Aug 21, 2008

ಒಲಿಂಪಿಕ್ಸ್ : ಬರ ಕೊನೆಯಾಗುತ್ತದೆ, ಆದರೆ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಆಗಸ್ಟ್ 29, 2008 ರ ಸಂಚಿಕೆಯಲ್ಲಿನ ಲೇಖನ.)

ಈ ಬಾರಿಯೂ ಭಾರತ ಏನಾದರೂ ಒಂದು ಪದಕ ಗೆದ್ದರೆ ಅದು ಪವಾಡವೆ ಎನ್ನುವಂತಹ ಸ್ಥಿತಿ ೨೦೦೮-ಒಲಿಂಪಿಕ್ಸ್ ಆರಂಭವಾದಾಗಲೆ ಇತ್ತು. ಬಹುಶಃ ಕೆಲವೆ ಕೆಲವರನ್ನು ಬಿಟ್ಟರೆ ಇಡೀ ದೇಶ ಅಂತಹ ದೊಡ್ಡ ಆಸೆಗಳನ್ನು ಇಟ್ಟುಕೊಂಡಿರಲಿಲ್ಲ. ಅಂತಹುದರಲ್ಲಿ ಅಭಿನವ್ ಬಿಂದ್ರಾ ಹತ್ತು ಮೀಟರ್‌ಗಳ ಏರ್ ರೈಫಲ್ ವಿಭಾಗದಲ್ಲಿ ಚಿನ್ನದ ಪದಕ ಪಡೆದದ್ದು ಒಂದು ಚಾರಿತ್ರಿಕ ಘಟನೆ. ಅಷ್ಟೆ ಮುಖ್ಯವಾದದ್ದು ಆ ಪೈಪೋಟಿಯ ಸಮಯದಲ್ಲಿ ಆತ ತೋರಿಸಿದ ಪ್ರಬುದ್ಧ ನಡವಳಿಕೆ.

ಆದರೆ, ಈ ಎಲ್ಲಾ ಸಾಧನೆಗೆ ಮತ್ತು ಹೆಮ್ಮೆಗೆ ವಿರುದ್ಧವಾಗಿದ್ದದ್ದು ನಮ್ಮ ರಾಜಕೀಯ ನಾಯಕರುಗಳ, ಕ್ರೀಡಾಸಂಸ್ಥೆಗಳ ಪದಾಧಿಕಾರಿಗಳ, ಮತ್ತು ಸರ್ಕಾರಗಳ ನಡವಳಿಕೆ. ಬಿಂದ್ರಾ ಚಿನ್ನ ಗೆದ್ದದ್ದೇ, ತಮ್ಮ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಮಾಡುವ ತಮ್ಮ ಮಾಮೂಲಿ ನಿಕೃಷ್ಟ ನಡವಳಿಕೆಗಳನ್ನು ಎಂದಿನಂತೆ ಭಾರತದ ಘನತೆವೆತ್ತ ಕೇಂದ್ರ ಸರ್ಕಾರ ಮತ್ತು ಹಲವಾರು ರಾಜ್ಯ ಸರ್ಕಾರಗಳು ಆರಂಭಿಸಿಬಿಟ್ಟವು. ಅತ್ತ ಟಿವಿಯಲ್ಲಿ ಬಿಂದ್ರಾರ ಅಪ್ಪ, "ಅಭಿನವ್‌ನ ಈ ಸಾಧನೆಗಾಗಿ ಇಡೀ ಜೀವನ ಪಣ ಇಟ್ಟಿದ್ದೆವು. ಜೀವನಪೂರ್ತಿ ಮಾಡಿದ ಉಳಿತಾಯವನ್ನು ಆತನಿಗಾಗಿ ಖರ್ಚು ಮಾಡಿದ್ದೇವೆ. ಯಾಕೆಂದರೆ, ನಾವು ಸರ್ಕಾರದ ಬಳಿಗೆ ಆತನಿಗಾಗಿ ಅದು ಬೇಕಾಗಿದೆ, ಇದು ಬೇಕಾಗಿದೆ ಎಂದು ಹೋದಾಗಲೆಲ್ಲ ಅವರು... (ಹೇಳುವುದೊ ಬೇಡವೊ ಎಂಬ ಗೊಂದಲ, ಸ್ವಲ್ಪ ತಡವರಿಕೆ) ಅವರೂ ಕೊಟ್ಟಿದ್ದಾರೆ; ಸರ್ಕಾರವೂ ಕೊಟ್ಟಿದೆ. ಆದರೆ ಈ ಚಿನ್ನದ ಪದಕ ಗೆಲ್ಲಬೇಕಾದರೆ ಎಷ್ಟು ಕಷ್ಟ ಪಡಬೇಕಾಗುತ್ತದೆ ಎನ್ನುವುದು ಅವರಿಗೆ ಗೊತ್ತಾಗಲಿಲ್ಲ. ಆ ಕಷ್ಟದ ಗ್ಯಾಪ್ ಏನಿತ್ತು ಅದನ್ನು ನಾವು ತುಂಬಿದೆವು..." ಎನ್ನುತ್ತಿದ್ದರೆ ಇತ್ತ ಈ ಸರ್ಕಾರಗಳು ಮುಖದ ಮೇಲೆ ಬಿದ್ದ ಎಂಜಲನ್ನು ಒರೆಸಿಕೊಳ್ಳುತ್ತ ಬಿಂದ್ರಾಗೆ ಕೋಟ್ಯಾಂತರ ರೂಪಾಯಿಗಳ ಬಹುಮಾನ ಘೋಷಣೆ ಮಾಡಿದರು. ಬಿಂದ್ರಾರ ಈ ಸಾಧನೆ ಇತರ ಕ್ರೀಡಾಪಟುಗಳಿಗೂ ಸ್ಫೂರ್ತಿಯಾಗಲಿ ಎಂಬ ಭೀಭತ್ಸ ಮಾತುಗಳನ್ನೇ ಆಡುತ್ತ ಇತರ ಭಾರತೀಯ ಕ್ರೀಡಾಪಟುಗಳು ಅಯೋಗ್ಯರು, ಅನರ್ಹರು, ಇಲ್ಲವೆ ಸ್ಫೂರ್ತಿ ಇಲ್ಲದವರು ಎಂಬಂತೆ ಅಣಕಿಸುತ್ತಿದ್ದರು.

ವಾಸ್ತವದಲ್ಲಿ, ಅಭಿನವ್‌ರ ಈ ಬಾರಿಯ ವಿಜಯದಲ್ಲಿ ಭಾರತಕ್ಕೆ ಅನೇಕ ಸಂದೇಶಗಳಿವೆ. ಮುಂದಕ್ಕೆ ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವಯುತವಾಗಿ ಪಾಲ್ಗೊಳ್ಳಬೇಕಾದರೆ ಏನೇನು ಬೇಕು ಮತ್ತು ಈ ಕೂಡಲೆ ಏನೇನು ಮಾಡಬೇಕು ಎನ್ನುವುದು ಈ ಸಂದೇಶಗಳಲ್ಲಿ ಒಂದು. ಅದೇ ರೀತಿ ಮುಂದಿನ ದಿನಗಳಲ್ಲಿ ಸರ್ಕಾರದ ಬೆಂಬಲ ಇಲ್ಲದಿದ್ದರೂ ನಮ್ಮ ಕ್ರೀಡಾಪಟುಗಳು ಗೆಲ್ಲಬಲ್ಲ ಸಾಧ್ಯತೆಗಳ ಬಗ್ಗೆ ಮತ್ತು ಅದಕ್ಕೆ ಕಾರಣವಾಗುವ ಅವರ ಆರ್ಥಿಕ ಹಿನ್ನೆಲೆಯ ಬಗ್ಗೆಯೂ ಸೂಕ್ಷ್ಮವಾಗಿ ತಿಳಿಸುತ್ತದೆ. ಭಾರತ ಈಗ ಹದಿನೈದು ಇಪ್ಪತ್ತು ವರ್ಷಗಳ ಹಿಂದಿನ ಬರೀ ಬಡವರ ಭಾರತ ಅಲ್ಲ. ಈಗಿನ ಮೇಲ್ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗ ವಿಸ್ತಾರಗೊಂಡಿದೆ. ಅನೇಕ ಶ್ರೀಮಂತರಿರುವ ಈ ಸಂದರ್ಭದಲ್ಲಿ ತಮ್ಮ ವಾರಿಗೆಯವರಿಗಿಂತ ಭಿನ್ನವಾದದ್ದನ್ನು ಮಾಡಲು ಈ ವರ್ಗ ಹಪಹಪಿಸುತ್ತಿದೆ. ಅವುಗಳಲ್ಲಿ ಒಂದು ತಮ್ಮ ಮಕ್ಕಳನ್ನು ಕ್ರೀಡಾಪಟುಗಳನ್ನಾಗಿ ಮಾಡುವುದು. ಅಭಿನವ್ ಬಿಂದ್ರಾ, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ, ಯುವರಾಜ್ ಸಿಂಗ್, ಜೀವ್ ಮಿಲ್ಖಾ ಸಿಂಗ್; ಹೀಗೆ ಇವತ್ತಿನ ಅನೇಕ ಕ್ರೀಡಾಪಟುಗಳು ಶ್ರೀಮಂತ ಮನೆತನದ ಹಿನ್ನೆಲೆ ಉಳ್ಳವರು. ಇವರ ಪೋಷಕರು ತಮ್ಮ ಮಕ್ಕಳಿಗೆ ಬೇಕಾದ ಕ್ರೀಡಾ ಸೌಲಭ್ಯಗಳಿಗಾಗಿ ಎಷ್ಟು ದುಡ್ಡು ಬೇಕಾದರೂ ಖರ್ಚು ಮಾಡಬಲ್ಲವರು. ತರಬೇತಿಗಾಗಿ ಯಾವ ದೇಶಕ್ಕೆ ಬೇಕಾದರೂ ಕಳುಹಿಸಬಲ್ಲ ಆರ್ಥಿಕ ಚೈತನ್ಯ ಇರುವವರು. ಆದರೆ, ಇಂತಹ ಕುಟುಂಬಗಳಿಂದ ಬರುವ ಕ್ರೀಡಾಪಟುಗಳು ಟೀಮ್‌ವರ್ಕ್ ಇಲ್ಲದ, ಒಬ್ಬೊಬ್ಬರೆ ಆಡಬಹುದಾದ ಆಟಗಳಿಗೇ ಬಹುಪಾಲು ಸೀಮಿತವಾಗುತ್ತಾರೆ. ವಿಶ್ವದರ್ಜೆಯ ತರಬೇತಿ, ಕುಟುಂಬದ ಪ್ರೋತ್ಸಾಹ, ಮತ್ತು ತಮ್ಮ ವೈಯಕ್ತಿಕ ಪರಿಶ್ರಮ ಹಾಗು ಮಹತ್ವಾಕಾಂಕ್ಷೆಗಳಿಂದಾಗಿ ಮುಂದಿನ ವರ್ಷಗಳಲ್ಲಿ ಹಲವಾರು ಅಭಿನವ್ ಬಿಂದ್ರಾರು ಏಕಸ್ಪರ್ಧಿ ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ನಾವು ಎದುರು ನೋಡಬಹುದು.

