(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 8, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)
ಅದು 1999 ರ ಬೇಸಿಗೆ. ನಾನಾಗ ಹೈದರಾಬಾದ್‌ನಲ್ಲಿ ಕೆಲಸದಲ್ಲಿದ್ದೆ. ಆ ಸಮಯದಲ್ಲಿ ಅಲ್ಲಿನ ಜನಪ್ರಿಯ ಇಂಗ್ಲಿಷ್ ದೈನಿಕ "ಡೆಕ್ಕನ್ ಕ್ರಾನಿಕಲ್" ನಮ್ಮ ರಾಜ್ಯದ ಬಾಗೆಪಲ್ಲಿ ತಾಲ್ಲೂಕಿನಲ್ಲಿ ಚಿತ್ರಾವತಿ ನದಿಗೆ ಕರ್ನಾಟಕ ಸರ್ಕಾರ ಕಟ್ಟಲಿರುವ ಬ್ಯಾರೇಜ್‌ನಿಂದ ಆಂಧ್ರದ ಪಾಲಿನ ನೀರಿಗೆ ಮೋಸವಾಗಲಿದೆ, ಇದನ್ನು ಆಂಧ್ರಪ್ರದೇಶ ಸರ್ಕಾರ ಕೂಡಲೆ ನಿಲ್ಲಿಸಲು ಪ್ರಯತ್ನಿಸಬೇಕು, ಅದಕ್ಕಾಗಿ ಏನೇನು ಮಾಡಬೇಕು ಎಂದು ದೊಡ್ಡ ವರದಿಯನ್ನೇ ಪ್ರಕಟಿಸಿತ್ತು.
ನಮ್ಮಲ್ಲಿ ಕೆಲವು ತಾಲ್ಲೂಕುಗಳು, ಊರುಗಳಿವೆ. ಅವುಗಳ ಹೆಸರು ಬಂದ ತಕ್ಷಣ ನಮಗೆ ಅವನ್ನು ಪ್ರತಿನಿಧಿಸುವವರ ಅಥವ ಪ್ರತಿನಿಧಿಸುತ್ತಿದ್ದವರ ಹೆಸರು ಜ್ಞಾಪಕಕ್ಕೆ ಬಂದುಬಿಡುತ್ತದೆ. ಹೊಳೆನರಸಿಪುರದ ದೇವೇಗೌಡರು, ಸೊರಬದ ಬಂಗಾರಪ್ಪ, ಮದ್ದೂರಿನ ಎಸ್.ಎಂ. ಕೃಷ್ಣ, ಶಿಕಾರಿಪುರದ ಯಡಿಯೂರಪ್ಪ, ನಾಗಮಂಗಲದ ಶಿವರಾಮೇಗೌಡ, ಬಾಗಲಕೋಟೆಯ ಸಿದ್ದುನ್ಯಾಮೇಗೌಡ, ಚಿಕ್ಕೋಡಿಯ ಶಂಕರಾನಂದ; ಹೀಗೆ. ಅದೇ ರೀತಿ 1994 ರಿಂದ ಈಚೆಗೆ ಬಾಗೆಪಲ್ಲಿ ಎಂದಾಕ್ಷಣ ಕರ್ನಾಟಕದ ಜನತೆಗೆ ನೆನಪಿಗೆ ಬರುತ್ತಿದ್ದ ಹೆಸರು ಅಲ್ಲಿನ ಶಾಸಕ ಜಿ.ವಿ. ಶ್ರೀರಾಮರೆಡ್ಡಿಯವರದು. ಅದಕ್ಕೆ ಅವರು ರಾಜ್ಯದ ಕಮ್ಯುನಿಸ್ಟ್ ಪಕ್ಷದ ಏಕೈಕ ಶಾಸಕರು ಎನ್ನುವುದಕ್ಕಿಂತ ಅವರು ವಿಧಾನಸಭೆಯಲ್ಲಿ ಎತ್ತುತ್ತಿದ್ದ ಜನಪರ ವಿಷಯಗಳು, ಮಾಡುತ್ತಿದ್ದ ವಾದ, ಅವುಗಳಿಂದ ಪ್ರಕಟವಾಗುತ್ತಿದ್ದ ಅವರ ಜನಪರ ಕಾಳಜಿಗಳೇ ಮುಖ್ಯ ಕಾರಣ.
