Sep 28, 2008

ಆತನ ಸಾವು ಈಗ ವಿಷಾದ ಹುಟ್ಟಿಸುತ್ತಿಲ್ಲ...

ಈಗ ಸ್ವಲ್ಪ ಹೊತ್ತಿನ ಮುಂಚೆ ಫರೀದ್ ಜಕಾರಿಯರವರ "GPS" ನೋಡುತ್ತಿದ್ದೆ. ಫರೀದ್ ಜಕಾರಿಯ ಗೊತ್ತಲ್ಲ? ಭಾರತೀಯ ಸಂಜಾತ; ಅಮೇರಿಕದ ಪತ್ರಕರ್ತ. ಜಾಗತಿಕ ರಾಜಕೀಯ ಆಯಾಮಗಳ ಮೇಲೆ ವಸ್ತುನಿಷ್ಠ ಅಭಿಪ್ರಾಯ ಕೊಡುವ ಅಧ್ಯಯನಶೀಲ. ಬುದ್ಧಿಜೀವಿ. ಭಾರತೀಯ ಮುಸಲ್ಮಾನರ ಬಗ್ಗೆ ಮತ್ತು ಅವರಲ್ಲಿಯ ವೈಚಾರಿಕ-ಸಾಂಸ್ಕೃತಿಕ ನಾಯಕತ್ವದ ದಾರಿದ್ರ್ಯದ ಬಗ್ಗೆ ಯೋಚಿಸಿದಾಗೆಲ್ಲ ನೆನಪಿಗೆ ಬರುವ ಮುಂಬಯಿಯಲ್ಲಿ ಹುಟ್ಟಿ ಬೆಳೆದ ಲೇಖಕ. ಆದರೆ, ಫರೀದ್ ಈಗ ಅಮೆರಿಕನ್ ಪ್ರಜೆ!

ಇರಲಿ. ಇವತ್ತು ಫರೀದ್ ಜಕಾರಿಯ ಚೀನಾದ ಪ್ರಧಾನಿ ಮತ್ತು ಅಫ್ಘನ್ ಅಧ್ಯಕ್ಷನ ಸಂದರ್ಶನ ಮಾಡಿದ್ದ. ಕೊನೆಯಲ್ಲಿ ರೋಮನ್ ಸಾಮ್ರಾಟ ಮಾರ್ಕಸ್ ಅರಿಲಿಯಸ್‌‍ನ ಒಂದೆರಡು ಮಾತುಗಳನ್ನು ಉಲ್ಲೇಖಿಸಿದ. ಮಾರ್ಕಸ್ ಆಸೆಯ (ಬಯಕೆ) ದುಷ್ಟತನಗಳ ಬಗ್ಗೆ ಹೇಳಿದ್ದ. ಅದನ್ನು ಜಕಾರಿಯ ಅಮೆರಿಕದ ಮತ್ತು ಚೀನಾದ ಜನರಿಗೆ ನೆನಪಿಸಿದ. ಹಾಗೆಯೆ ಮಾರ್ಕಸ್ ಸಾವಿನ ಬಗ್ಗೆ ಹೇಳಿದ್ದ ಮಾತನ್ನೂ ಹೇಳಿದ; "ಸಾವನ್ನು ಬಯಸಬಹುದು. ಏಕೆಂದರೆ ಅದು ಎಲ್ಲಾ ಬಯಕೆಗಳಿಗೂ ಅಂತ್ಯ ಹಾಡುತ್ತದೆ."

ಇದು ನೆನ್ನೆಯಿಂದ ನಾನು ಹಲವಾರು ಸಲ ನೆನಪಿಸಿಕೊಂಡ ಪಾಲ್ ನ್ಯೂಮನ್‌ (83) ನ ಸಾವು ಮತ್ತು ಅದರಿಂದ ನನ್ನಲ್ಲಿ ಆಗಾಗ ಹುಟ್ಟುತ್ತಿದ್ದ ವಿಷಾದಗಳನ್ನು ಈಗ ನಿಲ್ಲಿಸಿದೆ. ನ್ಯೂಮನ್‌ಗೆ ಇನ್ನೂ ಬದುಕಬೇಕೆಂಬ ಬಯಕೆ ಇತ್ತೊ ಇಲ್ಲವೊ ಗೊತ್ತಿಲ್ಲ. ಆದರೆ ಸಾರ್ಥಕ ಬದುಕಿನ ನಂತರ ಬರುವ ಸಹಜ ಸಾವಿಗೆ ವಿಷಾದಿಸಬಾರದು ಎಂದು ಮನಸ್ಸು ಹೇಳುತ್ತಿದೆ.

ಪಾಲ್ ನ್ಯೂಮನ್ನನ ಬಗ್ಗೆ ನಾನು ಹೆಚ್ಚಿಗೆ ಬರೆಯಲು ಹೋಗುವುದಿಲ್ಲ. ಯಾಕೆಂದರೆ, ನೀವು ಆತನ ಸಿನೆಮಾಗಳನ್ನು ನೋಡಿದ್ದರೆ ನಿಮಗೆ ಅದರ ಅವಶ್ಯಕತೆ ಇಲ್ಲ. ನೋಡಿಲ್ಲವಾದರೆ ಆತನ ಒಂದೆರಡು ಸಿನಿಮಾ ನೋಡಿದರೂ ಸಾಕು ಆತನ ಪ್ರತಿಭೆ ಕಾಣಿಸುತ್ತದೆ. ವಾರದ ಹಿಂದೆ ತಾನೆ ನೋಡಿದ್ದ ಆತನ "ಹಡ್" ಸಿನೆಮಾ ಗಾಢವಾಗಿ ತಟ್ಟಿತ್ತು. ಆ ಸಿನೆಮಾದ ಆತನ ಪಾತ್ರವನ್ನು ಮೆಚ್ಚಲಾಗದು. ಆದರೆ ಅವನನ್ನು ದ್ವೇಷಿಸಲಾಗದು. ಮನುಷ್ಯನ ಒಳ್ಳೆಯತನಗಳ ಬಗ್ಗೆ ಗೌರವ ಹುಟ್ಟಿಸುತ್ತಲೆ ಕೆಟ್ಟವರನ್ನೂ ಒಂದಿಷ್ಟು ಕನಿಕರದಿಂದ ನೋಡುವ ಬಗೆಯನ್ನು ಆ ಸಿನೆಮಾ ಕಲಿಸುತ್ತದೆ.

ನ್ಯೂಮನ್ ನೀಲಿ ಕಣ್ಣುಗಳ ಸ್ಫುರದ್ರೂಪಿ ಮನುಷ್ಯ. ಆದರೆ ಅನೇಕ ಚಿತ್ರಗಳಲ್ಲಿ ಆತ ನೆಗೆಟಿವ್ ಛಾಯೆಗಳಿರುವ indifferent, careless, ಮತ್ತು ಆದರ್ಶಗಳಿಗೆ ಅಂಟಿಕೊಳ್ಳದ ಪಾತ್ರಗಳಲ್ಲಿ ನಟಿಸಿದ್ದಾನೆ. ಆ ಪಾತ್ರಗಳಲ್ಲಿ ನಟಿಸುತ್ತಲೆ ಒಳ್ಳೆಯದರ ಬಗ್ಗೆ ವಿಷಾದವಿಲ್ಲದ ಗೌರವ ಮೂಡಿಸುತ್ತಾನೆ.

