Aug 19, 2009

ಪೆಜತ್ತಾಯರ "ರಕ್ಷಾ" ಮತ್ತು ರಹಮತರ ನಾಯಿಪುರಾಣ...

ರಹಮತ್ ತರೀಕೆರೆಯವರು "ಕೆಂಡಸಂಪಿಗೆ"ಯಲ್ಲಿ ಬರೆಯುತ್ತಿರುವ "ನಾಯಿಪುರಾಣ" ಮತ್ತೆ ಹಳೆಯ ನೆನಪುಗಳನ್ನು ಎಬ್ಬಿಸುತ್ತಿದೆ. ಈ ವಾರ ನಾಯಿಪುರಾಣದ ಎರಡನೆಯ ಕಂತು ಪ್ರಕಟವಾಗಿದೆ. ಕೆಲವು ಬರಹಗಳನ್ನು ಓದಿದಾಕ್ಷಣ ಮನಸ್ಸು ಅದೆಂತಹುದೊ ಪ್ರಶಾಂತತೆಗೆ ತಲುಪಿಬಿಡುತ್ತದೆ. ಇಂದೂ ಸಹ ಹಾಗೆಯೆ ಆಯಿತು.

ನಾಯಿಪುರಾಣದ ಮೊದಲ ಕಂತು ಪೆಜತ್ತಾಯರ ಪುಸ್ತಕದ ಪ್ರಸ್ತಾಪದೊಂದಿಗೆ ಆರಂಭವಾಗುತ್ತದೆ. ಆ ಪುಸ್ತಕವನ್ನು ರಹಮತ್ "ನನಗೆ ತಿಳಿದಂತೆ ನಾಯಿಯ ಬಗ್ಗೆ ಕನ್ನಡದಲ್ಲಿ ಬಂದಿರುವ ಮೊದಲ ಜೀವನ ಚರಿತ್ರೆ" ಎನ್ನುತ್ತಾರೆ. ಅದರ ಹೆಸರು "ನಮ್ಮ ರಕ್ಷಕ ರಕ್ಷಾ". ಆ ಪುಸ್ತಕಕ್ಕೆ ಮುನ್ನುಡಿ ಬರೆಯುವ ಅವಕಾಶವನ್ನು ಪೆಜತ್ತಾಯರು ನನಗೆ ಕೊಟ್ಟಿದ್ದರು. ನಾಯಿಪುರಾಣದ ಓದಿನಿಂದಾಗಿ ಮತ್ತೊಮ್ಮೆ ನೆನಪಾದ ’ರಕ್ಷಾ’ನನ್ನು ನೆನೆಯುತ್ತ ಆ ಮುನ್ನುಡಿಯನ್ನು ಇಲ್ಲಿ ಕೊಡುತ್ತಿದ್ದೇನೆ.

"ನಮ್ಮ ರಕ್ಷಕ ರಕ್ಷಾ"ದ ಮುನ್ನುಡಿ...

