ಇವತ್ತಿನ ಭಾರತದಲ್ಲಿ ಭಾರತದ ಪ್ರಧಾನಿಯಾಗಲು ಅರ್ಹರಾದ ಮತ್ತು ಭಾರತ ಅಹಂಕಾರವಿಲ್ಲದ ಹೆಮ್ಮೆಯಿಂದ 'ಈತ ನಮ್ಮ ಪ್ರಧಾನಿ; ಆ ಬಗ್ಗೆ ನಮಗೆ ಹೆಮ್ಮೆ ಇದೆ.' ಎಂದು ಹೇಳಿಕೊಳ್ಳಬಹುದಾದ ವ್ಯಕ್ತಿ ಡಾ. ಮನಮೋಹನ್ ಸಿಂಗ್. ಸಾದಾ ಗ್ರಾಮೀಣ ಹಿನ್ನೆಲೆಯಿಂದ, ವಿಭಜನೆಯ ಸಮಯದಲ್ಲಿ ಇಡೀ ಕುಟುಂಬದ ಬೇರುಗಳನ್ನೆ ಕಿತ್ತು ಬೇರೆಡೆ ನೆಟ್ಟುಕೊಳ್ಳಬೇಕಾಗಿ ಬಂದ ಕುಟುಂಬದ, ತನ್ನ ಕಾರ್ಯಕ್ಷೇತ್ರದಲ್ಲಿ ತಜ್ಞತೆ ಪಡೆದುಕೊಂಡ, ಜಾತ್ಯಾತೀತ ನಿಲುವಿನ, ಕ್ಷುದ್ರ ರಾಜಕೀಯ ನಡೆಸದ, ಜೀವನದ ಅದ್ಭುತ ತಿರುವುಗಳಲ್ಲಿ ಭಾರತದ ಪ್ರಧಾನಿಯಾದ ಡಾ. ಸಿಂಗ್ ಇತ್ತೀಚಿನ ದಶಕಗಳಲ್ಲಿ ದೇಶ ಕಂಡ ನಿಸ್ವಾರ್ಥಿ ಮತ್ತು ಅತ್ಯುತ್ತಮ ಪ್ರಧಾನಿ. ಅನೇಕ ಕಾಂಗ್ರೆಸ್ ನಾಯಕರು ಅಧಿದೇವರುಗಳ ಮುಂದೆ ಮಂಡಿಯೂರುವ, ಸಾಷ್ಟಾಂಗ ಪ್ರಣಾಮ ಹಾಕುವ ಪರಿಸರದಲ್ಲೂ ತಮ್ಮ ಮತ್ತು ದೇಶದ Diginity ಉಳಿಸಿಕೊಂಡ ವ್ಯಕ್ತಿ. ಇದೇ ಸಂದರ್ಭದಲ್ಲಿ ನಾವು ಗಮನಿಸಬೇಕಾದ ವಿಷಯ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಘನತೆಯಿಂದ ಕೂಡಿದ ನಡವಳಿಕೆ. ಯಾವುದೇ ಸಂದರ್ಭದಲ್ಲೂ ಪ್ರಧಾನಿಯ ಸ್ಥಾನಕ್ಕೆ ಅಗೌರವ ಬರುವಂತಹ ನಡವಳಿಕೆಯನ್ನು, ಧಾರ್ಷ್ಟ್ಯವನ್ನು ಅವರು ತೋರಿಸಿಲ್ಲ. ಕೊನೆಗೆ ಅವರ ಯುವ ಮಕ್ಕಳೂ ಅದನ್ನು ಮಾಡಲಿಲ್ಲ. ಅಹಂಕಾರ ಮತ್ತು ಠೇಂಕಾರವೆ ಅಧಿಕಾರ ಇರುವುದರ ಕುರುಹು ಎಂಬಂತೆ ಆಗಿಹೋಗಿರುವ ಭಾರತದ ಸಂದರ್ಭದಲ್ಲಿ (ಅದರಲ್ಲೂ ವಿಶೇಷವಾಗಿ "ರಾಜಕುಮಾರ'ರ ಪ್ರಜಾಪ್ರಭುತ್ವದಲ್ಲಿ) ಈ ಎಲ್ಲಾ ವಿಷಯಗಳು ನಮ್ಮ ಗಮನ ಸೆಳೆಯಬೇಕು.
2009 ರ ಚುನಾವಣೆಯ ಫಲಿತಾಂಶ ಬಂದಿದೆ. ಜಾತ್ಯಾತೀತ ಸರ್ಕಾರ ಬರಬೇಕು ಮತ್ತು ನಿಸ್ವಾರ್ಥಿ, ಅರ್ಹ, ಯೋಗ್ಯರಾದ, ಭಾರತ ಮುಂದೆಯೂ ಹೆಮ್ಮೆಪಟ್ಟುಕೊಳ್ಳಬಹುದಾದ ಡಾ. ಸಿಂಗ್ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ನನ್ನಂತಹವರ ಆಶಾವಾದ ಒಂದು ರೀತಿಯಲ್ಲಿ ನೇರವೇರಿದೆ. ಇದು ಖಂಡಿತವಾಗಿಯೂ ಭಾರತದ ಜನ UPA ಅನ್ನು ಮತ್ತು ಡಾ. ಸಿಂಗ್‌ರನ್ನು ಪುರಸ್ಕರಿಸಿರುವ ರೀತಿ ಎಂದು ಭಾವಿಸಲು ನಾನು ಬಹುವಾಗಿಯೇ ಇಷ್ಟಪಡುತ್ತೇನೆ. I really like to believe that. ಆದರೆ ವಾಸ್ತವ ಹಾಗೆ ಆಗಿಲ್ಲ ಎಂದು ನನ್ನ ಸೀಮಿತ ಅವಲೋಕನದಲ್ಲಿ ನನಗೆ ಗಾಢವಾಗಿ ಅನ್ನಿಸುತ್ತಿದೆ. ಭಾರತದ ಅನೇಕ ರಾಜ್ಯಗಳಲ್ಲಿ ಜನ ಮತಚಲಾಯಿಸಿರುವ ರೀತಿಯನ್ನು ನೋಡಿದರೆ, ಬಹುಪಾಲು ಕಡೆ ಚುನಾವಣೆ ಆಗಿರುವುದು ಸ್ಥಳೀಯ ವಿಷಯಗಳ ಮೇಲೆ ಮತ್ತು ಅಲ್ಲಿಯ ಪಕ್ಷಗಳ ಸಂಘಟನೆ ಮತ್ತು ಸಂಪನ್ಮೂಲ ಕ್ರೋಢೀಕರಣದ ತಾಕತ್ತಿನ ಮೇಲೆ.
ಹಾಗಿದ್ದರೆ UPA ಗೆಲ್ಲಲು ಹೇಗೆ ಸಾಧ್ಯ? ಇವತ್ತಿಗೂ ಭಾರತದ ಬಹುಪಾಲು ಭಾಗದಲ್ಲಿ ಬೇರಿರುವ ಪಕ್ಷ ಎಂದರೆ ಕಾಂಗ್ರೆಸ್, ಮತ್ತು ಈ ಸಲ ಸ್ಥಳೀಯ Factors ಕಾಂಗ್ರೆಸ್‌ಗೆ ಪೂರಕವಾಗಿದ್ದವು. ಹಾಗಾಗಿ ಜನ ಸಹಜವಾಗಿಯೆ ಆ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದಾರೆ. ನನಗೆ ಅನ್ನಿಸುವ ಪ್ರಕಾರ ಕಳೆದ 2004 ರ ಚುನಾವಣೆಯಲ್ಲಿ ಆಗಿದ್ದೂ ಇದೆ. ಇದು ಒಂದು ರಾಷ್ಟ್ರೀಯ ಚುನಾವಣೆ ನಡೆಯುವ ರೀತಿ ಅಲ್ಲ ಮತ್ತು ಅದು ಒಟ್ಟು ದೇಶದ ಹಿತಕ್ಕೆ ಒಳ್ಳೆಯದಲ್ಲ. ಜನ ಯಾವ ಕಾರಣಕ್ಕೆ ಚುನಾವಣೆ ನಡೆಯುತ್ತಿದೆ ಮತ್ತು ಈ ಸಂದರ್ಭದಲ್ಲಿ ಯಾವ ಅಭ್ಯರ್ಥಿಯನ್ನು ಆರಿಸಬೇಕಿದೆ ಎಂಬ ಪ್ರಾಥಮಿಕ ತಿಳಿವಳಿಕೆ ಇಟ್ಟುಕೊಳ್ಳದೆ, ಬಹುಪಾಲು ಸ್ಥಳೀಯ ವಿಷಯ/ಚಿತಾವಣೆ/ಪ್ರಲೋಭನೆ/ಪ್ರಭಾವಗಳ ಆಧಾರದ ಮೇಲೆ ಮತ ಚಲಾಯಿಸುತ್ತಿದ್ದಾರೆ. ಹಾಗೆ ಮಾಡದೆ, ಈ ಬಾರಿ ದೇಶದ ಜನತೆ ಕೇಂದ್ರ ಸರ್ಕಾರವನ್ನು ನಿರ್ಧರಿಸಿದ್ದೇ ಆಗಿದ್ದರೆ, UPA ಇನ್ನೂ ಹೆಚ್ಚಿನ ಸ್ಥಾನ ಪಡೆಯಬೇಕಿತ್ತು; ಹಲವಾರು ಜನ ಸುಲಭವಾಗಿ ಆರಿಸಿಬರಬೇಕಿತ್ತು; ಸೋತ ಹಲವರು ಗೆಲ್ಲಬೇಕಿತ್ತು; ಮತ್ತೊಂದಷ್ಟು ಗೆದ್ದವರು ಸೋಲಬೇಕಿತ್ತು.
ಕರ್ನಾಟಕದ ಉದಾಹರಣೆಯನ್ನೆ ತೆಗೆದುಕೊಳ್ಳಿ. ಇಡೀ ದೇಶದ ಬಹುಪಾಲು ಜನ UPA ಎಂದರೆ ಇಲ್ಲಿ ಬಿಜೆಪಿ ಎಂದಿದ್ದಾರೆ. ಹಾಗೆ ಆಗಲು ಕಾರಣ ಈ ಸಲದ ಚುನಾವಣೆಯಲ್ಲಿ ಬಿಜೆಪಿಗೆ ಇದ್ದ ಸಂಪನ್ಮೂಲಗಳು ಮತ್ತು ಸಂಘಟನೆ ಕಾರಣವೆ ಹೊರತು, ಜನರಿಗೆ ಇಲ್ಲಿ UPA ಯನ್ನು ಬೆಂಬಲಿಸಬಾರದು ಎಂಬ ಕಾರಣ ಅಲ್ಲವೆ ಅಲ್ಲ. ಚುನಾವಣೆಗಳಂತೂ ಈಗ ಒಂದು ವ್ಯವಸ್ಥಿತ ಆಟ. ಮೊದಲ ದಿನದಿಂದಲೆ ಹಣ ಹರಿಸಬೇಕು. ಚುನಾವನೆಯ ಹಿಂದಿನ ದಿನ ಪ್ರತಿ ಮತದಾರನ ಮನೆಗೆ ಆತನ ಕ್ರಮಸಂಖ್ಯೆಯ ಚೀಟಿ ಮುಟ್ಟಿಸಬೇಕು; ಪ್ರತಿ ಬೂತ್‌ನಲ್ಲೂ ಪೋಲಿಂಗ್ ಏಜೆಂಟ್‌ನ ವ್ಯವಸ್ಥೆ ಮಾಡಬೇಕು. ಬೂತಿನ ಹೊರಗಡೆ ಪಕ್ಷದ ವತಿಯಿಂದ ನಾಲ್ಕಾರು ಟೇಬಲ್ ಹಾಕಿಕೊಂಡು ಕೂತು ಮತ ಹಾಕಲು ಬರುವ ಮಂದಿಗೆ ಮತ್ತೊಮ್ಮೆ ಅವರ ಕ್ರಮಸಂಖ್ಯೆ ತೆಗೆದುಕೊಡಬೇಕು. ಮತ್ತೊಮ್ಮೆ ಪುಸಲಾಯಿಸಬೇಕು. ಕೆಲವೊಮ್ಮೆ ಮತದಾರರನ್ನು ಮನೆಗೇ ಹೋಗಿ ಕರೆದುಕೊಂಡು ಬರಬೇಕು. ಸಾಧ್ಯವಾದರೆ ಗುಂಪಿನ ನಾಯಕರಿಗೆ ಲಕ್ಷಾಂತರ ದುಡ್ಡು ಕೊಟ್ಟು ಮೊದಲೆ ಬುಕ್ ಮಾಡಿಕೊಳ್ಳಬೇಕು. ಒಂದೆರಡು ವಾರ ಒಂದಷ್ಟು ಜನರನ್ನು ಸಂತೃಪ್ತಿಯಿಂದ ಇಟ್ಟುಕೊಳ್ಳಬೇಕು. ಕಾರ್ಯಕರ್ತರನ್ನೊಳಗೊಂಡ ಪ್ರಚಾರದ ಇಡೀ Machinery ಯನ್ನು ಪ್ರಚಾರದ ಅಷ್ಟೂ ದಿನ ಹಣಕಾಸಿಗೆ ತೊಂದರೆ ಆಗದಂತೆ ನೊಡಿಕೊಳ್ಳಬೇಕು. ಮತ್ತೆ ಇದೆಲ್ಲದರಿಂದ ಹೊರತಾದದ್ದು ಜಾತಿ ಲೆಕ್ಕಾಚಾರಗಳು ಮತ್ತು ಹಣ/ಸಾರಾಯಿ/ವಸ್ತು ಹಂಚಿಕೆಗಳು. ಅಮೆರಿಕದ ಪುಟ್‌ಬಾಲ್ ಟೀಮಿನ ಕೋಚ್‌ಗಳು ಮಾಡುವ ಪ್ಲಾನಿಂಗ್‌ನಂತೆ ನಮ್ಮ ಚುನಾವಣೆಗಳನ್ನು ಎದುರಿಸುವವರೂ ಎಲ್ಲವನ್ನೂ ಪಕಡ್‌ಬಂಧಿಯಾಗಿ ಮಾಡಬೇಕು. ಕರ್ನಾಟಕದಲ್ಲಿ ಈ ಸಲ ಬಿಜೆಪಿ ಈ ಎಲ್ಲವನ್ನೂ ಬೇರೆ ಮಿಕ್ಕ ಪಕ್ಷಗಳಿಗಿಂತ ವ್ಯವಸ್ಥಿತವಾಗಿ ಮಾಡುವ ಮಟ್ಟ ಮುಟ್ಟಿಕೊಂಡಿದೆ. ಹಾಗಾಗಿ ಸುಲಭವಾಗಿ ಗೆದ್ದಿದೆ. ಇದು ರಾಜ್ಯ ಬಿಜೆಪಿ ಪರ ಎಂದಾಗಲಿ, ಗೆದ್ದವರು ಸೋತವರಿಗಿಂತ ಅರ್ಹರು ಎಂದಾಗಲಿ, ಕರ್ನಾಟಕದ ಜನತೆಗೆ (ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಮಧ್ಯಮವರ್ಗಕ್ಕೆ) UPA ಅಪಥ್ಯವಾಗಲಿ ಎಂತಲ್ಲ.
ಇದೇ ಪರಿಸ್ಥಿತಿ ದೂರದ ರಾಜಸ್ಥಾನದಲ್ಲೂ ಪುನರಾವರ್ತನೆ ಆಗಿದೆ. ಅಲ್ಲಿ ಇತ್ತೀಚೆಗೆ ತಾನೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಹಜವಾಗಿ ಅಲ್ಲಿ ಇಲ್ಲಿಯ ಬಿಜೆಪಿ ತೊರಿಸಿರುವ ಸಾಧನೆಯನ್ನೆ ಅಲ್ಲಿಯ ಕಾಂಗ್ರೆಸ್ ಪಕ್ಷ ತೊರಿಸಿದೆ. ದೆಹಲಿಯೂ. ಇಲ್ಲೆಲ್ಲ ಅದು UPA ಗೆ ಪೂರಕವಾಗಿದೆ.
ಇನ್ನು ನೆರೆಯ ಆಂಧ್ರ, ತಮಿಳುನಾಡು, ಕೇರಳವನ್ನೆ ತೆಗೆದುಕೊಳ್ಳಿ. ಈ ಸಲ ಆಂಧ್ರದಲ್ಲಿ ಅಲ್ಲಿಯ ಕಾಂಗ್ರೆಸ್ ಸರ್ಕಾರಕ್ಕೆ ವಿರುದ್ಧವಾಗಿ ಆಡಳಿತಾರೂಢ ವಿರೋಧಿ ಅಲೆ ಇರಲಿಲ್ಲ. ಇದ್ದದ್ದೆಲ್ಲ ಚಿರಂಜೀವಿಯ ಪಕ್ಷ ಕಾಂಗ್ರೆಸ್ ಓಟುಗಳನ್ನು ಒಡೆಯುತ್ತದೆಯೆ ಎನ್ನುವ ಸಂಶಯ. ಆದರೆ ಪ್ರಜಾರಾಜ್ಯಂ ಪಕ್ಷಕ್ಕೆ ಈಗಿನ ಚುನಾವಣೆಗಳನ್ನು ಎದುರಿಸಲು ಬೇಕಾದ (ಮೇಲೆ ಹೇಳಿದಂತಹ) ಸಂಘಟನೆ ಮತ್ತು ಕಾರ್ಯಕರ್ತರು ಇಲ್ಲದೆ ಅದು ಹಾಗೆ ಆಗಿಲ್ಲ. ಇನ್ನು ಅಲ್ಲಿಯ ಆಡಳಿತಾರೂಢ ಕಾಂಗ್ರೆಸ್‌ಗೆ ಇರುವ ಹಣದ ಸಂಪನ್ಮೂಲಗಳನ್ನು ಮಿಕ್ಕವರಿಗೆ ಸರಿಗಟ್ಟಲು ಆಗಿಲ್ಲ. (ಕಳೆದ ಸಾರಿಯ ನಮ್ಮ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಹರಿದ ರಿಯಲ್ ಎಸ್ಟೇಟ್/ಗಣಿ ದುಡ್ಡು ನೆನಪಿಸಿಕೊಳ್ಳಿ. ಈ ಸಲ ಆಂಧ್ರದಲ್ಲಿ ಆಗಿರುವುದೂ ಅದೇ ರೀತಿ.) ಹಣ ಇದ್ದವರು, ಪಕ್ಷ ಸಂಘಟನೆ ಇದ್ದವರು, ಹಣ-ಅಧಿಕಾರ ಪ್ರಯೋಗಿಸಬಲ್ಲವರು ಗೆದ್ದಿದ್ದಾರೆ. ಹಾಗೆಯೆ ಗ್ರಾಮೀಣ ಮಟ್ಟದಲ್ಲಿ ಅಲ್ಲಿಯ ಸರ್ಕಾರ ನೀರಾವರಿ ಯೋಜನೆಗಳಿಗೆ ಕೊಟ್ಟ ಪ್ರಥಮ ಪ್ರಾಶಸ್ತ್ಯವೂ ಕೆಲಸ ಮಾಡಿದೆ. ಹೀಗಾಗಿ ಅಲ್ಲಿಯ ಸ್ಥಳೀಯ ಕಾಂಗ್ರೆಸ್ ಗೆದ್ದಿದೆ. ಸಹಜವಾಗಿ ಕೇಂದ್ರದ UPA ಸಹ.
ತಮಿಳುನಾಡಿನಲ್ಲೂ ಸ್ಥಳೀಯ ವಿಷಯ, ಸಂಪನ್ಮೂಲಗಳೆ ಮುಖ್ಯವಾಗಿವೆ. ಅಲ್ಲಿಯೂ ಆಡಳಿತ ವಿರೋಧಿ ಅಲೆ ಇರಲಿಲ್ಲ. ಗುಜರಾತ್-ಚತ್ತೀಸ್‍ಗಡ್-ಜಾರ್ಖಂಡ್ ನಲ್ಲೂ ಹೀಗೆ ಆಗಿದೆ. ಬಿಹಾರದಲ್ಲಿ ಈ ವಿಷಯಗಳ ಜೊತೆಗೆ ನಿತೀಶ್ ಕುಮಾರರ ಆಡಳಿತವೂ ಅವರ ಪಕ್ಷಕ್ಕೆ ಹೆಚ್ಚಿನ ಸೀಟುಗಳನ್ನು ತಂದುಕೊಟ್ಟಿದೆ. ಒರಿಸ್ಸಾದಲ್ಲಂತೂ ಪಟ್ನಾಯಿಕರ ಬಿಜೆಡಿ ವಿಧಾನಸಭೆಗೆ ಮೂರನೆ ಎರಡರ ಬಹುಮತ ಪಡೆದುಕೊಂಡಿದ್ದಷ್ಟೆ ಅಲ್ಲದೆ ಲೋಕಸಭೆಗೂ ತನ್ನವರನ್ನೆ ಹೆಚ್ಚಿಗೆ ಕಳುಹಿಸಿದೆ. ಇನ್ನು ನೆರೆಯ ಕೇರಳದಲ್ಲಿ ಆಡಳಿತ ವಿರೋಧಿ ಅಲೆ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದೆ. ಹಣ-ಹೆಂಡ ಹೆಚ್ಚಾಗಿ ಹರಿಯದ ದೂರದ ಪಶ್ಚಿಮ ಬಂಗಾಳದಲ್ಲೂ ಇದೇ ವಿಷಯ ಕೆಲಸ ಮಾಡಿದೆ. ಉತ್ತರ ಪ್ರದೇಶದಲ್ಲಿ ಅಲ್ಲಿಯ ಪ್ರಮುಖ ನಾಲ್ಕು ಪಕ್ಷಗಳು ಹೆಚ್ಚುಕಮ್ಮಿ ಹಂಚಿಕೊಂಡಿವೆ.
ಹೀಗೆ ಯಾವ ರೀತಿ ನೋಡಿದರೂ ಸ್ಥಳೀಯ ವಿಷಯ/ಸಂಪನ್ಮೂಲ/ಸಂಘಟನೆ/ಬಲ ಮುಖ್ಯವಾಗಿದೆಯೆ ಹೊರತು ಇಡೀ ದೇಶ "ಇದು ಕೇಂದ್ರ ಸರ್ಕಾರವನ್ನು ಆರಿಸುವ ಚುನಾವಣೆ. ನಾವು ಅದೇ ರೀತಿ ಅದನ್ನು ನೋಡಬೇಕು," ಎಂದು ಭಾವಿಸಿಲ್ಲ. ಕಳೆದ ಒಂದೆರಡು ದಶಕಗಳಲ್ಲಿ ಇಂತಹ ಮನೋಭಾವ ಜಾಸ್ತಿ ಆಗುತ್ತಿದೆ. ಅಕ್ಷರಸ್ಥರು ಹೆಚ್ಚಿಗೆ ಆಗುತ್ತಿರುವಾಗಲೂ, ಯುವಜನತೆ ನಿರ್ಣಾಯಕವಾಗುತ್ತಿರುವಾಗಲೂ, ಈಗಲೂ ಮುಂದುವರೆಯುತ್ತಿರುವ ಈ ವಿದ್ಯಾಮಾನ ಭಾರತದ ಪ್ರಜಾಪ್ರಭುತ್ವದ Maturity ಯನ್ನು ತೋರಿಸುತ್ತಿಲ್ಲ.
ಹೀಗೆ ಆಗದೆ, ದೇಶದ ಜನ ಡಾ. ಸಿಂಗ್‌ರನ್ನು ಅವರ ಕೆಲಸಕ್ಕಾಗಿ ಪುರಸ್ಕರಿಸಿದ್ದರೆ ಅದರ ಕತೆಯೆ ಬೇರೆ ಇರಬೇಕಿತ್ತು. ಉತ್ತಮವಾಗಬೇಕಿತ್ತು. ಸದ್ಯದಲ್ಲಿ ಇದು ಒಂದು ಒಳ್ಳೆಯ ಸಿದ್ಧಾಂತ ಮತ್ತು ವ್ಯಕ್ತಿಯನ್ನು ಬೆಂಬಲಿಸಿದಂತೆ ಕಾಣುತ್ತಿದ್ದರೂ ದೂರಗಾಮಿಯಾಗಿ ಯೋಚಿಸಿದಾಗ ಭಾರತ ಪ್ರತಿಸಲವೂ ಇದೇ ರೀತಿ Lucky ಆಗುತ್ತದೆ ಎಂದು ಅಂದುಕೊಳ್ಳಬೇಕಿಲ್ಲ. ನಮ್ಮ ಪ್ರಜಾಪ್ರಭುತ್ವದ ಪ್ರಬುದ್ಧತೆ ಮಾತ್ರ ಇಲ್ಲಿ ವಿವೇಕವನ್ನು ಕಾಪಾಡಬಲ್ಲದು.
May 17, 2009
ಇದು ಕೇಂದ್ರಕ್ಕೆ ಕೊಟ್ಟ Mandate ಅಲ್ಲ... ಕ್ಷಮಿಸಿ...
Subscribe to:
Post Comments (Atom)
No comments:
Post a Comment