[ಮೊದಲಿಗೆ, ಆ ಹುಡುಗನನ್ನು "ಸ್ಲಮ್‍ಡಾಗ್" ಎಂದು ಹೆಸರಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ. "ಸ್ಲಮ್‍ಡಾಗ್ ಮಿಲಿಯನೇರ್" ಹಿನ್ನೆಲೆಯಲ್ಲಿ ರೂಪಕವಾಗಿ ಮಾತ್ರ ಹಾಗೆ ಬಳಸಿಕೊಂಡಿದ್ದೇನೆ.]
ತಿಂಗಳ ಹಿಂದೆ ಭಾರತಕ್ಕೆ ಹೋಗಿದ್ದಾಗ ಮೊದಲನೆಯ ದಿನವೆ ಬೆಂಗಳೂರು ಸುತ್ತುವ ಕೆಲಸ ಇತ್ತು. ನಗರಕ್ಕೆ ಬರುವ ದಾರಿಯಲ್ಲಿ ಇಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಕೆಲಸ ಮಾಡುವ ಸ್ನೇಹಿತನನ್ನು ನೋಡಲು ಹೋದೆ. ಅಲ್ಲಿಯ STPI ಸಮೀಪವಿರುವ ಹೋಟೆಲ್‌ಗೆ ಹೋದೆವು. ಜೊತೆಗೆ ನನ್ನ ನಾಲ್ಕು ವರ್ಷದ ಮಗಳೂ ಇದ್ದಳು. ಕಾಫಿ ಮುಗಿಸಿ ಆ ಹೋಟೆಲ್‌ನಿಂದ ಹೊರಗೆ ಬಂದ ತಕ್ಷಣ ಕಾಣಿಸಿದ್ದು ಮುಂದಿನ ಮರದ ಬುಡದಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದ ಸುಮಾರು ಎಪ್ಪತ್ತರ ಮುದುಕಿ, ಮತ್ತು ಆಕೆಗೆ ಆತುಕೊಂಡು ತಾನೂ ಆ ಕೆಲಸದಲ್ಲಿ ಪಾಲು ತೆಗೆದುಕೊಂಡಿದ್ದ ಹೆಣ್ಣು ಮಗಳು. ಅವಳಿಗೆ ಬಹುಶಃ ನನ್ನ ಮಗಳದೇ ವಯಸ್ಸು.
STPI ಯ ಕಟ್ಟಡ ಮತ್ತು ಅದರ ಕಾಂಪೌಡ್ ಪಕ್ಕದಲ್ಲಿಯೇ ಇರುವ ಆ ಹೋಟೆಲ್ ಇಲೆಕ್ಟ್ರಾನಿಕ್ಸ್ ಸಿಟಿಯ ಪ್ರಸಿದ್ಧ ಲ್ಯಾಂಡ್ ಮಾರ್ಕ್‌ಗಳು. ದಿನವೂ ಸಾವಿರಾರು ಜನ ಓಡಾಡುವ ಸ್ಥಳ ಅದು. ತಿಂಗಳಿಗೆ ಲಕ್ಷಾಂತರ ಎಣಿಸುವ ಇಂಜಿನಿಯರ್‌ಗಳಿಂದ ಹಿಡಿದು ಕೆಲಸದ ಹುಡುಕಾಟದಲ್ಲಿರುವ ಆಶಾಜೀವಿಗಳು ಕಲೆಯುವ ಜಾಗ. ಹಾಗೆಯೆ, ಇಲೆಕ್ಟ್ರಾನಿಕ್ಸ್ ಸಿಟಿಯ ಪೋಲಿಸ್ ಔಟ್‍ಪೋಸ್ಟ್ ಆ ಮಗು ಕುಳಿತಿದ್ದ ಜಾಗದಿಂದ ಕೇವಲ ನೂರಿನ್ನೂರು ಅಡಿ ದೂರ ಮಾತ್ರ.
ಜೊತೆಯಲ್ಲಿ ನನ್ನ ಮಗಳಿದ್ದದ್ದಕ್ಕೊ, ಅಥವ ಅಂತಹ ಸ್ಥಳದಲ್ಲಿ ಎದ್ದು ಕಾಣಿಸಿದ ಆ ಭೀಕರ ಸಾಮಾಜಿಕ ಅಸಮಾನತೆಗೊ, ದಾರಿದ್ರ್ಯಕ್ಕೊ, ನನ್ನಲ್ಲಿದ್ದ ಕ್ಯಾಮೆರಾದಿಂದ ಆ ಅಜ್ಜಿ ಮತ್ತು ಮಗುವಿನ ವಿಡಿಯೊ ತೆಗೆದೆ. ಒಂದು ವರ್ಷದ ಬಿಡುವಿನ ನಂತರ ಭಾರತಕ್ಕೆ ಬಂದು ಇನ್ನೂ ಅರ್ಧ ದಿನವೂ ಆಗಿರಲಿಲ್ಲ. ಪ್ರಶ್ನೆಗಳು ಎದ್ದು ಕುಳಿತವು. ನಿಜಕ್ಕೂ ಆ ಮಗು ಎಂದಾದರೂ (ನಾವಂದುಕೊಳ್ಳುವ) ಭಾರತದ ಮುಖ್ಯವಾಹಿನಿಗೆ ಸೇರುತ್ತಾಳೆಯೆ? ಆಕೆ ನಿಜಕ್ಕೂ ಶಾಲೆಗೆ ಹೋಗುತ್ತಾಳೆಯೆ? ಏಳೆಂಟು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮಕ್ಕಳು ಭಿಕ್ಷೆ ಬೇಡುವುದನ್ನು ನೋಡಲೂ ಸಾಧ್ಯವಿರಲಿಲ್ಲ. ಎಲ್ಲೋ ಉತ್ತರ ಕರ್ನಾಟಕದಲ್ಲಿ ಕಾಣಿಸುತ್ತಿದ್ದ ಚಿತ್ರಗಳು ಅವು. ಇಂದು, ಇಷ್ಟೆಲ್ಲ ಅಭಿವೃದ್ಧಿ ಆಗಿದೆ ಎಂದು ಕೊಚ್ಚಿಕೊಳ್ಳುವ ಸಮಯದಲ್ಲಿ, ಎಲ್ಲೆಂದರಲ್ಲಿ ಈ ಮಕ್ಕಳು ಭಿಕ್ಷೆ ಬೇಡುತ್ತಿರುವುದನ್ನು ನೋಡುತ್ತಿದ್ದೀವಲ್ಲ? ನಿಜಕ್ಕೂ ಈ 'ಅಭಿವೃದ್ಧಿ' ಯಾರಿಗೆ, ಎಲ್ಲಿ ಆಗುತ್ತಿದೆ? ಭಿಕ್ಷೆ ಬೇಡುತ್ತಿರುವ ಮಗುವನ್ನು ಸಾಕಲಾರದ, ಸಲಹಲಾರದ ಸಮಾಜವಾಯಿತಲ್ಲ ನಮ್ಮದು? ಆ ಮಗುವಿನತ್ತ, ಅಂತಹ ಲಕ್ಷಾಂತರ ಮಕ್ಕಳತ್ತ "ಮುಂದುವರೆದ ಭಾರತ"ದ ಜವಾಬ್ದಾರಿಯಿಲ್ಲವೆ? ನಮ್ಮ ಸಮಾಜ ಇತ್ತೀಚಿನ ವರ್ಷಗಳಲ್ಲಿ ಎಷ್ಟೊಂದು Insensitive ಆಗಿಹೋಗಿದೆಯಲ್ಲ? ಆಕೆಯೂ, ಆ ಪುಟ್ಟಮಗಳೂ ಭಾರತದ ಮಗಳಲ್ಲವೆ? ನಮ್ಮಲ್ಲಿ "Indian Dream" ಎನ್ನುವುದೇನಾದರೂ ಇದೆಯೆ? ಅದರಲ್ಲಿ ಆಕೆಗೆ ಪಾಲಿದೆಯೆ?
ಅದೇ ದಿನ ಸಂಜೆ ಕೋರಮಂಗಲದ National Games Village ಅಪಾರ್ಟ್‌ಮೆಂಟಿನಲ್ಲಿರುವ ಪರಿಚಿತರನ್ನು ನೋಡಲು ಹೋಗಿದ್ದೆ. ಅವರ ಫ್ಲಾಟ್ ಮೂರನೆ ಅಂತಸ್ತಿನಲ್ಲಿತ್ತು. ಮಧ್ಯಮ, ಮೇಲುಮಧ್ಯಮ ವರ್ಗದವರ ವಾಸಸ್ಥಳ ಅದು. ಮಾತು-ಕತೆ ಮುಗಿದ ನಂತರ ಹೊರಗೆ ಬರುತ್ತ ಅಲ್ಲಿಯ ವರಾಂಡದಲ್ಲಿ ನಿಂತು ಮೇಲಿಂದ ಕೆಳಗೆ ನೋಡಿದೆ. ಆ ಗೇಮ್ಸ್ ವಿಲೇಜ್‌ನ ಕಾಂಪೌಂಡಿಗೆ ಹೊಂದಿಕೊಂಡೆ ಹರಿಯುತ್ತಿತ್ತು ತೆರೆದ ದೊಡ್ಡ ಮೋರಿ. ಆ ಮೋರಿಯ ಆ ಬದಿಗೆ ಸ್ಲಮ್ ಇತ್ತು. ಈ ಕಡೆ "ಉಳ್ಳವರ" ಭಾರತ. ಅತ್ತಕಡೆ "ಇಲ್ಲದವರ" ಭಾರತ. ಮಧ್ಯೆ ಬೆಂಗಳೂರಿನ ಹೊಲಸಾತಿಹೊಲಸು ತುಂಬಿಕೊಂಡು ಹರಿಯುವ "ದೊಡ್ಡ ಮೋರಿ." ಕೂಡಲೆ ಕ್ಯಾಮೆರಾ ತೆಗೆದೆ. ಆ ವೈರುದ್ಧ್ಯವನ್ನು ಚಿತ್ರಿಸಲಾರಂಭಿಸಿದೆ.
ಆಗ ಕಾಣಿಸಿದ ಆ ಹುಡುಗ. ಸುಮಾರು 200-300 ಅಡಿ ದೂರದಲ್ಲಿದ್ದ. ಆ ಮೋರಿಯ ಒಳಭಾಗದ ಜಾಗದಲ್ಲಿ, ವಿಚಿತ್ರವಾದ ಸ್ಥಳದಲ್ಲಿ ಕುಳಿತಿದ್ದ. ಅವನು ಕುಳಿತಿದ್ದ ಜಾಗಕ್ಕಿಂತ ಏಳೆಂಟು ಅಡಿ ಕೆಳಗೆ ಆ ವಾಸನೆ ಬರುವ ಕೊಳಕು ಕೊಚ್ಚೆ ನೀರು ಹರಿಯುತ್ತಿದೆ. ಕ್ಯಾಮೆರಾದ Zoom ಚೆನ್ನಾಗಿದ್ದ ಕಾರಣ ಆ ಹುಡುಗನತ್ತ ಗಮನ ಕೇಂದ್ರಿಸಿದೆ. ಹತ್ತಿಪ್ಪತ್ತು ಸೆಕೆಂಡುಗಳಾಗಿದ್ದವಷ್ಟೆ. ಆ ಹುಡುಗ ಏನೋ ಬಿಚ್ಚುವುದು, ಕಳ್ಳತನದಲ್ಲಿ ಅತ್ತಿತ್ತ ನೋಡುವುದು ಕಾಣಿಸಿತು. ನನಗೆ ಅರ್ಥವಾಗಿ ಹೋಯಿತು. ಹುಡುಗ ಈಗ ಏನೋ ಮಾಡಲಿದ್ದಾನೆ; ಬಹುಶಃ ಸಿಗರೇಟ್ ಹಚ್ಚಲಿದ್ದಾನೆ, ಎಂದು ಮನಸ್ಸಿಗೆ ಹೊಳೆಯಿತು. ಆತ ಹಚ್ಚಿಯೇ ಬಿಟ್ಟ! ಅದು ಕ್ಯಾಮೆರಾದಲ್ಲಿ ಸುಮಾರಾಗಿಯೆ ಬಂತು.
ಬಹುಶಃ, ಅದಕ್ಕೂ ತಿಂಗಳ ಹಿಂದೆ ನಾನು "ಸ್ಲಮ್‌ಡಾಗ್ ಭಾರತವನ್ನು ಕೆಟ್ಟದಾಗಿ ಬಿಂಬಿಸಿದೆ, ಆ ಸಿನೆಮಾ ಸರಿ ಇಲ್ಲ ಅನ್ನುವವರು..." ಎಂಬ ಲೇಖನ ಬರೆದಿದ್ದೆ. ಅದರ ಬಗ್ಗೆ ಸಂಪದ.ನೆಟ್‍ನಲ್ಲಿ ನಡೆದ ಒಂದಷ್ಟು ಚರ್ಚೆಯಲ್ಲಿಯೂ ಭಾಗವಹಿಸಿದ್ದೆ. ಅವೆಲ್ಲವೂ ಮನಸ್ಸಿನಲ್ಲಿ ಇತ್ತು. ಇವತ್ತಿನ ಪರಿಸ್ಥಿತಿಯಲ್ಲಿ ಯಾವೊಂದು ದೇಶವೂ ದ್ವೀಪವಾಗಿ ಉಳಿದಿಲ್ಲ.ಇಂತಹ ಸ್ಥಿತಿಯಲ್ಲಿಯೂ ಸಹ ನಮ್ಮ ಸಮಸ್ಯೆಗಳ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯವನ್ನೂ ತೋರದೆ ಬೇರೆಯವರು ನೋಡಿಬಿಡುತ್ತಾರೆ ಎಂದು ಮುಗುಮ್ಮಾಗಿಯೇ ಇರಲು, ಆ ಮೂಲಕ ಭಾರತದ ಹಲವಾರು ಸಮಸ್ಯೆಗಳ ಬಗ್ಗೆ ಕುರುಡಾಗಿಯೇ ಇರಲು ಕೆಲವರು ಬಯಸುತ್ತಾರಲ್ಲ, ಎನ್ನುವ ಖೇದ ಮನಸ್ಸಿನಲ್ಲಿತ್ತು. "ದೇಶಭಕ್ತ"ರೆಂದು ಸ್ಯಯಂಘೋಷಿಸಿಕೊಳ್ಳುವ ಈ ಜನಕ್ಕೆ ಇವೆಲ್ಲ ಕಾಣುವುದಿಲ್ಲವೆ? ಈ ನಗರಗಳ ಬಡತನ, ಇಲ್ಲಿಯ ಸೋತ ಸ್ಲಮ್‍ಡಾಗ್‌ಗಳು, ಅವರ ಜೀವನ, ಅದು ಹುಟ್ಟಿಸುವ ಪಾತಕೀ ಲೋಕ, ಅದರತ್ತ ನಾಗರಿಕ ಸಮಾಜದ ಜವಾಬ್ದಾರಿ, ಅಸಡ್ಡೆ, ಇವು ಯಾವುವೂ ಬಾಧಿಸುವುದಿಲ್ಲವೆ? ಯಾಕೆ? ಈ ಹುಡುಗನೂ, ಇವನಂತಹವರು, ಭಾರತಾಂಬೆಯ ಪುತ್ರರಲ್ಲವೆ? ಪವಿತ್ರ ನಾಡಿನ ನಾಗರಿಕರಲ್ಲವೆ? ಹಾಗಾದರೆ ಯಾರಿವರು? ಇವರೂ ಪುಣ್ಯಭೂಮಿಯ ಮಕ್ಕಳೇ ಆಗಿದ್ದರೆ, ಅವರೂ ತಮ್ಮಂತೆ ಅವಕಾಶಗಳಿರುವ ಜೀವನವನ್ನು ಪಡೆಯಲು ಅರ್ಹರು ಎಂದು ಭಾವಿಸಬಾರದೇಕೆ? ಅದಕ್ಕಾಗಿ ತಮ್ಮ ಒಂದೆರಡು ಅನುಕೂಲಗಳನ್ನು ಬಿಟ್ಟುಕೊಡಬಾರದೇಕೆ? ಅವು ಯಾವುವೂ ದೊರಕದಿದ್ದರೆ ಈ ಹುಡುಗ ಮುಂದೊಂದು ದಿನ ನಾಗರಿಕ ಸಮಾಜ "ಕ್ರಿಮಿನಲ್" ಎಂದು ಪರಿಗಣಿಸುವ ಕೆಲಸಗಳಿಂದಲೆ ಅನ್ನ ಹೊರೆಯಬೇಕಾಗುತ್ತದಲ್ಲ? ಹಾಗಾದರೆ ನಾವೆ ಅಲ್ಲವೆ ಅವರನ್ನು ಭವಿಷ್ಯದ ರೌಡಿಗಳನ್ನಾಗಿ, ದುಷ್ಟ ರಾಜಕಾರಣಿಗಳ, ಡಾನ್‍ಗಳ, ಕೆಟ್ಟ ಬ್ಯುಸಿನೆಸ್‍ಮನ್‌ಗಳ ಅಸ್ತ್ರಗಳನ್ನಾಗಿ ಮಾಡುತ್ತಿರುವುದು? ಪ್ರಶ್ನೆಗಳು ನೂರಾರು.
ಈ ಸಲವಂತೂ ಮನಸ್ಸು ಕುಕ್ಕುವ ಇಂತಹ ಹತ್ತಾರು ವಿಡಿಯೋ ಹಿಡಿದಿದ್ದೇನೆ. ಮುಂದಿನ ಹಲವಾರು ದಿನಗಳ ಕಾಲ ಅವನ್ನು Youtubeನಲ್ಲಿ ಹಾಕುತ್ತ, ಇಲ್ಲಿ ಬ್ಲಾಗ್‍ನಲ್ಲಿ ಅದರ ಬಗ್ಗೆ ಒಂದಷ್ಟು ಬರೆಯುತ್ತಾ ಹೋಗುತ್ತೇನೆ. ಮತ್ತೊಮ್ಮೆ ಜೀವನವನ್ನು, ಜನ-ಜೀವನವನ್ನು ಅದರೆಲ್ಲ ಮಿತಿಗಳೊಂದಿಗೆ ಅರ್ಥ ಮಾಡಿಕೊಳ್ಳಬೇಕಿದೆ.
"ಬೆಂಗಳೂರಿನ ಹೊಲಸು ನೀರು ಮತ್ತೊಬ್ಬರ ಪಾಲಿನ ಕುಡಿಯುವ ನೀರು..."
ಬೆಂಗಳೂರಿನ ದಕ್ಷಿಣಕ್ಕೆ ಹರಿಯುವ (ಮೇಲೆ ಹೆಸರಿಸಿರುವ) ಈ ದೊಡ್ಡ ಮೋರಿ ಕ್ರಮೇಣ ಸರ್ಜಾಪುರ ರಸ್ತೆಯ ಬೆಳ್ಳಂದೂರು ಕೆರೆ ತಲುಪುತ್ತದೆ. ಅಲ್ಲಿಂದ ಅದು ವರ್ತೂರು ಕೆರೆಗೆ ಸೇರಿಕೊಳ್ಳುತ್ತದೆ. ಇವೆರಡೂ ಕೆರೆಗಳು ಒಂದು ರೀತಿಯಲ್ಲಿ ನಿತ್ಯ ಸುಮಂಗಲಿಯರು. ವರ್ಷ ಪೂರ್ತಿ ಕೋಡಿ ಬೀಳುತ್ತವೆ. ವರ್ತೂರು ಕೆರೆಯ ಗದ್ದೆಗಳಲ್ಲಂತೂ ನಾಲ್ಕಾರು ವರ್ಷಗಳ ಹಿಂದಿನ ತನಕ ಭರಪೂರ ಭತ್ತದ ಬೆಳೆಯನ್ನು ಅಲ್ಲಿಯ ರೈತರು ತೆಗೆಯುತ್ತಿದ್ದರು. ಬೆಂಗಳೂರಿನ ಜನರ ಕೊಳಚೆ ವರ್ತೂರಿನ ಗದ್ದೆಗಳಿಗೆ ಗೊಬ್ಬರದ ಅವಶ್ಯಕತೆ ಇಲ್ಲದಂತೆ ಮಾಡಿತ್ತೇನೊ. ಆ ಅಕ್ಕಿ ತಿನ್ನಲು ಎಷ್ಟು ಯೋಗ್ಯವೊ ಗೊತ್ತಿಲ್ಲ. ಆದರೆ ಗದ್ದೆಗಳಂತೂ ದಟ್ಟ ಹಸುರಿನಿಂದ ಕಂಗೊಳಿಸುತ್ತಿದ್ದವು. ಎರಡು ವರ್ಷದ ಹಿಂದೆ ಆ ದಾರಿಯಲ್ಲಿ ಹೋಗಿದ್ದೆ. ವರ್ತೂರು ಕೆರೆ ಏರಿಯ ಕೆಳಗಿನ ಗದ್ದೆಗಳು ಕಾಣಿಸದಂತೆ ಏರಿಗೆ ತಗಡಿನ ಗೋಡೆ ಎಬ್ಬಿಸಿದ್ದರು. ಅಲ್ಲೆಲ್ಲ ಅಪಾರ್ಟ್‌ಮೆಂಟ್‍ಗಳು ಏಳುತ್ತಿದ್ದವು.
ನಿತ್ಯಸುಮಂಗಲಿ ವರ್ತೂರು ಕೆರೆಯ ಕೋಡಿ ನೀರು ಅಲ್ಲಿಂದ ಕೆಲವೆ ಕಿ.ಮೀ.ಗಳ ದೂರದಲ್ಲಿ ಮುಂದಕ್ಕೆ "ದಕ್ಷಿಣ ಪಿನಾಕಿನಿ" ನದಿ ಸೇರುತ್ತದೆ. ಇದು ನಂದಿ ಬೆಟ್ಟದಲ್ಲಿ ಹುಟ್ಟಿ ದಕ್ಷಿಣಕ್ಕೆ ಹರಿಯುವ ನದಿ. ಇಪ್ಪತ್ತು-ಮುವ್ವತ್ತು ವರ್ಷಗಳ ಹಿಂದೆ ಬಹುಶಃ ಈ ನದಿಯ ನೀರೂ ಚೆನ್ನಾಗಿತ್ತೇನೊ. ಆದರೆ ಬೆಳೆದ ಬೆಂಗಳೂರಿನ ಪ್ರಭಾವದಿಂದ ಇದು ಹೋಗುವಲ್ಲೆಲ್ಲ ಕೊಚ್ಚೆಯೆ. ಕುಡಿಯಲಾಗದ, ಕೊನೆಗೆ ಮೈತೊಳೆದುಕೊಳ್ಳಲೂ ಆಗದ ನೀರು. ವರ್ತೂರಿನ ಬಳಿಯಿಂದ ಹದಿನೈದಿಪ್ಪತ್ತು ಕಿ.ಮೀ. ಕ್ರಮಿಸಿ ಆ ನದಿ ತಮಿಳುನಾಡು ಪ್ರವೇಶಿಸುತ್ತದೆ. ಆ ರಾಜ್ಯದಲ್ಲಿ ಸುಮಾರು ಹದಿನೈದು ಕಿ.ಮೀ. ಹರಿದ ನಂತರ ಹೊಸೂರಿನ ಬಳಿಯಿರುವ ಆವಲಪಲ್ಲಿಯಲ್ಲಿ ಈ ನದಿಗೆ ಒಂದು ಚಿಕ್ಕ ಡ್ಯಾಮ್ ಕಟ್ಟಿದ್ದಾರೆ. ಅಲ್ಲಿ ಒಂದು Sewage Treatment Plant ಸಹ ಇದೆ. ಅಲ್ಲಿ ಶುದ್ಧೀಕರಿಸಿದ ನೀರನ್ನು ಐದಾರು ಕಿ.ಮಿ. ದೂರದ ಹೊಸೂರಿಗೆ ಸರಬರಾಜು ಮಾಡುತ್ತಾರೆ. ಹೀಗೆ ಬೆಂಗಳೂರಿನ ಬಚ್ಚಲು, ಕೊಚ್ಚೆ ನೀರು ಭತ್ತ, ತರಕಾರಿಗಳ ಜೀವರೂಪದಲ್ಲಿ ಬೆಂಗಳೂರಿನ ತಟ್ಟೆಗಳಲ್ಲಿ ಕಾಣಿಸಿಕೊಂಡರೆ, ಮತ್ತೊಂದು ರೂಪದಲ್ಲಿ ಕೆಳಗೆ ಹೊಸೂರಿನ ನೀರಿನ ಲೋಟಗಳಲ್ಲಿ ಕಾಣಿಸಿಕೊಳ್ಳುತ್ತದೆ.
1 comment:
Hello Sir,
The old lady and small kid is not a beggers.
Post a Comment