Oct 28, 2008

ಅನುವಾದಿತ ಸಣ್ಣ ಕತೆ: ಒಂದು ಜಾಹಿರಾತು

- ತೆಲುಗು ಮೂಲ: ಶಿವಂ
(ಕೃಪೆ: ದಟ್ಸ್‌ತೆಲುಗು.ಕಾಂ)

[ಮೊದಲು (ಜುಲೈ 25, 2003) ದಟ್ಸ್‌ಕನ್ನಡ.ಕಾಮ್‌ನಲ್ಲಿ ಪ್ರಕಟವಾಗಿತ್ತು. ಈಗ ಇಲ್ಲಿ.]


"ಎಲ್ಲಿ ಒಂದು ನಗು ನಗಿ!" ದಿನಪತ್ರಿಕೆಯಲ್ಲಿನ ಒಂದು ಟೂತ್‌ಪೇಸ್ಟ್ ಜಾಹೀರಾತು ಕೇಳುತ್ತಿದೆ.

ನಗು! ಎಷ್ಟು ದಿನಗಳಾದವು ಅವನು ನಕ್ಕು! ಬಹುಶಃ ಹದಿನೈದು ವರ್ಷವಾದರೂ ಆಗಿರಬೇಕು. ಹೌದು. ಹದಿನೈದು ವರ್ಷಗಳು.

ಅವನಿಗೆ ಹದಿನೇಳು ಇದ್ದಾಗ ಶಾಲಾಮಾಸ್ತರ ಬಾಳೆಹಣ್ಣಿನ ಸಿಪ್ಪೆಯ ಮೇಲೆ ಜಾರಿ ಬಿದ್ದು ಬಿಟ್ಟ. ವೆಂಕಟರಾವು ಇರಬಹುದು, ಪಂಡಿತರನ್ನು ಹಿಡಿದು ನಿಲ್ಲಿಸಲು ಹೋದ. ಮಾಸ್ತರರು ಕ್ರೋಧದಿಂದ ವೆಂಕಟರಾವಿನ ಬೆನ್ನಿನ ಮೇಲೆ ಬೆತ್ತವನ್ನು ಚೂರು ಚೂರು ಮಾಡಿದ್ದರು. ಎಲ್ಲರೂ ನಕ್ಕಿದ್ದರಾಗ. ಅವನೂ ನಕ್ಕಿದ್ದ ಎಲ್ಲರ ಜೊತೆಗೆ. ಅವನ ಕಣ್ಣಲ್ಲಿ ನೀರು ತುಳುಕಿತ್ತು ಆ ನಗುವಿಗೆ.

ಅದೇ ಕೊನೆಯ ಸಾರಿ ನಕ್ಕಿದ್ದು ಗುರುತಿರುವುದು. ಆಮೇಲೆ ಅವನಿಗೆ ಈ ಪ್ರಪಂಚದಲ್ಲಿ ಏನನ್ನು ನೋಡಿ ನಗಬೇಕೊ ತಿಳಿದಿದ್ದಿಲ್ಲ. ಕಾಂಗ್ರೆಸ್‌ನವರು ಲಾಠಿಛಾರ್ಜ್‌ಗಳನ್ನು ತಿನ್ನುವುದನ್ನು ನೋಡಿದ. ಹೆಂಡತಿ ಮಕ್ಕಳನ್ನು ಬಿಟ್ಟು ಜೈಲಿನಲ್ಲಿ ಕೊಳೆಯುವುದನ್ನು ನೋಡಿದ. ಅನಾರೋಗ್ಯದಿಂದ ತನ್ನ ತಂದೆ ವೈದ್ಯೋಪಚಾರಕ್ಕೆ ಸಹ ಗತಿಯಿಲ್ಲದೆ ಬಾಧೆ ಪಡುತ್ತಾ ಸಾಯುವುದನ್ನು ನೋಡಿದ. ಬಂಗಾಳ ಬರಗಾಲದಲ್ಲಿ ಜನರು ಎಲೆಗಳನ್ನು ಆಯುತ್ತ ತಿನ್ನುವುದನ್ನು ನೋಡಿದ.

ಯಾರೂ ಆತನನ್ನು ಆ ದಿನಗಳಲ್ಲಿ ನಗು ಎಂದು ಕೇಳದೆ ಹೋದರು. ಕೊನೆಗೆ ಟೂತ್‌ಪೇಸ್ಟ್ ಕಂಪನಿಯವರೂ ಕೂಡಾ.

"ಆತನು ಯಾವಾಗಲೂ ನಗುತ್ತಲೇ ಇರುತ್ತಾನೆ." ಎನ್ನುತ್ತಿತ್ತು, ಎನ್ನುತ್ತಿದೆ ಈ ಟೂತ್‌ಪೇಸ್ಟ್ ಜಾಹೀರಾತು.

ಜಾಹೀರಾತಿನಲ್ಲಿನ ಚಿತ್ರದ ಮುಖ ಅವನ ಮುಖದ ಹಾಗೆ ಇಲ್ಲ. ಥೇಟು ಅವನ ಆಫೀಸರ್ ಮುಖದ ರೀತಿ ಶುಭ್ರವಾಗಿ, ನುಣ್ಣಗೆ ಇದೆ. ಅವನ ಆಫೀಸರ್ ಮುಖದ ಹಾಗೆ ನಗುತ್ತಾ ಇದೆ.

ಅವನ ಆಫೀಸರ್‌ಗೆ ಏಳು ನೂರು ರೂಪಾಯಿಗಳ ಸಂಬಳ. ಆಫೀಸಿಗೆ ಕಾರಿನಲ್ಲಿ ಬರುತ್ತಾರೆ. ಕಲ್ಲು-ಮಣ್ಣು ಇಲ್ಲದ ಅಚ್ಚ ಬಿಳಿಯ ಮಲ್ಲಿಗೆ ಹೂವಿನಂತಹ ಅಕ್ಕಿ ರೇಷನಿಂಗ್ ದಿನಗಳಲ್ಲಿ ಸಹ ಚೀಲಗಳಲ್ಲಿ ಅವರ ಮನೆಗೆ ಬರುತ್ತದೆ. ಅವರಿಗೆ ಕಾಯಿಲೆ ಬಂದರೆ ಡಿ.ಎಂ.ಓ ಮನೆಗೆ ಬಂದು ಸ್ವಯಂ ಔಷಧ ಕೊಟ್ಟು ಹೋಗುತ್ತಾನೆ. ಅವರು ಯಾವಾಗಲೂ ನಗುತ್ತಿರುತ್ತಾರೆ ಮತ್ತೆ.

"ಒಳ್ಳೆಯ ದಂತಪಂಕ್ತಿಯಿಂದ ನಗುವ ಆ ನಗು ಆರೋಗ್ಯ." ಮತ್ತೇ ಜಾಹಿರಾತು. ಅವನದು ಒಳ್ಳೆಯ ಹಲ್ಲುವರಸೆ. ಅವನಿಗೆ ಆರೋಗ್ಯ ಎಂದರೆ ಬಹಳ ಇಷ್ಟ . ಹದಿನೈದು ವರ್ಷದ ಹಿಂದೆ ನಗುತ್ತಿದ್ದ. ಮತ್ತೆ ನಕ್ಕು ಆರೋಗ್ಯವಾಗಿ ಇರೋಣ ಎಂದು ಅವನ ಉದ್ದೇಶ. ಆದರೆ ಅವನಿಗೆ ನಗು ಬರುತ್ತಿಲ್ಲ . ಎರಡನೇ ಪ್ರಪಂಚ ಯುದ್ಧ ಮುಗಿದ ತಕ್ಷಣ ನಗೋಣ ಎನ್ನಿಸಿತ್ತು ಅವನಿಗೆ. ಯುದ್ಧದಲ್ಲಿ ಗಂಡಂದಿರನ್ನು, ತಂದೆಯರನ್ನು ಕಳೆದುಕೊಂಡ ಅಮಾಯಕ ಜನರು ಜ್ಞಾಪಕ ಬಂದರು ಅವನಿಗೆ. ಅವರ ಶೋಕಗಳು ಅವನ ಕಿವಿಯಲ್ಲಿ ಗಿಂಗುರುಗುಟ್ಟಿದವು. ನಗಲಾರದೆ ಹೋದನು ಅವನು.

ಭಾರತ ದೇಶ ಸ್ವತಂತ್ರ ದೇಶ ಆಗಲಿದೆ ಎಂದರು. ತುಟಿಗಳು ಬಿರಿದವು. ಆನಂದದಿಂದ ಪ್ರಪಂಚ ಪ್ರತಿಧ್ವನಿಸುವ ಹಾಗೆ ಗಹಗಹಿಸಿ ನಗಬೇಕೆಂದು ಅವನ ಉದ್ದೇಶ. ಭಾರತ ಮಾತೆ ಎರಡು ಭಾಗಗಳಾಗಿ ಕತ್ತರಿಸಲ್ಪಟ್ಟಳು. ಹಿಂದೂಗಳು ಮುಸಲ್ಮಾನರನ್ನು, ಮುಸಲ್ಮಾನರು ಹಿಂದೂಗಳನ್ನು ಕತ್ತರಿಸುತ್ತ ಸಾಗಿದರು. ರಕ್ತ ಪ್ರವಾಹದಂತೆ ಹರಿಯಿತು. ಅವನ ತುಟಿಗಳು ವಿಷಾದಕರವಾಗಿ ಕೊಂಕು ತಿರುಗಿ ಮುದುರಿಕೊಂಡವು.

ಪ್ರಜಾಪ್ರಭುತ್ವವೆಂದರು. ತಿನ್ನುವುದಕ್ಕೆ ತಿಂಡಿ, ಇರುವುದಕ್ಕೆ ಮನೆ ಇರುತ್ತದೆ ಎಂದುಕೊಂಡನು ಅವನು. ಹೊಟ್ಟೆ ತುಂಬಾ ತಿಂದು, ಖಾಲಿಯಿದ್ದಾಗಲೆಲ್ಲ ತಣ್ಣನೆಯ ಅಂಗಳದ ಚಪ್ಪರದ ಕೆಳಗೆ ಕುಳಿತುಕೊಂಡು ಹೊಟ್ಟೆ ಬಿರಿಯುವ ಹಾಗೆ ತಾವೆಲ್ಲ ನಗುವುದೇ ಇನ್ನು ಮುಂದೆ ಎಂದುಕೊಂಡನು. ಬಂದಿತು ಅವರ ಪ್ರಭುತ್ವ. ಕೆರೆಯ ಬಳಿ ಗುಡಿಸಲಲ್ಲಿ ಇದ್ದ ರೌಡಿ ಸುಬ್ಬಯ್ಯ ತಮ್ಮನ್ನು ಆಳುವವರ ಗುಂಪಿಗೇರಿದ; ಕಿರುನಗೆ ನಗುತ್ತ ಸಾಗಿದ. ಇವನು ಇಲ್ಲಿಯವರೆಗೆ ಹಾಗೆ ಸಂಬಳ-ಜೀತ ಎನ್ನುತ್ತಾ, ಆರೋಗ್ಯ ಅನ್ನುತ್ತಾ, ಮುಕ್ಕುತ್ತ ಮುಲುಗುತ್ತಲೆ ಇದ್ದಾನೆ.

"ನಿರ್ಮಲವಾದ, ಶುಭ್ರವಾದ ಆ ಕಿರುನಗೆ ಈಗಲೇ ನಿಮ್ಮದಾಗುತ್ತದೆ." ಮಾತುಗಳು, ಒಣಮಾತುಗಳು. ನಿರ್ಮಲವಾದವು, ಶುಭ್ರವಾದವು ಯಾವೂ ತಮ್ಮದಲ್ಲ. ಕಿರುನಗೆ ಮಾತ್ರ ತಮ್ಮದು ಹೇಗೆ ಆಗುತ್ತದೆ? ಶುಭ್ರವಾದದ್ದೇನಾದರು ತಮಗೆ ಉಳಿದಿದ್ದರೆ ಅದು ಖಂಡಿತ ಮನಸ್ಸು ಮಾತ್ರವೆ. ಅದೂ ಕೂಡ ಉಳಿಯದೆ ಹೋಗಿದ್ದರೆ, ಎಂದೋ ಅವನು ನಕ್ಕಿರಬಹುದಿತ್ತು. ಸತ್ಯಕ್ಕಾಗಿ, ನ್ಯಾಯಕ್ಕಾಗಿ ಹೃದಯಕ್ಕೆ ಇಷ್ಟು ಬಾಧೆ ಏತಕ್ಕೆ ಕೊಡಬೇಕು?

ನಿರ್ಮಲವೂ, ಶುಭ್ರವೂ? ಏನ್ ಮಾತವು? ಆ ಮಾತುಗಳಿಗೆ ಅಸಲು ಅರ್ಥವೇ ಹೋಗಿದೆ ಅವನಿಗೆ. ಅವರು ಬಳಸುವ ತುಪ್ಪವೇ ಶುದ್ಧವಾದದ್ದಲ್ಲ. ತಾವು ತಿನ್ನುವ ತಿಂಡಿಕಾಳು ಪುಷ್ಠಿಕರವಾದುವು ಅಲ್ಲ. ತಮ್ಮ ಮಕ್ಕಳು ಕುಡಿಯುವ ಹಾಲು, ಮಜ್ಜಿಗೆ ಶುದ್ಧವಾದದ್ದಲ್ಲ. ತಾವು ಉಸಿರಾಡುವ ಗಾಳಿ ಶುಭ್ರವೇ, ನಿರ್ಮಲವೆ?

ಮನೆಗಳ ಹತ್ತಿರ ಕಾರ್ಖಾನೆಗಳು ಇರಬಾರದಂತೆ. ಅವನ ಮನೆಯ ಪಕ್ಕವೇ ಒಂದು ಕಾರ್ಖಾನೆ. ರಾತ್ರಿಯೆಲ್ಲಾ ಭುಕ್, ಭುಕ್, ಭುಕ್, ಭುಕ್ ಎಂದು ಒಂದೇ ಕೂಗು. ಬೆಳಿಗ್ಗೆ ಏಳುವಷ್ಟರಲ್ಲಿ ಅವನ ಮನೆಯ ತುಂಬಾ ಫ್ಯಾಕ್ಟರಿಯ ಕೆಟ್ಟಗಾಳಿಗೆ ಆ ಧೂಳು ಯಾವಾಗಲೂ ಹಾರುತ್ತಲೇ ಇರುತ್ತವೆ. ಕಣ್ಣಿಗೆ ಕಾಣದ ಆ ಧೂಳನ್ನು ಅವರು ಯಾವಾಗಲೂ ಒಳಗೆ ಕರೆಯುತ್ತಲೆ ಇರುತ್ತಾರೆ. ತಮ್ಮ ಆರೋಗ್ಯ ಸರಿಯಾಗಿ ಇರುವುದಿಲ್ಲ. ತಾವೆಂದೂ ಕಿರುನಗೆ ನಗುವುದಿಲ್ಲ.

ಅಸಲಿಗೆ, ಪದಗಳಿಗೆ ಬೆಲೆಯೇ ಹೋಗಿದೆ. ‘ಶುಭ್ರವೂ’, ‘ನಿರ್ಮಲವೂ’ ಎಂಬ ಎರಡು ಪದಗಳಿಗೇ ಅಲ್ಲ. ಬಹಳ ಪದಗಳಿಗೆ. ‘ದಯೆ’, ‘ಸತ್ಯ’, ‘ನೀತಿ’, ‘ವಿಚಕ್ಷಣೆ’, ‘ವಿವೇಕ’, ‘ನ್ಯಾಯ’ ಮೊದಲಾದ ಪದಗಳು ಅಸಲಿಗೆ ಮುಗ್ಗು ಹಿಡಿದುಹೋಗಿವೆ. ರಾಜಕಾರಣಿಗಳು ಚುನಾವಣೆಗಳಿಗೆ ಮೊದಲು ಪ್ರಚಾರಕ್ಕೆ ಉಪಯೋಗಿಸುವ ಆಯುಧಗಳವು ವರ್ತಮಾನದಲ್ಲಿ. ಚುನಾವಣೆ ಮುಗಿದಾಕ್ಷಣವೆ ಈ ಪದಗಳು ಅವರ ಸ್ವಂತ ಆಸ್ತಿಗಳ ಹಾಗೆ ಭದ್ರವಾಗಿ ಮುಚ್ಚಿಡಲ್ಪಡುತ್ತವೆ. ಹೇಗೆ ನಗು ಬರುತ್ತದೆ ಅವನಿಗೆ? ಹೇಗೆ ಅವನದಾಗುತ್ತದೆ ಆ ನಗು?

"ಹೇಗೆ ಎನ್ನುವಿರಾ? ಇಂದೇ ಯಾವ ಅಂಗಡಿಯಲ್ಲಾದರೂ ಕೇಳಿ..."

ಬಹಳ ತಾಳ್ಮೆ ಈ ವಿದೇಶಿ ವ್ಯಾಪಾರಿಗಳಿಗೆ. ತಮ್ಮಂತಹ ಮೂಢರಿಗೆ ಅಪಾರವಾದ ವಿಜ್ಞಾನದಿಂದ ಕಿರುನಗೆಯನ್ನು ಕೊಳ್ಳುವುದನ್ನು ಕಲಿಸುತ್ತಾರೆ. "ನಮ್ಮ ಹೊಟ್ಟೆ ಸುಡುತ್ತಿವೆ. ನಮ್ಮ ದೇಶವನ್ನು ಗೆದ್ದಲುಹುಳುಗಳು ಹಿಂಡಿ ಹಿಪ್ಪೆ ಮಾಡುತ್ತಿವೆ. ನಿಮಗೇನಾದರು ತಿಳಿದರೆ ನಮ್ಮ ದೇಶದಿಂದ ಗೆದ್ದಲುಹುಳುಗಳನ್ನು ನಿವಾರಿಸುವುದನ್ನು ತಿಳಿಸಿಕೊಡಿ. ನಮ್ಮ ಹೊಟ್ಟೆ ಉರಿ ಆರುವ ಮಾರ್ಗ ಹೇಳಿ. ನಮ್ಮ ದೇಶವನ್ನು ಸಾರವಂತ ಮಾಡಿಕೊಳ್ಳುತ್ತೇವೆ." ಎಂದು ಕೇಳಿದರೆ ಒಂದು ಟೂತ್‌ಪೇಸ್ಟ್ ಕಿರುನಗೆಯನ್ನು ಬಿಡುತ್ತಾರೆ. "ನಿಮ್ಮ ದೇಶದ ಸಂಪತ್ತು ನಮಗೆ ಬೇಕು." ಅನ್ನರು. "ಆನಂದವೇ ಆರೋಗ್ಯ! ಆನಂದಕ್ಕೆ ಚಿಹ್ನೆ ಈ ಕಿರುನಗೆ. ಎಲ್ಲಿ, ಕೊಳ್ಳಿರಿ, ನಗುತ್ತಿರಿ." ಅಂತಾರೆ.

ಹೇಗೆ ಕೊಳ್ಳುವುದು ಆ ಟೂತ್‌ಪೇಸ್ಟು? ಹೇಗೆ ನಗುವುದು ಆ ನಗು? ಅವನ ಸಂಬಳ 72 ರೂಪಾಯಿಗಳು. ಅವನ ತಾಯಿಗೆ ಮುವ್ವತ್ತೆರಡು ಹಲ್ಲುಗಳು. ಅವನ ಹೆಂಡತಿ ಸೀರೆ ಉಡುತ್ತಾಳೆ. ಅವನ ತಮ್ಮ ಶಾಲೆಯಲ್ಲಿ ಫೀಸು ಕಟ್ಟುತ್ತಿದ್ದಾನೆ. ಅವನಾ? ಅವನು! ನಗಬೇಕಿನಿಸುತ್ತದೆ ಆದರೆ ಶಕ್ತಿಯಿಲ್ಲದೆ ಹೋಗಿದೆ.

"ಚಿಕ್ಕ ಟ್ಯೂಬು ಹದಿನೆಂಟಾಣೆ ಮಾತ್ರವೆ." ಕೈನಿಂದ ಜಾರಿಬಿದ್ದ ಪತ್ರಿಕೆಯಲ್ಲಿನ ಜಾಹಿರಾತು ಕೆಳಗೆ ಬಿದ್ದರೂ ಕೂಡ ಚೀರುತ್ತಿದೆ. ಹದಿನೆಂಟಾಣೆ ಮಾತ್ರವೆ! ಈ ‘ಮಾತ್ರವೆ’ ಎನ್ನುವ ಪದವೆ ಬಹಳ ಚೆನ್ನಾಗಿದೆ. ಎರಡು ವರ್ಷದಿಂದ ‘ಮಾತ್ರವೆ’ ಅವನು ಚಪ್ಪಲಿ ಸಹಾ ಇಲ್ಲದೆ ನಡೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ಹಿರೋಷಿಮಾ ನಾಗಸಾಕಿಗಳ ಮೇಲೆ ‘ಮಾತ್ರವೆ’ ಅಣುಬಾಂಬುಗಳನ್ನು ಸುರಿಯಲಾಗಿದೆ. ಕೊರಿಯಾದಲ್ಲಿ ಯುದ್ಧ 12 ತಿಂಗಳಿನಿಂದ ‘ಮಾತ್ರವೆ’ ಜರುಗುತ್ತಿದೆ. ಆಂಧ್ರದ ಜನರಿಗೆ ತಿಂಡಿಕಾಳಿನ ಬರ ಐದು ವರ್ಷದಿಂದ ‘ಮಾತ್ರವೆ’. ಭಾರತದೇಶದಲ್ಲಿ ಜೀವನ್ಮೃತರು ಹೊಸಾ ಲೆಕ್ಕದ ಪ್ರಕಾರ 37 ಕೋಟಿ ‘ಮಾತ್ರವೆ’.

ನಗಬಹುದಾದವರು ಇನ್ನು ನಗಬಹುದು!

ನಂಜನಗೂಡಿನಲ್ಲಿ ನಿಗೂಢ ರಾತ್ರಿ

(KKNC ಯ 2005 ರ ಸ್ವರ್ಣಸೇತುವಿಗೆ ಬರೆದಿದ್ದ ಲೇಖನ. ಬ್ಲಾಗ್‌ಗೆ ಏರಿಸುತ್ತಿದ್ದೇನೆ.)

ಮೊನ್ನೆ (2005 ರ) ಜೂನ್‌ನಲ್ಲಿ ಹೆಂಡತಿ ಮತ್ತು ಮಗುವಿನೊಂದಿಗೆ ಭಾರತದ ಪ್ರವಾಸ ಹೋಗಿದ್ದಾಗ ಸುಮಾರು ನಾಲ್ಕು ವಾರಗಳನ್ನು ನನ್ನದೇ ತರಲೆ ತಾಪತ್ರಯಗಳಲ್ಲಿ, ಬರಬಾರದ, ಬಯಸಬಾರದ ಅನುಭವ ಮತ್ತು ಕಷ್ಟಗಳಲ್ಲಿ ಕಳೆದೆ. ಒಳ್ಳೆಯ ಸಮಯ ಇರಲೇ ಇಲ್ಲ ಅಂತಲ್ಲ; ಬೆಲ್ಲಕ್ಕಿಂತ ಬೇವೇ ಹೆಚ್ಚಿತ್ತು. ಹಾಗಾಗಿ, ಉಳಿದ ಒಂದು ವಾರದಲ್ಲಾದರೂ ಒಂದೆರಡು ದಿನ ಮನೆಯವರೆಲ್ಲರ ಜೊತೆ ಎಲ್ಲಾದರೂ ಹೋಗಿಬರೋಣ ಎಂದು ಶನಿವಾರ ಮಧ್ಯಾಹ್ನ ನಮ್ಮ Scorpio ವ್ಯಾನಿನಲ್ಲಿ ಅಮ್ಮ, ಅಣ್ಣ, ಅತ್ತಿಗೆ, ಅಣ್ಣನ ಇಬ್ಬರು ಮಕ್ಕಳು, ನನ್ನ ಹೆಂಡತಿ ಮತ್ತು ನನ್ನ ಒಂಬತ್ತು ತಿಂಗಳ ಮಗುವಿನೊಂದಿಗೆ ಮೈಸೂರಿನತ್ತ ಹೊರಟೆವು; ಯಾವುದೇ ಪೂರ್ವಸಿದ್ದತೆಗಳಿಲ್ಲದೆ. ಬೆಂಗಳೂರು ಹೊಸೂರು ರಸ್ತೆಯಲ್ಲಿರುವ ನನ್ನ ಊರಾದ ಬೊಮ್ಮಸಂದ್ರದಿಂದ ಹೊರಟು ಬೆಂಗಳೂರಿನ ಟ್ರಾಫಿಕ್ ಅನ್ನು ಭೇದಿಸಿಕೊಂಡು ಮೈಸೂರು ರಸ್ತೆ ಸೇರುವಷ್ಟರಲ್ಲಿ ನಮಗೆಲ್ಲಾ ಸಾಕುಸಾಕಾಗಿತ್ತು. ಡಬಲ್ ರೋಡ್ ಆಗುತ್ತಿರುವ ಆ ರಸ್ತೆಯಲ್ಲಿ ವೇಗ ನಿಧಾನಗಳನ್ನು ಅರ್ಥಮಾಡಿಕೊಳ್ಳುತ್ತ ರಾಮನಗರ ದಾಟಿ, ನಾಗೇಗೌಡರ ಪ್ರಸಿದ್ಧ ಜಾನಪದ ಲೋಕದ ಬಳಿಯ ಕಾಮತ್ ಲೋಕರುಚಿಯಲ್ಲಿ ಊಟಕ್ಕೆ ನಿಲ್ಲಿಸಿದೆವು. ಶುಚಿರುಚಿಯ ಜೋಳದ ರೊಟ್ಟಿ ಊಟ. ಮೈತೂಕ ಒಂದೆರಡು ಕೇಜಿ ಹೆಚ್ಚಾಯಿತೇನೋ! ಭಾರವಾದ ಮೈಯಿಂದಲೇ ನಿಧಾನಕ್ಕೆ ಜಾನಪದ ಲೋಕ ಸಂದರ್ಶಿಸಿದೆವು. ನೆನ್ನೆ ಮೊನ್ನೆಯ ಜೀವನ ಶೈಲಿ, ದಿನಬಳಕೆಯ ವಸ್ತುಗಳು ವಸ್ತು ಸಂಗ್ರಹಾಲಯ ಸೇರುತ್ತಿರುವ ವೇಗ ಹಾಗೂ ಬದಲಾಗುತ್ತಿರುವ ಪ್ರಪಂಚದ ದೃಷ್ಟಾಂತ ಈ ಜಾನಪದ ಲೋಕ ಎನ್ನಿಸಿತು.

ಇಲ್ಲಿಂದ ಹೊರಟ ನಮ್ಮ ವಾಹನ ಮುಂದೆ ನಿಂತದ್ದು ಶ್ರೀರಂಗಪಟ್ಟಣದ ಶ್ರೀರಂಗನ ದೇವಸ್ಥಾನದ ಪಕ್ಕದಲ್ಲಿಯೇ ಟಿಪ್ಪು ಕಟ್ಟಿಸಿರುವ ಬಂದೀಖಾನೆಯ ಮುಂದೆ, ಕಾವೇರಿಯ ದಡದಲ್ಲಿ. ಅಲ್ಲಿಂದ ಕಾವೇರಿ ನದಿ, ಅದರ ಮೇಲೆ ಕಟ್ಟಿರುವ ಬಸ್ಸು ರೈಲುಗಳ ಸೇತುವೆಗಳು, ಬೆಂಗಳೂರಿನತ್ತ ಹೊರಟಿದ್ದ ಉದ್ದದ ರೈಲು ವೀಕ್ಷಿಸಿ, ಕೆಂಡದ ಮೇಲೆ ಸುಟ್ಟು, ನಿಂಬೆ ರಸ, ಉಪ್ಪುಮೆಣಸು ಸವರಿದ ಜೋಳವನ್ನು ಮೆಲ್ಲುತ್ತಾ ದೇವಸ್ಥಾನದ ಕಡೆ ಹೊರಟೆವು. ಅಲ್ಲಿ ಕಂಡದ್ದು ಈ "ರಾಮು", ದೈತ್ಯ ಕುದುರೆ. ಇಪ್ಪತ್ತು ರೂಪಾಯಿಗೆ ನೂರಿನ್ನೂರು ಮೀಟರ್ ಸವಾರಿ. ಸರಿ ಎಂದು ಹತ್ತಿ ಕುಳಿತೆ. ಸವಾರಿ ಯಾವಾಗ ಮುಗಿಯುತ್ತದೆಯೋ ಎನ್ನುವಷ್ಟು ಹಿಂಸೆ, ಭಯ ಆಯಿತು. ಲಾಭ ಏನೆಂದರೆ ಅದು ನಡೆಯುತ್ತಿದ್ದಾಗ ಮೇಲೆ ಕುಳಿತಿದ್ದ ನನ್ನ ದೇಹ ಎಗರಿ ಎಗರಿ ಹೊಟ್ಟೆಗೆ ತೀಕ್ಷ್ಣವಾದ ವ್ಯಾಯಾಮ ಮತ್ತು ನಾನೇನಾದರೂ ಕುದುರೆ ಸವಾರಿ ಕಲಿಯಬೇಕಾದರೆ ಬಹುಶಃ ಇತರರಿಗಿಂತ ಹೆಚ್ಚೇ ಶ್ರಮ, ಅಭ್ಯಾಸ ಬೇಕು ಎಂಬ ಜ್ಞಾನೋದಯ.

ವಿರಾಮವಾಗಿ ದೇವಸ್ಥಾನ ನೋಡಿಕೊಂಡು ಆಚೆ ಬರುವಷ್ಟರಲ್ಲಿ ಇನ್ನೊಂದರೆ ತಾಸಿನಲ್ಲಿ ಕತ್ತಲಾಗುವ ಹಾಗೆ ಕಾಣಿಸಿತು. ಆದ್ದರಿಂದ ಬೇಗ ಕನ್ನಂಬಾಡಿ ಸೇರಿಕೊಳ್ಳುವ ಧಾವಂತದಲ್ಲಿ ಹೊರಟು ಅಲ್ಲಿಗೆ ತಲುಪಿ, ಹೊಸದಾಗಿ ಅಣೆಕಟ್ಟೆಯ ಕೆಳಗೇ ಮಾಡಿರುವ ವಾಹನ ನಿಲ್ದಾಣದಲ್ಲಿ ಗಾಡಿ ನಿಲ್ಲಿಸಿ, ತುಂತುರು ಮಳೆಯಲ್ಲಿ ಸಂಗೀತ ಕಾರಂಜಿಯತ್ತ ಹೊರಟೆವು. ಸುಮಧುರ, ಲಾಲಿತ್ಯ ಪೂರ್ಣ, ರಭಸಮಯ ಸಂಗೀತ; ಅದಕ್ಕೆ ತಕ್ಕಂತೆ ಮೈನುಲಿಯುವ, ಬಣ್ಣ ಬಣ್ಣದ ನೀರ್‌ಕಾರಂಜಿ. ದೋಣಿಯಲ್ಲಿ ಕಾರಂಜಿಯ ದಡದಿಂದ ಬೃಂದಾವನದ ದಡಕ್ಕೆ ಬಂದು ಅರೆಬರೆ ವಿದ್ಯುತ್ ಬೆಳಕಿನಲ್ಲಿ ಬೃಂದಾವನ ವೀಕ್ಷಿಸಿದೆವು. ಏನೇ ಹೇಳಿ, ಹಗಲು ಹೊತ್ತಿನಲ್ಲಿ ಕಾಣುವ ಆ ಉದ್ಯಾನವನದ ಸೌಂದರ್ಯ, ಬೆಡಗು, ವೈಶಾಲ್ಯತೆ, ಹಸಿರುಹುಲ್ಲು, ಬಣ್ಣಬಣ್ಣದ ಹೂವುಗಳ ವೈಭವ ರಾತ್ರಿಯ ವಿದ್ಯುತ್ ಬುಡ್ಡಿ ದೀಪಗಳ ಬೆಳಕಿನಲ್ಲಿ ಕಾಣುವುದಿಲ್ಲ.

ಬೃಂದಾವನದಿಂದ ಪಾರ್ಕಿಂಗ್ ಲಾಟ್‌ನತ್ತ ಬರುತ್ತಿದ್ದಾಗ ಅಲ್ಲಿ ಕಾಣಿಸಿದ ಆತ; ಎಂಟು ಅಡಿಯ ಲಂಬೂಜಿ. ಜನ ಅವನ ಪಕ್ಕ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದರು. ನನಗಿಂತ ಎರಡಕ್ಕೂ ಹೆಚ್ಚು ಅಡಿ ಎತ್ತರದವನು. ಅವನ ಪಕ್ಕ ನಿಂತ ಎಲ್ಲರೂ ಕುಬ್ಜರಾಗೇ ಕಾಣಿಸುತ್ತಿದ್ದರು. ಬಹುಶಃ ಪ್ರವಾಸೋದ್ಯಮ ಇಲಾಖೆಯವರು ನಿಲ್ಲಿಸಿರಬಹುದು. ಕನ್ನಡದವನೇ. ನಾನೂ ಹೋಗಿ ಅವನ ಪಕ್ಕ ನಿಂತು, ತಬ್ಬಿಕೊಂಡು ಮಾತನಾಡಿಸಿ ಬಂದೆ. ತಕ್ಷಣಕ್ಕೆ ಜ್ಞಾಪಕಕ್ಕೆ ಬಂದಿದ್ದು ಅಂದಿಗೆ ಎರಡು ಮೂರು ದಿನದ ಹಿಂದೆಯಷ್ಟೇ ಪ್ರಜಾವಾಣಿಯಲ್ಲಿ ಬಂದಿದ್ದ ಒಂದು ಫೋಟೊ. ಆಂಧ್ರಪ್ರದೇಶದ ಮುಖ್ಯಮಂತ್ರಿ ಡಾ. ರಾಜಶೇಖರ ರೆಡ್ಡಿಯವರ ಜೊತೆ ನಿಂತು ಫೋಟೊ ತೆಗೆಸಿಕೊಂಡಿದ್ದ ಎಂಟೂವರೆ ಅಡಿಯ ಇನ್ನೊಬ್ಬ ಲಂಬೂಜಿಯ ಚಿತ್ರ; ಆಕಾಶ ನೋಡುವಂತೆ ತಲೆ ಎತ್ತಿದ್ದ ರೆಡ್ಡಿ, ಮಗುವನ್ನು ನೋಡುವಂತೆ ಕೆಳಗೆ ನೋಡುತ್ತಿದ್ದ ಲಂಬೂ.

ಅಲ್ಲಿಂದ ಒಂದೈವತ್ತು ಅಡಿಗಳ ದೂರದಲ್ಲಿ ಮತ್ಸ್ಯಾಲಯಕ್ಕೆ ಹೋಗುವ ದಾರಿಯ ಪಕ್ಕದಲ್ಲಿದ್ದ ಮೀನು ಕಬಾಬ್ ಹೋಟೆಲಿನ ಮುಂದೆ ನಾನು ಮತ್ತೆ ನನ್ನಣ್ಣ ಕುಳಿತು, ಮಕ್ಕಳು ಹೆಂಗಸರೆಲ್ಲಾ ಮತ್ಸ್ಯಾಲಯ ವೀಕ್ಷಿಸಲು ಹೋಗಿದ್ದರೆ, ಚೆನ್ನಾಗಿ ಉಪ್ಪುಖಾರ ಬೆರೆಸಿ ಕರಿದಿದ್ದ ಮೀನುಗಳ ಮುಳ್ಳನ್ನು ನಿಧಾನವಾಗಿ ಬಿಡಿಸುತ್ತ, ನಮ್ಮ ಜಠರದಲ್ಲಿ ಮತ್ಸ್ಯಗಳಿಗೆ ಆಲಯ ಮಾಡಿಕೊಡುತ್ತ, ಲಂಬೂಜಿಗಳ ಕಷ್ಟಸುಖ ಯೋಚಿಸುತ್ತ ಕುಳಿತೆವು. ಆರೂಕಾಲು ಅಡಿಯ ಬಸ್ಸುಗಳಲ್ಲಿ ಈ ಎಂಟು ಅಡಿಯ ಜನರು ನಿಲ್ಲುವ ಬಗೆ, ಕುಳಿತುಕೊಳ್ಳುವ ಕಷ್ಟ, ಕಾರು ಜೀಪುಗಳಲ್ಲಿ ಮುಂದಿನ ಸೀಟಿನಲ್ಲಿಯೇ ಕೂರಬೇಕಾದ, ಇಲ್ಲವೆ ಹಿಂದಿನ ಸೀಟಿನ ತುಂಬಾ ಒರಗಿ ಕೂರಬೇಕಾದ ಕಷ್ಟದ ಬಗ್ಗೆ, ಮತ್ತಿತರ ನಮಗೆ ಗೊತ್ತಿಲ್ಲದ, ಗೊತ್ತಾಗದ ವಿಚಾರಗಳ ಬಗ್ಗೆ ಲಂಬೂಜಿಯನ್ನು, ಆತನನ್ನು ಮಾತನಾಡಿಸುತ್ತಿದ್ದ ಜನರನ್ನು ಗಮನಿಸುತ್ತ ಮಾತನಾಡಿಕೊಂಡೆವು. ಜೀವನ ಎಷ್ಟು ವಿಸ್ಮಯ, ಅಲ್ಲವೇ?

ಅಷ್ಟೊತ್ತಿಗೆ ಒಂಬತ್ತರ ಮೇಲಾಗಿತ್ತು. ಆದಷ್ಟು ಬೇಗ ನಂಜನಗೂಡು ಸೇರಿಕೊಳ್ಳುವ ಧಾವಂತ. ಮೈಸೂರಿನ ಉತ್ತರಕ್ಕಿರುವ ಕನ್ನಂಬಾಡಿಯಿಂದ ದಕ್ಷಿಣಕ್ಕಿರುವ ನಂಜನಗೂಡಿನತ್ತ ರಾತ್ರಿಯ ಊಟ ಸಹ ಮಾಡದೆ, ಮೈಸೂರಿನ ಒಳಗೆ ದಾರಿ ಕೇಳುತ್ತಾ, ನಂಜನಗೂಡಿನ ದೇವಸ್ಥಾನ ಮುಟ್ಟುವಷ್ಟಕ್ಕೆ ಹತ್ತರ ಮೇಲಾಗಿತ್ತು. ದೇವಸ್ಥಾನದ ಪಕ್ಕದಲ್ಲಿದ್ದ ಛತ್ರದಲ್ಲಿ ಜನಜಂಗುಳಿ. ಯಾವುದೇ ಕೊಠಡಿಗಳನ್ನು ಮುಂಚೆಯೇ ಕಾದಿರಿಸದೇ ಭಂಡ ಧೈರ್ಯದಿಂದ ಹೆಂಗಸರು ಮತ್ತು 7, 4 ಮತ್ತು ಮುಕ್ಕಾಲು ವರ್ಷ ವಯಸ್ಸಿನ ಹೆಣ್ಣು ಮಕ್ಕಳೊಂದಿಗೆ ರೂಮು ವಿಚಾರಿಸಲು ಹೋದಾಗ "ನೋ ವೇಕೆನ್ಸಿ." ನಮಗೆ ನಂಜಿನ, ನಂಜುಂಡ ಅನುಭವ. ಮದುವೆ ಸೀಸನ್ ಬೇರೆ; ವಾರಾಂತ್ಯ ಬೇರೆ ಸಾಲದ್ದಕ್ಕೆ. ಪಟ್ಟಣದ ಒಳಗಿರುವ ಇತರ ನಿವಾಸ, ವಿಲಾಸಗಳಲ್ಲೆಲ್ಲ ಇದೇ ಉತ್ತರ. ಮೈಸೂರು ರಸ್ತೆಯಲ್ಲಿನ ಹೊಯ್ಸಳದಲ್ಲಿಯೂ ಅದೇ ಉತ್ತರ. ಹನ್ನೊಂದಾಗುತ್ತ ಬಂದಿತ್ತು. ಇನ್ನೇನು ಮೈಸೂರಿಗೇ ಹೋಗೋಣ ಎಂದು ಒಂದು ಲಾಡ್ಜಿನ ಮುಂದೆ ನಿಂತು ಯೋಚಿಸುತ್ತಾ ಇದ್ದಾಗ, "ಊಟಿ ಕಡೆಗೆ ಹೋಗುವ ರಸ್ತೆಯಲ್ಲಿ ಒಂದೆರಡು ಕಿಲೋಮೀಟರ್ ಹೋದರೆ ವಿದ್ಯಾನಗರದಲ್ಲಿ ಒಂದು ಲಾಡ್ಜ್ ಇದೆ. ಅಲ್ಲಿ ಪ್ರಯತ್ನಿಸಿ," ಅಂದರು ಒಬ್ಬರು. ಸರಿ, ಕೊನೆಯ ಪ್ರಯತ್ನ ಎಂದು ಹೊರಟೆವು.

ಅವರು ಹೇಳಿದ ಹೆಸರಿನ ಲಾಡ್ಜ್ ಹುಡುಕುತ್ತಾ ಹೊರಟ ನಮಗೆ ಸಿಕ್ಕಿದ್ದು ಇತ್ತೀಚಿಗೆ ತಾನೆ ಹೆಸರು ಬದಲಾಯಿಸಿಕೊಂಡ, ಹೊಸದಾಗಿ ಸುಣ್ಣ ಬಳಿಸಿಕೊಂಡಿದ್ದ ಲಾಡ್ಜ್. ನಮ್ಮ ಅದೃಷ್ಟಕ್ಕೆ ಅಲ್ಲಿ ಮೂರ್ನಾಲ್ಕು ರೂಮುಗಳಿದ್ದವು. ತಲಾ 150 ರೂ. ಊರಿನ ಹೊರಗಿದ್ದ, ಸುತ್ತಮುತ್ತ ಅಷ್ಟೇನೂ ಮನೆಗಳಿಲ್ಲದ, ಸ್ವಲ್ಪ ಭಯ ಹುಟ್ಟಿಸುವ ವಾತಾವರಣವಿದ್ದರೂ, ಬೇರೆ ಯೋಚಿಸದೆ ಮೂರು ರೂಮುಗಳನ್ನು ತೆಗೆದುಕೊಂಡೆವು. ಅಷ್ಟೊತ್ತಿಗೆ ನಮ್ಮಲ್ಲಿ ಒಂದಿಬ್ಬರಿಗೆ ಹಸಿವಿನ ಪರಿವೆ ಆಯಿತು. ಅಲ್ಲಿ ತಿಂಡಿಯ ಹೋಟೆಲ್ ಇಲ್ಲದ್ದರಿಂದ ರೂಮುಗಳನ್ನು ಸಹ ನೋಡದೆ ಮತ್ತೆ ನಂಜನಗೂಡಿಗೆ ಹೂರಟೆವು. ಬಾರುಗಳು ಮಾತ್ರ ತೆರೆದಿದ್ದವು. ಯಾವುದೋ ಒಂದು ಜಾಗದಲ್ಲಿ ಬೇಕರಿ ಮತ್ತು ಒಂದು ಸಣ್ಣ ಹೋಟೆಲ್ ಇನ್ನೇನು ಮುಚ್ಚುವ ಗಡಿಬಿಡಿಯಲ್ಲಿದ್ದವು. ಆದರೂ ಅದು ಹೇಗೋ ಇನ್ನೂ ಬಿಸಿಯಾಗಿದ್ದ ತಟ್ಟೆ ಇಡ್ಲಿ, ರುಚಿಯಾಗಿದ್ದ ಚಟ್ನಿ ಇನ್ನೂ ರುಚಿ ಎನ್ನಿಸಿದವು. ಚಿಕ್ಕ ಮಗುವಿಗೆ ಅಲ್ಲೇ ಸ್ವಲ್ಪ ಹಾಲು ಕಾಯಿಸಿಕೊಂಡು ಲಾಡ್ಜಿಗೆ ಹಿಂದಿರುಗಿದಾಗ ಮಧ್ಯರಾತ್ರಿ.

ಮೊದಲ ಸಲ ಹೋಗಿದ್ದಾಗ ಚೆನ್ನಾಗಿಯೇ ಇದ್ದ ಲಾಡ್ಜಿನ ಮ್ಯಾನೇಜರ್ ಗಿರಾಕಿ ಸಿಕ್ಕ ಖುಷಿಯಲ್ಲಿ ಅಷ್ಟೊತ್ತಿಗೆ ಸರ್ವರೋಗಗಳಿಗೆ ಮದ್ದಾದ ಸಾರಾಯಿ ಪರಮಾತ್ಮನನ್ನು ಹೊಟ್ಟೆಯಲ್ಲಿ ಭದ್ರಪಡಿಸಿಟ್ಟುಕೊಂಡದ್ದು ಗೊತ್ತಾಯಿತು. ಹಾಳಾಗಿ ಹೋಗಲಿ ಎಂದು ಒಂದು ರೂಮಿನಲ್ಲಿ ಅಣ್ಣ ಅತ್ತಿಗೆ, ಮತ್ತೊಂದರಲ್ಲಿ ನಮ್ಮಮ್ಮ, ಅಣ್ಣನ ಚಿಕ್ಕ ಮಕ್ಕಳು, ಮಗದೊಂದರಲ್ಲಿ ನಾನು, ನನ್ನಾಕೆ ಮತ್ತು ನಮ್ಮ ಒಂಬತ್ತು ತಿಂಗಳ ಮಗು ಮಲಗಲು ಸಿದ್ದತೆ ಮಾಡಿಕೊಂಡೆವು. ಆಗ ಬಂದ ಕುಡುಕ ಮ್ಯಾನೇಜರ್ ಹೊರಗೆ ನಿಲ್ಲಿಸಿದ್ದ ನಮ್ಮ ಸ್ಕಾರ್ಪಿಯೊ ವಾಹನವನ್ನು ಒಳಗೆ ನಿಲ್ಲಿಸಲು ಹೇಳಿದ. ಅಲ್ಲಿ ಇದ್ದದ್ದೆ ಏಳೆಂಟಡಿ ಅಗಲದ, ಆದರೆ ೨೦ ಅಡಿ ಉದ್ದದ ಜಾಗ. ಕಸರತ್ತು ಮಾಡಿ ಒಳಗೆ ತಂದು ನಿಲ್ಲಿಸಿದ ಗಾಡಿಯ ಅಕ್ಕಪಕ್ಕ ಮಿಕ್ಕಿದ್ದು ಒಂದೂವರೆ ಅಡಿ ಅಷ್ಟೇ. ಅದಾದ ಐದ್ಹತ್ತು ನಿಮಿಷಗಳಿಗೆ ಇನ್ನೊಂದು ಗಾಡಿ, ಟೊಯೋಟ ಕ್ವಾಲಿಸ್, ಅದೇ ತರಹ ಉಳಿದ ಜಾಗದಲ್ಲಿ ಬಂದು ನಿಂತಿತು. ಅದರಿಂದಲೂ ಸಹ ಇಬ್ಬರೇ ಇಬ್ಬರು ಗಂಡಸರು (ನರಪೇತಲಗಳು ಮತ್ತೂ ಇನ್ನೂ 20-25 ದಾಟದವರು), ಹಾಗೂ ನಾಲ್ಕೈದು ಹೆಂಗಸರು ಮಕ್ಕಳು ಇಳಿದರು. ಮ್ಯಾನೇಜರ್ ಒಳಗಿನಿಂದ ಕಬ್ಬಿಣದ ಷಟರ್‌ನಂತಿದ್ದ ಬಾಗಿಲನ್ನು ಭದ್ರವಾಗಿ ಮುಚ್ಚಿ, ಬೀಗ ಹಾಕಿ, ಹೊರಗಿನಿಂದ ಸೊಳ್ಳೆಯೂ ಬರದ ಹಾಗೆ ಮಾಡಿ ಲಾಡ್ಜ್ ಹೌಸ್‌ಫುಲ್ ಆದ ಖುಷಿಯಲ್ಲಿ ತನ್ನ ಆಫೀಸಿನತ್ತ ಹೊರಟ.

ಉಳಿದ ಐದಾರು ಗಂಟೆಗಳ ರಾತ್ರಿ ಕಳೆದರೆ ಸಾಕು ಎಂದು ಚಿಕ್ಕದಾಗಿದ್ದ ಮಂಚದಲ್ಲಿ ಮಗುವಿಗೆ ತೊಂದರೆಯಾಗದ ರೀತಿಯಲ್ಲಿ ಮಲಗಿದ್ದೇ, ನಿದ್ರಾದೇವಿ ಅಪ್ಪಿಕೊಂಡಳು. ಆ ಸುಖವಾದ ಅಪ್ಪುಗೆಯನ್ನು ಬಿಡಿಸಿದ್ದು ಕರ್ಕಶವಾಗಿ, ಭಯಂಕರ ಸದ್ದು ಮಾಡುತ್ತಾ ಕೇಳಿಸಿದ ಕಾಲಿಂಗ್ ಬೆಲ್‌ನ ಸಂಗೀತ. ಕಣ್ಣು ಬಿಟ್ಟು ನೋಡಿದರೆ ಎಲ್ಲೆಲ್ಲೂ ಕತ್ತಲೆ. ಮತ್ತೆ ಒಂದೆರಡು ಬಾರಿ ಒಂದೆರಡು ನಿಮಿಷಗಳ ಅಂತರದಲ್ಲಿ ಕರೆಗಂಟೆಯ ಕಿರಿಕಿರಿ ಪುನರಾವರ್ತನೆ. ನಿದ್ದೆಗೂ ಎಚ್ಚರಕ್ಕೂ ಮಧ್ಯೆ ಹೊಯ್ದಾಟ. ಆಚೆಯಿಂದ ಬಾಗಿಲು ತೆಗೆಯಿರಿ ಎಂದು ಒಂದಿಬ್ಬರು ಗಂಡಸರ ಹುಯ್ಲಾಟ. ಒಳಗಿನಿಂದ ಉತ್ತರಿಸುವವರೇ ಇಲ್ಲ. ಆಗ ಕೇಳಿಸಿದ್ದು "ಧಢುಂ" ಎಂದು ಕಬ್ಬಿಣದ ಬಾಗಿಲನ್ನು ಜೋರಾಗಿ ಒದ್ದ ಶಬ್ದ. ನಿದ್ದೆ ಪೂರ್ತಿ ಹಾರಿ ಹೋಯಿತು. ಸಮಯ ನೋಡಲು ಕತ್ತಲಿನಲ್ಲಿ ಮೊಬೈಲ್‌ಗೆ ತಡಕಾಡಿ ಅದರಲ್ಲಿ ಯಾವುದೋ ಕೀ ಒತ್ತಿ ನೋಡಿದರೆ ಆಗ ತಾನೇ ಒಂದು ಗಂಟೆಯಾಗಿತ್ತು. ಅಂದರೆ ನಾವು ನಿದ್ದೆಗೆ ಜಾರಿ ಒಂದು ಗಂಟೆಯೂ ಆಗಿಲ್ಲ!

ಆಗ ಶುರುವಾಯಿತು ಭಯ, ಅಧೈರ್ಯ. ಇಷ್ಟು ಸರಿರಾತ್ರಿಯಲ್ಲಿ ಲಾಡ್ಜಿನ ಒಳಗೆ ಹೀಗೆ ಬಲಾತ್ಕಾರದಿಂದ ಬೆದರಿಸಿ ಒಳಗೆ ಬರಲು ಪ್ರಯತ್ನಿಸುತ್ತಿರುವವರು ಯಾರೋ ಕೇಡಿಗಳೆ ಇರಬೇಕು ಎನ್ನಿಸಿತು. ಮತ್ತೆ ಈ ಸಾರಿ ಬಾಗಿಲನ್ನೇ ಹೊಡೆದು ಒಳಗೆ ಬರುವಷ್ಟು ಜೋರಿನಲ್ಲಿ ಬಾಗಿಲನ್ನು ಗುದ್ದಿದ ಶಬ್ದ. ಜೋರಾಗಿ ಬಾಗಿಲು ತೆಗೆಯಲು ಹೆದರಿಸುತ್ತಿದ್ದ ಮಾತು. ಪಕ್ಕದಲ್ಲಿದ್ದ ನನ್ನಾಕೆಗೂ ನಿದ್ದೆ ಹಾರಿಹೋಗಿ, ಭಯ ಹಾರಿಬಂದಿತ್ತು. ಮಗು ಮಾತ್ರ ಈ ಲೋಕ ವ್ಯಾಪಾರದ ಚಿಂತೆಯೇ ಇಲ್ಲದೆ ನಿದ್ದೆ ಮಾಡುತ್ತಿತ್ತು.

ಅಷ್ಟೊತ್ತಿಗೆ ಲಾಡ್ಜಿನ ಒಳಗೆ ಲೈಟ್ ಹಾಕಿ, ಬಹುಶಃ ರೂಮ್ ಬಾಯ್ ಇರಬಹುದು, ಮ್ಯಾನೇಜರ್‌ಗಾಗಿ ಹುಡುಕಲಾರಂಭಿಸಿದ. ಇದು ನಮಗೆ ಗೊತ್ತಾಗಲಿಲ್ಲ. ನಮ್ಮ ರೂಮಿನ ಬಾಗಿಲು ಬಡಿದು ಯಾವುದೋ ಹೆಸರು ಹಿಡಿದು ಕೂಗಿದ. ಭಯಪಟ್ಟವನ ಮೇಲೆ ಸತ್ತ ಸರ್ಪ ಹಾಕಿದ ಅನುಭವ. "ಇಲ್ಲಿ ಅವರ್ಯ್ಯಾರೂ ಇಲ್ಲಾರಿ," ಅಂದೆ ನಾನು, ಏಳದೇ, ಬಾಗಿಲು ತೆಗೆಯದೇ; ಆದರೆ ಪೂರ್ಣ ಎಚ್ಚರದ ಸ್ಥಿತಿಯಲ್ಲಿ. ಪಕ್ಕದ ರೂಮಿನಲ್ಲಿದ್ದ ನಮ್ಮವರ ಬಗ್ಗೆ ಅಷ್ಟೊತ್ತಿಗೆ ಯೋಚನೆ ಭಯಂಕರವಾಗಿ ಪ್ರಾರಂಭವಾಗಿತ್ತು. ಬಾಗಿಲು ತೆಗೆದು ಪಕ್ಕದ ರೂಮುಗಳಿಗೆ ಹೋಗಿ ಮಕ್ಕಳನ್ನು ನೋಡುವುದೇ, ಹೇಗೆ? ಇನ್ನೂ ಸ್ವಲ್ಪ ಹೊತ್ತು ನೋಡೋಣ, ಬಾಗಿಲು ತೆಗೆಯುವುದು ಬೇಡ ಎಂದು ನನ್ನಾಕೆಗೆ ಹೇಳಿದೆ. ಆಕೆ ಮುದುಡಿಕೊಂಡು ಒಂದು ರೀತಿಯ ಎಂದೂ ಇಲ್ಲದ ಭೀತಿಯಲ್ಲಿ ಮಲಗಿದ ಹಾಗೆ ಎನ್ನಿಸಿತು.

ಆಚೆಯಿಂದ ಜೋರು ಮಾಡುವುದು, ಬಾಗಿಲನ್ನು ಒದೆಯುವುದು ನಿರಾತಂಕವಾಗಿ ನಿಲ್ಲದೆ ನಡೆಯುತ್ತಿತ್ತು. ಸುಮಾರು ಹತ್ತು ನಿಮಿಷಗಳಿಂದ ನಡೆಯುತ್ತಿದ್ದರಿಂದ ಬಹುಶಃ ಒಳಗಿದ್ದವರಿಗೆಲ್ಲಾ ನಿದ್ದೆ ಹಾರಿ ಹೋಗಿರಬೇಕು. ನನ್ನ ಮನಸ್ಸು ವಿಪರೀತ ಲೆಕ್ಕಾಚಾರದಲ್ಲಿ ತೊಡಗಿತ್ತು. ನಾವು ಯಾರೋ ಗಂಡಸರೇ ಆಗಿದ್ದರೆ ಏನಾದರೂ ಆಗಲಿ ಅನ್ನಬಹುದಿತ್ತು. ಆದರೆ ಒಂಬತ್ತು ತಿಂಗಳ ಚಿಕ್ಕ ಮಗುವಿನಿಂದ ಹಿಡಿದು ಮುದುಕಿ ಎನ್ನಬಹುದಾದ ಹೆಂಗಸರೆಲ್ಲ ಇದ್ದಾರೆ. ಇದ್ಯಾವ ತರಲೆ ಹುಟ್ಟಿಕೊಳ್ತು ಮಾರಾಯಾ? ಕೇಡಿಗಳೇನಾದರೂ ಲಾಡ್ಜಿನ ಒಳಗೆ ಬಂದುಬಿಡುವ ಪರಿಸ್ಥಿತಿ ಬಂದರೆ ಹೇಗೆ? ಅವರ ಆಲೋಚನೆ ಏನಿದೆ? ಎಷ್ಟು ಜನ ಇದ್ದಾರೆ? ಅವರನ್ನು ನಾವೇ ಎದುರಿಸುವ ಬಗೆ ಹೇಗೆ? ಅವರು ಸ್ಥಳೀಯರೇ ಇರಬೇಕು. ನಾವು ಪರಸ್ಥಳದವರು. ಅವರಿಗಿರುವ ಕೆಲವೊಂದು ಅಡ್ವಾಂಟೇಜಸ್ ನಮಗಿರುವುದಿಲ್ಲ. ಸರಿ. ಎದುರಿಸಲೇಬೇಕಾದ ಪರಿಸ್ಥಿತಿ ಬಂದಾಗ ಆದಷ್ಟು ಬೇಗ ಹೆಂಗಸರು ಮಕ್ಕಳನ್ನೆಲ್ಲಾ ಒಂದು ರೂಮಿನಲ್ಲಿ ಸೇರಿಸಿ ನಾನು ಮತ್ತು ನನ್ನಣ್ಣ ಹೇಗೆ ಅವರನ್ನು ಎದುರಿಸಬೇಕು; ನಾವು ಸ್ಕಾರ್ಪಿಯೊದಲ್ಲಿ ಕುಳಿತು, ಇದ್ದ ಆ ಒಂದೆರಡು ಅಡಿ ಜಾಗದಲ್ಲಿಯೇ ಅವರನ್ನು ಅಟಕಾಯಿಸಿಕೊಳ್ಳಬೇಕು. ಒಳಗೆ ಇರುವ ಇತರರು ಏನಾದರೂ ಉಪಯೋಗಕ್ಕೆ ಬಂದಾರೇ? ಪೋಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿದರೆ ಹೇಗೆ? ಮೊಬೈಲ್ ಏನೋ ಇದೆ, ಒಂದೆರಡು ಸಿಗ್ನಲ್‌ಗಳೂ ಇವೆ, ಆದರೆ ನಂಬರ್? 100 ನಂಬರ್ ಕೆಲಸ ಮಾಡುತ್ತದೆಯೇ? ಅದು ಕೆಲಸ ಮಾಡದೇ ಇದ್ದಾಗ ಉರಿಗೆ ಕಾಲ್ ಮಾಡಿ ಅಲ್ಲಿಂದ ಇಲ್ಲಿಯ ಪೋಲಿಸ್ ಠಾಣೆಗೆ ಹೇಗಾದರೂ ಮಾಡಿ ಸುದ್ದಿ ಮುಟ್ಟಿಸುವ ಸಾಧ್ಯತೆ ಇದೆಯೇ? ಅವೆಲ್ಲಕ್ಕೂ ಸಮಯ ಇದೆಯೇ? ಶರವೇಗದ ಚಿಂತನೆ ಎಂದರೆ ಬಹುಶಃ ನಾನು ಯೋಚಿಸುತ್ತಿದ್ದ ವೇಗವೇ ಇರಬೇಕು!

"ಯಾವನೋ ಅವನು ಧಢ ಧಢ ಅಂತ ಬಾಗಿಲು ತಟ್ತಿರೋದು? ತಲೆಗಿಲೆ ಕೆಟ್ಟಿದೆಯಾ?" ನನ್ನ ಅಣ್ಣನ ಗಡಸು ಕಂಠ ನನ್ನ ಯೋಚನಾಲಹರಿಯನ್ನು ಕತ್ತರಿಸಿತು. ಅಯ್ಯೋ, ಇವರೇಕೆ ಕೋಣೆಯಿಂದ ಆಚೆಗೆ ಬಂದರು, ಎಂದುಕೊಂಡೆ. ನಿದ್ದೆ ಮಾಡುತ್ತಿರುವಾಗ ಯಾರಾದರೂ ಅನವಶ್ಯಕವಾಗಿ ಎಬ್ಬಿಸಿದರೆ, ಕೆರಳಿದ ಸಿಂಹ ಅವರು. ಮೊದಲೇ ತೊಂಬತ್ತೈದು ಕೇಜಿ ತೂಕದ ಬಲಶಾಲಿ ಆಸಾಮಿ. ಮನಸ್ಸು ಮಾಡಿದರೆ ಬಾಗಿಲು ತೆಗೆದು ಎದುರಿಸಲು ಸಿದ್ಧವಾಗುವವರು. ಅವರು ಹಾಗೆ ಇಂತಹದೇ ಪರಿಸ್ಥಿತಿಗಳಲ್ಲಿ ಈ ಮೊದಲು ಮಾಡಿದ್ದೂ ಉಂಟು. ನಾನೇನೋ ಒಳಗಿದ್ದುಕೊಂಡೇ ಇವರನ್ನು ಹೇಗೆ ಎದುರಿಸುವುದು ಎಂದು ಯೋಚಿಸುತ್ತಿದ್ದರೆ ಇವರು ಆಚೆ ಬಂದು ಬಿಟ್ಟಿದ್ದಾರಲ್ಲ? ಇನ್ನು ಯಾವುದು ಏನು ಆಗುತ್ತೋ, ಇವರೇನಾದರೂ ಕಬ್ಬಿಣದ ಬಾಗಿಲು ತೆಗೆದುಬಿಟ್ಟರೆ ನಮಗಿರುವ ಅಡ್ವಾಂಟೇಜ್ ಕಳೆದುಹೋಗಿಬಿಡುತ್ತದೆಯಲ್ಲ ಎಂದುಕೊಂಡು, ಇನ್ನು ಒಳಗಿರುವುದು ಸಲ್ಲ ಎಂದು ನಾನೂ ತಕ್ಷಣ ಬಾಗಿಲು ತೆಗೆದುಕೊಂಡು ಕೊಣೆಯಿಂದ ಹೊರಗೆ ಬಂದೆ.

"ಏಯ್, ಏನಯ್ಯ ನಿನ್ನ ಹೆಸರು?" ಅಣ್ಣ ಗಟ್ಟಿಯಾಗಿ ವಿಚಾರಿಸುತ್ತಿದ್ದರು ಈ ಮೊದಲು ಮ್ಯಾನೇಜರ್‌ನನ್ನು ಹುಡುಕುತ್ತಾ ನನ್ನ ರೂಮಿನ ಬಾಗಿಲು ತಟ್ಟಿದ್ದ, ಸುಮಾರು ಐವತ್ತು ವರ್ಷದ ರೂಮ್ ಬಾಯ್‌ನನ್ನು (ರೂಮ್ ಮ್ಯಾನ್?). ಆತ "ಸುಬ್ರ್ಯ" ಎನ್ನುವಂತೆ ಉತ್ತರಿಸಿದ. ನನಗೆ ಅರ್ಥವಾಗದೆ, ಏನು? ಅಂದೆ. ಮತ್ತೆ ಅದೇ "ಸುಬ್ರ್ಯ" ಎಂದ. ಮೊದಲೇ ಆಚೆ ಗಲಾಟೆ, ಮಧ್ಯೆ ಈತನ ಅರ್ಥವಾಗದ ಹೆಸರು. ರೇಗಿಹೋಯಿತು. "ಅದೇನೋ ಸ್ವಲ್ಪ ನಿಧಾನವಾಗಿ ಸರಿಯಾಗಿ ಹೇಳ್ರಿ," ಗದರಿದೆ. ಆಗ ನಿಧಾನವಾಗಿ "ಸುಬ್ಬರಾಯ" ಎಂದ.

ಅಷ್ಟೊತ್ತಿಗೆ ನಾವು ಮೂವರೂ ಒಳಗೆ ಜೋರಾಗಿ ಮಾತನಾಡುತ್ತಿದ್ದರಿಂದ ಆಚೆ ಬಾಗಿಲು ಒದೆಯುವುದು ನಿಂತಿತ್ತು. "ಆಚೆ ಇರೋರು ಯಾರು ಗೊತ್ತಾ ನಿನಗೆ?" ಎಂದು ಸುಬ್ಬರಾಯರನ್ನು ಅಣ್ಣ ಕೇಳಿದರು. ಆತ ಇಲ್ಲ ಅಂದ. ಮತ್ತೆ ಮ್ಯಾನೇಜರ್ ಎಲ್ಲಿ ಎಂದು ಕೇಳಲು, "ಆಗಲಿಂದ ಎಲ್ಲಾ ಕಡೆ ಹುಡುಕ್ತಿದ್ದೀನಿ. ಯಾವ್ ರೂಮ್‌ನಲ್ಲಿದ್ದಾರೋ ಗೊತ್ತಾಗ್ತಾ ಇಲ್ಲಾ," ಎಂದ. ತಾನು ಕೆಲಸ ಮಾಡುತ್ತಿರುವ ಲಾಡ್ಜಿನಲ್ಲೇ ಎಲ್ಲಿ ಏನಿದೆ, ಏನಾಗ್ತಾ ಇದೆ ಎಂದು ತಿಳಿಯದ ಮುಗ್ಧ. ಈ ಮುನ್ನ ಸಂತೃಪ್ತನಾಗಿದ್ದ ಮ್ಯಾನೇಜರ್‌ನನ್ನು ನೋಡಿದ್ದ ನಮಗೆ ಚೆನ್ನಾಗಿ ಕುಡಿದು ಚಿತ್ತಾಗಿರುವ ಆತ ಈಗ ಸಿಕ್ಕರೂ ಈ ಪ್ರಪಂಚದಲ್ಲಂತೂ ಇರುವುದಿಲ್ಲ ಎನ್ನಿಸಿತು. ಆಗಾಗಲೇ ನನ್ನಣ್ಣನಿಗಿರದ ಭಯ, ಚಳಿ ನೋಡಿ ಅವು ನನ್ನಿಂದಲೂ ದೂರವಾಗಿಬಿಟ್ಟವು.

ಹೊರಗೆ, ಒಳಗೆ ಇಷ್ಟೆಲ್ಲ ಗಲಾಟೆ ನಡೆಯುತ್ತಿದ್ದಾಗ ಅಲ್ಲಿ ಒಂದು ರೂಮಿನ ಬಾಗಿಲು ಸ್ವಲ್ಪ ತೆರೆದಿದ್ದು ಕಾಣಿಸಿತು. ಆದರೆ ಆ ರೂಮಿನಿಂದ ಯಾರೂ ಈಚೆಗೆ ಬಂದಿರಲಿಲ್ಲ. ಇಣುಕಿ ನೋಡಿದರೆ ಇಬ್ಬರು ಗಂಡಸರು ಗಾಢ ನಿದ್ರೆಯಲ್ಲಿದ್ದಾರೆ. ಹೊಸ್ತಿಲ ಪಕ್ಕ ಎರಡು ಮೂರು ಕೋಕ್, ಸೋಡಾ ಮತ್ತು ವ್ಹಿಸ್ಕೀ ಬಾಟಲಿಗಳನ್ನು ಬಿಸಾಕಿದ್ದಾರೆ. "ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ, ಮನೆಯೊಳಗೆ ಮನೆಯೊಡೆಯನಿಲ್ಲ, ಇಲ್ಲಾ, ಕೂಡಲಸಂಗಮದೇವ," ವಚನ ಜ್ಞಾಪಕಕ್ಕೆ ಬಂತು. ಮದಿರೆ ಇಷ್ಟೊಂದು ಮೈಮರೆಸುತ್ತಾಳಾ ಎನ್ನಿಸಿತು. ಮತ್ತೇ, ಕ್ವಾಲಿಸ್ ಗಾಡಿಯಲ್ಲಿ ಕಡೆಯದಾಗಿ ಬಂದ ಇನ್ನೊಂದು ಗುಂಪಿನವರೂ ಯಾರೂ ಆಚೆಗೆ ಬರಲಿಲ್ಲ. ಅವರಿಗೇನಾದರೂ ಹೀಗಾಗಬಹುದು ಎಂಬ ಸುಳಿವೇನಾದರೂ ಇತ್ತಾ?

"ಅವರೇನಾದರೂ ಇನ್ನೊಂದು ಸಲ ಬಾಗಿಲು ಬಡಿದರೆ ಪೋಲಿಸ್ ಸ್ಟೇಷನ್‌ಗೆ ಫೋನ್ ಮಾಡ್ರಿ. ಇಲ್ಲಾ ಅಂದ್ರೆ ನಮ್ಮ ಸೆಲ್ ಫೋನಿಂದ ನಾವೇ ಮಾಡ್ತೀವಿ. ಇಂಥ ಸರಿ ರಾತ್ರೀಲಿ ಬಂದು ಗಲಾಟೆ ಮಾಡಿ ನಿದ್ದೆ ಹಾಳ್ ಮಾಡ್ತಿದ್ದಾರೆ. ಒಳಗೆ ಬಿಡೋದಿಕ್ಕೆ ಈ ತರಹ ಜಬರಿಸ್ತಾ ಇದ್ದಾರೆ ಅಂದರೆ ಏನೋ ಮಾಡೊದಿಕ್ಕೆ ಬಂದಿರೋ ಪಾಕ್ಡಾಗಳೆ ಇರ್ಬೇಕು ಇವರು," ಎಂದೆ ನಾನು ಜೋರಾಗಿ, ಬಾಗಿಲ ಬಳಿ ನಿಂತು ಆಚೆಯೂ ಕೇಳಿಸುವ ಹಾಗೆ. ನಮ್ಮಣ್ಣನವರು, "ಸರಿಯಾಗಿರೋ ಒಂದೆರಡು ದೊಣ್ಣೆ ಸರಿ ಮಾಡಯ್ಯ. ಅವರೇನಾದರೂ ಬಂದು ಇನ್ನೊಂದು ಸಾರಿ ತೊಂದರೆ ಕೊಟ್ಟರೆ ಪೊಲಿಸ್‌ಗೆ ಕರೆಯೋದಷ್ಟೇ ಅಲ್ಲ, ನಾವೇ ನಾಲ್ಕು ಬಿಗಿಯೋಣ. ಯಾರೋ ಕಳ್‌ನನ್ಮಕ್ಕಳಿದ್ಧಾಗ್ ಇದ್ದಾರೆ. ಅವರಿಗೆ ಯಾಕೆ ನಾವು ಭಯ ಪಡಬೇಕು?" ಎಂದರು ಗಂಭೀರವಾಗಿ, ದೃಢಧ್ವನಿಯಲ್ಲಿ.

ಇದೇ ವಿಷಯವನ್ನೇ ಮತ್ತೆ ನಾಲ್ಕಾರು ಬಾರಿ ಪುನರಾವರ್ತಿಸಿ ಮಾತನಾಡುತ್ತ ಹತ್ತು ಹದಿನೈದು ನಿಮಿಷ ಕಳೆದೆವು. ಅಷ್ಟು ಕಾಲವೂ ಆಚೆಯಿಂದ ಯಾವುದೇ ಶಬ್ದ ಬರಲಿಲ್ಲ. ಮುಂದೆ ಏನಾದರೂ ಆದರೆ ಏನು ಮಾಡಬೇಕು ಎಂದು ನಿಶ್ಚಯಿಸಿದ್ದರಿಂದ ನಾವೆಲ್ಲ ಧೈರ್ಯವಾಗಿ ಮಲಗಲು ಹಿಂದಿರುಗಿದೆವು. ಆರಾಮವಾಗಿ ನಿದ್ರಿಸುತ್ತಿದ್ದ ಮಗುವನ್ನು ಬಿಟ್ಟು ಇನ್ನೂ ಭೀತಿಯ ಕಲ್ಪನೆಯಲ್ಲಿದ್ದ ನನ್ನಾಕೆ ನನ್ನತ್ತ ತಿರುಗಿ ಗಟ್ಟಿಯಾಗಿ ತಬ್ಬಿ ಮಲಗಿದಳು. ಉಸಿರಾಟ ಜೋರಾಗಿಯೇ ಕೇಳಿಸುತ್ತಿತ್ತು; ದೀಪ ಆರಿಸಿದ ಕತ್ತಲಿನಲ್ಲಿ. ಇದಾದ ಐದು ನಿಮಿಷಕ್ಕೆಲ್ಲಾ ಆಚೆ ಬೈಕ್ ಸ್ಟಾರ್ಟ್ ಮಾಡಿದ ಶಬ್ಧ ಕೇಳಿಸಿತು. ಪೀಡೆಗಳು ತೊಲಗಿದವು; ಯಾರೋ ಇಬ್ಬರೇ ಬಂದ ಹಾಗೆ ಇದ್ದಾರೆ ಎಂದುಕೊಂಡೆ. ಆದರೂ ನಿರೀಕ್ಷೆಯಲ್ಲಿ ಮುಂದಿನ ಹತ್ತು ಹದಿನೈದು ನಿಮಿಷ ನಿದ್ದೆ ಬರಲಿಲ್ಲ. ನನ್ನ ಹೆಂಡತಿಗೆ ಅಷ್ಟೊತ್ತಿಗೆ ನಿದ್ದೆ ಬಂದಿದ್ದು ಸಡಿಲವಾದ ಅಪ್ಪುಗೆಯಲ್ಲಿ, ತಹಬಂದಿಗೆ ಬಂದಿದ್ದ ಅವಳ ಉಸಿರಾಟದಲ್ಲಿ ಗೊತ್ತಾಗಿತ್ತು. ನನಗೆ ಮತ್ತೆ ಯಾವಾಗ ನಿದ್ದೆ ಬಂತೋ ಗೊತ್ತಾಗಲಿಲ್ಲ. ಎಚ್ಚರ ಆಗಿದ್ದು ಮಾತ್ರ ಮತ್ತೇ ಜೋರಾದ ಶಬ್ದದಿಂದ; ನಮ್ಮ ರೂಮಿನ ಮುಂದೆಯೇ ನಿಲ್ಲಿಸಿದ್ದ ಕ್ವಾಲಿಸ್ ಗಾಡಿ ಸ್ಟಾರ್ಟ್ ಮಾಡಿದ ಸದ್ದಿನಿಂದ. ಕಣ್ಣು ಬಿಟ್ಟು ನೋಡಲು ಇನ್ನೂ ಕಪ್ಪು ಕತ್ತಲೆ. ಎಲ್ಲೋ ಬೆಳಗಿನ ಜಾವ ನಾಲ್ಕೋ ಐದೋ ಇರಬಹುದು. ಬೆಳಗಿಗೆ ಇನ್ನೂ ಸಮಯವಿದ್ದರೂ, ಸ್ವಲ್ಪ ಧೈರ್ಯ ವಿಶ್ವಾಸ ಕುದುರಿದ್ದೇ ಅವರು ಜಾಗ ಖಾಲಿ ಮಾಡುತ್ತಿದ್ದಾರೆ ಎನ್ನಿಸಿತು. ಗಾಡಿ ಆಚೆಗೆ ಹೋದ ತಕ್ಷಣ ಮತ್ತೆ ನಿದ್ದೆ ಬಂತು.

ಮತ್ತೆ ನಾವೆಲ್ಲ ಎದ್ದದ್ದು ಬೆಳಗ್ಗೆ ಚೆನ್ನಾಗಿ ಬೆಳಕಾದ ನಂತರವೇ. ಐದಕ್ಕೇ ಎಬ್ಬಿಸುತ್ತೇನೆ ಎಂದಿದ್ದ ಮ್ಯಾನೇಜರ್ ಮುಖ ತೋರಿಸಿದ್ದು ಗಂಟೆ ಆರಾದ ಮೇಲೇಯೇ, ಅದೂ ಬಿಸಿ ನೀರು ಕಾಯಿಸಿಕೊಡಬೇಕಾ ಎಂದು ಕೇಳುತ್ತಾ. ನಾನು ನಮ್ಮಣ್ಣ ರಾತ್ರಿ ನಡೆದ ಘಟನೆಯನ್ನು, ಕ್ವಾಲಿಸ್ ಬಂದು-ಹೋದ ಸಮಯ ಮತ್ತು ರೀತಿ, ಅದರಲ್ಲಿದ್ದ ಹೆಂಗಸರು ಮತ್ತು ಮಕ್ಕಳು, ಇದ್ದ ಇಬ್ಬರೇ ನರಪೇತಲ ಗಂಡಸರು, ಅವರ ವಯಸ್ಸು, ಮುಂತಾದವನ್ನೆಲ್ಲಾ ಯೋಚಿಸಿಕೊಂಡು, "ರಾತ್ರಿ ಬಂದಿದ್ದವರು ಬಹುಶಃ ಲೋಕಲ್ ಗೂಂಡಾಗಳು. ಆ ಕ್ವಾಲಿಸ್‌ನವರನ್ನು ಎಲ್ಲೋ ನೋಡಿ ಹಿಂಬಾಲಿಸಿ ಬಂದಿದ್ದಾರೆ. ಊರಾಚೆಗೆ ಇರೋ ಈ ಲಾಡ್ಜಿನಲ್ಲಿ ಬಹುಶಃ ಕ್ವಾಲಿಸ್‌ನವರು ಮಾತ್ರ ಇದ್ದಾರೆ, ಬೇರೆ ಯಾರೂ ಇದ್ದ ಹಾಗೆ ಇಲ್ಲ ಅಂದುಕೊಂಡಿರಬೇಕು. ಒಳಗೆ ನುಗ್ಗಿ, ಗಲಭೆ ಎಬ್ಬಿಸಿ, ಕಳ್ಳತನವೋ, ಸುಲಿಗೆಯೋ, ಮತ್ತೆ ಎಂತಹುದೋ ಈ ರಾತ್ರಿಯಲ್ಲಿ ಮಾಡಬಹುದು ಅಂತ ಬಂದು ಆಚೆಯಿಂದ ಬಾಗಿಲು ತೆರೆಸುವುದಕ್ಕೆ ಪ್ರಯತ್ನಿಸಿದ್ದಾರೆ. ಯಾವಾಗ ಇಲ್ಲಿ ನಾವು ಒಳಗಿನಿಂದ ಜೋರಾಗಿ ಮಾತನಾಡಲು ಪ್ರಾರಂಭಿಸಿದೆವೋ ಆಗ ಇಲ್ಲಿ ಬೇರೆಯವರೂ ಇದ್ದ ಹಾಗೆ ಇದ್ದಾರೆ; ಪೋಲಿಸ್, ದೊಣ್ಣೆ ಎಲ್ಲಾ ಮಾತನಾಡುತ್ತಾ ಇದ್ದಾರೆ; ಸಲೀಸಾಗಿ ಏನೂ ಗಿಟ್ಟುವ ಹಾಗೆ ಇಲ್ಲ; ಅಪಾಯಕಾರಿ ಆಗುವ ಸಂಭವ ಇದೆ; ಸಮಯ ಸಂದರ್ಭ ನಮ್ಮ ಅನುಕೂಲಕ್ಕೆ ಇದ್ದ ಹಾಗೆ ಇಲ್ಲ ಎಂದುಕೊಂಡು ಇಲ್ಲಿಂದ ಕಳಚಿಕೊಂಡಿದ್ದಾರೆ." ಎಂಬ ಅಭಿಪ್ರಾಯಕ್ಕೆ ಬಂದು, ಸಧ್ಯ ಅಷ್ಟಕ್ಕೇ ಮುಗಿಯಿತಲ್ಲ ಎಂದು ನಿರಾಳವಾಯಿತು. ಆ ಸಂದರ್ಭವನ್ನು ಮತ್ತೆ ಮತ್ತೆ ಯೋಚಿಸಿ ಪರಾಮರ್ಶಿಸಿದಾಗಲೆಲ್ಲ ನಂಜನಗೂಡಿನ ಆ ರಾತ್ರಿಯ ನಿಗೂಢ ಅದೇ ಅನ್ನಿಸುತ್ತದೆ. ನೀವೇನಂತೀರಿ?

Oct 22, 2008

ಸಣ್ಣಕತೆ - ನಾನು, ಅವನು, ಮೋನಪ್ಪ.

[2004 ರ ಜನವರಿಯಲ್ಲಿ, ಅಂದರೆ ಸುಮಾರು ಐದು ವರ್ಷಗಳ ಹಿಂದೆ ಬರೆದ ಕಥೆ ಇದು. ಮೊದಲು ನನ್ನ ಪುಸ್ತಕದಲ್ಲಿ ಪ್ರಕಟವಾಗಿತ್ತು. 2003 ರ ಕೊನೆಯಲ್ಲಿ ಕರ್ನಾಟಕದ ಸಾಹಿತ್ಯಕ-ಸಾಂಸ್ಕೃತಿಕ ರಂಗದಲ್ಲಿ ನಡೆದ ಕೆಲವು ಘಟನೆಗಳು ಹಾಗೂ ನಿರಂಕುಶಮತಿಯಂತೆ ಕಾಣಿಸುತ್ತಿದ್ದ ಸ್ನೇಹಿತನೊಬ್ಬ ಹೇಳಿದ ಅಂಧಾಭಿಮಾನ ಎನ್ನಿಸಿದ ಮಾತು ಈ ಕಥೆಗೆ ಮೂಲ ಪ್ರೇರಣೆ. ಇದನ್ನು ಬರೆಯುವಾಗ ಈ ಕತೆ ಈಗ ಮಾತ್ರ ಪ್ರಸ್ತುತ ಎನ್ನಿಸುತ್ತಿತ್ತು. ಆದರೆ, ನಾಲ್ಕೈದು ವರ್ಷಗಳ ನಂತರವೂ ಇದು ಪ್ರಸ್ತುತವಾಗುತ್ತಲೆ ಹೋಗುತ್ತಿದೆ. ದಟ್ಸ್‌ಕನ್ನಡದಲ್ಲಿದ್ದ ಕೊಂಡಿ ಈಗ ಕೆಲಸ ಮಾಡುತ್ತಿಲ್ಲವಾದ್ದರಿಂದ ಬ್ಲಾಗಿನಲ್ಲಿ ಸೇರಿಸುತ್ತಿದ್ದೇನೆ.-ರವಿ, 22-10-08]

ಎಂದಿನ ಕೆಲಸದ ದಿನದಂತೆ ಅಂದೂ ನಾನು ಅವನು ಕ್ಯಾಂಟೀನ್‌ನಲ್ಲಿ ಕಲೆತು ಊಟ ಮಾಡಲು ಹೋದೆವು. ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ಪಕ್ಕ ಪಕ್ಕದ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿದ್ದುದ್ದರಿಂದ ನಾವು ಯಾವುದೇ ಒತ್ತಡವಿಲ್ಲದೆ ಸಾವಧಾನವಾಗಿ ನಮ್ಮ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದ ಜಾಗ ಕ್ಯಾಂಟೀನ್. ಅಲ್ಲಿ ಕುಳಿತು ಈ ಅಮೇರಿಕನ್ನರ ತಿಂಡಿ, ಅದನ್ನವರು ತಿನ್ನುವ ಪರಿ, ಅವರ ನಡವಳಿಕೆ, ಎಲ್ಲವನ್ನೂ ಅಂದಿನ ಭಾವಕ್ಕೆ ಭಕುತಿಗೆ ತಕ್ಕಂತೆ ಟೀಕಿಸುತ್ತ, ಮೆಚ್ಚುತ್ತ, ನಮ್ಮದನ್ನು ಹೋಲಿಸಿಕೊಳ್ಳುತ್ತಾ, ಹೆಮ್ಮೆ, ದ್ವಂದ್ವ, ಗೊಂದಲ ನಿರಾಳಗಳಲ್ಲಿ ಊಟದ ಅವಧಿಗಿಂತ ಹೆಚ್ಚಿಗೆ ಅಲ್ಲಿ ಕಳೆಯುತ್ತಿದ್ದೆವು. ಕೆಲಸವಿದ್ದಲ್ಲಿ ರಾತ್ರಿಯೆಲ್ಲಾ ಕುಳಿತು ಮಾಡುತ್ತಿದ್ದರಿಂದ ನಮ್ಮಿಬ್ಬರಿಗೂ ಮ್ಯಾನೇಜರ್ ಏನೆಂದುಕೊಳ್ಳುತ್ತಾನೋ ಎಂಬ ಭಯವೇನೂ ಇರಲಿಲ್ಲ. ಅವನಿಗೆ ಈ ಅಮೇರಿಕನ್ನರ ಉಪ್ಪು ಖಾರ ಕಮ್ಮಿ ಇರುವ ಊಟ ಸಪ್ಪೆಯೆಂದು ಸೇರುತ್ತಿರಲಿಲ್ಲವಾದ್ದರಿಂದ ತಪ್ಪದೆ ಮನೆಯಿಂದಲೇ ಊಟ ತರುತ್ತಿದ್ದ. ನಾನು ಬೆಳಿಗ್ಗೆಯ ಅನುಕೂಲಕ್ಕೆ ತಕ್ಕಂತೆ ಕೆಲವೊಂದು ಬಾರಿ ಮಾತ್ರ ತರುತ್ತಿದ್ದೆನಾದರೂ ಸಾಮಾನ್ಯವಾಗಿ ಕ್ಯಾಂಟೀನ್‌ನಲ್ಲಿ ದೊರಕುತ್ತಿದ್ದುದ್ದನ್ನೆ ತಿನ್ನುತ್ತಿದ್ದೆ. ಅವನಿಗೆ ನಾನು ಏನು ತಿಂದರೂ ಆಕ್ಷೇಪಣೆ ಇಲ್ಲದಿದ್ದರೂ "ಈ ಉಪ್ಪು ಹುಳಿ ಇಲ್ಲದ್ದನ್ನು ಹೇಗೆ ತಿನ್ನುತ್ತೀಯೋ, ಮಾರಾಯ?" ಎನುತ್ತಿದ್ದ. ನಾನು ಸಣ್ಣ ಸಣ್ಣ ಉಪ್ಪಿನ, ಮೆಣಸಿನ ಪುಡಿಯ ಪ್ಯಾಕೆಟ್‌ಗಳನ್ನು ಅವನ ಮುಂದೆ ಸರಿಸುತ್ತಿದ್ದೆ.

ನಾನು ತಟ್ಟೆಯಲ್ಲಿ ಅಂದಿನ ತಿಂಡಿಯನ್ನಿಟ್ಟುಕೊಂಡು ಕೌಂಟರ್‌ನಲ್ಲಿ ಕ್ಯೂ ನಿಂತು ಹಣ ಪಾವತಿಸಿ ಬರುವಷ್ಟರಲ್ಲಿ ಅವನು ಟೇಬಲ್ ಹಿಡಿದು ತನ್ನ ಊಟ ಸಿದ್ದಪಡಿಸಿಟ್ಟುಕೊಂಡು ನನಗೆ ಕಾಯುತ್ತಿದ್ದ. ಅಂದು ಹಸಿವಾಗಿತ್ತೇನೊ, ನಾನು ಕುಳಿತ ತಕ್ಷಣ ತನ್ನದನ್ನು ತಿನ್ನಲಾರಂಭಿಸಿ ಒಂದೆರಡು ನಿಮಿಷದ ನಂತರ ನೆಮ್ಮದಿಯಾದವನಂತೆ ನಿಧಾನಿಸಿ, "ನಾಳಿದ್ದು ನಮ್ಮ ಜಗಲಿಗೆ ರಾಜ್ಯ ಪ್ರಶಸ್ತಿ ವಿಜೇತ, ಇಲ್ಲಿಯೇ ದಕ್ಷಿಣ ರಾಜ್ಯದಲ್ಲಿರುವ ಸಾಹಿತಿ ಶಿವರಾಮ್ ಬರುತ್ತಿದ್ದಾರಂತೆ ಮಾರಾಯ." ಎಂದ. "ಜಗಲಿ" ಎನ್ನುವುದು ನಮ್ಮಲ್ಲಿಂದ ಇಲ್ಲಿಗೆ ದುಡಿಯಲು ಬಂದಿದ್ದ ಕೆಲವು ಸಮಾನಮನಸ್ಕರು ನಮ್ಮ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ತಿಂಗಳಿಗೋ, ಎರಡು ತಿಂಗಳಿಗೋ ಒಂದು ಸಾರಿ ಸಭೆ ಸೇರಿ ಚರ್ಚಿಸಲು ಮಾಡಿಕೊಂಡಿದ್ದ ಸಣ್ಣ ಗುಂಪು. ಅವನು ಈ ದೇಶಕ್ಕೆ ನನಗಿಂತಲೂ ಹಳಬನಾಗಿದ್ದರಿಂದ, ನಾನು ಈ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ ನಂತರ ನಮ್ಮಿಬ್ಬರಿಗೂ ಪರಿಚಯವಾಗಿ, ನಂತರ ನನ್ನ ಸಾಹಿತ್ಯಾಸಕ್ತಿಯನ್ನು ತಿಳಿದು ಜಗಲಿಗೆ ಪರಿಚಯಿಸಿದ್ದ. ಜಗಲಿಯಲ್ಲಿ ತಮ್ಮದೇ ಕಂಪನಿಗಳನ್ನು, ಸ್ವಂತ ವೈಯಕ್ತಿಕ ಕಛೇರಿಗಳನ್ನು ಹೊಂದಿದ್ದ ಕೆಲವು ಸದಸ್ಯರೂ ಇದ್ದಿದ್ದರಿಂದ, ವಾರದ ಕೊನೆಯ ರಜಾ ದಿನಗಳಲ್ಲಿ ಅಂತಹ ಸ್ಥಳಗಳಲ್ಲಿಯೇ ಸಭೆ ಸೇರುತ್ತಿತ್ತು. ಅದರ ಕಾರ್ಯಕ್ರಮ ನಿರ್ವಹಣಾ ಸಮಿತಿಯಲ್ಲಿ ಅವನೂ ಒಬ್ಬ.