ಹೀಗಾಗಿ, ಡೆಕ್ಕನ್ ಕ್ರಾನಿಕಲ್‌ನ ವರದಿ ನೋಡಿದ ತಕ್ಷಣ ನಾನು ಶ್ರೀರಾಮರೆಡ್ಡಿಯವರಿಗೆ, ಆಂಧ್ರದ ಸರ್ಕಾರ ಮತ್ತು ಅಲ್ಲಿನ ಮಾಧ್ಯಮಗಳು ಚಿತ್ರಾವತಿ ಯೋಜನೆಯನ್ನು ವಿರೋಧಿಸಲು ತಂತ್ರಗಳನ್ನು ರೂಪಿಸುತ್ತಿವೆ, ತಾವು ಅದನ್ನು ಎದುರಿಸಲು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ, ಹಾಗೂ ನಿಮ್ಮ ಜನಪರ ಕಾಳಜಿಗೆ ನನ್ನ ಶ್ಲಾಘನೆಗಳು ಎಂದು ಬರೆದು, ಆ ಸುದ್ದಿಯ ಪೇಪರ್ ಕಟಿಂಗ್ ಸಮೇತ ಅಂಚೆಗೆ ಹಾಕಿದ್ದೆ. ವಿಳಾಸ ಸರಿಯಿತ್ತೊ ಇಲ್ಲವೊ, ಅದು ಅವರಿಗೆ ಮುಟ್ಟಿತೋ ಇಲ್ಲವೊ ಗೊತ್ತಾಗಲಿಲ್ಲ. ಅದಾದ 6 ತಿಂಗಳ ನಂತರ ಬಂದ ಚುನಾವಣೆಯಲ್ಲಿ, ಎಸ್.ಎಂ. ಕೃಷ್ಣರ ಕಾಂಗ್ರೆಸ್ ಅಲೆಯಲ್ಲಿ ಶ್ರೀರಾಮರೆಡ್ಡಿಯವರು ಸೋತರು. ಅದಾದ ನಾಲ್ಕೂವರೆ ವರ್ಷಗಳ ನಂತರ ಬಂದ 2004 ರ ಚುನಾವಣೆಯಲ್ಲಿ ಎಸ್.ಎಂ.ಕೃಷ್ಣರ ಕಾಂಗ್ರೆಸ್ ಸೋತಿತು, ಬಾಗೆಪಲ್ಲಿಯಲ್ಲಿ ಶ್ರೀರಾಮರೆಡ್ಡಿ ಮತ್ತೆ ಗೆದ್ದರು. ಕಾಂಗ್ರೆಸ್-ಜನತಾದಳ ಮೈತ್ರಿ, ಮತ್ತು ಈಗಿನ ಬಿಜೆಪಿ-ಜನತಾದಳ ಮೈತ್ರಿಯುದ್ದಕ್ಕೂ ಸದನದಲ್ಲಿ ಮತ್ತೆ ಶ್ರೀರಾಮರೆಡ್ಡಿ ಗುಡುಗುತ್ತಿದ್ದಾರೆ.
ಈ ಮಧ್ಯೆ ಅವರ ಬಾಗೆಪಲ್ಲಿ ಕ್ಷೇತ್ರ ಯಾವ ರೀತಿಯ ಅಭಿವೃದ್ದಿ ಕಂಡಿದೆಯೊ ನನಗೆ ಗೊತ್ತಿಲ್ಲ. ಆದರೂ ಅದರ ಪ್ರತಿನಿಧಿ ಪ್ರಾಮಾಣಿಕರಿದ್ದ ಹಾಗೆ ಇದ್ದಾರೆ, ನೈತಿಕತೆಯುಳ್ಳ ಮನುಷ್ಯ, ಅವರು ಏನು ಹೇಳಿದರೂ ಅದಕ್ಕೊಂದು ತೂಕವಿರುತ್ತದೆ ಎಂಬ ಭಾವನೆ ಇತ್ತು. ಆದರೆ ಕೆಲವು ವಾರಗಳ ಹಿಂದೆ ಕೆಲವು ದಿನಪತ್ರಿಕೆಗಳಲ್ಲಿ ಹಾಗೂ ನಾನು ಇಲ್ಲಿಗೆ ತರಿಸುವ ಲಂಕೇಶ್‌ನಲ್ಲಿ, ಶ್ರೀರಾಮರೆಡ್ಡಿಯವರು ಉತ್ತರಭಾರತ ಪ್ರವಾಸ ಸಮಯದಲ್ಲಿ ಮಾಡಿಕೊಂಡ ಕೆಲವು ಎಡವಟ್ಟುಗಳ ಬಗ್ಗೆ ಬರೆದಿದ್ದರು. ಬಹಳ ಬೇಜಾರಾಯಿತು. ಅವರ ಪ್ರಾಮಾಣಿಕತೆಯ ಬಗ್ಗೆಯೇ ಸಂದೇಹಗಳು ಹುಟ್ಟಿಕೊಂಡವು. ಚೆನ್ನಾಗಿ ಓದಿಕೊಂಡಿರುವ, ಪ್ರಜಾಪ್ರಭುತ್ವ ಮತ್ತು ಸರ್ಕಾರದ ಜವಾಬ್ದಾರಿಗಳ ಬಗ್ಗೆ ಚೆನ್ನಾಗಿ ಅರಿತಿರುವ ಒಂದು ಪ್ರಾಮಾಣಿಕ ಸ್ವರ ಸದನದಲ್ಲಿ ತನ್ನ ನೈತಿಕತೆ ಕಳೆದುಕೊಂಡು ದುರ್ಬಲವಾಯಿತಲ್ಲ ಎನ್ನಿಸಿತು. ಊರಿನಲ್ಲಿರುವಾಗ ಅಷ್ಟು ಇಷ್ಟು ಮಾನಮರ್ಯಾದೆಗಳಿಂದ ಇರುವವರು ಬೇರೆ ಕಡೆ ಹೋದಾಗ ಯಾರೂ ಗಮನಿಸುವುದಿಲ್ಲ ಎಂದು ಹೇಗೆ ತಮ್ಮ ಖಯಾಲಿಗಳಿಗೆ, ಸಣ್ಣತನಗಳಿಗೆ ಬಲಿಯಾಗುತ್ತಾರಲ್ಲ ಅನ್ನಿಸಿತು.
ಈ ವಿಷಯವನ್ನು ಇಲ್ಲಿ ಎತ್ತಲು ಮುಖ್ಯ ಕಾರಣ, ಈ ಪತ್ರಿಕೆ ನಿಮ್ಮ ಕೈಸೇರುವುದಕ್ಕಿಂತ ಮುಂಚೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಿಂದ ಹಿಡಿದು ಅನೇಕ ಮಂತ್ರಿಗಳು, ಶಾಸಕರು, ಹಿರಿ-ಕಿರಿಯ ಅಧಿಕಾರಿಗಳು, ಸಾಹಿತಿಗಳು, ಪತ್ರಕರ್ತರು, ಕಲಾವಿದರು, `ನವ ವೇದಾಂತ ರೆಜಿಮೆಂಟ್ನ ವೇದಾಂತಿಗಳು, ಮಠಾಧೀಶರು, ಅಮೇರಿಕ ಸಂಯುಕ್ತ ಸಂಸ್ಥಾನದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಬಂದು ಇಳಿದಿರುತ್ತಾರೆ. ಈ ಲೇಖನ ಬರೆಯುವುದಕ್ಕೆ ಎರಡು ದಿನದ ಹಿಂದೆ ತಾನೆ ಅತೃಪ್ತ ಶಾಸಕರನ್ನು ತೃಪ್ತಿಪಡಿಸಲು ಹೆಚ್ಚಿನ ಸಂಖ್ಯೆಯ ಶಾಸಕರನ್ನು ತಮ್ಮ ಜೊತೆ ಕರೆದೊಯ್ಯಲು ಮುಖ್ಯಮಂತ್ರಿಗಳು ಯೋಚಿಸುತ್ತಿದ್ದಾರೆ ಎಂದು ದಿನಪತ್ರಿಕೆಯೊಂದು ಪ್ರಕಟಿಸಿದೆ. ಅವರ ಸಂಖ್ಯೆ ಏನು ಮತ್ತು ಯಾರ್‍ಯಾರು ಎಂದು ನಿಮಗೆ ಈಗಾಗಲೆ ಗೊತ್ತಾಗಿರುತ್ತದೆ.
ಅವರೆಲ್ಲ ಇಲ್ಲಿಗೆ ಬರಲಿರುವುದು ಅಕ್ಕ (ಅಮೆರಿಕ ಕನ್ನಡ ಕೂಟಗಳ ಆಗರ) ಸಂಸ್ಥೆ ಇಲ್ಲಿಯ ಸ್ಥಳೀಯ ಕನ್ನಡ ಕೂಟ ಕಾವೇರಿಯೊಂದಿಗೆ ಸೇರಿ ಆಯೋಜಿಸಿರುವ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು. ಕಳೆದ ಬಾರಿಯ ಚಂಡಮಾರುತದ ರಗಳೆ ಈ ಬಾರಿ ಇಲ್ಲದಿರುವುದರಿಂದ ನಾಲ್ಕೈದು ಸಾವಿರಕ್ಕೂ ಹೆಚ್ಚು ಜನ ಈ ಸಲದ ಸಮ್ಮೇಳನದಲ್ಲಿ ಭಾಗವಹಿಸಬಹುದು ಎಂದು ಅಂದಾಜು. ಅಕ್ಕ ಮತ್ತು ಕಾವೇರಿ ಮಾಡಿಕೊಂಡಿರುವ ಸಿದ್ಧತೆಗಳನ್ನು ಗಮನಿಸಿದರೆ ಈ ಸಲದ ಸಮ್ಮೇಳನ ಬಹಳ ಅಚ್ಚುಕಟ್ಟಾಗಿ ನಡೆಯುವ ಭರವಸೆ ಇಟ್ಟುಕೊಳ್ಳಬಹುದು.
ಸರಿಸುಮಾರು ಮೂರರಿಂದ ನಾಲ್ಕು ಕೋಟಿ ರೂಪಾಯಿಗಳ ವೆಚ್ಚ ತಗುಲಲಿರುವ ಈ ಸಮ್ಮೇಳನಕ್ಕೆ ಬಹುಪಾಲು ದುಡ್ಡು ಸಮ್ಮೇಳನದಲ್ಲಿ ನೋಂದಾಯಿಸಿಕೊಳ್ಳುವ ಜನರಿಂದ ಹಾಗೂ ಇಂತಹ ಕನ್ನಡಪರ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಸ್ಥಳೀಯ ಶ್ರೀಮಂತ ಕನ್ನಡಿಗರ ದೇಣಿಗೆಯಿಂದ ಬರುತ್ತದೆ. ಕರ್ನಾಟಕ ಸರ್ಕಾರ ೩೫ ಕಲಾವಿದರನ್ನು ಕಳಿಸುತ್ತಿರುವುದರಿಂದ ಹಾಗೂ ಮುಖ್ಯಮಂತ್ರಿ ಮತ್ತಿತರರ ಜಂಬೂಸವಾರಿಯೂ ಆಗಮಿಸುತ್ತಿರುವುದರಿಂದ ಸರ್ಕಾರಕ್ಕೂ ಒಂದು ಕೋಟಿಯ ತನಕ ಖರ್ಚು ಬೀಳಬಹುದು. ಆದರೆ ಅದಕ್ಕಿಂತ ಹಲವು ಪಟ್ಟು ದುಡ್ಡು ಈ ಸಮ್ಮೇಳನದಿಂದ ಕರ್ನಾಟಕಕ್ಕೆ ಪರೋಕ್ಷವಾಗಿ ಹರಿದುಬರುತ್ತದೆ; ಕರ್ನಾಟಕದಲ್ಲಿನ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಸಂದರ್ಭದಲ್ಲಿ ಅನೇಕರು ಉದಾರವಾಗಿ ಹಣ ನೀಡಬಹುದು, ಮಂತ್ರಿಗಳು ಮತ್ತು ಅಧಿಕಾರಿಗಳು ಇಲ್ಲಿಗೆ ಬಂದಿರುವ ಸಮಯ ಸಂದರ್ಭ ಉಪಯೋಗಿಸಿಕೊಂಡು ಜವಾಬ್ದಾರಿಯುತವಾಗಿ, ಯೋಗ್ಯತೆಯಿಂದ ಕೆಲಸ ಮಾಡಿದರೆ ಒಂದಷ್ಟು ಹೂಡಿಕೆಗಳನ್ನೂ ತರಬಹುದು, ಇಲ್ಲಿಗೆ ಬರುವ ಕಲಾವಿದರು ಬೇರೆಡೆ ಕಾರ್ಯಕ್ರಮ ಕೊಟ್ಟು ಗೌರವ ಸಂಭಾವನೆ ಗಳಿಸಬಹುದು, ಹೀಗೆ.
ಇವೆಲ್ಲವುಗಳ ಜೊತೆಗೆ ಅನೇಕರ ಸಣ್ಣತನಗಳು ಬಯಲಿಗೆ ಬಂದು ಶ್ರೀರಾಮರೆಡ್ಡಿಯವರ ವಿಚಾರದಲ್ಲಾದಂತೆ ಈ ಸಂತೆಯಲ್ಲೂ ಕೆಲವರು ಬೇಕಾಬಿಟ್ಟಿ ವರ್ತಿಸಬಹುದು. ಸರ್ಕಾರಿ ದುಡ್ಡಿನಲ್ಲಿ ಬಂದಿರುವ ಮಂತ್ರಿಮಹೋದಯರು ಇಲ್ಲಿ ತಮ್ಮ ತಮ್ಮ ಜಾತಿಯವರ ಸಂಘಗಳಿಗೆ ಹೋಗಿ ಭಾಷಣ ಮಾಡಬಹುದು. (ಕರ್ನಾಟಕದಿಂದ ಈ ಹಿಂದೆ ಅಧಿಕೃತ ಕಾರ್ಯಕ್ರಮದ ಮೇಲೆ ಬಂದಿದ್ದ ಮಂತ್ರಿಗಳು ಹಾಗೆ ಮಾಡಿಯೂ ಇದ್ದಾರೆ. ಇಂತಹವರಿಗೆ ಕುವೆಂಪು, ಡಾ. ರಾಜ್ ಮಾದರಿಗಳಾಗುವುದು ಯಾವಾಗ?) ಕೆಲವರು ಕೇವಲ ಮಜಾ ಮಾಡಿ ಹೋಗಬಹುದು. ಇನ್ನು ಕೆಲವರು ಕುಡಿದೊ ಇನ್ನೊಂದೊ ಗಲಾಟೆ ಮಾಡಿಕೊಂಡು ಇಲ್ಲಿನ ಸ್ಥಳೀಯ ಕನ್ನಡಿಗರ ಬಾಯಿಗೆ ಮುಂದಿನ ಸಮಾವೇಶದ ತನಕ ಗ್ರಾಸವಾಗಬಹುದು. ನಾಲ್ಕು ಜನ ಸೇರಿದಾಗ ಏನು ಬೇಕಾದರೂ ಆಗಬಹುದು. ಆದರೂ ಇಲ್ಲಿ ಕೆಟ್ಟದ್ದಕ್ಕಿಂತ ಒಳ್ಳೆಯದು ಬಹುಪಾಲು ಆಗೇ ಆಗುತ್ತದೆ. ಯಾಕೆಂದರೆ ತವರನ್ನು ತೀವ್ರವಾಗಿ, ಪ್ರಾಮಾಣಿಕವಾಗಿ ಪ್ರೀತಿಸುವ ಜನ ಹಾಗೂ ಅಂತಹವರನ್ನು ಭ್ರಷ್ಟಗೊಳ್ಳಲು ಬಿಡದ ವ್ಯವಸ್ಥೆ ಇಲ್ಲಿದೆ.
ಇವೆಲ್ಲದರ ಜೊತೆಗೆ ನಮ್ಮ ಪತ್ರಿಕೆಯ ಕಾನೂನು ಸಲಹೆಗಾರರಾದ ಹಿರಿಯ ಪತ್ರಕರ್ತ ಡಾ. ಸಿ.ಎಸ್. ದ್ವಾರಕಾನಾಥ್, ಹಾಗೂ ಅವರ ಬಹುಕಾಲದ ಮಿತ್ರ, ಈಗ ಇಲ್ಲಿಯೇ ಇರುವ ನಮ್ಮ ಮತ್ತೊಬ್ಬ ಹಿತೈಷಿಗಳಾದ ಪತ್ರಕರ್ತ ಹನುಮಂತ ರೆಡ್ಡಿಯವರೂ ಜೊತೆಗಿರುತ್ತಾರೆ. ಕ್ಯಾಲಿಫೋರ್ನಿಯಾದ ಸ್ನೇಹಿತರಾದ ಮೃತ್ಯುಂಜಯ ಹರ್ತಿಕೋಟೆ, ವ್ಯಂಗ್ಯಚಿತ್ರಕಾರ ಮತ್ತು ತಂತ್ರಜ್ಞ ಜನಾರ್ಧನ ಸ್ವಾಮಿ, ಪರಿಚಯದ ನೂರಾರು ಜನ ಅಲ್ಲಿರುತ್ತಾರೆ. ಕನ್ನಡ, ಕರ್ನಾಟಕ ಅನುರುಣಿಸುತ್ತಿರುತ್ತದೆ. ಇದೇ ಸಂದರ್ಭದಲ್ಲಿ ಹಲವಾರು ಜನರಿಗೆ ತಮ್ಮ ಸಾಮಾಜಿಕ ಬಾಧ್ಯತೆಗಳು ಗುರುತಾಗುತ್ತವೆ. ಜನಜೀವನವನ್ನು ಮತ್ತಷ್ಟು ಹಸನು ಮಾಡುವುದು ಹೇಗೆಂದು ಚಿಂತನಮಂಥನಗಳು ನಡೆಯುತ್ತವೆ. ಸಮ್ಮೇಳನದಿಂದ ಇನ್ನೇನು ತಾನೆ ಬೇಕು?
Aug 22, 2006
ಅಕ್ಕ ಸಮ್ಮೇಳನದಲ್ಲಿ ನಮ್ಮನ್ನು ಪ್ರತಿನಿಧಿಸುವವರು
Subscribe to:
Post Comments (Atom)
No comments:
Post a Comment