ಮಧುಸೂದನ ಪೆಜತ್ತಾಯರು ನನಗೆ 2004 ರಿಂದೀಚೆಗಷ್ಟೆ ಪರಿಚಯಸ್ಥರು. ದಟ್ಸ್‌ಕನ್ನಡ.ಕಾಮಿನಲ್ಲಿ ನಾನು ಆಗಾಗ ಬರೆಯುತ್ತಿದ್ದ ಲೇಖನಗಳಿಗೆ ಈ ಹಿರಿಯ ಮಿತ್ರರು ಆಗಾಗ ಇ-ಮೇಲ್‌ನಲ್ಲಿ ಪ್ರತಿಕ್ರಿಯಿಸುತ್ತಿದ್ದರು. 2007 ರಲ್ಲಿ ಒಮ್ಮೆ ಅವರು ಸಂಕ್ರಾಂತಿಯ ಶುಭಾಶಯ ಕೋರುತ್ತ ಅವರ ನಾಯಿ ’ರಕ್ಷ’ ಇನ್ನೂ ಶಾಲಾಬಾಲಕಿಯಾಗಿದ್ದ ಪೆಜತ್ತಾಯರ ಮಗಳ ಪಕ್ಕದಲ್ಲಿ ಅವರ ಮನೆಯ ಗೇಟಿನ ಮೇಲೆ ಕಾಲೂರಿ ನಿಂತಿರುವ ಚಿತ್ರವನ್ನೂ ಕಳುಹಿಸಿದ್ದರು. ನಿಜಕ್ಕೂ ನಾನು ದಂಗಾಗಿ ಹೋಗಿದ್ದೆ. ಹೇಳಬೇಕೆಂದರೆ ಅಷ್ಟೊಂದು ದೈತ್ಯಗಾತ್ರದ ನಾಯಿಯನ್ನು ನಾನು ಅಲ್ಲಿಯವರೆಗೂ ನೋಡಿರಲಿಲ್ಲ ಎನ್ನಬೇಕು. ಅದನ್ನೆ ಪೆಜತ್ತಾಯರಿಗೆ ಬರೆದೆ. ಅವರು ಆ ನಾಯಿ ತಮ್ಮ ಕುಟುಂಬದ ಮಗನಾಗಿ ಹೋದ ಕತೆ ಮತ್ತು ಅದರ ನೆನಪನ್ನು ಬರೆದಿದ್ದರು. ಈ ಪತ್ರ ವ್ಯವಹಾರಕ್ಕೆ ಕೇವಲ ನಾಲ್ಕೈದು ತಿಂಗಳ ಹಿಂದಷ್ಟೆ ನಾನು ’ವಿಕ್ರಾಂತ ಕರ್ನಾಟಕ’ ವಾರಪತ್ರಿಕೆ ಆರಂಭಿಸಿದ್ದೆ. ಆ ಹಿನ್ನೆಲೆಯಲ್ಲಿ, "ನೀವು ಯಾಕೆ ನಿಮ್ಮ ರಕ್ಷಾನ ಬಗ್ಗೆ ನಮ್ಮ ಪತ್ರಿಕೆಗೆ ಬರೆಯಬಾರದು? ದಯವಿಟ್ಟು ಬರೆಯಿರಿ." ಎಂದು ವಿನಂತಿಸಿದ್ದೆ.

ಸರಿಯಾಗಿ ಅದಾದ ಒಂದು ವರ್ಷದ ನಂತರ ಪೆಜತ್ತಾಯರು ರಕ್ಷಾನ ಬಗ್ಗೆ ಬರೆದು ಮುಗಿಸಿದ್ದಾರೆ. ಈ ಒಂದೇ ವರ್ಷದಲ್ಲಿ ಅನೇಕ ಘಟನಗೆಳು ಘಟಿಸಿ ಹೋಗಿವೆ. ನನ್ನ ಜೀವನದಲ್ಲಾದ ಘಟನೆಗಳು ಇಲ್ಲಿ ಅಪ್ರಸ್ತುತ. ಆದರೆ ಈ ಒಂದೇ ವರ್ಷದಲ್ಲಿ ಪೆಜತ್ತಾಯರು ತಮ್ಮ ಕಣ್ಣಿಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ. ಅವರ ಹೃದಯವೂ ಶಸ್ತ್ರಚಿಕಿತ್ಸೆಗೆ ಒಳಗಾಗಿದೆ. ತಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿಸುವಂತಹ ಕಾಯಿಲೆಕಸಾಲೆಗಳನ್ನು ಅನುಭವಿಸಿ ಚೇತರಿಸಿಕೊಂಡಿದ್ದಾರೆ. ಇವುಗಳ ಮಧ್ಯೆಯೇ ತಮ್ಮ ಹಿರಿಮಗಳ ಮದುವೆ ಮಾಡಿದ್ದಾರೆ. ಆ ಸಂಭ್ರಮವನ್ನು ಅದೆಲ್ಲದರ ಸಡಗರದೊಂದಿಗೆ ಅನುಭವಿಸಿದ್ದಾರೆ. ಹಾಗೆಯೆ ಕಂಪ್ಯೂಟರ್‌ನ ’ಬರಹ’ದಲ್ಲಿ ಒಂದೊಂದೆ ಕನ್ನಡ ಅಕ್ಷರವನ್ನು ಟೈಪ್ ಮಾಡುತ್ತ ರಕ್ಷಾನ ಕತೆಯನ್ನು ಬರೆದಿದ್ದಾರೆ. ಕಂಪ್ಯೂಟರ್ ಅನ್ನು ಹೆಚ್ಚಿಗೆ ನೋಡಿದರೆ ಪೆಜತ್ತಾಯರ ಕಣ್ಣಿಗೆ ಆಯಾಸವಾಗುತ್ತದೆ. ಕಿರಿಕಿರಿಯಾಗುತ್ತದೆ. ಆ ಕಿರಿಕಿರಿಯಲ್ಲೂ, ಇತರ ದೈಹಿಕ ಸಮಸ್ಯೆಗಳ ನಡುವೆಯೂ ಪೆಜತ್ತಾಯರಿಗೆ ರಕ್ಷಾ ಎಂದೆಂದಿಗಿಂತ ಮುಖ್ಯವಾಗುತ್ತ, ಮಗನೆಂದು ಭಾವಿಸಿದ್ದಕ್ಕಿಂತ ಹೆಚ್ಚಾಗಿ ಆತ್ಮಬಂಧುವಾಗುತ್ತ ಹೋಗಿದ್ದಾನೆ.

ಅವರ ಆತ್ಮಬಂಧುವಿನ ಕತೆ ಈಗ ನಿಮ್ಮ ಕೈಯ್ಯಲ್ಲಿದೆ.

ಕನ್ನಡದ ಮೊಟ್ಟಮೊದಲ ಪ್ರಸಿದ್ಧ ನಾಯಿ "ಹುಲಿಯ" ಎಂದರೆ ಬಹುಶಃ ತಪ್ಪಾಗಲಾರದು. ಕ್ರಿ.ಶ. 1967 ರಲ್ಲಿ ಕುವೆಂಪುರವರು ಬರೆದ ಬೃಹತ್ಕಾದಂಬರಿ ’ಮಲೆಗಳಲ್ಲಿ ಮದುಮಗಳು’. ಅದರಲ್ಲಿ ದೈತ್ಯಗಾತ್ರದ ಕರಿ ನಾಯಿ ಹುಲಿಯ ತಾನೇ ಒಂದು ಪಾತ್ರವಾಗಿ, ಕೌತುಕವಾಗಿ, ಜೀವವಾಗಿ, ಜೀವಿಸುತ್ತದೆ; ವಿಜೃಂಭಿಸುತ್ತದೆ. ಆ ಇಡೀ ಕಾದಂಬರಿಯಲ್ಲಿ ಹುಟ್ಟಿನಿಂದ ಹಿಡಿದು ಅದರ ಸಾವಿನ ತನಕ ದಾಖಲಾಗಿರುವ ಏಕೈಕ ಜೀವ ’ಹುಲಿಯ’ ಎಂದರೆ ನಿಮಗೆ ಆ ನಾಯಿಯ ಹಿರಿಮೆಯ ಕಲ್ಪನೆ ಆಗಬಹುದು ಎಂದು ಭಾವಿಸುತ್ತೇನೆ. ಕನ್ನಡ ಸಾಹಿತ್ಯಪ್ರೇಮಿಗಳ ಪ್ರೀತಿಗೆ ಪಾತ್ರವಾದ ಮತ್ತೊಂದು ನಾಯಿ ಎಂದರೆ ಪೂರ್ಣಚಂದ್ರ ತೇಜಸ್ವಿಯವರ ’ಕರ್ವಾಲೊ’ ಕಾದಂಬರಿಯಲ್ಲಿ ಬರುವ ’ಕಿವಿ’. ನೀವು ಈ ಕಾದಂಬರಿಗಳನ್ನೇನಾದರೂ ಈ ಮುಂಚೆಯೆ ಓದಿದ್ದರೆ ರಕ್ಷಾನನ್ನು ಓದುತ್ತ ಓದುತ್ತ ಅವರೂ ನಿಮ್ಮ ಸ್ಮೃತಿ ಪಟಲದಲ್ಲಿ ಖಂಡಿತ ಹಾದುಹೋಗುತ್ತಿರುತ್ತಾರೆ. ಹಾಗೆಯೆ, ಇನ್ನುಮುಂದೆ ಹುಲಿಯ ಮತ್ತು ಕಿವಿಗಳ ಜೊತೆಜೊತೆಗೆ ರಕ್ಷನೂ ನಿಮ್ಮ ಮನೋಮಂಡಲದ ಒಡನಾಡಿಯಾಗುತ್ತಾನೆ.

