Jan 19, 2009

ನಕ್ಸಲ್ ನಾಯಕರಿಂದ ನನ್ನ ಪತ್ರಕ್ಕೆ ಬಂದ ಮಾರೋಲೆ

ಕರ್ನಾಟಕದ ನಕ್ಸಲ್ ನಾಯಕರಿಂದ ಜನವರಿ 4, 2009 ರಂದು ಕರ್ನಾಟಕದ ಹಲವು ಮಾಧ್ಯಮ ಕೇಂದ್ರಗಳಿಗೆ ಮತ್ತು ಕನ್ನಡದ ಹಲವಾರು ಲೇಖಕರಿಗೆ ಇ-ಮೇಯ್ಲ್ ಪತ್ರ ಬಂದಿತ್ತು. ಹಾಗೆ ಅದು ನನಗೂ ಬಂದಿತ್ತು. ಆ ಮೇಯ್ಲ್ ಐಡಿಯಿಂದ ಈ ಮುಂಚೆ ಬಂದಿದ್ದ ಇಂತಹ ಕೆಲವು ಪತ್ರಗಳು ನಕ್ಸಲರಿಂದ ಬಂದ ಅಧಿಕೃತ ಪತ್ರಗಳು ಎಂಬ ರೀತಿಯಲ್ಲಿಯೆ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರಿಂದ ಇದು ನಕ್ಸಲರೇ ಕಳುಹಿಸುತ್ತಿರುವ ಪತ್ರಗಳು ಎಂಬ ನಂಬಿಕೆ ನನಗೂ ಬಂದಿತ್ತು. ಹಾಗಾಗಿಯೆ, ಜನವರಿ 4 ರಂದು ಬಂದ ಪತ್ರಕ್ಕೆ ನಾನು ಪ್ರತಿಯಾಗಿ ಒಂದು ಪತ್ರವನ್ನು ಅಂದೇ ಬರೆದೆ. ಜೊತೆಗೆ ಅದನ್ನು ಆ ಇಮೇಯ್ಲ್ ಗುಂಪಿನಲ್ಲಿದ್ದ ಎಲ್ಲರಿಗೂ ’cc’ ಮಾಡಿದ್ದೆ. ನಾಡಿನ ಇಬ್ಬರು ಖ್ಯಾತ ಲೇಖಕರು ನನ್ನ ಪತ್ರಕ್ಕೆ ಪೂರಕವಾಗಿ ಸ್ಪಂದಿಸಿ ನಿಮ್ಮ ಅಭಿಪ್ರಾಯಕ್ಕೆ ನಮ್ಮ ಬೆಂಬಲವೂ ಇದೆ ಎಂಬ ರೀತಿಯಲ್ಲಿ ಇಮೇಯ್ಲ್‌ನಲ್ಲಿ ಪ್ರತಿಕ್ರಿಯಿಸಿದ್ದರು. ದೇಸೀ ಮಾತು ಬ್ಲಾಗಿನ ದಿನೇಶ್ ಕುಮಾರ್ ಅದನ್ನು ತಮ್ಮ "ಇಂದು ಸಂಜೆ" ಪತ್ರಿಕೆಯಲ್ಲಿ ಪ್ರಕಟಿಸಿರುವುದಾಗಿ ಇಮೇಯ್ಲ್ ಕಳುಹಿಸಿದ್ದರು. (ಈ ಮುಂಚೆ ನನಗೆ ಅವರ ಪರಿಚಯ ಇರಲಿಲ್ಲ.)

ಅಂದು ನಾನು ಬರೆದಿದ್ದ "ಕರ್ನಾಟಕದ ನಕ್ಸಲ ನಾಯಕರಿಗೆ ಒಂದು ಪತ್ರ " ಇಲ್ಲಿದೆ.

http://amerikadimdaravi.blogspot.com/2009/01/blog-post.html

ನನ್ನ ಈ ಪತ್ರವನ್ನು ಕನ್ನಡದ ದೈನಿಕ "ವಾರ್ತಾ ಭಾರತಿ" ಯವರೂ ಪ್ರಕಟಿಸಿದ್ದರಂತೆ. ನನಗೆ ಗೊತ್ತಿರಲಿಲ್ಲ. ಇಂದು ಗೊತ್ತಾಯಿತು; ಈಗ ತಾನೆ ನಕ್ಸಲ್ ನಾಯಕರಿಂದ ನನ್ನ ಪತ್ರಕ್ಕೆ ಬಂದ ಮಾರುಪತ್ರದ ಮೂಲಕ. ಅವರು ಇಂದು ಕಳುಹಿಸಿದ ಪತ್ರದ ಪೂರ್ಣ ಪಾಠ ಇದು.



ganga_dhara2007 @ rediffmail.com ಇಂದ ಬಂದ ಇಮೇಯ್ಲ್ ಮತ್ತು ಲಗತ್ತಿಸಿದ ಪತ್ರ:

Dear sir,struggle greetings.

We are sending this response as attachments to Mr,ravikrishna reddy's letter to our party dated 6th or 7 th of this january.Which was also published in 'vaartha bharathi' kannada news paper.

We are sending this with warm regards.

yours in struggle
gangadhara


ಪ್ರಿಯ ರವಿಕೃಷ್ಣ ರೆಡ್ಡಿಯವರಿಗೆ, ಶುಭಾಶಯಗಳು.

ನೀವು ಇ-ಮೇಲ್ ಮೂಲಕ ನಮಗೂ ಸೇರಿದಂತೆ ಹಲವರಿಗೆ ಕಳುಹಿಸಿದ ಪತ್ರ ನೋಡಿದೆ. ಅದು ’ವಾರ್ತಾಭಾರತಿ’ ಕನ್ನಡ ದೈನಿಕದಲ್ಲೂ ಪ್ರಕಟವಾದ್ದನ್ನು ನಂತರ ಗಮನಿಸಿದ್ದೇವೆ. ನಿಮಗೆ ಕೂಡಲೇ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಈಗ ತಡವಾಗಿ ಅದನ್ನು ಮಾಡುತ್ತಿದ್ದೇವೆ. ಹಾಗೇ ತಡವಾಗಿರುವುದಕ್ಕೆ ಕ್ಷಮೆಯಿರಲಿ. ತಮ್ಮ ರೈತ ಹಿನ್ನೆಲೆ ಹಾಗೂ ಪ್ರಸ್ತುತ ಕಾರ್ಮಿಕನಾಗಿ ಊಟ ಸಂಪಾದಿಸುತ್ತಿರುವುದು, ಮಾನವ ಸಮಾಜ ಸಮಾನತೆ ಸರ್ವೋದಯವನ್ನು ಸಾಧಿಸಬೇಕೆಂಬ ತಮ್ಮ ಆಶಯಗಳನ್ನು ನಾವು ಎತ್ತಿ ಹಿಡಿಯುತ್ತೇವೆ. ಸತ್ಯ, ಶ್ರಮ, ಪ್ರಜಾಪ್ರಭುತ್ವ ಹಾಗೂ ಮಾನವತೆಯಲ್ಲಿ ತಮಗಿರುವ ನಂಬಿಕೆ ಬಗ್ಗೆ ನಮಗೆ ತುಂಬು ಗೌರವವಿದೆ.

(ಹೇಡಿತನವಲ್ಲದ) ಅಹಿಂಸಾತ್ಮಕ ಹೋರಾಟ ಹಾಗೂ ಅಹಿಂಸೆಯಲ್ಲಿ ತಮಗಿರುವ ನಂಬಿಕೆಗಳನ್ನು ಹಾಗೂ ನಮ್ಮೊಂದಿಗೆ ತಮಗಿರುವ ಭಿನ್ನಾಭಿಪ್ರಾಯವನ್ನು ಗೌರವಿಸುತ್ತಲೇ ನಮ್ಮ ಕೆಲವು ಅಭಿಪ್ರಾಯಗಳನ್ನು ಬರೆಯುತ್ತಿದ್ದೇವೆ.

