Dec 1, 2008

ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು

ಡಾ. ಪ್ರಭುಶಂಕರ ಒಳ್ಳೆಯ ಹಾಸ್ಯಪ್ರಜ್ಞೆಯ ಲೇಖಕರು. ಇವರ ಹಾಸ್ಯಪ್ರೀತಿ ಎಷ್ಟಿದೆಯೆಂದರೆ, "ಪ್ರಭು ಜೋಕ್ಸ್" ಎಂಬ ಸಣ್ಣ ಜೋಕು ಪುಸ್ತಕವನ್ನೂ ಪ್ರಕಟಿಸಿದ್ದಾರೆ. ಇವರ ಹಿಂದಿನ ತಲೆಮಾರಿನ ಲೇಖಕರಲ್ಲಿ ನಾ. ಕಸ್ತೂರಿ ಅಪಾರ ಹಾಸ್ಯಪ್ರಜ್ಞೆಯ, ಅನಾರ್ಥಕೋಶದ ಲೇಖಕರು. ಅವರ ಬಗ್ಗೆ ಪ್ರಭುಶಂಕರರು "ನಾ. ಕಸ್ತೂರಿಯವರು" ಲೇಖನದಲ್ಲಿ ಹೀಗೆ ಹೇಳುತ್ತಾರೆ:

