Jan 26, 2009

ವಿಚಾರ ಮಂಟಪ: ಬರೆದ ನಾಲ್ವರಿಗೂ ಬಹುಮಾನಗಳು!

ವರ್ಷದ ಮೊದಲ ದಿನ ಬಂದ ಆಲೋಚನೆಯನ್ನು ಅಂದೇ ವಿಚಾರ ಮಂಟಪದಲ್ಲಿ ಮತ್ತು ನನ್ನ ಬ್ಲಾಗುಗಳಲ್ಲಿ ಪ್ರಕಟಿಸಿ, ಎರಡು ವಿಷಯಗಳಿಗೆ ಲೇಖಕರಿಂದ ಲೇಖನಗಳನ್ನು ಆಹ್ವಾನಿಸಿದ್ದೆ. ಇದಕ್ಕೆ ಸಾಕಷ್ಟು ಪ್ರಚಾರ ಸಿಗಲಿ ಎಂದು ಒಂದೆರಡು ಗ್ರೂಪ್‌ಗಳಿಗೆ, ಸಮುದಾಯ ಬ್ಲಾಗ್‌ಗಳಿಗೆ ಮತ್ತು ಪೋರ್ಟಲ್‌ಗಳಿಗೆ ಕಳುಹಿಸಿದ್ದೆ. ದಟ್ಸ್‌ಕನ್ನಡ.ಕಾಮ್ ಮತ್ತು ಅವಧಿಯವರು ಆಹ್ವಾನವನ್ನು ಪೂರ್ಣವಾಗಿ ಪ್ರಕಟಿಸಿದ್ದರು ಮತ್ತು ಹಲವಾರು ದಿನಗಳ ಕಾಲ ತಮ್ಮ ಮುಖಪುಟದಲ್ಲಿ ಬಿಟ್ಟಿದ್ದರು. ಕೆಂಡಸಂಪಿಗೆಯವರು ದಿನದ ತಾಣದಲ್ಲಿ ಆ ಕುರಿತು ಬರೆದಿದ್ದರು. ಇವರೆಲ್ಲರಿಗೂ ನಾನು ಕೃತಜ್ಞ.

ಇದರ ಜೊತೆಗೇ, ಈ ಪ್ರಕಟಣೆಯನ್ನು ಪ್ರಜಾವಾಣಿ, ಉದಯವಾಣಿ, ಕನ್ನಡಪ್ರಭ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಕನ್ನಡ-ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳಿಗೂ ಕಳುಹಿಸಿದ್ದೆ. ಕೆಲವು ಪತ್ರಿಕೆಗಳಿಗೆ ಅವುಗಳ ಅಧಿಕೃತ ಇಮೇಯ್ಲ್ ಐಡಿಗಳಿಗೂ, ಮತ್ತೆ ಕೆಲವು ಪತ್ರಿಕೆಗಳಿಗೆ ಅವುಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತ ಮಿತ್ರರ ಲಭ್ಯವಿದ್ದ ಇಮೇಯ್ಲ್‌ಗಳಿಗೂ ಕಳುಹಿಸಿದ್ದೆ. ಉದಯವಾಣಿಯ ಮಿತ್ರರು ಮಾತ್ರ ’ಒಂದೆರಡು ದಿನದಲ್ಲಿ ಪ್ರಕಟಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದ್ದರು. ಮಿಕ್ಕವರು ಪ್ರಕಟಿಸರಬಹುದು, ಇಲ್ಲದೆಯೂ ಇರಬಹುದು.

ಇಷ್ಟೆಲ್ಲದರಿಂದ ಕನಿಷ್ಠ ಎರಡು-ಮೂರು ಸಾವಿರ ಓದುಗರಿಗೆ ವಿಷಯ ತಲುಪಿರುವುದರಲ್ಲಿ ಅನುಮಾನವಿಲ್ಲ. ಅದು ಇನ್ನೂ ಹಲವು ಪಟ್ಟು ಇರಬಹುದು. ಆದರೆ ಕಮ್ಮಿಯಂತೂ ಇರಲು ಸಾಧ್ಯವಿಲ್ಲ.

ಇನ್ನು, ನನ್ನ ತಲೆಮಾರಿನ ಸವಾಲುಗಳನ್ನು ಮತ್ತು ನಮ್ಮ ಸಂದರ್ಭದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತ, ಈ ನನ್ನ ತಲೆಮಾರಿನೊಡನೆ ಒಂದು ಅನುಸಂಧಾನ ಏರ್ಪಡಲಿ ಅನ್ನುವುದು ನಾನು ಈ ಲೇಖನಗಳನ್ನು ಆಹ್ವಾನಿಸಲು ಇದ್ದ ಮೂಲ ಆಲೋಚನೆ. ಜೊತೆಗೆ ಈಗಿನ ಯುವಕ-ಯುವತಿಯರು ಒಂದು ಸಾಮಾಜಿಕ ವಿಷಯದ ಬಗ್ಗೆ ಗಂಭೀರವಾಗಿ ಯೋಚಿಸಿದಾಗ ಅವರ ಪ್ರಬುದ್ಧತೆ-ತರ್ಕ-ಸಮತೋಲನ ಹೇಗಿರುತ್ತದೆ ಎಂದು ತಿಳಿದುಕೊಳ್ಳಲೂ ಸಹಾಯವಾಗುತ್ತದೆ ಎಂದುಕೊಂಡೆ. ಹಾಗೆಯೆ, ಒಂದು ವಿಷಯದ ಬಗ್ಗೆ ಈಗಿನ ನಮ್ಮ ಚಿಂತನೆಗಳನ್ನು ದಾಖಲು ಮಾಡಲು, ಚರ್ಚಿಸಲು, ಸಹಾಯವಾಗುತ್ತದೆ ಎಂದುಕೊಂಡೆ. ಆ ನಿಟ್ಟಿನಲ್ಲಿ ಆಯೋಜಿಸಿದ್ದ ಈ ಸ್ಪರ್ಧೆಗೆ ಬಹುಮಾನದ ಮೊತ್ತವೂ ಗೌರವಯುತವಾಗಿತ್ತು. ಕನ್ನಡ ಪ್ರಭದ ಸಂಕ್ರಾಂತಿ ಕಥಾಸ್ಪರ್ಧೆಯ ಸಮಾಧಾನಕರ ಬಹುಮಾನದ ಮೊತ್ತವೆ ಒಂದು ಸಾವಿರ ರೂಪಾಯಿ. ಆ ಸ್ಪರ್ಧೆಯ ಸಮಾಧಾನಕರ ಬಹುಮಾನಕ್ಕೆ ಅರ್ಹರಾದವರಲ್ಲಿ ಕೆಲವು ಒಳ್ಳೆಯ ಹೆಸರುಗಳೆ ಇದ್ದವು. ಹಾಗಿದ್ದಾಗ, ಸೃಜನಶೀಲತೆ ಮತ್ತು ಕುಸುರಿಯನ್ನು ಬೇಡದ, ಆದರೆ ಸ್ವಲ್ಪ ಅಧ್ಯಯನ, ಒಂದಷ್ಟು ಪ್ರಬುದ್ಧ ಚಿಂತನೆ ಮತ್ತು ಸ್ವಲ್ಪ ಶಿಸ್ತನ್ನು ಬೇಡುವ ಇಲ್ಲಿಯ ಲೇಖನಗಳಿಗೆ ಒಂದು ಸಾವಿರ ರೂಪಾಯಿಯ ಪ್ರೋತ್ಸಾಹಕರ ಬಹುಮಾನ ಮತು 2500 ರೂಪಾಯಿಗಳ ಮೊದಲ ಬಹುಮಾನ ನನಗಂತೂ ಕಮ್ಮಿ ಅನ್ನಿಸುತ್ತಿಲ್ಲ. ಸ್ವತಃ ದಿನವೂ ಕೆಲಸಕ್ಕೆ ಹೋಗಿ, ತಿಂಗಳ ಸಂಬಳ ನೆಚ್ಚಿಯೇ ಬದುಕುತ್ತಿರುವ ನನಗೆ ಅದು ಗಣನೀಯ, ಗೌರವನೀಯ ಮೊತ್ತವಾಗಿಯೆ ಕಾಣಿಸುತ್ತದೆ. ಜೊತೆಗೆ ಕೊಟ್ಟಿದ್ದ ಸಮಯವೂ (25 ದಿನಗಳು) ಸಾಕಷ್ಟು ದೀರ್ಘವಾಗಿಯೆ ಇತ್ತು.

ಇದೆಲ್ಲದರ ಜೊತೆಗೆ ಐಟಿ ಜಗತ್ತಿನಲ್ಲಿ ಕೆಲಸ ಮಾಡುತ್ತಿರುವ, ಪುಟಗಟ್ಟಲೆ ಬ್ಲಾಗ್ ಬರೆಯುವ, ದಿನಕ್ಕೆ ಹತ್ತಾರು ಕಾಮೆಂಟ್‌ಗಳನ್ನು ಹಲವಾರು ಕಡೆ ಬಿಡುವ ಯುವಕ-ಯುವತಿಯರನ್ನೂ ಗಮನಿಸುತ್ತಾ ಬಂದಿದ್ದೆ. ಹಾಗಾಗಿ. ಇವರು ತಮ್ಮದೇ ವೃತ್ತಿಗೆ ಸಂಬಂಧಿಸಿದ ವಿಚಾರದ ಬಗ್ಗೆ ಯೋಚಿಸಿರುತ್ತಾರೆ ಮತ್ತು ಪ್ರತಿಕ್ರಿಯಿಸುತ್ತಾರೆ ಎನ್ನುವ ಊಹೆ ನನ್ನದಾಗಿತ್ತು. ಜೊತೆಗೆ ಇದು ಆ ಫೀಲ್ಡ್‌ನಲ್ಲಿ ಗಂಭೀರವಾದ ಬೆಳವಣಿಗೆಗಳು ಆಗುತ್ತಿರುವ, ಅಲ್ಲಿ ಕೆಲಸ ಮಾಡುವ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ತಟ್ಟುತ್ತಿರುವ ಸಮಯ. ಆದರೆ ನೋಡಿ, ಒಂದೇ ಒಂದು ಲೇಖನ ಆ ವಿಭಾಗದಲ್ಲಿ ಬಂದಿಲ್ಲ. ಈ ವಿಚಾರಕ್ಕೆ ತಮಗನ್ನಿಸಿದ ಕಾರಣಗಳನ್ನು ಮಿತ್ರರು ಕಾಮೆಂಟ್ ಬಿಡುವುದರ ಮೂಲಕ ಹಂಚಿಕೊಳ್ಳಬಹುದು. ನಾನು ಸದ್ಯಕ್ಕೆ ಅದರ ಬಗ್ಗೆ ನನಗನ್ನಿಸಿದ್ದನ್ನು ಬರೆಯದಿರಲು ತೀರ್ಮಾನಿಸಿದ್ದೇನೆ. ನಮ್ಮ urban ಸಮಸ್ಯೆಗಳ ಕುರಿತಾದ ಚರ್ಚೆಗಳು ಮತ್ತು ಚಳವಳಿಗಳು ಹೇಗೆ ಮೊಳಕೆ ಒಡೆಯುವುದರಲ್ಲಿಯೆ ಸೋಲುತ್ತಿವೆ ಎನ್ನುವ ಆಲೋಚನೆಯೊಂದಿಗೆ ಅದನ್ನು ಅಲ್ಲಿಗೇ ಬಿಡುತ್ತೇನೆ. ಅನುಸಂಧಾನಕ್ಕೆ ಅವಸರವಿಲ್ಲ!

ಗ್ರಾಮ-ರೈತ-ಕೃಷಿ ವಿಷಯಕ್ಕೆ ಸಂಬಂಧಿಸಿದಂತೆ ನಾಲ್ಕು ಲೇಖನಗಳು ಬಂದಿವೆ. ಅವುಗಳ ಪೂರ್ಣಪಾಠ ಇಲ್ಲಿವೆ:


ಪ್ರತಿ ವಿಷಯಕ್ಕೂ ಗರಿಷ್ಠ 6 ಲೇಖನಗಳಿಗೆ ಬಹುಮಾನ ಇರುವುದರಿಂದ ಮೇಲಿನ ಎಲ್ಲಾ ಲೇಖನಗಳಿಗೂ ಈಗ ನಗದು ಬಹುಮಾನ ಕೊಡಲಾಗುತ್ತದೆ. ಮೊದಲ ಬಹುಮಾನ ರೂ. 2500 ಮತ್ತು ಪ್ರೋತ್ಸಾಹಕರ ಬಹುಮಾನ ರೂ. 1000. ವಿವರಗಳನ್ನು ಫೆಬ್ರವರಿ 15 ರಂದು ಪ್ರಕಟಿಸಲಾಗುತ್ತದೆ.

ಮೇಲಿನ ವಿಷಯಗಳ ಮೇಲೆ ಈಗಲೂ ಲೇಖನ ಬರೆಯ ಬಯಸುವವರಿಗೆ ಈಗಲೂ ಬರೆಯಲು ಅವಕಾಶವಿದೆ. ಅವುಗಳನ್ನು ಅಂದಂದೇ ಪೂರ್ಣವಾಗಿ ವಿಚಾರ ಮಂಟಪದಲ್ಲಿ ಪ್ರಕಟಿಸಲಾಗುತ್ತದೆ. ಆದರೆ ಅವನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

ಮತ್ತೊಮ್ಮೆ ಈ ವಿಷಯಕ್ಕೆ ಪ್ರಚಾರ ಕೊಟ್ಟ, ಆಲೋಚಿಸಿದ, ಬರೆದ, ಎಲ್ಲರಿಗೂ ನಾನು ಕೃತಜ್ಞ.

Jan 19, 2009

ನಕ್ಸಲ್ ನಾಯಕರಿಂದ ನನ್ನ ಪತ್ರಕ್ಕೆ ಬಂದ ಮಾರೋಲೆ

ಕರ್ನಾಟಕದ ನಕ್ಸಲ್ ನಾಯಕರಿಂದ ಜನವರಿ 4, 2009 ರಂದು ಕರ್ನಾಟಕದ ಹಲವು ಮಾಧ್ಯಮ ಕೇಂದ್ರಗಳಿಗೆ ಮತ್ತು ಕನ್ನಡದ ಹಲವಾರು ಲೇಖಕರಿಗೆ ಇ-ಮೇಯ್ಲ್ ಪತ್ರ ಬಂದಿತ್ತು. ಹಾಗೆ ಅದು ನನಗೂ ಬಂದಿತ್ತು. ಆ ಮೇಯ್ಲ್ ಐಡಿಯಿಂದ ಈ ಮುಂಚೆ ಬಂದಿದ್ದ ಇಂತಹ ಕೆಲವು ಪತ್ರಗಳು ನಕ್ಸಲರಿಂದ ಬಂದ ಅಧಿಕೃತ ಪತ್ರಗಳು ಎಂಬ ರೀತಿಯಲ್ಲಿಯೆ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರಿಂದ ಇದು ನಕ್ಸಲರೇ ಕಳುಹಿಸುತ್ತಿರುವ ಪತ್ರಗಳು ಎಂಬ ನಂಬಿಕೆ ನನಗೂ ಬಂದಿತ್ತು. ಹಾಗಾಗಿಯೆ, ಜನವರಿ 4 ರಂದು ಬಂದ ಪತ್ರಕ್ಕೆ ನಾನು ಪ್ರತಿಯಾಗಿ ಒಂದು ಪತ್ರವನ್ನು ಅಂದೇ ಬರೆದೆ. ಜೊತೆಗೆ ಅದನ್ನು ಆ ಇಮೇಯ್ಲ್ ಗುಂಪಿನಲ್ಲಿದ್ದ ಎಲ್ಲರಿಗೂ ’cc’ ಮಾಡಿದ್ದೆ. ನಾಡಿನ ಇಬ್ಬರು ಖ್ಯಾತ ಲೇಖಕರು ನನ್ನ ಪತ್ರಕ್ಕೆ ಪೂರಕವಾಗಿ ಸ್ಪಂದಿಸಿ ನಿಮ್ಮ ಅಭಿಪ್ರಾಯಕ್ಕೆ ನಮ್ಮ ಬೆಂಬಲವೂ ಇದೆ ಎಂಬ ರೀತಿಯಲ್ಲಿ ಇಮೇಯ್ಲ್‌ನಲ್ಲಿ ಪ್ರತಿಕ್ರಿಯಿಸಿದ್ದರು. ದೇಸೀ ಮಾತು ಬ್ಲಾಗಿನ ದಿನೇಶ್ ಕುಮಾರ್ ಅದನ್ನು ತಮ್ಮ "ಇಂದು ಸಂಜೆ" ಪತ್ರಿಕೆಯಲ್ಲಿ ಪ್ರಕಟಿಸಿರುವುದಾಗಿ ಇಮೇಯ್ಲ್ ಕಳುಹಿಸಿದ್ದರು. (ಈ ಮುಂಚೆ ನನಗೆ ಅವರ ಪರಿಚಯ ಇರಲಿಲ್ಲ.)

ಅಂದು ನಾನು ಬರೆದಿದ್ದ "ಕರ್ನಾಟಕದ ನಕ್ಸಲ ನಾಯಕರಿಗೆ ಒಂದು ಪತ್ರ " ಇಲ್ಲಿದೆ.

http://amerikadimdaravi.blogspot.com/2009/01/blog-post.html

ನನ್ನ ಈ ಪತ್ರವನ್ನು ಕನ್ನಡದ ದೈನಿಕ "ವಾರ್ತಾ ಭಾರತಿ" ಯವರೂ ಪ್ರಕಟಿಸಿದ್ದರಂತೆ. ನನಗೆ ಗೊತ್ತಿರಲಿಲ್ಲ. ಇಂದು ಗೊತ್ತಾಯಿತು; ಈಗ ತಾನೆ ನಕ್ಸಲ್ ನಾಯಕರಿಂದ ನನ್ನ ಪತ್ರಕ್ಕೆ ಬಂದ ಮಾರುಪತ್ರದ ಮೂಲಕ. ಅವರು ಇಂದು ಕಳುಹಿಸಿದ ಪತ್ರದ ಪೂರ್ಣ ಪಾಠ ಇದು.



ganga_dhara2007 @ rediffmail.com ಇಂದ ಬಂದ ಇಮೇಯ್ಲ್ ಮತ್ತು ಲಗತ್ತಿಸಿದ ಪತ್ರ:

Dear sir,struggle greetings.

We are sending this response as attachments to Mr,ravikrishna reddy's letter to our party dated 6th or 7 th of this january.Which was also published in 'vaartha bharathi' kannada news paper.