ನಾನು ರಕ್ಷಾನ ಬಗ್ಗೆ ಓದುತ್ತ ನನ್ನದೇ ಜೀವನದ ಸುಮಧುರವಾದ, ಆದರೆ ನೋವಿನಲ್ಲಿ ಕೊನೆಗೊಂಡ ಒಂದು ಭಾಗದ ಮರುಪ್ರಯಾಣ ಮಾಡಿದ್ದೇನೆ. ಬೆಂಗಳೂರಿನ ದಕ್ಷಿಣಕ್ಕಿರುವ ಹಳ್ಳಿಯೊಂದರಲ್ಲಿ ಹುಟ್ಟಿಬೆಳೆದವನು ನಾನು. ಬಹುಶಃ ನನಗಾಗ ನಾಲ್ಕೈದು ವರ್ಷ. ಪಕ್ಕದ ಮನೆಯವರ ನಾಯಿಯ ಸಣ್ಣ ಮರಿಯೊಂದನ್ನು ನನ್ನ ಬಲವಂತಕ್ಕೆ ನನ್ನಣ್ಣ ಮನೆಗೆ ತಂದ ನೆನಪು. ಆಗೆಲ್ಲ ನಮ್ಮ ಕಡೆಯ ಹಳ್ಳಿಗಳಲ್ಲಿ ಸಾಕುನಾಯಿಯೂ ಯಾವುದೊ ಬೀದಿ ನಾಯಿಗೆ ಹುಟ್ಟಿದ ಮರಿಯೇ ಆಗಿರುತ್ತಿತ್ತು. (ಈಗಲೂ ಅದು ಹಾಗೆಯೆ ಇರಬಹುದು ಎನ್ನಿಸುತ್ತದೆ.) ಊರುನಾಯಿ ಜಾತಿಯ ಆ ಹೆಣ್ಣು ನಾಯಿಮರಿ ಮುಂದೆ ಐದಾರು ವರ್ಷಗಳ ಕಾಲ ನಮ್ಮ ಜೀವನದ ಭಾಗವೇ ಆಗಿಬಿಟ್ಟಿತ್ತು. ಹೊಲದ ಬಳಿಗೆ ಹಸುಗಳನ್ನು ಹೊಡೆದುಕೊಂಡು ಹೋಗುವಾಗ ಒಮ್ಮೊಮ್ಮೆ ನನ್ನಮ್ಮ ಅದನ್ನು ಮನೆಯಲ್ಲಿ ಕೂಡಿ ಹಾಕಿ ಹೋಗುತ್ತಿದ್ದರು. ನನ್ನ ಹಳ್ಳಿಯ ಹಳೆಯ ಮನೆಯ ಬಾಗಿಲಿಗೆ ಬಹುಶಃ ಶತಮಾನವನ್ನು ಮೀರಿದ ಆಯಸ್ಸು. ಹಾಗೆ ಕೂಡಿಹಾಕಿದಾಗಲೆಲ್ಲ ಆ ನಮ್ಮ ನಾಯಿ ಬಾಗಿಲನ್ನು ಕಚ್ಚಿಕಚ್ಚಿ ಮಾಡಿರುವ ಸಣ್ಣದೊಂದು ಕಿಂಡಿ ಈಗಲೂ ಇದೆ. ಆ ನಾಯಿಯ ಬಗ್ಗೆ ಹೇಳಿಕೊಳ್ಳಲು ಯಾಕೊ ಮನಸ್ಸು ತುಡಿಯುತ್ತದೆ. ಅದು ನೆನಪಾದಾಗಲೆಲ್ಲ ಮನಸ್ಸು ಭಾವುಕವಾಗಿಬಿಡುತ್ತದೆ. ಅನೇಕ ನೆನಪುಗಳು ಪಾರಾಗಲಾರದಂತಹ ಮುತ್ತಿಗೆ ಹಾಕುತ್ತವೆ. ಅಷ್ಟು ಆಪ್ತವಾಗಿದ್ದ ಆ ನಾಯಿ ಇನ್ನೂ ಚೆನ್ನಾಗಿರುವಾಗಲೆ ಅದರ ಜನನಾಂಗಕ್ಕೆ ಒಂದು ರೀತಿಯ ಕ್ಯಾನ್ಸರ್ ಬಂದು ಬಹಳ ನರಳುತ್ತಿತ್ತು. ಅದು ನಮ್ಮ ಜೀವನದಲ್ಲಿ ಅನೇಕ ಸಂಗತಿಗಳು ಘಟಿಸುತ್ತಿದ್ದ ಸಮಯ. ನಾವು ಅದರ ಬಗ್ಗೆ ಹೆಚ್ಚಿನ ಗಮನ ಕೊಡಲಿಲ್ಲವೊ ಅಥವ ಆಗಲಿಲ್ಲವೊ ಎನ್ನುವುದರ ಬಗ್ಗೆ ನನಗೆ ಗೊಂದಲವಿದೆ. ಇದ್ದಕ್ಕಿದ್ದಂತೆ ಒಂದು ದಿನ ಅದು ಮಾಯವಾಗಿಬಿಟ್ಟಿತು. ನಂತರ ಎಲ್ಲಿಯೂ ಅದರ ಪತ್ತೆಯಾಗಲಿಲ್ಲ. ಅದಾಗಿ ಇಪ್ಪತ್ತು ವರ್ಷಗಳ ಮೇಲಾಯಿತು. ಈ ಮಧ್ಯೆ ಒಂದು ನಾಯಿಯನ್ನು ಸಾಕಲೇಬೇಕಾದ ಅನೇಕ ಸಂದರ್ಭಗಳು ನಮಗೆ ಎದುರಾಗಿವೆ. ಆದರೆ ನನಗಾಗಲಿ ನನ್ನಣ್ಣನಿಗಾಗಲಿ ಮತ್ತೊಂದು ನಾಯಿಯನ್ನು ತಂದುಸಾಕುವ ನೈತಿಕ ಧೈರ್ಯ ಬರಲೇ ಇಲ್ಲ. ಬಹುಶಃ ಅದರ ದುರಂತವೆ ಅದನ್ನು ನಾವು ಮರೆಯದಂತೆ ಮಾಡಿಬಿಟ್ಟಿದೆ ಎನ್ನಿಸುತ್ತದೆ. ಹೆಸರೇ ಇಲ್ಲದ ಆ ನಮ್ಮ ಮೊದಲ ಮತ್ತು ಕೊನೆಯ ನಾಯಿಯ ನೆನಪಿನಿಂದ ಇಲ್ಲಿಯವರೆಗೂ ನಾವು ಹೊರಬರಲಾಗಿಲ್ಲ. ಆಗುವುದೂ ಇಲ್ಲ. ಈಗ ಅದಕ್ಕೆ ಮತ್ತೊಂದು ಕಾರಣವಿದೆ. ಮಧುಸೂದನ ಪೆಜತ್ತಾಯರ ’ರಕ್ಷಾ’ ಮತ್ತು ಈ ಮುನ್ನುಡಿ ಆ ನೆನಪನ್ನು ಈಗ ಮತ್ತಷ್ಟು ಗಾಢ ಮಾಡಿಬಿಟ್ಟಿದೆ; ಒಂದಷ್ಟು ಮಟ್ಟಿಗೆ ಅಧಿಕೃತವಾಗಿ ದಾಖಲಿಸುವಂತೆ ಮಾಡಿಬಿಟ್ಟಿದೆ.

ಗಂಡುಮಕ್ಕಳಿಲ್ಲದ ಪೆಜತ್ತಾಯರು "ನಾವು ರಕ್ಷಾನನ್ನು ಗಂಡುಮಗುವಿನಂತೆ ಸಾಕಿದೆವು" ಎಂದು ಬರೆಯುತ್ತಾರೆ. ಆದರೆ ಅವರು ರಕ್ಷಾನನ್ನು ಒಬ್ಬ ಮನುಷ್ಯನಿಗಿಂತ ಹೆಚ್ಚಾಗಿ ನೋಡಿದ್ದು ಇಲ್ಲಿ ಎದ್ದು ಕಾಣಿಸುತ್ತದೆ. ನಮ್ಮಲ್ಲಿಯ ಎಷ್ಟೋ ಜನಕ್ಕೆ ತಮ್ಮ ಮಗ-ಮಗಳು-ಗಂಡ-ಹೆಂಡತಿಯಂತಹ ಎಷ್ಟೋ ರಕ್ತಸಂಬಂಧಿಗಳ ಬಗ್ಗೆಯೆ ಇಷ್ಟೆಲ್ಲ, ಹೀಗೆಲ್ಲ ಬರೆದುಕೊಳ್ಳಲಾಗುವುದಿಲ್ಲ ಎಂದರೆ ಅದು ಅಷ್ಟೇನೂ ಕ್ರೂರ ಅಭಿಪ್ರಾಯ ಅಲ್ಲ ಎಂದು ಭಾವಿಸುತ್ತೇನೆ. ಹಾಗೆಯೆ, ರಕ್ಷಾ ಕೇವಲ ಪೆಜತ್ತಾಯರ ಕುಟುಂಬವನ್ನಷ್ಟೆ ಅಲ್ಲ, ತನ್ನ ಸಂಪರ್ಕಕ್ಕೆ ಬಂದ ಇತರರ ಜೀವನವನ್ನೂ ಸಂಪನ್ನಗೊಳಿಸಿದ್ದು ಇಲ್ಲಿ ನಮ್ಮ ಅರಿವಿಗೆ ಬರುತ್ತದೆ. ಸಹಮಾನವರೊಡನೆಯ ಸಂಕೀರ್ಣ ಸಂಬಂಧಕ್ಕಿಂತ ಒಂದು ನಾಯಿಯೊಡನೆಯ ಸರಳ ಸಂಬಂಧ ನಮ್ಮ ಜೀವನವನ್ನು ಪ್ರಭಾವಿಸುವುದರ ಬಗ್ಗೆ ಅಚ್ಚರಿಯಾಗುತ್ತದೆ.

’ನಮ್ಮ ರಕ್ಷಕ ರಕ್ಷಾ’ ಕೇವಲ ನಾಯಿಯೊಂದರ ಕತೆಯಲ್ಲ. ಕನ್ನಡವನ್ನಷ್ಟೆ ಓದುವ ಬಹಳಷ್ಟು ಓದುಗರಿಗೆ ಭೌಗೋಳಿಕವಾಗಿ ಹತ್ತಿರವಾಗಿದ್ದರೂ ಬಹಳಷ್ಟು ಮಟ್ಟಿಗೆ ಅಪರಿಚಿತವಾದ ಒಂದು ಹೊಸ ಲೋಕವನ್ನು ಈ ಬರಹ ತೋರಿಸುತ್ತದೆ. ಈ ಬರಹಕ್ಕೆ ಅನೇಕ ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳಿವೆ ಎನ್ನುವ ಅಭಿಪ್ರಾಯ ನನ್ನದು. ಪ್ರತಿಯೊಬ್ಬ ಓದುಗನಿಗೂ ತನ್ನದೇ ಆದ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಗಳಿರುವುದರಿಂದ ಮತ್ತು ಅವರ ಒಳನೋಟಗಳೂ ವಿಭಿನ್ನವಾಗಿರುವ ಸಾಧ್ಯತೆಗಳಿರುವುದರಿಂದ, ಈ ಪುಸ್ತಕವನ್ನು ಓದುತ್ತ ಅವರೂ ನಾನು ಕೇಳಿಕೊಂಡಂತೆ ಅನೇಕ ಪ್ರಶ್ನೆಗಳನ್ನು ಮತ್ತು ಅವಕ್ಕೆ ಉತ್ತರಗಳನ್ನು ಕಂಡುಕೊಳ್ಳುತ್ತ ಹೋಗುತ್ತಾರೆ ಎನ್ನುವ ನಂಬಿಕೆ ನನ್ನದು. ಒಂದು ಆರ್ಥಿಕ ಮತ್ತು ಸಾಮಾಜಿಕ ವರ್ಗಕ್ಕಷ್ಟೆ ಸೀಮಿತವಾಗಬಹುದಾಗಿದ್ದ, ಕನ್ನಡಕ್ಕೆ ಪರಕೀಯ ಅನ್ನಿಸುವಂತಹ ಜೀವನವೃತ್ತಾಂತವೊಂದು ಪೆಜತ್ತಾಯರ ಕನ್ನಡಪ್ರೇಮದಿಂದಾಗಿ ಮತ್ತು ಈ ನೆಲದ ಮಣ್ಣಿನೊಡನೆಯ ಒಡನಾಟದಿಂದಾಗಿ ಅಪ್ಪಟ ಕನ್ನಡದ್ದಾಗಿದ್ದೆ. ಜೊತೆಗೆ, ಕನ್ನಡದಲ್ಲಿ ಅಪರೂಪವಾಗಿರುವ ಮೇಲ್ಮಧ್ಯಮವರ್ಗದ ನೇರ ಅನುಭವಗಳು ಮುಂದಕ್ಕೆ ಸ್ವತಂತ್ರವಾಗಿಯೆ ಕನ್ನಡದಲ್ಲಿ ಬರಲಿವೆ ಎಂಬ ಆಶಾವಾದವನ್ನು ನನಗೆ ಈ ಬರಹ ಮೂಡಿಸಿದೆ.

