Nov 29, 2008

ತಲ್ಲಣದ ಸಮಯದಲ್ಲಿ ಸಜ್ಜನಿಕೆ ಮತ್ತು ಪ್ರೀತಿಯನ್ನು ಹುಡುಕುತ್ತಾ...

2001, ಸೆಪ್ಟೆಂಬರ್ 11 ರ ದಾಳಿ ಆದನಂತರ ಇಲ್ಲಿಯವರೆಗೆ ಅಮೆರಿಕದ ನೆಲದಲ್ಲಿ ಯಾವೊಂದು ಭಯೋತ್ಪಾದಕ ದಾಳಿಗಳೂ ಆಗಿಲ್ಲ. ಈ ಮಧ್ಯೆ ಅಮೆರಿಕ ನ್ಯಾಯಯುತವಾಗಿಯೆ ಅಫ್ಘಾನಿಸ್ತಾನಕ್ಕೆ ನುಗ್ಗಿದ್ದಷ್ಟೆ ಅಲ್ಲದೆ ಅಪಾರ ವಿರೋಧದ ನಡುವೆ ಇರಾಕಿಗೂ ನುಗ್ಗಿತು. ಇದು ಇಸ್ಲಾಮಿಕ್ ಮೂಲಭೂತವಾದಿ ಭಯೋತ್ಪಾದಕರಲ್ಲಿ ದ್ವೇಷವನ್ನು ಮತ್ತಷ್ಟು ಹೆಚ್ಚಿಸಿತು. ಆದರೂ ಅಮೆರಿಕದ ನೆಲದ ಮೇಲೆ ಮತ್ತೆ ದಾಳಿ ಮಾಡಲು ಅವರ ಕೈಯ್ಯಲ್ಲಿ ಸಾಧ್ಯವಾಗಿಲ್ಲ. ಅಂದರೆ ಅವರು ಪ್ರಯತ್ನಿಸಲಿಲ್ಲ ಅಂತಲ್ಲ. ಅವರು ಪ್ರಯತ್ನಪಟ್ಟರೆ ಎನ್ನುವುದೂ ತಿಳಿಯದಷ್ಟು ಸೂಕ್ಷ್ಮವಾಗಿ ಅಮೆರಿಕದ ಭದ್ರತಾ ದಳಗಳ Intelligence ವಿಭಾಗಗಳು ಕಾರ್ಯನಿರ್ವಹಿಸಿವೆ. ಭಯೋತ್ಪಾದನೆಯನ್ನು ಸಂಪೂರ್ಣವಾಗಿ Law & Order ವಿಷಯವನ್ನಾಗಿಯೆ ನೋಡಿ ಅವರು ಈ ಜಯ ಸಾಧಿಸಿದ್ದಾರೆ.

ಕಳೆದ ವಾರ ಮುಂಬಯಿಯಲ್ಲಿ ಮತ್ತೆ ಅದೆಷ್ಟನೆಯದೊ ಬಾರಿ ಸಂಕುಚಿತ ಕೋಮುವಾದಿಗಳು ದಾಳಿ ಮಾಡಿದ್ದಾರೆ. ಅಪಾರವಾದ ಅಂತರರಾಷ್ಟ್ರೀಯ ಆಯಾಮ ಗಳಿಸಿಕೊಂಡ ಈ ದಾಳಿ ಮೂರ್ನಾಲ್ಕು ದಿನಗಳ ಹೋರಾಟದ ಬಳಿಕ ಅಂತ್ಯವಾಗಿದೆ. ಕರ್ತವ್ಯಪಾಲಕರ, ಅಮಾಯಕರ, ವಿದೇಶಿಗಳ, ಪ್ರವಾಸಿಗಳ, ಬಡವರ, ಶ್ರೀಮಂತರ, ಒಟ್ಟಿನಲ್ಲಿ ಮನುಷ್ಯರ ಹತ್ಯೆಯಾಗಿದೆ. ದೇಶದ ಒಂದೆರಡು ರಾಜ್ಯಗಳ ಚುನಾವಣೆಯೂ ಈ ಘಟನೆಯಿಂದ ನಿರ್ಧಾರಿತವಾಗಿ ಹೋಗಿದೆ. ಉತ್ತರದ ರಾಜ್ಯಗಳಲ್ಲಿ ಒಂದು ಮಟ್ಟದ ಸಾಮಾಜಿಕ ನ್ಯಾಯಕ್ಕೆ ಕಾರಣನಾದ ಮಾಜಿ ಪ್ರಧಾನಿಯೊಬ್ಬನ ಸಾವು ಸುದ್ದಿಯೆ ಅಲ್ಲದಷ್ಟು ರೀತಿಯಲ್ಲಿ ನಗಣ್ಯವಾಗಿ ಹೋಗಿದೆ.

ಹಾಗೆಯೆ, ರಕ್ತಹರಿಸಿದ ಇದೇ ದುಷ್ಟರ ದುಷ್ಟ ದಾಯಾದಿಗಳು ನವೋಲ್ಲಾಸದಿಂದ ಜಿಗಿದೆದ್ದಿದ್ದಾರೆ.

ಮುಂಬಯಿಯ ಘಟನೆಗಳ ಮೂಲ ನಮ್ಮ ದೇಶದ failed Law & Order ನಲ್ಲಿ ಇದೆ. ನನ್ನ ಕಳೆದ ಪೋಸ್ಟಿನಲ್ಲಿ ಬರೆದಿದ್ದ ಮದ್ರಾಸಿನ ಪೋಲಿಸರ ಕರ್ತವ್ಯದ್ರೋಹ, ಮಾಲೆಗಾಂವ್ ವಿಚಾರದಲ್ಲಿಯ ಮತಪ್ರೇಮಿಗಳ ಆತ್ಮದ್ರೋಹ, ಪ್ರತಿದಿನವೂ ಒಂದಲ್ಲ ಒಂದು ಕಡೆ ನಿರಾಕರಿಸಲ್ಪಡುವ ನ್ಯಾಯ, ಇಂತಹುದರಲ್ಲಿದೆ. ಇಂತಹುದಗಳ ಬಗ್ಗೆ ಯೋಚನೆ ಮಾಡದ, ಪೋಲಿಸರ ನಿಷ್ಕ್ರಿಯತೆ, ಆ ವಿಭಾಗದಲ್ಲಿನ ಅಸಮರ್ಥತೆ, ನಮ್ಮ Intelligence Failure, ಅಲ್ಲಿ ನಡೆಯುವ ರಾಜಕಾರಣಿಗಳ ಹಸ್ತಕ್ಷೇಪ, ಮತೀಯವಾದಿ ಮನಸ್ಥಿತಿಯ Infiltration, ಮುಂತಾದವುಗಳ ಪರಿವೆಯೇ ಇಲ್ಲದ "ಮತಪ್ರೇಮಿಗಳು" ಮುಂಬಯಿಯ ಘಟನೆಯಾದ ಕೂಡಲೆ ಮತ್ತೆ "ದೇಶಪ್ರೇಮದ" ಧ್ವಜ ಕೈಗೆತ್ತಿಕೊಂಡಿದ್ದಾರೆ. ನಮ್ಮ ದೇಶದಲ್ಲಿ ಯಾಕೆ ಅಮೆರಿಕದ ರೀತಿ ಭಯೋತ್ಪಾದಕ ಕೃತ್ಯಗಳನ್ನು ಅವು ಘಟಿಸುವುದಕ್ಕಿಂತ ಮೊದಲೆ ತಡೆಯಲು ಆಗುತ್ತಿಲ್ಲ ಎನ್ನುವುದನ್ನು ಕೇಳಿಕೊಳ್ಳದ ಅಪ್ರಬುದ್ಧರು ಮತ್ತದೆ ಪಲಾಯನವಾದಿ ಆರೋಪ ಸೂತ್ರ ಪಠಿಸುತ್ತಿದ್ದಾರೆ. ತಮ್ಮ ಜವಾಬ್ದಾರಿ ಮತ್ತು ಪ್ರಬುದ್ಧತೆಯನ್ನು ಜನ ಮರೆಯುತ್ತಿರುವ, ಅವರಲ್ಲಿ ಸಂಶಯ ಮತ್ತು ಅಪನಂಬಿಕೆಗಳು ತುಳುಕಾಡುತ್ತಿರುವ ತಲ್ಲಣದ ಸಮಯ ಇದು.



ಈ ಹಿನ್ನೆಲೆಯಲ್ಲಿ ಮಾನವೀಯತೆ, ಸಹಿಷ್ಣುತೆ, ಸಜ್ಜನಿಕೆ, ಸಹಮಾನವ ಕಕ್ಕುಲತೆ ಮುಂತಾದವುಗಳ ಬಗ್ಗೆ ಯೋಚಿಸುತ್ತ ನಾನು ಇವತ್ತು ಓದುತ್ತಿರುವ ಪುಸ್ತಕಕ್ಕೆ ಬರುತ್ತೇನೆ. ಕನ್ನಡದ ಹಿರಿಯ ಲೇಖಕರಲ್ಲೊಬ್ಬರಾದ ಡಾ. ಪ್ರಭುಶಂಕರರು ಇಲ್ಲಿ ಮಗಳ ಮನೆಗೆ ಬಂದಿದ್ದಾರೆ. ಮೊನ್ನೆಯ ಗುರುವಾರ ಇಲ್ಲಿ Thanksgiving Day. ಅವತ್ತು ಪ್ರಭುಶಂಕರರನ್ನು ಮನೆಗೆ ಊಟಕ್ಕೆ ಕರೆದುಕೊಂಡು ಬಂದಿದ್ದೆ. ಆಗ ಅವರು ತಮ್ಮ ಇತ್ತೀಚಿನ ಪುಸ್ತಕ "ನಮನ"ವನ್ನು ನನಗೆ ಓದಲು ಕೊಟ್ಟರು. ಅದೊಂದು ವ್ಯಕ್ತಿಚಿತ್ರಗಳ ಲೇಖನಸಂಗ್ರಹ.

ಅದರಲ್ಲಿ ನಾನು ಈ ಹಿಂದೆಯೆ ಒಂದೆರಡು ಬಾರಿ ಓದಿದ್ದ "ಹೀಗಿದ್ದರು ಕುವೆಂಪು" ಲೇಖನದ ಜೊತೆಗೆ ಇತರ ಏಳೆಂಟು ಲೇಖನಗಳಿವೆ. ಇವತ್ತು ಬೆಳಿಗ್ಗೆ ಅದರಲ್ಲಿದ್ದ "ತೀಕ್ಷ್ಣಮತಿ ಪು.ತಿ.ನ. ಅವರು" ಲೇಖನ ಓದುತ್ತಿದ್ದೆ. ಕವಿ ಪು.ತಿ.ನ.ರ ಜೊತೆಗಿನ ತಮ್ಮ ಒಡನಾಟವನ್ನೂ, ಅವರ ಕಾವ್ಯದ ಬಗ್ಗೆ ತಮಗಿದ್ದ ಆಸಕ್ತಿಯನ್ನೂ ಬರೆಯುತ್ತ, ಕೊನೆಕೊನೆಗೆ ತಮಗೆ ಪು.ತಿ.ನ.ರ ಕಾವ್ಯದ ಬಗೆಗೆ ಕಮ್ಮಿಯಾದ ಕುತೂಹಲ ಮತ್ತು ನಿರುತ್ಸಾಹದ ಬಗ್ಗೆ ಪ್ರಭುಶಂಕರ ಹೇಳುತ್ತಾರೆ. ತಾವು ಪು.ತಿ.ನ.ರಿಗೆ "ನಿಮ್ಮ ಭಾಷೆ ಯಾರಿಗೆ ಅರ್ಥವಾಗುತ್ತೆ ಹೋಗಿ ಸಾರ್. ಸಂಸ್ಕೃತದವರು ಇದನ್ನು ಓದುವುದಿಲ್ಲ, ಕನ್ನಡಿಗರಿಗೆ ಅರ್ಥವಾಗುವುದಿಲ್ಲ... ನೀವು ತಿಳಿಗನ್ನಡದಲ್ಲಿ ಬರೆಯಬಲ್ಲಿರಿ. ಬರೆಯಿರಿ." ಎಂದು ಹೇಳುತ್ತಿದ್ದುದ್ದಾಗಿ ಬರೆಯುತ್ತ, ಇದೇ ಹಿನ್ನೆಲೆಯಲ್ಲಿ ಪು.ತಿ.ನ. ರವರು ಇವರಿಗೆ ಬರೆದಿದ್ದ ಪತ್ರವನ್ನು ಉಲ್ಲೇಖಿಸುತ್ತಾರೆ. ಆ ಪತ್ರದ ಕೊನೆಯಲ್ಲಿ ಪು.ತಿ.ನ. ಹೀಗೆ ಬರೆದಿದ್ದಾರೆ:
"... ಅಷ್ಟಕ್ಕೂ ನನ್ನ ಈ ಕಾವ್ಯದಲ್ಲಿ ನೀವು ನಾನು ಬಯಸುವಷ್ಟು ಕುತೂಹಲ ತೋರಿಸಲಿಲ್ಲ. ಇನ್ನೂ ತುಂಬ ಸ್ವಾರಸ್ಯವಾದ ಸರಕುಗಳಿವೆ ಅಲ್ಲಿ. ಓದುತ್ತೇನೆ ಎಂಬ ಹೆದರಿಕೆಯಿಂದ ಮನೆಗೆ ಬಾರದೆ ಇರಬೇಡಿ. ನಾನು ಆ ಪುಸ್ತಕದ ತಂಟೆಗೇ ಹೋಗುವುದಿಲ್ಲ. ಕಿವಿ ನಿಮಗೆ ಮೀಸಲು."

ನನಗೆ ಒಟ್ಟಾರೆಯಾಗಿ ಆ ಲೇಖನ ಮಾಡಿಕೊಟ್ಟ ಆಗಿನ ದೇಶ-ಕಾಲದ ಪರಿಚಯ ಮತ್ತು ವಿಶೇಷವಾಗಿ ಈ ಪತ್ರದ ಧಾಟಿ, ಅಲ್ಲಿದ್ದ ಸಜ್ಜನಿಕೆ, ಆತ್ಮೀಯತೆ, ಮತ್ತು ಆ ಸರಳತೆ, ಒಂದು ರೀತಿಯ ಭಾವಾವೇಶಕ್ಕೆ ಒಳಗಾಗುವಂತೆ ಮಾಡಿತು. ಇವತ್ತಿನ ಸಂದರ್ಭಕ್ಕೆ ತೀರಾ ಅಪರಿಚಿತವಾದ ನಡವಳಿಕೆ ಇದು. ಪಕ್ಕದಲ್ಲಿ ಗೆಳೆಯ ಪ್ರೊ. ಪೃಥ್ವಿ ಇದ್ದರು. ಅವರಿಗೆ ಈ ಕೊನೆಯ ಮೂರು ಸಾಲುಗಳನ್ನು ಓದಿ, "ಇಂತಹ ಪತ್ರವನ್ನು ಇವತ್ತು ಯಾರು ಯಾರಿಗಾದರೂ ಬರೆಯಲು ಸಾಧ್ಯವೆ? ಕಲ್ಪಿಸಿಕೊಳ್ಳಲೂ ಆಗುತ್ತಿಲ್ಲ. ಈ ಸಜ್ಜನಿಕೆಯ ಮಟ್ಟ ನೋಡಿ," ಎಂದೆ. ಅದಕ್ಕವರು, "ನವೋದಯದವರ ಕಾಲದ Civility, ವಿಶಿಷ್ಟವಾದದ್ದು. ಅದು ಈಗ ಇಲ್ಲ." ಎಂದರು.

ಅದಾದ ಮೇಲೆ "ನಮನ"ದ ಇನ್ನೂ ಹಲವು ವ್ಯಕ್ತಿಚಿತ್ರಗಳ ಓದು ಮುಂದುವರೆಸಿದೆ. ಕಳೆದ ಶತಮಾನದ ಸಾಹಿತಿ ಜನರ Civilityಯ ಅನೇಕ ರೂಪಗಳನ್ನೆ ನಾನಲ್ಲಿ ಕಾಣುತ್ತ ಹೋದೆ. ಈಗ ಹೀಗೆ ತೀರ್ಮಾನಿಸಿದ್ದೇನೆ. ಈ ಪುಸ್ತಕದಲ್ಲಿರುವ ಇಂತಹ ಅಪರೂಪದ ಪ್ರಸ್ತಾಪಗಳನ್ನು ಈ ಬ್ಲಾಗ್‌ನಲ್ಲಿ ಇನ್ನು ಮೂರ್ನಾಲ್ಕು ದಿನಗಳ ಕಾಲ ಪರಿಚಯಿಸಬೇಕು. ಒಳ್ಳೆಯ ಮನುಷ್ಯನೊಬ್ಬನಿಗೆ ಇರಬೇಕಾದ ಕನಿಷ್ಠ ಜವಾಬ್ದಾರಿ ಮತ್ತು ಸಜ್ಜನಿಕೆಯ ಎಚ್ಚರಿಕೆಗೆ, Introspectionಗೆ, ಇದು ಸಹಕಾರಿ ಎಂದು ನನಗನ್ನಿಸಿದೆ. ನಮ್ಮ ದೇಶದ ಸಜ್ಜನಿಕೆಯ ನಿಜಗುಣ (ಕಾಲಕಾಲಕ್ಕೆ ಹತವಾಗಿ, ಗತವಾಗಿ, ಭ್ರಷ್ಟವಾಗಿದ್ದರೂ) ಈ ಘಟನೆಗಳಲ್ಲಿದೆ ಎಂದು ನನಗನ್ನಿಸಿದೆ. ಹಳೆಯ ಉತ್ತಮೋತ್ತಮ ಆದರ್ಶ ಘಟನೆಗಳನ್ನು Nostalgic ಆಗದೆಯೂ ನಾವು ಜ್ಞಾಪಿಸಿಕೊಳ್ಳುವಂತಾಗಬೇಕು. ರೂಢಿಸಿಕೊಳ್ಳುವಂತಾಗಬೇಕು.

ಮುಂಬಯಿಯ ಘಟನೆಯ ಹಸಿಬಿಸಿ ಸಮಯ ಇದು. These are communally charged times. ಅದಕ್ಕಾಗಿ ಮೊದಲಿಗೆ ಪ್ರಭುಶಂಕರರು ಬರೆದಿರುವ "ಗುರುಬಂಧು ತ.ಸು. ಶಾಮರಾಯರು" ಲೇಖನದ ಒಂದೆರಡು ಘಟನೆ ಪ್ರಸ್ತಾಪಿಸುತ್ತೇನೆ. ಕುವೆಂಪುರವರು ತಮ್ಮ "ಶ್ರೀರಾಮಾಯಣ ದರ್ಶನಂ" ಕಾವ್ಯವನ್ನು ಅರ್ಪಿಸಿದ್ದು ತಮ್ಮ ಗುರುಗಳಾದ ಕನ್ನಡದ ಚೇತನ ತಳುಕಿನ ವೆಂಕಣ್ಣಯ್ಯನವರಿಗೆ. ವೆಂಕಣ್ಣಯ್ಯನವರ ತಮ್ಮ ಶಾಮರಾಯರು. ರಾಷ್ಟ್ರಕವಿ ಕುವೆಂಪುರವರ ನಿಷ್ಠುರ ಮತ್ತು ಪ್ರೀತಿಪಾತ್ರ ಸ್ನೇಹಿತರಾಗಿದ್ದ ಸಾಹಿತಿ. ಮೈಸೂರಿನಲ್ಲಿ "ರಾಷ್ಟ್ರಕವಿ" ಜಿ.ಎಸ್.ಶಿವರುದ್ರಪ್ಪ, ಡಾ. ಪ್ರಭುಶಂಕರರಂತಹ ಸಾಹಿತಿಗಳ ಗುರುಗಳಾಗಿದ್ದವರು. ಹಾಗೆಯೆ ನಜೀರ್(ನೀರ್)ಸಾಬ್ ಮತ್ತು ಬಂಗಾರಪ್ಪನಂತಹವರಿಗೂ ಗುರುಗಳಾಗಿದ್ದವರು.

ಕರ್ನಾಟಕದ ಮುಖ್ಯಮಂತ್ರಿಯಾಗುವ ಅರ್ಹತೆ, ಚಿಂತನೆ, ಮತ್ತು ಅವಕಾಶಗಳು ಇದ್ದರೂ, ರಾಜಕೀಯ ಅಸಂಗತಗಳಿಂದಾಗಿ ಆಗದೆ ಹೋದ, ಆದರೂ ಕೇವಲ ಗ್ರಾಮೀಣಾಭಿವೃದ್ಧಿ ಸಚಿವರಾಗಿಯೆ ಅಪಾರವಾದ ನಾಡಸೇವೆ ಮಾಡಿದ ಚೇತನ ನಜೀರ್ ಸಾಬ್. ಅವರ ಮತ್ತು ತ.ಸು. ಶಾಮರಾಯರ ನಡುವೆ ನಡೆದ ಘಟನೆ "ನಮನ"ದಲ್ಲಿ ಹೀಗೆ ಉಲ್ಲೇಖವಾಗಿದೆ:
(ಪುಟ 105)
ಸಾಮಾನ್ಯ ಜನರಿಗೆ ನೀರನ್ನು ಒದಗಿಸಲು ಶ್ರಮಿಸಿ, ಬಹುತೇಕ ಆ ಕಾಯಕದಲ್ಲಿ ಯಶಗಳಿಸಿ ನೀರ್‌ಸಾಬ್ ಎಂದೇ ಪ್ರಖ್ಯಾತರಾಗಿದ್ದ ಶ್ರೀ ಅಬ್ದುಲ್ ನಜೀರ್‌‍ಸಾಬರು, ಶ್ರೀ ರಾಮಕೃಷ್ಣ ಹೆಗ್ಗಡೆಯವರ ಮಂತ್ರಿಮಂಡಲದಲ್ಲಿ ಒಬ್ಬರು ಮಂತ್ರಿ. ಅವರು ಶಾಮರಾಯರ ಪರಮಭಕ್ತರಲ್ಲೊಬ್ಬರು. ಅವರು ಮಂತ್ರಿಯಾದ ಬಳಿಕ ನಡೆದ ಘಟನಾವಳಿಯನ್ನು ಶ್ರೀ. ನ. ಸುಬ್ರಹ್ಮಣ್ಯ ಅವರು ಹೀಗೆ ವರ್ಣಿಸಿದ್ದಾರೆ:

"ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ತಮ್ಮ ಗುರುವಿನ ಆಶೀರ್ವಾದ ಪಡೆಯಲು ಅವರು (ಶ್ರೀ ನಜೀರ್‍ಸಾಬ್) ಚಡಪಡಿಸಿದರು. ಶಾಮರಾಯರು ಆಗ ಗುಬ್ಬಿಯಲ್ಲಿ ಚಿದಂಬರಾಶ್ರಮದಲ್ಲಿದ್ದರು. ಮಾರನೆಯ ದಿನ ಅವರು ಬೆಂಗಳೂರಿಗೆ ಬರುತ್ತಾರೆಂದೂ ಮಿತ್ರರೊಬ್ಬರ ಮನೆಯಲ್ಲಿ ಉಳಿದುಕೊಳ್ಳುತ್ತಾರೆಂದೂ ನಜೀರ್ ಸಾಬರಿಗೆ ತಿಳಿಯಿತು. ಬಂದಕೂಡಲೆ ತಮಗೆ ತಿಳಿಸಬೇಕೆಂದು ಆ ಅತಿಥೇಯರಿಗೆ ನಜೀರ್‌ಸಾಬ್ ಸೂಚನೆ ಕೊಟ್ಟರು. ಮಾರನೆಯ ದಿನ ಬೆಂಗಳೂರಿಗೆ ಬಂದ ಶಾಮರಾಯರು ನಜೀರ್‌ಸಾಬ್ ಸೂಚನೆ ತಿಳಿದೊಡನೆ ಸ್ವಯಂ ನಜೀರ್‍ಸಾಬರಿಗೆ ಫೋನ್ ಮಾಡಿ ಅಭಿನಂದನೆ ತಿಳಿಸಿದರು. ಯಾವುದೋ ಮೀಟಿಂಗ್ ನಡೆಸುತ್ತಿದ್ದ ನಜೀರ್‌ಸಾಬರು ಅದನ್ನು ಅಷ್ಟಕ್ಕೆ ಮುಕ್ತಾಯಗೊಳಿಸಿ ಓಡಿಬಂದರು. ಗೇಟಿನ ಬಳಿ ಶಿಷ್ಯನನ್ನು ಸ್ವಾಗತಿಸಲು ನಿಂತಿದ್ದ ತ.ಸು. ಶಾಮರಾಯರನ್ನು ಕಂಡೊಡನೆ ಕಾರಿಳಿದು ಧಾವಿಸಿ ಬಂದು ಕಾಲಿಗೆರಗಿದರು. ಸಂತೋಷದ ಅಮಲಿನಲ್ಲಿ ಗುರುವನ್ನು ಗಟ್ಟಿಯಾಗಿ ಅಪ್ಪಿಕೊಂಡರು. ಕಾರಿನಲ್ಲಿದ್ದ ಸಿಬ್ಬಂದಿ, ರಸ್ತೆಯಲ್ಲಿ ನೋಡುತ್ತಿದ್ದ ಜನ ಯಾರೂ ಅವರಿಬ್ಬರ ಪ್ರೀತಿ ವಿಶ್ವಾಸಗಳಿಗೆ ಅಡ್ಡಿ ಬರುವಂತಿರಲಿಲ್ಲ.

"ಮನೆಯೊಳಕ್ಕೆ ಹೋದಮೇಲೂ ನಜೀರ್‌ಸಾಬರ ಭಾವಾವೇಶ ಕಡಮೆಯಾಗಿರಲಿಲ್ಲ. ಸಾರ್, ತಮ್ಮ ಆಶೀರ್ವಾದದಿಂದ ನಾನು ಮಂತ್ರಿಯಾದೆ. ನನ್ನಿಂದ ತಮಗೆ ಏನಾಗಬೇಕು, ತಿಳಿಸಿ ಸಾರ್. ನಾನು ತಮಗೆ ಏನು ಕೊಡಲಿ?"

"ಆನಂದಾಶ್ರು ತುಂಬಿದ ಗುರು, 'ನಾನು ಕೇಳಿದುದನ್ನು ಕೊಡುತ್ತೀಯಾ?'"

"ಹೂಂ - ಕೊಟ್ಟೆ"

"ಹಾಗಾದರೆ ನಿನಗೆ ಅಧಿಕಾರ ಇರುವಾಗ ನಾಲ್ಕು ಜನಕ್ಕೆ ಒಳ್ಳೆಯದನ್ನು ಮಾಡುವೆನೆಂದು ನನಗೆ ಮಾತು ಕೊಡು."

ತಕ್ಷಣ ನಜೀರ್‌ಸಾಬ್ ತ.ಸು. ಶಾಮರಾಯರ ಬಲಗೈಯೆತ್ತಿ ತಮ್ಮ ತಲೆಯ ಮೇಲಿಟ್ಟುಕೊಂಡು "ಹಾಗೇ ಮಾಡ್ತೀನಿ ಸಾರ್, ಆಶೀರ್ವಾದ ಮಾಡಿ" ಎಂದರು. "ನಿನಗೆ ಆಶೀರ್ವಾದ ಮಾಡಬೇಕೇನೋ ಮಗು, ನನ್ನ ಆಶೀರ್ವಾದ ನಿನಗೆ ಸದಾ ಇದ್ದೇ ಇದೆ" ಎಂದರು ಗುರು.

"ಅನಂತರ ನಜೀರ್‌ಸಾಬ್ ಕರ್ನಾಟಕದ ಜನರ ಬತ್ತಿದ ಗಂಟಲನ್ನು ತಣಿಸಿ ಹೇಗೆ ನುಡಿದಂತೆ ನಡೆದರೆಂಬುದನ್ನು ನಾಡಜನರೇ ಬಲ್ಲರು."

ನ. ಸುಬ್ರಹ್ಮಣ್ಯ ಅವರೇ ಮತ್ತೊಂದು ಘಟನೆಯನ್ನು ದಾಖಲು ಮಾಡಿದ್ದಾರೆ:

"ಇತ್ತೀಚೆಗೆ ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವುದಕ್ಕೆ ಪೂರ್ವಭಾವಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅಲ್ಲಿನ ಟೌನ್ ಹಾಲಿನಲ್ಲಿ ಸಭೆಯೊಂದನ್ನು ನಡೆಸಿತು. ತ.ಸು. ಶಾಮರಾಯರು ಆಹ್ವಾನಿತರಾಗಿ ಬಂದು ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದರು. ಸಭೆಗೆ ಬಂದಿದ್ದ ಹಲವು ಶಿಷ್ಯರು ಅವರ ಬಳಿ ಬಂದು ಯೋಗಕ್ಷೇಮ ವಿಚಾರಿಸಿ ಹೋದರು. ಆಗ ಎಡಬದಿಯಿಂದ ಒಬ್ಬರು ಬಂದು ಕಾಲುಮುಟ್ಟಿ ನಮಸ್ಕರಿಸಿದರು. ದೃಷ್ಟಿ ಪಾಟವನ್ನು ಕಳೆದುಕೊಂಡಿದ್ದ ತ.ಸು. ಶಾಮರಾಯರು 'ಯಾರೋ ನೀನು?' ಎಂದರು.

(ಶಿಷ್ಯರನ್ನು ಏಕವಚನದಲ್ಲಿ ಸಂಬೋಧಿಸುವುದೇ ಅವರ ಅಭ್ಯಾಸ. ಅದು ಅವರ ಆತ್ಮೀಯತೆಯ ದ್ಯೋತಕ. ಆ ಆತ್ಮೀಯತೆಗೆ ಪಾತ್ರರಾದವರು ತಮ್ಮನ್ನು ಧನ್ಯರೆಂದು ತಿಳಿಯುತ್ತಿದ್ದರು. ಏಕವಚನದ ಆತ್ಮೀಯತೆ ದೊರೆಯದವರು ತಮ್ಮನ್ನು ನತದೃಷ್ಟರೆಂದು ಕೊಳ್ಳುತ್ತಿದ್ದರು.)

ನಮಸ್ಕರಿಸಿದ ವ್ಯಕ್ತಿ 'ನಾನು ಸಾರ್. ತಮ್ಮ ಶಿಷ್ಯ ಬಂಗಾರಪ್ಪ' ಎಂದರು. ತ.ಸು.ಶಾ. ತುಂಬ ಅಭಿಮಾನದಿಂದ "ನನ್ನ ವಿದ್ಯಾರ್ಥಿಗಳು ನಾನಾ ಸ್ಥಾನಗಳಲ್ಲಿದ್ದಾರೆ. ಆದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಯಾರೂ ಇರಲಿಲ್ಲ. ನೀನೇ ಮೊದಲಿಗ" ಎಂದರು.

"ಮುಖ್ಯಮಂತ್ರಿ ಸ್ಥಾನ ಏನು ಸಾರ್ ಮೂರು ದಿನದ್ದು. ಗುರುಗಳ ಬಾಂಧವ್ಯ ನಿರಂತರವಾದದ್ದು" ಎಂದರು.

ಅದಾದ ನಂತರ ಒಂದು ದಿನ ತ.ಸು.ಶಾ. ಅವರ ಮನೆಗೆ ಒಬ್ಬ ಪೋಲೀಸ್ ಅಧಿಕಾರಿ ಬಂದರು. ಅವರು 'ಈ ದಿನ ನಾಲ್ಕು ಗಂಟೆ ವೇಳೆಗೆ ಮುಖ್ಯಮಂತ್ರಿಯವರು ತಮ್ಮ ಮನೆಗೆ ಬರುವುದಾಗಿ ತಿಳಿಸುವಂತೆ ಹೇಳಿದ್ದಾರೆ' ಎಂದರು.

ಮುಖ್ಯಮಂತ್ರಿ ಬಂದರು. ಅವರನ್ನು ಒಳಕ್ಕೆ ಕರೆದೊಯ್ದು ತ.ಸು.ಶಾ. ಒಂದು ಪೀಠವನ್ನು ತೋರಿಸಿ "ಕುಳಿತುಕೊಳ್ಳಿ ಸಾರ್" ಎಂದರು.

ಕೂಡಲೇ ಮುಖ್ಯಮಂತ್ರಿ ಹೌಹಾರಿ "ಕೂತುಕೋ ಬಂಗಾರಪ್ಪ ಅನ್ನಿ ಸಾರ್, ಈ ಕುರ್ಚಿ ತಮ್ಮ ಪೀಠ, ತಾವು ಇಲ್ಲಿ ಕುಳಿತುಕೊಳ್ಳಬೇಕಾದದ್ದು. ನಾನು ಬೇರೆ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತೇನೆ" ಎಂದರು.

ಬಂಗಾರಪ್ಪ ತಮ್ಮ ಸಿಬ್ಬಂದಿಯತ್ತ ಕೈನೀಡಿ ಶಾಲು ಪಡೆದು ಗುರುಗಳಿಗೆ ಹೊದಿಸಿ, ದೊಡ್ಡ ಹರಿವಾಣದಲ್ಲಿ ಜೋಡಿಸಿದ ಹಣ್ಣುಗಳನ್ನರ್ಪಿಸಿ ಕಾಲಿಗೆ ನಮಸ್ಕರಿಸಿದರು. ಅನಂತರ ಗುರುಪತ್ನಿಗೆ ಒಂದು ರೇಷ್ಮೆಯ ಸೀರೆ, ಕುಪ್ಪಸ ಅರ್ಪಿಸಿ ಕಾಲಿಗೆರಗಿದರು."

ಇಷ್ಟನ್ನು ನಿರೂಪಿಸಿ ಸುಬ್ರಹ್ಮಣ್ಯ ಕೇಳುತ್ಟಾರೆ: "ಈ ಬಗೆಯ ಗುರುಶಿಷ್ಯಬಾಂಧವ್ಯ ಈ ಕಾಲದಲ್ಲಿ ಎಲ್ಲಿ ದೊರಕೀತು?"

ಕೃಪೆ:
"ನಮನ" - ಡಾ. ಪ್ರಭುಶಂಕರ
ಪ್ರಕಾಶಕರು: ವಿ.ಸೀ.ಸಂಪದ - ಬೆಂಗಳೂರು



ಸರಣಿಯ ಎರಡನೆಯ ಲೇಖನ: ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...

ಮೂರನೆಯದು: ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು

ನಾಲ್ಕನೆಯದು: ಕುವೆಂಪು ವಿರುದ್ಧ ದೇವುಡು ಪಿತೂರಿ ಮತ್ತು ಅಂತರ್ಜಾತಿ ವಿವಾಹ

1 comment:

Anonymous said...

ತಲ್ಲಣಗಳ ಈ ಸಮಯದಲ್ಲಿ ನಿಜವಾಗಿಯು ಬೇಕಾದ ಸಜ್ಜನಿಕೆ ಮತ್ತು ಪ್ರೀತಿಯನ್ನ ಹೃದಯ ಮುಟ್ಟುವಂತೆ ತೆರೆದಿಡುವ ಲೇಖನಕ್ಕೆ ಧನ್ಯವಾದಗಳು.

-ಬಾಲಕೃಷ್ಣ