We are sending this with warm regards.

yours in struggle
gangadhara


ಪ್ರಿಯ ರವಿಕೃಷ್ಣ ರೆಡ್ಡಿಯವರಿಗೆ, ಶುಭಾಶಯಗಳು.

ನೀವು ಇ-ಮೇಲ್ ಮೂಲಕ ನಮಗೂ ಸೇರಿದಂತೆ ಹಲವರಿಗೆ ಕಳುಹಿಸಿದ ಪತ್ರ ನೋಡಿದೆ. ಅದು ’ವಾರ್ತಾಭಾರತಿ’ ಕನ್ನಡ ದೈನಿಕದಲ್ಲೂ ಪ್ರಕಟವಾದ್ದನ್ನು ನಂತರ ಗಮನಿಸಿದ್ದೇವೆ. ನಿಮಗೆ ಕೂಡಲೇ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಈಗ ತಡವಾಗಿ ಅದನ್ನು ಮಾಡುತ್ತಿದ್ದೇವೆ. ಹಾಗೇ ತಡವಾಗಿರುವುದಕ್ಕೆ ಕ್ಷಮೆಯಿರಲಿ. ತಮ್ಮ ರೈತ ಹಿನ್ನೆಲೆ ಹಾಗೂ ಪ್ರಸ್ತುತ ಕಾರ್ಮಿಕನಾಗಿ ಊಟ ಸಂಪಾದಿಸುತ್ತಿರುವುದು, ಮಾನವ ಸಮಾಜ ಸಮಾನತೆ ಸರ್ವೋದಯವನ್ನು ಸಾಧಿಸಬೇಕೆಂಬ ತಮ್ಮ ಆಶಯಗಳನ್ನು ನಾವು ಎತ್ತಿ ಹಿಡಿಯುತ್ತೇವೆ. ಸತ್ಯ, ಶ್ರಮ, ಪ್ರಜಾಪ್ರಭುತ್ವ ಹಾಗೂ ಮಾನವತೆಯಲ್ಲಿ ತಮಗಿರುವ ನಂಬಿಕೆ ಬಗ್ಗೆ ನಮಗೆ ತುಂಬು ಗೌರವವಿದೆ.

(ಹೇಡಿತನವಲ್ಲದ) ಅಹಿಂಸಾತ್ಮಕ ಹೋರಾಟ ಹಾಗೂ ಅಹಿಂಸೆಯಲ್ಲಿ ತಮಗಿರುವ ನಂಬಿಕೆಗಳನ್ನು ಹಾಗೂ ನಮ್ಮೊಂದಿಗೆ ತಮಗಿರುವ ಭಿನ್ನಾಭಿಪ್ರಾಯವನ್ನು ಗೌರವಿಸುತ್ತಲೇ ನಮ್ಮ ಕೆಲವು ಅಭಿಪ್ರಾಯಗಳನ್ನು ಬರೆಯುತ್ತಿದ್ದೇವೆ.

ಮಾನವ ಸಮಾಜ ಬೆಳೆದು ಬಂದಿರುವ ಪ್ರಕ್ರಿಯೆಗಳನ್ನು ನಾವು ನೋಡುವುದಾದರೆ ಪ್ರಪಂಚದ ಯಾವುದೇ ನಿರ್ಣಾಯಕ ಸಾಮಾಜಿಕ ಬದಲಾವಣೆಗಳು ಅಹಿಂಸಾತ್ಮಕವಾಗಿ ಜರುಗಿಲ್ಲದಿರುವುದನ್ನು ಕಾಣುತ್ತಿದ್ದೇವೆ. ಅಸ್ತಿತ್ವದಲ್ಲಿದ್ದ ಆಯಾ ಕಾಲಘಟ್ಟದ ಹಿಂಸಾತ್ಮಕ ಶೋಷಕ ವ್ಯವಸ್ಥೆ ಮತ್ತದರ ಆಳುವ ವರ್ಗಗಳನ್ನು ಕಿತ್ತೊಗೆಯಬೇಕಾಗಿ ಬಹುಸಂಖ್ಯಾತ ಶೋಷಿತ (ಅಂದರೆ ಅಂತಹ ವ್ಯವಸ್ಥೆಯಿಂದ ನಲುಗುತ್ತಿರುವ ಎಲ್ಲರೂ) ಜನಸಮುದಾಯ ಭಾವಿಸಿದಾಗ ತಮ್ಮ ಸಂಘಟಿತ ಬಲವನ್ನು ಪ್ರಯೋಗಿಸುತ್ತಾ ನಿರ್ಣಾಯಕ ಬದಲಾವಣೆಗಳನ್ನು ತರುತ್ತಾ ಬಂದಿದ್ದಾರೆ. ಇದು ಹಿಂದಿನ ಗುಲಾಮಿ ಸಮಾಜ, ಊಳಿಗಮಾನ್ಯ ಸಮಾಜ, ನಂತರ ಬಂಡವಾಳಶಾಹಿ ಕ್ರಾಂತಿಗಳಾದ ಫ್ರೆಂಚ್ ಕ್ರಾಂತಿ, ಇಂಗ್ಲೆಂಡ್ ಕ್ರಾಂತಿ, ಸಮಾನತೆ ಸರ್ವೋದಯವನ್ನು ಸ್ಥಾಪಿಸಿದ ರಷ್ಯಾದ ಕಾರ್ಮಿಕ ವರ್ಗದ ಕ್ರಾಂತಿ, ಚೀನಾದ ಕಾರ್ಮಿಕ-ರೈತರ ಕ್ರಾಂತಿ ಹಾಗೂ ಪ್ರಸ್ತುತ ಪ್ರಪಂಚದಲ್ಲಿ ನಡೆಯುತ್ತಿರುವ ಭಾರತ, ಫಿಲಿಪೈನ್ಸ್, ಪೆರು, ಟರ್ಕಿ, ನೇಪಾಳ ಕ್ರಾಂತಿಗಳಲ್ಲಿ ಬಲಪ್ರಯೋಗವೇ ನಿರ್ಣಾಯಕವಾದುದಾಗಿದೆ. ಇಲ್ಲಿ ಬಲಪ್ರಯೋಗವೆಂದಾಗ ಶೋಷಕ ವ್ಯವಸ್ಥೆ ಮತ್ತು ಹಿಡಿಯಷ್ಟಿರುವ ಅದರ ಆಳುವ ವರ್ಗಗಳು ಬಹುಸಂಖ್ಯಾತ ಜನಸಮುದಾಯದ ಮೇಲೆ ತಮ್ಮ ಎಲ್ಲಾ ಯಂತ್ರಾಂಗಗಳ ಮೂಲಕ ಅನ್ಯಾಯ, ಆಕ್ರಮ, ಕ್ರೂರ ಹಿಂಸಾತ್ಮಕ ಬಲ ಪ್ರಯೋಗಗಳನ್ನು ಕೊನೆಗಾಣಿಸಲು ಶೋಷಿತ ಜನಸಮುದಾಯ ನಡೆಸುವ ಸ್ವಯಂ ರಕ್ಷಣಾತ್ಮಕ ಹಾಗೂ ತಮ್ಮ ನಿಜವಾದ ಪ್ರಜಾ ಪ್ರಭುತ್ವ ಸ್ಥಾಪನೆಗಾಗಿ ಬಲಪ್ರಯೋಗ ಎಂದು ಅರ್ಥ. ನಂತರ ನೈಜ ಸಮಾನತೆ ಸರ್ವೋದಯಗಳನ್ನು ಸ್ಥಾಪಿಸುವ ಸಮಾಜವಾದಿ ನಂತರ ಸಮತಾವಾದಿ ವ್ಯವಸ್ಥೆಯ ತಳಮಟ್ಟದಿಂದ ನಿರ್ಮಾಣಕ್ಕಾಗಿ ಎಂದು ಅರ್ಥ.

ಶೋಷಿತ ಜನರು ತಮ್ಮ ಸ್ವಾತಂತ್ರ್ಯ, ಸಮಾನತೆ, ವಿಮೋಚನೆಗಾಗಿನ ಹೋರಾಟ ಏನಾಗಿರಬೇಕು ಮತ್ತು ಹೇಗಿರಬೇಕು ಎಂಬುದನ್ನು ನಿರ್ಣಯಿಸುವುದು ಅಯಾ ವ್ಯವಸ್ಥೆ ಮತ್ತು ಅವುಗಳ ಆಳುವ ವರ್ಗಗಳೇ ಹೊರತು ಬೇರೆ ಯಾರೂ ಅಲ್ಲ. ಜನಸಮುದಾಯ ನೈಜ ಪ್ರಜಾತಂತ್ರ ಅನುಭವಿಸುತ್ತಿರುವಾಗ ಸಹಜವಾಗೇ ಅದಕ್ಕನುಗುಣವಾದ ಹೋರಾಟ ರೂಪಗಳು ಇರುತ್ತವ. ಪ್ರಜಾತಂತ್ರವೆಂದು ಬಿಂಬಿಸುವ ಪ್ರತಿಗಾಮಿ ಶೋಷಕ ಫ್ಯಾಸಿಸ್ಟ್ ವ್ಯವಸ್ಥೆ ಚಾಲ್ತಿಯಲ್ಲಿರುವಾಗ ಜನಸಮುದಾಯ ತಮ್ಮ ಬದುಕನ್ನು ಹಾಗೂ ನಾಡನ್ನು ರಕ್ಷಿಸಿಕೊಳ್ಳಬೇಕಾಗಿ ಬರುವ ನಿರ್ಣಾಯಕ ಹಂತದಲ್ಲಿ ತಮ್ಮ ಅಗತ್ಯಕ್ಕೆ ಯಾವುದು ಸೂಕ್ತವೋ ಅಂತಹ ಹೋರಾಟಗಳಿಗಿಳಿಯುತ್ತಾರೆ. ಅಂತಹದ್ದನ್ನು ಹಿಂಸೆ ಎಂದು ವಿಂಗಡಿಸಿ ದೂರೀಕರಿಸಿದರೆ ಅದು ಪ್ರಜಾತಾಂತ್ರಿಕ ನಿಲವು ಎಂದು ಹೇಳಲು ಆಗುವುದಿಲ್ಲ. ಹಿಂಸೆ ಮತ್ತು ಅಹಿಂಸೆಯನ್ನು ಆಯಾ ಸಮಕಾಲೀನ ವ್ಯವಸ್ಥೆಗಳು ಮತ್ತು ಅದರ ಪ್ರತಿಪಾದಕರು ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ವಹಿಸುತ್ತಾ ಬಂದಿದ್ದಾರೆ. ಆಳುವ ವರ್ಗಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಎಲ್ಲವನ್ನೂ ಹೊಂದಿಸಿಕೊಂಡು ರೂಪಿಸಿಕೊಳ್ಳುವುದು ಸಾಮಾನ್ಯವಾಗಿರುತ್ತದೆ.

ನಮ್ಮ ದೃಷ್ಟಿಯಿಂದ ಬಹುಸಂಖ್ಯಾತ ಶೋಷಿತ ಸಮುದಾಯವೆಂದರೆ ಕಾರ್ಮಿಕರು, ರೈತ-ಕೂಲಿಗಳು, ಬಡರೈತರು, ಮಧ್ಯಮ ರೈತರು, ಶ್ರೀಮಂತ ರೈತರು, ಸಣ್ಣಪುಟ್ಟ ವ್ಯಾಪಾರಸ್ಥರು, ಪುಟ್ಟ ಬಂಡವಾಳಶಾಹಿಗಳು, ರಾಷ್ಟ್ರೀಯ ಬಂಡವಾಳ ಶಾಹಿಗಳು, ಜನಪರವಾಗಿರುವ ಬುದ್ಧಿ ಜೀವಿಗಳು, ಇನ್ನಿತರ ಜನಪರ ಶಕ್ತಿಗಳು ಎಂದು ಅರ್ಥ. ಭಾರತದ ಸಾಮಾಜಿಕ ಪರಿಸ್ಥಿತಿಯಲ್ಲಿ ಊಳಿಗಮಾನ್ಯ ಶಕ್ತಿಗಳು, ದಲ್ಲಾಳಿ ಅಧಿಕಾರಶಾಹಿ ಬಂಡವಾಳಿಗರು ಹಾಗೂ ಇವರಿಂದ ಸೇವೆ ಮಾಡಿಸಿಕೊಳ್ಳುತ್ತಿರುವ ಸಾಮ್ರಾಜ್ಯಶಾಹಿ ಶಕ್ತಿಗಳು ಇವರ ಪರವಾಗಿರುವ ಇತರರೆಲ್ಲರೂ ಜನರ ಶತೃಗಳೆಂದು ನಾವು ನೋಡುತ್ತಿದ್ದೇವೆ.

ಈಗ ಹಿಂಸೆಯ ಬಗ್ಗೆ ನೋಡುವುದಾದರೆ ಶೋಷಿತ ಜನಸಮುದಾಯದ ಮೇಲೆ, ಈ ಮೇಲೆ ಹೇಳಿದ ಶತೃಗಳಿಂದ ಪ್ರತಿಕ್ಷಣ, ಪ್ರತಿನಿತ್ಯ ಹಲವಾರು ರೂಪಗಳಲ್ಲಿ ವಿವರಿಸಲಸಾಧ್ಯವಾದ ಹಿಂಸೆ ಆಕ್ರಮಗಳು ನಡೆಯುತ್ತಿವೆ. ನಮ್ಮ ಪ್ರಕಾರ ಬಹುಸಂಖ್ಯಾತ ಜನರ ಮೇಲೆ ಅಲ್ಪ ಸಂಖ್ಯಾತ ಆಳುವ ವರ್ಗಗಳು ನಡೆಸುತ್ತಿರುವುದು ಹಿಂಸೆ, ಅದು ಕಗ್ಗೊಲೆ, ಮಾರಣಹೋಮ, ಬಡತನ, ನಿರುದ್ಯೋಗ, ಭೂಹೀನತೆ, ಅವಕಾಶ ವಂಚನೆ, ಮೋಸ, ಭ್ರಷ್ಟಾಚಾರ, ಸುಳ್ಳುಕೇಸು, ಆಕ್ರಮ ಬಂಧನ, ಚಿತ್ರಹಿಂಸೆ, ಸುಳ್ಳು ಎನ್‌ಕೌಂಟರ್, ಅಸ್ಪೃಶ್ಯತೆ, ಮಹಿಳಾ ಅಸಮಾನತೆ, ನಿರ್ಬಂಧ ಹೇರಿಕೆ, ಮಾನವ ಹಕ್ಕುಗಳ ಹರಣ, ರಾಜಕೀಯ ಅಧಿಕಾರದಿಂದ ವಂಚನೆ ಹೀಗೆ ಸುದೀರ್ಘ ಪಟ್ಟಿಯನ್ನು ಮಾಡಬಹುದು. ಶೋಷಿತ ಜನಸಮುದಾಯ ತಮ್ಮ ಮೇಲಾಗುತ್ತಿರುವ ಈ ರೀತಿಯ ಕ್ರೂರಾತಿಕ್ರೂರ ಹಿಂಸೆಗಳ ವಿರುದ್ದ ಧ್ವನಿ ಎತ್ತಿ ಬೇಸತ್ತು ತಮ್ಮ ರಕ್ಷಣೆ ಹಾಗೂ ಎಲ್ಲಾ ರೀತಿಯ ಶೋಷಣೆಗಳಿಂದ ವಿಮೋಚನೆ ಪಡೆಯಲು, ನಿರ್ಣಾಯಕವಾದ ಹೋರಾಟಗಳಿಗೆ ರಾಜಿ ಮಾಡಿಕೊಳ್ಳದೆ ಇಳಿಯುವುದನ್ನು ಹಿಂಸೆ ಎಂದು ಮೌಲ್ಯೀಕರಿಸಿ ಅದು ತಪ್ಪು ಎಂದರೆ ಬಹುಸಂಖ್ಯಾತ ಶೋಷಿತ ಜನ ಸಮುದಾಯದ ಪ್ರಜಾತಂತ್ರ ಎನಿಸುವುದಿಲ್ಲ. ಅಂತಿಮವಾಗಿ ಅದು ಆಳುವ ಶೋಷಕ ವ್ಯವಸ್ಥೆಗೆ ಸೇವೆ ಸಲ್ಲಿಸಿದಂತಾಗುತ್ತದೆ. ಹಾಗಾಗಿ ಪ್ರಜಾತಂತ್ರ ವ್ಯವಸ್ಥೆಯೊಂದರ ಮೌಲ್ಯಮಾಪನ ಅದು ಬಹು ಸಂಖ್ಯಾತ ಜನಸಮುದಾಯ ಅನುಭವಿಸುತ್ತಿದೆಯೇ ಇಲ್ಲವೇ ಎಂಬುದನ್ನು ಆಧರಿಸಿ ಇರಬೇಕೇ ಹೊರತು ಅಲ್ಪ ಸಂಖ್ಯಾತ ಶೋಷಕ ಆಳುವ ವರ್ಗಗಳನ್ನು ಆಧರಿಸಿ ಇರಬಾರದು. ಪ್ರಜಾತಂತ್ರ ಎಂದಾಗ ಕೇವಲ ಓಟು ಹಾಕುವುದು, ಚಿಲ್ಲರೆ ಸುಧಾರಣೆಗಳಿಗೆ ಸೀಮಿತವಾದರೆ ಅದು ನೈಜವಾಗಲು ಸಾಧ್ಯವಿಲ್ಲ ಅದು ಜನತೆಯ ಪ್ರಜಾತಾಂತ್ರಿಕ ಬದಲಾವಣೆ ಎನಿಸುವುದಿಲ್ಲ.