ರಕ್ಷಾನ ಇಡೀ ಜೀವನವನ್ನು ಮಧುಸೂದನ ಪೆಜತ್ತಾಯರು ಕಾಲಾನುಕ್ರಮಣದಲ್ಲಿ ಬರೆದಿದ್ದಾರೆ. ಹಾಗೆಯೆ ಅವನ ಸುತ್ತಲಮುತ್ತಲ ಕೌಟುಂಬಿಕ ಮತ್ತು ಸಾಮಾಜಿಕ ಜೀವನವನ್ನು ಬಹಳ ಸರಳವಾಗಿ, ಸಜ್ಜನ ಹಾಸ್ಯಾಭಿರುಚಿಯಿಂದ ಕಟ್ಟಿಕೊಟ್ಟಿದ್ದಾರೆ. ಇಂತಹ ಸರಳ-ಸುಂದರ ಬರಹಕ್ಕೆ ಮುನ್ನುಡಿಯ ಅವಶ್ಯಕತೆಯಿಲ್ಲ ಎಂದು ನನಗೆ ಅನೇಕ ಬಾರಿ ಅನ್ನಿಸಿದೆ. ಆದರೆ ಪೆಜತ್ತಾಯರ ಪ್ರೀತಿ ಮತ್ತು ಬಹುಶಃ ಅದಕ್ಕಿಂತ ಹೆಚ್ಚಾಗಿ ರಕ್ಷಾ ನನಗೆ ಕಟ್ಟಿಕೊಟ್ಟಿರುವ ನೆನಪುಗಳೆ ಈ ಮುನ್ನುಡಿ ಬರೆಸಿದೆ ಎಂದು ನನ್ನ ಭಾವನೆ. ಈ ಅನುಭವಕ್ಕೆ ಮತ್ತು ಅವಕಾಶಕ್ಕೆ ನಾನು ಪೆಜತ್ತಾಯರಿಗೆ ಋಣಿ.

ನನ್ನ ಪ್ರಕಾರ ಇವತ್ತು ರಕ್ಷಾನ ಬಗ್ಗೆ ಕನ್ನಡದಲ್ಲಿ ಹೇಳಲು ಸಾಧ್ಯವಾಗಿರುವುದು ಮಧುಸೂದನ ಪೆಜತ್ತಾಯರಂತಹ ಅಪ್ಪಟ ಕನ್ನಡ ಮನಸ್ಸಿಗೆ ನಾಯಿಯೊಂದನ್ನು ಸಾಕಲೇಬೇಕೆಂದು ಪ್ರೇರೇಪಿಸಿದ ಅವರ ಇಬ್ಬರು ಹೆಣ್ಣುಮಕ್ಕಳಾದ ರಾಧಿಕಾ ಮತ್ತು ರಚನಾರಿಂದಾಗಿ. ಇಲ್ಲಿ ದಾಖಲಾಗಿರುವ ರಕ್ಷಾನ ಇತಿಹಾಸ ಸುಮಾರು ಹನ್ನೆರಡು ವರ್ಷಗಳ ಹಿಂದಕ್ಕೆಯೆ ಮುಗಿಯುತ್ತದೆ. ಆದರೆ ರಕ್ಷಾನನ್ನು ತಮ್ಮನೆಂದು ಸಾಕಿದ ಆ ಇಬ್ಬರು ಪುಟ್ಟಮಕ್ಕಳು ಈ ಹನ್ನೆರಡು ವರ್ಷಗಳಲ್ಲಿ ಎಲ್ಲಿ ಮುಟ್ಟಿದರು ಎನ್ನುವ ಕುತೂಹಲ ನನ್ನಂತೆಯೆ ಓದುಗರಿಗೂ ಬರುವುದು ಸಹಜ ಅನ್ನಿಸುತ್ತದೆ. ಈ ಇಡೀ ವೃತ್ತಾಂತದಲ್ಲಿ ತಾರ್ಕಿಕವಾಗಿ ಮುಕ್ತಾಯವಾಗಿಲ್ಲದ ವಿವರ ಎಂದರೆ ಅವರದೆ ಎಂದು ನನ್ನ ಭಾವನೆ.

