(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಡಿಸೆಂಬರ್ 15, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)
ಇಲ್ಲಿನ ನ್ಯಾಷನಲ್ ಪಬ್ಲಿಕ್ ರೇಡಿಯೊ (NPR.org) ಅಮೇರಿಕದ ಪ್ರಗತಿಪರ, ಉದಾರವಾದಿ ಧೋರಣೆಯ, ಪಬ್ಲಿಕ್ ರೇಡಿಯೊ ಸ್ಟೇಷನ್‌ಗಳ ಸದಸ್ಯತ್ವ ಹೊಂದಿರುವ ಸ್ವತಂತ್ರವಾದ, ಲಾಭರಹಿತ ರೇಡಿಯೊ ಸಂಸ್ಥೆ. ಇಂತಹದೊಂದು ರೇಡಿಯೊ ನಮ್ಮ ದೇಶದಲ್ಲಿ ಬರಲು ಯಾವ ಕಾಲವಾಗುತ್ತದೊ ಗೊತ್ತಿಲ್ಲ. ಆದರೆ ಇಂತಹ ರೇಡಿಯೊದ ಅವಶ್ಯಕತೆ ಮಾತ್ರ ಪ್ರತಿ ದೇಶಕ್ಕೂ ಇದೆ. ಪ್ರಸ್ತುತ ವಿಷಯಗಳ ಬಗ್ಗೆ ಆಸಕ್ತಿ ಇರುವ ಇಲ್ಲಿನ ಕೆಲವು ಭಾರತೀಯರೂ ತಾವು ಕಾರು ಚಲಾಸುವಾಗ ಇದನ್ನು ಆಲಿಸಲು ಬಯಸುತ್ತಾರೆ.
ಈ ರೇಡಿಯೋದಲ್ಲಿ ಹೆಚ್ಚು ಕಮ್ಮಿ ಪ್ರತಿ ದಿನವೂ ಒಂದಲ್ಲ ಒಂದು ಪುಸ್ತಕದ ಬಗ್ಗೆ ಕಾಲು ಗಂಟೆ, ಅರ್ಧ ಗಂಟೆಯಾದರೂ ಮೌಲಿಕವಾದ ಕಾರ್ಯಕ್ರಮ ಇದ್ದೇ ಇರುತ್ತದೆ. ಪುಸ್ತಕ ಪರಿಚಯದ ಜೊತೆಗೆ ಲೇಖಕರ ಸಂದರ್ಶನ ಇರುವ ಕಾರ್ಯಕ್ರಮ ಅದು. ಎರಡು ವಾರದ ಹಿಂದೆ ಈ ಸಾರಿಯ ಪ್ರತಿಷ್ಠಿತ ಬುಕರ್ ಪ್ರಶಸ್ತಿ ಪಡೆದ ಭಾರತೀಯ ಸಂಜಾತ ಇಂಗ್ಲಿಷ್ ಕಾದಂಬರಿಕಾರ್ತಿ ಕಿರಣ್ ದೇಸಾಯಿಯವರ ಸಂದರ್ಶನವಿತ್ತು. ಅದೇ ಕಾರ್ಯಕ್ರಮದಲ್ಲಿ ಬುಕರ್ ಪ್ರಶಸ್ತಿಗೆ ಸ್ವತಃ ಮೂರು ಸಲ ನಾಮಕರಣಗೊಂಡಿದ್ದ, ಕಿರಣ್‌ರ ತಾಯಿ ಅನಿತಾ ದೇಸಾಯಿಯವರೂ ಪಾಲ್ಗೊಂಡಿದ್ದರು. ಪ್ರತಿಭಾವಂತ ಅಮ್ಮ-ಮಗಳು ಪಾಲ್ಗೊಂಡಿದ್ದ ವಿಶಿಷ್ಠ ಕಾರ್ಯಕ್ರಮ ಅದು. ಈ ರೇಡಿಯೋದಲ್ಲಿ ಬರುವ ಸಂದರ್ಶನಗಳಲ್ಲಿ ಯಾವುದೆ ಚಮಚಾಗಿರಿ, ಹೊಗಳುವಿಕೆ, ಅನವಶ್ಯಕ ತೆಗಳುವಿಕೆ ಇರುವುದಿಲ್ಲ. ಆತ್ಮೀಯವಾದ, ಆದರೆ ನೇರವಾದ, ವಸ್ತುನಿಷ್ಠ ಸಂದರ್ಶನಗಳು ಅವು.