ನ್ಯೂಮನ್‌ನ ಸಿನೆಮಾಗಳಂತೆಯೆ ಆತನ ಸಿನೆಮಾ ಹೊರತಾದ ಕೆಲಸಗಳೂ ನನ್ನಲ್ಲಿ ಅಪಾರ ಕುತೂಹಲ ಮತ್ತು ಹೆಮ್ಮೆ ಮೂಡಿಸುತ್ತವೆ. ತನ್ನ ಹೆಸರಿನಲ್ಲಿ ಮಾರಾಟವಾಗುವ ಆಹಾರ ಉತ್ಪನ್ನಗಳ ತನ್ನ ಪಾಲಿನ ಪ್ರತಿ ಲಾಭಾಂಶವೂ ಸಮುದಾಯ ಸೇವಾ ಸಂಸ್ಥೆಗಳಿಗೆ ಹೋಗುವಂತೆ ಮಾಡಿದ್ದ. ಹಾಗೆಯೆ ಆತ ಒಬ್ಬ ಉದಾರ ಮನಸ್ಸಿನ ಮನುಷ್ಯ. ಉದಾರ ಮೌಲ್ಯಗಳಿಗಾಗಿ ಅನೇಕ ಸಲ ಧ್ವನಿಯೆತ್ತಿದ್ದಾನೆ. Robert Redford and Paul Newman60ರ ದಶಕದಲ್ಲಿಯ ಕಪ್ಪುಜನರ ನಾಗರಿಕ ಹಕ್ಕುಗಳ ಹೋರಾಟವನ್ನು ಬೆಂಬಲಿಸಿದ್ದ. ವಿಯಟ್ನಾಮ್ ಯುದ್ಧವನ್ನು ವಿರೋಧಿಸಿದ್ದ. ಆಗಿನ ಅಧ್ಯಕ್ಷ ನಿಕ್ಸನ್‌ನ "ವೈರಿ ಪಟ್ಟಿ"ಯಲ್ಲಿ ಆತನ ಹೆಸರೂ ಇತ್ತು. ಆ ಪಟ್ಟಿಯಲ್ಲಿ ತನ್ನ ಹೆಸರು ಸೇರಿಕೊಂಡದ್ದನ್ನು ತನ್ನ ಜೀವನದ ಅತಿ ಹೆಮ್ಮೆಯ ಗಳಿಗೆ ಎಂದು ಹೇಳಿಕೊಂಡಿದ್ದ.

ಹಾಲಿವುಡ್‌ನ ನನ್ನ ನೆಚ್ಚಿನ ನಟರಲ್ಲಿ ರಾಬರ್ಟ್ ರೆಡ್‌ಫೋರ್ಡ್ ಸಹ ಒಬ್ಬ. ಆತನೂ ಒಬ್ಬ ಆಕ್ಟಿವಿಸ್ಟ್. ನ್ಯೂಮನ್ ಮತ್ತು ರೆಡ್‌ಫೋರ್ಡ್ ಇಬ್ಬರೂ ಸೇರಿ ಎರಡು ಚಿತ್ರಗಳಲ್ಲಿ ('Butch Cassidy and The Sundance Kid' ಮತ್ತು 'The Sting') ನಟಿಸಿದ್ದಾರೆ. ಅದ್ಭುತ ಚಿತ್ರಗಳು. ರೆಡ್‌‍ಫೋರ್ಡ್ ನ್ಯೂಮನ್ನನ ಸಾವಿಗೆ "ನಾನು ಒಬ್ಬ ನೈಜ ಸ್ನೇಹಿತನನ್ನು ಕಳೆದುಕೊಂಡೆ. My life -- and this country -- is better for his being in it." ಅಂದಿದ್ದಾನೆ. ಈ ದೇಶದ್ದೆ ಏನು, ವಿಶ್ವದ ಅನೇಕ ಜನರ ಜೀವನ ಸಹ್ಯವಾಗಿರುವುದು ಈ ತರಹದ ಸಜ್ಜನರಿಂದ; ಪ್ರಾಮಾಣಿಕ, ಮಾನವೀಯ ಮೌಲ್ಯಗಳ ಕಲಾವಿದರಿಂದ.

ಇದೇ ಸಮಯದಲ್ಲಿ ನನಗೆ ನಮ್ಮ ಭಾರತ ಮತ್ತು ಕರ್ನಾಟಕದ "ತಾರೆ"ಗಳ ನೆನಪು ಬೇಡವೆಂದರೂ ಬರುತ್ತದೆ. ಈ ಹೋಲಿಕೆಗಳಿಂದ ತಪ್ಪಿಸಿಕೊಳ್ಳುವುದು ಅಪಾರ ಹಿಂಸೆ. ಹಾಲಿವುಡ್‌ನ ನಟ-ನಿರ್ದೇಶಕರ ಬುದ್ಧಿಶಕ್ತಿ ಮತ್ತು ಆಕ್ಟಿವಿಸಮ್‌ಗೂ ನಮ್ಮ ತಾರಾಲೋಕದ "ಅನ್ಯ ಗ್ರಹ ಜೀವಿಗಳ" ಬುದ್ಧಿಶಕ್ತಿ ಮತ್ತು ಕ್ರಿಯಾಶೀಲತೆಗೂ ಅಂತರ ನಿರಂತರವಾಗಿ ಮುಂದುವರೆಯುತ್ತಿದೆ. ಜಾರ್ಜ್ ಕ್ಲೂನಿ ವಿಶ್ವಸಂಸ್ಥೆಗೆ ಹೋಗಿ ಜನಾಂಗನಾಶದ ಬಗ್ಗೆ ಮಾತನಾಡುತ್ತಾನೆ. ತಮ್ಮ ದೇಶದ ಮತ್ತು ವಿಶ್ವದ ಸ್ಥಿತಿಗತಿಯ ಬಗ್ಗೆ ಹಾಲಿವುಡ್‌ನ ಅನೇಕ ನಟನಟಿಯರು ಜವಾಬ್ದಾರಿಯಿಂದ ಮತ್ತು ಅಧಿಕೃತತೆಯಿಂದ ಮಾತನಾಡುವ ಶಕ್ತಿ ಮತ್ತು ಜ್ಞಾನ ಪಡೆದಿದ್ದಾರೆ. ಆದರೆ, ನಮ್ಮ ಎಷ್ಟು ನಟನಟಿಯರು ನಮ್ಮ ಸಮಾಜದ ವಾಸ್ತವಿಕ ಸಮಸ್ಯೆಗಳ ಬಗ್ಗೆ ಪ್ರಗತಿಪರ ಚಿಂತನಶೀಲತೆಯಿಂದ ಮಾತನಾಡಬಲ್ಲರು? ಇವರನ್ನು ನೋಡಿದರೆ ಕನಿಕರ ಹುಟ್ಟುತ್ತದೆ. ಇವತ್ತು ನಾವು ನಿಜಕ್ಕೂ ಚಿಂತನೆಯನ್ನು ಇಂಜೆಕ್ಟ್ ಮಾಡಬೇಕಿರುವುದು ನಮ್ಮ ದೇಶದ ಸಿನೆಮಾ ರಂಗಕ್ಕೆ.

1 comment:

ಹಳ್ಳಿಕನ್ನಡ said...

ಕನ್ನಡದ ಮಟ್ಟಿಗೆ ಹೇಳುವುದಾದರೆ ಡಾ.ರಾಜ್ ರ ಜೀವನವೇ ಒಂದು ಮಾದರಿಯ ಜೀವನವಾಗಿತ್ತು. ಅವರನ್ನು ಬಿಟ್ಟರೆ ಮತ್ಯಾರು ಕಾಣುವುದಿಲ್ಲ.
ಹಾಲಿವುಡ್ ನ ಮತ್ತೊಬ್ಬ ನಟ ಶಾನ್ ಪೆನ್ ನ ಹೆಸರಿಸಬಹುದು.
- ಮಂಜುನಾಥಸ್ವಾಮಿ