Mar 12, 2008

ವಿಜ್ಞಾನ ವಿಶೇಷದ ನಾಗೇಶ್ ಹೆಗಡೆಯವರು...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಮಾರ್ಚ್ 21, 2008 ರ ಸಂಚಿಕೆಯಲ್ಲಿನ ಲೇಖನ)

ಕನ್ನಡದ ಇತ್ತೀಚಿನ ಒಂದೆರಡು ದಿನಪತ್ರಿಕೆಗಳ ವಯಸ್ಸೆ ಹತ್ತಿಪ್ಪತ್ತು ವರ್ಷ ಆಗದೆ ಇರುವಾಗ, 26 ವರ್ಷಗಳಿಂದ ಸತತವಾಗಿ ಪ್ರಜಾವಾಣಿಯಲ್ಲಿ ಬರುತ್ತಿರುವ ಅಂಕಣ "ವಿಜ್ಞಾನ ವಿಶೇಷ." ಹೌದು, ಈ ಅಂಕಣ ಕಾಲು ಶತಮಾನವನ್ನು ದಾಟಿಯಾಗಿದೆ. ವಿದ್ಯಾರ್ಥಿಗಳಲ್ಲಿ ಮತ್ತು ಓದುಗರಲ್ಲಿ ಕೇವಲ ವಿಜ್ಞಾನದ ವಿಷಯಕ್ಕೆ ಕುತೂಹಲ ಹುಟ್ಟಿಸುವುದಷ್ಟೆ ಅಲ್ಲದೆ, ವಿಜ್ಞಾನದ ಇತ್ತೀಚಿನ ಸಾಧನೆಗಳು, ಅದರಿಂದ ಬದಲಾಗಿರುವ ಸಮಾಜ, ಆಗಲಿರುವ ಆರ್ಥಿಕ-ಸಾಮಾಜಿಕ-ವೈಜ್ಞಾನಿಕ ಸ್ಥಿತ್ಯಂತರಗಳು, ಮುಂತಾದವನ್ನೆಲ್ಲ ವೈಚಾರಿಕ ಮತ್ತು ವೈಜ್ಞಾನಿಕ ಬದ್ಧತೆಯಿಂದ ಬರೆಯುತ್ತ ಬಂದವರು ವಿಜ್ಞಾನ ವಿಶೇಷದ ಲೇಖಕರಾದ ನಾಗೇಶ್ ಹೆಗಡೆಯವರು. ಸುಮಾರು ಮೂರು ದಶಕಗಳ ಕಾಲ ಪ್ರಜಾವಾಣಿ-ಸುಧಾದಲ್ಲಿ ಪತ್ರಕರ್ತರಾಗಿದ್ದು, ಎರಡು ವರ್ಷಗಳ ಹಿಂದೆ ನಿವೃತ್ತರಾಗಿ, ಈಗ "ನಿಸರ್ಗ" ಕೃಷಿ ಮಾಡುತ್ತಿರುವವರು. ಇತ್ತೀಚಿನ ದಶಕಗಳಲ್ಲಿ ಕನ್ನಡ ನಾಡು ಕಂಡ ಅಪರೂಪದ (ಪರಿಸರ) ವಿಜ್ಞಾನದ "ಗುರು."

ದೆಹಲಿಯ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದಿಂದ ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಾಗೇಶ್ ಹೆಗಡೆಯವರು ಪಿಎಚ್‌ಡಿ ಪಡೆಯಲೆಂದು ಒರಿಸ್ಸಾಗೆ ಹೋಗಿ, ಭಾರತದಲ್ಲಿನ ಪಿಎಚ್‌ಡಿ ವ್ಯಾಸಂಗ ಬಯಸುವ ನಾಲ್ಕೈದು ವರ್ಷಗಳ "ಕೌಟುಂಬಿಕ ಜೀತಪದ್ಧತಿ" ಇಷ್ಟಪಡದೆ ಅದನ್ನು ಮಧ್ಯದಲ್ಲಿಯೆ ಬಿಟ್ಟು ಆಗಿನ ಉತ್ತರ ಪ್ರದೇಶದ ನೈನಿತಾಲ್ ವಿಶ್ವವಿದ್ಯಾಲಯದಲ್ಲಿ ಸಹಾಯಕ್ಕೆ ಪ್ರಾಧ್ಯಾಪಕರಾಗಿ ಸೇರಿಕೊಂಡವರು. ಅದೇ ಸಮಯದಲ್ಲಿ ಇಲ್ಲಿ ಪ್ರಜಾವಾಣಿಯವರು ತಮ್ಮ ಪತ್ರಿಕೆಯಲ್ಲಿ ವೈಜ್ಞಾನಿಕ ವಿಷಯಗಳಿಗೆ ವರದಿಗಾರರನ್ನು ಹುಡುಕುತ್ತಿದ್ದರು. ಹಾಗೆ ಪ್ರಜಾವಾಣಿಗೆ "Science and Development Correspondent" ಆಗಿ ಅವರು ಕರ್ನಾಟಕಕ್ಕೆ ವಾಪಸು ಬಂದಿದ್ದು. ಅಲ್ಲಿಂದೀಚೆಗೆ ಅವರು ಸುಧಾ ಮತ್ತು ಪ್ರಜಾವಾಣಿಯ ಲಕ್ಷಾಂತರ ಓದುಗರಿಗೆ ಸರಳ ಕನ್ನಡದಲ್ಲಿ ವಿಜ್ಞಾನದ ನವೀನ ಸಂಶೋಧನೆಗಳ ಬಗೆಗೆ ಮತ್ತು ಪರಿಸರದ ಬಗೆಗೆ ಸಾಮಾಜಿಕ ಕಾಳಜಿಯಿಂದ ಕೂಡಿದ ಲೇಖನಗಳನ್ನು ಬರೆಯುತ್ತ, ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಲು ಮತ್ತು ಕೆಲವೊಂದು ಸಂಶೋಧನೆಗಳ ಮತ್ತು ಅಭಿವೃದ್ಧಿ ಮಾದರಿಗಳ ಅತಿಯನ್ನು ಅರ್ಥಮಾಡಿಕೊಳ್ಳಲು ಓದುಗರನ್ನು ಪ್ರಚೋದಿಸುತ್ತ ಬರುತ್ತಿದ್ದಾರೆ.

ಸಂಪದ.ನೆಟ್ ತಂಡದವರು ಇತ್ತೀಚೆಗೆ ತಾನೆ ನಾಗೇಶ್ ಹೆಗಡೆಯವರ ಆಡಿಯೊ ಸಂದರ್ಶನವನ್ನು ಮಾಡಿದ್ದಾರೆ. ಅದು sampada.net ನಲ್ಲಿ ಇದೆ. ಈ ಅಂತರ್ಜಾಲ ತಾಣದ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಕಂಬಾರ, ಅನಂತಮೂರ್ತಿ, ಲಿಂಗದೇವರು ಹಳೆಮನೆ, ಜಿ.ಎಸ್.ಶಿವರುದ್ರಪ್ಪ, ಟಿ.ಎನ್.ಸೀತಾರಾಮ್, ನಿಸಾರ್ ಅಹಮದ್, ಜಿ.ಟಿ. ನಾರಾಯಣ ರಾವ್‌ರೊಡನೆ ಪ್ರಾಧ್ಯಾಪಕ ಓ.ಎಲ್.ಎನ್. ಸ್ವಾಮಿ, ಉದಯವಾಣಿಯ ಇಸ್ಮಾಯಿಲ್, ಪವನಜ, ಹರಿಪ್ರಸಾದ್, ಮುಂತಾದವರು ಮಾಡಿರುವ ಅಪರೂಪದ ಆಡಿಯೊ ಸಂದರ್ಶನಗಳು ಇಲ್ಲಿವೆ. ಕಳೆದ ತಿಂಗಳಷ್ಟೆ ನಮ್ಮ ಪತ್ರಿಕೆಯ ಲೇಖಕ ಬಳಗದವರಲ್ಲೊಬ್ಬರಾದ ನರೇಂದ್ರ ಪೈ "ದೇಶ ಕಾಲ" ನಡೆಸುತ್ತಿರುವ ವಿವೇಕ ಶಾನಭಾಗರ ಸಂದರ್ಶನ ಮಾಡಿದ್ದರು. ಈ ತಿಂಗಳು ಪ್ರಶಾಂತ್ ಪಂಡಿತ್ ಎನ್ನುವವರು ನಾಗೇಶ್ ಹೆಗಡೆಯವರ ಸಂದರ್ಶನ ಮಾಡಿದ್ದಾರೆ. ಆ ಸಂದರ್ಶನದಲ್ಲಿ ನಾಗೇಶ್ ಹೆಗಡೆಯವರು ಪರಿಸರ-ಮಾಧ್ಯಮ-ಚಳವಳಿ-ವೈಜ್ಞಾನಿಕ ಮನೋಭಾವ-ಪತ್ರ್ರಿಕೆಗಳಿಗೆ ಬರೆಯುವ ರೀತಿ-ಡಿಜಿಟಲ್ ಡಿವೈಡ್, ಮುಂತಾದುವುಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಎರಡು ವಿಷಯಗಳನ್ನಷ್ಟೆ ಇಲ್ಲಿ ಪ್ರಸ್ತಾಪಿಸುತ್ತೇನೆ.

ಬೇಕು, ಉಪಯುಕ್ತ ಕನ್ನಡ:

"ಕನ್ನಡದ ಇವತ್ತಿನ ಸಂದರ್ಭದಲ್ಲಿ ಭಾಷೆಯ (ಸ್ಥಿತಿಗತಿಯ) ಬಗ್ಗೆ ನಿಮ್ಮ ಅಭಿಪ್ರಾಯ ಏನು?" ಎನ್ನುವ ಪ್ರಶ್ನೆಗೆ ಹೆಗಡೆಯವರ ಅಭಿಪ್ರಾಯ ಬಹಳ ಗಮನಾರ್ಹವಾದದ್ದು. "ಭಾಷೆಯ ಬಗ್ಗೆ ವ್ಯಾಖ್ಯಾನ ನೀಡುವಷ್ಟು ಪಾಂಡಿತ್ಯ ನನ್ನದಲ್ಲ," ಎನ್ನುತ್ತಲೆ ಆರಂಭಿಸುವ ಇವರು,

"(ಜ್ಞಾನವನ್ನು ಎಲ್ಲರಿಗೂ ಕೊಡಬೇಕು ಎನ್ನುವುದರ ಹಿನ್ನೆಲೆಯಲ್ಲಿ) ಕನ್ನಡದಲ್ಲಿ ವಿಜ್ಞಾನ ಸೃಷ್ಟಿಯಾಗುತ್ತಿಲ್ಲ. ಇವತ್ತು ವಿಜ್ಞಾನ ಸೃಷ್ಟಿ ಆಗುತ್ತಿರುವುದು ಇಂಗ್ಲಿಷಿನಲಿ, ಸ್ಪ್ಯಾನಿಷ್‌ನಲ್ಲಿ, ಫ್ರೆಂಚ್‌ನಲ್ಲಿ, ಜಪಾನಿಯಲ್ಲಿ. ಆ ಬೇರೆ ಭಾಷೆಗಳಲ್ಲಿರುವ ಜ್ಞಾನವನ್ನು ಅರ್ಥ ಮಾಡಿಕೊಂಡರಷ್ಟೆ ನಾವು ಅದನ್ನು ಇತರರಿಗೆ ಕೊಡಲು ಸಾಧ್ಯ. ಅದನ್ನು ಅರ್ಥಮಾಡಿಕೊಳ್ಳಲು ಸಹಜವಾಗಿ ನಮಗೆ ಇಂಗ್ಲಿಷ್ ಬೇಕೇ ಬೇಕು. ನಂತರ ಅದರ ವಿವರಣೆ ಮಾಡಲು ನಮಗೆ ಕನ್ನಡ ಬೇಕು. ಭಾಷೆ ಕೇವಲ ಜ್ಞಾನದ ವಾಹಿನಿಯಷ್ಟೆ ಅಲ್ಲ. ಅದರಲ್ಲಿ ಮನರಂಜನೆ ಇರಬೇಕು. ಸೃಜನಶೀಲತೆ ಇರಬೇಕು. (ಈ ಹಿನ್ನೆಲೆಯಲ್ಲಿ) ಕತೆ-ಕವಿತೆ-ಕಾದಂಬರಿಗಳ ಸಾಹಿತ್ಯಕ್ಕೆ ಅದರದೆ ಆದ ಸ್ಥಾನ ಇದೆ. ಆದರೆ ಜ್ಞಾನ ಈ ಕತೆ-ಕವಿತೆ-ಕಾದಂಬರಿಗಳಿಗೆ ಲಿಮಿಟ್ ಆಗಬಾರದು. ಎಷ್ಟು ದಿನ ಅಂತ ನೀವು ಕಾಲ್ಪನಿಕ ಜಗತ್ತಿನಲ್ಲಿ ಇರುತ್ತೀರ? ವಾಸ್ತವ ಜಗತ್ತು ಬೇಕೇ ಬೇಕಲ್ಲ? ಈ ವಾಸ್ತವ ಜಗತ್ತಿನಲ್ಲಿ ಏನೇನು ವಹಿವಾಟುಗಳು ನಡೆಯುತ್ತವೆ ಎನ್ನುವುದನ್ನು ಹೇಳುವುದಕ್ಕೆ ಭಾಷೆ ಬೇಕೇ ಬೇಕು. ಇವತ್ತು ಹಾಗೆ ನೋಡಿದರೆ, ವಿಜ್ಞಾನದ ಬಗ್ಗೆ ಕನ್ನಡದಲ್ಲಿ ಅಷ್ಟಿಷ್ಟು ಮಾಹಿತಿಯಾದರೂ ಇದೆ. ಅದರೆ ದುರದೃಷ್ಟವಶಾತ್ ಷೇರು ಮಾರುಕಟ್ಟೆ ಬಗ್ಗೆ ಮಾಹಿತಿ ಎಲ್ಲಿದೆ? ವಾಣಿಜ್ಯದ ವಿಚಾರಗಳಿಗೆ ಕನ್ನಡದಲ್ಲಿ ಮಾಹಿತಿಯೆ ಇಲ್ಲ. ಡಿಜಿಟಲ್ ಲೋಕದಲ್ಲಿ ಇಷ್ಟೆಲ್ಲ ಬದಲಾವಣೆ ಆಗುತ್ತಿದೆ. ಆದರೆ ಮಾಹಿತಿ ಬರುತ್ತಿಲ್ಲ. ನಮ್ಮ ಕಂಪ್ಯೂಟರ್ ಹುಡುಗರೆಲ್ಲ, ಕೆಲವರನ್ನು ಬಿಟ್ಟರೆ, ಏನು ಆಗುತ್ತಿದೆ ಈ ಜಗತ್ತಿನಲ್ಲಿ, ಡಿಜಿಟಲ್ ಡಿವೈಡ್ ಆಗುತ್ತಿದೆಯಲ್ಲ ಎಂದು ಚಿಂತೆ ಮಾಡುತ್ತಾರೆಯೆ ಹೊರತು ಆ ಡಿಜಿಟಲ್ ಡಿವೈಡನ್ನು ತುಂಬುವುದು ಹೇಗೆ ಎಂದು ಯಾರೂ ಹೆಚ್ಚಿಗೆ ಮಾತನಾಡುತ್ತಿಲ್ಲ. ಇಡೀ ಜಗತ್ತಿನಲ್ಲೆಲ್ಲ ಅನಿವಾಸಿ ಕನ್ನಡಿಗರಿದ್ದಾರೆ. ಕನ್ನಡ ಅಕ್ಷರ ನೋಡಿದರೂ ಅವರ ಹೃದಯ ಬಹಳ ಪ್ರಫುಲ್ಲಿತವಾಗುತ್ತದೆ, ಖುಷಿಯಾಗುತ್ತದೆ. ಸಂಜೆವಾಣಿ ಯಂತಹ ಪತ್ರಿಕೆ ಕೂಡ ಬಹಳ ಚೆನ್ನಾಗಿ, ಸುಂದರವಾಗಿ ಕಾಣುತ್ತಿರುತ್ತದೆ. ಅದೆಲ್ಲ ಸರಿ. ಆದರೆ ಇಷ್ಟೆ ಸುಲಭವಾಗಿ ಕನ್ನಡವನ್ನು ಲ್ಯಾಪ್‌ಟಾಪ್ ಮೂಲಕವೊ, ಅಂಗೈಗಣಕದ ಮೂಲಕವೊ ಯಶಸ್ವಿಯಾಗಿ ಟ್ರಾನ್ಸ್‌ಫರ್ ಮಾಡಲು ಸಾಧ್ಯವಿದೆ ಎನ್ನುವುದನ್ನು ಯಾರು ಹೇಳಬೇಕು? ಆ ಸಂಖ್ಯೆ ಬಹಳ ಸಣ್ಣದಿದೆ. ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವ ಕನ್ನಡಿಗರು ಎಚ್.ಪಿ. ಇನ್ಫೋಸಿಸ್ ಮುಂತಾಗಿ ಎಲ್ಲಾ ಕಡೆ ಇದ್ದಾರೆ. ಇಲ್ಲಿಂದ ಹಿಡಿದು ಕ್ಯಾಲಿಫೋರ್ನಿಯ ತನಕ ಇದ್ದಾರೆ. ಆದರೆ ಕನ್ನಡವನ್ನು ನಾವು ಸುಲಭವಾಗಿ ಕಂಪ್ಯೂಟರ್‌ಗೆ ವರ್ಗಾಯಿಸಲು ಸಾಧ್ಯವಿದೆ; ಅದನ್ನು ಕೈಗಣಕ, ಅಂಗೈಗಣಕದ ಮುಖಾಂತರ ಪ್ರತಿಯೊಬ್ಬರಿಗೂ, ಹಳ್ಳಿಯವನಿಗೂ, ಕ್ಷೌರಿಕನಿಗೂ, ನಮ್ಮಲ್ಲಿನ ರೈತರ ಕೈಗೂ ಅದನ್ನು ಕೊಡಲು ಸಾಧ್ಯವಿದೆ ಎಂದು ಹೇಳುವವರು ಮತ್ತು ಅದನ್ನು ಮಾಡಿ ತೋರಿಸುವವರ ಸಂಖ್ಯೆ ಕಮ್ಮಿಯಿದೆ. (ಸಾಹಿತ್ಯದ ಕನ್ನಡಕ್ಕೆ ಹೊರತಾದ ಇಂತಹ ವಿಜ್ಞಾನದ) 'ಉಪಯುಕ್ತ ಕನ್ನಡ' ಎನ್ನುವುದು ಬೇಕು ನಮಗೆ. ಅದು ಆಯಿತೆಂದರೆ ಆಗ ನಾವು ಭಾಷೆಯ ಸಂಪೂರ್ಣ ಸಾಧ್ಯತೆಯನ್ನು ಸ್ವೀಕಾರ ಮಾಡಿದಂತಾಗುತ್ತದೆ."
ಎನ್ನುತ್ತಾರೆ.

ಶುಷ್ಕರಸ ಕಮ್ಮಿ ಮಾಡಲು ಸೇರಿಸುವ ಭೀಭತ್ಸರಸ:

ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಮಾಧ್ಯಮಗಳಲ್ಲಿ ಹೆಚ್ಚಾಗುತ್ತಿರುವ ರೋಚಕತೆ ಮತ್ತು ಇಳಿಮುಖವಾಗಿರುವ ಎಲ್ಲಾ ತರಹದ ಬದ್ಧತೆಗಳು ಯಾರಿಗೇ ಆಗಲಿ ಎದ್ದು ಕಾಣಿಸುವಂತಹುದು. ಎರಡು ವರ್ಷದ ಹಿಂದಿನ ತನಕವೂ ಪತ್ರಿಕೆಯೊಂದರಲ್ಲಿ ಪೂರ್ಣಾವಧಿ ಉದ್ಯೋಗಿಯಾಗಿ ಕೆಲಸ ಮಾಡಿರುವ ನಾಗೇಶ ಹೆಗಡೆಯವರು ಈ ಮಾಧ್ಯಮಗಳ ಇತ್ತೀಚಿನ ಪಲ್ಲಟಗಳ ಬಗ್ಗೆ ಹೀಗೆ ಹೇಳುತ್ತಾರೆ:
""ಮೊದಲೆಲ್ಲ ಒಂದು ರೀತಿಯ ಶಿಸ್ತು ಇತ್ತು. ಬಹುಶಃ ಪೈಪೋಟಿಯಿಂದಾಗಿಯೊ ಏನೊ ಈಗ ಇನ್ನಷ್ಟು ಕೊಡಬೇಕು, ಹೊಸತು ಕೊಡಬೇಕು, ರೋಚಕವಾಗಿ ಕೊಡಬೇಕು ಎನ್ನುವಂತಾಗಿಬಿಟ್ಟಿದೆ. ಗಂಭೀರ ವಿಷಯಗಳ ಬಗ್ಗೆ ಹೇಳುವಾಗಲೂ ರೋಚಕತೆ ಬಂದುಬಿಡುತ್ತದೆ. ಗಾಂಭೀರ್ಯ ಮಾಯವಾಗುತ್ತಿದೆ. ತ್ವರಿತ ಮತ್ತು ತುರ್ತಿನಲ್ಲಿ ಮಾಹಿತಿ ಕೊಡಬೇಕು ಅಥವ ಅತ್ಯಂತ ವೇಗವಾಗಿ ಮಾಹಿತಿ ಕೊಡಬೇಕು ಎನ್ನುವ ಹಂತದಲ್ಲಿ ವಿವೇಕ ಕಮ್ಮಿಯಾಗಿಬಿಡುತ್ತದೆ. ಈ ತ್ವರಿತ ಯುಗದಲ್ಲಿ ಬರವಣಿಗೆಗೆ ಅಥವ ವಿಷಯಕ್ಕೆ ನ್ಯಾಯ ಒದಗಿಸುವುದು ಕಷ್ಟವಾಗುತ್ತದೆ. ನೀವು ಯಾವುದನ್ನು ಸುಲಭವಾಗಿ ಬರೆಯುತ್ತೀರೊ ಆ ಬರವಣಿಗೆ ಕೂಡ ಅಷ್ಟೇ ಸತ್ವಹೀನವಾಗುತ್ತದೆ. "ಶುಷ್ಕರಸ" ಜಾಸ್ತಿಯಾಗಿಬಿಡುತ್ತದೆ. ಅದು ಬರಬಾರದು ಎಂತಲೆ ಕೆಲವು ಲೇಖಕರು ಬಹಳ ಸಾರಿ ಅನಗತ್ಯವಾಗಿ ಕೃತಕವಾಗಿ "ಭೀಭತ್ಸರಸ" ಸೇರಿಸಲು ಪ್ರಯತ್ನಿಸುತ್ತಾರೆ. ರೋಷ, ಕ್ರೋಧವನ್ನು ಸೇರಿಸುತ್ತಾರೆ. ಈಗ ಮಾಹಿತಿಯ ಮಹಾಪ್ರವಾಹವೆ ಹರಿಯುತ್ತಿದೆ. ಆ ಪ್ರವಾಹದಲ್ಲಿ ತೇಲುತ್ತಿರುವ ನಮಗೆ ಸ್ವಲ್ಪ ಗಟ್ಟಿಯಾದ ವಿಚಾರಗಳನ್ನು ಹೇಳುವ ದ್ವೀಪಗಳ ಆಸರೆ ಬೇಕು. ವಾರಪತ್ರಿಕೆಗಳು, ಮಾಸಪತ್ರಿಕೆಗಳು ಅಂತಹ ಗಂಭೀರವಾದ ವಿಷಯಗಳನ್ನು ಸಾವರಿಸಿಕೊಂಡು ಹೇಳುತ್ತವೆ. ಆದರೆ ಅದನ್ನು ಓದುವಷ್ಟು ವ್ಯವಧಾನ ನಮಗಿದೆಯೆ ಎನ್ನುವುದೆ ಪ್ರಶ್ನೆ."

ಪರಿಸರದ ಬಗ್ಗೆ ಬಹಳ ಬರೆದಿರುವ ನಾಗೇಶ್ ಹೆಗಡೆಯವರ ಅನೇಕ ಲೇಖನಗಳು ಪುಸ್ತಕರೂಪದಲ್ಲಿಯೂ ಬಂದಿವೆ. "ಇರುವುದೊಂದೇ ಭೂಮಿ," "ಸುರಿಹೊಂಡ ಭರತಖಂಡ," "ನಮ್ಮೊಳಗಿನ ಬ್ರಹ್ಮಾಂಡ," ಇತ್ಯಾದಿಯಾಗಿರುವ ಅವರ ಪುಸ್ತಕಗಳು ಪರಿಸರ-ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಕನ್ನಡದಲ್ಲಿ ಬಂದಿರುವ ಮಹತ್ವದ ಆಕರ ಗ್ರಂಥಗಳು. ಕಬ್ಬಿಣದ ಅದಿರು ರಫ್ತಿನ ವಿಚಾರವಾಗಿ ಅವರು ಬರೆದಿದ್ದ ಲೇಖನಗಳು 1975 ರ ಸುಮಾರಿನಲ್ಲಿಯೆ ಸಂಸತ್ತಿನಲ್ಲಿ ಪ್ರಸ್ತಾಪಗೊಂಡಿತ್ತು.
ನೀವು ಎಷ್ಟೇ ಪ್ರತಿಭಾವಂತರಾಗಿದ್ದರೂ, ಎಷ್ಟೇ ಬದ್ಧತೆಯುಳ್ಳವರಾಗಿದ್ದರೂ ಒಂದು ವ್ಯವಸ್ಥೆಯ ಒಳಗೆ ಕೆಲಸ ಮಾಡುತ್ತಿರುವ ತನಕವೂ ಕೆಲವೊಂದು ಶಿಸ್ತಿನಲ್ಲಿ ಮತ್ತು ಮಿತಿಯಲ್ಲಿ ಕೆಲಸ ಮಾಡಬೇಕಿರುತ್ತದೆ. ಇಷ್ಟು ದಿನವೂ ಪ್ರಜಾವಾಣಿಯ ವ್ಯವಸ್ಥೆಯೊಳಗೆ ಮತ್ತು ಆ ವೃತ್ತಿಧರ್ಮದ ಮಿತಿಯಲ್ಲಿ ಕೆಲಸ ಮಾಡಬೇಕಿದ್ದ ನಾಗೇಶ್ ಹೆಗಡೆಯವರು ಒಂದರ್ಥದಲ್ಲಿ ಈಗ ಸ್ವತಂತ್ರರಾಗಿದ್ದಾರೆ. ತಮ್ಮ ಸುದೀರ್ಘ ಸೇವಾಅವಧಿಯಲ್ಲಿ ಸುಧಾ ಮತ್ತು ಪ್ರಜಾವಾಣಿಯ ಮುಖಾಂತರ ಅನೇಕ ಲೇಖಕರನ್ನು ಪ್ರೋತ್ಸಾಹಿಸಿದ ನಾಗೇಶ್ ಹೆಗಡೆಯವರು ಈಗ ಕನ್ನಡದ ಪರಿಸರ-ವಿಜ್ಞಾನ-ತಂತ್ರಜ್ಞಾನದ ವಿಷಯಗಳಲ್ಲಿ ಒಂದಷ್ಟು ಚಳವಳಿಕಾರ ಕಾರ್ಯಕರ್ತನ ಸಕ್ರಿಯ ಪಾತ್ರ ನಿರ್ವಹಿಸಬೇಕಾದ ಗಳಿಗೆ ಬಂದಿದೆ ಎನ್ನಿಸುತ್ತದೆ.




(ಲೇಖನಕ್ಕೆ ಪೂರಕವಾಗಿ ಬ್ಲಾಗಿನಲ್ಲಿ ಹೆಚ್ಚುವರಿಯಾಗಿ ಸೇರಿಸಿರುವ ಅಡಿ ಟಿಪ್ಪಣಿಗಳು)

ಬದಲಾಗುತ್ತಿರುವ ಕನ್ನಡ ವಾರಪತ್ರಿಕೆಗಳು:
ನಾಗೇಶ ಹೆಗಡೆಯವರು ಮಾಧ್ಯಮದ ಬಗ್ಗೆ ಹೇಳಿದ್ದನ್ನು ನಾನು ನನ್ನದೆ ಅನುಭವದ ಹಿನ್ನೆಲೆಯಲ್ಲಿ ಯೋಚಿಸುತ್ತದೆ. ಇವತ್ತು ಮಾಧ್ಯಮಗಳಲ್ಲಿ ವಿವೇಕವಷ್ಟೆ ಅಲ್ಲ ಕನಿಷ್ಠ ಶೈಕ್ಷಣಿಕ ಅರ್ಹತೆ ಇಲ್ಲದವರೂ ಕಾಣಿಸಿಕೊಳ್ಳುತ್ತಿದ್ದಾರೆ. ಬೇರೆ ಎಲ್ಲೂ ಸಲ್ಲದವರು ಇವತ್ತು ಈ ವಿಭಾಗಕ್ಕೆ ಬರುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಮಾಧ್ಯಮ ವಿಭಾಗದಲ್ಲಿ ಎಂ.ಎ. ಮಾಡುತ್ತಿರುವ ಕನ್ನಡ ಮಾಧ್ಯಮದ ಹುಡುಗನನ್ನು ವರ್ಷದ ಹಿಂದೆ, ಕನ್ನಡದಲ್ಲಿ ಯಾವ ಪುಸ್ತಕಗಳನ್ನು ಓದಿದ್ದೀರಿ ಎಂದು ಕೇಳಿದ್ದೆ. ಅಕ್ಷರಶಃ ಆತನಲ್ಲಿ ಉತ್ತರವಿರಲಿಲ್ಲ. ಮಹತ್ವದ ಚಿಂತಕರು ಗೊತ್ತಿಲ್ಲ. ಪ್ರಚಲಿತ ವಿದ್ಯಮಾನಗಳು ಗೊತ್ತಿಲ್ಲ. ಸ್ವತಂತ್ರವಾಗಿ ಒಂದು ಪುಟ್ಟ ಲೇಖನ ಬರೆಯುವ ಯೋಗ್ಯತೆಯೂ ಈ "ಸ್ನಾತಕೋತ್ತರ ಪದವೀಧರ" ರಲ್ಲಿ ಇಲ್ಲ. ನಮ್ಮ ವಿಶ್ವವಿದ್ಯಾಲಯಗಳಲ್ಲಿ ಇನ್ನೆಂತಹ ಶೈಕ್ಷಣಿಕ ಪದ್ಧ್ದತಿ ಇದೆಯೊ, ಇನ್ನೆಂತಹ ದರಿದ್ರ ಪುಸ್ತಕಗಳು ಇವರಿಗೆ ಪಠ್ಯಪುಸ್ತಕಗಳಾಗಿವೆಯೊ ಗೊತ್ತಿಲ್ಲ. ಇತ್ತೀಚಿನ ಕನ್ನಡದ ದಿನಪತ್ರಿಕೆಗಳನ್ನು ನೋಡುತ್ತಿದ್ದರೆ ಅನ್ನಿಸುವುದೇನೆಂದರೆ, " 'ರೋಚಕವಾದ, ಬೇಜವಾಬ್ದಾರಿಯ, ಜೀವದ್ವೇಷಿ ತಲೆಬರಹ ಕೊಡುವುದು ಹೇಗೆ?' ಎನ್ನುವುದೆ ಇತ್ತೀಚಿನ ಜರ್ನಲಿಸಮ್ ಕೋರ್ಸುಗಳ ಸಿಲಬಸ್ ಆಗಿರಬಹುದೆ?" ಎಂದು.

ಆದರೆ, ಈ ರೋಚಕತೆಯ ಕಾಲ ಕನ್ನಡದಲ್ಲಿ ಮುಗಿಯುತ್ತ ಬರುತ್ತಿದೆ, ಜನ ಬದಲಾವಣೆ ಬಯಸುತ್ತಿದ್ದಾರೆ, ಮತ್ತೆ ಕೆಲವರು ಆ ಬದಲಾವಣೆ ತರುತ್ತಿದ್ದಾರೆ ಎನ್ನುವುದಕ್ಕೆ ಕಳೆದ ಎರಡು ವರ್ಷಗಳಲ್ಲಿ ಕನ್ನಡದಲ್ಲಿ ಬಂದ ಮೂರು ಗಂಭೀರ ವಾರಪತ್ರಿಕೆಗಳನ್ನೆ ನಾವು ನೆನಪಿಸಿಕೊಳ್ಳಬಹುದು. ನಮ್ಮದೆ "ವಿಕ್ರಾಂತ ಕರ್ನಾಟಕ," ನಟರಾಜ್ ಹುಳಿಯಾರ್ ತಂಡದವರ "ಕನ್ನಡ ಟೈಮ್ಸ್," ದೆಹಲಿಯಿಂದ ಬರುವ "ದಿ ಸಂಡೆ ಇಂಡಿಯನ್,"- ಇವು ಯಾವುವೂ ರೋಚಕತೆಯನ್ನು ಹಾಗು ಜನರ ಭಾವನೆಗಳೊಡನೆ ಚೆಲ್ಲಾಟವಾಡುವುದನ್ನು ತಮ್ಮ ಬಂಡವಾಳ ಮಾಡಿಕೊಂಡಿಲ್ಲ. ಗಂಭೀರ ವಿಷಯಗಳನ್ನು ಗಂಭೀರವಾಗಿಯೆ ಚರ್ಚಿಸುತ್ತಿವೆ. ಕೆಲವು ಸ್ಥಾಪಿತ ಟ್ಯಾಬ್ಲಾಯ್ಡ್‌ಗಳೂ ತಮ್ಮ ಮಿತಿಯಲ್ಲಿ ಅದನ್ನೆ ಮಾಡುತ್ತಿವೆ. ಒಂದು ಪ್ರಜ್ಞಾವಂತ ಗುಂಪು ಅಲ್ಲಲ್ಲಿ ಬಿಡಿಬಿಡಿಯಾಗಿ ಸಕ್ರಿಯವಾಗಿದೆ ಎನ್ನುವುದಕ್ಕೆ ಮತ್ತು ಭವಿಷ್ಯ ಅಷ್ಟು ನಿರಾಶಾದಾಯಕವಾಗಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ.

ಕಾಳಜಿಗೂ ವಿಧಾನಕ್ಕೂ ಸಂಬಂಧವಿಲ್ಲದವರ ವ್ಯವಸ್ಥೆ
ನಾಗೇಶ ಹೆಗಡೆಯವರು ಡಿಜಿಟಲ್ ಡಿವೈಡ್ ಬಗ್ಗೆ ಮಾತನಾಡುತ್ತ ತಂತ್ರಜ್ಞಾನದ ಇಂಡಸ್ಟ್ರಿಯಲ್ಲಿರುವ ಕನ್ನಡಿಗರ ಬಗ್ಗೆ ಕೆಲವೊಂದು ಪ್ರಶ್ನೆಗಳು ಎತ್ತಿದ್ದನ್ನು ಇಲ್ಲಿ ನೀವು ನೋಡಿದಿರಿ. ಸ್ವತಃ ಅನಿವಾಸಿ ತಂತ್ರಜ್ಞನಾದ ನಾನು ಇದೇ ಪ್ರ್ರಶ್ನೆಗಳನ್ನು ನಾಲ್ಕೈದು ವರ್ಷಗಳ ಹಿಂದೆ ನನಗೆ ನಾನೆ ಹಾಕಿಕೊಂಡಿದ್ದೆ. ಆ ವಿಚಾರಕ್ಕೆ ಒಂದೆರಡು ಲೇಖನಗಳನ್ನು ಮತ್ತು ಪ್ರಜಾವಾಣಿಗೂ ಒಂದೆರಡು ವಾಚಕರ ವಾಣಿ ಪತ್ರ ಬರೆದಿದ್ದೆ. ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಕನ್ನಡದ ಉದ್ಧಾಮ ಸಾಹಿತಿಯೊಬ್ಬರೊಡನೆ ಮತ್ತು ಮತ್ತೊಬ್ಬ ಭೀಕರನಟ ಕಮ್ ಕನ್ನಡ ಹೋರಾಟಗಾರ ಎಂಎಲ್‌ಸಿಯೊಡನೆ "ಸರ್ಕಾರ ಹೇಗೆ ಸುಲಭವಾಗಿ ತನ್ನ ಕಂಪ್ಯೂಟರುಗಳನ್ನು ಒಂದೇ ಏಟಿಗೆ ಕನ್ನಡೀಕರಿಸಬಹುದು," ಎಂದು ವಿವರಿಸಿದ್ದೆ. ದಯವಿಟ್ಟು ಇದನ್ನು ಪರಿಷತ್ತಿನಲ್ಲಿ ಪ್ರಸ್ತಾಪಿಸಿ ಎಂದು ವಿನಂತಿಸಿದ್ದೆ. ಆದರೆ, ಅವರು ಪ್ರಸ್ತಾಪಿಸಿದ್ದೆ ಬೇರೆ. ಅವರ ಕಾಳಜಿಗೂ ಅವರು ಮಾಡುವ ಕೆಲಸಗಳಿಗೂ ಅಥವ ವಿಧಾನಗಳಿಗೂ ಸಂಬಂಧವೇ ಇಲ್ಲ... ಇದನ್ನೆಲ್ಲ ನೋಡಿ ಕೊನೆಗೆ ನನಗನ್ನಿಸಿದ್ದು:
"ನಮ್ಮನ್ನು (ಜನತೆಯನ್ನು-ಭಾಷೆಯನ್ನು-ನಾಡನ್ನು) ಪ್ರತಿನಿಧಿಸುತ್ತಿರುವವರು ಮಹಾ ಅಯೋಗ್ಯರು. ನಮ್ಮ ಸಮಸ್ಯೆ ಇರುವುದೆ ಇಲ್ಲಿ. ಪರಿಹಾರವನ್ನೂ ಇಲ್ಲಿಯೆ ಹುಡುಕಬೇಕು."

3 comments:

Supreeth.K.S said...

ರವಿ ಸರ್,
ನಾನು ನಾಗೇಶ್ ಹೆಗಡೆಯವರ ಪಾಡ್ ಕಾಸ್ಟನ್ನು ಕೇಳಿದೆ. ಮೊದ ಮೊದಲು ನಾನು ಪತ್ರಿಕೆಗಳ ಓದಿಗೆ ತೆರೆದುಕೊಂಡಾಗ ಕೆಲವು ಅಬ್ಬರದ, ರೋಚಕ, ಭಾವೋದ್ವೇಗದ ಬರಹಗಳ ಅಭಿಮಾನಿಯಾಗಿದ್ದೆ. ಆದರೆ ನಾಗೇಶ್ ಹೆಗಡೆಯವರನ್ನು ಓದುವಾಗ ಮನಸ್ಸು ಎಂಥದ್ದೋ ಸಮಾಧಾನ ಪಡೆಯುತ್ತಿತ್ತು. ಅವರ ಬರಹಗಳು ನನ್ನನ್ನು ಕೆರಳಿಸುತ್ತಿರಲಿಲ್ಲ. ನನ್ನನ್ನು ಭಾವೋದ್ವೇಗಗೊಳ್ಳುವಂತೆ ಮಾಡುತ್ತಿರಲಿಲ್ಲ. ನನ್ನ ಗೊಂದಲಗಳನ್ನು ತಣ್ಣಗೆ ಮಾಡುತ್ತಿದ್ದವು. ಅವರ ಲೇಖನ ಓದಿಯಾದ ನಂತರ ನನಗೆ ಸಂತೋಷವಾಗುತ್ತಿತ್ತು, ಆಹ್ಲಾದತೆ ದೊರೆಯುತ್ತಿತ್ತು. ಎಷ್ಟೋ ದಿನಗಳವರೆಗೆ ಅವರ ಚಿಂತನಾಶೈಲಿಯ ಅನುಕರಣೆ ನನ್ನ ಅನೇಕ ಚಿಂತನೆಗಳಲ್ಲಿ ಕಂಡು ಬರುತ್ತಿತ್ತು.
ನಿಜಕ್ಕೂ ಅಂತಹ ಪತ್ರಕರ್ತರು ಕನ್ನಡದ ಹೆಮ್ಮೆ.ಅವರ ಬಗ್ಗೆ ಬರೆದದ್ದಕ್ಕೆ ಧನ್ಯವಾದಗಳು

ಅಮರ said...

ನಮಸ್ತೆ ರವಿ ಸರ್....

ಸಂಪದದಲ್ಲಿನ ಎಲ್ಲ ಸಂದರ್ಶನದ ದ್ವನಿ ಸುರಳಿಗಳನ್ನ ದೌನ್ ಲೋಡ್ ಮಾಡೊಕೊಂಡಿದ್ದೆನೆ, ನಿಸಾರ್ ಅಹಮದ್ ಮತ್ತು ತೆಜಸ್ವಿ ಅವರೊಡನೆಯ ಸಂಭಾಷಣೆ ಕೇಳಿದ್ದೆ ಮಿಕ್ಕಿದ್ದನ್ನು ಕೇಳ ಬೇಕು. ನೆನ್ನೆಯ ಬ್ಲಾಗಿಗಳ ಸಮಾವೇಶ ಸೊಗಸಾಗಿ ಮೂಡಿಬಂತು ಎಲ್ಲರಿಗೂ ಖುಷಿ ತಂದಿದೆ. ವಿವೇಕ ಶಾನಭಾಗರ 'ದೇಶ ಕಾಲ' ಚನ್ನಾಗಿ ಮೂಡಿ ಬರುತ್ತಿದೆ .... ನಾನು ಇತ್ತಿಚೆಗಷ್ಟೆ ಚಂದಾದಾರನಾದೆ, ಹಳೆಯ ಸಂಚಿಕೆಗಳನ್ನು ತರೆಸಿಕೊಂಡಿದ್ದೆನೆ.

-ಅಮರ

Anonymous said...

ನಮಸ್ಕಾರ ರವಿ,

ನಾಗೇಶ ಹೆಗ್ಗಡೆ ಬಗ್ಗೆ ಲೇಖನ ಓದಿ ಖುಷಿಯಾಯಿತು. ಹೈಸ್ಕೂಲು ದಿನಗಳಲ್ಲಿ ನಮ್ಮ ವೈಜ್ಞಾನಿಕ ಹಸಿವಿಗೆ ಪ್ರಜಾವಾಣಿ, ಸುಧಾ ದಲ್ಲಿ ಪ್ರಕಟವಾಗುತ್ತಿದ್ದ ಅವರ ವಿಜ್ಞಾನ ಲೇಖನಗಳೇ ಆಹಾರ! ಅವನ್ನು ಓದಿ ನಾನು ನನ್ನ ಸ್ನೇಹಿತರು ಚರ್ಚಿಸುತ್ತಿದ್ದೆವು. ಹಲವಾರು ಬಾರಿ ಪ್ರಜಾವಾಣಿ ಕಚೇರಿಗೆ ಹೋಗಿ ಅವರನ್ನು ಮಾತನಾಡಿಸಿದ್ದೆವು. ನಮ್ಮ ಹುಡುಗುತನತ ಪ್ರಶ್ನೆಗಳಿಗೆ ಅವರು ನಗುನಗುತ್ತಾ ಉತ್ತರಿಸುತ್ತಿದ್ದರು.

ಕನ್ನಡದಲ್ಲಿ ವೈಜ್ಞಾನಿಕ ಕಥೆಗಳನ್ನು ಬರೆದವರಲ್ಲಿ ಬಹುಶಃ ರಾಜಶೇಖರ ಭೂಸನೂರು ಮಠ ಅವರನ್ನು ಬಿಟ್ಟರೆ ಎರಡನೆಯವರು ಸಿಗುವುದು ಕಷ್ಟ. ಈ ವಿಷಯವನ್ನು ಅವರಲ್ಲಿ ಹೇಳಿದಾಗ ತಾವು ರಿಟೈರಾದ ಮೇಲೆ ಅಂತ ಪ್ರಯತ್ನ ಮಾಡುವುದಾಗಿ ಹೇಳಿದ್ದರು.

-ವಾಸು