ನೀವು ಪತ್ರದಲ್ಲಿ ಗಾಂಧಿಯನ್ನು ಉಲ್ಲೇಖಿಸಿ ಬರೆದಿದ್ದೀರಿ. ಆ ಮೂಲಕ ನೀವು ಪ್ರತಿಪಾದಿಸುತ್ತಿರುವ ವಿಚಾರಗಳನ್ನು ಹೇಳಿದ್ದೀರಿ. ಭಗತ್‌ಸಿಂಗ್‌ರನ್ನು ಉಲ್ಲೇಖಸಿದ್ದೀರಿ. ಚರಿತ್ರೆಯ ಪುಟಗಳನ್ನು ನಾವು ಹೆಕ್ಕಿ ನೋಡುವುದಾದರೆ ಭಾರತದ ಬ್ರಿಟಿಷ್ ವಸಾಹತುಶಾಹಿ ವಿರೋಧಿ ಚಳುವಳಿಯಲ್ಲಿ ಗಾಂಧಿ ವಹಿಸಿದ ಪಾತ್ರ ಏನಾಗಿತ್ತು ಎಂಬುದನ್ನು ಗ್ರಹಿಸಬಹುದು. ಶೋಷಕ ಬ್ರಿಟಿಷ್ ವಸಾಹತುಶಾಹಿಗಳೊಂದಿಗೆ ಸಾಮರಸ್ಯವೇ ಗಾಂಧಿ ಹಾಗೂ ಕಾಂಗ್ರೆಸ್ಸಿನ ಪ್ರಧಾನ ಗುರಿಯಾಗಿತ್ತು. ಇದನ್ನು ಕಾ|| ಭಗತ್‌ಸಿಂಗ್ ಮತ್ತಿತರ ಸಂಗಾತಿ ಪ್ರಶ್ನಿಸಿ ಅದು ಹೇಗೆ ದೇಶದ ಸಂಪೂರ್ಣ ಸ್ವಾತಂತ್ರಕ್ಕೆ ಮಾರಕವೆಂಬುದನ್ನು ಬಯಲಿಗೆಳೆದಿದ್ದೆರು. ಇದಕ್ಕೆ ಒಂದು ಉದಾಹರಣೆಯನ್ನು ಹೇಳುವುದಾದರೆ 1920 ರ ಅಸಹಕಾರ ಚಳುವಳಿಯ ಕರೆಗೆ ದೇಶಾದ್ಯಂತ ಮಿಲಿಯಾಂತರ ರೈತರು ಅಭೂತಪೂರ್ವಕವಾಗಿ ಪ್ರತಿಕ್ರಿಯಿಸಿದ್ದರು. 1957 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ಮೊಟ್ಟ ಮೊದಲ ಬಾರಿಗೆ ರೈತಾಪಿಗಳು ಆ ಪ್ರಮಾಣದಲ್ಲಿ ಚಳುವಳಿಗೆ ಧುಮುಕಿದ್ದ ಸಂದರ್ಭವಾಗಿತ್ತು ಅದು. ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಚಳುವಳಿಯ ಧಾರೆಗೆ ಸೇರಿಕೊಂಡಿದ್ದರು. ಹಿಂದೂ ಮುಸ್ಲಿಂ ಐಕ್ಯತೆಯು ದೊಡ್ಡ ಮಟ್ಟದಲ್ಲಿ ಪ್ರಕಟವಾಗಿತ್ತು. ದೇಶದಾದ್ಯಂತ ವಸಾಹತಶಾಹಿ ವಿರೋಧಿ ಅಲೆ ಎದ್ದಿತ್ತು. ಸಂಪೂರ್ಣ ಸ್ವಾತಂತ್ರ್ಯದ ಗುರಿಯೊಂದಿಗೆ ಜನರು ಪ್ರವಾಹದೋಪಾದಿಯಲ್ಲಿ ಹೋರಾಟಗಳಲ್ಲಿ ತೊಡಗಿಕೊಂಡರು. ಜನರು ಕಾಂಗ್ರೇಸ್ ನಾಯಕತ್ವ ವಿಧಿಸಿದ್ದ ನಿಂಬಂಧನೆಗಳನ್ನು ಉಲ್ಲಂಘಿಸಿ ಬ್ರಿಟಿಷ್ ವಸಾಹತುಶಾಹಿಗಳನ್ನು ಸಂಪೂರ್ಣವಾಗಿ ಈ ಚೌರಿಚೌರದ ಜನರು ಬ್ರಿಟಿಷ್ ವಸಾಹತುಶಾಹಿಗಳನ್ನು ಹಾಗೂ ಊಳಿಗಮಾನ್ಯ ಭೂಮಾಲಕತ್ವವನ್ನು ವಿರೋಧಿಸಿ ಹೋರಾಡುತ್ತಿದ್ದರು. ಆಗ ನಡೆಯಿತು ಬ್ರಿಟಿಷ್ ಪೊಲೀಸರಿಂದ ಭಾರತದ ಜನರ ಮೇಲೆ ಮಾರಣಾಂತಿಕ ಗುಂಡಿನ ದಾಳಿ. ಹಲವಾರು ಜನರ ಪ್ರಾಣ ತೆಗೆದರು. ವಸಾಹತಶಾಹಿಗಳ ಕ್ರೌರ್ಯಕ್ಕೆ ರೋಷಗೊಂಡ ಜನರು ಚೌರಿಚಾರಾದಲ್ಲಿ ಪೊಲೀಸ್ ಠಾಣೆಯೊಂದರ ಮೇಲೆ ದಾಳಿ ಮಾಡಿ ಬೆಂಕಿ ಇಟ್ಟಿತು. ಇದರಲ್ಲಿ 22 ಜನ ಪೊಲೀಸರು ಆಹುತಿ ಆದರು. ಈ ಘಟನೆ ಆದ ಒಡನೆಯೇ ಗಾಂಧಿ ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂಡರು. ತಮ್ಮ ಅಹಿಂಸಾ ತತ್ವಕ್ಕೆ ಚ್ಯುತಿ ಆಯಿತು. ಶಾಂತಿಯುತ ಹೋರಾಟಕ್ಕೆ ಭಂಗ ಆಯಿತು. ಎಂದು ಹಲುಬಿದರು. ಅದೇ ವೇಳೆಯಲ್ಲಿ ವಸಾಹುತಶಾಹಿ ಆಡಳಿತ ಚೌರಿಚೌರಾದ ಘಟನೆಯ ನೆಪದಲ್ಲಿ 72 ರೈತರಿಗೆ ವಿಧಿಸಿ ನಂತರ ಅದರಲ್ಲಿ 19 ಜನರನ್ನು ಗಲ್ಲಿಗೇರಿಸಿ ಉಳಿದವರನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಲಾಯಿತು. ಇಷ್ಟೆಲ್ಲಾ ಕ್ರೂರ ಹಿಂಸೆ ದಮನ ಬ್ರಿಟಿಷರಿಂದ ಆದಾಗಲೂ ಗಾಂಧಿ ಹಾಗೂ ಕಾಂಗ್ರೇಸ ಸತ್ಯಾಗ್ರಹ ಮಾಡುವುದಾಗಲಿ, ಉಪವಾಸ ಕೂಡುವುದಾಗಲಿ ಮಾಡಲಿಲ್ಲ. ಇದನ್ನು ಗಾಂಧಿ ಅಹಿಂಸೆಯ ಹಿಂಸಾತ್ಮಕ ಹೂರಣ ಎನ್ನದೇ ಇರಲು ಸಾಧ್ಯವೆ? ಇದನ್ನು ಮತ್ತು ವಿಸ್ತರಿಸಿ ಹೇಳಬೇಕೆಂದರೆ ಕಾಂಗ್ರೇಸ್ ಕಾರ್ಯಕಾರಿ ಸಮಿತಿ 1922 ಫೆಬ್ರವರಿ 12 ರ ಅಸಹಕಾರ ಚಳುವಳಿಯನ್ನು ಔಪಚಾರಿಕವಾಗಿ ಹಿಂತೆಗೆದುಕೊಳ್ಳುವ ನಿರ್ಣಯ ಅಂಗೀಕರಿಸಿತು. ಆಗ ಉಲ್ಲೇಖಿಸಲ್ಪಟ್ಟದ್ದನ್ನು ನೋಡಿ. ನಿರ್ಣಯದ ಮೊದಲನೇ ಅಂಶ ಬ್ರಿಟಿಷ್ ವಸಾಹತುಶಾಹಿ ಪೊಲೀಸರನ್ನು ಚೌರಿಚೌರಾದಲ್ಲಿ ಕ್ರೂರವಾಗಿ ಕೊಲೆ ಮಾಡಿರುವ ಹಾಗೂ ಠಾಣೆಗೆ ಬೆಂಕಿ ಇಕ್ಕಿರುವ ಗುಂಪಿನ ಕೃತ್ಯವನ್ನು ಅಮಾನವೀಯ ಎಂದು ಹೇಳಿ ಖಂಡಿಸಿತು. ನಂತರ ಮುಂದುವರೆದು ಪ್ರತಿಯೊಂದು ಸಾಮಾಜಿಕ ಅಸಹಕಾರ ಚಳುವಳಿ ಸಂದರ್ಭದಲ್ಲೂ ಹಿಂಸೆ ಭುಗಿಲೇಳುತ್ತಿದೆ. ಅದು ದೇಶ ಅಹಿಂಸೆಗೆ ಪಕ್ವವಾಗಿಲ್ಲ ಎಂಬುದನ್ನು ತೋರಿಸುತ್ತದೆ. ಹಾಗಾಗಿ ಸಮೂಹ ಅಸಹಕಾರ ಚಳುವಳಿಯನ್ನು ರದ್ದುಗೊಳಿಸುವುದು ಮತ್ತು ಪ್ರಾದೇಶಿಕ ಕಾಂಗ್ರೇಸ್ ಸಮಿತಿಗಳಿಗೆ ನಿರ್ದೇಶನ ನೀಡಿ ಭೂಕಂದಾಯ, ಇನ್ನಿತರ ತೆರಿಗೆಗಳನ್ನು ಸರ್ಕಾರಕ್ಕೆ ತಪ್ಪದೇ ನೀಡುವಂತೆ ಕೃಷಿಕರಿಗೆ ಸಲಹೆ ನೀಡುತ್ತದೆ. ಯಾವುದೇ ರೀತಿ ಆಕ್ರಮಣಕಾರಿ ರೂಪದ ಚಟುವಟಿಕೆಗಳನ್ನು ನಿಲ್ಲಿಸುವುದು. ಭೂಮಾಲೀಕರಿಗೆ ರೈತರು ಕೊಡುವ ತೆರಿಗೆ, ಗೇಣಿ ತಡೆಹಿಡಿಯುವುದು ದೇಶದ ಹಿತಾಸಕ್ತಿಗೆ ಮಾರಕವಾದುದು ಮತ್ತು ಕಾಂಗ್ರೇಸ್ ನಿರ್ಣಾಯಕ್ಕೆ ವಿರೋಧವಾದುದು ಎಂದು ಕಾರ್ಯಕರ್ತರಿಗೆ ಹಾಗೂ ಸಂಘನೆಗಳಿಗೆ ಸಲಹೆ ನೀಡುತ್ತದೆ. ಇದು ಬ್ರಿಟಿಷ್ ವಸಾಹತುಶಾಹಿ ಸರ್ಕಾರದ ಬಗ್ಗೆ ಗಾಂಧಿ ಹಾಗೂ ಕಾಂಗ್ರೆಸ್ಸಿನ ನಿಲುವಾಗಿತ್ತು. ನಂತರ ಮುಂದುವರಿದು ಕಾಂಗ್ರೇಸ್ಸಿನ ಚಳುವಳಿ ಯಾವುದೇ ರೀತಿಯಲ್ಲೂ ಭೂಮಾಲೀಕರ ಕಾನೂನುಬದ್ಧ ಹಕ್ಕುಗಳ ಮೇಲೆ, ಒಂದು ವೇಳೆ ರೈತರು ಸಮಸ್ಯೆ ಅನುಭವಿಸುತ್ತಿದ್ದರೂ ದಾಳಿ ಮಾಡುವ ಉದ್ದೇಶ ಹೊಂದಿಲ್ಲ ಎಂಬ ಭರವಸೆಯನ್ನು ನೀಡುತ್ತಾ ಅಂತಹ ಸಮಸ್ಯೆಗಳಿದ್ದಲ್ಲಿ ಪರಸ್ಪರ (ಅಂದರೆ ಭೂಮಾಲೀಕ ಮತ್ತು ರೈತರು) ಮಾತುಕತೆ ಮತ್ತು ಪರಿಹಾರದ ಮೂಲಕ ಬಗೆಹರಿಸಬೇಕೆಂದು ಕಾಂಗ್ರೇಸ್ ಕಾರ್ಯಕಾರಿ ಸಮಿತಿ ಭಾವಿಸುತ್ತದೆ. ಇದು ಶೋಷಕರೊಂದಿಗೆ ಸಂಘರ್ಷಕಿಳಿಯದೆ ಸಾಮರಸ್ಯವಾಗಿ ಬದುಕಬೇಕೆಂದು ಶೋಷಿತರಿಗೆ ನೀಡುವ ಸಲಹೆಯಂತಿದೆ ಅಲ್ಲದೆ. ಈ ರೀತಿಯ ಮಾಹಿತಿಗಳು ಮುಂಬೈನ ರಿಸರ್ಚ್ ಯೂನಿಟ್ ಫಾರ್ ಪಿಲಿಟಿಕಲ್ ಎಕಾನಮಿಯವರು ಪ್ರಕಟಿಸಿದ ’ದಿ ಗ್ರೇಟ್ ಬಿಟ್ರೇಯಲ್’ ಎಂಬ ಪತ್ರಗಳು ಹಾಗೂ ನಿರ್ಣಯಗಳನ್ನು ಆಧರಿಸಿದ ಪುಸ್ತಕದಲ್ಲಿ ಸಾಕಷ್ಟಿವೆ. ಇದನ್ನು ಬೆಳ್ಳಿಚುಕ್ಕಿ ಬುಕ್ ಟ್ರಸ್ಟ್ ನವರು ’ಮಹಾದ್ರೋಹ’ ಎಂಬ ಹೆಸರಿನಲ್ಲಿ ಕನ್ನಡದಲ್ಲೂ ಪ್ರಕಟಿಸಿದ್ದಾರೆ. 2007 ರಲ್ಲಿ ದೆಹಲಿಯ ಲೆಫ್ಟ್‌ವರ್ಲ್ಡ್‌ನರ ಪಿ.ಎಮ್.ಎಸ್ ಗ್ರಿವಾಲ್ ಬರೆದ ’ಭಗತ್‌ಸಿಂಗ್ ಲಿಬರೇಷನ್ಸ್ ಬ್ಲೇಜಿಂಗ್ ಸ್ಟಾರ್’ ಎಂಬ ಪುಸ್ತಕದಲ್ಲೂ ಲಭ್ಯವಿದೆ. ಇದಲ್ಲದೆ ಆರ್. ಪಿ. ದತ್‌ರ ಮಾನಿಷಾ ಗ್ರಂಥಾಲಯ, ಕೊಲ್ಕತ್ತಾದವರು ಪ್ರಕಟಿಸಿದ ’ಇಂಡಿಯಾ ಟುಡೆ’ ಎಂಬ ಗ್ರಂಥ, ಸುನೀತಿಕುಮಾರ್ ಘೋಷರ ’ಇಂಡಿಯಾ ಆಂಡ್ ದಿ ರಾಜ್’ ಎಂಬ ಎರಡು ಸಂಪುಟದ ಗ್ರಂಥಗಳಲ್ಲಿ ಇಂತಹ ಮಾಹಿತಿಗಳ ಸಂಗ್ರಹಗಳಿವೆ. ಆದರೆ ಇವ್ಯಾವವು ನಾವು ಸಾಂಪ್ರದಾಯಿಕವಾಗಿ ಕಲಿಯುವ ಇತಿಹಾಸದ ಭಾಗವಾಗದೆ ಜಾಣತನದಿಂದ ಮರೆಮಾಚುತ್ತಾ ಬರಲಾಗಿದೆ. ಯಾಕೆಂದರೆ ಆಳುವ ವ್ಯವಸ್ಥೆಗೆ ಇಂತಹ ಸತ್ಯ ಸಂಗತಿಗಳು ಮಾರಕವಾಗುತ್ತವೆ ಅದಕ್ಕೆ.

ಕಾ|| ಭಗತ್‌ಸಿಂಗ್‌ರಿಗೆ ಜನರು ತೋರುತ್ತಿದ್ದ ಅಪಾರ ಬೆಂಬಲ ಅಭಿಮಾನಗಳಿಂದಾಗಿ ಗಾಂಧಿ ಅನಿವಾರ್ಯವಾಗಿ ಬ್ರಿಟಿಷ್ ಆಡಳಿತಕ್ಕೆ ಗಲ್ಲು ಶಿಕ್ಷೆಯಿಂದ ಕ್ಷಮಾದಾನ ಮಾಡುವಂತೆ ಕೇಳುವ ಶಾಸ್ತ್ರ ಪೂರೈಸಿದ್ದರಷ್ಟೆ. ಕಾ|| ಭಗತ್ ಸಿಂಗ್, ರಾಜಗುರು ಸುಖದೇವ್‌ರನ್ನು ಗಲ್ಲಿಗೇರಿಸಕೂಡದೆಂದು ದೇಶಾದ್ಯಂತ ಜನರು ಸಮರಶೀಲರಾಗಿ ಪ್ರತಿಭಟನೆಗಳನ್ನು ಮಾಡುತ್ತಿದ್ದರೂ ಕಾಂಗ್ರೇಸ್ ಹಾಗೂ ಗಾಂಧಿ ಯಾವುದೇ ಪ್ರತಿಭಟನೆಗಳನ್ನು ಸಂಘಟಿಸಿರಲಿಲ್ಲ. ಹೋಗಲಿ ಅಂತಹ ದೇಶಪ್ರೇಮಿ ಕ್ರಾಂತಿಕಾರಿಗಳನ್ನು ವಸಾಹತುಶಾಹಿ ಸರ್ಕಾರವೊಂದು ಗಲ್ಲಿಗೇರಿಸಿ ಕೊಲ್ಲುವುದು ಕ್ರೂರವಾದುದು ಹಾಗೂ ಹಿಂಸೆ ಎಂದು ಗಾಂಧಿ ಒಂದೇ ಒಂದು ದಿನ ಕನಿಷ್ಠ ಸತ್ಯಾಗ್ರಹವನ್ನೂ ಮಾಡಿರಲಿಲ್ಲ. ಭಗತ್‌ಸಿಂಗ್‌ರ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯ ಇದ್ದಾಗ್ಯೂ ಕೂಡಾ ಒಬ್ಬ ದೇಶ ಪ್ರೇಮಿ ಎಂದಾದರೂ ಗಾಂಧಿ ಭಾವಿಸಿದ್ದೇ ಆಗಿದ್ದಲ್ಲಿ ಹೀಗಾಗಲು ಸಾಧ್ಯವೇ? ಹಾಗಿರುವಾಗ ಗಾಂಧಿ ಪ್ರತಿಪಾದಿಸುತ್ತಿದ್ದ ’ಅಹಿಂಸೆ’ ಯಾರಿಗೆ ಸೇವೆ ಸಲ್ಲಿಸುತ್ತಾ ಇತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.

ನಾವು ಕೊಲೆಗಳ ಮೂಲಕವೇ ನ್ಯಾಯ ಬಯಸುವ ಇರಾದೆಯವರಲ್ಲ. ಹಿಂಸೆಯ ಮೂಲಕವೇ ಸಾಮಾಜಿಕ ನ್ಯಾಯ ದೊರಕಿಸಿಕೊಳ್ಳುವುದು ನಂತರ ಸಮಾಜ ಬದಲಾವಣೆ ಮಾಡುವುದು ನಮ್ಮ ಬಯಕೆಯಲ್ಲ. ನಾವು ಬಹುಸಂಖ್ಯಾತ ಶೋಷಿತ ಸಮುದಾಯದ ಶಾಂತಿ ನೆಮ್ಮದಿ, ಸಮಪಾಲು ಸಮಬಾಳು ಬಯಸುವವರು. ಅವುಗಳನ್ನು ಸಾಧಿಸಲು ನಾವು ಆ ಶೋಷಿತ ಜನಸಮುದಾಯವನ್ನು ಸಂಘಟಿಸುತ್ತಿದ್ದೇವೆ. ವೈಜ್ಞಾನಿಕ ಸಾಮಾಜಿಕ ಚಿಂತನೆಯಾದ ಮಾರ್ಕ್ಸ್‌ವಾದ, ಲೆನಿನ್‌ವಾದ-ಮಾವೋವಾದವನ್ನು ಸಮಾಕಾಲೀನ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾಗಿ ಅಳವಡಿಸುತ್ತಾ ಶೋಷಿತ ಜನಸಮುದಾಯದ ಮಧ್ಯೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಹಾಗೆ ಕಾರ್ಯ ನಿರ್ವಹಿಸಲು, ಸಾಮಾಜಿಕ ಬದಲಾವಣೆಗಾಗಿ ಜನರನ್ನು ಸಂಘಟಿಸಲು ಈ ಶೋಷಕ ವ್ಯವಸ್ಥೆ ಮತ್ತದರ ಯಂತ್ರಾಂಗಗಳು ಏಜೆಂಟರುಗಳು ಮುಕ್ತವಾಗಿ ಬಿಡದೇ ಇರುವುದರಿಂದಾಗಿ ನಾವು ಭೂಗತರಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ಕಾರ್ಯ ನಿರ್ವಹಣೆಯನ್ನು ಹಾಗೂ ಜನರು ಸಂಘಟಿತಗಾರುವುದನ್ನು ಎಲ್ಲಾ ವಿಧಾನದಿಂದ ತಡೆಯಲು ಪ್ರಯತ್ನಿಸುತ್ತಿದ್ದಾರೆ. ಸುಳ್ಳು ಕೇಸು, ಆಕ್ರಮ ಬಂಧನ, ಚಿತ್ರಹಿಂಸೆ, ಕಗ್ಗೊಲೆ, ಹಕ್ಕುಗಳ ನಿರಾಕರಣೆ ಶೋಷಕ ಮೌಲ್ಯಗಳನ್ನು ಬಿತ್ತನೆ ಮಾಡುವ ಈ ಮೂಲಕ ಶೋಷಿತ ಜನ ಸಮುದಾಯ ತನ್ನ ವಿಮೋಚನೆಯನ್ನು ಮಾಡಿಕೊಳ್ಳದಂತೆ ತಡೆಯುವ ಯತ್ನ ನಡೆಸುತ್ತಿದ್ದಾರೆ. ನಾವು ಶೋಷಿತ ಜನರೊಂದಿಗೆ ನಿರಂತರ ಬೆರೆತಿರುವುದರಿಂದಾಗಿ ನಮ್ಮ ಚಳುವಳಿಯನ್ನು ಗಮನಿಸಿ ಮುಗಿಸಿಬಿಡಲು ಸಾಧ್ಯವಾಗುತ್ತಿಲ್ಲ. ಶೋಷಿತ ಜನಸಮುದಾಯಕ್ಕೆ ಕಂಟಕವಾಗಿರುವ ವರ್ಗಶತೃಗಳನ್ನು ಮಾತ್ರ ಅಂತಿಮ ಹಂತದಲ್ಲಿ ನಿರ್ಮೂಲಿಸುವ ಕಾರ್ಯಕ್ಕೆ ಕೈಹಾಕುತ್ತೇವೆ. ಇನ್ನೂ ತಿದ್ದಿಕೊಳ್ಳಲು ಸಿದ್ಧರಿಲ್ಲದ ಶತೃ ಏಜೆಂಟರನ್ನು ಅಂತಿಮ ಹಂತದಲ್ಲಿ ನಿರ್ಮೂಲಿಸುವ ಅನಿವಾರ್ಯತೆ ಬರುತ್ತದೆ. ಬಹುಸಂಖ್ಯಾತ ಶೋಷಿತ ಜನಸಮುದಾಯಕ್ಕೆ ಮುಳುವಾಗಿರುವ ಶತೃಗಳು ಹಾಗೂ ಅವರ ಏಜೆಂಟರಿಗೆ ಅಹಿಂಸಾ ವಿಧಾನ ಅನುಸರಿಸಿದರೆ ಅದು ಬಹುಸಂಖ್ಯಾತರ ಮೇಲೆಸಗುವ ಘೋರ ಹಿಂಸೆಯಾಗುತ್ತದೆಯೇ ವಿನಃ ಬೇರೇನಲ್ಲ. ಅದು ಶೋಷಕ ವ್ಯವಸ್ಥೆ ಮತ್ತದರ ಆಳುವ ವರ್ಗಗಳಿಗೆ ಪೂರಕವಾಗುತ್ತದೆ. ನಾವು ನಡೆಸುತ್ತಿರುವ ಕ್ರಾಂತಿಕಾರಿ ಹೋರಾಟ ಜನಪರ ಹಾಗೂ ಬಹುಸಂಖ್ಯಾತ ಶೋಷಿತ ಜನ ಸಮುದಾಯದ ಪ್ರಜಾ ತಾಂತ್ರಿಕ ಆಶೋತ್ತರಗಳನ್ನು ಈಡೇರಿಸಲು ನಡೆಯುತ್ತಿರುವ ಹೋರಾಟ ಎಂದು ಒತ್ತಿ ಹೇಳುತ್ತಿದ್ದೇವೆ. ಹಾಗೆ ಹೇಳಿದಾಗ ಇತರ ಜನಪರ ಹೋರಾಟಗಳನ್ನು ನಾವು ಕಡೆಗಣಿಸುತ್ತಿಲ್ಲ. ನಾವು ಅಂತಹ ಹೋರಾಟಗಳನ್ನು ಸಂಘಟಿಸುತ್ತಿದ್ದೇವೆ ಮತ್ತು ಅದರಲ್ಲಿ ಪಾಲ್ಗೋಳ್ಳುತ್ತಿದ್ದೇವೆ. ಶೋಷಿತ ಜನ ಸಮುದಾಯ ನಡೆಸುವ ಎಲ್ಲಾ ಜನಪರ ಹೋರಾಟಗಳನ್ನು ನಾವು ಎತ್ತಿ ಹಿಡಿಯುತ್ತೇವೆ. ಅವೆಲ್ಲವೂ ಭಾರತದ ನವಪ್ರಜಾತಾಂತ್ರಿಕ ಕ್ರಾಂತಿಯ ಭಾಗ ಹಾಗೂ ಪೂರಕವಾದವುಗಳಾಗಿವೆ ಎಂಬುದೇ ನಮ್ಮ ಅಭಿಪ್ರಾಯ.

ಕರ್ನಾಟಕದಲ್ಲಿ ಶೋಷಿತ ಜನಸಮುದಾಯದ ಬಗ್ಗೆ Concern ಇರುವಂತಹ, ಕೇಳಿಸಿಕೊಳ್ಳುವಂತಹ, ಪ್ರಾಮಾಣಿಕವಾಗಿ ಸ್ಪಂದಿಸುವಂತಹ ತಮ್ಮ ಕೈಲದುದನ್ನು ಮಾಡುವಂತಹ ಮಾನವ ಪ್ರೇಮಿ ಸತ್ಯ ನಿಷ್ಠ ಜನರು ಇದ್ದಾರೆ ಎಂದು ತಾವು ಹೇಳಿರುವ ವಿಚಾರದಲ್ಲಿ ನಮಗೆ ಯಾವುದೇ ಭಿನ್ನಮತವಿಲ್ಲ. ಅಂತಹವರೊಂದಿಗೆ ಸಂವಾದಗಳನ್ನು ನಡೆಸಲು ನಾವು ಸಿದ್ದರಿದ್ದೇವೆ. ಇನ್ನು ಪ್ರಜೆಗಳ ಸರಕಾರ ಎಂದು ನೀವು ಹೇಳಿದ್ದೀರಲ್ಲ ಅವರೊಂದಿಗೆ ಸಂವಾದಿಸುವ ವಿಷಯ ಇದೆಯಲ್ಲ ಅದು ಇನ್ನೂ ನೋಡಬೇಕಾದ ವಿಚಾರ. ಯಾಕೆಂದರೆ ಈ ಸರ್ಕಾರಗಳು ಪ್ರಜೆಗಳದ್ದು ಎಂಬುದರ ಬಗ್ಗೆ ನಮಗೆ ಒಪ್ಪಿಗೆ ಇಲ್ಲ. ಈ ಸರಕಾರಗಳು ದೇಶೀಯ ಶೋಷಕರುಗಳಾಗಿವೆ. ಸಾಮ್ರಾಜ್ಯ ಶಾಹಿಗಳಿಗೆ ಸೇವೆ ಸಲ್ಲಿಸುತ್ತಾ ಅದರ ಸುಲಿಗೆ ಲೂಟಿಗಳಿಗೆ ಜನರನ್ನು ಹಾಗೂ ದೇಶವನ್ನೂ ಆಹುತಿಗಳನ್ನಾಗಿ ಮಾಡುತ್ತಿವೆ. ಅದು ಬೃಹತ್ ಜನ ವಿರೋಧಿ ಯೋಜನೆಗಳಿರಬಹುದು,ಎಸ್.ಇ.ಝಡ್ ಗಳಿರಬಹುದು, ಭೂಯೋಜನೆಗಳಿರಬಹುದು, ಅರಣ್ಯ ಯೋಜನೆಗಳಿರಬಹುದು. ಜನರ ಸಮಸ್ಯೆಗಳನ್ನು ಪರಿಹರಿಸಲು ಯತ್ನ ನಡೆಸುವ ಸರಕಾರದೊಂದಿಗೆ ಸಂವಾದ ನಡೆಸಲು ನಮಗೆ ಅಭ್ಯಂತರವಿಲ್ಲ, ಆದರೆ ಸಂವಾದ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವ ಬದಲಿಗೆ ಜನಹೋರಾಟಗಳ ದಮನಕ್ಕೆ ನಡೆಸುವ ತಯಾರಿಯೇ ಸರಕಾರಗಳ ಹುನ್ನಾರ ಆಗಿರುತ್ತದೆ. ಸಾಮಾನ್ಯವಾಗಿ ಆಳುವ ಸರಕಾರಗಳು ಚಳುವಳಿಗಳನ್ನು ನಾಶಗೊಳಿಸುವುದು, ಚಳುವಳಿಯ ನಾಯಕತ್ವಗಳನ್ನು ಭ್ರಷ್ಠ್ಠಗೊಳಿಸುವುದು. ಅವ್ಯಾವುದಕ್ಕೂ ಬಗ್ಗದಿದ್ದಾಗ ದೈಹಿಕವಾಗಿ ನಿರ್ಮೂಲಿಸುವುದನ್ನು ಮಾಡುತ್ತವೆ. ಆಂಧ್ರ ಸರಕಾರ ನಡೆಸಿದ ಮಾತುಕತೆಯ ನಾಟಕ ತಮಗೆ ತಿಳಿದಿರಬೇಕು. ಸರಕಾರಗಳು ಇಲ್ಲಿಯವರೆಗೆ ಜನರ ಹಕ್ಕೊತ್ತಾಯಗಳಿಗೆ ಸ್ಪಂದಿಸಿ ಬಗೆಹರಿಸಿದ್ದು ಇಲ್ಲ. ಕೆಲವು ಸಣ್ಣಪುಟ್ಟ ಕೆಲಸ ಮಾಡಿ ಒಬ್ಬಿಬ್ಬರಿಗೆ ಏನೋ ಕೊಟ್ಟಂತೆ ಮಾಡಿ ಉಳಿದವರಿಗೆ ಕೈ ಎತ್ತುವುದು ಅವುಗಳ ಪರಿಪಾಠವಾಗಿದೆ.

ಕೈಗಾದಿಂದ ಹಿಡಿದು ಮೂಡಿಗೆರೆಯ ತತ್ಕೊಳ ಇರಬಹುದು. ವರಾಹಿ ಚಕ್ರಾ ಯೋಜನೆಗಳಿರಬಹುದು, ಎಮ್.ಆರ್.ಪಿ.ಎಲ್, ಸೀಬರ್ಡ್ ನೌಕಾನೆಲೆ ಇರಬಹುದು. ಜನರಿಗಿನ್ನೂ ಪರಿಹಾರ ನೀಡಿ ಪುನರ್ವತಿ ಕಲ್ಪಿಸಿಯೇ ಇಲ್ಲ. ಜನರ ವಿರೋಧವನ್ನು ಲೆಕ್ಕಿಸದೆ ಬಲವಂತವಾಗಿ ಪೊಲೀಸ್ ಮೂಲಕ ಜನವಿರೋಧಿ ಯೋಜನೆಗಳನ್ನು ಹೇರುತ್ತಾ ಬರಲಾಗುತ್ತಿದೆ.

’ಸತ್ಯಂ’ ನಂತಹ ದಗಲ್ಬಾಜಿ ಕಂಪನಿಗಳ ಮಾಲೀಕರಿಗೆ ಕೋಟ್ಯಾಂತರ ರೂಗಳಷ್ಟು ಜನರ ತೆರಿಗೆಯ ಹಣವನ್ನು ಅರ್ಪಿಸುವ ಈ ಸರಕಾರಗಳು ಜನರಿಗೆ ಏನು ತಾನೇ ಮಾಡಲು ಸಾಧ್ಯ.

ಹಾಗಾಗಿ ಶೋಷಿತ ಜನಸಮುದಾಯ ತಮ್ಮನ್ನು ಸಂಘಟಿಸಿಕೊಂಡು ವಿಮೋಚನೆಯನ್ನು ಸಾಧಿಸಬೇಕಾಗಿದೆ. ಅದಕ್ಕೆ ಜನಪರವಾಗಿರುವ ಎಲ್ಲರೂ ತಮ್ಮ ಕೈ ಜೋಡಿಸಬೇಕು. ಶೋಷಿತ ಜನಸಮುದಾಯದ ಐಕ್ಯತೆಗೆ ಭಂಗ ತರುವ ಶಕ್ತಿಗಳನ್ನು ಹಾಗೂ ಚಿಂತನೆಗಳನ್ನು ದೂರಗೊಳಿಸುತ್ತಾ ವಿದೇಶಿ ಶತೃಗಳು ಹಾಗೂ ಸ್ವದೇಶಿ ದಲ್ಲಾಳಿ ಶತೃಗಳ ವಿರುದ್ಧ ಒಗ್ಗೂಡಿ ನಮ್ಮ ಯಾವುದೇ ಕ್ರಿಯೆಗಳು ಆಳುವ ಶೋಷಕ ವ್ಯವಸ್ಥೆಗೆ ಸಹಾಯ ಮಾಡುವಂತಿರಬಾರದೆನಿಸುತ್ತದೆ. ಈ ನಿಟ್ಟಿನಲ್ಲಿ ತಾವು ಹಾಗೂ ತಮ್ಮ ಸಮಾನ ಮನಸ್ಕರು ಚಿಂತಿಸಿ ಕಾರ್ಯಶೀಲರಾಗುತ್ತೀರೆಂಬ ನಂಬಿಕೆಯೊಂದಿಗೆ.

ತಮ್ಮ ವಿಶ್ವಾಸಿ
ಚೇತನ್
ಸಿ.ಪಿ.ಐ (ಮಾವೋವಾದಿ)
ಕರ್ನಾಟಕ
17-01-2009


ನಕ್ಸಲರಿಂದ ಬಂದಿರುವ ಈ ಪತ್ರಕ್ಕೆ ಮತ್ತೊಮ್ಮೆ ಉತ್ತರ ಬರೆದು ಈ ಸಂವಾದವನ್ನು ಮುಂದುವರೆಸುವ ಬಯಕೆ ಇದೆ. ಆದರೆ ಅವರ ಈ ಪತ್ರದಲ್ಲಿ ಎರಡು ವಿಷಯಗಳಿವೆ. ಒಂದು ಅವರ (ಹಿಂಸಾತ್ಮಕವಾಗಬಹುದಾದ) ಹೋರಾಟಕ್ಕೆ ಅವರು ಕೊಟ್ಟುಕೊಳ್ಳುವ ಸಮರ್ಥನೆ. ಮತ್ತೊಂದು ಗಾಂಧೀಜಿಯ ಹೋರಾಟದಲ್ಲಿ ಅವರು ಕಾಣುವ ದ್ವಂದ್ವಗಳು ಮತ್ತು ಅಪಾಯ. ಇವೆರಡರಲ್ಲಿ ಯಾವುದಕ್ಕೆ ಉತ್ತರಿಸಬೇಕಾದರೂ ನಾನು ಮತ್ತಷ್ಟು ಅಧ್ಯಯನದ ಜೊತೆಗೆ ಇದಕ್ಕಾಗಿಯೆ ಸ್ವಲ್ಪ ಸಮಯವನ್ನೂ ಮೀಸಲಿಡಬೇಕು. ಬಹುಶಃ ಇನ್ನೊಂದೆರಡು ವಾರದಲ್ಲಿ ಇದಕ್ಕೆ ಮಾರುತ್ತರ ಬರೆಯುತ್ತೇನೆ. ಈ ಸಂವಾದ ಜನರಲ್ಲಿ ಅಸಹನೆ ಮತ್ತು ದ್ವೇಷವನ್ನು ಹೆಚ್ಚಿಸದ ಹಾಗೆ ಒಂದು ಸಜ್ಜನಿಕೆಯ ಮಟ್ಟದಲ್ಲಿ ಇರುತ್ತದೆಂಬ, ಹಾಗೂ ನಾಡಿನ ಇತರ ಸಮಾನಮನಸ್ಕರು ಇದರಲ್ಲಿ ಮುಕ್ತವಾಗಿ ಪಾಲ್ಗೊಳ್ಳುವಂತೆ ಆಗಲಿ ಎಂಬ ಆಶಾಭಾವನೆ ನನ್ನದು. ಈ ಸಂವಾದ ನಮ್ಮೆಲ್ಲರನ್ನೂ ಶಾಂತಿಯತ್ತ, ಸಮಾನತೆಯತ್ತ, ಸತ್ಯದತ್ತ, ಉತ್ತಮ ಪ್ರಜಾಆಡಳಿತದತ್ತ ಒಯ್ಯಲಿ.

Jan 16, 2009

ಮನುಷ್ಯ ಉಳಿಯಬೇಕಾದರೆ ಸಸ್ಯಾಹಾರದತ್ತ ತಿರುಗಬೇಕು- ಭಾಗ. 2 - ಹಸುವಿನ ಹೂಸು...



2008 ರ ಕೊನೆಯ ದಿನ ನಾನು "ಮನುಷ್ಯ ಉಳಿಯಬೇಕಾದರೆ ಸಸ್ಯಾಹಾರದತ್ತ ತಿರುಗಬೇಕು" ಎಂಬ ಬ್ಲಾಗ್ ನೋಟ್ ಮಾಡಿದಾಗ ಈ ಮಾರ್ಕ್ ಬಿಟ್ಟ್‌ಮನ್‌ನ ಹೆಸರನ್ನೇ ಕೇಳಿರಲಿಲ್ಲ. ಬ್ಲಾಗ್‌ನಲ್ಲಿ ಅದನ್ನು ಬರೆದ ನಂತರ ನನ್ನ ಈ ಸಸ್ಯಾಹಾರದ ಬಗೆಗಿನ ಚಿಂತನೆಯನ್ನು ಅವತ್ತು ಗೆಳೆಯ ಪ್ರೊ. ಪೃಥ್ವಿ ಜೊತೆ ಹಂಚಿಕೊಂಡಾಗ ಅವರು ತಕ್ಷಣ ನನಗೆ ಬಿಟ್ಟ್‌ಮನ್‌ನ ವಿಡಿಯೋದ ಲಿಂಕ್ ಕಳುಹಿಸಿದರು. ಎಲ್ಲೋ ಒಂದು ಗಂಟೆ ಇದೆ, ಬಿಡುವಾದಾಗ ನೋಡೋಣ ಎಂದುಕೊಂಡವನು ಅವತ್ತಿನಿಂದ ಇವತ್ತಿನ ತನಕ ಅದನ್ನು ನೋಡಿರಲಿಲ್ಲ. ಈಗ ತಾನೆ ನೋಡಿದೆ (ಕೇವಲ ಇಪ್ಪತ್ತು ನಿಮಿಷಗಳ ವಿಡಿಯೊ). ಹಾಗೆಯೆ ಈ ಬಿಟ್ಟ್‌ಮನ್ ಯಾರೂ ಅಂತಲೂ ವಿಕಿಪೀಡಿಯದಲ್ಲಿ ಓದಿದೆ.

ಮುಖ್ಯವಾದ ವಿಷಯ ಏನೆಂದರೆ, ನಾನು ನನ್ನ ಮೊದಲ ನೋಟ್ಸ್‌ನಲ್ಲಿ ಹೇಳಿದ್ದ ಬಹುತೇಕ ಪಾಯಿಂಟ್‌ಗಳು ಈಗಾಗಲೆ ಬಿಟ್ಟ್‌ಮನ್ ಮತ್ತಿತರರಿಂದ ಹೇಳಲ್ಪಟ್ಟಿವೆ. ಆತನ ವಿಡಿಯೊವನ್ನು ಮುಂಚೆಯೆ ನೋಡಿರುವ ಯಾರಾದರೂ ನನ್ನ ನೋಟ್ಸ್‌ಗಳನ್ನು ನಂತರ ನೋಡಿದರೆ, 'ರವಿ ಅದನ್ನು ನೋಡಿಯೇ ಬರೆದಿದ್ದಾನೆ,' ಎನ್ನುವ ಸಾಧ್ಯತೆಯಿದೆ. ಅದು ಹೇಗೆ ಇರಲಿ, ಒಂದು ಸಮಸ್ಯೆಯ ಬಗ್ಗೆ ಬೇರೆಬೇರೆ ಜನ ಚಿಂತನೆ ಮಾಡಲು ಆರಂಭಿಸಿದಾಗ ಅವರಿಗೆ ದೊರಕುವ ಪರಿಹಾರಗಳಲ್ಲಿ ಬಹಳಷ್ಟು ಸಾಮ್ಯತೆಗಳಿರುತ್ತವೆ ಎನ್ನುವುದನ್ನು ಇದು ನಿರೂಪಿಸುತ್ತದೆ. ನನ್ನಂತೆ ವಾರದ ಸಂತೆಯಿಂದ ಮನೆಗೆ ಬೇಕಾದ ತರಕಾರಿಗಳನ್ನು ತರುತ್ತಿದ್ದ ಅನುಭವ, ರೈತಾಪಿ ಹಿನ್ನೆಲೆ, ಮತ್ತು ಇಲ್ಲಿ ಅಮೆರಿಕದಲ್ಲಿನ ಆಹಾರ ಪದಾರ್ಥಗಳು, ದೇಶವಿದೇಶಗಳಿಂದ ಅಮದಾಗುವ ರೀತಿ, ಅವುಗಳ ಸಾರಿಗೆ, ಜನರ ತಿಂಡಿಬಾಕತನ, ಜಾಗತಿಕ ತಾಪಮಾನ, ಮುಂತಾದವುಗಳನ್ನು ಕುರಿತು ಯೋಚಿಸಿದ್ದ ಹಿನ್ನೆಲೆ ಇರುವ ಯಾರು ಬೇಕಾದರೂ ಬಿಟ್ಟ್‌ಮನ್ ಹೇಳುವಂತಹುದೆ ಅಭಿಪ್ರಾಯಕ್ಕೆ ಬರುವುದರಲ್ಲಿ ಆಶ್ಚರ್ಯವಿಲ್ಲ. ಜನ ಬಹಳ ಹಿಂದೆಯೆ ಇದರ ಬಗ್ಗೆ ಯೋಚಿಸಲು ಆರಂಭಿಸಿದ್ದಾರೆ. ನನಗೆ ಹೊಸತು.

ಈ ವಿಡಿಯೋದಲ್ಲಿ ಆತ ಹೇಳುವ locavore ಬಗ್ಗೆ ಮತ್ತು ಪ್ರಾಣಿಸಾಕಣೆಯನ್ನು ಉದ್ಯಮವನ್ನಾಗಿ ಮಾಡುವ ಅಪಾಯದ ಬಗ್ಗೆ ಗಮನಿಸಿ. ಆತ ತಮಾಷೆಯಾಗಿ "ಹಸುವಿನ ಹೂಸಿನ" ಬಗ್ಗೆಯೂ ಮಾತನಾಡುತ್ತಾನೆ. ಬಹಳ ಗಂಭೀರವಾದ ವಿಷಯ!

ಬಿಟ್ಟ್‌ಮನ್ ಹೇಳಿರುವುದನ್ನು ಕನ್ನಡಕ್ಕೆ ಇಳಿಸಿದರೆ ಒಳ್ಳೆಯದು. ನಾನು ಸಮಯವಾದಾಗ ಮುಂದಿನ ಕಂತುಗಳಲ್ಲಿ ಬುಲ್ಲೆಟ್ ಪಾಯಿಂಟ್ಸ್ ಹಾಕುತ್ತೇನೆ.

ಡಿಸೆಂಬರ್ 31, 2008 ರಂದು ಬರೆದದ್ದು:

ಈಗ ಓದುತ್ತಿರುವ ಗಾಂಧಿಯ ಪುಸ್ತಕದಲ್ಲಿ ಸಸ್ಯಾಹಾರದ ಬಗ್ಗೆ ಗಾಂಧಿ ಮಾಡಿದ ಕೆಲವು ಪ್ರಯೋಗಗಳು ಮತ್ತು ಅವರು ಲಂಡನ್ನಿನಲ್ಲಿ ಓದುತ್ತಿರುವಾಗ ಸಸ್ಯಾಹಾರಿ ರೆಸ್ಟಾರೆಂಟ್‌ಗಳನ್ನು ಹುಡುಕಿಕೊಂಡು ಮೈಲುಗಟ್ಟಲೆ ನಡೆದೇ ಹೋಗುತ್ತಿದ್ದ ಚಿತ್ರಣವಿದೆ. ದೊಡ್ಡವನಾದ ಮೇಲೆ ಚೆನ್ನಾಗಿ ಮಾಂಸ ತಿನ್ನಬೇಕು; ಮಾಂಸ ತಿಂದು ಗಟ್ಟಿಯಾದರಷ್ಟೆ ಬ್ರಿಟಿಷರನ್ನು ದೇಶದಿಂದ ಹೊರಗಟ್ಟಲು ಸಾಧ್ಯ, ಎನ್ನುವ ಕಲ್ಪನೆಯೊಂದು ಗಾಂಧಿಯ ತಲೆ ಹೊಕ್ಕಿತ್ತು (ಹೇಳಬೇಕೆಂದರೆ, ಹೊಕ್ಕಿಸಲ್ಪಟ್ಟಿತ್ತು, ಅವರ ಬಾಲ್ಯ ಸ್ನೇಹಿತನೊಬ್ಬನಿಂದ). ಆದರೆ ತನ್ನ ತಾಯಿಗೆ (ಒತ್ತಾಯಪೂರ್ವಕವಾಗಿ) ಕೊಟ್ಟಿದ್ದ ವಚನದಿಂದಾಗಿ ಲಂಡನ್ನಿನಲ್ಲಿ ಸಸ್ಯಾಹಾರಿಯಾಗಿಯೇ ಕಾಲತಳ್ಳಬೇಕಿದ್ದ ಅಗತ್ಯ ಅಥವ ದರ್ದು ಗಾಂಧಿಗಿತ್ತು. ಆದರೆ ಗಾಂಧಿಯ ಮನಸ್ಸು ಅಲ್ಲಿ ವೈಚಾರಿಕ ಕಾರಣಗಳಿಗಾಗಿ ಬದಲಾಯಿತು. ಅಲ್ಲಿಯ ಬಿಳಿಯ ಸಸ್ಯಾಹಾರಿಗಳ ಜೊತೆ ಸೇರಿ, ಪುಸ್ತಕಗಳನ್ನು ಓದಿ, ಸಸ್ಯಾಹಾರವನ್ನು ಮನಃಪೂರ್ವಕವಾಗಿ ಜೀವನಪರ್ಯಂತ ಸ್ವೀಕರಿಸಿದರು. ಆದರೆ ಆ ವೈಚಾರಿಕ ಕಾರಣಗಳು ಮತ್ತು ಮಾಂಸಾಹಾರ ಮುಂದೆಂದೂ ಸೇವಿಸದಂತೆ ಗಾಂಧಿ ಮನಸ್ಸು ಬದಲಾಯಿಸಲು ಕಾರಣಗಳೇನಾಗಿದ್ದವು ಎನ್ನುವುದು ಮೊಮ್ಮಗನ ಪುಸ್ತಕದಲ್ಲಿ ದಾಖಲಾಗಿಲ್ಲ.

ಈಗ ಒಂದೆರಡು ವರ್ಷದಿಂದ ಗ್ಲೋಬಲ್ ವಾರ್ಮಿಂಗ್ ಮತ್ತು ಹವಾಮಾನ ವೈಪರೀತ್ಯಗಳ ಬಗ್ಗೆ ಓದಿ, ನೋಡಿ, ಕೇಳಿ, ನನಗೆ ನಿಜಕ್ಕೂ ಮನುಷ್ಯ ಅಥವ ಜೀವಸಂಕುಲದ ಉಳಿವಿನ ಬಗ್ಗೆಯೇ ಸಂದೇಹ ಬರುತ್ತಿದೆ. ಮನುಷ್ಯ ಪ್ರಕೃತಿಯನ್ನು ನಡೆಸಿಕೊಳ್ಳುತ್ತಿರುವ ರೀತಿ ಅದು ಮನುಷ್ಯನಿಗೆ ಕರುಣೆ ತೋರಿಸುವ ಯಾವೊಂದು ಅವಕಾಶಗಳನ್ನೂ ಉಳಿಸುತ್ತಿಲ್ಲ. ಇದರ ಬಗ್ಗೆ ಯೋಚಿಸಿದಾಗೆಲ್ಲ ನನಗೆ ಮನುಷ್ಯ ತನ್ನ ಆಹಾರಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು ಮತ್ತು ಮಾಂಸಾಹಾರದ ಮೇಲಿನ ಅವಲಂಬನೆ ಕಮ್ಮಿ ಮಾಡಿಕೊಳ್ಳಬೇಕು ಎನ್ನಿಸುತ್ತದೆ.

ಇದರ ಬಗ್ಗೆ ಒಂದು ಲೇಖನ ಬರೆಯಬೇಕು ಎಂದು ನನಗೆ ಆರೇಳು ತಿಂಗಳಿನಿಂದ ಅನ್ನಿಸುತ್ತಿತ್ತು. ಆಗಲಿಲ್ಲ. ಕನಿಷ್ಠ ಈಗಲಾದರೂ ನನ್ನ ಆಲೋಚನೆಗಳನ್ನು ದಾಖಲಿಸೋಣ, ಆಮೇಲೆ ವಿಸ್ತೃತವಾಗಿ, ಬೇರೆಬೇರೆ ಕೋನಗಳಿಂದ ಅವಲೋಕಿಸಿ ಬರೆಯೋಣ ಎಂದುಕೊಂಡು ಇಲ್ಲಿ ಸದ್ಯಕ್ಕೆ ಕೆಲವನ್ನು ನೋಟ್ ಮಾಡುತ್ತಿದ್ದೇನೆ.

ಬಾಲ್ಯದಲ್ಲಿ ಕೆಲವೊಂದು ಹಬ್ಬಕ್ಕೊ, ಇಲ್ಲಾ ತಿಂಗಳಿಗೊ, ಇಲ್ಲಾ ನೆಂಟರು ಬಂದಾಗಲೊ ಅಥವ ನೆಂಟರ ಮನೆಗೆ ಹೋದಾಗಲೊ ಅಷ್ಟೇ ಮಾಂಸ ತಿನ್ನುವ ಅವಕಾಶ ಸಿಗುತ್ತಿದ್ದದ್ದು. ಆದರೆ ಕಾಲೇಜಿನ ದಿನಗಳಲ್ಲಿ ವಾರಕ್ಕೊಮ್ಮೆಯಾದರೂ ತಿನ್ನುತ್ತಿದೆ. ಅಂತಹುದೇ ದಿನಗಳಲ್ಲಿ ನನ್ನಪ್ಪ ಅಂದ ಮಾತಿನಿಂದಾಗಿ ಆಗಾಗ ಕೋಳಿಸಾರು ತಿನ್ನಬೇಕು ಎನ್ನುವ ಚಪಲವನ್ನು ನನ್ನ ವೀಕ್‌ನೆಸ್‌ಗೆ ಸಮೀಕರಿಸಿಕೊಂಡು ಸುಮಾರು ಎರಡೂವರೆ ವರ್ಷಗಳ ಕಾಲ ಪಕ್ಕಾ ಸಸ್ಯಾಹಾರಿಯಾಗಿ ಕಳೆದಿದ್ದೆ. ಕೇಕ್ ಸಹ ತಿಂದಿರಲಿಲ್ಲ. ಎಂದೂ ಅದರ ಬಗ್ಗೆ ವಿಷಾದವಾಗಲಿಲ್ಲ. ಬದಲಿಗೆ ನನಗೆ ನನ್ನ ಇಚ್ಚಾಶಕ್ತಿಯ ಬಗ್ಗೆ ಹೆಮ್ಮೆ ಆಗುತ್ತಿತ್ತು. ಆದರೆ ಮತ್ತೊಂದು ಸಂದರ್ಭದಲ್ಲಿ ಆ ಚಪಲ ಇನ್ನು ವೀಕ್‌ನೆಸ್ ಆಗಿ ಉಳಿದಿಲ್ಲ ಅನ್ನಿಸಿದ ಮೇಲೆ, ಹಾಗು ನಾನೆ ದುಡಿದು ತಿನ್ನಲಾರಂಭಿಸಿದ ಮೇಲೆ ಮತ್ತೆ ಮಾಂಸಾಹಾರಿಯಾದೆ. ವಿಸ್ಕಾನ್ಸಿನ್‌ನಲ್ಲಿ ಇದ್ದ ಆರಂಭದ ಸಂದರ್ಭದಲ್ಲಿ ಕಾರಿಲ್ಲದ್ದರಿಂದ ಮತ್ತು ಗುಜರಾತಿಯೊಬ್ಬರ ಊರ ಹೊರಗಿನ ಮೋಟೆಲ್ ಒಂದರಲ್ಲಿ ಇದ್ದ ಕಾರಣದಿಂದಾಗಿ ಸುಮಾರು ಮೂರು ತಿಂಗಳ ಕಾಲ ಪಕ್ಕದ ಪೆಟ್ರೋಲ್ ಬಂಕಿನ ಡೆಲಿಯಲ್ಲಿ ಕೇವಲ ಕರಿದ ಚಿಕನ್ ಮತ್ತು ಇತರ ಮಾಂಸವನ್ನೆ ತಿಂದು ಕಾಲ ಹಾಕಿದ್ದೆ. ಈಗ ಮತ್ತೆ ನಾಲಿಗೆ ರುಚಿ ಬೇಡುತ್ತಿದೆ.

ಇನ್ನು ಊರಿನಲ್ಲಿ ಮಾಂಸ ತಿನ್ನಲಾರದೆ ಇರಲು ಕೆಲವು ಆಪ್ತ ಕಾರಣಗಳೂ ಇವೆ. ನಾನು ಪಕ್ಕಾ ಸಸ್ಯಾಹಾರಿಯಾದರೆ ಕೆಲವೊಂದು ಪ್ರೀತಿಯ ನೆಂಟರ ಮತ್ತು ಸ್ನೇಹಿತರ ಜೊತೆ ಕುಳಿತು ಊಟವನ್ನು ಎಂಜಾಯ್ ಮಾಡುವ ಅವಕಾಶವನ್ನೆ ಕಳೆದುಕೊಳ್ಳುತ್ತೇನೆ. ಕೆಲವೊಮ್ಮೆ ನನ್ನವರ ಪರಂಪರೆಯ ಮುಂದುವರಿಕೆಗಾದರೂ ಮಾಂಸಾಹಾರಿಯಾಗಿ ಮುಂದುವರೆಯಬೇಕು ಎನ್ನಿಸುತ್ತದೆ.

ಆದರೆ, ಮಾಂಸಾಹಾರಕ್ಕಾಗಿ ಮನುಷ್ಯ ಉಪಯೋಗಿಸುತ್ತಿರುವ ಶಕ್ತಿಮೂಲಗಳ ಮತ್ತು ಸಂಪನ್ಮೂಲಗಳ ಬಗ್ಗೆ ಯೋಚಿಸುತ್ತಿರುವ ಇತ್ತೀಚಿನ ದಿನಗಳಲ್ಲಿ ನಾನು ನನ್ನ ಕಡೆಯಿಂದ ನನ್ನ ಈಗಿನ ಆಹಾರ ಪದ್ದತಿಯನ್ನೆ ಬದಲಾಯಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎನ್ನಿಸುತ್ತದೆ. ಸುಮ್ಮನೆ ಕೆಲವೊಂದು ಪಾಯಿಂಟ್‌ಗಳನ್ನು ಇಲ್ಲಿ ಹೆಸರಿಸಿ ಇವತ್ತಿಗೆ ಇದನ್ನು ಮುಗಿಸುತ್ತೇನೆ. ಆದಾಗಲೆಲ್ಲ ಈ ಬ್ಲಾಗ್ ಪೋಸ್ಟನ್ನು ಅಪ್‌ಡೇಟ್ ಮಾಡಿಕೊಂಡರಾಯಿತು.
  • ಅದು ಇರುವ ಮನೆಗಳಲ್ಲಿ ೨೪ ಗಂಟೆಯೂ ವಿದ್ಯುತ್ ಬಳಸುವ ಉಪಕರಣ ಅಂದರೆ ರೆಫ್ರಿಜರೇಟರ್. ಅದರಲ್ಲಿ ಬಳಸುವ ರಾಸಾಯನಿಕಗಳಿಂದ ಪರಿಸರಕ್ಕೂ ಹಾನಿ. ಹಾಗಾಗಿ ಮನೆಗಳಲ್ಲಿ ರೆಫ್ರಿಜರೇಟರ್ ಇಟ್ಟುಕೊಳ್ಳುವುದನ್ನು discourage ಮಾಡಬೇಕು.
  • ಮನುಷ್ಯ ಆದಷ್ಟು ತನ್ನ ಸುತ್ತಮುತ್ತಲ ಪರಿಸರದಲ್ಲಿ ಬೆಳೆದದ್ದನ್ನೆ ತಿನ್ನಬೇಕು - ಸಸ್ಯಾಹಾರವಾಗಲಿ, ಮಾಂಸಾಹಾರವಾಗಲಿ.
  • ಆದಷ್ಟು ತಾಜಾ ತರಕಾರಿಗಳನ್ನು ಮತ್ತು ದೀರ್ಘಕಾಲ ರೂಮ್ ವಾತಾಂಶದಲ್ಲಿ ಶೇಖರಿಸಬಹುದಾದ ಧವಸ ಧಾನ್ಯಗಳನ್ನೆ ತಿನ್ನಬೇಕು
  • ಆಹಾರ ಪದಾರ್ಥಗಳ ರಫ್ತನ್ನು ನಿಷೇಧಿಸಬೇಕು. ಒಂದು ಸುತ್ತಳತೆಯ ಮಟ್ಟದಲ್ಲಿಯೇ ಧವಸಧಾನ್ಯಗಳ ವ್ಯಾಪಾರವಾಗಬೇಕು. ಎಲ್ಲಿ ಪ್ರತಿಕೂಲ ಹವಾಮಾನಗಳಿಂದಾಗಿ ಬೆಳೆ ಬೆಳೆಯಲು ಸಾಧ್ಯವಿಲ್ಲವೊ ಅಲ್ಲಿಗೆ ಮಾತ್ರ ರಫ್ತಿನ ಅವಕಾಶ ಇರಬೇಕು. ಬೇರೆ ಕಡೆಗಳಿಂದ ಬರುವ ಆಹಾರ ಸಾಮಗ್ರಿಗಳಿಗೆ ಜಾಸ್ತಿಯೆ ಎನ್ನಿಸುವಷ್ಟು ತೆರಿಗೆ ಹಾಕಬೇಕು. ಇದು ಆಹಾರ ಪದಾರ್ಥಗಳ ಸಾರಿಗೆ ಮತ್ತು ಅದರಿಂದ ಖರ್ಚಾಗುವ ತೈಲ ಮತ್ತು ಎಮಿಷನ್ ಅನ್ನು ತಡೆಯುತ್ತದಷ್ಟೆ ಅಲ್ಲದೆ ಎಲ್ಲಾ ದೇಶಗಳೂ ಆಹಾರದ ವಿಚಾರದಲ್ಲಿ ಸ್ವಾವಲಂಬಿಯಾಗುವಂತೆ ಮಾಡುತ್ತವೆ. ರೈತನಿಗೂ ತನ್ನ ಬೆಳೆಗೆ ಎಷ್ಟು ಮಾರುಕಟ್ಟೆ ಇರುತ್ತದೆ ಎನ್ನುವ ಒಂದು ಪಕ್ಕಾ ತಿಳಿವೂ ಆಗ ಇರುತ್ತದೆ.
  • ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವ ಜನರು ಅಲ್ಲಿಯ ಸ್ಥಳೀಯ ಆಹಾರವನ್ನು ತೆಗೆದುಕೊಳ್ಳುವ ಮನೋಭಾವ ಮತ್ತು ಅದೇ ನೈತಿಕವಾದದ್ದು ಎನ್ನುವ ನಂಬಿಕೆ ಬೆಳೆಸಬೇಕು.
  • ಮಾಂಸಾಹಾರಕ್ಕಾಗಿ ಉದ್ದಿಮೆಯ ಮಟ್ಟದಲ್ಲಿ ಪ್ರಾಣಿಗಳನ್ನು ಸಾಕುವುದು ನಿಲ್ಲಬೇಕು.
  • ಮಾಂಸವನ್ನು ತಾಜಾ ಆಗಿಯೆ ಶೇಖರಿಸಿಡಲು ರೇಫ್ರಿಜರೇಟರ್‌ನ ಅವಶ್ಯಕತೆ ಇರುವುದರಿಂದ ಅಂತಹ ಆಹಾರಸೇವನೆಯನ್ನು ತ್ಯಜಿಸಬೇಕು, ಇಲ್ಲವೆ ವಿಶೇಷ ಸಂದರ್ಭಕ್ಕೆ ಮಾತ್ರ ಇಟ್ಟುಕೊಳ್ಳಬೇಕು. ಆಗಾಲೂ ಅಂಗಡಿಗೆ ಹೋಗಿ ಅಂದು ಕಡಿದ ಮಾಂಸವನ್ನೆ ತರಬೇಕು.
  • ಸಮುದ್ರದಲ್ಲಿ ಮಾಡಿದ ಮೀನುಗಾರಿಕೆಯೂ ಕರಾವಳಿಯಲ್ಲಿಯೇ ಮಾರುವಂತಿರಬೇಕು. ಅದರ ರಪ್ತನ್ನೂ, ಐಸ್‌ನಲ್ಲಿ ಹಾಕಿ ಒಳಊರುಗಳಿಗೆ ಸಾಗಿಸುವುದನ್ನೂ ನಿಲ್ಲಿಸಬೇಕು. ಇವೆಲ್ಲವನ್ನೂ ಒಂದು ಉದ್ದಿಮೆಯಾಗಿ ಪ್ರೋತ್ಸಾಹಿಸಬಾರದು.
  • ...
  • ...(ಬೆಳೆಯುತ್ತದೆ)


ಗಾಂಧಿ ಯಾಕೆ ಸಸ್ಯಾಹಾರದ ಪರ ಇದ್ದರು ಎನ್ನುವುದಾಗಲಿ, ಅಥವ ಮಾಂಸಾಹಾರಿಗಳು ಹಾಗೆಹೀಗೆ ಎನ್ನುವ ವಾದಗಳಾಗಲಿ ನನಗೆ ಅನಗತ್ಯ. ಆದರೆ ಈ ಪರಿ ಜನಸಂಖ್ಯೆ ಇರುವ ಇವತ್ತಿನ ಸಂದರ್ಭಕ್ಕೆ ಪ್ರತಿಯೊಬ್ಬ ಮನುಷ್ಯನು ತನ್ನ ಜೀವನಪದ್ಧತಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳದಿದ್ದರೆ, ಅವನು ಪ್ರಕೃತಿಗೆ ಮಾಡುತ್ತಿರುವ ಅಪಚಾರ ಇಡೀ ಜೀವಸಂಕುಲಕ್ಕೆ ನೋವಿನ ದಿನಗಳನ್ನು ತರಲಿದೆ ಎಂದು ನನಗೆ ಅನ್ನಿಸುತ್ತಿರುವುದರಿಂದ, ಅದಕ್ಕೆ ನಾನೇನು ಮಾಡಬೇಕು ಎಂದು ಪ್ರಶ್ನೆ ಹಾಕಿಕೊಂಡಿರುವುದರಿಂದ, ಬರಲಿರುವ ದಿನಗಳಲ್ಲಿ ನನ್ನ ಜೀವನಪದ್ಧತಿ ಮತ್ತು ಆಹಾರ ಪದ್ಧತಿಗಳೂ ಬದಲಾಗಲಿವೆ. ಇಲ್ಲದಿದ್ದರೆ, I will be feeling sorry all the time. ನಾನು ಮತ್ತೊಮ್ಮೆ ಸಸ್ಯಾಹಾರಿಯಾಗಬೇಕಿದೆ ಮತ್ತು ಸ್ಥಳೀಯವಾದದ್ದನ್ನೆ ತಿನ್ನುವ ಅಥವ ಬೆಳೆದುಕೊಳ್ಳುವ ಬಗ್ಗೆ ಯೋಚಿಸಬೇಕಿದೆ.

ಇದರ ಜೊತೆಗೆ, ಇದನ್ನು ಯಾಕೆ ಮತ್ತು ಹೇಗೆ ಸಮುದಾಯಕ್ಕೆ ತೆಗೆದುಕೊಂಡು ಹೋಗಬೇಕು ಮತ್ತು ಈಗಾಗಲೆ ತೆಗೆದುಕೊಂಡು ಹೋಗಿರುವವರು ಬಳಸುತ್ತಿರುವ ಮಾರ್ಗಗಳು ಏನು, ಅವುಗಳ ಪರಿಣಾಮ ಏನು ಎನ್ನುವುದು ನನ್ನ ಮುಂದಿನ ದಿನಗಳ ಒಂದು ಪಾಲು ಸಮಯವನ್ನು ತೆಗೆದುಕೊಳ್ಳುತ್ತದೆ.

ಇದನ್ನು ಓದುವ ಓದುಗರು, ತಮ್ಮ ತಿಳುವಳಿಕೆ, ಅಭಿಪ್ರಾಯ, ಪರವಿರೋಧಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ಎಲ್ಲವನ್ನೂ ಓದುತ್ತೇನೆ. ಅಗತ್ಯವಾದಲ್ಲಿ ನನ್ನ ಪ್ರತಿಕ್ರಿಯೆ ಬರೆಯುತ್ತೇನೆ.

Jan 4, 2009

ಕರ್ನಾಟಕದ ನಕ್ಸಲ ನಾಯಕರಿಗೆ ಒಂದು ಪತ್ರ

ಪ್ರಿಯ ಗಂಗಾಧರ್,

"ಆತ್ಮೀಯ ರೈತ-ಕೂಲಿಕಾರ್ಮಿಕರೇ,ಮಹಿಳೆಯರಿಗೆ" ನೀವು ಸಂಬೋಧಿಸಿ ಬರೆದ "ಪೊಲೀಸ್‌ ಮಾಹಿತಿದಾರ, ಕ್ರೂರ ಭೂಮಾಲಿಕ, ಕೋಮುವಾದಿ, ಅತ್ಯಾಚಾರಿ, ಜನ ದ್ರೋಹಿ ಕೇಶವ ಯಡಿಯಾಳನ ನಿರ್ಮೂಲನೆಯನ್ನು ಎತ್ತಿ ಹಿಡಿಯೋಣ ! ಪ್ರಜಾ ಹೋರಾಟವನ್ನು ತೀವ್ರಗೊಳಿಸೋಣ !"
ಎಂಬ ಇಮೇಯ್ಲ್‌ಗೆ ಪ್ರತಿಕ್ರಿಯೆಯಾಗಿ ಇದನ್ನು ಬರೆಯುತ್ತಿದ್ದೇನೆ. ನಾನೂ ಸಹ ರೈತ ಹಿನ್ನೆಲೆಯಿಂದ ಬಂದಿರುವುದು, ಜೊತೆಗೆ ಈಗ ಕಾರ್ಮಿಕನಾಗಿ ನನ್ನ ಊಟ ಸಂಪಾದಿಸಿಕೊಳ್ಳುತ್ತಿರುವುದು, ಮತ್ತು ನನಗೆ ಪ್ರೀತಿ ಮತ್ತು ಸ್ನೇಹವನ್ನು ಕೊಡುತ್ತಿರುವವರಲ್ಲಿ ಮಹಿಳೆಯರೂ (ಮುಗ್ಧ ಹೆಣ್ಣುಮಕ್ಕಳೂ ಮತ್ತು ದುಡಿದೇ ತಿನ್ನುವ ವಯಸ್ಕರು) ಇರುವುದು, ತಮಗೆ ಈ ಪತ್ರ ಬರೆಯಲು ಇರುವ ಮುಖ್ಯಕಾರಣಗಳು. ಅಷ್ಟೇ ಮುಖ್ಯವಾದದ್ದು ಮಾನವ ಸಮಾಜ ಸಮಾನತೆ-ಸರ್ವೋದಯವನ್ನು ಸಾಧಿಸಬೇಕೆಂಬ ನನ್ನ ಆಶಾವಾದ, ಮತ್ತು (ಹೇಡಿತನವಲ್ಲದ) ಅಹಿಂಸಾತ್ಮಕ ಹೋರಾಟದಲ್ಲಿಯ ನನ್ನ ನಂಬಿಕೆಗಳು.

ಕರ್ನಾಟಕದ ಹಲವಾರು ಲೇಖಕರಿಗೆ, ಮಾಧ್ಯಮ ಕಚೇರಿಗಳಿಗೆ ಮತ್ತು ಪತ್ರಕರ್ತರಿಗೆ ನೀವು ಕಳುಹಿಸಿರುವ ಈ ಇಮೇಯ್ಲ್ ಇಂದು ನನಗೂ ಬಂದಿದೆ. ನಿಮ್ಮ ಈ ಪತ್ರ ಬಂದ ಈ ಸಮಯದಲ್ಲಿ ನಾನು ಗಾಂಧೀಜಿಯ ಮೊಮ್ಮಗ ರಾಜ್‍ಮೋಹನ್ ಗಾಂಧಿ ಬರೆದಿರುವ "Gandhi - The Man, His People, and the Empire" ಪುಸ್ತಕ ಓದುತ್ತ ಕುಳಿತಿದ್ದೆ. ಕಾಕತಾಳೀಯವೆಂಬಂತೆ ಈಗ ನಾನು ಓದುತ್ತಿರುವ ಪುಟಗಳು ಗಾಂಧಿ ಭಗತ್‌ಸಿಂಗ್ ಕುರಿತು ಬರೆದ ಪತ್ರಗಳ ಉಲ್ಲೇಖದ್ದಾಗಿತ್ತು. ಅದರ ಓದು ಮುಂದುವರೆಸಿದಾಗ ನಿಮ್ಮ ಪತ್ರವೂ ಹಿನ್ನೆಲೆಯಲ್ಲಿ ಕಾಡಿ, ಈ ಪತ್ರವನ್ನು ಬರೆಯಲೇ ಬೇಕು ಎಂಬ ಒತ್ತಡವಾಗಿ, ಹಾಗೆ ಮಾಡುವುದು ಸಹ ಗಾಂಧೀ ಮಾರ್ಗವೆ ಎಂದು ಆತ್ಮಸಾಕ್ಷಿಗೆ ಅನ್ನಿಸಿದ್ದರಿಂದ ಕೂಡಲೆ ಬರೆಯುತ್ತಿದ್ದೇನೆ.

(1930 ರಲ್ಲಿ) ಆಗತಾನೆ "ಉಪ್ಪಿನ ಸತ್ಯಾಗ್ರಹ"ವನ್ನು ಅಹಿಂಸಾತ್ಮಕವಾಗಿ ಸಂಘಟಿಸಿ, ಹಿಂಸೆ ಉಂಟುಮಾಡುವ ಯಾವೊಂದು ಆಯುಧವನ್ನೂ ಬಳಸದೆ, ಕೇವಲ ಸತ್ಯ ಮತ್ತು ಪ್ರೀತಿ ಎಂಬ ಆಯುಧಗಳನ್ನೆ ಬಳಸಿ, ಗಾಂಧಿ ಮತು ಅವರ ಹಿಂಬಾಲಕರು ಒಂದು ಬಲಿಷ್ಠವಾದ ಸಾಮ್ರಾಜ್ಯವನ್ನು ಮಣಿಸಿದ್ದರು. ಇದೇ ಸಮಯದಲ್ಲಿ ಭಾರತದ ಬ್ರಿಟಿಷ್ ಸರ್ಕಾರ ಭಗತ್‍ಸಿಂಗ್, ಸುಖ್‍ದೇವ್ ಮತ್ತು ರಾಜಗುರುಗಳಿಗೆ ಅವರು ಮಾಡಿದ್ದ ಹಿಂಸಾತ್ಮಕ ಘಟನೆಗಳಿಗೆ ಪ್ರತಿಯಾಗಿ ಗಲ್ಲನ್ನು ವಿಧಿಸಿತ್ತು. ಗಾಂಧಿ-ಇರ್ವಿನ್ ಒಪ್ಪಂದದ ಸಮಯದಲ್ಲಿ ಗಾಂಧಿ ಈ ಕ್ರಾಂತಿಕಾರಿಗಳ ಕೃತ್ಯ ಮತ್ತು ವಿಧಾನಗಳಿಗೆ ತಮ್ಮ ಸಮ್ಮತಿ ಇಲ್ಲದಿದ್ದರೂ ಅವರಿಗೆ ಬ್ರಿಟಿಷರಿಂದ ಕ್ಷಮಾದಾನವನ್ನೂ ಕೇಳಿದ್ದರು. ಆದರೆ ಕ್ರಾಂತಿಕಾರಿಗಳಿಗೆ "ಪಾಠ ಕಲಿಸಬೇಕೆಂದು" ತೀರ್ಮಾನಿಸಿದ್ದ ಬ್ರಿಟಿಷರು ಗಾಂಧಿಯ ಮತ್ತು ದೇಶದ ಬಹುಪಾಲು ಯುವಜನತೆಯ ಆಗ್ರಹವನ್ನು ಗಣನೆಗೆ ತೆಗೆದುಕೊಳ್ಳದೆ ಭಗತ್ ಸಿಂಗ್ ಮತ್ತವರ ಸ್ನೇಹಿತರನ್ನು (ಮಾರ್ಚ್ 23, 1931) ಗಲ್ಲಿಗೇರಿಸಿಯೇ ತೀರುತ್ತಾರೆ. ಇದು ಬಹುಶಃ ನಿಮಗೂ ತಿಳಿದಿರುವ ಇತಿಹಾಸ.

ಈಗ ನಾನು ತಮಗೆ ನೆನಪಿಸಬೇಕು ಎಂದುಕೊಂಡ ವಿಚಾರಕ್ಕೆ ಬರುತ್ತೇನೆ.

ಭಗತ್ ಸಿಂಗ್ ಮತ್ತವರ ಸಹೋದ್ಯೋಗಿಗಳ ಗಲ್ಲು ಆದ ನಂತರ ಗಾಂಧಿ ಅವರ ಬಗ್ಗೆ (ಮಾರ್ಚ್ 26, 1931) ಹೀಗೆ ಹೇಳುತ್ತಾರೆ: "ಭಗತ್ ಸಿಂಗ್‌ರ ಶೌರ್ಯ ಮತ್ತು ತ್ಯಾಗದ ಮುಂದೆ ಯಾರ ತಲೆಯೂ ಬಾಗುತ್ತದೆ." ಆದರೆ ನಮಗೆ ಅಷ್ಟೆ ಮುಖ್ಯವಾದದ್ದು ಅದೇ ದಿನ ಕರಾಚಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿ ಮಾಡಿದ ಭಾಷಣ:

"ಆದರೆ, ಭಗತ್ ಸಿಂಗ್‍ರ ತಪ್ಪೂ ಸಹ ನಿಮಗೆ ಅರ್ಥವಾಗಬೇಕು ಅನ್ನುವುದು ನನ್ನ ಬಯಕೆ.... ಹಸಿವಿನಿಂದ ಬಳಲುತ್ತಿರುವ ನಮ್ಮ ಕೋಟ್ಯಾಂತರ ಜನರಿಗೆ, ನಮ್ಮ ಕಿವುಡರಿಗೆ ಮತ್ತು ಮೂಗರಿಗೆ, ನಮ್ಮಲ್ಲಿಯ ಕುಂಟರಿಗೆ ಮತ್ತು ಹೆಳವರಿಗೆ, ಕತ್ತಿಯ ಮೂಲಕ ನಾವು ಸ್ವರಾಜ್ಯವನ್ನು ಗೆದ್ದುತರಲು ಸಾಧ್ಯವಿಲ್ಲ ಎಂದು ಘೋಷಿಸುತ್ತೇನೆ. ಆ ದೇವರೆ ನನ್ನ ಸಾಕ್ಷಿಯಾಗಿ ನಾನು ಈ ಸತ್ಯವನ್ನು ಘೋಷಿಸಲು ಬಯಸುತ್ತೇನೆ.

"ನಾವು ಹಿಂಸೆಯ ಹಾದಿಯನ್ನು ಹಿಡಿದಿದ್ದೇ ಆದರೆ ಕಳೆದ ಚಳವಳಿಯಲ್ಲಿ ತಮ್ಮನ್ನು ತಾವೆ ಕೀರ್ತಿಯಲ್ಲಿ ಆವರಿಸಿಕೊಂಡ ಆ ಎಲ್ಲಾ ಹೆಂಗಸರು ಮತ್ತು ಮಕ್ಕಳು ಹಾಗೆ ಕೀರ್ತಿ-ಯಶಸ್ಸಿನಿಂದ ಆವರಿಸಿಕೊಳ್ಳಲು ಸಾಧ್ಯವಿತ್ತು ಎಂದು ನೀವು ತಿಳಿಯುತ್ತೀರಾ? ನಮ್ಮ ಹೋರಾಟದಲ್ಲಿ ಹಿಂಸೆ ಇದ್ದಿದ್ದೆ ಆದರೆ ಈ ನಮ್ಮ ಸ್ತ್ರೀಯರು, ಪ್ರಪಂಚದಲ್ಲಿಯೆ ಅತಿ ವಿನೀತರೆಂದು (meekest) ಹೆಸರಾದ ನಮ್ಮ ಹೆಂಗಸರು, ತನ್ನ ಬಿಳಿಯ ಸೀರೆ ರಕ್ತದಲ್ಲಿ ತೋಯ್ದು ಹೋಗುವಷ್ಟು ಹೊತ್ತೂ ಲಾಠಿ ಏಟುಗಳನ್ನು ಸಹಿಸಿಕೊಂಡ ಗಂಗಾಬೆಹನ್‌ನಂತಹ ಹೆಂಗಸರು, ತಾವು ಮಾಡಿದಂತಹ ಅದ್ವಿತೀಯವಾದ ಸೇವೆ ಮಾಡಲು ಸಾಧ್ಯವಿತ್ತೆ?

"ಇನ್ನು ನಮ್ಮ ಮಕ್ಕಳು - ನಮ್ಮ ವಾನರಸೇನೆ. ತಮ್ಮ ಆಟದ ಸಾಮಾನುಗಳನ್ನೆಲ್ಲ, ತಮ್ಮ ಗಾಳಿಪಟಗಳನ್ನೆಲ್ಲ, ತಮ್ಮ ಚಿನಕುರುಳಿ ಪಟಾಕಿಗಳನ್ನೆಲ್ಲ ತೊರೆದು, ಸ್ವರಾಜ್ಯದ ಸೈನಿಕರಾಗಿ ಸೇರಿಕೊಂಡ ಈ ಮುಗ್ಧರನ್ನು - ಅದು ಹೇಗೆ ನೀವು ಹಿಂಸಾತ್ಮಕ ಹೋರಾಟಕ್ಕೆ ಸೇರಿಸಿಕೊಳ್ಳುತ್ತೀರ? ನಾವು ಅಹಿಂಸೆಗೆ ವಚನಬದ್ಧರಾಗಿದ್ದರಿಂದಲೆ ಲಕ್ಷಾಂತರ ಗಂಡಸರನ್ನು, ಹೆಂಗಸರನ್ನು, ಮತ್ತು ಮಕ್ಕಳನ್ನು ನಾವು ಸೈನಿಕರನ್ನಾಗಿ ಸೇರಿಸಿಕೊಳ್ಳಲು ಸಾಧ್ಯವಾಗಿದ್ದು."

ನಂತರ ಮಾರ್ಚ್ 29, 1931 ರಂದು ಗಾಂಧೀಜಿ 'ನವಜೀವನ್'ನಲ್ಲಿ ಹೀಗೆ ಬರೆಯುತ್ತಾರೆ:
"ಕೊಲೆಗಳನ್ನು ಮಾಡುವ ಮೂಲಕವೆ ನ್ಯಾಯವನ್ನು ಪಡೆದುಕೊಳ್ಳುವ ಅಭ್ಯಾಸ ನಮ್ಮಲ್ಲಿ ಪ್ರತಿಷ್ಠಾಪಿತವಾದರೆ, ನಾವು ಏನನ್ನು ನ್ಯಾಯ ಎಂದು ಭಾವಿಸುತ್ತೇವೆಯೊ ಅದಕ್ಕಾಗಿ ಒಬ್ಬರನ್ನೊಬ್ಬರು ಕೊಲ್ಲಲು ಆರಂಭಿಸಿಬಿಡುತ್ತೇವೆ. ಕೋಟ್ಯಾಂತರ ನಿರ್ಗತಿಕರೂ, ಹೆಳವರೂ ಇರುವ ಈ ನಾಡಿನಲ್ಲಿ ಅದು ಬಹಳ ಭಯಾನಕವಾದ ಸ್ಥಿತಿಯಾಗುತ್ತದೆ."
[ಪುಟ 326- 'Gandhi - The Man, His People, and the Empire']

ನಾನು ಗಾಂಧೀಜಿಯ ಈ ಮಾತುಗಳನ್ನು ಉಲ್ಲೇಖಿಸುವ ಮೂಲಕ ತಮ್ಮ ಹಿಂಸಾತ್ಮಕ ಹೋರಾಟಕ್ಕೆ ನನಗಿರುವ ಭಿನ್ನಾಭಿಪ್ರಾಯ ಮತ್ತು ಇಲ್ಲದಿರುವ ಒಪ್ಪಿಗೆ/ಬೆಂಬಲವನ್ನು ಸೂಚಿಸುತ್ತೇನೆ. ಇದರ ಬಗ್ಗೆ ಇನ್ನೂ ಬರೆಯಬಹುದು. ಆದರೆ, ಗಾಂಧೀಜಿಯ ಮೇಲಿನ ಮಾತುಗಳು ನಮ್ಮ (ನನ್ನ ಮತ್ತು ಬಹುಶಃ ನನ್ನ ಸಮಾನಮನಸ್ಕರ) ಬಹುಪಾಲು ಅಭಿಪ್ರಾಯಗಳನ್ನು ಬಿಂಬಿಸುವುದರಿಂದ ಅದನ್ನು ಮತ್ತಷ್ಟು ವಾಚ್ಯ ಮಾಡಲು ಹೋಗುವುದಿಲ್ಲ.

ಕೋಮುವಾದ ಮತ್ತು ಜಾತಿವಾದ ತನ್ನ ಕಬಂಧ ಬಾಹುಗಳನ್ನು ಬಿಗಿಸುತ್ತಿರುವ ಈ ಸಮಯದಲ್ಲಿ, ದೈಹಿಕ ದುಡಿಮೆಗೆ ಬೆಲೆ ಇಲ್ಲದೆ ಹೋಗುತ್ತಿರುವ ಈ ಸಮಯದಲ್ಲಿ, ಹಣದ ಮದ ಮತ್ತು ಸ್ವಾರ್ಥ ಎಲ್ಲಾ ತರಹದ ಸಜ್ಜನ ವ್ಯವಸ್ಥೆಯನ್ನೂ ಹಾಳು ಮಾಡುತ್ತ ಧಾಪುಗಾಲಿಡುತ್ತಿರುವ ಈ ಸಮಯದಲ್ಲಿ, ಈ ಎಲ್ಲಾ ದುಷ್ಟಮನಸ್ಥಿತಿಯ ಅಗ್ನಿಕುಂಡಗಳಿಗೆ ತಾವು ಉರುವಲು ಆಗದೆ, ಜನಪರವಾದ ಹೋರಾಟದಲ್ಲಿ ಅಹಿಂಸಾತ್ಮಕವಾಗಿ, ಬಹಿರಂಗವಾಗಿ, ಪ್ರಜಾಸತ್ತಾತ್ಮಕ ರೀತಿಯಲ್ಲಿ ಪಾಲ್ಗೊಳ್ಳಿ ಎಂದಷ್ಟೆ ವಿನಂತಿಸುತ್ತೇನೆ. ನಿಮ್ಮ ಯಾವುದೇ ತರಹದ concerns ಅನ್ನೂ ಕೇಳಿಸಿಕೊಳ್ಳುವಂತಹ, ಪ್ರಾಮಾಣಿಕವಾಗಿ ಸ್ಪಂದಿಸುವಂತಹ, ತಮ್ಮ ಕೈಲಾದುದನ್ನು ಮಾಡುವಂತಹ ಮಾನವಪ್ರೇಮಿ, ಸತ್ಯನಿಷ್ಠ ಜನರು ಕರ್ನಾಟಕದಲ್ಲಿ ಇದ್ದಾರೆ ಎಂದೂ, ತಾವು ಕಾಣುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಅವರೊಡನೆಯೂ ಮತ್ತು ಪ್ರಜೆಗಳ ಸರ್ಕಾರದೊಡನೆಯೂ ನೇರವಾಗಿ ಸಂವಾದಿಸುವ ಪ್ರಯತ್ನಕ್ಕೆ ತಾವು ಮುಂದಾಗಬೇಕೆಂತಲೂ, ಕೇಳಿಕೊಳ್ಳುತ್ತೇನೆ.

ಅಹಿಂಸೆಯಲ್ಲಿ, ಸತ್ಯದಲ್ಲಿ, ಶ್ರಮದಲ್ಲಿ, ಪ್ರಜಾಪ್ರಭುತ್ವದಲ್ಲಿ, ಮಾನವತೆಯಲ್ಲಿ, ನಂಬಿಕೆಯಿರುವ
ತಮ್ಮವ,
ರವಿ...

ganga_dhara2007@rediffmail.com ಎಂಬ ಐಡಿಯಿಂದ "c p i (maoist) karnataka. leaflet about the action on keshava yadiyaal" ಎಂಬ ವಿಷಯದ ಮೇಲೆ ಬಂದಿರುವ ಪತ್ರದ ಪೂರ್ಣಪಾಠ:

ಪೊಲೀಸ್‌ ಮಾಹಿತಿದಾರ, ಕ್ರೂರಭೂಮಾಲಿಕ, ಕೋಮುವಾದಿ,ಅತ್ಯಾಚಾರಿ,ಜನ ದ್ರೋಹಿ ಕೇಶವ ಯಡಿಯಾಳನ ನಿರ್ಮೂಲನೆಯನ್ನು ಎತ್ತಿ ಹಿಡಿಯೋಣ ! ಜಾ ಹೋರಾಟವನ್ನು ತೀವ್ರಗೊಳಿಸೋಣ !

ಆತ್ಮೀಯ ರೈತ-ಕೂಲಿಕಾರ್ಮಿಕರೇ,ಮಹಿಳೆಯರೇ,

ಕ್ರೂರ ಭೂಮಾಲಿಕ,ಪೊಲೀಸ್ ಮಾಹಿತಿದಾರ ಕೇಶವ ಯಡಿಯಾಳನು ನಮ್ಮ ಪಕ್ಷದ ವಿರುದ್ದ,ವರಾಹಿದಳದ ಕಾರ್ಯಚಟುವಟಿಕೆಯ ಆರಂಭದಿಂದಲೂ ಪೊಲೀಸರಿಗೆ ಮಾಹಿತಿ ನೀಡುತ್ತಾ ಬಂದಿದ್ದಾನೆ. ನಮ್ಮ ದಳವು ದಿನಾಂಕ ೨೩-೬-೨೦೦೫ ರ ಬೆಳಿಗ್ಗೆ ದೇವರ ಬಾಳುವಿನ ಕಡೆಗೆ ಚಲಿಸುತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿನೀಡಿದ್ದಲ್ಲದೆ ಪೊಲೀಸರನ್ನು ಅರ್ಧದಾರಿಯಲ್ಲೇ ಭೇಟಿಮಾಡಿ ವಿವರವಾದ ಮಾಹಿತಿ ನೀಡಿದ್ದನು. ಇದರಿಂದಾಗಿ ನಮ್ಮ ವರಾಹಿ ದಳದ ಸಂಗಾತಿಗಳಾದ ಕಾ||ಉಮೇಶ್(ಕಿರಣ್) ಕಾ||ಅಜೀತ್ ಕುಸುಬಿ(ಆಕಾಶ್) ರವರು ದೇವರಬಾಳುವಿನ ರಾಮನಹಕ್ಲು ಮನೆಗೆ ಸುರಿಯುವ ಮಳೆಯಲ್ಲೇ ಜನರನ್ನು ಭೇಟಿಮಾಡಲು ಹೋದಾಗ ಕೇಶವ ಯಡಿಯಾಳನು ನೀಡಿದ್ದ ಖಚಿತಮಾಹಿತಿಯನ್ನು ಆಧರಿಸಿ ಈ ಊರಿನ ಬೇರೆ ಬೇರೆ ಮನೆಗಳಲಿ ಹೊಂಚುಹಾಕಿ ಕುಳಿತಿದ್ದ ಪೊಲೀಸರು ನಮ್ಮ ಸಂಗಾತಿಗಳನ್ನು ಸುಳ್ಳು ಎನ್‌ಕೌಂಟರ್‌ನಲ್ಲಿ ಕಗ್ಗೊಲೆಗೈದರು, ಇದಕ್ಕೆ ಈತನೇ ಪ್ರಮುಖ ಕಾರಣನಾಗಿದ್ದನು. ಅಲ್ಲದೆ ಈತನು ಆ ಇಬ್ಬರು ಸಂಗಾತಿಗಳ ಶವಗಳನ್ನು ಎತ್ತಲು ತನ್ನ ಮನೆಯಿಮದಲೇ ಛಾಪೆಗಳನ್ನು ತಂದು ತಾನೇ ಸುತ್ತಿದ್ದಲ್ಲದೆ ಜೇಪಿಗೆ ಹಾಕುವವರೆಗೂ ಪೊಲೀಸರಿಗೆ ಸಹಕರಿಸಿದ್ದನು.

ಈತನೊಬ್ಬ ಕೃರಭೂಮಾಲಿಕನಾಗಿದ್ದು ವಿವಿದೆಡೆ ಸುಮಾರು ೫೦ ಎಕರೆಯಷ್ಟು ಜಮೀನು ಹೊಂದಿದ್ದರೂ ಕೂಲಿ-ಕಾರ್ಮಿಕರನ್ನು ಅತೀ ಕಡಿಮೆ ಕೂಲಿಗೆ ಅಂದರೆ ೨೦-೨೫ ರೂಪಾಯಿಗೆ ದಿನವಿಡೀ ಬೆಳಿಗ್ಗೆ ೮-೦೦ ರಿಂದ ೫.೩೦-೬-೦೦ ಗಂಟೆವರಗೆ ಜೀತದ ರೀತಿ ಅಮಾನುಷವಾಗಿ ದುಡಿಸಿ ಕೊಳ್ಳುತ್ತಿದ್ದ ಶೋಷಕ ಭೂಮಾಲಿಕ.

ಆದರೆ ಜನರು ಕೊಳ್ಳುವ ಪ್ರತಿಯೊಂದು ವಸ್ತುವಿನ ಬೆಲೆಗಳೂ ಗಗನಕ್ಕೇರುತ್ತಿರುವ ಇವತ್ತಿನ ಸಂದರ್ಭದಲ್ಲಿ ಇವನು ಕೊಡುವ ಬಿಡಿಗಾಸಿನ ಕೂಲಿ ಒಂದೊತ್ತಿನ ಊಟಕ್ಕೂ ಸಾಕಾಗದಿರುವಾಗ ಇವನಿಂದ ತೆಗೆದುಕೊಂಡ ಸಾವಿರಾರು ರೂಪಾಯಿ ಸಾಲ ತೀರಿಸುವುದಾದರು ಹೇಗೆ? ಸಾಲಕ್ಕೆ ಬಡ್ಡಿ-ಚಕ್ರಬಡ್ಡಿ ಬೇರೆ ಹಾಕಿ ಜೀವನ ಪೂರ್ತಿ ತನ್ನ ಮನೆಯಲ್ಲೇ ಜೀತ ಮಾಡಿ ಬದುಕುವಂತೆ ಬಂಧಿಸಿಟ್ಟಿದ್ದ ಕೃರ ಭೂಮಾಲೀಕ. ಇ?ಇಔಲ್ಲಾ ಸಾಲದೆಂಬಂತೆ ಈತನು ಬಡ-ಮದ್ಯಮ ರೈತರಿಂದ ಅತೀಕಡಿಮೆ ಬೆಲೆಗೆ ಅಡಿಕೆಯನ್ನು ಖರೀದಿಸಿ ದುಪ್ಪಟ್ಟು ಲಾಭಕ್ಕಾಗಿ ಜನರನ್ನು ಮೋಸಗೋಳಿಸುತ್ತಾ ಬಂದ ದಲ್ಲಾಳಿಯೂ ಆಗಿದ್ದನು.

ಕೇಶವ ಯಡಿಯಾಳನು ಮನುಧರ್ಮದ ಕಟ್ಟಾ ಪ್ರತಿಪಾದಕನೂ ಆಗಿದ್ದು,ದಲಿತ ಹಾಗು ಹಿಂದುಳಿದ ಜಾತಿಯ ದುಡಿಯುವ ಜನರನ್ನು ಜಾತಿಯ ಆಧಾರದಲ್ಲಿ ಅತ್ಯಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದ ಬ್ರಾಹ್ಮಣಶಾಹಿ ಪ್ರತಿಪಾದಕನೂ ಆಗಿದ್ದನು. ಮಹಿಳೆಯರನ್ನು ಬೋಗದ ವಸ್ತುವಿನಂತೆ ಲೈಂಗಿಕ ದೃಷ್ಠಿಯಲ್ಲಿ ಅಗೌರವದಿಂದ ನೋಡುತ್ತಿದ್ದನಲ್ಲದೆ ಕೆಲವು ಮಹಿಳೆಯರನ್ನು ತನ್ನ ಕಾಮತೃಷೆಗಾಗಿ ಹಣ ಇತ್ಯಾದಿ ಆಮಿಷ ಒಡ್ಡಿ, ಮಹಿಳೆಯರ ಸಾಮಾಜಿಕ ಅಭದ್ರತೆಯನ್ನೇ ಬಂಡವಾಳ ಮಾಡಿಕೊಂಡು ಬೆದರಿಕೆ ಮೂಲಕ ಕೂಡ ಅತ್ಯಾಚಾರ ನಡೆಸುತ್ತಾ ಬಂದವನು. ಕೆಲವು ಮಹಿಳೆಯರ ಜೊತೆ ಅನೃತಿಕ ಸಂಬಂಧ ಹೊಂದಿದ್ದ ಲಂಪಟನಿವನು. ಇವನ ಈ ನೀಚ ಕೆಲಸಕ್ಕೆ ಹೋಗುವಾಗ ನಾಯಿಗಳು ಬೋಗಳುತಿದ್ದವೆಂದು ವಿಷ ಹಾಕಿ ಕೊಂದ ಕ್ರೂರಿಯಾಗಿದ್ದನು.

ದೇವರ ಬಾಳುವಿನ ರೈತರೊಬ್ಬರ ತೋಟದಲ್ಲಿ ಅಡಿಕೆ ಮರಗಳಿಗೆ ಸಿಂಪಡಿಸಲೆಂದು ಔಷಧಿ ಹಾಕಿಟ್ಟಿದ್ದ ಬ್ಯಾರಲ್‌ನಲ್ಲಿ ವೈಯಕ್ತಿಕ ದ್ವೇಷಕ್ಕಾಗಿ ತಾನೇ ಕಳೆನಾಶಕ ಬೆರೆಸಿದ್ದರಿಂದಾಗಿ ಸುಮಾರು ೩ ಎಕರೆಯಷ್ಟು ಅಡಿಕೆ ಬೆಳೆ ನಾಶವಾಗಿದೆ. ಇವನ ಈ ದುಷ್ಟ ಕೃತ್ಯವನ್ನು ಮುಚ್ಚಿ ಹಾಕುವುದಕ್ಕಾಗಿ ಇದು ನಕ್ಸಲೀಯರು ಮಾಡಿರುವುದೆಂದು ಅಪಪ್ರಚಾರ ಕೂಡ ಮಾಡಿದ್ದನು. ಆದರೆ ಇದು ಕೇಶವ ಯಡಿಯಾಳನೇ ಮಾಡಿದ್ದೆಂದು ಜನತೆಗೆ ಬಹಿರಂಗಗೊಂಡಿತು.

ಈತನೊಬ್ಬ ಹಿಂದು ಫ್ಯಾಸಿಸ್ಟ್ ಬಿ.ಜೆ.ಪಿ ಪಕ್ಷದ ಸಕ್ರೀಯ ಮುಖಂಡನಾಗಿದ್ದುಕೊಂಡು ನಮ್ಮ ಪಕ್ಷದ ವಿರುದ್ದ ನಿರಂತರ ಅಪಪ್ರಚಾರ ಮಾಡುತ್ತಾ ದುಡಿಯುವ ಜನರನ್ನು ಭೂಮಾಲೀಕರ ಅಮಾನುಷ ಶೋಷಣೆಯನ್ನು ಅರ್ಥಮಾಡಿಕೊಂಡು ಕ್ರಾಂತಿಕಾರಿ ಚಳುವಳಿಯಲ್ಲಿ ಒಗ್ಗೂಡದಂತೆ ದಿಕ್ಕು ತಪ್ಪಿಸಲು ನಿರಂತರ ಪ್ರಯತ್ನ ಮಾಡುತ್ತಾ ಬಂದವನು. ಪೊಲೀಸರು ಕರೆದಿದ್ದ ಜನಸಂಪರ್ಕ ಸಭೆಯೊಂದರಲ್ಲಿ ನಮ್ಮ ಪಕ್ಷದ ದಳಗಳಿಗೆ ಜನರ್‍ಯಾರು ಊಟ ಕೊಡಬಾರದು, ಸಹಕರಿಸಬಾರದೆಂದು ಮತ್ತು ನಮ್ಮ ದಳ ಕಂಡಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಜನರಿಗೆ ತಾಕೀತುಮಾಡಿ,ಗೊಂದಲ ಹಾಗೂ ಭಯದ ವಾತಾವರಣ ಉಂಡುಮಾಡಲು ಪ್ರಯತ್ನಿಸಿದನು, ಆದರೆ ಇವನ ಈ ಜನವಿರೋಧಿ ಕೃತ್ಯಗಳನ್ನು ಪ್ರಶ್ನೆಮಾಡಿ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಎಲ್ಲಾ ಜನದ್ರೋಹಿ ಹಾಗೂ ಕ್ರಾಂತಿದ್ರೋಹಿ ಕಾರಣದಿಂದಾಗಿ ಜನ ಹೋರಾಟಕ್ಕೆ ಕಂಟಕನಾದ ಪೊಲೀಸ್ ಮಾಹಿತಿದಾರ, ಕ್ರೂರ ಭೂಮಾಲೀಕ ಕೇಶವಯಡಿಯಾಳನಿಗೆ ಜನಾದೇಶ ಮೇರೆಗೆ ಮರಣದಂಡನೆ ಶಿಕ್ಷೆಯನ್ನು ನಮ್ಮ ಪಕ್ಷದ ಪಿ.ಎಲ್.ಜಿ.ಎ.ಜಾರಿಗೋಳಿಸಿತು. ಈ ಕ್ರಮವನ್ನು ನಾಡಿನ ಎಲ್ಲಾ ಜನತೆ ಎತ್ತಿಹಿಡಿದು, ಪೊಲೀಸ್ ಮಾಹಿತಿದಾರರನ್ನು ಗುರುತಿಸಿ ಶಿಕ್ಷಿಸುತ್ತಾ ಭೂಮಾಲೀಕ ಶೋಷಣೆಯ ವಿರುದ್ಧ ರಾಜಿರಹಿತ ಹೋರಾಟಗಳನ್ನು ನಡೆಸಬೇಕೆಂದು ಮನವಿಮಾಡುತಿದ್ದೇವೆ.

"ಉಳುವವನಿಗೆ ಭೂಮಿ" ಎಂಬ ಘೋಷಣೆಯಡಿ ವ್ಯವಸಾಯಕ್ರಾಂತಿಯನ್ನು ಸಾಕಾರಗೊಳಿಸಲು,ಜನತೆಯ ನಿಜವಾದ ಪ್ರಜಾತಾಂತ್ರಿಕ ರಾಜಕೀಯ ಅಧಿಕಾರಕ್ಕಾಗಿ ನಮ್ಮ ಪಕ್ಷ ಜನರ ಹೆಗಲಿಗೆ ಹೆಗಲಾಗಿ ನಿಂತು ಹೋರಾಡುತ್ತದೆ.ನಾಡಿನ ಎಲ್ಲಾ ಜನಸಾಮಾನ್ಯರು ಹಾಗೂ ಪ್ರಜಾತಂತ್ರವಾದಿಗಳು ಇದರಲ್ಲಿ ಹೆಚ್ಚು ಹೆಚ್ಚು ಪಾಲ್ಗೋಳ್ಳಬೇಕೆಂದು ಕೋರುತ್ತಿದ್ದೇವೆ.

- ಕಾ|| ಉಮೇಶ್(ಕಿರಣ್),ಕಾ||ಅಜಿತ್ ಕುಸುಬಿ(ಆಕಾಶ್)ರವರ ಕಗ್ಗೊಲೆಗೆ ಕಾರಣನಾದ ಪೊಲೀಸ್ ಮಾಹಿತಿದಾರ ಕೇಶವ ಯಡಿಯಾಳನಿಗೆ ನೀಡಿರುವ ಶಿಕ್ಷೆಯನ್ನು ಎತ್ತಿಹಿಡಿಯೋಣ!
- ಕಾ||ಉಮೇಶ್,ಕಾ||ಅಜಿತ್ ಕುಸುಬಿಯವರ ಆಶಯಗಳನ್ನು ಈಡೇರಿಸೋಣ!
- ಎಲ್ಲಾಜನದ್ರೋಹಿ,ಕ್ರೂರಭೂಮಾಲೀಕರು ಹಾಗೂ ಪೊಲೀಸ್ ಮಾಹಿತಿದಾರರಿಗೆ ತಕ್ಕ ಪಾಠ ಕಲಿಸೋಣ!
- ರೈತ,ಕೂಲಿ-ಕಾರ್ಮಿಕರೆಲ್ಲಾ ಒಂದಾಗೋಣ "ಉಳುವವರಿಗೆ ಭೂಮಿ" ಗಾಗಿ ಹೋರಾಡೋಣ!
- ನೂತನ ಪ್ರಜಾತಾಂತ್ರಿಕ ಕ್ರಾಂತಿಯನ್ನು ಯಶಸ್ವಿ ಗೋಳಿಸೋಣ!
- ಸಿ.ಪಿ.ಐ (ಮಾವೋವಾದಿ)ಜಿಂದಾಬಾದ್!

ಸಿ.ಪಿ.ಐ(ಮಾವೋವಾದಿ)
ದೃಕ್ಪಥ ಪ್ರದೇಶ
ಕರ್ನಾಟಕ.
ನವಂಬರ್ ೨೦೦೮

Jan 1, 2009

ಅಂತರ್ಜಾಲದ ಕನ್ನಡ ಬರಹಗಳಿಗೆ (ಒಟ್ಟು) 15 ಸಾವಿರ ರೂಪಾಯಿಗಳ ಬಹುಮಾನ...

ಗೆಳೆಯರೆ,

ಎಲ್ಲರಿಗೂ 2009, ಹೊಸ ವರ್ಷದ ಶುಭಾಶಯಗಳು.

ವಿಚಾರ ಮಂಟಪದ ವತಿಯಿಂದ ನಮ್ಮೆಲ್ಲರಿಗೂ ಸಂಬಂಧಿಸಿದ ಕನಿಷ್ಠ ಎರಡು ವಿಷಯಗಳ ಮೇಲೆ ಲೇಖನಗಳನ್ನು ಆಹ್ವಾನಿಸೋಣ ಎಂದು ಮನಸ್ಸಿಗೆ ಬಂದ ತಕ್ಷಣ ಈ ಆಹ್ವಾನ ಬರೆಯುತ್ತಿದ್ದೇನೆ. ಕನ್ನಡ ಬರೆಯಬಲ್ಲ ಯಾರು ಬೇಕಾದರೂ ಇದರಲ್ಲಿ ಪಾಲ್ಗೊಳ್ಳಬಹುದು. ಇಂಗ್ಲಿಷಿನಲ್ಲಿ ಬರೆದು ಕನ್ನಡಕ್ಕೆ ಭಾಷಾಂತರಿಸಿ ಬೇಕಾದರೂ ಸಲ್ಲಿಸಬಹುದು.

ದೇಶದ ಗ್ರಾಮೀಣ ಸ್ಥಿತಿ ಮತ್ತು ಕೃಷಿಯ ಬಗ್ಗೆ ಅನುಭವ ಅಥವ ಒಳನೋಟ ಇರುವ ಯಾರು ಬೇಕಾದರೂ ಯೋಚಿಸಿ ಬರೆಯಬಹುದಾದ
"ಗ್ರಾಮೀಣ/ಕೃಷಿ/ರೈತ ಭಾರತದ ಸವಾಲುಗಳು ಮತ್ತು ಪರಿಹಾರಗಳು; ಸರ್ಕಾರಗಳು ಕೈಗೊಳ್ಳಬೇಕಾದ ನೀತಿಗಳು; ಗ್ರಾಮೀಣ ಭಾರತದ ಪ್ರಜಾಆಡಳಿತದ ಸವಾಲುಗಳು; ಜನರ ಪಾತ್ರ ಮತ್ತು ಅವರ ಮಿತಿಗಳು; ಗ್ರಾಮೀಣ ಉದ್ದಿಮೆಗಳು; ಇತ್ಯಾದಿ...", ಮೊದಲ ವಿಷಯ.

ಎರಡನೆಯದು,
"ಭಾರತದ ಐಟಿ/ಬಿಪಿಒ ಉದ್ದಿಮೆ, ಅದರಿಂದಾದ/ಆಗುತ್ತಿರುವ ಒಳ್ಳೆಯ/ಕೆಟ್ಟ ಪರಿಣಾಮಗಳು; ನೌಕರರ ಮತ್ತು ಕಂಪನಿಗಳ ಸವಾಲುಗಳು, ಪರಿಹಾರಗಳು; ಮುಂದೆ ಸವೆಸಬೇಕಾದ ದಾರಿ; ಸರ್ಕಾರ ಮತ್ತು ಉದ್ಯಮ ತೆಗೆದುಕೊಳ್ಳಬಹುದಾದ ನಿರ್ಣಯಗಳು, ಇತ್ಯಾದಿ..."

ಪ್ರತಿ ವಿಷಯಕ್ಕೂ ಮೊದಲ ಬಹುಮಾನ ರೂ.2500
ಸಮಾಧಾನಕರ ಬಹುಮಾನಗಳು 5 - ತಲಾ ರೂ.1000
(ಒಂದು ವಿಷಯಕ್ಕೆ ಒಟ್ಟು ಬಹುಮಾನದ ಮೊತ್ತ ರೂ.7500)

  • ಲೇಖನವನ್ನು ಸಬ್ಮಿಟ್ ಮಾಡಲು ಕೊನೆಯ ದಿನಾಂಕ ಜನವರಿ 25, 2009
  • ಎಲ್ಲಾ ಲೇಖನಗಳ ಪೂರ್ಣಪಾಠವನ್ನು ಜನವರಿ 26, 2009 (ಭಾರತದ ಗಣರಾಜ್ಯೋತ್ಸವ) ರಂದು ವಿಚಾರಮಂಟಪ.ನೆಟ್‌ನಲ್ಲಿ ಪ್ರಕಟಿಸಲಾಗುತ್ತದೆ.
  • ಫೆಬ್ರವರಿ 15, 2009ಕ್ಕೆ ಫಲಿತಾಂಶ ಪ್ರಕಟ.
  • ಭಾರತದಲ್ಲಿರುವವರಿಗೆ ಬಹುಮಾನದ ಮೊತ್ತಕ್ಕೆ ಡಿ.ಡಿ. ಮಾಡಲಾಗುವುದು. ಬೇರೆ ಕಡೆ ಇರುವವರಿಗೆ ಡಾಲರ್ ಲೆಕ್ಕದಲ್ಲಿ ಚೆಕ್ ಕಳುಹಿಸಲಾಗುವುದು.
  • ಇಂತಹವರು ಪಾಲ್ಗೊಳ್ಳಬಾರದೆಂಬ ನಿಬಂಧನೆಗಳೇನೂ ಇಲ್ಲ.
  • ಲೇಖನ ಕನಿಷ್ಠ 1000 ಪದಗಳಿರಬೇಕು. ಗರಿಷ್ಠ ಮಿತಿ ಇಲ್ಲ. (ಪುಸ್ತಕಕ್ಕಾಗುವಷ್ಟು ಬರೆದರೂ ಸಮಸ್ಯೆಯಿಲ್ಲ).
  • ಈ ಮುಂಚೆ ಬೇರೆಲ್ಲೂ ಪ್ರಕಟವಾಗಿರಬಾರದು.
  • ಒಬ್ಬರು ಎರಡೂ ವಿಷಯಗಳ ಮೇಲೆ ಬರೆಯಬಹುದು.
  • ಲೇಖಕರು ವಿಚಾರಮಂಟಪ.ನೆಟ್‌ಗೆ ಲಾಗಿನ್ ಆಗಿ ತಮ್ಮ ಲೇಖನವನ್ನು ಅಪ್‍ಲೋಡ್ ಮಾಡಬಹುದು. ಅಂದು ಅಪ್‍ಲೋಡ್ ಆದ ಲೇಖನದ ಮೊದಲ ಪ್ಯಾರಾವನ್ನು ಅಂದೇ ಪ್ರಕಟಿಸಲಾಗುತ್ತದೆ (ಪೂರ್ಣಪಾಠವಲ್ಲ). ಒಂದು ಸಲ ಅಪ್‌ಲೋಡ್ ಆದಮೇಲೆ ಕಾಗುಣಿತ ತಪ್ಪುಗಳನ್ನು ಹೊರತುಪಡಿಸಿ ಬೇರೆ ತರಹದ ತಿದ್ದುಪಡಿಗಳಿಗೆ ಅವಕಾಶವಿಲ್ಲ. ಹಾಗಾಗಿ ಪೂರ್ಣವಾಗಿ ಸಿದ್ದವಾದ ಲೇಖನವನ್ನೆ ಕಾಪಿ-ಪೇಸ್ಟ್ ಮಾಡಿ, ಒಂದೇ ಬಾರಿಗೆ ಅಪ್‌ಲೋಡ್ ಮಾಡಿ.

ಪ್ರೀತಿಯಲ್ಲಿ,
ರವಿ...