ಕಳೆದ ಎರಡು ವಾರಗಳಿಂದ ಕರ್ನಾಟಕದ ಹಲವು ಕಡೆ ಮೂರು ಸುತ್ತು ಹಾಕಿದೆ. ಮುಂದೆ ಏನಾದರೂ ಬರೆಯಬೇಕಾಗಿ ಬಂದಾಗ ಮತ್ತು ನೆನಪು ಕೈಕೊಟ್ಟಾಗ ಈ ಬರಹ ಅನುಕೂಲವಾಗಲಿ ಎಂದು ನಾನು ಕ್ರಮಿಸಿದ ಮಾರ್ಗವನ್ನು ಇಲ್ಲಿ ದಾಖಲಿಸುತ್ತಿದ್ದೇನೆ.
ಮೊದಲ ಮಾರ್ಗ: ಬೆಂಗಳೂರು-ತುಮಕೂರು-ಶಿರಾ-ಬೆಂಗಳೂರು. (ಈ ಮಾರ್ಗದಲ್ಲಿ ತುಮಕೂರಿನ ಶಿರಾ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕು ಮತ್ತು ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಕೆಲವು ಭಾಗಗಳಲ್ಲಿ ಓಡಾಟ.) ಇದು ಒಂದು ದಿನದ ಪ್ರಯಾಣ. ಹೈವೇಯನ್ನು ಬಿಟ್ಟು ಒಳರಸ್ತೆಗಳ ಹಳ್ಳಿಗಳೊಳಗಿನ ಈ ಪ್ರಯಾಣದಲ್ಲಿ ಭೀಕರ ಬಡತನವನ್ನೂ ಮತ್ತು "ಸ್ಪೃಶ್ಯ ಬಡವರಲ್ಲಿಯ" "ಅಸ್ಪೃಶ್ಯ" ಜಾತೀಯತೆಯನ್ನು ಕಂಡೆ. ಅಸ್ಪೃಶ್ಯತೆ ನಮ್ಮಲ್ಲಿ ಇನ್ನೂ ಒಂದಲ್ಲ ಒಂದು ರೀತಿಯಲ್ಲಿ ಗ್ರಾಮೀಣ ಪರಿಸರದಲ್ಲಿ ಬೇರೂರಿಕೊಂಡೇ ಇದೆ. (ದಿ: ಮಾರ್ಚ್ 21, 2009)
ಎರಡನೆಯದು: (ಮಾರ್ಚ್ 22 ರಿಂದ ಮಾರ್ಚ್ 26 ರವರೆಗೆ) ಬೆಂಗಳೂರು-ರಾಮನಗರ-ಮಾಗಡಿ-ಕುಣಿಗಲ್-ಹಾಸನ-ಶಿವಮೊಗ್ಗ-ಹೆಗ್ಗೋಡು-ಸಾಗರ-ಶಿವಮೊಗ್ಗ-ಮಾಗಡಿ-ಬೆಂಗಳೂರು. ಉಳಿದುಕೊಂಡಿದ್ದ ಸ್ಥಳಗಳು- ಮಾಗಡಿ ತಾಲ್ಲೂಕಿನ ಕುಗ್ರಾಮದಲ್ಲಿ ಎರಡು ದಿನ (ಹೋಗುತ್ತ, ಬರುತ್ತ), ಶಿವಮೊಗ್ಗ ನಗರದಲ್ಲಿ ಎರಡು ದಿನ.
ಈ ಪ್ರಯಾಣದಲ್ಲಿ ಮೇಲ್ಜಾತಿಯ ಜನ ದಲಿತನ ಹೆಂಡತಿಯೊಬ್ಬಳಿಗೆ ದಂಡ ವಿಧಿಸಿ, ಬಹಿಷ್ಕಾರ ಹಾಕಿದ ಕಾರಣಕ್ಕೆ ಮತ್ತು ತದನಂತರ ಅದು ಹಾಕಿದ ಕೌಟುಂಬಿಕ ಒತ್ತಡದಿಂದಾಗಿ ಕಳೆದ ದಿಸೆಂಬರ್‌ನಲ್ಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೆಣ್ಣೊಬ್ಬಳ ಕತೆಯನ್ನು ಆಕೆಯ ಗಂಡನಿಂದ ಕೇಳಿದೆ. ಆ ಹಳ್ಳಿಯ ದಲಿತರು ಈಗಲೂ ಒಬ್ಬೊಬ್ಬರೆ ಆ ಹಳ್ಳಿಯ ಮುಖ್ಯರಸ್ತೆಯಲ್ಲಿ ಓಡಾಡುವುದಿಲ್ಲ! ಸಿಕ್ಕರೆ ಮೇಲ್ಜಾತಿಯವರು ಹೊಡೆದುಹಾಕುತ್ತಾರೆ ಎನ್ನುವ ಭಯ. ಬೆಂಗಳೂರಿನಿಂದ ಕೇವಲ 60-70 ಕಿ.ಮಿ. ದೂರದಲ್ಲಿರುವ ಊರು ಇದು! ಹಾಗೆಯೆ ಇದು, 2009 ನೇ ಇಸವಿ!
ಜೀವನೋಪಾಯಕ್ಕಾಗಿ ತಮ್ಮ 30-40 ವಯಸ್ಸಿಗೆಲ್ಲ ಕಣ್ಣು ಕಳೆದುಕೊಳ್ಳುವ ಜನರನ್ನು ಹಾಸನ-ಮಂಡ್ಯದ ಗಡಿಯಲ್ಲಿ ಮಾತನಾಡಿಸಿದೆ. ಹೊಗೆಯಲ್ಲಿ, ಇದ್ದಿಲಿನಲ್ಲಿ ಕಾಲ ಕಳೆಯುವ "ಕಪ್ಪು ಜನರು" ಇವರು.
ಹಾಸನದಲ್ಲಿ ಪುಸ್ತಕವೊಂದರ ಬಗ್ಗೆ ಮಾತನಾಡಬೇಕಿತ್ತು. ಅದಕ್ಕೆ ಹಿಂದಿನ ಐದಾರು ದಿನಗಳಿಂದ ನೋಡಿದ್ದ ಮೇಲಿನ ಘಟನೆಗಳ ಹಿನ್ನೆಲೆಯಲ್ಲಿ ಮಾತನಾಡುವ ಉತ್ಸಾಹವಾಗಲಿ, ನೈತಿಕ ಧೈರ್ಯವಾಗಲಿ ಇರಲಿಲ್ಲ. ಏನೇನೊ ಬಡಬಡಿಸಿದೆ ಎನ್ನಿಸುತ್ತದೆ.
ಮುಂದಿನ ಮುಖ್ಯ ಸ್ಥಳ ಹೆಗ್ಗೋಡಿನ "ಚರಕ". ಅದ್ಭುತವಾದ ವಾತಾವರಣದಲ್ಲಿ ಹೆಣ್ಣುಮಕ್ಕಳ ಅಪ್ರತಿಮ ಆತ್ಮವಿಶ್ವಾಸವನ್ನು ಕಂಡೆ. ಸುಂದರವಾದ, ಸಮೃದ್ಧ ಪರಿಸರ. ತೀಕ್ಷ್ಣವಲ್ಲದ ಬಡತನ. ಇಲ್ಲದ ಅಥವ ಗೊತ್ತಾಗದ ಜಾತೀಯತೆ.
ಅದೇ ದಿನ ಸಾಗರ ಪಟ್ಟಣದಲ್ಲಿ ಅಲ್ಲಿಯ ಪತ್ರಕರ್ತರ ಸಂಘ ಏರ್ಪಡಿಸಿದ್ದ "ಧರ್ಮ, ರಾಜಕಾರಣ, ಸಂಸ್ಕೃತಿ"ಯ ಬಗೆಗಿನ ಸಂವಾದದಲ್ಲಿ ಪಾಲ್ಗೊಂಡಿದ್ದೆ. ಉತ್ತಮ ಕಾರ್ಯಕ್ರಮ. ಒಳ್ಳೆಯ ಪ್ರತಿಕ್ರಿಯೆ ಮತ್ತು ಪ್ರಶ್ನೆಗಳಿದ್ದವು.
ಮತ್ತೆ ಶಿವಮೊಗ್ಗ, ಅಲ್ಲಿಂದ ಮಾಗಡಿಯ ಕುಗ್ರಾಮಕ್ಕೆ (ವಯಾ ತುರುವೇಕೆರೆ-ಕುಣಿಗಲ್). ಜ್ವರ ಬಂದಿದ್ದ ಮಗಳ ಆರೈಕೆಯಲ್ಲಿ ಪಾಲು. ಮಗುವಿಗೆ ಮಾತ್ರೆ ತಿನ್ನಿಸಲೂ ಬರುವುದಿಲ್ಲ ಎಂಬ ಹೀಯಾಳಿಕೆ ಷಡ್ಡಕನಿಂದ! ಕೊನೆಗೆ ಮುದ್ದೆಯಲ್ಲಿ ಮಾತ್ರೆಯಿಟ್ಟು ಅವಳಿಗೆ ಗೊತ್ತಾಗದ ಹಾಗೆ ತಿನ್ನಿಸಿ ಸ್ವಲ್ಪ ನೆಮ್ಮದಿ ಪಡೆದುಕೊಂಡೆ.
ಇದು ಒಟ್ಟು ನಾಲ್ಕು ದಿನಗಳ ಸುತ್ತಾಟ.
ಮೂರನೆ ಪ್ರಯಾಣ: (ಮಾರ್ಚ್ 28 ರಿಂದ ಏಪ್ರಿಲ್ 2 ರವರೆಗೆ) ಬೆಂಗಳೂರು-ತಿಪಟೂರು-ಶಿವಮೊಗ್ಗ-ಭದ್ರಾವತಿ-ಉಡುಪಿ-ಕುಪ್ಪಳ್ಳಿ-ಶಿವಮೊಗ್ಗ-ಹಂಪಿ-ಸೊಂಡೂರು-ಚಿತ್ರದುರ್ಗದ ಬಳಿಯ ಹಳ್ಳಿ-ಬೆಂಗಳೂರು. ಒಟ್ಟು ಆರು ದಿನಗಳ ಸುತ್ತಾಟ.
ಉಳಿದುಕೊಂಡಿದ್ದ ಸ್ಥಳಗಳು- ಭದ್ರಾವತಿ, ಕುಪ್ಪಳ್ಳಿ, ಹಂಪಿ (ಎರಡು ರಾತ್ರಿ), ಹರ್ತಿಕೋಟೆ ಗ್ರಾಮ.
ಶಿವಮೊಗ್ಗದಲ್ಲಿ ಅನೌಪಚಾರಿಕ ಮಾತುಕತೆಗಳಿದ್ದವು. ಮಾರನೆ ದಿನ ಉಡುಪಿಯಲ್ಲಿ ಕರಾವಳಿ ಜನರ ತಲ್ಲಣಗಳನ್ನು ಕೇಳಿಸಿಕೊಂಡೆ. ನನ್ನ ಒಂದಷ್ಟು/ಬಹಳಷ್ಟು ಅನಿಸಿಕೆಗಳನ್ನು ಹಂಚಿಕೊಂಡೆ. ಭಯ ಹುಟ್ಟಿಸುವ ವಾತಾವರಣದಲ್ಲಿ ಅದನ್ನು ಎದುರಿಸಿ ನಿಲ್ಲುವ ಜನರ ನೈತಿಕ ಧೈರ್ಯವನ್ನು ಕಂಡೆ.
ವಾಪಸು ಬರುತ್ತ ದಾರಿಯಲ್ಲಿ ಮಲೆನಾಡಿನ ರುದ್ರ ರಮಣೀಯತೆನ್ನೂ, ಅಲ್ಲಿನ ಸಮೃದ್ಧಿಯನ್ನೂ, ಹಸಿರು ತುಂಬಿದ ಬೆಟ್ಟಗಳನ್ನೂ, ಆಗುಂಬೆಯ ದಾರಿಯಲ್ಲಿ ಕಾಣಿಸುವ ಕಣಿವೆಯನ್ನೂ, ಕುವೆಂಪುರವರ ಕವಿಶೈಲ-ನವಿಲುಗುಡ್ಡೆ-ಚಿಬ್ಬಲಗುಡ್ಡೆಯನ್ನೂ, ತಿರ್ಥಹಳ್ಳಿಯ ಮಲೆನಾಡು ಕ್ಲಬ್ ಅನ್ನೂ, ಶಿವಮೊಗ್ಗದ ಬಳಿಯ ತೋಟವೊಂದನ್ನೂ ನೋಡಿದೆ.
ಅಲ್ಲಿಂದ ಹಂಪಿಗೆ ರಾತ್ರಿ ಹನ್ನೆರಡವರೆಗೆ ಏಕಾಂಗಿ ಪ್ರಯಾಣ. ನಂತರ ನೋಡಿದ್ದು ಬಯಲುಸೀಮೆಯ ಬಡತನ, ಬಿಸಿಲ ಬೇಗೆ, ರಾತ್ರಿಗಳಲ್ಲಿ ಹೆಣ್ಣುಗಂಡು ಭೇದವಿಲ್ಲದೆ ಮನೆಯ ಹೊರಗೇ ಮಲಗಬೇಕಾದ ಅನಿವಾರ್ಯತೆ. ಹಂಪಿಯದೆ ಒಂದು ದೊಡ್ಡ ಕತೆ. ಅಲ್ಲಿಯ ಹಿರಿಯರೊಬ್ಬರು ನಾಟಿ ಕೋಳಿ ತರಿಸಿ ತಾವೆ ಅಡಿಗೆ ಮಾಡಿದ್ದರು. ಅವರಿಗೆ ಅದ್ಯಾವುದರ ಅವಶ್ಯಕತೆಯೇ ಇರಲಿಲ್ಲ. ಅದ್ಭುತವಾದ, ಮರೆಯಲಾಗದ ಆತಿಥ್ಯ. ಅಲ್ಲಿಯ ಪರಿಸರಕ್ಕೆ ಐಷಾರಾಮಿ ಅನ್ನಬಹುದು. ಮಾರನೆಯ ದಿನ ಹಂಪಿ ವಿಶ್ವವಿದ್ಯಾಲಯದಲ್ಲಿ ಅಲ್ಲಿಯ ಕುಲಪತಿಗಳ ಸಮ್ಮುಖದಲ್ಲಿ ಸುಮಾರು 30 ಜನ ಅಧ್ಯಾಪಕರೊಂದಿಗೆ ಕನ್ನಡ, ಕಂಪ್ಯೂಟರ್, ಅಂತರ್ಜಾಲ, ವಿಶ್ವವಿದ್ಯಾಲಯ ಮಾಡಬೇಕಾದ ಕೆಲಸಗಳ ಬಗ್ಗೆ ಮಾತು ಮತ್ತು ಸಂವಾದ. ಕುಲಪತಿಗಳೆಂದರು: "ಮೊನ್ನೆ ಅವರ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೆ. ನೆನ್ನೆ ನೋಡಿದೆ. ಇವತ್ತು ಕೇಳಿದೆ." ಈ ದಿನಕ್ಕೆ ಸರಿಯಾಗಿ ನಾಲ್ಕು ದಿನದ ಹಿಂದೆ (ಉಡುಪಿಯಲ್ಲಿ ಸಂವಾದ ಇದ್ದ ದಿನ) ನನಗೆ ರಾಜ್ಯಮಟ್ಟದ ಅಪಪ್ರಚಾರ ಸಿಕ್ಕಿತ್ತು! ಅಷ್ಟಾದರೂ ಯಾರೂ ಅದರಿಂದ ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಬೆಳೆಸಿಕೊಂಡಂತಿರಲಿಲ್ಲ.
ನಂತರ ಅದೇ ದಿನ ಸೊಂಡೂರಿನ ಗಣಿಗಳನ್ನು ನೋಡಲು ಹೋದೆ. ಭೀಕರ, ಭಯಾನಕ ರಸ್ತೆಗಳು. ಜೊತೆಗೆ ಬಂದ ಹಂಪಿಯ ವಿದ್ಯಾರ್ಥಿಗಳನ್ನು, ’ಇನ್ನೂ ಎಷ್ಟು ದೂರಾರಿ ಈ ನರಕ’ ಎಂದು ಕೇಳಿದರೆ ಇಲ್ಲೇ ಸಾರ್, ಅನ್ನುತ್ತಿದ್ದರು. ’ಯಾಕೆ, ಇಷ್ಟು ಕಿ.ಮಿ. ಎಂದು ಹೇಳಲು ಆಗುವುದಿಲ್ಲವೆ’ ಎಂದರೆ, ’ಹಾಗೆ ಹೇಳಿದರೆ ನೀವು ಎದೆಯೊಡೆಡು ಸಾಯ್ತೀರಿ.’ ಎಂದರು. ಅಷ್ಟು ಭೀಕರ ರಸ್ತೆಗಳು. ಸುಂದರ ಸೊಂಡೂರು ಬೋಳುಬೋಳಾಗಿ, ಕರ್ನಾಟಕದ ನರಕವಾಗಿ ಪರಿಣಮಿಸಿದೆ. ಸೊಂಡೂರಿನ ಬಳಿಯಿರುವ ಗುಲ್ಬರ್ಗ ವಿಶ್ವವಿದ್ಯಾಲಯದ PG ಕೇಂದ್ರಕ್ಕೂ ಭೇಟಿ ಕೊಟ್ಟಿದ್ದೆ. ಅಲ್ಲಿ ಯುವಕವಿಯೊಬ್ಬ ಹೇಳಿದ: "ಇಲ್ಲಿಯ ಹೊಲಗಳಲ್ಲಿ ಮೊದಲು ಎಲ್ಲೆಂದರಲ್ಲಿ ಡಿಗ್ ಮಾಡಿಸುತ್ತಿದ್ದರು. ಆಗ ಬೇರೆಕಡೆಗಳಿಂದ ಬಂದ ಬಡವಾತಿಬಡವರು ಟೆಂಟ್ ಹಾಕಿಕೊಂಡು ಇಲ್ಲಿ ಡಿಗ್ ಮಡುತ್ತಿದ್ದರು. ಅವರ ಮೈಯೆಲ್ಲಾ ಅದಿರು ತುಂಬಿರುತ್ತಿತ್ತು. ಒಮ್ಮೆ ಅಲ್ಲಿ ನಾವೊಂದಷ್ಟು ಮೇಷ್ಟ್ರುಗಳು ಹೋಗಿದ್ದೆವು. ಹುಡುಗನೊಬ್ಬ ಅಳುತ್ತಿದ್ದ. ಅವನ ಮೈಯೆಲ್ಲಾ ಅದಿರು. ಪರೀಕ್ಷಿಸಿ ನೋಡಿದರೆ ಅವನ ಶಿಶ್ನದಲ್ಲಿ ಅರ್ಧ ಇಂಚು ಅದಿರು ತುಂಬಿಕೊಂಡು ಮೂತ್ರ ಹೊಯ್ಯಲಾರದೆ ಗೊಳೋ ಅನ್ನುತ್ತಿದ್ದ."
ಅಲ್ಲಿಂದ ಚಿತ್ರದುರ್ಗ ಜಿಲ್ಲೆಯ ಹರ್ತಿಕೋಟೆ ಗ್ರಾಮಕ್ಕೆ ಬಂದೆ. ಬಹಳ ಹಳೆಯ, ಒಂದು ಕಾಲದಲ್ಲಿ ಒಳ್ಳೆಯ ನಾಗರಿಕತೆ ಇದ್ದಂತಹ ಊರು. ಅಲ್ಲಿ ಸರ್ಕಾರಿ ಅಧಿಕಾರಿಗಳನ್ನು ಮತ್ತು ಕಾಂಟ್ರಾಕ್ಟುದಾರರನ್ನು ಅವರ ಭ್ರಷ್ಟತೆ ಮತ್ತು ಅದಕ್ಷತೆಗಾಗಿ ಜನ ಹೀನಾಯವಾಗಿ ಹೀಯಾಳಿಸುತ್ತಿದ್ದದ್ದನ್ನು, ಪ್ರಶ್ನಿಸುತ್ತಿದ್ದದ್ದನ್ನು ಕಂಡೆ. ನಾನೂ ಪಾಲ್ಗೊಂಡೆ. ಆ ಊರಿನ ಜನರದ್ದೆ ಒಂದಷ್ಟು ತಪ್ಪುಗಳಿದ್ದವು. ಅದೇ ಊರಿನಲ್ಲಿ ಹಿಂದುಳಿದ ವರ್ಗದವರಿಗಾಗಿ ಕಟ್ಟುತ್ತಿರುವ ಹಾಸ್ಟೆಲ್‌ನ ಅತಿಕೆಟ್ಟ ಕಾಮಗಾರಿಯನ್ನೂ ಕಂಡೆ. ಉತ್ತರ ಭಾರತದ ಗಾರೆಯವನೊಬ್ಬ ಪ್ಲಾಸ್ಟರಿಂಗ್ ಮಾಡಲು ನಾಲ್ಕಿಂಚು ಸಿಮೆಂಟ್ ಮೆತ್ತುತ್ತಿದ್ದ. ಆ ಸಿಮೆಂಟ್ ಮಿಶ್ರಣದಲ್ಲಿ ಸಿಮೆಂಟ್ ಎಷ್ಟು ಅಪರೂಪವಾಗಿತ್ತೆಂದರೆ, ಅವನು ಅದನ್ನು ಗೋಡೆಗೆ ಬಡಿಯುತ್ತಿದ್ದರೆ ಅದು ಕೆಳಕ್ಕೆ ಬೀಳುತ್ತಿತ್ತು. ಅಲ್ಲಿದ್ದ ಇಟ್ಟಿಗೆಗಳೆಲ್ಲ "over burnt" ಇಟ್ಟಿಗೆಗಳು. ಅತೀ ಕಡಿಮೆ ದರ್ಜೆಯವು ಅವು.
ಅಲ್ಲಿಂದ ಊರಿಗೆ ವಾಪಸ್ಸು. ಬಿಸಿಲಿನಿಂದಾಗಿ, ಗಾಡಿ ಓಡಿಸಿದ ಕಷ್ಟದಿಂದಾಗಿ, ಅನಾಸಿನ್ ಒಂದು ತೆಗೆದುಕೊಂಡು ಮಲಗಿದಾಕ್ಷಣ 10+ ಗಂಟೆಗಳ ನಿದ್ರೆ ಬಂತು!
ಮೊದಲ ಪ್ರಯಾಣದಲ್ಲಿ ಒಂದರ್ಧ ನನ್ನದೆ ಚಾಲನೆ. ಉಳಿದ ಎರಡೂ ಧೀರ್ಘ ಓಡಾಟಗಳಲ್ಲಿ ನನ್ನೊಬ್ಬನದೆ ಡ್ರೈವಿಂಗ್. ಸುಮಾರು 2000 ಕಿ.ಮಿ. ಗಳ ಒಟ್ಟು ಪ್ರಯಾಣ, ಕಳೆದೆರಡು ವಾರಗಳಿಂದ. ಬಹುಶಃ ಸೊಂಡೂರಿನ 30-40 ಕಿ.ಮೀ. ಡ್ರೈವಿಂಗ್ ಮಿಕ್ಕೆಲ್ಲಕ್ಕೆ ಸಮ.
ಇದರ ಜೊತೆಗೇ, ಒಂದಷ್ಟು ಗಾಂಧಿವಾದಿಗಳು ನನ್ನ ತಾಲ್ಲೂಕಿಗೆ ಸಮೀಪದ ತಮಿಳುನಾಡಿಗೆ ಸೇರಿದ ಹಳ್ಳಿಯಲ್ಲಿ ನಡೆಸುವ ಆಶ್ರಮವೊಂದಕ್ಕೆ ಉಗಾದಿಯ ದಿನದಂದೆ ಭೇಟಿ ಕೊಟ್ಟಿದ್ದೆ. ಒಳ್ಳೆಯ ಮತ್ತು ಕೆಟ್ಟ ಅಭಿಪ್ರಾಯಗಳೆರಡನ್ನೂ ಮೂಡಿಸಿಕೊಂಡು ಬಂದೆ.
ಈ ಪ್ರಯಾಣದಲ್ಲಿ ಕಂಡಕಂಡೆಲ್ಲೆಲ್ಲ ವಿಡಿಯೊ ಹಿಡಿದಿದ್ದೇನೆ. ಮುಂದಿನ ವಾರದಿಂದ ಅವನ್ನು Youtube ಗೆ ಸೇರಿಸುತ್ತೇನೆ. ಎಲ್ಲವನ್ನೂ ಅವೇ ಹೇಳುತ್ತವೆ.
Apr 2, 2009
ಕರ್ನಾಟಕದೊಳಗೊಂದು ಸುತ್ತು - ಭೀಕರ, ಭಯ, ಪ್ರೀತಿ, ಬಡತನ, ಜಾತೀಯತೆ...
Subscribe to:
Post Comments (Atom)
No comments:
Post a Comment