Aug 22, 2006

ಅಕ್ಕ ಸಮ್ಮೇಳನದಲ್ಲಿ ನಮ್ಮನ್ನು ಪ್ರತಿನಿಧಿಸುವವರು

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 8, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಅದು 1999 ರ ಬೇಸಿಗೆ. ನಾನಾಗ ಹೈದರಾಬಾದ್‌ನಲ್ಲಿ ಕೆಲಸದಲ್ಲಿದ್ದೆ. ಆ ಸಮಯದಲ್ಲಿ ಅಲ್ಲಿನ ಜನಪ್ರಿಯ ಇಂಗ್ಲಿಷ್ ದೈನಿಕ "ಡೆಕ್ಕನ್ ಕ್ರಾನಿಕಲ್" ನಮ್ಮ ರಾಜ್ಯದ ಬಾಗೆಪಲ್ಲಿ ತಾಲ್ಲೂಕಿನಲ್ಲಿ ಚಿತ್ರಾವತಿ ನದಿಗೆ ಕರ್ನಾಟಕ ಸರ್ಕಾರ ಕಟ್ಟಲಿರುವ ಬ್ಯಾರೇಜ್‌ನಿಂದ ಆಂಧ್ರದ ಪಾಲಿನ ನೀರಿಗೆ ಮೋಸವಾಗಲಿದೆ, ಇದನ್ನು ಆಂಧ್ರಪ್ರದೇಶ ಸರ್ಕಾರ ಕೂಡಲೆ ನಿಲ್ಲಿಸಲು ಪ್ರಯತ್ನಿಸಬೇಕು, ಅದಕ್ಕಾಗಿ ಏನೇನು ಮಾಡಬೇಕು ಎಂದು ದೊಡ್ಡ ವರದಿಯನ್ನೇ ಪ್ರಕಟಿಸಿತ್ತು.

ನಮ್ಮಲ್ಲಿ ಕೆಲವು ತಾಲ್ಲೂಕುಗಳು, ಊರುಗಳಿವೆ. ಅವುಗಳ ಹೆಸರು ಬಂದ ತಕ್ಷಣ ನಮಗೆ ಅವನ್ನು ಪ್ರತಿನಿಧಿಸುವವರ ಅಥವ ಪ್ರತಿನಿಧಿಸುತ್ತಿದ್ದವರ ಹೆಸರು ಜ್ಞಾಪಕಕ್ಕೆ ಬಂದುಬಿಡುತ್ತದೆ. ಹೊಳೆನರಸಿಪುರದ ದೇವೇಗೌಡರು, ಸೊರಬದ ಬಂಗಾರಪ್ಪ, ಮದ್ದೂರಿನ ಎಸ್.ಎಂ. ಕೃಷ್ಣ, ಶಿಕಾರಿಪುರದ ಯಡಿಯೂರಪ್ಪ, ನಾಗಮಂಗಲದ ಶಿವರಾಮೇಗೌಡ, ಬಾಗಲಕೋಟೆಯ ಸಿದ್ದುನ್ಯಾಮೇಗೌಡ, ಚಿಕ್ಕೋಡಿಯ ಶಂಕರಾನಂದ; ಹೀಗೆ. ಅದೇ ರೀತಿ 1994 ರಿಂದ ಈಚೆಗೆ ಬಾಗೆಪಲ್ಲಿ ಎಂದಾಕ್ಷಣ ಕರ್ನಾಟಕದ ಜನತೆಗೆ ನೆನಪಿಗೆ ಬರುತ್ತಿದ್ದ ಹೆಸರು ಅಲ್ಲಿನ ಶಾಸಕ ಜಿ.ವಿ. ಶ್ರೀರಾಮರೆಡ್ಡಿಯವರದು. ಅದಕ್ಕೆ ಅವರು ರಾಜ್ಯದ ಕಮ್ಯುನಿಸ್ಟ್ ಪಕ್ಷದ ಏಕೈಕ ಶಾಸಕರು ಎನ್ನುವುದಕ್ಕಿಂತ ಅವರು ವಿಧಾನಸಭೆಯಲ್ಲಿ ಎತ್ತುತ್ತಿದ್ದ ಜನಪರ ವಿಷಯಗಳು, ಮಾಡುತ್ತಿದ್ದ ವಾದ, ಅವುಗಳಿಂದ ಪ್ರಕಟವಾಗುತ್ತಿದ್ದ ಅವರ ಜನಪರ ಕಾಳಜಿಗಳೇ ಮುಖ್ಯ ಕಾರಣ.

ಹೀಗಾಗಿ, ಡೆಕ್ಕನ್ ಕ್ರಾನಿಕಲ್‌ನ ವರದಿ ನೋಡಿದ ತಕ್ಷಣ ನಾನು ಶ್ರೀರಾಮರೆಡ್ಡಿಯವರಿಗೆ, ಆಂಧ್ರದ ಸರ್ಕಾರ ಮತ್ತು ಅಲ್ಲಿನ ಮಾಧ್ಯಮಗಳು ಚಿತ್ರಾವತಿ ಯೋಜನೆಯನ್ನು ವಿರೋಧಿಸಲು ತಂತ್ರಗಳನ್ನು ರೂಪಿಸುತ್ತಿವೆ, ತಾವು ಅದನ್ನು ಎದುರಿಸಲು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ, ಹಾಗೂ ನಿಮ್ಮ ಜನಪರ ಕಾಳಜಿಗೆ ನನ್ನ ಶ್ಲಾಘನೆಗಳು ಎಂದು ಬರೆದು, ಆ ಸುದ್ದಿಯ ಪೇಪರ್ ಕಟಿಂಗ್ ಸಮೇತ ಅಂಚೆಗೆ ಹಾಕಿದ್ದೆ. ವಿಳಾಸ ಸರಿಯಿತ್ತೊ ಇಲ್ಲವೊ, ಅದು ಅವರಿಗೆ ಮುಟ್ಟಿತೋ ಇಲ್ಲವೊ ಗೊತ್ತಾಗಲಿಲ್ಲ. ಅದಾದ 6 ತಿಂಗಳ ನಂತರ ಬಂದ ಚುನಾವಣೆಯಲ್ಲಿ, ಎಸ್.ಎಂ. ಕೃಷ್ಣರ ಕಾಂಗ್ರೆಸ್ ಅಲೆಯಲ್ಲಿ ಶ್ರೀರಾಮರೆಡ್ಡಿಯವರು ಸೋತರು. ಅದಾದ ನಾಲ್ಕೂವರೆ ವರ್ಷಗಳ ನಂತರ ಬಂದ 2004 ರ ಚುನಾವಣೆಯಲ್ಲಿ ಎಸ್.ಎಂ.ಕೃಷ್ಣರ ಕಾಂಗ್ರೆಸ್ ಸೋತಿತು, ಬಾಗೆಪಲ್ಲಿಯಲ್ಲಿ ಶ್ರೀರಾಮರೆಡ್ಡಿ ಮತ್ತೆ ಗೆದ್ದರು. ಕಾಂಗ್ರೆಸ್-ಜನತಾದಳ ಮೈತ್ರಿ, ಮತ್ತು ಈಗಿನ ಬಿಜೆಪಿ-ಜನತಾದಳ ಮೈತ್ರಿಯುದ್ದಕ್ಕೂ ಸದನದಲ್ಲಿ ಮತ್ತೆ ಶ್ರೀರಾಮರೆಡ್ಡಿ ಗುಡುಗುತ್ತಿದ್ದಾರೆ.

