಡ್-ಸುದೀರ್ಘ ತಪಸ್ವಿನ-ಕ್ರಾಂತಿಕಾರಿ-ಸಂಶೋಧನಾತ್ಮಕ-ಸತ್ಯದ ಪ್ರಪ್ರಥಮ ಅನಾವರಣ-ಮಹಾನ್ ಆದ ಮತಾಂತರದ ಮೇಲಿನ ಅಗ್ರ-ಲೇಖನಕ್ಕೆ ಪ್ರತಿಕ್ರಿಯಿಸುತ್ತ, ಪರೋಕ್ಷವಾಗಿ ಎನ್ನುವುದಕ್ಕಿಂತ ನೇರವಾಗಿಯೆ, ಭೈರಪ್ಪನವರನ್ನು "ನೀವು ಮನುಷ್ಯರಂತೆ ಕಾಣಿಸುವುದಿಲ್ಲ," ಎಂದುಬಿಟ್ಟಿದ್ದಾರೆ. ಹೀಗೆ ಹೇಳುವ ಮೂಲಕ ಜೋಗಿ ಒಂದೇ ದಿನದಲ್ಲಿ ತಮ್ಮ ಅರ್ಧಕ್ಕರ್ಧ ಅಭಿಮಾನಿಗಳನ್ನು ಕಳೆದುಕೊಂಡು ಬಿಟ್ಟಿದ್ದಾರೆ ಎಂದರೆ ಅದು ಉತ್ಪ್ರೇಕ್ಷೆ ಅಲ್ಲ ಎಂದುಕೊಳ್ಳುತ್ತೇನೆ. ಅದಕ್ಕೆ ಕೆಲವು ಸಾಕ್ಷಿಗಳು ಆ ಲೇಖನಕ್ಕೆ ಈಗಾಗಲೆ ಬಂದಿರುವ ಪ್ರತಿಕ್ರಿಯೆಗಳಲ್ಲಿಯೆ ಇದೆ. ಕರ್ನಾಟಕದ ಇತ್ತೀಚಿನ ಬೆಳವಣಿಗೆಗಳಿಂದ ಏನಾಗುತ್ತಿದೆ ಅಂದರೆ, people, especially writers, will not have an option to be neutral. They will have to choose between right and wrong.

ಪುಣ್ಯಪುರುಷರೂ, ಸಂತರೂ ಆದವರ ಸನ್ನಿಧಿಯಲ್ಲಿ ಒಬ್ಬ ಮನುಷ್ಯ "ಈ ತಪಸ್ವಿಗಳು ಶಾಪ ಕೊಟ್ಟರು. ಆ ಧರ್ಮದ್ರೋಹಿಗಳು ಬೀದಿಗೆ ಬಿದ್ದರು," ಎಂದುಬಿಟ್ಟ. ಸಂತರು ಗಾಬರಿಬಿದ್ದರು. ನಮ್ಮ ಪುರಾಣಗಳಲ್ಲಿ ಒಂದು ಕಲ್ಪನೆ ಇದೆ. ಅದು, "ಯಾರಿಗಾದರೂ ಕೆಟ್ಟದು ಬಯಸಿದರೆ, ಅಂದರೆ ಶಾಪ ಕೊಟ್ಟರೆ, ಕೊಟ್ಟವರ ತಪ:ಶಕ್ತಿ ಕರಗಿ ಬಿಡುತ್ತದೆ," ಎನ್ನುವುದು. ಹಾಗಾಗಿಯೆ, ಪುರಾಣಗಳಿಂದಲೆ ಹೊಟ್ಟೆಹೊರೆಯುವ ಆ ಸಂತರು ಗಾಬರಿಬಿದ್ದದ್ದು. ಪ್ರಜಾರಾಜ್ಯ ಎಂಬ ಈ ಕಲಿಕಾಲದಲ್ಲಿ ತಮ್ಮ ತಪ:ಶಕ್ತಿ ಕಳೆದುಕೊಳ್ಳಲು ಯಾರು ಇಷ್ಟಪಡುತ್ತಾರೆ, ಅಲ್ಲವೆ? ಜೊತೆಗೆ, ಎದ್ದವರು ಬೀಳುವ, ಬಿದ್ದವರು ಮೇಲೆ ಏಳುವ ಕಾಲ ಇದು. ಅದಕ್ಕಾಗಿಯೆ ಸಂತರು "ಶಾಂತಂ ಪಾಪಂ, ನಾನು ಯಾರಿಗೂ ಶಾಪ ಕೊಡಲಿಲ್ಲ," ಎಂದರಂತೆ. ಪಾಪ ಆ ಸಂತರ ಪರವಾಗಿ ಸುಳ್ಳುಸುಳ್ಳೆ ಏನನ್ನೊ ಹೇಳಿಬಿಟ್ಟ ರಾಮಾನುಯಾಯಿ "ಯದ್ವಾ-ತದ್ವಾ ಈಶ್ವರಪ್ಪ !!" ಬಗ್ಗೆ "ಸುದ್ದಿ ಮಾತು" ಬ್ಲಾಗಿನಲ್ಲಿ ಲೇಖನವೊಂದು ಪ್ರಕಟವಾಗಿತ್ತು. ನಾಲ್ಕೈದು ವರ್ಷಗಳ ಹಿಂದೆ ಇದೇ ಈಶ್ವರಪ್ಪನವರು ಗೋಮಾಂಸ ಭಕ್ಷಕರ ನಾಲಿಗೆ ಸೀಳುವುದಾಗಿ ಹೇಳಿದ್ದರು. ಆಗ ಸಕಾರಣವಾಗಿಯೆ ಭಯಭೀತನಾಗಿದ್ದ ನಾನು ಏನೇನೊ ಕಾರಣಗಳನ್ನು ಕೊಟ್ಟುಕೊಂಡು ನಿರೀಕ್ಷಣಾ ಜಾಮೀನು ಹಾಕಿಕೊಂಡಿದ್ದೆ. ಆ ನಿರೀಕ್ಷಣಾ ಜಾಮೀನು ದಟ್ಸ್‌ಕನ್ನಡದಲ್ಲಿ ಪ್ರಕಟವಾಗಿತ್ತು. ಬಹುಶಃ ಆ ತಾಣದಲ್ಲಿನ ತಾಂತ್ರಿಕ ಸುಧಾರಣೆಗಳಿಂದಾಗಿ ಎರಡು ಮೂರು ವರ್ಷಗಳ ಹಿಂದಿನ ಲೇಖನಗಳು ಅಲ್ಲಿ ಈಗ ಸಿಗುತ್ತಿಲ್ಲ. ಅದಕ್ಕಾಗಿಯೆ ಆ ಜಾಮೀನನ್ನು ಇಲ್ಲಿ ಈಗ ಹಾಕಿಕೊಳ್ಳುವ ಮೂಲಕ (ಸರಿಯಾಗಿ ಐದು ವರ್ಷಗಳ ನಂತರ) ಮತ್ತೆ ನವೀಕರಿಸಿಕೊಳ್ಳುತ್ತಿದ್ದೇನೆ.