ಮಾನವ ಸಮಾಜ ಬೆಳೆದು ಬಂದಿರುವ ಪ್ರಕ್ರಿಯೆಗಳನ್ನು ನಾವು ನೋಡುವುದಾದರೆ ಪ್ರಪಂಚದ ಯಾವುದೇ ನಿರ್ಣಾಯಕ ಸಾಮಾಜಿಕ ಬದಲಾವಣೆಗಳು ಅಹಿಂಸಾತ್ಮಕವಾಗಿ ಜರುಗಿಲ್ಲದಿರುವುದನ್ನು ಕಾಣುತ್ತಿದ್ದೇವೆ. ಅಸ್ತಿತ್ವದಲ್ಲಿದ್ದ ಆಯಾ ಕಾಲಘಟ್ಟದ ಹಿಂಸಾತ್ಮಕ ಶೋಷಕ ವ್ಯವಸ್ಥೆ ಮತ್ತದರ ಆಳುವ ವರ್ಗಗಳನ್ನು ಕಿತ್ತೊಗೆಯಬೇಕಾಗಿ ಬಹುಸಂಖ್ಯಾತ ಶೋಷಿತ (ಅಂದರೆ ಅಂತಹ ವ್ಯವಸ್ಥೆಯಿಂದ ನಲುಗುತ್ತಿರುವ ಎಲ್ಲರೂ) ಜನಸಮುದಾಯ ಭಾವಿಸಿದಾಗ ತಮ್ಮ ಸಂಘಟಿತ ಬಲವನ್ನು ಪ್ರಯೋಗಿಸುತ್ತಾ ನಿರ್ಣಾಯಕ ಬದಲಾವಣೆಗಳನ್ನು ತರುತ್ತಾ ಬಂದಿದ್ದಾರೆ. ಇದು ಹಿಂದಿನ ಗುಲಾಮಿ ಸಮಾಜ, ಊಳಿಗಮಾನ್ಯ ಸಮಾಜ, ನಂತರ ಬಂಡವಾಳಶಾಹಿ ಕ್ರಾಂತಿಗಳಾದ ಫ್ರೆಂಚ್ ಕ್ರಾಂತಿ, ಇಂಗ್ಲೆಂಡ್ ಕ್ರಾಂತಿ, ಸಮಾನತೆ ಸರ್ವೋದಯವನ್ನು ಸ್ಥಾಪಿಸಿದ ರಷ್ಯಾದ ಕಾರ್ಮಿಕ ವರ್ಗದ ಕ್ರಾಂತಿ, ಚೀನಾದ ಕಾರ್ಮಿಕ-ರೈತರ ಕ್ರಾಂತಿ ಹಾಗೂ ಪ್ರಸ್ತುತ ಪ್ರಪಂಚದಲ್ಲಿ ನಡೆಯುತ್ತಿರುವ ಭಾರತ, ಫಿಲಿಪೈನ್ಸ್, ಪೆರು, ಟರ್ಕಿ, ನೇಪಾಳ ಕ್ರಾಂತಿಗಳಲ್ಲಿ ಬಲಪ್ರಯೋಗವೇ ನಿರ್ಣಾಯಕವಾದುದಾಗಿದೆ. ಇಲ್ಲಿ ಬಲಪ್ರಯೋಗವೆಂದಾಗ ಶೋಷಕ ವ್ಯವಸ್ಥೆ ಮತ್ತು ಹಿಡಿಯಷ್ಟಿರುವ ಅದರ ಆಳುವ ವರ್ಗಗಳು ಬಹುಸಂಖ್ಯಾತ ಜನಸಮುದಾಯದ ಮೇಲೆ ತಮ್ಮ ಎಲ್ಲಾ ಯಂತ್ರಾಂಗಗಳ ಮೂಲಕ ಅನ್ಯಾಯ, ಆಕ್ರಮ, ಕ್ರೂರ ಹಿಂಸಾತ್ಮಕ ಬಲ ಪ್ರಯೋಗಗಳನ್ನು ಕೊನೆಗಾಣಿಸಲು ಶೋಷಿತ ಜನಸಮುದಾಯ ನಡೆಸುವ ಸ್ವಯಂ ರಕ್ಷಣಾತ್ಮಕ ಹಾಗೂ ತಮ್ಮ ನಿಜವಾದ ಪ್ರಜಾ ಪ್ರಭುತ್ವ ಸ್ಥಾಪನೆಗಾಗಿ ಬಲಪ್ರಯೋಗ ಎಂದು ಅರ್ಥ. ನಂತರ ನೈಜ ಸಮಾನತೆ ಸರ್ವೋದಯಗಳನ್ನು ಸ್ಥಾಪಿಸುವ ಸಮಾಜವಾದಿ ನಂತರ ಸಮತಾವಾದಿ ವ್ಯವಸ್ಥೆಯ ತಳಮಟ್ಟದಿಂದ ನಿರ್ಮಾಣಕ್ಕಾಗಿ ಎಂದು ಅರ್ಥ.

ಶೋಷಿತ ಜನರು ತಮ್ಮ ಸ್ವಾತಂತ್ರ್ಯ, ಸಮಾನತೆ, ವಿಮೋಚನೆಗಾಗಿನ ಹೋರಾಟ ಏನಾಗಿರಬೇಕು ಮತ್ತು ಹೇಗಿರಬೇಕು ಎಂಬುದನ್ನು ನಿರ್ಣಯಿಸುವುದು ಅಯಾ ವ್ಯವಸ್ಥೆ ಮತ್ತು ಅವುಗಳ ಆಳುವ ವರ್ಗಗಳೇ ಹೊರತು ಬೇರೆ ಯಾರೂ ಅಲ್ಲ. ಜನಸಮುದಾಯ ನೈಜ ಪ್ರಜಾತಂತ್ರ ಅನುಭವಿಸುತ್ತಿರುವಾಗ ಸಹಜವಾಗೇ ಅದಕ್ಕನುಗುಣವಾದ ಹೋರಾಟ ರೂಪಗಳು ಇರುತ್ತವ. ಪ್ರಜಾತಂತ್ರವೆಂದು ಬಿಂಬಿಸುವ ಪ್ರತಿಗಾಮಿ ಶೋಷಕ ಫ್ಯಾಸಿಸ್ಟ್ ವ್ಯವಸ್ಥೆ ಚಾಲ್ತಿಯಲ್ಲಿರುವಾಗ ಜನಸಮುದಾಯ ತಮ್ಮ ಬದುಕನ್ನು ಹಾಗೂ ನಾಡನ್ನು ರಕ್ಷಿಸಿಕೊಳ್ಳಬೇಕಾಗಿ ಬರುವ ನಿರ್ಣಾಯಕ ಹಂತದಲ್ಲಿ ತಮ್ಮ ಅಗತ್ಯಕ್ಕೆ ಯಾವುದು ಸೂಕ್ತವೋ ಅಂತಹ ಹೋರಾಟಗಳಿಗಿಳಿಯುತ್ತಾರೆ. ಅಂತಹದ್ದನ್ನು ಹಿಂಸೆ ಎಂದು ವಿಂಗಡಿಸಿ ದೂರೀಕರಿಸಿದರೆ ಅದು ಪ್ರಜಾತಾಂತ್ರಿಕ ನಿಲವು ಎಂದು ಹೇಳಲು ಆಗುವುದಿಲ್ಲ. ಹಿಂಸೆ ಮತ್ತು ಅಹಿಂಸೆಯನ್ನು ಆಯಾ ಸಮಕಾಲೀನ ವ್ಯವಸ್ಥೆಗಳು ಮತ್ತು ಅದರ ಪ್ರತಿಪಾದಕರು ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ವಹಿಸುತ್ತಾ ಬಂದಿದ್ದಾರೆ. ಆಳುವ ವರ್ಗಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಎಲ್ಲವನ್ನೂ ಹೊಂದಿಸಿಕೊಂಡು ರೂಪಿಸಿಕೊಳ್ಳುವುದು ಸಾಮಾನ್ಯವಾಗಿರುತ್ತದೆ.

ನಮ್ಮ ದೃಷ್ಟಿಯಿಂದ ಬಹುಸಂಖ್ಯಾತ ಶೋಷಿತ ಸಮುದಾಯವೆಂದರೆ ಕಾರ್ಮಿಕರು, ರೈತ-ಕೂಲಿಗಳು, ಬಡರೈತರು, ಮಧ್ಯಮ ರೈತರು, ಶ್ರೀಮಂತ ರೈತರು, ಸಣ್ಣಪುಟ್ಟ ವ್ಯಾಪಾರಸ್ಥರು, ಪುಟ್ಟ ಬಂಡವಾಳಶಾಹಿಗಳು, ರಾಷ್ಟ್ರೀಯ ಬಂಡವಾಳ ಶಾಹಿಗಳು, ಜನಪರವಾಗಿರುವ ಬುದ್ಧಿ ಜೀವಿಗಳು, ಇನ್ನಿತರ ಜನಪರ ಶಕ್ತಿಗಳು ಎಂದು ಅರ್ಥ. ಭಾರತದ ಸಾಮಾಜಿಕ ಪರಿಸ್ಥಿತಿಯಲ್ಲಿ ಊಳಿಗಮಾನ್ಯ ಶಕ್ತಿಗಳು, ದಲ್ಲಾಳಿ ಅಧಿಕಾರಶಾಹಿ ಬಂಡವಾಳಿಗರು ಹಾಗೂ ಇವರಿಂದ ಸೇವೆ ಮಾಡಿಸಿಕೊಳ್ಳುತ್ತಿರುವ ಸಾಮ್ರಾಜ್ಯಶಾಹಿ ಶಕ್ತಿಗಳು ಇವರ ಪರವಾಗಿರುವ ಇತರರೆಲ್ಲರೂ ಜನರ ಶತೃಗಳೆಂದು ನಾವು ನೋಡುತ್ತಿದ್ದೇವೆ.

ಈಗ ಹಿಂಸೆಯ ಬಗ್ಗೆ ನೋಡುವುದಾದರೆ ಶೋಷಿತ ಜನಸಮುದಾಯದ ಮೇಲೆ, ಈ ಮೇಲೆ ಹೇಳಿದ ಶತೃಗಳಿಂದ ಪ್ರತಿಕ್ಷಣ, ಪ್ರತಿನಿತ್ಯ ಹಲವಾರು ರೂಪಗಳಲ್ಲಿ ವಿವರಿಸಲಸಾಧ್ಯವಾದ ಹಿಂಸೆ ಆಕ್ರಮಗಳು ನಡೆಯುತ್ತಿವೆ. ನಮ್ಮ ಪ್ರಕಾರ ಬಹುಸಂಖ್ಯಾತ ಜನರ ಮೇಲೆ ಅಲ್ಪ ಸಂಖ್ಯಾತ ಆಳುವ ವರ್ಗಗಳು ನಡೆಸುತ್ತಿರುವುದು ಹಿಂಸೆ, ಅದು ಕಗ್ಗೊಲೆ, ಮಾರಣಹೋಮ, ಬಡತನ, ನಿರುದ್ಯೋಗ, ಭೂಹೀನತೆ, ಅವಕಾಶ ವಂಚನೆ, ಮೋಸ, ಭ್ರಷ್ಟಾಚಾರ, ಸುಳ್ಳುಕೇಸು, ಆಕ್ರಮ ಬಂಧನ, ಚಿತ್ರಹಿಂಸೆ, ಸುಳ್ಳು ಎನ್‌ಕೌಂಟರ್, ಅಸ್ಪೃಶ್ಯತೆ, ಮಹಿಳಾ ಅಸಮಾನತೆ, ನಿರ್ಬಂಧ ಹೇರಿಕೆ, ಮಾನವ ಹಕ್ಕುಗಳ ಹರಣ, ರಾಜಕೀಯ ಅಧಿಕಾರದಿಂದ ವಂಚನೆ ಹೀಗೆ ಸುದೀರ್ಘ ಪಟ್ಟಿಯನ್ನು ಮಾಡಬಹುದು. ಶೋಷಿತ ಜನಸಮುದಾಯ ತಮ್ಮ ಮೇಲಾಗುತ್ತಿರುವ ಈ ರೀತಿಯ ಕ್ರೂರಾತಿಕ್ರೂರ ಹಿಂಸೆಗಳ ವಿರುದ್ದ ಧ್ವನಿ ಎತ್ತಿ ಬೇಸತ್ತು ತಮ್ಮ ರಕ್ಷಣೆ ಹಾಗೂ ಎಲ್ಲಾ ರೀತಿಯ ಶೋಷಣೆಗಳಿಂದ ವಿಮೋಚನೆ ಪಡೆಯಲು, ನಿರ್ಣಾಯಕವಾದ ಹೋರಾಟಗಳಿಗೆ ರಾಜಿ ಮಾಡಿಕೊಳ್ಳದೆ ಇಳಿಯುವುದನ್ನು ಹಿಂಸೆ ಎಂದು ಮೌಲ್ಯೀಕರಿಸಿ ಅದು ತಪ್ಪು ಎಂದರೆ ಬಹುಸಂಖ್ಯಾತ ಶೋಷಿತ ಜನ ಸಮುದಾಯದ ಪ್ರಜಾತಂತ್ರ ಎನಿಸುವುದಿಲ್ಲ. ಅಂತಿಮವಾಗಿ ಅದು ಆಳುವ ಶೋಷಕ ವ್ಯವಸ್ಥೆಗೆ ಸೇವೆ ಸಲ್ಲಿಸಿದಂತಾಗುತ್ತದೆ. ಹಾಗಾಗಿ ಪ್ರಜಾತಂತ್ರ ವ್ಯವಸ್ಥೆಯೊಂದರ ಮೌಲ್ಯಮಾಪನ ಅದು ಬಹು ಸಂಖ್ಯಾತ ಜನಸಮುದಾಯ ಅನುಭವಿಸುತ್ತಿದೆಯೇ ಇಲ್ಲವೇ ಎಂಬುದನ್ನು ಆಧರಿಸಿ ಇರಬೇಕೇ ಹೊರತು ಅಲ್ಪ ಸಂಖ್ಯಾತ ಶೋಷಕ ಆಳುವ ವರ್ಗಗಳನ್ನು ಆಧರಿಸಿ ಇರಬಾರದು. ಪ್ರಜಾತಂತ್ರ ಎಂದಾಗ ಕೇವಲ ಓಟು ಹಾಕುವುದು, ಚಿಲ್ಲರೆ ಸುಧಾರಣೆಗಳಿಗೆ ಸೀಮಿತವಾದರೆ ಅದು ನೈಜವಾಗಲು ಸಾಧ್ಯವಿಲ್ಲ ಅದು ಜನತೆಯ ಪ್ರಜಾತಾಂತ್ರಿಕ ಬದಲಾವಣೆ ಎನಿಸುವುದಿಲ್ಲ.

