Nov 28, 2007

ಪುನರ್ ಸ್ಥಾಪಿಸಬೇಕಿದೆ ಮೌಲ್ಯಗಳನ್ನು...

(ವಿಕ್ರಾಂತ ಕರ್ನಾಟಕ - ಡಿಸೆಂಬರ್ 07, 2007 ರ ಸಂಚಿಕೆಯಲ್ಲಿನ ಬರಹ)

ಇದೇ ನವೆಂಬರ್ 24-25 ರಂದು ಕರ್ನಾಟಕದ ದೂರದರ್ಶನಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಲೋಕಾಯುಕ್ತರು ಮಾಡಿದೊಂದು ದಾಳಿಯದೆ ಸುದ್ದಿ. "ಶ್ರೀನಿವಾಸ ರೆಡ್ಡಿ ಎಂಬ ಸರ್ಕಾರಿ ನೌಕರ ತನ್ನ ಆದಾಯಕ್ಕೂ ಮೀರಿದ ಆಸ್ತಿಯನ್ನು ಹೊಂದಿದ್ದಾರೆ," ಎಂದು ಲೋಕಾಯುಕ್ತರು ಬಹಿರಂಗ ಪಡಿಸಿದ ಆ ನೌಕರನ ಮತ್ತವರ ಹೆಂಡತಿಮಕ್ಕಳ ಆಸ್ತಿ ವಿವರ ಹೀಗಿದೆ:
. ಮನೆಯಲ್ಲೇ ಪತ್ತೆಯಾದ ನಗದು ಹಣ ರೂ 33.7 ಲಕ್ಷ
. ಬ್ಯಾಂಕ್ ಖಾತೆಗಳಲ್ಲಿರುವ ಹಣ 1 ಕೋಟಿ ಒಂಬತ್ತು ಲಕ್ಷ
. ಷೇರುಗಳ ಮೇಲೆ ಹೂಡಿಕೆ ರೂ 15 ಲಕ್ಷ
. ಕೊಟ್ಟಿರುವ ಮುಂಗಡ ರೂ 1.5 ಕೋಟಿ
. ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಮೂರು 40x60 ನಿವೇಶನಗಳು
. ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ 40x60 ಸೈಟುಗಳಲ್ಲಿರುವ 3 ಮನೆಗಳು
. ಆನೇಕಲ್ ತಾಲ್ಲೂಕಿನಲ್ಲಿ 14 ಎಕರೆ 33 ಗುಂಟೆ ಜಮೀನು
. ಹೆಗ್ಗಡದೇವನ ಕೋಟೆ ಯಲ್ಲಿ - 12 ಎಕರೆ ಕೃಷಿ ಜಮೀನು
. ಚಿನ್ನ 1.5 ಕೆ.ಜಿ.
. ಬೆಳ್ಳಿ 10 ಕೆ.ಜಿ.
. ಕಾರುಗಳು - 2
. ಇರುವ ಸಾಲ - 75 ಲಕ್ಷ
---

ಪ್ರಸಿದ್ಧ ನಾರಾಯಣ ಹೃದಯಾಲಯ, ಇತ್ತೀಚೆಗೆ ತಾನೆ ಲಕ್ಷ್ಮಿ ಎಂಬ ನಾಲ್ಕು ಕೈಗಳ ಪುಟ್ಟ ಮಗುವಿಗೆ ಸರ್ಜರಿ ಮಾಡಿ ಪ್ರಸಿದ್ಧಿಗೆ ಬಂದ ಸ್ಪರ್ಶ ಆಸ್ಪತ್ರೆ, ಎಂ.ಟಿ.ಆರ್.ರ ಉತ್ಪಾದನಾ ಘಟಕ, ರೇವಾ ಎಲೆಕ್ಟ್ರಿಕ್ ಕಾರಿನ ಫ್ಯಾಕ್ಟರಿ, ಮುಂತಾದ ಹತ್ತಾರು ವಿಶೇಷಗಳನ್ನು ತನ್ನ ನೂರಿನ್ನೂರು ಎಕರೆ ವಿಸ್ತೀರ್ಣದಲ್ಲಿ ಹಿಡಿದಿಟ್ಟಿಕೊಂಡಿರುವ ಊರು ನನ್ನೂರು, ಬೊಮ್ಮಸಂದ್ರ. ವಿಧಾನಸೌಧದಿಂದ ಕೇವಲ 22 ಕಿ.ಮೀ. ದೂರದಲ್ಲಿದೆ. ಇಪ್ಪತ್ತು ವರ್ಷಗಳ ಹಿಂದೆ ಇದೇ ಊರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾನು ಓದುತ್ತಿದ್ದಾಗ ನಮಗೆ ಮುಖ್ಯೋಪಾಧ್ಯಾಯರಾಗಿದ್ದವರು ರಾಮಚಂದ್ರಪ್ಪ ಎನ್ನುವವರು. ನಮ್ಮೂರಿಗಿಂತ ನಾಲ್ಕೈದು ಕಿ.ಮೀ. ದೂರದ ಊರು ಅವರದು. ಅಲ್ಲಿಂದ ಸೈಕಲ್‌ನಲ್ಲಿಯೇ ಬರುತ್ತಿದ್ದರು. ಸಜ್ಜನರು; ಪ್ರಾಮಾಣಿಕರು. ಮಕ್ಕಳಲ್ಲಿ ಆದರ್ಶದ ಗುಣಗಳನ್ನು ತುಂಬುತ್ತಿದ್ದ, ಪ್ರೀತಿಯಿಂದ, ಗೌರವದಿಂದ ಮಾತನಾಡಿಸುತ್ತಿದ್ದ ಅವರು ನನ್ನ ಮೆಚ್ಚಿನ ಗುರುಗಳೂ ಹೌದು. ಆಗಾಗ ಅವರು "ಫಾರಿನ್"ನಲ್ಲಿದ್ದ ತಮ್ಮ ಮತ್ತೊಬ್ಬ ಶಿಷ್ಯನ ಬಗ್ಗೆ, ಆತನ ಸರಳತೆ ಮತ್ತು ವಿನಯದ ಬಗ್ಗೆ ನಮಗೆ ಉದಾಹರಣೆ ಕೊಡುತ್ತ ಮೌಲ್ಯಗಳ ಕುರಿತು ಹೇಳುತ್ತಿದ್ದರು. ಅವರು ಹೇಳುತ್ತಿದ್ದ ಆ ಶಿಷ್ಯನ ಹೆಸರು ಯಲ್ಲಾರೆಡ್ಡಿ ಎಂದು; ನಮ್ಮೂರಿಗಿಂತ ಮೂರು ಕಿ.ಮೀ. ದೂರದ ತಿರುಮಗೊಂಡನ ಹಳ್ಳಿಯವರು.

ನಾನು ಹೈಸ್ಕೂಲು, ಕಾಲೇಜು ಓದುತ್ತಿದ್ದಾಗ ಕೆಲವೊಮ್ಮೆ ಕೆಲವು ಕೆಲಸಗಳನ್ನು ಮಾಡಲು ಹಿಂಜರಿದರೆ, ನನ್ನ ಮತ್ತು ನನ್ನಣ್ಣನ ಅಹಂಕಾರದ ಮೊಟ್ಟೆ ಒಡೆಯಲು ನನ್ನಮ್ಮ, "ತಿರುಮಗೊಂಡನ ಹಳ್ಳಿಯ ಬಿಡ್ಡಾರೆಡ್ಡಿ ಮಗ ಯಲ್ಲಾರೆಡ್ಡಿ ಗೊತ್ತೇನ್ರೋ? ಅದೆಷ್ಟೋ ಓದವ್ನಂತೆ. ಫಾರಿನ್‌ನಲ್ಲಿದ್ದಾನಂತೆ. ಆದರೆ ಅಲ್ಲಿಂದ ಊರಿಗೆ ಬಂದ ತಕ್ಷಣ ಪ್ಯಾಂಟ್ ಬಿಚ್ಚಾಕಿ, ಚಡ್ಡಿ ಹಾಕ್ಕೊಂಡು, ನೇಗಿಲು ಎತ್ತುಕೊಂಡು ಹೊಲಕ್ಕೆ ಹೋಗ್ತಾನಂತೆ ಉಳೋದಿಕ್ಕೆ. ಇಲ್ಲಿರೋವಷ್ಟು ದಿನಾನೂ ಹೊಲದಲ್ಲಿ ಆಳುಗಳ ಸಮ ದುಡೀತಾನಂತೆ. ನಿಮಗೆಲ್ಲ ಎಷ್ಟ್ರೋ ಕೊಬ್ಬು?" ಎನ್ನುತ್ತಿದ್ದಳು. ನಮಗೆಲ್ಲ ಅಹಂಕಾರವಿಲ್ಲದ, ವಿನಯದ ಜೀವನ ಹೇಗೆ ಎಂಬ ಪಾಠ ಹಾಗೆ ಆಗುತ್ತಿತ್ತು. ಸುತ್ತಮುತ್ತಲ ಹಳ್ಳಿಗಳಲ್ಲಿ ಮನೆಗಳಲ್ಲಿಯ ಹಿರಿಯರು ಮಕ್ಕಳಿಗೆ ಯಾರದಾದರೂ ಉದಾಹರಣೆ ಕೊಡಬೇಕಿದ್ದರೆ ಯಲ್ಲಾರೆಡ್ಡಿಯವರ ಉದಾಹರಣೆ ಹೇಳುತ್ತಿದ್ದರು.

ಯಲ್ಲಾರೆಡ್ಡಿಯವರ ತಂದೆಯವರ ಹೆಸರು ಬಿಡ್ಡಾರೆಡ್ಡಿ ಎಂದು. ಕಳೆದ ವರ್ಷ ತಾನೆ ತಮ್ಮ ನೂರನೆ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ ಬಿಡ್ಡಾರೆಡ್ಡಿಯವರಿಗೆ ಈಗ 101 ವರ್ಷ ವಯಸ್ಸು. ದೃಷ್ಟಿ ಈಗಲೂ ಚೆನ್ನಾಗಿದೆ ಅನ್ನುತ್ತಾರೆ. ಮೊದಲಿನಿಂದಲೂ ಸ್ಥಿತಿವಂತರ ಕುಟುಂಬ ಇವರದು. ಆ ಕಾಲದಲ್ಲಿಯೇ ಆಷ್ಟಿಷ್ಟು ಓದಿಕೊಂಡ ಇವರು ಸ್ವಾತಂತ್ರ್ಯ ಹೋರಾಟಗಾರರೂ ಹೌದು. ನಲವತ್ತು ವರ್ಷಗಳ ಹಿಂದೆ ಕೆಲವು ಸಮಾನ ಮನಸ್ಕರೊಂಡನೆ ಸೇರಿಕೊಂಡು ಸುತ್ತಮುತ್ತಲ ಹಳ್ಳಿಗಳಿಗೆಲ್ಲ ಕೇಂದ್ರಸ್ಥಳವಾಗಿದ್ದ ಚಂದಾಪುರದಲ್ಲಿ "ಸ್ವಾಮಿ ವಿವೇಕಾನಂದ ಗ್ರಾಮಾಂತರ ಪ್ರೌಢಶಾಲೆ" ಸ್ಥಾಪಿಸಿದ್ದು ಇವರೆ. ಮಕ್ಕಳೆಂದರೆ ಅಪಾರ ಪ್ರೀತಿ ಇವರಿಗೆ. ಶಾಲೆಯಲ್ಲಿ ಅಧ್ಯಾಪಕರೇನಾದರೂ ಮಕ್ಕಳನ್ನು ಹೊಡೆದದ್ದು ಇವರಿಗೆ ಗೊತ್ತಾದರೆ ಅಧ್ಯಾಪಕರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರಂತೆ. ಜೀವನದಲ್ಲಿ ಒಂದಷ್ಟು ಮೌಲ್ಯಗಳನ್ನು, ಸಾಮಾಜಿಕ ಕಾಳಜಿಗಳನ್ನು ಇಟ್ಟುಕೊಂಡು ಬದುಕಿದವರು.

ಯಲ್ಲಾರೆಡ್ಡಿಯವರು ಬಿಡ್ಡಾರೆಡ್ಡಿಯವರ ಹಿರಿಯ ಮಗ. 35 ವರ್ಷಗಳ ಹಿಂದೆ ರಾಜ್ಯದ ಪ್ರತಿಷ್ಠಿತ ಯು.ವಿ.ಸಿ.ಇ. ಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ. ಮತ್ತು ಎಂ.ಇ. ಮುಗಿಸಿ, ಪಿಎಚ್‌ಡಿ ಗಾಗಿ ಇಂಗ್ಲೆಂಡ್‌ಗೆ ಹೋದರು. ನಂತರ ಅಲ್ಲಿ ಸುಮಾರು 20 ವರ್ಷ ಅಧ್ಯಾಪಕರಾಗಿದ್ದು ಆರೇಳು ವರ್ಷದ ಹಿಂದೆ ತಮ್ಮ ಶ್ರೀಮತಿಯವರೊಡನೆ ತಿರುಮಗೊಂಡನ ಹಳ್ಳಿಗೆ ವಾಪಸ್ಸಾಗಿ, ತಮ್ಮ ಶತಾಯುಷಿ ತಂದೆಯವರೊಡನೆ ಇದ್ದಾರೆ. ಬೆಂಗಳೂರಿನ ಸುತ್ತಮುತ್ತ ರಿಯಲ್ ಎಸ್ಟೇಟ್ ವ್ಯವಹಾರದಿಂದಾಗಿ ಚಿನ್ನದ ಬೆಲೆ ಬಂದಿರುವ ತಮ್ಮ ಜಮೀನಿನಲ್ಲಿ ಈಗಲೂ ಸ್ವತಃ ತಾವೇ ವ್ಯವಸಾಯ ಮಾಡುತ್ತಿದ್ದಾರೆ. ಕಳೆದ ಆರೇಳು ವರ್ಷಗಳಲ್ಲಿ ಬೆಂಗಳೂರಿನ ಒಂದೆರಡು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಿನ್ಸಿಪಾಲ್ ಆಗಿಯೂ ಡಾ. ಯಲ್ಲಾರೆಡ್ಡಿ ಕೆಲಸ ಮಾಡಿದ್ದಾರೆ. ಆಗೆಲ್ಲ ಬೆಳಿಗ್ಗೆ ಮತ್ತು ಸಾಯಂಕಾಲ ಹೊಲದಲ್ಲಿ ನೇಗಿಲು, ಸನಿಕೆ, ಗುದ್ದಲಿಗಳೊಡನೆ ಒಡನಾಟ; ಹತ್ತು ಗಂಟೆಯಾದ ಮೇಲೆ ನಗರದ ಕಾಲೇಜಿನಲ್ಲಿ ಅಧ್ಯಾಪನ ಮತ್ತು ಕಾಲೇಜು ಕೆಲಸ. ಮಧ್ಯೆ ತಂದೆಯವರ ಅಗತ್ಯಗಳನ್ನು ನೋಡಿಕೊಳ್ಳುವುದು. ಬಹುಶಃ ಕರ್ನಾಟಕದ ಯಾವುದೇ ಇಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲರೊಬ್ಬರ ದಿನಚರಿ ಹೀಗೆ ಇದ್ದದ್ದು ಅನುಮಾನ. ಈ ನಡುವೆ ತಮ್ಮದೇ ಒಂದು ಟ್ರಸ್ಟ್ ಮಾಡಿಕೊಂಡು, ಬಡಮಕ್ಕಳನ್ನು ಓದಿಸುವ ಯೋಜನೆ ಹಾಕಿಕೊಂಡು ರಾಮನಗರ, ಮಾಗಡಿಗಳ ಕಡೆ ಓಡಾಡುತ್ತಿದ್ದಾರೆ.

ಕಳೆದ ವಾರ ಲೋಕಾಯುಕ್ತ ದಾಳಿಗೆ ಒಳಗಾದ "ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ" ಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಇದೇ ಯಲ್ಲಾರೆಡ್ಡಿಯವರ ತಮ್ಮ; ಒಂದಷ್ಟು ಮೌಲ್ಯಗಳೊಂದಿಗೇ ಬದುಕಿದ ಶತಾಯುಷಿ ಬಿಡ್ಡಾರೆಡ್ಡಿಯವರ ಕಿರಿಯ ಮಗ.

ಲೇಖನದ ವಿಡಿಯೊ ಪ್ರಸ್ತುತಿ

ಜನ ಹುಟ್ಟುತ್ತಾರೆ, ಸಾಯುತ್ತಾರೆ. ಕುಟುಂಬಗಳು, ಸಾಮ್ರಾಜ್ಯಗಳು ಬೆಳೆಯುತ್ತವೆ, ಕಾಲಕ್ರಮೇಣ ಅವನತಿಯಾಗುತ್ತವೆ. ಕೆಲವು ಮೋಸಗಾರರಿಗೆ ಒಳ್ಳೆಯ ಮಕ್ಕಳು ಹುಟ್ಟುತ್ತಾರೆ. ಕೆಲವು ಒಳ್ಳೆಯವರಿಗೆ ದುಷ್ಟ ಮಕ್ಕಳು ಹುಟ್ಟುತ್ತಾರೆ. ಅದೇನೂ ದೊಡ್ಡ ವಿಷಯವಲ್ಲ. ಮೇಲಿನ ಪ್ರಸಂಗದಲ್ಲಿ ಒಂದೇ ಕುಟುಂಬದಲ್ಲಿನ ವೈರುಧ್ಯಗಳು ಎದ್ದು ಕಾಣಿಸುವುದೇನೋ ನಿಜ. ಆದರೆ, ಇಲ್ಲಿ ಅದಕ್ಕಿಂತ ಭೀಕರವಾದದ್ದು, ಯೋಚಿಸಬೇಕಾದ್ದು, ಇನ್ನೊಂದಿದೆ. ಅದು, ಕಳೆದ ಇಪ್ಪತ್ತು ವರ್ಷಗಳಲ್ಲಿ ಬೆಂಗಳೂರಿನ ಸುತ್ತಮುತ್ತ ಹಾಗೂ ಬಹುಶಃ ಇಡೀ ದೇಶದಲ್ಲಿ ಮೌಲ್ಯಗಳು ಹೇಗೆ ಪಲ್ಲಟಗೊಂಡಿವೆ ಅನ್ನುವುದು. ಇದು ಎಷ್ಟು ಢಾಳಾಗಿದೆ ಎಂದರೆ, ಕಳೆದ ಹತ್ತು ವರ್ಷಗಳಲ್ಲಿ ನನ್ನ ಸುತ್ತಮುತ್ತಲಿನ ಹಳ್ಳಿಗಳಲ್ಲಿಯ ಬಹುಪಾಲು ಜನ ತಮ್ಮ ಮಕ್ಕಳಿಗೆ ಡಾ. ಯಲ್ಲಾರೆಡ್ಡಿಯ ಬಗ್ಗೆ ಹೇಳುತ್ತಿಲ್ಲ. ಬದಲಿಗೆ, "ಆ ಶ್ರೀನಿವಾಸರೆಡ್ಡೀನ ನೋಡ್ರೋ. ಬೆಂಗಳೂರಿನಲ್ಲಿ ಎರಡು ಮೂರು ಬಂಗ್ಲೆಗಳಿವೆ. ಇನ್ನೂ ಎಷ್ಟೋ ಸೈಟುಗಳಿವೆಯಂತೆ. ಇವತ್ತು ಏನಿಲ್ಲಾ ಅಂದರೂ ಐವತ್ತು, ನೂರು ಕೋಟಿಗೆ ಬಾಳ್ತಾನೆ. ಗೌರ್ನಮೆಂಟ್‌ನಲ್ಲಿ ಒಳ್ಳೆ ಕೆಲಸದಲ್ಲಿ ಇದ್ದಾನೆ. ಚೆನ್ನಾಗಿ ದುಡ್ಡು ಮಾಡವ್ನೆ!" ಎನ್ನುತ್ತಿದ್ದಾರೆ. ಇದು ಇಂದಿನ ವಾಸ್ತವ ಪರಿಸ್ಥಿತಿ.

ಇಲ್ಲಿ ಇದಕ್ಕಿಂತ ಹೊಟ್ಟೆಕಿವುಚುವಂತಹದ್ದು ಇನ್ನೊಂದಿದೆ. ಅದೇನೆಂದರೆ, ಹತ್ತಿಪ್ಪತ್ತು ವರ್ಷಗಳ ಹಿಂದೆ ಯಾರು ತಮ್ಮ ಮಕ್ಕಳಿಗೆ ಯಲ್ಲಾರೆಡ್ಡಿಯ ಉದಾಹರಣೆ ಕೊಡುತ್ತಿದ್ದರೊ ಅದೇ ಜನ ಇವತ್ತು ಶ್ರೀನಿವಾಸರೆಡ್ಡಿಯ ಮತ್ತು ಅವರಂತಹವರ ಉದಾಹರಣೆ ಕೊಡುತ್ತಿರುವುದು. ಸಹ್ಯ ಸಮಾಜದಲ್ಲಿ ಇರಲೇಬೇಕಾದ ಕೆಲವು ಕನಿಷ್ಠ ಮೌಲ್ಯಗಳು ಯಾವ ಪರಿ ಅಧೋಗತಿಗೆ ಇಳಿದಿವೆ ಎಂದರೆ, ಸ್ವತಃ ಬಿಡ್ಡಾರೆಡ್ಡಿಯವರೆ ಇವತ್ತು ತಮ್ಮ ಹಿರಿಯ ಮಗನಿಗೆ ತಮ್ಮ ಕಿರಿಯ ಮಗನ ಉದಾಹರಣೆ ಕೊಟ್ಟು, "ನೋಡೋ, ಅವನನ್ನು ನೋಡಿ ಕಲಿತುಕೊ," ಎಂದುಬಿಟ್ಟರೆ, ಅದರಿಂದೇನೂ ಆಶ್ಚರ್ಯ ಪಡಬೇಕಿಲ್ಲ. ಯಾಕೆಂದರೆ, ಅಂತಹುದ್ದು ಇಂದು ಅನೇಕರ ಮನೆಗಳಲ್ಲಿ ಆಗುತ್ತಿವೆ. ಭ್ರಷ್ಟಾಚಾರ ಮಾಡಿ ಸಿಕ್ಕಿಹಾಕಿಕೊಳ್ಳುವುದು ಇವತ್ತು ಅವಮಾನದ ವಿಷಯವಲ್ಲ; ಕೆಲವು ದಿನಗಳ discomfort ಅಷ್ಟೆ. ಯಾವಯಾವ ಮೌಲ್ಯಗಳನ್ನು ಇಟ್ಟುಕೊಂಡು ದುಡಿಯಬೇಕು ಎನ್ನುವುದು ಇವತ್ತಿನ ಅಗತ್ಯ ಅಲ್ಲ. "ಏನಾದರೂ ಮಾಡಿ, ದುಡ್ಡು ಮಾಡಿ," ಎನ್ನುವುದು ಇವತ್ತಿನ ಅವಶ್ಯಕತೆ. ಪ್ರಾಮಾಣಿಕವಾಗಿ ಬದುಕುವವರು ಹುಚ್ಚರು, ಲೂಸರ್‌ಗಳು; ಅವರು ಬಡವರಾಗಿದ್ದರಂತೂ ಲೆಕ್ಕಕ್ಕೇ ಇಲ್ಲ. ಅದೇ ದುಡ್ಡಿರುವವನು ಮಾಡುವ ಹೀನಾತಿಹೀನ ಕೃತ್ಯವೂ ಇವತ್ತು ಸಮರ್ಥನೀಯ. ಹೇಗೆ ಮಾಡಿದ ಎನ್ನುವುದು ಮುಖ್ಯವಲ್ಲ. ಎಷ್ಟು ಮಾಡಿದ ಎನ್ನುವುದಷ್ಟೆ ಮುಖ್ಯ. ದುಷ್ಟರೂ, ಭ್ರಷ್ಟರೂ ಆಗಲಷ್ಟೆ ಈಗ ಪೈಪೋಟಿ.

ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಏನಾಗಿ ಹೋಯಿತು ಈ ಸಮಾಜ? ಮೌಲ್ಯಗಳ ಪುನರ್‌ ಸ್ಥಾಪನೆ ಈಗ ತುರ್ತಾಗಿ ಆಗಬೇಕಿರುವ ಕೆಲಸಗಳಲ್ಲಿ ಒಂದು. ಇಲ್ಲವಾದಲ್ಲಿ ನಾವು ಶತಮಾನಗಳ ಕಗ್ಗತ್ತಲೆಯತ್ತ ಹೆಜ್ಜೆಯಿಡುತ್ತಿದ್ದೇವೆ.

ರಾಷ್ಟ್ರಕವಿಗಳಲ್ಲೂ ಅವನತಿಗೊಂಡ ಮೌಲ್ಯಗಳು
ಇವತ್ತು ಮೌಲ್ಯಗಳು ಜನಸಾಮಾನ್ಯರಲ್ಲಿಯಷ್ಟೇ ಅಲ್ಲ, ಯಾರು ಇಡೀ ಸಮಾಜದ ಸಾಕ್ಷಿಪ್ರಜ್ಞೆ ಆಗಬೇಕಿತ್ತೊ ಅವರಲ್ಲಿಯೇ ಅವನತಿ ಆಗಿಬಿಟ್ಟಿವೆ. ಜಿ.ಎಸ್.ಶಿವರುದ್ರಪ್ಪ ಅವರನ್ನು ಸರ್ಕಾರ ಕಳೆದ ವರ್ಷ "ರಾಷ್ಟ್ರಕವಿ" ಎಂದು ಘೋಷಿಸಿತು. ನಂತರದ ದಿನಗಳಲ್ಲಿ ಎಲ್ಲೆಲ್ಲೂ ಸನ್ಮಾನಕ್ಕೆ ತಲೆಬಾಗುತ್ತಿರುವ ಕವಿಶ್ರೇಷ್ಠರದೇ ಸುದ್ದಿಚಿತ್ರಗಳು! ರಾಷ್ಟ್ರಕವಿ ಎನ್ನುವುದು ಪದವಿಯೇ ಯಾಕಾಗಬೇಕು, ಅದು ಜವಾಬ್ದಾರಿಯೂ ಹೌದಲ್ಲವೆ ಎಂದುಕೊಳ್ಳದ ರಾಷ್ಟ್ರ(ಆಸ್ಥಾನ)ಕವಿಗಳು, ಮೊನ್ನೆ ಯಡ್ಡಯೂರಪ್ಪನವರ ಪ್ರಮಾಣವಚನ ಸಮಾರಂಭಕ್ಕೂ ಹಾಜರು. ಕಳೆದ ಮೂರು ವರ್ಷಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ಅನೈತಿಕ, ನಿರ್ಲಜ್ಜ ರಾಜಕೀಯ ಹೊಂದಾಣಿಕೆಗಳಿಗೆಲ್ಲ ತಮ್ಮ ಹಾಜರಿ ಮಾತ್ರದಿಂದಲೆ ಮಾನ್ಯತೆ ದೊರಕಿಸಿಕೊಟ್ಟುಬಿಟ್ಟ, ತಮ್ಮ ಉಪಸ್ಥಿತಿ ಕಾಲಾತೀತವಾಗಿ ಏನನ್ನು ಹೇಳುತ್ತದೆ ಎನ್ನುವುದನ್ನು ಯೋಚಿಸಲಾರದೆ ಹೋದ ಜಿಎಸ್ಸೆಸ್, ಪ್ರಜಾಪ್ರಭುತ್ವದಲ್ಲಿ ರಾಷ್ಟ್ರಕವಿಯಾಗಲು ನಿಜಕ್ಕೂ ಅರ್ಹರೆ?

1949 ರಲ್ಲಿ ಕರ್ನಾಟಕ ಏಕೀಕರಣದ ಹೋರಾಟ ನಡೆಯುತ್ತಿತ್ತು. ದಕ್ಷಿಣದ ಕೆಲವು ಜಾತಿಗಳ ರಾಜಕಾರಣಿಗಳಿಗೆ ಮತ್ತು ಕೆಲವು ಪಟ್ಟಭದ್ರ ಹಿತಾಸಕ್ತರಿಗೆ ಅದು ಬೇಕಿರಲಿಲ್ಲ. ಕವಿ ಕುವೆಂಪು ಏಕೀಕರಣದ ಪರ ಒಮ್ಮೆ ಮಾತನಾಡಿದ್ದಕ್ಕೆ ಆಗಿನ ಸಚಿವರಿಂದ ಎಚ್ಚರಿಕೆಯ ನೋಟಿಸ್ ಬಂತಂತೆ. ಕುವೆಂಪು ಉತ್ತರ ಬರೆದರು.

  ಅಖಂಡ ಕರ್ಣಾಟಕ:
  ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ !
  ಇಂದು ಬಂದು ನಾಳೆ ಸಂದು
        ಹೋಹ ಸಚಿವ ಮಂಡಲ
  ರಚಿಸುವೊಂದು ಕೃತಕವಲ್ತೊ
  ಸಿರಿಗನ್ನಡ ಸರಸ್ವತಿಯ
        ವಜ್ರಕರ್ಣ ಕುಂಡಲ!
  ಅಖಂಡ ಕರ್ಣಾಟಕ:
  ಅಲ್ತೊ ನಮ್ಮ ನಾಲ್ಕುದಿನದ ರಾಜಕೀಯ ನಾಟಕ !


ಯಾವುದು ಸರಿ, ಯಾವುದು ಸರಿಯಲ್ಲ ಎಂಬ ಸ್ಪಷ್ಟ ಕಲ್ಪನೆಯಿದ್ದವರು ಕುವೆಂಪು. ಅವರು ಆಸ್ಥಾನಕವಿಯಲ್ಲ. ನಿಜವಾದ ರಾಷ್ಟ್ರಕವಿ. ಯುವರಾಜರಿಗೆ ಟ್ಯೂಷನ್ ಹೇಳಿಕೊಡಿ ಎಂಬ ಕೋರಿಕೆ ಅರಮನೆಯಿಂದ ಬಂದಾಗಲೂ ಅದನ್ನು ನಿರಾಕರಿಸಿದ್ದ ಸ್ವಾಭಿಮಾನಿ, ಕುವೆಂಪು. ರಾಜಪ್ರಭುತ್ವದಲ್ಲಿ ಪ್ರಜಾಪ್ರಭುತ್ವದ ಆತ್ಮಾಭಿಮಾನ ಇಟ್ಟುಕೊಂಡವರು.

ಕುವೆಂಪು ಅವರ ನೇರಶಿಷ್ಯರುಗಳಲ್ಲಿ ಶ್ರೇಷ್ಠಕವಿ ಎನ್ನಿಸಿಕೊಂಡವರು ಶಿವರುದ್ರಪ್ಪನವರು. ಪ್ರಜಾಪ್ರಭುತ್ವದಲ್ಲಿ ರಾಜಪ್ರಭುತ್ವದಲ್ಲಿರಬೇಕಿದ್ದ ಆಸ್ಥಾನನಿಷ್ಠೆ ಇಟ್ಟುಕೊಂಡವರು.
ಮೌಲ್ಯಗಳಲ್ಲಿ ಎಂತಹ ಅಧೋಗತಿ ನೋಡಿ...

Nov 21, 2007

ವಿವೇಕಾನಂದರನ್ನು ಅಡಿಗಡಿಗೆ ಅವಮಾನಿಸಿದ ಯಡ್ಡಯೂರಪ್ಪ...

(ವಿಕ್ರಾಂತ ಕರ್ನಾಟಕ - ನವೆಂಬರ್ 30, 2007 ರ ಸಂಚಿಕೆಯಲ್ಲಿನ ಬರಹ)

ಆಧುನಿಕ ಕನ್ನಡದ ಸರ್ವಶ್ರೇಷ್ಠ, ದಾರ್ಶನಿಕ ಮನಸ್ಸೊಂದು ಹೀಗೆ ದಾಖಲಿಸುತ್ತದೆ:
"ನಮ್ಮ ರಾಜಕೀಯವಲಯದಲ್ಲಿಯೋ ಭವಿಷ್ಯನಿರ್ಣಯ ಮಾಡುವ ಜ್ಯೋತಿಷಿಗಳಿಗೆ ಪರಮಾಧಿಕಾರ ಲಭಿಸಿದಂತಾಗಿದೆ. ಅಧಿಕಾರಿ ತನ್ನ ಮೇಲ್ಮೆಯನ್ನು ಸಾಧಿಸಲು ಸೇವಾನಿಷ್ಠೆಯನ್ನು ಅನುಸರಿಸುವ ಕ್ಲೇಷಕ್ಕೆ ಹೋಗುವುದಿಲ್ಲ; ಜ್ಯೋತಿಷಿಯನ್ನೋ ಮಾಂತ್ರಿಕನನ್ನೋ ಆಶ್ರಯಿಸುತ್ತಾನೆ. ಮಂತ್ರಿ ತನ್ನ ರಾಜಕೀಯ ಭದ್ರತೆಯನ್ನು ಪ್ರಜಾಸತ್ತೆಯ ಋಜುನಿಯಮಗಳಿಂದ ಸ್ಥಾಪಿಸಿಕೊಳ್ಳುವ 'ಅಭದ್ರ ವಿಜ್ಞಾನ'ಕ್ಕೆ ಬಿಟ್ಟುಕೊಡದೆ ಜ್ಯೋತಿಷಿಯ 'ಸುಭದ್ರ ಅಜ್ಞಾನ'ಕ್ಕೇ ಶರಣು ಹೋಗುತ್ತಾನೆ. ಮಂತ್ರಿತ್ವ ವಹಿಸಿಕೊಳ್ಳುವ ಕಾಲನಿರ್ಣಯ ಮಾಡುವವನು ಜ್ಯೋತಿಷಿ. ಕೊನೆಗೆ ವಿಮಾನ ಏರುವ ಮುಹೂರ್ತ ಇಟ್ಟುಕೊಡುವವನೂ ಜ್ಯೋತಿಷಿ; ಕೊನೆಗೆ ವಿಮಾನ ಹಾರುವ ಸಮಯ ಗೊತ್ತು ಮಾಡುವುದೂ ಇವನ ಕೈಲಿರದಿದ್ದರೆ, ಜೋಯಿಸನ 'ನಿಮಿತ್ತ'ಕ್ಕೆ ಶರಣಾಗಿ, ತನ್ನ ನಿವಾಸದಿಂದಾದರೂ ಆ ಸುಮುಹೂರ್ತಕ್ಕೆ ಹೊರಡದಿದ್ದರೆ ಆತನ ಮನಸ್ಸಿಗೆ ನೆಮ್ಮದಿ ಇಲ್ಲ. ತನ್ನ ಅವಿವೇಕದಿಂದ ಏನಾದರೂ ಕೆಟ್ಟುದಾದರೆ, ಸರಿ, ಹೊರಟ ಗಳಿಗೆಯ ಮೇಲೆ ಹೊರೆ ಹೇರುತ್ತಾರೆ. ಅಧ್ಯಾಪಕ, ಅಧಿಕಾರಿ, ಮಂತ್ರಿ, ವ್ಯಾಪಾರಿ, ಮಠಾಧಿಪತಿ, ಶ್ರಮಜೀವಿ, ಕೂಲಿ, ಕೊನೆಗೆ ಕಳ್ಳ-ಎಲ್ಲರಲ್ಲಿಯೂ ಎಲ್ಲೆಲ್ಲಿಯೂ ಇಂತಹ ಅವೈಜ್ಞಾನಿಕತೆ ಮತ್ತು ಅವಿಚಾರತೆ ವ್ಯಾಪಿಸಿ ವರ್ಧಿಸುತ್ತಿರುವುದನ್ನು ಸಂಕಟದಿಂದ ನೋಡುತ್ತಿರಬೇಕಿದೆ."

ನಿಮಗೆ ಈಗಾಗಲೆ ಗೊತ್ತಾಗಿರಬಹುದು, ಇದನ್ನು ಬರೆದವರು ಋಷಿಪ್ರಜ್ಞೆಯ ಕವಿ, ಸಾಹಿತಿ, ವಿಚಾರವಾದಿ, ಗುರು, ಚಿಂತಕ, ಎಲ್ಲವೂ ಆಗಿದ್ದ ಶ್ರೀ ಕುವೆಂಪುರವರು ಎಂದು. ಅವರು ಇದನ್ನು ಬರೆದದ್ದು ಸರಿಯಾಗಿ 43 ವರ್ಷಗಳ ಹಿಂದೆ; ದಿನಾಂಕ ಮೇ 5, 1963 ರಂದು; "ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ" ಪುಸ್ತಕದ ಮುನ್ನುಡಿಯಲ್ಲಿ.

ಎಂತಹ ಘೋರ, ಅವಮಾನಕರ ಬೌದ್ಧಿಕ ಹಿನ್ನಡೆ ನೋಡಿ, ಕರ್ನಾಟಕಕ್ಕೆ... ಕಳೆದ ನಾಲ್ಕೈದು ದಶಕಗಳಲ್ಲಿ ರಾಜ್ಯದಲ್ಲಿ ಬೌದ್ಧಿಕ ಪ್ರಗತಿ ಆದಂತೆಯೇ ಇಲ್ಲ. ಇಷ್ಟೊತ್ತಿಗೆಲ್ಲ ಯಾವಯಾವ ಕೆಲಸಗಳು ಅವಮಾನಕರವೂ, ತುಚ್ಛವೂ, ಕೀಳುಮಟ್ಟದ್ದೂ ಆಗಬೇಕಿತ್ತೊ ಅವಕ್ಕೆಲ್ಲ ಈಗ "ರಾಜಕೀಯ ಅಧಿಕೃತತೆ" ಸಿಕ್ಕಿಬಿಟ್ಟಿದೆ. ಕಳೆದ ಹತ್ತು ವರ್ಷಗಳಿಂದ ಕರ್ನಾಟಕವನ್ನು ಆಳಿದ ದೇವೇಗೌಡ, ಎಸ್ಸೆಮ್ ಕೃಷ್ಣ, ಕುಮಾರಸ್ವಾಮಿ, ಯಡ್ಡಯೂರಪ್ಪ ಮುಂತಾದವರ ಮಾಟಮಂತ್ರಜ್ಯೋತಿಷ್ಯವಾಸ್ತುಗಳ ಪ್ರಚ್ಛನ್ನ ನಿರ್ಲಜ್ಜ ಆಚರಣೆ ಮತ್ತು ಪ್ರದರ್ಶನ ಕುವೆಂಪುರಂತಹವರು ಯಾವುದರ ವಿರುದ್ಧ ಹೋರಾಡಿದರೊ ಅದೆಲ್ಲವನ್ನೂ ಅಣಕ ಮಾಡುತ್ತಿದೆ. ಅದರಲ್ಲೂ ಹಿಂದೂ ಮತಾಂಧತೆಯನ್ನು ಉದ್ಧೀಪಿಸಿ "ಸಾತ್ ದಿನ್ ಕಾ ಸಾಮ್ರಾಟ್" ಆಗಿಹೋದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಂತೂ, ಕ್ಷಮಿಸಿ, ಯಡ್ಡಯೂರಪ್ಪನವರಂತೂ ಹಿಂದಿನ ಎಲ್ಲಾ ಮತಮೂಢ ಕಂದಾಚಾರಿ ರಾಜಕಾರಣಿಗಳಿಗಿಂತ ಮುಂದಕ್ಕೆ ಹೋಗಿಬಿಟ್ಟಿದ್ದಾರೆ; ಬಹಿರಂಗ ಆಚರಣೆಗೆ ಇಳಿದುಬಿಟ್ಟಿದ್ದಾರೆ. ಸುಂದರವಾದ, ಜೀವಪರವಾದ, ವಿಚಾರಪರವಾದ, ಆಧುನಿಕ ದೃಷ್ಟಿಕೋನದ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿ ಕಾಡುತ್ತಿದ್ದಾರೆ.

ಲೇಖನದ ವಿಡಿಯೊ ಪ್ರಸ್ತುತಿ - ಭಾಗ 1

ಎಷ್ಟೊಂದು ಹೋಮಗಳು; ಯಜ್ಞಗಳು; ಯಾಗಗಳು; ಪೂಜೆಗಳು; ವ್ರತಗಳು; ಮೌನವ್ರತಗಳು; ಶಕುನಗಳು; ಆಶೀರ್ವಾದಗಳು; ದೇವಾಲಯ ಸಂದರ್ಶನಗಳು; ದೈವಕ್ಕೆ ಪೂಜೆ; ಯಾವುದಕ್ಕೂ ಇರಲೆಂದು ದೆವ್ವಕ್ಕೂ ಪೂಜೆ.. ಇವೆಲ್ಲವೂ ಏನಕ್ಕಾಗಿ? ಜನರ ಕ್ಷೇಮಕ್ಕಾಗಿ ಎನ್ನುತ್ತಾರಲ್ಲ ಈ ಎರಡು ನಾಲಿಗೆಯ ವಚನಭ್ರಷ್ಟರು! ತಮ್ಮ ವೈಯಕ್ತಿಕ ಅಧಿಕಾರ ಲಾಲಸೆಗಾಗಿ ಮಾಡಿದ ಈ ತುಚ್ಛ, ನಿರ್ಲಜ್ಜ ಕಂದಾಚಾರಗಳನ್ನು ಜನಸಾಮಾನ್ಯರ ಹಿತಕ್ಕಾಗಿ ಎನ್ನುತ್ತಾರಲ್ಲ, ಯಾವ ಸಂಸ್ಕೃತಿ ಇವರದು? ಇವೆಲ್ಲವನ್ನೂ ಜನರ ಕ್ಷೇಮಕ್ಕಾಗಿಯೇ ಮಾಡುವ ಹಾಗಿದ್ದರೆ, ಇದೆಲ್ಲವನ್ನೂ ಮಾಡಲು ಇಲ್ಲಿಯ ತನಕ ಕಾಯಬೇಕಿತ್ತೆ? ಮುಖ್ಯಮಂತ್ರಿ ಕೂಡುವ ಕುರ್ಚಿಗೆ ಅದ್ಯಾವನೊ ಅವಿವೇಕಿ ಮುಟ್ಠಾಳ ಪೂಜೆ ಮಾಡಿ, 'ಇನ್ನು ಇಪ್ಪತ್ತು ವರ್ಷ ಈ ಕುರ್ಚಿ ನಿಮಗೇ ಸಿಗುವಂತಹ ಪೂಜೆ ಮಾಡಿದ್ದೇನೆ,' ಎಂದನಂತೆ!! ಇದೇನು ಪ್ರಜಾಪ್ರಭುತ್ವವೊ, ಕಾಡುಮೃಗಗಳ ಸಾಮ್ರಾಜ್ಯವೊ? ಮಾರನೆಯ ದಿನ ಮತ್ಯಾವನೊ ಮುಖ್ಯಮಂತ್ರಿಯ ಬಾಯಿಗೆ ಏನನ್ನೋ ಹಾಕಿ, 'ಅದನ್ನು ತೆಗೆದುಕೊಂಡು ಹೋಗಿ ಹಿಂದಿನ ದಿನ ಪೂಜೆ ಮಾಡಿದ್ದ ಅದೇ ಕುರ್ಚಿಗೆ ಹೋಗಿ ಉಗಿ,' ಎಂದನಂತೆ! ಆಹಾ, ಕುರ್ಚಿಯ ಕರ್ಮವೆ! ಅಕಟಕಟಾ... ಕೊನೆಗೂ ಏನಾಯಿತು? ಕೇವಲ ತನ್ನ ಸ್ವಾರ್ಥಕ್ಕಾಗಿಯೇ ಮಾಡಿದ ಈ ಎಲ್ಲಾ ಯಜ್ಞಯಾಗಾದಿಗಳು, ವ್ರತಗಳು, ಪೂಜೆಪುನಸ್ಕಾರಗಳು ಗಳಿಸಿ ಕೊಟ್ಟ ಅಧಿಕಾರಾವಧಿ ಎಷ್ಟು ದಿನ? ಇನ್ನೊಂದು ಕೈಯ ಬೆರಳುಗಳಲ್ಲಿ ಎರಡು ಎಣಿಸುವಷ್ಟರಲ್ಲಿ ಎಲ್ಲಾ ಮುಗಿದೇ ಹೋಯಿತು. ರಾಮ್ ನಾಮ್ ಸತ್ಯ್ ಹೈ!!! ರಾಮ್ ನಾಮ್ ಸತ್ಯ್ ಹೈ!!! ರಾಮ್ ನಾಮ್ ಸತ್ಯ್ ಹೈ!!!

ನಮ್ಮ ದೇಶ ಮತ್ತು ಧರ್ಮಕ್ಕೆ ಕೀರ್ತಿಯ ಕಲಶವನ್ನಿಟ್ಟ" ಒಬ್ಬ ಸನ್ಯಾಸಿಯ ಬಗ್ಗೆ ಕುವೆಂಪು ಹೀಗೆ ಬರೆಯುತ್ತಾರೆ:
"(ದೇವರು, ಧರ್ಮ, ಭಕ್ತಿ, ಪೂಜೆ, ಇಹ, ಪರ ಮೊದಲಾದ) ವಿಚಾರಗಳನ್ನು ಬಹು ಸುಲಭವಾಗಿ ಲೋಕಕ್ಕೆ ತಿಳಿಸಿದ ಒಬ್ಬರು ಮಹಾತ್ಮರಿದ್ದಾರೆ. ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ಓದು ಬರೆಹ ಚೆನ್ನಾಗಿ ತಿಳಿದವರಲ್ಲ. ಆದರೂ ಪಾಶ್ಚಾತ್ಯ ದೇಶಗಳಿಂದ ಪಂಡಿತವರ್ಯರಾಗಿ ಬಂದವರೂ ಕೂಡ, ಅವರ ಪದತಲದಲ್ಲಿ, ನಿರಕ್ಷರಕುಕ್ಷಿಗಳಾದ ಸಾಮಾನ್ಯರೊಡನೆ ಕುಳಿತು, ಅವರ ಉಪದೇಶಾಮೃತವನ್ನು ಸವಿದರು. ಅವರ ಶಿಷ್ಯರಾದ ಸ್ವಾಮಿ ವಿವೇಕಾನಂದರು ಯೂರೋಪು ಅಮೆರಿಕಾಗಳಿಗೆ ಹೋಗಿ ವೇದಾಂತ ಬೋಧೆ ಮಾಡಿ ಜಗದ್ವಿಖ್ಯಾತ ರಾದುದಲ್ಲದೆ, ನಮ್ಮ ದೇಶ ಮತ್ತು ಧರ್ಮಗಳಿಗೆ ಕೀರ್ತಿಯ ಕಲಶವನ್ನಿಟ್ಟರು."

ಸ್ವಾಮಿ ವಿವೇಕಾನಂದ ಎಂಬ ಸನ್ಯಾಸಿ ಹೇಳಿದ ವಿಚಾರಗಳಿಗೆ ಭದ್ರವಾಗಿ ಗೋರಿಯನ್ನು ಕಟ್ಟಿ, ಅಷ್ಟೇ ಭದ್ರವಾಗಿ ಆತನ ಆಕಾರವನ್ನು ಮಾತ್ರ ತಮ್ಮ ಅತ್ಯಮೂಲ್ಯ ಆಸ್ತಿಯನ್ನಾಗಿ ಮಾಡಿಕೊಂಡಿರುವವರು ಈಗಿನ ಮೂಢ ಹುಸಿಹಿಂದುತ್ವವಾದಿಗಳು. ಇವರು ಹೇಳುವ ಸುಳ್ಳುಗಳು ಏನೇ ಇರಲಿ, ವಿವೇಕಾನಂದರ ಬಗ್ಗೆ ಏಳೆಂಟು ದಶಕಗಳ ಹಿಂದೆಯೆ ಮತ್ತೊಬ್ಬ ಋಷಿಕವಿ ಠಾಗೂರರು "ನಿಮಗೆ ಭಾರತದ ಬಗ್ಗೆ ತಿಳಿದುಕೊಳ್ಳಬೇಕಿದ್ದರೆ ವಿವೇಕಾನಂದರನ್ನು ಅಭ್ಯಸಿಸಿ. ಅವರಲ್ಲಿ ಪ್ರತಿಯೊಂದೂ ಗುಣಾತ್ಮಕವೆ. ಋಣಾತ್ಮಕವಾದದ್ದು ಅವರಲ್ಲಿ ಯಾವುದೂ ಇಲ್ಲ," ಎಂದಿದ್ದರು. ಭಾರತದಲ್ಲಿನ ಹಿಂದೂ ಸಮಾಜವನ್ನು ಸುಧಾರಿಸಲು ಮಹಾನ್ ಪ್ರಯತ್ನ ಮತ್ತು ಪ್ರಯೋಗಗಳನ್ನು ಮಾಡಿದ, ಭಾರತದ ಸರ್ವಶ್ರೇಷ್ಠ ಜಾತ್ಯತೀತನಾಗಿದ್ದ, ಆದರೆ ಹಿಂದೂ ಮತಾಂಧನಿಂದಲೆ ಹತನಾಗಿ ಹೋದ ಮಹಾತ್ಮ ಗಾಂಧಿ, "ನನ್ನ ದೇಶದ ಮೇಲಿನ ನನ್ನ ಪ್ರೀತಿ ವಿವೇಕಾನಂದರ ಪ್ರಭಾವದಿಂದಾಗಿ ಸಾವಿರಪಟ್ಟು ಹೆಚ್ಚಾಯಿತು," ಎಂದಿದ್ದಾರೆ. ಗಾಂಧಿಯ ಅನುಯಾಯಿಯಾಗಿದ್ದ ಚಕ್ರವರ್ತಿ ರಾಜಗೋಪಾಲಚಾರಿಯವರಂತೂ "ವಿವೇಕಾನಂದರು ಹಿಂದೂಯಿಸಮ್ ಅನ್ನು ಕಾಪಾಡಿದರು," ಎಂದಿದ್ದರೊಮ್ಮೆ.

ಕಳೆದ ನೂರು ವರ್ಷಗಳಿಂದ ಭಾರತದ ಹಲವಾರು ಶ್ರೇಷ್ಠ ಮನಸ್ಸುಗಳನ್ನು ಪ್ರಭಾವಿಸುತ್ತ ಬಂದಿರುವ, ಹಿಂದುತ್ವವವನ್ನು ಕಾಪಾಡಿದ ಸ್ವಾಮಿ ವಿವೇಕಾನಂದರು ಮೂಢನಂಬಿಕೆಗಳ ಬಗ್ಗೆ ಒಮ್ಮೆ ಹೀಗೆ ಹೇಳುತ್ತಾರೆ:

"ಶತಮಾನಗಳಿಂದ ನಾವು ಎದೆಗೊತ್ತಿಕೊಂಡು ಬಂದಿರುವ ಈ ಮೂಢನಂಬಿಕೆಗಳನ್ನು ಭಾರತದ ಮಣ್ಣಿನಿಂದ ಕಿತ್ತೆಸೆಯಬೇಕು. ಮತ್ತೆ ಅವು ಎಂದೂ ಬೆಳೆಯದಂತಹ ಕಡೆ, ಶಾಶ್ವತವಾಗಿ ನಿರ್ನಾಮವಾಗುವಂತಹ ಕಡೆ ಬಿಸಾಕಿಬಿಡಬೇಕು. ಹಿಂದೂ ಜನಾಂಗದ ಮತಿ ಕುಲಗೆಡುತ್ತ ಬಂದಿರುವುದಕ್ಕೆ ಈ ಮೂಢನಂಬಿಕೆಗಳೆ ಕಾರಣ. ಇವು ಮತಿ ದುರ್ಬಲವಾಗಲು ಪ್ರೇರೇಪಿಸುತ್ತವೆ. ಸ್ವಂತಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡ, ಎಲ್ಲಾ ತರಹದ ತೇಜಸ್ಸನ್ನು ಕಳೆದುಕೊಂಡ, ಮಹತ್ತರವಾದದ್ದನ್ನು, ಅತ್ಯುತ್ತಮವಾದದ್ದನ್ನು ಯೋಚಿಸಲಾರದ ಮೆದುಳು ಧರ್ಮದ ಹೆಸರಿನಲ್ಲಿ ಕಾಣಿಸುವ ಎಲ್ಲಾ ತರಹದ ಸಣ್ಣಪುಟ್ಟ ಮೂಢನಂಬಿಕೆಗಳಿಂದ ತನ್ನನ್ನು ವಿಷಯುಕ್ತ ಗೊಳಿಸಿಕೊಳ್ಳುತ್ತಿರುತ್ತದೆ. ಹಾಗಾಗಿ ನಮಗೆ ಇದೆಲ್ಲ ತಿಳಿದಿರಬೇಕು.

"ಮೂಢನಂಬಿಕೆಗಳನ್ನು ನಂಬುವ ಮೂಢರಾಗುವುದರ ಬದಲು ನೀವು ಅತ್ಯುಗ್ರ ನಾಸ್ತಿಕರಾದರೂ ಆದರೆ ಅದರಿಂದ ನನಗೇನೂ ಬೇಜಾರಿಲ್ಲ. ಯಾಕೆಂದರೆ, ನಾಸ್ತಿಕ ಚೈತನ್ಯಶೀಲ; ಅವನನ್ನು ಎಂದಾದರೂ ಬದಲಾಯಿಸಬಹುದು. ಆದರೆ ಈ ಮೌಢ್ಯಗಳು ಆವರಿಸಿಕೊಂಡವೆಂದರೆ ಬುದ್ಧಿ ಹೊರಟೇ ಹೋಯಿತು; ಮತಿ ದುರ್ಬಲವಾಯಿತು; ಜೀವನವನ್ನು ಕೊಳೆಯುವಿಕೆ ಅಮರಿಕೊಂಡು ಕೊಳೆಸಲಾರಂಭಿಸಿಬಿಟ್ಟಿತು.

"ಓ ಧೀರನೆ, ಕೆಚ್ಚಿನ ಮನುಷ್ಯನೆ, ನಮಗೆ ಬೇಕಿರುವುದು ರಕ್ತದಲ್ಲಿ ಅಪರಿಮಿತವಾದ ಚೈತನ್ಯ, ನರಗಳಲ್ಲಿ ಭೀಮಬಲ, ಕಬ್ಬಿಣದ ಮಾಂಸಖಂಡಗಳು, ಮತ್ತು ಎಂದಿಗೂ ಎದೆಗುಂದದ ಉಕ್ಕಿನಂತಹ ಸ್ಥೈರ್ಯವೇ ಹೊರತು, ದುರ್ಬಲವಾದ, ತುಚ್ಛವಾದ ಆಲೋಚನೆಗಳಲ್ಲ. ಅಂತಹ ತುಚ್ಛ, ಕೀಳು ಆಲೋಚನಗಳನ್ನೆಲ್ಲವನ್ನೂ ನಿರಾಕರಿಸಿ. ಎಲ್ಲಾ ತರಹದ ಮೂಢನಂಬಿಕೆಗಳನ್ನು ನಿರಾಕರಿಸಿ. ಎಲ್ಲಾ ತರಹದ ಮೌಢ್ಯಗಳಿಂದ ಕಳಚಿಕೊಳ್ಳಿ. ಧೈರ್ಯವಂತರಾಗಿ; ಸ್ವತಂತ್ರರಾಗಿ.

"ಮೌಢ್ಯತೆ ಮಾನವನ ಅತಿ ದೊಡ್ಡ ಶತ್ರು. ಆದರೆ ಈ ಮತಾಂಧತೆ ಮತ್ತು ಅಸಹಿಷ್ಣುತೆ ಅದಕ್ಕಿಂದ ದೊಡ್ಡ ಶತ್ರು."


ಹಿಂದೂ ಮತದ ಬಗ್ಗೆ, ಉಪನಿಷತ್ತುಗಳ ಬಗ್ಗೆ, ಭಾರತೀಯ ಜೀವನದರ್ಶನದ ಬಗ್ಗೆ ಅಪಾರ ಹೆಮ್ಮೆ ಹೊಂದಿದ್ದ ಕುವೆಂಪುರವರು ಮತ್ತು ವಿಶ್ವವಿಖ್ಯಾತ ಸನ್ಯಾಸಿ ವಿವೇಕಾನಂದರು ಹೇಳಿದ ಮಾತುಗಳ ಹಿನ್ನೆಲೆಯಲ್ಲಿ ಈಗ ಕರ್ನಾಟಕದ ವರ್ತಮಾನವನ್ನು ಗಮನಿಸೋಣ. ಆ ಮಹಾಪುರುಷರ ವಿಚಾರಗಳ್ಯಾವುವೂ ಈ ಮತಾಂಧರಿಗೆ, ಶಿಲಾಯುಗದ ಅವಿವೇಕಿಗಳಿಗೆ ಬೇಕಿಲ್ಲ. ಇವರಿಗೆ ಬೇಕಿರುವುದೆಲ್ಲ ವಿವೇಕಾನಂದರ ಧೀರೊದ್ಧಾತ್ತ ನಿಲುವಿನ ಒಂದು ವಿಗ್ರಹ; ಒಂದು ಕ್ಯಾಲೆಂಡರ್ ಪೋಟೊ; ಅವರು ಧಿಕ್ಕರಿಸಿದ ಮೌಢ್ಯ ಕಂದಾಚಾರಗಳು ಮಾತ್ರ. ಹಾಗೆಯೆ, ತಮ್ಮಂತಹುದೇ ಮತಭ್ರಾಂತರ ಪ್ಯಾಂಫ್ಲೆಟ್ ಸಾಹಿತ್ಯ.

ಮೌಢ್ಯತೆ ಮಾನವನ ಅತಿ ದೊಡ್ಡ ಶತ್ರು; ಮತಾಂಧತೆ ಅದಕ್ಕಿಂತ ದೊಡ್ಡ ಶತ್ರು, ಎಂದರು ಸ್ವಾಮಿ ವಿವೇಕಾನಂದ. ಕರ್ನಾಟಕದ ದುರ್ಗತಿ ನೋಡಿ... ಯಾವುದನ್ನು ಮಾನವನ ಎರಡು ಅತಿ ದೊಡ್ಡ ಶತ್ರುಗಳು ಎಂದು ವಿವೇಕಾನಂದರು ಹೇಳಿದರೊ, ಆ ಎರಡೂ ದುಷ್ಟಶತ್ರುಗಳ ಅಡಿಯಾಳಾಗಿ ಹೋಗಿರುವ ಯಡ್ಡಯೂರಪ್ಪ ಇವತ್ತು ಕರ್ನಾಟಕದ ಮುಖ್ಯಮಂತ್ರಿ; ಕ್ಷಮಿಸಿ. ಏಳೇ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ. ಹ್ಞಾಂ.. ಭಾಗ್ಯವೇ... "ಆವರಣ"ವೇ...

ಈಗ ವಿಚಾರ ಮಾಡೋಣ, ಹಿಂದುವಿನ ಸದ್ಯದ ನಿಜ ಶತ್ರು ಯಾರು? ಎಂದು. ತಮ್ಮ ಬಹಿರಂಗ ಕ್ರಿಯೆಗಳಿಂದ ಕರ್ನಾಟಕವನ್ನು ಅಧಿಕೃತವಾಗಿ ಮೌಢ್ಯಕ್ಕೆ ತಳ್ಳಲು ಯತ್ನಿಸಿದ, ಸ್ವಾಮಿ ವಿವೇಕಾನಂದರನ್ನು ಅಡಿಗಡಿಗೆ ಧಿಕ್ಕರಿಸಿದ, ಅವಮಾನಿಸಿದ ಈ ಯಡ್ಡರು ವಿಶ್ವಮಾನವನಾಗುವುದು ಇರಲಿ, ಕನಿಷ್ಠ ಒಳ್ಳೆಯ ಹಿಂದುವಾಗಲಾದರೂ ಯೋಗ್ಯರೆ?



ವಿವೇಕ ನುಡಿಯ ಹಿನ್ನೆಲೆಯಲ್ಲಿ...
ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿನ ವಿಶ್ವಧರ್ಮಸಂಸತ್‌ನಲ್ಲಿ ಪಾಲ್ಗೊಂಡದ್ದು 1893 ರಲ್ಲಿ. ಅಲ್ಲಿಗೆ ಹೋಗುವುದಕ್ಕಿಂತ ಮೊದಲು ಅವರು ಭಾರತದಾದ್ಯಂತ ಯಾತ್ರೆ ಕೈಗೊಂಡಿದ್ದರು. ಆ ಸಮಯದಲ್ಲಿ ಕರ್ನಾಟಕಕ್ಕೂ ಬಂದಿದ್ದರು. 1892 ರಲ್ಲಿ ಮೈಸೂರಿನಲ್ಲಿ ಅಂದಿನ ಮಹಾರಾಜರಾಗಿದ್ದ ಒಂಬತ್ತನೇ ಚಾಮರಾಜ ಒಡೆಯರ ಅತಿಥಿಯಾಗಿ ಒಂದೆರಡು ವಾರ ಇದ್ದರು. ಅದೇ ಪರಿಚಯದ ಮೇಲೆ, ಹೆಚ್ಚುಕಮ್ಮಿ ತಮ್ಮದೇ ವಯಸ್ಸಿನವರಾಗಿದ್ದ ಆ ಯುವ ಮಹಾರಾಜರಿಗೆ ಸ್ವಾಮಿ ವಿವೇಕಾನಂದರು 1894 ರಲ್ಲಿ ಅಮೆರಿಕಾದಿಂದಲೆ ಒಂದು ಕಾಗದ ಬರೆಯುತ್ತಾರೆ: "ಪ್ರತಿಯೊಂದು ದೇಶವೂ, ಪ್ರತಿಯೊಬ್ಬ ಗಂಡಸೂ, ಪ್ರತಿಯೊಬ್ಬ ಹೆಂಗಸೂ ತಮ್ಮ ಆತ್ಮೋದ್ಧಾರವನ್ನು ತಾವೇ ಸಂಪಾದಿಸಿಕೊಳ್ಳಬೇಕು. ಅವರಲ್ಲಿ ಆಲೋಚನೆಗಳನ್ನು ತುಂಬುವುದಷ್ಟೇ ಅವರಿಗೆ ನಾವು ಮಾಡಬೇಕಿರುವ ಸಹಾಯ. ಮಿಕ್ಕದ್ದು ತಾನೇ ತಾನಾಗಿ ಆಗುತ್ತದೆ. ಓ ನನ್ನ ಉದಾತ್ತ ಗುಣದ ರಾಜಕುಮಾರನೆ, ಈ ಜೀವನದ ಆಯಸ್ಸು ಬಹಳ ಕಮ್ಮಿ; ಈ ಪ್ರಪಂಚದ ದುರಹಂಕಾರ ಮತ್ತು ಒಣಪ್ರತಿಷ್ಠೆಗಳು ಬಹಳ ಅಸ್ಥಿರ, ಅಶಾಶ್ವತ. ಆದರೆ ಯಾರು ಇನ್ನೊಬ್ಬರಿಗಾಗಿ ಜೀವಿಸುತ್ತಾರೊ ಅವರು ಮಾತ್ರ ಬದುಕಿರುತ್ತಾರೆ. ಮಿಕ್ಕವರು ಬದುಕಿರುವುದಕ್ಕಿಂತ ಹೆಚ್ಚಾಗಿ ಸತ್ತೇ ಇರುತ್ತಾರೆ."
ಲೇಖನದ ವಿಡಿಯೊ ಪ್ರಸ್ತುತಿ - ಭಾಗ 2

ಈಗಿನ ವಿರೋಧಾಭಾಸ ನೋಡಿ: ಏಳೇ ದಿನಗಳಲ್ಲಿ ಮಾಜಿಯಾಗಿಬಿಟ್ಟ ಕರ್ನಾಟಕದ ಇತ್ತೀಚಿನ ಮುಖ್ಯಮಂತ್ರಿ ತಮಗಾಗಿ ಬದುಕುತ್ತ, ತಮ್ಮ ಕುರ್ಚಿಗಾಗಿ ಹೋಮಹವನಗಳನ್ನು, ಪುರಾಣಗಳಲ್ಲಿನ ರಾಜರು ಮಾಡಿಸುತ್ತಿದ್ದಂತೆ ಯಜ್ಞಯಾಗಾದಿಗಳನ್ನು ಮಾಡಿಸಿದರು. ಇವರು ಜನರಲ್ಲಿ ಅಧಿಕೃತವಾಗಿ ತುಂಬಲು ಯತ್ನಿಸಿದ ಆಲೋಚನೆಗಳೆಲ್ಲ ಮೌಢ್ಯವನ್ನು ಹೆಚ್ಚಿಸುವ ಆಲೋಚನೆಗಳೆ. ಬದುಕುತ್ತಿರುವುದು ತಮಗಾಗಿ; ತುಂಬುತ್ತಿರುವುದು ತುಚ್ಛ ಆಲೋಚನೆಗಳು. ವಿವೇಕಾನಂದರಿಗೆ, ಅವರ ಪ್ರಭಾವಕ್ಕೊಳಗಾಗಿದ್ದ ಮೈಸೂರಿನ ಆ ಯುವ ಮಹಾರಾಜರಿಗೆ ಇವರು ಸಲ್ಲಿಸುತ್ತಿರುವ ಗೌರವವಾದರೂ ಎಂತಹುದು? ಒಂದು ಶ್ರೇಷ್ಠ ಪರಂಪರೆಗೆ ಇವರೆಂತಹ ಉತ್ತರಾಧಿಕಾರಿ? ಇದನ್ನು ಜನರಷ್ಟೇ ಅಲ್ಲ, ಇಂತಹವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಸರ್ಕಾರ ಕಾರು ಕಳುಹಿಸಿತೆಂದು ಹೋಗುವ "ವಯೋ"ವೃದ್ಧರು ನಿಷ್ಠುರವಾಗಿ ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಇದು.


ದುರ್ಜನಃ ಸಜ್ಜನೋ ಭೂಯಾತ್ ಸಜ್ಜನಃ ಶಾಂತಿಮಾಪ್ನುಯಾತ್
ಶಾಂತೋ ಮುಚ್ಯೇತ ಬಂಧೇಭ್ಯೋ ಮುಕ್ತಶ್ಚಾನ್ಯಾನ್ ವಿಮೋಚಯೇತ್||

(ದುರ್ಜನರು ಸಜ್ಜನರಾಗಲಿ, ಸಜ್ಜನರಿಗೆ ಶಾಂತಿ ಲಭಿಸಲಿ, ಶಾಂತರು ಬಂಧಮುಕ್ತರಾಗಲಿ, ಮುಕ್ತರು ಇತರರನ್ನೂ ಮುಕ್ತರನ್ನಾಗಿ ಮಾಡಲಿ.)

Nov 14, 2007

ಬಾಬ್ಬಿ ಜಿಂದಾಲ್ - ಪಕ್ಕಾ ಕೆರಿಯರ್ ರಾಜಕಾರಣಿ

(ವಿಕ್ರಾಂತ ಕರ್ನಾಟಕ - ನವೆಂಬರ್ 23, 2007 ರ ಸಂಚಿಕೆಯಲ್ಲಿನ ಬರಹ)

ಅಮೇರಿಕದಲ್ಲಿಯೆ ಹುಟ್ಟಿ ಬೆಳೆದ ಬಾಬ್ಬಿ ಜಿಂದಾಲ್ ಎಂಬ 36 ವರ್ಷದ ಯುವಕ ಅಮೇರಿಕದ ಲೆಕ್ಕಾಚಾರದಲ್ಲಿ ಹಿಂದುಳಿದ ರಾಜ್ಯವೆಂದು ಪರಿಗಣಿತವಾದ ಲೂಸಿಯಾನ ರಾಜ್ಯಕ್ಕೆ ಗವರ್ನರ್ ಆಗಿ ಒಂದೆರಡು ವಾರಗಳ ಹಿಂದೆ ಚುನಾಯಿಸಲ್ಪಟ್ಟ. ಆ ವಾರ್ತೆಯನ್ನು ಎಲ್ಲಾ ಮಾಮೂಲಿ ಸುದ್ದಿಗಳಂತೆ ರಾಯ್ಟರ್ಸ್, ಅಸ್ಸೊಸಿಯೇಟೆಡ್ ಪ್ರೆಸ್ ಮತ್ತಿತರ ಸುದ್ದಿ ಸಂಸ್ಥೆಗಳು ಪತ್ರಿಕಾಲಯಗಳಿಗೆ ಬಿಡುಗಡೆ ಮಾಡಿದವು. ಸಿಲಿಕಾನ್ ಕಣಿವೆ, ಹಾಲಿವುಡ್ ಮುಂತಾದ ವಿಶ್ವಪ್ರಸಿದ್ಧ ಸ್ಥಳಗಳನ್ನು ಹೊಂದಿರುವ, ಅಮೇರಿಕಾದಲ್ಲಿಯೆ ಅತ್ಯಂತ ಶ್ರೀಮಂತ ರಾಜ್ಯವಾದ ಕ್ಯಾಲಿಪೋರ್ನಿಯಾದ ರಾಜ್ಯಪಾಲನಾಗಿ ಒಂದೆರಡು ತಿಂಗಳ ಹಿಂದೆ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಎಂಬ ವಿಶ್ವಪ್ರಸಿದ್ಧ ಆಕ್ಷನ್ ನಟ ಪುನರ್ ಆಯ್ಕೆಗೊಂಡಾಗಲೆ ತಲೆ ಕೆಡಿಸಿಕೊಳ್ಳದ ಇಲ್ಲಿಯ ಮೀಡಿಯ ಬಾಬ್ಬಿ ಜಿಂದಾಲ್ ಆಯ್ಕೆಯ ಬಗ್ಗೆಯೂ ಅಷ್ಟೇನೂ ತಲೆಕೆಡಿಸಿಕೊಳ್ಳಲಿಲ್ಲ.

ಆದರೆ ಭೂಮಿಯ ಇನ್ನೊಂದು ಭಾಗದಲ್ಲಿದ್ದ ಭಾರತದಲ್ಲಿನ ಮಾಧ್ಯಮಗಳಿಗೆ ಇದೊಂದು ದೊಡ್ಡ ಸುದ್ದಿ. ಅಮೇರಿಕದಲ್ಲಿ ಎದ್ದ ಟೀ ಕಪ್ಪಿನ ಬಿರುಗಾಳಿ ಭಾರತೀಯರಿಗೆ ಕಾಣಿಸಿದ್ದು ಹಿಂದೂ ಮಹಾಸಾಗರದಲ್ಲಿನ ಚಂಡಮಾರುತವಾಗಿ! ಅನೇಕ ಕೋಮುವಾದಿ ಹಿಂದೂ ಭಕ್ತರೆಲ್ಲ "ಜಿಂದಾಲ್ ಎಂಬ ಭಾರತೀಯ ಮೂಲದ ಮನುಷ್ಯ ಅಮೇರಿಕದ ರಾಜ್ಯವೊಂದಕ್ಕೆ ರಾಜ್ಯಪಾಲನಾಗಿ ಆಯ್ಕೆಯಾದ" ಎಂಬ ಸುದ್ದಿ ಕೇಳಿ ಪುಳಕಗೊಂಡು ಬಿಟ್ಟರು. ತಮ್ಮ ಮತದ ಧ್ವಜ ಅಮೇರಿಕಲ್ಲಿಯೂ ಹಾರಾಡುತ್ತಿದೆ ಎಂದು ಹೆಮ್ಮೆ ಪಟ್ಟಿದ್ದೆ ಪಟ್ಟಿದ್ದು. "ನಮ್ ಹುಡುಗೀರು ಹೋಗಿ ಹೋಗಿ ಸಾಬರನ್ನೆ ಲವ್ ಮಾಡಿ ಮದುವೆ ಆಗ್ತವೆ... ಅವರು ಲವ್ ಮಾಡದಂತೆ ಘೋಷಾ ಹಾಕ್ರಿ, ಕಾವಲು ಕಾಯ್ರಿ... ಸಾಬರ ಮತಕ್ಕೆ, ಆ ಕ್ರಿಶ್ಚಿಯನ್ ಮತಕ್ಕೆ ನಮ್ಮವರು ಕನ್ವರ್ಟ್ ಆಗದಂತೆ ಕಾಪಾಡ್ರೀ... ಅಯ್ಯೋ, ಅಮ್ಮಾ ಅಪ್ಪಾ... ನಮ್ಮ ಮತಾನ ಕಾಪಾಡ್ರಿ..." ಎಂದೆಲ್ಲಾ ಚೀರಾಡುವ ಚಣ್ಣ ತೊಟ್ಟ ಬಾಲಕರೆಲ್ಲ "ಜಿಂದಾಲ್ ಜಿಂದಾಬಾದ್" ಎನ್ನಲಾರಂಭಿಸಿಬಿಟ್ಟರು! ಎಂತಹ ವಿಚಿತ್ರ ನೋಡಿ. ತಾನೆತಾನಾಗಿ ಹಿಂದೂ ಮತದಿಂದ ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡ ಪಕ್ಕಾ ರಾಜಕಾರಣಿಯೊಬ್ಬನನ್ನು ಈ ಹುಸಿ ಹಿಂದೂವಾದಿಗಳು ಭಾರತೀಯ (ಅಂದರೆ ಹಿಂದೂ ಎಂದು ಓದಿಕೊಳ್ಳಬೇಕು) ಪತಾಕೆ ಹಾರಿಸಿದವನು ಎಂದು ರೀಮುಗಟ್ಟಲೆ ಹೊಗಳಲಾರಂಭಿಸಿಬಿಟ್ಟರು. ಕೀಳರಿಮೆ ಎನ್ನುವುದು ಮನುಷ್ಯನನ್ನು ಯಾವ ಪರಿ ಆವರಿಸಿಕೊಳ್ಳುತ್ತದೆ ಎನ್ನುವುದಕ್ಕೆ ಈ ದ್ವಂದ್ವಗಳೆ ಸಾಕ್ಷಿ.

ಲೇಖನದ ವಿಡಿಯೊ ಪ್ರಸ್ತುತಿ

ಈ ಬಾಬ್ಬಿ ಜಿಂದಾಲ್‌ನ ಮೂಲ ಹೆಸರು ಪೀಯುಶ್ ಜಿಂದಾಲ್ ಎಂದು. ಈಗಲೂ ಆತನ ಲೀಗಲ್ ಹೆಸರು ಪೀಯುಶ್ ಜಿಂದಾಲ್ ಎಂದೇ ಇದೆ. ನೆನ್ನೆ ಮೊನ್ನೆ ಈ ದೇಶಕ್ಕೆ ಬಂದಿಳಿದ ಹಲವಾರು ಚೀನೀಯರು, ಭಾರತೀಯರೆ ಇಲ್ಲಿನ ಜನಕ್ಕೆ ಉಚ್ಚಾರ ಮಾಡಲು ಅನುಕೂಲವಾಗಲಿ ಅಂತ ಹೆಸರು ಬದಲಾಯಿಸಿಕೊಳ್ಳುವಾಗ ಇನ್ನು ಹೆಚ್ಚಿಗೆ ಬಿಳಿಯರ ನಡುವೆಯೆ ಬೆಳೆದ ಪೀಯುಶ್ ತನ್ನ ವಿದೇಶಿ ಹೆಸರನ್ನು ಬಾಬ್ಬಿ ಎಂದು ಬದಲಾಯಿಸಿಕೊಂಡಿದ್ದು ಆಶ್ಚರ್ಯವೇನೂ ಅಲ್ಲ. ಆದರೆ ಈತನ ಜೀವನದಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಬೇಕಾದದ್ದು ಒಂದಿದೆ: ಅದು ಆತ ತನ್ನ ಕಾಲೇಜಿನ ದಿನಗಳಲ್ಲಿ ಹಿಂದೂ ಮತದಿಂದ ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗಿದ್ದು.

ಕಾಲೇಜಿನ ದಿನಗಳಲ್ಲಿಯೆ ಕ್ರಿಶ್ಚಿಯನ್ ಮತಕ್ಕೆ ಮತಾಂತರನಾಗುವ ಅವಶ್ಯಕತೆ ಅಥವ ಆಲೋಚನೆ ಬಾಬ್ಬಿ ಜಿಂದಾಲ್‌ಗೆ ಬಂದಾದ್ದರೂ ಹೇಗೆ ಎನ್ನುವ ಪ್ರಶ್ನೆ ನಾವು ಹಾಕಿಕೊಂಡರೆ ಆ ವಯಸ್ಸಿನಲ್ಲಿಯೆ ಈತನಿಗೆ ಯಾವ ಹೆಜ್ಜೆ ಇಟ್ಟರೆ ತಾನು ಅಮೇರಿಕದ ಬಹುಸಂಖ್ಯಾತ ಕ್ರಿಶ್ಚಿಯನ್ ಸಮಾಜದಲ್ಲಿ, ಅಂದರೆ ಇಲ್ಲಿಯ ಮುಖ್ಯವಾಹಿನಿಯಲ್ಲಿ ಒಂದಾಗಬಹುದು ಎನ್ನುವ ದೂರದೃಷ್ಟಿ ಇದ್ದದ್ದು ಗೊತ್ತಾಗುತ್ತದೆ. ಕ್ರಿಶ್ಚಿಯನ್ ಮೂಲಭೂತವಾದಿಗಳು ಗಣನೀಯವಾಗಿರುವ ಲೂಸಿಯಾನಾದಂತಹ ರಾಜ್ಯದಲ್ಲಿ ಕ್ರಿಶ್ಚಿಯನ್ ಆಗುವುದರಿಂದ ತನಗೆ ಇಲ್ಲಿಯ ಬಿಳಿಹುಡುಗಿಯರೊಡನೆ ಡೇಟಿಂಗ್ ಸುಲಭ ಮತ್ತು ಹಾಗೆಯೆ ತನ್ನ ಭವಿಷ್ಯದ ರಾಜಕೀಯ ಆಕಾಂಕ್ಷೆಗಳಿಗೂ ಒಳ್ಳೆಯದು ಎನ್ನುವ ಒಂದು ಗಟ್ಟಿ ನಂಬಿಕೆ ಬಾಬ್ಬಿಗೆ ಇತ್ತು ಎಂದು ಕಾಣಿಸುತ್ತದೆ. ಅದಕ್ಕಾಗಿಯೆ ಆತ ಮತಾಂತರವಾಗಿದ್ದು ಎಂದು ಹೇಳಬಹುದೆ ಹೊರತು ಆತನಿಗೆ ನಿಜಕ್ಕೂ ಆಧ್ಯಾತ್ಮದ ಅವಶ್ಯಕತೆ ಇತ್ತೆ ಎನ್ನುವುದು ಸಂದೇಹ. ತನಗೆ ದೆವ್ವ ಅಥವ ಸೈತಾನ ಆವರಿಸಿಕೊಂಡ ಬಗ್ಗೆ, ಹೇಗೆ ಕ್ರಿಶ್ಚಿಯನ್ ಮತ ಹಿಂದೂ ಮತಕ್ಕಿಂತ ಭಿನ್ನ ಮತ್ತು ಉತ್ತಮ ಎಂಬ ಬಗ್ಗೆ, ಕ್ರಿಶ್ಚಿಯನ್ನನಾಗಿ ತಾನು ಪಡೆದ ಪುನರ್ಜನ್ಮದ ಬಗ್ಗೆ, ಬಾಬ್ಬಿ ಜಿಂದಾಲ್ ಏನೆಲ್ಲಾ ಬರೆದರೂ (www.jindalonreligion.com) ಅವೆಲ್ಲ ಪೊಳ್ಳು, ಅಪ್ರಾಮಾಣಿಕ ಚಿಂತನಗಳು ಎಂದೆ ನಾನು ಭಾವಿಸುತ್ತೇನೆ. ತನ್ನ ಸ್ನಾತಕೋತ್ತರ ಪದವಿಗೆ ಪೊಲಿಟಿಕಲ್ ಸೈನ್ಸ್ ಆರಿಸಿಕೊಂಡ ಪ್ರತಿಭಾವಂತ ವಿದ್ಯಾರ್ಥಿ ಬಾಬ್ಬಿಗೆ, ಕ್ರಿಶ್ಚಿಯನ್ ಅಲ್ಲದವನಿಗೆ ಈ ದೇಶದ ರಾಜಕೀಯದಲ್ಲಿ ಒಳ್ಳೆಯ ಭವಿಷ್ಯವಿಲ್ಲ ಎಂದು ಕಲ್ಪಿಸಿಕೊಳ್ಳುವುದು ಕಷ್ಟವಲ್ಲ.

ಇದನ್ನು ನಾವು ಅಮೇರಿಕದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಾಟ್ ಪಕ್ಷದಿಂದ ಸ್ಪರ್ಧಿಸಲು ಪ್ರಯತ್ನಿಸುತ್ತಿರುವ ಬರಾಕ್ ಒಬಾಮ ಎಂಬ ಕಪ್ಪುತಂದೆ-ಬಿಳಿತಾಯಿಯ ಕಪ್ಪುಮಗನ ರಾಜಕೀಯ ನಡೆಗಳ ಹಿನ್ನೆಲೆಯಿಂದಲೂ ಗಮನಿಸಬಹುದು. ಬರಾಕ್ ಒಬಾಮಗೆ ಇಟ್ಟಿರುವುದು ಆತನ ತಂದೆಯ ಹೆಸರನ್ನೆ. ಆದರೆ ತನ್ನ ಮುಸಲ್ಮಾನ ತಂದೆಯ ಪೂರ್ಣ ಹೆಸರಾದ "ಬರಾಕ್ ಹುಸೇನ್ ಒಬಾಮ" ಎಂಬ ಹೆಸರಿನಲ್ಲಿ ಬರುವ "ಹುಸೇನ್" ತನ್ನ ಹೆಸರಿನಲ್ಲಿ ಬಾರದಂತೆ ವಿಶೇಷ ಮುತುವರ್ಜಿ ವಹಿಸುವುದರ ಮತ್ತು ತಾನೊಬ್ಬ ಮಹಾನ್ ಕ್ರಿಶ್ಚಿಯನ್ ಮತಾನುಯಾಯಿ, ಪ್ರತಿವಾರ ಚರ್ಚಿಗೆ ಹೋಗುವ ಆಸ್ತಿಕ ಎಂಬಂತೆ ತೋರಿಸುವುದರ ಹಿಂದಿನ ಹೆಚ್ಚಿನಂಶ ರಾಜಕೀಯ ತಂತ್ರಗಾರಿಕೆಯೆ ಹೊರತು ಮತ್ತೇನೂ ಅಲ್ಲ. ಈ ದೇಶ ಎಷ್ಟೇ ಉದಾರ ದೇಶ ಎನ್ನಿಸಿದರೂ ದಕ್ಷಿಣದ ಹಲವಾರು ರಾಜ್ಯಗಳಲ್ಲಿ ನೀವು ಕೋಮುವಾದಿ ಕ್ರಿಶ್ಚಿಯನ್‌ರನ್ನು ತೃಪ್ತಿಪಡಿಸದಿದ್ದರೆ ಚುನಾವಣೆ ಗೆಲ್ಲುವುದು ಅಸಂಭವವೆ. ಹಾಗಾಗಿ, ಬರಾಕ್ ಒಬಾಮನಷ್ಟೆ ಮಹತ್ವಾಕಾಂಕ್ಷಿಯಂತೆ ಕಾಣುವ ಬಾಬ್ಬಿ ಜಿಂದಾಲ್ ಮತಾಂತರದಿಂದ ಪ್ರಾರಂಭಿಸಿ ಈವರೆಗಿನ ತನ್ನ ಪ್ರತಿಯೊಂದು ಹೆಜ್ಜೆಯನ್ನೂ ಲೆಕ್ಕಾಚಾರಯುತವಾಗಿ ಇಟ್ಟಿರುವುದು ಆತನ ರಾಜಕೀಯ ಮಹತ್ವಾಕಾಂಕ್ಷೆಯನ್ನು ತೋರಿಸುತ್ತದೆ.

ಇನ್ನೂ ಚಿಕ್ಕ ವಯಸ್ಸಿನ ಬಾಬ್ಬಿಗೆ ಇನ್ನೂ ಕನಿಷ್ಠ 30 ವರ್ಷಗಳ ಸಕ್ರಿಯ ರಾಜಕಾರಣದ ಅವಕಾಶವಿದೆ. ಅದರಲ್ಲಿ ಮುಂದಿನ ಎಂಟು ವರ್ಷಗಳನ್ನು ಆತ ಲೂಸಿಯಾನಾದ ರಾಜ್ಯಪಾಲನಾಗಿ (ನಾಲ್ಕು ವರ್ಷಗಳ ನಂತರ ಪುನರಾಯ್ಕೆಗೊಂಡ ಪಕ್ಷದಲ್ಲಿ) ಮುಂದುವರೆಯಬಹುದು. ನಂತರ ಆತನ ರಾಜಕೀಯ ಜೀವನ ಏನಾಗಬಹುದು ಎಂದು ಯೋಚಿಸಿದರೆ, ಈ ಮನುಷ್ಯ ತನ್ನ ಮುಂದಿನ ಹೆಜ್ಜೆಗಳನ್ನು ಇನ್ನೂ ಹುಷಾರಾಗಿ ಇಟ್ಟಲ್ಲಿ ಈ ದೇಶದ ರಾಷ್ಟ್ರಾಧ್ಯಕ್ಷನಾಗುವ ತನಕವೂ ಬೆಳೆಯಬಹುದಾದ ಸಾಧ್ಯತೆ ಇದೆ ಎನ್ನಬಹುದು. ಮತ್ತು ಅದು ಸಾಧ್ಯವೂ ಆಗಬಹುದು. ಏಕೆಂದರೆ, ಅಮೇರಿಕದ ಭವಿಷ್ಯದ ರಾಜಕಾರಣದಲ್ಲಿ ಕನಿಷ್ಠ ಉಪರಾಷ್ಟ್ರಪತಿ ಸ್ಥಾನಕ್ಕಾದರೂ ತನ್ನದೆ ಪಕ್ಷದ ಅಥವ ಡೆಮಾಕ್ರಾಟ್ ಪಕ್ಷದ ವೈಲ್ಡ್‌ಕಾರ್ಡ್ ಆಗುವ ಯೋಗ್ಯತೆಗಳೆಲ್ಲಾ ಈತನಲ್ಲಿ ಇವೆ.

2008 ರ ಕೊನೆಗೆ ಈಗಿನ ಅಧ್ಯಕ್ಷ ಜಾರ್ಜ್ ಬುಷ್‌ನ ಆಡಳಿತ ಕೊನೆಯಾಗುತ್ತದೆ. ನಮ್ಮ ಭಾರತದ ನಿರ್ಲಜ್ಜ ವಂಶಪಾರಂಪರ್ಯವನ್ನು ಈ ದೇಶದ ಜನರೂ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ ಎನ್ನುವ ಸ್ವಲ್ಪ ಆಸೆಯಿದ್ದಿದ್ದರೂ ಜಾರ್ಜ್ ಬುಷ್‌ನ ತಮ್ಮ ಜೆಬ್ ಬುಷ್ ಮುಂದಿನ ವರ್ಷದ ಚುನಾವಣೆಗೆ ನಿಲ್ಲುತ್ತಿದ್ದ ಎನ್ನುವುದು ನನ್ನ ನಂಬಿಕೆ. ಜೆಬ್ ಬುಷ್ ಅಮೇರಿಕದ ದೊಡ್ಡ ರಾಜ್ಯಗಳಲ್ಲಿ ಒಂದಾದ ಫ್ಲಾರಿಡಾದ ರಾಜ್ಯಪಾಲನಾಗಿ 1999-2007 ರ ತನಕ ಎರಡು ಅವಧಿಗೆ ಚುನಾಯಿತನಾಗಿದ್ದ. ಇಲ್ಲಿ ಮೂರನೆ ಬಾರಿಗೆ ಸ್ಪರ್ಧಿಸುವಂತಿಲ್ಲ. ಈಗ ಆತನ ಮುಂದಿರುವ ಹುದ್ದೆ ರಾಷ್ಟ್ರಪತಿ ಹುದ್ದೆಯೆ. "ನನ್ನ ತಮ್ಮ ಅತ್ಯುತ್ತಮ ಅಧ್ಯಕ್ಷನಾಗುತ್ತಾನೆ," ಎಂದು ಅಣ್ಣ ಈಗಾಗಲೆ ತಮ್ಮನ ಬಗ್ಗೆ ಹೇಳಿಯಾಗಿದೆ. ಮುಂದಿನ ವರ್ಷದ ಚುನಾವಣೆಯಲ್ಲಿ ಉಪಾಧ್ಯಕ್ಷನಾಗಿ ನಿಲ್ಲುವುದನ್ನು ಜೆಬ್ ಬುಷ್ ತಳ್ಳಿ ಹಾಕಿಲ್ಲ. ಅದಾಗದಿದ್ದರೂ ಇನ್ನು ನಾಲ್ಕು ವರ್ಷಗಳಲ್ಲಿ ಅಥವ ಎಂಟು ವರ್ಷಗಳಲ್ಲಿ ಜೆಬ್ ಬುಷ್ ಚುನಾವಣೆಗೆ ನಿಲ್ಲುವುದು ಗ್ಯಾರಂಟಿಯೆ. ನನಗನ್ನಿಸುವ ಪ್ರಕಾರ ಈಗ ಅಮೇರಿಕದ ಸಂಪ್ರದಾಯವಾದಿ ಪಕ್ಷವಾಗಿರುವ ಬುಷ್‌ನ ರಿಪಬ್ಲಿಕನ್ ಪಕ್ಷಕ್ಕೆ ಬಾಬ್ಬಿ ಜಿಂದಾಲ್‌ನಂತಹ ಬಿಳಿಯನಲ್ಲದ, ಆದರೆ ಸಂಪೂರ್ಣ ಕರಿಯನೂ ಅಲ್ಲದ ಮನುಷ್ಯ ಉಪರಾಷ್ಟ್ರಪತಿ ಹುದ್ದೆಗೆ ಸೂಕ್ತ ಅಭ್ಯರ್ಥಿ. ಬಾಬ್ಬಿ ಜಿಂದಾಲ್ ಏನಾದರೂ ಮುಂದಿನ ದಿನಗಳಲ್ಲಿ ಸ್ವಲ್ಪ ಉದಾರವಾದಿ ಧೋರಣೆಗಳನ್ನು ಬೆಳೆಸಿಕೊಂಡು ಡೆಮಾಕ್ರಾಟ್ ಪಕ್ಷಕ್ಕೆ ಪಕ್ಷಾಂತರ ಮಾಡಿದರೂ ರಾಜ್ಯಪಾಲ ಹುದ್ದೆಗಿಂತ ಮೇಲಿನದಾದ ಉಪರಾಷ್ಟ್ರಪತಿ/ರಾಷ್ಟ್ರಪತಿ ಹುದ್ದೆಗೆ ಅಲ್ಲಿಯೂ ವೈಲ್ಡ್ ಕಾರ್ಡ್ ಆಗುವ ಸಾಧ್ಯತೆ ಇದ್ದೇ ಇದೆ.

ಆದರೆ ಬಾಬ್ಬಿಯ ಬಗ್ಗೆ ಭಾರತ ಮತ್ತು ಇಲ್ಲಿರುವ ಭಾರತೀಯರು ಏನಾದರೂ ಆಸೆ ಇಟ್ಟುಕೊಳ್ಳುವುದು ಮಾತ್ರ ಮೂರ್ಖತನ. ಇಲ್ಲಿರುವ ಭಾರತೀಯರನ್ನು ಬಾಬ್ಬಿ ಕೇವಲ ತನ್ನ ಚುನಾವಣೆಗೆ ಹಣಸಂಗ್ರಹ ಮಾಡಿಕೊಳ್ಳಲು ಉಪಯೋಗಿಸಿಕೊಳ್ಳುತ್ತಾನೆಯೆ ಹೊರತು ಅವರೊಂದಿಗೆ ಈತ ಯಾವ ಕಾರಣಕ್ಕೂ ಹೆಚ್ಚಿಗೆ ಗುರುತಿಸಿಕೊಳ್ಳಲು ಹೋಗುವುದಿಲ್ಲ. ಅದು ಆತನ ರಾಜಕೀಯ ಭವಿಷ್ಯಕ್ಕೆ ಒಳ್ಳೆಯದಲ್ಲ. ಈಗಾಗಲೆ ಆತ ಅದನ್ನೆ ಮಾಡಿದ್ದಾನೆ. ಜೊತೆಗೆ ಎಲ್ಲಾ "ನವಮತಾಂತರಿ" ಗಳೂ ಮಾಡುವಂತೆ ತಾನು ಇತರೆಲ್ಲ ಕ್ರಿಶ್ಚಿಯನ್ನರಿಗಿಂತ ಪ್ಯೂರ್ ಕ್ರಿಶ್ಚಿಯನ್ ಎಂದು ತೋರಿಸಿಕೊಳ್ಳುವ ಕೀಳರಿಮೆ ಇರುವುದರಿಂದ ಅದು ಬಹುಸಂಖ್ಯಾತ ಹಿಂದೂ ಭಾರತೀಯರಿಗೆ ಪಥ್ಯವಾಗುವುದು ಕಷ್ಟವೆ. ಇನ್ನು ಪಕ್ಕಾ ಕೆರಿಯರ್ ರಾಜಕಾರಣಿಯಾದ ಬಾಬ್ಬಿ ಜಿಂದಾಲ್ ಬಗ್ಗೆ ಕೇವಲ ಭಾರತೀಯ ಮೂಲದ ರಾಜಕಾರಣಿ ಎಂದಷ್ಟೆ ಭಾವಿಸಬೇಕೆ ಹೊರತು ಅದಕ್ಕಿಂತ ಹೆಚ್ಚಿನದನ್ನು ಆತನಲ್ಲಿ ನಾವು ಬಯಸಬಾರದು. ಎಲ್ಲಿಯವರೆಗೆ ತನ್ನ ಭಾರತೀಯ ಮೂಲ ಲಾಭಕರವಲ್ಲವೊ ಅಲ್ಲಿಯವರೆಗೆ ಈ ಮನುಷ್ಯ ಭಾರತದ ಬಗ್ಗೆ ಮಾತನಾಡುವುದನ್ನೂ ಸಹ ನಾವು ನಿರೀಕ್ಷಿಸಬಾರದು. ಬಾಬ್ಬಿ ಜಿಂದಾಲ್ ಇಲ್ಲಿಯವರೆಗೂ ಮೇಲಿನ ಹುದ್ದೆಗಳಿಗೆ ಹೋಗುವ ತನ್ನ ಸಾಮರ್ಥವನ್ನು, ರಾಜಕೀಯ ನಾಯಕತ್ವವನ್ನು ತೋರಿಸಿದ್ದಾನೆಯೆ ಹೊರತು ಆತನ ಬಗ್ಗೆ ಹೆಮ್ಮೆ ಪಡಬಲ್ಲ ಆದರ್ಶ ಗುಣಗಳನ್ನಲ್ಲ.

ಆದರೆ, ಈತನಿಗೆ ಇನ್ನೂ ಸುಧೀರ್ಘ ಭವಿಷ್ಯ ಇರುವುದರಿಂದ ಅದನ್ನಾಗಲಿ, ಈತನನ್ನಾಗಲೀ ಯಾವ ಕಾರಣಕ್ಕೂ ತಳ್ಳಿ ಹಾಕುವಂತಿಲ್ಲ.

Nov 9, 2007

ಯುದ್ಧ ಮತ್ತು ಶಾಂತಿ...

(ವಿಕ್ರಾಂತ ಕರ್ನಾಟಕ - ನವೆಂಬರ್ 16, 2007 ರ ಸಂಚಿಕೆಯಲ್ಲಿನ ಬರಹ)

ಅದು 1811-1812 ನೆ ಇಸವಿಯ ಯೂರೋಪು. ನೆಪೊಲಿಯನ್ನನ ಕಾಲ. ರಷ್ಯ-ಫ್ರಾನ್ಸ್ ಒಕ್ಕೂಟದಿಂದ ಬೇರಾಗಲು ರಷ್ಯ ಬಯಸುತ್ತಿರುತ್ತದೆ. ಅದನ್ನು ಒಪ್ಪದ ಫ್ರಾನ್ಸ್‌ನ ನೆಪೊಲಿಯನ್ ರಷ್ಯಕ್ಕೆ ಬುದ್ಧಿ ಕಲಿಸಲು ಅದರ ಮೇಲೆ ದಾಳಿ ಮಾಡುತ್ತಾನೆ. ರಷ್ಯಾದ ಒಳಗೇ ಅನೇಕ ಕದನಗಳು ನಡೆಯುತ್ತವೆ. ನೆಪೊಲಿಯನ್ನನದು ದೊಡ್ಡ ಸೈನ್ಯ. ಆದರೂ ರಷ್ಯನ್ನರನ್ನು ಸಂಪೂರ್ಣವಾಗಿ ಸೋಲಿಸಲಾಗುವುದಿಲ್ಲ. ನೆಪೊಲಿಯನ್ನನ ಆಕ್ರಮಣ ತಪ್ಪಿಸಿಕೊಳ್ಳಲು ರಷ್ಯನ್ನರು ಮಾಸ್ಕೊ ತೊರೆದು ಗ್ರಾಮೀಣ ಪ್ರದೇಶಗಳಿಗೆ ಓಡಿ ಹೋಗುತ್ತಾರೆ. ಅಂತಿಮ ಯುದ್ಧಕ್ಕೆ ಕಾಯುತ್ತ ನೆಪೊಲಿಯನ್ ಐದು ವಾರಗಳ ಕಾಲ ಮಾಸ್ಕೋ ನಗರದಲ್ಲಿಯೆ ಬೀಡುಬಿಡುತ್ತಾನೆ. ಅಷ್ಟೊತ್ತಿಗೆ ಮಾಸ್ಕೋಗೆ ಬೆಂಕಿ ಬಿದ್ದಿರುತ್ತದೆ. ಮಾಸ್ಕೊ ಕೈಬಿಟ್ಟಿದ್ದರೂ ರಷ್ಯಾದ ಸೇನಾನಾಯಕ ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತ ಯುದ್ಧಸಿದ್ಧತೆಯಲ್ಲಿ ತೊಡಗಿಕೊಂಡು ಯುದ್ಧವನ್ನು ವಿಳಂಬಿಸುತ್ತಿರುತ್ತಾನೆ. ದಹಿಸುತ್ತಿರುವ ಸ್ಮಶಾನ ಮಾಸ್ಕೋವನ್ನು, ಶಿಸ್ತುತಪ್ಪಿದ ತನ್ನ ಸೈನ್ಯವನ್ನು, ಕೊನೆಗೆ ಫ್ರಾನ್ಸೆ ತನ್ನ ಕೈತಪ್ಪಿಹೋಗುವ ಸ್ಥಿತಿಯನ್ನು ನೋಡಿ ತಲೆಕೆಟ್ಟ ನೆಪೊಲಿಯನ್ ಐದು ವಾರಗಳ ನಂತರ ಮಾಸ್ಕೊ ಬಿಟ್ಟು ಪ್ಯಾರಿಸ್‌ಗೆ ತೆರಳುತ್ತಾನೆ. ಅದು ಭಯಂಕರ ಹಿಮಪಾತದ ಚಳಿಗಾಲ. ಹಿಂದೆಗೆಯುತ್ತಿರುವ ಸೈನ್ಯಕ್ಕೆ ಹಿಂದಿನಿಂದ ಬಂದ ರಷ್ಯನ್ನರು ಅಪಾರ ಹಾನಿ ಮಾಡುತ್ತಾರೆ. ಆರೂವರೆ ಲಕ್ಷ ಸೈನಿಕರನ್ನು ಕಟ್ಟಿಕೊಂಡು ಯುದ್ಧಕ್ಕೆ ಹೋದ ನೆಪೊಲಿಯನ್ ಕೇವಲ ಐದು ತಿಂಗಳ ಆ ಯುದ್ಧದಲ್ಲಿ ಐದೂಮುಕ್ಕಾಲು ಲಕ್ಷ ಸೈನಿಕರನ್ನು ಕಳೆದುಕೊಂಡು ಐವತ್ತು ಸಾವಿರಕ್ಕೂ ಕಮ್ಮಿ ಸೈನಿಕರೊಡನೆ ವಾಪಸು ಮರಳುತ್ತಾನೆ. ಮೊದಲಿಗೆ ಸೋತರೂ ಕೊನೆಗೆ ಗೆದ್ದ ರಷ್ಯನ್ನರು ಕೇವಲ ನಾಲ್ಕು ಲಕ್ಷ ಸೈನಿಕರನ್ನು ಕಳೆದುಕೊಳ್ಳುತ್ತಾರೆ. ಆದರೆ ಸತ್ತ ನಾಗರಿಕರು ಮಾತ್ರ ಲಕ್ಷಾಂತರ.

ಇಂತಹ ಭೀಕರ ಯುದ್ಧದ ಹಿನ್ನೆಲೆಯಲ್ಲಿ ಲಿಯೊ ಟಾಲ್ಸ್‌ಟಾಯ್ ರಚಿಸಿದ ಕೃತಿ "ಯುದ್ಧ ಮತ್ತು ಶಾಂತಿ." ಯಾವ ಮಾನದಂಡ ಉಪಯೋಗಿಸಿದರೂ ಅದು ಒಂದು ಮಹತ್ತರ ಸಾಹಿತ್ಯ ಕೃತಿಯೆ. 1200 ಕ್ಕೂ ಹೆಚ್ಚಿನ ಪುಟಗಳು. ರಷ್ಯ ಮತ್ತು ಫ್ರಾನ್ಸ್‌ನ ವಿಶಾಲ ಐತಿಹಾಸಿಕ ಹರವು ಹೊಂದಿರುವ ಈ ಕಾದಂಬರಿಯಲ್ಲಿ ಇರುವ ಪಾತ್ರಗಳು ಒಟ್ಟು 582 ! ಅವುಗಳಲ್ಲಿ ಸರಿಸುಮಾರು 200 ಪಾತ್ರಗಳು ಕಾಲ್ಪನಿಕವಲ್ಲದ, ಐತಿಹಾಸಿಕ ವ್ಯಕ್ತಿಗಳು. ಒಂದು ರೀತಿಯಲ್ಲಿ ಐತಿಹಾಸಿಕವಲ್ಲದ, ಐತಿಹಾಸಿಕವಾದ, ಮಹಾನ್ ಐತಿಹಾಸಿಕ ಕಾದಂಬರಿ!

ಟಾಲ್ಸ್‌ಟಾಯ್ ಇದನ್ನು (1865-1869) ಒಮ್ಮೆ ಬರೆದು, ನಂತರ ಅನೇಕ ಸಲ ಅದನ್ನು ತಿದ್ದಿತೀಡಿ ಅಂತಿಮ ಆವೃತ್ತಿ ಪ್ರಕಟಿಸುತ್ತಾನೆ. ಈ ಅಂತಿಮ ಪ್ರಕಟನೆಯೆ ಹೆಚ್ಚು ಪ್ರಕಟಣೆಯಲ್ಲಿರುವುದು. ಇಲ್ಲಿಯವರೆಗೆ ಕೇವಲ ಇಂಗ್ಲಿಷ್ ಒಂದಕ್ಕೇ ಇದು ಹತ್ತಕ್ಕೂ ಹೆಚ್ಚಿನ ಸಲ ಬೇರೆಬೇರೆ ಲೇಖಕರಿಂದ ಅನುವಾದಗೊಂಡಿದೆ. ತೀರಾ ಇತ್ತೀಚಿನ ಸುದ್ದಿ ಏನೆಂದರೆ, ಟಾಲ್ಸ್‌ಟಾಯ್‌ನ ಮೊದಲ ಆವೃತ್ತಿಯ "ವಾರ್ ಅಂಡ್ ಪೀಸ್" ಇದೇ ಮೊದಲ ಬಾರಿಗೆ ಇಂಗ್ಲಿಷಿಗೆ ಅನುವಾದಗೊಂಡು ಎರಡು ತಿಂಗಳ ಹಿಂದಷ್ಟೆ ಬಿಡುಗಡೆ ಆಗಿದ್ದರೆ, ಪೂರ್ಣ ಆವೃತ್ತಿಯ ಮತ್ತೊಂದು ಇಂಗ್ಲಿಷ್ ಅನುವಾದ ಕೇವಲ ಎರಡು ವಾರದ ಹಿಂದೆ ಬಿಡುಗಡೆ ಆಗಿದೆ!
ಜೊತೆಜೊತೆಗೆ ಬಿಡುಗಡೆ ಆದ ಬೇರೆಬೇರೆ ಆವೃತ್ತಿಯ ಒಂದೇ ಕಾದಂಬರಿ ಈಗ ಇಂಗ್ಲಿಷ್ ಸಾಹಿತ್ಯ ವಲಯದಲ್ಲಿ ತನ್ನದೆ ಆದ ವಾಗ್ಯುದ್ಧ ಸೃಷ್ಟಿಸಿದ್ದು, ಇತ್ತೀಚಿನ ಅನುವಾದಕರು ಮತ್ತು ಪ್ರಕಾಶಕರು ಒಬ್ಬರಿನ್ನೊಬ್ಬರನ್ನು ಹೀಗಳೆದು ಕೊಳ್ಳುತ್ತಿದ್ದಾರೆ.

ಪೂರ್ಣ ಆವೃತ್ತಿಗಿಂತ 400 ಪುಟಗಳೆ ಕಮ್ಮಿಯಿರುವ ಮೊದಲ ಆವೃತ್ತಿಯ ಅನುವಾದವನ್ನು ಪ್ರಕಟಿಸಿರುವ ಪ್ರಕಾಶಕರು, "ಇದನ್ನು ಟಾಲ್ಸ್‌ಟಾಯ್ ಬರೆದ ಮೊದಲ ಕರಡು ಪ್ರತಿ ಎನ್ನುವ ಹಾಗಿಲ್ಲ. ಇದನ್ನು ಬರೆದು ಮುಗಿಸಿದ ಮೇಲೆ ಟಾಲ್ಸ್‌ಟಾಯ್ ಮುಕ್ತಾಯ ಎಂದು ಬರೆದು ಸಹಿ ಸಹ ಹಾಕಿದ್ದಾನೆ. ಇದೆ ಒರಿಜಿನಲ್ ಆವೃತ್ತಿ" ಎನ್ನುತ್ತಿದ್ದರೆ, ಇದನ್ನು ಇಷ್ಟಪಡದ ವಿರೋಧಿ ಬಣದವರು ಮಾತ್ರ, :ಇಲ್ಲ, ಇಲ್ಲ. ಮೊದಲನೆಯದು ಮೊದಲ ಡ್ರಾಫ್ಟ್ ಅಷ್ಟೆ. ಅಂತಿಮ ಆವೃತ್ತಿಯೆ ಟಾಲ್ಸ್‌ಟಾಯ್ ಸಂಪೂರ್ಣಗೊಳಿಸಿದ ಕಾದಂಬರಿ. ಟಾಲ್ಸ್‌ಟಾಯ್‌ಗೆ ತೃಪ್ತಿ ಆಗಿದ್ದೂ ಈ ಅಂತಿಮ ಆವೃತ್ತಿಯೆ," ಎನ್ನುತ್ತಿದಾರೆ. ಒಂದೆರಡು ವಾರಗಳಿಂದ ಇಂಗ್ಲಿಷಿನ ಸಾಹಿತ್ಯ ಸಂಬಂಧಿ ಸುದ್ಧಿಗಳಲ್ಲಿ ಈ ವಿವಾದ ಪ್ರತಿಧ್ವನಿಸುತ್ತಲೆ ಇದೆ.

ಲೇಖನದ ವಿಡಿಯೊ ಪ್ರಸ್ತುತಿ

ಟಾಲ್ಸ್‌ಟಾಯ್‌ನ ಎರಡು ಮೇರುಕೃತಿಗಳಾದ "ಅನ್ನಾ ಕರೆನಿನಾ" ಮತ್ತು "ಯುದ್ಧ ಮತ್ತು ಶಾಂತಿ" ಯನ್ನು ಕನ್ನಡದ ಹಿರಿಯ ಸಾಹಿತಿ ಮತ್ತು ಮೈಸೂರು ವಿವಿಯ ಮಾಜಿ ಉಪಕುಲಪತಿ ದೇ. ಜವರೇ ಗೌಡರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕುವೆಂಪುರವರ ಪರಮ ಶಿಷ್ಯರಾಗಿದ್ದ ದೇಜಗೌ, ಇತ್ತೀಚಿನ ದಶಕಗಳಲ್ಲಿ ಕುವೆಂಪುರವರ ತತ್ವ-ಸಿದ್ಧಾಂತಗಳಿಗೆ ಎಳ್ಳುನೀರು ಬಿಡಲು ಮನಸು ಮಾಡಿದವರಲ್ಲಿ ಅಗ್ರಗಣ್ಯರು. ಕುವೆಂಪುರವರು ನಿರಾಕರಿಸಿದ್ದ ಜಾತಿವಾದ, ಸ್ವಜನಪಕ್ಷಪಾತ, ಆಡಂಬರಗಳೆ ಇವರಿಗೆ ಪ್ರೀತಿ. ಇವರ ಇತ್ತೀಚಿನ ಕೆಲವು ಚಳವಳಿಗಳಿಗೆ ಕುವೆಂಪುರವರನ್ನು ದ್ವೇಷಿಸುತ್ತಿದ್ದ ಕೋಮುವಾದಿ ಮತಾಂಧರೆಲ್ಲ ಬಂದು ಬೆಂಬಲ ಸೂಚಿಸುತ್ತಿದ್ದಾರೆ ಎಂದರೆ ದೇಜಗೌ ಕುವೆಂಪುರವರಿಂದ ಎಷ್ಟು ದೂರ ಬಂದಿದ್ದಾರೆ ಎನ್ನುವುದು ಗೊತ್ತಾಗುತ್ತದೆ.

ಈ ಹಿನ್ನೆಲೆಯಲ್ಲಿ, ಯುದ್ಧ ಮತ್ತು ಶಾಂತಿ ಯ ಮೊದಲ ಆವೃತ್ತಿಯ ಸಣ್ಣ ಪುಸ್ತಕವನ್ನೂ ಕನ್ನಡಕ್ಕೆ ತರಲು ದೇಜಗೌ ತೊಡಗಿಕೊಂಡರೆ ಅದರಿಂದ ಮೈಸೂರಿನ ಸಾಂಸ್ಕೃತಿಕ ಲೋಕಕ್ಕೆ ಮತ್ತು ಕನ್ನಡ "ಶಾಸ್ತ್ರೀಯ" ಸಾಹಿತ್ಯಕ್ಕೆ ಒಳ್ಳೆಯದೆ ಆಗಬಹುದು.