"ಶಿವರಾಮ್ ಬಗ್ಗೆ ನಿನ್ನ ಅಭಿಪ್ರಾಯವೇನು?" ನಾನು ಅವನನ್ನು ಕೇಳಿದೆ. ಒಂದು ಕ್ಷಣ ನನ್ನನ್ನೆ ಅರ್ಥವಾಗದವನಂತೆ ನೋಡಿ, "ಆತ ಈ ಮುಂಚೆಯೂ ಜಗಲಿಗೆ ಬಂದಿದ್ದ. ಸ್ವಲ್ಪ ವಯಸ್ಸಾಗಿದೆ. ಬಹಳ ಸಂಭಾವಿತ ಮತ್ತು ಸಜ್ಜನ, ಎಲ್ಲರನ್ನೂ ವಿಶ್ವಾಸದಿಂದ ಮಾತನಾಡಿಸ್ತಾನೆ. ಪ್ರಶಸ್ತಿ ಬಂದ ಮೇಲೆ ಇದೇ ಮೊದಲ ಸಾರಿ ಈ ಕಡೆ ಬರ್ತಿದ್ದಾನೆ. ಆದ್ದರಿಂದ ನಾವು ಈ ಸಲದ ಕಾರ್ಯಕ್ರಮದ ಸಮಯದಲ್ಲಿ ಸನ್ಮಾನಿಸೋಣ ಎಂದುಕೊಂಡ್ವಿ. ನೆನ್ನೇನೆ ನನಗೂ ಗೊತ್ತಾಗಿದ್ದು," ಎಂದ. ನಾನು ಶಿವರಾಮ್‌ನ ಕೆಲವು ಲೇಖನಗಳನ್ನು ಅಂತರ್ಜಾಲದಲ್ಲಿ, ಕೆಲವು ಸ್ಮರಣ ಸಂಚಿಕೆಗಳಲ್ಲಿ ಈ ಮುಂಚೆ ಓದಿದ್ದೆ. ದೇಶ ಬಿಟ್ಟು ಇನ್ನೊಂದು ದೇಶಕ್ಕೆ ಬಂದು ಹೊಸ ರೀತಿ ನೀತಿ ಜ್ಞಾನ ನೋಡಿದ್ದರೂ, ಬರವಣಿಗೆಯಲ್ಲಿ ವೈಚಾರಿಕತೆ ಕಮ್ಮಿ, ಆದರೆ ಶಬ್ದ ಪಾಂಡಿತ್ಯವಿದೆ ಎನ್ನಿಸಿತ್ತು. ಪಂಡಿತ, ಸಜ್ಜನ, ಭಾಷೆಯ ಬಗೆಗೆ ಕಳಕಳಿ ಇರುವವ ಎಂದೇ ಇರುತ್ತಿದ್ದವು ಪರಿಚಯ ಲೇಖನಗಳು. ಆಗಾಗ ನನಗೂ ಆತನ ಕಾಳಜಿ, ಪಾಂಡಿತ್ಯ ಕೇಳಿ ಅಭಿಮಾನವೂ ಉಂಟಾಗುತ್ತಿತ್ತು. ಹಾಗಾಗಿ ನಾನೂ ಈ ಸಲದ ಜಗಲಿಯನ್ನು ಕುತೂಹಲದಿಂದ ಎದುರು ನೋಡಲಾರಂಭಿಸಿದೆ.

ಮೋನಪ್ಪ ನಮ್ಮ ಭಾಷೆಯ ಹೆಸರಾಂತ ಸಾಹಿತಿ. ಈತ ರಚಿಸಿರುವ ಕಥೆ ಕಾದಂಬರಿಗಳು ಬಹಳ ಜನಪ್ರಿಯ. ಸೃಜನಶೀಲ, ಪ್ರತಿಭಾವಂತ, ಪರಿಶ್ರಮಿ ಎಂದೇ ಹೆಸರು. ಅದೇ ರೀತಿ ಬಹಳಷ್ಟು ಬಾರಿ ವಿರೋಧಾಭಾಸಗಳ, ದ್ವಂದ್ವಗಳ ಜನಕ. ಮೋನಪ್ಪನ ಕೃತಿಗಳು ಮಾಡದ ಮಾನನಷ್ಟವನ್ನು ಆತನ ಹೇಳಿಕೆಗಳು ಮಾಡುತ್ತಿದ್ದವು. ಕೆಲವು ಸಾರಿ ಆತ ಆ ಇನ್ನೊಂದು ಧರ್ಮ ಜೀವವಿರೋಧಿ, ಈ ಧರ್ಮ ಅಸಹಿಷ್ಣು, ನಮ್ಮ ಪರಂಪರೆಯೇ ಶ್ರೇಷ್ಠ ಎನ್ನುತ್ತಿದ್ದ. ಕೆಲವು ಸಾರಿ ಒಂದೇ ಸಭೆಯಲ್ಲಿ ಒಂದೇ ವಿಷಯಕ್ಕೆ ಪರಸ್ಪರ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ. ಇದರಿಂದ ಆಗಾಗ ಸುದ್ದಿಯಲ್ಲಿರುತ್ತಾನೆ ಸಹ. ಇವೆಲ್ಲವುಗಳಿಂದಾಗಿ ಆತನ ಪುಸ್ತಕಗಳು ಚೆನ್ನಾಗಿ ಮಾರಾಟವೂ ಆಗುತ್ತಿರುತ್ತವೆ. ಈತನ ಯಶಸ್ಸನ್ನು ನೋಡಿ ಕರುಬುವವರು ಕೆಲವು ಸಲ ಈತನೊಬ್ಬ ಪ್ರತಿಗಾಮಿ, ಶೋಷಣಾಪರ ಎಂದೆಲ್ಲ ಚುಡಾಯಿಸುತ್ತಿರುತ್ತಾರೆ. ವ್ಯಂಗ್ಯವೆಂದರೆ ಅಂತಹ ವಾದಗಳಿಗೆ ಆಗಾಗ ಈತನ ಮಾತು-ಕೃತಿ ಎರಡೂ ಸಮಜಾಯಿಷಿ ನೀಡುತ್ತಿರುತ್ತವೆ. ಇನ್ನು ಈತನ ಬರವಣಿಗೆ ಮೆಚ್ಚುವವರು, ’ಇಷ್ಟು ನಿಷ್ಠುರವಾಗಿ ನಿಜ ಹೇಳುವವರು, ಬರೆಯುವವರು ಯಾರಿದ್ದಾರೆ ಹೇಳಿ, ನಮ್ಮ ಸಂಸ್ಕೃತಿ ಏನು ಇಂದು-ನೆನ್ನೆಯದೆ, ಸಾವಿರಾರು ವರ್ಷದ್ದು, ಅದರ ಬಗೆಗೆ ಹೆಮ್ಮೆ ಗೌರವ ಇದ್ದರೆ ತಪ್ಪೇ? ಶ್ರೇಷ್ಠವಾದ ನಮ್ಮ ಪರಂಪರೆಯ ಮೇಲೆ ಹೆಮ್ಮೆ ಹುಟ್ಟಿಸುವಂತೆ ಬರೆಯುವ ಲೇಖಕ. ಏನು ಕಥೆ ಬರೀತಾನೆ? ಈ ನಡುವೆ ಇಷ್ಟು ಚೆನ್ನಾಗಿ ಬರೆಯೋರು ಯಾರಿದ್ದಾರೆ? ಅದಕ್ಕೆ ಜನ ಈತನ ಹೊಸ ಕಾದಂಬರಿ ಬಂದರೆ ಕೊಂಡು ಓದುವುದು. ಈ ಹೊಟ್ಟೆಕಿಚ್ಚಿನ ಸಿನಿಕ ಸಾಹಿತಿಗಳಿಂದ ಈತನಿಗೆ ಬಹಳ ಅನ್ಯಾಯವಾಗಿದೆ,’ ಎಂತಲೂ ಕೂಗೆಬ್ಬಿಸುತ್ತಿರುತ್ತಾರೆ; ಅವರವರ ಭಾವಕ್ಕೆ ಭಕುತಿಗೆ ತಕ್ಕಂತೆ.

ಜಗಲಿಯ ಸದಸ್ಯರಲ್ಲಿಯೂ ಮೋನಪ್ಪ ಪ್ರಿಯ ಸಾಹಿತಿ. ಹೆಚ್ಚು ಕಮ್ಮಿ ಪ್ರತಿಸಲದ ಕಾರ್ಯಕ್ರಮದಲ್ಲಿಯೂ ಈತನ ಒಂದು ಕೃತಿಯ ಕಥಾಪರಿಚಯವೋ ಇಲ್ಲಾ ಬೇರೆ ಸಾಹಿತಿಗಳ ವಿಷಯವಿದ್ದಾಗಲೂ ಹಾಗೂ ಹೀಗೂ ಈತನ ಹೆಸರು ನುಸುಳುತ್ತಲೂ ಇರುತ್ತದೆ. ನಾನು ಇವೆಲ್ಲವುಗಳ ಬಗೆಗೆ ಯೋಚಿಸುತ್ತ, ನಿಧಾನವಾಗಿ ಕಾರು ಓಡಿಸಿಕೊಂಡು ಜಗಲಿಯ ಸಭೆಗೆ ಬರುವಷ್ಟರಲ್ಲಿ ವೇದಿಕೆಯ ಮೇಲಿದ್ದವರ ಪರಿಚಯ ನಡೆಯುತ್ತಿತ್ತು. ನಿರ್ವಾಹಕ ಶಿವರಾಮ್‌ರನ್ನು ಸ್ವಾಗತಿಸಿ ಪರಿಚಯಿಸಿದ ನಂತರ ನಮ್ಮ ಮೋನಪ್ಪನ ಭಕ್ತರೊಬ್ಬರಿಂದ ಮೋನಪ್ಪ ವಿರಚಿತ ಕೃತಿಯ ಪರಿಚಯ ಪ್ರಾರಂಭವಾಯಿತು. ಅವನು, ನನ್ನ ಸಹೋದ್ಯೋಗಿ, ಖುಷಿ ಭಾವದಲ್ಲಿ ಕುಳಿತು ಕೇಳುತ್ತಿದ್ದ. ಹೇಳಬೇಕೆಂದರೆ ಅವನು ಮೋನಪ್ಪನ ಮಹಾಭಕ್ತ. ದೈವದಲ್ಲಿ ತಪ್ಪು ಕಾಣದಂತಹ ಭಕ್ತ. ಇಲ್ಲಿ ಜಗಲಿಗೆ ಬರುವವರು ಬಹಳಷ್ಟು ಜನ ಇನ್ನೊಬ್ಬರನ್ನು ನೋಯಿಸಬಾರದು, ಮುಜಗರ ಉಂಟು ಮಾಡಬಾರದು ಎಂದುಕೊಂಡು ಬರುವವರೆ. ನಾನು ಹೇಳುವುದಕ್ಕೆಲ್ಲಕ್ಕೂ ಇನ್ನೊಬ್ಬ ಹೌದೆನ್ನುತ್ತಾನೆ, ಅದೇ ರೀತಿ ಅವನು ಹೇಳಿದ್ದಕ್ಕೆಲ್ಲಕ್ಕೂ ನಾನೂ, ಹೌದು, ನೀನು ಹೇಳುವುದು ಸರಿ, ಎನ್ನಬೇಕು, ಎಂಬ ಅಲಿಖಿತ ನಿಯಮ ಪಾಲಿಸುವವರೆ. ಜೊತೆಗೆ ಈ ಕೃತಿ ಪರಿಚಯ ಮಾಡಿಕೊಡುವವರು ಹತ್ತಿಪ್ಪತ್ತು ಗಂಟೆ ಆ ಪುಸ್ತಕವನ್ನು ಈ ಕಾರ್ಯಕ್ರಮಕ್ಕಾಗಿಯೇ ಓದಿ, ಟಿಪ್ಪಣಿ ಮಾಡಿಕೊಂಡು, ಒಂದು ರೀತಿಯ ಖುಷಿಯಲ್ಲಿ, ಸ್ವಸಂತೋಷದಿಂದ ಭಾಗವಹಿಸುವವರು. ಅವರ ಉತ್ಸಾಹಕ್ಕೆ ಯಾಕೆ ಭಂಗ ತರಬೇಕು? ಇಲ್ಲಿ ಸಾಹಿತ್ಯ, ಕಥೆ-ಕವನಗಳ ಪರಿಚಯ ಮುಖ್ಯವೇ ಹೊರತು ವಿಮರ್ಶೆಯಂತಹ ಪಾಂಡಿತ್ಯದ, ನೀರಸ ಚರ್ಚೆ ಅನವಶ್ಯಕ. ಹಾಗಾಗಿ, ಪರಿಚಯಕಾರರು ಕೆಲವು ಸಾರಿ ಯಾವುದೇ ವೈಚಾರಿಕತೆ ಇಲ್ಲದೆ ಒಂದು ವಿಷಯದ ಬಗೆಗೆ ಹೇಳುತ್ತಿದ್ದರೂ, ತಾತ್ವಿಕವಾಗಿ ತಪ್ಪುಗಳಿದ್ದರೂ ಬಹಿರಂಗವಾಗಿಯಾಗಲಿ, ಅವರೊಬ್ಬರೊಂದಿಗೇ ಪ್ರತ್ಯೇಕವಾಗಿಯಾಗಲಿ "ನೀವು ಹೇಳಿದ ಈ ಮಾತು ಸರಿಯಲ್ಲ ಕಣ್ರಿ, ಕತೆಗಾರ ಈ ಅರ್ಥದಲ್ಲಿ ಹೇಳಿಲ್ಲ," ಅಥವ "ನಿಮ್ಮ ನಂಬಿಕೆ ಇಂತಿಂತಹ ಕಾರಣಗಳಿಗಾಗಿ ಸುಳ್ಳಿರಬಹುದಲ್ಲವೆ?" ಎಂಬಂತೆ ವಿಮರ್ಶೆ ಮಾಡಬಾರದು ಎಂದುಕೊಂಡವರು. ಇಲ್ಲಿಗೆ ಬರುವವರಲ್ಲಿ ಬಹುಸಂಖ್ಯಾತರು ಸಾಹಿತ್ಯವನ್ನು ಶಾಸ್ತ್ರೀಯವಾಗಿ ಕಲಿತವರಲ್ಲವಾದ್ದರಿಂದ ಈ ತರಹದ ಪ್ರೋತ್ಸಾಹ ಆಸಕ್ತರನ್ನು ಸಭೆಗೆ ಸೇರಿಸುವುದಕ್ಕೆ ಅವಶ್ಯಕ ಸಹ.

ಈವತ್ತಿನ ಸಭೆಯಲ್ಲಿಯೂ ಕಥಾ ಪರಿಚಯಕಾರ ತನಗೆ ಈ ಕಾದಂಬರಿ ಎಷ್ಟು ಇಷ್ಟವಾಯಿತು, ಏಕೆ ಇಷ್ಟವಾಯಿತು, ತಾನು ಅದನ್ನು ಹತ್ತಿಪ್ಪತ್ತು ಸಲ ಓದಿರುವುದು, ಪ್ರತಿಸಲ ಓದಿದಾಗಲೂ ಕೆಲವು ಸಂದರ್ಭಗಳಲ್ಲಿ ಭಾವೋದ್ರೇಕವಾಗಿ ಅಳು ಬರುವುದು; ಹೀಗೆ ಹೇಳುತ್ತಿದ್ದ. ಹೇಳುತ್ತ ಹೇಳುತ್ತ ಒಂದು ಹಂತದಲ್ಲಿ ಭಾವೋದ್ರೇಕಕ್ಕೂ ಒಳಗಾಗಿ ಬಾಯಿ ಕಟ್ಟಿದಂತಾಗಿ ಬಿಟ್ಟ. ಇಂತಹುದು ಅನಿರೀಕ್ಷಿತವಾದದ್ದೇನೂ ಅಲ್ಲವಾದ್ದರಿಂದ ಅಷ್ಟೇನೂ ಮುಜಗರವಾಗದೆ ನಾವೆಲ್ಲರೂ ಅವನನ್ನು ಅವನ ಪ್ರಾಮಾಣಿಕ ಅಭಿವ್ಯಕ್ತಿಗೆ ಮೆಚ್ಚುತ್ತ, ಆ ಕೃತಿಯ ಪರಿಣಾಮ ಇವನ ಮೇಲಾಗಿರುವುದರ ಬಗ್ಗೆ ಚಿಂತಿಸುತ್ತ ಸುಮ್ಮನೆ ನೋಡುತ್ತಿದ್ದೆವು. ಕೆಲವರು ದೃಷ್ಟಿ ಬೆರೆಸಲಾರದೆ ಕುತ್ತಿಗೆ ಕೆಳಗೆ ಬಿಟ್ಟಿದ್ದರು. ಒಂದೆರಡು ಕ್ಷಣಗಳಲ್ಲಿ ಸುಧಾರಿಸಿಕೊಂಡ ನಂತರ ಆತ ಬಹಳ ಚೆನ್ನಾಗಿಯೇ, ಎಲ್ಲರೂ ಮೆಚ್ಚುವಂತೆ ತನ್ನ ಕೆಲಸ ಮುಗಿಸಿದ.

ಕೃತಿ ಪರಿಚಯದ ನಂತರ ಯಾವುದಾದರೂ ಸಂದೇಹಗಳಿದ್ದರೆ ಇಲ್ಲವೆ ಕೇಳುಗರು ತಮ್ಮ ಅಭಿಪ್ರಾಯಗಳಿದ್ದರೆ ಅವನ್ನು ಒಪ್ಪಿಸುವುದು ವಾಡಿಕೆ. ಹಾಗೆಯೇ ಇಂದೂ ಒಂದಿಬ್ಬರು ತಾವೂ ಇದನ್ನು ಓದಿರುವುದು, ಮೆಚ್ಚಿರುವುದು, ಪರಿಚಯಕಾರ ಅದನ್ನು ಬಹಳ ಚೆನ್ನಾಗಿ ಹೇಳಿದ್ದು; ಹೀಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಯಾವುದೇ ಪ್ರಶ್ನೆಗಳು ಕಾಣಿಸಲಿಲ್ಲ. ಜಗಲಿ ನಡೆಸಿಕೊಡುತ್ತಿದ್ದಾತ ಇನ್ಯಾರಾದರೂ ಪ್ರಶ್ನೆ ಕೇಳುವವರಿದ್ದಾರೆಯೇ ಎಂದು ಕೇಳಿ ಒಂದೆರಡು ಕ್ಷಣ ಕಾದ. ಯಾವುದೂ ಇಲ್ಲ ಎಂದುಕೊಳ್ಳುವಷ್ಟರಲ್ಲಿ ಹಿಂದಿನಿಂದ ಹೊಸ ಸ್ವರ ಕೇಳಿಸಿತು. "ಮೋನಪ್ಪನವರು ಪ್ರತಿಗಾಮಿ ಚಿಂತನೆಯ ಲೇಖಕ ಎಂದು ಒಂದು ವರ್ಗ ಅವರನ್ನು ದೂಷಿಸುತ್ತದೆ. ಇದಕ್ಕೆ ತಮ್ಮ ಅಭಿಪ್ರಾಯವೇನು?" ಪ್ರಶ್ನೆ ಕೇಳಿದಾತನನ್ನು ಇಲ್ಲಿ ನಾನು ಮತ್ತು ಬಹಳಷ್ಟು ಇತರರು ಇದೇ ಮೊದಲ ಸಾರಿ ನೋಡುತ್ತಿರುವುದು. ಕೇಳಿದ್ದು ಸರಳ ಪ್ರಶ್ನೆ. ಆದರೆ ಅಷ್ಟಕ್ಕೆ ಮೋನಪ್ಪನ ಭಕ್ತರಲ್ಲಿ ಸಣ್ಣಗೆ ಚಡಪಡಿಕೆ ಪ್ರಾರಂಭವಾಗಿತ್ತು. ಪರಿಚಯಕಾರನಿಗೆ ಊಹಿಸದೆ ಬಂದ ಬಾಣ. ಆತ ಅದನ್ನು ಅರ್ಥ ಮಾಡಿಕೊಂಡು ಏನು ಹೇಳಬೇಕೆಂದು ತೋಚದೆ ತಡಬಡಾಯಿಸುತ್ತಿದ್ದ. ಆತನ ಮೆದುಳಿನ ಚಿಂತನೆಗಿಂತ ಆತನ ಮಾತು ಮುಂದೆ ಓಡುತ್ತಿರುವ ಸೂಚನೆಗಳು ಆತ ಆಡುತ್ತಿದ್ದ ಮಾತುಗಳಿಂದ ಕಾಣಿಸಲಾರಂಭಿಸಿತು. ಆಗ ನಾನು ತಣ್ಣಗೆ ಪರಿಚಯಕಾರನಿಗೆ "ಸರ್, ಈ ಪುಸ್ತಕ ಪ್ರಕಟವಾದ ವರ್ಷ ಯಾವುದು?" ಎಂದೆ.

ಆ ರೀತಿ ನೋಡಿದರೆ, ಕಾದಂಬರಿಯ ಕಥೆ ಚೆನ್ನಾಗಿಯೂ, ಸಾಮಾಜಿಕ ಚಿಂತನೆಯಿಂದ, ಪ್ರೌಢಿಮೆಯಿಂದಲೂ ಕೂಡಿತ್ತು. ಆದರೆ ನನಗೂ ಮೋನಪ್ಪನ ಕಾಳಜಿಗಳ ಬಗೆಗೆ ಸಂಶಯಗಳಿದ್ದುದ್ದರಿಂದ ಈ ಕಾದಂಬರಿ ಆತ ಯಾವ ವಯಸ್ಸಿನಲ್ಲಿದ್ದಾಗ ಬರೆದದ್ದು ಎಂಬ ಕುತೂಹಲ ಹುಟ್ಟಿ, ಅದರಿಂದೇನಾದರೂ ಹಿಂದಿನ ಪ್ರಶ್ನೆಗೆ ಉತ್ತರ ಸಿಕ್ಕಿತೇನೋ ಎಂದು ಆ ಪ್ರಶ್ನೆ ಕೇಳಿದ್ದೆ. ತಕ್ಷಣ ಪುಸ್ತಕವನ್ನು ತೆರೆದು ನೋಡಿದ ಪರಿಚಯಕಾರ ಸುಮಾರು ಮುವ್ವತ್ತು ವರ್ಷಗಳ ಹಿಂದಿನ ಇಸವಿ ಹೇಳಿದ. ಅಂದರೆ ಆ ಲೇಖಕ ಸುಮಾರು ಮುವ್ವತ್ತು-ಮುವ್ವತ್ತೈದರ ವಯಸ್ಸಿನಲ್ಲಿ ಈ ಕಾದಂಬರಿ ಬರೆದದ್ದು. ತಕ್ಷಣ ನನ್ನ ಪ್ರಶ್ನಾಮೂಲವನ್ನು ಅರ್ಥ ಮಾಡಿಕೊಂಡ ಪ್ರಶ್ನೆ ಕೇಳಿದ್ದಾತ, "ಯಾಕೆ? ಅವರು ಬಿಸಿರಕ್ತದ ವಯಸ್ಸಿನಲ್ಲಿದ್ದಾಗ ಕೆಲವು ತರಹದ ಪ್ರತಿಗಾಮಿ ಚಿಂತನೆಗಳಿಲ್ಲದೆ, ವೈಚಾರಿಕತೆಯಿಂದ, ಸುಧಾರಣಾ ಮನೋಭಾವದಿಂದ ಕೂಡಿದ್ದರು ಎಂದೇ ನಿಮ್ಮ ಅನಿಸಿಕೆ?" ಎಂದು ನಸು ನಕ್ಕ. ನಾನು ಹೌದೆಂದು ನಕ್ಕೆ. ನಂತರ ಯಾರಿಗೂ ಈ ಅಪ್ರಿಯ ಸಂಭಾಷಣೆ ಮುಂದುವರಿಸುವ ಇಷ್ಟವಿಲ್ಲದೆ ಅದು ಅಲ್ಲಿಗೇ ಮುಗಿಯಿತು.

ನಂತರದ ಕಾರ್ಯಕ್ರಮ ಶಿವರಾಮ್‌ರ ಸುದೀರ್ಘ ಪರಿಚಯ ಮತ್ತು ಭಾಷಣ. ನಾನು ಕೆಲವು ನಿಮಿಷ ನಿಧಾನಿಸಿ ಬಂದಿದ್ದರಿಂದ ಇನ್ನೂ ಆತನನ್ನು ಮುಖತಃ ಮಾತನಾಡಿಸಿರಲಿಲ್ಲ. ಕುತೂಹಲದಿಂದ ಆತ ಏನು ಹೇಳಬಹುದು ಎಂದು ಆಲಿಸುತ್ತಿದ್ದೆ. ಆತ ಬಹಳ ಖುಷಿಯಿಂದ, ಹುಮ್ಮಸ್ಸಿನಿಂದ ಪ್ರಶಸ್ತಿ ಪಡೆದದ್ದು, ಅಲ್ಲಿ ಜನ ಆದರದಿಂದ ಸತ್ಕರಿಸಿದ್ದು ಎಲ್ಲವನ್ನೂ ಹೇಳುತ್ತ, ಅದಕ್ಕಿಂತ ಹುಮ್ಮಸ್ಸಿನಿಂದ ನಮ್ಮ ಭಾಷೆ-ಸಂಸ್ಕೃತಿಯನ್ನು ಇಲ್ಲಿ ಬೆಳೆಸುವುದರ ಮಹತ್ವವನ್ನು, ಧರ್ಮದ ಹಿರಿಮೆಯನ್ನು, ಪುರಾಣಪುರುಷರ, ಸಂತ-ದಾಸ-ಆಚಾರ್ಯರ ಭವ್ಯ-ದಿವ್ಯ ಇತಿಹಾಸವನ್ನು, ಪುರಾಣವನ್ನು ಹೇಳುತ್ತಾ ಹೋದ. ನಾನೆಂದುಕೊಂಡೆ, ದೇಶ-ಧರ್ಮ-ಭಾಷೆಯ ಬಗೆಗೆ ಒಲವಿರುವ ಭಾವುಕ ವ್ಯಕ್ತಿ. ಆದರೆ ಇಲ್ಲಿಯೂ ನನಗೆ ಆತನ ಮಾತಿನಲ್ಲಿ ಸಹಜ ವೈಚಾರಿಕ ಚಿಂತನೆ, ವಾಸ್ತವಿಕತೆ ಕಾಣಿಸಲಿಲ್ಲ; ನನ್ನ ಭಾವಕ್ಕೆ ನನ್ನ ಭಕುತಿಗೆ.

ಆತನ ಭಾಷಣದ ನಂತರ ಆತನನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಮಧ್ಯೆ ಇಂತಹುದಕ್ಕೆ ಬೇಕಾಗಬಹುದು ಎಂದು ಬೆಂಗಳೂರಿನಿಂದ ತರಿಸಿದ್ದ ಒಂದು ಶಾಲನ್ನು ಹೊದೆಸಿ ಎಲ್ಲರೂ ಸಂತೋಷ ಪಟ್ಟರು. ಅಲ್ಲಿಗೆ ಅಂದಿನ ಮುಖ್ಯ ಕಾರ್ಯಕ್ರಮ ಮುಗಿಯಿತು. ಇದಾದ ನಂತರ ಕೆಲವರು ತಮ್ಮ ಮನೆಗಳಿಂದ ತರುವ ಹಣ್ಣಿನ ರಸ, ಕಾಫ಼ಿ, ಕೋಕ್‌ಗಳನ್ನು ಕುಡಿದು, ಚುರುಮುರಿ ತಿನ್ನುತ್ತ ಒಂದರ್ಧ ಗಂಟೆ ಮಾತಿನಲ್ಲಿ ಕಳೆಯುವುದು ವಾಡಿಕೆ. ಆ ಸಮಯದಲ್ಲಿ ಅವನು ನನ್ನನ್ನು ಶಿವರಾಮ್‌ಗೆ ಪರಿಚಯಿಸುತ್ತೇನೆ ಬಾ ಎಂದು ಕರೆದುಕೊಂಡು ಹೋದ. ನನ್ನ ಹೆಸರನ್ನು ಹೇಳಿ "ನನ್ನ ಸಹೋದ್ಯೋಗಿ, ಸಾಹಿತ್ಯದಲ್ಲಿ ಒಳ್ಳೆ ಆಸಕ್ತಿ ಇದೆ. ಬಹಳಷ್ಟು ಕಥೆ ಕಾದಂಬರಿ ಓದಿದ್ದಾರೆ," ಎಂದು ಪರಿಚಯಿಸಿದ. "ಅಭಿನಂದನೆಗಳು ಸರ್. ನಾಡು ನುಡಿಗೆ ಸೇವೆ ಸಲ್ಲಿಸುವ ನಿಮ್ಮಂತಹವರು, ಇಲ್ಲಿಗೆ ಬಂದರೂ ಅಲ್ಲಿನ ಬಗ್ಗೆ ಚಿಂತಿಸುವವರು ಹೆಚ್ಚಾಗಬೇಕು. ನಿಮ್ಮ ಬರಹಗಳನ್ನೂ ಒದಿದ್ದೇನೆ. ಪ್ರಶಸ್ತಿ ಪಡೆದದ್ದಕ್ಕೆ ಮತ್ತೊಮ್ಮೆ ನನ್ನ ಅಭಿನಂದನೆಗಳು," ಎಂದೆ. ಆತನಿಗೆ ಸಂತೋಷವಾಗಿ, ಮುಖ ಅರಳಿ ಆತ್ಮೀಯತೆಯಿಂದ "ನಿಮ್ಮ ಹೆಸರೇನೆಂದಿರಿ?" ಎಂದ. ನಾನು ಬಹಳ ಸಾಮಾನ್ಯವಾದ, ಯಾವುದೇ ರೀತಿಯ ಹಿನ್ನೆಲೆಯನ್ನು ಬಿಟ್ಟುಕೊಡದ ನನ್ನ ಮೊದಲ ಹೆಸರನ್ನು ಹೇಳಿದೆ. ಆತನಿಗೆ ತೃಪ್ತಿಯಾದಂತೆ ಕಾಣಲಿಲ್ಲ. ನಾನು ಹೇಳಿದ ನನ್ನ ಹೆಸರನ್ನೆ ಪದೇ ಪದೇ ಉಚ್ಚರಿಸಿ ನೋಡುತ್ತಾ ಕಾಯುತ್ತಾ ನಿಂತ. ನಾನು ಗೊಂದಲಕ್ಕೊಳಗಾಗಿ ಮತ್ತೆ ನನ್ನ ಹೆಸರನ್ನು ಹೇಳಿದೆ. ಆತ ಇನ್ನು ಉಪಯೋಗವಿಲ್ಲ ಎಂಬಂತೆ, "ನಿಮ್ಮ ಕೊನೆಯ ಹೆಸರೇನು? ಮನೆ ಹೆಸರೇನು?" ಎಂದು ಕೇಳಿದ. ನನ್ನ ಟ್ಯೂಬ್‌ಲೈಟ್ ಆಗ ಹೊಳೆಯಿತು. ಈತ ನನ್ನ ಹಿನ್ನೆಲೆ ಹುಡುಕುತ್ತಿದ್ದಾನೆ ಎಂದು ಅಸ್ಪಷ್ಟವಾಗಿ ಅನ್ನಿಸಿತು. ಆಗ ನನ್ನ ಊರಿನ ಹೆಸರಿರುವ ಕೊನೆಯ ಹೆಸರನ್ನು ಹೇಳಿದೆ. ಮುಗುಳು ನಗುತ್ತಿದ್ದ ಆತನ ಮುಖ ಸ್ವಲ್ಪ ಗಂಭೀರವಾಯಿತು. ತೃಪ್ತಿಯಾಗದವನಂತೆ, ಏನೂ ಅರ್ಥವಾಗದವನಂತೆ ಕಂಡ. ಆದರೆ ಅಷ್ಟರಲ್ಲಿ ನಾನು ನನ್ನ ಸಂಸಾರಿ ಅವಸ್ಥೆಯಿಂದ ವೈರಾಗ್ಯ ಪದವಿಗೆ ಮಾನಸಿಕವಾಗಿ ಬಡ್ತಿ ಪಡೆದುಬಿಟ್ಟಿದ್ದೆ. ಆತನ ಕರ್ಮಠತೆಯ ಬಗ್ಗೆ ತಿರಸ್ಕಾರ ಆವರಿಸಿಬಿಟ್ಟಿತು.

ದೇಶಕೋಶಗಳನ್ನೆಲ್ಲ ಸುತ್ತಿ ಬಂದರೂ ಈ ಜನ ಹುಡುಕುವುದೇನನ್ನು? ಭಾರತದಲ್ಲಿದ್ದಾಗ ಯಾರೂ ನನ್ನ ಕೊನೆ ಹೆಸರು, ಅರ್ಜಿ ಭರ್ತಿ ಮಾಡುವುದೊಂದರಲ್ಲಿ ಬಿಟ್ಟು, ಬಾಯಿ ಬಿಟ್ಟು ಕೇಳಿರಲಿಲ್ಲ. ಆದರೆ ಈ ಮಹಾಶಯ ಪರಿಚಯವಾದ ನಿಮಿಷದಲ್ಲಿಯೇ ಜನರ ಮೂಲ ಹುಡುಕುತ್ತಾನಲ್ಲ. ಭಾಷೆ, ಧರ್ಮ ಬೆಳೆಸಬೇಕು ಎನ್ನುತ್ತಾನೆ. ಅವನದೇ, ಇವನದೇ, ನನ್ನದೇ, ಅಥವ ನಮ್ಮೆಲ್ಲರದೇ? ದಾಸರ ಕೀರ್ತನೆಯೋ ವಚನವೋ ಇನ್ನೊಂದೋ, ದಿನವೂ ಮಿಂದು ಮಡಿಯುಟ್ಟರೆ ಸ್ವರ್ಗಕ್ಕೆ ಹೋಗುವುದಾದರೆ ನೀರಿನಲ್ಲಿಯೇ ಇರುವ ಕಪ್ಪೆಗೇಕೆ ಮೋಕ್ಷವಿಲ್ಲ ಎಂದು ಕೇಳುತ್ತದೆ. ಕವಿಯೊಬ್ಬ ಹೇಳುತ್ತಾನೆ, "ಎಲ್ಲರೊಳಗೊಂದಾಗು ಮಂಕುತಿಮ್ಮ". ಇಂತಹವರ ಸಹವಾಸ ಮಾಡಿ, ಇವರ ಮಾತು ಕೇಳಿದರೆ ಜನರಾಗುವುದೇನು? ಎಲ್ಲರೊಳಗೂ ಒಂದೇ ಅಥವ "ಎಲ್ಲ ಕಾಲಕೂ ಮಂಕು ನೀನು ಇಂಗು ತಿಂದ ಪೆಂಗುಮಂಗ!". ಅಥವ ಇಲ್ಲಿ ನಾನೇನಾದರೂ ತಪ್ಪು ತಿಳಿದೆನೊ? ಆತ ಬೇರೆ ಕಾರಣಕ್ಕೆ ಏನಾದರು ಕೊನೆಯ ಹೆಸರು ಕೇಳುತ್ತಾನೊ? ನಾನು ಆತನ ಬಗೆಗೆ ನನಗಿದ್ದ ಪೂರ್ವಾಗ್ರಹದಿಂದೇನಾದರು ಆ ಅರ್ಥದಲ್ಲಿ ತಿಳಿದುಕೊಂಡೆನೊ? ನನಗೆ ಈ ಎಲ್ಲಾ ಯೋಚನೆಗಳಿಂದ ಅಲ್ಲಿದ್ದ ಇತರ ಯಾರ ಜೊತೆಯೂ ಸರಿಯಾಗಿ ಮಾತನಾಡಲಾಗಲಿಲ್ಲ. ದೊಡ್ಡವರು ಎನ್ನಿಸಿಕೊಂಡವರ ಸಣ್ಣತನ ಕಾಣಿಸಿಬಿಟ್ಟಾಗ ಹೀಗೇ ಆಗುತ್ತೇನೋ? ಈ ಹಿಂದೆ ಪ್ರಶ್ನೆ ಕೇಳಿದ್ದಾತನನ್ನು ಮಾತನಾಡಿಸಿ ಪರಿಚಯ ಮಾಡಿಕೊಳ್ಳಬೇಕು ಎಂದು ಒಂದು ಕ್ಷಣ ಅನ್ನಿಸಿದರೂ ಅಲ್ಲಿ ನಿಲ್ಲಲಾರದೆ ಕಳಚಿಕೊಂಡೆ.

ಅಂದು ಸಾಯಂಕಾಲ ಈ ನಡುವೆ ನಡೆಯುತ್ತಿದ್ದ ವೇದಾಂತದ ಪ್ರವಚನ ಕೇಳಲು ಎಂದಿನಂತೆ ಹೋದೆ. ಈ ಪ್ರವಚಕ ನಮ್ಮ ರಾಜ್ಯದವನೇ ಎಂದಷ್ಟೇ ನನಗೂ ಈ ಮುಂಚೆ ತಿಳಿದಿದ್ದದ್ದು. ಈತ ಬೇರೆ ಕಾವಿಧಾರಿಗಳಿಗಿಂತ ಸ್ವಲ್ಪ ಭಿನ್ನವಾಗಿ ಕೆಲವೊಂದು ಸಾರಿ ವೈಜ್ಞಾನಿಕವಾಗಿಯೂ ಮಾತನಾಡುತ್ತಿದ್ದರಿಂದ ನನಗೆ ಆತನ ಮಾತು ಕೇಳಲು ಹೋಗುವುದು ಇಷ್ಟವಾಗುತ್ತಿತ್ತು. ಕೆಲವೊಂದು ಸಾರಿ ಹೆಂಡತಿಯನ್ನೂ ಕರೆದುಕೊಂಡು ಹೋಗುತ್ತಿದ್ದೆ. ಇಂದು ಪ್ರವಚನ ಕೇಳುತ್ತಿದ್ದಾಗ ಬೆಳಿಗ್ಗೆಯ ಜಗಲಿಯಲ್ಲಿ ಪ್ರಶ್ನೆ ಕೇಳಿದ್ದಾತ ಮುಂದಿನ ಸಾಲಿನಲ್ಲಿ ಕುಳಿತಿರುವುದು ಕಾಣಿಸಿತು. ತಕ್ಷಣ ಮಧ್ಯಾಹ್ನದಿಂದ ಸ್ವಲ್ಪ ತಹಬಂದಿಗೆ ಬಂದಿದ್ದ ಯೋಚನಾಲಹರಿ ಮತ್ತೆ ಮೊಳಕೆಯೊಡೆದು ಬಿಟ್ಟಿತು. ಕಡೆಗೆ ಅದು ಹೋಗಿ ನಿಂತದ್ದು ಈ ಪ್ರವಚನಕಾರನ ಹಿನ್ನೆಲೆ ಏನು ಎಂಬಲ್ಲಿ. ನಡೆ-ನುಡಿಯಲ್ಲಿ, ರೂಪ-ಬಣ್ಣದಲ್ಲಾಗಲಿ ಯಾವುದೇ ಹಿನ್ನೆಲೆ ಬಿಟ್ಟುಕೊಡದ ಈ ಪ್ರವಚನಾಕಾರನ ಹೆಸರೂ ಯಾವುದೋ ಒಂದು ಆನಂದ ಎಂದೇ ಇತ್ತು. ಈ ಮುಂಚೆ ಈತನ ಪ್ರವಚನಗಳಿಗೆ ಬಹಳಷ್ಟು ಬಾರಿ ಬಂದಿದ್ದರೂ ಹಿಂದೆ ಎಂದೂ ಹುಟ್ಟದಿದ್ದ ಈತನ ಹಿನ್ನೆಲೆ ಏನು ಎಂಬ ಪ್ರಶ್ನೆ ಈಗ ದೊಡ್ಡದಾಗಿ, ಮುಂದೆ ಆತ ಏನು ಹೇಳುತ್ತಿದ್ದಾನೆ ಎಂಬುದರ ಕಡೆ ಗಮನವೇ ಹೋಗದೆ, ನನ್ನ ಯೋಚನಾಲಹರಿ ಎಷ್ಟು ಭ್ರಷ್ಟವಾಯಿತು ಇಂದು ಎಂಬ ಸ್ವಮರುಕದಲ್ಲಿ ತುಂಬಿ ಹೋಯಿತು. ಇಷ್ಟು ದಿನ ಅಲ್ಲಿ ಕೇಳಿದ್ದ ಎಲ್ಲಾ ವೇದಾಂತವೂ ನನ್ನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತೆ. ಅಥವ, ನಾನು ಇಲ್ಲಿಗೆ ಬರುವುದು ಆ ಪ್ರವಚನಕಾರ ಹಿಂದೆ ಎಂದೋ ಹೇಳಿದ್ದಂತೆ ಯಾವುದರಿಂದಲೋ ತಪ್ಪಿಸಿಕೊಂಡು ಎನ್ನಿಸಿಬಿಟ್ಟಿತು. ಈ ಹಿಂಸೆ ಮುಗಿದರೆ ಸಾಕಪ್ಪ ಎಂದು ಹೊತ್ತು ಕೊಲ್ಲಲಾರಂಭಿಸಿದೆ.

ಮಾರನೆಯ ದಿನ ಅವನು ಕ್ಯಾಂಟಿನ್‌ನಲ್ಲಿ ಕೇಳಿದ, "ಯಾಕೆ ನೆನ್ನೆ ಬೇಗ ಹೊರಟು ಹೋದೆ? ಏನನ್ನಿಸಿತು?" "ನನಗ್ಯಾಕೋ ಬೇಜಾರಾಗ್ತಾ ಇತ್ತು ಮಾರಾಯ" ಎಂದಷ್ಟೇ ಉತ್ತರಿಸಿದೆ. ಏನೋ ಅರ್ಥವಾದವನಂತೆ ಅವನೂ ಸುಮ್ಮನಾದ. ನನ್ನ ಅವನ ದೃಷ್ಟಿಕೋನಗಳು, ನಂಬಿಕೆಗಳು ಬೇರೆ ಬೇರೆ ಇದ್ದರೂ, ನಮ್ಮಿಬ್ಬರ ಪರಸ್ಪರ ಕಾಳಜಿ ಚೆನ್ನಾಗಿದ್ದುದ್ದರಿಂದ ಕೆಲವು ವಿಷಯಗಳಲ್ಲಿನ ಅಭಿಪ್ರಾಯ ಭೇದ ನಮ್ಮ ಸ್ನೇಹಕ್ಕೆ ಅಡ್ಡಬರದ ರೀತಿ ನಡೆದುಕೊಳ್ಳುತ್ತಿದ್ದೆವು. ಮಿತಭಾಷಿಣಿಯರಾದ ನನ್ನ ಮತ್ತು ಅವನ ಹೆಂಡತಿ ಪರಸ್ಪರ ಪರಿಚಯವಾದ ನಂತರ ಒಳ್ಳೆಯ ಸ್ನೇಹಿತೆಯರಾಗಿದ್ದರು. ಆತ ಮೋನಪ್ಪನ ಮಹಾಭಕ್ತ. ನಾನೂ ಮೋನಪ್ಪನ ಕೃತಿಗಳನ್ನು ಓದಿ, ಇಷ್ಟಪಟ್ಟಿದ್ದವನೆ. ಆದರೆ ಅದು ಹಲವಾರು ವರ್ಷಗಳ ಹಿಂದೆ. ಈ ಮಧ್ಯೆ ನನ್ನ ನಿಲುವು ರುಚಿಗಳು ಬದಲಾಗಿದ್ದವು. ಅನುಭವ, ಓದು, ಓಡಾಟ, ಒಡನಾಟ ಅನೇಕ ಹೊಸ ಪಾಠಗಳನ್ನು ಕಲಿಸಿತ್ತು. ಹೀಗಾಗಿ ಈ ಮಧ್ಯೆ ನಾನು ಮೋನಪ್ಪನ ಬರಹದ ಬಗೆಗೆ ನಿರುತ್ಸಾಹಿತನಾಗಿದ್ದೆ. ಇದೆಲ್ಲಾ ಅವನೂ ತಿಳಿದಿದ್ದರೂ ಮೋನಪ್ಪನನ್ನು ಆರಾಧಿಸುವ ರೀತಿ ವರ್ತಿಸುತ್ತಿದ್ದ. ಈ ನಡುವೆ ಮೋನಪ್ಪನ ಹೊಸ ಕಾದಂಬರಿ ಬಂದಿದ್ದು ಅದನ್ನು ತುಂಬ ಉತ್ಸಾಹದಿಂದ ಹಾಗೂ ಹೀಗೂ ಸಮಯ ಹೊಂದಿಸಿಕೊಂಡು ಓದುತ್ತಲಿದ್ದ. ಇಲ್ಲಿಯ ತನಕ ಮೋನಪ್ಪ ಮುಟ್ಟದಿದ್ದ ವಿಷಯವನ್ನು ಇದರಲ್ಲಿ ತೆಗೆದುಕೊಂಡಿರುವುದನ್ನು, ಕಾಮವನ್ನು ಸ್ವಲ್ಪ ನಿರ್ಭಿಡೆಯಿಂದಲೇ ವರ್ಣಿಸಿರುವುದನ್ನು ಆಗಾಗ ವಿವರಿಸುತ್ತಿದ್ದ. ನೆನ್ನೆಗೆ ಅದರ ಓದು ಮುಗಿದಿತ್ತು ಎನ್ನಿಸುತ್ತದೆ. "ಆ ಕಾದಂಬರಿ ಓದಿಯಾಯ್ತು ಮಾರಾಯ. ಬಹಳಾ ಬಹಳ ಚೆನ್ನಾಗಿದೆ. ಕೊನೆಯಲ್ಲಂತೂ ಇಷ್ಟು ವೇದಾಂತವಾಗಿ, ನೈಜವಾಗಿ ಮೂಡಿ ಬಂದಿದೆ ಎಂದರೆ ಭಲೇ ಭಲೇ ಎನ್ನಬೇಕು. ನಿನಗೆ ತಂದು ಕೊಡ್ತೀನಿ, ಓದಿ ನೋಡು," ಎಂದ. ನಾನೂ ಇತ್ತೀಚಿನ ವರ್ಷಗಳಲ್ಲಿ ಮೋನಪ್ಪನ ಹೊಸ ಬರಹಗಳನ್ನು ಓದಿಲ್ಲ, ಆಯ್ತು ಕೊಡು ಎಂದೆ.

ಕಥೆ ಮತ್ತು ಅದರ ಹರವು ಭಾಷೆಗೆ ಹೊಸದೇ. ನಿಜವಾಗಿಯೂ ಚೆನ್ನಾಗಿದೆ, ಪಕ್ವವಾಗಿದೆ ಎನ್ನಿಸುತ್ತಿತ್ತು ಮೊದಮೊದಲು. ಆದರೂ ಕೆಲವೊಂದು ಕಡೆ ಇದು ಬಾಲಿಷ ಚಿಂತನೆ ಎಂದೂ ಅನ್ನಿಸುತ್ತಿತ್ತು. ಕೃತಿಯ ಮೂಲಕ ಲೇಖಕನನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನಲ್ಲ. ಬರಹಗಾರ ಕಥೆ ಅಥವ ವಿಷಯವನ್ನು ಅನಾವರಣಗೊಳಿಸುತ್ತ ತನ್ನ ಸ್ವಂತ ಚಿಂತನೆಯನ್ನು, ಅಭಿಪ್ರಾಯವನ್ನು ಬಿಡಿಸಿಡುತ್ತಾನೆ. ಇದು ಈ ಲೇಖಕನ ಸ್ವನಂಬಿಕೆ, ವಿಚಾರ ಎಂದು ಸ್ಪಷ್ಟವಾಗಿಯೇ ಕೆಲವೊಮ್ಮೆ ಕಾಣಿಸುತ್ತದೆ. ಜನ ಬರಹಗಾರನಿಗೆ ಈತ ಈ ಪಂಥದವನು, ಸಿದ್ಧಾಂತದವನು ಎಂದು ಪಟ್ಟ ಕಟ್ಟುವುದು ಅವನು ರಚಿಸುವ ಕೃತಿಯಿಂದಲೇ ಹೊರತು ಅವನು ತನ್ನ ಡಂಗೂರ ಸಾರಿಕೊಳ್ಳುವುದರಿಂದಲ್ಲವಲ್ಲ. ನಾನು ಈಗ ಓದುತ್ತಿದ್ದ ಕಥೆಯಲ್ಲಿಯೂ ಹಾಗೆಯೇ ಆಗಿತ್ತು. ಕೆಲವೊಂದು ಕ್ರಾಂತಿಕಾರಕ, ವೈಚಾರಿಕ ಮತ್ತೆ ಕೆಲವು ಎಂದಿನಂತೆ ಅತಿ ಸಾಂಪ್ರದಾಯಕ, ಸಮಕಾಲೀನ ಸ್ಥಿತಿಗತಿಗೆ, ಜ್ಞಾನಕ್ಕೆ ಅನರ್ಹ. ನನಗಂತೂ ಮೋನಪ್ಪ ಮತ್ತಷ್ಟು ನಿಗೂಢವಾಗುತ್ತ ಹೋದ.

ಅವನಿಗೆ ಒಂದಿಬ್ಬರು ಡಾಕ್ಟರ್ ಸ್ನೇಹಿತರಿದ್ದರು ಇಲ್ಲೇ. ಸ್ವಲ್ಪ ದೂರದ ಸಂಬಂಧಿಗಳೂ ಆಗಿದ್ದರು ಅನ್ನಿಸುತ್ತೆ. ಅವರನ್ನು ಮತ್ತು ನನ್ನ ಕುಟುಂಬವನ್ನು ಊಟಕ್ಕೆ ಕರೆದಿದ್ದ ಅಂದು. ನನಗೆ ಈ ಡಾಕ್ಟರುಗಳೊಂದಿಗಿನ ಭೇಟಿ ಬೇಕಾಗಿಯೂ ಇತ್ತು. ಕಾರಣ ನಾನು ಓದುತ್ತಿದ್ದ ಕಥೆಯಲ್ಲಿ ಬಂದಿದ್ದ ಒಂದು ಭಾಗ. ಮಧ್ಯಾಹ್ನದ ಊಟವಾದ ನಂತರ ಹೆಂಗಸರು ಅವರದೇ ಮಾತುಕಥೆಗಳಲ್ಲಿ ಮುಳುಗಿದಾಗ ನಾನು, ಅವನು ಮತ್ತು ಆ ಮತ್ತಿಬ್ಬರು ಡಾಕ್ಟರುಗಳು ಬಾಲ್ಕನಿಯಲ್ಲಿ ಕುಳಿತು ಹರಟಲಾರಂಭಿಸಿದವು. ಜಗತ್ತಿನ ಸರಿಸುಮಾರು ಎಲ್ಲಾ ವಿಷಯಗಳು ಸಮಯ ಕೊಲ್ಲಲು ಬಳಕೆಯಾದವು. ಒಂದು ಹಂತದಲ್ಲಿ ನಾನೆಂದೆ. "ಹೌದಾ ಡಾಕ್ಟ್ರೆ? ಐವತ್ತು ಅರವತ್ತಷ್ಟು ವಯಸ್ಸಾದ ಗಂಡಸಿಗೆ ಹುಟ್ಟೋ ಮಕ್ಕಳು ಶಕ್ತಿವಂತವಾಗಿರಲ್ವಂತೆ. ನಿಮ್ಮ ವೈದ್ಯ ವಿಜ್ಞಾನ ಏನನ್ನುತ್ತೆ?" ಅವರಿಬ್ಬರೂ ಒಂದು ತರಹ ಚಕಿತರಾದರು. ಅಸಂಬದ್ಧ ಪ್ರಶ್ನೆ ಎಂಬಂತೆ ನನ್ನ ಕಡೆ ನೋಡಿದರು. ಅವನು ಅವರಿಗಿಂತ ಮುಂಚೆ ನಡುವೆ ಬಾಯಿ ಹಾಕಿ "ಎಲ್ಲಾದರೂ ಉಂಟಾ ಮಾರಾಯ. ನಾನಂತೂ ಎಲ್ಲೂ ಕೇಳಿಲ್ಲ. ನಮ್ಮಲ್ಲಿ ಮೊದಲೆಲ್ಲಾ ಎರಡು ಮೂರು ಮದುವೆಯಾಗಿ ಒಂದು ಕಡೆ ಮಗಳು ತವರು ಮನೆಯಲ್ಲಿ ತೊಟ್ಟಿಲು ಕಟ್ಟಿದ್ದರೆ ಮತ್ತೊಂದು ಮೂಲೆಯಲ್ಲಿ ಹೆಂಡತಿ ತೊಟ್ಟಿಲು ಕಟ್ಟುವುದು ಇರಲಿಲ್ಲವೆ. ಅವರಿಗೆಲ್ಲ ಏನಾಯ್ತು?" ಎಂದ. ಇದೊಳ್ಳೆ ಪೀಕಲಾಟ ಬಂತಲ್ಲ ಇಲ್ಲಿ ಎಂದು, ನಾನೆಂದೆ, "ಅಯ್ಯೋ ಇದು ನನ್ನ ಅಭಿಪ್ರಾಯವಲ್ಲ ಮಾರಾಯ. ನೀನು ಕೊಟ್ಟ ಕಾದಂಬರಿಯಲ್ಲಿ ಒಂದು ಡಾಕ್ಟರ್ ಪಾತ್ರ ಒಂದು ಹೆಂಗಸಿಗೆ ಈ ತರಹದ ಸಲಹೆ ನೀಡಿ, ಗರ್ಭಪಾತ ಮಾಡಿಸಿಕೋ ಅಂತಾಳೆ. ಅದು ಪ್ರಾಮಾಣಿಕ, ವೈಜ್ಞಾನಿಕ ಅಭಿಪ್ರಾಯ ಅನ್ನೋ ರೀತಿ ಬಂದಿದೆ ಅಲ್ಲಿ. ನೀನೂ ಅದನ್ನು ಓದಿದ್ದೀಯಲ್ಲ? ಅದು ನಿಜವೋ ಸುಳ್ಳೋ ಅಂತಷ್ಟೇ ಡಾಕ್ಟರನ್ನು ಕೇಳಿದೆ." ಅವನು ಗಾಬರಿಯಾದ. ಇದ್ಯಾವುದನ್ನೂ ಅವನು ಓದುವಾಗ ಗಮನಿಸಿರಲಿಲ್ಲವೋ ಇನ್ನೊಂದೊ. ಎಲ್ಲಿ ಬರುತ್ತದೆ ಅದು ಎಂಬಂತೆ ನೆನಪಿಸಿಕೊಳ್ಳಲಾರಂಭಿಸಿದ. ನಾನು ಮತ್ತೆ ಡಾಕ್ಟರುಗಳತ್ತ ನೋಡಿದೆ.

ಅವರಲ್ಲಿ ಒಬ್ಬ ಡಾಕ್ಟರು ನಮ್ಮ ತರಹವೇ ಆಗಾಗ ಕಥೆ ಕಾವ್ಯ ಓದುವ ಹವ್ಯಾಸವಿದ್ದಾತ. ಆತನಿಗೂ ಈ ಮೋನಪ್ಪನ ಬಗೆಗೆ ಅಭಿಮಾನವಿತ್ತು. ನಾವು ಚರ್ಚಿಸುತ್ತಿದ್ದ ಕಾದಂಬರಿಯನ್ನೂ ಓದಿದ್ದ. ಆದರೆ ಆತನಿಗೂ ಆ ವಿಷಯ ಮರೆತು ಹೋಗಿತ್ತು. ನನ್ನತ್ತ ನೋಡುತ್ತ "ನನಗೆ ತಿಳಿದಿರುವ ಹಾಗೆ ಎಪ್ಪತ್ತು-ಎಂಭತ್ತರ ವಯಸ್ಸಿನಲ್ಲಿಯೂ ಜನ ಆರೋಗ್ಯವಂತ ಮಕ್ಕಳಿಗೆ ತಂದೆಯಾಗಿದ್ದಾರೆ. ನಾನು ಆ ಪುಸ್ತಕ ಮತ್ತೆ ಓದಬೇಕು ಅಲ್ಲೇನು ಬಂದಿದೆ ಅಂತ. ಆದರೂ, ವಯಸ್ಸಿಗೆ ಸಂಬಂಧ ಪಟ್ಟಂತೆ ಗಂಡಸಿನ ಫಲವತ್ತತೆ ಮತ್ತು ಕಾಮೇಚ್ಛೆ ಬದಲಾಗಬಹುದಾದರೂ ಹುಟ್ಟುವ ಮಗುವಿನ ಆರೋಗ್ಯದ ಮೇಲೆ ಅದರ ಪ್ರಭಾವವೇನೂ ಇರುವುದಿಲ್ಲ ಎನ್ನಬಹುದು. ಆದರೆ ಇಲ್ಲಿ ಒಬ್ಬ ಕಾದಂಬರಿಕಾರ ಕಾಲ್ಪನಿಕವಾಗಿ ಬರೆಯುವುದೆಲ್ಲವೂ ಚಾರಿತ್ರಿಕವಾಗಿ, ವೈಜ್ಞಾನಿಕವಾಗಿ ಸರಿ ಇರಬೇಕು ಎಂದು ನಾವು ಬಯಸುವುದು ಸರಿಯಲ್ಲ. ನಾವು ಚರ್ಚಿಸುತ್ತಿರುವ ಈ ಸಾಹಿತಿ ಇರಬಹುದಾದ ಸಾಧ್ಯತೆಗಳ ಪರಿಮಿತಿಗಳೊಳಗೆ ಕಥೆಯನ್ನು ಬಂಧಿಸಿಡುವುದರಲ್ಲಿ ಬಹಳ ಶ್ರಮವಹಿಸುತ್ತಾನೆ. ಹಾಗೆ ಕೆಲವು ಸಾರಿ ಈ ಅತೀಂದ್ರಿಯ ಗ್ರಹಿಕೆಯನ್ನು ನಂಬುತ್ತಾನೆ. ಆದ್ದರಿಂದ ಓದುಗರು ಈ ತರಹವುಗಳನ್ನು ಉಪೇಕ್ಷಿಸಿ ಆತನ ನಂಬಿಕೆಗಳನ್ನು ಗೌರವಿಸಬೇಕು," ಎಂದ. ನೀವು ಹೇಳುವುದೂ ಸರಿ ಎಂದೆ ನಾನು.

ಮತ್ತೊಬ್ಬ ಡಾಕ್ಟರು ಈ ಸಾಹಿತ್ಯ ಇಂತಹುದರಲ್ಲೆಲ್ಲಾ ಅನಾಸಕ್ತ. ಆತನಿಗ್ಯಾಕೋ ಈ ವಾದಗಳೆಲ್ಲ ಸರಿಬರದೆ, "ನನಗೆ ಈ ಕಥೆ ಕಾದಂಬರಿಗಳ ವಿಷಯ ಗೊತ್ತಿಲ್ಲ ಕಣ್ರಿ. ಇಪ್ಪತ್ತು ವರ್ಷದ ಯುವಕನ ಬೀಜ ಆರೋಗ್ಯವಂತ ಗಟ್ಟಿಮುಟ್ಟು ಮಗುವಿನ ಜನನಕ್ಕೆ ಮೂಲ, ಅರವತ್ತು ವರ್ಷದ ಮುದುಕನ ಬೀಜ ದುರ್ಬಲ ಮಗುವಿನ ಜನನಕ್ಕೆ ಕಾರಣ ಎನ್ನುವುದು ನಿಜವಲ್ಲ. ವಯಸ್ಸಾದಂತೆ ವೀರ್ಯದಲ್ಲಿ ಕೆಲವು ಅಂಶಗಳೇನೋ ಕಮ್ಮಿಯಾಗುತ್ತವೆ. ಆ ರೀತಿ ನೋಡಿದರೆ ವಯಸ್ಸಾದ ಹೆಂಗಸರಿಗೆ ಹುಟ್ಟುವ ಮಕ್ಕಳಿಗೆ ಡೌನ್ ಸಿಂಡ್ರೋಮ್ ಬರುವ ಅವಕಾಶಗಳು ಇಪ್ಪತ್ತು-ಮುವ್ವತ್ತರ ವಯಸ್ಸಿನ ಹೆಂಗಸರಿಗಿಂತ ಜಾಸ್ತಿ ಇದ್ದರೂ ಕಮ್ಮಿ ವಯಸ್ಸಿನ ತಾಯಂದಿರ ಮಕ್ಕಳಲ್ಲೂ ಇದು ಕಾಣಿಸುತ್ತದೆ. ಇನ್ನು ವಯಸ್ಸಾದ ಗಂಡಸಿಗೆ ಹುಟ್ಟುವ ಮಗು ಅಷ್ಟು ಆರೋಗ್ಯವಂತವಾಗಿರುವುದಿಲ್ಲ ಎನ್ನುವುದು ವೈಜ್ಞಾನಿಕವಾಗಿ ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ನೀವು ಹೇಳುತ್ತಿರುವ ಸಾಹಿತಿ ಬಹಳ ಪ್ರಸಿದ್ಧ ಮತ್ತು ಜನಪ್ರಿಯ ಅಂತೀರ. ಈ ಬರಹಗಾರರಿಗೆ ಏನೇ ಆಗಲಿ ಸ್ವಲ್ಪ ಸಾಮಾಜಿಕ ಬದ್ದತೆ ಇರಬೇಕು. ಪ್ರಶಸ್ತಿಗೆ, ಪ್ರಚಾರಕ್ಕೆ, ದುಡ್ಡಿಗೆ ಮಾತ್ರವೇ ಬರೀಬಾರದು. ಏಕೆಂದರೆ ಕೆಲವು ಜನ ಪ್ರಕಟವಾಗಿರೋದೆಲ್ಲ, ಸಾಹಿತಿಗಳು ಹೇಳೋದೆಲ್ಲ ಸತ್ಯ ಅಂತ ನಂಬಿಬಿಡ್ತಾರೆ," ಎಂದ. ನಾವ್ಯಾರೂ ಮತ್ತೆ ಆ ವಿಷಯ ಮುಂದುವರಿಸಲಿಲ್ಲ.

ಕೆಲಸದ ಒತ್ತಡದಿಂದಾಗಿ ನನ್ನ ಓದು ನಿಧಾನವಾಗಿ ಸಾಗುತ್ತಿತ್ತು. ಈ ನಡುವೆ ಸಾಹಿತಿಗಳಿಗೆಂದು ಮೀಸಲಾದ ಕೆಲವು ಪ್ರಶಸ್ತಿ, ಪುರಸ್ಕಾರಗಳು ಅಷ್ಟೇನೂ ವಯಸ್ಸಾಗದ ಲೇಖಕರಿಗೆ ಸಂದಾಯವಾಗಿದ್ದವು. ಇವರೆಲ್ಲ ಮೋನಪ್ಪನಿಗಿಂತ ಕಿರಿಯರಾಗಿದ್ದುದರಿಂದ ಮೋನಪ್ಪನಿಗೆ ಇಲ್ಲಿಯೂ ಅನ್ಯಾಯವಾಗಿದೆ ಎಂದು ಆತನ ಭಕ್ತರು ಗುಲ್ಲೆಬ್ಬಿಸಿ ಪತ್ರಿಕೆಗಳ ಓದುಗರ ವಿಭಾಗಗಳಲ್ಲಿ, ವೇದಿಕೆಗಳಲ್ಲಿ ಈ ವಿಷಯದ ಮೇಲೆ ಪರಸ್ಪರ ಪರವಿರೊಧ ಎರಚಾಟಗಳು ನಡೆದಿದ್ದವು. ಅವನೂ ಈ ವಿಷಯದ ಮೇಲೆ ಆಗಾಗ ಮನಸ್ಸಿಗೆ ಬಹಳ ಹಚ್ಚಿಕೊಂಡು ಮಾತನಾಡುತ್ತಿದ್ದ. ಮೊದಲೇ, ನಮ್ಮಲ್ಲಿರುವ ಶ್ರೇಷ್ಠ ಸಾಹಿತಿ ಎಂದರೆ ಮೋನಪ್ಪನೇ; ನಮ್ಮಲ್ಲಿನ ಯಾರಿಗಾದರೂ ನೋಬೆಲ್ ಬಂದರೆ ಅದಕ್ಕೆ ಮೋನಪ್ಪನಿಗಿಂತ ಅರ್ಹ ಬೇರೆ ಯಾರೂ ಇಲ್ಲ, ಎಂದು ವಾದಿಸುತ್ತಿದ್ದ. ಇಂದೂ ಊಟದ ಟೇಬಲ್‌ನಲ್ಲಿ ಇದೇ ವಿಷಯದ ಮೇಲೆ ಸ್ವಲ್ಪ ಹೊತ್ತು ಮಾತನಾಡಿದ. ಅದೂ ಇದೂ ಮಾತನಾಡುತ್ತ ಕೊನೆಗೆ ಇದರ ಮಧ್ಯೆ ಒಬ್ಬ ಸಿನೆಮಾ ನಟನ ಅಭಿಮಾನಿಗಳು ಯಾವುದೋ ಕಾರಣಕ್ಕೆ ಮಾಡುತ್ತಿದ್ದ ಗಲಭೆ ಗದ್ದಲಗಳ ವಿಷಯ ಪ್ರಸ್ತಾಪವಾಯಿತು. "ಇವರು ಏನು ಹುಚ್ಚು ಜನರು ಮಾರಾಯ. ಆತ ಕೇವಲ ನಟ, ಕಲಾವಿದ. ಆ ದೃಷ್ಠಿಯಿಂದ ನೋಡೋದು ಬಿಟ್ಟು ಈ ಮೂರ್ಖ ಜನ ಏನು ಕುರುಡು ಭಕ್ತಿ ಪ್ರದರ್ಶಿಸುತ್ತಾರೆ. ಸ್ವಲ್ಪಾನೂ ಇವರಿಗೆ ಸ್ವಾಭಿಮಾನ ಬೇಡವ ಈ ತರಹ ಚಿಲ್ಲರೆಯಾಗಿ ಆಡೋಕೆ. ಅದಕ್ಕೇ ನಮ್ಮ ದೇಶ ಕೆಟ್ಟಿರೋದು. ಆ ನಟ ನಟಿಸ್ತಾನೆ, ದುಡ್ಡು ಮಾಡ್ತಾನೆ. ಆದರೆ ಸಮಾಜಕ್ಕೆ ಏನು ಮಾಡಿದ್ದಾನೆ? ಆಗಾಗ ಬರ ಪರಿಹಾರಕ್ಕೊ ಇನ್ನೊಂದಕ್ಕೊ ಒಂದಿಷ್ಟು ಹಣ ನೀಡಿರಬಹುದು, ಇಲ್ಲ ಅನ್ನೋದಿಲ್ಲ. ಅದನ್ನಾದರೂ ಯಾವತ್ತಾದರೂ ಪ್ರಚಾರ ಇಲ್ಲದೆ ಕೊಟ್ಟಿದ್ದಾನ? ಆದರೆ ಈ ಅರ್ಧಂಬರ್ಧ ಓದಿರೋ ಅವಿದ್ಯಾವಂತ ಜನ ತಲೆ ಮೇಲಿಟ್ಕೊಂಡು ಮೆರೆಸ್ತಾರಲ್ಲ, ಇವರಿಗೇನಾದರೂ ಎಗ್ಗು ಸಿಗ್ಗು ಇದೆಯಾ?" ಅಂದ.

"ಕೋಪ ಮಾಡ್ಕೋ ಬೇಡ ಹೀಗೆ ಹೇಳ್ತೀನಿ ಅಂತ. ಆ ವಿಷಯಕ್ಕೆ ಬಂದರೆ ನೀನು ಮಾಡ್ತಿರೋದು ತಾನೆ ಏನು?" ಎಂದೆ ನಾನು, ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ. ಅವನಿಗೆ ಆಶ್ಚರ್ಯವಾಯಿತು, "ನಾನೇನ್ಮಾಡಿದೆ ಇಲ್ಲಿ?" ಎಂದ.

"ಈ ಮಧ್ಯೆ ನಾನು ಒಂದಿಬ್ಬರು ಸ್ನೇಹಿತರ ಜೊತೆ ಮಾತನಾಡುವಾಗ ಮೋನಪ್ಪನ ಪ್ರಸ್ತಾಪ ಬಂತು. ನೀನು ಕೊಟ್ಟ ಈ ಹೊಸ ಕಾದಂಬರಿ ಬಗ್ಗೆ ಅವರು ಹೇಳಿದ್ದು; ಲೈಂಗಿಕ ಅತೃಪ್ತಿಯಿಂದ ಬಳಲುವ ವ್ಯಕ್ತಿ ಬರೆಯುವ ಬರವಣಿಗೆ ಅದು, ಇಲ್ಲಿಯ ತನಕ ಕಾಣದಿದ್ದ ಈ ಕಾಮದ ನಿರ್ಭಿಡೆ ಈಗ ಈ ತರಹ ಕಾಣ್ತಿದೆ ಅಂದ್ರೆ ಏನು? ಅಂತ. ಯಾರೋ ಪತ್ರಿಕೇಲೂ ಅದೇ ರೀತಿ ಬರೆದಿದ್ದರು. ಹೀಗಿದ್ದರೂ ನಾನು ನೀನು ಕೃತಿ ವಿಮರ್ಶೆ ಮಾಡದೆ, ವ್ಯಕ್ತಿಯ ಕುರಿತು ವೈಭವೀಕರಣಕ್ಕೆ ಚರ್ಚೆಗೆ ಇಳಿದು ಬಿಟ್ಟಿದ್ದೀವಿ. ಆ ಪ್ರಶಸ್ತಿ ಬರಲಿಲ್ಲ ಈ ಪುರಸ್ಕಾರ ಬರಲಿಲ್ಲ ಅಂತೀಯ ನೀನು. ಮೋನಪ್ಪ ಅಂದರೆ ಸಾಕು ನಿನ್ನ ಕಿವಿ ನಿಮಿರುತ್ತೆ. ಆದರೆ ನಿನ್ನ ಆ ಆರಾಧ್ಯ ಲೇಖಕನೇ, ಪ್ರತಿಭೆಯನ್ನು ಮುಚ್ಚಿಡೋಕೆ ಸಾಧ್ಯವಿಲ್ಲ. ಯಾವತ್ತಿದ್ದರೂ ಅದಕ್ಕೆ ನೆಲೆ ಬೆಲೆ ಇದೆ, ಅಂತಾನೆ. ಆತನೇ ಸುಮ್ಮನಿರುವಾಗ ನೀನ್ಯಾಕೆ ವ್ಯಕ್ತಿ ಪೂಜೆ ಮಾಡ್ತೀಯ? ನಿನಗೂ, ಆ ನಟನ ಭಕ್ತರು ಅಂತ ಹೇಳಿಕೊಳ್ಳುವ ಅಭಿಮಾನಿಗಳಿಗೂ ಏನು ವ್ಯತ್ಯಾಸ?" ಎಂದೆ ಸ್ವಲ್ಪ ಬಿರುಸಾಗಿಯೆ. ನಾನು ಹೇಳಿದ ಧಾಟಿ ಸ್ವಲ್ಪ ವ್ಯಂಗ್ಯವಾಗಿಯೂ ಇತ್ತು.