ನೀವು ಪತ್ರದಲ್ಲಿ ಗಾಂಧಿಯನ್ನು ಉಲ್ಲೇಖಿಸಿ ಬರೆದಿದ್ದೀರಿ. ಆ ಮೂಲಕ ನೀವು ಪ್ರತಿಪಾದಿಸುತ್ತಿರುವ ವಿಚಾರಗಳನ್ನು ಹೇಳಿದ್ದೀರಿ. ಭಗತ್‌ಸಿಂಗ್‌ರನ್ನು ಉಲ್ಲೇಖಸಿದ್ದೀರಿ. ಚರಿತ್ರೆಯ ಪುಟಗಳನ್ನು ನಾವು ಹೆಕ್ಕಿ ನೋಡುವುದಾದರೆ ಭಾರತದ ಬ್ರಿಟಿಷ್ ವಸಾಹತುಶಾಹಿ ವಿರೋಧಿ ಚಳುವಳಿಯಲ್ಲಿ ಗಾಂಧಿ ವಹಿಸಿದ ಪಾತ್ರ ಏನಾಗಿತ್ತು ಎಂಬುದನ್ನು ಗ್ರಹಿಸಬಹುದು. ಶೋಷಕ ಬ್ರಿಟಿಷ್ ವಸಾಹತುಶಾಹಿಗಳೊಂದಿಗೆ ಸಾಮರಸ್ಯವೇ ಗಾಂಧಿ ಹಾಗೂ ಕಾಂಗ್ರೆಸ್ಸಿನ ಪ್ರಧಾನ ಗುರಿಯಾಗಿತ್ತು. ಇದನ್ನು ಕಾ|| ಭಗತ್‌ಸಿಂಗ್ ಮತ್ತಿತರ ಸಂಗಾತಿ ಪ್ರಶ್ನಿಸಿ ಅದು ಹೇಗೆ ದೇಶದ ಸಂಪೂರ್ಣ ಸ್ವಾತಂತ್ರಕ್ಕೆ ಮಾರಕವೆಂಬುದನ್ನು ಬಯಲಿಗೆಳೆದಿದ್ದೆರು. ಇದಕ್ಕೆ ಒಂದು ಉದಾಹರಣೆಯನ್ನು ಹೇಳುವುದಾದರೆ 1920 ರ ಅಸಹಕಾರ ಚಳುವಳಿಯ ಕರೆಗೆ ದೇಶಾದ್ಯಂತ ಮಿಲಿಯಾಂತರ ರೈತರು ಅಭೂತಪೂರ್ವಕವಾಗಿ ಪ್ರತಿಕ್ರಿಯಿಸಿದ್ದರು. 1957 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ಮೊಟ್ಟ ಮೊದಲ ಬಾರಿಗೆ ರೈತಾಪಿಗಳು ಆ ಪ್ರಮಾಣದಲ್ಲಿ ಚಳುವಳಿಗೆ ಧುಮುಕಿದ್ದ ಸಂದರ್ಭವಾಗಿತ್ತು ಅದು. ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಚಳುವಳಿಯ ಧಾರೆಗೆ ಸೇರಿಕೊಂಡಿದ್ದರು. ಹಿಂದೂ ಮುಸ್ಲಿಂ ಐಕ್ಯತೆಯು ದೊಡ್ಡ ಮಟ್ಟದಲ್ಲಿ ಪ್ರಕಟವಾಗಿತ್ತು. ದೇಶದಾದ್ಯಂತ ವಸಾಹತಶಾಹಿ ವಿರೋಧಿ ಅಲೆ ಎದ್ದಿತ್ತು. ಸಂಪೂರ್ಣ ಸ್ವಾತಂತ್ರ್ಯದ ಗುರಿಯೊಂದಿಗೆ ಜನರು ಪ್ರವಾಹದೋಪಾದಿಯಲ್ಲಿ ಹೋರಾಟಗಳಲ್ಲಿ ತೊಡಗಿಕೊಂಡರು. ಜನರು ಕಾಂಗ್ರೇಸ್ ನಾಯಕತ್ವ ವಿಧಿಸಿದ್ದ ನಿಂಬಂಧನೆಗಳನ್ನು ಉಲ್ಲಂಘಿಸಿ ಬ್ರಿಟಿಷ್ ವಸಾಹತುಶಾಹಿಗಳನ್ನು ಸಂಪೂರ್ಣವಾಗಿ ಈ ಚೌರಿಚೌರದ ಜನರು ಬ್ರಿಟಿಷ್ ವಸಾಹತುಶಾಹಿಗಳನ್ನು ಹಾಗೂ ಊಳಿಗಮಾನ್ಯ ಭೂಮಾಲಕತ್ವವನ್ನು ವಿರೋಧಿಸಿ ಹೋರಾಡುತ್ತಿದ್ದರು. ಆಗ ನಡೆಯಿತು ಬ್ರಿಟಿಷ್ ಪೊಲೀಸರಿಂದ ಭಾರತದ ಜನರ ಮೇಲೆ ಮಾರಣಾಂತಿಕ ಗುಂಡಿನ ದಾಳಿ. ಹಲವಾರು ಜನರ ಪ್ರಾಣ ತೆಗೆದರು. ವಸಾಹತಶಾಹಿಗಳ ಕ್ರೌರ್ಯಕ್ಕೆ ರೋಷಗೊಂಡ ಜನರು ಚೌರಿಚಾರಾದಲ್ಲಿ ಪೊಲೀಸ್ ಠಾಣೆಯೊಂದರ ಮೇಲೆ ದಾಳಿ ಮಾಡಿ ಬೆಂಕಿ ಇಟ್ಟಿತು. ಇದರಲ್ಲಿ 22 ಜನ ಪೊಲೀಸರು ಆಹುತಿ ಆದರು. ಈ ಘಟನೆ ಆದ ಒಡನೆಯೇ ಗಾಂಧಿ ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂಡರು. ತಮ್ಮ ಅಹಿಂಸಾ ತತ್ವಕ್ಕೆ ಚ್ಯುತಿ ಆಯಿತು. ಶಾಂತಿಯುತ ಹೋರಾಟಕ್ಕೆ ಭಂಗ ಆಯಿತು. ಎಂದು ಹಲುಬಿದರು. ಅದೇ ವೇಳೆಯಲ್ಲಿ ವಸಾಹುತಶಾಹಿ ಆಡಳಿತ ಚೌರಿಚೌರಾದ ಘಟನೆಯ ನೆಪದಲ್ಲಿ 72 ರೈತರಿಗೆ ವಿಧಿಸಿ ನಂತರ ಅದರಲ್ಲಿ 19 ಜನರನ್ನು ಗಲ್ಲಿಗೇರಿಸಿ ಉಳಿದವರನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಲಾಯಿತು. ಇಷ್ಟೆಲ್ಲಾ ಕ್ರೂರ ಹಿಂಸೆ ದಮನ ಬ್ರಿಟಿಷರಿಂದ ಆದಾಗಲೂ ಗಾಂಧಿ ಹಾಗೂ ಕಾಂಗ್ರೇಸ ಸತ್ಯಾಗ್ರಹ ಮಾಡುವುದಾಗಲಿ, ಉಪವಾಸ ಕೂಡುವುದಾಗಲಿ ಮಾಡಲಿಲ್ಲ. ಇದನ್ನು ಗಾಂಧಿ ಅಹಿಂಸೆಯ ಹಿಂಸಾತ್ಮಕ ಹೂರಣ ಎನ್ನದೇ ಇರಲು ಸಾಧ್ಯವೆ? ಇದನ್ನು ಮತ್ತು ವಿಸ್ತರಿಸಿ ಹೇಳಬೇಕೆಂದರೆ ಕಾಂಗ್ರೇಸ್ ಕಾರ್ಯಕಾರಿ ಸಮಿತಿ 1922 ಫೆಬ್ರವರಿ 12 ರ ಅಸಹಕಾರ ಚಳುವಳಿಯನ್ನು ಔಪಚಾರಿಕವಾಗಿ ಹಿಂತೆಗೆದುಕೊಳ್ಳುವ ನಿರ್ಣಯ ಅಂಗೀಕರಿಸಿತು. ಆಗ ಉಲ್ಲೇಖಿಸಲ್ಪಟ್ಟದ್ದನ್ನು ನೋಡಿ. ನಿರ್ಣಯದ ಮೊದಲನೇ ಅಂಶ ಬ್ರಿಟಿಷ್ ವಸಾಹತುಶಾಹಿ ಪೊಲೀಸರನ್ನು ಚೌರಿಚೌರಾದಲ್ಲಿ ಕ್ರೂರವಾಗಿ ಕೊಲೆ ಮಾಡಿರುವ ಹಾಗೂ ಠಾಣೆಗೆ ಬೆಂಕಿ ಇಕ್ಕಿರುವ ಗುಂಪಿನ ಕೃತ್ಯವನ್ನು ಅಮಾನವೀಯ ಎಂದು ಹೇಳಿ ಖಂಡಿಸಿತು. ನಂತರ ಮುಂದುವರೆದು ಪ್ರತಿಯೊಂದು ಸಾಮಾಜಿಕ ಅಸಹಕಾರ ಚಳುವಳಿ ಸಂದರ್ಭದಲ್ಲೂ ಹಿಂಸೆ ಭುಗಿಲೇಳುತ್ತಿದೆ. ಅದು ದೇಶ ಅಹಿಂಸೆಗೆ ಪಕ್ವವಾಗಿಲ್ಲ ಎಂಬುದನ್ನು ತೋರಿಸುತ್ತದೆ. ಹಾಗಾಗಿ ಸಮೂಹ ಅಸಹಕಾರ ಚಳುವಳಿಯನ್ನು ರದ್ದುಗೊಳಿಸುವುದು ಮತ್ತು ಪ್ರಾದೇಶಿಕ ಕಾಂಗ್ರೇಸ್ ಸಮಿತಿಗಳಿಗೆ ನಿರ್ದೇಶನ ನೀಡಿ ಭೂಕಂದಾಯ, ಇನ್ನಿತರ ತೆರಿಗೆಗಳನ್ನು ಸರ್ಕಾರಕ್ಕೆ ತಪ್ಪದೇ ನೀಡುವಂತೆ ಕೃಷಿಕರಿಗೆ ಸಲಹೆ ನೀಡುತ್ತದೆ. ಯಾವುದೇ ರೀತಿ ಆಕ್ರಮಣಕಾರಿ ರೂಪದ ಚಟುವಟಿಕೆಗಳನ್ನು ನಿಲ್ಲಿಸುವುದು. ಭೂಮಾಲೀಕರಿಗೆ ರೈತರು ಕೊಡುವ ತೆರಿಗೆ, ಗೇಣಿ ತಡೆಹಿಡಿಯುವುದು ದೇಶದ ಹಿತಾಸಕ್ತಿಗೆ ಮಾರಕವಾದುದು ಮತ್ತು ಕಾಂಗ್ರೇಸ್ ನಿರ್ಣಾಯಕ್ಕೆ ವಿರೋಧವಾದುದು ಎಂದು ಕಾರ್ಯಕರ್ತರಿಗೆ ಹಾಗೂ ಸಂಘನೆಗಳಿಗೆ ಸಲಹೆ ನೀಡುತ್ತದೆ. ಇದು ಬ್ರಿಟಿಷ್ ವಸಾಹತುಶಾಹಿ ಸರ್ಕಾರದ ಬಗ್ಗೆ ಗಾಂಧಿ ಹಾಗೂ ಕಾಂಗ್ರೆಸ್ಸಿನ ನಿಲುವಾಗಿತ್ತು. ನಂತರ ಮುಂದುವರಿದು ಕಾಂಗ್ರೇಸ್ಸಿನ ಚಳುವಳಿ ಯಾವುದೇ ರೀತಿಯಲ್ಲೂ ಭೂಮಾಲೀಕರ ಕಾನೂನುಬದ್ಧ ಹಕ್ಕುಗಳ ಮೇಲೆ, ಒಂದು ವೇಳೆ ರೈತರು ಸಮಸ್ಯೆ ಅನುಭವಿಸುತ್ತಿದ್ದರೂ ದಾಳಿ ಮಾಡುವ ಉದ್ದೇಶ ಹೊಂದಿಲ್ಲ ಎಂಬ ಭರವಸೆಯನ್ನು ನೀಡುತ್ತಾ ಅಂತಹ ಸಮಸ್ಯೆಗಳಿದ್ದಲ್ಲಿ ಪರಸ್ಪರ (ಅಂದರೆ ಭೂಮಾಲೀಕ ಮತ್ತು ರೈತರು) ಮಾತುಕತೆ ಮತ್ತು ಪರಿಹಾರದ ಮೂಲಕ ಬಗೆಹರಿಸಬೇಕೆಂದು ಕಾಂಗ್ರೇಸ್ ಕಾರ್ಯಕಾರಿ ಸಮಿತಿ ಭಾವಿಸುತ್ತದೆ. ಇದು ಶೋಷಕರೊಂದಿಗೆ ಸಂಘರ್ಷಕಿಳಿಯದೆ ಸಾಮರಸ್ಯವಾಗಿ ಬದುಕಬೇಕೆಂದು ಶೋಷಿತರಿಗೆ ನೀಡುವ ಸಲಹೆಯಂತಿದೆ ಅಲ್ಲದೆ. ಈ ರೀತಿಯ ಮಾಹಿತಿಗಳು ಮುಂಬೈನ ರಿಸರ್ಚ್ ಯೂನಿಟ್ ಫಾರ್ ಪಿಲಿಟಿಕಲ್ ಎಕಾನಮಿಯವರು ಪ್ರಕಟಿಸಿದ ’ದಿ ಗ್ರೇಟ್ ಬಿಟ್ರೇಯಲ್’ ಎಂಬ ಪತ್ರಗಳು ಹಾಗೂ ನಿರ್ಣಯಗಳನ್ನು ಆಧರಿಸಿದ ಪುಸ್ತಕದಲ್ಲಿ ಸಾಕಷ್ಟಿವೆ. ಇದನ್ನು ಬೆಳ್ಳಿಚುಕ್ಕಿ ಬುಕ್ ಟ್ರಸ್ಟ್ ನವರು ’ಮಹಾದ್ರೋಹ’ ಎಂಬ ಹೆಸರಿನಲ್ಲಿ ಕನ್ನಡದಲ್ಲೂ ಪ್ರಕಟಿಸಿದ್ದಾರೆ. 2007 ರಲ್ಲಿ ದೆಹಲಿಯ ಲೆಫ್ಟ್‌ವರ್ಲ್ಡ್‌ನರ ಪಿ.ಎಮ್.ಎಸ್ ಗ್ರಿವಾಲ್ ಬರೆದ ’ಭಗತ್‌ಸಿಂಗ್ ಲಿಬರೇಷನ್ಸ್ ಬ್ಲೇಜಿಂಗ್ ಸ್ಟಾರ್’ ಎಂಬ ಪುಸ್ತಕದಲ್ಲೂ ಲಭ್ಯವಿದೆ. ಇದಲ್ಲದೆ ಆರ್. ಪಿ. ದತ್‌ರ ಮಾನಿಷಾ ಗ್ರಂಥಾಲಯ, ಕೊಲ್ಕತ್ತಾದವರು ಪ್ರಕಟಿಸಿದ ’ಇಂಡಿಯಾ ಟುಡೆ’ ಎಂಬ ಗ್ರಂಥ, ಸುನೀತಿಕುಮಾರ್ ಘೋಷರ ’ಇಂಡಿಯಾ ಆಂಡ್ ದಿ ರಾಜ್’ ಎಂಬ ಎರಡು ಸಂಪುಟದ ಗ್ರಂಥಗಳಲ್ಲಿ ಇಂತಹ ಮಾಹಿತಿಗಳ ಸಂಗ್ರಹಗಳಿವೆ. ಆದರೆ ಇವ್ಯಾವವು ನಾವು ಸಾಂಪ್ರದಾಯಿಕವಾಗಿ ಕಲಿಯುವ ಇತಿಹಾಸದ ಭಾಗವಾಗದೆ ಜಾಣತನದಿಂದ ಮರೆಮಾಚುತ್ತಾ ಬರಲಾಗಿದೆ. ಯಾಕೆಂದರೆ ಆಳುವ ವ್ಯವಸ್ಥೆಗೆ ಇಂತಹ ಸತ್ಯ ಸಂಗತಿಗಳು ಮಾರಕವಾಗುತ್ತವೆ ಅದಕ್ಕೆ.

ಕಾ|| ಭಗತ್‌ಸಿಂಗ್‌ರಿಗೆ ಜನರು ತೋರುತ್ತಿದ್ದ ಅಪಾರ ಬೆಂಬಲ ಅಭಿಮಾನಗಳಿಂದಾಗಿ ಗಾಂಧಿ ಅನಿವಾರ್ಯವಾಗಿ ಬ್ರಿಟಿಷ್ ಆಡಳಿತಕ್ಕೆ ಗಲ್ಲು ಶಿಕ್ಷೆಯಿಂದ ಕ್ಷಮಾದಾನ ಮಾಡುವಂತೆ ಕೇಳುವ ಶಾಸ್ತ್ರ ಪೂರೈಸಿದ್ದರಷ್ಟೆ. ಕಾ|| ಭಗತ್ ಸಿಂಗ್, ರಾಜಗುರು ಸುಖದೇವ್‌ರನ್ನು ಗಲ್ಲಿಗೇರಿಸಕೂಡದೆಂದು ದೇಶಾದ್ಯಂತ ಜನರು ಸಮರಶೀಲರಾಗಿ ಪ್ರತಿಭಟನೆಗಳನ್ನು ಮಾಡುತ್ತಿದ್ದರೂ ಕಾಂಗ್ರೇಸ್ ಹಾಗೂ ಗಾಂಧಿ ಯಾವುದೇ ಪ್ರತಿಭಟನೆಗಳನ್ನು ಸಂಘಟಿಸಿರಲಿಲ್ಲ. ಹೋಗಲಿ ಅಂತಹ ದೇಶಪ್ರೇಮಿ ಕ್ರಾಂತಿಕಾರಿಗಳನ್ನು ವಸಾಹತುಶಾಹಿ ಸರ್ಕಾರವೊಂದು ಗಲ್ಲಿಗೇರಿಸಿ ಕೊಲ್ಲುವುದು ಕ್ರೂರವಾದುದು ಹಾಗೂ ಹಿಂಸೆ ಎಂದು ಗಾಂಧಿ ಒಂದೇ ಒಂದು ದಿನ ಕನಿಷ್ಠ ಸತ್ಯಾಗ್ರಹವನ್ನೂ ಮಾಡಿರಲಿಲ್ಲ. ಭಗತ್‌ಸಿಂಗ್‌ರ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯ ಇದ್ದಾಗ್ಯೂ ಕೂಡಾ ಒಬ್ಬ ದೇಶ ಪ್ರೇಮಿ ಎಂದಾದರೂ ಗಾಂಧಿ ಭಾವಿಸಿದ್ದೇ ಆಗಿದ್ದಲ್ಲಿ ಹೀಗಾಗಲು ಸಾಧ್ಯವೇ? ಹಾಗಿರುವಾಗ ಗಾಂಧಿ ಪ್ರತಿಪಾದಿಸುತ್ತಿದ್ದ ’ಅಹಿಂಸೆ’ ಯಾರಿಗೆ ಸೇವೆ ಸಲ್ಲಿಸುತ್ತಾ ಇತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.

ನಾವು ಕೊಲೆಗಳ ಮೂಲಕವೇ ನ್ಯಾಯ ಬಯಸುವ ಇರಾದೆಯವರಲ್ಲ. ಹಿಂಸೆಯ ಮೂಲಕವೇ ಸಾಮಾಜಿಕ ನ್ಯಾಯ ದೊರಕಿಸಿಕೊಳ್ಳುವುದು ನಂತರ ಸಮಾಜ ಬದಲಾವಣೆ ಮಾಡುವುದು ನಮ್ಮ ಬಯಕೆಯಲ್ಲ. ನಾವು ಬಹುಸಂಖ್ಯಾತ ಶೋಷಿತ ಸಮುದಾಯದ ಶಾಂತಿ ನೆಮ್ಮದಿ, ಸಮಪಾಲು ಸಮಬಾಳು ಬಯಸುವವರು. ಅವುಗಳನ್ನು ಸಾಧಿಸಲು ನಾವು ಆ ಶೋಷಿತ ಜನಸಮುದಾಯವನ್ನು ಸಂಘಟಿಸುತ್ತಿದ್ದೇವೆ. ವೈಜ್ಞಾನಿಕ ಸಾಮಾಜಿಕ ಚಿಂತನೆಯಾದ ಮಾರ್ಕ್ಸ್‌ವಾದ, ಲೆನಿನ್‌ವಾದ-ಮಾವೋವಾದವನ್ನು ಸಮಾಕಾಲೀನ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾಗಿ ಅಳವಡಿಸುತ್ತಾ ಶೋಷಿತ ಜನಸಮುದಾಯದ ಮಧ್ಯೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಹಾಗೆ ಕಾರ್ಯ ನಿರ್ವಹಿಸಲು, ಸಾಮಾಜಿಕ ಬದಲಾವಣೆಗಾಗಿ ಜನರನ್ನು ಸಂಘಟಿಸಲು ಈ ಶೋಷಕ ವ್ಯವಸ್ಥೆ ಮತ್ತದರ ಯಂತ್ರಾಂಗಗಳು ಏಜೆಂಟರುಗಳು ಮುಕ್ತವಾಗಿ ಬಿಡದೇ ಇರುವುದರಿಂದಾಗಿ ನಾವು ಭೂಗತರಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ಕಾರ್ಯ ನಿರ್ವಹಣೆಯನ್ನು ಹಾಗೂ ಜನರು ಸಂಘಟಿತಗಾರುವುದನ್ನು ಎಲ್ಲಾ ವಿಧಾನದಿಂದ ತಡೆಯಲು ಪ್ರಯತ್ನಿಸುತ್ತಿದ್ದಾರೆ. ಸುಳ್ಳು ಕೇಸು, ಆಕ್ರಮ ಬಂಧನ, ಚಿತ್ರಹಿಂಸೆ, ಕಗ್ಗೊಲೆ, ಹಕ್ಕುಗಳ ನಿರಾಕರಣೆ ಶೋಷಕ ಮೌಲ್ಯಗಳನ್ನು ಬಿತ್ತನೆ ಮಾಡುವ ಈ ಮೂಲಕ ಶೋಷಿತ ಜನ ಸಮುದಾಯ ತನ್ನ ವಿಮೋಚನೆಯನ್ನು ಮಾಡಿಕೊಳ್ಳದಂತೆ ತಡೆಯುವ ಯತ್ನ ನಡೆಸುತ್ತಿದ್ದಾರೆ. ನಾವು ಶೋಷಿತ ಜನರೊಂದಿಗೆ ನಿರಂತರ ಬೆರೆತಿರುವುದರಿಂದಾಗಿ ನಮ್ಮ ಚಳುವಳಿಯನ್ನು ಗಮನಿಸಿ ಮುಗಿಸಿಬಿಡಲು ಸಾಧ್ಯವಾಗುತ್ತಿಲ್ಲ. ಶೋಷಿತ ಜನಸಮುದಾಯಕ್ಕೆ ಕಂಟಕವಾಗಿರುವ ವರ್ಗಶತೃಗಳನ್ನು ಮಾತ್ರ ಅಂತಿಮ ಹಂತದಲ್ಲಿ ನಿರ್ಮೂಲಿಸುವ ಕಾರ್ಯಕ್ಕೆ ಕೈಹಾಕುತ್ತೇವೆ. ಇನ್ನೂ ತಿದ್ದಿಕೊಳ್ಳಲು ಸಿದ್ಧರಿಲ್ಲದ ಶತೃ ಏಜೆಂಟರನ್ನು ಅಂತಿಮ ಹಂತದಲ್ಲಿ ನಿರ್ಮೂಲಿಸುವ ಅನಿವಾರ್ಯತೆ ಬರುತ್ತದೆ. ಬಹುಸಂಖ್ಯಾತ ಶೋಷಿತ ಜನಸಮುದಾಯಕ್ಕೆ ಮುಳುವಾಗಿರುವ ಶತೃಗಳು ಹಾಗೂ ಅವರ ಏಜೆಂಟರಿಗೆ ಅಹಿಂಸಾ ವಿಧಾನ ಅನುಸರಿಸಿದರೆ ಅದು ಬಹುಸಂಖ್ಯಾತರ ಮೇಲೆಸಗುವ ಘೋರ ಹಿಂಸೆಯಾಗುತ್ತದೆಯೇ ವಿನಃ ಬೇರೇನಲ್ಲ. ಅದು ಶೋಷಕ ವ್ಯವಸ್ಥೆ ಮತ್ತದರ ಆಳುವ ವರ್ಗಗಳಿಗೆ ಪೂರಕವಾಗುತ್ತದೆ. ನಾವು ನಡೆಸುತ್ತಿರುವ ಕ್ರಾಂತಿಕಾರಿ ಹೋರಾಟ ಜನಪರ ಹಾಗೂ ಬಹುಸಂಖ್ಯಾತ ಶೋಷಿತ ಜನ ಸಮುದಾಯದ ಪ್ರಜಾ ತಾಂತ್ರಿಕ ಆಶೋತ್ತರಗಳನ್ನು ಈಡೇರಿಸಲು ನಡೆಯುತ್ತಿರುವ ಹೋರಾಟ ಎಂದು ಒತ್ತಿ ಹೇಳುತ್ತಿದ್ದೇವೆ. ಹಾಗೆ ಹೇಳಿದಾಗ ಇತರ ಜನಪರ ಹೋರಾಟಗಳನ್ನು ನಾವು ಕಡೆಗಣಿಸುತ್ತಿಲ್ಲ. ನಾವು ಅಂತಹ ಹೋರಾಟಗಳನ್ನು ಸಂಘಟಿಸುತ್ತಿದ್ದೇವೆ ಮತ್ತು ಅದರಲ್ಲಿ ಪಾಲ್ಗೋಳ್ಳುತ್ತಿದ್ದೇವೆ. ಶೋಷಿತ ಜನ ಸಮುದಾಯ ನಡೆಸುವ ಎಲ್ಲಾ ಜನಪರ ಹೋರಾಟಗಳನ್ನು ನಾವು ಎತ್ತಿ ಹಿಡಿಯುತ್ತೇವೆ. ಅವೆಲ್ಲವೂ ಭಾರತದ ನವಪ್ರಜಾತಾಂತ್ರಿಕ ಕ್ರಾಂತಿಯ ಭಾಗ ಹಾಗೂ ಪೂರಕವಾದವುಗಳಾಗಿವೆ ಎಂಬುದೇ ನಮ್ಮ ಅಭಿಪ್ರಾಯ.

ಕರ್ನಾಟಕದಲ್ಲಿ ಶೋಷಿತ ಜನಸಮುದಾಯದ ಬಗ್ಗೆ Concern ಇರುವಂತಹ, ಕೇಳಿಸಿಕೊಳ್ಳುವಂತಹ, ಪ್ರಾಮಾಣಿಕವಾಗಿ ಸ್ಪಂದಿಸುವಂತಹ ತಮ್ಮ ಕೈಲದುದನ್ನು ಮಾಡುವಂತಹ ಮಾನವ ಪ್ರೇಮಿ ಸತ್ಯ ನಿಷ್ಠ ಜನರು ಇದ್ದಾರೆ ಎಂದು ತಾವು ಹೇಳಿರುವ ವಿಚಾರದಲ್ಲಿ ನಮಗೆ ಯಾವುದೇ ಭಿನ್ನಮತವಿಲ್ಲ. ಅಂತಹವರೊಂದಿಗೆ ಸಂವಾದಗಳನ್ನು ನಡೆಸಲು ನಾವು ಸಿದ್ದರಿದ್ದೇವೆ. ಇನ್ನು ಪ್ರಜೆಗಳ ಸರಕಾರ ಎಂದು ನೀವು ಹೇಳಿದ್ದೀರಲ್ಲ ಅವರೊಂದಿಗೆ ಸಂವಾದಿಸುವ ವಿಷಯ ಇದೆಯಲ್ಲ ಅದು ಇನ್ನೂ ನೋಡಬೇಕಾದ ವಿಚಾರ. ಯಾಕೆಂದರೆ ಈ ಸರ್ಕಾರಗಳು ಪ್ರಜೆಗಳದ್ದು ಎಂಬುದರ ಬಗ್ಗೆ ನಮಗೆ ಒಪ್ಪಿಗೆ ಇಲ್ಲ. ಈ ಸರಕಾರಗಳು ದೇಶೀಯ ಶೋಷಕರುಗಳಾಗಿವೆ. ಸಾಮ್ರಾಜ್ಯ ಶಾಹಿಗಳಿಗೆ ಸೇವೆ ಸಲ್ಲಿಸುತ್ತಾ ಅದರ ಸುಲಿಗೆ ಲೂಟಿಗಳಿಗೆ ಜನರನ್ನು ಹಾಗೂ ದೇಶವನ್ನೂ ಆಹುತಿಗಳನ್ನಾಗಿ ಮಾಡುತ್ತಿವೆ. ಅದು ಬೃಹತ್ ಜನ ವಿರೋಧಿ ಯೋಜನೆಗಳಿರಬಹುದು,ಎಸ್.ಇ.ಝಡ್ ಗಳಿರಬಹುದು, ಭೂಯೋಜನೆಗಳಿರಬಹುದು, ಅರಣ್ಯ ಯೋಜನೆಗಳಿರಬಹುದು. ಜನರ ಸಮಸ್ಯೆಗಳನ್ನು ಪರಿಹರಿಸಲು ಯತ್ನ ನಡೆಸುವ ಸರಕಾರದೊಂದಿಗೆ ಸಂವಾದ ನಡೆಸಲು ನಮಗೆ ಅಭ್ಯಂತರವಿಲ್ಲ, ಆದರೆ ಸಂವಾದ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವ ಬದಲಿಗೆ ಜನಹೋರಾಟಗಳ ದಮನಕ್ಕೆ ನಡೆಸುವ ತಯಾರಿಯೇ ಸರಕಾರಗಳ ಹುನ್ನಾರ ಆಗಿರುತ್ತದೆ. ಸಾಮಾನ್ಯವಾಗಿ ಆಳುವ ಸರಕಾರಗಳು ಚಳುವಳಿಗಳನ್ನು ನಾಶಗೊಳಿಸುವುದು, ಚಳುವಳಿಯ ನಾಯಕತ್ವಗಳನ್ನು ಭ್ರಷ್ಠ್ಠಗೊಳಿಸುವುದು. ಅವ್ಯಾವುದಕ್ಕೂ ಬಗ್ಗದಿದ್ದಾಗ ದೈಹಿಕವಾಗಿ ನಿರ್ಮೂಲಿಸುವುದನ್ನು ಮಾಡುತ್ತವೆ. ಆಂಧ್ರ ಸರಕಾರ ನಡೆಸಿದ ಮಾತುಕತೆಯ ನಾಟಕ ತಮಗೆ ತಿಳಿದಿರಬೇಕು. ಸರಕಾರಗಳು ಇಲ್ಲಿಯವರೆಗೆ ಜನರ ಹಕ್ಕೊತ್ತಾಯಗಳಿಗೆ ಸ್ಪಂದಿಸಿ ಬಗೆಹರಿಸಿದ್ದು ಇಲ್ಲ. ಕೆಲವು ಸಣ್ಣಪುಟ್ಟ ಕೆಲಸ ಮಾಡಿ ಒಬ್ಬಿಬ್ಬರಿಗೆ ಏನೋ ಕೊಟ್ಟಂತೆ ಮಾಡಿ ಉಳಿದವರಿಗೆ ಕೈ ಎತ್ತುವುದು ಅವುಗಳ ಪರಿಪಾಠವಾಗಿದೆ.

ಕೈಗಾದಿಂದ ಹಿಡಿದು ಮೂಡಿಗೆರೆಯ ತತ್ಕೊಳ ಇರಬಹುದು. ವರಾಹಿ ಚಕ್ರಾ ಯೋಜನೆಗಳಿರಬಹುದು, ಎಮ್.ಆರ್.ಪಿ.ಎಲ್, ಸೀಬರ್ಡ್ ನೌಕಾನೆಲೆ ಇರಬಹುದು. ಜನರಿಗಿನ್ನೂ ಪರಿಹಾರ ನೀಡಿ ಪುನರ್ವತಿ ಕಲ್ಪಿಸಿಯೇ ಇಲ್ಲ. ಜನರ ವಿರೋಧವನ್ನು ಲೆಕ್ಕಿಸದೆ ಬಲವಂತವಾಗಿ ಪೊಲೀಸ್ ಮೂಲಕ ಜನವಿರೋಧಿ ಯೋಜನೆಗಳನ್ನು ಹೇರುತ್ತಾ ಬರಲಾಗುತ್ತಿದೆ.

’ಸತ್ಯಂ’ ನಂತಹ ದಗಲ್ಬಾಜಿ ಕಂಪನಿಗಳ ಮಾಲೀಕರಿಗೆ ಕೋಟ್ಯಾಂತರ ರೂಗಳಷ್ಟು ಜನರ ತೆರಿಗೆಯ ಹಣವನ್ನು ಅರ್ಪಿಸುವ ಈ ಸರಕಾರಗಳು ಜನರಿಗೆ ಏನು ತಾನೇ ಮಾಡಲು ಸಾಧ್ಯ.

ಹಾಗಾಗಿ ಶೋಷಿತ ಜನಸಮುದಾಯ ತಮ್ಮನ್ನು ಸಂಘಟಿಸಿಕೊಂಡು ವಿಮೋಚನೆಯನ್ನು ಸಾಧಿಸಬೇಕಾಗಿದೆ. ಅದಕ್ಕೆ ಜನಪರವಾಗಿರುವ ಎಲ್ಲರೂ ತಮ್ಮ ಕೈ ಜೋಡಿಸಬೇಕು. ಶೋಷಿತ ಜನಸಮುದಾಯದ ಐಕ್ಯತೆಗೆ ಭಂಗ ತರುವ ಶಕ್ತಿಗಳನ್ನು ಹಾಗೂ ಚಿಂತನೆಗಳನ್ನು ದೂರಗೊಳಿಸುತ್ತಾ ವಿದೇಶಿ ಶತೃಗಳು ಹಾಗೂ ಸ್ವದೇಶಿ ದಲ್ಲಾಳಿ ಶತೃಗಳ ವಿರುದ್ಧ ಒಗ್ಗೂಡಿ ನಮ್ಮ ಯಾವುದೇ ಕ್ರಿಯೆಗಳು ಆಳುವ ಶೋಷಕ ವ್ಯವಸ್ಥೆಗೆ ಸಹಾಯ ಮಾಡುವಂತಿರಬಾರದೆನಿಸುತ್ತದೆ. ಈ ನಿಟ್ಟಿನಲ್ಲಿ ತಾವು ಹಾಗೂ ತಮ್ಮ ಸಮಾನ ಮನಸ್ಕರು ಚಿಂತಿಸಿ ಕಾರ್ಯಶೀಲರಾಗುತ್ತೀರೆಂಬ ನಂಬಿಕೆಯೊಂದಿಗೆ.

ತಮ್ಮ ವಿಶ್ವಾಸಿ
ಚೇತನ್
ಸಿ.ಪಿ.ಐ (ಮಾವೋವಾದಿ)
ಕರ್ನಾಟಕ
17-01-2009


ನಕ್ಸಲರಿಂದ ಬಂದಿರುವ ಈ ಪತ್ರಕ್ಕೆ ಮತ್ತೊಮ್ಮೆ ಉತ್ತರ ಬರೆದು ಈ ಸಂವಾದವನ್ನು ಮುಂದುವರೆಸುವ ಬಯಕೆ ಇದೆ. ಆದರೆ ಅವರ ಈ ಪತ್ರದಲ್ಲಿ ಎರಡು ವಿಷಯಗಳಿವೆ. ಒಂದು ಅವರ (ಹಿಂಸಾತ್ಮಕವಾಗಬಹುದಾದ) ಹೋರಾಟಕ್ಕೆ ಅವರು ಕೊಟ್ಟುಕೊಳ್ಳುವ ಸಮರ್ಥನೆ. ಮತ್ತೊಂದು ಗಾಂಧೀಜಿಯ ಹೋರಾಟದಲ್ಲಿ ಅವರು ಕಾಣುವ ದ್ವಂದ್ವಗಳು ಮತ್ತು ಅಪಾಯ. ಇವೆರಡರಲ್ಲಿ ಯಾವುದಕ್ಕೆ ಉತ್ತರಿಸಬೇಕಾದರೂ ನಾನು ಮತ್ತಷ್ಟು ಅಧ್ಯಯನದ ಜೊತೆಗೆ ಇದಕ್ಕಾಗಿಯೆ ಸ್ವಲ್ಪ ಸಮಯವನ್ನೂ ಮೀಸಲಿಡಬೇಕು. ಬಹುಶಃ ಇನ್ನೊಂದೆರಡು ವಾರದಲ್ಲಿ ಇದಕ್ಕೆ ಮಾರುತ್ತರ ಬರೆಯುತ್ತೇನೆ. ಈ ಸಂವಾದ ಜನರಲ್ಲಿ ಅಸಹನೆ ಮತ್ತು ದ್ವೇಷವನ್ನು ಹೆಚ್ಚಿಸದ ಹಾಗೆ ಒಂದು ಸಜ್ಜನಿಕೆಯ ಮಟ್ಟದಲ್ಲಿ ಇರುತ್ತದೆಂಬ, ಹಾಗೂ ನಾಡಿನ ಇತರ ಸಮಾನಮನಸ್ಕರು ಇದರಲ್ಲಿ ಮುಕ್ತವಾಗಿ ಪಾಲ್ಗೊಳ್ಳುವಂತೆ ಆಗಲಿ ಎಂಬ ಆಶಾಭಾವನೆ ನನ್ನದು. ಈ ಸಂವಾದ ನಮ್ಮೆಲ್ಲರನ್ನೂ ಶಾಂತಿಯತ್ತ, ಸಮಾನತೆಯತ್ತ, ಸತ್ಯದತ್ತ, ಉತ್ತಮ ಪ್ರಜಾಆಡಳಿತದತ್ತ ಒಯ್ಯಲಿ.

1 comment:

Anonymous said...

Naxals are right ? yeah !
NO. they are LEFT