ಗೋಹತ್ಯೆ, ಗೋಪಾಲಕರು, ಮತ್ತು ಹಿಂದೂ ಮೂಲಭೂತವಾದಿಗಳು


(ಸ್ವಾತಂತ್ರ್ಯೋತ್ತರದ ಸಂವಿಧಾನಕ್ಕೆ ಹಲವು ತಿದ್ದುಪಡಿ ಮಾಡಿಕೊಂಡಿರುವ ನಾವು, ಸಾವಿರಾರು ವರ್ಷಗಳಷ್ಟು ಹಳೆಯ ಬೈಬಲ್, ಕುರಾನ್, ಮನುಸ್ಮೃತಿ, ಗೀತೆಗಳನ್ನಿಟ್ಟುಕೊಂಡು, ಅವುಗಳಲ್ಲಿರುವ ಎಲ್ಲವನ್ನು ಪಾಲಿಸಬೇಕು ಎಂಬ ಹಠ ಏಕೆ? ಅಕ್ಟೋಬರ್ 30, 2003 -ದಟ್ಸ್‌ಕನ್ನಡ.ಕಾಮ್)

ಅನೀತಿಯೇ ನೀತಿಯಾದ ಸಂದರ್ಭಗಳಲ್ಲಿ, ಸಾರ್ವಕಾಲಿಕ ಹಿತಕ್ಕಿಂತ ತತ್‌ಕ್ಷಣದ ಲಾಭವೇ ಮುಖ್ಯವಾದಾಗ, ಸಮಾಜದ ಸಮಷ್ಟಿ ಹಿತಕ್ಕಿಂತ ವ್ಯಕ್ತಿಯ ಅಥವ ಗುಂಪಿನ ಸ್ವಾರ್ಥವೇ ಹಿರಿದಾದಾಗ ಇಂತಹವು ನಡೆಯುತ್ತಲೇ ಇರುತ್ತವೆ. ಭಾರತದಲ್ಲಿನ ಹಿಂದೂ ಮೂಲಭೂತವಾದಿಗಳು ಕಳೆದ ಒಂದು ವರ್ಷದಿಂದ ಗಟ್ಟಿಯಾಗಿ ಕೂಗುತ್ತಿರುವ ಗೋಹತ್ಯಾ ನಿಷೇಧದ ಕೂಗು ಈ ನಿಟ್ಟಿನಲ್ಲಿ ಮುಂದುವರಿದ ಶೋಷಣೆ. ಅದು ಮತ ಗಳಿಕೆಗಾಗಿ ಜನ ವಿಭೇದೀಕರಣದ ಅಸಹ್ಯ ಚರಮಘಟ್ಟ.

ಭಾರತದ ಬಡ ಗ್ರಾಮೀಣ ಪ್ರದೇಶಗಳಲ್ಲಿ ಗೋಪಾಲನೆ ಎನ್ನುವುದು ಗೋವುಗಳ ಮೇಲಿನ ಭಕ್ತಿಯಿಂದಾಗಲಿ, ಅವುಗಳಿಗೆ ಹಿಂದೂ ಧರ್ಮದ ಹಲವು ಗ್ರಂಥಗಳು ಹೇಳಿರುವಂತೆ ಪವಿತ್ರವೆಂಬ ಕಾರಣದಿಂದಾಗಲಿ ನಡೆಯುವ ಉದ್ಯೋಗವಲ್ಲ. ಒಂದೆರಡು ಎಕರೆಗಳಿರುವ ರೈತ ತನ್ನ ಹೊಲಗದ್ದೆ ಉಳಲು, ಹೆಚ್ಚು ಖರ್ಚು ಮಾಡದೆ ತನಗೆ ಬೇಕಾದ ನೈಸರ್ಗಿಕ ಗೊಬ್ಬರ ಉತ್ಪಾದಿಸಲು ಮತ್ತು ಮನೆಯ ಹಾಲು ಮೊಸರಿನ ಅವಶ್ಯಕತೆಗಳಿಗೆ ಹಸುಗಳನ್ನು, ಎತ್ತುಗಳನ್ನು ಸಾಕುತ್ತಾನೆ.

ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ , ಉದಾಹರಣೆಗೆ, ಕೋಲಾರ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಸುಮಾರು ಮುವ್ವತ್ತು ವರ್ಷಗಳಿಂದೀಚೆಗೆ ನಡೆದ ಮಿಶ್ರತಳಿ ಹಸುಗಳ ಕ್ರಾಂತಿಯಿಂದಾಗಿ, ಕೇವಲ ಮನೆಯ ಶ್ರಮಜೀವಿ ಹೆಣ್ಣುಮಕ್ಕಳೇ ನೋಡಿಕೊಳ್ಳುವ ಒಂದೆರಡು ಹಸುಗಳಿಂದಲೇ ಇಡೀ ಕುಟುಂಬದ ಖರ್ಚು-ವೆಚ್ಚ ನಡೆಯುತ್ತವೆ. ದಿನಕ್ಕೆ ಕೇವಲ ಎರಡು-ಮೂರು ಲೀಟರ್ ಮಾತ್ರ ಹಾಲು ಕೊಡುವ ನಾಟಿ, ಜವಾರಿ ಹಸುಗಳಿಂದ ಮುಕ್ತಿ ಪಡೆದ ಈ ಕಡೆಯ ಗ್ರಾಮೀಣರು, ಹತ್ತು-ಹದಿನೈದು ಲೀಟರ್ ಹಾಲು ಕೊಡುವ ಮಿಶ್ರತಳಿ ಹಸುಗಳನ್ನು ಸಾಕಿ, ಮಾಡುತ್ತಿದ್ದ ಕೆಲಸದಲ್ಲಿಯೇ ಬಡ್ತಿ ಪಡೆದು, ಉತ್ತಮಿಕೆಯನ್ನು ಸಮರ್ಥವಾಗಿ ಸಾಧಿಸಿದ್ದಾರೆ.