ಅದೇ ರೀತಿ, ತಂಡಗಳು ಸ್ಪರ್ಧಿಸುವ ಆಟಗಳಲ್ಲೂ ಒಳ್ಳೆಯ ಕ್ರೀಡಾಪಟುಗಳು ಬರುವುದು ಅಸಂಭವವಲ್ಲ. ಆದರೆ ಇವರು ಬರುವುದು ಬಹುಪಾಲು ಮಧ್ಯಮವರ್ಗದ ಕುಟುಂಬಗಳಿಂದ. ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ಒಂದು ಒಳ್ಳೆಯ ಕೆಲಸಕ್ಕೆ ಸೇರಿಸಿದರೆ ಸಾಕು ಎಂದು ಯೋಚಿಸುತ್ತಿದ್ದ ಹಿಂದಿನ ಮಧ್ಯಮವರ್ಗಕ್ಕಿಂತ ಈಗಿನ ಮಧ್ಯಮವರ್ಗ ಬೇರೆಯ ರೀತಿ ಯೋಚಿಸುತ್ತಿದ್ದೆ. ಇದು ಭಿನ್ನಸಂಸ್ಕೃತಿಗಳಿಗೆ, ಪ್ರದೇಶಗಳಿಗೆ, ಆಯಾಮಗಳಿಗೆ ಎಕ್ಸ್‌ಪೋಸ್ ಆಗಿರುವ ತಲೆಮಾರು. ಹಾಗಾಗಿಯೆ ಒಂದಷ್ಟು ಪೋಷಕರು ಪಾಶ್ಚಾತ್ಯ ಪ್ರಪಂಚದಲ್ಲಿ ಕ್ರೀಡಾಪಟುಗಳ ಪೋಷಕರು ಎಷ್ಟೆಲ್ಲಾ ತ್ಯಾಗ ಮತ್ತು ಪರಿಶ್ರಮ ಮಾಡುತ್ತಾರೊ ಅದೆಲ್ಲವನ್ನೂ ಮಾಡಲು ಇಲ್ಲೂ ಸಿದ್ಧವಾಗುತ್ತಿದ್ದಾರೆ. ಆದರೆ ಇವರಿಗೆ ಸರ್ಕಾರದಿಂದ ಮತ್ತು ಖಾಸಗಿಯವರಿಂದ ಪ್ರೋತ್ಸಾಹ ಬೇಕಾಗುತ್ತದೆ. ಸಮಸ್ಯೆ ಮುಂದುವರೆಯುವುದೇ ಇಲ್ಲಿ.

ನಮಗೆ ಇನ್ನೂ ಒಗ್ಗಿಲ್ಲದ, ಒಗ್ಗದ ಆಟಗಳು:
ಕೂಲಂಕಷವಾಗಿ ನೋಡಿದಾಗ, ಅನೇಕ ಒಲಿಂಪಿಕ್ ಆಟಗಳು ನಮ್ಮ ದೇಶಕ್ಕೆ ಹೊರಗಿನವು. ನಮ್ಮ ದೇಸೀಯತೆಗೆ ಮತ್ತು ನಮ್ಮ ಆರ್ಥಿಕ ಪರಿಸ್ಥಿತಿಗೆ ಅವು ಸ್ವಲ್ಪವೂ ಒಗ್ಗುವುದಿಲ್ಲ. ಬಹುಶಃ ಅರ್ಧಕ್ಕಿಂತ ಹೆಚ್ಚಿನ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುವವರೆ ಇರುವುದಿಲ್ಲ. ಇಡೀ ದೇಶದಾದ್ಯಂತ ಈಜು ಕಲಿತಿರುವ ಹೆಣ್ಣುಮಕ್ಕಳೆ ಸಾವಿರ-ಲಕ್ಷಗಳಲ್ಲಿರುವಾಗ ನಮ್ಮ ಹೆಣ್ಣುಮಕ್ಕಳು ಸಿಂಕ್ರೊನೈಸ್‌ಡ್ ಈಜು ಇರಲಿ, ಮಾಮೂಲಿ ಈಜು ಸ್ಪರ್ಧೆಗೆ ಅರ್ಹತೆ ಗಳಿಸುವುದೂ ಒಂದು ದೊಡ್ಡ ಸಾಧನೆಯೆ. ವಿಶಿಷ್ಟ ಸಾಂಸ್ಕೃತಿಕ ಹಿನ್ನೆಲೆ ಮತ್ತು ಅಷ್ಟೇ ವಿಶಿಷ್ಟವಾದ ಸಂಗೀತ ಬೇಕಾದ ರ್‍ಹಿದಮಿಕ್ ಜಿಮ್ನ್ಯಾಸ್ಟಿಕ್‌ನ ಕತೆಯೂ ಇದೆ. ವಾಟರ್ ಪೋಲೊ, ಬೇಸ್‌ಬಾಲ್, ಕುದುರೆಸವಾರಿ, ಕಯಾಕ್, ರೋಯಿಂಗ್, ಬೀಚ್ ವಾಲಿಬಾಲ್, ಮುಂತಾದ ಅನೇಕ ಆಟಗಳನ್ನು ಆಡುವ ಎಷ್ಟು ಭಾರತೀಯ ಮಹಿಳೆಯರಿದ್ದಾರೆ? ಇದ್ದರೂ ಇವರು ಶ್ರೀಮಂತ ವರ್ಗಕ್ಕೆ ಸೇರಿದವರಾಗಿರುತ್ತಾರೆ ಮತ್ತು ಖಯಾಲಿಗೆ ಆಡುವವರಾಗಿರುತ್ತಾರೆಯೆ ಹೊರತು ನೈಜ ಕ್ರೀಡಾಪಟುಗಳು ಎಷ್ಟು ಜನ ಸಿಗುತ್ತಾರೆ?

ಲಿಂಗಭೇಧವನ್ನು ಹೊರತುಪಡಿಸಿ, ಕೇವಲ ಪುರುಷ ಕ್ರೀಡಾಪಟುಗಳ ವಿಚಾರ ಯೋಚಿಸಿದಾಗಲೂ, ನಮ್ಮಲ್ಲಿ ಅವರಿಗೆ ಅನುಕೂಲವಾದ ಪರಿಸರ ಇಲ್ಲ. ಕಮ್ಯುನಿಸ್ಟ್ ದೇಶಗಳಲ್ಲಿ ಸರ್ಕಾರವೆ ವಿಶೇಷ ಮುತುವರ್ಜಿ ತೆಗೆದುಕೊಂಡು ಉತ್ತಮ ಕ್ರೀಡಾಪಟುಗಳನ್ನು "ಉತ್ಪಾದಿಸುತ್ತವೆ." ತಮ್ಮ ದೇಶದಲ್ಲಿ ಎಲ್ಲವೂ ಚೆನ್ನಾಗಿದೆ, ಹಾಲುತುಪ್ಪ ಉಕ್ಕಿಹರಿಯುತ್ತಿದೆ ಎಂದು ಹೊರದೇಶಗಳಿಗೆ ಅವು ಸಂದೇಶಗಳನ್ನು ಕೊಡುವುದೆ ಕ್ರೀಡೆಗಳಲ್ಲಿ ಗೆಲ್ಲುವ ಮೂಲಕ! ಇದು ಇತಿಹಾಸದುದ್ದಕ್ಕೂ ನಿರೂಪಿತವಾಗಿದೆ. ಇನ್ನು ಮುಂದುವರೆದ ದೇಶಗಳಲ್ಲಿ ಅದು ಎಂತಹ ಗ್ಲಾಮರ್ ಇಲ್ಲದ ಕ್ರೀಡೆ ಆಗಿದ್ದರೂ, ಆ ಕ್ರೀಡೆಯ ಕ್ರೀಡಾಪಟು ಅದರಲ್ಲಿ ಉತ್ತಮವಾಗಿದ್ದರೆ ಅವನು ಅದರಿಂದಲೆ ಜೀವನ ರೂಪಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಆತನಿಗೆ ಆರಂಭದಿಂದಲೆ ಪ್ರಾಯೋಜಕರು, ಕೋಚ್‌ಗಳೂ, ಕುಟುಂಬದ ಬೆಂಬಲವೂ ಸಿಗುತ್ತದೆ. ಓದು, ಕಾಲೇಜು, ಡಿಗ್ರಿ, ನೌಕರಿ, ಮುಂತಾದುವುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಆತ/ಆಕೆ ಪೂರ್ಣಪ್ರಮಾಣದ ತರಬೇತಿಯಲ್ಲಿ ತೊಡಗಿಕೊಳ್ಳಬಹುದು. ಆದರೆ, ನಮ್ಮಲ್ಲಿ? ಎಲ್ಲೋ ಕೆಲವು ಶ್ರೀಮಂತ ರೆಸಿಡೆನ್ಸಿ ಶಾಲೆಗಳಲ್ಲಿ ಕ್ರೀಡೆಗಳಿಗೆ ಪ್ರಾಮುಖ್ಯತೆ ಕೊಡುತ್ತಾರೆಯೆ ಹೊರತು ಬಹುಸಂಖ್ಯಾತ ಶಾಲೆಗಳಲ್ಲಲ್ಲ. ಒಬ್ಬ ಕ್ರೀಡಾಪಟು ಈ ತರಹದ ಆಟದಲ್ಲಿ ಯೋಗ್ಯನಿದ್ದಾನೆ ಎಂದು ಗೊತ್ತಾಗುವಷ್ಟರಲ್ಲಿ ಆತನ ಸಾಮರ್ಥ್ಯ ಇಳಿಮುಖವಾಗುವ ವಯಸ್ಸಾಗಿಬಿಟ್ಟಿರುತ್ತದೆ. ಹಾಗೆಯೆ, ನಾನು ಆಡುವ ಆಟದ ಮೂಲಕವೆ ನನ್ನ ಜೀವನ ರೂಪಿಸಿಕೊಳ್ಳುತ್ತೇನೆ ಎನ್ನುವ ಸ್ಥಿತಿ ಭಾರತದ ಬಹುಪಾಲು ಅಗ್ರ ಕ್ರೀಡಾಪಟುಗಳಿಗೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಕ್ರೀಡಾಪಟುಗಳು ಈ ರೀತಿಯ ವೈಯಕ್ತಿಕ ಸಮಸ್ಯೆಗಳಿಲ್ಲದ ಅನ್ಯದೇಶಗಳ ಕ್ರೀಡಾಪಟುಗಳ ವಿರುದ್ಧ ಗೌರವಯುತವಾಗಿ ಸ್ಪರ್ಧಿಸುವುದಾದರೂ ಹೇಗೆ?

ಲೇಖನದ ವಿಡಿಯೊ ಪ್ರಸ್ತುತಿ

ಈ ಎಲ್ಲವುಗಳ ಹಿನ್ನೆಲೆಯಲ್ಲಿ ನೋಡಿದಾಗ, ಭಾರತದ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳು, ಲಿಂಗಭೇಧ, ಮತ್ತು ಸರ್ಕಾರದ ಮಟ್ಟದಲ್ಲಿ ಇಲ್ಲವಾದ ಒಂದು ಉತ್ತಮ ಕ್ರೀಡಾ ಪಾಲಿಸಿಯೆ ನಾವು ಅಂತರಾರಾಷ್ಟ್ರೀಯ ಕ್ರೀಡೆಗಳಲ್ಲಿ ಹೀನಾಯವಾದ ಪ್ರದರ್ಶನ ನೀಡಲು ಮೂಲಭೂತ ಕಾರಣಗಳು. ನಾವು ಅವುಗಳನ್ನು ಸರಿಪಡಿಸಿಕೊಳ್ಳದೆ ಪದಕ ಬರಲಿಲ್ಲ ಎಂದುಕೊಳ್ಳುವುದು ಅಜ್ಞಾನದ ಪರಮಾವಧಿ ಮತ್ತು ಪಲಾಯನವಾದ.

ಕ್ರಿಕೆಟ್ - ಭಾರತದ ಸಮುದಾಯ ಕ್ರೀಡೆ:
ಭಾರತದಲ್ಲಿ ಕ್ರಿಕೆಟ್‌ಗೆ ಸಿಗುವ ಪ್ರಾಮುಖ್ಯತೆ ಮತ್ತು ಅದರ ಸ್ಟಾರ್ ಆಟಗಾರರ ಧಿಮಾಕಿನ ಬಗ್ಗೆ ನಮ್ಮ ಎಷ್ಟೇ ತಕರಾರುಗಳಿದ್ದರೂ, ಇವತ್ತು ಭಾರತದಲ್ಲಿ ಪ್ರತಿಯೊಂದು ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆ ಉಳ್ಳವರೂ ಆಡುವ ಕ್ರೀಡೆ ಎಂದರೆ ಅದೇನೆ. ಸರ್ಕಾರಿ ಕೃಪಾಪೋಷಣೆ ಇಲ್ಲದಿದ್ದರೂ ಜಾರ್ಖಂಡ್‌ನಂತಹ ಹಿಂದುಳಿದ ರಾಜ್ಯದಿಂದ ಬಂದಂತಹ ಸಾಮಾನ್ಯ ಹಿನ್ನೆಲೆಯ ಧೋನಿ ಇವತ್ತು ಭಾರತದ ನಂಬರ್ ಒನ್ ಆಟಗಾರ. ಧೋನಿಯಂತಹ ಅನೇಕರು ಕ್ರಿಕೆಟ್‌ನಲ್ಲಿ ಸಿಗುತ್ತಾರೆ. ಗಲ್ಲಿಗಲ್ಲಿಗಳಲ್ಲಿ, ಸಣ್ಣ ಮೈದಾನಗಳಲ್ಲಿ, ಸುಸಜ್ಜಿತ ಸ್ಟೇಡಿಯಮ್‌ಗಳಲ್ಲಿ, ಎಲ್ಲಿ ಬೇಕಾದರೂ ಆಡಬಲ್ಲ, ಆಡಲು ಸಹಆಟಗಾರರೂ ಸಿಗುವ ಅಪ್ಪಟ ಸಮುದಾಯ ಕ್ರೀಡೆ ಅದು. ಚೆನ್ನಾಗಿ ಆಡುವವರನ್ನು ಗುರುತಿಸುವ, ಅವರನ್ನು ಮೇಲಕ್ಕೆತ್ತುವ ಒಂದು ನೈಸರ್ಗಿಕ ವ್ಯವಸ್ಥೆಯೂ ಅದರಲ್ಲಿದೆ; ಅದರ ಗ್ಲಾಮರ್‌ನಿಂದಾಗಿ. ಐಪಿಎಲ್, ಐಸಿಎಲ್‌ಗಳಿಂದಾಗಿ ಅನೇಕ ಸ್ಥಳೀಯ ಆಟಗಾರರೂ ಈ ಕ್ರೀಡೆಯಿಂದಲೆ ಜೀವನ ರೂಢಿಸಿಕೊಳ್ಳುವ ಸಂದರ್ಭ ಸೃಷ್ಟಿ ಆಗುತ್ತಿದೆ. ಒಲಿಂಪಿಕ್ಸ್ ಅಸಾಮರ್ಥ್ಯದ ನಡುವೆಯೂ ವಿಶ್ವಮಟ್ಟದಲ್ಲಿ ನಮ್ಮ ಸಾಧನೆ ಮತ್ತು ಕೊಡುಗೆಯ ಬಗ್ಗೆ ನಾವು ಹೆಮ್ಮೆ ಪಡಬಹುದಾದ ಆಟ ಕ್ರಿಕೆಟ್.

ಜನರೇ ಅಪರಾಧಿಗಳು:
ಒಲಿಂಪಿಕ್ಸ್ ನಡೆಯುವ ಪ್ರತಿ ಸಂದರ್ಭದಲ್ಲೂ 'ಭವ್ಯ, ದಿವ್ಯ, ಪುರಾತನ ದೇಶವಾದ ನಮಗೆ ಪದಕ ಬರುತ್ತಿಲ್ಲ,' ಎಂದು ಗೋಳಾಡುವ ಕೆಲವು ಭಾರತೀಯರನ್ನು ಕಂಡಾಗ ಅಸಹ್ಯ ಉಂಟಾಗುತ್ತದೆ. ನಮಗೆಲ್ಲೊ ಅನ್ಯಾಯವಾಗುತ್ತಿದೆ ಎನ್ನುವಂತೆ ಆಡುತ್ತಾರೆ ಈ ಹುಸಿ ದೇಶಭಕ್ತರು. ಪ್ರಜಾಪ್ರತಿನಿಧಿಯಾಗಲು ಯಾವೊಂದು ಮೂಲಭೂತ ಅರ್ಹತೆ ಇಲ್ಲದಿದ್ದರೂ ಕೇವಲ ತನ್ನ ದುಡ್ಡಿನ ಬಲದಿಂದ ಗೆದ್ದ ಒಬ್ಬ ಪಕ್ಷೇತರ ಶಾಸಕ ಕರ್ನಾಟಕದ ರಾಜಕೀಯ ಅಸಂಗತಗಳಿಂದಾಗಿ ಮಂತ್ರಿಯಾಗುವ ಸಂದರ್ಭ ಮೂರು ತಿಂಗಳ ಹಿಂದೆ ಉಂಟಾಯಿತು. ಆತನಿಗೆ ಕ್ರೀಡಾ ಇಲಾಖೆ ನೀಡುವ ಘೋಷಣೆ ಆಯಿತು. "ಏನಕ್ಕೆ ಆ ಖಾತೆ, ಕಬಡ್ಡಿ ಆಡುವುದಕ್ಕಾ (ಅಥವ ಆಡಿಸುವುದಕ್ಕಾ)?" ಎಂದು ಆತ ಕ್ರೀಡಾ ಇಲಾಖೆಯ ಬಗ್ಗೆ ನಿಕೃಷ್ಟವಾಗಿ ಮಾತನಾಡಿದ. ಕ್ರೀಡೆ ಜನರಲ್ಲಿ ಯಾವ ಮಟ್ಟದ ಚೈತನ್ಯ, ಉತ್ಸಾಹ, ಆಶಾವಾದ ಹುಟ್ಟಿಸುತ್ತದೆ, ಜನರ ಮಾನಸಿಕ ಮತ್ತು ಶಾರೀರಿಕ ಆರೋಗ್ಯವನ್ನು ಹೇಗೆ ಪೋಷಿಸುತ್ತದೆ ಎನ್ನುವ ಕನಿಷ್ಠ ತಿಳುವಳಿಕೆಯೂ ಇಲ್ಲದೆ, ಅದರ ಪ್ರಾಮುಖ್ಯತೆಯೂ ಗೊತ್ತಿಲ್ಲದೆ ಆ ಅಜ್ಞಾನಿ ಒದರಿದ್ದ. ಎಲ್ಲೊ ಅಲ್ಲೊಬ್ಬರು ಇಲ್ಲೊಬ್ಬರು ಆತನ ಆ ಹೇಳಿಕೆಯ ಬಗ್ಗೆ ಛೀಕರಿಸಿಕೊಂಡರು. ಅದರ ಹೊರತಾಗಿ ಬಹುಪಾಲು ಜನತೆ ಅದೂ ಒಂದು ಅದ್ಭುತ ಡೈಲಾಗ್ ಎಂಬಂತೆ ಆನಂದಿಸಿದರು. ಆ ಮಾತಿನ ಬಗ್ಗೆ ವಿಷಾದ ಪಡದೆ ದೇಶ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಪಡೆಯದ ಬಗ್ಗೆ ವಿಷಾದಿಸುವ, ಪುಟಗಟ್ಟಲೆ ವಾಚಕರವಾಣಿಗಳಲ್ಲಿ, ಬ್ಲಾಗ್‌ಗಳಲ್ಲಿ ಮಾತನಾಡುವ ಜನರೆ ಇವತ್ತಿನ ಸಂದರ್ಭದಲ್ಲಿ ಅಪರಾಧಿಗಳು.

1 comment:

Anonymous said...

test