ರಕ್ಷಾನ ಹಿರಿಯಕ್ಕ ರಾಧಿಕಾ ಈಗ ವೈದ್ಯೆ-ಮನೋರೋಗ ತಜ್ಞೆ. ಕಿರಿಯಕ್ಕ ರಚನಾ ಅಂತರ‌ರಾಷ್ಟ್ರೀಯ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ MBA ಮಾಡಿದ್ದು, ಸದ್ಯಕ್ಕೆ ಸುಳಿಮನೆ ಎಸ್ಟೇಟ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ತಮ್ಮ ಮತ್ತು ತಮ್ಮ ಕುಟುಂಬದ ಬದುಕನ್ನು ಸಂಪನ್ನಗೊಳಿಸಿದ ನಾಯಿಯ ಕುರಿತು, ಅದರ ಹುಟ್ಟು ಮತ್ತು ಸಾವಿನ ತನಕದ ಜೀವನವನ್ನು ದಾಖಲಿಸಿರುವ ಇಂತಹ ಸುದೀರ್ಘ ನುಡಿನಮನವನ್ನು ನಾನು ಇಲ್ಲಿಯವರೆಗೂ ಕನ್ನಡದಲ್ಲಿ ಕಂಡಿಲ್ಲ. ಸ್ವಾಭಿಮಾನದಲ್ಲಿ, ನಿಯತ್ತಿನಲ್ಲಿ, ಗುಣದಲ್ಲಿ, ಬಂಧುತ್ವದಲ್ಲಿ ಒಂದು ಶ್ರೇಷ್ಠಜೀವಿಯಂತೆ ನಡೆದುಕೊಂಡ ರಕ್ಷಾ ನನ್ನನ್ನು ಬಹಳ ದಿನ ಕಾಡಿದ್ದಾನೆ. ಅವನ ಬಗ್ಗೆ ಓದುತ್ತಿರುವಾಗಲೆ ನಾನು ನನ್ನದೇ ಆದ ನೆನಪು ಮತ್ತು ಕಲ್ಪನೆಗಳ ಬೆನ್ನೇರಿ ಸವಾರಿ ಮಾಡಿದ್ದೇನೆ. ಸಂತೋಷ ಅನುಭವಿಸಿದ್ದೇನೆ. ನೀವೂ ಅಂತಹುದೇ ಸಂತೋಷವನ್ನು ಅನುಭವಿಸುತ್ತೀರ ಎನ್ನುವ ವಿಶ್ವಾಸ ನನ್ನದು.

ರವಿ ಕೃಷ್ಣಾ ರೆಡ್ಡಿ
ಕ್ಯಾಲಿಫೋರ್ನಿಯ, ಅಮೆರಿಕ
ಫೆಬ್ರವರಿ 18, 2008


ಪುಸ್ತಕದ ಇತರ ವಿವರಗಳು:
"ನಮ್ಮ ರಕ್ಷಕ ರಕ್ಷಾ"
ಲೇ: ಎಸ್.ಎಂ. ಪೆಜತ್ತಾಯ
ಪ್ರಕಾಶಕರು: ಕಟ್ಟೆ ಪ್ರಕಾಶನ, ಚಿಂತನ ವಿಕಾಸ ವಾಹಿನಿ, ತಲವಾಟ, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.
ಬೆಲೆ: ರೂ. 60

ಪೆಜತ್ತಾಯರ ಇತರ ಲೇಖನಗಳು ಮತ್ತು ಅವರ ಆತ್ಮಕತೆ ಕೆಂಡಸಂಪಿಗೆಯಲ್ಲಿ ಪ್ರಕಟವಾಗುತ್ತಿದೆ. ಆಸಕ್ತರು ಇಲ್ಲಿ ಗಮನಿಸಬಹುದು.

No comments: