(ವಿಕ್ರಾಂತ ಕರ್ನಾಟಕ - ಜನವರಿ 04, 2008 ರ ಸಂಚಿಕೆಯಲ್ಲಿನ ಬರಹ)
ಓಹ್. ಎಂತಹ ಸುಂದರ ನಗು, ಆ ಮಗುವಿನದು. ಒಮ್ಮೊಮ್ಮೆ ತುಂಟನಂತೆ, ಒಮ್ಮೊಮ್ಮೆ ಮುಗ್ಧನಂತೆ ಕಾಣುತ್ತಾನೆ. ಇನ್ನೂ ಕೇವಲ ಐದು ವರ್ಷ ಅವನಿಗೆ. ಆಡುತ್ತಾ, ಪಾಡುತ್ತಾ ಬೆಳೆಯುತ್ತಿದ್ದಾನೆ. ತಾನು ಬೆಳೆದು ದೊಡ್ಡವನಾದ ಮೇಲೆ ಡಾಕ್ಟರಾಗುತ್ತೇನಮ್ಮ ಎಂದಿದ್ದಾನೆ ಅಮ್ಮನೊಂದಿಗೆ ಒಮ್ಮೆ. ಬಾಲವಾಡಿಗೆ (ಕಿಂಡರ್‌ಗಾರ್ಟನ್) ಹೋಗಲು ಏನೋ ಹುಮ್ಮಸ್ಸು ಅವನಿಗೆ. ಬೆಳಗ್ಗೆ ಅಮ್ಮನಿಗಿಂತ ಬೇಗ ಎದ್ದು ಅವಳನ್ನು ಎಬ್ಬಿಸಲು ಓಡುತ್ತಾನೆ. "ನಡಿಯಮ್ಮ, ಶಾಲೆಗೆ ಹೋಗೋಣ," ಎನ್ನುತ್ತಾನೆ.
ಸರಿಯಾಗಿ ವರ್ಷದ ಹಿಂದೆ; 2007 ರ ಜನವರಿ 15. ಬಾಗ್ದಾದಿನ ತನ್ನ ಮನೆಯ ಮುಂದೆ ಆಡುತ್ತಿದ್ದ ಆ ಮಗುವನ್ನು ಇದ್ದಕ್ಕಿದ್ದಂತೆ ಹಲವಾರು ಜನ ಸುತ್ತುವರಿದು ಹಿಡಿದುಕೊಂಡುಬಿಟ್ಟರು. ಆ ದುಷ್ಟಜಂತುಗಳು ಮುಖವಾಡಗಳನ್ನು ಧರಿಸಿದ್ದ ಕ್ಷುದ್ರ ಹೇಡಿಗಳೂ ಆಗಿದ್ದರು. ನಾನಾ ತರಹದ ಹಿಂಸೆಯಿಂದ ನರಳುತ್ತಿರುವ, ಪರದೇಶಿ ಸೈನಿಕರು, ಒಳಗಿನ ಕೋಮುವಾದಿ ಭಯೋತ್ಪಾದಕರು, ಹೊರಗಿನ ಕೋಮುವಾದಿ ಭಯೋತ್ಪಾದಕರು, ಒಂದು ಪಂಗಡವನ್ನು ಕಂಡರಾಗದ ಮತ್ತೊಂದು ಪಂಗಡದ ಜಾತ್ಯಂಧ ಮುಸಲ್ಮಾನರು, ಹೀಗೆ ಎಲ್ಲರೂ ಸೇಡು ತೀರಿಸಿಕೊಳ್ಳಲು, ರಕ್ತ ಹರಿಸಲು ಹಾತೊರೆಯುತ್ತಿರುವ ಇರಾಕಿನಂತಹ ಇರಾಕಿನಲ್ಲಿಯೆ ಅಪರೂಪವಾದ ಬರ್ಬರ ಕೃತ್ಯವೊಂದನ್ನು ಆ ಹೇಡಿಗಳು ಅಂದು ಎಸಗಿಬಿಟ್ಟರು. ಯೂಸ್ಸಿಫ್ ಎಂಬ ಆ ಐದು ವರ್ಷಗಳ, ನಗುಮುಖದ ಮಗುವನ್ನು ಹಿಡಿದುಕೊಂಡು, ಅವನ ಮೇಲೆ ಪೆಟ್ರೊಲ್ ಸುರಿದು, ಬೆಂಕಿ ಹಚ್ಚಿ, ಓಡಿ ಬಿಟ್ಟರು. ಬೀದಿಯಲ್ಲಿ ಆಡುತ್ತಿದ್ದ ಆ ಮಗುವಿಗೆ ಹೀಗೆ ಮಾಡಿದ ಆ ದುಷ್ಕರ್ಮಿಗಳು ಯಾರು, ಯಾಕೆ ಹೀಗೆ ಮಾಡಿದರು, ಅವರಿಗೆ ಯಾಕೆ ಈ ಪರಿಯ ಮಾನವದ್ವೇಷ, ಇವು ಯಾವುವೂ ಇವತ್ತಿಗೂ ಗೊತ್ತಾಗಿಲ್ಲ.
ಬೆಂಕಿಯಲ್ಲಿ ಉರಿದ ಮಗು ಇರಾಕಿನ ಆಸ್ಪತ್ರೆಯಲ್ಲಿ ಎರಡು ತಿಂಗಳು ಚಿಕಿತ್ಸೆ ಪಡೆಯಿತು. ಪ್ರಾಣಕ್ಕೇನೂ ಅಪಾಯವಾಗಲಿಲ್ಲ. ಆದರೆ, ಮುಖವೆಲ್ಲ ಸುಟ್ಟು ಹೋಗಿತ್ತು. ಸುಂದರ ನಗು ಮಾಸಿ ಹೋಗಿ ಅವನ ಮುಖ ದೊಡ್ಡವರೆ ನೋಡಿ ಬೆಚ್ಚುವಷ್ಟು ಕುರೂಪವಾಗಿಬಿಟ್ಟಿತು. ತುಟಿಗಳು ತೆರೆಯಲಾರದಷ್ಟು ಬಿಗಿದು ಹೋದವು. ಅನ್ನವನ್ನೂ ಸಹ ಕಷ್ಟಪಟ್ಟು ಬಾಯಿಗೆ ತುರುಕಿಕೊಂಡು ತಿನ್ನಬೇಕಾಯಿತು. ಮಾತು ಅಸ್ಪಷ್ಟವಾಗಿಬಿಟ್ಟವು. ಸ್ವರ ಕ್ಷೀಣವಾಗಿ ಕೇಳಿಸುತ್ತಿತ್ತು. ಅಪ್ಪಅಮ್ಮ ಸ್ವಲ್ಪವೇ ಸ್ವಲ್ಪ ಬೇಸರದ ಮಾತಾಡಿದರೂ ಅವನು ಅಳಲು ಆರಂಭಿಸಿ ಬಿಡುತ್ತಿದ್ದ. ತಾನು ಮುದ್ದಾಡುತ್ತಿದ್ದ ತನ್ನ ಪುಟ್ಟ ತಂಗಿಯನ್ನು ಸಹ ನೋಡಿ ಹೊಟ್ಟೆಕಿಚ್ಚು ಪಡುವಂತಾಗಿ ಬಿಟ್ಟ. ಯೂಸ್ಸಿಫ್‌ನ ಐದು ವರ್ಷದ ದೇಹ ಮತ್ತು ಮನಸ್ಸು ಎರಡೂ ಶಾಶ್ವತವಾಗಿ ಬದಲಾಗಿ ಬಿಟ್ಟವು.ಪ್ರಾಥಮಿಕ ಚಿಕಿತ್ಸೆ ಕೊಟ್ಟು ಸುಟ್ಟ ಗಾಯಗಳನ್ನು ಒಣಗಿಸಿದ ನಂತರ ಬಾಗ್ದಾದಿನ ವೈದ್ಯರುಗಳು ತಮ್ಮ ಕೈಯಲ್ಲಿ ಇದಕ್ಕಿಂತ ಹೆಚ್ಚಿಗೆ ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿ ಬಿಟ್ಟರು. ಯೂಸಿಫ್‌ನ ಅಪ್ಪ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುವ ಸಾಮಾನ್ಯ ಮನುಷ್ಯ. ಅವನಿಗೆ ಯೂಸಿಫ್‌ನನ್ನು ಇರಾಕಿನ ಹೊರಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವಷ್ಟು ಆರ್ಥಿಕ ತ್ರಾಣವಿರಲಿಲ್ಲ. ಹೋಗಲಿ, ಈ ವಿಷಯದ ಬಗ್ಗೆ ಟಿವಿ, ಪತ್ರಿಕೆಯವರೊಂದಿಗೆ ಮಾತನಾಡೋಣ ಎಂದರೆ ಅದು ಇರಾಕಿನಲ್ಲಿ ಭಾರೀ ಅಪಾಯಕಾರಿ ದುಸ್ಸಾಹಸ. ತನ್ನ ಜೀವದ ಮೇಲೆ ಮತ್ತು ಇಡೀ ಕುಟುಂಬದ ಮೇಲೆ ಮತ್ತೊಂದು ದಾಳಿಗೆ ಆಹ್ವಾನ ಕೊಟ್ಟಂತೆ ಅದು.
ಆದರೆ ಮಗನ ಸ್ಥಿತಿ ನೋಡಿ ಅಪ್ಪಅಮ್ಮ ಸುಮ್ಮನೆ ಕೂಡುವಂತಿರಲಿಲ್ಲ. ಕರುಳಿನ ಕುಡಿಯ ನಗುವನ್ನು ಮತ್ತೆ ಮೋಡಲು ಅಮ್ಮ ನಿರ್ಧರಿಸಿಬಿಟ್ಟಳು. ಮಗುವನ್ನು ಹೀಗೆ ನೋಡುವುದಕ್ಕಿಂತ ತಾನು ಸಾಯುವುದೆ ಮೇಲು ಎಂದುಕೊಂಡಳು. ನನ್ನ ಮಗು ಮೊದಲಿನಂತೆ ನಗುವುದನ್ನು ನೋಡವುದಷ್ಟೆ ತನಗೆ ಬೇಕಾಗಿರುವುದು, ಯಾರಾದರೂ ಸಹಾಯ ಮಾಡಲು ಸಾಧ್ಯವೆ ಎಂದು ಪತ್ರಕರ್ತರನ್ನು ಕೇಳಿಕೊಂಡಳು. ಸಿ.ಎನ್.ಎನ್. ರವರು ಟಿವಿಯವಲ್ಲಿ ಮತ್ತು CNN.com ನಲ್ಲಿ ಯೂಸ್ಸಿಫ್‌ನ ಕತೆಯನ್ನೂ, ಆ ತಾಯಿಯ ಮನವಿಯನ್ನೂ ಕಳೆದ ಆಗಸ್ಟ್ 22 ರಂದು ವರದಿ ಮಾಡಿದರು.
CNN.com ನಲ್ಲಿ ಪ್ರಕಟವಾದ ಯೂಸ್ಸಿಫ್‌ನ ಕತೆ ಮತ್ತು ಅವನ ಫೋಟೋಗಳು ಓದುಗರಲ್ಲಿ ಸಂಚಲನ ಉಂಟು ಮಾಡಿಬಿಟ್ಟವು. CNN.com ನ ಹನ್ನೆರಡು ವರ್ಷಗಳ ಇಂಟರ್ನೆಟ್ ಇತಿಹಾಸದಲ್ಲಿ ಓದುಗರು ಈ ವರದಿಗೆ ಸ್ಪಂದಿಸಿದಷ್ಟು ಇನ್ಯಾವ ವರದಿಗೂ ಸ್ಪಂದಿಸಿರಲಿಲ್ಲ. ಯೂಸ್ಸಿಫ್‌ನ ತಾಯಿಯ ಮನವಿಗೆ ಓಗೊಟ್ಟು ತಮ್ಮ ಕೈಲಾದ ಸಹಾಯ ಮಾಡಲು ಅನೇಕ ಓದುಗರು ಮುಂದೆ ಬಂದರು. ಅಮೆರಿಕದ್ದಷ್ಟೆ ಅಲ್ಲದೆ ವಿಶ್ವದ ಹತ್ತಾರು ಪ್ರಸಿದ್ಧ ಸೇವಾಸಂಸ್ಥೆಗಳು ಸಹಾಯಕ್ಕೆ ತಕ್ಷಣ ಮುಂದಾದರು.
ಇಷ್ಟೆಲ್ಲ ಸಹಾಯದ ಆಶ್ವಾಸನೆ ಬಂದ ಮೇಲೆ, ವೀಸಾ, ಭದ್ರತೆ ಮುಂತಾದ ಎಲ್ಲಾ ಎಡರುತೊಡರುಗಳನ್ನು ಎದುರಿಸಿ ಮಗುವನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದಕ್ಕೆ ಅಪ್ಪಅಮ್ಮ ತೀರ್ಮಾನಿಸಿದರು. ಚಿಲ್ಡ್ರನ್ಸ್ ಬರ್ನ್ ಫೌಂಡೇಷನ್ ಯೂಸ್ಸಿಫ್‌ನ ಕುಟುಂಬದ ಪ್ರಯಾಣದ ವೆಚ್ಚ ಮತ್ತು ಅಮೆರಿಕದಲ್ಲಿಯ ಆತನ ಚಿಕಿತ್ಸೆಗೆ ಬೇಕಾದ ಹಣವನ್ನು ಭರಿಸಲು ಒಪ್ಪಿಕೊಂಡಿತು. ಯೂಸ್ಸಿಫ್‌ನ ಚಿಕಿತ್ಸೆಗೆ ಸಾವಿರಾರು ಓದುಗರು ಚಿಲ್ಡ್ರನ್ಸ್ ಬರ್ನ್ ಫೌಂಡೇಷನ್‌ಗೆ ಧನಸಹಾಯ ಮಾಡಲು ಮುಂದಾದರು.
ಕಳೆದ ಸೆಪ್ಟೆಂಬರ್ 11 ರಂದು ಯೂಸ್ಸಿಫ್ ಕುಟುಂಬ ಸಮೇತನಾಗಿ ಅಮೆರಿಕದಲ್ಲಿ ಬಂದಿಳಿದ. ಹತ್ತೇ ದಿನಗಳ ಒಳಗೆ ವೈದ್ಯರ ತಂಡವೊಂದು ಮೊದಲ ಸರ್ಜರಿ ಮಾಡಿದರು. ಅಲ್ಲಿಂದೀಚೆಗೆ ವೈದ್ಯರು ಆಗಾಗ ಸರ್ಜರಿ ಮಾಡುತ್ತಲೆ ಬಂದರು. ಬಹಳ ಕಾಂಪ್ಲಿಕೇಟೆಡ್ ಆದ ಸರ್ಜರಿಗಳು ಇವು. ಸುಟ್ಟು ಒಣಗಿರುವ ಚರ್ಮದ ಮೇಲ್ಪದರವನ್ನು ತೆಗೆಯುವುದು; ಪಕ್ಕದಲ್ಲಿಯೆ ಇನ್ನೊಂದು ಒಳ್ಳೆಯ ಮಾಂಸ ಬೆಳೆಸುವುದು; ಅದನ್ನು ಬೇರೆಡೆಗೆ ಎಳೆದು ಕೂಡಿಸುವುದು; ಹೆಚ್ಚಿಗೆ ಬೆಳೆದ ಟಿಶ್ಯೂವನ್ನು ತೆಗೆಯುವುದು; ಸದ್ಯದ ಸರ್ಜರಿಯ ಗಾಯ ವಾಸಿಯಾದ ನಂತರ ಮತ್ತೊಂದಕ್ಕೆ ಸಿದ್ಧವಾಗುವುದು. ಮೂರು ತಿಂಗಳಲ್ಲಿ ಇಂತಹ ಹತ್ತು ಸರ್ಜರಿಗಳ ಅವಶ್ಯಕತೆಯಿರುವ, ಸುದೀರ್ಘ ಪಯಣ ಇದು. ಯೂಸ್ಸಿಫ್‌ಗಂತೂ ಮಾನಸಿಕ, ದೈಹಿಕ ವೇದನೆಯ ನೋವಿನ ಯಾತ್ರೆ.
ಇತ್ತೀಚಿನ ಸುದ್ದಿಯ ಪ್ರಕಾರ, ಕೇವಲ ಹತ್ತಾರು ದಿನಗಳ ಹಿಂದಷ್ಟೆ ಒಂದು ದೊಡ್ಡ ಸರ್ಜರಿ ಆಗಿದೆ. ಆಧುನಿಕ ವಿಜ್ಞಾನ ಮತ್ತು ವೈದ್ಯಶಾಸ್ತ್ರ ಯೂಸ್ಸಿಫ್‌ನ ನಗುವನ್ನು ಮತ್ತೆ ಹಿಂದಿರುಗಿಸುವ ಆಶಾಭಾವನೆ ಬಹಳಷ್ಟು ಜನರಲ್ಲಿ ಇದೆ. ವಿಶ್ವದಾದ್ಯಂತದ ಲಕ್ಷಾಂತರ ಜನ ಯೂಸ್ಸಿಫ್‌ನ ಸ್ನಿಗ್ಧ ನಗುವನ್ನು ಮತ್ತೆ ಕಾಣಲು ಆಶಿಸುತ್ತಿದ್ದಾರೆ. ಯೂಸ್ಸಿಫ್‌ನ ಚಿಕಿತ್ಸೆಯನ್ನು ನಿಯಮಿತವಾಗಿ ಫಾಲೊ ಮಡುತ್ತಿದ್ದಾರೆ.
ದೇಶದ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಪಂಗಡದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ, ಚರ್ಮದ ಬಣ್ಣದ ಹೆಸರಿನಲ್ಲಿ, ತಮಗಿಷ್ಟ ಬಂದ ಕ್ಷುಲ್ಲಕ ವಿಷಯದ ಹೆಸರಿನಲ್ಲಿ ಪ್ರಪಂಚದಾದ್ಯಂತ ಕೊಲೆಗಡುಕ ಮನಸ್ಸಿನ ಜನ ಹಿಂಸಾಚಾರ ಮಾಡುತ್ತಲೆ ಬಂದಿದ್ದಾರೆ. ಮನುಷ್ಯನ ಈ ಮೃಗೀಯ ಪ್ರವೃತ್ತಿ ಮೊದಲಿನಂದಲೂ ಇದ್ದದ್ದೆ. ಸಾವಿರಾರು ಮೈಲಿಗಳ ದೂರದಲ್ಲಿ ಯೂಸ್ಸಿಫ್‌ಗೆ ಆಗಿದ್ದು ನಮ್ಮ ನಡುವೆಯೂ ಆಗಾಗ ನಡೆಯುತ್ತಿರುತ್ತದೆ. ಏನೂ ತಪ್ಪು ಮಾಡಿರದ ದುರದೃಷ್ಟ ಜನ ಅನ್ಯಾಯಕ್ಕೊಳಗಾಗುತ್ತಾರೆ. ಆ ದುರದೃಷ್ಟವಂತರಲ್ಲಿ ಕೆಲವೆ ಕೆಲವರಿಗೆ ಮಾತ್ರ ಯೂಸ್ಸಿಫ್‌ಗೆ ದೊರಕಿದ ಸಹಾಯ ದೊರಕುತ್ತದೆ. ಎಷ್ಟೇ ಸಹಾಯ ಸಿಕ್ಕರೂ ಅದು ಈಗಾಗಲೆ ಆದ ಅನ್ಯಾಯವನ್ನು ಸರಿ ಮಾಡುವುದಿಲ್ಲ.
ಆದರೆ, ಇಂತಹ ಅನ್ಯಾಯಗಳು ಅನಾದಿ ಕಾಲದಿಂದ ಇದ್ದರೂ, ಶಿಕ್ಷೆಯ ಭಯವಿಲ್ಲದ ಒಂದು ಕೆಟ್ಟ ವ್ಯವಸ್ಥೆಯಲ್ಲಿ ಇಂತಹವು ಪದೆಪದೆ ಆಗುವ ಸಾಧ್ಯತೆಗಳಿರುತ್ತವೆ. ಅಪರಾಧಿಗಳನ್ನು ಹಿಡಿದು ಅವರು ಮಾಡಿದ ಅಪರಾಧವನ್ನು ಸಾಬೀತು ಮಾಡಿ ಅವರಿಗೆ ಶಿಕ್ಷೆ ವಿಧಿಸಲು ಅವಕಾಶವಿರುವ ಉತ್ತಮ ವ್ಯವಸ್ಥೆಯಲ್ಲಿ ಇಂತಹ ಘಟನೆಗಳು ಬಹಳ ಕಮ್ಮಿ ಸಲ ಮರುಕಳಿಸುತ್ತವೆ. ನಮ್ಮ ದೇಶದಲ್ಲಿಯೆ ಗಮನಿಸಿ. ಕೊಲೆ, ಸುಲಿಗೆ ಮಾಡಿಯೂ ಸಿಕ್ಕಿಹಾಕಿಕೊಳ್ಳದ ರಾಜ್ಯಗಳಲ್ಲಿ ಈಗಲೂ ಅಪರಾಧಗಳ ಪ್ರಮಾಣ ಜಾಸ್ತಿ. ಅದೆ ಕಾನೂನು ಮತ್ತು ಸುವ್ಯವಸ್ಥೆ ಸ್ವಲ್ಪಮಟ್ಟಿಗೆ ಉತ್ತಮವಾಗಿರುವ ರಾಜ್ಯಗಳಲ್ಲಿ ಅದು ಕಮ್ಮಿ. ಶಾಂತಿಯ ಸಮಯದಲ್ಲಿ ಅಪರಾಧ ಮಾಡಿದರೆ ಸಿಕ್ಕಿಹಾಕಿಕೊಂಡು ಬಿಡುತ್ತೇವೆ ಎಂದೆ ದುಷ್ಕರ್ಮಿಗಳು ಗಲಭೆಗಳೆದ್ದಾಗ ಆ ಸಮಯವನ್ನು ದುರುಪಯೋಗಪಡಿಸಿಕೊಳ್ಳಲು ಹಾತೊರೆಯುವುದು.

ಯೂಸ್ಸಿಫ್ ಮತ್ತೊಮ್ಮೆ ನಗಲಿ. ಅದರ ಜೊತೆಗೆ ಅವನ ಹಳೆಯ ಮುಗ್ಧತೆಯೂ ಮತ್ತೊಮ್ಮೆ ಹಿಂದಿರುಗಲಿ. ಹಾಗೆಯೆ ಪ್ರಪಂಚದಾದ್ಯಂತ ಎಲ್ಲಾ ತರಹದ ಅಪರಾಧಿಗಳು ಸಿಕ್ಕಿಬೀಳುವ, ಅವರಿಗೆ ಶಿಕ್ಷೆಯಾಗುವ ವ್ಯವಸ್ಥೆಗಳು ಸ್ಥಾಪನೆಯಾಗಿ, ಮನುಷ್ಯನ ಮೃಗೀಯ ಪ್ರವೃತ್ತಿಗೆ ಮತ್ತು ದ್ವೇಷಕ್ಕೆ ಕನಿಷ್ಠ ಜೈಲುಶಿಕ್ಷೆಯ ಭಯದ ಕಡಿವಾಣವಾದರೂ ಇರಲಿ. ಅಲ್ಲವೆ?
No comments:
Post a Comment