"(ನಾ. ಕಸ್ತೂರಿ) ಅವರ ಸಹಸ್ರಾರು ಶಿಷ್ಯರಲ್ಲಿ ನಾನು ಒಬ್ಬ; ಅವರ ಇತಿಹಾಸ ಬೋಧನೆಯ ಸವಿಯನ್ನು ಎರಡು ವರ್ಷಗಳ ಕಾಲ ಉಂಡವನು; ಅವರಿಂದ ಹಾಸ್ಯದ ದೀಕ್ಷೆ ಪಡೆದವನು; ನಕ್ಕು ನಲಿಸುವುದು ಸಾರ್ಥಕ ಕಾಯಕ ಎಂದು ನಂಬಿ ಅದರಂತೆ ಬಾಳುತ್ತಿರುವವನು."
("ನಮನ"- ಪುಟ 16)
ಈ ಕೆಳಗಿನ ಸಂದರ್ಭ ನಮ್ಮನ್ನು ನಗಿಸಿದರೂ, ಗಾಂಧಿಯನ್ನು ಭೇಟಿ ಮಾಡಿಸಲು ತನ್ನ ಶಿಷ್ಯರನ್ನು ನೂರಾರು ಮೈಲಿ ದೂರ ಕರೆದುಕೊಂಡು ಹೋಗಿದ್ದ ಆಗಿನ ಕಾಲದ ಗುರುಗಳ ಬದ್ಧತೆಯನ್ನೂ ತೋರಿಸುತ್ತದೆ.
"1946 ನೆಯ ಇಸವಿಯ ಮೊದಲಲ್ಲಿ ಮಹಾತ್ಮಾ ಗಾಂಧಿಯವರು ಮದರಾಸಿಗೆ ಬಂದಿದ್ದರು. ನಾನು ಆಗ ಮೊದಲ ವರ್ಷದ ಇಂಟರ್ಮೀಡಿಯೆಟ್ ವಿದ್ಯಾರ್ಥಿ. ನಮ್ಮ ಅಚ್ಚು ಮೆಚ್ಚಿನ ಮೇಷ್ಟ್ರಾದ ನಾ. ಕಸ್ತೂರಿಯವರು ನಮ್ಮಲ್ಲಿ ಹದಿನೈದು ಇಪ್ಪತ್ತು ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕ್ಕೆ ಎಂದು ಮದರಾಸಿಗೆ ಕರೆದುಕೊಂಡು ಹೋದರು. ಗಾಂಧೀಜಿಯವರ ದರ್ಶನ, ಭಾಷಣಗಳ ಲಾಭ ನಮಗೆ ದೊರೆಯಲಿ ಎಂಬುದೂ ಅವರ ಉದ್ದೇಶವಾಗಿತ್ತು. ತ್ಯಾಗರಾಜನಗರದ ದೊಡ್ಡ ಬಯಲಿನಲ್ಲಿ ಮಹಾತ್ಮರ ಉಪನ್ಯಾಸ ಸಂಜೆ ಐದಕ್ಕೆ. ಕಸ್ತೂರಿಯವರು ಮಧ್ಯಾಹ್ನ ಎರಡು ಘಂಟೆಗೇ ನಮ್ಮನ್ನೆಲ್ಲ ವೇದಿಕೆಗೆ ತೀರ ಸಮೀಪದಲ್ಲಿ ಕೂರಿಸಿ ಬಿಟ್ಟರು. ಸುಡುಬಿಸಿಲು, ದಾಹ. ಮೇಷ್ಟ್ರಿಗೆ ವಿದ್ಯಾರ್ಥಿಗಳ ವಿಷಯದಲ್ಲಿ ಕನಿಕರ. ನೀರು ಸಿಕ್ಕುತ್ತಿಲ್ಲ. ಅಷ್ಟರಲ್ಲಿ ಐಸ್ ಕ್ರೀಂ ಮಾರುವವನು ಬಂದ. ನಮಗೆಲ್ಲ ಐಸ್ ಕ್ರೀಂ ಕೊಡಿಸಿ ತಾವೂ ಒಂದನ್ನು ತಿನ್ನುತ್ತಾ ಕುಳಿತರು. ನಾನು ತಿಂದು ಮುಗಿಸಿ ಕೈ ಒರೆಸುವುದು ಯಾವುದಕ್ಕೆ ಎಂದು ಪೇಚಾಡುತ್ತಿದ್ದೆ. ಮೇಷ್ಟ್ರು ನನ್ನ ಹಿಂದೆಯೇ ಕುಳಿತಿದ್ದವರು "ಯಾಕೋ ಪೇಚಾಡ್ತೀಯ, ನಿನ್ನ ಮುಂದೆ ಕುಳಿತಿದ್ದಾನಲ್ಲ ಅವನ ಷರ್ಟಿಗೆ ಒರಸು" ಎಂದರು. ನನಗೆ ಸಂಕೋಚವಾಯಿತು. ಮುಂದೆ ಕುಳಿತಿದ್ದವನು ನನ್ನ ಸಹಪಾಠಿ. ಮದರಾಸಿನ ವಿಷಯ ತಿಳಿಯದೆ ಮಹಾತ್ಮರ ದರ್ಶನಕ್ಕೆ ಎಂದು ಸಿಲ್ಕ್ ಷರ್ಟ್ ಧರಿಸಿ ಬಂದಿದ್ದ. ನಾನು ಹಿಂದೆ ಮುಂದೆ ನೋಡುವುದನ್ನು ಗಮನಿಸಿ ಮೇಷ್ಟ್ರು "ಒರಸೋ ಪರವಾಗಿಲ್ಲ. ಒರಸಪ್ಪ. ಈಗ ನೋಡು ನಾನು ನಿನ್ನ ಷರ್ಟಿಗೆ ಒರಸಿಲ್ಲವೆ?" ಎಂದರು. ಇದು ಕಸ್ತೂರಿಯವರ ಆಶು ಹಾಸ್ಯದ ರೀತಿ. ಆ ಸಂದರ್ಭದಲ್ಲಿ ಸೃಷ್ಟಿಯಾಗಿ, ತಕ್ಷಣ ಹಾಸ್ಯದ ಹೊಳೆ ಹರಿಸಿ, ಕೇಳುಗರು ಅದರಲ್ಲಿ ಮಿಂದು, ತಮ್ಮ ಸ್ವಂತದ ದುಃಖ ಮ್ಲಾನತೆಗಳಿದ್ದರೆ ಅವನ್ನು ತೊಳೆದುಕೊಂಡು ಮತ್ತೆ ಹೊಸಬರಾಗಿ ಮೈ ಒರಸಿಕೊಳ್ಳುತ್ತಾ ನಿಂತಿರುವುದನ್ನು ನೋಡುವುದು ಎಂದರೆ ಕಸ್ತೂರಿಯವರಿಗೆ ಖುಷಿಯೋ ಖುಷಿ." ("ನಮನ"- ಪುಟ 16-17)
ಇನ್ನೊಂದು ಘಟನೆ:
"ನನಗಿರಲಿ, ನನ್ನ ಗುರುಗಳಾಗಿದ್ದ ಶ್ರೀ. ಜಿ.ಪಿ. ರಾಜರತ್ನಂ ಅವರನ್ನೂ ಶ್ರೀ ಕಸ್ತೂರಿ ಸತಾಯಿಸದೆ ಬಿಡಲಿಲ್ಲ. "ಲೋ, ರಾಜರತ್ನ, ಪದ್ಯ ಬರೆದು ನನಗೆ ಅವಮಾನ ಮಾಡಿದ್ದೀಯಲ್ಲೋ" ಎಂದು ತರಾಟೆಗೆ ತೆಗೆದುಕೊಂಡರು. ರಾಜರತ್ನಂ ಕಕ್ಕಾಬಿಕ್ಕಿಯಾದರು. "ಇಲ್ಲವಲ್ಲ ಸಾರ್" ಎಂದರು. "ಯಾಕೋ ಇಲ್ಲ, ಬರೆದಿದ್ದೀಯ:
ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ.
ಅಂತ ಬರೆದಿಲ್ವೇನಯ್ಯ. ಅಲ್ಲದೆ ಕೊನೇಲಿ 'ಜಂಬದ ಕೋಳಿಗೆ ಗೋಳಾಯ್ತು' ಅಂತ ಬೇರೆ ಹೇಳಿದೀಯ. ಹೇಳು, ನಾನು ಜಂಬದ ಕೋಳಿನೇನೋ?"" ("ನಮನ"- ಪುಟ 18)
ಈ ಕೆಳಗಿನ ಘಟನೆಯಂತೂ ಆಗಿನ ಸಜ್ಜನರ ನಿರ್ಮಲತೆಯನ್ನೂ, ಸರಳತೆಯನ್ನೂ, ತಮ್ಮ ಸಮಕಾಲೀನರ ಪ್ರತಿಭೆ ಮತ್ತು ಯಶಸ್ಸನ್ನು ಸಂಭ್ರಮಿಸುವುದನ್ನೂ ತೋರಿಸುತ್ತದೆ:
"... ಕಸ್ತೂರಿಯವರು ಒಂದು ದಿನ ಹೇಳಿದರು: "ಪ್ರಭು, ನಾನು ಅಮರನಾಗಿಬಿಟ್ಟೆ ಕಣಯ್ಯ." ಅದಕ್ಕೆ ನಾನು ಹೇಳಿದೆ: "ಹೌದು, ಎಷ್ಟೆಲ್ಲ ಒಳ್ಳೆಯ ಪುಸ್ತಕಗಳನ್ನು ಬರೆದಿದ್ದೀರಿ. ಕನ್ನಡ ಸಾಹಿತ್ಯದಲ್ಲಿ ನಿಮ್ಮದು ಅಮರವಾದ ಸ್ಥಾನವೇ." ಅವರು ನಕ್ಕರು: "ಆ ಭ್ರಾಂತಿ ನನಗಿಲ್ಲ ಕಣಯ್ಯ. ಪುಟ್ಟಪ್ಪ ತನ್ನ "ಕೃತ್ತಿಕೆ" ಕವನ ಸಂಕಲನದಲ್ಲಿ 'ಕವಿಯ ತೃಪ್ತಿ' ಅಂತ ಒಂದು ಸಾನೆಟ್ ಬರೆದಿದ್ದಾನೆ. ಅದರಲ್ಲಿ ಮೊದಲ ಪಂಕ್ತಿಯಲ್ಲೇ ನನ್ನ ಹೆಸರು ಸೇರಿಸಿದ್ದಾನೆ. ಆ ಪದ್ಯ ಓದಿದ್ದೀಯಾ?" "ಓದಿದ್ದೇನೆ. ಬಾಯಲ್ಲೂ ಬರುತ್ತೆ" ಎಂದೆ. "ಹಾಗಾದರೆ ಹೇಳು" ಎಂದರು. ಹೇಳಿದೆ:
ಬಳಿಯಿರುವ ವೆಂಕಯ್ಯ, ಕಂಠಯ್ಯ, ಕಸ್ತೂರಿ
ಶ್ರೀನಿವಾಸರು ಮೆಚ್ಚಿದರೆ ಸಾಕೆನಗೆ ತೃಪ್ತಿ;
ನನ್ನ ಕನ್ನಡ ಕವನಗಳ ಯಶಸ್ಸಿನ ವ್ಯಾಪ್ತಿ.
ಲಂಡನ್ನಿನೊಳಗೂದ ಬೇಕಿಲ್ಲ ತುತ್ತೂರಿ!
ಕಸ್ತೂರಿ ಮುಂದುವರಿದು ಹೇಳಿದರು:

"ನೋಡಿದೆಯೇನಯ್ಯ! ಪ್ರಭು, ನಾನು ಯಾರು ಎಂದು ಈಗ ಕೆಲವರಿಗಾದರೂ ಗೊತ್ತು. ಮುಂದೆ, ಹತ್ತಾರು ವರ್ಷಗಳು ಕಳೆದ ಮೇಲೆ ಯಾರಿಗೂ ಗೊತ್ತಿರುವುದಿಲ್ಲ. ಕುವೆಂಪು ಜಗದ್ವಿಖ್ಯಾತರಾಗಿರುತ್ತಾರೆ. ಅವರ ಈ ಕವನವನ್ನು ಓದಿದವರು ನನ್ನ ಹೆಸರಿನ ಕೆಳಗೆ ಗೆರೆ ಎಳೆದು ಪಕ್ಕದ ಮಾರ್ಜಿನ್‌ನಲ್ಲಿ ಯಾರಿವನು ಎಂದು ಪ್ರಶ್ನಾರ್ಥಕ ಚಿಹ್ನೆ ಹಾಕುತ್ತಾರೆ. ಅಷ್ಟು ಸಾಕು ಕಣೋ. ಅದಕ್ಕಿಂತ ಅಮರತ್ವ ಇನ್ನು ಯಾವುದಿದೆಯೋ?" ("ನಮನ"- ಪುಟ 20)


ಪ್ರಶ್ನೆ: ಇದೆಲ್ಲ (ಈ ಬರಹ) ಈಗೇಕೆ?
ಉತ್ತರ: ತಲ್ಲಣದ ಸಮಯದಲ್ಲಿ ಸಜ್ಜನಿಕೆ ಮತ್ತು ಪ್ರೀತಿಯನ್ನು ಹುಡುಕುತ್ತಾ...

ಈ ಸರಣಿಯ ಎರಡನೆಯ ಲೇಖನ: ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...

ಮೂರನೆಯ ಲೇಖನ: ಈಗ ನೀವು ಓದಿದ್ದು (?).

ನಾಲ್ಕನೆಯ ಲೇಖನ: ಕುವೆಂಪು ವಿರುದ್ಧ ದೇವುಡು ಪಿತೂರಿ ಮತ್ತು ಅಂತರ್ಜಾತಿ ವಿವಾಹ

No comments: