(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮೇ 4, 2007 ರ ಸಂಚಿಕೆಯಲ್ಲಿನ ಲೇಖನ)
ಕಳೆದ ಗಾಂಧಿ ಜಯಂತಿಯಂದು ಮತಿಗೆಟ್ಟವನೊಬ್ಬ ಬಂದೂಕು ಹಿಡಿದು ನಾಗರಿಕ ಸಮಾಜದ ಎಲ್ಲಾ ರೀತಿಯ ಆಮಿಷಗಳನ್ನು ನಿರಾಕರಿಸಿ ಬದುಕುತ್ತಿರುವ ಅಮೇರಿಕದಲ್ಲಿನ ಆಮಿಷ್ ಜನರ ಶಾಲೆಯೊಂದಕ್ಕೆ ನುಗ್ಗಿ 6 ರಿಂದ 13 ವರ್ಷ ವಯಸ್ಸಿನ 5 ಜನ ಹೆಣ್ಣು ಮಕ್ಕಳನ್ನು ಕೊಂದ ಬಗ್ಗೆ ಬರೆದ ಲೇಖನದಲ್ಲಿ ಹೀಗೆ ಬರೆದಿದ್ದೆ:
"ಬಂದೂಕು ಹೊಂದಿರುವುದು ಹೆಮ್ಮೆ ಮತ್ತು ಹಕ್ಕು ಎನ್ನುವ ಅಮೇರಿಕಾದಲ್ಲಿನ ಸಂಸ್ಕೃತಿಯಿಂದಾಗಿ ಕೆಲವೊಂದು ಮತಿಗೆಟ್ಟ ವಿಕೃತ ಮನಸ್ಸಿನ ಹುಡುಗರು ಹಾಗು ವಯಸ್ಕರು ಸುಲಭವಾಗಿ ಸಿಕ್ಕುವ ಗನ್ ಹಿಡಿದು ಆಗಾಗ್ಗೆ ಶಾಲೆ ಕಾಲೇಜುಗಳಿಗೆ ನುಗ್ಗಿ ಗುಂಡು ಹಾರಿಸಿ ಬೇರೆಯವರನ್ನು ಸಾಯಿಸುತ್ತಿರುತ್ತಾರೆ. ಕೊಲರ್‍ಯಾಡೊ ರಾಜ್ಯದ ಕೊಲಂಬೈನ್ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಏಪ್ರಿಲ್ 20, 1999 ರಂದು ತಮ್ಮ ಶಾಲೆಗೆ ನುಗ್ಗಿ ೧೨ ಜನ ವಿದ್ಯಾರ್ಥಿಗಳನ್ನು ಹಾಗು ಒಬ್ಬ ಉಪಾಧ್ಯಾಯರನ್ನು ಕೊಂದಿದ್ದು ತಮ್ಮ ದೇಶದಲ್ಲಿನ ಬಂದೂಕು ಸಂಸ್ಕೃತಿಯ ಬಗ್ಗೆ ಇಲ್ಲಿನ ಜನ ಗಂಭೀರವಾಗಿ ಚಿಂತಿಸುವಂತೆ ಮಾಡಿತ್ತು. ಆ ಘಟನೆಯ ಹಿನ್ನೆಲೆಯಲ್ಲಿ ಮೈಕೆಲ್ ಮೂರ್ ತೆಗೆದ 'ಬೌಲಿಂಗ್ ಫಾರ್ ಕೊಲಂಬೈನ್' ಸಾಕ್ಷ್ಯಚಿತ್ರ ಆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದದ್ದಲ್ಲದೆ ಅನೇಕ ಚರ್ಚೆಗಳನ್ನು ಹುಟ್ಟಿಹಾಕಿತ್ತು. ಇದೇ ಗಾಂಧಿ ಜಯಂತಿಯಂದು ಆದ ಮೇಲೆ ವಿವರಿಸಿದ ರಕ್ತಪಾತ ಮತ್ತೊಮ್ಮೆ ಅಂತಹ ಚರ್ಚೆಯನ್ನು ಹುಟ್ಟುಹಾಕಿರುವುದಲ್ಲದೆ ಇಡೀ ಅಮೇರಿಕಕ್ಕೆ ತಮ್ಮ ಪಾಡಿಗೆ ತಾವಿದ್ದ ಒಂದು ವಿಶಿಷ್ಟ ಪಂಗಡದ ಪರಿಚಯವನ್ನು ದೊಡ್ಡ ರೀತಿಯಲ್ಲಿ ಮಾಡಿಸುತ್ತಿದೆ."
ಮೇಲಿನ ಘಟನೆ ಆಗಿ ಆರು ತಿಂಗಳು ಆಗಿದೆ. ಈಗ ಒಬ್ಬನೆ ಒಬ್ಬ ವ್ಯಕ್ತಿ ಕೈಗೊಳ್ಳುವ ಇಂತಹ ಸಮೂಹ ಕಗ್ಗೊಲೆಗಳ ವಿಷಯದಲ್ಲಿ ವಿಕೃತವಾಗಿ ಇನ್ನೊಬ್ಬ ವಿಕೃತ ದಾಖಲೆ ಬರೆದಿದ್ದಾನೆ. ಇನ್ನೂ ದಕ್ಷಿಣ ಕೊರಿಯಾದ ಪ್ರಜೆಯಾಗಿದ್ದ, ಆದರೆ ಕಳೆದ 15 ವರ್ಷದಿಂದ ಅಮೇರಿಕದಲ್ಲಿಯೇ ವಾಸವಿದ್ದ, ತನ್ನ ಸ್ನಾತಕ ಪದವಿಗಾಗಿ ಇಂಗ್ಲಿಷ್ ಮೇಜರ್ ಓದುತ್ತಿದ್ದ ಆತನ ಹೆಸರು ಸ್ಯೂಂಗ್-ಹ್ಯಿ ಛೊ. ಮೊನ್ನೆ ಏಪ್ರಿಲ್ 16 ರಂದು ಬೆಳ್ಳಂಬೆಳಿಗ್ಗೆ 7:15 ಕ್ಕೆ ಅಮೇರಿಕಾದ ಪೂರ್ವ ಭಾಗದಲ್ಲಿರುವ ವರ್ಜೀನಿಯ ತಾಂತ್ರಿಕ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ಗೆ ನುಗ್ಗಿ ಒಂದು ಹೆಣ್ಣು ಮತ್ತು ಒಂದು ಗಂಡು ವಿದ್ಯಾರ್ಥಿಯನ್ನು ಗುಂಡಿಟ್ಟು ಕೊಂದಿದ್ದಾನೆ. ತಕ್ಷಣ ತನ್ನ ರೂಮಿಗೆ ಹೋಗಿ, ತನ್ನ ಅನೇಕ ಚಿತ್ರಗಳಿರುವ, ತನ್ನನ್ನು ಏಸು ಕ್ರಿಸ್ತನಿಗೆ ಸಮೀಕರಿಸಿಕೊಂಡ, ಶ್ರೀಮಂತಿಕೆ ಮತ್ತು ಲೋಲುಪ್ತ ಮನಸ್ಸಿನ ಜನರ ವಿರುದ್ದ ದೊಡ್ಡ ಭಾಷಣ ಬಿಗಿದ ವಿಡಿಯೊ ತಯಾರಿಸಿ, ತನ್ನ ಇತರ ಬರವಣಿಗೆಗಳ ಪಾರ್ಸೆಲ್ ತೆಗೆದುಕೊಂಡು 9 ಗಂಟೆ ಸುಮಾರಿಗೆ ನ್ಯೂಯಾರ್ಕಿನ NBC ಟಿವಿ ವಿಳಾಸಕ್ಕೆ ಅಂಚೆಗೆ ಹಾಕಿದ್ದಾನೆ.
ನಂತರ ಈ ಹುಚ್ಚ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಸೈನ್ಸ್ ಮತ್ತು ಮೆಕ್ಯಾನಿಕ್ಸ್ ವಿಭಾಗದ ಕಟ್ಟಡಕ್ಕೆ ಹೋಗಿ, ಒಳಗಿನಿಂದ ಹೆಬ್ಬಾಗಿಲಿಗೆ ಚೈನುಗಳನ್ನು ಸುತ್ತಿ, ಸಿಕ್ಕ ಸಿಕ್ಕ ತರಗತಿಗಳಿಗೆ ನುಗ್ಗಿ ವಿದ್ಯಾರ್ಥಿಗಳತ್ತ, ಅಧ್ಯಾಪಕರತ್ತ ಗುಂಡು ಹಾರಿಸಿದ್ದಾನೆ. ಪೀಚಲು ದೇಹದ, ಕುಳ್ಳಗಿನ, ದೈಹಿಕವಾಗಿ ಬಲಶಾಲಿಯಲ್ಲದ, ಅದೇ ತರಗತಿಗಳಲ್ಲಿದ್ದ ಯಾವುದಾದರೂ ಯೂರೋಪಿಯನ್ ಮೂಲದ ಬಲಿಷ್ಠ ಅಮೇರಿಕನ್ ಹುಡುಗಿಯೊಬ್ಬಳು ಅನಾಮತ್ತಾಗಿ ನೆಲಕ್ಕೊಗೆಯಬಲ್ಲಷ್ಟು ದುರ್ಬಲನಾದ ಈತನಿಗೆ ಅಷ್ಟು ಶಕ್ತಿ ಬಂದದ್ದು ಅವನ ಕೈಯಲ್ಲಿದ್ದ 9mm, semi-automatic Glock ಪಿಸ್ತೂಲ್‌ನಿಂದಾಗಿ ಮಾತ್ರ. ಕೆಲವೇ ನಿಮಿಷಗಳಲ್ಲಿ ಐದಾರು ತರಗತಿಗಳಿಗೆ ನುಗ್ಗಿ ಈತನು ಹಾರಿಸಿರಬಹುದಾದ ಗುಂಡುಗಳು ಸುಮಾರು 175 ರಿಂದ 225 ಎಂದು ಅಂದಾಜು. ಫ಼್ರೆಂಚ್ ಭಾಷಾ ತರಗತಿಯೊಂದರಲ್ಲೆ 11 ಜನ ಸತ್ತರೆ, ಜರ್ಮನ್ ಭಾಷಾ ತರಗತಿಯಲ್ಲಿ ಬದುಕುಳಿದವರು ಕೇವಲ 4 ಜನ. ಇವನ ಎಷ್ಟು ನೇರವಾಗಿ, ಹತ್ತಿರದಿಂದ ಗುಂಡು ಹೊಡೆದಿದ್ದಾನೆಂದರೆ, ಕೆಲವೇ ಹೊತ್ತಿನಲ್ಲಿ 30 ಜನರ ಪ್ರಾಣ ತೆಗೆದಿದ್ದಾನೆ. ಕೊನೆಗೆ ಪೋಲಿಸರು ಬರುವಷ್ಟರಲ್ಲಿ ತನಗೆ ತಾನೆ ಗುಂಡು ಹೊಡೆದುಕೊಂಡು ಸತ್ತಿದ್ದಾನೆ. ಕೊಲೆಗಡುಕನನ್ನೂ ಸೇರಿಸಿಕೊಂಡು ಅಂದು ಸತ್ತವರು ಒಟ್ಟು 33 ಜನ.
ವರ್ಜೀನಿಯ ಟೆಕ್ ಯೂನಿವರ್ಸಿಟಿ ಸುಮಾರು 26000 ಜನ ವಿದ್ಯಾರ್ಥಿಗಳು ಇರುವ, 2600 ಎಕರೆಗಳಲ್ಲಿ ಹರಡಿರುವ ಬಹುದೊಡ್ಡ ಕ್ಯಾಂಪಸ್. ಈ ವಿಶ್ವವಿದ್ಯಾಲಯದಲ್ಲಿ ಓದುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೆ 700. ಇಷ್ಟು ದೊಡ್ಡ ಹತ್ಯಾಕಾಂಡದ ನೋವು ಭಾರತಕ್ಕೂ ನೇರವಾಗಿ ತಟ್ಟಿದ್ದು ನಿಜ. ಈ ಕಗ್ಗೊಲೆಗೆ ಮಿನಾಲ್ ಪಾಂಚಾಲ್ ಎಂಬ ಮುಂಬಯಿಯ ಹುಡುಗಿ ಮತ್ತು ಲೋಗನಾಥನ್ ಎಂಬ ಪ್ರೊಫೆಸರ್ ಸಹ ಬಲಿಯಾಗಿದ್ದಾರೆ. ಇಡೀ ಕಗ್ಗೊಲೆಯಲ್ಲಿ ಆ ಮಾನಸಿಕ ಅಸ್ವಸ್ಥನ ತಪ್ಪನ್ನು ಬಿಟ್ಟರೆ ಮಿಕ್ಕ ಯಾರಲ್ಲೆ ಆಗಲಿ ತಪ್ಪು ಹುಡುಕುವುದು ಕಷ್ಟ. ಯಾರು ಯಾವಾಗ ಎಲ್ಲೆಲ್ಲಿ ಇರಬೇಕಿತ್ತೊ ಆ ಜಾಗದಲ್ಲಿ ಪಾಠ ಮಾಡುತ್ತಲೊ, ಓದುತ್ತಲೊ, ಕೇಳುತ್ತಲೊ ಇದ್ದರು. ತಮ್ಮ ಪಾಡಿಗೆ ತಾವಿದ್ದವರನ್ನು ಗುರುತು ಪರಿಚಯವಿಲ್ಲದ ಅಪರಿಚಿತನೊಬ್ಬ ಹುಚ್ಚುಚ್ಚಾಗಿ ಗುಂಡು ಹಾರಿಸಿ ಸಾಯಿಸಿದ. ಆ ಜಾಗದಲ್ಲಿದ್ದವರು ಬೇರೆ ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ.
ಈಗ ಅಮೇರಿಕದಲ್ಲಿ ಮತ್ತೆ ಬಂದೂಕು ನಿಯಂತ್ರಣದ ವಿಷಯ ಚರ್ಚೆಗೆ ಬಂದಿದೆ. ಆದರೆ ಇಲ್ಲಿನ ಬಲಪಂಥೀಯರು ಗನ್ನು ಹೊಂದಿರುವುದನ್ನು ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯದ ಸಿದ್ಧಾಂತದ ಮಟ್ಟಕ್ಕೆ ಏರಿಸಿಬಿಟ್ಟಿರುವುದರಿಂದ ರಾಜಕಾರಣಿಗಳಿಗೂ ಅದನ್ನು ವಿರೋಧಿಸುವುದು ಓಟಿನ ಲೆಕ್ಕಾಚಾರದಲ್ಲಿ ಕಷ್ಟ. ಈ ಘಟನೆಯಿಂದಾಗಿ ಈಗ ವಲಸೆ ಬಂದಿರುವವರ ಬಗ್ಗೆಯೂ, ಅವರ ಹಿನ್ನೆಲೆ, ಅವರು ಅನುಭವಿಸುವ ಕೀಳರಿಮೆ ಮತ್ತು ಇಲ್ಲಿನ ಸಮಾಜಕ್ಕೆ ಅಪಾಯಕಾರಿಯಾಗಬಹುದಾದ ಸಾಧ್ಯತೆಗಳ ಬಗ್ಗೆಯೂ ಚರ್ಚೆಯಾಗುತ್ತಿದೆ. ಕೊಲೆಗಡುಕ ದಕ್ಷಿಣ ಕೊರಿಯಾದ ಪ್ರಜೆ ಎಂದು ಕೇಳಿ ದಕ್ಷಿಣ ಕೊರಿಯ ಆಘಾತ ಮತ್ತು ಅವಮಾನವನ್ನು ಅನುಭವಿಸಿತ್ತು. ಇಲ್ಲಿ ವಾಸಿಸುತ್ತಿರುವ ಕೊರಿಯನ್ನರಿಗೂ ಸಹಜವಾಗಿ ಅದೇ ಅನುಭವವಾಗಿರುತ್ತದೆ.
ಕೊಲೆಗಡುಕ ಛೋಗೆ ಬಾಲ್ಯದಲ್ಲಿ ಕೆಲವೊಂದು ಸಮಸ್ಯೆಗಳಿದ್ದವು ಎಂದು ವರದಿಗಳು ಹೇಳುತ್ತವೆ. ಆತನ ವಿಕೃತ ಮತ್ತು ಹಿಂಸಾತ್ಮಕ ಕವನ ಮತ್ತು ಬರಹಗಳನ್ನು ಓದಿ, ಆತನ ಅಧ್ಯಾಪಕರು ಎರಡು ವರ್ಷಗಳ ಹಿಂದೆ ಆತನಿಗೆ ಮಾನಸಿಕ ಚಿಕಿತ್ಸೆ ಪಡೆಯಲು ಹೇಳಿದ್ದರು. ಅದ್ಯಾವುದೂ ಆತನಿಗೆ ನೆರವಾಗಲಿಲ್ಲ. ಈತ ಹೀಗೆ ತನ್ನ ಹುಚ್ಚಾಟಕ್ಕೆ ತಾರ್ಕಿಕ ಅಂತ್ಯ ಕೊಡಲು ಒದ್ದಾಡುತ್ತಿರಬೇಕಾದರೆ, ಈತನಿಗಿಂತ ಎರಡು ವರ್ಷ ದೊಡ್ಡವಳಾದ ಅಕ್ಕ ಅಮೇರಿಕದ ಗೃಹ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಓದಿದ್ದು ಪ್ರತಿಷ್ಠಿತ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ. ಜಾಗತಿಕ ಆರ್ಥಿಕತೆ ಬಗ್ಗೆ ಒಲವು ಬೆಳೆಸಿಕೊಂಡಿದ್ದ ಸನ್-ಕ್ಯೂಂಗ್ ಛೊ ಇಂಟರ್ನಿಯಾಗಿ ಥಾಯ್‌ಲ್ಯಾಂಡ್-ಬರ್ಮಾ ಗಡಿಗೆಲ್ಲಾ ಹೋಗಿ, ಅಲ್ಲಿನ ಕೆಲಸಗಾರರ ಸ್ಥಿತಿಗತಿ ನೋಡಿ ಬಂದಿದ್ದಳು. ಬುದ್ದಿವಂತೆಯಾದ, ನಮ್ರಳಾದ, ಈ ಆಸ್ತಿಕ ಹೆಣ್ಣುಮಗಳು, ತನ್ನ ತಮ್ಮ ಮಾಡಿದ ಕಗ್ಗೊಲೆಗೆ ಕುಟುಂಬದ ಪರವಾಗಿ ಹೇಳಿದ್ದು: "32 ಜನರನ್ನು ಬಲಿ ತೆಗೆದುಕೊಂಡ ಇಂತಹ ಅವಿವೇಕದ, ಭಯಾನಕ ದುರಂತದ ಕುರಿತು ನಮಗಾಗಿರುವ ದು:ಖವನ್ನು ಯಾವ ಪದಗಳೂ ವಿವರಿಸಲು ಅಶಕ್ಯ. ನಮ್ಮ ಹೃದಯ ನುಚ್ಚುನೂರಾಗಿದೆ. ನನ್ನ ತಮ್ಮ ಮೌನ ಸ್ವಭಾವದ, ಸಂಕೋಚದ ಹುಡುಗನಾಗಿದ್ದ; ಅವನು ಇಂತಹ ಹಿಂಸೆ ಮಾಡಲು ಶಕ್ತ ಎಂದು ನಮಗೆ ಎಂದೂ ಊಹಿಸಲಾಗಿರಲಿಲ್ಲ. ಆತ ಪ್ರಪಂಚವೆ ಅಳುವಂತೆ ಮಾಡಿದೆ. ನಾವು ದುಸ್ವಪ್ನವನ್ನು ಬದುಕುತ್ತಿದ್ದೆವೆ. ಈ ಅಂಧಕಾರ ನಮ್ಮನ್ನು ದೀನರನ್ನಾಗಿ ಮಾಡಿದೆ."
No comments:
Post a Comment