ಆದರೆ ಈ ಕ್ರಾಂತಿ ರಾಜ್ಯದ ಎಲ್ಲಾ ಕಡೆಯೂ ಇನ್ನೂ ಪಸರಿಸದೆ, ಉತ್ತರ ಕರ್ನಾಟಕದ ಹಲವು ಕಡೆ ಗೊಡ್ಡು, ಬರಡು, ಪೀಚಲು ಹಸುಗಳನ್ನು ಸಾಕುತ್ತಿರುವ ದೌರ್ಭಾಗ್ಯ, ತಲೆತಲಾಂತರಗಳಿಂದ ಗೂಟಕ್ಕೆ ಹಗ್ಗ ಕಟ್ಟಿಕೊಂಡು ಸುತ್ತುವಂತೆ ಅದೇ ಜಾಗದಲ್ಲಿ ಸುತ್ತುವ ರೈತರು, ಗೋಪಾಲಕರು ಬಹಳಷ್ಟಿದ್ದಾರೆ. ಇವರಿಗೆ ಮಿಶ್ರತಳಿಯ ಹಸುಗಳಿಗೆ ಬಡ್ತಿ ಪಡೆಯಲು ಇರಬಹುದಾದ ದೊಡ್ಡ ತೊಂದರೆಯೇನೆಂದರೆ, ಅದಕ್ಕೆ ಶುರುವಿನಲ್ಲಿ ಬೇಕಾಗುವ ಬಂಡವಾಳ. ಇಂದು ಒಂದು ಒಳ್ಳೆಯ ಮಿಶ್ರತಳಿ ಹಸುವಿನ ಬೆಲೆ ಸರಿಸುಮಾರು ಹತ್ತು-ಹದಿನೈದು ಸಾವಿರ ರೂಪಾಯಿಗಳು. ಹಾಗೆಯೇ ಈ ಹಸುಗಳು ಮೊದಲ ದಿನದಿಂದಲೇ ಆರೈಕೆ ಮತ್ತು ಒಳ್ಳೆಯ ಪಶು ಆಹಾರ ಬೇಡುತ್ತವೆ. ದಕ್ಷಿಣದ ರೈತರು ಈ ಯುದ್ಧವನ್ನು ದೊಡ್ಡ ರೀತಿಯಲ್ಲಿ ಜಯಿಸಿದ್ದು - ಆಗ ಕಡಿಮೆ ಬೆಲೆಗೆ, ರಿಯಾಯಿತಿ-ಸಬ್ಸಿಡಿಯೊಂದಿಗೆ ಸಹಕಾರಿ ಸಂಸ್ಥೆಗಳು ಹಾಗೂ ಬ್ಯಾಂಕುಗಳು ಕೊಡುತ್ತಿದ್ದ ಸಾಲಗಳಿಂದಾಗಿ.

ಕೃಷಿ ಕ್ಷೇತ್ರದ ಯಂತ್ರಕ್ರಾಂತಿ

ಇಂದು ಬೆಂಗಳೂರಿನ ಸುತ್ತ ಮುತ್ತ ವ್ಯವಸಾಯ ಮಾಡುವ ಕೃಷಿಕರು ತಮ್ಮ ಬಹುತೇಕ ಕೃಷಿ ಕೆಲಸಗಳಿಗೆ ಟ್ರ್ಯಾಕ್ಟರನ್ನೇ ಬಳಸುತ್ತಾರೆ. ಅವು ಸ್ವಂತವೇ ಇರಬಹುದು, ಇಲ್ಲವೇ ಗುಂಟೆ-ಎಕರೆ ಲೆಕ್ಕದಲ್ಲಿ ಬಾಡಿಗೆಗೆ ಇರಬಹುದು. ಇಂದು ಇಂತಹ ಕೆಲಸಗಳಿಗೆ ಎತ್ತುಗಳು ಬೇಕೇಬೇಕು ಎನ್ನುವ ಅವಶ್ಯಕತೆಯೇ ರೈತನಿಗೆ ಇಲ್ಲ. ಉಳುವುದರಿಂದ ಹಿಡಿದು ಕಾಳು ಮಾಡುವುದರ ತನಕ (ಬಹುಶಃ ಕುಂಟೆ ಹೊಡೆಯುವುದನ್ನು ಬಿಟ್ಟು) ಟ್ರ್ಯಾಕ್ಟರ್ ಬಳಸುತ್ತಾನೆ. ರಾಗಿ ಪೈರಿನ ತೆನೆಯಿಂದ ರಾಗಿ ಬಿಡಿಸಲು ಮೂರ್‍ನಾಲ್ಕು ದಿನ ಕಲ್ಲಿನ ಗುಂಡಿಗೆ ಎತ್ತುಗಳನ್ನು ಕಟ್ಟಿ ಸುಡುಬಿಸಿಲಿನಲ್ಲಿ ಸುತ್ತಬೇಕಾಗಿದ್ದ ರೈತ, ಅದೇ ಕೆಲಸವನ್ನು ಕೇವಲ ಒಂದೆರಡು ಗಂಟೆಗಳಲ್ಲಿಯೇ ಟ್ರ್ಯಾಕ್ಟರ್‌ನಿಂದ ಮಾಡಿಸಿಕೊಳ್ಳುತ್ತಾನೆ. ಹೀಗೆ ತಾನು ತಲೆ-ತಲಾಂತರದಿಂದ ಅಂಟಿಕೊಂಡಿದ್ದಕ್ಕೆ ಶರಣು ಹೊಡೆದು ಆಧುನಿಕತೆಯನ್ನು, ಅದರ ಸೌಲಭ್ಯಗಳನ್ನು ತನ್ನ ಮತ್ತು ನಾಡಿನ ಅಭಿವೃದ್ಧಿಗೆ ಬಳಸುತ್ತಿದ್ದಾನೆ. ಇದರಿಂದಾಗಿ ಆಗಿರುವ ಪರಿಣಾಮವೇನೆಂದರೆ ಇವತ್ತು ಎಷ್ಟೋ ಹಳ್ಳಿಗಳಲ್ಲಿ ಉಳುವ ಎತ್ತುಗಳೇ ಇಲ್ಲ. ಅವುಗಳ ಸಾಕಣಿಕೆ ಟ್ರ್ಯಾಕ್ಟರ್‌ಗಿಂತ ಹೆಚ್ಚು ದುಬಾರಿಯಾದ್ದರಿಂದ ಅದರ ಅವಶ್ಯಕತೆಯೂ ಇಲ್ಲ.

ಇವುಗಳಿಂದ ನಮಗೆ ಸ್ಪಷ್ಟವಾಗುವುದೇನೆಂದರೆ, ಗೋಪಾಲನೆ ಎನ್ನುವುದು ರೈತ ತನ್ನ ಅವಶ್ಯಕತೆಗಳಿಗೆ ಮಾಡುವ ಉದ್ಯೋಗವೇ ವಿನಹ ಪರಲೋಕಕ್ಕೆ ಪುಣ್ಯ ಕಟ್ಟಿಕೊಂಡು ಹೋಗಬೇಕೆಂಬ ಆಸೆಯಿಂದಂತೂ ಅಲ್ಲ. ಜನರನ್ನು ಭೇದಿಸಲು, ಅಸಂಖ್ಯಾತವಾಗಿ ವರ್ಗೀಕರಿಸಲು ದುಡಿಯುತ್ತಿರುವ ಪವಿತ್ರಾತ್ಮಗಳ ಕಣ್ಣಿಗೆ ಈ ವಿಷಯ ಕಾಣಿಸುವುದಿಲ್ಲ ಎಂಬುದೂ ಸುಳ್ಳು. ತಮ್ಮ ಸ್ವಾರ್ಥವೇ ಮುಖ್ಯವಾಗಿರುವ ಯಾವ ಧರ್ಮದ ಮೂಲಭೂತವಾದಿಗಳಿಗೂ ಸತ್ಯ ಮತ್ತು ವಾಸ್ತವಿಕತೆ ಎಂದೂ ಪರಮ ವೈರಿಗಳೇ. ಹಿಂಸಾತ್ಮಕ ಜಿಹಾದ್ ಹೇಗೆ ಪರಧರ್ಮ ಅಸಹಿಷ್ಣು ಮೂಲಭೂತವಾದಿ ಮುಸಲ್ಮಾನರ ಕೊಳಕು ಅಸ್ತ್ರವೋ, ಹಾಗೆಯೇ ಈ ಗೋಹತ್ಯಾ ನಿಷೇಧವೂ ಜನದ್ರೋಹಿ, ಪರಧರ್ಮ ಪೀಡನೆಯ ಅಸಹ್ಯ ಶೋಷಣಾಸ್ತ್ರ.

ಅನ್ವೇಷಣೆಗಳಿಂದ ಪಾಠ ಕಲಿಯಬಾರದೇ?

ಗೋಹತ್ಯಾ ನಿಷೇಧಕ್ಕೆ ಮೂಲಭೂತವಾದಿಗಳು ನೀಡುತ್ತಿರುವ ಕಾರಣ ಗೋಮಾಂಸ ಭಕ್ಷಣೆ ಅಪವಿತ್ರ ಎಂಬುದು. ಹಿಂದುಗಳಿಂದ ಗೋಮಾಂಸ ಸೇವನೆ ಸರಿಯೋ-ತಪ್ಪೋ? ಪವಿತ್ರವೋ-ಅಪವಿತ್ರವೋ? ಇತ್ತೋ-ಇಲ್ಲವೋ ಎನ್ನುವುದು ಇನ್ನೂ ರುಜುವಾತಾಗಿಲ್ಲ. ನಮ್ಮ ಪುರಾತನ ಶಾಸ್ತ್ರಗಳಲ್ಲಿ, ಕಥೆಗಳಲ್ಲಿ, ಇದರ ಬಗೆಗೆ ಪರ-ವಿರೋಧ ಉಲ್ಲೇಖಗಳಿರುವುದು ಸಾಬೀತಾಗಿರುವ ವಿಷಯ. ಐವತ್ತು ವರ್ಷಗಳಿಂದೀಚೆ ಅಂದರೆ ಸ್ವಾತಂತ್ರ್ಯೋತ್ತರದಲ್ಲಿ ಸಂವಿಧಾನಕ್ಕೆ, ಕಾಲಕ್ಕೆ, ನ್ಯಾಯಕ್ಕೆ ತಕ್ಕ ಹಾಗೆ ಹಲವಾರು ಬಾರಿ ತಿದ್ದುಪಡಿ ಮಾಡಿಕೊಂಡಿರುವ ನಾವು ಸಾವಿರಾರು ವರ್ಷಗಳಾಚೆ ಬರೆದವೆನ್ನಲಾದ ಬೈಬಲ್, ಕುರಾನ್, ಮನುಸ್ಮೃತಿ, ಗೀತೆ ಇವುಗಳನ್ನಿಟ್ಟುಕೊಂಡು, ಅವುಗಳಲ್ಲಿರುವ ಎಲ್ಲವನ್ನು, ಇದ್ದದ್ದು ಇದ್ದ ಹಾಗೆ ಅಕ್ಷರಶಃ ಪಾಲಿಸಬೇಕೆನ್ನುವುದು ಅಜ್ಞಾನದ ಪರಮಾತಿರೇಕ.

ನಾಲ್ಕುನೂರು ವರ್ಷಗಳ ಹಿಂದಿನವರೆಗೂ ಜನ ಭೂಮಿ ಚಪ್ಪಟೆಯಾಗಿದೆಯೆಂದೂ, ಸೂರ್ಯ ಭೂಮಿಯ ಸುತ್ತ ಸುತ್ತುವನೆಂತಲೂ, ಚಂದ್ರ ಒಂದು ಗ್ರಹವೆಂತಲೂ ತಿಳಿದಿದ್ದರು. ಚಂದ್ರಮಂಡಲಕ್ಕೆ ಭಾರತೀಯನನ್ನು ಕಳುಹಿಸಬೇಕೆಂದುಕೊಳ್ಳುವ ಈ ಸಮಯದಲ್ಲಿ, ಇಂದು ಲಭ್ಯವಿರುವ ಜ್ಞಾನವನ್ನು ಬಳಸಿಕೊಳ್ಳದೆ, ಶಾಸ್ತ್ರ-ಪುರಾಣಗಳಿಗೆ ಗಂಟು ಬಿದ್ದು ಅದೇ ಸತ್ಯವೆಂದು ಹೇಳುವುದು ಸತ್ಯಕ್ಕೆ, ಜ್ಞಾನಕ್ಕೆ, ವಿಜ್ಞಾನಕ್ಕೆ ಎಸಗುವ ಮಹಾದ್ರೋಹ, ಸ್ವವಿನಾಶಕಾರಿ.

ಗೋಮಾಂಸ ಭಕ್ಷಿಸುವವರು ಇಂದಿನ ಜಗತ್ತಿನಲ್ಲಿ ಶೇ. 80 ಕ್ಕಿಂತ ಹೆಚ್ಚಿರಬಹುದು. ಭಾರತದ ವಿವಿಧ ಕಡೆಗಳಲ್ಲಿ ಹಿಂದುಗಳಲ್ಲಿನ ಕೆಲವು ವರ್ಗದವರು, ಬಡ ನಿರ್ಗತಿಕರು ಅದನ್ನು ತಿನ್ನುತ್ತಾರೆ. ಈಶಾನ್ಯ ಭಾರತದಲ್ಲಿ ಬೌದ್ಧರೂ ಸಹ ಗೋಮಾಂಸ ಭಕ್ಷಕರು. ಬಹುಶಃ ಲಭ್ಯವಿರುವ ಎಲ್ಲಾ ಮಾಂಸಗಳಲ್ಲಿ ಕಡಿಮೆ ಬೆಲೆಗೆ ಸಿಗುವುದೆಂದರೆ ಗೋಮಾಂಸವೇ ಇರಬಹುದು. ಅದರ ಈ ಮಿತಬೆಲೆಯೇ ಅದನ್ನು ಬಯಸುವ ಒಂದು ಕಾರಣ. ಪಾಶ್ಚಿಮಾತ್ಯ ದೇಶಗಳಲ್ಲಿಯೂ ಜನರು, ಅದರಲ್ಲಿ ಕೊಬ್ಬಿನಂಶ ಹೆಚ್ಚಿದ್ದರೂ ಅದನ್ನು ಬಯಸಲು ಮುಖ್ಯ ಕಾರಣ ಅದರ ಬೆಲೆಯೇ.

ಗೋಮಾಂಸ ಭಕ್ಷಣೆಯ ಲಾಭ-ನಷ್ಟಗಳನ್ನು, ನೈತಿಕತೆ-ಧಾರ್ಮಿಕತೆಯನ್ನು ಬದಿಗಿಟ್ಟು, ಗೋಹತ್ಯಾ ನಿಷೇಧದಿಂದ ಉಂಟಾಗಬಹುದಾದ ವಾಣಿಜ್ಯ ಪರಿಣಾಮಗಳನ್ನು ಗಮನಿಸಿದರೆ, ಅವು ಭಾರತದಲ್ಲಿನ ಗೋಪಾಲಕರಿಗೆ, ಗೋಪಾಲನೆಯನ್ನು ಅವಲಂಬಿಸಿ ಬೆಳೆದಿರುವ ಕೈಗಾರಿಕೆ-ಕಾರ್ಮಿಕರಿಗೆ ಮಾರಣಾಂತಿಕ.

ಲಾಭದಾಯಕ ಹಸು ಸಾಕಾಣಿಕೆಗಾಗಿ-

ದೇಶದಲ್ಲಿ ಗೋಹತ್ಯಾ ನಿಷೇಧದ ರೈಲು ಬಂಡಿ ನಿಲ್ಲುವ ಕಟ್ಟಕಡೆಯ ನಿಲ್ದಾಣ ಗೋವು ಮತ್ತು ಗೋಪಾಲನೆಯ ನಿರ್ಮೂಲನೆ. ಇದಕ್ಕೆ ಕೆಳಗಿನ ಕಾರಣಗಳನ್ನು ಸಮರ್ಥನೆಗಾಗಿ ಕೊಡಬಹುದು.

ಮುದಿಯಾದ ಹಸುಗಳನ್ನು ಕಸಾಯಿಖಾನೆಗೆ ಮಾರುವುದು ನೆನ್ನೆ-ಮೊನ್ನೆ ಅಥವ ಮುಸಲ್ಮಾನರು ಬಂದ ನಂತರ ಪ್ರಾರಂಭವಾದ ಕೆಲಸವಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಗಾಂಧೀಜಿ ರಾಮರಾಜ್ಯವೆಂದು ಉದ್ಗರಿಸಿದ ಮೈಸೂರು ಸಂಸ್ಥಾನದಲ್ಲಿಯೂ ರೈತರು ತಮ್ಮ ಅನವಶ್ಯಕ ಹಸುಗಳನ್ನು ಮಾರುತ್ತಿದ್ದರು. ಇದು ರೈತನಿಗೆ ತಾನು ಬದುಕಲು ಮತ್ತು ತನ್ನ ಇತರ ಹಸುಗಳನ್ನು ಬದುಕಿಸಿಕೊಳ್ಳಲು ಇದ್ದ ಏಕೈಕ ದಾರಿ.

ಹಸು ಸಾಕಣಿಕೆಯೆನ್ನುವುದು ಕೊನೆಯ ತನಕ ಲಾಭದಾಯಕವಾದ ಕೆಲಸವಲ್ಲ. ಹಸು ಗರ್ಭ ಕಟ್ಟುವುದು ಮತ್ತು ಹಾಲು ಕರೆಯುವುದನ್ನು ನಿಲ್ಲಿಸಿದ ಐದಾರು ವರ್ಷಗಳ ನಂತರವೂ ಬದುಕಬಹುದು. ಐದಾರು ವರ್ಷಗಳ ಕಾಲ ಪ್ರಾಯಶಃ ನಷ್ಟವಿಲ್ಲದೆ ಸಾಕಿದ ಗೋಪಾಲ, ಅದು ಉಪಯೋಗಕ್ಕೆ ಬಾರದಿದ್ದಾಗಲೂ ನಷ್ಟದಲ್ಲಿ ಅದನ್ನು ಸಾಕುವುದು ಅವಾಸ್ತವ ಮತ್ತು ಅನಪೇಕ್ಷಣೀಯ. ತಮ್ಮ ಖರ್ಚು-ವೆಚ್ಚ, ಲಾಭ-ನಷ್ಟಗಳನ್ನು ಸರಿದೂಗಿಸಿಕೊಳ್ಳಲು ಸಂಘಸಂಸ್ಥೆಗಳು ಆಗಾಗ ಮಾಡುವ ಸಂಬಳ-ಸಾರಿಗೆ-ಸಿಬ್ಬಂದಿ ಕಡಿತದಂತೆಯೇ, ಮುದಿ ಬಿದ್ದ ಹಸುಗಳನ್ನು ಕಸಾಯಿಖಾನೆಗೆ ಮಾರುವುದು ಒಂದು ವ್ಯವಹಾರಿಕ ಕೆಲಸ. ಭಾವನಾತ್ಮಕವಾಗಿ ಅದು ಎಷ್ಟೇ ಕಷ್ಟವಾಗಿದ್ದರೂ, ಕೆಲವು ಸಲ ಬಾಳಿ, ಬದುಕಿ ಉಳಿಯಲು ಮಾಡಲೇಬೇಕಾದ ಅನಿವಾರ್ಯ ಕೆಲಸ. ಇದಾಗದಿದ್ದ ಪಕ್ಷದಲ್ಲಿ ನಮ್ಮ ಯಾವ ರೈತರೂ ಲಾಭದಾಯಕವಾಗಿ ಹಸು ಸಾಕಣಿಕೆ ಮಾಡಲಾಗುವುದಿಲ್ಲ ಮತ್ತು ನಮ್ಮವರ ಹಾಲು ಉತ್ಪಾದನೆಯ ವೆಚ್ಚ ಹೆಚ್ಚಾಗಿ, ಪರದೇಶಗಳಿಂದ ತರಿಸುವ ಹಾಲೇ ನಮ್ಮದರ ದರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತದೆ.

ಗಾಂಧಿ ತಾತನ ಹೆಸರಿನ ಬಲ

ಗೋಹತ್ಯಾ ನಿಷೇಧದ ಮುಂಚೂಣಿಯಲ್ಲಿರುವವರು ಇತ್ತೀಚೆಗೆ ಬಳಸುತ್ತಿರುವ ಹೆಸರು ಗಾಂಧೀಜಿಯದು. ಗಾಂಧಿ ಹೇಳಿದ್ದನ್ನೆಲ್ಲ ಸಾಧುವೇ, ಅಸಾಧುವೇ ಎಂದು ಪ್ರಶ್ನಿಸದೇ ಒಪ್ಪಿಕೊಳ್ಳುವುದು ಪ್ರಜ್ಞಾವಂತಿಕೆಯಲ್ಲ. ಯಾರಿಗೆ ಇಷ್ಟವಾಗಲಿ ಬಿಡಲಿ, ಕಾಲ, ನಿಯಮ ಬದಲಾಗುತ್ತಾ ಇರುತ್ತವೆ. ಹೊಸ ಹೊಸ ಶೋಧನೆಗಳು, ಸತ್ಯಗಳು ಬೆಳಕು ಕಾಣುತ್ತಲೇ ಇರುತ್ತವೆ. ಹಾಗಾಗಿ ಗಾಂಧೀಜಿ, ಅಥವ ಬೇರೇ ಯಾರೇ ಆಗಲಿ, ಅವರು ಹೇಳುವುದೆಲ್ಲವೂ ಕಾಲಾತೀತವಾಗಲು ಸಾಧ್ಯವಿಲ್ಲ. ಆ ವಿಷಯಕ್ಕೆ ಬಂದರೆ ಗಾಂಧೀಜಿ ಹೇಳಿದ್ದನ್ನೆಲ್ಲ ಸ್ವತಂತ್ರ ಭಾರತ ಒಪ್ಪಿಕೊಂಡು ಕಾರ್ಯಗತಗೊಳಿಸಿಲ್ಲ. ಅವುಗಳಿಗೆ ಹಲವಾರು ವ್ಯವಹಾರಿಕ ಕಾರಣಗಳೂ, ಆಯಾಯಾ ಕಾಲದ ಅಗತ್ಯತೆಗಳೂ ಇರಬಹುದು. ಹಾಗಾಗಿ, ಗಾಂಧೀಜಿಯ ನೀತಿ ಮತ್ತು ಕೆಲಸವನ್ನು ದ್ವೇಷಿಸುವ, ಆತನ ಹಂತಕರನ್ನು ಸಮರ್ಥಿಸಿಕೊಳ್ಳುವ ಈ ಮೂಲಭೂತವಾದಿಗಳು, ಗೋ-ವಿಷಯದಲ್ಲಿ ಗಾಂಧಿಯ ಹೆಸರನ್ನು ಮುಂದಕ್ಕೆ ಬಿಡುವುದು ಹೀನಾಯ, ಪರಮಘಾತುಕ, ವಂಚಕತೆಯ ಗೌರೀಶಂಕರ.

ಭಾರತದ ಹಲವು ಕಡೆ ಜಾತ್ಯಾತೀತ ಪಕ್ಷಗಳೂ ಇತ್ತೀಚೆಗೆ ಈ ಮೂಲಭೂತವಾದದ ಅಸ್ತ್ರಗಳನ್ನೇ, ವೋಟಿನ ರಾಜಕಾರಣಕ್ಕೆ ಬಳಸಲು ಯತ್ನಿಸುತ್ತಿರುವುದೂ ಸಹಾ ಇದೇ ರೀತಿಯ ನಿರ್ಲಜ್ಜ ನಡವಳಿಕೆ. ಇಂತಹ ಸಮಯಗಳಲ್ಲಿ ಇವುಗಳ ಸಾಧಕ-ಬಾಧಕಗಳ ಚರ್ಚೆ-ಸಂಶೋಧನೆ, ಮೂಲಭೂತವಾದಿಗಳ, ಶೋಷಕರ ವಿತಂಡತನವನ್ನು ಕ್ರಿಯಾಶಾಲವಾಗಿ ಜನಸಾಮಾನ್ಯರ ಮುಂದಿಡುವ ಜವಾಬ್ದಾರಿ ದೇಶದ ಚಿಂತಕರ, ವಿಶ್ವವಿದ್ಯಾನಿಲಯಗಳ, ಸಂಘ ಸಂಸ್ಥೆಗಳ ಮೇಲಿದೆ. ಜವಾಬ್ದಾರಿಯಿಂದ ಪಲಾಯನ ಮಾಡುವುದೂ ಒಂದು ಹೇಯ ವಂಚನೆ.

ರಾಜ್ಯ ಭಾ.ಜ.ಪ.ದ ಮಾಜಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪನವರು ಈ ಮಧ್ಯೆ ಗೋಹತ್ಯೆ ಮಾಡುವವರ ಕೈಗಳನ್ನು ಕಡಿಯುವುದಾಗಿಯೂ, ಗೋಮಾಂಸ ಭಕ್ಷಕರ ನಾಲಗೆ ತುಂಡರಿಸುವುದಾಗಿಯೂ ಹೇಳಿರುವುದು ವರದಿಯಾಗಿದೆ. ಇದು ಜನರಲ್ಲಿ ಭೇದ, ಭಯ ಬಿತ್ತುವ ದೇಶದ್ರೋಹದ ಕೆಲಸ. ಸ್ವತಃ ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ, ರೈತರ, ಗೋಪಾಲಕರ ಕಷ್ಟಗಳನ್ನು ನೋಡಿರುವ ಇವರು, ಸಮಾಜದ ಹಿತಚಿಂತನೆ ಮರೆತು, ತಮ್ಮ ಒಡೆಯರನ್ನು ಖುಷಿ ಪಡಿಸಲು ಈ ರೀತಿ ಮಾತನಾಡುವುದು ಜನದ್ರೋಹ, ಆತ್ಮದ್ರೋಹ. ನೆಲದ ಕಾನೂನನ್ನು ಗೌರವಿಸದ ವಿದ್ರೋಹ. ಅವರ ಚಿಂತನೆಗಳನ್ನು ವಾಕ್‌ಸ್ವಾತಂತ್ರ್ಯದ ಹಕ್ಕಿನಿಂದಾಗಿ ಕೇಳಿಸಿಕೊಳ್ಳಬಹುದಾದರೂ, ಜನತೆ ಇದನ್ನು ಖಂಡಿಸುವುದು ಮತ್ತು ಕಾನೂನು, ನ್ಯಾಯಪಾಲಕರು ಇವರಂತಹವರಿಗೆ ಎಚ್ಚರಿಕೆ ನೀಡುವುದು ದೇಶದ ಸಾಮರಸ್ಯದ, ಅಭಿವೃದ್ದಿಯ ದೃಷ್ಟಿಯಿಂದ ಅನಿವಾರ್ಯ.

ಹಸು ಮತ್ತು ನನ್ನ ಅಮ್ಮ

ಕಳೆದ ಮುವ್ವತ್ತು ವರ್ಷಗಳಿಂದ ಹಸುಗಳನ್ನು ಸಾಕುವುದರ ಮೂಲಕ ಕುಟುಂಬದ ಅಭಿವೃದ್ದಿಯಲ್ಲಿ ಗಣನೀಯ ಪಾತ್ರವಹಿಸಿ, ತಾನೂ ಆರ್ಥಿಕವಾಗಿ ಸ್ವಾವಲಂಬಿಯಾಗಿರುವವಳು ನನ್ನ ತಾಯಿ. ತಾನು ದೈಹಿಕವಾಗಿ ದುರ್ಬಲವಾಗುತ್ತಿರುವ ಈ ಸಮಯದಲ್ಲಿಯೂ ಹುಲ್ಲು ಬೂಸಾಗಳ ಖರ್ಚು ವಿಪರೀತವಾಗಿ ಏರುಪೇರಾಗಿ ಹಾಲಿನ ಬೆಲೆ ಹೆಚ್ಚಾಗದೆ ಇರುವ ಸಂದರ್ಭದಲ್ಲಿ, ಇನ್ನೂ ಒಂದು ಹಸುವನ್ನು ಸಾಕಿಕೊಂಡು ಲಾಭದಾಯವಾಗೇ ಏಗುತ್ತಿದ್ದಾಳೆ. (ಅದು ಲಾಭದಾಯಕ ಎನ್ನಲು ನನ್ನ ತರ್ಕ ಏನೆಂದರೆ, ನಷ್ಟವಾಗುವ ಕೆಲಸವನ್ನು ನಿಲ್ಲಿಸುವ ಧೈರ್ಯ ಮತ್ತು ಜಾಣ್ಮೆ ಆಕೆಗಿದೆ. ಆದಾಗ್ಯೂ, ಈ ಉದ್ಯೋಗದಿಂದ ಅವಳಿಗೆ ತಿಂಗಳಿಗಾಗುವ ಲಾಭ ಬಹುಶಃ ಅಮೇರಿಕಾದಲ್ಲಿ ನನ್ನ ಎರಡು ಸಿನೆಮಾ ವೀಕ್ಷಣೆಗೆ ತಗಲುವಷ್ಟು.) ಈ ಹಿನ್ನೆಲೆಯಿಂದಾಗಿ ಚಿಕ್ಕಂದಿನಿಂದಲೂ ನನಗೆ ಹಸುಗಳೊಂದಿಗೆ ಒಡನಾಟ. ನನ್ನ ನಿರಾಳದ, ದುಃಖದ ಹಲವಾರು ಕ್ಷಣಗಳನ್ನು ಅವುಗಳೊಂದಿಗೆ ಕಳೆದಿದ್ದೇನೆ. ದುಃಖವಾದಾಗ ಒಂಟಿಯಾಗಿ ದನಗಳ ಮೈತಡವಿಕೊಂಡು, ಅವುಗಳಿಂದ ನೆಕ್ಕಿಸಿಕೊಂಡು, ದನದ ಕೊಟ್ಟಿಗೆಯಲ್ಲಿ ಕುಳಿತು ಮಲಗಿ ಧ್ಯಾನಿಸಿದ್ದೇನೆ. ರಜಾದಿನಗಳಲ್ಲಿ ಕೊಯಿಲು ಮುಗಿದ ಹೊಲಗದ್ದೆಗಳ ಬಯಲಲ್ಲಿ ಅವುಗಳನ್ನು ಮೇಯಿಸಿಕೊಂಡು ನಿರಾಳವಾಗಿ ಕನ್ನಡದ ಹಲವಾರು ಕಥೆ, ಕಾದಂಬರಿ, ಚರಿತ್ರೆಯನ್ನು ಓದಿದ್ದೇನೆ, ಲೆಕ್ಕ-ಪದಬಂಧಗಳನ್ನು ಬಿಡಿಸಿದ್ದೇನೆ. ನನ್ನಮ್ಮನ ಕಣ್ತಪ್ಪಿಸಿ ಹಸು-ಎಮ್ಮೆಗಳ ಮೇಲೆ ವಿಪರೀತವೆನ್ನುವಷ್ಟು ಭರವಸೆಯನ್ನಿಟ್ಟು ಹಲವಾರು ಸಲ ಪಕ್ಕದ ಚಂದಾಪುರದ ಟೆಂಟಿನಲ್ಲಿ ಸಿನೆಮಾ ನೋಡಿ, ವಾಪಸ್ಸು ಬಂದು ನನ್ನನ್ನು ಮಿಸ್ ಮಾಡಿಕೊಳ್ಳದ ಅವುಗಳನ್ನು ಕಂಡು, ಅಮ್ಮನಿಗೆ ಕಣ್ತಪ್ಪಿಸಿ ವಂಚಿಸಿದ್ದೂ ಸೇರಿ, ಸಂತೋಷವೊ, ದುಃಖವೋ ಪಟ್ಟಿದ್ದಿದೆ.