ಈ ಮಧ್ಯೆ ಅವರ ಬಾಗೆಪಲ್ಲಿ ಕ್ಷೇತ್ರ ಯಾವ ರೀತಿಯ ಅಭಿವೃದ್ದಿ ಕಂಡಿದೆಯೊ ನನಗೆ ಗೊತ್ತಿಲ್ಲ. ಆದರೂ ಅದರ ಪ್ರತಿನಿಧಿ ಪ್ರಾಮಾಣಿಕರಿದ್ದ ಹಾಗೆ ಇದ್ದಾರೆ, ನೈತಿಕತೆಯುಳ್ಳ ಮನುಷ್ಯ, ಅವರು ಏನು ಹೇಳಿದರೂ ಅದಕ್ಕೊಂದು ತೂಕವಿರುತ್ತದೆ ಎಂಬ ಭಾವನೆ ಇತ್ತು. ಆದರೆ ಕೆಲವು ವಾರಗಳ ಹಿಂದೆ ಕೆಲವು ದಿನಪತ್ರಿಕೆಗಳಲ್ಲಿ ಹಾಗೂ ನಾನು ಇಲ್ಲಿಗೆ ತರಿಸುವ ಲಂಕೇಶ್‌ನಲ್ಲಿ, ಶ್ರೀರಾಮರೆಡ್ಡಿಯವರು ಉತ್ತರಭಾರತ ಪ್ರವಾಸ ಸಮಯದಲ್ಲಿ ಮಾಡಿಕೊಂಡ ಕೆಲವು ಎಡವಟ್ಟುಗಳ ಬಗ್ಗೆ ಬರೆದಿದ್ದರು. ಬಹಳ ಬೇಜಾರಾಯಿತು. ಅವರ ಪ್ರಾಮಾಣಿಕತೆಯ ಬಗ್ಗೆಯೇ ಸಂದೇಹಗಳು ಹುಟ್ಟಿಕೊಂಡವು. ಚೆನ್ನಾಗಿ ಓದಿಕೊಂಡಿರುವ, ಪ್ರಜಾಪ್ರಭುತ್ವ ಮತ್ತು ಸರ್ಕಾರದ ಜವಾಬ್ದಾರಿಗಳ ಬಗ್ಗೆ ಚೆನ್ನಾಗಿ ಅರಿತಿರುವ ಒಂದು ಪ್ರಾಮಾಣಿಕ ಸ್ವರ ಸದನದಲ್ಲಿ ತನ್ನ ನೈತಿಕತೆ ಕಳೆದುಕೊಂಡು ದುರ್ಬಲವಾಯಿತಲ್ಲ ಎನ್ನಿಸಿತು. ಊರಿನಲ್ಲಿರುವಾಗ ಅಷ್ಟು ಇಷ್ಟು ಮಾನಮರ್ಯಾದೆಗಳಿಂದ ಇರುವವರು ಬೇರೆ ಕಡೆ ಹೋದಾಗ ಯಾರೂ ಗಮನಿಸುವುದಿಲ್ಲ ಎಂದು ಹೇಗೆ ತಮ್ಮ ಖಯಾಲಿಗಳಿಗೆ, ಸಣ್ಣತನಗಳಿಗೆ ಬಲಿಯಾಗುತ್ತಾರಲ್ಲ ಅನ್ನಿಸಿತು.

ಈ ವಿಷಯವನ್ನು ಇಲ್ಲಿ ಎತ್ತಲು ಮುಖ್ಯ ಕಾರಣ, ಈ ಪತ್ರಿಕೆ ನಿಮ್ಮ ಕೈಸೇರುವುದಕ್ಕಿಂತ ಮುಂಚೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಿಂದ ಹಿಡಿದು ಅನೇಕ ಮಂತ್ರಿಗಳು, ಶಾಸಕರು, ಹಿರಿ-ಕಿರಿಯ ಅಧಿಕಾರಿಗಳು, ಸಾಹಿತಿಗಳು, ಪತ್ರಕರ್ತರು, ಕಲಾವಿದರು, `ನವ ವೇದಾಂತ ರೆಜಿಮೆಂಟ್ನ ವೇದಾಂತಿಗಳು, ಮಠಾಧೀಶರು, ಅಮೇರಿಕ ಸಂಯುಕ್ತ ಸಂಸ್ಥಾನದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಬಂದು ಇಳಿದಿರುತ್ತಾರೆ. ಈ ಲೇಖನ ಬರೆಯುವುದಕ್ಕೆ ಎರಡು ದಿನದ ಹಿಂದೆ ತಾನೆ ಅತೃಪ್ತ ಶಾಸಕರನ್ನು ತೃಪ್ತಿಪಡಿಸಲು ಹೆಚ್ಚಿನ ಸಂಖ್ಯೆಯ ಶಾಸಕರನ್ನು ತಮ್ಮ ಜೊತೆ ಕರೆದೊಯ್ಯಲು ಮುಖ್ಯಮಂತ್ರಿಗಳು ಯೋಚಿಸುತ್ತಿದ್ದಾರೆ ಎಂದು ದಿನಪತ್ರಿಕೆಯೊಂದು ಪ್ರಕಟಿಸಿದೆ. ಅವರ ಸಂಖ್ಯೆ ಏನು ಮತ್ತು ಯಾರ್‍ಯಾರು ಎಂದು ನಿಮಗೆ ಈಗಾಗಲೆ ಗೊತ್ತಾಗಿರುತ್ತದೆ.

