(ಎರಡು ವರ್ಷದ ಹಿಂದೆ ಆಗಿನ ಉಪಮುಖ್ಯಮಂತ್ರಿ ಯಡಿಯೂರಪ್ಪನವರು "ಅಕ್ಕ" ಸಮ್ಮೇಳನಕ್ಕೆ ಬಂದಿದ್ದಾಗ ಅವರು ಸಿಲಿಕಾನ್ ಕಣಿವೆಯಲ್ಲಿ ಭಾಗವಹಿಸಿದ್ದ ಕಾರ್ಯಕ್ರಮವೊಂದರ ವರದಿ ಇದು. ಈ ಮುಂಚೆ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 22, 2006ರ ಸಂಚಿಕೆಯಲ್ಲಿ ಪ್ರಕಟವಾಗಿದೆ. "ಅಕ್ಕ 2008"ರ ಸಮಯದಲ್ಲಿ "ಅಕ್ಕ-2006"ರ ಸಮಯದಲ್ಲಿ ಬರೆದ ಲೇಖನಗಳು.)
ಸದ್ಯದ ಸಂಕೀರ್ಣ ಜಾಗತೀಕರಣದ ಸವಾಲುಗಳನ್ನು ಎದುರಿಸಲು ನಾಡಿನ ಚುಕ್ಕಾಣಿ ಹಿಡಿದಿರುವ ನಮ್ಮ ಉಪ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ವಾರಿಗೆಯ ರಾಜಕಾರಿಣಿಗಳು ಹೇಗೆ ಅಸಮರ್ಥರು ಎಂದು ಯಡಿಯೂರಪ್ಪನವರು ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿ ಭಾಗವಹಿಸಿದ ಸಮಾರಂಭದಲ್ಲಿ ದೃಷ್ಟಿಮಾಂದ್ಯರೂ ಕಾಣಬಲ್ಲಷ್ಟು ಸ್ಪಷ್ಟವಾಗಿ ಕಾಣುತ್ತಿತ್ತು.
TiE (The Indus Entrepreneurs) ಎನ್ನುವುದು ಅಮೆರಿಕದಲ್ಲಿರುವ ಭಾರತೀಯ ಉದ್ಯಮಿಗಳು 1992 ರಲ್ಲಿ ಹುಟ್ಟುಹಾಕಿದ ಒಂದು ಲಾಭರಹಿತ ಸಂಸ್ಥೆ. ಕರ್ನಾಟಕದ ಕುಮಾರ್ ಮಳವಳ್ಳಿ, ದೇಶ್ ದೇಶಪಾಂಡೆ, ಬಿ.ವಿ. ಜಗದೀಶ್ ಮುಂತಾದ ಯಶಸ್ವಿ ಉದ್ಯಮಿಗಳು ಇದರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಈ ಸಂಸ್ಥೆಯ ಮೂಲ ಉದ್ದೇಶ ಅಮೇರಿಕದಲ್ಲಿ ನೆಲಸಿರುವ ಭಾರತೀಯರಿಗೆ ಅವರೇನಾದರೂ ಹೊಸ ಉದ್ಯಮಗಳನ್ನು, ಕಂಪನಿಗಳನ್ನು ಸ್ಥಾಪಿಸಬೇಕು, ಅದಕ್ಕೆ ಬಂಡವಾಳವನ್ನು ಆಕರ್ಷಿಸಬೇಕು ಎನ್ನುವ ಉದ್ದೇಶವಿದ್ದಲ್ಲಿ, ಅವರಿಗೆ ಬೇಕಾದ ಎಲ್ಲಾ ರೀತಿಯ ಮಾರ್ಗದರ್ಶನ ನೀಡಲು, ತನ್ಮೂಲಕ ಹೆಚ್ಚು ಹೆಚ್ಚು ಭಾರತೀಯರು ಅಮೆರಿಕದ ಕಾರ್ಪೊರೇಟ್ ಜಗತ್ತಿನಲ್ಲಿ ಯಶಸ್ವಿ ಉದ್ಯಮಿಗಳಾಗಲು, ಸಹಾಯ ಮಾಡುತ್ತದೆ. ಅದರ ಜೊತೆಗೆ ಇಲ್ಲಿಯವರಿಗೆ ಭಾರತದಲ್ಲಿ ಬಂಡವಾಳ ತೊಡಗಿಸಲು ಇರುವ ಅವಕಾಶಗಳೇನು, ಯಾವ ಯಾವ ರಾಜ್ಯಗಳಲ್ಲಿ ಏನೇನು ಸೌಲಭ್ಯಗಳಿವೆ, ಹೆಚ್ಚಿನ ಬೆಳವಣಿಗೆಗೆ ಎಲ್ಲೆಲ್ಲಿ ಅವಕಾಶಗಳಿವೆ ಎಂದು ತಿಳಿಸಲು ಸೆಮಿನಾರುಗಳನ್ನು ಏರ್ಪಡಿಸುತ್ತದೆ. ತಮ್ಮ ತಮ್ಮ ರಾಜ್ಯಗಳಿಗೆ ಇಲ್ಲಿಂದ ಬಂಡವಾಳ ಆಕರ್ಷಿಸಲು ಬರುವ ಮಂತ್ರಿ, ಮುಖ್ಯಮಂತ್ರಿಗಳಂತಹ ನಿಯೋಗಗಳಿಗೆ ಅಮೆರಿಕದಲ್ಲಿ TiE ಒಂದು ಉತ್ತಮ ವೇದಿಕೆ.
ಕರ್ನಾಟಕದಿಂದ ಅಕ್ಕ ಸಮ್ಮೇಳನಕ್ಕೆ ಬಂದಿದ್ದ ನಿಯೋಗದೊಂದಿಗೆ ಸಿಲಿಕಾನ್ ಕಣಿವೆಯ TiE ಸದಸ್ಯರ ಮತ್ತು ಸ್ಥಳೀಯ ಕನ್ನಡಿಗರ ಭೇಟಿಯೊಂದನ್ನು ಅಕ್ಕ ಉಪಾಧ್ಯಕ್ಷರಾದ ಪ್ರಭುದೇವ್‌ರವರು ಏರ್ಪಡಿಸಿದ್ದರು. ಹಣಕಾಸು ಮಂತ್ರಿ ಯಡಿಯೂರಪ್ಪ, ಭಾರಿ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಸಚಿವ ಕಟ್ಟ್ಟಾ ಸುಬ್ರಹ್ಮಣ್ಯ ನಾಯ್ಡು, ಸಣ್ಣ ಕೈಗಾರಿಕಾ ಸಚಿವ ಶಿವಾನಂದ ನಾಯಕ್, ವಾಣಿಜ್ಯ ಮತ್ತು ಕೈಗಾರಿಕೆಯ ಪ್ರಿನ್ಸಿಪಲ್ ಕಾರ್ಯದರ್ಶಿ ಕೆ.ಎಮ್.ಶಿವಕುಮಾರ್, ಮತ್ತು ಇತರ ಹಿರಿಕಿರಿಯ ಅಧಿಕಾರಿಗಳ ನಿಯೋಗ ಈ ಸಭೆಯಲ್ಲಿ ಪಾಲ್ಗೊಂಡಿತ್ತು. ನಮ್ಮ ಮಾನ್ಯ ಉಪಮುಖ್ಯಮಂತ್ರಿಗಳು ಸಭೆ ಹೇಗೆ ನಡೆಯುತ್ತದೆ ಎನ್ನುವುದರ ಬಗ್ಗೆ ಎಷ್ಟು ಚೆನ್ನಾಗಿ ಅರಿತುಕೊಂಡು ಬಂದಿದ್ದರೆಂದರೆ, ಸಭೆಗೆ ನಿಯೋಗದಲ್ಲಿನ ಎಲ್ಲರನ್ನೂ ಒಂದು ಸಲ ಪರಿಚಯಿಸಿದ ಪ್ರಭುದೇವ್, "ಈ ಕಾರ್ಯಕ್ರಮ ಹೇಗೆ ನಡೆಯುತ್ತದೆ ಎಂದರೆ, ಮೊದಲಿಗೆ ಗೌರವಾನ್ವಿತ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾತನಾಡುತ್ತಾರೆ, ನಂತರ ಕಟ್ಟಾ ಸುಬ್ರ..." ಎಂದು ಇನ್ನೂ ಮುಂದಕ್ಕೆ ಹೇಳುತ್ತಿದ್ದಂತೆ ತಮ್ಮ ಸಿದ್ಧಪಡಿಸಿದ ಭಾಷಣದೊಂದಿಗೆ ಯಡಿಯೂರಪ್ಪನವರು ಎದ್ದು ಪೋಡಿಯಮ್‌ಗೆ ನುಗ್ಗೇ ಬಿಟ್ಟರು! ಅದು ಎಷ್ಟು ಚೆನ್ನಾಗಿ ತಲೆಬಗ್ಗಿಸಿಕೊಂಡು ನುಗ್ಗಿದರೆಂದರೆ, ಪ್ರಭುದೇವ್ "ಒಂದು ನಿಮಿಷ ಸರ್, ಇನ್ನೂ ಸ್ವಲ್ಪ ಹೇಳಬೇಕು, ಒಂದು ನಿಮಿಷ ಸರ್...," ಎಂದು ಕನ್ನಡದಲ್ಲಿ ಕೇಳಿಕೊಳ್ಳುತ್ತಿದ್ದರೂ, ಅವರು ಮಾತನಾಡುತ್ತಿರುವುದು ಇಂಗ್ಲೀಷೇ ಇರಬೇಕು, ನನ್ನನ್ನು ಇನ್ನೂ ಪರಿಚಯಿಸುತ್ತಿರಬೇಕು ಎಂದುಕೊಂಡು ಪೋಡಿಯಮ್ ಅನ್ನು ಆಕ್ರಮಿಸಿಕೊಂಡು ತಮ್ಮ ಭಾಷಣ ಪ್ರಾರಂಭಿಸಿಬಿಟ್ಟರು. ತುಂಬ ಘನತೆಯಿಂದ ನಡೆಯುವ ಇಂತಹ ನೂರಾರು ಕಾರ್ಯಕ್ರಮಗಳನ್ನು ನೋಡಿರುವ ಸ್ಥಳೀಯ ಪ್ರೇಕ್ಷಕರು ಶಾಕ್ ಆಗಿ ಸುಮ್ಮನೆ ನೋಡುತ್ತಿದ್ದರು. 6 ನಿಮಿಷಗಳ ತಮ್ಮ ಇಂಗ್ಲಿಷ್ ಭಾಷಣದಲ್ಲಿ ಯಡಿಯೂರಪ್ಪನವರು ತಲೆ ಎತ್ತಿ ಸಭಿಕರನ್ನು ನೋಡಲೇ ಇಲ್ಲ! ಅಷ್ಟು ಶ್ರದ್ಧೆಯಿಂದ, ಪ್ರತಿಯೊಂದು ಪದವನ್ನೂ ಗಮನವಿಟ್ಟು ಓದಿದ್ದೇ ಓದಿದ್ದು. ಕೊನೆಯ ವಾಕ್ಯವಾದ "Thank you very much for this fruitful interaction..." ಹೇಳುವಾಗಲೂ ತಲೆಯೆತ್ತಿ ಸಭಿಕರನ್ನು ನೋಡಲಿಲ್ಲ. ಅವರ ಇಡೀ ಭಾಷಣದಲ್ಲಿ ಬಂದಿದ್ದವರನ್ನು ಪ್ರಭಾವಿತಗೊಳಿಸುವಂತಹುದು ಏನೂ ಇರಲಿಲ್ಲ. ಮಾನ್ಯರು, ತಮಗೆ ಮಂತ್ರಿಗಿರಿಯೊ ಪಕ್ಷದ ಕುರ್ಚಿಯೊ ಇನ್ನೆಂತಹುದೊ ಬೇಕಾದಾಗ, ದೆಹಲಿ ವರಿಷ್ಠರನ್ನು ನೋಡಲು ಹೋದಾಗ ಇದೇ ಮಟ್ಟದ ಸಿದ್ಧತೆ ಮಾಡಿಕೊಂಡು ಹೋಗುತ್ತಾರೆಯೇ? ಇದೇ ರೀತಿ ಅಲ್ಲಿನ ಸಭೆಯಲ್ಲಿಯೂ ನಡೆದುಕೊಳ್ಳುತ್ತಾರೆಯೆ? ಸ್ವಂತದ್ದಕ್ಕಾದರೆ ಒಂದು ಸಿದ್ಧತೆ, ಸರ್ಕಾರದ್ದಕ್ಕಾದರೆ ಮತ್ತೊಂದು ಬಗೆಯ ಸಿದ್ಧತೆ?
ಮುಂದಿನ ಸರದಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡುರವರದು. ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಇವರೇ ಅಂದಿನ ಸ್ಟಾರ್ ಪರ್ಫಾರ್ಮರ್! ಹೇಳಿಕೊಳ್ಳುವಂತಹ ಇಂಗ್ಲಿಷ್ ಬರದಿದ್ದರೂ, ಸಿದ್ಧಪಡಿಸಿದ ಭಾಷಣಕ್ಕಿಂತ ಬಹಳ ಆಪ್ತವಾಗಿ, ತಮಾಷೆಯಾಗಿ, ಆತ್ಮವಿಶ್ವಾಸದಿಂದ ತಮ್ಮ ಬಟ್ಳರ್ ಇಂಗ್ಲಿಷ್‍ನಲ್ಲಿ 10 ನಿಮಿಷ ಮಾತನಾಡಿದರು. "We had a serious of business meeting," ಎಂದರೊಮ್ಮೆ! ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಸ್ಥಳೀಯ ಸಿಲಿಕಾನ್ ಕಣಿವೆಯ ಸಾಮ್ಯತೆಗಳನ್ನು ಹೋಲಿಸುತ್ತ "we are having bloodly relationship," ಎಂದರು! ಬಹಳಷ್ಟು ಜನ ಅದನ್ನು bloody ಎಂದು ಅಪಾರ್ಥ ಮಾಡಿಕೊಂಡು ಅವರೆಂದದ್ದು bloodly ಯಾ ಇಲ್ಲ bloody ಯಾ, ಅಥವ blood relationship ಇರಬಹುದಾ ಎಂದು ಸಭೆ ಮುಗಿದ ಮೇಲೆ ಮಾತನಾಡಿಕೊಳ್ಳುತ್ತಿದ್ದರು! ಆದರೆ ಅವರು ಏನು ಹೇಳಿದರು ಎನ್ನುವುದಕ್ಕಿಂತ, ಹೇಳಿದ ಮತ್ತು ಮಾತನಾಡಿದ ಹಾವಭಾವದ ರೀತಿಗೆ ಜನ ಮೆಚ್ಚಿದರು.
ಇಡೀ ಕಾರ್ಯಕ್ರಮದ ಇಂಪ್ರೆಸಿವ್ ಘಟ್ಟ ಮುಂದಿನ 20 ನಿಮಿಷಗಳದು. ಕರ್ನಾಟಕದಲ್ಲಿನ ಅವಕಾಶಗಳು, ಉದ್ದಿಮೆಗಳು, ವಾತಾವರಣ, ಅನುಕೂಲಗಳು, ಇವೆಲ್ಲವನ್ನೂ ಪ್ರತಿಬಿಂಬಿಸುವ 10 ನಿಮಿಷಗಳ ವಿಡಿಯೊ ಚಿತ್ರ ನಿಜಕ್ಕೂ ಅದ್ಭುತವಾಗಿತ್ತು. ಬಹಳ ವೃತ್ತಿನೈಪುಣ್ಯದಿಂದ ಸಿದ್ಧಪಡಿಸಲಾಗಿತ್ತು. ಅದು ಎಷ್ಟೊಂದು ಪರಿಣಾಮಕಾರಿಯಾಗಿ ಇತ್ತೆಂದರೆ, ಅದಾದ ನಂತರ ಮಾತನಾಡಿದ IAS ಅಧಿಕಾರಿ ಕೆ.ಎಮ್. ಶಿವಕುಮಾರ್ ಅದರಲ್ಲಿ ಬಂದಿರುವುದನ್ನೆಲ್ಲ ಅಕ್ಷರಶಃ ನಂಬಬೇಡಿ ಎಂಬ ಹಿತವಚನ ಹೇಳಿದರು! ಶಿವಕುಮಾರ್ ಬಹಳ ಚೆನ್ನಾಗಿ ತಿಳಿದುಕೊಂಡು, ಸಿದ್ಧವಾಗಿ ಬಂದಿದ್ದರು. ಅವರು ಮಾತನಾಡಿದ ರೀತಿ ಹಾಗೂ ಹೇಳಿದ ಕೆಲವು ವಿಚಾರಗಳು, ಉದಾಹರಣೆಗೆ, "ಇಲ್ಲಿಯ ಸಿಲಿಕಾನ್ ಕಣಿವೆಯಲ್ಲಿ ಗರಾಜಿನಲ್ಲಿ ಪ್ರಾರಂಭಿಸಿ, ನಂತರ ದೈತ್ಯ ಕಂಪನಿಗಳಾದ ಉದಾಹರಣೆಗಳು ನಿಮಗೆ ಗೊತ್ತು. ಅವು ಇಲ್ಲಿ ಘಟಿಸಿದವು. ಅಂತಹುದೇ ಕಥೆಗಳು ಈಗ ಬೆಂಗಳೂರಿನಲ್ಲಿ ಪ್ರತಿನಿತ್ಯ ಘಟಿಸುತ್ತಿವೆ," ಎಂಬಂತಹ ಯಶಸ್ಸಿನ ಕತೆಗಳು ಬಹಳ ಪರಿಣಾಮಕಾರಿಯಾಗಿದ್ದವು. ಸಭೆಗೆ ಬಂದಿದ್ದವರು ಏನು ತಿಳಿದುಕೊಳ್ಳಬೇಕು ಎಂದು ಬಂದಿದ್ದರೊ ಅದನ್ನಷ್ಟೆ ಅವರು ಬಹಳ ಚೆನ್ನಾಗಿ ಹೇಳುತ್ತಿದ್ದರೆ, ಮಾನ್ಯ ಉಪಮುಖ್ಯಮಂತ್ರಿಗಳು ತಮ್ಮ ಪಾಳೆಯಗಾರಿಕೆ ಗತ್ತಿನಲ್ಲಿ ಮಧ್ಯದಲ್ಲಿಯೇ ತಮ್ಮ ಎಡಗೈ ಎತ್ತಿ, "ಪ್ರಶ್ನೆಗಳನ್ನು ತೆಗೆದುಕೊಳ್ಳೋಣ, ನಿಲ್ಲಿಸಿ," ಎಂದುಬಿಟ್ಟರು! ಉಪಮುಖ್ಯಮಂತ್ರಿಗಳಿಗೆ ಸಭಾಮರ್ಯಾದೆ ಅರ್ಥವಾಗಲಿಲ್ಲ ಎಂದರೆ ಹೇಗೆ? ಇದೇನು ರಾಜರ ಆಸ್ಥಾನವೊ ಅಥವ ಪ್ರಜಾಪ್ರಭುತ್ವವೊ? ಯಡಿಯೂರಪ್ಪನವರ ಧಾರ್ಷ್ಟ್ಯದಿಂದ ಇರಿಸುಮುರಿಸಾದ ಶಿವಕುಮಾರ್ ಮಧ್ಯಕ್ಕೆ ಮಾತು ನಿಲ್ಲಿಸಿಬಿಟ್ಟರು. ಆದರೆ ಆದ ಅವಮಾನದ ಸೇಡನ್ನು ಕೊನೆಯಲ್ಲಿ ಬೇರೆ ರೀತಿ ತೀರಿಸಿಕೊಂಡರು!
ನಂತರ ಮಾತನಾಡಿದ್ದು ಕೈಗಾರಿಕಾಭಿವೃದ್ಧಿ ಇಲಾಖೆಯ ಕಮಿಷನರ್ ರಾಜ್‌ಕುಮಾರ್ ಖತ್ರಿ. ಕಂಪ್ಯೂಟರ್ ಪವರ್ ಪಾಯಿಂಟ್ ಪ್ರದರ್ಶನ ಕೊಟ್ಟ ಖತ್ರಿ, ಸರ್ಕಾರಿ ಅಧಿಕಾರಿಗಳಿಗೂ ಕಂಪ್ಯೂಟರ್ ಬಳಸಲು ಬರುತ್ತದೆ ಎಂದು ತೋರಿಸಿಕೊಟ್ಟರು. ಚೆನ್ನಾಗಿತ್ತು. ಅದಾದ ಮೇಲೆ ನಡೆದ ಪ್ರಶ್ನೋತ್ತರದ್ದೆ ದೊಡ್ಡ ತಮಾಷೆ ಮತ್ತು ದುರಂತ. ಇಂತಹ ಸಭೆಗಳಲ್ಲಿ ಭಾಗವಹಿಸುವವರಿಗೆ ಹೆಚ್ಚಿನ, ವಸ್ತುನಿಷ್ಠ ವಿಷಯ ತಿಳಿಯುವುದೇ ಪ್ರಶ್ನೋತ್ತರ ಸಮಯದಲ್ಲಿ. ಸಭಾ ಮರ್ಯಾದೆಯ ಪ್ರಯುಕ್ತ ಎಲ್ಲರೂ ಸಭೆಗೆ ಹಿರಿಯರಾಗಿದ್ದ ಯಡಿಯೂರಪ್ಪನವರಿಗೇ ಪ್ರಶ್ನೆಗಳನ್ನು ಕೇಳಿದರೆ ಅವರು ತಮ್ಮ ಎಂದಿನ ಗತ್ತಿನಲ್ಲಿ, ಒಂದು ಮಾತೂ ಆಡದೆ, ಕಟ್ಟಾಗೆ ಉತ್ತರ ನೀಡಲು ಕೈತೋರಿಸುತ್ತಿದ್ದರು. ಒಂದೇ ಒಂದು ಮಾತು ಆ ಅವಧಿಯಲ್ಲಿ ಅವರಿಂದ ಬರಲಿಲ್ಲ. ಇವರು ಜಾಗತೀಕರಣದ ಸಂದರ್ಭದಲ್ಲಿ ನಮ್ಮ ಹಣಕಾಸು ಸಚಿವರು! ಕಟ್ಟಾರವರ ಉತ್ತರಗಳು ಇನ್ನೂ ಮಜವಾಗಿದ್ದವು. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಉತ್ತರಿಸುವಂತೆ, ಒಂದೇ ಪದದ ಇಲ್ಲವೆ ಒಂದೇ ವಾಕ್ಯದ ಉತ್ತರಗಳು! ಎಲ್ಲರಿಗಿಂತ ಚೆನ್ನಾಗಿ ಉತ್ತರಿಸಬಹುದಿದ್ದ ಶಿವಕುಮಾರ್ ಒಂದೇ ಒಂದು ಸಲ ಉತ್ತರಿಸಲು ಯತ್ನಿಸಿದರೆ ಹೊರತು ರಾಜಕಾರಣಿಗಳ ಅಯೋಗ್ಯತೆ ಪ್ರದರ್ಶನವಾಗಲು ಬಿಟ್ಟು ಗಂಭೀರವಾಗಿ ತಮಾಷೆ ನೋಡುತ್ತ ಕುಳಿತಿದ್ದರು. ಆ ಸಭೆಯಲ್ಲಿ ಕರ್ನಾಟಕದಿಂದ ಬಂದಿದ್ದ ನಿಯೋಗಕ್ಕಿಂತ ಚೆನ್ನಾಗಿ ಕರ್ನಾಟಕವನ್ನು ಸಮರ್ಥಿಸಿಕೊಂಡವರೆಂದರೆ ಅನಿವಾಸಿಗಳಾದ ಪ್ರಭುದೇವ್ ಮತ್ತು ಕುಮಾರ್ ಮಳವಳ್ಳಿ. ಇವರಿಬ್ಬರಿಗೂ ಇಲ್ಲಿ ಯಾವುದೇ ಸ್ವಹಿತಾಸಕ್ತಿ ಇರಲಿಲ್ಲ. ಅದು ಅವರ ಜವಾಬ್ದಾರಿಯೂ ಆಗಿರಲಿಲ್ಲ. ಇದ್ದದ್ದೆಲ್ಲ, ಈ ಮೂಲಕವಾದರೂ ಕರ್ನಾಟಕಕ್ಕೆ ಇನ್ನೊಂದಷ್ಟು ಉದ್ದಿಮೆಗಳು ಹೋಗಲಿ, ಮತ್ತಷ್ಟು ಉದ್ಯೋಗ ಸೃಷ್ಟಿಯಾಗಲಿ, ಜನಜೀವನ ಹಸನಾಗಲಿ ಎಂಬ ನಾಡಪ್ರೀತಿ ಮತ್ತು ತಾಯಿನೆಲದ ಹೆಮ್ಮೆ ಮಾತ್ರ.
ಬಂದಿದ್ದವರಲ್ಲಿ ಕರ್ನಾಟಕ ಉದ್ಯೋಗ ಮಿತ್ರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಎಲ್. ಶಿವಾನಂದ ಮಾತ್ರ ಸ್ವಲ್ಪ ಚುರುಕಾಗಿ, ನಗುಮುಖದಿಂದ ಮಾತನಾಡುತ್ತ, ತಮ್ಮ ವಿಸಿಟಿಂಗ್ ಕಾರ್ಡ್ ಹಂಚುತ್ತ, ವಿವರಣೆ ಬಯಸಿದವರಿಗೆ ವಿವರಣೆ ನೀಡುತ್ತ ಓಡಾಡುತ್ತಿದ್ದರು. ಪ್ರಶ್ನೋತ್ತರ ಮುಗಿದ ಮೇಲೆ ಕೆಲವು ಅನಿವಾಸಿ ಕನ್ನಡಿಗರೊಂದಿಗೆ ಕಟ್ಟಾ ನಾಯ್ಡ ಬಹಳ ಚೆನ್ನಾಗಿ, ಕ್ರಮಬದ್ಧವಾಗಿ ಮಾತನಾಡುತ್ತಿದ್ದರು. ತಮ್ಮ ಇಲಾಖೆಗೆ ಅವಶ್ಯಕವಿರುವ ಕೆಲವು ಕನ್ನಡ ಪರಿಭಾಷೆಗಳನ್ನು ಚೆನ್ನಾಗಿ ಕಲಿತಿದ್ದರು. ಇವರಿಗೆ ತೊಡಕಿದ್ದದ್ದೆಲ್ಲ ಇಂಗ್ಲಿಷಿನದೆ. ದುಬಾಷಿ ಇಟ್ಟುಕೊಂಡರೆ ತಮ್ಮ ಬಾಡಿಲ್ಯಾಂಗ್ವೇಜ್‌ನಿಂದಲೆ ಜನರನ್ನು ಪ್ರಭಾವಿತಗೊಳಿಸಬಹುದು, ತನ್ಮೂಲಕ ತಮ್ಮ ಹುದ್ದೆಗೆ ಇನ್ನೂ ಹೆಚ್ಚಿನ ನ್ಯಾಯ ಸಲ್ಲಿಸಬಹುದು ಎಂದು ಇವರಿಗೆ ಹೇಳುವವರು ಇಲ್ಲವೆ? ಇಡೀ ಸಭೆಯಲ್ಲಿ ಕಮ್ಮಿ ಪದ ಖರ್ಚು ಮಾಡಿದವರೆಂದರೆ ಸಚಿವ ಶಿವಾನಂದ ನಾಯ್ಕ! ಅದೂ ಸಭೆ ಮುಗಿದ ನಂತರ ಇದ್ದ ಅನೌಪಚಾರಿಕ ಮಾತುಕತೆಯಲ್ಲಿ, ಒಂದಿಬ್ಬರೊಡನೆ ಮಾತ್ರ.
ತಾವು ಯಾವ ಕೆಲಸ ಮಾಡಲು ಯೋಗ್ಯರು ಎಂಬ ತಿಳಿವು, ತಮ್ಮ ಕೈಯ್ಯಲ್ಲಿ ಸಾಧ್ಯವಾಗದಿದ್ದಲ್ಲಿ ಸಮರ್ಥರಿಗೆ ಅದನ್ನು ಬಿಡಬೇಕು, ಅದರಲ್ಲೇ ತಮ್ಮ ದೊಡ್ಡತನ ಮತ್ತು ಪ್ರಜಾಹಿತ ಇರುವುದು ಎಂಬ ಸೂಕ್ಷ್ಮತೆ ಈ ಪಾಳೆಯಗಾರಿಕೆ ಮನೋಭಾವದ ಜನಪ್ರತಿನಿಧಿಗಳಿಗೆ ಅರ್ಥವಾಗುವುದು ಯಾವಾಗ? ಪ್ರಜಾಪ್ರಭುತ್ವ ಬೇರೂರಿರುವ, ಸಭಾಮರ್ಯಾದೆ ಗೊತ್ತಿರುವ ಜನರ ಮಧ್ಯೆ ತಮ್ಮ ನಡವಳಿಕೆಯಿಂದ ಏನು ಸಂದೇಶ ಹೊರಡುತ್ತದೆ, ಅದರಿಂದ ತಮ್ಮ ಹುದ್ದೆಗೆ ತಾವೆಷ್ಟು ಅನರ್ಹರಾಗಿರುತ್ತೇವೆ ಎಂದು ಈ ರಾಜಕಾರಣಿಗಳು ಅರಿಯುವುದು ಯಾವಾಗ? ಯಡಿಯೂರಪ್ಪನವರನ್ನು "ನೀವು ಏನು ಸಾಧಿಸಬೇಕು ಎಂದುಕೊಂಡಿರುವಿರಿ?" ಎಂದು ಪ್ರಭುದೇವ್ ಕೇಳಿದ್ದಕ್ಕೆ, "ನಾನು ಬಸವಣ್ಣನಂತೆ ಕೆಲಸ ಮಾಡಬೇಕು," ಎಂದಿದ್ದರಂತೆ. ಅಮೆರಿಕಾಗೊ, ಜಪಾನಿಗೊ ಮೂರು ದಿನಗಳ ಮಾತಿನ ಅವಶ್ಯಕತೆಯಿಲ್ಲದ ತಾಂತ್ರಿಕ ಕೆಲಸಕ್ಕೆ ಹೋಗುವ ಇಂಜಿನಿಯರುಗಳಿಗೆ ಅಲ್ಲಲ್ಲಿನ ಸಂಸ್ಕೃತಿ, ನಡವಳಿಕೆಗಳ ಬಗ್ಗೆ ನಮ್ಮ ಕಂಪನಿಗಳು ನಾಲ್ಕಾರು ದಿನಗಳ ತರಬೇತಿ ಕೊಟ್ಟು ಕಳುಹಿಸುತ್ತವೆ. ನಾಡಿನ ಗತಿ ಬದಲಿಸಬಲ್ಲವರು, ಅದೇ ಕರ್ತವ್ಯವಾಗಿರುವವರು, ಎಲ್ಲಿ ಹೇಗೆ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಯೋಚಿಸದೆ, "ನಾನು ಬಸವಣ್ಣನಂತೆ ಆಗಬೇಕು" ಎಂದುಕೊಂಡರೆ ಆಗಿಬಿಡುತ್ತಾರಾ? ಕೈಗೆಟುಕದ ದ್ರಾಕ್ಷಿಯನ್ನು ನರಿ ಹುಳಿ ಎಂದಂತೆ!
Aug 26, 2008
ಬಸವಣ್ಣನಾಗಬೇಕೆಂದು ಬಯಸಿದ ಯಡಿಯೂರಪ್ಪ ಅಮೆರಿಕದಲ್ಲಿ ಮೂಗಬಸವನಾದದ್ದು!
Subscribe to:
Post Comments (Atom)
No comments:
Post a Comment