(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಏಪ್ರಿಲ್ 20, 2007 ರ ಸಂಚಿಕೆಯಲ್ಲಿನ ಲೇಖನ)
ಪತ್ರಿಕೆಯ ಕೆಲಸಕ್ಕೆಂದು ಎರಡು ವಾರದ ಹಿಂದೆ ಅಮೇರಿಕಾದಿಂದ ಬೆಂಗಳೂರಿಗೆ ವಿಮಾನ ಹತ್ತಿದಾಗ ದಾರಿ ಓದಿಗೆಂದು ನನ್ನ ಕೈಯ್ಯಲ್ಲಿದ್ದ ಪುಸ್ತಕ ನಾನು ಈ ಹಿಂದೆಯೆ ಓದಿದ್ದ 'ಕರ್ವಾಲೊ'. ಆ ಸುದೀರ್ಘ ವಿಮಾನ ಪ್ರಯಾಣದಲ್ಲಿ ನಿದ್ದೆಯಿಂದ ಎಚ್ಚೆತ್ತಾಗಲೆಲ್ಲ 23 ನೆ ಮುದ್ರಣದ ಕರ್ವಾಲೊ ಕೈಯಲ್ಲಿರುತ್ತಿತ್ತು. ಬೆಂಗಳೂರಿಗೆ ಬಂದು ಮೂರು ದಿನ ಮಂಡ್ಯ-ಮೈಸೂರು-ಮಂಗಳೂರು-ಶಿವಮೊಗ್ಗ ಇಲ್ಲೆಲ್ಲ ಸುತ್ತಾಡಿಕೊಂಡು ಬಂದ ಮೇಲೆ ಕಳೆದ ವಾರದ ಲೇಖನ ಬರೆಯಲು ಕುಳಿತಾಗ ಅದರಲ್ಲಿ ತೇಜಸ್ವಿಯವರೂ ಕಾಣಿಸಿಕೊಂಡಿದ್ದರು. ಅದರ ಪುಟವಿನ್ಯಾಸ ಮಾಡುವಾಗ ನಮ್ಮ ವಿನ್ಯಾಸಕಾರ ವೀರೇಶ್ ತೇಜಸ್ವಿಯವರ ಅದ್ಭುತವಾದ ಚಿತ್ರವೊಂದನ್ನು ಅಲ್ಲಿ ಅಳವಡಿಸಿದ್ದರು. ಇವೆಲ್ಲ ಕಾಕತಾಳೀಯವೊ ಏನೊ ಗೊತ್ತಾಗುತ್ತಿಲ್ಲ. ಅದರೆ, ತೇಜಸ್ವಿ ನಮಗೆಲ್ಲ ಹೇಗೆ ಪ್ರಸ್ತುತವಾಗಿದ್ದರು ಎಂಬುದನ್ನು ಇದು ತೋರಿಸುತ್ತದೆ.
ಕರ್ನಾಟಕದ ಯುವಜನತೆ ಎಲ್ಲಾ ತರಹದ ಮೌಢ್ಯ, ಶೋಷಣೆ, ಜಾತಿವಾದ ಹಾಗು ಕೋಮುವಾದಗಳನ್ನು ನಿವಾರಿಸಿಕೊಂಡು, ವಿಜ್ಞಾನದೀವಿಗೆಯನ್ನು ಹಿಡಿದು ನಿರಂಕುಶಮತಿಗಳಾಗಬೇಕೆಂದು ಸಂದೇಶ ನೀಡಿದ ಕುವೆಂಪುರವರ ಬಗ್ಗೆ ತೇಜಸ್ವಿಯವರು "ಅಣ್ಣನ ನೆನಪು" ವಿನಲ್ಲಿ ಹೀಗೆ ಬರೆಯುತ್ತಾರೆ: "(ಅಣ್ಣ) ಮಂತ್ರವನ್ನೇನೋ ಹೇಳಿದರು, ಆದರೆ ಅದನ್ನು ಕಾರ್ಯಗತಗೊಳಿಸುವ ತಂತ್ರದ ಬಗ್ಗೆ ಯೋಚಿಸಿರಲೇ ಇಲ್ಲ."
ಕಳೆದ ನಾಲ್ಕೈದು ವರ್ಷಗಳಿಂದ, ಈ ಮೇಲಿನ ವಾಕ್ಯದ ಕುರಿತು ಚಿಂತಿಸಿದಷ್ಟು ಬಹುಶಃ ನಾನು ಇನ್ಯಾವುದೆ ವಾಕ್ಯ ಅಥವ ಪದವನ್ನು ಕುರಿತು ಚಿಂತಿಸಿಲ್ಲ. ಭಾರತದ ಸಮಾಜದಲ್ಲಿ ಹೊಸ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕೋಮುವಾದ, ಅಸಮಾನತೆ, ಶೋಷಣೆ; ಹೀನಾಯವಾಗಿ ಹೋಗುತ್ತಿರುವ ರಾಜಕಾರಣ ಮತ್ತು ಇಲ್ಲವಾಗುತ್ತಿರುವ ರಾಜಕೀಯ-ಸಾಂಸ್ಕೃತಿಕ ನಾಯಕತ್ವ; ಇನ್ನಿಲ್ಲದ ವೇಗದಲ್ಲಿ ಬೆಳೆಯುತ್ತಿರುವ ಮತಪ್ರೇಮವೇ ದೇಶಪ್ರೇಮ ಎಂಬ ಉನ್ಮಾದ; ಇಂತಹ ಪ್ರತಿಯೊಂದನ್ನು ಯೋಚಿಸಿದಾಗಲೂ ನನಗೆ ಕುವೆಂಪು ಮತ್ತು ತೇಜಸ್ವಿ ನೆನಪಾಗುತ್ತಾರೆ. ಮಂತ್ರದಿಂದ ತಂತ್ರದತ್ತ ಹೋಗುವುದು ಹೇಗೆ ಎಂಬ ಆಲೋಚನೆ ಆವರಿಸುತ್ತದೆ.
ಅದು 2004 ರ ಜನವರಿ ತಿಂಗಳು. ಕರ್ನಾಟಕದಲ್ಲಿ ನಾಡಗೀತೆಯ ವಿವಾದ ಭುಗಿಲೆದ್ದಿತ್ತು. ತೇಜಸ್ವಿಯವರು ಕೆಲವು ಸೈದ್ಧಾಂತಿಕ ಕಾರಣಗಳಿಗಾಗಿ ನಾಡಗೀತೆಯ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದಾಗ ಅವರ ಮೇಲೆ ಪ್ರತ್ಯಕ್ಷವಾಗಿ ಮತ್ತು ಕುವೆಂಪುರವರ ವಿರುದ್ಧ ಪರೋಕ್ಷವಾಗಿ ಮಾಧ್ಯಮಗಳಲ್ಲಿ ಜಾತಿವಾದಿಗಳು ಮುಗಿಬಿದ್ದರು. ಅಮೇರಿಕದಲ್ಲಿದ್ದ ನಾನು ಆ ವಿಚಾರವಾಗಿ ನಡೆಯುತ್ತಿದ್ದ ಚರ್ಚೆಗಳನ್ನು ಗಮನಿಸುತ್ತಿದ್ದೆ. ಇಂಟರ್‌ನೆಟ್‌ನಲ್ಲಂತೂ ಅಸಹ್ಯ-ಹೇಸಿಗೆ ಹುಟ್ಟಿಸುವಷ್ಟು ಜಾತಿವಾದ ಮತ್ತು ಅಸಹಿಷ್ಣುತೆ. ಆಗ ನನಗೆ ಅನ್ನಿಸಿದ್ದು, ಕನ್ನಡದ ಇಂಟರ್‌ನೆಟ್ ಓದುಗರಿಗೆ ಕುವೆಂಪುರವರ ವಿಚಾರಗಳೇ ಗೊತ್ತಿಲ್ಲ, ಎಂದು. ಇದರ ಜೊತೆಜೊತೆಗೆ, 12 ನೆ ಶತಮಾನದಲ್ಲಿಯೇ ವೈಚಾರಿಕ ಕ್ರಾಂತಿ ಮಾಡಿದ ವಚನ ಸಾಹಿತ್ಯವನ್ನು ಯಾವೊಬ್ಬ ಶ್ರೀಮಂತ ಲಿಂಗಾಯತ ಮಠವಾಗಲಿ, ಸಂಘಸಂಸ್ಥೆಗಳಾಗಲಿ ಇಂಟರ್‌ನೆಟ್‌ನಲ್ಲಿ ಹಾಕಿಲ್ಲ ಎಂಬ ನೋವೂ ಕಾಡುತ್ತಿತ್ತು. ಹಾಗೆ ಹುಟ್ಟಿದ್ದು vicharamanatapa.net. ಆ ವೆಬ್‌ಸೈಟಿನಲ್ಲಿ ಕುವೆಂಪುರವರ "ವಿಚಾರಕ್ರಾಂತಿಗೆ ಆಹ್ವಾನ" ದಿಂದ ಕೆಲವು ಲೇಖನಗಳನ್ನು ಹಾಕಲು ತೇಜಸ್ವಿಯವರ ಅನುಮತಿಗಾಗಿ ಪ್ರಯತ್ನಿಸಬೇಕು ಎಂದುಕೊಂಡಾಗ ನೆನಪಿಗೆ ಬಂದಾತ ನನ್ನ ಇಂಜಿನಿಯರಿಂಗ್ ಸಹಪಾಠಿ ಸೋಮಶೇಖರ. ತೇಜಸ್ವಿಯವರ ಮಗಳು ಈಶಾನ್ಯೆ ಬೆಂಗಳೂರಿನ ಐಟಿ ಕಂಪನಿಯಲ್ಲಿ ಈತನ ಸಹೋದ್ಯೋಗಿ. ಆತನಿಗೆ ಹೇಳಿ ತೇಜಸ್ವಿಯವರ ಮೂಡಿಗೆರೆಯ ನಂಬರ್ ತರಿಸಿಕೊಂಡೆ. ಇಲ್ಲಿಯೇ ಇರುವ ಇನ್ನೊಬ್ಬ ಹಿರಿಯ ಗೆಳೆಯ ಮೃತ್ಯುಂಜಯ ಹರ್ತಿಕೋಟೆಯವರು ಈ ವಿಚಾರವಾಗಿ ಒಮ್ಮೆ ತೇಜಸ್ವಿಯವರ ಬಳಿ ಮಾತನಾಡಿಯಾದ ಮೇಲೆ ನಾನು ತೇಜಸ್ವಿಯವರಿಗೆ ಕರೆ ಮಾಡಿ ಅವರ ಅನುಮತಿ ಕೋರಿದೆ. "ಇಡೀ ಪುಸ್ತಕ ಬೇಡ್ರಿ. ಅದರಲ್ಲಿ ನಿಮಗೆ ಸೂಕ್ತ ಅನ್ನಿಸಿದ ಎರಡು-ಮೂರು ಲೇಖನ ಹಾಕಿಕೊಳ್ರಿ," ಎಂದರು. ಮುಂದಿನ ಎರಡು ವಾರಗಳು ನಾನು ಮತ್ತು ನನ್ನ ಹೆಂಡತಿ ಪಟ್ಟಾಗಿ ಕುಳಿತು ಕುವೆಂಪುರವರು ಬೆಂಗಳೂರು ವಿಶ್ವವಿದ್ಯಾನಿಲಯದ ಹತ್ತನೆಯ ಘಟಿಕೋತ್ಸವದಲ್ಲಿ ಮಾಡಿದ "ವಿಚಾರ ಕ್ರಾಂತಿಗೆ ಆಹ್ವಾನ" ಮತ್ತು 1974 ರಲ್ಲಿ ಮೈಸೂರಿನ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟದಲ್ಲಿ ಮಾಡಿದ "ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ!" ಲೇಖನಗಳನ್ನು ಕಂಪ್ಯೂಟರ್‌ನಲ್ಲಿ ಟೈಪು ಮಾಡಿ, ವೆಬ್‌ಸೈಟಿಗೆ ಏರಿಸಿದೆವು.
2004 ರ ಜುಲೈನಲ್ಲಿ ತೇಜಸ್ವಿಯವರು ಮತ್ತೊಂದು ಚರ್ಚೆಗೆ ದಾರಿ ಮಾಡಿಕೊಟ್ಟರು. ಅದು ಕಂಪ್ಯೂಟರ್‌ನಲ್ಲಿ ಕನ್ನಡ ಅಳವಡಿಕೆಗೆ ಸಂಬಂಧಿಸಿದಂತೆ. ಇದಕ್ಕೆ ಮಹತ್ತರ ತಿರುವು ಬಂದಿದ್ದು ಹಿರಿಯ ಪತ್ರಕರ್ತ ನಾಗೇಶ ಹೆಗಡೆಯವರು ತೇಜಸ್ವಿಯರ ಸಂದರ್ಶನ ಮಾಡಿದ ಮೇಲೆ. ಅದನ್ನು ಓದಿದ ಕೂಡಲೆ ನಾನು ನಾಗೇಶ ಹೆಗಡೆಯವರಿಗೆ ಫೋನ್ ಮಾಡಿ ಈ ಚರ್ಚೆಯನ್ನು ಸರ್ಕಾರದ ಎಮ್ಮೆ ಚರ್ಮಕ್ಕೆ ಚುರುಕು ಮುಟ್ಟುವ ತನಕ ಮುಂದುವರೆಸಬೇಕೆಂದು ಕೋರಿಕೊಂಡೆ. ಪ್ರಜಾವಾಣಿಯ ವಾಚಕರ ವಾಣಿಗೆ ಪತ್ರವನ್ನೂ ಬರೆದೆ. ಅದರ ಮುಂದಿನ ವರ್ಷ ಬೆಂಗಳೂರಿಗೆ ಬಂದಿದ್ದಾಗ 'ಅಗ್ನಿ' ವಾರಪತ್ರಿಕೆಯ ಪತ್ರಕರ್ತ ಮಿತ್ರ ಮಂಜುನಾಥ ಅದ್ದೆಯವರೊಡನೆ 'ಆದರೆ ತೇಜಸ್ವಿಯವರನ್ನು ನೋಡಿ ಬರಬೇಕು,' ಎಂದು ಪ್ರಸ್ತಾಪಿಸಿದ್ದೆ. ತೇಜಸ್ವಿಯವರ ಮನೆಯಲ್ಲಿ ಆಗಾಗ ಇದ್ದು ಬರುತ್ತಿದ್ದ ಅದ್ದೆ ಕೂಡಲೆ ತೇಜಸ್ವಿಯವರಿಗೆ ಫೋನ್ ಮಾಡಿದರು. ಆದರೆ ಅಂದು ತೇಜಸ್ವಿಯವರು ಮನೆಯಲ್ಲಿರಲಿಲ್ಲ. ಆ ವರ್ಷ ಅವರನ್ನು ನೋಡದೆ ವಾಪಸು ಬರಬೇಕಾಯಿತು.
ಕಳೆದ ವರ್ಷ "ವಿಕ್ರಾಂತ ಕರ್ನಾಟಕ" ಪ್ರಾರಂಭಿಸಲು ನಾನು ಬೆಂಗಳೂರಿಗೆ ಬಂದಿದ್ದಾಗ ತೇಜಸ್ವಿಯವರು ಆರೋಗ್ಯ ಸರಿಯಿಲ್ಲದೆ ಬೆಂಗಳೂರಿನಲ್ಲಿಯೆ ಇದ್ದರು. ಆ ಸಮಯದಲ್ಲಿ ಜಯಂತ ಕಾಯ್ಕಿಣಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದು ಗಾಂಧಿಬಜಾರಿನಲ್ಲಿತ್ತು. ನಾನು ಮತ್ತು ಆಗಿನ ನಮ್ಮ ಸಂಪಾದಕರಾಗಿದ್ದ ಸತ್ಯಮೂರ್ತಿಯವರು ಅಲ್ಲಿಗೆ ಹೋಗಿದ್ದೆವು. ಎಲ್ಲರಿಗೂ ಆಶ್ಚರ್ಯವಾಗುವಂತೆ ತೇಜಸ್ವಿಯವರು ಆ ಸಮಾರಂಭಕ್ಕೆ ಬಂದು ಬಿಟ್ಟರು. ಇನ್ನೂ 68 ವರ್ಷದ ತೇಜಸ್ವಿ ಅಂದು ಬಹಳ ನಿತ್ರಾಣವಾಗಿ, ವಯಸ್ಸಿಗಿಂತ ಹಿರಿಯರಾದಂತೆ ಕಂಡರು. ಕಾರ್ಯಕ್ರಮ ಮುಗಿದ ಮೇಲೆ ಹೋಗಿ ಪರಿಚಯ ಮಾಡಿಕೊಂಡೆ. ಹೆಚ್ಚಿಗೆ ಮಾತನಾಡುವ ಪರಿಸ್ಥಿತಿ ಅಲ್ಲಿರಲಿಲ್ಲ.
ಎರಡು ವಾರದ ಹಿಂದೆ ನಮ್ಮ ಪತ್ರಿಕೆಯ ಮಲ್ಲನಗೌಡರು ಮತ್ತು ನಾನು ಕಾರ್ಕಳದಿಂದ ಶಿವಮೊಗ್ಗಕ್ಕೆ ಹೋಗುವಾಗ ಮೂಡಿಗೆರೆಯ ಮೇಲೆ ಹೋಗಿದ್ದರೆ ಚೆನ್ನಿತ್ತು ಎಂದು ಅನೇಕ ಸಲ ಮಾತಾಡಿಕೊಂಡೆವು. ಶಿವಮೊಗ್ಗಾದಲ್ಲಿ ಹಿರಿಯ ಲೇಖಕ ಡಿ.ಎಸ್. ನಾಗಭೂಷಣ್‌ರ ಜೊತೆ ಮಾತನಾಡುತ್ತ, ತೇಜಸ್ವಿಯವರನ್ನು ನೋಡದೆ ಬಂದೆವು ಎಂದು ಹಲುಬಿದ್ದೆವು. ನಾಗಭೂಷಣ್ ಅವರು, 'ಮುಂದಿನ ವಾರ ನಾನು ಮೂಡಿಗೆರೆಗೆ ಹೋಗುತ್ತಿದ್ದೇನೆ,' ಎಂದರು. ಅವರು ಮೂಡಿಗೆರೆಗೆ ಹೋಗಿದ್ದನ್ನು ನಾನು ಟೀವಿಯಲ್ಲಿ ನೋಡಿದೆ. ಅದು ಅವರು ತೇಜಸ್ವಿಯವರ ಪಾರ್ಥಿವ ಶರೀರದ ಮುಂದೆ ನಿಂತಿದ್ದ ದೃಶ್ಯ. ಎಲ್ಲರದೂ ತಡವಾಗಿತ್ತು.
ಶುಕ್ರವಾರ ತೇಜಸ್ವಿಯವರ ಶವಸಂಸ್ಕಾರ. ನಾನು ಅಮೇರಿಕಕ್ಕೆ ಹೊರಡಬೇಕಿದ್ದದ್ದು ಶನಿವಾರ. ವಾಪಸು ಹೊರಡಲು ಮಾಡಿಕೊಳ್ಳಬೇಕಿದ್ದ ಯಾವುದೇ ತಯ್ಯಾರಿ ಇನ್ನೂ ಮಾಡಿಕೊಂಡಿರಲಿಲ್ಲ. ಆದರೂ ಅದ್ದೆಗೆ, ನಾನೂ ನಿಮ್ಮ ಜೊತೆ ಮೂಡಿಗೆರೆಗೆ ಬರುತ್ತೇನೆ ಎಂದು ತಿಳಿಸಿ ಕೊನೆಯ ಕ್ಷಣದಲ್ಲಿ ಹಿಂದೆಗೆದೆ. ಆ ವಿಷಾದ ಜೀವನ ಪರ್ಯಂತ ಬೆನ್ನಿಗಿರುತ್ತದೆ.
ಹೀಗೆ ಕಳೆದ ನಾಲ್ಕೈದು ವರ್ಷಗಳಿಂದ ನನ್ನ ಜೀವಂತ Role Model ಆಗಿದ್ದ, Conviction ಮೂಡಿಸುತ್ತಿದ್ದ ಮನೆಯ ಹಿರಿಯ ಇನ್ನಿಲ್ಲ. ಕಾನನದ ನಡುವಿನಿಂದ ನನ್ನ ಪೀಳಿಗೆಗೆ ಮೌನವಾಗಿ ಮಾರ್ಗದರ್ಶನ ಮಾಡುತ್ತಿದ್ದ ಋಷಿ ಇನ್ನಿಲ್ಲ. ಸಮಾಜ ಸುಧಾರಣೆಯ ಮಂತ್ರ ಮತ್ತು ತಂತ್ರಗಳ ಕುರಿತು ಮಾತನಾಡುತ್ತಿದ್ದ ಮಾಯಾಲೋಕದ ವಾಸ್ತವಜೀವಿ ಇನ್ನಿಲ್ಲ. ಕೊನೆಯ ಗುರು ಮತ್ತು ಹಿರಿಯನನ್ನು ಕಳೆದುಕೊಂಡ ತಬ್ಬಲಿಗಳು ನಾವೆಲ್ಲ.
Apr 8, 2007
ಜೀವಂತ ರೋಲ್ ಮಾಡೆಲ್ ಇನ್ನಿಲ್ಲ...
Subscribe to:
Post Comments (Atom)
No comments:
Post a Comment