(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ನವೆಂಬರ್ 3, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)
ಹೀಗೊಂದು ಸಭೆ:
ಅಕ್ಕ ಸಮ್ಮೇಳನಕ್ಕೆ ಬಂದಿದ್ದ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಸ್ಯಾನ್ ಫ್ರಾನ್ಸಿಸ್ಕೋದ ಸಿಲಿಕಾನ್ ಕಣಿವೆಗೂ ಬಂದಿದ್ದರು. ಆ ಪ್ರಯುಕ್ತ ಸ್ಥಳೀಯ ಕನ್ನಡ ಕೂಟ ಅವರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಿತ್ತು. ಹಿಂದುಗಳು ಪೂಜಿಸುವ ಧರ್ಮಸ್ಥಳದ ಮಂಜುನಾಥ ದೇವಸ್ಥಾನದ ಉಸ್ತುವಾರಿ ಜೈನ ಮತದ ಹೆಗ್ಗಡೆ ಮನೆಯವರದು. ಆದಾಯ ಮತ್ತು ತೀರ್ಥಯಾತ್ರೆಯ ವಿಚಾರದಲ್ಲಿ ಕರ್ನಾಟಕದ ತಿರುಪತಿ ಧರ್ಮಸ್ಥಳ. ಹಾಗಾಗಿ ದೇವಾಲಯದ ಖರ್ಚಿಗಿಂತ ಅನೇಕ ಪಟ್ಟು ಹೆಚ್ಚಿನ ಆದಾಯ ಈ ದೇವಸ್ಥಾನಕ್ಕಿದೆ. ಆ ಹೆಚ್ಚಿನ ಹಣವನ್ನು ದೇವಾಲಯದವರು ಅನೇಕ ಸಾಮಾಜಿಕ ಕೆಲಸಗಳಿಗೆ, ವಿದ್ಯಾಸಂಸ್ಥೆಗಳಿಗೆ ಉಪಯೋಗಿಸುತ್ತಿದ್ದಾರೆ. ಧಾರವಾಡದಲ್ಲಿನ ಇಂಜಿನಿಯರಿಂಗ್ ಕಾಲೇಜು, ದಂತ ವೈದ್ಯ ಕಾಲೇಜುಗಳಿಂದ ಹಿಡಿದು ಮಂಗಳೂರು, ಮೈಸೂರು, ಉಜಿರೆ ಇಲ್ಲೆಲ್ಲ ಅನೇಕ ಶಾಲೆ ಕಾಲೇಜುಗಳನ್ನು ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ನಡೆಸುತ್ತಿದೆ. ಇದರ ಜೊತೆಗೆ ಧರ್ಮಸ್ಥಳದ ಸುತ್ತಮುತ್ತ ಹೆಗ್ಗಡೆಯವರು ಕೈಗೊಂಡಿರುವ ಗ್ರಾಮೀಣಾಭಿವೃದ್ಧಿ ಕೆಲಸಗಳು, ಮದ್ಯಪಾನ ವಿರೋಧಿ ಕೆಲಸಗಳು ಕನ್ನಡಿಗರಿಗೆ ಪರಿಚಿತವಾದವುಗಳೇ.
ಅಂದಿನ ಸಭೆಯಲ್ಲಿ ಅವರ ವಿದ್ಯಾಸಂಸ್ಥೆಗಳಲ್ಲಿ ಓದಿದ್ದವರು ಇದ್ದರು. ಅವರ ಸಾಮಾಜಿಕ ಕೆಲಸಗಳನ್ನು ಪ್ರಶಂಸಿಸುವವರಿದ್ದರು. ಕರ್ನಾಟಕದ ಪ್ರಭಾವಿ ವ್ಯಕ್ತಿಯೊಬ್ಬರನ್ನು ಕಾಣಲು, ಅವರ ಮಾತುಗಳನ್ನು ಕೇಳಲು ಬಂದವರಿದ್ದರು. ಅನೇಕ ಜೈನ ಕನ್ನಡಿಗರಿದ್ದರು. ಹೀಗಾಗಿ ಅದು ಕೇವಲ ದೇವಸ್ಥಾನಕ್ಕೆ ಸಂಬಂಧಪಟ್ಟ ಸಭೆಯಾಗಲಿ, ಒಂದು ಜಾತಿ, ಮತಕ್ಕೆ ಸಂಬಂಧಿಸಿದ್ದಾಗಲಿ ಆಗಿರಲಿಲ್ಲ.
ಮೊದಲಿಗೆ ಹೆಗ್ಗಡೆಯವರು ಒಂದರ್ಧ ಗಂಟೆ ಸುಲಲಿತವಾಗಿ ಕನ್ನಡದಲ್ಲಿ ಮಾತನಾಡಿದರು. ದೇವಸ್ಥಾನದ ಸಮಿತಿಯ ವತಿಯಿಂದ ನಡೆಸುವ ಗ್ರಾಮೀಣಾಭಿವೃದ್ಧಿ ಯೋಜನೆ, ದುಶ್ಚಟಗಳ ನಿರ್ಮೂಲನ, ಮಹಿಳಾ ವಿಕಾಸ, ಸ್ವ-ಉದ್ಯೋಗ ಕಾರ್ಯಕ್ರಮಗಳು, ದೇವಸ್ಥಾನ ಮತ್ತು ಹಳೆಯ ಸ್ಮಾರಕಗಳ ಪುನರುದ್ಧಾರ ಮೊದಲಾದ ಹಲವಾರು ಯೋಜನೆಗಳನ್ನು ಪರಿಚಯ ಮಾಡಿಕೊಟ್ಟರು. ಎಲ್ಲರೂ ತಮ್ಮ ತಮ್ಮ ಭಾಷೆ ಸಂಸ್ಕೃತಿಗಳನ್ನು ಉಳಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಮೇರಿಕದಲ್ಲಿರುವ ಕನ್ನಡಿಗರು ಕನ್ನಡವನ್ನು ಉಳಿಸಿಕೊಂಡಿದ್ದಾರೆ. ತಮ್ಮ ಬೇರುಗಳನ್ನು ಉಳಿಸಿಕೊಳ್ಳುತ್ತಿರುವ ಪ್ರಯತ್ನವನ್ನು ಮಾಡುತ್ತಿರುವ ಇಲ್ಲಿಯ ಕನ್ನಡಿಗರಿಗೆ ಗೌರವ ಅರ್ಪಿಸುತ್ತೇನೆ ಎಂದು ಹೇಳಿ, ಕೊನೆಯಲ್ಲಿ 'ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು' ಉಲ್ಲೇಖಿಸುವುದರೊಂದಿಗೆ ತಮ್ಮ ಭಾಷಣ ಮುಗಿಸಿದರು. ಅವರ ಕನ್ನಡ ಭಾಷಣದಲ್ಲಿ ಜಾತಿ, ಮತಕ್ಕೆ ಸಂಬಂಧಿಸಿದಂತೆ ಏನೂ ಇರಲಿಲ್ಲ.
ನಂತರ ಪ್ರಶ್ನೋತ್ತರ. ಮೊದಲ ಪ್ರಶ್ನೆಯೆ, ಹಿಂದು ಧರ್ಮ ಹಿಂದುಳಿಯುತ್ತಿದೆಯಲ್ಲ, ಏಕೆ? ಅವರಿಗೆ ಕೇಳಿದ ಹಲವಾರು ಪ್ರಶ್ನೆಗಳಲ್ಲಿ ಬಹುಶಃ ಎರಡು ಪ್ರಶ್ನೆಗಳನ್ನು ಬಿಟ್ಟರೆ ಮಿಕ್ಕ ಎಲ್ಲಾ ಪ್ರಶ್ನೆಗಳೂ ಹಿಂದೂಗಳಿಗೆ ಏನಾಗಿದೆ, ಏನು ಮಾಡಿದರೆ ನಮ್ಮ ಮತ ಬೆಳೆಯುತ್ತದೆ, ಅದನ್ನು ಬೆಳೆಸುವುದಕ್ಕೆ ನೀವೇನು ಮಾಡುತ್ತಿದ್ದೀರ, ನಮ್ಮವರು ಯಾಕೆ ಒಗ್ಗಟ್ಟಾಗಿಲ್ಲ, ಈ ವಿಷಯದ ಮೇಲೆ ರಾಜಕಾರಣಿಗಳ ಮೇಲೆ ನೀವೇಕೆ ಪ್ರಭಾವ ಬೀರುತ್ತಿಲ್ಲ, ಇತ್ಯಾದಿ, ಇತ್ಯಾದಿ. ಬಹುಶಃ ಕೇಳಿದವರ ಅಭಿಪ್ರಾಯ ಜೈನಮತದ ವೀರೇಂದ್ರ ಹೆಗ್ಗಡೆ ಹಿಂದೂಮತ ಸಂರಕ್ಷರಾಗಬೇಕು; ಅವರು ಮಾಡುವ ಸಾಮಾಜಿಕ ಕೆಲಸಗಳಲ್ಲಿ ತಮಗೆ ಆಸಕ್ತಿ ಇಲ್ಲ ಎಂದಿರಬೇಕು! ಜಾತ್ಯತೀತ ಪ್ರಜಾಪ್ರಭುತ್ವದ ಭಾರತದಿಂದ ಜಾತ್ಯತೀತ ಪ್ರಜಾಪ್ರಭುತ್ವದ ಅಮೇರಿಕಾಗೆ ಬಂದು, ಇಲ್ಲಿ ಸ್ವಲ್ಪಮಟ್ಟಿಗೆ ಕ್ರಿಶ್ಚಿಯನ್ ಬಲಪಂಥೀಯತೆ ಪ್ರೋತ್ಸಾಹಿಸುವ ರಿಪಬ್ಲಿಕನ್ ಪಕ್ಷವನ್ನು ದ್ವೇಷಿಸುತ್ತ, ಭಾರತದಲ್ಲಿ ಮಾತ್ರ ಅಂತಹುದೇ ಹಿಂದೂ ಬಲಪಂಥೀಯತೆ ಬೆಳೆಯಬೇಕು ಎಂದು ಆಶಿಸುವ ಇವರದು ಆತ್ಮದ್ರೋಹವಲ್ಲದೆ ಮತ್ತೇನು?
ಅಲ್ಲಿ ಇನ್ನೂ ಅಸಂಬದ್ಧ ಅನ್ನಿಸಿದ್ದು ಹೆಗ್ಗಡೆಯವರು ಈ ತರಹದ ಪ್ರಶ್ನೆಗಳನ್ನು ಪರೋಕ್ಷವಾಗಿ ಪ್ರೋತ್ಸಾಹಿಸಿದ ರೀತಿ. ಹಿಂದೂಮತದ ಸ್ಥಿತಿಗತಿಯ ಬಗ್ಗೆ ಪ್ರಶ್ನೆ ಕೇಳಿದವರೊಂದಿಗೆ ಅವರು ಅನೇಕ ಸಲ ತಮ್ಮ ಸಹಮತ ವ್ಯಕ್ತ ಪಡಿಸಿದರು. ಹಿಂದೂಗಳು ಬೇರೆ ಮತದವರಷ್ಟು ಉಗ್ರರಲ್ಲ ಎನ್ನುವ ರೀತಿಯಲ್ಲಿ ಹೇಳಿ, ಆಶಾದಾಯಕ ವಿಷಯವೆಂದರೆ ಈಗೀಗ ಪ್ರಜಾವಾಣಿ ಗುಂಪಿನವರು ಸಹ ತಮ್ಮ ಸುಧಾ ವಾರಪತ್ರಿಕೆಯಲ್ಲಿ ಧಾರ್ಮಿಕ ವಿಚಾರಗಳನ್ನು ಪ್ರಕಟಿಸುತ್ತಿದ್ದಾರೆ, ಇವನ್ನು ಮೊದಲೆಲ್ಲ ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ ಎಂದರು! ಮಾಧ್ಯಮಗಳೂ ಈಗ ಮತವಿಚಾರಗಳನ್ನು ಮೊದಲಿಗಿಂತ ಹೆಚ್ಚಾಗಿ ಪ್ರಚಾರ ಮಾಡುತ್ತಿವೆ ಎಂದರು. ಅವರ ಲೆಕ್ಕದಲ್ಲಿ ಮತಪ್ರೇಮ ಒಂದು ಆಶಾದಾಯಕ ಬೆಳವಣಿಗೆ!
ಪ್ರಶ್ನೆ ಕೇಳಿದ ಅನೇಕರಿಗೆ ತಮ್ಮ ತಾಯ್ನಾಡಿನ ಬಗ್ಗೆ ಕಾಳಜಿ ಇಲ್ಲ ಎಂದಲ್ಲ. ಅನೇಕರಿಗೆ ಭಾರತ ಎಂದರೆ ಸಾಕು ಮೈ ನವಿರೇಳುತ್ತದೆ. ಆದರೆ ಅವರಲ್ಲಿ ಬಹುಪಾಲು ಜನರಿಗೆ ಭಾರತ ಎಂದರೆ ಪುಣ್ಯನದಿಗಳ, ತೀರ್ಥಸ್ಥಳಗಳ, ದೇವಸ್ಥಾನಗಳ ಪುರಾಣದ ಪುಣ್ಯನೆಲವೇ ಭಾರತ. ಅವರ ಲೆಕ್ಕದಲ್ಲಿ ತಮ್ಮ ಮತಪ್ರೇಮ ದೇಶಪ್ರೇಮವೂ ಹೌದು! ಅವರಿಗೆ ಜನತಾ ಜನಾರ್ಧನರ ಭಾರತದ ಕಲ್ಪನೆ ಆಗುತ್ತಿಲ್ಲ. ಇವರ ಪ್ರಕಾರ ನಾಲ್ಕಾರು ದೇವಸ್ಥಾನಗಳನ್ನು ಹೆಚ್ಚಿಗೆ ಕಟ್ಟಿಬಿಟ್ಟರೆ ದೇಶ ಉದ್ಧಾರವಾಗಿಬಿಡುತ್ತದೆ ಎಂದಿರಬೇಕು! ಆದರೆ, ದೇಶದ ಸಂಪತ್ತು ಸ್ವಾಭಿಮಾನದ, ಶ್ರಮಜೀವಿಗಳಾದ ಅಲ್ಲಿನ ಜನ, ಅಲ್ಲವೆ? ಅವರು ಸಾಮಾಜಿಕವಾಗಿ, ಆರ್ಥಿಕವಾಗಿ, ನೈತಿಕವಾಗಿ ಮುಂದುವರಿದರೆ ಮಾತ್ರ ದೇಶ ಮುಂದುವರಿದಂತೆ, ಗುಡಿ-ಚರ್ಚು ಮಸೀದಿಗಳನ್ನು ಕಟ್ಟುವುದರಿಂದ ಅಲ್ಲ, ಅಲ್ಲವೆ? ನಾಡು ಕಟ್ಟುವುದು ಎಂದರೆ ಸ್ಥಾವರ ರೂಪದ ಪ್ರಾರ್ಥನಾಮಂದಿರಗಳನ್ನು ಕಟ್ಟುವುದೆ?
ಅಂದಹಾಗೆ, ಮತಪ್ರೇಮ ಜಾತಿಪ್ರೇಮಕ್ಕಿಂತ ಅದು ಹೇಗೆ ಭಿನ್ನ? ನನ್ನ ಮತವೇ ಶ್ರೇಷ್ಠ ಎನ್ನುವ ತಾಲಿಬಾನಿಗೂ, ಬಜರಂಗಿಗೂ, ಕ್ರೈಸ್ತ ಮತಾಂಧನಿಗೂ ನನ್ನ ಜಾತಿಯೇ ಶ್ರೇಷ್ಠ ಎನ್ನುವ ಕರ್ಮಠ ಜಾತಿವಾದಿಗೂ ವ್ಯತ್ಯಾಸ ಇದೆಯೆ? ನನ್ನ ಮತವೆ ಶ್ರೇಷ್ಠ ಎನ್ನುವ ಮತಾಂಧರಲ್ಲವೆ ಬುದ್ಧನ ವಿಗ್ರಹ ಒಡೆದದ್ದು, ಮಸೀದಿ ಬೀಳಿಸಿದ್ದು, ಇನ್ನೊಂದು ಮತದವರು ಜಾಸ್ತಿಯಿರುವ ದೇಶಕ್ಕೆ ದಾಳಿಯಿಟ್ಟದ್ದು, ಇಡುತ್ತಿರುವುದು?
ಇನ್ನೊಂದು ಸಭೆ:
ಕಳೆದ ವಾರ ಮತ್ತೊಂದು ಸಭೆಗೆ ಹೋಗಿದ್ದೆ. ಎರಡು ಗಂಟೆಗಳ ಕಾಲ ಮಾತನಾಡಿದ, ಪ್ರಶ್ನೆಗಳಿಗೆ ಉತ್ತರಿಸಿದ ವ್ಯಕ್ತಿ ದೆಹಲಿಯಿಂದ ಬಂದವರು. ಇನ್ನೂ ನಲವತ್ತು ದಾಟಿರದ ಮನುಷ್ಯ. ದೇಶಪ್ರೇಮ ಎನ್ನುವ ಪದ ಅಲ್ಲಿ ಬರದಿದ್ದರೂ ಅಲ್ಲಿ ಇದ್ದದ್ದೆಲ್ಲ ಭಾರತದ ಕುರಿತ ದೇಶಪ್ರೇಮ. ಆ ವ್ಯಕ್ತಿ ಮಾತನಾಡಿದ್ದೆಲ್ಲ ನಾಡಜನರ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ, ಮೌಲ್ಯಗಳ ಬಗ್ಗೆ, ನೈತಿಕತೆ ಬಗ್ಗೆ, ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸುವ ಬಗ್ಗೆ, ನಾಗರೀಕರನ್ನು ತಮ್ಮ ಕಾರ್ಯಗಳಿಗೆ ತಾವೇ ಹೊಣೆಗಾರರನ್ನಾಗಿ ಮಾಡುವ ಬಗ್ಗೆ, ಜನ ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವುದರ ಬಗ್ಗೆ, ಸಕ್ರಿಯರಾಗುವ ಬಗ್ಗೆ, ತನ್ಮೂಲಕ ಭಾರತವನ್ನು ಕಟ್ಟುವುದರ ಬಗ್ಗೆ. ಆ ಸಭೆಯಲ್ಲಿ ಅಬ್ಬರವಿರಲಿಲ್ಲ. ಆಕ್ರೋಷವಿರಲಿಲ್ಲ. ಕೀಳರಿಮೆ, ಮೇಲರಿಮೆಗಳಿರಲಿಲ್ಲ. ಚೀತ್ಕಾರವಿರಲಿಲ್ಲ. ನಿರಾಶೆಯಿರಲಿಲ್ಲ. ಅಹಂಕಾರವಿರಲಿಲ್ಲ. ಕಪಟ ವಿನಯವಿರಲಿಲ್ಲ. ಯಾರು ಯಾರ ಕಾಲಿಗೂ ಬೀಳಲಿಲ್ಲ. ಜಾತಿ, ಮತದ ಹೆಸರೇ ಇರಲಿಲ್ಲ. ಸಭೆ ಮುಗಿದ ನಂತರ ಅನ್ನಿಸಿದ್ದು, ಇದೇ ಅಲ್ಲವೆ ನೈಜ ದೇಶಪ್ರೇಮ, ನಿಜವಾದ ದೇಶಸೇವೆ ಎಂದು. ಆ ವ್ಯಕ್ತಿ ಈ ವರ್ಷದ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪಡೆದಿರುವ ಅರವಿಂದ್ ಖೇಜ್ರಿವಾಲ. ಯಾರೀ ಅರವಿಂದ್ ಖೇಜ್ರಿವಾಲ? ಅವರು ಮಾಡುತ್ತಿರುವುದಾದರೂ ಏನು?
Oct 21, 2006
ದೇಶಪ್ರೇಮ ಎಂದರೆ ಸ್ವಮತಪ್ರೇಮವೆ?
Subscribe to:
Post Comments (Atom)
No comments:
Post a Comment