ಅವರೆಲ್ಲ ಇಲ್ಲಿಗೆ ಬರಲಿರುವುದು ಅಕ್ಕ (ಅಮೆರಿಕ ಕನ್ನಡ ಕೂಟಗಳ ಆಗರ) ಸಂಸ್ಥೆ ಇಲ್ಲಿಯ ಸ್ಥಳೀಯ ಕನ್ನಡ ಕೂಟ ಕಾವೇರಿಯೊಂದಿಗೆ ಸೇರಿ ಆಯೋಜಿಸಿರುವ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು. ಕಳೆದ ಬಾರಿಯ ಚಂಡಮಾರುತದ ರಗಳೆ ಈ ಬಾರಿ ಇಲ್ಲದಿರುವುದರಿಂದ ನಾಲ್ಕೈದು ಸಾವಿರಕ್ಕೂ ಹೆಚ್ಚು ಜನ ಈ ಸಲದ ಸಮ್ಮೇಳನದಲ್ಲಿ ಭಾಗವಹಿಸಬಹುದು ಎಂದು ಅಂದಾಜು. ಅಕ್ಕ ಮತ್ತು ಕಾವೇರಿ ಮಾಡಿಕೊಂಡಿರುವ ಸಿದ್ಧತೆಗಳನ್ನು ಗಮನಿಸಿದರೆ ಈ ಸಲದ ಸಮ್ಮೇಳನ ಬಹಳ ಅಚ್ಚುಕಟ್ಟಾಗಿ ನಡೆಯುವ ಭರವಸೆ ಇಟ್ಟುಕೊಳ್ಳಬಹುದು.

ಸರಿಸುಮಾರು ಮೂರರಿಂದ ನಾಲ್ಕು ಕೋಟಿ ರೂಪಾಯಿಗಳ ವೆಚ್ಚ ತಗುಲಲಿರುವ ಈ ಸಮ್ಮೇಳನಕ್ಕೆ ಬಹುಪಾಲು ದುಡ್ಡು ಸಮ್ಮೇಳನದಲ್ಲಿ ನೋಂದಾಯಿಸಿಕೊಳ್ಳುವ ಜನರಿಂದ ಹಾಗೂ ಇಂತಹ ಕನ್ನಡಪರ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಸ್ಥಳೀಯ ಶ್ರೀಮಂತ ಕನ್ನಡಿಗರ ದೇಣಿಗೆಯಿಂದ ಬರುತ್ತದೆ. ಕರ್ನಾಟಕ ಸರ್ಕಾರ ೩೫ ಕಲಾವಿದರನ್ನು ಕಳಿಸುತ್ತಿರುವುದರಿಂದ ಹಾಗೂ ಮುಖ್ಯಮಂತ್ರಿ ಮತ್ತಿತರರ ಜಂಬೂಸವಾರಿಯೂ ಆಗಮಿಸುತ್ತಿರುವುದರಿಂದ ಸರ್ಕಾರಕ್ಕೂ ಒಂದು ಕೋಟಿಯ ತನಕ ಖರ್ಚು ಬೀಳಬಹುದು. ಆದರೆ ಅದಕ್ಕಿಂತ ಹಲವು ಪಟ್ಟು ದುಡ್ಡು ಈ ಸಮ್ಮೇಳನದಿಂದ ಕರ್ನಾಟಕಕ್ಕೆ ಪರೋಕ್ಷವಾಗಿ ಹರಿದುಬರುತ್ತದೆ; ಕರ್ನಾಟಕದಲ್ಲಿನ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಸಂದರ್ಭದಲ್ಲಿ ಅನೇಕರು ಉದಾರವಾಗಿ ಹಣ ನೀಡಬಹುದು, ಮಂತ್ರಿಗಳು ಮತ್ತು ಅಧಿಕಾರಿಗಳು ಇಲ್ಲಿಗೆ ಬಂದಿರುವ ಸಮಯ ಸಂದರ್ಭ ಉಪಯೋಗಿಸಿಕೊಂಡು ಜವಾಬ್ದಾರಿಯುತವಾಗಿ, ಯೋಗ್ಯತೆಯಿಂದ ಕೆಲಸ ಮಾಡಿದರೆ ಒಂದಷ್ಟು ಹೂಡಿಕೆಗಳನ್ನೂ ತರಬಹುದು, ಇಲ್ಲಿಗೆ ಬರುವ ಕಲಾವಿದರು ಬೇರೆಡೆ ಕಾರ್ಯಕ್ರಮ ಕೊಟ್ಟು ಗೌರವ ಸಂಭಾವನೆ ಗಳಿಸಬಹುದು, ಹೀಗೆ.

ಇವೆಲ್ಲವುಗಳ ಜೊತೆಗೆ ಅನೇಕರ ಸಣ್ಣತನಗಳು ಬಯಲಿಗೆ ಬಂದು ಶ್ರೀರಾಮರೆಡ್ಡಿಯವರ ವಿಚಾರದಲ್ಲಾದಂತೆ ಈ ಸಂತೆಯಲ್ಲೂ ಕೆಲವರು ಬೇಕಾಬಿಟ್ಟಿ ವರ್ತಿಸಬಹುದು. ಸರ್ಕಾರಿ ದುಡ್ಡಿನಲ್ಲಿ ಬಂದಿರುವ ಮಂತ್ರಿಮಹೋದಯರು ಇಲ್ಲಿ ತಮ್ಮ ತಮ್ಮ ಜಾತಿಯವರ ಸಂಘಗಳಿಗೆ ಹೋಗಿ ಭಾಷಣ ಮಾಡಬಹುದು. (ಕರ್ನಾಟಕದಿಂದ ಈ ಹಿಂದೆ ಅಧಿಕೃತ ಕಾರ್ಯಕ್ರಮದ ಮೇಲೆ ಬಂದಿದ್ದ ಮಂತ್ರಿಗಳು ಹಾಗೆ ಮಾಡಿಯೂ ಇದ್ದಾರೆ. ಇಂತಹವರಿಗೆ ಕುವೆಂಪು, ಡಾ. ರಾಜ್ ಮಾದರಿಗಳಾಗುವುದು ಯಾವಾಗ?) ಕೆಲವರು ಕೇವಲ ಮಜಾ ಮಾಡಿ ಹೋಗಬಹುದು. ಇನ್ನು ಕೆಲವರು ಕುಡಿದೊ ಇನ್ನೊಂದೊ ಗಲಾಟೆ ಮಾಡಿಕೊಂಡು ಇಲ್ಲಿನ ಸ್ಥಳೀಯ ಕನ್ನಡಿಗರ ಬಾಯಿಗೆ ಮುಂದಿನ ಸಮಾವೇಶದ ತನಕ ಗ್ರಾಸವಾಗಬಹುದು. ನಾಲ್ಕು ಜನ ಸೇರಿದಾಗ ಏನು ಬೇಕಾದರೂ ಆಗಬಹುದು. ಆದರೂ ಇಲ್ಲಿ ಕೆಟ್ಟದ್ದಕ್ಕಿಂತ ಒಳ್ಳೆಯದು ಬಹುಪಾಲು ಆಗೇ ಆಗುತ್ತದೆ. ಯಾಕೆಂದರೆ ತವರನ್ನು ತೀವ್ರವಾಗಿ, ಪ್ರಾಮಾಣಿಕವಾಗಿ ಪ್ರೀತಿಸುವ ಜನ ಹಾಗೂ ಅಂತಹವರನ್ನು ಭ್ರಷ್ಟಗೊಳ್ಳಲು ಬಿಡದ ವ್ಯವಸ್ಥೆ ಇಲ್ಲಿದೆ.

ಇವೆಲ್ಲದರ ಜೊತೆಗೆ ನಮ್ಮ ಪತ್ರಿಕೆಯ ಕಾನೂನು ಸಲಹೆಗಾರರಾದ ಹಿರಿಯ ಪತ್ರಕರ್ತ ಡಾ. ಸಿ.ಎಸ್. ದ್ವಾರಕಾನಾಥ್, ಹಾಗೂ ಅವರ ಬಹುಕಾಲದ ಮಿತ್ರ, ಈಗ ಇಲ್ಲಿಯೇ ಇರುವ ನಮ್ಮ ಮತ್ತೊಬ್ಬ ಹಿತೈಷಿಗಳಾದ ಪತ್ರಕರ್ತ ಹನುಮಂತ ರೆಡ್ಡಿಯವರೂ ಜೊತೆಗಿರುತ್ತಾರೆ. ಕ್ಯಾಲಿಫೋರ್ನಿಯಾದ ಸ್ನೇಹಿತರಾದ ಮೃತ್ಯುಂಜಯ ಹರ್ತಿಕೋಟೆ, ವ್ಯಂಗ್ಯಚಿತ್ರಕಾರ ಮತ್ತು ತಂತ್ರಜ್ಞ ಜನಾರ್ಧನ ಸ್ವಾಮಿ, ಪರಿಚಯದ ನೂರಾರು ಜನ ಅಲ್ಲಿರುತ್ತಾರೆ. ಕನ್ನಡ, ಕರ್ನಾಟಕ ಅನುರುಣಿಸುತ್ತಿರುತ್ತದೆ. ಇದೇ ಸಂದರ್ಭದಲ್ಲಿ ಹಲವಾರು ಜನರಿಗೆ ತಮ್ಮ ಸಾಮಾಜಿಕ ಬಾಧ್ಯತೆಗಳು ಗುರುತಾಗುತ್ತವೆ. ಜನಜೀವನವನ್ನು ಮತ್ತಷ್ಟು ಹಸನು ಮಾಡುವುದು ಹೇಗೆಂದು ಚಿಂತನಮಂಥನಗಳು ನಡೆಯುತ್ತವೆ. ಸಮ್ಮೇಳನದಿಂದ ಇನ್ನೇನು ತಾನೆ ಬೇಕು?

Aug 20, 2006

ಎಲ್ಲಾ ಹೆಣ್ಣು ಮಕ್ಕಳಿಗೂ ಸೈಕಲ್

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 1, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಪತ್ರಿಕೆಯ ಗುಂಗು ಗಂಭೀರವಾಗುವುದಕ್ಕಿಂತ ಮುಂಚೆ, ಸರಿಸುಮಾರು ಒಂದು ವರ್ಷದಿಂದಲೂ ಇನ್ನೊಂದು ಕನಸು ನನ್ನ ತಲೆಯುಲ್ಲಿ ಯಾವಾಗಲೂ ಅಲೆಯುತ್ತಿತ್ತು. ಅದೇನೆಂದರೆ, ನಮ್ಮ ಪಕ್ಕದ ಊರಿನ ಚಂದಾಪುರದ ಪ್ರೌಢಶಾಲೆಯಿಂದ ಪ್ರಾರಂಭಿಸಿ, ಸುತ್ತಮುತ್ತಲಿನ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿನಿಯರಿಗೆ ಸೈಕಲ್ ಕೊಡಿಸುವ ಯೋಜನೆ. ಮುಂದಿನ ಸಲ ಬೆಂಗಳೂರಿಗೆ ಬಂದ ತಕ್ಷಣ, ಊರಿನ ಸುತ್ತಮುತ್ತಲಿನ ಸ್ನೇಹಿತರನ್ನು, ಕಾಳಜಿಯುಳ್ಳ ಸ್ಥಿತಿವಂತರನ್ನು ಸೇರಿಸಿ, ಒಂದೆರಡು ಲಕ್ಷ ವಂತಿಗೆ ಶೇಖರಿಸಿ, ದಿಟ್ಟೆ ಎಂಬ ಮಹಿಳಾಪರ ಸಂಸ್ಥೆ ಪ್ರಾರಂಭಿಸಿ, ಬಾಲೆಗೊಂದು ಬೈಸಿಕಲ್ ಯೋಜನೆ ಆರಂಭಿಸಬೇಕು ಎಂದು ಆರೇಳು ತಿಂಗಳ ಹಿಂದೆಯೇ ಯೋಜನಾ ವರದಿ ಟೈಪ್ ಮಾಡಿ ಇಟ್ಟಿದ್ದೆ. ಯಾರ್‍ಯಾರನ್ನು ಎಲ್ಲೆಲ್ಲಿ ಭೇಟಿಯಾಗಬೇಕು, ಅವರನ್ನೆಲ್ಲ ಹೇಗೆ ಹುರಿದುಂಬಿಸಬೇಕು, ಯಾಕಾಗಿ ಇದನ್ನು ಮಾಡಬೇಕು ಎಂದೆಲ್ಲ ಬರೆದುಕೊಂಡಿದ್ದೆ. ಅದರ ಸಾಧ್ಯತೆಯ ಬಗ್ಗೆ ಸ್ವಲ್ಪ ವಿಶ್ವಾಸ ಮೂಡುತ್ತಿದ್ದಂತೆ ಪತ್ರಿಕೆಯ ಗುಂಗು ತಲೆಗೆ ಹೊಕ್ಕಿತು. ಈ ಸಲ ಬೆಂಗಳೂರಿಗೆ ಹೋದಾಗ ಬೈಸಿಕಲ್ ಮತ್ತು ಪತ್ರಿಕೆ, ಎರಡನ್ನೂ ಮಾಡಬೇಕು ಎಂದು ಮಾರ್ಚ್‌ನಲ್ಲಿಯೇ ತೀರ್ಮಾನಿಸಿದ್ದೆ.

ಆಗ ಬಂತು ಯಡಿಯೂರಪ್ಪನವರ ಬಡ್ಜೆಟ್. ಅದರಲ್ಲಿ ಎಲ್ಲಕ್ಕಿಂತ ನನ್ನ ಗಮನಸೆಳೆದದ್ದು ಬಾಲೆಯರಿಗೆ ಉಚಿತ ಬೈಸಿಕಲ್ ಯೋಜನೆ ಎಂಬುದು ನಿಮಗೆ ಈಗಾಗಲೆ ಗೊತ್ತಾಗಿರಬಹುದು. ಬಹಳ ಖುಷಿಯಾಯಿತು. ಇದು ಕೇವಲ ಬಡತನದ ರೇಖೆಗಿಂತ ಕೆಳಗಿರುವ, ೮ನೇ ತರಗತಿಯ ಬಾಲಕಿಯರಿಗೆ ಮಾತ್ರಎಂಬ ವಿವರಗಳನ್ನು ಓದುತ್ತಿದ್ದಂತೆ ಸ್ವಲ್ಪ ಅತೃಪ್ತಿಯೂ ಆಯಿತು. ಇರಲಿ. ಈಯೋಜನೆಯ ಕಾರ್ಯಸಾಧುಗಳನ್ನು, ಪರಿಣಾಮಗಳನ್ನು ತಿಳಿಯಲು ಇದೊಂದು ಉತ್ತಮ ಪ್ರಯೋಗ, ಹೆಜ್ಜೆ ಎನ್ನಿಸಿತು. ಈ ಯೋಜನೆಯಲ್ಲಿ ಬರದ ಮಿಕ್ಕವರಿಗೆ ನಾನು ಮಾಡಬೇಕು ಎಂದುಕೊಂಡಿದ್ದನ್ನು ಮಾಡಬೇಕು ಎಂದುಕೊಂಡೆ. ಅಂದುಕೊಂಡಿದ್ದಕ್ಕಿಂತ ಸಂಕೀರ್ಣವಾಗಿಬಿಟ್ಟ ಪತ್ರಿಕೆಯ ಕೆಲಸಗಳಿಂದಾಗಿ ನಮ್ಮ ಪಕ್ಕದ ಊರಿನ ಜನಪ್ರಿಯು ವೈದ್ಯ, ಮಹಾತ್ಮಾ ಶಾಲೆಯ ಡಾ. ಮುನಿರೆಡ್ಡಿಯವರಲ್ಲಿ ಇದನ್ನು ಒಮ್ಮೆ ಪ್ರಸ್ತಾಪಿಸಿದ್ದು ಬಿಟ್ಟರೆ ಮತ್ತೇನೂ ಮಾಡಲಾಗಲಿಲ್ಲ. ಆದರೆ, ನಮ್ಮ ಪತ್ರಿಕೆ ಬಿಡುಗಡೆಯಾದ ಮಾರನೆಯ ದಿನವೇ, ಆಗಸ್ಟ್ ೧೮ರಂದು, ಸರ್ಕಾರದ ಬಾಲೆಯರಿಗೆ ಉಚಿತಬೈಸಿಕಲ್ ಯೋಜನೆ ಅನಿರೀಕ್ಷಿತವಾಗಿ ಜಾರಿಗೆ ಬಂತು. ಅದನ್ನು ಓದಿ, ಎರಡನೆಯ ದಿನವೂ ಬಂಪರ್ ಸಂತೋಷ ಮುಂದುವರಿಯಿತು.

ಗ್ರಾಮೀಣ ಪ್ರದೇಶದ ಮಕ್ಕಳಿಗೆ, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಅನೇಕ ತರಹದ ಅನಾನುಕೂಲತೆಗಳಿವೆ. ಅನೇಕ ಸಾರಿ ತಾರತಮ್ಯ ಎನ್ನುವುದು ಮನೆಯಿಂದಲೇ ಪ್ರಾರಂಭವಾಗಿರುತ್ತದೆ. ತೀವ್ರಸ್ವರೂಪದ ಸಂಪ್ರದಾಯ ಹೇರಿಕೆ ಮತ್ತು ಸಮಾಜ ಸೃಷ್ಟಿಸುವ ಕೀಳರಿಮೆ ಆ ಹೆಣ್ಣುಮಕ್ಕಳಲ್ಲಿ ಸ್ವತಂತ್ರ ಮನೋಭಾವವನ್ನು ಉತ್ತೇಜಿಸುವುದಿಲ್ಲ. ಇದು ಬಹುಪಾಲು ಗ್ರಾಮೀಣ ಬಾಲಕಿಯರನ್ನು ಹಳ್ಳಿಗಳಲ್ಲಿನ ದೈನಂದಿನ ಕೆಲಸಕ್ಕೆ ಮಾತ್ರ ಲಾಯಕ್ಕಾಗುವಂತೆ ಮಾಡಿಬಿಡುತ್ತದೆ. ವರ್ತಮಾನದ ಜಾಗತೀಕರಣದಲ್ಲಿ ಅವರು ಎಲ್ಲಿಯು ಸ್ಪರ್ಧಿಸಲು ಸಾಧ್ಯವಾಗದಂತೆ, ವಿದೇಶದ ಸ್ತ್ರೀಯರ ಜೊತೆ ಹಾಗಿರಲಿ, ನಮ್ಮದೇ ನಗರಗಳ ಹೆಣ್ಣುಮಕ್ಕಳ ಮುಂದೆ ಎರಡನೇ ದರ್ಜೆಯ ನಾಗರೀಕರನ್ನಾಗಿ ಪರಿವರ್ತಿಸುತ್ತದೆ. ದೇಶದ ಬಹುಸಂಖ್ಯಾತ ಹೆಣ್ಣುಮಕ್ಕಳ ಸ್ಥಿತಿಗತಿ ಹೀಗೆಯೇ ಇದ್ದಲ್ಲಿ, ನಮ್ಮ

ಸಮಾಜ ಆರ್ಥಿಕವಾಗಿ ಮುಂದುವರಿದರೂ, ಸಾಮಾಜಿಕವಾಗಿ ಮುಂದುವರಿಯುವುದು, ತಲೆ ಎತ್ತಿ ನಡೆಯುವುದಾದರೂ ಹೇಗೆ? ಹಾಗಾಗಿ, ನನ್ನ ಪ್ರಕಾರ ಹೆಣ್ಣುಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಸೈಕಲ್ ಕೊಡಿಸುವುದರಿಂದ ಅವರಲ್ಲಿ ಪರೋಕ್ಷವಾಗಿ ಸ್ಥೈರ್ಯ, ಆತ್ಮವಿಶ್ವಾಸ, ಸ್ವತಂತ್ರ ಮನೋಭಾವವನ್ನು ಹಾಗೂ ಅವಲಂಬನೆಯನ್ನು ನಿರಾಕರಿಸುವ ಧಾರ್ಷ್ಟ್ಯವನ್ನು ಬೆಳೆಸುತ್ತದೆ, ಉತ್ತೇಜಿಸುತ್ತದೆ. ಇದು ದೂರಗಾಮಿಯಾದ, ಸದ್ದಿಲ್ಲದೆ, ಮೌನವಾಗಿ ನಡೆಯುವ ಮಾನಸಿಕ ಸಬಲೀಕರಣ. ಸದ್ಯದ ಪರಿಸ್ಥಿತಿಯುಲ್ಲಿ ನಮ್ಮ ಹಳ್ಳಿಯು ಹೆಣ್ಣುಮಕ್ಕಳಿಗೆ ಅತ್ಯವಶ್ಯಕವಾಗಿ ಬೇಕಾದ ಸಹಾಯಸಾಧನ. ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯುವ ಯಕಃಶ್ಚಿತ್ ಸಾರಿಗೆ ಸಾಧನವಲ್ಲ!

ಹಾಗಾದರೆ, ಎಲ್ಲಾ ತೊಂದರೆಗಳನ್ನೂ ಮೀರಿ ಹಳ್ಳಿಯ ಹುಡುಗಿಯರಲ್ಲಿಯಾರೂ ಉನ್ನತ ಸಾಧನೆಗಳನ್ನು ಮಾಡಿಲ್ಲವೆ? ಮಾಡಿದ್ದಾರೆ. ಆದರೆ ಇದನ್ನು ಪಟ್ಟಣಗಳ, ಸ್ಥಿತಿವಂತ ಕುಟುಂಬಗಳ ಹೆಣ್ಣುಮಕ್ಕಳಿಗೆ ಹೋಲಿಸಿದರೆ ಯಾವ ಪ್ರಮಾಣದಲ್ಲಿ ಇದೆ ಎನ್ನುವುದು ಮುಖ್ಯ. ನನ್ನಲ್ಲಿ ಅಂಕಿಅಂಶಗಳಿಲ್ಲ. ಆದರೆ, ಅವರ ಸಾಧನೆಗಳ ಶೇಕಡಾವಾರು ಪ್ರಮಾಣ ಪಟ್ಟಣದವರಿಗಿಂತ ಎಷ್ಟೋ ಪಾಲು ಕಮ್ಮಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಈಗ ಕರ್ನಾಟಕ ಸರ್ಕಾರಕ್ಕೆ ಬೇರೆ ಬೇರೆ ಮೂಲಗಳಿಂದ ಒಳ್ಳೆಯು ಆದಾಯಗಳು ಇರುವುದರಿಂದ, ಬಹುಪಾಲು ಖೋತಾರಹಿತ ಬಡ್ಜೆಟ್ ಮಂಡಿಸುತ್ತಿರುವುದರಿಂದ, ಈ ಯೋಜನೆಯನ್ನು ಎಲ್ಲಾ ಪ್ರೌಢಶಾಲಾ ಬಾಲಕಿಯರಿಗೆ ವಿಸ್ತರಿಸುವುದು ಕಷ್ಟವೇನಲ್ಲ. ಮುಂದಿನ ವರ್ಷಕ್ಕೆ ಸೈಕಲ್ ಇಲ್ಲದ ಪ್ರೌಢಶಾಲೆಯ ಬಡ ವಿದ್ಯಾರ್ಥಿನಿಯರು ಕೇವ ಎಂಟನೇ ಮತ್ತು ಹತ್ತನೇ ತರಗತಿಯವರು ಮಾತ್ರ ಆಗಿರುತ್ತಾರೆ. ಈ ಒಂದು ಸಾರಿ ಅವರಿಬ್ಬರಿಗೂ ಹಂಚಿಬಿಟ್ಟರೆ, ಅದರ ಮರುವರ್ಷದಿಂದ ಕೇವಲ ಎಂಟನೇ ತರಗತಿಯವರಿಗೆ ಮಾತ್ರ ಕೊಡಬೇಕಾಗುತ್ತದೆ. ನಾನು ತಿಂಗಳ ಹಿಂದೆ ಅಮೆರಿಕಕ್ಕೆ ವಾಪಸು ಬರುತ್ತಿದ್ದಾಗ, ಬೈಸಿಕಲ್ ಯೋಜನೆಯಲ್ಲಿ ಬರದ ಬಾಲೆಯರಿಗೆ ಏನೂ ಮಾಡಲಾಗಲಿಲ್ಲವಲ್ಲ ಎಂಬ ಕೊರಗು ಮನಸ್ಸಿನಲ್ಲಿಯೆ ಉಳಿದಿತ್ತು; ಉಳಿದಿದೆ. ಆ ಕೊರಗಿನ ಅವಶ್ಯಕತೆಯಿಲ್ಲ,ಎಂದು ಮುಂದಿನ ಬಡ್ಜೆಟ್ ಮಂಡಿಸಲಿರುವ ಆಗಿನ ಹಣಕಾಸು ಸಚಿವರು (?) ಸಾಧ್ಯ ಮಾಡಿ ತೋರಿಸುತ್ತಾರೆ ಎಂದು ಪರಮ ಆಶಾವಾದಿಯಾಗಿ ಆಶಿಸುತ್ತೇನೆ.

Aug 17, 2006

ಪತ್ರಿಕೆ ಬರಬೇಕಿದ್ದರೆ ಹೆಗಲು ಕೊಟ್ಟು ದುಡಿದವರು...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮೊದಲ ಸಂಚಿಕೆಯಲ್ಲಿ (ಆಗಸ್ಟ್ 25, 2006) ಪ್ರಕಟವಾದದ್ದು)

ಆತ್ಮೀಯರೇ,

ಕಳೆದೆರಡು ದಶಕಗಳಲ್ಲಿ ನನ್ನ ಅರಿವು ಮತ್ತು ತಿಳುವಳಿಕೆಯನ್ನು ಆಪ್ತವಾಗಿ ವಿಸ್ತರಿಸಿದ, ಪ್ರತಿವಾರವೂ ಅನೇಕ ಗಂಟೆಗಳ ಸಹಚರರಾಗಿದ್ದ ಸುಧಾ, ತರಂಗ, ಕರ್ಮವೀರ, ಲಂಕೇಶ್ ಪತ್ರಿಕೆ, ವಾರಪತ್ರಿಕೆ, ಹಾಯ್ ಬೆಂಗಳೂರು, ಅಗ್ನಿ, ಲಂಕೇಶ್, ಮತ್ತಿತರ ಕನ್ನಡ ವಾರಪತ್ರಿಕೆಗಳನ್ನು ಶಿಷ್ಯನಂತೆ ಪ್ರೀತಿಯಿಂದ ನೆನೆಯುತ್ತಾ...

ಈ ವರ್ಷದ ಆರಂಭದ ದಿನಗಳ ಕ್ಯಾಲಿಫೋರ್ನಿಯಾದ ಚಳಿಗಾಲದ ದೀರ್ಘ ರಾತ್ರಿಗಳಲ್ಲಿ, ಪ್ರಚಲಿತ ವಿದ್ಯಮಾನಗಳನ್ನು ಪ್ರಮುಖವಾಗಿ ಆಧರಿಸಿದ, ಜನಪರ ಕಾಳಜಿಯೇ ಮೂಲೋದ್ದೇಶವಾದ, ಒಂದು ಅತ್ಯುತ್ತಮ ಗುಣಮಟ್ಟದ ಸಮಗ್ರ ವಾರಪತ್ರಿಕೆಯನ್ನು ಕನ್ನಡದಲ್ಲಿ ಏಕೆ ತರಬಾರದು ಎಂದು ತೀವ್ರವಾಗಿ ಯೋಚಿಸಿದ್ದರ ಫಲ ಈಗ ನಿಮ್ಮ ಕೈಯಲ್ಲಿರುವ ವಿಕ್ರಾಂತ ಕರ್ನಾಟಕವಾರಪತ್ರಿಕೆ. ಈಗಾಗಲೆ ಪತ್ರಿಕೆ ಹೇಗಿದೆ ಎಂದು ನಿಮಗೆ ಗೊತ್ತಾಗಿರುವುದರಿಂದ ಇದು ಮುಂದಕ್ಕೆ ಹೇಗಿರುತ್ತದೆ ಎಂದು ಹೇಳಿಕೊಳ್ಳುವ ಅವಶ್ಯಕತೆ ಇಲ್ಲ ಎನಿಸುತ್ತದೆ.

ಸತ್ಯಮೂರ್ತಿ ಆನಂದೂರು ಅವರ ಸಂಪಾದಕತ್ವದಲ್ಲಿ ಒಂದು ಅತ್ಯುತ್ತಮ ತಂಡ, ಕನ್ನಡದ ಅನೇಕ ಶ್ರೇಷ್ಠ ಬರಹಗಾರರ, ಪತ್ರಕರ್ತರ, ಚಿಂತಕರ ಸಲಹೆ, ಸೂಚನೆ, ಸಹಕಾರಗಳೊಂದಿಗೆ ಕೆಲಸ ನಿರ್ವಹಿಸುತ್ತಿದೆ. ೮೦ರ ದಶಕದಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಲಂಕೇಶ್ ಪತ್ರಿಕೆಯಲ್ಲಿ ದುಡಿದು, ೧೯೯೪ರಲ್ಲಿ ತಮ್ಮದೇ ಸಂಪಾದಕತ್ವದಲ್ಲಿ ಈ ವಾರ ಕರ್ನಾಟಕ ವಾರಪತ್ರಿಕೆಯನ್ನು ನಡೆಸಿದ ಅನುಭವ ಸತ್ಯಮೂರ್ತಿಯವರದು. ಹಾಗೆಯೇ ಜನವಾಹಿನಿ,ಸೂರ್ಯೋದಯ ದಿನಪತ್ರಿಕೆಗಳಲ್ಲಿ ಸಹ ದುಡಿದಿದ್ದಾರೆ. ಮುದ್ರಣ ಮಾಧ್ಯಮದ ಜೊತೆಗೆ ದೃಶ್ಯ ಮಾಧ್ಯಮಗಳಾದ ಟಿವಿ ಧಾರಾವಾಹಿ, ಸಿನೆಮಾ, ಡಾಕ್ಯುಮೆಂಟರಿಗಳಲ್ಲಿ ದುಡಿದ ಅನೇಕ ಕ್ಷೇತ್ರಗಳ ಶ್ರೀಮಂತ ಅನುಭವ ಅವರದು. ಅವರ ಅಂಕಣ ಬರಹಗಳ ಸಂಕಲನ ರಗಳೆಗೆ ಪ್ರಸಿದ್ಧ ಹಾ.ಮಾ.ನಾ. ಅಂಕಣ ಸಾಹಿತ್ಯ ಪ್ರಶಸ್ತಿಸಹ ದೊರಕಿದೆ.