ಮೂರು ವರ್ಷದ ಹಿಂದೆ ಸುಮಾರು ಹನ್ನೆರಡು ಸಾವಿರ ರೂಪಾಯಿಗಳಿಗೆ ಪಕ್ಕದ ಊರಿನಲ್ಲಿ ಒಂದು ಹಸುವನ್ನು ಖರೀದಿಸಿ, ಅದನ್ನು ಸುಮಾರು ಎರಡು ಮೈಲಿ ನಡೆಸಿಕೊಂಡು ಬಂದು ಅಮ್ಮನಿಗೆ ತೋರಿಸಿದಾಗ, ಅವಳು ಹುಸಿಮುನಿಸು ತೋರಿಸಿ ಅದರ ದೊಡ್ಡ ದೊಡ್ಡ ಮೊಲೆತೊಟ್ಟುಗಳಿಂದ ಹಾಲು ಕರೆಯುವ ಕಷ್ಟದ ಬಗ್ಗೆ ಗೊಣಗಿದ್ದಳು. ಈಗಲೂ ವಾರಕ್ಕೊಮ್ಮೆ ಖಂಡಾಂತರದಿಂದ ಮಾತನಾಡುವಾಗ ನನ್ನ ಒಂದು ಖಾಯಂ ಪ್ರಶ್ನೆ, ಹಸು, ಕರು ಹೇಗಿವೆ ಎಂದು. ಈ ಮೊದಲೆಲ್ಲಾ, ಬೆದೆಗೆ ಬಂದಿರುವ ಬಗ್ಗೆ, ಗರ್ಭ ಕಟ್ಟಿಸಿದ ಬಗ್ಗೆ, ಎಷ್ಟು ಹಾಲು ಕೊಡುತ್ತಿದೆ ಅನ್ನುವುದರ ಬಗ್ಗೆ ಹೇಳುತ್ತಿದ್ದವಳು ಈ ನಡುವೆ, ಒಂದೊಂದಾಗಿ ಗಾಯಗಳಾಗಿ ನಿಷ್ಪ್ರಯೋಜಕವಾಗುತ್ತಿರುವ ಹಸುವಿನ ಮೊಲೆತೊಟ್ಟುಗಳ ಬಗ್ಗೆ, ಬಾತುಕೊಳ್ಳುವ ಅದರ ಕೆಚ್ಚಲು ಮತ್ತು ವೈದ್ಯದ ಬಗ್ಗೆ, ಬಾರದ ಮಳೆ ಮತ್ತು ಹುಲ್ಲಿನ ಕೊರತೆಯ ಬಗ್ಗೆ, ತೂಕದ ಲೆಕ್ಕದಲ್ಲಿ ರಾಗಿ ಹುಲ್ಲು ಮಾರುವ ಬಗ್ಗೆ ನೋವಿನಿಂದ ಹೇಳುತ್ತಾಳೆ. ಲಹರಿಯಲ್ಲಿದ್ದ ದಿನ, "ನಿನಗೆ ಇದೊಂದು ಹಸುವಿನ ಚಿಂತೆ! ಬೇರೆ ಕೆಲಸವಿಲ್ಲವಾ?" ಎಂದು ಅಣಕಿಸುತ್ತಾ ನಗುತ್ತಾಳೆ.


(ಈಗ: ನನ್ನಮ್ಮ ಹಸು ಸಾಕುವುದನ್ನು ನಿಲ್ಲಿಸಿ ಎರಡು ವರ್ಷವಾಯಿತು. ಕಾರಣಗಳು ಹಲವಾರು. ತನ್ನ ಕೊನೆಯ ಹಸುವನ್ನು ಸುಮಾರು ಇಪ್ಪತ್ತು ಸಾವಿರಕ್ಕೊ ಏನೊ ಮಾರಿಕೊಂಡಳಂತೆ. ಊರಿನಲ್ಲಿದ್ದಾಗ ಬೆಳಿಗ್ಗೆ ಎದ್ದು ಹಸುವಿನ ಮುಖ ನೋಡುತ್ತಿದ್ದೆ. ಈಗ ಮಕ್ಕಳು ದಾಯಾದಿಗಳ ಮನೆಗೆ ಹೋಗಿ ಹಾಲು ತರುವುದನ್ನು ಕಂಡಾಗ ಸ್ವಾತಂತ್ರ್ಯವನ್ನೆ ಕಳೆದುಕೊಂಡ ಹಿಂಸೆಯಾಗುತ್ತದೆ. ತನ್ನ ಅನ್ನ-ಹಾಲನ್ನು ತಾನೆ ಬೆಳೆಯುವ ಸ್ವಾವಲಂಬಿ ರೈತನ ಸ್ವಾಭಿಮಾನವನ್ನು ಯಾವುದೂ ಸರಿಗಟ್ಟದು.)

2 comments:

ಹರೀಶ್ ಕೇರ said...

ರವಿ, ಮಾನವೀಯ ನಿಲುವು ಇಲ್ಲದವನು ಒಳ್ಳೆಯ ಬರಹಗಾರನಾಗಲಾರ ಎಂಬ ನನ್ನ ಅಭಿಪ್ರಾಯವನ್ನು ಜೋಗಿ ನಿಜ ಮಾಡಿದ್ದಾರೆ. ನನಗೂ ಇದು ಆಶ್ಚರ್‍ಯ ಉಂಟು ಮಾಡಿತು. ಇದು- ಜೋಗಿಯ ನಿಜಗುಣದ ದಿಢೀರ್ ಅನಾವರಣ ಅನ್ನಲೇ ಅಥವಾ ಮೆಟಮಾರ್ಫಸಿಸ್ ಅನ್ನಲೇ- ಹಿತಕರವಾದ ಅಚ್ಚರಿ ಅನ್ನುವುದರಲ್ಲಿ ಅನುಮಾನವಿಲ್ಲ. ಜತೆಗೆ, ರುಜುವಂತಿಕೆಯ ನಿಲುವೊಂದನ್ನು ಕಂಡುಬಂದಾಗ ಬೆನ್ನು ತಟ್ಟಿ ಸ್ವಾಗತಿಸಿದ ನಿಮ್ಮ ಬರಹ ಕೂಡ ತುಂಬ ಇಷ್ಟವಾಯಿತು. ಇಂಥ ಅಕ್ಕರೆ ಉಕ್ಕಿಸುವ ಲೇಖನಗಳಿಂದಾಗಿಯೇ ನೀವೆಲ್ಲ ನಮಗೆ ಪ್ರೀತಿಯ ಬರಹಗಾರರಾಗಿದ್ದೀರಿ.
- ಹರೀಶ್ ಕೇರ

ಸಂಭವಾಮಿ ಯುಗೇ ಯುಗೇ said...

ಲೇಖನ ಚೆನ್ನಾಗಿದೆ. ನಿಮ್ಮ ಬರವಣಿಗೆ ಖುಷಿ ಕೊಡುತ್ತದೆ. ನಾನೂ ಒಂದು ಬ್ಲಾಗ್ ಆರಂಭಿಸಿದ್ದೇನೆ. ಸಂಭವಾಮಿ ಯುಗೇ ಎಂದು ಹೆಸರು. ಬಿಡುವಾದಾಗ ಓದಿ