Dec 30, 2006

ಇಬ್ಬರು ರಾಷ್ಟ್ರಾಧ್ಯಕ್ಷರ ಮರಣ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಜನವರಿ 12, 2007 ರ ಸಂಚಿಕೆಯಲ್ಲಿನ ಅಂಕಣ ಲೇಖನ)

93 ವರ್ಷದ ತುಂಬು ಜೀವನ ನಡೆಸಿದ ಮುದುಕನೊಬ್ಬ ಕಳೆದ ವಾರ ಅಮೇರಿಕದಲ್ಲಿ ತೀರಿಕೊಂಡ. 93 ವರ್ಷದ ಹಿಂದೆ, ಆ ಮನುಷ್ಯ ಹುಟ್ಟಿದ 16 ದಿನಕ್ಕೆಲ್ಲ ಆ ಮಗುವಿನ ಅಮ್ಮ ತನ್ನ ಗಂಡನನ್ನು ಬಿಟ್ಟು ತನ್ನ ತಂದೆಯ ಮನೆ ಸೇರಿಕೊಂಡಳು. ಕಾರಣ? ಆ ಮಗುವಿನ ಅಪ್ಪ ಮಹಾ ಕುಡುಕನಾಗಿದ್ದ. ಹೆಂಡತಿಯನ್ನು ಗರ್ಭಿಣಿ, ಬಾಣಂತಿ ಎನ್ನದೆ ಹೊಡೆಯುತ್ತಿದ್ದ. "ಮಗುವನ್ನು, ನಿನ್ನನ್ನು ಸಾಸಿಬಿಡುತ್ತೇನೆ" ಎಂದು ಮಾಂಸ ಕಡಿಯುವ ಕತ್ತಿ ಹಿಡಿದು ಮಗು ಹುಟ್ಟಿದ ನಾಲ್ಕಾರು ದಿನಕ್ಕೆಲ್ಲ ಅಬ್ಬರಿಸಿದ್ದ. ಹೀಗಾಗಿ ತನ್ನ ಅಪ್ಪನ ಮನೆ ಸೇರಿಕೊಂಡ ಆ ಹೆಂಗಸು ತನ್ನ ಮಗುವಿನ ತಂದೆಯನ್ನು ವುಚ್ಚೇದಿಸಿ, ಆರೇಳು ತಿಂಗಳ ನಂತರ ಜೆರಾಲ್ಡ್ ಫೋರ್ಡ್ ಎನ್ನುವನನ್ನು ಮದುವೆಯಾದಳು. ತನ್ನ ಹೊಸ ಗಂಡನ ಮೇಲಿನ ಪ್ರೀತಿಂದ, ನಂಬಿಕೆಯಿಂದ ತನ್ನ ಮೊದಲ ಮಗುವನ್ನೂ ಜೆರಾಲ್ಡ್ ಫೋರ್ಡ್ ಜೂನಿಯರ್ ಎಂದು ಕರೆಯಲಾರಂಭಿಸಿದಳು. ಆ ತಾಯಿ ಮತ್ತು ಮಲತಂದೆ ಆ ಮಗುವನ್ನು ಎಷ್ಟು ಚೆನ್ನಾಗಿ ನೋಡಿಕೊಂಡರೆಂದರೆ, ಅವನಿಗೆ 15 ವರ್ಷ ತುಂಬುವ ತನಕ ತನ್ನನ್ನು ಹುಟ್ಟಿಸಿದವನು ಬೇರೊಬ್ಬ ಎಂದೇ ಗೊತ್ತಿರಲಿಲ್ಲ.

ಕಾಲೇಜಿನಲ್ಲಿ ಓದುತ್ತಿದ್ದಾಗ ಫೋರ್ಡ್ ಒಳ್ಳೆಯ ಅಮೇರಿಕನ್ ಫುಟ್‌ಬಾಲ್ ಆಡುತ್ತಿದ್ದ. ನಂತರ ಯೇಲ್ ಲಾ ಸ್ಕೂಲ್‌ನಲ್ಲಿ ವಕೀಲಿಕೆ ಓದಲು ಆರಂಭಿಸಿದ. ಆಗ ಎರಡನೆ ವಿಶ್ವಯುದ್ದ ನಡೆಯುತ್ತಿತ್ತು. ಅಮೇರಿಕ ಅದರಲ್ಲಿ ಇನ್ನೂ ಭಾಗಿಯಾಗಿರಲಿಲ್ಲ. ಫೋರ್ಡ್ ತನ್ನ ಕೆಲವು ಸ್ನೇಹಿತರೊಡನೆ ಅಮೇರಿಕ ಯುದ್ದದಲ್ಲಿ ಭಾಗಿಯಾಗಬಾರದೆಂಬ ನಿವೇದನೆಯೊಂದಕ್ಕೆ ಸಹಿ ಹಾಕಿದ್ದ. ಆದರೆ ಯಾವಾಗ ಜಪಾನ್ ಅಮೇರಿಕಕ್ಕೆ ಸೇರಿದ ಹವಾಯಿ ದ್ವೀಪದ ಮುತ್ತಿನ ಬಂದರಿನ ಮೇಲೆ ದಾಳಿ ಮಾಡಿತೊ, ಅಮೇರಿಕದ ನೌಕಾದಳ ಸೇರಿಕೊಂಡ. ವಿಶ್ವಯುದ್ದದಲ್ಲಿ ಭಾಗಿಯಾಗಿ ತನ್ನ ಸೇವೆಗೆ ಅನೇಕ ಮೆಡಲ್‌ಗಳನ್ನು ಪಡೆದ.

ಯುದ್ದದಿಂದ ವಾಪಸ್ಸಾದ ಮೇಲೆ ಫೋರ್ಡ್ ರಾಷ್ಟ್ರೀಯ ಜನಪ್ರತಿನಿಧಿ ಸಭೆಗೆ ಸ್ಪರ್ಧಿಸಿದ. ಚುನಾವಣೆಯ ಸಮಯದಲ್ಲಿ, ತನ್ನನ್ನು ಆರಿಸಿದರೆ ನಿಮ್ಮ ಹೊಲಗಳಲ್ಲಿ ಬಂದು ದುಡಿಯುತ್ತೇನೆ ಮತ್ತು ನಿಮ್ಮ ಹಸುಗಳ ಹಾಲು ಕರೆಯುತ್ತೇನೆ ಎಂದು ತನ್ನ ಕ್ಷೇತ್ರದಲ್ಲಿ ಬಹುಸಂಖ್ಯೆಯಲ್ಲಿದ್ದ ರೈತರಿಗೆ ಆಶ್ವಾಸನೆ ಕೊಟ್ಟಿದ್ದ. ಗೆದ್ದ. ಎರಡು ವಾರಗಳ ಕಾಲ ರೈತರ ಮನೆಯಲ್ಲಿ ಹಾಲು ಕರೆದು ತನ್ನ ಮಾತು ಉಳಿಸಿಕೊಂಡ! 25 ವರ್ಷಗಳ ನಂತರ, ಅಮೇರಿಕದ ಇತಿಹಾಸದಲ್ಲಿ ಆಕಸ್ಮಿಕವೊಂದು ಸಂಭವಿಸುವ ತನಕ ಆ ಕ್ಷೇತ್ರದಿಂದ ಸತತವಾಗಿ ಆರಿಸಿ ಬರುತ್ತಿದ್ದ.

ಅದು 1973 ನೆ ಇಸವಿ. ನಿಕ್ಸನ್ ಆಗ ತಾನೆ ಎರಡನೆ ಬಾರಿಗೆ ರಾಷ್ಟ್ರಾಧ್ಯಕ್ಷರಾಗಿದ್ದರು. ಆದರೆ ಆ ಮರುಚುನಾವಣೆಯ ಸಮಯದಲ್ಲಿ ಅಲ್ಲಿಯತನಕ ಯಾವ ಅಮೇರಿಕನ್ ರಾಷ್ಟ್ರಾಧ್ಯಕ್ಷನೂ ಮಾಡದ ಅಪರಾಧವನ್ನು ನಿಕ್ಸನ್ ಎಸಗಿದ್ದರು. ಅವರದು ರಿಪಬ್ಲಿಕನ್ ಪಕ್ಷ. ಡೆಮೊಕ್ರಾಟ್ ಪಕ್ಷ ಅವರ ವಿರೋಧ ಪಕ್ಷ. ಡೆಮೊಕ್ರಾಟರ ಮುಖ್ಯಕಚೇರಿಯಿದ್ದದ್ದು ವಾಷಿಂಗ್‌ಟನ್ನಿನ ವಾಟರ್‌ಗೇಟ್ ಕಟ್ಟಡದಲ್ಲಿ. ಡೆಮೊಕ್ರಾಟರ ಕಚೇರಿಯಲ್ಲಿ ಅವರ ತಂತ್ರಗಳನ್ನು ತಿಳಿದುಕೊಳ್ಳಲು ಕೆಲವು ನಿಕ್ಸನ್ ನಿಕಟವರ್ತಿಗಳು ಕದ್ದಾಲಿಕೆ ಯಂತ್ರಗಳನ್ನು ಅಳವಡಿಸುತ್ತಿದ್ದಾಗ ಸಿಕ್ಕಿಹಾಕಿಕೊಂಡರು. ಇದ್ಯಾವುದೂ ತನಗೆ ಗೊತ್ತಿಲ್ಲ, ಅದರಲ್ಲಿ ತನ್ನ ಪಾತ್ರವಿಲ್ಲ ಎಂದ ನಿಕ್ಸನ್, ಮರುಚುನಾವಣೆಯಲ್ಲಿ ಅತ್ಯಧಿಕ ಬಹುಮತದಿಂದ ಗೆದ್ದರು. ಆದರೆ ವಾಟರ್‌ಗೇಟ್ ಹಗರಣದಲ್ಲಿ ನಿಕ್ಸನ್ ಪಾತ್ರವಿದೆ ಎಂದು ಒಂದೊಂದೆ ಬಯಲಾಗುತ್ತ ಬರುತ್ತಿತ್ತು. ಅದೇ ಸಮಯದಲ್ಲಿ ನಿಕ್ಸನ್‌ರ ಉಪಾಧ್ಯಕ್ಷನಾಗಿದ್ದ ಸ್ಪೈರೊ ಆಗ್ನ್ಯೂ ಲಂಚ ಮತ್ತು ತೆರಿಗೆಕಳ್ಳತನದ ತಪ್ಪಿಗೆ ಸಿಕ್ಕಿಹಾಕಿಕೊಂಡು ರಾಜಿನಾಮೆ ಕೊಡಬೇಕಾತು. ಆಗ ಎರಡೂ ಪಕ್ಷಗಳವರು ಉಪಾಧ್ಯಕ್ಶ ಸ್ಥಾನಕ್ಕೆ ನಿಕ್ಸನ್‌ಗೆ ಸೂಚಿಸಿದ ಹೆಸರು, ಜೆರಾಲ್ಡ್ ಫೋರ್ಡ್. ಅಂತಹದೊಂದು ಘಟನೆ ಅಮೇರಿಕದ ಇತಿಹಾಸದಲ್ಲಿ ನಡೆದದ್ದು ಅದೇ ಮೊದಲು.

ಮುಂದಿನ ಹತ್ತು ತಿಂಗಳಿಗೆಲ್ಲ ವಾಟರ್‌ಗೇಟ್ ಹಗರಣದಲ್ಲಿ ಅವರ ಪಾತ್ರ ಮತ್ತು ಅದನ್ನು ಮುಚ್ಚಿಹಾಕಲು ಅವರು ಪ್ರಯತ್ನಿಸಿದ್ದೆಲ್ಲ ಬಯಲಾಗಿ ನಿಕ್ಸನ್ ರಾಜಿನಾಮೆ ನೀಡಬೇಕಾತು. ಸಂವಿಧಾನದ ಪ್ರಕಾರ ಉಪಾಧ್ಯಕ್ಷ ಫೋರ್ಡ್ ಅಮೇರಿಕದ 38 ನೆ ರಾಷ್ಟ್ರಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಇದೂ ಸಹ ಅಮೇರಿಕದ ರಾಜಕೀಯ ಇತಿಹಾಸದಲ್ಲಿ ಆಕಸ್ಮಿಕ. ಯಾಕೆಂದರೆ ಯಾವುದೆ ರಾಷ್ಟ್ರೀಯ ಚುನಾವಣೆಗೆ, ಅಂದರೆ ಉಪಾಧ್ಯಕ್ಷ ಅಥವ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ, ನೇರವಾಗಿ ಜನರಿಂದ ಚುನಾಯಿತನಾಗದೆ ಫೋರ್ಡ್ ಉಪಾಧ್ಯಕ್ಷ ಮತ್ತು ಅಧ್ಯಕ್ಷ ಎರಡೂ ಆಗಿಬಿಟ್ಟರು. ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಅಮೇರಿಕನ್ ಜನರನ್ನುದ್ದೇಶಿಸಿ ಮಾತನಾಡಿದ ಫೋರ್ಡ್ ಆಗ ಹೇಳಿದ್ದು, "ನನ್ನ ಸಹನಾಗರಿಕರೆ, ನಮ್ಮ ಸುದೀರ್ಘ ರಾಷ್ಟ್ರೀಯ ದುಸ್ವಪ್ನ ಕೊನೆಯಾಗಿದೆ," ಎಂದು. ಹಾಗೆಂದು ಹೇಳಿದ ಫೋರ್ಡ್ ಕೆಲವು ತಿಂಗಳುಗಳ ನಂತರ ನಿಕ್ಸನ್‌ಗೆ ಕ್ಷಮಾದಾನ ನೀಡಿದರು. ಅಮೇರಿಕದ ಗಾಯವನ್ನು ವಾಸಿಮಾಡಲು ಪ್ರಯತ್ನಿಸಿದರು. ಆದರೆ ನಿಕ್ಸನ್‌ಗೆ ನೀಡಿದ ಕ್ಷಮಾದಾನವನ್ನು ಜನತೆ ಕ್ಷಮಿಸಲಿಲ್ಲ. ಎರಡೂವರೆ ವರ್ಷದ ನಂತರ ಬಂದ ಚುನಾವಣೆಯಲ್ಲಿ ಫೋರ್ಡ್‌ರನ್ನು ಸೋಲಿಸಿ ಜನ ಜಿಮ್ಮಿ ಕಾರ್ಟರ್‌ರನ್ನು ಗೆಲ್ಲಿಸಿದರು. ಫೋರ್ಡ್ ಕ್ಷಮಾದಾನ ನೀಡಲು ಮುಖ್ಯ ಕಾರಣ, ಪದೆಪದೆ ಆ ವಿಷಯವನ್ನು ಕೆದಕದೆ, ಅದಕ್ಕೆ ಪೂರ್ಣವಿಶ್ರಾಂತಿ ನೀಡಿದಂತಾಗುತ್ತದೆ, ತಾನು ಅಧ್ಯಕ್ಷನಾಗಿ ಸಾಮಾನ್ಯ ಜನತೆಗೆ ಮುಖ್ಯವಾದ ವಿಷಯಗಳತ್ತ ಗಮನ ಕೊಡಲು ಸಾಧ್ಯವಾಗುತ್ತದೆ, ಎಂದು. ಆಗ ಜನ ಅದನ್ನು ಒಪ್ಪದಿದ್ದರೂ ಈಗ ಅದನ್ನು ಬಹುಜನರು ಒಪ್ಪುತ್ತಾರೆ.

ಇದೇ ವಾರ, ಈಗ ಅಮೇರಿಕದ ಸರ್ಕಾರ ಪ್ರತಿಕ್ಷಣವೂ ಕನವರಿಸುವ 'ಇರಾಕ್' ದೇಶದ ಮಾಜಿ ರಾಷ್ಟ್ರಾಧ್ಯಕ್ಷನೂ ಸತ್ತ. ಆದರೆ ಅದು ಸಹಜ ಸಾವಾಗಿರಲಿಲ್ಲ. ಎರಡು ವರ್ಷದ ಹಿಂದಷ್ಟೆ ಆಸ್ತಿತ್ವಕ್ಕೆ ಬಂದ ಇರಾಕಿನ ಹೊಸ ಸಂವಿಧಾನ, ಸರ್ಕಾರ, ನ್ಯಾಯವ್ಯವಸ್ಥೆ, ಅಮೇರಿಕದ ಪ್ರಭಾವ, ಎಲ್ಲದರ ಪರಿಣಾಮವಾಗಿ, ಇರಾಕಿನ ವಿಶೇಷ ನ್ಯಾಯಾಲಯ ಸದ್ದಾಮ್ ಹುಸೇನ್‌ಗೆ ಗಲ್ಲು ಶಿಕ್ಷೆ ವಿಧಿಸಿತು. ಕಾರಣ? ಇರಾಕಿನ ಹಳ್ಳಿಯೊಂದರ 148 ಷಿಯಾ ಮುಸ್ಲಿಮರನ್ನು ಕಗ್ಗೊಲೆ ಮಾಡಲು ನೇರವಾಗಿ ಆದೇಶ ನೀಡಿದ ಎಂಬ ಆಪಾದನೆ ರುಜುವಾತಾದದ್ದು. ಆದರೆ, ತನ್ನನ್ನು ಕೊಲ್ಲಲು ಹೊಂಚು ಹಾಕುತ್ತಿದ್ದವರನ್ನು ಯಮಸದನಕ್ಕೆ ಅಟ್ಟಲು ಹಾಗು ತನ್ನ ಮೇಲೆ ಎದ್ದ ದಂಗೆಗಳ ಹುಟ್ಟಡಗಿಸಲು ಸದ್ದಾಮ್ ಹುಸೇನರು ಕೊಂದದ್ದು ಕೇವಲ 148 ಜನ ಮಾತ್ರವಾಗಿರಲಿಲ್ಲ. ಬದಲಿಗೆ, ಇರಾಕಿನ ಲಕ್ಷಕ್ಕೂ ಮಿಗಿಲು ಖರ್ದಿಷ್ ಮತ್ತು ಷಿಯಾ ಮುಸ್ಲಿಮರನ್ನು. ಅಮೇರಿಕ ಇರಾಕಿನ ಮೇಲೆ ದಾಳಿ ಮಾಡಿದ್ದು ಸರಿಯೊ ತಪ್ಪೊ ಎನ್ನುವ ಪ್ರಶ್ನೆಯನ್ನು ಪಕ್ಕಕ್ಕಿಟ್ಟು ಯೋಚಿಸಿದರೆ ಸದ್ದಾಮರ ಹಿಂದಿನ ಪಾತಕಗಳಿಗೆ ಈಗ ಶಿಕ್ಷೆಯಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಇಲ್ಲದಿದ್ದರೆ ಸುಮ್ಮಸುಮ್ಮನೆ ಸಾವಿರಾರು ಜನ ಬಾಗ್ದಾದಿನ ಬೀದಿಗಳಲ್ಲಿ ಸದ್ದಾಮ್ ಸಾವನ್ನು ಸಂಭ್ರಮಿಸುತ್ತಿರಲಿಲ್ಲ. ಸದ್ದಾಮ್ ಕಾಲದಲ್ಲಿ ಇರಾಕಿನಲ್ಲಿ ಜನರಿಗೆ ಯಾವುದೆ ಮೂಲಭೂತ ಹಕ್ಕುಗಳಿರಲಿಲ್ಲ. ಇದ್ದಿದ್ದರೆ, ರಾಜದ್ರೋಹದ ಆಪಾದನೆಯ ಮೇಲೆ ಆ ಹಳ್ಳಿಯ ಜನರನ್ನು ಬಂಧಿಸಿ, ವಿಚಾರಣೆ ನಡೆಸಿ, ನಂತರ ಆಪಾದನೆ ರುಜುವಾತಾದರೆ ಗಲ್ಲಿಗೇರಿಸಬೇಕಿತ್ತೆ ಹೊರತು ನೇರವಾಗಿ ಅಧ್ಯಕ್ಷನೆ ಹೋಗಿ ಗುಂಡಿಟ್ಟು ಕೊಲ್ಲಿ ಎಂದು ಹೇಳುತ್ತಿರಲಿಲ್ಲ. ಪ್ರತಿ ವಿಷಯಕ್ಕೂ ಅಮೇರಿಕವನ್ನು ವಿರೋಧಿಸಬೇಕು ಎಂದುಕೊಳ್ಳುವವರು ಹಾಗು ಸದ್ದಾಮ್‌ರನ್ನು ಬೆಂಬಲಿಸಿದರೆ ಮುಸ್ಮಿಮರನ್ನು ಬೆಂಬಲಿಸಿದಂತೆ ಎಂದುಕೊಳ್ಳುವವರು ಈ ವಿಷಯವನ್ನು ಗಮನಿಸಬೇಕು. ಮೂಲಭೂತವಾದಿಗಳನ್ನು, ಸರ್ವಾಧಿಕಾರಿಗಳನ್ನು ಬೆಂಬಲಿಸಿದರೆ ಸಾಮಾನ್ಯ ಬಹುಸಂಖ್ಯಾತ ಮುಸ್ಲಿಮರನ್ನು ಬೆಂಬಲಿಸಿದಂತಾಗುವುದಿಲ್ಲ.
ಇಲ್ಲಿ, ನಿಕ್ಸನ್ ಮತ್ತು ಸದ್ದಾಮ್ ನಮ್ಮ ರಾಜಕಾರಣಿಗಳಿಗೂ ಒಂದು ಪಾಠ. ಅಧಿಕಾರವನ್ನು ಗಳಿಸಬೇಕೆಂಬ ಹಪಹಪಿಯಲ್ಲಿ, ಉಳಿಸಿಕೊಳ್ಳಬೇಕೆಂಬ ಹುಚ್ಚಿನಲ್ಲಿ ನಾವು ಮಾಡುವ ಅನ್ಯಾಯ, ಅಕ್ರಮಗಳನ್ನು ಯಾರೂ ಗಮನಿಸುವುದಿಲ್ಲ, ಎಂದಿಗೂ ಅದು ನಮ್ಮ ತಲೆಗೆ ಸುತ್ತಿಕೊಳ್ಳುವುದಿಲ್ಲ ಎಂದು ಯಾರೂ ಭಾವಿಸಬಾರದು. ಕಾಲ ಬದಲಾಗುತ್ತ ಇರುತ್ತದೆ. ಕಾನೂನು ಬದಲಾಗುತ್ತ ಇರುತ್ತದೆ. ಹೊಸಬರು ಬರುತ್ತಿರುತ್ತಾರೆ. ಹಳೆ ಪ್ರಕರಣಗಳನ್ನು ಯಾರೊ ಎಲ್ಲಿಯೊ ಧೂಳು ಹೊಡೆದು ಮೇಜಿನ ಮೇಲೆ ಇಡುತ್ತಾರೆ. ನಿಕ್ಸನ್, ಸದ್ದಾಮ್, ನರಸಿಂಹರಾವ್, ಶಿಬು ಸೊರೇನ್, ನವಜೋತ್ ಸಿದ್ಧು, ಜಯಲಲಿತ, ಇತ್ಯಾದಿಗಳು ಜೈಲು ಪಾಲಾಗುತ್ತಿರುತ್ತಾರೆ, ಇಲ್ಲವೆ ನೇಣಿಗೇರುತ್ತಿರುತ್ತಾರೆ, ಇಲ್ಲವೆ ಅವಮಾನದಲ್ಲಿ ಕೊಳೆಯುತ್ತ ಸಾಯುತ್ತಾರೆ. ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳುವುದು ಕಷ್ಟ. ಅಪರಾಧ ದೊಡ್ಡದಿದ್ದರಂತೂ ಇನ್ನೂ ಕಷ್ಟ. ಇದು ಬುಷ್ ವಿಚಾರಕ್ಕೂ ನಿಜವಾಗಬಹುದು, ನಮ್ಮ ಅಧಿಕಾರಸ್ಥರಿಗೂ ನಿಜವಾಗಬಹುದು. ಬೀಸುವ ದೊಣ್ಣೆಯನ್ನು ಒಂದು ಸಾರಿ ತಪ್ಪಿಸಿಕೊಂಡ ಮಾತ್ರಕ್ಕೆ ಪ್ರತಿಸಾರಿಯೂ ತಪ್ಪಿಸಿಕೊಳ್ಳಬಹುದು ಎಂದುಕೊಳ್ಳುವುದು ಮೂರ್ಖತನ!

Dec 24, 2006

ಅಣ್ವಸ್ತ್ರ ಒಪ್ಪಂದಕ್ಕೆ ವಿರೋಧವೇಕೆ?

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಜನವರಿ 5, 2007 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಇಬ್ಬರು ಬದ್ಧ ವಿರೋಧಿಗಳು ಒಂದು ವಿಷಯದ ಮೇಲೆ ಸಹಮತ ವ್ಯಕ್ತಪಡಿಸುವುದು ಬಹಳ ಅಪರೂಪ. ಅಮೇರಿಕದ ಸೆನೆಟ್ ಭಾರತದೊಂದಿಗಿನ ಹೊಸ ಅಣ್ವಸ್ತ್ರ ಒಪ್ಪಂದಕ್ಕೆ ಅನುಮೋದನೆ ನೀಡಿ, ಜಾರ್ಜ್ ಬುಷ್ ಅದಕ್ಕೆ ಸಹಿ ಹಾಕಿದ ನಂತರ ಭಾರತದಲ್ಲಿ ಎಡಪಂಥೀಯ ಕಮ್ಯುನಿಸ್ಟ್ ಪಕ್ಷಗಳು ಹಾಗು ಬಲಪಂಥೀಯ ಬಿಜೆಪಿ ಆ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿದವು. ಇಂತಹುದು ಅಪರೂಪವಾದರೂ ಇದರಲ್ಲಿ ಆಶ್ಚರ್ಯ ಪಡುವಂತಹುದು ಏನೂ ಇಲ್ಲ. ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ಕೊಟ್ಟಿರುವ ಎಡಪಂಥೀಯರಿಗೆ ಅಮೇರಿಕವನ್ನು ವಿರೋಧಿಸುವುದೆ ಮುಖ್ಯ ಅಜೆಂಡ. ಕಾಳಜಿಯಿಂದ, ಭಾವೋನ್ಮಾದತೆಯಿಂದ, ಸಭೆ ಒಪ್ಪಿಕೊಳ್ಳುವಂತೆ ಮಾತನಾಡಲು ಕಮ್ಯುನಿಸ್ಟರಿಗೆ ಅಮೇರಿಕ ಮತ್ತು ಕಾರ್ಮಿಕರು ಬೇಕೆ ಬೇಕು. ಇನ್ನು ಅಮೇರಿಕದ ಅನೇಕ ವಿಚಾರಧಾರೆಗಳನ್ನು ಒಪ್ಪಿಕೊಳ್ಳುವ ಭಾಜಪ ಈಗ ವಿರೋಧ ಪಕ್ಷದ ಸ್ಥಾನದಲ್ಲಿದೆ. ಸರ್ಕಾರ ಮಾಡುವ ಪ್ರತಿಯೊಂದನ್ನೂ ಏನೋ ತಪ್ಪು ಹುಡುಕಿ ಟೀಕಿಸುವುದು ಅವರಿಗೆ ಆಸ್ತಿತ್ವದ ಪ್ರಶ್ನೆ. ಉತ್ತರ ಪ್ರದೇಶದ ಚುನಾವಣೆ ಹತ್ತಿರ ಬಂದಿರುವ ಈ ಸಮಯದಲ್ಲಿ ದೇಶಕ್ಕೆ ಹಾನಿ ಎಂದು ತಿರುಚಿಯೊ ಪರಚಿಯೊ ಹೇಳಬಹುದಾದ ಯಾವ ಅವಕಾಶವನ್ನೂ ಅವರು ಕಳೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ.

ಭಾರತ ಮೊಟ್ಟ ಮೊದಲ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದು ಸೆಪ್ಟೆಂಬರ್ 7, 1972 ರಲ್ಲಿ, ಇಂದಿರಾ ಗಾಂಧಿಯವರ ಸರ್ಕಾರದ ನೇತೃತ್ವದಲ್ಲಿ. ಇದಾದ ನಂತರ ಮತ್ತೊಂದು ಪರೀಕ್ಷೆ ನಡೆಸಲು ಸಾಧ್ಯವಾಗಿದ್ದು 26 ವರ್ಷಗಳ ನಂತರವೆ, 1998 ರಲ್ಲಿ. ಈ 26 ವರ್ಷಗಳ ನಡುviನ ಅವಧಿಯಲ್ಲಿ ಮತ್ತೊಂದು ಅಣು ಪರೀಕ್ಷೆ ನಡೆಸಲು ಭಾರತ ರಹಸ್ಯವಾಗಿ ಪ್ರಯತ್ನಿಸುತ್ತಲೆ ಇತ್ತು. 1982, 1995, ಹಾಗೂ 1997 ರಲ್ಲಿ ಪರೀಕ್ಷೆ ಮಾಡಬೇಕು ಎಂದು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ಅಮೇರಿಕದ CIA ಗೆ ಅದು ಉಪಗ್ರಹಗಳ ಮೂಲಕ ಗೊತ್ತಾಗಿ ಭಾರತ ಆ ಸಾಹಸಕ್ಕೆ ಕೈ ಹಾಕದಂತೆ ಪ್ರತಿಬಾರಿಯೂ ಅಮೇರಿಕ ತಡೆದಿತ್ತು.

ಹಿಂದಿನ ಈ ಎಲ್ಲಾ ಒತ್ತಡಗಳನ್ನು ತಿಳಿದಿದ್ದ ಭಾರತೀಯ ಸೇನೆ, ಭಾಭಾ ಅಣು ಸಂಶೋಧನಾ ಕೇಂದ್ರ ಮತ್ತು DRDO ದ ವಿಜ್ಞಾನಿಗಳು, ಅಮೇರಿಕದ ಹದ್ದಿನ ಕಣ್ಣನ್ನು ತಪ್ಪಿಸಿ ಪರೀಕ್ಷೆ ನಡೆಸುವ ಯೋಜನೆಯೊಂದಿಗೆ 1998 ರಲ್ಲಿ ಸಿದ್ದವಾದರು. ಆಗ ಇದ್ದದ್ದು ವಾಜಪೇಯವರ ಸರ್ಕಾರ. ಈ ಬಾರಿ ಎಲ್ಲ ರೀತಿಯಿಂದಲೂ ಅಮೇರಿಕದ ಗೂಢಾಚಾರಿ ಕಣ್ಣುಗಳಿಗೆ ಚಳ್ಳೆಹಣ್ಣು ತಿನ್ನಿಸುವಲ್ಲಿ ಸಫಲರಾಗಿ ಯಾವುದೇ ಸುಳಿವು ನೀಡದಂತೆ ಮೇ 11, 1998 ರಂದು ಅಣ್ವಸ್ತ್ರ ಪರೀಕ್ಷೆ ನಡೆಸಿಯೇ ಬಿಟ್ಟರು. ಎರಡು ದಿನದ ನಂತರ, ಅಂದರೆ ಮೇ 13 ರಂದು ಮತ್ತೊಮ್ಮೆಯೂ ಭೂಮಿಯ ಒಳಗೆ ಅಣು ಬಾಂಬ್ ಸಿಡಿಸುವಲ್ಲಿ ಯಶಸ್ವಿಯಾದರು. ರಾಷ್ಟ್ರೀಯತೆಯ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದ್ದ ಭಾಜಪದವರು ಇದು ತಮ್ಮದೇ ಸಾಧನೆ ಎಂದು ಸಾರಿಕೊಂಡರು. ಆದರೆ ಇದು ಒಂದು ಪಕ್ಷದ ಸರ್ಕಾರ ಮಾಡಿದ್ದು ಎನ್ನುವುದಕ್ಕಿಂತ ಭಾರತದ ಸರ್ಕಾರ ವರ್ಷಾನುಗಟ್ಟಲೆ ಚಾಲ್ತಿಯಲ್ಲಿಟ್ಟಿದ್ದ ಯೋಜನೆ ಇದಾಗಿದ್ದು, ಅದು ಯಶಸ್ವಿಯಾಗಿದ್ದು ಮಾತ್ರ 1998 ರಲ್ಲಿ ಎನ್ನುವುದಷ್ಟೆ ನಿಜ. ಇದನ್ನೆಲ್ಲ ಇಂಡಿಯಾ ಟುಡೆ ಇಂಗ್ಲಿಷ್ ವಾರಪತ್ರಿಕೆಯ ಸಂಪಾದಕರಾದ ರಾಜ್ ಚೆಂಗಪ್ಪ "WEAPONS OF PEACE" ಎಂಬ ತಮ್ಮ ಪುಸ್ತಕದಲ್ಲಿ ವಿವರವಾಗಿ ದಾಖಲಿಸಿದ್ದಾರೆ. ಅಂದ ಹಾಗೆ, 1998 ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆದಾಗ DRDO ದ ಮುಖ್ಯಸ್ಥರಾಗಿದ್ದವರು ಹಾಗು ಆ ಪರೀಕ್ಷೆಯ ಸಮಯದಲ್ಲಿ ಉಸ್ತುವಾರಿ ಮಾಡುವಾಗ ಮಿಲಿಟರಿ ಸಮವಸ್ತ್ರ ಧರಿಸಿ ಪೋಖ್ರಾನ್ ಸಂದರ್ಶಿಸುತ್ತಿದ್ದವರು ಈಗಿನ ರಾಷ್ಟ್ರಪತಿಗಳಾದ ಅಬ್ದುಲ್ ಕಲಮ್‌ರು.

ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿದ 15 ದಿನಕ್ಕೆಲ್ಲ ಪಾಕಿಸ್ತಾನವೂ ಅಣ್ವಸ್ತ್ರ ಪರೀಕ್ಷೆ ನಡೆಸಿತು. ಎರಡೂ ದೇಶಗಳ ಮೇಲೆ ಪಾಶ್ಚಾತ್ಯ ದೇಶಗಳು ಅನೇಕ ರೀತಿಯ ದಿಗ್ಬಂಧನಗಳನ್ನು ಹೇರಿದವು. ಅಣು ಸಂಬಂಧಿ ಸಂಶೋಧನೆ ಹೊರತು ಪಡಿಸಿ ಮಿಕ್ಕವುಗಳ ಮೇಲೆ ಈ ದಿಗ್ಬಂಧನಗಳು ಭಾರತದ ಮೇಲೆ ಮತ್ಯಾವ ದೊಡ್ಡ ಪರಿಣಾಮಗಳನ್ನೂ ಬೀರಲಿಲ್ಲ. ಅದಕ್ಕೆ ಕಾರಣ ಭಾರತದಲ್ಲಿ ಅಷ್ಟೊತ್ತಿಗೆ ಬೆಳವಣಿಗೆಯಲ್ಲಿದ್ದ ಉದಾರೀಕರಣ ಮತ್ತು ಆರ್ಥಿಕ ಅಭಿವೃದ್ಧಿ. ಭಾರತದಿಂದ ಲಾಭ ಮಾಡಿಕೊಳ್ಳುವ ಯಾವ ಅವಕಾಶವನ್ನೂ ಬಹುರಾಷ್ಟ್ರೀಯ ಕಂಪನಿಗಳು ಕಳೆದುಕೊಳ್ಳಲು ಇಷ್ಟ ಪಡದ ಕಾರಣದಿಂದ ಭಾರತಕ್ಕೂ ಲಾಭವಾಯಿತು. ಸಾಫ್ಟ್‌ವೇರ್, ಷೇರು ಮಾರುಕಟ್ಟೆ, ಮೂಲಭೂತ ಸೌಕರ್ಯ ಇಲ್ಲೆಲ್ಲ ವಿದೇಶಿ ಕಂಪನಿಗಳು ತೊಡಗಿಕೊಂಡವು. ಅಮೇರಿಕ ಒಂದೊಂದೆ ದಿಗ್ಬಂಧನವನ್ನು ತೆಗೆಯುತ್ತ ಬಂತು. ಆದರೆ ಅಣು ಸಂಶೋಧನೆಗೆ ಸಂಬಂಧಿಸಿದಂತೆ ತನ್ನ ನಿಲುವುಗಳನ್ನು ಸಡಿಲಿಸಲಿಲ್ಲ. ಹಾಗಾಗಿ ಆ ವಿಷಯದಲ್ಲಿ ಭಾರತಕ್ಕೆ ಅಪಾರ ಹಿನ್ನಡೆ, ನಷ್ಟವಾಗಿದ್ದು ನಿಜ. ಯಾಕೆಂದರೆ, ಅಣು ಸಂಶೋಧನೆಂದ ಕೇವಲ ಮಿಲಿಟರಿ ಅಸ್ತ್ರಗಳನ್ನು ಮಾತ್ರ ತಯಾರಿಸಲಾಗುವುದಿಲ್ಲ. ಬದಲಿಗೆ ಅದನ್ನು ವಿದ್ಯುತ್ ಉತ್ಪಾದನೆಯಂತಹ ಜನಸಾಮಾನ್ಯರ ಉಪಯೋಗಕ್ಕೂ ಬಳಸಬಹುದು. ಇದಕ್ಕೆಲ್ಲ ಬೇಕಾದಷ್ಟು ತಂತ್ರಜ್ಞಾನವಾಗಲಿ, ಬೃಹತ್ ಯಂತ್ರಗಳಾಗಲಿ, ಯುರೇನಿಯಮ್‌ನಂತಹ ಕಚ್ಚಾವಸ್ತುವಾಗಲಿ ಭಾರತದ ಬಳಿ ಇರಲಿಲ್ಲ. ದಿಗ್ಬಂಧನದ ಕಾರಣದಿಂದ ಇದನ್ನು ಅಂತರ್ರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ಮುಕ್ತ ಮಾರುಕಟ್ಟೆಯಲ್ಲಿಯೂ ಕೊಳ್ಳುವ ಹಾಗಿರಲಿಲ್ಲ. ಹೀಗಾಗಿ ಈ ದಿಗ್ಬಂಧನವನ್ನು ಕನಿಷ್ಠ ಸಿವಿಲ್ ಉದ್ದೇಶಗಳಿಗಾದರೂ ತೆರವು ಗೊಳಿಸುವುದು ಭಾರತಕ್ಕೆ ಅತ್ಯವಶ್ಯವಾಗಿತ್ತು.

ಈ ಮಧ್ಯೆ ಅಮೇರಿಕಕ್ಕೂ ಇದನ್ನು ತೆರವು ಮಾಡದೆ ವಿಧಿ ಇರಲಿಲ್ಲ. ಭಾರತ ಮತ್ತು ಚೀನಾದ ಆರ್ಥಿಕತೆ ಬೆಳೆಯುತ್ತಿರುವಂತೆ ಈ ದೇಶಗಳ ತೈಲ ಅವಶ್ಯಕತೆಯೂ ಹೆಚ್ಚಾಗುತ್ತಿದೆ. ಅದು ತೈಲದ ಬೆಲೆ ಹೆಚ್ಚಾಗುವಂತೆ ಮಾಡುವುದರ ಜೊತೆಗೆ ಅಮೇರಿಕ ಮಧ್ಯಪ್ರಾಚ್ಯದ ಮುಸ್ಲಿಮ್ ರಾಷ್ಟ್ರಗಳ ಮೇಲಿನ ಅವಲಂಬನೆಯೂ ಹೆಚ್ಚಾಗುವಂತೆ ಮಾಡುತ್ತಿದೆ. ಮಧ್ಯಪ್ರಾಚ್ಯದಲ್ಲಿ ಭಯೋತ್ಪಾದಕತೆ ಮತ್ತು ಮುಸ್ಲಿಮ್ ಉಗ್ರವಾದವನ್ನು ಕಮ್ಮಿ ಮಾಡಿ, ಅಲ್ಲಿ ನಿಧಾನವಾಗಿ ಪ್ರಜಾಪ್ರಭುತ್ವವನ್ನು ಪೋಷಿಸಬೇಕೆಂಬ ಅಮೇರಿಕದ ದೂರಾಲೋಚನೆಗೂ ಇದು ಅಡ್ಡಗಾಲು ಹಾಕುತ್ತಿದೆ. ಇರಾನ್‌ನಂತಹ ಮೂಲಭೂತವಾದಿ ರಾಷ್ಟ್ರವನ್ನು ಸಹ ಎದುರು ಹಾಕಿಕೊಳ್ಳುವ ಕಂಫರ್ಟಬಲ್ ಸ್ಥಿತಿಯಲ್ಲಿ ಅಮೇರಿಕ ಇಲ್ಲ. ಹೀಗಾಗಿ, ಭಾರತದ ತೈಲದ ಮೇಲಿನ ಅವಲಂಬನೆ ಕಮ್ಮಿಯಾಗಿ, ಅದು ಅಣು ವಿಜ್ಞಾನವನ್ನು ಶಕ್ತಿಮೂಲಕ್ಕೆ ಬಳಸಿಕೊಳ್ಳುವುದಾದರೆ ಅದು ಅಮೇರಿಕಕ್ಕೂ ಅಪೇಕ್ಷಣೀಯ. ಅದರ ಜೊತೆಗೆ ಭಾರತಕ್ಕೆ ಬೇಕಾದ ಯುರೇನಿಯಮ್ ಮಾರಾಟದಿಂದ, ಯಂತ್ರ ಮತ್ತು ತಂತ್ರಜ್ಞಾನದ ಮಾರಾಟದಿಂದ ಅಮೇರಿಕದ ಅನೇಕ ಬಹುರಾಷ್ಟ್ರೀಯ ಕಂಪನಿಗಳಿಗೆ ಶತಕೋಟಿಗಟ್ಟಲೆ ಡಾಲರ್‌ಗಳ ವ್ಯಾಪಾರ ಆಗಿಯೇ ತೀರುತ್ತದೆ. ಅದರಿಂದ ಅಮೇರಿಕದ ಆರ್ಥಿಕ ಬೆಳವಣಿಗೆಗೂ ಲಾಭ. ಅವರಿಗೆ ಈ ಒಪ್ಪಂದದಿಂದ ಕಳೆದುಕೊಳ್ಳುವುದು ಏನೂ ಇಲ್ಲ.

ಇನ್ನು ನಮಗೆ: ನಮಗೂ ಕಳೆದುಕೊಳ್ಳುವುದು ಏನೂ ಇಲ್ಲ ಎಂದೇ ಹೇಳಬೇಕು. ಈ ಒಪ್ಪಂದದ ಪ್ರಕಾರ ಸಿವಿಲ್ ಉದ್ದೇಶದ ಅಣುಕೇಂದ್ರಗಳನ್ನಷ್ಟೆ ಅಮೇರಿಕ ಸರ್ಕಾರ ಪರಿಶೀಲಿಸಲು ಸಾಧ್ಯ. ಪರಿಶೀಲನಾ ಪಟ್ಟಿಯಲ್ಲಿ ಭಾರತದ ಮಿಲಿಟರಿ ಪ್ಲಾಂಟ್‌ಗಳು ಸೇರಿಲ್ಲ. ಆ ಸಾರ್ವಭೌಮತೆಯನ್ನು ಸರ್ಕಾರ ಉಳಿಸಿಕೊಂಡಿದೆ. ಇನ್ನು, ನಾವು ಅಣು ಬಾಂಬ್ ಹೊಂದಿದ ಮಾತ್ರಕ್ಕೆ ಯಾರನ್ನು ಬೇಕಾದರೂ ಹೆದರಿಸಬಹುದು ಎನ್ನುವುದು ಬಾಲಿಶ ಚಿಂತನೆ. ಈ ಹೊಸ ಯುಗದಲ್ಲಿ ಒಂದು ಬಲಿಷ್ಠ ದೇಶ ಇನ್ನೊಂದು ದೇಶದ ಅಧಿಕಾರಸ್ಥರನ್ನು ಕೆಳಗಿಳಿಸಬಹುದೆ ಹೊರತು ಇಡೀ ದೇಶವನ್ನು ಅಲ್ಲಿನ ಜನರಿಗೆ ವಿರೋಧವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಭಾರತ ಈಗ ಮಾಡಬೇಕಿರುವುದು ಎಲ್ಲಾ ರೀತಿಂದಲೂ ತಾನು ಸ್ವಾವಲಂಬನೆ ಸಾಧಿಸುವುದು, ಜನರ ಜೀವನ ಮಟ್ಟ ಸುಧಾರಿಸಿ ಅವರಲ್ಲಿ ಇನ್ನೊಂದು ದೇಶಕ್ಕೆ ತಲೆಬಾಗದ ರಾಷ್ಟ್ರೀಯತೆ ಬೆಳೆಸುವುದು, ಹಾಗೂ ಕನಿಷ್ಠ ಕೆಲವಾದರೂ ದೇಶಗಳು ಆರ್ಥಿಕವಾಗಿ ತನ್ನ ಮೇಲೆ ಅವಲಂಬನೆ ಬೆಳೆಸಿಕೊಳ್ಳುವಂತೆ ಮಾಡುವುದು. ಆಗ ನಮ್ಮ ಯುದ್ಧವನ್ನು ಅವರೇ ಮಾಡುತ್ತಾರೆ. ಅಮೇರಿಕದ ಯುದ್ಧವನ್ನು ಇಂಗ್ಲೆಂಡ್, ಆಸ್ಟ್ರೇಲಿಯ, ಇಟಲಿ, ಕೆನಡ, ಮತ್ತಿತರ ನ್ಯಾಟೋ ರಾಷ್ಟ್ರಗಳು ಮಾಡುವಂತೆ!

ಅಂದ ಹಾಗೆ: ಇಂತಹ ರಾಷ್ಟ್ರೀಯ ವಿಷಯಗಳನ್ನೆಲ್ಲ ಗಂಭೀರವಾಗಿ ಚರ್ಚಿಸಬಲ್ಲಂತಹ ಒಬ್ಬರೇ ಒಬ್ಬ ಎಂ.ಪಿ.ಯನ್ನಾದರೂ ನಾವು ಕರ್ನಾಟಕದಿಂದ ಆರಿಸಿದ್ದೇವಾ? ಸಂದೇಹ! ಇಲ್ಲದಿದ್ದರೆ, What a shame!

Dec 16, 2006

ಸಾಹಿತ್ಯ ಗೋಷ್ಠಿ ಮತ್ತು ಮರ್ಕ್ಯುರಿ ನ್ಯೂಸ್

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಡಿಸೆಂಬರ್ 29, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ವಿಶ್ವನಾಥ್ ಹುಲಿಕಲ್‌ನವರು ನಮ್ಮ ಸಾಲುಮರದ ತಿಮ್ಮಕ್ಕನವರ ಊರಾದ ಹುಲಿಕಲ್‌ನವರು. ಅಮೇರಿಕದ ಸಿಲಿಕಾನ್ ಕಣಿವೆಯಲ್ಲಿ ಕನ್ನಡದ ಸಾಹಿತ್ಯ ಪರಿಚಾರಕರಲ್ಲಿ ಪ್ರಮುಖವಾದ ಹೆಸರು ವಿಶ್ವನಾಥ್‌ರವರದು. ಇಲ್ಲಿನ ಕೆಲವು ಕನ್ನಡ ಸಾಹಿತ್ಯಾಸಕ್ತರೊಂದಿಗೆ ಸೇರಿ, 2001 ರ ನವೆಂಬರ್‌ನಲ್ಲಿ ಹುಲಿಕಲ್ ದಂಪತಿಗಳು ಕನ್ನಡ ಸಾಹಿತ್ಯ ಸಂಬಂಧಿ ಚರ್ಚೆಗೆಂದು ಹುಟ್ಟು ಹಾಕಿದ್ದು 'ಸಾಹಿತ್ಯ ಗೋಷ್ಠಿ'. ಅಲ್ಲಿಂದ ಇಲ್ಲಿಯವರೆಗೂ ನಿಯಮಿತವಾಗಿ ತಿಂಗಳಿಗೊಂದು ಕಾರ್ಯಕ್ರಮದಂತೆ ಇದನ್ನು ನಡೆಸಿಕೊಂಡು ಬಂದಿದ್ದಾರೆ. ಜನ್ನ, ಕುಮಾರವ್ಯಾಸ, ಕುವೆಂಪುರವರಿಂದ ಹಿಡಿದು ಅಡಿಗ, ಭೈರಪ್ಪ, ದಲಿತಕವಿ ಸಿದ್ದಲಿಂಗಯ್ಯನವರವರೆಗೂ ಎಲ್ಲಾ ಪಂಥ-ಪ್ರಕಾರಗಳ ಕನ್ನಡ ಸಾಹಿತ್ಯ ಕೃತಿಗಳ ಪರಿಚಯಾತ್ಮಕ, ವಿಮರ್ಶಾತ್ಮಕ ಉಪನ್ಯಾಸಗಳು ಇಲ್ಲಿ ನಡೆದಿವೆ. ಸ್ಥಳೀಯ ಸಾಹಿತ್ಯಾಸಕ್ತರೇ ಅಲ್ಲದೆ, ಅಮೇರಿಕವನ್ನು ಸಂದರ್ಶಿಸುವ ಕನ್ನಡದ ಪ್ರಸಿದ್ಧ ಸಾಹಿತಿಗಳೂ ಇಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ಗ್ಠೋಯ ದಿನದಂದು ತಪ್ಪಿಸಿಕೊಳ್ಳದೆ ಹಾಜರಾಗುವ ಒಂದು ಗುಂಪೇ ಸಿಲಿಕಾನ್ ಕಣಿವೆಯಲ್ಲಿದೆ. ಸಾಹಿತ್ಯ ಗೋಷ್ಠಿಯ ಆಶ್ರಯದಲ್ಲಿ ನಡೆದಿರುವ ಮತ್ತೊಂದು ಉಲ್ಲೇಖನೀಯ ಕಾರ್ಯವೆಂದರೆ, ಜಯಂತ ಕಾಣಿಯವರ ಪ್ರಸಿದ್ಧ ಕಥಾಸಂಕಲನವಾದ 'ಅಮೃತಬಳ್ಳಿ ಕಷಾಯ'ವನ್ನು ಇಂಗ್ಲಿಷಿಗೆ ಭಾಷಾಂತರಿಸಿ "Dots and Lines" ಹೆಸರಿನಲ್ಲಿ ಪ್ರಕಟಿಸಿರುವುದು.

ಸಾಹಿತ್ಯ ಗೋಷ್ಠಿಯ ಐದನೆ ವಾರ್ಷಿಕೋತ್ಸವದ ಕಾರ್ಯಕ್ರಮ ಮೂರು ವಾರದ ಹಿಂದೆ ನಡೆತು. ಎರಡು ಉಪನ್ಯಾಸಗಳ ನಡುವಿನ ತಿಂಡಿತೀರ್ಥದ ಬಿಡುವಿನ ಸಮಯದಲ್ಲಿ ವ್ಯಂಗ್ಯಚಿತ್ರಕಾರ ಸ್ನೇಹಿತರಾದ ಜನಾರ್ಧನ ಸ್ವಾಮಿಯವರೊಡನೆ ಮಾತನಾಡುತ್ತ ಒಂದು ಮೂಲೆಯಲ್ಲಿ ನಿಂತಿದ್ದೆ. ಆಗ ಇನ್ನೊಂದು ಮೂಲೆಯಲ್ಲಿದ್ದ ನಮ್ಮ ಪತ್ರಿಕೆಯ ಹಿತೈಷಿಗಳೂ, ಹಿರಿಯ ಸ್ನೇಹಿತರೂ ಆದ ಕಾತ್ಯಾಯಿನಿ ಸತ್ಯರವವರು ನನ್ನನ್ನು ನೋಡಿ ಏನನ್ನೊ ಜ್ಞಾಪಿಸಿಕೊಂಡವರಂತೆ ಹತ್ತಿರ ಬಂದರು. ಬಂದದ್ದೆ, "ರವಿ, ಈವತ್ತಿನ ಸ್ಯಾನ್ ಹೋಸೆ ಮರ್ಕ್ಯುರಿ ನ್ಯೂಸ್ ಪೇಪರ್ ನೋಡಿದೆಯೇನಪ್ಪ?" ಎಂದರು. ನಾನು ನೋಡಿರಲಿಲ್ಲ. "ಹಾಗಿದ್ದರೆ ತಕ್ಷಣ ಹೋಗಿ ನೋಡು," ಎಂದರು. ನನಗೆ ಕುತೂಹಲವಾತು. ಸ್ವಾಮಿಯವರು, "ಹೌದು, ಫ್ರಂಟ್‌ಪೇಜ್‌ನಲ್ಲಿಯೆ ಎಷ್ಟು ದೊಡ್ಡದಾಗಿ ಬಂದಿದೆ ಅಲ್ಲವಾ?" ಎಂದು, ಏನು ಬಂದಿದೆ ಎಂದು ವಿವರಿಸ ಹೊರಟರು. ತಕ್ಷಣ ಕಾತ್ಯಾನಿಯವರು, "ಹೇಳಬೇಡಿ, ರವೀನೆ ಹೋಗಿ ನೋಡಲಿ. ನೀನು ಇಂತಹ ವಿಷಯಗಳನ್ನೆಲ್ಲ ಫಾಲ್ಲೊ ಮಾಡ್ತಿರ್ತೀಯ ಅಂತಲೆ ನಿನಗೆ ಹೇಳೋಣ ಅಂತ ಬಂದೆ. ಮುಂದಿನ ನಾಲ್ಕು ದಿನವೂ ಆ ಪತ್ರಿಕೆಯನ್ನು ತಗೊಳ್ಳೋದು ಮರೀಬೇಡಪ್ಪ," ಎಂದರು. ಅಷ್ಟಾದರೂ ಕಾತ್ಯಾಯಿನಿ ಮತ್ತು ಸ್ವಾಮಿಯವರ ಮಾತಿನ ನಡುವೆ ಅದು ಭಾರತಕ್ಕೆ ಸಂಬಂಧಿಸಿದ ವಿಷಯ, ಮರ್ಕ್ಯುರಿ ನ್ಯೂಸ್‌ನಂತಹ ಪ್ರಸಿದ್ಧ ಪತ್ರಿಕೆ ಭಾರತದ ಬಗ್ಗೆ ಎಷ್ಟೊಂದು ದೊಡ್ಡ ಫ್ಯೂಚರ್ ಮಾಡಿದೆ ಎಂಬ ಹೆಮ್ಮೆ ಇಣುಕಾಡುತ್ತಿದ್ದದ್ದು ಗೊತ್ತಾಯಿತು. ಮುಂದಿನ ನಾಲ್ಕು ದಿನವೂ ನಾನು ತಪ್ಪದೆ ಆ ಪತ್ರಿಕೆ ಕೊಂಡುಕೊಂಡೆ.

ಸ್ಯಾನ್ ಹೋಸೆ ಮರ್ಕ್ಯುರಿ ನ್ಯೂಸ್ ಪತ್ರಿಕೆಯ ಪ್ರತಿದಿನದ ಪ್ರಸಾರ ಸುಮಾರು ಎರಡೂ ಮುಕ್ಕಾಲು ಲಕ್ಷ. ಹೆಸರೆ ಹೇಳುವಂತೆ ಇದು ರಾಷ್ಟ್ರೀಯ ಪತ್ರಿಕೆಯೇನಲ್ಲ. ಸ್ಯಾನ್ ಫ್ರಾನ್ಸಿಸ್ಕೊ ಬೇ ವಲಯದ ದಕ್ಷಿಣ ಭಾಗವಾದ ಸಿಲಿಕಾನ್ ಕಣಿವೆಯಲ್ಲಿ ಮಾತ್ರ ಇದರ ಪ್ರಸಾರ. ಆದರೆ ಸಿಲಿಕಾನ್ ಕಣಿವೆಯಲ್ಲಂತೂ ಇದೇ ನಂಬರ್ 1 ಹಾಗೂ ಪ್ರಭಾವಶಾಲಿ ಕೂಡ. ಇಲ್ಲಿನ ಸಾಫ್ಟ್‌ವೇರ್ ಕಂಪನಿಗಳಲ್ಲಿನ ಭಾರತೀಯರ ಸಾಂದ್ರತೆ ಅಮೇರಿಕದಲ್ಲಿನ ಬೇರೆಲ್ಲ ಭಾಗಗಳಿಗಿಂತ ಹೆಚ್ಚಾಗಿರುವುದರಿಂದ, ಸ್ಥಳೀಯ ಭಾರತೀಯರಲ್ಲೂ ಮರ್ಕ್ಯುರಿ ನ್ಯೂಸ್ ಜನಪ್ರಿಯ. ಸ್ಥಳೀಯ ಭಾರತೀಯ ಲೇಖಕರೂ ಈ ಪತ್ರಿಕೆಗೆ ನಾನಾ ವಿಷಯಗಳ ಬಗ್ಗೆ ಬರೆಯುತ್ತಿರುತ್ತಾರೆ. ಈ ಪತ್ರಿಕೆಗೆ ಇಲ್ಲಿಯವರೆಗೆ ಎರಡು ಸಲ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ದೊರಕಿದೆ.

ಅಮೇರಿಕದಲ್ಲಿನ ಪತ್ರಿಕೆ-ರೇಡಿಯೊ-ಟಿವಿಗಳನ್ನು ಗಮನಿಸುವ ಭಾರತೀಯರಿಗೆ ಕಳೆದ ಎರಡು ಮೂರು ವರ್ಷಗಳಲ್ಲಿ ಈ ಸುದ್ದಿಮಾಧ್ಯಮಗಳಲ್ಲಿ ಭಾರತದ ಕುರಿತಾದ ವಿಷಯಗಳಿಗೆ ದೊರಕುತ್ತಿರುವ ಪ್ರಾಮುಖ್ಯ ಎದ್ದು ಕಾಣಿಸದೆ ಇರದು. ಅದಕ್ಕೂ ಮೊದಲು ಕೇವಲ ಪ್ರಕೃತಿ ವಿಕೋಪಗಳಂತಹ ವಿಷಯಗಳಿಗೆ ಮಾತ್ರ ಸುದ್ದಿಯಾಗುತ್ತಿದ್ದ ಭಾರತ ಈ ನಡುವೆ ಅಮೇರಿಕನ್ನರು ವಿಶೇಷ ಆಸಕ್ತಿ ತೋರಿಸುವ ಆರ್ಥಿಕ, ವಾಣಿಜ್ಯ ವಿಷಯಗಳಿಗೆ ಸುದ್ದಿಯಾಗುತ್ತಿದೆ. ಇಲ್ಲಿನವರಿಗಿಂತ ಕಮ್ಮಿ ಸಂಬಳಕ್ಕೆ ಕೊರತೆಲ್ಲದಂತೆ ಸಿಗುವ ಭಾರತೀಯ ಸಾಫ್ಟ್‌ವೇರ್ ತಂತ್ರಜ್ಞರು, ಔಟ್‌ಸೋರ್ಸ್ ಮಾಡಿದರೆ ಪ್ರತಿವರ್ಷ ಉಳಿತಾಯವಾಗುವ ಕೋಟ್ಯಾಂತರ ಡಾಲರ್‌ಗಳು, ಭಾರತದಲ್ಲಿ ಕೊಳ್ಳುವ ತಾಕತ್ತಿರುವ ಕೋಟ್ಯಾಂತರ ಜನಸಂಖ್ಯೆಯ ಮಧ್ಯಮವರ್ಗದವರ ಮಾರುಕಟ್ಟೆ, ಶರವೇಗದಲ್ಲಿ ಏರುತ್ತಿರುವ ಶೇರು ಮಾರುಕಟ್ಟೆ, ಇವೆಲ್ಲವೂ ಅಮೇರಿಕದ ಬ್ಯುಸಿನೆಸ್ ಪ್ರಪಂಚಕ್ಕೆ ಪ್ರೀತಿಪಾತ್ರವಾದವು! ಈ ಹಿನ್ನೆಲೆಯಲ್ಲಿ ಪತ್ರಕರ್ತ ಜಾನ್ ಬೌಡ್ರ್ಯು ಡಿಸೆಂಬರ್ 3 ರಿಂದ 6 ರ ವರೆಗೆ India 2.0 ಎಂಬ ಅಗ್ರ ಲೇಖನಮಾಲೆಯಲ್ಲಿ ಭಾರತದಲ್ಲಿ ಆಗುತ್ತಿರುವ ಆರ್ಥಿಕಾಭಿವೃದ್ಧಿ, ಬದಲಾಗುತ್ತಿರುವ ಜೀವನಶೈಲಿ, ಹೆಚ್ಚಾಗುತ್ತಿರುವ ಉದ್ಯಮಶೀಲತೆ, ನವಶ್ರೀಮಂತರು ಸಮಾಜಸೇವೆಯಲ್ಲಿ ತೊಡಗಿಸುತ್ತಿರುವ ಹಣ ಮತ್ತು ಸಮಯ, ಮುಂತಾದ ವಿಷಯಗಳ ಬಗ್ಗೆ ಭಾರತವನ್ನು ಸಂದರ್ಶಿಸಿ, ಒಳ್ಳೆಯ ಸಂಶೋಧನೆ ಮಾಡಿ, ಸಾಕಷ್ಟು ವಸ್ತುನಿಷ್ಠವಾಗಿಯೆ ಬರೆದಿದ್ದಾರೆ.

ಇಲ್ಲಿನ ಮಾಧ್ಯಮಗಳಲ್ಲಿ ಭಾರತದ ಬಗೆಗಿನ ಈ ಪರಿಯ ಆಸಕ್ತಿಯನ್ನು, ಸಂಶೋಧನೆಯನ್ನು ನೋಡಿದರೆ, ಮುಂದಿನ ದಿನಗಳಲ್ಲಿ ಹಾಲಿವುಡ್‌ನಿಂದ ಹಿಡಿದು ಸೌರವಿಜ್ಞಾನದವರೆಗೂ ವಿಶ್ವದಾದ್ಯಂತದ ಉದ್ಯಮಶೀಲ ವಣಿಕರು ಭಾರತದತ್ತ ಮುಖ ಮಾಡುತ್ತಾರೆ ಎಂದರೆ, ಅದೇನೂ ಜ್ಯೋತಿಷ್ಯ ಹೇಳಿದಂತಾಗುವುದಿಲ್ಲ!



ಕಂಪ್ಯೂಟರ್ ಮತ್ತು ಪ್ರಿಂಟರ್‌ಗಳನ್ನು ಮಾಡುವ ದೈತ್ಯ ಬಹುರಾಷ್ಟ್ರೀಯ ಕಂಪನಿ ಹ್ಯೂಲೆಟ್-ಪ್ಯಾಕರ್ಡ್ ಪ್ರಾರಂಭವಾಗಿದ್ದು ಗ್ಯಾರೇಜಿನಲ್ಲಿ. ಗೂಗ್ಲ್ ಕಂಪನಿ ಸಹ ಪ್ರಾರಂಭವಾಗಿದ್ದು ಹೀಗೆಯೆ. ಇವತ್ತು ಎಚ್.ಪಿ. ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು 5000 ಶತಕೋಟಿ ರೂಪಾಯಿಗಳು! ಪ್ರಾರಂಭವಾಗಿ ಕೇವಲ 8 ವರ್ಷವಾಗಿರುವ ಗೂಗ್ಲ್‌ನ ಮಾರುಕಟ್ಟೆ ಮೌಲ್ಯ ಸುಮಾರು 6600 ಶತಕೋಟಿ ರೂಪಾಯಿಗಳು. ಹಾಗಾಗಿಯೆ, ಸಣ್ಣ ಮೊತ್ತದ ಬಂಡವಾಳ ಹಾಗು ಅಪ್ರತಿಮ ಐಡಿಯಾಗಳಿಂದ ಹೊಸದಾಗಿ ಪ್ರಾರಂಭವಾಗುವ ಕಂಪನಿಗಳ ಬಗ್ಗೆ ಇಲ್ಲಿನವರಿಗೆ ಬಹಳ ಗೌರವ ಉಂಟು. ಅವರಲ್ಲಿ ಎಷ್ಟು ಜನ ಕೆಲಸ ಮಾಡುತ್ತಾರೆ, ರಿಸೆಪ್ಷನಿಸ್ಟ್ ಇದಾರಾ, ಮತ್ತೊಂದು ಮಗದೊಂದು ಇದೆಯ ಎನ್ನುವುದಕ್ಕಿಂತ ಅವರಲ್ಲಿರುವ ಐಡಿಯ ಮಾರುಕಟ್ಟೆಯಲ್ಲಿ ಗೆಲ್ಲುತ್ತದಾ ಎಂದಷ್ಟೆ ಬಂಡವಾಳ ಹೂಡುವವರು ನೋಡುವುದು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಈಗೀಗ ಇಂತಹ ಗರಾಜುಗಳಲ್ಲಿ ಆರಂಭವಾಗುತ್ತಿರುವ ಸ್ಟಾರ್ಟ್-ಅಪ್ ಕಂಪನಿಗಳ ಕುರಿತಾದ "The new garage culture – STARTING UP" ಎಂಬ ದೀರ್ಘ ಲೇಖನ ಬಹಳ ಚೆನ್ನಾಗಿದೆ. ಹಾಗೆಯೆ ಅಜೀಮ್ ಪ್ರೇಮ್‍‌ಜಿಯವರ ಸಂದರ್ಶನ ಇದೆ. ಬೆಂಗಳೂರು, ಮುಂಬು, ಹೈದರಾಬಾದ್, ನಿಜಾಮಾಬಾದ್, ಚೆನ್ನೈ, ಶ್ರೀಪೆರಂಬದೂರು ಇಲ್ಲೆಲ್ಲ ಸುತ್ತಾಡಿ ಮಾಡಿರುವ ಈ ಲೇಖನಮಾಲೆ ಓದಿದರೆ ಇಲ್ಲಿನ ಪತ್ರಕರ್ತರ ದುಡಿಮೆ, ಅವರ ಸಂಶೋಧನಾ ಪ್ರವೃತ್ತಿ, ಪ್ರೊಫ್ರೆೆಷನಾಲಿಸಂ ಬಗ್ಗೆ ಅಭಿಮಾನವುಂಟಾಗದೆ ಇರದು.

Dec 7, 2006

ಅಮೇರಿಕ ಎಂದರೆ ಭುವಿಯ ಮೇಲಿನ ಸ್ವರ್ಗವೇನಲ್ಲ!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಡಿಸೆಂಬರ್ 22, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಮೂರು ವಾರದ ಹಿಂದೆ, ನವೆಂಬರ್ ಹದಿನಾಲ್ಕರಂದು ಮೈಕ್ರೊಸಾಫ್ಟ್ ಕಂಪನಿ Zune ಎಂಬ ಒಂದು ಹೊಸ ಡಿಜಿಟಲ್ ಮ್ಯೂಸಿಕ್ ಪ್ಲೇಯರ್ ಅನ್ನು ಬಿಡುಗಡೆ ಮಾಡಿತು. ಆಪಲ್ ಕಂಪನಿಯ ಐಪಾಡ್‌ಗೆ ಉತ್ತರವಾಗಿ ಕಳೆದೆರಡು ವರ್ಷಗಳಿಂದ ಈ ಪ್ಲೇಯರ್ ಅನ್ನು ಮೈಕ್ರೊಸಾಫ್ಟ್ ಸಿದ್ದಪಡಿಸುತ್ತಿತ್ತು. ಕಂಪ್ಯೂಟರ್ ಪ್ರಪಂಚದ ಆಗುಹೋಗುಗಳು ಬಹಳಷ್ಟು ಗೊತ್ತಿಲ್ಲದವರಿಗೆ ಗೊತ್ತಿರದೆ ಇರಬಹುದಾದ ವಿಚಾರ ಏನೆಂದರೆ, ಆಪಲ್ ಕಂಪನಿ ಕೆಲವರ ದ್ಟೃಯಲ್ಲಿ ಮೈಕ್ರೋಸಾಫ್ಟ್‌ನ ವಿಂಡೋಸ್ ಆಪರೇಟಿಂಗ್ ಸಿಸ್ಟಂಗಿಂತ ಉತ್ಕೃಷ್ಟವಾದ ಮ್ಯಾಕ್ ಆಪರೇಟಿಂಗ್ ಸಿಸ್ಟಮ್ ಅನ್ನು ತಯಾರಿಸುತ್ತದೆ ಎನ್ನುವುದು. ಆದರೆ ಮೈಕ್ರೊಸಾಫ್ಟ್ ಮಾಡದ ಒಂದನ್ನು ಹೆಚ್ಚುವರಿಯಾಗಿ ಆಪಲ್ ಮಾಡುತ್ತದೆ. ಅದೇನೆಂದರೆ, ತನ್ನ ಆಪರೇಟಿಂಗ್ ಸಿಸ್ಟಮ್ ತಂತ್ರಾಂಶವನ್ನು ಅದು ತಾನು ಸಿದ್ದಪಡಿಸಿದ ಕಂಪ್ಯೂಟರ್ ಹಾರ್ಡ್‌ವೇರ್‌ನೊಂದಿಗೆ ಮಾತ್ರ ಮಾರುತ್ತದೆ. ಮೈಕ್ರೋಸಾಫ್ಟ್‌ನ ವಿಂಡೋಸ್ ಅನ್ನು x86 ಪ್ರೊಸೆಸರ್ ಆಧಾರಿತವಾದ ಯಾವ ಕಂಪ್ಯೂಟರ್ ಮೇಲಾದರೂ ಉಪಯೋಗಿಸಬಹುದು. ನಮ್ಮಲ್ಲಿಯೆ ಎಚ್.ಸಿ.ಎಲ್, ವಿಪ್ರೊ, ಝೆೆನಿತ್, ಮುಂತಾದ ಹಾಗು ವಿದೇಶಗಳಲ್ಲಿ ಡೆಲ್, ಎಚ್.ಪಿ., ಟೊಷಿಬ, ಏಸರ್ ಮುಂತಾದ ಕಂಪನಿಗಳು ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್ ಹಾರ್ಡ್‌ವೇರ್ ಸಿದ್ಧಪಡಿಸಿ, ಅದಕ್ಕೆ ಮೈಕ್ರೋಸಾಫ್ಟ್‌ನ ವಿಂಡೋಸ್ ಅನುಸ್ಥಾಪಿಸಿ ಮಾರುತ್ತಾರೆ. ಇನ್ನೂ ಸುಲಭವಾಗಿ ಹೇಳಬೇಕೆಂದರೆ ಎಲೆಕ್ಟ್ರಾನಿಕ್ಸ್ ಡಿಪ್ಲೊಮ ಮಾಡಿರುವವವರೂ ಸಹ ಇದಕ್ಕೆ ಬೇಕಾದ ಮದರ್ ಬೋರ್ಡ್, ಮೆಮೊರಿ, ಮುಂತಾದವುಗಳನ್ನು ಬೆಂಗಳೂರಿನ ಎಸ್.ಪಿ. ರೋಡಿನಲ್ಲಿ ಕೊಂಡುಕೊಂಡು ತಾವೆ ಅಸೆಂಬ್ಲ್ ಮಾಡಿ, ವಿಂಡೋಸ್ ಅನ್ನು ಇನ್ಸ್‌ಟಾಲ್ ಮಾಡಬಹುದು. ಆದರೆ ಆಪಲ್‌ನ ಮ್ಯಾಕ್ ಕಂಪ್ಯೂಟರ್ ಆನು ಮಾಡುವುದು, ಮಾರುವುದು, ಆಪಲ್ ಕಂಪನಿ ಮಾತ್ರ.

ಆದರೂ ಹಲವಾರು ಕಾರಣಗಳಿಗೆ ಟೆಕ್ನಾಲಜಿ ಪ್ರಪಂಚದಲ್ಲಿ ಆಪಲ್‌ನ ಪ್ರಭಾವ ಮೈಕ್ರೋಸಾಫ್ಟ್‌ಗಿಂತ ಕಮ್ಮಿ ಇಲ್ಲ. ಯಾವುದೆ ಹಾಲಿವುಡ್ ಸಿನೆಮಾದಲ್ಲಿ ಕಂಪ್ಯೂಟರ್ ಅನ್ನು ಉಪಯೋಗಿಸುತ್ತಿರುವ ಸೀನ್ ಇದ್ದರೆ ಆ ಸೀನ್‌ನಲ್ಲಿಆಪಲ್ ಕಂಪ್ಯೂಟರ್ ಕಾಣಿಸುವ ಸಾಧ್ಯತೆಗಳೆ ಹೆಚ್ಚು. ಆದರೆ ಪರ್ಸನಲ್ ಕಂಪ್ಯೂಟರ್ ಉಪಯೋಗಿಸುವವರಲ್ಲಿ ಶೇ.90 ಕ್ಕೂ ಹೆಚ್ಚು ಜನ ಮೈಕ್ರೊಸಾಫ್ಟ್ ಬಳಸಿದರೆ, ಪ್ರಪಂಚದ ಕಂಪ್ಯೂಟರ್ ಬಳಕೆದಾರರಲ್ಲಿ ಆಪಲ್ ಬಳಸುವವರು ಶೇ. 2 ರಿಂದ 3 ಮಾತ್ರ. ಆದರೆ ಈ ಆಪಲ್ ಬಳಸುವ ಬಹುಪಾಲು ಜನರ ಆಪಲ್‌ನೆಡೆಗಿನ ನಿಷ್ಠೆ ಮತ್ತು ಮೈಕ್ರೋಸಾಫ್ಟ್‌ನೆಡೆಗಿನ ದ್ವೇಷ ವಿಶ್ವಪ್ರಸಿದ್ಧವಾದದ್ದು! ಇದೊಂದು ಕಲ್ಟ್ ಸಂಸ್ಕೃತಿ! ಐದಾರು ವರ್ಷಗಳ ಹಿಂದೆ ಈ ಆಪಲ್ ಕಂಪನಿ ಹೋಗಿಯೇ ಬಿಟ್ಟಿತು ಎಂದು ಎಲ್ಲರೂ ಬೊಬ್ಬೆಡುತ್ತಿದ್ದಾಗ ಅದರ ಸ್ಥಾಪಕ ಮತ್ತು ಸಿ.ಇ.ಒ. ಸ್ಟೀವ್ ಜಾಬ್ಸ್ ಬಯಲಿಗೆ ಬಿಟ್ಟ ಅಸ್ತ್ರ ಆಪಲ್ ಐಪಾಡ್ ಎಂಬ ಪುಟ್ಟ, ಮುದ್ದಾದ, ಡಿಜಿಟಲ್ ಮ್ಯೂಸಿಕ್ ಪ್ಲೇಯರ್. ಇದು ಆಪಲ್ ಕಂಪನಿಯನ್ನು ಮತ್ತೆ ಲಾಭಕ್ಕೆ ತಂದಿದ್ದೆ ಅಲ್ಲದೆ ಪರೋಕ್ಷವಾಗಿ ಆಪಲ್ ಕಂಪ್ಯೂಟರ್‌ನ ಮಾರಾಟ ಹೆಚ್ಚಾಗುವುದಕ್ಕೂ ಕಾರಣವಾತು. ಇಂದು ಐಪಾಡ್‌ನಷ್ಟು ಪ್ರಸಿದ್ಧವಾದ, ಲಾಭದಾಯಕವಾದ ಇನ್ನೊಂದು ಉತ್ಪನ್ನವಿಲ್ಲವೇನೊ! ಇಂತಹ ಉತ್ಪನ್ನಗಳನ್ನು ಬ್ಯುಸಿನೆಸ್ ಪರಿಭಾಷೆಯಲ್ಲಿ Killer Product ಎನ್ನುತ್ತಾರೆ.

ಮೈಕ್ರೊಸಾಫ್ಟ್‌ನವರು ಹೆಚ್ಚಾಗಿ ಹಾರ್ಡ್‌ವೇರ್ ತಯಾರಿಸುವುದಿಲ್ಲ. ಹಲವಾರು ವರ್ಷಗಳ ಹಿಂದಿನ ತನಕ ಮೌಸು, ಕೀಬೋರ್ಡ್ ನಂತಹ ಸಣ್ಣಪುಟ್ಟವನ್ನು ಮಾತ್ರ ಮಾಡುತ್ತಿದ್ದರು. ಹಾರ್ಡ್‌ವೇರ್ ಉತ್ಪನ್ನಗಳಲ್ಲಿ ಸ್ವಲ್ಪ ಗಂಭೀರವಾಗಿ ತೊಡಗಿಸಿಕೊಂಡಿದ್ದು ವಿಡಿಯೋ ಗೇಮ್ ಕನ್ಸೋಲ್ ಆದ XBox ತಯಾರಿಕೆಯಲ್ಲಿ ಮಾತ್ರ. ಇಲ್ಲಿ ಗಮನಿಸಬೇಕಾದ ಒಂದು ಅಂಶ ಇದೆ. ಎಕ್ಸ್-ಬಾಕ್ಸ್‌ನ ಹಾರ್ಡ್‌ವೇರ್ ಮಾರಾಟದಿಂದ ಮೈಕ್ರೊಸಾಫ್ಟ್‌ನವರಿಗೆ ಏನೇನೂ ಲಾಭವಿಲ್ಲ. ಅದಕ್ಕೆ ಬೀಳುವ ಖರ್ಚಿಗಿಂತ ಅರ್ಧಕ್ಕೂ ಕಮ್ಮಿ ಬೆಲೆಗೆ ಅದನ್ನು ಮಾರುತ್ತಾರೆ. ಆದರೆ ದುಡ್ಡಿರುವುದು ಸಾಫ್ಟ್‌ವೇರ್‌ನಲ್ಲಿ. ಅಂದರೆ ಎಕ್ಸ್-ಬಾಕ್ಸ್‌ಗೆಂದು ಮೈಕ್ರೋಸಾಫ್ಟ್ ಸಿದ್ದಪಡಿಸುವ ಗೇಮ್‌ಗಳಲ್ಲಿ. ಈ ಗೇಮ್‌ಗಳನ್ನು ಒಂದು ಸಲ ಡಿಸೈನ್ ಮಾಡಿ, ಡೆವಲಪ್ ಮಾಡಿದರೆ ಸಾಕು; ಆಮೇಲೆ ಒಂದೊಂದು ಕಾಪಿಗೆ ಬೀಳುವ ಖರ್ಚು ಹತ್ತಿಪ್ಪತ್ತು ರೂಪಾಯಿ ಮಾತ್ರ; ಸೀಡಿ ಅಥವ ಡಿವಿಡಿ ಬರ್ನ್ ಮಾಡಲಿಕ್ಕಾಗಿ ಹಾಗೂ ಅದನ್ನು ಪ್ಯಾಕ್ ಮಾಡಲಿಕ್ಕಾಗಿ. ಆದರೆ ಅದರ ಮಾರಾಟ ಬೆಲೆ ಮಾತ್ರ ಸಾವಿರ ರೂಪಾಯಿಂದ ಮೂರು ಸಾವಿರ ರೂಪಾಯಿ ತನಕ ಇರುತ್ತದೆ. ವಿಡಿಯೊ ಗೇಮ್ ಮಾರುಕಟ್ಟೆಯಲ್ಲಿ ಸೋನಿ ಕಂಪನಿಯ PlayStation ನ ಏಕಸ್ವಾಮ್ಯ ಮುರಿಯಲು ಹಾಗೂ ತನಗಾಗಿ ಮತ್ತೊಂದು ಮಾರುಕಟ್ಟೆ ಸೃಷ್ಟಿ ಮಾಡಿಕೊಳ್ಳುವ ಮೈಕ್ರೊಸಾಫ್ಟ್ ಆ ರಂಗಕ್ಕೆ ಇಳಿತು. ಹೆಚ್ಚುಕಮ್ಮಿ ಅದೇ ಉದ್ದೇಶದಿಂದ ಆಪಲ್ ಐಪಾಡ್‌ಗೆ ಪ್ರತಿಸ್ಪರ್ಧಿಯಾಗಿ Zune ಮ್ಯೂಸಿಕ್ ಪ್ಲೇಯರ್ ಅನ್ನು ಮೈಕ್ರೊಸಾಫ್ಟ್ ತಿಂಗಳ ಹಿಂದೆ ಬಿಡುಗಡೆ ಮಾಡಿದ್ದು.

ಈ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುವುದಕ್ಕೆ ಮುಂಚೆ ಬಹಳ ಪ್ರಚಾರ ಮಾಡಲಾಗಿತ್ತು. ಹಾಗಾಗಿ ಜನರಲ್ಲಿಯೂ ಕುತೂಹಲವಿತ್ತು. CNETNews.com ಎನ್ನುವುದು ಟೆಕ್ನಾಲಜಿ ವಿಷಯಗಳಿಗೆ ಬಹಳ ಜನಪ್ರಿಯವಾದ ವೆಬ್‌ಸೈಟ್. ಆ ವೆಬ್‌ಸೈಟಿನಲ್ಲಿ ಇಂತಹ ಉತ್ಪನ್ನಗಳನ್ನು ಪರೀಕ್ಷಿಸಿ, ಒಂದೆರಡು ನಿಮಿಷಗಳ ರಿವ್ಯೂ ವಿಡಿಯೊ ಹಾಕುತ್ತಾರೆ. ಈ ಕಂಪನಿ ಇರುವುದು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ. Zune ಮಾರುಕಟ್ಟೆಗೆ ಬರುವ ಎರಡು ವಾರಗಳ ಹಿಂದೆಯೆ ಅದನ್ನು ಪಡೆದುಕೊಂಡು, ಅದರ ಗುಣಾವಗುಣಗಳನ್ನು ವಿಶ್ಲೇಷಿಸಿ ಅದರ ವಿಡಿಯೊ ಅನ್ನು ಇದರ ವೆಬ್‌ಸೈಟಿನಲ್ಲಿ ಪೋಸ್ಟ್ ಮಾಡಿದ್ದರು. ವಿಶ್ಲೇಷಿಸಿದಾತನ ಹೆಸರು ಜೇಮ್ಸ್ ಕಿಮ್. ಈತ ಇಂತಹ ಅತ್ಯಾಧುನಿಕ ಡಿಜಿಟಲ್ ಉತ್ಪನ್ನಗಳನ್ನು ವಿಶ್ಲೇಷಿಸುವ CNET ನ ಹಿರಿಯ ಸಂಪಾದಕ. Zune ನ ಬಗ್ಗೆ ಸಹಜವಾಗಿಯೆ ಕುತೂಹಲ ಬೆಳೆಸಿಕೊಂಡಿದ್ದ ನಾನು ಆ ವಿಡಿಯೋವನ್ನು ಮೊದಲ ವಾರವೆ ನೋಡಿದ್ದೆ.

ನವೆಂಬರ್‌ನ ನಾಲ್ಕನೆ ಗುರುವಾರವನ್ನು ಅಮೇರಿಕದಲ್ಲಿ ಥ್ಯಾಂಕ್ಸ್‌ಗಿವಿಂಗ್ ದಿನ ಎಂದು ಆಚರಿಸುತ್ತಾರೆ. ನಾಲ್ಕು ಶತಮಾನಗಳ ಹಿಂದೆ ಯೋರೋಪಿನಿಂದ ವಲಸೆ ಬಂದ ಕೆಲವು ಬಿಳಿಯರು ಇಲ್ಲಿನ ಹವಾಮಾನ ವೈಪರೀತ್ಯಕ್ಕೆ ಬಲಿಯಾಗಿ, ರೋಗರುಜಿನಗಳಿಗೆ ತುತ್ತಾಗಿ ಊಟಕ್ಕಿಲ್ಲದೆ ಸಾಯುವಂತಹ ಸ್ಥಿತಿ ಕೆಲವು ಕಡೆ ಉದ್ಭವಿಸಿದಾಗ ರೆಡ್ ಇಂಡಿಯನ್ನರು, ಅಂದರೆ ಕೆಂಪಗಿರುವ ಭಾರತೀಯರು ಎಂದು ಕೊಲಂಬಸ್‌ನಿಂದ ಕರೆಸಿಕೊಂಡ ಇಲ್ಲಿನ ಮೂಲನಿವಾಸಿಗಳು ಅವರಿಗೆ ಆಹಾರ ಪದಾರ್ಥಗಳನ್ನು ಒದಗಿಸಿ ಸಹಾಯ ಮಾಡಿದರು. ಆ ಕಾರಣಕ್ಕಾಗಿ ಕೃತಜ್ಞತಾಪೂರ್ವಕವಾಗಿ ಆಚರಿಸುವ ಹಬ್ಬ ಥ್ಯಾಂಕ್ಸ್‌ಗಿವಿಂಗ್ ಡೆ. ಮಾರಾಟದ ಅಂಗಡಿಗಳನ್ನು ಬಿಟ್ಟು ಇನ್ನೆಲ್ಲರಿಗೂ ಶುಕ್ರವಾರವೂ ರಜಾ ಇರುತ್ತದೆ. ಹೇಗೂ ಇಲ್ಲಿ ಶನಿವಾರ, ಭಾನುವಾರ ರಜಾ ಇದ್ದೇ ಇರುತ್ತದೆ. ಹಾಗಾಗಿ ಬಹಳ ಜನ ಆ ಲಾಂಗ್ ವೀಕೆಂಡ್‌ನಲ್ಲಿ ಪ್ರವಾಸಕ್ಕೆ ಹೋಗುತ್ತಾರೆ. ಇಡೀ ವರ್ಷದಲ್ಲೆಲ್ಲ ಜನ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣ ಮಾಡುವುದು ಈ ನಾಲ್ಕು ದಿನಗಳಲ್ಲಿಯೆ.

ಈ ಬಾರಿಯ ರಜಾದಲ್ಲಿ ಮೇಲೆ ಹೇಳಿದ CNET News.com ನ ಜೇಮ್ಸ್ ಕಿಮ್ ತನ್ನ ಹೆಂಡತಿ ಕೇಟಿ ಹಾಗು ತಮ್ಮ ಇಬ್ಬರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ಸ್ಯಾನ್ ಫ್ರಾನ್ಸಿಸ್ಕೊದಿಂದ ನಾಲ್ಕೈದು ನೂರು ಮೈಲಿ ದೂರ, ಉತ್ತರಕ್ಕೆ ಪ್ರವಾಸ ಹೊರಟ. ಒಂದೆರಡು ದಿನ ಒರೆಗಾನ್ ರಾಜ್ಯದಲ್ಲೆಲ್ಲ ಸುತ್ತಾಡಿಕೊಂಡು, ಹಿಮ ತುಂಬಿದ ದಟ್ಟ ಕಾಡುಬೆಟ್ಟಗಳ ರಸ್ತೆಯೊಂದರಲ್ಲಿ ಹೋಗುತ್ತಿದ್ದಾಗ ಆತನ ಕಾರು ಹಿಮದಲ್ಲಿ ಸಿಕ್ಕಿಹಾಕಿಕೊಂಡು ಹೂತು ಹೋಯಿತು. ಹಿಮ ಬೀಳುವ ಋತುವಿನಲ್ಲಿ ಆ ರಸ್ತೆಯಲ್ಲಿ ಸಂಚಾರ ಇರುವುದಿಲ್ಲ. ಅದು ಜೇಮ್ಸ್‌ಗೆ ಗೊತ್ತಿರಲಿಲ್ಲ. ಸೆಲ್ ಪೋನ್ ಸಿಗ್ನಲ್ ಬೇರೆ ಇರಲಿಲ್ಲ. ಕೇವಲ ಏಳು ತಿಂಗಳಾಗಿದ್ದ ಒಂದು ಪುಟ್ಟ ಮಗು, ನಾಲ್ಕು ವರ್ಷದ ಇನ್ನೊಂದು ಮಗು, ಮಗುವಿಗೆ ಹಾಲೂಡಿಸುತ್ತಿರುವ ತಾಯಿ ಹಾಗೂ ಜೇಮ್ಸ್ ಯಾರಾದರು ಆ ರಸ್ತೆಯಲ್ಲಿ ಬರುತ್ತಾರೆ ಎಂದು ಕಾಯಲಾರಂಭಿಸಿದರು. ಹೀಗಾಗುತ್ತದೆ ಎಂದು ಮೊದಲೆ ಊಹಿಸಿಲ್ಲದ ಕಾರಣವಾಗಿ ಕಾರಿನಲ್ಲಿ ಹೆಚ್ಚಿನ ನೀರಾಗಲಿ, ಆಹಾರವಾಗಲಿ ಇರಲಿಲ್ಲ. ಹೊರಗೆ ರಾತ್ರಿ ಹೊತ್ತು ನೀರು ಮಂಜುಗಡ್ಡೆಯಾಗುವಷ್ಟು ಚಳಿ. ಜನಸಂಪರ್ಕ ಸಾಧ್ಯವೆ ಇಲ್ಲದಷ್ಟು ದೂರ ಇವರು ಹೋಗಿಬಿಟ್ಟಿದ್ದಾರೆ.

ಹೀಗಾಗಿದ್ದೆ, ಪೆಟ್ರೋಲ್ ಮುಗಿಯುವ ತನಕವೂ ಕಾರನ್ನು ಆನ್ ಮಾಡಿಟ್ಟುಕೊಂಡು, ಅದರಲ್ಲಿನ ಹೀಟರ್ ಹಾಕಿಕೊಂಡು ಕಾಲ ಹಾಕಿದ್ದಾರೆ. ಪೆಟ್ರೋಲ್ ಒಂದು ದಿನಕ್ಕೆಲ್ಲ ಮುಗಿದಿರಬೇಕು. ಸಾಲದೆಂದು ಆಗಾಗ ಹಿಮ ಮತ್ತು ಮಳೆ ಬೀಳುತ್ತಲೆ ಇದೆ. ಎಲ್ಲಿಯೂ ಸಹಾಯದ ಸುಳಿವಿಲ್ಲ. ಆ ರಸ್ತೆಯಲ್ಲಿ ಯಾವ ವಾಹನವಾಗಲಿ, ನರಪಿಳ್ಳೆಯಾಗಲಿ ಸುಳಿಯಲಿಲ್ಲ. ಕಾರಿನಲ್ಲಿ ಇದ್ದಬದ್ದ ಸ್ನ್ಯಾಕ್ಸ್ ಎಲ್ಲ ಮುಗಿದವು. ಹೆಂಡತಿಗೆ, ಜೇಮ್ಸ್‌ಗೆ ಊಟವಿಲ್ಲ. ಬೇಬಿ ಪುಡ್ ಸಹ ಮುಗಿದ ಮೇಲೆ ತಾಯಿ ಏಳು ತಿಂಗಳ ಕೂಸಿನ ಜೊತೆಗೆ ನಾಲ್ಕು ವರ್ಷದ ಮಗಳಿಗೂ ಹಾಲೂಡಿಸಲು ಪ್ರಾರಂಭಿಸಿದಳು. ಬೆಚ್ಚಗಿರಲು ನಾಲ್ಕೂ ಜನ ತಬ್ಬಿಕೊಂಡು ಕಾರಿನಲ್ಲಿ ಮಲಗುತ್ತಿದ್ದರು. ತೀರಾ ಚಳಿಯಾದಾಗ ಕಾರಿನ ಒಂದೊಂದೆ ಚಕ್ರವನ್ನು ಕಳಚಿ ಅದರ ಟೈರನ್ನು ಸುಟ್ಟರು. ನಾಲ್ಕು ಚಕ್ರಗಳ ಜೊತೆಗೆ ಸ್ಪೇರ್ (ಹೆಚ್ಚುವರಿ) ಟೈರನ್ನೂ ಸುಟ್ಟರು. ಜೇಮ್ಸ್ ಸುತ್ತಮುತ್ತಲಿನ ಕಾಡುಹಣ್ಣುಗಳನ್ನು ತಿನ್ನಲು ಪ್ರಯತ್ನಿಸಿದ. ಕೊನೆಕೊನೆಗೆ ಯಾವುದು ವಿಷ ಯಾವುದು ವಿಷವಲ್ಲ ಎಂಬುದು ಗೊತ್ತಾಗದ್ದರಿಂದಾಗಿ ಅವುಗಳನ್ನು ತಿನ್ನುವುದನ್ನು ನಿಲ್ಲಿಸಿದ. ರಾತ್ರಿ ಹಗಲುಗಳು ಉರುಳಿದವು. ಮೂರಾಯಿತು, ಐದಾಯಿತು, ಕೊನೆಗೆ ಏಳು ದಿನಗಳಾದವು! ಜೇಮ್ಸ್ ಧೈರ್ಯ ಮಾಡಿ, ಇದ್ದಬದ್ದ ಶಕ್ತಿಯೆನ್ನೆಲ್ಲ ಒಟ್ಟುಗೂಡಿಸಿಕೊಂಡು, ಹೆಂಡತಿಮಕ್ಕಳನ್ನು ಕಾರಿನಲ್ಲಿಯೆ ಬಿಟ್ಟು ಸಹಾಯ ತರುತ್ತೇನೆಂದು ಹೊರಟ.

ಜೇಮ್ಸ್ ಹೋಗಿ ಎರಡು ದಿನಗಳಾದರೂ ವಾಪಸು ಬರಲಿಲ್ಲ. ದಟ್ಟವಾದ ಕಾಡು. ಮೈಕೊರೆಯುವ ಚಳಿ. ಕೇಟಿಯ ಎರಡು ಕಾಲ್ಬೆರಳುಗಳು ಶೀತದಿಂದಾಗಿ ಪ್ರಾಸ್ಟ್‌ಬೈಟ್‌ಗೆ ತುತ್ತಾಗಿದ್ದವು. ತನ್ನ ಹೊಟ್ಟೆಗೆ ಏನಿಲ್ಲದಿದ್ದರೂ ಈ ತಾಯಿ ಎರಡೂ ಮಕ್ಕಳಿಗೆ ಎದೆ ಬಸಿದು ಹಾಲೂಡಿಸುತ್ತಿದ್ದಳು. ಒಂಬತ್ತನೆ ದಿನ ತಾವಿದ್ದ ಜಾಗದ ಮೇಲೆ ಹೆಲಿಕಾಪ್ಟರ್ ಒಂದು ಸುತ್ತು ಹಾಕುತ್ತಿರುವುದನ್ನು ಗಮನಿಸಿ ತಮ್ಮಲ್ಲಿದ್ದ ಕೊಡೆಯನ್ನು ಹಿಡಿದುಕೊಂಡು ಹೊರಗೆ ಬಂದು ಅದನ್ನು ಅತ್ತ ಇತ್ತ ಬೀಸಲಾರಂಭಿಸಿದಳು. ಆ ಹೆಲಿಕಾಪ್ಟರ್ ಸ್ಯಾನ್ ಫ್ರಾನ್ಸಿಸ್ಕೊದ ಜೇಮ್ಸ್‌ನ ಮನೆಯವರು ಅವರನ್ನು ಹುಡುಕಲು ಬಾಡಿಗೆಗೆ ಪಡೆದದ್ದಾಗಿತ್ತು. ಪೈಲಟ್ ಕಣ್ಣಿಗೆ ಕೊಡೆ ಬೀಸುತ್ತಿರುವುದು ಕಾಣಿಸಿತು. ಮುಂದಿನ ಒಂದೆರಡು ಗಂಟೆಗಳಲ್ಲಿ ತಾಯಿ ಮತ್ತು ಮಕ್ಕಳಿಬ್ಬರೂ ಸುರಕ್ಷಿತ ಸ್ಥಾನ ಸೇರಿಕೊಂಡರು.

ನಂತರ ಎರಡು ದಿನಗಳ ಕಾಲ ಕುದುರೆಗಳ ಮೇಲೆ, ಸ್ನೋಮೊಬೈಲ್‌ಗಳ ಮೇಲೆ, ಹೆಲಿಕಾಪ್ಟರ್ ಬಳಸಿ, ಕೊನೆಗೆ ಉಪಗ್ರಹಗಳನ್ನು ಸಹ ಬಳಸಿ ಜೇಮ್ಸ್‌ನನ್ನು ಹುಡುಕುವ ಕಾರ್ಯ ಮೊದಲಾಯಿತು. ನಾನಿರುವ ಸಿಲಿಕಾನ್ ಕಣಿವೆಯ ಟಿವಿಗಳಲ್ಲಿ, ಪತ್ರಿಕೆಗಳಲ್ಲಿ, ಇಲ್ಲಿನವರು ಓದುವ ವೆಬ್‌ಸೈಟ್‌ಗಳಲ್ಲಿ ಇದೇ ಸುದ್ದಿ. ಕೊನೆಕೊನೆಗೆ ರಾಷ್ಟ್ರೀಯ ಸುದ್ದಿಯೂ ಆಗಿಬಿಟ್ಟಿತು. ಒಂದು ದಿನದ ನಂತರ ಜೇಮ್ಸ್‌ನ ಪ್ಯಾಂಟೊಂದು ಸಿಕ್ಕ ಸುದ್ದಿ ಬಂತು. ಇದು ಆತ ತಮ್ಮನ್ನು ಹುಡುಕುವವರಿಗಾಗಿ ಬಿಟ್ಟಿರುವ ಕ್ಲೂ ಇರಬಹುದು ಎಂದರು ಪೋಲಿಸರು. ಇನ್ನೊಂದು ದಿನ ಅಲ್ಲೆಲ್ಲ ಅಂಗುಲಂಗುಲ ಜಾಲಾಡಿಸಿದ ಮೇಲೆ ಕಡಿದಾದ ಆಳವಾದ, ದುರ್ಗಮವಾದ ಕಮರಿಯೊಂದರಲ್ಲಿ ಜೇಮ್ಸ್‌ನ ಶವ ಸಿಕ್ಕಿತು. ಜೇಮ್ಸ್‌ನ ಶವ ಸಿಕ್ಕಿದ ಜಾಗ ಆತನ ಕಾರು ಇದ್ದ ಸ್ಥಳದಿಂದ ಕೇವಲ ಅರ್ಧ ಮೈಲಿ ಮಾತ್ರ ದೂರವಿತ್ತು. ಆದರೂ, 40 ಕ್ಕಿಂತ ಹೆಚ್ಚು ಪೋಲಿಸರು ಆತನ ಹೆಂಡತಿಮಕ್ಕಳು ಸಿಕ್ಕ ಎರಡು ದಿನಗಳ ನಂತರ ಆತನನ್ನು ಹುಡುಕಲು ಸಾಧ್ಯವಾಯಿತು ಅಂದರೆ ಅ ಬೆಟ್ಟಗುಡ್ಡಗಳ ಕಾಡಿನ ದಟ್ಟತೆ, ಅಲ್ಲಿನ ಕಡಿದಾದ ಕಮರಿಗಳು, ಹಿಮ, ಇವೆಲ್ಲವನ್ನೂ ನಾವು ಊಹಿಸಿಕೊಳ್ಳಬಹುದು! ಆಷ್ಟೇ ದೂರದಲ್ಲಿ ಆತನ ಶವ ಸಿಕ್ಕರೂ, ಅಲ್ಲಿ ಹೆಣವಾಗಿ ಬೀಳುವುದಕ್ಕಿಂತ ಮೊದಲು ಜೇಮ್ಸ್ 17 ಕಿ.ಮಿ. ದೂರ ಹಿಮಾವೃತ ಬೆಟ್ಟಗುಡ್ಡಗಳನ್ನೆಲ್ಲ ಅಲೆದಿದ್ದನಂತೆ!

ಅಮೇರಿಕ ಎಂದ ತಕ್ಷಣ ಅದೊಂದು ಸಮೃದ್ಧವಾದ, ಅವಕಾಶಗಳು ಎಲ್ಲೆಂದರಲ್ಲಿ ಹುಡುಕಿಕೊಂಡು ಬರುವ, ಸುಲಭವಾಗಿ ಜೀವನ ಸಾಗಿಸಬಹುದಾದ ಶ್ರೀಮಂತ ದೇಶ ಎಂಬ ಕಲ್ಪನೆ ಹೊರಗಿನ ಬಹಳ ಜನರಿಗೆ ಇರುವುದು ಸುಳ್ಳಲ್ಲ. ಭಾರತಕ್ಕಿಂತ ಸುಮಾರು ಮೂರ್ನಾಲ್ಕು ಪಟ್ಟು ದೊಡ್ಡದಾದ ಈ ದೇಶದ ಕೆಲವು ಕಡೆಗಳಲ್ಲಿ ಜೀವನ ಬಹಳ ಸವಾಲಿನದ್ದು. ಇದು ಜನರೊಡ್ಡುವ ಅಪಾಯವಾಗಲಿ, ಸವಾಲಾಗಲಿ ಅಲ್ಲ್ಲ; ಪ್ರಕೃತಿ ಒಡ್ಡುವುದು. ನಮ್ಮಲ್ಲೆ ಯಾಕೆ, ಇಲ್ಲೂ ಸಹ ಪ್ರತಿ ವರ್ಷ ಬೇಸಿಗೆಯ ಕಡುಬಿಸಿಲಿಗೆ ಜನ ಸಾಯುತ್ತಿರುತ್ತಾರೆ. ಕೇವಲ 50 ಲಕ್ಷ ಜನಸಂಖ್ಯೆಯ ಅರಿಜೋನಾ ರಾಜ್ಯದಲ್ಲಿ ಕಡುಬಿಸಿಲಿನ ಝಳಕ್ಕೆ ಸಿಕ್ಕಿ ಪ್ರತಿ ವರ್ಷ 30 ರಿಂದ 50 ಜನ ಸಾಯುತ್ತಾರೆ. ಬೇಸಿಗೆ ಕೊನೆಯಾದ ತಕ್ಷಣ ಬರುವ ಟೊರ್ನೆಡೊಗಳು, ಅಂದರೆ ಭಯಂಕರ ಸುಂಟರಗಾಳಿಗಳು, ಊರೂರುಗಳನ್ನೆ ಬುಡಮೇಲು ಮಾಡಿ ಹತ್ತಾರು ಜನರ ಜೀವ ತೆಗೆಯುವುದಲ್ಲದೆ ಸಾವಿರಾರು ಜನರ ಜೀವಮಾನದ ದುಡಿಮೆಯನ್ನೆ ನಾಶ ಮಾಡುತ್ತವೆ. ಟೊರ್ನೆಡೋಗಳನ್ನು ಆಧರಿಸಿದ ಪ್ರಸಿದ್ಧ ಚಲನಚಿತ್ರ ಟ್ವಿಸ್ಟರ್‌ನಲ್ಲಿ ಬರುವ ದೃಶ್ಯಗಳು ಅವಾಸ್ತವಿಕವೇನಲ್ಲ! ಅದೇ ಸಮಯದಲ್ಲಿ ಪೂರ್ವದಲ್ಲಿ ಮತ್ತು ಆಗ್ನೇಯದ ಕರಾವಳಿಯಲ್ಲಿ ಅಪ್ಪಳಿಸುವ ಚಂಡಮಾರುತಗಳದ್ದು ಇನ್ನೂ ಭೀಕರ ಆಟಾಟೋಪ. ಜನ ಎದ್ದುಬಿದ್ದು ಮನೆಮಠ ತೊರೆದು ನೂರಾರು ಮೈಲಿ ಹೋಗುವ ಸ್ಥಿತಿ ಬಂದು ಬಿಡುತ್ತದೆ ಕೆಲವೊಮ್ಮೆ. ಕಳೆದ ವರ್ಷ ಅಪ್ಪಳಿಸಿದ ಕತ್ರೀನಾ ಅಮೇರಿಕವನ್ನು ಮೊಣಕಾಲ ಮೇಲೆ ನಿಲ್ಲಿಸಿದ್ದೆ ಇದಕ್ಕೆ ತಾಜಾ ಉದಾಹರಣೆ.

ಇನ್ನು ಹಿಮ ಬೀಳುವ ಕತೆ. ಉತ್ತರದ ಕಡೆಗಿರುವ ರಾಜ್ಯಗಳಲ್ಲಿ ಚಳಿಗಾಲದಲ್ಲಿ ಒಂದೆರಡು ಗಂಟೆಗಳಲ್ಲಿ ಒಂದೆರಡು ಅಡಿಯಷ್ಟು ಎತ್ತರದ ಹಿಮ ಬಿದ್ದು ಬಿಡುತ್ತದೆ. ಕೆಲವು ಸಲ ಮೂರ್ನಾಲ್ಕು ಅಡಿ ಬಿದ್ದು ಮನೆಯ ಬಾಗಿಲು ತೆರೆದು ಹೊರಬರಲಾಗದ ಹಾಗೆ ಮಾಡಿಬಿಡುತ್ತದೆ. ಕಾರಿನಲ್ಲಿ ಕುಳಿತಿದ್ದರೂ ಶೀತಚಳಿ ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಅಂತಹ ಹಿಮದಲ್ಲಿ ಸಂಪೂರ್ಣವಾಗಿ ಅನೇಕ ಪದರುಗಳ ಬಟ್ಟೆಗಳನ್ನು ಧರಿಸಿ ಸಂಪೂರ್ಣವಾಗಿ ಮೈಮುಚ್ಚಿಕೊಳ್ಳದೆ ಹೊರಗೇನಾದರೂ ಬಂದರೆ ಹತ್ತಾರು ನಿಮಿಷಗಳಲ್ಲಿ frostbite ಬರುತ್ತದೆ. ಇದೇನೆಂದರೆ, ಶೀತಕ್ಕೆ ಸಿಕ್ಕಿದ ಭಾಗಕ್ಕೆ ರಕ್ತಚಲನೆ ಸ್ಥಗಿತಗೊಂಡು, ಆಮ್ಲಜನಕವಿಲ್ಲದೆ, ಅಲ್ಲಿನ ಜೀವಕೋಶಗಳೆಲ್ಲ ಸತ್ತು ಹೋಗಿ ಆ ಭಾಗ ಕಪ್ಪು ಬಣ್ಣಕ್ಕೆ ತಿರುಗಿ, ಸಂಪೂರ್ಣ ಸ್ವಾಧೀನತೆ ಕಳೆದುಕೊಳ್ಳುತ್ತದೆ. ಹಿಮದಲ್ಲಿ ಗಾಡಿ ಸಿಕ್ಕಿ ಹಾಕಿಕೊಂಡರೆ ನಮ್ಮಲ್ಲಿ ಹಳ್ಳಿಗಾಡಿನ ಕೆಸರಿನಲ್ಲಿ ತುಂಬಿದ ಲಾರಿ ಹೂತುಕೊಂಡ ಹಾಗೆ. ಸ್ಟ್ಯಾಂಡ್ ಹಾಕಿದ ಸೈಕಲ್‌ನ ಹಿಂದಿನ ಚಕ್ರ ತಿರುಗುವಷ್ಟು ಸರಾಗವಾಗಿ ಚಕ್ರಗಳು ತಿರುಗುತ್ತವೆ, ಅಷ್ಟೆ. ಮೇಲಕ್ಕೆಳೆಯಲು ಇನ್ನೊಂದು ಗಾಡಿಯೆ ಬರಬೇಕು. ಭೂಕಂಪವಾಗಿ ವಾರದ ಬಳಿಕವೂ ಬದುಕುಳಿದವರ ಕತೆಗಳಂತೆ ಹಿಮದಲ್ಲಿ ಎಲ್ಲೊ ಕಳೆದುಹೋಗಿ ಬದುಕಿದವರ, ಸತ್ತವರ ಕತೆಗಳು ಪ್ರತಿ ವರ್ಷವೂ ಇಲ್ಲಿ ಕೇಳಿಬರುತ್ತಿರುತ್ತವೆ.

ಇಂತಹ ಹಿಮ ಸುರಿಯುವ ವಿಸ್ಕಾನ್ಸಿನ್ ರಾಜ್ಯದಲ್ಲಿ ಒಂದು ಚಳಿಗಾಲವನ್ನು ನಾನು ಕಳೆದಿದ್ದೆ. ಆಗ ಅಲ್ಲಿದ್ದ ಅಮೇರಿಕನ್ ಸಹೋದ್ಯೋಗಿಗಳೆಲ್ಲರು ನನಗೆ ಒಂದು ಹಿತವಚನ ಹೇಳುತ್ತಿದ್ದರು: "ಕಾರಿನಲ್ಲಿ ಯಾವಾಗಲು ಒಂದು ಬ್ಲ್ಯಾಂಕೆಟ್ ಇಟ್ಟಿರು, ಲೈಟರ್ ಇಟ್ಟಿರು, ಒಂದಷ್ಟು ಸ್ನ್ಯಾಕ್ಸ್ ಮತ್ತು ಚಾಕೊಲೆಟ್ ಇಟ್ಟಿರು, ಯಾವಾಗ ಎಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೊ ಗೊತ್ತಿಲ್ಲ, ಎಲ್ಲಾದರು ಹೀಗೆ ಕಳೆದುಹೋದರೆ ಸಹಾಯ ಬರುವ ತನಕ ಕಾರಿನಲ್ಲೆ ಇರಬೇಕಾಗುತ್ತದೆ, ಮೊದಲೆ ಸಿದ್ಧವಾಗಿರುವುದು ಒಳ್ಳೆಯದು," ಇತ್ಯಾದಿ. ನಾನು ಇದ್ದದ್ದು ಕೇವಲ ಹತ್ತು ಸಾವಿರ ಜನಸಂಖ್ಯೆ ಇದ್ದ ಪಟ್ಟಣದಲ್ಲಿ. ಅಂತಹ ಊರುಗಳಿಂದ ಹತ್ತಾರು ಮೈಲಿ ದೂರ ಹೋದರೆ ಸಾಕು ಗಂಟೆಗಟ್ಟಲೆ ಜನ ಸಂಚಾರ ಕಾಣಿಸುವುದಿಲ್ಲ. ಕಾರು ಓಡಿಸುವಾಗ ಸ್ವಲ್ಪ ಯಾಮಾರಿ ಬದಿಯಲ್ಲಿರುವ ಹಿಮದ ಮೇಲೇನಾದರು ಚಕ್ರ ಹತ್ತಿದರೆ ಕಾರು ಕಂಟ್ರೋಲಿಗೆ ಸಿಗುವುದಿಲ್ಲ. ಕಾರಿನ ಚಕ್ರಗಳು ಸ್ನೋಟೈರ್ ಆಗಿಲ್ಲದಿದ್ದಲ್ಲಿ, ಅವುಗಳಿಗೆ ಸ್ಟೀಲ್ ಚೈನ್ಸ್ ಹಾಕಿಲ್ಲದಿದ್ದಲ್ಲಿ, ಅಥವ ಆ ಕಾರು 4-ವ್ಹೀಲರ್ ಆಗಿಲ್ಲದಿದ್ದಲ್ಲಿ, ಮತ್ತೆ ರಸ್ತೆಯ ಮೇಲಕ್ಕೆ ಬರುವುದು ಕನಸೇ ಸರಿ. ಸೆಲ್ ಫೋನ್ ಇದ್ದು, ಅದು ಕೆಲಸ ಮಾಡುತ್ತಿದ್ದರೆ ಪರವಾಗಿಲ್ಲ. ಇಲ್ಲದಿದ್ದಲ್ಲಿ ಆಗ ಮಾಡಬಹುದಾದದ್ದೇನೆಂದರೆ ಆ ರಸ್ತೆಯಲ್ಲಿ ಓಡಾಡುವ ಯಾರ ಕಣ್ಣಿಗಾದರೂ ಬೀಳುವ ಆಸೆಯಿಟ್ಟುಕೊಂಡು, ಹಾಕಿಕೊಂಡಿರುವ ಜಾಕೆಟ್ ಸಾಲದೆ ಇದ್ದರೆ ಚಾದರವನ್ನು ಹೊದ್ದಿಕೊಂಡು, ಕಾರಿನಲ್ಲಿರುವುದನ್ನು ತಿಂದುಕೊಂಡು, ಆದಷ್ಟು ಬೆಚ್ಚಗಿರಲು ಎಲ್ಲಾ ಪ್ರಯತ್ನ ಮಾಡುತ್ತ ಕಾಲ ತಳ್ಳುವುದು. ಅಲ್ಲೇನಾದರು ಮತ್ತೆ ಜೋರಾಗಿ ಹಿಮ ಸುರಿಯಲು ಪ್ರಾರಂಭವಾದರೆ ಐದತ್ತು ಅಡಿಗಿಂತ ಮುಂದಕ್ಕೆ ಏನಿದೆ ಎಂದೇ ಕಾಣಿಸುವುದಿಲ್ಲ. ರಸ್ತೆಯಿಂದ 20-30 ಅಡಿ ದೂರಕ್ಕೆ ಇಳಿದುಬಿಟ್ಟಿದ್ದರೆ ಕೆಲವೊಮ್ಮೆ ಆ ರಸ್ತೆಯಲ್ಲಿ ನಿಧಾನಕ್ಕೆ ಚಲ್ಲಿಸುವ ವಾಹನಗಳ ಕಣ್ಣಿಗೂ ಬೀಳುವುದು ಕಷ್ಟ. ಪರಮ ಅದೃಷ್ಟ ಹೀನತೆ ಎಂದರೆ ಅದೆ.

ಜೀವನವನ್ನು ಹಿಮ ಇಷ್ಟು ಕಠೋರವಾಗಿಸುವ ಭಾಗಗಳಿಂದ ಬಂದವರು ಬೇಕಾದಷ್ಟು ಮುಂಜಾಗರೂಕತೆ ತೆಗೆದುಕೊಂಡಿರುತ್ತಾರೆ. ಜೇಮ್ಸ್‌ನ ಅನುಭವ ಮತ್ತು ಆತನ ಹಿಂದಿನ ಪ್ರವಾಸಾನುಭವಗಳನ್ನು ನೋಡಿದರೆ ಇವೆಲ್ಲ ಗೊತ್ತಿರುವ ಸಾಧ್ಯತೆ ಇದ್ದೇ ಇದೆ. ಆದರೆ ಆತ ತಾನು ಹೋಗುತ್ತಿರುವ ರಸ್ತೆಯಲ್ಲಿ ಕಾರು ಸಿಕ್ಕಿಹಾಕಿಕೊಳ್ಳುವುದನ್ನು ಊಹಿಸಿರದೆ ಇರಬಹುದು. ಯಾಕೆಂದರೆ ಹಿಮ ಋತು ಈಗ ತಾನೆ ಪ್ರಾರಂಭವಾಗಿದೆ. ಆತ ಹೋದ ಭಾಗದಲ್ಲಿ ಇಲ್ಲಿಯತನಕ ಒಂದೆರಡು ಸಾರಿ ಮಾತ್ರ ಹಿಮ ಬಿದ್ದಿರಬಹುದು. ಬಿದ್ದದ್ದು ಕರಗಿ ಹೋಗಿರಬಹುದು. ಹಾಗೆಂದು ಧೈರ್ಯ ಮಾಡಿ ಹೋಗಿದ್ದೆ ಜೇಮ್ಸ್‌ನ ಸಾವಿಗೆ ಮತ್ತು ಆತನ ಕುಟುಂಬ ಅನುಭವಿಸಿದ ಆ 9 ದಿನಗಳ ನರಕಾನುಭವಕ್ಕೆ ಕಾರಣವಾಯಿತೇನೊ. ಎಷ್ಟೊ ಸಲ ನಮ್ಮ ಲೆಕ್ಕಾಚಾರಗಳು ಕೈಕೊಡುತ್ತವೆ. ಆದರೆ ಸಣ್ಣಪುಟ್ಟ ಎಂದು ಭಾವಿಸುವ ಇಂತಹವುಗಳೆ ಜೀವ ತೆಗೆಯುವ ದುಬಾರಿ ಲೆಕ್ಕಾಚಾರಗಳಾಗಿಬಿಡುವುದೊಂದು ದೌರ್ಭ್ಯಾಗ್ಯ.

ಅಮೇರಿಕ ಎಲ್ಲಾ ಕಾಲದಲ್ಲಿಯೂ ಸ್ವರ್ಗವೇನಲ್ಲ. ಇಲ್ಲೂ ಅಪಾಯಗಳಿವೆ. ಈ ದೇಶದಲ್ಲಿಯೂ, ಅರ್ಧ ಮೈಲಿ ದೂರದಲ್ಲಿರುವವನನ್ನು 40 ಕ್ಕೂಹೆಚ್ಚು ಜನ ಹಿಮದ ಮೇಲೆ ಓಡುವ ಸ್ನೋಮೊಬೈಲ್ ವಾಹನ ಬಳಸಿ, ಕುದುರೆಗಳನ್ನು ಉಪಯೋಗಿಸಿ, ಹೆಲಿಕಾಪ್ಟರ್ ಏರಿ, ಉಪಗ್ರಹಗಳ ಸಹಾಯ ಪಡೆದು, ಮೈಶಾಖವನ್ನು ಕಂಡುಹಿಡಿಯುವ ಹಾಟ್‌ಸ್ಪಾಟ್‌ನಂತಹ ಓದಿಬರೆದರೂ ಅರ್ಥವಾಗದಂತಹ ಅತ್ಯಾಧುನಿಕ ತಂತ್ರಜ್ಞಾನ ಬಳಸಿಯೂ ಎರಡು ದಿನಗಳ ನಂತರವಷ್ಟೆ ಕಂಡುಹಿಡಿಯಲು ಸಾಧ್ಯವಾಯಿತು. ಇದೇನೂ ಉತ್ಪ್ರೇಕ್ಷೆಯಲ್ಲ! ಪ್ರಕೃತಿಯ ಮುಂದೆ ಮಾನವ ಕುಬ್ಜಾತಿಕುಬ್ಜ, ಅಲ್ಲವೆ?

Dec 2, 2006

60 ಜನರಲ್ಲಿ ಒಬ್ಬನ ಬಳಿ AK-47

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಡಿಸೆಂಬರ್ 15, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಇಲ್ಲಿನ ನ್ಯಾಷನಲ್ ಪಬ್ಲಿಕ್ ರೇಡಿಯೊ (NPR.org) ಅಮೇರಿಕದ ಪ್ರಗತಿಪರ, ಉದಾರವಾದಿ ಧೋರಣೆಯ, ಪಬ್ಲಿಕ್ ರೇಡಿಯೊ ಸ್ಟೇಷನ್‌ಗಳ ಸದಸ್ಯತ್ವ ಹೊಂದಿರುವ ಸ್ವತಂತ್ರವಾದ, ಲಾಭರಹಿತ ರೇಡಿಯೊ ಸಂಸ್ಥೆ. ಇಂತಹದೊಂದು ರೇಡಿಯೊ ನಮ್ಮ ದೇಶದಲ್ಲಿ ಬರಲು ಯಾವ ಕಾಲವಾಗುತ್ತದೊ ಗೊತ್ತಿಲ್ಲ. ಆದರೆ ಇಂತಹ ರೇಡಿಯೊದ ಅವಶ್ಯಕತೆ ಮಾತ್ರ ಪ್ರತಿ ದೇಶಕ್ಕೂ ಇದೆ. ಪ್ರಸ್ತುತ ವಿಷಯಗಳ ಬಗ್ಗೆ ಆಸಕ್ತಿ ಇರುವ ಇಲ್ಲಿನ ಕೆಲವು ಭಾರತೀಯರೂ ತಾವು ಕಾರು ಚಲಾಸುವಾಗ ಇದನ್ನು ಆಲಿಸಲು ಬಯಸುತ್ತಾರೆ.

ಈ ರೇಡಿಯೋದಲ್ಲಿ ಹೆಚ್ಚು ಕಮ್ಮಿ ಪ್ರತಿ ದಿನವೂ ಒಂದಲ್ಲ ಒಂದು ಪುಸ್ತಕದ ಬಗ್ಗೆ ಕಾಲು ಗಂಟೆ, ಅರ್ಧ ಗಂಟೆಯಾದರೂ ಮೌಲಿಕವಾದ ಕಾರ್ಯಕ್ರಮ ಇದ್ದೇ ಇರುತ್ತದೆ. ಪುಸ್ತಕ ಪರಿಚಯದ ಜೊತೆಗೆ ಲೇಖಕರ ಸಂದರ್ಶನ ಇರುವ ಕಾರ್ಯಕ್ರಮ ಅದು. ಎರಡು ವಾರದ ಹಿಂದೆ ಈ ಸಾರಿಯ ಪ್ರತಿಷ್ಠಿತ ಬುಕರ್ ಪ್ರಶಸ್ತಿ ಪಡೆದ ಭಾರತೀಯ ಸಂಜಾತ ಇಂಗ್ಲಿಷ್ ಕಾದಂಬರಿಕಾರ್ತಿ ಕಿರಣ್ ದೇಸಾಯಿಯವರ ಸಂದರ್ಶನವಿತ್ತು. ಅದೇ ಕಾರ್ಯಕ್ರಮದಲ್ಲಿ ಬುಕರ್ ಪ್ರಶಸ್ತಿಗೆ ಸ್ವತಃ ಮೂರು ಸಲ ನಾಮಕರಣಗೊಂಡಿದ್ದ, ಕಿರಣ್‌ರ ತಾಯಿ ಅನಿತಾ ದೇಸಾಯಿಯವರೂ ಪಾಲ್ಗೊಂಡಿದ್ದರು. ಪ್ರತಿಭಾವಂತ ಅಮ್ಮ-ಮಗಳು ಪಾಲ್ಗೊಂಡಿದ್ದ ವಿಶಿಷ್ಠ ಕಾರ್ಯಕ್ರಮ ಅದು. ಈ ರೇಡಿಯೋದಲ್ಲಿ ಬರುವ ಸಂದರ್ಶನಗಳಲ್ಲಿ ಯಾವುದೆ ಚಮಚಾಗಿರಿ, ಹೊಗಳುವಿಕೆ, ಅನವಶ್ಯಕ ತೆಗಳುವಿಕೆ ಇರುವುದಿಲ್ಲ. ಆತ್ಮೀಯವಾದ, ಆದರೆ ನೇರವಾದ, ವಸ್ತುನಿಷ್ಠ ಸಂದರ್ಶನಗಳು ಅವು.

ಇತ್ತೀಚೆಗೆ ತಾನೆ ಅಮೇರಿಕದ ಲ್ಯಾರಿ ಕಹನೆರ್ ಎಂಬ ಪತ್ರಕರ್ತರು ಬರೆದಿರುವ "AK-47: The Weapon that Changed the Face of War" ಎಂಬ ಪುಸ್ತಕ ಪ್ರಕಟವಾಗಿದೆ. ಎನ್.ಪಿ.ಆರ್.ನಲ್ಲಿ ಕಳೆದ ವಾರ ಈ ಲೇಖಕರ ಸಂದರ್ಶನವಿತ್ತು. ಮಿಖಾಯಿಲ್ ಕಲೊಷ್ನಿಕೊವ್ ಎಂಬ ಸೋವಿಯತ್ ರಷ್ಯಾದ ಗನ್ ಡಿಸೈನರ್ 1947 ರಲ್ಲಿ ವಿನ್ಯಾಸ ಮಾಡಿದ ಆಟೊಮ್ಯಾಟ್ ಕಲೊಷ್ನಿಕೊವ್ - 47 ಎಂಬ ಆಯುಧ ಅಲ್ಲಿಂದೀಚೆಗೆ ಪ್ರಪಂಚದಲ್ಲಿನ ದೇಶದೇಶಗಳ ನಡುವಿನ ಯುದ್ದವನ್ನಷ್ಟೆ ಅಲ್ಲ, ಅನೇಕ ಅಂತರ್ಯುದ್ದಗಳ ದಿಕ್ಕುದೆಸೆಗಳನ್ನೆ ಬದಲಾಸಿದ ವಿವರಗಳು ಈ ಪುಸ್ತಕದಲ್ಲಿವೆ.

AK-47 ನ ಪ್ರಭಾವ ಎಷ್ಟಿದೆಯೆಂದರೆ, ಲೆಬನಾನ್‌ನ ಮುಸ್ಲಿಮ್ ಉಗ್ರಗಾಮಿಗಳ ರಾಜಕೀಯ ಸಂಸ್ಥೆಯಾದ ಹಿಜಬುಲ್ಲಾದ ಧ್ವಜದಲ್ಲಿ ಮಾತ್ರವಲ್ಲದೆ ಮೊಝಾಂಬಿಕ್ ದೇಶದ ರಾಷ್ಟ್ರಧ್ವಜದಲ್ಲಿಯೂ ಅದು ಸ್ಥಾನ ಪಡೆದುಕೊಂಡುಬಿಟ್ಟಿದೆ. ರ್ಯಾಪ್ ಸಂಗೀತದ ಹಾಡುಗಳು ಈ ಗನ್ನನ್ನು ವೈಭವೀಕರಿಸಿ ಹಾಡಿದ್ದರೆ, ಅನೇಕ ಭಾಷೆಗಳಲ್ಲಿನ ಗ್ಯಾಂಗ್‌ಸ್ಟರ್, ಆಕ್ಷನ್ ಮೂವಿಗಳಲ್ಲಿ ಕನ್ನಡದಲ್ಲಿ ಕತ್ತಿ-ಮಚ್ಚು-ಲಾಂಗು ಬಳಸುವ ಹಾಗೆ ಈ ಗನ್ನನ್ನು ಬಳಸಲಾಗಿದೆ. ನಮ್ಮದೆ ಕನ್ನಡದಲ್ಲಿ ಶಿವರಾಜ್ ಕುಮಾರ್ ನಾಯಕ ನಟರಾಗಿ AK-47 ಹೆಸರಿನ ಚಲನಚಿತ್ರದಲ್ಲಿ ನಟಿಸಿದ್ದಾರೆ. ಓಂ ಪ್ರಕಾಶ್‌ರ ನಿರ್ದೇಶನದ ಆ ಸಿನೆಮಾದ ಪೋಸ್ಟರ್‌ಗಳಲ್ಲಿ ಅರೆಬರೆ ಕತ್ತಲಿನಲ್ಲಿ ಶಿವಣ್ಣ ಕೇವಲ ಅಂಡರ್‌ವೇರ್‌ನಲ್ಲಿ ಬೆತ್ತಲೆಯಾಗಿ ಕುಳಿತಿರುವ ಚಿತ್ರ ಅನೇಕರಿಗೆ ಈಗಲೂ ಜ್ಞಾಪಕದಲ್ಲಿರಬಹುದು.

ಮಿಖಾಯಿಲ್ ಕಲೊಷ್ನಿಕೊವ್ ಕಮ್ಯುನಿಸ್ಟ್ ರಷ್ಯಾದ ಸೈನಿಕನಾಗಿದ್ದವನು. ಎರಡನೆ ವಿಶ್ವಯುದ್ದದಲ್ಲಿ ಜರ್ಮನ್ ಮತ್ತು ಅಮೇರಿಕದ ಆಟೊಮ್ಯಾಟಿಕ್ ಮೆನ್ ರೈಫಲ್‌ಗಳು ಅನೇಕ ಸಲ ನಿರ್ಣಾಯಕ ಪಾತ್ರ ವಹಿಸಿದ್ದವು. ಅವುಗಳ ಪ್ರಭಾವವನ್ನು ಆ ಮಹಾಯುದ್ದದ ಸಮಯದಲ್ಲಿ ಸ್ವತಃ ನೋಡಿದ್ದ ಕಲೊಷ್ನಿಕೊವ್ ತನ್ನ ತಾಯಿನಾಡಿನ ಸೈನಿಕರಿಗಾಗಿ 1947 ರಲ್ಲಿ ಈ ಆಟೊಮ್ಯಾಟಿಕ್ ಮೆಷಿನ್ ಗನ್ನನ್ನು ವಿನ್ಯಾಸಗೊಳಿಸಿದ. ಆಗ ಆತನ ವಯಸ್ಸು ಕೇವಲ 28 ಮಾತ್ರವಾಗಿತ್ತು. ಈ ಆಯುಧದ ಗುಣಲಕ್ಷಣಗಳಿಂದ ಪ್ರಭಾವಿತವಾದ ರಷ್ಯಾ ಅನೇಕ ವರ್ಷಗಳ ಕಾಲ ಇದರ ಸುದ್ದಿಯನ್ನು ರಹಸ್ಯವಾಗಿ ಇಟ್ಟಿತ್ತು. ಕೇವಲ ತನ್ನ ಸೈನಿಕರಿಗೆ ಮಾತ್ರ ಒದಗಿಸಿ, ತನ್ನ ದೇಶದಲ್ಲಿ ಮಾತ್ರ ಬಳಸುತ್ತಿತ್ತು.

ರಷ್ಯ ಮೊದಲ ಬಾರಿಗೆ ಅದನ್ನು ಹೊರಪ್ರಪಂಚಕ್ಕೆ ಪರಿಚಯಿಸಿದ್ದು 1956 ರಲ್ಲಿ. ಆಗ ಪೂರ್ವ ಯೂರೋಪಿನ ಹಂಗರಿ ದೇಶ ರಷ್ಯಾದ ಅಧೀನದಲ್ಲಿತ್ತು. ತಮ್ಮ ದೇಶದಲ್ಲಿನ ರಷ್ಯಾದ ಉಸ್ತುವಾರಿಕೆಯನ್ನು ವಿರೋಧಿಸಿ ಹಾಗು ನೈಜ ಸಮಾಜವಾದನ್ನು ಆಗ್ರಹಿಸಿ ಹಂಗರಿ ದೇಶದಲ್ಲಿನ ಜನ ಆ ವರ್ಷ ದಂಗೆಯೆದ್ದರು. ವಿದ್ಯಾರ್ಥಿಗಳಿಂದ ಆರಂಭವಾದ ಚಳವಳಿಗೆ ಸರ್ಕಾರಿ ನೌಕರರು, ಪೋಲಿಸರು, ಕೊನೆಗೆ ಸಶಸ್ತ್ರ ಸೈನಿಕರೂ ಸೇರಿಕೊಂಡು ಬಿಟ್ಟರು. ರಷ್ಯಾದ ಸೈನಿಕರಿಗೂ ಹಂಗರಿ ದೇಶದ ಸಶಸ್ತ್ರ ನಾಗರಿಕರಿಗೂ ಬುಡಾಪೆಸ್ಟ್ ನಗರದಲ್ಲಿ ಯುದ್ಧವೆ ಆರಂಭವಾಗಿಬಿಟ್ಟಿತು. ಪೂರ್ವ ಯೋರೋಪ್‌ನಲ್ಲಿ ತನ್ನ ನಿಯಂತ್ರಣ ತಪ್ಪುವುದು ರಷ್ಯಾಕ್ಕೆ ಬೇಕಿರಲಿಲ್ಲ. ಪರಿಸ್ಥಿತಿ ಕೈಮೀರಿದ್ದನ್ನು ಗಮನಿಸಿದ ರಷ್ಯಾದ ಆಗಿನ ಮುಖ್ಯಸ್ಥ ನಿಕಿಟಾ ಖ್ರುಶ್ಚೆವ್ AK-47 ಗಳ ಸಹಿತ ಕೆಂಪುಸೈನ್ಯವನ್ನು ಕಳುಹಿಸಿದರು. ರಕ್ತದ ನದಿಯೆ ಹರಿತು. ಹಂಗರಿ ಜನರ ಆ ಸ್ವಾತಂತ್ರ್ಯ ಹೋರಾಟದಲ್ಲಿ AK-47 ನ ಗುಂಡಿನ ಮಳೆಗೆ ಸಿಲುಕಿ ಹಂಗರಿಯ 50000 ನಾಗರಿಕರು ಸತ್ತರೆ ಕೇವಲ 7 ಸಾವಿರ ರಷ್ಯಾ ಸೈನಿಕರು ಸತ್ತರು. ಗೆದ್ದದ್ದು ಆಯುಧಗಳ ಸಂಖ್ಯಾಬಲವಲ್ಲ; ಗೆದ್ದದ್ದು AK-47 ಬಳಸಿದವರು ಎನ್ನುವುದು ಇಲ್ಲಿ ಸೂಕ್ತ.

ಅಲ್ಲಿಂದೀಚೆಗೆ ಈ ಆಯುಧಕ್ಕೆ ಸರ್ಕಾರಗಳು ಮಾತ್ರವಲ್ಲ ಅನೇಕ ಉಗ್ರಗಾಮಿ ಸಂಘಟನೆಗಳು, ಮಾಫಿಯಾ ಗುಂಪುಗಳು, ನಕ್ಸಲೀಯರು, ಎಲ್ಲರೂ ಗಿರಾಕಿಗಳೆ. ಬಹಳ ಬಲಶಾಲಿಯಾದ, ಅಪಾಯಕಾರಿಯಾದ ಈ ಆಯುಧವನ್ನು ಬಳಸುವುದು ಮಾತ್ರ ಬಹಳ ಸುಲಭವಂತೆ. ಟ್ರೈನಿಂಗ್ ಕೈಪಿಡಿಯ ಅವಶ್ಯಕತೆಲ್ಲ. ಕಾರಣ? ಆಪರೇಟ್ ಮಾಡಬೇಕಾದ ಭಾಗಗಳು ಕೆಲವೆ ಕೆಲವು. ಕುದುರೆ ಎಳೆದು ಹಿಡಿದುಕೊಂಡಿದ್ದಷ್ಟು ಹೊತ್ತೂ ಗುಂಡಿನ ಮಳೆಯೆ! ಮೂವತ್ತು ಗುಂಡಿನ ಒಂದು ಮ್ಯಾಗಝೈನ್ ಮೂರು ಸೆಕೆಂಡಿನಲ್ಲಿ ಖಾಲಿ! ಒಂದು ಕಿಲೊ ಮೀಟರ್ ದೂರದ ತನಕ ಯಾರು ಅಡ್ದ ಬಂದರೂ ಖಲಾಸ್! ಜೊತೆಗೆ, ಈ ಗನ್ನು ರಿಪೇರಿ ಆಗುವುದೆ ಅಪರೂಪವಂತೆ.

ಈಗ ಸುಮಾರು ಹದಿನಾಲ್ಕು ದೇಶಗಳು ವಿವಿಧ ಮಾದರಿಯ AK-47 ಅನ್ನು ಉತ್ಪಾದಿಸುತ್ತಿವೆಯಂತೆ. AK-56 ಚೈನಾ ಉತ್ಪಾದಿಸುವ ಮಾದರಿ. ಅದನ್ನೆ ಅಕ್ರಮವಾಗಿ ಸಿನೆಮಾ ನಟ ಸಂಜಯ್ ದತ್ ಹೊಂದಿದ್ದದ್ದು. ಕೆಲವು ಕಡೆ ಕಾಳಸಂತೆಯಲ್ಲಿ ಸಾವಿರ ಎರಡು ಸಾವಿರಕ್ಕೆ ಈ ಆಯುಧ ಸಿಗುತ್ತದಂತೆ. ಪ್ರಪಂಚದ ಜನಸಂಖ್ಯೆ 600 ಕೋಟಿ. ಈಗ ಉಪಯೋಗದಲ್ಲಿರುವ AK-47 ನ ಸಂಖ್ಯೆ ಸುಮಾರು 10 ಕೋಟಿ ಎಂದು ಅಂದಾಜು. ಅಂದರೆ 60 ಜನಕ್ಕೆ ಒಬ್ಬನ ಬಳಿ ಈ ಮೇಷಿನ್ ಗನ್ ಇದೆ ಎಂದಾಯಿತು! ಅನೇಕ ದೇಶಗಳಲ್ಲಿ ಖಾಸಗಿ ವ್ಯಕ್ತಿಗಳು ಈ ಆಯುಧವನ್ನು ಹೊಂದುವುದು ಅಕ್ರಮ. ಅದನ್ನು ಗಣನೆಗೆ ತೆಗೆದುಕೊಂಡರೆ ಕೆಲವು ದೇಶಗಳಲ್ಲಿ ಮೂರ್ನಾಲ್ಕು ಜನಕ್ಕೆ ಒಬ್ಬನ ಬಳಿ, ಚಿಕ್ಕ ಮಕ್ಕಳ ಕೈಯಲ್ಲೂ ಈ ಆಯುಧ ಇರುವುದರ ಕಾರಣ ಗೊತ್ತಾಗುತ್ತದೆ.

ಈಗಲೂ ಬದುಕಿರುವ ಕಲೊಷ್ನಿಕೊವ್ ಇದರಿಂದ ಏನೂ ದುಡ್ಡು ಮಾಡಲಿಲ್ಲ. ಯಾಕೆಂದರೆ ಅದು ಕಮ್ಯುನಿಸ್ಟ್ ಸರ್ಕಾರದ ಸೊತ್ತಾಗಿತ್ತು. ಆದರೆ ಆ ಗನ್ನು ತಂದುಕೊಟ್ಟ ಹೆಸರಿನಿಂದಾಗಿ ದೇಶವಿದೇಶಗಳ ಆಯುಧ ಮಾರಾಟದ ಮಳಿಗೆಗಳಲ್ಲಿ ಆತನೀಗ ಸೆಲೆಬ್ರಿಟಿ. ಅವನ ಹೆಸರಿನಲ್ಲಿ, ಅವನ ಚಿತ್ರವನ್ನು ಬಾಟಲಿನ ಮೇಲೆ ಹೊಂದಿರುವ ಕಲೊಷ್ನಿಕೊವ್ ವೋಡ್ಕಾ ಈಗ ರಷ್ಯಾದಲ್ಲಿ ಲಭ್ಯವಂತೆ! ತನ್ನ ಹೆಸರಿನ ಗನ್ನನ್ನು ಅನೇಕ ಕ್ರಿಮಿನಲ್‌ಗಳು, ಭಯೋತ್ಪಾದಕರು, ಉಗ್ರಗಾಮಿಗಳು ಅಕ್ರಮ ಕೆಲಸಗಳಿಗೆ ಉಪಯೋಗಿಸುವುದರ ಬಗ್ಗೆ ವಿಷಾದ ವ್ಯಕ್ತಪಡಿಸುವ ಆತ. 'ಗನ್ನುಗಳು ಯಾರ ಕೈಗೆ ಸಿಗುತ್ತವೆ ಎನ್ನುವುದಕ್ಕೆ ವಿನ್ಯಾಸಕಾರ ಜವಾಬ್ದಾರನಲ್ಲ. ಅವುಗಳ ಉತ್ಪಾದನೆ ಮತ್ತು ರಪ್ತನ್ನು ನಿಯಂತ್ರಿಸುವ ಜವಾಬ್ದಾರಿ ಸರ್ಕಾರಗಳದ್ದು,' ಎನ್ನುತ್ತಾನೆ. ಆದರೆ, ಎಲ್ಲಾ ಸರ್ಕಾರಗಳೂ ಎಲ್ಲಾ ಸಮಯದಲ್ಲಿಯೂ ಜವಾಬ್ದಾರಿಂದ, ಮುಂದಾಲೋಚನೆಂದ, ಜನಹಿತದ ಕೆಲಸಗಳನ್ನಷ್ಟೆ ಮಾಡಿದರೆ, ಪ್ರಪಂಚದಲ್ಲಿ ಇಷ್ಟೆಲ್ಲಾ ರಕ್ತಪಾತ, ದೌರ್ಜನ್ಯ, ಹಿಂಸೆ, ಅನ್ಯಾಯ, ಯುದ್ದಗಳು, ನಡೆಯುತ್ತಿದ್ದವೆ?

Nov 26, 2006

ಶಿರವಿಲ್ಲದವರು ಮಾತ್ರ ಶಿರಸ್ತ್ರಾಣ ಬೇಡವೆನ್ನುತ್ತಾರೆ!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಡಿಸೆಂಬರ್ 8, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಆ ಮುದುಕನ ಹೆಸರು ಜಾರ್ಜ್ ವೆಲ್ಲರ್ ಎಂದು. 2003 ನೆ ಇಸವಿಯಲ್ಲಿ ಆತನ ವಯಸ್ಸು 86 ವರ್ಷ. ಆ ಮುಪ್ಪಾತಿಮುಪ್ಪಿನಲ್ಲೂ ತನ್ನ ಕಾರನ್ನು ತಾನೆ ಓಡಿಸುತ್ತಿದ್ದ! ಕ್ಯಾಲಿಫೋರ್ನಿಯ ರಾಜ್ಯದ ಸಾಂಟಾ ಮೋನಿಕ ಅವನ ಊರು. 2003 ರ ಜುಲೈ ತಿಂಗಳ 16 ರಂದು ಆ ಊರಿನಲ್ಲಿ ವಾರಕ್ಕೊಂದು ದಿನ ನಡೆಯುವ ರೈತರ ಸಂತೆ ನಡೆಯುತ್ತಿತ್ತು. ಹೆಚ್ಚು ಕಮ್ಮಿ ನಮ್ಮ ಊರಿನ ಸಂತೆಗಳಂತೆಯೆ ಇರುತ್ತವೆ ಅವು. ಯಾವುದಾದರು ಮುಖ್ಯ ರಸ್ತೆಯಲ್ಲಿ ಇಲ್ಲವೆ ವಿಶಾಲವಾದ ಪಾರ್ಕಿಂಗ್ ಸ್ಥಳಗಳಲ್ಲಿ ಏರ್ಪಡಿಸಿರುತ್ತಾರೆ. ಈ ಸಂತೆಗಳಲ್ಲಿ ತರಕಾರಿಗಳು ಇನ್ನೂ ತಾಜಾ ಆಗಿಯೆ ಸಿಗುವುದರಿಂದ ಬಹಳ ಜನಪ್ರಿಯ. ತಾವು ಬೆಳೆದದ್ದನ್ನು ಮಧ್ಯವರ್ತಿಗಳ ಸಹಾಯವಿಲ್ಲದೆ ನೇರವಾಗಿ ಮಾರಾಟ ಮಾಡುವ ಅವಕಾಶವಿರುತ್ತದೆ.

ಆ ಪಟ್ಟಣದ ಅರಿಝೋನ ರಸ್ತೆಯಲ್ಲಿ ಸಂತೆ ನಡೆಯುತ್ತದೆ. ರಸ್ತೆಯಾದ್ದರಿಂದ ಸಂತೆ ಪ್ರಾರಂಭವಾಗುವ ಸ್ಥಳದಲ್ಲಿ ಎರಡೂ ಕಡೆ ತಾತ್ಕಾಲಿಕವಾಗಿ ಮರದ ಅಡ್ಡಗಟ್ಟೆಗಳನ್ನು ಇಟ್ಟು ವಾಹನಗಳು ಬರದಂತೆ 'ಸ್ಟಾಪ್' ಸೂಚನಾಫಲಕಗಳನ್ನು ನಿಲ್ಲಿಸಿದ್ದರು. ವೆಲ್ಲರ್ ಅಂದು ತನ್ನ ದೊಡ್ಡ ಕೆಂಪು ಬ್ಯೂಕ್ ಕಾರಿನಲ್ಲಿ ಆ ರಸ್ತೆಗೆ ಬಂದವನೆ, ಬೇರೊಂದು ಕಾರಿನ ಹಿಂಬದಿಗೆ ಗುದ್ದಿ, ಅಡ್ಡವಾಗಿ ನಿಲ್ಲಿಸಿದ್ದ ಮರದ ಅಡ್ಡಗಟ್ಟೆಗಳನ್ನು ದಾಟಿಕೊಂಡು ನೇರವಾಗಿ ಸಂತೆಗೇ ನುಗ್ಗಿಬಿಟ್ಟ. ಮೊದಲೇ ಗಿಜಗುಡುತ್ತಿರುವ ಸ್ಥಳ. ಅಲ್ಲಿ ಗಂಟೆಗೆ 65 ರಿಂದ 95 ಕಿ.ಮಿ. ವೇಗದಲ್ಲಿ ಸುಮಾರು 1000 ಅಡಿ ದೂರ ನಿಲ್ಲದೆ ಓಡಿಸಿದ. ಇಷ್ಟು ದೂರವನ್ನು ಕೇವಲ 10 ಸೆಕೆಂಡುಗಳಲ್ಲಿ ಕ್ರಮಿಸಿದ. ಕೊನೆಗೂ ಕಾರು ನಿಂತದ್ದು ಯಾಕೆಂದರೆ ಅದಕ್ಕೆ ಒಂದು ದೇಹ ಸಿಕ್ಕಿಹಾಕಿಕೊಂಡು ಮುಂದಕ್ಕೆ ಹೋಗಲು ಆಗದ ಪ್ರಯುಕ್ತ!

ನಿರ್ಲಕ್ಷ್ಯವಾಗಿ ಓಡಿಸಿದ ಆ ಹತ್ತು ಸೆಕೆಂಡುಗಳಲ್ಲಿ ಗಾಯಗೊಂಡವರು 63 ಜನ. ಸತ್ತವರು? ಸರಿಯಾಗಿ ಹತ್ತು ಜನ. ಕಾರು ನಿಂತ ಮೇಲೆ ಅದರಿಂದ ಕೋಲು ಊರಿಕೊಂಡು ಇಳಿದ ವೆಲ್ಲರ್ ಯಾವುದೆ ಗಲಿಬಿಲಿಲ್ಲದೆ ಪಕ್ಕ ಇದ್ದವರನ್ನು, "ನಾನು ಎಷ್ಟು ಜನರಿಗೆ ಗತಿ ಕಾಣಿಸಿದೆ?" ಎಂದು ಶಾಂತವಾಗಿ ಕೇಳಿದ!

ನಂತರದ ದಿನಗಳಲ್ಲಿ ವೆಲ್ಲರ್‌ನ ವಕೀಲ ಇದು ಆಕಸ್ಮಿಕವಾಗಿ ಘಟಿಸಿದ ಅಪಘಾತ ಎಂದ. ತಾನು ಆಗ ಕ್ಷೋಭೆಗೊಳಗಾಗಿದ್ದೆ, ಮಾನಸಿಕವಾಗಿ ಜರ್ಝರಿತನಾಗಿದ್ದೆ, ಎಂದು ವೆಲ್ಲರ್ ಹೇಳಿಕೆ ನೀಡಿದ. ಆದರೆ ಪ್ರತ್ಯಕ್ಷದರ್ಶಿಗಳು ಹೇಳಿದ್ದೆ ಬೇರೆ. ಅವರ ಪ್ರಕಾರ, ವೆಲ್ಲರ್ ಬ್ರೇಕನ್ನು ಬಳಸಲೆ ಇಲ್ಲ; ಅವನ ಕಾರಿನ ಮುಂಭಾಗದ ಮೇಲೆ ಅಪಘಾತಕ್ಕೊಳಗಾದ ಜನ ಎಗರಿಬಿದ್ದು ಜಾರಿ ಹೋಗುತ್ತಿದ್ದರೂ ಅವನು ಕಾರನ್ನು ನಿಲ್ಲಿಸದೆ ನುಗ್ಗುತ್ತಿದ್ದ; ಜೊತೆಗೆ, ಪಕ್ಕದಲ್ಲಿದ್ದ ಕಾರುಗಳನ್ನು ಅವಾಯ್ಡ್ ಮಾಡುತ್ತ ನಡುರಸ್ತೆಯಲ್ಲಿಯೇ ಹೋಗುತ್ತಿದ್ದ.

ಇದಾದ ಎರಡು ವಾರಗಳ ನಂತರ ಮೋಟಾರುವಾಹನಗಳ ಇಲಾಖೆ ವೆಲ್ಲರ್‌ನ ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸಿತು. 'ಸಂಪೂರ್ಣ ನಿರ್ಲಕ್ಷ್ಯದಿಂದ ಹತ್ತು ಜನರ ಕೊಲೆಗೆ ಕಾರಣನಾಗಿದ್ದಾನೆ,' ಎಂದು ಅವನ ಮೇಲೆ ಕೇಸು ಹಾಕಲಾತು. ತಾನು ನಿರ್ದೋಷಿ ಎಂದು ವೆಲ್ಲರ್ ನ್ಯಾಯಾಲಯದಲ್ಲಿ ವಾದಿಸಿದ!

ಇಲ್ಲಿನ ನ್ಯಾಯಾಲಯಗಳಲ್ಲಿ ಆರೋಪಿ ದೋಷಿಯೆ ಅಥವ ನಿರ್ದೋಷಿಯೆ ಎಂದು 12 ಜನ ನಾಗರಿಕರಿಂದ ಕೂಡಿದ ನ್ಯಾಯಮಂಡಳಿ ಅಥವ ಜ್ಯೂರಿ ನಿರ್ಧರಿಸುತ್ತದೆ. ಅವರ ತೀರ್ಪಿನ ಆಧಾರದ ಮೇಲೆ, ದೋಯಾಗಿದ್ದ ಪಕ್ಷದಲ್ಲಿ, ಎಷ್ಟು ಶಿಕ್ಷೆ ಕೊಡಬೇಕೆಂದು ನ್ಯಾಯಾಧೀಶ ನಿರ್ಧರಿಸುತ್ತಾನೆ. ವಿಚಾರಣೆಯ ಬಳಿಕ, ವೆಲ್ಲರ್ ದೋಷಿ ಎಂದು ಸರ್ವಾನುಮತದಿಂದ ನ್ಯಾಯಮಂಡಲಿ ಕಳೆದ ತಿಂಗಳಷ್ಟೆ ಘೋಷಿಸಿತು. ಆ ಅಪರಾಧಕ್ಕೆ ನ್ಯಾಯಾಲಯ ಅವನಿಗೆ ಗರಿಷ್ಠ 18 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಿತ್ತು.

ಕಳೆದ ವಾರ ನ್ಯಾಯಾಲಯ ಶಿಕ್ಷೆಯನ್ನು ಪ್ರಕಟಿಸಿತು. ಇನ್ನೆರಡು ವಾರದಲ್ಲಿ 90 ವರ್ಷ ದಾಟಲಿರುವ ವೆಲ್ಲರ್‌ನ ವಯಸ್ಸು ಮತ್ತು ಆರೋಗ್ಯವನ್ನು ಗಣನೆಗೆ ತೆಗೆದುಕೊಂಡು, ಆತ ಜೈಲಿನಲ್ಲಿ ಇರಲು ಲಾಯಕ್ಕಾಗದಷ್ಟು ಆರೋಗ್ಯಹೀನನಾಗಿದ್ದಾನೆ; ಜೈಲಿಗೆ ಕಳುಹಿಸಿದರೆ ಸುಮ್ಮನೆ ಜನರ ತೆರಿಗೆ ಹಣ ಪೋಲು ಮತ್ತು ಜೈಲಿನ ಅಧಿಕಾರಿಗಳಿಗೆ ತಲೆನೋವು ಎಂದು ನಿರ್ಧರಿಸಿ ಮನೆಯಲ್ಲಿಯೆ ಪರಿವೀಕ್ಷಣೆಯಲ್ಲಿಡುವ ಶಿಕ್ಷೆ ವಿಧಿಸಿತು. ಜೊತೆಗೆ ಒಂದು ಲಕ್ಷ ಡಾಲರ್ ದಂಡ ವಿಧಿಸಿತು.

ಈ ಅಪಘಾತ ಆದ ನಂತರ ಮತ್ತು ಈಗ ಹೊಸದಾಗಿ ಮತ್ತೊಮ್ಮೆ ಆ ಸುದ್ಧಿ ನವೀಕರಣಗೊಂಡ ಕಾರಣ, ವಯಸ್ಸಾದ ಚಾಲಕರಿಂದ ಆಗುವ ರಸ್ತೆ ಅಪಘಾತಗಳ ಬಗ್ಗೆ ಮತ್ತು ಅವರಿಗೆ ಯಾವ ವಯಸ್ಸಿಗೆ ಪರವಾನಗಿ ನಿರಾಕರಿಸಬೇಕು ಎನ್ನುವುದರ ಬಗ್ಗೆ ಅಮೇರಿಕದಲ್ಲಿ ಗಂಭೀರವಾದ ಚರ್ಚೆ ಮೊದಲಾಗಿದೆ.

ಟೈಮ್ ವಾರಪತ್ರಿಕೆಯ ಈ ವಾರದ ಸಂಚಿಕೆಯಲ್ಲಿ "ನಾವು ಅರ್ಹವಲ್ಲದ ವಿಷಯಗಳ ಬಗ್ಗೆ ಯಾಕೆ ಚಿಂತೆ ಮಾಡುತ್ತೇವೆ?" ಎಂಬ ಅದ್ಭುತವಾದ ಮುಖಪುಟ ಲೇಖನ ಪ್ರಕಟವಾಗಿದೆ. ಅಲ್ಲಿ ಕೊಟ್ಟಿರುವ ಅಂಕಿಅಂಶ ಮತ್ತು ಅದಕ್ಕಾಗಿ ಮಾಡಿರುವ ಅಧ್ಯಯನ ತಾನು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಪ್ರೀತಿಸುವ ಒಬ್ಬ ದಕ್ಷ, ವೃತ್ತಿಪರ ಪತ್ರಕರ್ತನಷ್ಟೆ ಮಾಡಲು ಸಾಧ್ಯ. ಈ ಲೇಖನದಲ್ಲಿ "ನಾವು ಯಾಕೆ ಭಯಪಡಲರ್ಹವಲ್ಲದ ವಿಷಯಗಳ ಬಗ್ಗೆ ಭಯಪಡುತ್ತೇವೆ... ಹಾಗೂ ಭಯಪಡಬೇಕಾದ ವಿಷಯಗಳನ್ನೇಕೆ ನಿರ್ಲಕ್ಷಿಸುತ್ತೇವೆ" ಎಂದು ಎಂತೆಂತಹ ಸಣ್ಣಪುಟ್ಟ ಎನ್ನಿಸುವಂತಹ ಕಾರಣಗಳಿಗೆ ಎಷ್ಟೊಂದು ಜನ ಸಾಯುತ್ತಾರೆ ಎಂಬಂತಹ ವಿವರಗಳಿವೆ.

  • ಸುಮಾರು 30 ಕೋಟಿ ಜನಸಂಖ್ಯೆಯ ಅಮೇರಿಕದಲ್ಲಿ ನೆಗಡಿ-ಜ್ವರ ಒಂದರಿಂದಲೆ ವರ್ಷಕ್ಕೆ 36000 ಜನ ಸಾಯುತ್ತಾರೆ.
  • ಮೈಯಲ್ಲಿನ ಕೊಬ್ಬಿನಿಂದಾಗಿ ಬರುವ ಹೃದಯ ಸಂಬಂಧಿ ಕಾಲೆಗಳಿಂದ ವರ್ಷಕ್ಕೆ 7 ಲಕ್ಷ ಜನ ಸಾಯುತ್ತಾರೆ.
  • ನಾನಾ ತರಹದ ಅಪಘಾತಗಳಿಂದ ವರ್ಷಕ್ಕೆ ಸುಮಾರು 1 ಲಕ್ಷ ಜನ ಸತ್ತರೆ ನಾನಾ ತರಹದ ಕಾಲೆಗಳಿಂದ 23 ಲಕ್ಷ ಜನ ಸಾಯುತ್ತಾರಂತೆ.

ಅಮೇರಿಕದಲ್ಲಿ ಪ್ರತಿಯೊಬ್ಬ ಕಾರು ಚಾಲಕನೂ ಸೀಟು ಬೆಲ್ಟು ಧರಿಸಬೇಕು. ಬಹುಪಾಲು ರಾಜ್ಯಗಳಲ್ಲಿ ಕಾರಿನಲ್ಲಿರುವ ಪ್ರತಿಯೊಬ್ಬ ಪ್ರಯಾಣಿಕನೂ ಬೆಲ್ಟು ಹಾಕಿಕೊಳ್ಳಬೇಕು. ಈಗ ತಾನೆ ಹುಟ್ಟಿದ ಮಗುವಿನಿಂದ ಹಿಡಿದು 8 ವರ್ಷದ ಕೆಳಗಿನ ಪ್ರತಿ ಮಗುವನ್ನು ಚೈಲ್ಡ್‌ಸೀಟ್‌ನಲ್ಲಿಯೆ ಕೂರಿಸಬೇಕು. ಆ ಸೀಟು ಹಿಂದಿನ ಸೀಟಿನಲ್ಲಿಯೇ ಇರಬೇಕು. 12 ವರ್ಷಕ್ಕಿಂತ ಕಮ್ಮಿ ವಯಸ್ಸಿನ ಪ್ರತಿಯೊಬ್ಬರೂ ಹಿಂದಿನ ಸೀಟಿನಲ್ಲಿಯೆ ಪ್ರಯಾಣಿಸಬೇಕು. ಪ್ರತಿ ರಸ್ತೆಯಲ್ಲಿಯೂ ಗರಿಷ್ಠ ವೇಗದ ಮಿತಿ ಇರುತ್ತದೆ. ಬೈಕ್ ಸವಾರನಿರಲಿ, ಪೆಡಲ್ ತುಳಿಯುವ ಸೈಕಲ್ ಸವಾರನೂ ತಲೆಗೆ ಹೆಲ್ಮೆಟ್ ಹಾಕಿಕೊಳ್ಳಬೇಕು. ಬಹುಪಾಲು ಜನ ದಂಡಕ್ಕೆ ಹೆದರಿಯೊ, ಪೌರಪ್ರಜ್ಞೆಂದಲೊ ರಸ್ತೆನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಇಷ್ಟೆಲ್ಲ ಇದ್ದರೂ ಇಲ್ಲಿ ವರ್ಷಕ್ಕೆ 44000 ಜನ ರಸ್ತೆ ಅಪಘಾತಗಳಿಂದ ಸಾಯುತ್ತಾರೆ!

ಇಂತಹ ಯಾವ ನಿಯಮಗಳೂ ಇಲ್ಲದ, ಇದ್ದರೂ ಸರಿಯಾಗಿ ಪಾಲಿಸದ ನಮ್ಮಲ್ಲಿ ಅಪಘಾತಗಳು ಹೇಗಿರಬೇಡ? ತಲೆಗೆ ಹೆಲ್ಮೆಟ್ ಬೇಡ ಎಂದು ಎಂತೆಂತಹ ಹಾಸ್ಯಾಸ್ಪದ, ಅಸಂಬದ್ದ ಹೇಳಿಕೆಗಳು! ಅಧಿಕಾರದಲ್ಲಿರುವ ರಾಜಕಾರಣಿಗಳಿಗೆ ಹೆಲ್ಮೆಟ್ ಕಡ್ಡಾಯ ಮಾಡುವ ವಿಷಯ ರೋಲ್‌ಕಾಲ್ ಮಾಡಲು ಲಾಯಕ್ಕಾದ ವಿಷಯವಾಗಿದೆಯೆ ಹೊರತು ಜನರ ಪ್ರಾಣ ಉಳಿಸುವ ವಿಷಯವಾಗಿಲ್ಲ. ಸರ್ಕಾರ ಸುರಕ್ಷಾ ವಿಧಾನಗಳನ್ನು ಕಡ್ಡಾಯ ಮಾಡದೆ ಇರುವುದರಿಂದ, ಅನ್ನ ದುಡಿಯುವ ಜನ ಮತ್ತು ಅವರ ಸ್ಫೂರ್ತಿಯಾದ ಅಪ್ಪ, ಅಮ್ಮ, ಹೆಂಡತಿ, ಮಗು, ಗಂಡ, ತಮ್ಮ, ತಂಗಿ, ಅಣ್ಣ, ಅಕ್ಕ, ಹೀಗೆ ಯಾರೆಂದರವರು ರಸ್ತೆ ಆಪಘಾತಗಳಿಗೊಳಗಾಗಿ ಸಾಯುತ್ತಿರುತ್ತಾರೆ ಎಂದು ಗಮನಿಸದೆ, ಯಾರ ಜೀವಕ್ಕೂ ಬೆಲೆಲ್ಲದಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ಪ್ರಜಾಪ್ರಭುತ್ವದಲ್ಲಿ ನಾವುಗಳೆ ಸರ್ಕಾರವಾದ್ದರಿಂದ ನಾವೆ ಜೀವಕ್ಕೆ ಬೆಲೆ ಕೊಡುತ್ತಿಲ್ಲ ಎನ್ನುವುದು ಇಲ್ಲಿ ಹೆಚ್ಚು ಸೂಕ್ತ, ಅಲ್ಲವೆ?

Nov 19, 2006

The name is Bond, ‘Money’ Minting Bond!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಡಿಸೆಂಬರ್ 1, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಇದೇ ನವೆಂಬರ್ 17 ರಂದು ಹೊಸ ಜೇಮ್ಸ್ ಬಾಂಡ್ ಚಲನಚಿತ್ರ 'ಕೆಸೀನೊ ರಾಯೇಲ್' ವಿಶ್ವದಾದ್ಯಂತ ಬಿಡುಗಡೆಯಾಯಿತು. ಈ ಚಿತ್ರ ಜೇಮ್ಸ್ ಬಾಂಡ್ ಚಿತ್ರಪರಂಪರೆಯಲ್ಲಿ ಅನೇಕ ಕಾರಣಗಳಿಗಾಗಿ ವಿಶಿಷ್ಟವಾದುದು. 21 ನೆ ಜೇಮ್ಸ್ ಬಾಂಡ್ ಚಿತ್ರ; ಆದರೆ, ಇಯಾನ್ ಫ್ಲೆಮಿಂಗ್ ಬರೆದ ಜೇಮ್ಸ್ ಬಾಂಡ್ ಕಾದಂಬರಿ ಸರಣಿಯಲ್ಲಿಯ ಮೊಟ್ಟಮೊದಲ ಕಾದಂಬರಿಯ ಮೇಲೆ ಆಧಾರಿತವಾದ ಚಿತ್ರ. ಕಳೆದ ನಾಲ್ಕು ಬಾಂಡ್ ಚಿತ್ರಗಳಲ್ಲಿ ಬಾಂಡ್ ಆಗಿದ್ದ ಪಿಯರ್ಸ್ ಬ್ರಾಸ್ನನ್ ಈ ಚಿತ್ರದಲ್ಲಿ ಇಲ್ಲ. ಇದರಲ್ಲಿ ಬಾಂಡ್ ಆಗಿರುವಾತ ಡೇನಿಯಲ್ ಕ್ರೆಗ್. ಹೊಂಬಣ್ಣದ ಕೂದಲಿನ ಚೆಲುವ. ಬಹುಶಃ ಹಿಂದಿನ ಎಲ್ಲಾ ಬಾಂಡ್‌ಗಳಿಗಿಂತ ಒಳ್ಳೆಯ ದೈಹಿಕ ಮೈಕಟ್ಟು ಹೊಂದಿರುವ ಬಾಂಡ್ ಈತ. ಈ ಚಿತ್ರದ ಮೊದಲ ಹತ್ತು ನಿಮಿಷಗಳ ಮಂಗಗಳಂತೆ ಎಗರೆಗರಿ ಓಡುವ ಛೇಸಿಂಗ್‌ನಲ್ಲಂತೂ ಕನ್‍ವಿನ್ಸಿಂಗ್ ಆಗಿ ಮಾಡಿದ್ದಾನೆ.

ಜೇಮ್ಸ್ ಬಾಂಡ್‌ನ ಸಾಹಸಗಳು ಬೆಳ್ಳಿತೆರೆಯ ಮೇಲೆ ಪ್ರಾರಂಭವಾದದ್ದು 1962 ರಲ್ಲಿ. ಅಲ್ಲಿಂದೀಚೆಗೆ 21 ಚಿತ್ರಗಳು ಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹುಟ್ಟು ಹಾಕಿದೆ. ಭಾರತದಲ್ಲಿಯೂ ಜೇಮ್ಸ್ ಬಾಂಡ್ ಬಹಳ ಜನಪ್ರಿಯ. ನಾನು ಇಲ್ಲಿ ಬೇ ಏರಿಯಾದಲ್ಲಿ ಮೊದಲ ದಿನವೆ ಕೆಸೀನೊ ರಾಯೇಲ್ ನೋಡಲು ಹೋಗಿದ್ದಾಗ, ಅದಕ್ಕೆ ಬಂದಿದ್ದಷ್ಟು ಭಾರತೀಯ ಪ್ರೇಕ್ಷಕರನ್ನು ನಾನು 'ಪೈರೆಟ್ಸ್ ಆಫ್ ದಿ ಕೆರಿಬಿಯನ್', 'ಸ್ಪೈಡರ್ ಮ್ಯಾನ್', 'ಲಾರ್ಡ್ ಆಫ್ ದಿ ರಿಂಗ್ಸ್', 'ಕಿಂಗ್ ಕಾಂಗ್‌' ನಂತಹ ಹಿಟ್ ಚಿತ್ರಗಳನ್ನು ನೋಡಲು ಹೋಗಿದ್ದಾಗಲೂ ನೋಡಿರಲಿಲ್ಲ. ಭಾರತದಲ್ಲಿ ಇಂಗ್ಲಿಷ್ ಸಿನೆಮಾ ಅಥವ ಸಾಹಸಭರಿತ ಸಿನೆಮಾ ನೋಡುವವರಲ್ಲಿ ಜೇಮ್ಸ್ ಬಾಂಡ್ ಎಷ್ಟು ಜನಪ್ರಿಯ ಎಂದು ಈ ಚಿಕ್ಕ ಸ್ಯಾಂಪಲ್ ತೋರಿಸುತ್ತದೆ.

ಇಲ್ಲಿ ಇನ್ನೂ ವಿಶೇಷವಾದದ್ದು ಜೇಮ್ಸ್ ಬಾಂಡ್ ಚಲನಚಿತ್ರಗಳು ಇಲ್ಲಿಯ ತನಕ ಸಂಪಾದಿಸಿರುವ, ಸಂಪಾದಿಸುತ್ತಿರುವ ದುಡ್ಡು ಎಷ್ಟು, ಕೊಟ್ಟಿರುವ, ಕೊಡುತ್ತಿರುವ ಕೆಲಸಗಳು ಎಷ್ಟು ಎಂದು. ಇಲ್ಲಿಯ ತನಕ ಜೇಮ್ಸ್ ಬಾಂಡ್ ಚಲನಚಿತ್ರ ಮಾಡಲು ತೊಡಗಿಸಿರುವ ಹಣ ಸುಮಾರು ಮೂರೂವರೆ ಸಾವಿರ ಕೋಟಿ ರೂಪಾಯಿಗಳು. ಅದು ಗಳಿಸಿರುವುದು 18000 ಕೋಟಿ ರೂಪಾಯಿಗಳು. ಈ ಹಿನ್ನೆಲೆಯಲ್ಲಿ, ಜೇಮ್ಸ್ ಬಾಂಡ್ ಎನ್ನುವುದಕ್ಕಿಂತ ಮನಿ ಬಾಂಡ್ ಎನ್ನುವುದೇ ಸೂಕ್ತ.

ಒಂದು ಚಲನಚಿತ್ರ ಇಂತಹ ಮಟ್ಟದಲ್ಲಿ ಹಣದ ವ್ಯವಹಾರ ಮಾಡಲು ಸಾಧ್ಯವಾಗಿದೆ ಅಂದರೆ, ಅದು ಎಷ್ಟೊಂದು ಜನರಿಗೆ ಉದ್ಯೋಗ, ನೆಮ್ಮದಿ, ಖುಷಿ ಕೊಟ್ಟಿದೆ ಎಂದು ಕೇವಲ ಊಹಿಸಿಕೊಳ್ಳಬಹುದು. ಚಲನಚಿತ್ರ ಉದ್ಯಮ ನೇರವಾಗಿ ಮತ್ತು ಪರೋಕ್ಷವಾಗಿ ಅನೇಕ ಸ್ತರಗಳಲ್ಲಿ ಉದ್ಯೋಗ ಸೃಷ್ಟಿಸುತ್ತದೆ. ಈ ರಂಗಕ್ಕೆ ಬಿಟ್ಟರೆ ಬೇರೆ ಇನ್ಯಾವ ರಂಗಕ್ಕೂ ಈ ಪರಿಯ ತಾಕತ್ತಾಗಲಿ, ಪ್ರಭಾವವಾಗಲಿ, ಆಕರ್ಷಣೆಯಾಗಲಿ ಇಲ್ಲ.

ಇದನ್ನು ನಾವು ನಮ್ಮ ಕನ್ನಡ ಚಿತ್ರರಂಗದ ಹಿನ್ನೆಲೆಯಲ್ಲಿಯೆ ತೆಗೆದುಕೊಳ್ಳಬಹುದು. ಕನ್ನಡ ಚಲನಚಿತ್ರ ನಿರ್ಮಾಪಕರು ವರ್ಷಕ್ಕೆ ಕೇವಲ 70-80 ಕೋಟಿಯಷ್ಟು ಹಣವನ್ನು ಮಾತ್ರ ಕನ್ನಡ ಸಿನೆಮಾ ತಯಾರಿಕೆಯಲ್ಲಿ ತೊಡಗಿಸಿದರೂ, ಈ ಕ್ಷೇತ್ರದ ಉದ್ಯೋಗ ನಿರ್ಮಾಣದ ಪ್ರಭಾವ ಅದರಿಂದಲೂ ಬಹಳಷ್ಟು ಪಟ್ಟು ಆಚೆಗಿದೆ. ಒಂದು ಚಲನಚಿತ್ರ ನಿರ್ಮಾಣವಾಗುತ್ತಿರುವಷ್ಟು ಕಾಲವೂ ನೂರಾರು ಜನರಿಗೆ ಅದು ಉದ್ಯೋಗ ಕೊಟ್ಟಿರುತ್ತದೆ. ನಟಕಲಾವಿದರು, ತಂತ್ರಜ್ಞರು, ಲೈಟ್ ಬಾಯ್‌ಗಳು, ಡ್ರೈವರ್‌ಗಳು, ಊಟ ಸಪ್ಲೈ ಮಾಡುವವರು, ಸೆಟ್ ಹಾಕುವವರು, ಸಂಗೀತಗಾರರು, ಸೃಜನಶೀಲ ಬರಹಗಾರರು ಇತ್ಯಾದಿ. ನಿರ್ಮಾಣದ ನಂತರ ಪ್ರಚಾರದ ಹೆಸರಿನಲ್ಲಿ ನೂರಾರು ಜನ ಮುದ್ರಣ ರಂಗದಲ್ಲಿ, ರಾಜ್ಯದಾದ್ಯಂತ ಭಿತ್ತಿಚಿತ್ರ ಅಂಟಿಸುವುದು, ಅನೇಕ ಕಡೆ ಪ್ರಮೋಟ್ ಮಾಡುವುದು, ಪತ್ರಿಕಾ ಬರಹಗಾರರಿಗೆ ಸುದ್ದಿಸಾಮಗ್ರಿ, ಇತ್ಯಾದಿ ಎಡೆಗಳಲ್ಲಿ ಕೆಲಸ ಮಾಡಿರುತ್ತಾರೆ. ಒಳ್ಳೆಯ ಹಾಡುಗಳಿದ್ದರೆ ಆಡಿಯೊ ಕೆಸೆಟ್, ಸೀಡಿ ಕಂಪನಿಗಳ ಹತ್ತಾರು ಜನರಿಗೆ, ಮಾರುವ ಸಾವಿರಾರು ಅಂಗಡಿಯವರಿಗೆ ಬ್ಯುಸಿನೆಸ್ ಹುಟ್ಟಿರುತ್ತದೆ. ಸಿನೆಮ ಬಿಡುಗಡೆಯಾದ ನಂತರ ರಾಜ್ಯದಾದ್ಯಂತ ನೂರಾರು ಥಿಯೇಟರ್ ಕೆಲಸಗಾರರಿಗೆ ಒಂದು ತೋಪು ಚಿತ್ರ ಕನಿಷ್ಠ ಒಂದು ವಾರ ನೌಕರಿ ಕೊಟ್ಟರೆ, ಒಂದು ಹಿಟ್ ಚಿತ್ರ ತಿಂಗಳುಗಟ್ಟಲೆ ಕೆಲಸ ಕೊಟ್ಟಿರುತ್ತದೆ. ನಂತರ ಟಿವಿ ಪ್ರದರ್ಶನದಿಂದ ಮತ್ತಷ್ಟು ಜನರಿಗೆ ಉದ್ಯೋಗ, ವ್ಯವಹಾರ ಸಿಗುತ್ತದೆ. ವಿಸೀಡಿ, ಡೀವಿಡಿಗಳ ಮಾರಾಟದಿಂದ ಮತ್ತಷ್ಟು ಜನರಿಗೆ ಉದ್ಯೋಗ ಸಿಗುತ್ತದೆ. ಹೊಸ ಥಿಯೇಟರ್‌ಗಳಿಂದ ಕಟ್ಟಡ ನಿರ್ಮಾಣದಲ್ಲಿರುವ ದಿನಗೂಲಿಗಳಿಗೆ ಒಂದಷ್ಟು ದಿನ ನೆಮ್ಮದಿಯ ಖಾತರಿ. (ಬೆಂಗಳೂರಿನಲ್ಲಿ ಥಿಯೇಟರ್‌ಗಳೆಲ್ಲ ಕಾಂಪ್ಲೆಕ್ಸ್‌ಗಳಾದವು ಎನ್ನುವ ಭಯ ಕಳೆದ ನಾಲ್ಕೈದು ವರ್ಷಗಳಲ್ಲಿ ಒಂದೇ ಕಾಂಪ್ಲೆಕ್ಸ್‌ನಲ್ಲಿ ಐದಾರು, ಹತ್ತಾರು ಥಿಯೇಟರ್‌ಗಳಿರುವ ಮಲ್ಟಿಪ್ಲೆಕ್ಸ್‌ಗಳಿಂದಾಗಿ ದೂರವಾಗಿರುವುದು ನಿಜವಲ್ಲವೆ?)

ಇಲ್ಲಿ ಈ ವಿಷಯನ್ನು ಪ್ರಸ್ತಾಪಿಸಲು ಕಾರಣ, ಈ ಮಧ್ಯೆ ಕನ್ನಡ ಚಿತ್ರರಂಗ ವಿಪರೀತ ಗೊಂದಲದಲ್ಲಿದೆ. ನಮ್ಮ ಪತ್ರಿಕೆಯಲ್ಲಿಯೆ ಎರಡು ವಾರಗಳ ಹಿಂದೆ ಇದೇ ವಿಷಯವಾಗಿ ಮುಖಪುಟ ಲೇಖನ ಬಂದಿತ್ತು. ಕೆಲವು ನಿರ್ಮಾಪಕರು ಸಿನೆಮಾ ನಿರ್ಮಿಸುವುದಿಲ್ಲ, ಡಬ್ ಮಾಡುತ್ತೇವೆ ಎನ್ನುತ್ತಿದ್ದಾರೆ. ಕಾರ್ಮಿಕರ ಒಕ್ಕೂಟ ಬಂದ್ ಆಚರಿಸುವುದಾಗಿ ಹೇಳುತ್ತಿದ್ದಾರೆ. ಉದ್ಯಮದ ವೃತ್ತಿಪರತೆ ಅರಿಯದವರು ನಟರಿಗೆ ಆಸಿಡ್ ಹಾಕುವುದಾಗಿ ಬೆದರಿಸುತ್ತಿದ್ದಾರೆ. ಬೆಂಕಿ ಹೊತ್ತಿಕೊಂಡಿರುವ ಸಮಯದಲ್ಲಿ, 'ಉದ್ಯಮದ ಸಮಸ್ಯೆಯನ್ನು ಪರಿಹರಿಸುವುದಾಗಿ ಅಂಬರೀಶ್ ಹೇಳಿದ್ದಾರೆ, ಅವರೆ ಮಾಡಲಿ' ಎಂದು ಸರ್ಕಾರ ರಾಜಕೀಯ ಮಾಡುತ್ತಿದೆ. 'ಸರ್ಕಾರಕ್ಕಿಂತ ವ್ಯಕ್ತಿಗಳು ಒಳ್ಳೆಯ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ,' ಎಂದು ಹೇಳಿದ ನೊಬೆಲ್ ವಿಜೇತ ಅರ್ಥತಜ್ಞ ಮಿಲ್ಟನ್ ಫ್ರೀಡ್‌ಮನ್ ಹೇಳಿಕೆಯನ್ನು ನಮ್ಮ ಸರ್ಕಾರ ಈ ರೀತಿ ಧೃಢಪಡಿಸುತ್ತಿದೆ!

ಈ ವಾರ ತನ್ನ 94 ನೆ ವಯಸ್ಸಿನಲ್ಲಿ ತೀರಿಕೊಂಡ ಐದಡಿ ಎತ್ತರದ ಫ್ರೀಡ್‌ಮನ್ ಹೇಳಿರುವ ಇನ್ನೊಂದು ಮಾತು: 'ಸರ್ಕಾರಗಳು ಉದ್ಯೋಗಗಳನ್ನು ಸ್ಟೃಸುವುದಿಲ್ಲ. ಅವೇನಿದ್ದರೂ ಉದ್ಯೋಗಗಳನ್ನು ಇನ್ನೊಂದು ಕಡೆಗೆ ಸ್ಥಳಾಂತರಿಸುತ್ತವೆ.' ಕನ್ನಡ ಸಿನೆಮಾ ನಿರ್ಮಾಣದಿಂದ ಸೃಷ್ಟಿಯಾಗಿರುವ ಉದ್ಯೋಗ ತನ್ನ ನಿಷ್ಕ್ರಿಯತೆಯಿಂದಾಗಿ ಹಿಂದಿ, ಇಂಗ್ಲಿಷ್, ತೆಲುಗು, ತಮಿಳು ಚಿತ್ರ ರಂಗಕ್ಕೆ ವರ್ಗಾಂತರವಾಗದಂತೆ ಕರ್ನಾಟಕ ಸರ್ಕಾರ ನೋಡಿಕೊಳ್ಳಬೇಕು. ಅದು ಸಾಧ್ಯವಿದೆ ಕೂಡ. ಜಾಗತೀಕರಣದಲ್ಲಿ ಸರ್ಕಾರಗಳು ಉದ್ಯೋಗ ಸೃಷ್ಟಿ ಮಾಡಲಾರವು. ಆದರೆ ಉದ್ಯೋಗ ಸೃಷ್ಟಿಯ ವಾತಾವರಣವನ್ನು ಸಮರ್ಥವಾಗಿ ಸೃಷ್ಟಿಸಬಹುದು. ಈಗಿರುವ ಅವಕಾಶಗಳನ್ನು, ಬರಲಿರುವ ಅವಕಾಶಗಳನ್ನು ಹಾಳು ಮಾಡಬಾರದು.

ಇನ್ನು, ಕೆಸೀನೊ ರಾಯೇಲ್ ಬಗ್ಗೆ ಹೇಳಬೇಕೆಂದರೆ, ಇದೇನೂ ಅಂತಹ ಗ್ರೇಟ್ ಬಾಂಡ್ ಚಿತ್ರವಲ್ಲ. ಹೊಸ ಬಾಂಡ್ ಚಿತ್ರವನ್ನು ಬಯಸುವ ತಕ್ಷಣದ ಹಸಿವನ್ನು ಸ್ವಲ್ಪ ಮಟ್ಟಿಗೆ ತಣಿಸುತ್ತದೆ. ಮೈನವಿರೇಳಿಸುವ ಆಕ್ಷನ್ ಮೊದಲಾರ್ಧದಲ್ಲಿಯೇ ಬಂದು ಕೊನೆಕೊನೆಗೆ ಬೋರು ಹೊಡೆಸುತ್ತಾ ಹೋಗುತ್ತದೆ. ಹಿಂದಿನ ಕೆಲವು ಚಿತ್ರಗಳಲ್ಲಿ ಬಾಂಡ್ ಕೊನೆಯ ಕ್ಷಣದಲ್ಲಿ ಪ್ರಪಂಚವನ್ನು ಉಳಿಸುತ್ತಿದ್ದ. ಈ ಬಾಂಡ್ ಅದನ್ನು ಮಾಡುವುದಿಲ್ಲ. ಭಯೋತ್ಪಾದಕರ ಹಣದ ವ್ಯವಹಾರವನ್ನು ಹೊರಗೆಳೆಯುವ ಎಳೆ ಇದ್ದರೂ ಅದನ್ನೂ ಅಮುಖ್ಯ ಎನ್ನುವಂತೆ ಮಾಡಿಬಿಟ್ಟಿದ್ದಾರೆ. ಶ್ಯಾನ್ ಕಾನರಿಯ ಬಾಂಡ್ ಸಿನೆಮಾಗಳು ಮತ್ತು ಬ್ರಾಸ್ನನ್‌ನ ಗೋಲ್ಡನ್ ಐ, ಡೈ ಅನದರ್ ಡೇ ಗುಂಗಿನಲ್ಲಿರುವವರಿಗೆ ಮೊದಲರ್ಧ ಮಾತ್ರ ಇಷ್ಟವಾಗಬಹುದು. ಆದರೂ, ಚಿತ್ರ ಬಿಡುಗಡೆಯಾದ ಮೂರೇ ದಿನದಲ್ಲಿ ಅಮೇರಿಕ ಒಂದರಲ್ಲೆ 180 ಕೋಟಿ, ಮಿಕ್ಕ 27 ದೇಶಗಳಲ್ಲಿ 190 ಕೋಟಿ ರೂಪಾಯಿಯಷ್ಟು ಟಿಕೆಟ್ ಮಾರಾಟವಾಗಿವೆ! The name is Bond, 'Money' Minting Bond!

Nov 12, 2006

ಬುಷ್ ಹಲ್ಲು ಕಿತ್ತ ಅಮೇರಿಕನ್ನರು

ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ನವೆಂಬರ್ 24, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಕಳೆದ ಹದಿನೈದು ವರ್ಷಗಳಿಂದ ನಾನು ನನ್ನೂರಿನ ಗ್ರಾಮ ಪಂಚಾಯಿತಿಯಿಂದ ಹಿಡಿದು ದೇಶದ ಲೋಕಸಭಾ ಚುನಾವಣೆಗಳ ತನಕ ಅತೀವ ಆಸಕ್ತಿಯಿಂದ, ಭಯದಿಂದ, ಆಶಾವಾದದಿಂದ ನೋಡುತ್ತ ಬಂದಿದ್ದೇನೆ. ಈ ಚುನಾವಣೆಗಳಲ್ಲಿ ಗೆದ್ದು ಬರುತ್ತಿದ್ದ ರೌಡಿಗಳಂತಿದ್ದ ಕೆಲವು ಅಭ್ಯರ್ಥಿಗಳನ್ನು, ಅವರ ಪಕ್ಷಗಳನ್ನು, ಅದರ ಮುಖಂಡರುಗಳನ್ನು ನೋಡುತ್ತಿದ್ದಾಗ ಮೊದಮೊದಲು 'ಇದೇನು ಶಿವನೆ, ಇವರ ಅಧಿಕಾರಾವಧಿಯಲ್ಲಿ ಜನ ಬದುಕಲು ಸಾಧ್ಯವೆ, ಸಹನೀಯ ಜೀವನ ಸಾಧ್ಯವೆ, ಭವಿಷ್ಯವುಂಟೆ' ಎಂದೆಲ್ಲ ಭಯವಾಗುತ್ತಿತ್ತು. ಆಗೆಲ್ಲ ತಕ್ಷಣದ ಕಾಲವೆ ಶಾಶ್ವತ ಎನ್ನುವ ನಂಬಿಕೆಯಿತ್ತೇನೊ? ಆದರೆ ಹೀಗೆ ಭಯ, ರೇಜಿಗೆ ಹುಟ್ಟಿಸುತ್ತಿದ್ದ ಗೆದ್ದವರು ಮುಂದಿನ ಚುನಾವಣೆಗಳಲ್ಲಿ ಸೋತು ಈ ಜನತಂತ್ರ ವ್ಯವಸ್ಥೆಯನ್ನು ಮತ್ತೊಂದು ಮಗ್ಗುಲಿನಿಂದ ನೋಡುವಂತೆ ಮಾಡುತ್ತಿತ್ತು. ಆಗ ಗೊತ್ತಾಗುತ್ತಿದ್ದದ್ದು ಜೀವನದ ಕ್ಷಣಿಕತೆ, ಈ ಪ್ರಜಾಪ್ರಭುತ್ವದ ಮಹತ್ವ ಮತ್ತು ಇದರ ಬ್ಯೂಟಿ.

ನಮ್ಮ ಕರ್ನಾಟಕದ ದೊಡ್ಡ ಉದಾಹರಣೆಗಳನ್ನೆ ತೆಗೆದುಕೊಳ್ಳೋಣ:

  • ಗುಂಡೂರಾಯರು ತಮ್ಮ ಅಧಿಕಾರವಧಿಯ ಕೊನೆಯಲ್ಲಿ ಬಂದ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೆ ಸೋತರು.
  • ಜೆ.ಎಚ್. ಪಟೇಲರದು ಸಹ ಹಾಗೆಯೇ ಆಗಿತ್ತು.
  • ಎಸ್ಸೆಮ್ ಕೃಷ್ಣರು ಉಪಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸೋತರು; ನಂತರ ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರ ಬದಲಾಯಿಸಿದರು.
  • ಆರೇಳು ವರ್ಷಗಳ ಹಿಂದೆ ಇನ್ನೇನು ನಾನು ಮುಖ್ಯಮಂತ್ರಿ ಆಗಿಬಿಟ್ಟೆ ಎಂದು ಯಡಿಯೂರಪ್ಪನವರು ಸೂಟುಬೂಟಿನೊಂದಿಗೆ ಸಿದ್ದವಾಗುತ್ತಿದ್ದಾಗ ಶಿಕಾರಿಪುರದ ಜನ ಅವರನ್ನು ಶಾಸಕರನ್ನಾಗಿಯೆ ಮಾಡಲಿಲ್ಲ. (ಹತ್ತು ವರ್ಷಗಳ ಹಿಂದೆ ಈಗಿನ ಕೇರಳದ ಮುಖ್ಯಮಂತ್ರಿಯ ಸ್ಥಿತಿಯೂ ಅದೇ ಆಗಿತ್ತು.)
  • ಹೆಗಡೆಯವರು ಐದಾರು ವರ್ಷ ಮುಖ್ಯಮಂತ್ರಿಗಳಾಗಿ ಉತ್ತರ ಕರ್ನಾಟಕದಲ್ಲಿ ಒಳ್ಳೆಯ ವರ್ಚಸ್ಸು ಹೊಂದಿದ್ದರೂ ಬಾಗಲಕೋಟೆಯಲ್ಲಿ ಸೋತರು.
  • ಇಂತಹ ಉದಾಹರಣೆಗಳಿಗೆ ಶಿಖರಪ್ರಾಯವಾದದ್ದು ತಾವು ಪ್ರಧಾನ ಮಂತ್ರಿಯಾದ ಮೇಲೆ ಬಂದ ಮೊದಲ ಲೋಕಸಭಾ ಚುನಾವಣೆಯಲ್ಲಿಯೆ ದೇವೇಗೌಡರು ಹಾಸನದಲ್ಲಿ ಸೋತಿದ್ದು.
ಮೊದಲೆಲ್ಲ ಐದು ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಜನಪ್ರತಿನಿಧಿಗಳ ಮೌಲ್ಯಮಾಪನ ಈಗ ಅಧಿಕಾರ ವಿಕೇಂದ್ರೀಕರಣದ ಪ್ರಯುಕ್ತ ಪರೋಕ್ಷವಾಗಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರ ಸಭೆ, ಜಿಲ್ಲಾ ಪಂಚಾಯಿತಿ, ವಿಧಾನ ಸಭೆ, ಲೋಕ ಸಭೆ, ಹೀಗೆ ಪ್ರತಿಯೊಂದು ಚುನಾವಣೆಯಲ್ಲಿಯೂ ನಡೆಯುತ್ತಿದೆ. ಸ್ವಲ್ಪ ಹದ್ದು ಮೀರುತ್ತಿದ್ದಾರೆ ಎನ್ನಿಸಿದರೆ ಸಾಕು, ಜನ ಸದ್ದಿಲ್ಲದೆ ಬುದ್ದಿ ಕಲಿಸುತ್ತಾರೆ. ಅಲ್ಲಲ್ಲಿ ಕೆಲವು ಅಪವಾದಗಳಿರಬಹುದು. ಆದರೆ ಜನತಂತ್ರ ವ್ಯವಸ್ಥೆ ಎಂತಹವರಿಗೂ ಚೆಕ್ಸ್ ಅಂಡ್ ಬ್ಯಾಲೆನ್ಸ್ ಇಟ್ಟಿದೆ, ಇಡುತ್ತಿದೆ. ಇದನ್ನೆಲ್ಲ ನೋಡಿದ ಮೇಲೆ, ಈ ವ್ಯವಸ್ಥೆಗೆ ಅಪಾಯ ಎನ್ನಿಸಿದವರು ಎಷ್ಟೇ ಕೂಗಾಡಲಿ, ಎಗರಾಡಲಿ, ಅದೆಲ್ಲ ಮುಂದಿನ ಚುನಾವಣೆಯ ತನಕವಷ್ಟೆ; ಆಗ ಕಾದಿದೆ ಅವರಿಗೆ ಮುದುಕಿ ಹಬ್ಬ. ನಾವು ಅವರನ್ನು ಔಟ್‌ಲಿವ್ ಮಾಡಬೇಕಷ್ಟೆ, ಎನ್ನಿಸದಿರದು.

ಜಾರ್ಜ್ ಬುಷ್ ಕ್ಲಿಂಟನ್‌ರಿಂದ ಅಧಿಕಾರ ಸ್ವೀಕರಿಸಿದ ಒಂದು ತಿಂಗಳ ಹಿಂದೆಯಷ್ಟೆ ನಾನು ಈ ದೇಶಕ್ಕೆ ಮೊದಲ ಸಲ ಬಂದಿದ್ದು. ಅಂದಿನಿಂದ ಜಾರ್ಜ್ ಬುಷ್ ಮತ್ತು ಇಲ್ಲಿನ ರಾಜಕೀಯವನ್ನು ಗಮನಿಸುತ್ತ ಬಂದಿದ್ದೇನೆ. ನಮ್ಮಲ್ಲಿ ಆರೆಸ್ಸೆಸ್ ಮತ್ತು ವಿಎಚ್‌ಪಿಗಳು ಹೊಂದಿರುವಂತಹುದೆ ಸಂಘಟನೆ ಮತ್ತು ಚುನಾವಣೆಯ ಹಿಂದಿನ ದಿನದ ಸಕ್ರಿಯತೆಯನ್ನು ಇಲ್ಲಿನ ಕ್ರೈಸ್ತ ಬಲಪಂಥೀಯರು ಬುಷ್‌ರ ರಿಪಬ್ಲಿಕನ್ ಪಕ್ಷದೆಡೆಗೆ ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಇನ್ನೇನು ಸೋಲುವುದು ಖಚಿತ ಎನ್ನುವಂತಹ ಸ್ಥಿತಿಯಲ್ಲಿ ಆರ್ಥಿಕ ಮತ್ತು ಕರ್ಮಠ ಸಂಪ್ರದಾಯವಾದಿಗಳ ಹಾಗು ಕ್ರಿಶ್ಚಿಯನ್ ಬಲಪಂಥೀಯರ ಆ ಕೊನೆಕ್ಷಣದ ಚುರುಕುತನದಿಂದಾಗಿ ಜಾರ್ಜ್ ಬುಷ್ ಡೆಮೊಕ್ರಾಟಿಕ್ ಪಕ್ಷದ ಜಾನ್ ಕೆರ್ರಿಯ ಮೇಲೆ ಗೆದ್ದರು. ಎರಡನೆ ಅವಧಿಯಲ್ಲಿ ಬುಷ್‌ರು ಇನ್ನೇನು ಮಾಡುತ್ತಾರೊ ಎಂದು ಇಲ್ಲಿನ ಉದಾರವಾದಿಗಳಿಗೆ ಆಗ ಭಯವಾಗಿದ್ದು ನಿಜ. ಆದರೆ, ತಮ್ಮ ಅಪ್ಪ ಗೆಲ್ಲಲಾಗದ ಎರಡನೆ ಅವಧಿಯನ್ನು ನಾನು ಗೆದ್ದು ಸಾಧಿಸಿದೆ ಎನ್ನುವ ತೃಪ್ತಿಯಲ್ಲಿ ಬುಷ್‌ರು ಅಂತಹ ದೊಡ್ಡ ತಪ್ಪುಗಳನ್ನು ಮಾಡಲಾರರು; ಯಾಕೆಂದರೆ, ಅವರು ತಮಾಷೆಯ, ಜೀವನವನ್ನು ಸ್ವಲ್ಪ ಮಜವಾಗಿಯೆ ತೆಗೆದುಕೊಳ್ಳುವ ಮನುಷ್ಯ; ಕಠಿಣ ಪರಿಶ್ರಮಿಯಾಗಲಿ, ದೊಡ್ಡ ಮಹತ್ವಾಕಾಂಕ್ಷಿಯಾಗಲಿ ಅಲ್ಲ, ಎಂದು ನನಗನ್ನಿಸಿತ್ತು.

ಆದರೆ ತಿಂಗಳ ಹಿಂದೆ ನ್ಯೂಸ್‍ವೀಕ್ ವಾರಪತ್ರಿಕೆಯಲ್ಲಿ ಪತ್ರಕರ್ತ ಬಾಬ್ ವುಡ್‌ವರ್ಡ್ ಬರೆದಿರುವ ಇತ್ತೀಚಿನ ಬೆಸ್ಟ್ ಸೆಲ್ಲರ್ "State of Denial" ಪುಸ್ತಕದ ಹತ್ತಿಪ್ಪತ್ತು ಪುಟಗಳನ್ನು ಓದುತ್ತಿದ್ದಾಗ, 'ಓ ಗಾಡ್, ಈ ಮನುಷ್ಯ ತಮ್ಮ ಅಧಿಕಾರವಧಿಯ ಇನ್ನೆರಡು ವರ್ಷಗಳಲ್ಲಿ ಅಮೇರಿಕಾವನ್ನು ಯಾವ ಯಾವ ದೇಶಗಳಿಗೆ ನುಗ್ಗಿಸುತ್ತಾರೊ, ಏನೇನು ಕಾದಿದೆಯೊ,' ಅನ್ನಿಸಿತು. ಯಾಕೆಂದರೆ ಆ ಪುಸ್ತಕದಲ್ಲಿ ಬುಷ್ ಮತ್ತು ಅವರ ಅಂತರಂಗದ ಮಿತ್ರರು ಎಷ್ಟು ಬೇಜವಬ್ದಾರಿಯಿಂದ, ನಿರ್ಲಕ್ಷ್ಯದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಬುಷ್ ಎಷ್ಟೊಂದು ಹುಡುಗಾಟಿಕೆಯ ಮನುಷ್ಯ, ಎಂಬುದರ ಬಗ್ಗೆ ವಿವರವಾದ ಚಿತ್ರಣವಿದೆ. ಅದನ್ನು ಓದಿದ ನಂತರ, ಇಂತಹವರ ಕೈಯಲ್ಲಿ ಎಷ್ಟೊಂದು ಕೋಟ್ಯಾಂತರ ಜನರ ಭವಿಷ್ಯ ಇದೆ ಎಂದು ಭಯವಾಗದೆ ಇರದು. ಆಗ ನನಗೆ ಅನ್ನಿಸಲಾರಂಭಿಸಿದ್ದು, ಈ ಬುಷ್‌ಗೆ ಕಡಿವಾಣ ಇಲ್ಲವೆ ಎಂದು.

ಹಾಗನ್ನಿಸಿದ ಒಂದೆರಡು ವಾರದಲ್ಲಿಯೆ ಅಮೇರಿಕದ ಜನಪ್ರತಿನಿಧಿ ಸಭೆ ಮತ್ತು ಸೆನೆಟ್‌ನ ಕೆಲವು ಸ್ಥಾನಗಳಿಗೆ ನವೆಂಬರ್ ಏಳರಂದು ನಡೆವ ಚುನಾವಣೆಯಲ್ಲಿ ಬುಷ್‌ರ ಪಕ್ಷಕ್ಕೆ ಸೋಲು ಕಾದಿದೆ, ಎರಡೂ ಮನೆಗಳಲ್ಲಿ ಅವರ ಬಹುಮತ ನಷ್ಟವಾಗಲಿದೆ ಎಂದು ಸರ್ವೇಗಳು ಹೇಳಲಾರಂಭಿಸಿದವು. ಆದರೆ 2004 ರ ಅಧ್ಯಕ್ಷ ಚುನಾವಣೆಯಲ್ಲಿ ರಿಪಬ್ಲಿಕನ್ನರು ಹಗಲು ರಾತ್ರಿ ಮಾಡಿದ ಕೆಲಸ, ತಮ್ಮ ಪರ ಇರುವ ಮತದಾರರು ಮತ ಚಲಾಯಿಸಿಯೇ ತೀರುವಂತೆ ಮಾಡಿದ ರೀತಿಯನ್ನು ಗಮನಿಸಿದ್ದವರಿಗೆ ಪಲಿತಾಂಶದ ಬಗ್ಗೆ ಗ್ಯಾರಂಟಿ ಇರಲಿಲ್ಲ. ನವೆಂಬರ್ ಏಳರಂದು ಅಮೇರಿಕ ಜನತೆ ಮಾತನಾಡಿತು. ಈಗ ಕೇಂದ್ರದ ಎರಡೂ ಮನೆಗಳ ಹಿಡಿತ ಡೆಮೊಕ್ರಾಟರ ಕೈಯಲ್ಲಿದೆ. ಬುಷ್‌ರು ತೆಗೆದುಕೊಳ್ಳುವ ದೊಡ್ಡ ಮಟ್ಟದ ನಿರ್ಧಾರಗಳೆಲ್ಲ ಇಲ್ಲಿ ಅಂಗೀಕಾರವಾಗಲೇಬೇಕು. ಅವರು ವೀಟೊ ಚಲಾಯಿಸಬಹುದಾದರೂ ಯಾವುದೇ ಮಸೂದೆಯನ್ನು ಅಥವ ಮಂತ್ರಿಗಳ ನೇಮಕಾತಿಯನ್ನು ಅನೇಕ ದಿನಗಳ filibuster ಚರ್ಚೆಯಲ್ಲಿ ತೊಡಗಿಸಿ ಬುಷ್‌ರ ಕೈಕಟ್ಟಿ ಹಾಕುವ ಅವಕಾಶಗಳು ಡೆಮೊಕ್ರ್ರಾಟರಿಗಿದೆ. ಇಲ್ಲಿಯ ತನಕ ಇರಾಕ್ ವೈಫಲ್ಯದಿಂದ ಹಿಡಿದು ಪ್ರತಿಯೊಂದು ವಿಷಯದಲ್ಲಿಯೂ "my way or the highway" ಎನ್ನುತ್ತಿದ್ದ ಬುಷ್ ಇನ್ನು ಮೇಲೆ ಬೇರೆಯವರ ಅಭಿಪ್ರಾಯಕ್ಕೂ ಬೆಲೆ ಕೊಡಬೇಕಾಗಿದೆ. ಇನ್ನೂ ಎರಡು ವರ್ಷಗಳ ತನಕ ಬುಷ್‌ರಿಗೆ ಕೊಟ್ಟಿದ್ದ ಅಪರಿಮಿತ ಅಧಿಕಾರವನ್ನು ಹೀಗೆ ಪರೋಕ್ಷವಾಗಿ ಅಮೇರಿಕನ್ನರು ಕಿತ್ತು ಹಾಕಿ, ಹದ್ದುಬಸ್ತಿನಲ್ಲಿಡುವ ವ್ಯವಸ್ಥೆ ಮಾಡಿದ್ದಾರೆ. ಇದೇ ಅಲ್ಲವೆ ಪ್ರಜಾಪ್ರಭುತ್ವದ ಸೌಂದರ್ಯ! ಇಲ್ಲಿ ಯಾರೂ ಶಾಶ್ವತವಲ್ಲ, ಅಂತಿಮವೂ ಅಲ್ಲ.

ಇನ್ನೊಂದು ಕಡೆ, "ಕೆಟ್ಟ ವಿದ್ಯಾರ್ಥಿಗಳು ಇರಾಕ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ," ಎಂದು ಬುಷ್‌ರನ್ನು ಉದ್ದೇಶಿಸಿ ಜಾನ್ ಕೆರಿ ಹೇಳಿದ್ದರೂ ನಂತರ ಅದು ತೆಗೆದುಕೊಂಡ ತಿರುವು ಕೆರ್ರಿಯ ಶ್ವೇತಭವನದ ಕನಸನ್ನು ಅಂತ್ಯಗೊಳಿಸಿದಂತಿದೆ. ರಿಪಬ್ಲಿಕನ್ ಪಕ್ಷದಿಂದ ಸಂಭವನೀಯ ಅಧ್ಯಕ್ಷ ಅಭ್ಯರ್ಥಿ ಎನ್ನಿಸಿದ್ದ ಜಾರ್ಜ್ ಅಲ್ಲೆನ್ ಭಾರತೀಯ ಮೂಲದ ವಿದ್ಯಾರ್ಥಿಯನ್ನು 'ಮೆಕಾಕ' (ಪೂರ್ವದ ಕಡೆಯ ಮಂಗ) ಎಂದು ಹಂಗಿಸಿದ್ದರಿಂದ ಸುಲಭವಾಗಿ ಗೆಲ್ಲಬಹುದಾದ ತಮ್ಮ ಸೆನೆಟ್ ಸ್ಥಾನವನ್ನು ಕಷ್ಟ ಪಟ್ಟು ಸೋತಿದ್ದಾರೆ. ಇವುಗಳ ನಡುವೆ, ಈಗ ಸ್ಪೀಕರ್ ಆಗಲಿರುವ ಮೊದಲ ಮಹಿಳೆ ನ್ಯಾನ್ಸಿ ಪೆಲೋಸಿ ಚುನಾವಣೆಗೆ ಮುಂಚೆ ಬುಷ್‌ರನ್ನು ಅಸಮರ್ಥ, ಅಯೋಗ್ಯ ಎಂದು ತೀಕ್ಷ್ಣವಾಗಿ ಟೀಕಿಸಿದ್ದರೂ ಚುನಾವಣೆ ಮುಗಿದ ನಂತರ ಬುಷ್ ಮತ್ತು ಗೆದ್ದ ಡೆಮೊಕ್ರಾಟರು ನಡೆದುಕೊಂಡ ಗೌರವಯುತ ರೀತಿ ಮತ್ತು ತೋರಿಸಿದ ಘನತೆ ನಿಜಕ್ಕೂ ಪ್ರಶಂಸನೀಯ. ಈ ಪ್ರಬುದ್ಧ ನಡವಳಿಕೆಯನ್ನು ನಾವು ಪ್ರಬುದ್ಧ ಪ್ರಜಾಪ್ರಭುತ್ವದಲ್ಲಿ, ಸುಶಿಕ್ಷಿತ ವಾತಾವರಣದಲ್ಲಿ ಮಾತ್ರ ನಿರೀಕ್ಷಿಸಲು ಸಾಧ್ಯ. ಯಾವುದೇ ವ್ಯಕ್ತಿಕೇಂದ್ರಿತ, ವಂಶಕೇಂದ್ರಿತ, ಮತಕೇಂದ್ರಿತ ಪಾಳೆಯಗಾರಿಕೆ ಆಡಳಿತ ವ್ಯವಸ್ಥೆಯಲ್ಲಲ್ಲ.

Nov 5, 2006

ಇದು ಲಂಚಕ್ಕಿಂತ ಪವರ್‌ಪುಲ್ ಕಣ್ರಿ!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ನವೆಂಬರ್ 17, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

"ಲಂಚ ಕೊಡಬೇಡಿ. ದಯವಿಟ್ಟು RTI ಬಳಸಿ. RTI is more powerful than giving bribe. ಬೇರೆಯವರಿಗೂ ಅದರ ಬಗ್ಗೆ ಹೇಳಿ. ಈಗಿನ RTI ಕಮಿಷನರ್ ಈ ಕಾಯ್ದೆಯನ್ನು ತೆಳುಮಾಡಲು, ಅದರ ಹಲ್ಲು ಕಿತ್ತುಹಾಕಲು ಪ್ರಯತ್ನಿಸುತ್ತಿದ್ದಾರೆ. ಮಾಜಿ ಬ್ಯೂರೋಕ್ರಾಟ್ ಆಗಿರುವ ಪ್ರಧಾನಿ ಮನಮೋಹನ್ ಸಿಂಗ್‌ರ ಬೆಂಬಲವೂ ಅಂತಹ ಪ್ರಯತ್ನಗಳಿಗೆ ಇದ್ದಂತಿದೆ. ನೀವು, ಇಲ್ಲಿರುವ NRI ಗಳು, ಭಾರತದ ಪ್ರಧಾನಿಗೆ, ಸೋನಿಯಾ ಗಾಂಧಿಗೆ, ರಾಷ್ಟ್ರಪತಿ ಕಲಮ್‌ರಿಗೆ ದಯವಿಟ್ಟು ಇಮೇಯ್ಲ್ ಮಾಡಿ. ಅವರ ಇಮೇಯ್ಲ್ ವಿಳಾಸ ಇಲ್ಲಿದೆ ನೋಡಿ. ಹಾಗೆಯೇ ಇದರ ಬಗ್ಗೆ ಅಲ್ಲಿನ ಪತ್ರಿಕೆಗಳಿಗೂ ಬರೆಯಿರಿ," ಎಂದು ಕ್ಯಾಲಿಪೋರ್ನಿಯಾದಲ್ಲಿನ ಅಂದಿನ ಸಭೆಯಲ್ಲಿ ಅರವಿಂದ್ ಖೇಜ್ರಿವಾಲ್ ವಿನಂತಿಸಿಕೊಂಡರು. ಇದು ಲಂಚಕ್ಕಿಂತ ಪವರ್‌ಪುಲ್ ಎನ್ನುವುದಕ್ಕೆ ಆಧಾರಪೂರ್ವಕವಾಗಿ ಅನೇಕ ಸತ್ಯ ಘಟನೆಗಳನ್ನು ಹೇಳಿದರು. ಕೆಳಗಿನದು ಅಂತಹ ಒಂದು ಘಟನೆ.

ದೆಹಲಿಯ ದಿನಗೂಲಿಯೊಬ್ಬನ ಹೆಸರು ನನ್ನು ಎಂದು. ಅವನು ತನ್ನ ರೇಷನ್ ಕಾರ್ಡ್ ಅನ್ನು ಕಳೆದುಕೊಂಡ ಪ್ರಯುಕ್ತ 2004 ರ ಜನವರಿಯಲ್ಲಿ ಡೂಪ್ಲಿಕೇಟ್ ಪ್ರತಿಗಾಗಿ ಸಂಬಂಧಪಟ್ಟ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ. ನಿಯಮಗಳ ಪ್ರಕಾರ ಅವನಿಗೆ ಹತ್ತು ದಿನದಲ್ಲಿ ಕಾರ್ಡ್ ದೊರಕಬೇಕಿತ್ತು. ಆದರೆ, ಮೂರು ತಿಂಗಳು ಸಂಬಂಧಿಸಿದ ಇಲಾಖೆಯ ಮೆಟ್ಟಿಲು ಹತ್ತಿಳಿದರೂ ಅವನಿಗೆ ರೇಷನ್ ಕಾರ್ಡ್ ಸಿಗಲಿಲ್ಲ. ಯಾಕೆ ಸಿಗಲಿಲ್ಲ ಅಂದರೆ ಅವನು ಸಂಬಂಧಿಸಿದವರಿಗೆ ಲಂಚವೆಂಬ ಅಮೇಧ್ಯ ತಿನ್ನಿಸದಿದ್ದರಿಂದ ಇರಬಹುದು. ಅವನು ಭಿಕಾರಿಯ ತರಹ ಬೇರೆ ಕಾಣಿಸುತ್ತಿದ್ದದ್ದರಿಂದ ಅನೇಕ ಸಲ ಅವನನ್ನು ಕಛೇರಿಯ ಒಳಗೇ ಬಿಡುತ್ತಿರಲಿಲ್ಲ! ದೆಹಲಿ ರಾಜ್ಯ ಸರ್ಕಾರ 2001 ರಿಂದಲೆ ತನ್ನ ನಾಗರೀಕರಿಗೆ ಮಾಹಿತಿ ಹಕ್ಕನ್ನು ಕೊಟ್ಟಿದೆ. ಮೂರು ತಿಂಗಳ ಅಲೆದಾಟದ ನಂತರ ನನ್ನು ಆ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಅರ್ಜಿ ಒಂದನ್ನು ಬರೆದು ಲಗಾಯಿಸಿದ. ಅದಾದ ನಾಲ್ಕನೆ ದಿನ ಪುಡ್ ಇನ್ಸ್‌ಪೆಕ್ಟರ್ ನೇರವಾಗಿ ನನ್ನುವಿನ ಮನೆಗೇ ಬಂದುಬಿಟ್ಟು, "ನಿಮ್ಮ ರೇಷನ್ ಕಾರ್ಡು ಸಿದ್ಧವಾಗಿದೆ. ದಯವಿಟ್ಟು ಬಂದು ಅದನ್ನು ತೆಗೆದುಕೊಳ್ಳಿ," ಎಂದು ವಿನಂತಿಸಿ ಹೋಗುತ್ತಾನೆ. ಅದನ್ನು ಪಡೆಯಲು ನನ್ನು ಆ ಕಛೇರಿಗೆ ಹೋದರೆ, ಅಲ್ಲಿನ ಹಿರಿಯ ಅಧಿಕಾರಿ ನನ್ನುವನ್ನು ನೇರವಾಗಿ ತನ್ನ ಛೇಂಬರಿಗೆ ಕರೆದುಕೊಂಡು ಹೋಗುತ್ತಾನೆ; ಅದೂ ವಿನಯ ಪೂರ್ವಕವಾಗಿ! ಅಲ್ಲಿ ನನ್ನುವಿಗೆ ಟೀ ಕೊಡಿಸುತ್ತಾನೆ; ರೇಷನ್ ಕಾರ್ಡೂ ಸಮರ್ಪಿಸುತ್ತಾನೆ! ಜೊತೆಗೆ ಒಂದು ವಿನಂತಿಯನ್ನೂ ಮಾಡಿಕೊಳ್ಳುತ್ತಾನೆ: "ದಯವಿಟ್ಟು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ನೀವು ಕೊಟ್ಟಿರುವ ಅರ್ಜಿಯನ್ನು ವಾಪಸು ತೆಗೆದುಕೊಳ್ಳಿ." ಆ ಕಛೇರಿಯ ಸಿಬ್ಬಂದಿಯ ಕಣ್ಣಿನಲ್ಲಿ ಮೂರು ತಿಂಗಳಿನಿಂದಲೂ ಬೀದಿಭಿಕಾರಿಯಾಗಿ ಕಾಣಿಸುತ್ತಿದ್ದ ನನ್ನು ಇದ್ದಕ್ಕಿದ್ದಂತೆ VIP ಆಗಿಬಿಟ್ಟ. ಇಷ್ಟಕ್ಕೂ ತನ್ನ ಅರ್ಜಿಯಲ್ಲಿ ನನ್ನು ಕೇಳಿದ್ದದ್ದು ನಾಲ್ಕೇ ನಾಲ್ಕು ಪ್ರಶ್ನೆಗಳು:

  1. ನಾನು ಇಂತಿಂತಹ ದಿನಾಂಕದಂದು ಡೂಪ್ಲಿಕೇಟ್ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದೇನೆ. ದಯವಿಟ್ಟು ಆ ಅರ್ಜಿಯ ಮೇಲೆ ಇಲ್ಲಿಯವರೆಗೂ ಆಗಿರುವ ಪ್ರತಿದಿನದ ಬೆಳವಣಿಗೆಯನ್ನು ತಿಳಿಸಿ.
  2. ದಯವಿಟ್ಟು ನನ್ನ ಅರ್ಜಿಯ ಮೇಲೆ ಯಾವ್ಯಾವ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಾಗಿತ್ತೊ ಅವರ ಹೆಸರುಗಳನ್ನು ತಿಳಿಸಿ.
  3. ಈ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ರೇಷನ್ ಕಾರ್ಡ್ ಕೊಡದೆ ನಿಯಮಗಳನ್ನು ಉಲ್ಲಂಘಿಸಿದ್ದಾರೆಯೆ? ಹಾಗಿದ್ದಲ್ಲಿ ಅವರ ಮೇಲೆ ಏನು ಕ್ರಮ ಕೈಗೊಳ್ಳಲಾಗುವುದು? ಯಾವ ದಿನಾಂಕದೊಳಗೆ ತೆಗೆದುಕೊಳ್ಳಲಾಗುವುದು?
  4. ನನಗೆ ನನ್ನ ರೇಷನ್ ಕಾರ್ಡು ಎಂದು ಸಿಗುತ್ತದೆ?

ಇಷ್ಟೊಂದು ಬಲಶಾಲಿಯಾದದ್ದು ಈ ಮಾಹಿತಿ ಹಕ್ಕು ಕಾಯ್ದೆ! ಕಳೆದ ವರ್ಷ ಭಾರತದ ಸಂಸತ್ತು ಅಂಗೀಕರಿಸಿದ ಕಾಯ್ದೆಯಡಿಯಲ್ಲಿ ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಾರ್ವಜನಿಕ ಇಲಾಖೆಗಳೂ, ಉದ್ದಿಮೆಗಳೂ ಬರುತ್ತವೆ. ಇಂತಹುದೊಂದು ಕಾಯ್ದೆ ದೇಶದಲ್ಲಿ ಮೊದಲ ಬಾರಿಗೆ ಸಾಧ್ಯವಾದದ್ದು ಅರುಣಾ ರಾಯ್ ಎಂಬ ಮಾಜಿ ಅಧಿಕಾರಿಂದಾಗಿ. ಅರುಣಾರವರೂ ಸಹ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಉತ್ತರ ಪ್ರದೇಶದ ಹಳ್ಳಿಗಳಲ್ಲಿ ಸಮಾಜ ಸೇವೆ ಮತ್ತು ಜನಜಾಗೃತಿ ಮೂಡಿಸುವ ಕೆಲಸಗಳಲ್ಲಿ ಬಹಳ ಹಿಂದಿನಿಂದಲೂ ತೊಡಗಿದ್ದಾರೆ. ಅವರ ಕಾರ್ಯವ್ಯಾಪ್ತಿಯಲ್ಲಿನ ಗ್ರಾಮಸ್ಥರು ತಮ್ಮ ಕನಿಷ್ಠ ವೇತನವಾದ 22 ರೂಪಾಯಿಯನ್ನು ತಮಗೆ ಪೂರ್ತಿಯಾಗಿ ಕೊಡಬೇಕು ಎಂದು 1990 ರಲ್ಲಿ ಅಲ್ಲಿನ ಭ್ರಷ್ಟ ಅಧಿಕಾರಿಗಳನ್ನು ಕೇಳುತ್ತಾರೆ. ಆದರೆ ಆ ಅಧಿಕಾರಿಗಳು, ನೀವು ಸರಿಯಾಗಿ ಕೆಲಸ ಮಾಡಿಲ್ಲ, ಆದ್ದರಿಂದ ನಿಮಗೆ ಕೊಡುವುದು ಕೇವಲ 11 ರೂಪಾಯಿ ಎಂದು ಹೇಳುತ್ತಾರೆ. ಆಗ ಅರುಣಾ ರಾಯ್‌ರ ಮುಂದಾಳತ್ವದಲ್ಲಿ ಆ ಜನ, ನಮಗೆ ನೀವು 11 ರೂಪಾಯಿ ಮಾತ್ರ ನೀಡುತ್ತಿರುವ ದಾಖಲೆಗಳನ್ನು ತೋರಿಸಿ, ಎನ್ನುತ್ತಾರೆ! ಆದರೆ ಆ ಭ್ರಷ್ಟರು, ಆ ದಾಖಲೆಗಳೆಲ್ಲ ರಹಸ್ಯವಾದವು, ಅವನ್ನೆಲ್ಲ ತೋರಿಸಲಾಗದು ಎಂದು ಕೆಂಪು ಪಟ್ಟಿಯನ್ನು ಎಳೆಯುತ್ತಾರೆ. ನಮ್ಮ ಹೆಸರು, ನಮ್ಮ ಸಹಿ, ನಮ್ಮ ಕೂಲಿಯ ವಿವರ ಎಲ್ಲವೂ ಇರುವ ಆ ದಾಖಲೆಗಳು ಅದು ಹೇಗೆ ರಹಸ್ಯ ದಾಖಲೆಗಳಾಗುತ್ತವೆ ಎಂದು ಆ ಜನ ಕೇಳಲಾರಂಭಿಸಿದ ಮೇಲೆ ಅದೇ ತರಹ ದೇಶದಾದ್ಯಂತ ಮಾಹಿತಿ ಹಕ್ಕಿಗಾಗಿ ಒತ್ತಾಯ ಪ್ರಾರಂಭವಾಗುತ್ತದೆ. ನಮ್ಮ ದೇಶದ ಸುಪ್ರೀಂ ಕೋರ್ಟು 1976 ರಲ್ಲಿಯೇ ಮಾಹಿತಿ ಹಕ್ಕು ಮೂಲಭೂತ ಹಕ್ಕಿನ ಒಂದು ಭಾಗ ಎನ್ನುವ ತೀರ್ಪನ್ನು ನೀಡಿರುತ್ತದೆ. ಆ ಆಧಾರದ ಮೇಲೆ ಅನೇಕ ರಾಜ್ಯ ಸರ್ಕಾರಗಳು ಆ ಕಾಯ್ದೆಯನ್ನು ಜಾರಿಗೆ ತರುತ್ತವೆ. ಕರ್ನಾಟಕದಲ್ಲಿಯೂ ಇದು ಮೂರ್ನಾಲ್ಕು ವರ್ಷಗಳ ಹಿಂದಿನಿಂದಲೆ ಇದೆಯಂತೆ. 2004 ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದ ಮೇಲೆ ಅರುಣಾ ರಾಯ್ ಸೋನಿಯಾ ಗಾಂಧಿಗೆ ಇಂತಹುದೊಂದು ಕಾಯ್ದೆಯ ದೇಶವ್ಯಾಪ್ತಿ ಅಗತ್ಯತೆಯ ಬಗ್ಗೆ ತಿಳಿಸಿದ ಮೇಲೆ ಸೋನಿಯಾರ ವಿಶೇಷ ಮುತುವರ್ಜಿಯಿಂದಾಗಿ ಕಳೆದ ವರ್ಷ ಪಾರ್ಲಿಮೆಂಟ್ ಅದನ್ನು ಅಂಗೀಕರಿಸುತ್ತದೆ.

ಇದನ್ನು ಬಳಸಲು ನೀವು ಮಾಡಬೇಕಾದದ್ದು ಇಷ್ಟೆ: ಸಂಬಂಧಿಸಿದ ಇಲಾಖೆಯ ಮಾಹಿತಿ ಅಧಿಕಾರಿಯ ಬಳಿ ನಿಮಗೆ ಬೇಕಾದ ಮಾಹಿತಿಯನ್ನು ಕೇಳಿ ಅರ್ಜಿ ಕೊಡಿ. ಅರ್ಜಿಯ ಜೊತೆಗೆ ಕೇವಲ ಹತ್ತು ರೂಪಾಯಿಯ ಫೀಜು ಕಟ್ಟಬೇಕು. ಸಂಬಂಧಿಸಿದ ಅಧಿಕಾರಿ ನಿಮಗೆ 30 ದಿನದಲ್ಲಿ ಮಾಹಿತಿ ಕೊಡಬೇಕು. ಇಲ್ಲದಿದ್ದಲ್ಲಿ ಆತನ ವೇತನದಲ್ಲಿ ಪ್ರತಿದಿನ 250 ರೂಪಾಯಿ ಕಡಿತವಾಗುತ್ತ ಹೋಗುತ್ತದೆ. ತಪ್ಪು ಮಾಹಿತಿ ಕೊಟ್ಟರೆ 25000 ರೂಪಾಯಿ ದಂಡ ಬೀಳುತ್ತದೆ. ನಿಮ್ಮ ಊರಿನ ರಸ್ತೆ, ಶಾಲೆಯ ಕಾಮಗಾರಿ ಲೆಕ್ಕದಿಂದ ಹಿಡಿದು, ನಿಮಗೆ ವಿದ್ಯುತ್ ಇಲಾಖೆ ಇನ್ನೂ ಕೊಡದಿರುವ ಕನೆಕ್ಷನ್, ತಾಲ್ಲೂಕಾಫೀಸಿನವರು ಸತಾಸುತ್ತಿರುವ ಪ್ರಮಾಣಪತ್ರಗಳು, ನಿಮ್ಮ ಶಾಸಕ ಖರ್ಚು ಮಾಡುತ್ತಿರುವ ಶಾಸಕ ನಿಧಿಯ ಬಾಬತ್ತು, ಇತ್ಯಾದಿಗಳನ್ನು ಕೇವಲ ಹತ್ತು ರೂಪಾಯಿಯಲ್ಲಿ ತೆಗೆದುಕೊಳ್ಳಬಹುದು. ಮಾಹಿತಿ ಸಿಕ್ಕ ಮೇಲೆ ಅದನ್ನು ಏನು ಮಾಡಬೇಕು ಎಂದು ನಿಮಗೇ ಗೊತ್ತಾಗುತ್ತದೆ. 50 ರೂಪಾಯಿಯ ಕೆಲಸಕ್ಕೆ 500 ತೋರಿಸಿದ್ದರೆ ತಕ್ಷಣ ಆ ಮಾಹಿತಿಯ ಪ್ರಕಾರ ಲೋಕಾಯುಕ್ತರಿಗೆ ದೂರು ನೀಡಿದರೆ, ಯಾಕೆ ನಮ್ಮಲ್ಲಿ ಭ್ರಷ್ಟಾಚಾರ ಕಮ್ಮಿಯಾಗದು, ಅಲ್ಲವೆ? ನಾವು ಸಿನಿಕರಾಗಬೇಕಾದದ್ದಿಲ್ಲ! ಸಿನಿಕರಲ್ಲದ ವೆಂಕಟಾಚಲರಂತಹವರು ನಮ್ಮ ನಡುವೆ ಇಲ್ಲವೆ? ಕಸ ಗುಡಿಸಲು ನಾವೂ ಪಾಲ್ಗೊಳ್ಳಬೇಕಷ್ಟೆ.

Oct 29, 2006

ನೀವು ಪ್ರಾಮಾಣಿಕರಾಗಿದ್ದರೆ ಇನ್ನು ಲಂಚ ಕೊಡಬೇಕಾಗಿಲ್ಲ!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ನವೆಂಬರ್ 10, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ನನ್ನ ಪ್ರಕಾರ ಲಂಚದಲ್ಲಿ ಎರಡು ವಿಧ. ಒಂದು, ಕಾನೂನುಬದ್ಧವಾಗಿ ಯಾವುದೇ ತಕರಾರಿಲ್ಲದೆ ಆಗಬೇಕಾದ ಕೆಲಸಕ್ಕೆ ಕೊಡುವ ಲಂಚ; ಉದಾಹರಣೆಗೆ, ಜನನಮರಣ ಪತ್ರಕ್ಕೆ, ಚಾಲಕ ಪರವಾನಿಗೆ ಪಡೆಯಲು, ರೇಷನ್ ಕಾರ್ಡ್ ಪಡೆಯಲು, ವಿದ್ಯುತ್ ಸಂಪರ್ಕ ಪಡೆಯಲು, ಜಾತಿ ಪ್ರಮಾಣ ಪತ್ರ, ಇತರೆ. ಇನ್ನೊಂದು, ಕಾನೂನು ವಿರೋಧಿ ಕೆಲಸಗಳಿಗೆ ಕೊಡುವ ಲಂಚ: ಉದಾಹರಣೆಗೆ, ಇನ್ನೂ ಆಗದಿರುವ ಕಾಮಗಾರಿಗಳಿಗೆ ಕಳ್ಳತನದಲ್ಲಿ ಬಿಲ್ ಮಾಡಿಸಿಕೊಳ್ಳಲು ಕೊಡುವ ಹಣ, ಸುಳ್ಳು ದಾಖಲೆಗಳನ್ನು ಸೃಷ್ಟಿಸಲು ಕೊಡುವ ಹಣ, ಕೋಟ್ಯಂತರ ಬೆಲೆಯ ಜಮೀನುಗಳನ್ನು ಲಕ್ಷಗಳ ಲೆಕ್ಕದಲ್ಲಿ ಮಂಜೂರು ಮಾಡಿಸಿಕೊಳ್ಳಲು ಕೊಡುವ ಹಣ, ನಾವು ಕೇಳುವ ಎಲ್ಲಾ ತರಹದ ಬೋಫೋರ್ಸ್, ಶವಪೆಟ್ಟಿಗೆ, ಛಾಪಾ ಕಾಗದ ಹಗರಣ, ಇತ್ಯಾದಿ. ಇವೆರಡರಲ್ಲಿ ದೇಶಕ್ಕೆ ಅತಿ ಕೆಟ್ಟದ್ದು ಯಾವುದಿರಬಹುದು?

ಭ್ರಷ್ಟಾಚಾರ ಭ್ರಷ್ಟಾಚಾರವೆ. ಆದರೆ ನನಗನ್ನಿಸುವುದು ಜನಸಾಮಾನ್ಯರು ತಮ್ಮ ನ್ಯಾಯಬದ್ಧ ಕೆಲಸ ಮಾಡಿಸಿಕೊಳ್ಳಲು ಕೊಡುವ ಹಣವೆ ಎಲ್ಲಕ್ಕಿಂತ ಅಪಾಯಕಾರಿಯಾದದ್ದು. ದೊಡ್ಡ ಮೊತ್ತಕ್ಕಿಂತ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುವುದೆ ಇದರಿಂದ. ಲಂಚ ತೆಗೆದುಕೊಂಡವರಿಗೆ ತಪ್ಪಿಸಿಕೊಳ್ಳಲು ಇಲ್ಲಿ ಅನೇಕ ದಾರಿಗಳಿರುತ್ತವೆ. ಈ ತರಹದ ಲಂಚ ತೆಗೆದುಕೊಳ್ಳುವವರು ಇದನ್ನು ಪ್ರತಿದಿನ ಮಾಡುತ್ತಿರುವುದರಿಂದ ಎಲ್ಲರೂ ಇದನ್ನೊಂದು ಜೀವನ ಕ್ರಮ ಎಂದು ಭಾವಿಸುವ ಸಾಧ್ಯತೆ ಇರುತ್ತದೆ. ಕೊಡುವವರು ಮತ್ತು ತೆಗೆದುಕೊಳ್ಳುವವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಎಲ್ಲರೂ ನೈತಿಕವಾಗಿ ದುರ್ಬಲರಾಗುತ್ತ ಹೋಗುತ್ತಾರೆ. ಆದರೆ, ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ಎಸಗುವವರಿಗೆ ಎಂದಿಗೂ ಒಂದು ಭಯವಿರುತ್ತದೆ. ಯಾರು ಬಂದು ಎಂದು ತಮ್ಮ ಫೈಲ್ ಓಪನ್ ಮಾಡುತ್ತಾರೊ ಎನ್ನುವ ಅಂಜಿಕೆಯಿರುತ್ತದೆ. ಎಷ್ಟೋ ಸಲ ಸಿಕ್ಕಿಯೂ ಹಾಕಿಕೊಳ್ಳುತ್ತಾರೆ. ಬಯಲಿಗೆಳೆಯಲು ಬೇಕಾಗುವುದು ಕೇವಲ ಒಬ್ಬ ವ್ಯಕ್ತಿ. ಈ ಮಟ್ಟದ ಭ್ರಷ್ಟಾಚಾರದಲ್ಲಿ ಕೆಲವೆ ಜನ ತೊಡಗಿರುವುದರಿಂದ ಅದು ಬಹುಜನರ ನೈತಿಕ ಶ್ರದ್ಧೆಯನ್ನು ಹಾಳು ಮಾಡುವುದಿಲ್ಲ. ಯಾರೊ ಒಬ್ಬ ಗಣ್ಯ/ಗಣ್ಯೆ ವ್ಯಭಿಚಾರ ಮಾಡುವುದಕ್ಕೂ ಊರೂರಿನಲ್ಲಿ ವ್ಯಭಿಚಾರ ಎನ್ನುವುದು ಸಾಮಾನ್ಯ ಎನ್ನುವುದಕ್ಕೂ ವ್ಯತ್ಯಾಸ ಇರುತ್ತದೆ.

ಈಗ ಇಂತಹ ಎರಡೂ ತರಹದ ಲಂಚವನ್ನು ಭಾರತದಾದ್ಯಂತ ಕೊಡದಿರಲು, ತಡೆಯಲು, ಕಂಡುಹಿಡಿಯಲು, ಭಾರತದ ಪ್ರತಿಯೊಬ್ಬ ಪ್ರಜೆಗೂ ಈಗ ಒಂದು ಅವಕಾಶವಿದೆ, ಆಯುಧವಿದೆ. ಈ ಆಯುಧ ಕೇವಲ ರಾಮನೊಬ್ಬ ಹೆದೆಯೇರಿಸಬಹುದಾದ ಬಿಲ್ಲಲ್ಲ. ಬದಲಿಗೆ ಸೀತೆಯೆಂಬ ಅಗ್ನಿದಿವ್ಯ ನೈತಿಕತೆಯನ್ನು ಪಡೆಯಲು ಪ್ರತಿಯೊಬ್ಬ ಪ್ರಜೆಯೂ ಉಪಯೋಗಿಸಬಹುದಾದ ಬಿಲ್ಲಿದು. ಹೆದೆಯೇರಿಸಲು ಬೇಕಾದದ್ದು ಕೇವಲ ಹತ್ತು ರೂಪಾಯಿ, ಒಂದು ಅರ್ಜಿ, ಸ್ವಲ್ಪ ಧೈರ್ಯ, ಮತ್ತು ಆಗಾಗ 30 ದಿನಗಳ ತಾಳ್ಮೆ! ಇದನ್ನು ದೆಹಲಿಯಲ್ಲಿನ ಅತಿ ಸಾಮಾನ್ಯ ಸ್ಲಮ್ ನಿವಾಸಿಗಳೂ ಹೆದೆಯೇರಿಸಿ ಬಾಣ ಹೂಡಿ ಭ್ರಷ್ಟತೆಯನ್ನು ಭೇದಿಸಿದ್ದಾರೆ. ಅವರಿಗೆ ಪ್ರಾರಂಭದಲ್ಲಿ ಇದನ್ನು ತೋರಿಸಿದ್ದು ದೆಹಲಿಯಲ್ಲಿನ ಪರಿವರ್ತನ್ ಎಂಬ ಜನಾಂದೋಲನ ಸಂಸ್ಥೆ ಮತ್ತು ಅರವಿಂದ್ ಖೇಜ್ರಿವಾಲ್ ಎಂಬ ಅದರ ರೂವಾರಿ.

ಐಐಟಿಗಳು ನಮ್ಮ ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳು. ಇಂಜಿನಿಯರಿಂಗ್‌ನಲ್ಲಿ ಆಸಕ್ತರಾದ ದೇಶದ ಅತಿ ಬುದ್ಧಿವಂತ ವಿದ್ಯಾರ್ಥಿಗಳು ಈ ಕಾಲೇಜುಗಳಿಗೆ ಪ್ರವೇಶ ಪರೀಕ್ಷೆಯ ಮುಖಾಂತರ ಸೇರಿಕೊಳ್ಳುತ್ತಾರೆ. ದೇಶವಿದೇಶಗಳಲ್ಲಿ ಐಐಟಿಗಳಿಂದ ಪದವಿ ಪಡೆದವರ ಸಾಧನೆ ಬಹಳ ಗಣನೀಯವಾದದ್ದು. ವಿದ್ಯಾರ್ಥಿಗಳಷ್ಟೆ ಅಲ್ಲ, ನಮ್ಮ ದೇಶವೂ ಅಷ್ಟೆ; ಬಹಳ ಕಾಳಜಿಯಿಂದ ಈ ಕಾಲೇಜುಗಳಲ್ಲಿ ಸಿಗುವ ಶಿಕ್ಷಣ ಶ್ರೇಷ್ಠ ಮಟ್ಟದ್ದಾಗಿರುವಂತೆ ಕೋಟ್ಯಂತರ ರೂಪಾಯಿ ವಿನಿಯೋಗಿಸಿದೆ, ವಿನಿಯೋಗಿಸುತ್ತಿದೆ. ತಾವು ಕಡಿಮೆ ಬೆಲೆಗೆ ಇಲ್ಲವೆ ಉಚಿತವಾಗಿ ಪಡೆಯುವ ಈ ಶ್ರೇಷ್ಠ ಮಟ್ಟದ ಶಿಕ್ಷಣ ಭಾರತೀಯರ ಶ್ರಮದ, ತೆರಿಗೆಯ ಹಣ ಎನ್ನುವುದು ಇಲ್ಲಿಂದ ಹೊರಬರುವ ವಿದ್ಯಾರ್ಥಿಗಳಿಗೆ ತಿಳಿದಿರುವುದರಿಂದಲೆ ಅವರೂ ಸಹ ಅನೇಕ ಸಾಮಾಜಿಕ ಸೇವೆಗಳಲ್ಲಿ, ಧನಸಹಾಯದ ರೂಪದಲ್ಲಿ ತಮ್ಮ ಕೃತಜ್ಞತೆಯನ್ನು ತೋರಿಸುತ್ತಿರುತ್ತಾರೆ. ಇಂತಹ ಐಐಟಿಗಳಲ್ಲೊಂದಾದ ಖರಗ್‌ಪುರ್ ಐಐಟಿಯಿಂದ 1989 ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದವರು ಅರವಿಂದ್ ಖೇಜ್ರಿವಾಲ್. ಐಐಟಿಗಳಿಂದ ಬಂದವರಿಗೆ ನಿರುದ್ಯೋಗದ ಸಮಸ್ಯೆ ಇಲ್ಲವೇ ಇಲ್ಲ ಎಂದು ಹೇಳಬಹುದೇನೊ. ಪದವಿ ಮುಗಿಸುವುಷ್ಟರಲ್ಲೆ ಅವರ ಕೈಯಲ್ಲಿ ಕ್ಯಾಂಪಸ್ ಸಂದರ್ಶನದಲ್ಲಿ ಪಡೆದ ಪ್ರತಿಷ್ಠಿತ ಕಂಪನಿಗಳ ಉದ್ಯೋಗದ ಆಫರ್ ಲೆಟರ್ ಇರುತ್ತದೆ. ಆದರೆ ಅರವಿಂದ್ ಖೇಜ್ರಿವಾಲ್ ಸಿವಿಲ್ ಸರ್ವಿಸಸ್ ಪರೀಕ್ಷೆ ತೆಗೆದುಕೊಂಡು, 1992 ರಲ್ಲಿ ಇಂಡಿಯನ್ ರೆವೆನ್ಯೂ ಸರ್ವಿಸ್ (IRS) ನಲ್ಲಿ ತೆರಿಗೆ ಅಧಿಕಾರಿಯಾಗಿ ಸೇರಿಕೊಳ್ಳುತ್ತಾರೆ. ತೆರಿಗೆ ಇಲಾಖೆಯಲ್ಲಿನ ತಮ್ಮ ಆರಂಭಿಕ ದಿನಗಳಲ್ಲಿಯೆ ಅವರಿಗೆ ಸರ್ಕಾರದಲ್ಲಿನ ಭ್ರಷ್ಟಾಚಾರಕ್ಕೆ ಅಲ್ಲಿ ಪಾರದರ್ಶಕತೆ ಇಲ್ಲದಿರುವುದೆ ಒಂದು ಮುಖ್ಯ ಕಾರಣ ಎಂದು ಗೊತ್ತಾಗುತ್ತದೆ. ತಮ್ಮ ಸರ್ಕಾರಿ ಕೆಲಸದಿಂದ ಸುದೀರ್ಘ ರಜೆ ತೆಗೆದುಕೊಂಡ ಅರವಿಂದ್, ವ್ಯವಸ್ಥೆಯಲ್ಲಿನ ಭ್ರಷ್ಟತೆಯ ವಿರುದ್ಧ ಹೋರಾಡಲು ತೊಡಗಿಸಿಕೊಳ್ಳುತ್ತಾರೆ. ಕೊನೆಗೆ ಸರ್ಕಾರಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ದೆಹಲಿಯಲ್ಲಿ ಪರಿವರ್ತನ್ ಆರಂಭಿಸುತ್ತಾರೆ. ನಾಲ್ಕೈದು ವರ್ಷಗಳಲ್ಲಿಯೆ ಇವರಿಗೆ ಎಷ್ಟು ಬೆಂಬಲ ಮತ್ತು ಯಶಸ್ಸು ದೊರೆತಿದೆಯೆಂದರೆ, ಈ ವರ್ಷದ ಪ್ರತಿಷ್ಠಿತ ಮ್ಯಾಗ್ಸೆಸೇ ಪ್ರಶಸ್ತಿ ಇವರಿಗೆ ದೊರಕಿದೆ.

ನೀವು ಪರಿವರ್ತನ್‌ನ ವೆಬ್‌ಸೈಟಿಗೆ ಹೋದರೆ, ಆ ಸೈಟಿನಲ್ಲಿನ ಇತರೆ ವಿಷಯ ನೋಡುವುದಕ್ಕೆ ಮೊದಲು ಮುಖಪುಟದಲ್ಲಿ ಕೇವಲ ಹತ್ತು ಸಾಲುಗಳಿವೆ. ಅವೇನೆಂದರೆ:

  • ಭಾರತದ ಪ್ರಜೆಗಳಾದ ನಾವು ಈ ದೇಶದ ಧಣಿಗಳು. ಸರ್ಕಾರಗಳು ಇರುವುದು ನಮ್ಮ ಸೇವೆಗಾಗಿ.
  • ನಾವೆಲ್ಲರೂ ತೆರಿಗೆ ಕಟ್ಟುತ್ತೇವೆ. ರಸ್ತೆಯಲ್ಲಿನ ಭಿಕ್ಷುಕ ಸಹ ತೆರಿಗೆ ನೀಡುತ್ತಾನೆ. ಅವನು ಸೋಪು ಅಥವ ಬೆಂಕಿಪೊಟ್ಟಣ ಅಂತಹುದನ್ನು ಕೊಂಡುಕೊಂಡಾಗ ಮಾರಾಟ ತೆರಿಗೆ, ಎಕ್ಸೈಜ್ ತೆರಿಗೆ, ಇತ್ಯಾದಿ ರೂಪದಲ್ಲಿ ತೆರಿಗೆ ಕೊಡುತ್ತಾನೆ. ಈ ದುಡ್ಡು ನಮಗೆ ಸೇರಿದ್ದು.
  • ನಮ್ಮ ಕ್ಷೇಮಾಭಿವೃದ್ಧಿಗಾಗಿ ಎಷ್ಟೊಂದು ಹಣ ವಿನಿಯೋಗಿಸಲಾಗಿದೆ ಎಂದು ಕಾಗದದ ಮೇಲಿದೆಯಲ್ಲ, ಆದರೆ ಆ ದುಡ್ಡೆಲ್ಲ ಎಲ್ಲಿ ಹೋಗುತ್ತದೆ? ಆಸ್ಪತ್ರೆಗಳಲ್ಲಿ ಯಾಕೆ ಔಷಧಿಗಳಿಲ್ಲ? ಸರ್ಕಾರಿ ಶಾಲೆಗಳಲ್ಲಿನ ಆ ಶಿಕ್ಷಕರೆಲ್ಲ ಎಲ್ಲಿ ಹೋದರು? ಜನ ಯಾಕೆ ಹಸಿವೆಯಿಂದ ಸಾಯುತ್ತಿದ್ದಾರೆ? ರಸ್ತೆಗಳೆಲ್ಲ ಯಾಕೆ ಇಷ್ಟೊಂದು ಹದಗೆಟ್ಟ ಸ್ಥಿತಿಯಲ್ಲಿವೆ? ಬೀದಿಗಳೆಲ್ಲ ಯಾಕೆ ಇಷ್ಟೊಂದು ಗಲೀಜಾಗಿವೆ?
  • ಧಣಿಯ ಪ್ರಾಥಮಿಕ ಕರ್ತವ್ಯ ಏನೆಂದರೆ ಸಮಯಕ್ಕೆ ಸರಿಯಾಗಿ ತನ್ನ ಸೇವಕನಿಂದ ಕೆಲಸದ ಲೆಕ್ಕ ತೆಗೆದುಕೊಳ್ಳುವುದು. ನಾವು, ಧಣಿಗಳು, ನಮ್ಮ ಸರ್ಕಾರಗಳಿಂದ ಎಂದೂ ಲೆಕ್ಕ ತೆಗೆದುಕೊಂಡಿಲ್ಲ. ಯಾಕೆಂದರೆ, ಲಭ್ಯವಿದ್ದ ಕಾನೂನು ಮತ್ತು ಆಡಳಿತದ ಚೌಕಟ್ಟಿನಲ್ಲಿ, ಹಾಗೆ ಮಾಡಲು ಸಾಧ್ಯವಿರಲಿಲ್ಲ.
  • ಆದರೆ, ಈಗ ನಮಗೆ ಸರ್ಕಾರಗಳನ್ನು ಪ್ರಶ್ನಿಸುವ ಅಧಿಕಾರ ಇದೆ. ಸರ್ಕಾರಗಳು ನಮಗೆ ಮಾಹಿತಿ ನೀಡುವುದು ಈಗ ಕಾನೂನುಬದ್ಧ. ಹಲವಾರು ರಾಜ್ಯ ಸರ್ಕಾರಗಳು ಮಾಹಿತಿ ಹಕ್ಕಿನ ಕಾನೂನುಗಳನ್ನು ತಂದಿವೆ. ಇದು ಸರ್ಕಾರವನ್ನು ಪ್ರಶ್ನಿಸಲು, ಅವರ ಕಡತಗಳನ್ನು ಪರಿಶೀಲಿಸಲು, ಸರ್ಕಾರದ ದಾಖಲೆಗಳ ಪ್ರತಿ ತೆಗೆದುಕೊಳ್ಳಲು, ಹಾಗೂ ಸರ್ಕಾರ ಕೈಗೊಳ್ಳುವ ಕೆಲಸಗಳನ್ನು ಪರಿಶೀಲಿಸುವ ಅಧಿಕಾರವನ್ನು ಪ್ರಜೆಗಳಿಗೆ ಕೊಟ್ಟಿದೆ.

ಮುಂದಿನ ವಾರ, ಖೇಜ್ರಿವಾಲ್ ಹೇಳಿದ ಮಾಹಿತಿ ಹಕ್ಕು ಕಾಯ್ದೆಯ ಹಿನ್ನೆಲೆ, ಅದನ್ನು ಬಳಸುವ ಬಗ್ಗೆ, ಮತ್ತು ಅದನ್ನು ಲಂಚಕ್ಕಿಂತ ಶಕ್ತಿಯುತವಾಗಿ ಬಳಸಿ ಯಶಸ್ಸು ಪಡೆದವರ ಕೆಲವು ನಿಜಕತೆಗಳು.

Oct 21, 2006

ದೇಶಪ್ರೇಮ ಎಂದರೆ ಸ್ವಮತಪ್ರೇಮವೆ?

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ನವೆಂಬರ್ 3, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಹೀಗೊಂದು ಸಭೆ:
ಅಕ್ಕ ಸಮ್ಮೇಳನಕ್ಕೆ ಬಂದಿದ್ದ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಸ್ಯಾನ್ ಫ್ರಾನ್ಸಿಸ್ಕೋದ ಸಿಲಿಕಾನ್ ಕಣಿವೆಗೂ ಬಂದಿದ್ದರು. ಆ ಪ್ರಯುಕ್ತ ಸ್ಥಳೀಯ ಕನ್ನಡ ಕೂಟ ಅವರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಿತ್ತು. ಹಿಂದುಗಳು ಪೂಜಿಸುವ ಧರ್ಮಸ್ಥಳದ ಮಂಜುನಾಥ ದೇವಸ್ಥಾನದ ಉಸ್ತುವಾರಿ ಜೈನ ಮತದ ಹೆಗ್ಗಡೆ ಮನೆಯವರದು. ಆದಾಯ ಮತ್ತು ತೀರ್ಥಯಾತ್ರೆಯ ವಿಚಾರದಲ್ಲಿ ಕರ್ನಾಟಕದ ತಿರುಪತಿ ಧರ್ಮಸ್ಥಳ. ಹಾಗಾಗಿ ದೇವಾಲಯದ ಖರ್ಚಿಗಿಂತ ಅನೇಕ ಪಟ್ಟು ಹೆಚ್ಚಿನ ಆದಾಯ ಈ ದೇವಸ್ಥಾನಕ್ಕಿದೆ. ಆ ಹೆಚ್ಚಿನ ಹಣವನ್ನು ದೇವಾಲಯದವರು ಅನೇಕ ಸಾಮಾಜಿಕ ಕೆಲಸಗಳಿಗೆ, ವಿದ್ಯಾಸಂಸ್ಥೆಗಳಿಗೆ ಉಪಯೋಗಿಸುತ್ತಿದ್ದಾರೆ. ಧಾರವಾಡದಲ್ಲಿನ ಇಂಜಿನಿಯರಿಂಗ್ ಕಾಲೇಜು, ದಂತ ವೈದ್ಯ ಕಾಲೇಜುಗಳಿಂದ ಹಿಡಿದು ಮಂಗಳೂರು, ಮೈಸೂರು, ಉಜಿರೆ ಇಲ್ಲೆಲ್ಲ ಅನೇಕ ಶಾಲೆ ಕಾಲೇಜುಗಳನ್ನು ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ನಡೆಸುತ್ತಿದೆ. ಇದರ ಜೊತೆಗೆ ಧರ್ಮಸ್ಥಳದ ಸುತ್ತಮುತ್ತ ಹೆಗ್ಗಡೆಯವರು ಕೈಗೊಂಡಿರುವ ಗ್ರಾಮೀಣಾಭಿವೃದ್ಧಿ ಕೆಲಸಗಳು, ಮದ್ಯಪಾನ ವಿರೋಧಿ ಕೆಲಸಗಳು ಕನ್ನಡಿಗರಿಗೆ ಪರಿಚಿತವಾದವುಗಳೇ.

ಅಂದಿನ ಸಭೆಯಲ್ಲಿ ಅವರ ವಿದ್ಯಾಸಂಸ್ಥೆಗಳಲ್ಲಿ ಓದಿದ್ದವರು ಇದ್ದರು. ಅವರ ಸಾಮಾಜಿಕ ಕೆಲಸಗಳನ್ನು ಪ್ರಶಂಸಿಸುವವರಿದ್ದರು. ಕರ್ನಾಟಕದ ಪ್ರಭಾವಿ ವ್ಯಕ್ತಿಯೊಬ್ಬರನ್ನು ಕಾಣಲು, ಅವರ ಮಾತುಗಳನ್ನು ಕೇಳಲು ಬಂದವರಿದ್ದರು. ಅನೇಕ ಜೈನ ಕನ್ನಡಿಗರಿದ್ದರು. ಹೀಗಾಗಿ ಅದು ಕೇವಲ ದೇವಸ್ಥಾನಕ್ಕೆ ಸಂಬಂಧಪಟ್ಟ ಸಭೆಯಾಗಲಿ, ಒಂದು ಜಾತಿ, ಮತಕ್ಕೆ ಸಂಬಂಧಿಸಿದ್ದಾಗಲಿ ಆಗಿರಲಿಲ್ಲ.

ಮೊದಲಿಗೆ ಹೆಗ್ಗಡೆಯವರು ಒಂದರ್ಧ ಗಂಟೆ ಸುಲಲಿತವಾಗಿ ಕನ್ನಡದಲ್ಲಿ ಮಾತನಾಡಿದರು. ದೇವಸ್ಥಾನದ ಸಮಿತಿಯ ವತಿಯಿಂದ ನಡೆಸುವ ಗ್ರಾಮೀಣಾಭಿವೃದ್ಧಿ ಯೋಜನೆ, ದುಶ್ಚಟಗಳ ನಿರ್ಮೂಲನ, ಮಹಿಳಾ ವಿಕಾಸ, ಸ್ವ-ಉದ್ಯೋಗ ಕಾರ್ಯಕ್ರಮಗಳು, ದೇವಸ್ಥಾನ ಮತ್ತು ಹಳೆಯ ಸ್ಮಾರಕಗಳ ಪುನರುದ್ಧಾರ ಮೊದಲಾದ ಹಲವಾರು ಯೋಜನೆಗಳನ್ನು ಪರಿಚಯ ಮಾಡಿಕೊಟ್ಟರು. ಎಲ್ಲರೂ ತಮ್ಮ ತಮ್ಮ ಭಾಷೆ ಸಂಸ್ಕೃತಿಗಳನ್ನು ಉಳಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಮೇರಿಕದಲ್ಲಿರುವ ಕನ್ನಡಿಗರು ಕನ್ನಡವನ್ನು ಉಳಿಸಿಕೊಂಡಿದ್ದಾರೆ. ತಮ್ಮ ಬೇರುಗಳನ್ನು ಉಳಿಸಿಕೊಳ್ಳುತ್ತಿರುವ ಪ್ರಯತ್ನವನ್ನು ಮಾಡುತ್ತಿರುವ ಇಲ್ಲಿಯ ಕನ್ನಡಿಗರಿಗೆ ಗೌರವ ಅರ್ಪಿಸುತ್ತೇನೆ ಎಂದು ಹೇಳಿ, ಕೊನೆಯಲ್ಲಿ 'ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು' ಉಲ್ಲೇಖಿಸುವುದರೊಂದಿಗೆ ತಮ್ಮ ಭಾಷಣ ಮುಗಿಸಿದರು. ಅವರ ಕನ್ನಡ ಭಾಷಣದಲ್ಲಿ ಜಾತಿ, ಮತಕ್ಕೆ ಸಂಬಂಧಿಸಿದಂತೆ ಏನೂ ಇರಲಿಲ್ಲ.

ನಂತರ ಪ್ರಶ್ನೋತ್ತರ. ಮೊದಲ ಪ್ರಶ್ನೆಯೆ, ಹಿಂದು ಧರ್ಮ ಹಿಂದುಳಿಯುತ್ತಿದೆಯಲ್ಲ, ಏಕೆ? ಅವರಿಗೆ ಕೇಳಿದ ಹಲವಾರು ಪ್ರಶ್ನೆಗಳಲ್ಲಿ ಬಹುಶಃ ಎರಡು ಪ್ರಶ್ನೆಗಳನ್ನು ಬಿಟ್ಟರೆ ಮಿಕ್ಕ ಎಲ್ಲಾ ಪ್ರಶ್ನೆಗಳೂ ಹಿಂದೂಗಳಿಗೆ ಏನಾಗಿದೆ, ಏನು ಮಾಡಿದರೆ ನಮ್ಮ ಮತ ಬೆಳೆಯುತ್ತದೆ, ಅದನ್ನು ಬೆಳೆಸುವುದಕ್ಕೆ ನೀವೇನು ಮಾಡುತ್ತಿದ್ದೀರ, ನಮ್ಮವರು ಯಾಕೆ ಒಗ್ಗಟ್ಟಾಗಿಲ್ಲ, ಈ ವಿಷಯದ ಮೇಲೆ ರಾಜಕಾರಣಿಗಳ ಮೇಲೆ ನೀವೇಕೆ ಪ್ರಭಾವ ಬೀರುತ್ತಿಲ್ಲ, ಇತ್ಯಾದಿ, ಇತ್ಯಾದಿ. ಬಹುಶಃ ಕೇಳಿದವರ ಅಭಿಪ್ರಾಯ ಜೈನಮತದ ವೀರೇಂದ್ರ ಹೆಗ್ಗಡೆ ಹಿಂದೂಮತ ಸಂರಕ್ಷರಾಗಬೇಕು; ಅವರು ಮಾಡುವ ಸಾಮಾಜಿಕ ಕೆಲಸಗಳಲ್ಲಿ ತಮಗೆ ಆಸಕ್ತಿ ಇಲ್ಲ ಎಂದಿರಬೇಕು! ಜಾತ್ಯತೀತ ಪ್ರಜಾಪ್ರಭುತ್ವದ ಭಾರತದಿಂದ ಜಾತ್ಯತೀತ ಪ್ರಜಾಪ್ರಭುತ್ವದ ಅಮೇರಿಕಾಗೆ ಬಂದು, ಇಲ್ಲಿ ಸ್ವಲ್ಪಮಟ್ಟಿಗೆ ಕ್ರಿಶ್ಚಿಯನ್ ಬಲಪಂಥೀಯತೆ ಪ್ರೋತ್ಸಾಹಿಸುವ ರಿಪಬ್ಲಿಕನ್ ಪಕ್ಷವನ್ನು ದ್ವೇಷಿಸುತ್ತ, ಭಾರತದಲ್ಲಿ ಮಾತ್ರ ಅಂತಹುದೇ ಹಿಂದೂ ಬಲಪಂಥೀಯತೆ ಬೆಳೆಯಬೇಕು ಎಂದು ಆಶಿಸುವ ಇವರದು ಆತ್ಮದ್ರೋಹವಲ್ಲದೆ ಮತ್ತೇನು?

ಅಲ್ಲಿ ಇನ್ನೂ ಅಸಂಬದ್ಧ ಅನ್ನಿಸಿದ್ದು ಹೆಗ್ಗಡೆಯವರು ಈ ತರಹದ ಪ್ರಶ್ನೆಗಳನ್ನು ಪರೋಕ್ಷವಾಗಿ ಪ್ರೋತ್ಸಾಹಿಸಿದ ರೀತಿ. ಹಿಂದೂಮತದ ಸ್ಥಿತಿಗತಿಯ ಬಗ್ಗೆ ಪ್ರಶ್ನೆ ಕೇಳಿದವರೊಂದಿಗೆ ಅವರು ಅನೇಕ ಸಲ ತಮ್ಮ ಸಹಮತ ವ್ಯಕ್ತ ಪಡಿಸಿದರು. ಹಿಂದೂಗಳು ಬೇರೆ ಮತದವರಷ್ಟು ಉಗ್ರರಲ್ಲ ಎನ್ನುವ ರೀತಿಯಲ್ಲಿ ಹೇಳಿ, ಆಶಾದಾಯಕ ವಿಷಯವೆಂದರೆ ಈಗೀಗ ಪ್ರಜಾವಾಣಿ ಗುಂಪಿನವರು ಸಹ ತಮ್ಮ ಸುಧಾ ವಾರಪತ್ರಿಕೆಯಲ್ಲಿ ಧಾರ್ಮಿಕ ವಿಚಾರಗಳನ್ನು ಪ್ರಕಟಿಸುತ್ತಿದ್ದಾರೆ, ಇವನ್ನು ಮೊದಲೆಲ್ಲ ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ ಎಂದರು! ಮಾಧ್ಯಮಗಳೂ ಈಗ ಮತವಿಚಾರಗಳನ್ನು ಮೊದಲಿಗಿಂತ ಹೆಚ್ಚಾಗಿ ಪ್ರಚಾರ ಮಾಡುತ್ತಿವೆ ಎಂದರು. ಅವರ ಲೆಕ್ಕದಲ್ಲಿ ಮತಪ್ರೇಮ ಒಂದು ಆಶಾದಾಯಕ ಬೆಳವಣಿಗೆ!

ಪ್ರಶ್ನೆ ಕೇಳಿದ ಅನೇಕರಿಗೆ ತಮ್ಮ ತಾಯ್ನಾಡಿನ ಬಗ್ಗೆ ಕಾಳಜಿ ಇಲ್ಲ ಎಂದಲ್ಲ. ಅನೇಕರಿಗೆ ಭಾರತ ಎಂದರೆ ಸಾಕು ಮೈ ನವಿರೇಳುತ್ತದೆ. ಆದರೆ ಅವರಲ್ಲಿ ಬಹುಪಾಲು ಜನರಿಗೆ ಭಾರತ ಎಂದರೆ ಪುಣ್ಯನದಿಗಳ, ತೀರ್ಥಸ್ಥಳಗಳ, ದೇವಸ್ಥಾನಗಳ ಪುರಾಣದ ಪುಣ್ಯನೆಲವೇ ಭಾರತ. ಅವರ ಲೆಕ್ಕದಲ್ಲಿ ತಮ್ಮ ಮತಪ್ರೇಮ ದೇಶಪ್ರೇಮವೂ ಹೌದು! ಅವರಿಗೆ ಜನತಾ ಜನಾರ್ಧನರ ಭಾರತದ ಕಲ್ಪನೆ ಆಗುತ್ತಿಲ್ಲ. ಇವರ ಪ್ರಕಾರ ನಾಲ್ಕಾರು ದೇವಸ್ಥಾನಗಳನ್ನು ಹೆಚ್ಚಿಗೆ ಕಟ್ಟಿಬಿಟ್ಟರೆ ದೇಶ ಉದ್ಧಾರವಾಗಿಬಿಡುತ್ತದೆ ಎಂದಿರಬೇಕು! ಆದರೆ, ದೇಶದ ಸಂಪತ್ತು ಸ್ವಾಭಿಮಾನದ, ಶ್ರಮಜೀವಿಗಳಾದ ಅಲ್ಲಿನ ಜನ, ಅಲ್ಲವೆ? ಅವರು ಸಾಮಾಜಿಕವಾಗಿ, ಆರ್ಥಿಕವಾಗಿ, ನೈತಿಕವಾಗಿ ಮುಂದುವರಿದರೆ ಮಾತ್ರ ದೇಶ ಮುಂದುವರಿದಂತೆ, ಗುಡಿ-ಚರ್ಚು ಮಸೀದಿಗಳನ್ನು ಕಟ್ಟುವುದರಿಂದ ಅಲ್ಲ, ಅಲ್ಲವೆ? ನಾಡು ಕಟ್ಟುವುದು ಎಂದರೆ ಸ್ಥಾವರ ರೂಪದ ಪ್ರಾರ್ಥನಾಮಂದಿರಗಳನ್ನು ಕಟ್ಟುವುದೆ?

ಅಂದಹಾಗೆ, ಮತಪ್ರೇಮ ಜಾತಿಪ್ರೇಮಕ್ಕಿಂತ ಅದು ಹೇಗೆ ಭಿನ್ನ? ನನ್ನ ಮತವೇ ಶ್ರೇಷ್ಠ ಎನ್ನುವ ತಾಲಿಬಾನಿಗೂ, ಬಜರಂಗಿಗೂ, ಕ್ರೈಸ್ತ ಮತಾಂಧನಿಗೂ ನನ್ನ ಜಾತಿಯೇ ಶ್ರೇಷ್ಠ ಎನ್ನುವ ಕರ್ಮಠ ಜಾತಿವಾದಿಗೂ ವ್ಯತ್ಯಾಸ ಇದೆಯೆ? ನನ್ನ ಮತವೆ ಶ್ರೇಷ್ಠ ಎನ್ನುವ ಮತಾಂಧರಲ್ಲವೆ ಬುದ್ಧನ ವಿಗ್ರಹ ಒಡೆದದ್ದು, ಮಸೀದಿ ಬೀಳಿಸಿದ್ದು, ಇನ್ನೊಂದು ಮತದವರು ಜಾಸ್ತಿಯಿರುವ ದೇಶಕ್ಕೆ ದಾಳಿಯಿಟ್ಟದ್ದು, ಇಡುತ್ತಿರುವುದು?

ಇನ್ನೊಂದು ಸಭೆ:
ಕಳೆದ ವಾರ ಮತ್ತೊಂದು ಸಭೆಗೆ ಹೋಗಿದ್ದೆ. ಎರಡು ಗಂಟೆಗಳ ಕಾಲ ಮಾತನಾಡಿದ, ಪ್ರಶ್ನೆಗಳಿಗೆ ಉತ್ತರಿಸಿದ ವ್ಯಕ್ತಿ ದೆಹಲಿಯಿಂದ ಬಂದವರು. ಇನ್ನೂ ನಲವತ್ತು ದಾಟಿರದ ಮನುಷ್ಯ. ದೇಶಪ್ರೇಮ ಎನ್ನುವ ಪದ ಅಲ್ಲಿ ಬರದಿದ್ದರೂ ಅಲ್ಲಿ ಇದ್ದದ್ದೆಲ್ಲ ಭಾರತದ ಕುರಿತ ದೇಶಪ್ರೇಮ. ಆ ವ್ಯಕ್ತಿ ಮಾತನಾಡಿದ್ದೆಲ್ಲ ನಾಡಜನರ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ, ಮೌಲ್ಯಗಳ ಬಗ್ಗೆ, ನೈತಿಕತೆ ಬಗ್ಗೆ, ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸುವ ಬಗ್ಗೆ, ನಾಗರೀಕರನ್ನು ತಮ್ಮ ಕಾರ್ಯಗಳಿಗೆ ತಾವೇ ಹೊಣೆಗಾರರನ್ನಾಗಿ ಮಾಡುವ ಬಗ್ಗೆ, ಜನ ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವುದರ ಬಗ್ಗೆ, ಸಕ್ರಿಯರಾಗುವ ಬಗ್ಗೆ, ತನ್ಮೂಲಕ ಭಾರತವನ್ನು ಕಟ್ಟುವುದರ ಬಗ್ಗೆ. ಆ ಸಭೆಯಲ್ಲಿ ಅಬ್ಬರವಿರಲಿಲ್ಲ. ಆಕ್ರೋಷವಿರಲಿಲ್ಲ. ಕೀಳರಿಮೆ, ಮೇಲರಿಮೆಗಳಿರಲಿಲ್ಲ. ಚೀತ್ಕಾರವಿರಲಿಲ್ಲ. ನಿರಾಶೆಯಿರಲಿಲ್ಲ. ಅಹಂಕಾರವಿರಲಿಲ್ಲ. ಕಪಟ ವಿನಯವಿರಲಿಲ್ಲ. ಯಾರು ಯಾರ ಕಾಲಿಗೂ ಬೀಳಲಿಲ್ಲ. ಜಾತಿ, ಮತದ ಹೆಸರೇ ಇರಲಿಲ್ಲ. ಸಭೆ ಮುಗಿದ ನಂತರ ಅನ್ನಿಸಿದ್ದು, ಇದೇ ಅಲ್ಲವೆ ನೈಜ ದೇಶಪ್ರೇಮ, ನಿಜವಾದ ದೇಶಸೇವೆ ಎಂದು. ಆ ವ್ಯಕ್ತಿ ಈ ವರ್ಷದ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪಡೆದಿರುವ ಅರವಿಂದ್ ಖೇಜ್ರಿವಾಲ. ಯಾರೀ ಅರವಿಂದ್ ಖೇಜ್ರಿವಾಲ? ಅವರು ಮಾಡುತ್ತಿರುವುದಾದರೂ ಏನು?

Oct 15, 2006

ಕೊಂದವನ ಮನೆಯವರಿಗೆ ಪ್ರೀತಿ ತೋರಿದವರು

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 27, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಆಮಿಷ್ ಜನರ ಹಿನ್ನೆಲೆ:
17 ನೆ ಶತಮಾನದಲ್ಲಿ ಜೇಕಬ್ ಅಮ್ಮನ್‌ನಿಂದ ಯೋರೋಪ್‌ನಲ್ಲಿ ಆರಂಭವಾದದ್ದು ಅಮಿಷ್ ಚಳವಳಿ. ಇದಕ್ಕೆ ಮೂಲ ಮೆನ್ನೊನೈಟ್ಸ್ ಎಂಬ ಮತ್ತೊಂದು ಕ್ರಿಶ್ಚಿಯನ್ ಚಳವಳಿ. ಮೆನ್ನೊನೈಟ್ಸ್ ಆಧುನಿಕರಣಗೊಳ್ಳುತ್ತಿದೆ ಎನ್ನಿಸಿದಾಗ ಮತ್ತೆ ಅದರ ಮೂಲ ಕಟ್ಟುಪಾಡುಗಳನ್ನು ಯಾವುದೇ ರಾಜಿಯಿಲ್ಲದೆ ಉಳಿಸಿಕೊಳ್ಳಬೇಕು ಎಂದು ಹುಟ್ಟಿದ್ದು ಆಮಿಷ್ ಗುಂಪು. 18 ನೆ ಶತಮಾನದ ಆರಂಭದಲ್ಲಿ ಕೆಲವು ಆಮಿಷ್ ಜನ ಅಮೇರಿಕಕ್ಕೆ ವಲಸೆ ಬಂದರು. ಹೀಗೆ ಬಂದವರು ಈಗ ಈ ದೇಶದ 22 ರಾಜ್ಯಗಳಲ್ಲಿ ಅಲ್ಲಲ್ಲಿ ವಾಸಿಸುತ್ತಿದ್ದಾರೆ. ಅಧಿಕೃತವಾಗಿ ಅವರ ಸಂಖ್ಯೆ ಎಷ್ಟು ಎಂದು ಗೊತ್ತಾಗದಿದ್ದರೂ ಓಲ್ಡ್ ಆರ್ಡರ್ ಆಮಿಷ್ ಮೆನ್ನೊನೈಟ್ ಚರ್ಚ್‌ನ ಸದಸ್ಯರ ಸಂಖ್ಯೆ 1,80,000 ಎಂದು ಅಂದಾಜು. ಅದರಲ್ಲಿ 45000 ಆಮಿಷರು ಒಹಾಯೊ ರಾಜ್ಯವೊಂದರಲ್ಲೆ ಇದ್ದಾರೆ. ಸುಮಾರು ೧೫೦೦ ಜನ ಕೆನಡಾದಲ್ಲಿ ಇದ್ದಾರೆ. (ಬೇರೆಬೇರೆ ವೆಬ್‌ಸೈಟ್‌ಗಳು ಬೇರೆಬೇರೆ ಜನಸಂಖ್ಯೆ ನಮೂದಿಸಿದರೂ ಎಲ್ಲರೂ ಕೊಡುವುದು ಲಕ್ಷಕ್ಕಿಂತ ಹೆಚ್ಚು ಮತ್ತು ಎರಡು ಲಕ್ಷಕ್ಕಿಂತ ಕಮ್ಮಿಯ ಸಂಖ್ಯೆ.) ಬಹುಪಾಲು ಎಲ್ಲಾ ಆಮಿಷರು ಹುಟ್ಟಿನಿಂದಲೆ ಆಮಿಷ್. ಹೊರಗಿನಿಂದ ಆಮಿಷ್ ಚರ್ಚಿಗೆ ಮತಾಂತರವಾದವರು ಬಹಳ ವಿರಳ. ಜೊತೆಗೆ ಆಮಿಷ್‌ನಿಂದ ಹೊರಗೆ ವಿವಾಹವಾಗುವುದೂ ನಿಷಿದ್ಧ. ಹಾಗಾಗಿ, ಯಾವುದೇ ವರ್ಣಸಂಕರವಾಗದೆ ಕೆಲವು ಆಮಿಷ್ ಗುಂಪುಗಳಲ್ಲಿ ಸೀಮಿತ ಜೀನ್‌ಗುಂಪು ಇರುವುದರಿಂದಾಗಿ ಕೆಲವು ವಂಶಪಾರಂಪರಿಕ ನ್ಯೂನತೆಗಳೊಂದಿಗೆ ಮಕ್ಕಳು ಜನಿಸುತ್ತಿದ್ದಾರೆ ಎಂದು ಅಂದಾಜು.

ಅವರ ಕೆಲವು ನಂಬಿಕೆಗಳು, ಜೀವನರೀತಿ:

  • ಮದುವೆಯಾಗದ ಆಮಿಷ್ ಗಂಡಸರು ಮೀಸೆಗಡ್ಡಗಳಿಲ್ಲದಂತೆ ಮುಖಕ್ಷೌರ ಮಾಡಿಕೊಂಡಿರುತ್ತಾರೆ. ಮದುವೆಯಾದ ನಂತರ ಕೇವಲ ಗಡ್ಡ ಮಾತ್ರ ಬಿಡುತ್ತಾರೆ. ಮೀಸೆ ಬಿಡುವುದು ನಿಷಿದ್ಧ. ಕಾರಣ, ಮೀಸೆ ಶೌರ್ಯ, ಅಹಂಕಾರ, ಹೆಮ್ಮೆ, ಸೈನ್ಯ, ಯುದ್ಧ ಮುಂತಾದಕ್ಕೆ ಸಂಕೇತ ಎಂದು!
  • ಬೈಬಲ್‌ನಲ್ಲಿ ಹೇಳಿರುವ ಮೂರು ಆದೇಶಗಳು ಇವರಿಗೆ ಬಹಳ ಪವಿತ್ರ. ನಾಸ್ತಿಕರ ಜೊತೆ ಬೆರೆಯಬೇಡ. ನ್ಯಾಯವಂತಿಕೆ ಮತ್ತು ಕೃತ್ರಿಮ ಅದು ಹೇಗೆ ಸಮಾನವಾಗುತ್ತದೆ? ಕತ್ತಲಿನೊಂದಿಗೆ ಬೆಳಕಿಗೆ ಅದೆಂತಹ ಸ್ನೇಹವಿರಲು ಸಾಧ್ಯ? ದೇವರು ಹೇಳಿದ, ಅವರಿಂದ ಹೊರಗೆ ಬಂದು ನೀನು ಪ್ರತ್ಯೇಕವಾಗಿ ಇರು.ಪ್ರಪಂಚವನ್ನು ಅನುಸರಿಸಬೇಡ. ಆದರೆ ಒಳ್ಳೆಯದು, ಸ್ವೀಕಾರಾರ್ಹವಾದದ್ದು, ಪರಿಪೂರ್ಣವಾದ್ದು ದೇವರ ಇಚ್ಛೆ ಎಂಬುದರತ್ತ ನಿನ್ನ ಮನಸ್ಸನ್ನು ನವೀಕರಿಸಿಕೊಳ್ಳುತ್ತಿರು
  • ಬೈಬಲ್‌ನ ಪ್ರಪಂಚವನ್ನು ಅನುಸರಿಸಬೇಡ ಎನ್ನುವುದರ ಆಧಾರದ ಮೇಲೆ, ವಿದ್ಯುತ್‌ಶಕ್ತಿ ಹೊರಜಗತ್ತಿಗೆ ಸಂಪರ್ಕ ಕಲ್ಪಿಸುತ್ತದೆ ಎನ್ನುವ ಕಾರಣದಿಂದ 1919 ರಲ್ಲಿ ಆಮಿಷ್ ಹಿರಿಯರು ವಿದ್ಯುತ್ ಬಳಕೆಯನ್ನು ನಿಷೇಧಿಸಿದರು. ವಿದ್ಯುತ್‌ನ ಬಳಕೆಯಿಂದ ಹೊರಜಗತ್ತಿಗೆ ಸುಲಭ ಸಂಪರ್ಕ ಏರ್ಪಟ್ಟು ಅದು ತಮ್ಮ ಚರ್ಚಿನ ಮತ್ತು ಕೌಟುಂಬಿಕ ಜೀವನ ಹದಗೆಡಲು ಕಾರಣವಾಗಬಹುದು ಎನ್ನುವುದು ಅವರ ಭಯವಾಗಿತ್ತು.
  • ಎರಡನೆ ದೈವಾಜ್ಞೆ, ನೀನು ಇಲ್ಲಿ ಮೇಲಿನ ಸ್ವರ್ಗದಲ್ಲಿನ, ಅಥವ ಕೆಳಗಿನ ಭೂಮಿಯ ಮೇಲಿನ, ಅಥವ ಭೂಮಿಯ ಕೆಳಗಿನ ನೀರಿನಲ್ಲಿರುವ ಯಾವುದನ್ನೇ ಆಗಲಿ ಮತ್ತು ಯಾವುದೇ ತರಹದ ಪ್ರತಿಮೆಯನ್ನಾಗಲಿ ನಿನಗೆ ನೀನು ಮಾಡಿಕೊಳ್ಳಕೂಡದುಎಂದು ಇರುವುದರಿಂದ ಅವರು ತಮ್ಮ ಯಾವುದೇ ಛಾಯಾಚಿತ್ರ ತೆಗೆಸಿಕೊಳ್ಳುವುದಿಲ್ಲ. ಜೊತೆಗೆ ತಮ್ಮ ಮಕ್ಕಳಿಗೆ ತರುವ ಗೊಂಬೆಗಳಿಗೂ ತಲೆ ಇರುವುದಿಲ್ಲ. ಇವೆಲ್ಲ ಮಕ್ಕಳು ಚಿಕ್ಕಂದಿನಿಂದಲೆ ಪ್ರತಿಮೆ, ವಿಗ್ರಹ ಮುಂತಾದವುಗಳಿಂದ ದೂರ ಇರಲು ಕಲಿಸುತ್ತದೆ. ಆದರೆ ಹೊರಗಿನವರು ತಮ್ಮ ನೇರ ಚಿತ್ರ ತೆಗೆಯದೆ ತಾವು ಕೆಲಸ ಮಾಡುತ್ತಿರುವಂತಹುದನ್ನು ತೆಗೆಯಲು ಅವರ ಅಭ್ಯಂತರವಿಲ್ಲ.
  • ಇಂಗ್ಲಿಷಿನ ಜೊತೆಗೆ ಆಮಿಷ್ ಜನ ಪೆನ್‌ಸಿಲ್ವೇನಿಯ ಜರ್ಮನ್ ಅಥವ ಪೆನ್‌ಸಿಲ್ವೇನಿಯ ಡಚ್ ಎಂಬ ಮತ್ತೊಂದು ಭಾಷೆಯನ್ನೂ ಆಡುತ್ತಾರೆ. ಇವರು ಆಮಿಷ್ ಅಲ್ಲದ ಜನರನ್ನು ಕರೆಯುವುದು ಮಾತ್ರ ಇಂಗ್ಲಿಷ್ ಎಂದು!
  • ಎಲ್ಲರೂ ಹೆಚ್ಚಾಗಿ ಕಪ್ಪು ಬಣ್ಣದ ಕುದುರೆಗಾಡಿಯನ್ನೆ ಹೊಂದಿರುತ್ತಾರೆ. ಬಣ್ಣ ಒಂದೇ ಇರುವುದು ಯಾಕೆಂದರೆ ಎಲ್ಲರೂ ಸಮಾನ ಎಂದು ನಿರೂಪಿಸಲು. ಕಾರು ಮತ್ತಿತರ ಯಂತ್ರ ವಾಹನಗಳು ಹೊರಜಗತ್ತಿಗೆ ಸುಲಭ ಸಂಪರ್ಕ ಕಲ್ಪಿಸುತ್ತವೆ ಎಂಬ ಕಾರಣಕ್ಕೆ ಅವುಗಳ ಮಾಲೀಕರಾಗುವುದು ನಿಷಿದ್ಧವಿದೆ. ಜೊತೆಗೆ, ಕಾರಿನ ಮಾಲೀಕತೆ ಸಮುದಾಯದಲ್ಲಿ ಅಸಮಾನತೆ ತರುತ್ತದೆ; ಅವುಗಳ ಮಾಲೀಕರು ಅವನ್ನು ತಮ್ಮ ಶ್ರೀಮಂತಿಕೆ, ಸ್ಥಾನಮಾನಗಳ ಪ್ರದರ್ಶನಕ್ಕೆ ಬಳಸುತ್ತಾರೆ; ಆ ಮೂಲಕ ಅದು ಸಮುದಾಯವನ್ನು ಬೇರ್ಪಡಿಸಬಹುದು ಎನ್ನುವುದು ಮತ್ತೊಂದು ಕಾರಣ. ಆದರೆ ಪ್ರಯಾಣ ಮತ್ತಿತರ ಸಮಯದಲ್ಲಿ ಇಂಗ್ಲಿಷ್ ಮಂದಿ ಉಪಯೋಗಿಸುವ ಬಸ್ಸು, ಕಾರು, ರೈಲು ಬಳಸಲು ಅನುಮತಿ ಇದೆ.
  • ಚರ್ಚಿನ ನಿಯಮಗಳನ್ನು ಪಾಲಿಸದವರಿಗೆ, ಅವರ ನಿಯಮಗಳ ಪ್ರಕಾರ ತಪ್ಪು ಮಾಡಿದವರಿಗೆ ಬಹಿಷ್ಕಾರ ಹಾಕುವ ಪದ್ದತಿ ಆಮಿಷಾ ಜನರಲ್ಲಿದೆ. ಬಹಿಷ್ಕಾರಕ್ಕೊಳಗಾದ ವ್ಯಕ್ತಿಯನ್ನು ಅವನ/ಅವಳ ಮನೆಯವರೂ ಬಹಿಷ್ಕೃತರೊಂದಿಗೆ ಜೊತೆಯಲ್ಲಿ ಊಟ ಮಾಡದೆ ಬಹಿಷ್ಕರಿಸಬೇಕು. ವಿವಿಧ ಆಮಿಷ್ ಗುಂಪುಗಳಲ್ಲಿ ಬಹಿಷ್ಕೃತರಿಗೆ ನೀಡುವ ಶಿಕ್ಷೆಯಲ್ಲಿ ವ್ಯತ್ಯಾಸಗಳಿವೆ.
  • ಅವರದು ಕೃಷಿಯಾಧಾರಿತ ಜೀವನ. ಉಳಲು ಕುದುರೆಗಳನ್ನು ಮಾತ್ರ ಬಳಸುತ್ತಾರೆ. ಯಾವುದೇ ಯಂತ್ರಗಳಿಲ್ಲ. ಬಹಳ ಕಾಲ ಕೈಯ್ಯಲ್ಲೆ ಹಾಲು ಕರೆಯುತ್ತಿದ್ದವರು ಈಗೀಗ ಹಾಲು ಕರೆಯುವ ಯಂತ್ರ ಬಳಸಲು ಪ್ರಾರಂಭಿಸಿದ್ದಾರಂತೆ. ಗ್ಯಾಸ್ ಬಳಸಬಹುದು. ಮನೆಗಳಲ್ಲಿ ನೀರು ಕಾಯಿಸಲು, ಒಲೆ ಮತ್ತು ದೀಪ ಉರಿಸಲು, ಮುಂತಾದುವಕ್ಕೆ ಗ್ಯಾಸ್ ಬಳಸುತ್ತಾರೆ.
  • ಸಮುದಾಯವೆಲ್ಲ ಸೇರಿ ಹೊಸದಾಗಿ ಮದುವೆಯಾದ ದಂಪತಿಗಳಿಗೆ ಯಾವುದೇ ಆಧುನಿಕ ಉಪಕರಣಗಳಿಲ್ಲದೆ ಹುಳಿ, ಸುತ್ತಿಗೆ, ಗರಗಸದ ಸಹಾಯದಿಂದ ಹಲಗೆ ಮತ್ತು ತೊಲೆಗಳಿಂದ ದೊಡ್ಡದಾದ ದನದ ಕೊಟ್ಟಿಗೆಯನ್ನು ಒಂದೇ ದಿನದಲ್ಲಿ ಕಟ್ಟಿಕೊಡುತ್ತಾರೆ. ನೂರಾರು ಗಂಡಸರು ಆ ಕೆಲಸ ಮಾಡುತ್ತಿದ್ದರೆ ಹೆಂಗಸರು ಊಟ, ತಂಪು ಪಾನೀಯದ ವ್ಯವಸ್ಥೆಯಲ್ಲಿ ತೊಡಗಿರುತ್ತಾರೆ. ಮನೆಯವರೆಲ್ಲರೂ ತಮ್ಮ ಕುದುರೆ ಗಾಡಿಗಳಲ್ಲಿ ಈ ಕೆಲಸಕ್ಕೆ ಬೆಳಿಗ್ಗೆಯೆ ಬಂದುಬಿಡುತ್ತಾರೆ.

ಕೊಲೆಪಾತಕನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು!

ಕಳೆದ ವಾರದ ಲೇಖನದಲ್ಲಿ ವಿವರಿಸಿದಂತೆ ತಮ್ಮ ಐದು ಜನ ಕಂದಮ್ಮಗಳನ್ನು ಗುಂಡಿಟ್ಟು ಕೊಂದು ಮತ್ತೈವರನ್ನು ಗಾಯಗೊಳಿಸಿದ ನಾಲ್ಮಡಿ ಚಾರ್ಲ್ಸ್ ಕಾರ್ಲ್ ರಾಬರ್ಟ್ಸ್‌ನ ಅಂತ್ಯಕ್ರಿಯೆಯಲ್ಲಿ ಆಮಿಷ್ ಜನ ನಡೆದುಕೊಂಡ ರೀತಿ ಮಾತ್ರ ಬಹುಶಃ ಅವರು ಮಾತ್ರ ಮಾಡಲು ಸಾಧ್ಯವಾದದ್ದು. ರಾಬರ್ಟ್ಸ್‌ನ ಹೆಣ ಊಳುವ ಸಂದರ್ಭದಲ್ಲಿ ಹಾಜರಿದ್ದ ಸುಮಾರು 75 ಜನರಲ್ಲಿ ಅರ್ಧದಷ್ಟು ಜನ ಆಮಿಷ್ ಜನರಂತೆ! ಯಾವಾಗಲೂ ಶಾಂತಿ ಮತ್ತು ಅಹಿಂಸೆ ಪಾಲಿಸುವುದು ಹಾಗು ಎಂತಹುದೇ ಸಂದರ್ಭದಲ್ಲಿ ಪ್ರತಿಭಟನೆ ಮಾಡದಿರುವುದು ಆಮಿಷರ ಸಿದ್ಧಾಂತ. ಕೊಲೆಪಾತಕ ನಮ್ಮನ್ನು ಕೊಲ್ಲಲು ಬಂದಾಗಲೂ ನಾವು ಪ್ರತಿಭಟಿಸಬಾರದು, ಹಿಂಸೆಗೆ ಇಳಿಯಬಾರದು ಎನ್ನುತ್ತಾರೆ ಅವರು. ಯಾಕೆ ಎಂದು ಅವರು ಕೊಡುವ ಕಾರಣಗಳು ಇವು: ಕೊಲೆಗಾರ ನಮ್ಮ ಮೇಲೆ ಬಿದ್ದಾಗ ನಾವು ಬಲ ಉಪಯೋಗಿಸಿ ಎದುರಿಸಿದ ಮಾತ್ರಕ್ಕೆ ನಮ್ಮ ಜೀವ ಉಳಿಯುತ್ತದೆ ಎನ್ನುವ ಖಾತರಿ ಇಲ್ಲ. ಕೊಲೆಗಾರ ನಮ್ಮನ್ನು ಸಾಯಿಸಬಹುದಾದ ಪಕ್ಷದಲ್ಲಿ, ಸಾಯಿಸಲಿ ಬಿಡಿ. ಕ್ರಿಶ್ಚಿಯನ್ನರಿಗೆ ಸಾವಿನ ಹೆದರಿಕೆಯಿಲ್ಲ. ಕನಿಷ್ಠ ನಮ್ಮ ಅಹಿಂಸಾತ್ಮಕ ಪ್ರತಿಕ್ರಿಯೆಲ್ಲಾದರೂ ಕೊಲೆಗಾರನಿಗೆ ಕ್ರಿಸ್ತನ ಪ್ರೀತಿ ಕಾಣಿಸಲಿ.

ಆಮಿಷರ ಕೆಲವು ಆಚರಣೆ ಮತ್ತು ನಂಬಿಕೆಗಳು ಮೂಢನಂಬಿಕೆಗಳಿಗೆ ಹತ್ತಿರ ಮತ್ತು ಜಡ ಹಾಗು ಮತ್ತೆ ಕೆಲವು ಆಚರಣೆಗಳು ಆದರ್ಶ ಸಮಾಜದಲ್ಲಿ ಮಾತ್ರ ಪಾಲಿಸಲು ಸಾಧ್ಯ ಎಂಬ ವಾಸ್ತವವನ್ನು ಗ್ರಹಿಸುತ್ತ ಅವರ ಅಹಿಂಸೆ ಮತ್ತು ಸಮುದಾಯ ಸೇವೆಯನ್ನು ನಾವೆಲ್ಲರೂ ಅಭಿನಂದಿಸೋಣ. ಬಹುಜನರಿಗೆ ಮಾರಕವಲ್ಲದ ಅವರ ಮುಗ್ಧ ಜೀವನ ರೀತಿ ಹಾಗೆ ಉಳಿದುಕೊಂಡರೆ ಅದಕ್ಕಿಂತ ಇನ್ನೇನು ಬೇಕು. ಏನಂತೀರಿ?

Oct 8, 2006

ಆಮಿಷಕ್ಕೊಳಗಾಗದ ಆಮಿಷರು

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 20, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಅಂದು ಗಾಂಧಿ ಜಯಂತಿ. ಬೆಳಗಿನಿಂದ ಅಲ್ಲಲ್ಲಿ ಕೇಳಿಬಂದ ಗಾಂಧಿಯನ್ನು ನೆನಪಿಸಿಕೊಳ್ಳುತ್ತ ಭಾರತದಲ್ಲಿನ ಮಕ್ಕಳು ಇನ್ನೇನು ನಿದ್ದೆಯ ಸೆರಗಿಗೆ ಜಾರಿಕೊಳ್ಳಬೇಕು ಎನ್ನುವ ಸಮಯದಲ್ಲಿ ಅಮೇರಿಕದ ಪೆನ್‌ಸಿಲ್ವೇನಿಯ ರಾಜ್ಯದಲ್ಲಿ ಬೆಳ್ಳನೆ ಬೆಳಗು. ಅಲ್ಲಿಯ ಏಕೋಪಾಧ್ಯಾಯ ಶಾಲೆಯೊಂದರಲ್ಲಿ ಹಿರಿಕಿರಿಯ ಮಕ್ಕಳು ಒಂದೇ ಕೋಣೆಯಲ್ಲಿ ಪಾಠಕ್ಕೆ ಸೇರಿದ್ದರು! ಹೌದು, ಎಲ್ಲಾ ವಯಸ್ಸಿನ ಎಲ್ಲಾ ತರಗತಿಯ ಮಕ್ಕಳಿಗೂ ಒಂದೇ ಕೋಣೆಯಲ್ಲಿ ಒಬ್ಬರೆ ಅಧ್ಯಾಪಕರು ಪಾಠ ಮಾಡುವ ಇಂತಹ ಅನೇಕ ಏಕೋಪಾಧ್ಯಾಯ ಶಾಲೆಗಳು ಅಮೇರಿಕದಲ್ಲಿವೆ. ಆದರೆ ಇವು ಯಾವುವೂ ದುಡ್ಡಿಲ್ಲದೆ, ಅನುಕೂಲವಿಲ್ಲದೆ, ಸರ್ಕಾರದ ಅಥವ ಸಮಾಜದ ಕಾಳಜಿಯಿಲ್ಲದೆ ವಿಧಿಯಿಲ್ಲದೆ ನಡೆಸುವ ಏಕೋಪಾಧ್ಯಾಯ ಶಾಲೆಗಳಲ್ಲ. ಬದಲಿಗೆ ಗಾಂಧಿಯ ಹೆಸರು ಕೇಳದೆ ಇದ್ದರೂ ಪ್ರಜ್ಞಾಪೂರ್ವಕವಾಗಿ ಗಾಂಧಿ ಪ್ರತಿಪಾದಿಸಿದ ಅಹಿಂಸೆ, ಪ್ರೀತಿ, ಸಮುದಾಯ ಸೇವೆಯನ್ನು ಮಾತ್ರ ನೆಚ್ಚಿಕೊಂಡು ಆಧುನಿಕ ಆಮಿಷಗಳನ್ನು ನಿರಾಕರಿಸಿ ಬದುಕುತ್ತಿರುವ ಕ್ರೈಸ್ತ ಮತದ ಆಮಿಷ್ ಜನಾಂಗಕ್ಕೆ ಸೇರಿದ ಶಾಲೆಗಳು.

ದಿನಾಂಕ ಅಕ್ಟೋಬರ್ 2, 2006. ಹಾಲು ಗಾಡಿ ಓಡಿಸುವ 32 ವರ್ಷ ವಯಸ್ಸಿನ ಲಾರಿ ಚಾಲಕ ಇಂತಹ ಏಕೋಪಾಧ್ಯಾಯ ಶಾಲೆಗೆ ತನ್ನ ಬಂದೂಕಿನೊಡನೆ ನುಗ್ಗಿದ. ಬಂದೂಕನ್ನು ಸ್ವತಃ ನೋಡಿರುವುದು ಇರಲಿ, ಅದರ ಚಿತ್ರವನ್ನೂ ನೋಡಿರದ ಅನೇಕ ಮಕ್ಕಳು ಆ ಶಾಲೆಯಲ್ಲಿ ಇದ್ದರು. ಅಮೇರಿಕದಲ್ಲಿನ ಮಕ್ಕಳು ಬಂದೂಕಿನ ಚಿತ್ರವನ್ನೂ ನೋಡಿರುವುದಿಲ್ಲ ಎನ್ನುವುದು ಇಲ್ಲಿ ಅಷ್ಟು ದೊಡ್ಡ ಉತ್ಪ್ರೇಕ್ಷೆಯೇನಲ್ಲ. ಯಾಕೆಂದರೆ ಊರು ಬಿಟ್ಟು ಹೊರಗೆ ಹೋಗಿರದ ಆ ಶಾಲೆಯ ಕೆಲವು ಮಕ್ಕಳು ಅದನ್ನು ನೋಡಿರುವ ಸಾಧ್ಯತೆ ಇರುವುದಿಲ್ಲ. ಯಾಕೆಂದರೆ ಅವರ ಮನೆಗಳಲ್ಲಿ ಟೀವಿ ಇಲ್ಲ, ಅವರು ಚಲನಚಿತ್ರ ನೋಡುವುದಿಲ್ಲ. ಮೊದಲಿಗೆ ಅವರ ಮನೆಗಳಿಗೆ ವಿದ್ಯುತ್‌ನ ಪ್ರವೇಶವೇ ಇಲ್ಲ! ಅವರು ಬಡವರೂ ಅಲ್ಲ.

ಆ ಬಂದೂಕುದಾರಿಯ ಹೆಸರು ನಾಲ್ಮಡಿ ಚಾರ್ಲ್ಸ್ ಕಾರ್ಲ್ ರಾಬರ್ಟ್ಸ್ ಎಂದು. ಒಳಗೆ ನುಗ್ಗಿದವನೆ ಕೋಣೆಯಲ್ಲಿನ ಎಲ್ಲಾ 15 ಗಂಡು ಮಕ್ಕಳನ್ನು ಮತ್ತು ನಾಲ್ಕು ಜನ ವಯಸ್ಕರನ್ನು ಹೊರಗೆ ಕಳುಹಿಸಿದ. ಉಳಿದ ಹತ್ತು ಜನ ಹೆಣ್ಣು ಮಕ್ಕಳ ಕೈಕಾಲು ಕಟ್ಟಿದ. ನಂತರ ಅವರನ್ನು ಸಾಲಾಗಿ ನಿಲ್ಲಿಸಿ ಅವರ ಮೇಲೆ ಅನೇಕ ಸುತ್ತು ಎಲ್ಲೆಂದರಲ್ಲಿ ಗುಂಡು ಹಾರಿಸಿದ. ಮೂವರು ಹೆಣ್ಣುಮಕ್ಕಳು ಸ್ಥಳದಲ್ಲೇ ಸತ್ತರು. ಒಂದು ಗುಂಡು ತನಗೆ ಹೊಡೆದುಕೊಂಡ; ಸತ್ತ. ಮತ್ತಿಬ್ಬರು ಹೆಣ್ಣು ಮಕ್ಕಳು ಆಸ್ಪತ್ರೆಯಲ್ಲಿ ಸತ್ತರು. ಉಳಿದ ಐದು ಮಕ್ಕಳು ಗುಂಡೇಟಿನ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸತ್ತವರೆಲ್ಲ 6 ರಿಂದ 13 ವರ್ಷ ವಯಸ್ಸಿನ ಮಕ್ಕಳು.

ಈ ಘಟನೆಯಾಗುವುದಕ್ಕೆ ಕೇವಲ 5 ದಿನಗಳ ಹಿಂದೆಯಷ್ಟೆ, ಸೆಪ್ಟೆಂಬರ್ 27 ರಂದು ಸುಮಾರು ಐವತ್ತು ವಯಸ್ಸಿನ ವ್ಯಕ್ತಿ ಅಮೇರಿಕದ ಬೇರೊಂದು ರಾಜ್ಯದಲ್ಲಿ ಶಾಲೆಯೊಂದಕ್ಕೆ ನುಗ್ಗಿ ಬಂದೂಕು ತೋರಿಸಿ ಆರು ವಿದ್ಯಾರ್ಥಿನಿಯರನ್ನು ತನ್ನ ವಶಕ್ಕೆ ತೆಗೆದುಕೊಂಡ. ನಂತರ ಅವರಲ್ಲಿ ನಾಲ್ವರನ್ನು ಹೊರಕ್ಕೆ ಕಳುಹಿಸಿದ. ನಮ್ಮಲ್ಲಿನ ಕಮ್ಯಾಂಡೊ ಮಾದರಿಯ ಇಲ್ಲಿನ ವಿಶೇಷ ಆಯುಧ ಮತ್ತು ತಂತ್ರ ತಂಡ (SWAT) ಬಂದಾಗ ತನ್ನ ವಶದಲ್ಲಿದ್ದ ಇಬ್ಬರು ಹುಡುಗಿಯರಲ್ಲಿ ಒಬ್ಬಳ ಮೇಲೆ ಪ್ರಾಣಾಂತಿಕ ಗುಂಡುಹಾರಿಸಿ ನಂತರ ತನಗೆ ತಾನೆ ಇನ್ನೊಂದು ಗುಂಡು ಹೊಡೆದುಕೊಂಡು ಸ್ಥಳದಲ್ಲೆ ಸತ್ತ. ಗುಂಡು ತಗಲಿದ ಹುಡುಗಿ ಆಸ್ಪತ್ರೆಯಲ್ಲಿ ಸತ್ತಳು. ಇದಾದ ಎರಡೇ ದಿನಕ್ಕೆ ಮತ್ತೊಂದು ರಾಜ್ಯದಲ್ಲಿ 15 ವರ್ಷ ವಯಸ್ಸಿನ ಹುಡುಗ ತನ್ನ ಶಾಲೆಯ ಪ್ರಿನ್ಸಿಪಾಲ್‌ಗೆ ಗುಂಡು ಹೊಡೆದು ಸಾಯಿಸಿದ. ಇದಕ್ಕೂ ಮುಂಚಿನ ಸೆಪ್ಟೆಂಬರ್ ಎರಡನೆ ವಾರದ ಮತ್ತೊಂದು ಘಟನೆಯಲ್ಲಿ ೨೫ ವರ್ಷದ ವ್ಯಕ್ತಿ ಶಾಲೆಯಲ್ಲಿ ಗುಂಡು ಹಾರಿಸಿ ಒಬ್ಬನನ್ನು ಕೊಂದು ಇತರೆ ೨೦ ಜನರನ್ನು ಗಾಯಗೊಳಿಸಿದ್ದ.

ಬಂದೂಕು ಹೊಂದಿರುವುದು ಹೆಮ್ಮೆ ಮತ್ತು ಹಕ್ಕು ಎನ್ನುವ ಅಮೇರಿಕಾದಲ್ಲಿನ ಸಂಸ್ಕೃತಿಯಿಂದಾಗಿ ಕೆಲವೊಂದು ಮತಿಗೆಟ್ಟ ವಿಕೃತ ಮನಸ್ಸಿನ ಹುಡುಗರು ಹಾಗು ವಯಸ್ಕರು ಸುಲಭವಾಗಿ ಸಿಕ್ಕುವ ಗನ್ ಹಿಡಿದು ಆಗಾಗ್ಗೆ ಶಾಲೆ ಕಾಲೇಜುಗಳಿಗೆ ನುಗ್ಗಿ ಗುಂಡು ಹಾರಿಸಿ ಬೇರೆಯವರನ್ನು ಸಾಯಿಸುತ್ತಿರುತ್ತಾರೆ. ಕೊಲರ್‍ಯಾಡೊ ರಾಜ್ಯದ ಕೊಲಂಬೈನ್ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಏಪ್ರಿಲ್ 20, 1999 ರಂದು ತಮ್ಮ ಶಾಲೆಗೆ ನುಗ್ಗಿ 12 ಜನ ವಿದ್ಯಾರ್ಥಿಗಳನ್ನು ಹಾಗು ಒಬ್ಬ ಉಪಾಧ್ಯಾಯರನ್ನು ಕೊಂದಿದ್ದು ತಮ್ಮ ದೇಶದಲ್ಲಿನ ಬಂದೂಕು ಸಂಸ್ಕೃತಿಯ ಬಗ್ಗೆ ಇಲ್ಲಿನ ಜನ ಗಂಭೀರವಾಗಿ ಚಿಂತಿಸುವಂತೆ ಮಾಡಿತ್ತು. ಆ ಘಟನೆಯ ಹಿನ್ನೆಲೆಯಲ್ಲಿ ಮೈಕೆಲ್ ಮೂರ್ ತೆಗೆದ 'ಬೌಲಿಂಗ್ ಫಾರ್ ಕೊಲಂಬೈನ್' ಸಾಕ್ಷ್ಯಚಿತ್ರ ಆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದದ್ದಲ್ಲದೆ ಅನೇಕ ಚರ್ಚೆಗಳನ್ನು ಹುಟ್ಟಿಹಾಕಿತ್ತು. ಇದೇ ಗಾಂಧಿ ಜಯಂತಿಯಂದು ಆದ ಮೇಲೆ ವಿವರಿಸಿದ ರಕ್ತಪಾತ ಮತ್ತೊಮ್ಮೆ ಅಂತಹ ಚರ್ಚೆಯನ್ನು ಹುಟ್ಟುಹಾಕಿರುವುದಲ್ಲದೆ ಇಡೀ ಅಮೇರಿಕಕ್ಕೆ ತಮ್ಮ ಪಾಡಿಗೆ ತಾವಿದ್ದ ಒಂದು ವಿಶಿಷ್ಟ ಪಂಗಡದ ಪರಿಚಯವನ್ನು ದೊಡ್ಡ ರೀತಿಯಲ್ಲಿ ಮಾಡಿಸುತ್ತಿದೆ.

ಬಹುಶಃ ಮೂರ್‍ನಾಲ್ಕು ವರ್ಷದ ಹಿಂದೆ ಇರಬಹುದು ನಾನು ಹ್ಯಾರಿಸನ್ ಫೋರ್ಡ್‌ನ 'ವಿಟ್ನೆಸ್' ಸಿನೆಮಾ ನೋಡಿದ್ದು. ಆ ಸಿನೆಮಾ ನೋಡುವಾಗಲೆ ಅಮಿಷ್ ಎನ್ನುವ ಪದ ಮೊದಲ ಸಲ ಕೇಳಿದ್ದು. ಆ ಚಿತ್ರದಲ್ಲಿ ತಮ್ಮ ಸುತ್ತಮುತ್ತ ಅತ್ಯಾಧುನಿಕತೆಯ ಕಾರು-ರೈಲು-ಯಂತ್ರಗಳಿಂದ ಅಮೇರಿಕ ಆವರಿಸಿಕೊಂಡಿದ್ದರೂ ತಾವು ಮಾತ್ರ ಜಟಕಾ ಬಂಡಿಗಳಲ್ಲಿ ಓಡಾಡುವ, ಕರೆಂಟ್ ಉಪಯೋಗಿಸದ, ಎರಡು ಶತಮಾನದ ಹಿಂದಿನ ರೀತಿಯ ಜೀವನ ನಡೆಸುವವರಂತೆ ಕಾಣಿಸುತ್ತಿದ್ದ ಐರೋಪ್ಯ ಮೂಲದ ಆ ಬಿಳಿಯ ಕೈಸ್ತ ಜನರನ್ನು ನೋಡಿ ನನಗೆ ನಂಬಲಾಗಲಿಲ್ಲ. ತಕ್ಷಣ ಇಂಟರ್‌ನೆಟ್‌ನಲ್ಲಿ ಹುಡುಕಿದಾಗ ಸುಮಾರು ಎರಡು ಲಕ್ಷದಷ್ಟು ಆಮಿಷ್ ಜನ ಅಮೇರಿಕದಲ್ಲಿ ವಾಸವಾಗಿದ್ದಾರೆ, ಅವರೆಲ್ಲ ಹೆಚ್ಚಾಗಿ ಪೂರ್ವರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ವಾಸವಿದ್ದಾರೆ ಎಂದು ಗೊತ್ತಾಯಿತು. ಹಾಗೂ 'ವಿಟ್ನೆಸ್' ಚಲನಚಿತ್ರದಲ್ಲಿ ತೋರಿಸಿರುವುದು ಉತ್ಪ್ರೇಕ್ಷೆಯಲ್ಲ ಎಂದೂ ತಿಳಿಯಿತು. ಆಮಿಷ್ ಜನ ತಮ್ಮ ಫೋಟೊ ತೆಗೆಸಿಕೊಳ್ಳುವುದಿಲ್ಲ. ಮಕ್ಕಳಿಗೆಂದು ತರುವ ಬೊಂಬೆಗಳಿಗೆ ತಲೆಯೇ ಇರುವುದಿಲ್ಲ. ಕೃಷಿಯಲ್ಲಿ ಯಂತ್ರಗಳ ಉಪಯೋಗವಿಲ್ಲ. ಕಟ್ಟಳೆ ಮೀರಿದವರಿಗೆ ಕಠಿಣ ಶಿಕ್ಷೆಯ ಬಹಿಷ್ಕಾರ ಬೇರೆ. ಅಂದ ಹಾಗೆ ಆಮಿಷ್ ಗಂಡಸರು ಮೀಸೆ ಬಿಡುವುದಿಲ್ಲ. ಮೀಸೆ ಬಿಡದಿರುವುದಕ್ಕೆ ಕಾರಣ ಏನು ಗೊತ್ತೆ? ಗೊತ್ತಿದ್ದರೆ ಒಂದು ಸಾಲು ಬರೆಯಿರಿ. ಇಂತಹ ಎಷ್ಟೋ ವಿಭಿನ್ನತೆಗಳಿರುವ ಆಮಿಷ್ ಜನಾಂಗದ ಮತ್ತು ತಮ್ಮ ಮಕ್ಕಳನ್ನು ಕೊಂದವನ ಬಗ್ಗೆ ಅವರು ನಡೆದುಕೊಂಡ ರೀತಿಯ ಬಗೆಗಿನ ಮತ್ತಷ್ಟು ವಿವರಗಳನ್ನು ಮುಂದಿನ ವಾರ ಬರೆಯುತ್ತೇನೆ.

Sep 29, 2006

ಅಯೋಗ್ಯರನ್ನು ಕೈಯ್ಯಾರೆ ಆರಿಸಿಕೊಂಡು ಅಭಿವೃದ್ಧಿಯಾಗಲಿಲ್ಲ ಅಂದರೆ?

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 13, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ರಾಜಧಾನಿಯ ಹೊರಗೆ ಬೆಳಗಾವಿಯಲ್ಲಿ ಮೊಟ್ಟಮೊದಲ ಬಾರಿಗೆ ನಡೆದ ವಿಶೇಷ ಅಧಿವೇಶನವನ್ನು ಗಮನಿಸುತ್ತ, ಮೂರು ವರ್ಷದ ಹಿಂದೆ ಬರೆದಿದ್ದ "ಬೆಳಗಾವಿ, ಹೊಸೂರು ಮತ್ತು ಅಯೋಗ್ಯ ಆಡಳಿತಗಾರರು" ಲೇಖನವನ್ನು ಮತ್ತೊಮ್ಮೆ ಓದುತ್ತ ಕುಳಿತಾಗ ತೀವ್ರವಾಗಿ ಅನ್ನಿಸುತ್ತಿರುವುದು ಏನೆಂದರೆ, ಇದರಲ್ಲಿ ಜನರ ಪಾಲು ಏನೂ ಇಲ್ಲವೆ ಎನ್ನುವುದು. ಅಯೋಗ್ಯ ಆಡಳಿತಗಾರರು ಎಂದರೆ ಯಾರು? ಪ್ರಜಾಪ್ರಭುತ್ವದಲ್ಲಿ ಅಯೋಗ್ಯರು ಅದು ಹೇಗೆ ಆಡಳಿತಗಾರರಾದರು? ಅವರನ್ನು ಚುನಾಯಿಸಿದವರು ಯಾರು? ಯಾಕಾಗಿ ಅಂತಹವರನ್ನು ಚುನಾಯಿಸಿದರು? ಚುನಾಯಿಸಿಯಾದ ಮೇಲೆ ಅವರಿಂದ ಕನ್ನಡ ಉದ್ಧಾರವಾಗಲಿಲ್ಲ, ಕನ್ನಡ ಜನಪದ ಉದ್ಧಾರವಾಗಲಿಲ್ಲ ಎಂದರೆ ನಿಜವಾಗಲೂ ಜನರು ತಮ್ಮ ಜವಾಬ್ದಾರಿಯನ್ನು ಬೇರೊಬ್ಬರ ಹೆಗಲಿಗೆ ಪ್ರಜ್ಞಾಪೂರ್ವಕವಾಗಿ ವರ್ಗಾಯಿಸುತ್ತಿಲ್ಲವೆ? ಚುನಾವಣೆಯ ನಂತರ ರಾಜಕಾರಣಿಗಳು ಹೇಳುವ ಕ್ಲೀಷೆಯುಕ್ತ ಮಾತಾದ ಮತದಾರ ಪ್ರಭು ನೀಡಿದ ತೀರ್ಪುಎನ್ನುವುದು ಯಾವಾಗಲೂ ನ್ಯಾಯವಾದದ್ದೆ? ಯೋಗ್ಯವಾದದ್ದೆ?

ಚುನಾವಣೆಯಲ್ಲಿ ಒಬ್ಬರನ್ನು ಗೆಲ್ಲಿಸಲು ಬಹುಸಂಖ್ಯಾತ ಮತದಾರರಿಗೆ ಒಂದು ಕಾರಣವಿರುತ್ತದೆ. ಉದಾಹರಣೆಗೆ, ಮಹಾರಾಷ್ಟ್ರ ಏಕೀಕರಣ ಸಮಿತಿಯ ಶಾಸಕರು ಗೆಲ್ಲಲು ಆ ಕ್ಷೇತ್ರದಲ್ಲಿ ಮತ ಚಲಾಯಿಸಿದ ಬಹುಜನರು ತಾವು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬುದನ್ನೇ ಮುಖ್ಯ ವಿಷಯವನ್ನಾಗಿ ಮಾಡಿಕೊಂಡಿರುವುದು. ಈಗ ಆ ಕ್ಷೇತ್ರಗಳಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿಯಾಗಿಲ್ಲ ಅಂದರೆ ಅದಕ್ಕೆ ಕಾರಣ ಆ ಕ್ಷೇತ್ರದ ಶಾಸಕರಲ್ಲ, ಬದಲಿಗೆ ಅಲ್ಲಿನ ಜನ. ಅವರಿಗೆ ಅಭಿವೃದ್ಧಿಗಿಂತ ಅವರ ಶಾಸಕ ಪ್ರತಿ ಸಲದ ವಿಧಾನಸಭಾ ಅಧಿವೇಶನದಲ್ಲಿ ಮರಾಠಿಯಲ್ಲಿ ಕೂಗಾಡುತ್ತ, ಕಪ್ಪು ಬಟ್ಟೆ ಧರಿಸಿ ಧರಣಿ ಕೂರುತ್ತ, ಸಭಾತ್ಯಾಗ ಮಾಡುತ್ತ, ಮಹಾರಾಷ್ಟ್ರದಿಂದ ಒಬ್ಬ ರಾಜಕಾರಣಿಯನ್ನು ಬೆಳಗಾವಿಗೆ ಆಹ್ವಾನಿಸಿ ಪ್ರಚೋದನಾಕಾರಿ ಭಾಷಣ ಮಾಡಿಸುತ್ತ ತಮ್ಮ ಊರು ಮಹಾರಾಷ್ಟ್ರಕ್ಕೆ ಸೇರುವ ತನಕ ಹೋರಾಡುತ್ತಿರಬೇಕು. ಈ ಮಧ್ಯೆ ಅವರ ಊರು ಎಷ್ಟೇ ಹಿಂದುಳಿದು ಬಿಟ್ಟರೂ ಅವರಿಗೆ ಚಿಂತೆಯಿಲ್ಲ.

ಆದರೆ, ಇಡೀ ಉತ್ತರ ಕರ್ನಾಟಕವೆ ಹಿಂದುಳಿದಿದೆ ಎನ್ನುವ ಮಾತೊಂದಿದೆಯಲ್ಲ? ಅಲ್ಲಿನ ಮಿಕ್ಕ ಕ್ಷೇತ್ರಗಳ ಜನಕ್ಕೆ ಮರಾಠಿಯೆನ್ನುವುದು ಒಂದು ವಿಷಯವೆ ಅಲ್ಲವಲ್ಲ? ಹಾಗಾದರೆ, ಆ ಭಾಗ ಹಿಂದುಳಿದಿರಲು ಕಾರಣವೇನು? ಅಲ್ಲಿನ ಜನಗಳಿಗೆ ಅಭಿವೃದ್ಧಿಗಿಂತ ಬೇರೆ ವಿಷಯಗಳು ಮುಖ್ಯವಾಗುತ್ತಿವೆಯೆ?

ಇರಬಹುದು. ಇರಬಹುದು ಏನು, ಇರಲೇಬೇಕು. ತಮ್ಮ ಜಾತಿಯ ಯಾರೋ ಒಬ್ಬ ಮುಖ್ಯಮಂತ್ರಿ ಆಗುತ್ತಾನೆ ಎಂದರೆ ಮಿಕ್ಕೆಲ್ಲ ವಿಷಯಗಳು ಗೌಣವಾಗಿ ಅವರವರ ಕ್ಷೇತ್ರಗಳಲ್ಲಿ ಆ ಜಾತಿಯ ಜನ ಆ ಸಂಭವನೀಯ ಮುಖ್ಯಮಂತ್ರಿಯ ಪಕ್ಷಕ್ಕೆ ಮತ ನೀಡುವುದಿಲ್ಲವೆ? ಯಾವುದೋ ಊರಿನಲ್ಲಿ ಅಲ್ಲಿನ ಸ್ಥಳೀಯ ಕೋಮುವಾದಿಗಳು ತಮ್ಮ ಊರಿನ ಒಂದು ಜಾಗ ಮಸೀದಿಗೆ ಸೇರಿದ್ದು, ದೇವಸ್ಥಾನಕ್ಕೆ ಸೇರಿದ್ದು ಎಂದು ಕಿತ್ತಾಡಿಕೊಳ್ಳುತ್ತಿದ್ದರೆ, ಬೇರೆ ಕ್ಷೇತ್ರಗಳಲ್ಲಿನ ಜನ ತಮ್ಮ ಕೋಮುವನ್ನು ಪ್ರತಿನಿಧಿಸುವ ಪಕ್ಷಕ್ಕೆ ಮತ ಚಲಾಯಿಸುವುದಿಲ್ಲವೆ? ತಮ್ಮ ಊರಿನ ಯಾವುದೊ ಒಂದು ಜಾತಿಯೊ ಪಂಗಡವೊ ಒಂದು ಪಕ್ಷದೊಂದಿಗೆ ಗುರುತಿಸಿಕೊಂಡಿದೆ ಎಂದರೆ, ಅಭ್ಯರ್ಥಿ ಯಾರೆಂದು ಗಮನಿಸದೆ ಆ ಪಂಗಡದ ವಿರೋಧಿ ಪಕ್ಷಕ್ಕೆ ಇನ್ನೊಂದು ಪಂಗಡದವರು ಮತ ಚಲಾಯಿಸುವುದಿಲ್ಲವೆ? ಚುನಾವಣಾ ಪ್ರಚಾರ ಸಮಯದಲ್ಲಿ ಸ್ವಾಭಿಮಾನ, ಆತ್ಮಾಭಿಮಾನ ಬಿಟ್ಟು ಯಾರು ಹೆಚ್ಚಿನ ಹಣ ಮತ್ತು ಹೆಂಡ ಕೊಡುತ್ತಾನೊ ಅಂತಹ ಅಭ್ಯರ್ಥಿಯ ಪರ ನಿರ್ಲಜ್ಜೆಯಿಂದ ಓಡಾಡಿ ಮತ ಹಾಕುವುದಿಲ್ಲವೆ? ಹೀಗೆ ಪಂಗಡ, ಜಾತಿ, ಮತ, ಹೆಂಡ, ಹಣ ಮುಂತಾದ ಕ್ಷುಲ್ಲಕ, ಕೀಳು ವಿಷಯಗಳ ಆಧಾರದ ಮೇಲೆ ಮತ ಹಾಕುವ ಜನ, ನಂತರ ನಮ್ಮ ಊರುಕೇರಿ ಅಭಿವೃದ್ಧಿಯಾಗಲಿಲ್ಲ ಎಂದರೆ ಅದಕ್ಕೆ ಹೊಣೆ ಯಾರು? ಇಡೀ ಉತ್ತರ ಕರ್ನಾಟಕಕ್ಕೆ ದಕ್ಷಿಣ ಕರ್ನಾಟಕದ ಜನ ಒಟ್ಟಾಗಿ ಮೋಸ ಮಾಡುತ್ತಿದ್ದಾರೆಯೆ? ರಾಜ್ಯದ ಗ್ರಾಮೀಣ ಭಾಗಕ್ಕೆ ಬೆಂಗಳೂರು ನಗರ ಮೋಸ ಮಾಡುತ್ತಿದೆಯೆ?

ತಮ್ಮ ಊರು, ತಾಲ್ಲೂಕು, ಜಿಲ್ಲೆ ಉದ್ಧಾರವಾಗಲಿಲ್ಲ ಎನ್ನುವ ಜನ ಮೊದಲು ನೋಡಬೇಕಾದದ್ದು ತಮ್ಮನ್ನು ಪ್ರತಿನಿಧಿಸುತ್ತಿರುವವರು ಬೆಂಗಳೂರಿನಲ್ಲಿ ಕಟ್ಟಿಕೊಂಡಿರುವ ಅರಮನೆಗಳನ್ನು, ಆರ್ಥಿಕ ಸಾಮ್ರಾಜ್ಯಗಳನ್ನು, ಅವರು ಮಾಡುವ ತಮ್ಮ ಮಕ್ಕಳ ವೈಭವೋಪೇತ ಮದುವೆಗಳನ್ನು. ಸ್ವಂತಕ್ಕೆ ಇಷ್ಟೆಲ್ಲ ಮಾಡಿಕೊಳ್ಳುವ ಜನ ತಮ್ಮ ಕ್ಷೇತ್ರಕ್ಕೆ ಏನೂ ಮಾಡುತ್ತಿಲ್ಲ ಎಂದರೆ ಅದಕ್ಕೆ ನಾವು ಏನೋ ತಪ್ಪು ಮಾಡಿ ಅವರನ್ನು ಚುನಾಯಿಸಿದ್ದೇವೆ, ಅದಕ್ಕೆ ನಮ್ಮ ಕ್ಷೇತ್ರದ ಉಸಾಬರಿ ಮಾಡೆಂದು ಕೇಳುವ ಅಧಿಕಾರ ಕಳೆದುಕೊಂಡಿದ್ದೇವೆ ಎಂದು ಜನ ಭಾವಿಸಬೇಕೆ ಹೊರತು ತಮ್ಮ ಜನಪ್ರತಿನಿಧಿಗಳು ಏನೂ ಮಾಡುತ್ತಿಲ್ಲ ಎಂದಲ್ಲ. ಶಾಸಕರು ಏನೂ ಮಾಡಲಾಗದವರಾಗಿದ್ದರೆ ಅಷ್ಟೆಲ್ಲ ಕೋಟ್ಯಾಂತರ ರೂಪಾಯಿಗಳನ್ನು ಅದು ಹೇಗೆ ಮಾಡಿಕೊಳ್ಳುತ್ತಿದ್ದರು? ಮುಂದಿನ ಚುನಾವಣೆಗೆ ಊರಿಗೆ ಬಂದು ಜಾತಿ-ಮತ-ಹಣ-ಹೆಂಡದಿಂದಲೆ ಮತ್ತೊಂದು ಚುನಾವಣೆ ಹೇಗೆ ಗೆಲ್ಲುತ್ತಿದ್ದರು?

ವಿಶೇಷ ವಿಧಾನಮಂಡಲ ಅಧಿವೇಶನ ಬೆಳಗಾವಿಯಲ್ಲಾದಾಗ ರಾಜ್ಯದ ಎಲ್ಲಾ ಶಾಸಕರು ಅಲ್ಲಿ ಇಷ್ಟು ತುರಾತುರಿಯಲ್ಲಿ ಸೇರಬೇಕಾಗಿ ಬಂದ ಕಾರಣವನ್ನು ಗಮನಿಸಿ, ರಾಜ್ಯದ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅದೊಂದನ್ನೆ ಚರ್ಚಿಸಬೇಕಿತ್ತು. ಅದಕ್ಕಾಗಿ ಶಾಸನಗಳನ್ನು ರೂಪಿಸಬೇಕಿತ್ತು. ಸರ್ಕಾರಕ್ಕೆ ಸಲಹೆ ಸೂಚನೆ ಕೊಡಬೇಕಿತ್ತು. ವಿಶೇಷವಾಗಿ ಉತ್ತರ ಕರ್ನಾಟಕದ ಶಾಸಕರು ಇದರ ಸದುಪಯೋಗ ಪಡಿಸಿಕೊಂಡು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸರ್ಕಾರದಿಂದ ಕಾರ್ಯಕ್ರಮ ಅನುಷ್ಠಾನಗೊಳಿಸಿಕೊಳ್ಳಬೇಕಿತ್ತು; ಕೇವಲ ಬಾಯಿ ಮಾತಿನ ಆಶ್ವಾಸನೆಗಳನ್ನಲ್ಲ. ಆದರೆ ಆದದ್ದೇನು? ಧರಂ, ಖರ್ಗೆ, ಪಾಟೀಲ್ ಆದಿಯಾಗಿ ಉತ್ತರ ಕರ್ನಾಟಕದ ಅನೇಕ ಧೀಮಂತ ಶಾಸಕರು ಈ ಅಧಿವೇಶನ ಕರೆದಿರುವ ಔಚಿತ್ಯ ಮತ್ತು ಕ್ರಮಬದ್ಧತೆಯನ್ನು ಪ್ರಶ್ನಿಸುತ್ತ ಗಲಭೆ ಗದ್ದಲ ಎಬ್ಬಿಸಿದರೆ ಹೊರತು ಇದೊಂದು ವಿಶೇಷ ಅಧಿವೇಶನ, ಇಲ್ಲಿ ರಾಜಕೀಯ ಬೇಡ ಎಂದುಕೊಳ್ಳಲಿಲ್ಲ! ಅವರು ಹೀಗೆ ನಡೆದುಕೊಳ್ಳಲು ಅವರಲ್ಲ ಕಾರಣ. ಅವರನ್ನು ಪದೇಪದೆ ಚುನಾಯಿಸಿದ ಮತದಾರರು. ಇದು ನಮ್ಮ ತಪ್ಪುಗಳಿಗೆಲ್ಲ ಹೊಣೆ ಹೊರುವ ಸಮಯ. ಇನ್ನೊಬ್ಬರ ಮೇಲೆ ಜಾರಿಸಲು ಹೋದರೆ ನಮ್ಮ ಜೀವನ ಸಹನೀಯವಾಗಿರುವುದಿಲ್ಲ, ನಮ್ಮ ಮಕ್ಕಳು ಮೊಮ್ಮಕ್ಕಳು ನಮ್ಮನ್ನು ಕ್ಷಮಿಸುವುದಿಲ್ಲ.

ಈಗಲೂ ಕಾಲ ಮಿಂಚಿಲ್ಲ. ಉತ್ತರ ಕರ್ನಾಟಕದ, ಹಾಗೆಯೆ ಇಡೀ ರಾಜ್ಯದ ಗ್ರಾಮೀಣ ಭಾಗಗಳ ವಿದ್ಯಾವಂತ ಜನರು, ವಕೀಲರು, ಶಿಕ್ಷಕರು, ಸಮಷ್ಠಿ ಪ್ರಜ್ಞೆಯಲ್ಲಿ ಚಿಂತಿಸಿ, ನಾಯಕತ್ವ ವಹಿಸಿ, ಅಭಿವೃದ್ಧಿಯ ಸಾರಥ್ಯ ವಹಿಸಬಲ್ಲ ಯೋಗ್ಯರನ್ನು ಚುನಾಯಿಸುವ ಭೂಮಿಕೆ ಸಿದ್ಧಪಡಿಸಿಕೊಳ್ಳಬೇಕೆ ಹೊರತು ಜವಾಬ್ದಾರಿಯಿಂದ ನುಣುಚಿಕೊಳ್ಳುವುದಲ್ಲ. ಅಯೋಗ್ಯರು ಆಳುವುದು ಅಯೋಗ್ಯರನ್ನೆ. ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ ಸಾಗುವಂತೆ ಅಯೋಗ್ಯತೆಯಿಂದ...

Sep 24, 2006

ಮುಖ್ಯಮಂತ್ರಿ ಹೆಸರಿನ ಉಪ ಮುಖ್ಯಮಂತ್ರಿಗಳು-ಧರಂ, ಕುಮಾರ್

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 06, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಶಿಕ್ಷಣ ಬಚಾವೊ ಆಂದೋಲನವಂತೆ, ಅದು ವಾರದ ಹಿಂದೆ ಬೆಂಗಳೂರಿನಲ್ಲಿ ಶಿಕ್ಷಣ ಸಂಬಂಧಿ ವಿಚಾರ ಸಂಕಿರಣ ಏರ್ಪಡಿಸಿತ್ತಂತೆ. ಅಲ್ಲಿ ಪ್ರಾಸಂಗಿಕವಾಗಿ ಕರ್ನಾಟಕದ ಉನ್ನತ ಶಿಕ್ಷಣ (?) ಸಚಿವ ಡಿ.ಎಚ್. ಶಂಕರಮೂರ್ತಿ ಟಿಪ್ಪು ಸುಲ್ತಾನನ ಬಗ್ಗೆ ಮಾತನಾಡಿದರಂತೆ. ಅವರ ಪ್ರಕಾರ ಪರ್ಷಿಯನ್ ಅನ್ನು ರಾಜ್ಯ ಭಾಷೆ ಮಾಡಿದ ಟಿಪ್ಪು ಸುಲ್ತಾನನಿಗೆ ರಾಜ್ಯದ ಇತಿಹಾಸದಲ್ಲಿ ಸ್ಥಾನ ಕೊಡಬಾರದಂತೆ! ಆತ ಕನ್ನಡ ವಿರೋಧಿಯಂತೆ. ಬಲವಂತವಾಗಿ ಮತಾಂತರ ಮಾಡಿದನಂತೆ. ಶಂಕರಮೂರ್ತಿ ಇದೆಲ್ಲವನ್ನು ಹೇಳಿರುವುದು ಶಾಲಾ ಬಾಲಕರ ಮುಂದೆ ಎಂದು 'ವಿಜಯ ಕರ್ನಾಟಕ' ದಿನಪತ್ರಿಕೆಯಲ್ಲಿನ ಅಂದಿನ ಕಾರ್ಯಕ್ರಮದ ಚಿತ್ರ ನೋಡಿದರೆ ಗೊತ್ತಾಗುತ್ತದೆ. ಮಕ್ಕಳು ಮೈಸೂರು ಹುಲಿ ಟಿಪ್ಪು ಸುಲ್ತಾನ, ಅವನ ಒಳ್ಳೆಯ ಗುಣಗಳು ಇಂತಿಂತಹವು, ಎಂದೆಲ್ಲ ಓದುತ್ತಿದ್ದರೆ ಅವರ ಶಿಕ್ಷಣ ಮಂತ್ರಿ ಅಲ್ಲಿ ಬಂದು ಯಾರ್ರಿ ಹೇಳಿದ್ದು ಎಂದರೆ ಮಕ್ಕಳಿಗೆ ಪಾಠ ಮಾಡಿದ ಉಪಾಧ್ಯಾಯರು ಓಡುವುದಾದರೂ ಎಲ್ಲಿಗೆ? ಎಂತಹ ವೇದಿಕೆಯಲ್ಲಿ ಎಂತಹ ಮಾತು? ಇವರು ಶಿಕ್ಷಣ, ಅದೂ ಉನ್ನತ ಶಿಕ್ಷಣ ಸಚಿವರು!

ಟಿಪ್ಪು ಸುಲ್ತಾನ ಏನೇ ಇರಬಹುದು, ಆದರೆ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಜನ ಅವನನ್ನು ಒಪ್ಪಿಕೊಂಡದ್ದು ಬ್ರಿಟಿಷರ ವಿರುದ್ಧಹೋರಾಡಿದ ದೇಶಭಕ್ತನನ್ನಾಗಿ. 'ಆನಂದಮಠ' ಕಾದಂಬರಿಯಲ್ಲಿ ವಂದೇಮಾತರಂ ಗೀತೆ ಮುಸ್ಲಿಮರ ಆಡಳಿತವನ್ನು ಕೊನೆಗಾಣಿಸಿದ ಬ್ರಿಟಿಷರನ್ನು ಹೊಗಳುತ್ತ, ತಾಯಿ ಕಾಳಿಯನ್ನು ಸ್ತುತಿಸುತ್ತ ಹಾಡಿದರೆ ನಂತರ ಅದೇ ಗೀತೆಯನ್ನು ಬ್ರಿಟಿಷರ ವಿರುದ್ಧ ಹೋರಾಡಲು ಬಳಸಲಾಯಿತು. ಕಾಲಾಂತರದಲ್ಲಿ ಕಾದಂಬರಿಯಲ್ಲಿನ ಅದರ ಸಂದರ್ಭಕ್ಕಿಂತ ವಂದೇ ಮಾತರಂಎಂಬ ಎರಡು ಪದಗಳಲ್ಲಿರುವ ದೇಶಭಕ್ತಿ ಉತ್ತೇಜಕ ಸ್ಲೋಗನ್ ಗುಣ ಮುಖ್ಯವಾಯಿತು. ಕಾದಂಬರಿ ಓದಿರದ ಬಂಗಾಳಿಗಳು, ಬಂಗಾಳಿಗಳಲ್ಲದವರು, ಅನಕ್ಷರಸ್ಥರು ಅದನ್ನು ತಾಯಿಕಾಳಿಗೆ ವಂದನೆ ಎನ್ನುವ ಅರ್ಥಕ್ಕಿಂತ ತಾಯಿನಾಡಿಗೆ ವಂದನೆ ಎಂಬ ರೀತಿಯಲ್ಲಿ ಬಳಸಿದರು. ಜನಗಣಮನದ ಮೂಲದ ಬಗ್ಗೆ ಏನೇ ಮಾತನಾಡಿದರೂ ನಾವು ಅದನ್ನು ನಮ್ಮ ರಾಷ್ಟ್ರಗೀತೆಯನ್ನಾಗಿ ಮಾಡಿಕೊಂಡಿರುವುದೇಕೆ?

ಇದೇ ರೀತಿಯಲ್ಲಿ ಕೆಲವೊಂದು ಐತಿಹಾಸಿಕ ವ್ಯಕ್ತಿಗಳಿಗೆ ಸಂದರ್ಭಕ್ಕನುಸಾರವಾಗಿ ಕೆಲವು ಮೂಲಭೂತ ನೈತಿಕ ಗುಣಗಳನ್ನು ಆರೋಪಿಸಿ ನೆನೆಸುವುದು, ಸಂದರ್ಭಕ್ಕೆ ಬಳಸಿಕೊಳ್ಳುವುದು ಎಲ್ಲಾ ಕಾಲ, ಸಮಾಜದಲ್ಲಿ ಆಗುವಂತಹುದು. ಟಿಪ್ಪು ಬ್ರಿಟಿಷರನ್ನು ಬಿಟ್ಟು ಇತರೆ ಸ್ಥಳೀಯ ರಾಜರ ವಿರುದ್ಧ ಹೋರಾಡಿ ಮಡಿದಿದ್ದರೆ ಆತನನ್ನು ಯಾರೂ ದೇಶಭಕ್ತ ಎನ್ನುತ್ತಿರಲಿಲ್ಲವೇನೊ. ಕೆಲವು ವೈಜ್ಞಾನಿಕ ಸಿದ್ಧಾಂತಗಳು ಬದಲಾಗುವ ತರಹವೆ ಹೊಸಹೊಸ ಸತ್ಯಗಳು ಹೊರಗೆ ಬಂದಂತೆಲ್ಲ ಇತಿಹಾಸವೂ ಬದಲಾಗುತ್ತಿರುತ್ತದೆ. ಕೆಲವು ವರ್ಷಗಳ ನಂತರ ಟಿಪ್ಪುವಿಗೊ, ಇನ್ನೊಬ್ಬನಿಗೊ ಹಾಗೆ ಆಗಲೂಬಹುದು. ಆಗಲೂ ಸಹ ಅವನ ಕೆಲವು ಗುಣಗಳು ಬದಲಾಗಬಹುದೆ ಹೊರತು ಟಿಪ್ಪುವನ್ನು ಕರ್ನಾಟಕದ, ಭಾರತದ ಇತಿಹಾಸದಿಂದ ತೆಗೆಯಲು ಸಾಧ್ಯವಿಲ್ಲ. ಅದು ಆದ ಪಕ್ಷದಲ್ಲಿ ಸತ್ಯವನ್ನು ಪ್ರಜ್ಞಾಪೂರ್ವಕವಾಗಿ ಮುಚ್ಚಿಟ್ಟಂತೆ. ಎಲ್ಲಾ ಮತಗಳಲ್ಲಿರುವ ಮೂಲಭೂತವಾದಿಗಳು ಮಾತ್ರ ಮಾಡುವ ಕೆಲಸ ಅದು.

ಆದರೆ, ಶಂಕರಮೂರ್ತಿ ಟಿಪ್ಪುವಿನ ವಿಷಯ ಕೆದಕಿರುವುದು ಇತಿಹಾಸದ ಸತ್ಯ ಬಗೆಯಲು ಅಲ್ಲ, ಬದಲಿಗೆ ಜನರಲ್ಲಿ ಭೇದ ಬಿತ್ತಲು, ಭಾವನೆಗಳನ್ನು ಕೆರಳಿಸಲು, ಮತ ರಾಜಕಾರಣಕ್ಕೆ ಒಂದು ಆಯುಧವನ್ನಾಗಿ ಬಳಸಲು. ಇದು ಯಾವ ಜವಾಬ್ದಾರಿಯ ಕೆಲಸ, ಇದೆಂತಹ ದೇಶಭಕ್ತಿ? ಇವರ ಪ್ರಕಾರ ಅಕ್ಬರ್‌ಗೆ ದಿ ಗ್ರೇಟ್ ಎನ್ನಬಾರದಂತೆ. ಅಕ್ಬರ್ ಎಂಬ ಪದದ ಅರ್ಥವೇ ದಿ ಗ್ರೇಟ್ ಎಂದು ಶಂಕರಮೂರ್ತಿಗಳೇ. ನೀವು ಇತಿಹಾಸದ ಪುಟಗಳಲ್ಲಿ ಅಕ್ಬರ್‌ನ ಹೆಸರನ್ನೆ ತಿದ್ದುವ ಬಗ್ಗೆ ಕಾರ್ಯೋನ್ಮುಖರಾಗುವುದು ಒಳ್ಳೆಯದು. ಬಾಬರ್‌ನ ಮೊಮ್ಮಗ ಎಂದು ತಿದ್ದಿಬಿಟ್ಟರೆ ಹೇಗೆ?

ಇಂತಹ ಅಧಿಕ ಪ್ರಸಂಗಿ ಶಿಕ್ಷಣ ಮಂತ್ರಿಯ ಕೆಳಗೆ ಶಿಕ್ಷಣ ಪಡೆಯುತ್ತಿರುವ ನಮ್ಮ ಮಕ್ಕಳು ನಿಜವಾಗಲೂ ನಾಳಿನ ಭವಿಷ್ಯವಾಗುತ್ತಾರಾ? ಅದು ಚೆನ್ನಾಗಿರುತ್ತದಾ? ಸರಿಪಡಿಸಿಕೊಳ್ಳಲು ಕಾಲ ಮಿಂಚಿಲ್ಲ. ಆದರೆ ಅದು ಸದ್ಯಕ್ಕೆ ಆಗುತ್ತದೆಯೆ? ಬಹುಶಃ ಇಲ್ಲ. ಏಕೆಂದರೆ...

ಕಾಂಗ್ರೆಸ್-ಜನತಾದಳ ಸಮ್ಮಿಶ್ರ ಸರ್ಕಾರದ ಧರಂಸಿಂಗ್ ಮತ್ತು ಭಾಜಪ-ಜನತಾದಳದ ಕುಮಾರಸ್ವಾಮಿಯವರನ್ನು ಅದು ಹೇಗೆ ಮುಖ್ಯಮಂತ್ರಿಗಳು ಎಂದು ಕರೆಯಬಹುದೊ ನನಗರ್ಥವಾಗುತ್ತಿಲ್ಲ. ಏಕೆಂದರೆ, ತಮ್ಮ ಮಂತ್ರಿಮಂಡಲದಲ್ಲಿ ದಳಕ್ಕೆ ಸೇರಿದ್ದ ಅರೆಪಾಲು ಮಂತ್ರಿಗಳು ಧರಂ ಸಿಂಗರಿಗೆ ನೇರವಾಗಿ ರಿಪೋರ್ಟ್ ಮಾಡಿಕೊಳ್ಳುತ್ತಿದ್ದರೆ? ಈಗಿನ ಮಂತ್ರಿಮಂಡಲದಲ್ಲಿ ಭಾಜಪಕ್ಕೆ ಸೇರಿರುವ ಮಂತ್ರಿಗಳು ಕುಮಾರಸ್ವಾಮಿಯವರಿಗೆ ರಿಪೋರ್ಟ್ ಮಾಡಿಕೊಳ್ಳುತ್ತಿದ್ದಾರಾ? ಹಾಗೆ ಕಾಣಿಸುವುದಿಲ್ಲ. ಭಾಜಪ ಮಂತ್ರಿಗಳ ವಿಷಯಕ್ಕೆ ಬಂದಾಗ ಕೊನೆಯ ಮಾತು ಯಡಿಯೂರಪ್ಪನವರಿಗೆ ಬಿಟ್ಟದ್ದು, ಇಲ್ಲವೆ ಆ ಪಕ್ಷದ ನಾಯಕರಿಗೆ ಬಿಟ್ಟದ್ದು. ಅವರನ್ನು ತೆಗೆಯುವುದಕ್ಕಾಗಲಿ, ಸೇರಿಸಿಕೊಳ್ಳುವುದಕ್ಕಾಗಲಿ, ಪ್ರಶ್ನಿಸುವುದಕ್ಕಾಗಲಿ ಕುಮಾರಸ್ವಾಮಿಯವರಿಗೆ ಅಧಿಕಾರವಿದ್ದಂತಿಲ್ಲ.

ಹಾಗಾದರೆ, ಮುಖ್ಯಮಂತ್ರಿ ಎಂದು ಕಾಗದದ ಮೇಲಿದ್ದರೂ, ವಾಸ್ತವದಲ್ಲಿ ಕೇವಲ ಅರ್ಧ ಮಂತ್ರಿಮಂಡಲವನ್ನು ಮಾತ್ರ ನಿಭಾಯಿಸಲು ಅಧಿಕಾರವಿರುವ (ಉಪ)ಮುಖ್ಯಮಂತ್ರಿಗಳೇ ಅಲ್ಲವೆ ಇವರು? ಆಲ್‌ಮೋಸ್ಟ್ ಮುಖ್ಯಮಂತ್ರಿಗಳಿದ್ದಷ್ಟು ಅಧಿಕಾರವಿದ್ದ ಉಪಮುಖ್ಯಮಂತ್ರಿಗಳು ಧರಂ ಸಿಂಗ್ ಮತ್ತು ಕುಮಾರ ಸ್ವಾಮಿಯವರು ಎಂದರೆ ತಪ್ಪಾಗುತ್ತದೆಯೆ?

ಒಬ್ಬ ಮಂತ್ರಿಯನ್ನು ಸೇರಿಸಿಕೊಳ್ಳುವ ಅಥವ ಬಿಡುವ ವಿಷಯದಲ್ಲಿ ಮುಖ್ಯಮಂತ್ರಿಗೆ ಸಂಪೂರ್ಣ ಅಧಿಕಾರವಿರಬೇಕು. ಇಲ್ಲದಿದ್ದರೆ ಈಗಿನ ಸಮ್ಮಿಶ್ರ ಸರ್ಕಾರಗಳಲ್ಲಿ ಆಗುತ್ತಿರುವಂತೆ ತಮ್ಮ ಸ್ಥಾನಕ್ಕೆ ನಾಲಾಯಕ್ ಆದ ಮಂತ್ರಿಗಳು ಪಕ್ಷ ರಾಜಕಾರಣದಿಂದಾಗಿ ಮುಂದುವರಿಯುತ್ತಿರುತ್ತಾರೆ. ಅದರಿಂದ ಜನಜೀವನಕ್ಕೆ ಅಪಾಯ, ಅಭಿವೃದ್ಧಿಗೆ ಮಾರಕ. ಬೇರೆ ದೇಶಕ್ಕೆ ನಮ್ಮ ನಾಡಿನ ನೆಲ-ಜಲ-ಜನವನ್ನು ಮಾರಿಕೊಳ್ಳುವುದು ಮಾತ್ರವೆ ದೇಶದ್ರೋಹವಲ್ಲ. ನಮ್ಮದೇ ದೇಶದ ಜನಕ್ಕೆ ಮೋಸ ಮಾಡುವುದು, ಜಾತಿಮತಗಳ ಹೆಸರಿನಲ್ಲಿ ಹಿಂಸೆ ಮಾಡುವುದು, ಭಾವನೆಗಳನ್ನು ಕೆರಳಿಸಿ ಅಪನಂಬಿಕೆ ಹುಟ್ಟಿಸುವುದು, ಸಮಾನತೆಯ ಹೆಸರಿನಲ್ಲಿ ಪ್ರಜಾಪ್ರಭುತ್ವ ವಿರೋಧಿ ಸಿದ್ಧಾಂತದ ಮೇಲೆ ಬಂದೂಕು ಹಿಡಿಯುವುದು, ಸರಿಯಾದ ಆಡಳಿತ ಕೊಡಲಾಗದಿರುವುದು, ಇವೆಲ್ಲವೂ ದೇಶದ್ರೋಹಗಳೆ. ತಮ್ಮ ಮಂತ್ರಿಮಂಡಲದ ಸದಸ್ಯರೆ ಮೇಲುನೋಟಕ್ಕೆ ಇಂತಹ ದೇಶದ್ರೋಹಿ ಕೃತ್ಯದಲ್ಲಿ ತೊಡಗಿರುವಾಗ ಅಂತಹ ಮಂತ್ರಿಯನ್ನು ವಜಾ ಮಾಡುವ ಅಧಿಕಾರ ಮುಖ್ಯಮಂತ್ರಿಗಿಲ್ಲದಿದ್ದರೆ, ಅದಕ್ಕೆ ಯಾರು ಹೊಣೆ? ಮತದಾರರೆ ಇರಬೇಕಲ್ಲವೆ?

ಹಾಗಿದ್ದಲ್ಲಿ, ನಮ್ಮ ಕರ್ನಾಟಕಕ್ಕೆ ಇಡೀ ಮಂತ್ರಿಮಂಡಲದ ಮೇಲೆ ಸಂವಿಧಾನಬದ್ಧವಾದ ಅಧಿಕಾರ ಮತ್ತು ನಿಯಂತ್ರಣ ಹೊಂದಿರಬೇಕಾದ ಮುಖ್ಯಮಂತ್ರಿಗಳ ಅವಶ್ಯಕತೆಯಿಲ್ಲವೆ? ಸಂವಿಧಾನೇತರ ಶಕ್ತಿಗಳು ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಯಾರಿಗೂ ಜವಾಬ್ದಾರರಾಗದಿರುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದೆ? ಮುಂದಿನ ಸಾರಿಯ ವಿಧಾನಸಭಾ ಚುನಾವಣೆಯಲ್ಲಿ ಜನ ಯೋಚಿಸಬೇಕಾದ ವಿಷಯ ಇದು.

Sep 17, 2006

ಗೃಹ ಖಾತೆಯೆನ್ನುವುದು ಒಂದಿದೆಯೆ?

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 29, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಕರ್ನಾಟಕ ರಾಜ್ಯದ ಗೃಹ ಸಚಿವರಾದ ಎಂ.ಪಿ. ಪ್ರಕಾಶ್ 'ಈ ವರ್ಷವೂ ಯಾವುದೇ ಕಾರಣಕ್ಕೂ ಬಾಬಾಬುಡನ್‌ಗಿರಿಯ ಶೋಭಾಯಾತ್ರೆಗೆ ಅವಕಾಶ ಕೊಡುವುದಿಲ್ಲ. ಅದನ್ನು ನಿಷೇಧಿಸುತ್ತೇವೆ' ಎಂದು ಪತ್ರಕರ್ತರಿಗೆ ಹೇಳಿಕೆ ಕೊಡುತ್ತಾರೆ. ಅದಾದ ಒಂದೆರಡು ದಿನಗಳಲ್ಲಿಯೆ ಆ ಖಾತೆಗೆ ಎಳ್ಳಷ್ಟೂ ಸಂಬಂಧವಿಲ್ಲದ, ಆದರೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಉನ್ನತ ಶಿಕ್ಷಣ ಸಚಿವ ಡಿ.ಎಚ್. ಶಂಕರಮೂರ್ತಿ, 'ಅದು ಪ್ರಕಾಶರ ಸ್ವಂತ ಅಭಿಪ್ರಾಯವೇ ಹೊರತು ಸರ್ಕಾರದ ತೀರ್ಮಾನವಲ್ಲ' ಎಂದು ಸ್ಪಷ್ಟಪಡಿಸುತ್ತಾರೆ! ಎಂ.ಪಿ. ಪ್ರಕಾಶ್ ಶಂಕರಮೂರ್ತಿಗೆ 'ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದೆ ಅಷ್ಟೆ' ಎಂದು ತಿಳಿಸಿದ್ದಾರಂತೆ! ಈಗ ನಮ್ಮನ್ನೆ ನಾವು ಕೇಳಿಕೊಳ್ಳೋಣ. ಮಂತ್ರಿಗಳಾದ ಮೇಲೆ ಕೊಡುವ ಹೇಳಿಕೆಗಳಿಗೆ ವೈಯಕ್ತಿಕ ಅಭಿಪ್ರಾಯಗಳಿಲ್ಲ, ಆ ಸ್ಥಾನದಿಂದ ಮಾತನಾಡಿದರೆ ಅದು ಸರ್ಕಾರದ ತೀರ್ಮಾನ ಎಂದು ಅರಿಯಲಾಗದಷ್ಟು ಬೇಜವಾಬ್ದಾರಿ, ತಮ್ಮ ಖಾತೆಯನ್ನು ಸಮರ್ಥಿಸಿಕೊಳ್ಳಲಾಗದಷ್ಟು, ನಿಭಾಯಿಸಲಾಗದಷ್ಟು ಮಹಾಮಹಿಮರನ್ನು ತಮ್ಮ ಮಂತ್ರಿಗಳನ್ನಾಗಿ ಪಡೆಯಲು ಕರ್ನಾಟಕದ ಜನತೆ ಮಾಡಿರುವ ಭಾಗ್ಯವಾದರೂ ಏನು? ಇವರು ನಮ್ಮ ಸಚಿವರಾಗಿ ಇನ್ನೆಷ್ಟು ಕಾಲ ನಮ್ಮ ಹಣೆಬರಹ ತಿದ್ದಬೇಕು?
ಸೋಮವಾರ, ಸೆಪ್ಟೆಂಬರ್ 18 ರಂದು, ಪ್ರಜಾವಾಣಿ ಪತ್ರಿಕೆ 'ಠಾಣೆಯಲ್ಲಿ ಮಂತ್ರಿ ರಂಪಾಟ' ಎಂಬ ಶೀರ್ಷಿಕೆಯಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ರಾಮಚಂದ್ರೇಗೌಡ ಬೆಂಗಳೂರು ನಗರದ ಪೋಲಿಸ್ ಠಾಣೆಯೊಂದಕ್ಕೆ ಹೋಗಿ ರಂಪಾಟ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ ಎಂದು ಪ್ರಕಟಿಸಿದೆ. ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಶಿವಣ್ಣ ಎನ್ನುವವರಿಗೆ ಗೌಡರ ನುಡಿಮುತ್ತು ಹೀಗಿತ್ತಂತೆ: 'ಏನ್ರೀ ಮನೆಗೆ ಬಾ ಅಂತ ಹೇಳಿದರೆ ಬರೋದಿಲ್ವಾ ನೀವು? ನಿಮ್ಮ ಕಮಿಷನರ್ ನೀಲಂ ಅಚ್ಯುತರಾವ್‌ಗೆ ಪೋನ್ ಮಾಡಿದರೆ ಅವರೇ ಒಂದು ಸೆಕೆಂಡ್‌ನಲ್ಲಿ ನಮ್ಮ ಮನೆಗೆ ಬರುತ್ತಾರೆ. ನೀವೇನು ಬಹಳ ಸ್ಮಾರ್ಟ್ ಆಗಿ ಬಿಹೇವ್ ಮಾಡ್ತೀರಾ?' ಇದು ನಿಜವೇ ಆಗಿದ್ದಲ್ಲಿ, ಒಂದು ಸೆಕೆಂಡ್‌ನಲ್ಲಿ ತಂತ್ರಜ್ಞಾನ ಇಲಾಖೆಯ ಮಂತ್ರಿಗಳ ಮನೆಗೆ ಹಾಜರಾಗುವ ಅಚ್ಯುತರಾವ್ ಅವರಂತಹ ದಕ್ಷ, ಚುರುಕು ಕಮಿಷನರ್‌ರನ್ನು ಪಡೆದಿರುವ ಬೆಂಗಳೂರಿನ ಪುಣ್ಯಕ್ಕೆ ಎಣೆಯುಂಟೆ?!

ಆದರೆ, ಹೌದು, ಎಣೆ ಇದೆ ಎನ್ನುತ್ತದೆ ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಕೊಲೆ ಮತ್ತು ದರೋಡೆಗಳು. ಸೆಪ್ಟೆಂಬರ್ ಹನ್ನೊಂದರಿಂದ ಹದಿನೆಂಟರವರೆಗಿನ ದಿನಪತ್ರಿಕೆಗಳನ್ನು ಹರಡಿಕೊಂಡು ಕೂತರೆ ನಿಮಗೆ ಎದ್ದು ಕಾಣಿಸುವ ಸುದ್ದಿಗಳೆಂದರೆ: 'ಬೆಂಗಳೂರನ್ನು ತಲ್ಲಣಗೊಳಿಸಿದ ಭೂ ಮಾಫಿಯಾ - ಬೀದಿ ಕಾಳಗ, ರೌಡಿಗಳ ಹತ್ಯೆ''ನಗರದಲ್ಲಿ ದರೋಡೆಗಳ ಸರಮಾಲೆ' 'ದರೋಡೆಗೆ ಹೊಂಚು: ಐವರು ರೌಡಿಗಳ ಬಂಧನ' `ಬೆಂಗಳೂರಲ್ಲಿ ಒಟ್ಟು ಐದು ಕೊಲೆ' 'ಪಿಸ್ತೂಲ್ ತೋರಿಸಿ ನಗದು, ಚಿನ್ನಾಭರಣ ದರೋಡೆ' 'ಐದು ದರೋಡೆ ಪ್ರಕರಣ' 'ಲೇವಾದೇವಿದಾರನ ಕೊಲೆ: ಪರಾರಿ'

ದಿನಕ್ಕೊಂದರಂತೆ ಎದ್ದು ಕಾಣಿಸುವ ಈ ವರದಿಗಳಲ್ಲಿ ನಮ್ಮ ಗೃಹಖಾತೆ ಹೆಮ್ಮೆ ಪಟ್ಟುಕೊಳ್ಳುವಂತಹುದು ಏನಾದರೂ ಇದ್ದರೆ ಅದು 'ದರೋಡೆಗೆ ಹೊಂಚು: ಐವರು ರೌಡಿಗಳ ಬಂಧನ' ಮಾತ್ರ. ಮೇಲಿನ ಸುದ್ದಿಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ತಕ್ಷಣದ ಕೋಪದಲ್ಲಿ ನಡೆದುಬಿಡುವ ಕೊಲೆಗಳನ್ನು ಸೇರಿಸಿಲ್ಲ. ಈಗ ಮತ್ತೊಮ್ಮೆ ಯೋಚಿಸೋಣ. ಬೆಂಗಳೂರು ನಗರ ಸುರಕ್ಷಿತವಾಗಿದೆಯೆ? ಈ ಪರಿಯಲ್ಲಿ ಅಭಿವೃದ್ಧಿಯಾಗುತ್ತಿರುವ ನಗರವನ್ನು, ಅದರ ಸಂಕೀರ್ಣ ಸುರಕ್ಷತೆಯನ್ನುಗಮನಿಸುವಂತಹ ಮಂತ್ರಿಗಳಾಗಲಿ, ಅಧಿಕಾರಿಗಳಾಗಲಿ, ಮುಖಂಡರಾಗಲಿ ನಮಗೆ ಇಂದು ಇದ್ದಾರೆಯೆ? ನಾವು, ನಮ್ಮ ಹಿರಿಯರು, ನಮ್ಮ ಮಕ್ಕಳು ಮುಂದಕ್ಕೂ ನಿರಾತಂಕವಾಗಿ ಬದುಕುವ ಆಸೆ ಇದೆಯೆ?

ಇನ್ನು ಸೀಡಿ ಪ್ರಕರಣ. ಎರಡೇ ದಿನಗಳ ಅಂತರದಲ್ಲಿ ಎರಡನೇ ಮತ್ತು ಮೂರನೆ ಸೀಡಿ ಸ್ಫೋಟ ಎಂದು ಪತ್ರಿಕೆಗಳು ಪ್ರಕಟಿಸಿದವು. ಹಾಗಾದರೆ, ಮೊದಲ ಸೀಡಿ ಎಲ್ಲಿ ಸ್ಫೋಟವಾಯಿತು? ಜನಾರ್ಧನ ರೆಡ್ಡಿ ಬಳ್ಳಾರಿಯಲ್ಲಿ ತೋರಿಸಿದ್ದು ತಾನೆ? ಹಾಗಿದ್ದಲ್ಲಿ ಎರಡು ಮತ್ತು ಮೂರಕ್ಕೂ ರೆಡ್ಡಿಯೇ ಜವಾಬ್ದಾರರಲ್ಲವೆ? ಹೀಗೆ ಯೋಚಿಸಿಯೆ ಅಲ್ಲವೆ ಪತ್ರಿಕೆಗಳು ಎರಡು ಮತ್ತು ಮೂರನೆ ಸೀಡಿ ಎಂದು ಬರೆದದ್ದು? ಹಾಗಿದ್ದ ಪಕ್ಷದಲ್ಲಿ ನಮ್ಮ ಗೃಹ ಖಾತೆ ಏನು ಮಾಡುತ್ತಿದೆ? ಇವು ನಿಜವಾದ ವೀಡಿಯೊ ಚಿತ್ರವೊ ಇಲ್ಲಾ ಕೃತಕವಾಗಿ ತಯಾರಿಸಿದ್ದೊ ಎಂದು ನಮ್ಮ ಪೋಲಿಸ್ ಇಲಾಖೆ ಇಲ್ಲಿಯವರೆಗೆ ತಿಳಿದುಕೊಳ್ಳಲಾಗಲಿಲ್ಲ ಎಂದರೆ ಇಂತಹ ಅನಾದಿಕಾಲದ ತಂತ್ರಜ್ಞಾನ ಹೊಂದಿರುವವರ ಕೈಯಲ್ಲಿ ನಮ್ಮ ಭವಿಷ್ಯದ ಸುರಕ್ಷತೆಯನ್ನು ಕನಸುವುದಕ್ಕಿಂತ ಹಗಲು ಕನಸು ಬೇರೊಂದಿಲ್ಲ. ಅವು ಕೃತಕವೇ ಆಗಿರಲಿ, ಇಲ್ಲವೆ ನೈಜದ್ದೆ ಆಗಿರಲಿ, ಅವುಗಳ ಮೂಲ ಎಲ್ಲಿಯದು ಎನ್ನುವುದನ್ನು ಪೋಲಿಸ್ ಇಲಾಖೆ ಇಷ್ಟೊತ್ತಿಗೆ ಕಂಡು ಹಿಡಿದು ಜನಕ್ಕೆ ತಿಳಿಸಬೇಕಿತ್ತು. ಅದು ಕೃತಕವೇ ಆಗಿದ್ದಲ್ಲಿ ಈ ಸೀಡಿ ಪ್ರಕರಣ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಕಂಡ ಅತಿ ದೊಡ್ಡ ವಂಚನೆ. ಅಂತಹ ಪಕ್ಷದಲ್ಲಿ ಜನಾರ್ಧನ ರೆಡ್ಡಿ ಬಳ್ಳಾರಿಯ ಮನೆಯಲ್ಲಲ್ಲ, ಅಲ್ಲಿನ ಜೈಲಿನಲ್ಲಿ ಕಂಬಿ ಎಣಿಸಬೇಕು. ಸೀಡಿಯಲ್ಲಿರುವುದು ನಿಜವೇ ಆಗಿದ್ದಲ್ಲಿ ಚೆನ್ನಿಗಪ್ಪ, ಪ್ರಕಾಶ್, ಕುಮಾರ ಸ್ವಾಮಿಯಾದಿಯಾಗಿ ಹತ್ತಾರು ಜನ ತಮ್ಮ ಭ್ರಷ್ಟಾಚಾರ, ಅಧಿಕಾರ ದುರುಪಯೋಗದ ಪ್ರಯಕ್ತ ಬೆಂಗಳೂರಿನ ವಿಧಾನಸೌಧದಲ್ಲಲ್ಲ, ಪರಪ್ಪನ ಅಗ್ರಹಾರದ ಕಾರಾಗೃಹದ ಕತ್ತಲು ಕೋಣೆಯಲ್ಲಿ ತಮ್ಮ ಕೊನೆಗಾಲದ ತನಕ ಕಾಲ ತಳ್ಳಬೇಕು. ಇವೆರಡರಲ್ಲಿ ಒಂದು ಆಗಲೇಬೇಕು. ಇಲ್ಲದಿದ್ದಲ್ಲಿ ಕರ್ನಾಟಕದಲ್ಲಿ ಕಾನೂನು, ನ್ಯಾಯ, ಆಡಳಿತ, ನೈತಿಕತೆ ಸತ್ತಿದೆ ಎಂದೇ ಅರ್ಥ. ನೀವು ಈ ಮಾತಿಗೆ ನಗುತ್ತಿರುವಿರಿ ಎಂದಾದರೆ, ಇವೆಲ್ಲ ನಮ್ಮಲ್ಲಿ ಎಂದೋ ಸತ್ತಿವೆ, ಮತ್ತು ನಮಗೆ ಅವುಗಳ ಅವಶ್ಯಕತೆಯಿಲ್ಲ, ಹಾಗೂ ನಾನು ಅಸಾಧ್ಯವನ್ನು ಬಯಸುವ ಹಗಲುಗನಸಿನ ಆಶಾವಾದಿ ಎಂದರ್ಥ, ಅಲ್ಲವೆ?

ನನ್ನ ಇಲ್ಲಿನ ಐದಾರು ವರ್ಷಗಳ ಅನುಭವ ಮತ್ತು ಈ ದೇಶದಲ್ಲಿನ ಕೆಲವು ನೈಜ ಘಟನೆಗಳನ್ನಾಧರಿಸಿದ ಸಿನೆಮಾ ಮತ್ತು ಡಾಕ್ಯುಮೆಂಟರಿಗಳನ್ನು ನೋಡಿದ ಅನುಭವದ ಮೇಲೆ ಯೋಚಿಸಿದಾಗ ಅನ್ನಿಸುವುದು, ಗಣಿಕಪ್ಪ ಮತ್ತು ಸೀಡಿಯಂತಹ ಘಟನೆ ಇಲ್ಲೇನಾದರು ಜರುಗಿದ್ದರೆ ಟೀವಿ ಮತ್ತು ಪತ್ರಿಕಾ ಮಾಧ್ಯಮವೇ ಸಾಕಿತ್ತು ತಪ್ಪಿತಸ್ಥರನ್ನು ಜೈಲಿಗೆ ಹಾಕಲು. ಇಲ್ಲಿನವರು ಅಷ್ಟೊಂದು ವೃತ್ತಿಪರರು, ದೇಶಭಕ್ತರು, ಸಂವೇದನೆ ಉಳ್ಳವರು. ಕರ್ನಾಟಕದ ಯಾವುದೊ ಮೂಲೆಯಲ್ಲಿ ಕೇವಲ ಹತ್ತಾರು ಜನ ವಿದ್ಯಾರ್ಥಿಗಳು ಮೀಸಲಾತಿ ವಿರೋಧಿ ಪ್ರತಿಭಟನೆ ಮಾಡಿದರೆ ಅದನ್ನೆ ಮುಖಪುಟದ ಮುಖ್ಯ ಸುದ್ದಿ ಮಾಡಿ, ಜನರ ಭಾವನೆಗಳನ್ನು ಕೆರಳಿಸಿ ತಮ್ಮದೇನಾದರೂ ಸ್ವಾರ್ಥ ಇದ್ದರೆ ಅದನ್ನು ಈಡೇರಿಸಿಕೊಳ್ಳುವಂತಹ ಪತ್ರಕರ್ತರು ನಮ್ಮ ನಡುವೆ ಇರುವಾಗ, ಅವರು ಎಷ್ಟು ನಿಜ ಹೇಳಿದರೆ ತಾನೆ ಜನ ನಂಬುತ್ತಾರೆ, ಅಧಿಕಾರಸ್ಥರು ಬೆಚ್ಚುತ್ತಾರೆ? ಇವೆಲ್ಲವನ್ನು ನೋಡಿದರೆ, ನಮ್ಮ ಭವಿಷ್ಯ ಹೇಗಿರಬೇಕು, ನಮ್ಮ ನಾಯಕರು ಹೇಗಿರಬೇಕು, ನಮ್ಮ ನೈತಿಕ ಪ್ರಜ್ಞೆ ಯಾರಾಗಿರಬೇಕು, ಯಾರನ್ನು ನಂಬಬೇಕು, ಯಾರನ್ನು ಓದಬೇಕು ಎಂದೆಲ್ಲ ಯೋಚಿಸಬೇಕಾದ ಸಮಯ ಈಗ ಬಂದು ಬಿಟ್ಟಿದೆ. ಏಕೆಂದರೆ ಈಗ ಕಾಲ ನಿಜವಾಗಲೂ ಕೆಟ್ಟಿದೆ. ರೆಡ್ಡಿ ಅಥವ ಈಗಿನ ಮಂತ್ರಿಮಂಡಲದ ಕೆಲವು ಸದಸ್ಯರು ಕಂಬಿ ಎಣಿಸುವ ತನಕ ಅದು ಕೆಟ್ಟೇ ಇರುತ್ತದೆ.

Sep 10, 2006

ಭೈರಪ್ಪನವರ ಬೈರಿಗೆ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 22, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಸಮ್ಮೇಳನದಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಇದ್ದಿದ್ದರಲ್ಲಿ ಪರವಾಗಿಲ್ಲ ಎಂಬಷ್ಟು ಜನ ಇದ್ದದ್ದು ಭೈರಪ್ಪನವರೊಂದಿಗೆ ಇದ್ದ ಸಂವಾದದ ಕಾರ್ಯಕ್ರಮದಲ್ಲಿ. ಅಮೇರಿಕಾದಲ್ಲಿನ ಕನ್ನಡ ಓದುಗರಲಿಯೂ ಭೈರಪ್ಪ ಜನಪ್ರಿಯ ಸಾಹಿತಿ. ಇದಕ್ಕೆ ಮುಖ್ಯ ಕಾರಣ, ತಮ್ಮ 20-30 ರ ವಯಸ್ಸಿನ ಆಸುಪಾಸಿನಲ್ಲಿ ಈ ದೇಶಕ್ಕೆ ಬಂದಿರುವ ಬಹುಪಾಲು ಕನ್ನಡಿಗರ ಕನ್ನಡ ಓದು ನಿಂತಿರುವುದು ಭೈರಪ್ಪನವರ ಕಾದಂಬರಿಗಳೊಂದಿಗೆ. ಅಲ್ಲಿಂದೀಚೆ ಬಂದ ಇತರ ಮಹತ್ವದ ಲೇಖಕರನ್ನಾಗಲಿ ಅಥವ ಕುವೆಂಪು, ಕಾರಂತ, ಅನಂತಮೂರ್ತಿ, ಲಂಕೇಶರನ್ನಾಗಲಿ ಬಹಳ ಜನ ಓದಿರುವುದು ಕಮ್ಮಿ. ಹೀಗಾಗಿ ಬಹಳಷ್ಟು ಜನರಿಗೆ ಭೈರಪ್ಪನವರ ಬಗ್ಗೆ ಪೂಜ್ಯ ಭಾವನೆ!

ಸಂವಾದದಲ್ಲಿ ಭೈರಪ್ಪನವರಿಗೆ ಕೇಳಿದ ಮೊದಲ ಎರಡು ಪ್ರಶ್ನೆಗಳಿಗೆ ಅವರು ಕೊಟ್ಟ ಉತ್ತರಗಳು ಕುತೂಹಲಕಾರಿಯಾಗಿದ್ದವು. ಮೊದಲನೆಯದು ಅವರ ಸಾಕ್ಷಿಕಾದಂಬರಿಯಲ್ಲಿ ಬರುವ ಮಂಜಯ್ಯ ಪಾತ್ರದ ಕುರಿತಾಗಿತ್ತು. "ಸಾಕ್ಷಿಯ ಮಂಜಯ್ಯನನ್ನೇ ನೋಡಿ. ಆತ ಸತ್ತು ಪ್ರೇತವಾಗಿ ಯಮನ ಬಳಿಗೆ ಹೋಗುತ್ತಾನೆ. ಅಲ್ಲಿ ಯಮನಿಗೆ ಚಿತ್ರಗುಪ್ತರಿಂದ ಸತ್ಯ ಏನೆಂದು ಮೊದಲೇ ಗೊತ್ತಿದ್ದರೂ, ಯಮ ಸಹ ನಂಬುವಂತಹ ಮಾತು ಮಂಜಯ್ಯ ನುಡಿಯುತ್ತಾನೆ. ಯಮನನ್ನೇ ನಂಬಿಸಿಬಿಡುತ್ತಾನೆ. ಬದುಕಿದ್ದಾಗಲೂ ಅವನು ಸುಳ್ಳೇ ಹೇಳುತ್ತಿದ್ದ. ಸತ್ತ ಮೇಲೂ ಅವನು ಸುಳ್ಳೇ ಹೇಳುತ್ತಾನೆ. ಸುಳ್ಳನ್ನು ಬಿಡುವುದೇ ಇಲ್ಲ. ಜೀವನದಲ್ಲಿ ಸುಳ್ಳು ಪ್ರತಿಸಲವೂ ವಿಜೃಂಭಿಸುತ್ತಿರುತ್ತೆ. ಈಗಿನ ಪ್ರಪಂಚವನ್ನೇ ನೋಡಿ. ಯಾವಾಗಲೂ ಸುಳ್ಳಿಗೇ ಜಯ." ಭೈರಪ್ಪನವರು ಹೇಳುತ್ತಿರುವುದಾದರೂ ಏನು? ಹಾಗಾದರೆ ಅವರು ಹೇಳುತ್ತಿರುವುದೂ ಸುಳ್ಳಿರಬಹುದಲ್ಲ? ಎಂತಹ ಜೀವವಿರೋಧಿ ನಿರಾಶಾವಾದ? ಇವರು ಹೇಳುತ್ತಿರುವುದು ಒಂದು ರೀತಿ ನಿತ್ಯಪಾಪಿ ಸಿದ್ಧಾಂತವನ್ನಲ್ಲವೆ? ಆತ್ಮಗಳಲ್ಲಿ ಸಹ ಮೇಲು ಕೀಳುಗಳು ಉಂಟು ಎಂದಲ್ಲವೆ ಇವರು ಹೇಳುತ್ತಿರುವುದು? ಇದು ನಿಜವೆ? ಕೆಲವು ಮನುಷ್ಯರು ಪಾಪಿಯಾಗಿಯೆ ಹುಟ್ಟಿ ಪಾಪಿಗಳಾಗಿಯೇ ಸಾಯುತ್ತಾರೆಯೆ? ಅವರಿಗೆ ಮೋಕ್ಷವೇ ಇಲ್ಲವೆ?


ಇನ್ನೊಂದು ಪ್ರಶ್ನೆ, "ನೀವು ಮಹಾಭಾರತ ಆಧಾರಿತ ಪರ್ವ ಬರೆದಿರಿ. ರಾಮಾಯಣ ಆಧಾರಿತ ಕಾದಂಬರಿ ಇನ್ನೂ ಯಾಕೆ ಬರೆದಿಲ್ಲ." ಅದಕ್ಕವರು, "ರಾಮಾಯಣದ ಪಾತ್ರಗಳು ಒಂದು ರೀತಿ ಪರಿಪೂರ್ಣ. ಅವು ನಮ್ಮ ಇಡೀ ಸಂಸ್ಕೃತಿಯ ಆದರ್ಶಗಳು. ಜೀವನದ ಸರ್ವಶ್ರೇಷ್ಠ ಮೌಲ್ಯಗಳ ಅರಕ ರಾಮಾಯಣ. ಅದನ್ನು ಮರುಸೃಷ್ಟಿ ಮಾಡೋದಕ್ಕೆ ಹೋದರೆ ಇಡೀ ಸಂಸ್ಕೃತಿಯನ್ನು, ಮೌಲ್ಯಗಳನ್ನು, ನಮ್ಮ ಪರಂಪರೆಯನ್ನು ನಾಶ ಮಾಡಿದ ಹಾಗೆ. ಅಂತಹ ಕೆಲಸ ನನಗಿಷ್ಟವಿಲ್ಲ." ಅಂದರೆ ಭೈರಪ್ಪನವರ ಮಾತಿನ ಅರ್ಥ ರಾಮಾಯಣದ ಮರುಸೃಷ್ಟಿ ಮಾಡಿದವರೆಲ್ಲ ಕೆಟ್ಟವರು ಎಂದಲ್ಲವೆ? ಕುಮಾರವ್ಯಾಸ ಹೇಳಿದ ತಿಣುಕಿದನು ಫಣಿರಾಯ ರಾಮಾಯಣಗಳ ಭಾರದಲ್ಲಿ ಮಾತನ್ನು ನಂಬುವುದಾದರೆ, ಅದೆಷ್ಟು ಜನ ವಾಲ್ಮೀಕೇತರ ರಾಮಾಯಣ ಕತೃ ಪಾಪಿಗಳು ಭೂಮಿಯ ಮೇಲೆ ಇದ್ದಾರೆ, ಆಗಿ ಹೋಗಿದ್ದಾರೆ? ಹಿಂದೆ ಕುಳಿತಿದ್ದ ಸಾಹಿತಿಗಳೊಬ್ಬರು ಗೊಣಗುತ್ತಿದ್ದರು; "ಭೈರಪ್ಪನವರ ದೃಷ್ಟಿ ಕುವೆಂಪುರವರ ರಾಮಾಯಣ ದರ್ಶನಂ ಮೇಲಿದೆ," ಎಂದು!

ಅದೇ ವೇದಿಕೆಯಲ್ಲಿ ಭೈರಪ್ಪನವರು ಹೇಳಿದ ಇನ್ನೊಂದು ಮಾತು, "ಸಾಹಿತ್ಯದಿಂದ ಸಮಾಜ ಸುಧಾರಣೆ ಆಗೋದೆಲ್ಲ ಸುಳ್ಳು. ಈ ಸುಧಾರಣೆ, ಬದಲಾವಣೆ ಇವೆಲ್ಲ ಮಾರ್ಕ್ಸಿಸ್ಟ್ ಪದಪುಂಜಗಳು. ಇವೆಲ್ಲಾ ಬಹಳ ಅಪಾಯಕಾರಿ ಟರ್ಮಿನಾಲಜಿಗಳು." ಹಾಗಾದರೆ, ರಾಮಾಯಣವನ್ನು ಮರು ಸೃಷ್ಟಿಸಿದ ಮಾತ್ರಕ್ಕೆ ಸಮಾಜದಲ್ಲಿನ ಮೌಲ್ಯಗಳು ಕೆಟ್ಟುಹೋಗುತ್ತವಾ? ಸುಧಾರಣೆ ಸಾಧ್ಯವಿಲ್ಲವಾದರೆ ಕೆಡುಕೂ ಸಾಧ್ಯವಿಲ್ಲ ಅಲ್ಲವೆ? ಎಂತಹ ವಿರೋಧಾಭಾಸಗಳು ಮಾರಾಯ್ರೆ?

ಮಾಧ್ಯಮಗಳ ಭೂಗೋಳ ಜ್ಞಾನ!

ಕಾರ್ಯಕ್ರಮ ಮುಗಿಯುವುದಕ್ಕೆ ಇನ್ನೂ ೧೨ ಗಂಟೆಗಳ ಸಮಯ ಇದೆ ಎನ್ನುವಾಗಲೇ ಬೆಂಗಳೂರಿನಲ್ಲಿ ಕನ್ನಡ ದಿನಪತ್ರಿಕೆಗಳು "ಅಕ್ಕ ಸಮ್ಮೇಳನಕ್ಕೆ ತೆರೆ" ಎಂದು ಮುದ್ರಣಗೊಳ್ಳುತ್ತಿದ್ದವು. ಗುರುಕಿರಣರ ರಸಮಯ ಸಂಗೀತ ಕಾರ್ಯಕ್ರಮದೊಂದಿಗೆ ಸಮ್ಮೇಳನಕ್ಕೆ ತೆರೆ ಬಿತ್ತು ಎಂದು ಕರ್ನಾಟಕದಲ್ಲಿನ ಜನ ಬೆಳಿಗ್ಗೆಯ ಕಾಫಿಯೊಂದಿಗೆ ದಿನಪತ್ರಿಕೆಗಳಲ್ಲಿ ಓದುತ್ತಿದ್ದರೆ ಆ ಕಾರ್ಯಕ್ರಮ ಇಲ್ಲಿ ಇನ್ನೂ ಆರಂಭವೇ ಆಗಿರಲಿಲ್ಲ! ಕೊನೆಯ ದಿನದ ಕಾರ್ಯಕ್ರಮದ ಬೆಳ್ಳಂಬೆಳಗ್ಗೆ, ಬೆಂಗಳೂರಿನಿಂದ ಬಂದಿದ್ದ ಪತ್ರಕರ್ತರೊಬ್ಬರು ಇಲ್ಲಿಂದ ಅವರ ಪತ್ರಿಕೆಗೆ ವರದಿ ಮತ್ತು ಫೋಟೊಗಳನ್ನು ನನ್ನ ಲ್ಯಾಪ್‌ಟಾಪ್‌ನಿಂದಲೇ ಕಳುಹಿಸಿದರು. ಲೇಖನದಲ್ಲಿ ಏನಿತ್ತು ಎಂದು ನನಗೇನೂ ಗೊತ್ತಿರಲಿಲ್ಲ. ಮಾರನೆಯ ದಿನ ಆ ಪತ್ರಿಕೆಯ ವೆಬ್‌ಸೈಟ್ ತೆಗೆದು ನೋಡುತ್ತೇನೆ; ಇನ್ನೂ ಹದಿನೈದು ಗಂಟೆಗಳ ಕಾರ್ಯಕ್ರಮ ಇರುವಾಗಲೇ ಅಲ್ಲಿಗೆ ಬಂದಿದ್ದ ಕೆಲವರು ಅಳುತ್ತಾ ಭಾವಪೂರ್ಣ ವಿದಾಯ ತೆಗೆದುಕೊಂಡಿದ್ದರು! ಬೆಂಗಳೂರಿನಲ್ಲಿ ಸೋಮವಾರದ ಮುಂಜಾವು ಬಾಲ್ಟಿಮೋರ್‌ನಲ್ಲಿ ಇನ್ನೂ ಭಾನುವಾರದ ಮುಸ್ಸಂಜೆಯಾಗಿರುತ್ತದೆ ಎನ್ನುವ ಭೂಗೋಳದ ಸಾಮಾನ್ಯ ಜ್ಞಾನವೂ ಇಲ್ಲದಿದ್ದರೆ ಹೇಗೆ? ಇದನ್ನೆಲ್ಲ ಊಹಿಸಿಯೇ ಇರಬೇಕು ಅಮೇರಿಕದಿಂದ ನಮ್ಮ ಅಂತರ್ಜಾಲ ತಾಣಕ್ಕೆ ಇ-ಮೇಯ್ಲ್ ಕಳುಹಿಸಿದ್ದ ಓದುಗರೊಬ್ಬರು ಹೀಗೆ ಬರೆದಿದ್ದು:

"ಮಾನ್ಯ ಸಂಪಾದಕರಿಗೆ,

ಅಮೆರಿಕಾದ ಬಾಲ್ಟಿಮೋರಿನಲ್ಲಿ ನಡೆಯುತ್ತಿರುವ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ನಿಮ್ಮ ಪತ್ರಿಕೆ ಸಂಯಮದಿಂದ ವರ್ತಿಸುತ್ತಿರುವುದು ಮೆಚ್ಚಿಗೆ ತಂದಿತು. ಇಲ್ಲಿ ನಡೆಯುತ್ತಿರುವ ವಿಶ್ವಕನ್ನಡ ಸಮ್ಮೇಳನ ಒಂದು ರೀತಿಯಲ್ಲಿ ಹೊಟ್ಟೆ ತುಂಬಿದವರ ಜಾತ್ರೆ. ಹೆಂಗಸರಿಗೆ ತಮ್ಮ ಅಲಂಕಾರ ಪ್ರದರ್ಶಿಸಲು ಒಂದು ಪಾರ್ಟಿ. ಎಂಟು ಕೋಟಿ ವೆಚ್ಚದಲ್ಲಿ ನಡೆಸುತ್ತಿರುವ ಈ ಸಮ್ಮೇಳನದಿಂದ ಕನ್ನಡ ಉದ್ಧಾರವಾಗುತ್ತದೆಂಬುದು ದೊಡ್ಡ ಭ್ರಮೆಯಲ್ಲದೆ ಬೇರೇನಿಲ್ಲ.

ಈ ಸಮ್ಮೇಳನವನ್ನು ವರದಿ ಮಾಡಲು ಸಂತೆ ನೆರೆಯುವ ಮುನ್ನ ನೆರೆದಿರುವ ಗಂಟುಕಳ್ಳರಂತೆ, ಕರ್ನಾಟಕದಿಂದ ಇಲ್ಲಿ ಬಂದು ಠಿಕಾಣಿ ಹೂಡಿರುವ ಸಂಪಾದಕರುಗಳನ್ನು ನೋಡಿ ನನಗೆ ನಗು ಬರುತ್ತಿದೆ. ಇವರು ಇದೇ ಉತ್ಸಾಹವನ್ನು ಕರ್ನಾಟಕದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೂ ತೋರುವರೇ? ಅವರ ಜೊತೆಗೆ ಇಲ್ಲಿಯ ಕೆಲವು ಪ್ರಜ್ಞಾವಂತ ಬರಹಗಾರರೂ ಕೈಜೋಡಿಸಿ, ಅಕ್ಕ ಪದಾಧಿಕಾರಿಗಳನ್ನು ಹಾಡಿ ಹೊಗಳುತ್ತಿರುವುದು ಕಂಡು ವಿಷಾದವಾಗುತ್ತಿದೆ. "ಅಕ್ಕ"ದ ರೊಕ್ಕಸ್ಥರ ಅಧೀನರಾಗಿರುವ ಇವರು ಮಾಡುವ ವರದಿ ಎಷ್ಟರ ಮಟ್ಟಿಗೆ ವಸ್ತುನಿಷ್ಟವಾಗಿದ್ದೀತೋ ಆ ಕನ್ನಡಮ್ಮನೇ ಬಲ್ಲಳು!

ಯಾರ ಮೇಲೂ ದ್ವೇಷಾಸೂಯೆಗಳಿಲ್ಲದೆ, ನನ್ನ ಕಳಕಳಿಯನ್ನು ವ್ಯಕ್ತಪಡಿಸಲು ಮಾತ್ರ ಈ ಪತ್ರ ಬರೆದಿದ್ದೇನೆ.

ಸದಾಶಯ ಹೊತ್ತ ಕನ್ನಡಿಗ,

-ವಿನಯ್ ಅರಸೀಕೆರೆ, ಅಮೆರಿಕ"

Sep 3, 2006

'ಅಕ್ಕ' ಸಂಭ್ರಮದಲ್ಲಿ...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 15, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

"ಎಲ್ಲಾ ಅಡೆತಡೆಗಳನ್ನು ದಾಟಿ ವಿಮಾನ ಕ್ಷೇಮವಾಗಿ ನೆಲಕ್ಕಿಳಿಯಿತು." "ವಿಮಾನದಲ್ಲಿದ್ದವರೆಲ್ಲ ಸಂತೋಷವಾಗಿ ಚಪ್ಪಾಳೆ ತಟ್ಟಿ ವಿಮಾನ ಚಾಲಕರ ಕಾರ್ಯಕ್ಷಮತೆಯನ್ನು ಪ್ರಶಂಸಿಸಿದರು." ಹೀಗೆ ಅನೇಕ ಕಡೆ ಓದಿದ್ದೆ. ನನ್ನ ಹಲವಾರು ವಿಮಾನ ಪ್ರಯಾಣಗಳಲ್ಲಿ ಇಂತಹುದು ಎಂದೂ ಆಗಿರಲಿಲ್ಲ. ಆಗಬೇಕು ಎಂಬ ಆಸೆಯೂ ನನಗಿರಲಿಲ್ಲ. ಅಕ್ಕ ಸಮ್ಮೇಳನಕ್ಕೆ ಮೂರು ದಿನದ ಹಿಂದೆ ಅಮೇರಿಕದ ನೆಲ ಮುಟ್ಟಿದ ಅರ್ನೆಸ್ಟೊ ಚಂಡಮಾರುತ, ಕ್ರಮೇಣ ಬಲವೃದ್ಧಿಸಿಕೊಂಡು ಸಮ್ಮೇಳನ ನಡೆಯುತ್ತಿದ್ದ ಕಡೆಗೆ ತನ್ನ ಪಥ ಬದಲಾಯಿಸಿತ್ತು. ಹಾಗಾಗಿ ಅಮೇರಿಕದ ಬೇರೆ ಕಡೆಯಿಂದ ವಿಮಾನಗಳಲ್ಲಿ ಬರಬೇಕಾಗಿದ್ದವರಿಗೆಲ್ಲ ಸ್ವಲ್ಪ ಚಿಂತೆ ಪ್ರಾರಂಭವಾಗಿತ್ತು. ನನಗೂ ಇದು ಸುಮಾರು 4000 ಕಿ.ಮಿ. ದೂರದ ವಿಮಾನ ಪ್ರಯಾಣ.

ನಾನು ಇಳಿಯಬೇಕಾಗಿದ್ದ ವಿಮಾನ ವಾಷಿಂಗ್ಟನ್ ಡಿ.ಸಿ. ಸಮ್ಮೇಳನ ನಡೆಯುತ್ತಿರುವ ಜಾಗದಿಂದ 60 ಕಿ.ಮಿ. ದೂರದಲ್ಲಿತ್ತು. ಐದು ವರ್ಷಗಳ ಹಿಂದೆ ಆದ ಭಯೋತ್ಪಾದಕರ ಅಟ್ಟಹಾಸದ ನಂತರ ವಾಷಿಂಗ್ಟನ್ ಡಿ.ಸಿ.ಯಲ್ಲಿ ಇಳಿಯುವ ವಿಮಾನಗಳಲ್ಲಿ ಕೊನೆಯ 30 ನಿಮಿಷಗಳಲ್ಲಿ ಪ್ರಯಾಣಿಕರು ತಮ್ಮ ಕುರ್ಚಿಯಿಂದ ಎದ್ದು ಓಡಾಡುವಂತಿಲ್ಲ. ಅದನ್ನು ಘೋಷಿಸಿದ ವಿಮಾನದ ಚಾಲಕ. ಅಷ್ಟೊತ್ತಿಗೆ ವಿಮಾನ ಸ್ವಲ್ಪ ಮೇಲಕ್ಕೆ ಕೆಳಕ್ಕೆ ಒಲಾಡುತ್ತಿತ್ತು. ನೆಲದಿಂದ ೧೦ ಕಿ.ಮಿ. ಮೇಲೆ ಹಾರಾಡುವ ವಿಮಾನ, ಅಂತರಿಕ್ಷದಲ್ಲಿನ ವಾಯು-ಒತ್ತಡ ವೈಪರೀತ್ಯಗಳಿಂದಾಗಿ ಆಗಾಗ ಸ್ವಲ್ಪ ಓಲಾಡುತ್ತದೆ. ಇದ್ದಕ್ಕಿದ್ದಂತೆ ಹಾರುತ್ತಿರುವ ಎತ್ತರದಿಂದ ಹತ್ತಾರು ಅಡಿ ಕೆಳಕ್ಕೆ ಸರ್ರನೆ ಜಾರಿಬಿಡುತ್ತದೆ. ಆಗ ಪ್ರಯಾಣಿಕರಿಗೆ ರೋಲರ್‌ಕೋಸ್ಟರ್‌ನಲ್ಲಿ ಮೇಲಿಂದ ಕೆಳಕ್ಕೆ ಜರ್ರನೆ ಜಾರುವಾಗ ಆಗುವ ಅನುಭವವಾಗುತ್ತದೆ. ಅದೇ ರೀತಿ ನಮ್ಮ ವಿಮಾನವೂ ಮಾಡಲು ಪ್ರಾರಂಭಿಸಿತು. ಇದೂ ಆಗಾಗ ಆಗುವಂತೆ ಒಂದೈದು ನಿಮಿಷದಲ್ಲಿ ಮುಗಿಯುತ್ತದೆ ಎಂದುಕೆಂಡೆ. ಹತ್ತಾಯಿತು, ಇಪ್ಪತ್ತಾಯಿತು, ಮುಗಿಯಲೇ ಇಲ್ಲ. ಆಚೆ ನೋಡಿದರೆ ದಟ್ಟವಾದ ಮೋಡಗಳು. ನಾವು ಇನ್ನೂ ಎಷ್ಟು ಮೇಲೆ ಇದ್ದೇವೆ ಎಂದು ನೋಡೋಣವೆಂದರೆ ಮೋಡಗಳಲ್ಲಿ ಅಂಗೈ ಅಗಲ ಖಾಲಿ ಜಾಗವಿಲ್ಲ. ಟಾರು ಇಲ್ಲದ ರಸ್ತೆಗಳಲ್ಲಿ ನಮ್ಮ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ, ಅದೂ ಕೊನೇಯ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿರುವ ಅನುಭವ. ವಿಮಾನ 500 ಅಡಿ ಮೇಲೆ, ಮೋಡಗಳಿಗಿಂತ ಕೆಳಕ್ಕೆ ಬಂದ ಮೇಲೆ ಕೆಳಗೆ ಹಸಿರು ಮರಗಳು, ತುಂಬಿ ಹರಿಯುತ್ತಿರುವ ಪೋಟೋಮ್ಯಾಕ್ ನದಿ ಕಾಣಿಸುತ್ತಿತ್ತು. ಆಗಲೂ ವಿಮಾನದೊಳಗಿನ ಬಸ್ ಪ್ರಯಾಣ ನಿಂತಿರಲಿಲ್ಲ. ನೆಲವನ್ನು ಮುಟ್ಟಲು ಇನ್ನೇನು 40-50 ಅಡಿ ಮಾತ್ರ ಇದೆ, ಆಗಲೇ ರನ್‌ವೇ ಮೇಲೆ ಹಾರುತ್ತಿದೆ ಅನ್ನುವಾಗಲೂ ವಿಮಾನ ಗಾಳಿಯ ರಭಸಕ್ಕೆ ಎಡಕ್ಕೆ ಬಲಕ್ಕೆ ವಾಲಿತು. ನೆಲ ಮುಟ್ಟಿತು. ಬ್ರೇಕ್ ಹಾಕಿದಾಗ ಎಂದಿನಂತೆ ದೊಡ್ಡ ಶಬ್ದ ಕೇಳಿಸಿ, ವಿಮಾನ ನಿಯಂತ್ರಣಕ್ಕೆ ಬಂದಿದ್ದು ಒಳಗಿದ್ದವರಿಗೆಲ್ಲ ಗೊತ್ತಾಯಿತು. ಇನ್ನೇನೂ ತೊಂದರೆಯಿಲ್ಲ ಎಂದು ಖಾತ್ರಿಯಾಗಿದ್ದ ನನ್ನ ಪಕ್ಕದ ಅಮೇರಿಕನ್ ಪ್ರಯಾಣಿಕ ಮೊದಲನೆಯವನಾಗಿ ನಿಟ್ಟುಸಿರು ಬಿಟ್ಟು ಚಪ್ಪಾಳೆ ಹೊಡೆದ. ಅಲ್ಲಿಯವರೆಗೂ ಕಾದಿದ್ದವರಂತೆ ನಾವೆಲ್ಲ ಸೇರಿಕೊಂಡೆವು. ಆವನಿಗೆ ನಾನೆಂದೆ, "ಇದು ನಾನು ಕಂಡ ದ ಮೋಸ್ಟ್ ರಫ್ ಲ್ಯಾಂಡಿಂಗ್." "ನನಗಿದು ಎರಡನೆಯದು," ಎಂದ ಅವನು!

ಇಳಿದ ನಂತರ ಮುಕ್ಕಾಲು ಗಂಟೆಯ ಪ್ರಯಾಣ ಮಳೆ ಮತ್ತು ವಾರಾಂತ್ಯದ ಟ್ರಾಪಿಕ್ ಪ್ರಭಾವದಿಂದಾಗಿ ಎರಡೂವರೆ ಗಂಟೆ ತೆಗೆದುಕೊಂಡಿತು. ಸಮ್ಮೇಳನದ ಜಾಗಕ್ಕೆ ಬರುವಷ್ಟರಲ್ಲಿ ಯಡಿಯೂರಪ್ಪನವರು ತೆರೆಯ ಮೇಲೆ ಟೈ ಸಮೇತ ಸೂಟ್ ಧಾರಿಯಾಗಿ ಮಾತನಾಡುತ್ತಿದ್ದರು. ಸ್ವಲ್ಪ ಹೊತ್ತಾದ ಮೇಲೆ ಕ್ಯಾಲಿಫೋರ್ನಿಯಾದಿಂದ ಬಂದಿದ್ದ ಮತ್ತೊಬ್ಬ ಪರಿಚಯಸ್ಥರು ಸಿಕ್ಕರು. ನನ್ನ ವಿಮಾನದ ಅನುಭವ ಹೇಳಿದೆ. ಇದು ನಮ್ಮ ವಿಮಾನದಲ್ಲಿಯೂ ಆಯಿತು, ನನ್ನ ಪಕ್ಕದಲ್ಲಿ ಕುಳಿತಿದ್ದ ಹೆಂಗಸೊಬ್ಬರು "ಪ್ರೇಯಿಂಗ್ ಫಾರ್ ಹರ್ ಲೈಫ್," ಎಂದರವರು. ಸಮ್ಮೇಳನಕ್ಕೆ ಅಂದು ಬಂದ ಬಹಳಷ್ಟು ಜನರಿಗೆ ಆ ಅನುಭವವಾಗಿತ್ತು.

ಕರ್ನಾಟಕದ ಮಂತ್ರಿ ಮಹೋದಯರಿಗೆ, ಶಾಸಕರಿಗೆ, ತಾವು ಇನ್ನೂ ಹಾಲಿಗಳಿದ್ದಾಗಲೆ ತಮ್ಮ ಅಧಿಕಾರದ, ದೌಲಿನ ನಶ್ವರತೆಯ ಅರಿವು, ಅದೂ ಕನ್ನಡಿಗರ ಮಧ್ಯೆಯೇ ಆಗಬೇಕೆಂದರೆ ಅದಕ್ಕೆ ಪ್ರಶಸ್ತವಾದ ಸ್ಥಳ - ಅಕ್ಕ ಸಮ್ಮೇಳನ. ಕರ್ನಾಟಕದ ಎರಡನೇ ಮತ್ತು ಮೂರನೇ ಅಧಿಕಾರ ಸ್ಥಾನಗಳು ಸಾಮಾನ್ಯರಂತೆ ಒಬ್ಬೊಬ್ಬರೆ ಕುಳಿತು, ಎದ್ದು, ಅದೂ ಸಾಮಾನ್ಯರಲ್ಲಿ ಸಾಮಾನ್ಯವಾಗಿ ಓಡಾಡುತ್ತಿದ್ದದ್ದು ಎಲ್ಲಾ ಕಡೆ ಕಣ್ಣಿಗೆ ಕಾಣಿಸುತ್ತಿತ್ತು. ಇಲ್ಲಿರುವ ಅರ್ಧಕ್ಕಿಂತ ಹೆಚ್ಚಿನ ಅಮೇರಿಕನ್ನಡಿಗರಿಗೆ ಅವರ ಹೆಸರು ತಿಳಿದಿರುವುದೇ ಸಂದೇಹ. ಇನ್ನು ಅವರ ಜೊತೆ ಮುಖ್ಯಮಂತ್ರಿಯವರ ಪ್ರಾಯೋಜಕತ್ವದಲ್ಲಿ ಬಂದಿದ್ದ ಇತರ 20+ ಶಾಸಕರ ಬಗ್ಗೆ ಹೇಳುವುದೇ ಬೇಡ.

ಇಂತಹ ದೊಡ್ಡ ಸಮ್ಮೇಳನದ ವ್ಯವಸ್ಥೆ ಮಾಡುವಾಗ ಅನೇಕ ಅವ್ಯವಸ್ಥೆಗಳೂ ನಡೆಯುತ್ತವೆ. ೪೦೦೦ ಜನರಿಗೆ ದೊಡ್ಡ ಪರದೆಯ ಮೇಲೆ 'ಗಂಡುಗಲಿ ಕುಮಾರರಾಮ' ಚಿತ್ರ ಪ್ರದರ್ಶನ ಎಂದಿದ್ದರು. ತೋರಿಸಿದ್ದು 200+ ಕುರ್ಚಿಗಳ ಒಂದು ಹಾಲ್‌ನಲ್ಲಿ. ಇದ್ದದ್ದು 20+ ಜನ. ತಾರಾರವರ ಸೈನೈಡ್ ಚಿತ್ರಕ್ಕೆ ಮತ್ತು 'ಹಸೀನಾ' ಚಿತ್ರಕ್ಕೆ ಸಾಹಿತ್ಯದ ಕಾರ್ಯಕ್ರಮಗಳಿಗಿಂತ ಹೆಚ್ಚು ಜನ ಸೇರಿದ್ದರು. ಅಮೇರಿಕನ್ನಡತಿ ಯುವತಿಯೊಬ್ಬರು ನಿರ್ದೇಶಿಸಿದ್ದ `ಗುಟ್ಟು' ಚಲನಚಿತ್ರಕ್ಕೆ 200ಕ್ಕೂ ಮೇಲೆ ಜನ. ಈ ಚಿತ್ರಕ್ಕೆ ಒಳಕ್ಕೆ ಹೊರಕ್ಕೆ ಹೋಗುವವರ ಸಂಖ್ಯೆ ಜಾಸ್ತಿ ಇತ್ತು! ಶಾಸ್ತ್ರೀಯ ಮತ್ತು ಭಾವಗೀತೆಗಳ ಹಾಡುಗಳಿಗೆ ವ್ಯವಸ್ಥೆ ಮಾಡಿದ್ದ 300+ ಸೀಟುಗಳ ಸಭಾಂಗಣ ಕರ್ನಾಟಕದಿಂದ ಬಂದಿದ್ದ ಹಾಡುಗಾರರು ಹಾಡುತ್ತಿದ್ದಾಗಲೆಲ್ಲ ತುಂಬಿಹೋಗುತ್ತಿತ್ತು. ಎಸ್.ಪಿ. ಬಾಲಸುಬ್ರಹ್ಮಣ್ಯಮ್‌ರವರ ಹಾಡುಗಳಿಗೆ ಜನ ಖುಷಿಯಿಂದ ನರ್ತಿಸಿದರು. ಕವಿ ಪುತಿನರ ಮಗಳು ಅಲಮೇಲು ಅವರ ಅಮೇರಿಕದಲ್ಲಿನ ಕನ್ನಡ ಕುಟುಂಬಗಳೆರಡರ ಸರಸ ವಿರಸದ ಕತೆಯ 'ಕುಜದೋಷವೊ ಶುಕ್ರದೆಸೆಯೊ' ನಾಟಕವನ್ನೂ, ಸಂಭಾಷಣೆಯನ್ನೂ ಇಲ್ಲಿನವರು ಚೆನ್ನಾಗಿ ಆನಂದಿಸಿದರು.

ಇವೆಲ್ಲದರ ಮಧ್ಯೆ 'ಅಕ್ಕ' ಮಾಡುವ ಸಮಾಜಸೇವಾ ಕಾರ್ಯಕ್ರಮಗಳ ಬಗ್ಗೆ ಸಮರ್ಥವಾಗಿ ಜನಕ್ಕೆ ತಿಳಿಸಿಕೊಡುವಲ್ಲಿ ಸೋತು ಕೇವಲ ಮನರಂಜನಾ ಕಾರ್ಯಕ್ರಮ ಆಯೋಜಕ ಸಮಿತಿಯಾಗುತ್ತಿರುವುದು ಸ್ಪಷ್ಟವಾಗುತ್ತಿತ್ತು. ಇಂತಹ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸುವಾಗ ಏನೇನು ಅನಿವಾರ್ಯ ತೊಂದರೆಗಳಿರುತ್ತವೆ ಎನ್ನುವುದನ್ನು ಈ ಇ-ಮೇಯ್ಲ್‌ಗಳ ಯುಗದಲ್ಲಿಯೂ ವಿವರಿಸದೆ ತಪ್ಪು ಮಾಡದೆ ಬಂದಿದ್ದವರಿಂದ ಬೈಸಿಕೊಳ್ಳುತ್ತಿದ್ದರು. ಉದಾಹರಣೆಗೆ, ಊಟಕ್ಕೆ ಅರ್ಧ ಕಿ.ಮಿ. ದೂರ ವ್ಯವಸ್ಥೆ ಮಾಡಿದ್ದರಿಂದ ನೂರಾರು ಸಾವಿರ ಡಾಲರ್ ಉಳಿತಾಯವಾಗುತ್ತಿರುವದನ್ನು ವಿವರಿಸಿದ್ದರೆ ಸಾಕಿತ್ತು ಜನ ಅರ್ಥ ಮಾಡಿಕೊಳ್ಳುತ್ತಿದ್ದರು. ಇದು ನಾಲ್ಕನೇ ಸಮ್ಮೇಳನ. ಇಷ್ಟೊತ್ತಿಗೆ ಬಹಳಷ್ಟನ್ನು ಕಲಿಯಬೇಕಿತ್ತು. ಹಾಗೆಂದು ಅವರಿಂದ ಬಹಳಷ್ಟನ್ನು ಬಯಸುವುದು ಸಹಾ ತಪ್ಪು. ಸಮಿತಿಯಲ್ಲಿನ ಬಹಳಷ್ಟು ಜನ ಪ್ರತಿದಿನ ನೌಕರಿಗೆ ಹೋಗುವವರು, ಸ್ವಯಂಸೇವಕ ಕಾರ್ಯಕರ್ತರು. ಅತೀವ ಶ್ರಮ ಮತ್ತು ಸಮಯ ಬೇಡುವ ಸಮ್ಮೇಳನದ ಕೆಲಸಕ್ಕೆ ಅವರು ಒಂದು ಪೈಸೆ ಬಯಸುವುದೂ ಇಲ್ಲ, ಸಿಗುವುದೂ ಇಲ್ಲ (ಕೆಲವರಿಗೆ ಪ್ರಚಾರ ಬಿಟ್ಟು). ಅವರ ನಿಸ್ವಾರ್ಥ ಸೇವೆಯಲ್ಲಿ ಪದೇಪದೇ ತಪ್ಪು ಹಿಡಿಯುವುದು, ಅನುಕಂಪ ತೋರಿಸದಿರುವುದು ಸಹಾ ತಪ್ಪು. ಅನಾಮಧೇಯರಾಗಿ ದುಡಿದ ನೂರಾರು ಮಂದಿಗೆ ಬಂದ ಸಾವಿರಾರು ಮಂದಿ ಒಂದು ಹಂತದಲ್ಲಿ ಕೃತಜ್ಞರಾಗಿರಲೇಬೇಕು. ಈ ಲೇಖನ ಕಳಿಸುತ್ತಿರುವಾಗ ಇನ್ನೂ ಅರ್ಧ ದಿನದ ಕಾರ್ಯಕ್ರಮ ಇದ್ದಿದ್ದರಿಂದ, ಆ ನಿಸ್ವಾರ್ಥಿ, ಅನಾಮಧೇಯ ಕನ್ನಡಬಂಧುಗಳಿಗೆ ನನ್ನ ಧನ್ಯವಾದ ಮತ್ತು ಕೃತಜ್ಞತೆಗಳನ್ನು ಅರ್ಪಿಸುತ್ತ, ಉಳಿದವನ್ನು ಮುಂದಿನ ಕಂತಿನಲ್ಲಿ ಬರೆಯುತ್ತೇನೆ.

Aug 22, 2006

ಅಕ್ಕ ಸಮ್ಮೇಳನದಲ್ಲಿ ನಮ್ಮನ್ನು ಪ್ರತಿನಿಧಿಸುವವರು

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 8, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಅದು 1999 ರ ಬೇಸಿಗೆ. ನಾನಾಗ ಹೈದರಾಬಾದ್‌ನಲ್ಲಿ ಕೆಲಸದಲ್ಲಿದ್ದೆ. ಆ ಸಮಯದಲ್ಲಿ ಅಲ್ಲಿನ ಜನಪ್ರಿಯ ಇಂಗ್ಲಿಷ್ ದೈನಿಕ "ಡೆಕ್ಕನ್ ಕ್ರಾನಿಕಲ್" ನಮ್ಮ ರಾಜ್ಯದ ಬಾಗೆಪಲ್ಲಿ ತಾಲ್ಲೂಕಿನಲ್ಲಿ ಚಿತ್ರಾವತಿ ನದಿಗೆ ಕರ್ನಾಟಕ ಸರ್ಕಾರ ಕಟ್ಟಲಿರುವ ಬ್ಯಾರೇಜ್‌ನಿಂದ ಆಂಧ್ರದ ಪಾಲಿನ ನೀರಿಗೆ ಮೋಸವಾಗಲಿದೆ, ಇದನ್ನು ಆಂಧ್ರಪ್ರದೇಶ ಸರ್ಕಾರ ಕೂಡಲೆ ನಿಲ್ಲಿಸಲು ಪ್ರಯತ್ನಿಸಬೇಕು, ಅದಕ್ಕಾಗಿ ಏನೇನು ಮಾಡಬೇಕು ಎಂದು ದೊಡ್ಡ ವರದಿಯನ್ನೇ ಪ್ರಕಟಿಸಿತ್ತು.

ನಮ್ಮಲ್ಲಿ ಕೆಲವು ತಾಲ್ಲೂಕುಗಳು, ಊರುಗಳಿವೆ. ಅವುಗಳ ಹೆಸರು ಬಂದ ತಕ್ಷಣ ನಮಗೆ ಅವನ್ನು ಪ್ರತಿನಿಧಿಸುವವರ ಅಥವ ಪ್ರತಿನಿಧಿಸುತ್ತಿದ್ದವರ ಹೆಸರು ಜ್ಞಾಪಕಕ್ಕೆ ಬಂದುಬಿಡುತ್ತದೆ. ಹೊಳೆನರಸಿಪುರದ ದೇವೇಗೌಡರು, ಸೊರಬದ ಬಂಗಾರಪ್ಪ, ಮದ್ದೂರಿನ ಎಸ್.ಎಂ. ಕೃಷ್ಣ, ಶಿಕಾರಿಪುರದ ಯಡಿಯೂರಪ್ಪ, ನಾಗಮಂಗಲದ ಶಿವರಾಮೇಗೌಡ, ಬಾಗಲಕೋಟೆಯ ಸಿದ್ದುನ್ಯಾಮೇಗೌಡ, ಚಿಕ್ಕೋಡಿಯ ಶಂಕರಾನಂದ; ಹೀಗೆ. ಅದೇ ರೀತಿ 1994 ರಿಂದ ಈಚೆಗೆ ಬಾಗೆಪಲ್ಲಿ ಎಂದಾಕ್ಷಣ ಕರ್ನಾಟಕದ ಜನತೆಗೆ ನೆನಪಿಗೆ ಬರುತ್ತಿದ್ದ ಹೆಸರು ಅಲ್ಲಿನ ಶಾಸಕ ಜಿ.ವಿ. ಶ್ರೀರಾಮರೆಡ್ಡಿಯವರದು. ಅದಕ್ಕೆ ಅವರು ರಾಜ್ಯದ ಕಮ್ಯುನಿಸ್ಟ್ ಪಕ್ಷದ ಏಕೈಕ ಶಾಸಕರು ಎನ್ನುವುದಕ್ಕಿಂತ ಅವರು ವಿಧಾನಸಭೆಯಲ್ಲಿ ಎತ್ತುತ್ತಿದ್ದ ಜನಪರ ವಿಷಯಗಳು, ಮಾಡುತ್ತಿದ್ದ ವಾದ, ಅವುಗಳಿಂದ ಪ್ರಕಟವಾಗುತ್ತಿದ್ದ ಅವರ ಜನಪರ ಕಾಳಜಿಗಳೇ ಮುಖ್ಯ ಕಾರಣ.

ಹೀಗಾಗಿ, ಡೆಕ್ಕನ್ ಕ್ರಾನಿಕಲ್‌ನ ವರದಿ ನೋಡಿದ ತಕ್ಷಣ ನಾನು ಶ್ರೀರಾಮರೆಡ್ಡಿಯವರಿಗೆ, ಆಂಧ್ರದ ಸರ್ಕಾರ ಮತ್ತು ಅಲ್ಲಿನ ಮಾಧ್ಯಮಗಳು ಚಿತ್ರಾವತಿ ಯೋಜನೆಯನ್ನು ವಿರೋಧಿಸಲು ತಂತ್ರಗಳನ್ನು ರೂಪಿಸುತ್ತಿವೆ, ತಾವು ಅದನ್ನು ಎದುರಿಸಲು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ, ಹಾಗೂ ನಿಮ್ಮ ಜನಪರ ಕಾಳಜಿಗೆ ನನ್ನ ಶ್ಲಾಘನೆಗಳು ಎಂದು ಬರೆದು, ಆ ಸುದ್ದಿಯ ಪೇಪರ್ ಕಟಿಂಗ್ ಸಮೇತ ಅಂಚೆಗೆ ಹಾಕಿದ್ದೆ. ವಿಳಾಸ ಸರಿಯಿತ್ತೊ ಇಲ್ಲವೊ, ಅದು ಅವರಿಗೆ ಮುಟ್ಟಿತೋ ಇಲ್ಲವೊ ಗೊತ್ತಾಗಲಿಲ್ಲ. ಅದಾದ 6 ತಿಂಗಳ ನಂತರ ಬಂದ ಚುನಾವಣೆಯಲ್ಲಿ, ಎಸ್.ಎಂ. ಕೃಷ್ಣರ ಕಾಂಗ್ರೆಸ್ ಅಲೆಯಲ್ಲಿ ಶ್ರೀರಾಮರೆಡ್ಡಿಯವರು ಸೋತರು. ಅದಾದ ನಾಲ್ಕೂವರೆ ವರ್ಷಗಳ ನಂತರ ಬಂದ 2004 ರ ಚುನಾವಣೆಯಲ್ಲಿ ಎಸ್.ಎಂ.ಕೃಷ್ಣರ ಕಾಂಗ್ರೆಸ್ ಸೋತಿತು, ಬಾಗೆಪಲ್ಲಿಯಲ್ಲಿ ಶ್ರೀರಾಮರೆಡ್ಡಿ ಮತ್ತೆ ಗೆದ್ದರು. ಕಾಂಗ್ರೆಸ್-ಜನತಾದಳ ಮೈತ್ರಿ, ಮತ್ತು ಈಗಿನ ಬಿಜೆಪಿ-ಜನತಾದಳ ಮೈತ್ರಿಯುದ್ದಕ್ಕೂ ಸದನದಲ್ಲಿ ಮತ್ತೆ ಶ್ರೀರಾಮರೆಡ್ಡಿ ಗುಡುಗುತ್ತಿದ್ದಾರೆ.

ಈ ಮಧ್ಯೆ ಅವರ ಬಾಗೆಪಲ್ಲಿ ಕ್ಷೇತ್ರ ಯಾವ ರೀತಿಯ ಅಭಿವೃದ್ದಿ ಕಂಡಿದೆಯೊ ನನಗೆ ಗೊತ್ತಿಲ್ಲ. ಆದರೂ ಅದರ ಪ್ರತಿನಿಧಿ ಪ್ರಾಮಾಣಿಕರಿದ್ದ ಹಾಗೆ ಇದ್ದಾರೆ, ನೈತಿಕತೆಯುಳ್ಳ ಮನುಷ್ಯ, ಅವರು ಏನು ಹೇಳಿದರೂ ಅದಕ್ಕೊಂದು ತೂಕವಿರುತ್ತದೆ ಎಂಬ ಭಾವನೆ ಇತ್ತು. ಆದರೆ ಕೆಲವು ವಾರಗಳ ಹಿಂದೆ ಕೆಲವು ದಿನಪತ್ರಿಕೆಗಳಲ್ಲಿ ಹಾಗೂ ನಾನು ಇಲ್ಲಿಗೆ ತರಿಸುವ ಲಂಕೇಶ್‌ನಲ್ಲಿ, ಶ್ರೀರಾಮರೆಡ್ಡಿಯವರು ಉತ್ತರಭಾರತ ಪ್ರವಾಸ ಸಮಯದಲ್ಲಿ ಮಾಡಿಕೊಂಡ ಕೆಲವು ಎಡವಟ್ಟುಗಳ ಬಗ್ಗೆ ಬರೆದಿದ್ದರು. ಬಹಳ ಬೇಜಾರಾಯಿತು. ಅವರ ಪ್ರಾಮಾಣಿಕತೆಯ ಬಗ್ಗೆಯೇ ಸಂದೇಹಗಳು ಹುಟ್ಟಿಕೊಂಡವು. ಚೆನ್ನಾಗಿ ಓದಿಕೊಂಡಿರುವ, ಪ್ರಜಾಪ್ರಭುತ್ವ ಮತ್ತು ಸರ್ಕಾರದ ಜವಾಬ್ದಾರಿಗಳ ಬಗ್ಗೆ ಚೆನ್ನಾಗಿ ಅರಿತಿರುವ ಒಂದು ಪ್ರಾಮಾಣಿಕ ಸ್ವರ ಸದನದಲ್ಲಿ ತನ್ನ ನೈತಿಕತೆ ಕಳೆದುಕೊಂಡು ದುರ್ಬಲವಾಯಿತಲ್ಲ ಎನ್ನಿಸಿತು. ಊರಿನಲ್ಲಿರುವಾಗ ಅಷ್ಟು ಇಷ್ಟು ಮಾನಮರ್ಯಾದೆಗಳಿಂದ ಇರುವವರು ಬೇರೆ ಕಡೆ ಹೋದಾಗ ಯಾರೂ ಗಮನಿಸುವುದಿಲ್ಲ ಎಂದು ಹೇಗೆ ತಮ್ಮ ಖಯಾಲಿಗಳಿಗೆ, ಸಣ್ಣತನಗಳಿಗೆ ಬಲಿಯಾಗುತ್ತಾರಲ್ಲ ಅನ್ನಿಸಿತು.

ಈ ವಿಷಯವನ್ನು ಇಲ್ಲಿ ಎತ್ತಲು ಮುಖ್ಯ ಕಾರಣ, ಈ ಪತ್ರಿಕೆ ನಿಮ್ಮ ಕೈಸೇರುವುದಕ್ಕಿಂತ ಮುಂಚೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಿಂದ ಹಿಡಿದು ಅನೇಕ ಮಂತ್ರಿಗಳು, ಶಾಸಕರು, ಹಿರಿ-ಕಿರಿಯ ಅಧಿಕಾರಿಗಳು, ಸಾಹಿತಿಗಳು, ಪತ್ರಕರ್ತರು, ಕಲಾವಿದರು, `ನವ ವೇದಾಂತ ರೆಜಿಮೆಂಟ್ನ ವೇದಾಂತಿಗಳು, ಮಠಾಧೀಶರು, ಅಮೇರಿಕ ಸಂಯುಕ್ತ ಸಂಸ್ಥಾನದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಬಂದು ಇಳಿದಿರುತ್ತಾರೆ. ಈ ಲೇಖನ ಬರೆಯುವುದಕ್ಕೆ ಎರಡು ದಿನದ ಹಿಂದೆ ತಾನೆ ಅತೃಪ್ತ ಶಾಸಕರನ್ನು ತೃಪ್ತಿಪಡಿಸಲು ಹೆಚ್ಚಿನ ಸಂಖ್ಯೆಯ ಶಾಸಕರನ್ನು ತಮ್ಮ ಜೊತೆ ಕರೆದೊಯ್ಯಲು ಮುಖ್ಯಮಂತ್ರಿಗಳು ಯೋಚಿಸುತ್ತಿದ್ದಾರೆ ಎಂದು ದಿನಪತ್ರಿಕೆಯೊಂದು ಪ್ರಕಟಿಸಿದೆ. ಅವರ ಸಂಖ್ಯೆ ಏನು ಮತ್ತು ಯಾರ್‍ಯಾರು ಎಂದು ನಿಮಗೆ ಈಗಾಗಲೆ ಗೊತ್ತಾಗಿರುತ್ತದೆ.

ಅವರೆಲ್ಲ ಇಲ್ಲಿಗೆ ಬರಲಿರುವುದು ಅಕ್ಕ (ಅಮೆರಿಕ ಕನ್ನಡ ಕೂಟಗಳ ಆಗರ) ಸಂಸ್ಥೆ ಇಲ್ಲಿಯ ಸ್ಥಳೀಯ ಕನ್ನಡ ಕೂಟ ಕಾವೇರಿಯೊಂದಿಗೆ ಸೇರಿ ಆಯೋಜಿಸಿರುವ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು. ಕಳೆದ ಬಾರಿಯ ಚಂಡಮಾರುತದ ರಗಳೆ ಈ ಬಾರಿ ಇಲ್ಲದಿರುವುದರಿಂದ ನಾಲ್ಕೈದು ಸಾವಿರಕ್ಕೂ ಹೆಚ್ಚು ಜನ ಈ ಸಲದ ಸಮ್ಮೇಳನದಲ್ಲಿ ಭಾಗವಹಿಸಬಹುದು ಎಂದು ಅಂದಾಜು. ಅಕ್ಕ ಮತ್ತು ಕಾವೇರಿ ಮಾಡಿಕೊಂಡಿರುವ ಸಿದ್ಧತೆಗಳನ್ನು ಗಮನಿಸಿದರೆ ಈ ಸಲದ ಸಮ್ಮೇಳನ ಬಹಳ ಅಚ್ಚುಕಟ್ಟಾಗಿ ನಡೆಯುವ ಭರವಸೆ ಇಟ್ಟುಕೊಳ್ಳಬಹುದು.

ಸರಿಸುಮಾರು ಮೂರರಿಂದ ನಾಲ್ಕು ಕೋಟಿ ರೂಪಾಯಿಗಳ ವೆಚ್ಚ ತಗುಲಲಿರುವ ಈ ಸಮ್ಮೇಳನಕ್ಕೆ ಬಹುಪಾಲು ದುಡ್ಡು ಸಮ್ಮೇಳನದಲ್ಲಿ ನೋಂದಾಯಿಸಿಕೊಳ್ಳುವ ಜನರಿಂದ ಹಾಗೂ ಇಂತಹ ಕನ್ನಡಪರ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಸ್ಥಳೀಯ ಶ್ರೀಮಂತ ಕನ್ನಡಿಗರ ದೇಣಿಗೆಯಿಂದ ಬರುತ್ತದೆ. ಕರ್ನಾಟಕ ಸರ್ಕಾರ ೩೫ ಕಲಾವಿದರನ್ನು ಕಳಿಸುತ್ತಿರುವುದರಿಂದ ಹಾಗೂ ಮುಖ್ಯಮಂತ್ರಿ ಮತ್ತಿತರರ ಜಂಬೂಸವಾರಿಯೂ ಆಗಮಿಸುತ್ತಿರುವುದರಿಂದ ಸರ್ಕಾರಕ್ಕೂ ಒಂದು ಕೋಟಿಯ ತನಕ ಖರ್ಚು ಬೀಳಬಹುದು. ಆದರೆ ಅದಕ್ಕಿಂತ ಹಲವು ಪಟ್ಟು ದುಡ್ಡು ಈ ಸಮ್ಮೇಳನದಿಂದ ಕರ್ನಾಟಕಕ್ಕೆ ಪರೋಕ್ಷವಾಗಿ ಹರಿದುಬರುತ್ತದೆ; ಕರ್ನಾಟಕದಲ್ಲಿನ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಸಂದರ್ಭದಲ್ಲಿ ಅನೇಕರು ಉದಾರವಾಗಿ ಹಣ ನೀಡಬಹುದು, ಮಂತ್ರಿಗಳು ಮತ್ತು ಅಧಿಕಾರಿಗಳು ಇಲ್ಲಿಗೆ ಬಂದಿರುವ ಸಮಯ ಸಂದರ್ಭ ಉಪಯೋಗಿಸಿಕೊಂಡು ಜವಾಬ್ದಾರಿಯುತವಾಗಿ, ಯೋಗ್ಯತೆಯಿಂದ ಕೆಲಸ ಮಾಡಿದರೆ ಒಂದಷ್ಟು ಹೂಡಿಕೆಗಳನ್ನೂ ತರಬಹುದು, ಇಲ್ಲಿಗೆ ಬರುವ ಕಲಾವಿದರು ಬೇರೆಡೆ ಕಾರ್ಯಕ್ರಮ ಕೊಟ್ಟು ಗೌರವ ಸಂಭಾವನೆ ಗಳಿಸಬಹುದು, ಹೀಗೆ.

ಇವೆಲ್ಲವುಗಳ ಜೊತೆಗೆ ಅನೇಕರ ಸಣ್ಣತನಗಳು ಬಯಲಿಗೆ ಬಂದು ಶ್ರೀರಾಮರೆಡ್ಡಿಯವರ ವಿಚಾರದಲ್ಲಾದಂತೆ ಈ ಸಂತೆಯಲ್ಲೂ ಕೆಲವರು ಬೇಕಾಬಿಟ್ಟಿ ವರ್ತಿಸಬಹುದು. ಸರ್ಕಾರಿ ದುಡ್ಡಿನಲ್ಲಿ ಬಂದಿರುವ ಮಂತ್ರಿಮಹೋದಯರು ಇಲ್ಲಿ ತಮ್ಮ ತಮ್ಮ ಜಾತಿಯವರ ಸಂಘಗಳಿಗೆ ಹೋಗಿ ಭಾಷಣ ಮಾಡಬಹುದು. (ಕರ್ನಾಟಕದಿಂದ ಈ ಹಿಂದೆ ಅಧಿಕೃತ ಕಾರ್ಯಕ್ರಮದ ಮೇಲೆ ಬಂದಿದ್ದ ಮಂತ್ರಿಗಳು ಹಾಗೆ ಮಾಡಿಯೂ ಇದ್ದಾರೆ. ಇಂತಹವರಿಗೆ ಕುವೆಂಪು, ಡಾ. ರಾಜ್ ಮಾದರಿಗಳಾಗುವುದು ಯಾವಾಗ?) ಕೆಲವರು ಕೇವಲ ಮಜಾ ಮಾಡಿ ಹೋಗಬಹುದು. ಇನ್ನು ಕೆಲವರು ಕುಡಿದೊ ಇನ್ನೊಂದೊ ಗಲಾಟೆ ಮಾಡಿಕೊಂಡು ಇಲ್ಲಿನ ಸ್ಥಳೀಯ ಕನ್ನಡಿಗರ ಬಾಯಿಗೆ ಮುಂದಿನ ಸಮಾವೇಶದ ತನಕ ಗ್ರಾಸವಾಗಬಹುದು. ನಾಲ್ಕು ಜನ ಸೇರಿದಾಗ ಏನು ಬೇಕಾದರೂ ಆಗಬಹುದು. ಆದರೂ ಇಲ್ಲಿ ಕೆಟ್ಟದ್ದಕ್ಕಿಂತ ಒಳ್ಳೆಯದು ಬಹುಪಾಲು ಆಗೇ ಆಗುತ್ತದೆ. ಯಾಕೆಂದರೆ ತವರನ್ನು ತೀವ್ರವಾಗಿ, ಪ್ರಾಮಾಣಿಕವಾಗಿ ಪ್ರೀತಿಸುವ ಜನ ಹಾಗೂ ಅಂತಹವರನ್ನು ಭ್ರಷ್ಟಗೊಳ್ಳಲು ಬಿಡದ ವ್ಯವಸ್ಥೆ ಇಲ್ಲಿದೆ.

ಇವೆಲ್ಲದರ ಜೊತೆಗೆ ನಮ್ಮ ಪತ್ರಿಕೆಯ ಕಾನೂನು ಸಲಹೆಗಾರರಾದ ಹಿರಿಯ ಪತ್ರಕರ್ತ ಡಾ. ಸಿ.ಎಸ್. ದ್ವಾರಕಾನಾಥ್, ಹಾಗೂ ಅವರ ಬಹುಕಾಲದ ಮಿತ್ರ, ಈಗ ಇಲ್ಲಿಯೇ ಇರುವ ನಮ್ಮ ಮತ್ತೊಬ್ಬ ಹಿತೈಷಿಗಳಾದ ಪತ್ರಕರ್ತ ಹನುಮಂತ ರೆಡ್ಡಿಯವರೂ ಜೊತೆಗಿರುತ್ತಾರೆ. ಕ್ಯಾಲಿಫೋರ್ನಿಯಾದ ಸ್ನೇಹಿತರಾದ ಮೃತ್ಯುಂಜಯ ಹರ್ತಿಕೋಟೆ, ವ್ಯಂಗ್ಯಚಿತ್ರಕಾರ ಮತ್ತು ತಂತ್ರಜ್ಞ ಜನಾರ್ಧನ ಸ್ವಾಮಿ, ಪರಿಚಯದ ನೂರಾರು ಜನ ಅಲ್ಲಿರುತ್ತಾರೆ. ಕನ್ನಡ, ಕರ್ನಾಟಕ ಅನುರುಣಿಸುತ್ತಿರುತ್ತದೆ. ಇದೇ ಸಂದರ್ಭದಲ್ಲಿ ಹಲವಾರು ಜನರಿಗೆ ತಮ್ಮ ಸಾಮಾಜಿಕ ಬಾಧ್ಯತೆಗಳು ಗುರುತಾಗುತ್ತವೆ. ಜನಜೀವನವನ್ನು ಮತ್ತಷ್ಟು ಹಸನು ಮಾಡುವುದು ಹೇಗೆಂದು ಚಿಂತನಮಂಥನಗಳು ನಡೆಯುತ್ತವೆ. ಸಮ್ಮೇಳನದಿಂದ ಇನ್ನೇನು ತಾನೆ ಬೇಕು?