ಇತ್ತೀಚೆಗೆ ತಾನೆ ಅಮೇರಿಕದ ಲ್ಯಾರಿ ಕಹನೆರ್ ಎಂಬ ಪತ್ರಕರ್ತರು ಬರೆದಿರುವ "AK-47: The Weapon that Changed the Face of War" ಎಂಬ ಪುಸ್ತಕ ಪ್ರಕಟವಾಗಿದೆ. ಎನ್.ಪಿ.ಆರ್.ನಲ್ಲಿ ಕಳೆದ ವಾರ ಈ ಲೇಖಕರ ಸಂದರ್ಶನವಿತ್ತು. ಮಿಖಾಯಿಲ್ ಕಲೊಷ್ನಿಕೊವ್ ಎಂಬ ಸೋವಿಯತ್ ರಷ್ಯಾದ ಗನ್ ಡಿಸೈನರ್ 1947 ರಲ್ಲಿ ವಿನ್ಯಾಸ ಮಾಡಿದ ಆಟೊಮ್ಯಾಟ್ ಕಲೊಷ್ನಿಕೊವ್ - 47 ಎಂಬ ಆಯುಧ ಅಲ್ಲಿಂದೀಚೆಗೆ ಪ್ರಪಂಚದಲ್ಲಿನ ದೇಶದೇಶಗಳ ನಡುವಿನ ಯುದ್ದವನ್ನಷ್ಟೆ ಅಲ್ಲ, ಅನೇಕ ಅಂತರ್ಯುದ್ದಗಳ ದಿಕ್ಕುದೆಸೆಗಳನ್ನೆ ಬದಲಾಸಿದ ವಿವರಗಳು ಈ ಪುಸ್ತಕದಲ್ಲಿವೆ.
AK-47 ನ ಪ್ರಭಾವ ಎಷ್ಟಿದೆಯೆಂದರೆ, ಲೆಬನಾನ್‌ನ ಮುಸ್ಲಿಮ್ ಉಗ್ರಗಾಮಿಗಳ ರಾಜಕೀಯ ಸಂಸ್ಥೆಯಾದ ಹಿಜಬುಲ್ಲಾದ ಧ್ವಜದಲ್ಲಿ ಮಾತ್ರವಲ್ಲದೆ ಮೊಝಾಂಬಿಕ್ ದೇಶದ ರಾಷ್ಟ್ರಧ್ವಜದಲ್ಲಿಯೂ ಅದು ಸ್ಥಾನ ಪಡೆದುಕೊಂಡುಬಿಟ್ಟಿದೆ. ರ್ಯಾಪ್ ಸಂಗೀತದ ಹಾಡುಗಳು ಈ ಗನ್ನನ್ನು ವೈಭವೀಕರಿಸಿ ಹಾಡಿದ್ದರೆ, ಅನೇಕ ಭಾಷೆಗಳಲ್ಲಿನ ಗ್ಯಾಂಗ್‌ಸ್ಟರ್, ಆಕ್ಷನ್ ಮೂವಿಗಳಲ್ಲಿ ಕನ್ನಡದಲ್ಲಿ ಕತ್ತಿ-ಮಚ್ಚು-ಲಾಂಗು ಬಳಸುವ ಹಾಗೆ ಈ ಗನ್ನನ್ನು ಬಳಸಲಾಗಿದೆ. ನಮ್ಮದೆ ಕನ್ನಡದಲ್ಲಿ ಶಿವರಾಜ್ ಕುಮಾರ್ ನಾಯಕ ನಟರಾಗಿ AK-47 ಹೆಸರಿನ ಚಲನಚಿತ್ರದಲ್ಲಿ ನಟಿಸಿದ್ದಾರೆ. ಓಂ ಪ್ರಕಾಶ್‌ರ ನಿರ್ದೇಶನದ ಆ ಸಿನೆಮಾದ ಪೋಸ್ಟರ್‌ಗಳಲ್ಲಿ ಅರೆಬರೆ ಕತ್ತಲಿನಲ್ಲಿ ಶಿವಣ್ಣ ಕೇವಲ ಅಂಡರ್‌ವೇರ್‌ನಲ್ಲಿ ಬೆತ್ತಲೆಯಾಗಿ ಕುಳಿತಿರುವ ಚಿತ್ರ ಅನೇಕರಿಗೆ ಈಗಲೂ ಜ್ಞಾಪಕದಲ್ಲಿರಬಹುದು.
ಮಿಖಾಯಿಲ್ ಕಲೊಷ್ನಿಕೊವ್ ಕಮ್ಯುನಿಸ್ಟ್ ರಷ್ಯಾದ ಸೈನಿಕನಾಗಿದ್ದವನು. ಎರಡನೆ ವಿಶ್ವಯುದ್ದದಲ್ಲಿ ಜರ್ಮನ್ ಮತ್ತು ಅಮೇರಿಕದ ಆಟೊಮ್ಯಾಟಿಕ್ ಮೆನ್ ರೈಫಲ್‌ಗಳು ಅನೇಕ ಸಲ ನಿರ್ಣಾಯಕ ಪಾತ್ರ ವಹಿಸಿದ್ದವು. ಅವುಗಳ ಪ್ರಭಾವವನ್ನು ಆ ಮಹಾಯುದ್ದದ ಸಮಯದಲ್ಲಿ ಸ್ವತಃ ನೋಡಿದ್ದ ಕಲೊಷ್ನಿಕೊವ್ ತನ್ನ ತಾಯಿನಾಡಿನ ಸೈನಿಕರಿಗಾಗಿ 1947 ರಲ್ಲಿ ಈ ಆಟೊಮ್ಯಾಟಿಕ್ ಮೆಷಿನ್ ಗನ್ನನ್ನು ವಿನ್ಯಾಸಗೊಳಿಸಿದ. ಆಗ ಆತನ ವಯಸ್ಸು ಕೇವಲ 28 ಮಾತ್ರವಾಗಿತ್ತು. ಈ ಆಯುಧದ ಗುಣಲಕ್ಷಣಗಳಿಂದ ಪ್ರಭಾವಿತವಾದ ರಷ್ಯಾ ಅನೇಕ ವರ್ಷಗಳ ಕಾಲ ಇದರ ಸುದ್ದಿಯನ್ನು ರಹಸ್ಯವಾಗಿ ಇಟ್ಟಿತ್ತು. ಕೇವಲ ತನ್ನ ಸೈನಿಕರಿಗೆ ಮಾತ್ರ ಒದಗಿಸಿ, ತನ್ನ ದೇಶದಲ್ಲಿ ಮಾತ್ರ ಬಳಸುತ್ತಿತ್ತು.
ರಷ್ಯ ಮೊದಲ ಬಾರಿಗೆ ಅದನ್ನು ಹೊರಪ್ರಪಂಚಕ್ಕೆ ಪರಿಚಯಿಸಿದ್ದು 1956 ರಲ್ಲಿ. ಆಗ ಪೂರ್ವ ಯೂರೋಪಿನ ಹಂಗರಿ ದೇಶ ರಷ್ಯಾದ ಅಧೀನದಲ್ಲಿತ್ತು. ತಮ್ಮ ದೇಶದಲ್ಲಿನ ರಷ್ಯಾದ ಉಸ್ತುವಾರಿಕೆಯನ್ನು ವಿರೋಧಿಸಿ ಹಾಗು ನೈಜ ಸಮಾಜವಾದನ್ನು ಆಗ್ರಹಿಸಿ ಹಂಗರಿ ದೇಶದಲ್ಲಿನ ಜನ ಆ ವರ್ಷ ದಂಗೆಯೆದ್ದರು. ವಿದ್ಯಾರ್ಥಿಗಳಿಂದ ಆರಂಭವಾದ ಚಳವಳಿಗೆ ಸರ್ಕಾರಿ ನೌಕರರು, ಪೋಲಿಸರು, ಕೊನೆಗೆ ಸಶಸ್ತ್ರ ಸೈನಿಕರೂ ಸೇರಿಕೊಂಡು ಬಿಟ್ಟರು. ರಷ್ಯಾದ ಸೈನಿಕರಿಗೂ ಹಂಗರಿ ದೇಶದ ಸಶಸ್ತ್ರ ನಾಗರಿಕರಿಗೂ ಬುಡಾಪೆಸ್ಟ್ ನಗರದಲ್ಲಿ ಯುದ್ಧವೆ ಆರಂಭವಾಗಿಬಿಟ್ಟಿತು. ಪೂರ್ವ ಯೋರೋಪ್‌ನಲ್ಲಿ ತನ್ನ ನಿಯಂತ್ರಣ ತಪ್ಪುವುದು ರಷ್ಯಾಕ್ಕೆ ಬೇಕಿರಲಿಲ್ಲ. ಪರಿಸ್ಥಿತಿ ಕೈಮೀರಿದ್ದನ್ನು ಗಮನಿಸಿದ ರಷ್ಯಾದ ಆಗಿನ ಮುಖ್ಯಸ್ಥ ನಿಕಿಟಾ ಖ್ರುಶ್ಚೆವ್ AK-47 ಗಳ ಸಹಿತ ಕೆಂಪುಸೈನ್ಯವನ್ನು ಕಳುಹಿಸಿದರು. ರಕ್ತದ ನದಿಯೆ ಹರಿತು. ಹಂಗರಿ ಜನರ ಆ ಸ್ವಾತಂತ್ರ್ಯ ಹೋರಾಟದಲ್ಲಿ AK-47 ನ ಗುಂಡಿನ ಮಳೆಗೆ ಸಿಲುಕಿ ಹಂಗರಿಯ 50000 ನಾಗರಿಕರು ಸತ್ತರೆ ಕೇವಲ 7 ಸಾವಿರ ರಷ್ಯಾ ಸೈನಿಕರು ಸತ್ತರು. ಗೆದ್ದದ್ದು ಆಯುಧಗಳ ಸಂಖ್ಯಾಬಲವಲ್ಲ; ಗೆದ್ದದ್ದು AK-47 ಬಳಸಿದವರು ಎನ್ನುವುದು ಇಲ್ಲಿ ಸೂಕ್ತ.
ಅಲ್ಲಿಂದೀಚೆಗೆ ಈ ಆಯುಧಕ್ಕೆ ಸರ್ಕಾರಗಳು ಮಾತ್ರವಲ್ಲ ಅನೇಕ ಉಗ್ರಗಾಮಿ ಸಂಘಟನೆಗಳು, ಮಾಫಿಯಾ ಗುಂಪುಗಳು, ನಕ್ಸಲೀಯರು, ಎಲ್ಲರೂ ಗಿರಾಕಿಗಳೆ. ಬಹಳ ಬಲಶಾಲಿಯಾದ, ಅಪಾಯಕಾರಿಯಾದ ಈ ಆಯುಧವನ್ನು ಬಳಸುವುದು ಮಾತ್ರ ಬಹಳ ಸುಲಭವಂತೆ. ಟ್ರೈನಿಂಗ್ ಕೈಪಿಡಿಯ ಅವಶ್ಯಕತೆಲ್ಲ. ಕಾರಣ? ಆಪರೇಟ್ ಮಾಡಬೇಕಾದ ಭಾಗಗಳು ಕೆಲವೆ ಕೆಲವು. ಕುದುರೆ ಎಳೆದು ಹಿಡಿದುಕೊಂಡಿದ್ದಷ್ಟು ಹೊತ್ತೂ ಗುಂಡಿನ ಮಳೆಯೆ! ಮೂವತ್ತು ಗುಂಡಿನ ಒಂದು ಮ್ಯಾಗಝೈನ್ ಮೂರು ಸೆಕೆಂಡಿನಲ್ಲಿ ಖಾಲಿ! ಒಂದು ಕಿಲೊ ಮೀಟರ್ ದೂರದ ತನಕ ಯಾರು ಅಡ್ದ ಬಂದರೂ ಖಲಾಸ್! ಜೊತೆಗೆ, ಈ ಗನ್ನು ರಿಪೇರಿ ಆಗುವುದೆ ಅಪರೂಪವಂತೆ.
ಈಗ ಸುಮಾರು ಹದಿನಾಲ್ಕು ದೇಶಗಳು ವಿವಿಧ ಮಾದರಿಯ AK-47 ಅನ್ನು ಉತ್ಪಾದಿಸುತ್ತಿವೆಯಂತೆ. AK-56 ಚೈನಾ ಉತ್ಪಾದಿಸುವ ಮಾದರಿ. ಅದನ್ನೆ ಅಕ್ರಮವಾಗಿ ಸಿನೆಮಾ ನಟ ಸಂಜಯ್ ದತ್ ಹೊಂದಿದ್ದದ್ದು. ಕೆಲವು ಕಡೆ ಕಾಳಸಂತೆಯಲ್ಲಿ ಸಾವಿರ ಎರಡು ಸಾವಿರಕ್ಕೆ ಈ ಆಯುಧ ಸಿಗುತ್ತದಂತೆ. ಪ್ರಪಂಚದ ಜನಸಂಖ್ಯೆ 600 ಕೋಟಿ. ಈಗ ಉಪಯೋಗದಲ್ಲಿರುವ AK-47 ನ ಸಂಖ್ಯೆ ಸುಮಾರು 10 ಕೋಟಿ ಎಂದು ಅಂದಾಜು. ಅಂದರೆ 60 ಜನಕ್ಕೆ ಒಬ್ಬನ ಬಳಿ ಈ ಮೇಷಿನ್ ಗನ್ ಇದೆ ಎಂದಾಯಿತು! ಅನೇಕ ದೇಶಗಳಲ್ಲಿ ಖಾಸಗಿ ವ್ಯಕ್ತಿಗಳು ಈ ಆಯುಧವನ್ನು ಹೊಂದುವುದು ಅಕ್ರಮ. ಅದನ್ನು ಗಣನೆಗೆ ತೆಗೆದುಕೊಂಡರೆ ಕೆಲವು ದೇಶಗಳಲ್ಲಿ ಮೂರ್ನಾಲ್ಕು ಜನಕ್ಕೆ ಒಬ್ಬನ ಬಳಿ, ಚಿಕ್ಕ ಮಕ್ಕಳ ಕೈಯಲ್ಲೂ ಈ ಆಯುಧ ಇರುವುದರ ಕಾರಣ ಗೊತ್ತಾಗುತ್ತದೆ.
ಈಗಲೂ ಬದುಕಿರುವ ಕಲೊಷ್ನಿಕೊವ್ ಇದರಿಂದ ಏನೂ ದುಡ್ಡು ಮಾಡಲಿಲ್ಲ. ಯಾಕೆಂದರೆ ಅದು ಕಮ್ಯುನಿಸ್ಟ್ ಸರ್ಕಾರದ ಸೊತ್ತಾಗಿತ್ತು. ಆದರೆ ಆ ಗನ್ನು ತಂದುಕೊಟ್ಟ ಹೆಸರಿನಿಂದಾಗಿ ದೇಶವಿದೇಶಗಳ ಆಯುಧ ಮಾರಾಟದ ಮಳಿಗೆಗಳಲ್ಲಿ ಆತನೀಗ ಸೆಲೆಬ್ರಿಟಿ. ಅವನ ಹೆಸರಿನಲ್ಲಿ, ಅವನ ಚಿತ್ರವನ್ನು ಬಾಟಲಿನ ಮೇಲೆ ಹೊಂದಿರುವ ಕಲೊಷ್ನಿಕೊವ್ ವೋಡ್ಕಾ ಈಗ ರಷ್ಯಾದಲ್ಲಿ ಲಭ್ಯವಂತೆ! ತನ್ನ ಹೆಸರಿನ ಗನ್ನನ್ನು ಅನೇಕ ಕ್ರಿಮಿನಲ್‌ಗಳು, ಭಯೋತ್ಪಾದಕರು, ಉಗ್ರಗಾಮಿಗಳು ಅಕ್ರಮ ಕೆಲಸಗಳಿಗೆ ಉಪಯೋಗಿಸುವುದರ ಬಗ್ಗೆ ವಿಷಾದ ವ್ಯಕ್ತಪಡಿಸುವ ಆತ. 'ಗನ್ನುಗಳು ಯಾರ ಕೈಗೆ ಸಿಗುತ್ತವೆ ಎನ್ನುವುದಕ್ಕೆ ವಿನ್ಯಾಸಕಾರ ಜವಾಬ್ದಾರನಲ್ಲ. ಅವುಗಳ ಉತ್ಪಾದನೆ ಮತ್ತು ರಪ್ತನ್ನು ನಿಯಂತ್ರಿಸುವ ಜವಾಬ್ದಾರಿ ಸರ್ಕಾರಗಳದ್ದು,' ಎನ್ನುತ್ತಾನೆ. ಆದರೆ, ಎಲ್ಲಾ ಸರ್ಕಾರಗಳೂ ಎಲ್ಲಾ ಸಮಯದಲ್ಲಿಯೂ ಜವಾಬ್ದಾರಿಂದ, ಮುಂದಾಲೋಚನೆಂದ, ಜನಹಿತದ ಕೆಲಸಗಳನ್ನಷ್ಟೆ ಮಾಡಿದರೆ, ಪ್ರಪಂಚದಲ್ಲಿ ಇಷ್ಟೆಲ್ಲಾ ರಕ್ತಪಾತ, ದೌರ್ಜನ್ಯ, ಹಿಂಸೆ, ಅನ್ಯಾಯ, ಯುದ್ದಗಳು, ನಡೆಯುತ್ತಿದ್ದವೆ?
Dec 2, 2006
60 ಜನರಲ್ಲಿ ಒಬ್ಬನ ಬಳಿ AK-47
Subscribe to:
Post Comments (Atom)
No comments:
Post a Comment