ನನ್ನ ಪ್ರೀತಿಯ ಅಣ್ಣ ಬಿ.ಕೆ. ಸುರೇಶ್‌ರವರು ಪ್ರಕಾಶನದ ಮಾಲೀಕರು. ತೀವ್ರ ದುಡಿಮೆಯ, ಸೂಕ್ಷ್ಮ ಮನಸ್ಸಿನ, ಜನಪರ ಕಾಳಜಿಗಳ, ನೇರ ನಡೆನುಡಿಯ ಮನುಷ್ಯ ಅವರು. ಕಳೆದ ಮೂರು ತಿಂಗಳಲ್ಲಿ ತಮ್ಮ ಎಲ್ಲಾ ಸಮಯ, ಚಿಂತನೆ ಮತ್ತು ಶ್ರಮವನ್ನು ಪತ್ರಿಕೆಗೆ ವಿನಿಯೋಗಿಸಿದ್ದಾರೆ. ಪತ್ರಿಕೆಯನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿ ಮಾಡಲು ಇರಬೇಕಾದ ಎಚ್ಚರಗಳನ್ನು ಈಗಾಗಲೇ ರೂಢಿಸಿಕೊಂಡಿದ್ದಾರೆ. ಪ್ರಸರಣ, ಮುದ್ರಣ, ಜಾಹೀರಾತು, ಹೀಗೆ ಅನೇಕ ಇತರ ವಿಭಾಗಗಳಲ್ಲಿ ಅವರಿಗೆ ನೆರವಾಗುತ್ತಿರುವ ಆತ್ಮೀಯ ಸ್ನೇಹಿತ ಆನಂದ್‌ರವರನ್ನು, ವ್ಯವಸ್ಥಾಪಕ ಸಂಪಾದಕ ಬಿ.ಎಸ್. ವಿದ್ಯಾರಣ್ಯ ಅವರನ್ನು ಇಲ್ಲಿ ಸ್ಮರಿಸುತ್ತೇನೆ.

'ವಿಕ್ರಾಂತ ಕರ್ನಾಟಕ' ಆರ್ಥಿಕವಾಗಿ ಸ್ವಾವಲಂಬಿ ಆಗಲು ಪ್ರಮುಖವಾಗಿ ಬೇಕಾಗಿರುವುದು ಪ್ರಸರಣ ವ್ಯವಸ್ಥೆ ಮತ್ತು ಜಾಹೀರಾತುಗಳು. ಹಾಗಾಗಿ, ಪ್ರಾರಂಭದ ಹಲವು ಸಂಚಿಕೆಗಳಲ್ಲಿ ಶುಭ ಹಾರೈಕೆಜಾಹೀರಾತುಗಳ ಪಾತ್ರ ಬಹಳ ದೊಡ್ಡದು. ಇದಕ್ಕೆ ಪೂರಕವಾಗಿ ಅನೇಕ ಸ್ನೇಹಿತರು, ಬಂಧುಗಳು, ಉದ್ಯಮಿಗಳು, ಜಾಹೀರಾತುದಾರರು ಪ್ರೋತ್ಸಾಹ ನೀಡುತ್ತಿದ್ದಾರೆ. ಕರ್ನಾಟಕದಲ್ಲಿನ ಮತ್ತು ಅಮೇರಿಕದಲ್ಲಿನ ಅನೇಕ ಆತ್ಮಬಂಧುಗಳು ತಾವಾಗಿಯೇ ಸಂಪರ್ಕಿಸಿ, ಪ್ರೋತ್ಸಾಹಿಸುತ್ತಿದ್ದಾರೆ. ಇದು ಎದೆ ಬಿರಿಯುವ ಸಮಯ. ಅವರೆಲ್ಲರಿಗೂ ಕೃತಜ್ಞತೆಯ ನಮನಗಳು.

ವಿಷಯದ ಆಯ್ಕೆ, ಬರಹದ ಶೈಲಿ, ವಿಶ್ಲೇಷಣಾ ಸಾಮರ್ಥ್ಯದಲ್ಲಾಗಲಿ, ಮುದ್ರಣದ ಗುಣಮಟ್ಟದಲ್ಲಾಗಲಿ ಯಾವುದೇ ರಾಷ್ಟ್ರೀಯ ಪತ್ರಿಕೆಗೆ ಸರಿಸಾಟಿಯಾಗಿರಬೇಕು; ಓದುಗನಲ್ಲಿ ಜೀವನ ಪ್ರೀತಿಯನ್ನು, ಆತ್ಮವಿಶ್ವಾಸವನ್ನು, ಜ್ಞಾನದಾಹವನ್ನು, ಹೃದಯ ವೈಶಾಲ್ಯತೆಯನ್ನು ಬೆಳೆಸಬೇಕು; ಮುಖ್ಯವಾಗಿ, ಜನಪರವಾಗಿರಬೇಕು, ಜವಾಬ್ದಾರಿಯುತವಾಗಿರಬೇಕು, ಎಂಬ ಕಾಳಜಿಗಳೊಂದಿಗೆ ಪತ್ರಿಕೆ ಆರಂಭಗೊಂಡಿದೆ. ಅಂತ್ಯವಿಲ್ಲದ ಈ ಯಾತ್ರೆ ಆರಂಭಿಸಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರನ್ನೂ ಸ್ಮರಿಸುತ್ತಾ...

ವಿಕ್ರಾಂತ ಪ್ರಕಾಶನದ ಪರವಾಗಿ,
ರವಿ ಕೃಷ್ಣಾ ರೆಡ್ಡಿ
ಕ್ಯಾಲಿಫೋರ್ನಿಯ, ಅಮೆರಿಕ