ಅವನು ಕೆಲವು ಕ್ಷಣ ಏನೂ ತೋಚದಂತೆ, ನೋವಾದವನಂತೆ ಕಂಡ. ಸ್ವಲ್ಪ ಹೊತ್ತಾದ ಮೇಲೆ ಶಾಂತನಾದ. ಯೋಚಿಸುತ್ತಿದ್ದ ಎಂದು ಕಾಣಿಸುತ್ತದೆ. ನಾನು, ಇದೇನು ಕೆಲಸ ಮಾಡಿಬಿಟ್ಟೆ ನಾನು ಎಂದು, ಮತ್ತೇನು ಮಾತನಾಡಿದರೆ ಏನಾಗುವುದೋ ಎಂದು ಸುಮ್ಮನೆ ತಲೆ ಬಗ್ಗಿಸಿ ಊಟ ಮುಗಿಸಿದೆ. ಅವನದೂ ಊಟ ಮುಗಿಯಿತು. ಎಂದಿಗಿಂತ ಶಾಂತವಾಗಿ, ನಿರುದ್ವಿಗ್ನವಾಗಿ ಮಾತನಾಡಲಾರಂಬಿಸಿದ.

"ನನಗೂ, ನಿನಗೂ, ಆ ನಟನ ಭಕ್ತರಿಗೂ ಅಂತಹ ದೊಡ್ಡ ವ್ಯತ್ಯಾಸವಿಲ್ಲ ದೋಸ್ತು. ನೀನು ಯಾವಾಗಲೋ ಮೋನಪ್ಪನನ್ನು ನಾನು ನೋಡುವ ದೃಷ್ಠಿಕೋನದ ವಿರುದ್ಧ ದಿಕ್ಕಿನಲ್ಲಿ ನೋಡಲು ಆರಂಭಿಸಿದ್ದೀಯ. ನಿನಗೆ ದ್ವೇಷ ಇಲ್ಲದಿರಬಹುದು, ಆದರೆ ಒಂದು ರೀತಿಯ ಪೂರ್ವಾಗ್ರಹವಂತೂ ಹುಟ್ಟಿಕೊಳ್ತು. ಆದ್ದರಿಂದ ಮೋನಪ್ಪ ಹೇಳೋ ಒಳ್ಳೆಯದಕ್ಕಿಂತ ನಿಜಕ್ಕಿಂತ, ಸುಳ್ಳಿಗೆ ತಪ್ಪಿಗೆ ಮಹತ್ವ ಕೊಡ್ತೀಯ ನೀನು. ಏನು ತಪ್ಪು ಮಾಡಿದ್ದಾನೆ ಅಂತ ಹುಡುಕಿ ಹುಡುಕಿ ಟೀಕಿಸ್ತೀಯ. ಮೋನಪ್ಪನ ಬಗ್ಗೆ ಜನ ಹೀಗಂತಾರೆ ಅಂತೀಯೇ ಹೊರತು ನನ್ನ ಸ್ವಂತ ಅಭಿಪ್ರಾಯ ಇದು ಅಂತೇನಾದರೂ ಹೇಳಿದ್ದೀಯಾ? ನಿನ್ನಂತೆ ಯೋಚನೆ ಮಾಡೊವರನ್ನ, ನಿನ್ನ ಯೋಚನೆ ಒಪ್ಪುವಂತೆ ಬರೆಯುವ, ಬರೆದಿರುವ ಲೇಖಕರನ್ನೇ ಮೆಚ್ತೀಯ. ಅವರು ಹೇಳೋದೇ ಪರಮ ಸತ್ಯ ಅಂತೀಯ. ಅವರು ನನ್ನಂತಹವರ ದೃಷ್ಠಿಯಲ್ಲಿ ಈ ಕಾರಣಕ್ಕೆ ತಪ್ಪು ಅಂದರೆ ಅವರನ್ನು ಸಮರ್ಥಿಸುವ, ಅವರು ಯಾಕೆ ಸರಿ ಅಂತ ಕಾರಣ ಹುಡುಕ್ತೀಯ. ಈ ಕಡೆ ನಾನು ಮಾಡ್ತಿರೋದು ಅಷ್ಟೇ. ಯಾವ ಸಮಯದಲ್ಲಿಯೋ, ಎಲ್ಲಿಯೋ, ಮೋನಪ್ಪನ ಬರವಣಿಗೆಯಲ್ಲಿ ನನಗೆ ಲಿಂಕ್ ಹುಟ್ಟಿಕೊಂಡು ಬಿಡ್ತು. ಆವತ್ತಿನಿಂದ ಆತ ಬರೆಯುವುದೆಲ್ಲ ಸರಿ ಅನ್ನಿಸಿತು. ಮನಸ್ಸಿಗೆ ಒಪ್ಪುವ ಕಥಾಭಾಗದಲ್ಲಿ ಕಥನ ಶೈಲಿ, ವಾಸ್ತವಿಕತೆ, ರಂಜನೆ, ರೋಮಾಂಚನ, ಜೀವನಾನುಭವ, ಜೀವನಪ್ರೀತಿ ಎಲ್ಲಾ ಇಷ್ಟವಾದವು. ಅಸಹಜ ಅನ್ನಿಸಿದ ಭಾಗದಲ್ಲಿ ಮತ್ತೇನೋ ಇಷ್ಟವಾಯಿತು ಇಲ್ಲ ನಗಣ್ಯವಾಯಿತು. ಅಲ್ಲಿ ಆತನ ಚಿಂತನೆ, ನಂಬಿಕೆ ಮುಖ್ಯವಾಗಲಿಲ್ಲ. ಯಾಕೆ ಅಂದರೆ ಆತ ತಪ್ಪು ಮಾಡೊದಿಲ್ಲ ಅನ್ನೋ ಕುರುಡು ನಂಬಿಕೆ. ನಾವು ನಮ್ಮ ವೈಯಕ್ತಿಕ ಜೀವನದ ನೊವು ಸೋಲುಗಳನ್ನೇ ಇನ್ನೊಬ್ಬರಲ್ಲಿ ನೋಡಿ ಹುಡುಕಿ ನೆಮ್ಮದಿ ತಂದ್ಕೊಳ್ತೀವೋ ಏನೋ? ಮನಸ್ಸು ಮಂಗನ ತರಹ ನೋಡು. ಇಲ್ಲ ಇಲ್ಲ ನಾಯಿ ತರಹ. ಏನನ್ನಾದರೂ ಇಷ್ಟ ಪಡೋದಕ್ಕೆ, ಪಡದೇ ಇರೋದಕ್ಕೆ ಮನಸ್ಸು ಬಂದ್ಬಿಟ್ಟರೆ ಸಾಕು, ಅದಕ್ಕೆ ತಕ್ಕನಾದ ವಾದ-ಪ್ರತಿವಾದಗಳನ್ನ ಹುಟ್ಟಿಸಿಕೊಂಡುಬಿಡುತ್ತಂತೆ. ನಮಗೆ ಇಷ್ಟವಾದದ್ದನ್ನ ಸಮರ್ಥಿಸಿಕೊಳ್ಳೋಕೆ ಬೇಕಾದರೆ ರಾಮಾಯಣ ಮಹಾಭಾರತ ಚರಿತ್ರೆ ಎಲ್ಲಾ ಹುಡುಕಿ ಒಂದು ಉಪಮೆ ತಂದ್ಬಿಡ್ತೀವಿ. ಬೇರೆಯವರು ನಮ್ಮ ಪ್ರಶ್ನೆಗೆ ಪ್ರತಿವಾದವನ್ನು ನಮ್ಮ ತರಹವೇ ಹುಡುಕ್ತಿರೋವಾಗ ನಾವು ಗೆದ್ದೆವು, ನಾವೇ ಗೆದ್ದೆವು ಎಂದುಕೊಳ್ತೀವಿ. ಏನು ಮೂರ್ಖ ಜೀವನವೋ ಹೋಗು ಮಾರಾಯ. ಒಂದೊಂದ್ಸಾರಿ ಅನ್ನಿಸುತ್ತೆ, ನಾವು ಬೇರೆಯವರನ್ನು ವಂಚಿಸೋದಿಕ್ಕಿಂತ, ಬೇರೆಯವರು ನಮ್ಮನ್ನು ಮೂರ್ಖರನ್ನಾಗಿ ಮಾಡೊದಿಕ್ಕಿಂತ, ನಮ್ಮನ್ನ ನಾವೇ ಮೂರ್ಖರನ್ನಾಗಿಸಿಕೊಳ್ಳೋದು, ವಂಚಿಸಿಕೊಳ್ಳೋದೇ ಜಾಸ್ತಿ. ಈ ಸ್ವವಂಚನೆಯಲ್ಲಿ ನೆಮ್ಮದಿ, ಭದ್ರತೆ ಕಾಣ್ತೀವಿ. ನಮ್ಮ ಮನಸ್ಸನ್ನು ನಾವೇ ನೋಯಿಸಿಕೊಂಡು ಸತ್ಯ ಕಾಣೋದಿಕ್ಕೆ ಇಷ್ಟ ಪಡೋದಿಲ್ಲ. ಬೇರೆಯವರು ನಿಜ ಹೇಳಿ ನೋಯಿಸಿದರೆ ಈ ಬಡ್ಡೀಮಗ ನನ್ನನ್ನೆ ಹೀಗಂತಾನಲ್ಲ ಅಂತ ಗರ್ವ ಪಟ್ಟುಕೊಂಡು ಅವರನ್ನು ದೂರ ಮಾಡ್ಕೊಳ್ಳೋಕೆ, ಅವರ ಮನಸ್ಸು ನೋಯಿಸೋದಿಕ್ಕೆ, ಹಣಿಯೋದಿಕ್ಕೆ ಕಾಯ್ತೀವಿ. ಆತ್ಮರತಿಯಲ್ಲಿ ಮುಳುಗಿ ಇದ್ದಲ್ಲೆ ಇದ್ದು ಬಿಡ್ತೀವಿ, ಸ್ಥಾವರವಾಗಿ. ಇಷ್ಟಕ್ಕೂ ಈ ಸಾಹಿತ್ಯದ ಬಗ್ಗೆ, ಸಮಾಜದ ಬಗ್ಗೆ ಮಾತನಾಡೋಕ್ಕೆ ನಾವೆಷ್ಟರವರು? ಸಾಹಿತ್ಯ ಕೇವಲ ನಮ್ಮ ಹವ್ಯಾಸ. ಸಮಯ ಕೊಲ್ಲೋದಿಕ್ಕೆ ಕಥೇನೋ ಇನ್ನೊಂದೋ ಓದ್ತೀವಿ. ಅದರಲ್ಲಿ ಅಧಿಕಾರಯುತವಾಗಿ ಮಾತನಾಡೋಕೆ ತಕ್ಕಷ್ಟು ಪರಿಶ್ರಮ ನಮಗಿಲ್ಲ. ನಮ್ಮ ಅಭಿಪ್ರಾಯಕ್ಕೂ ಬೆಲೆ ಇರಬೇಕು ಅನ್ನೋ ಹುಚ್ಚಿನಲ್ಲಿ ಅಭಿಪ್ರಾಯದ ಬೆಲೆ ಕಳೀತೀವಿ. ನಾವು ಮಾಡೋ ಕೆಲಸದಲ್ಲೇನಾದರೂ ಹೊಸ ತಂತ್ರಜ್ಞಾನ ಬಂದರೆ ಬೇರೆಯವರು ನನಗಿಂತ ಮೊದಲು ಎಲ್ಲಿ ಅದನ್ನು ಕಲಿತುಬಿಟ್ಟು ನನ್ನನ್ನು ಅಯೋಗ್ಯ ಮಾಡ್ಬಿಡ್ತಾರೋ ಅನ್ನೋ ಭಯದಲ್ಲಿ ಹೊಸಹೊಸ ಜ್ಞಾನ ಕಲೀತಾ ಹೋಗ್ತೀವಿ. ಆದರೆ ವೃತ್ತಿಜೀವನಕ್ಕೆ, ನಮ್ಮ ಕೆರಿಯರ್‌ಗೆ ಅಡ್ಡ ಬರದೇ, ಯಾವುದೇ ಪ್ರಭಾವ ಬೀರದೇ ಇರೋ ಇನ್ನೊಂದು ಕಡೆ ಈ ಹಳೇ ವಿಚಾರಗಳಿಗೇ ಜೋತು ಬಿದ್ದು, ಹೊಸದೇನೂ ಕಲಿಯದೆ ತಿಳಿದುಕೊಳ್ಳದೆ, ಸ್ವಲ್ಪ ಗೊತ್ತಿರೋದನ್ನೇ ಬಹಳ ತಿಳಿದಿದೆ ಅಂದ್ಕೊಂಡು ಬಾವಿಕಪ್ಪೆಗಳು ಆಗ್ತೀವಿ. ಇರೋ ಹಾಸಿಗೇನೆ ಬೆಚ್ಚಗೆ ಅಂದ್ಕೊಂಡು ಅಡ್ಡಾಗ್ತೀವಿ."

ಅವನು ಮಾತನಾಡಲು ಪ್ರಾರಂಭಿಸುವುದಕ್ಕಿಂತ ಮುಂಚೆ ಎಲ್ಲಿ ನನ್ನ ವ್ಯಂಗ್ಯವನ್ನು ಅತಿ ವೈಯಕ್ತಿಕವಾಗಿ ತೆಗೆದುಕೊಳ್ತಾನೋ ಅನ್ನೋ ಭಯದಲ್ಲಿ ಇದ್ದೆ ನಾನು. ಅವನು ಇಷ್ಟು ಸಮಾಧಾನದಿಂದ, ಇಷ್ಟು ದೀರ್ಘವಾಗಿ ಮಾತನಾಡಿ ನಿಲ್ಲಿಸಿದ ಮೇಲೆ ನನಗೂ ನನ್ನ ನಂಬಿಕೆಗಳಲ್ಲಿ ಏನೇನು ಕುರುಡುತನಗಳಿರಬಹುದು ಅಂತ ಯೋಚನೆ ಶುರುವಾಯಿತು. ಅವನತ್ತ ಏನೋ ಹೊಸದನ್ನು ಕಲಿಸಿದ ಗುರುವನ್ನು ನೋಡುವಂತೆ ಕೃತಜ್ಞತೆಯಿಂದ ನೋಡಿದೆ. ಅವನು ಬಹಳ ನಿರಾಳವಾಗಿದ್ದವನಂತೆ ಕಂಡ. ಖುಷಿಯಾಯಿತು. ಅವನಂತೆ ನನಗೂ ಮನಸ್ಸು ಹಗುರವಾಯಿತು; ಒಬ್ಬನಿಗೆ ಹೇಳಿ, ಇನ್ನೊಬ್ಬನಿಗೆ ಕೇಳಿ. "ಎನ್ನ ನೀತಿಯ ಕುರುಡಿನಿಂದೆನ್ನ ರಕ್ಷಿಸೈ" ಎಂಬ ಕವಿವಾಣಿ ತಕ್ಷಣ ಜ್ಞಾಪಕಕ್ಕೆ ಬಂತು. ಅವನು ಮೇಲಕ್ಕೇಳುತ್ತ, "ಮೂರು ಗಂಟೆ ಸುಮಾರಲ್ಲಿ ನಿನ್ನ ಜಾಗಕ್ಕೆ ಬರ್ತೀನಿ, ಹೊರಗೆ ಸ್ಟಾರ್‌ಬಕ್ಸ್‌ಗೆ ಹೋಗಿ ಕಾಫ಼ಿ ಕುಡಿದು ಬರೋಣ ಮಾರಾಯ. ಬಹಳ ದಿನ ಆಗ್ತಾ ಬಂತು," ಎಂದ. ಮತ್ತೆ ಸಿಗುವ ಎಂದುಕೊಂಡು ನಮ್ಮ ಕೆಲಸದ ಜಾಗದತ್ತ ನಡೆದೆವು. ನಡಿಗೆ ಸರಾಗವಾಗಿ ಹಗುರವಾಗಿತ್ತು.

Oct 20, 2008

ಗೋಮೂತ್ರ, ಗೋಹತ್ಯೆ, ಮತಾಂತರ - ಅವಧಿ, ಜೋಗಿ, ಕೆಂಡಸಂಪಿಗೆ

ಕನ್ನಡದ ಅಂತರ್ಜಾಲ ಪ್ರಪಂಚ ಬದಲಾದ ಕಾಲಘಟ್ಟವನ್ನು ದಾಖಲಿಸುತ್ತ ಎರಡು ವಾರಗಳ ಹಿಂದೆ "ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ," ಎಂಬ ಬ್ಲಾಗ್ ಲೇಖನ ಬರೆದಿದ್ದೆ. ಆ ಲೇಖನದಲ್ಲಿ ಪ್ರಾಸಂಗಿಕವಾಗಿ ಮಂಗಳೂರಿನ ಡಾ. ಕಕ್ಕಿಲಾಯರ "ಆರೋಗ್ಯ ಸಂಪದ" ತಾಣವನ್ನು ಉದಾಹರಿಸಿದ್ದೆ. ಡಾ. ಕಕ್ಕಿಲಾಯರ ಹಲವಾರು ಲೇಖನಗಳನ್ನು ಓದಿದ್ದ ನನಗೆ ಅವರ ಇತ್ತೀಚಿನ ಲೇಖನವಾದ "ಗೋಮಯ, ಗೋಮೂತ್ರ: ಔಷಧಗಳೋ, ಅಪಮಾನವೋ?" ನಮ್ಮ ಸದ್ಯದ ಸ್ಥಿತಿಗೆ ಬಹಳ ಪ್ರಸ್ತುತವಾಗಿ ಕಂಡಿತು. ಖುಷಿಯ ವಿಚಾರ ಏನೆಂದರೆ, ಇದಾದ ನಂತರ ಅವಧಿಯವರೂ ಕಕ್ಕಿಲಾಯರವರ ಈ ಲೇಖನವನ್ನು ಅವರ ಬ್ಲಾಗಿನಲ್ಲಿಯೂ ಪ್ರಕಟಿಸಿ ಅದಕ್ಕೆ ಅಂತರ್ಜಾಲದ ಕನ್ನಡ ಓದುಗರಲ್ಲಿ ವಿಸ್ತೃತವಾದ ವೇದಿಕೆ ಒದಗಿಸಿಕೊಟ್ಟರು. ತನ್ನ ಓದುಗ ವಲಯದಲ್ಲಿ ಜನಪ್ರಿಯವಲ್ಲದ ಇಂತಹ ಲೇಖನವನ್ನು ಚರ್ಚೆಗೆ ತೆರೆದಿಟ್ಟ ಅವಧಿಯ ಕಾರ್ಯ ಶ್ಲಾಘನೀಯವಾದದ್ದು.

ಇವತ್ತು ಬೆಳಿಗ್ಗೆಯ "ಕೆಂಡಸಂಪಿಗೆ" ಮುಖಪುಟ ನಿಜಕ್ಕೂ ಶಾಕ್ ಉಂಟುಮಾಡಿತು. ಪ್ರತಿದಿನವೂ ಓದುವ ಮತ್ತು ಪ್ರತಿದಿನವೂ ಬರೆಯುವ ಕನ್ನಡದ ಇತ್ತೀಚಿನ ಜನಪ್ರಿಯ ಲೇಖಕ ಜೋಗಿ ಇಲ್ಲಿಯತನಕ ಎಲ್ಲರ ಪರವೂ ಇರುವಂತೆ ಬರೆದುಕೊಂಡು ಬಂದವರು. ಕವಿ, ಕವಿತೆ, ಕವಿಸಮಯ, ಕತೆ, ಕಾದಂಬರಿ, ಸಾಹಿತ್ಯ್ಯ, ರಸಾನುಭವ, ಇಂತಹ ಯಾರಿಗೂ ನೋವುಂಟು ಮಾಡದ, ಆದರೆ ಓದುಗರನ್ನು ಯಾವುದೊ ಒಂದು ತೃಪ್ತಿಯಲ್ಲಿ ನಿಲ್ಲಿಸುವ ಬರವಣಿಗೆ ಮಾಡಿಕೊಂಡು ಬಂದವರು. ಮತ್ತು ಅದೇ ಕಾರಣಕ್ಕೆ ಅಪಾರ ಓದುಗರನ್ನು (ವಿಶೇಷವಾಗಿ ಯುವಓದುಗರನ್ನು) ಸೃಷ್ಟಿಸಿಕೊಂಡವರು. ವಿವಾದಾಸ್ಪದ ವಿಷಯಗಳಿಂದ ದೂರ ಉಳಿದವರು. ಆದರೆ ಅವರು ತಮ್ಮ ಇವತ್ತಿನ ಲೇಖನದಲ್ಲಿ ಒಂದಲ್ಲ, ಹಲವಾರು ವಿಷಯಗಳ ಮೇಲೆ ತಮ್ಮ ಖಚಿತ ನಿಲುವುಗಳನ್ನು ಜಾಹೀರು ಮಾಡಿಬಿಟ್ಟಿದ್ದಾರೆ. ಗೋಮೂತ್ರದ craze ಗೆ ಹಿನ್ನೆಲೆ, "ಗೋವಿನ ಪಾವಿತ್ರ್ಯವನ್ನು ಸಾರಲು ಗೋಮೂತ್ರಕ್ಕೆ ವೈದ್ಯಕೀಯ ಗುಣಗಳನ್ನು ಆರೋಪಿಸಿರುವುದು" ಎಂದು ಬರೆದಿದ್ದಾರೆ. ಬಹುಶ: ಭೈರಪ್ಪನವರ ಇತ್ತೀಚಿನ ಅಭೂತಪೂರ್ವ-ಸತ್ಯಸ್ಯಸತ್ಯ-ದಾರ್ಶನಿಕ-ಬೋಲ್ಡ್-ಸುದೀರ್ಘ ತಪಸ್ವಿನ-ಕ್ರಾಂತಿಕಾರಿ-ಸಂಶೋಧನಾತ್ಮಕ-ಸತ್ಯದ ಪ್ರಪ್ರಥಮ ಅನಾವರಣ-ಮಹಾನ್ ಆದ ಮತಾಂತರದ ಮೇಲಿನ ಅಗ್ರ-ಲೇಖನಕ್ಕೆ ಪ್ರತಿಕ್ರಿಯಿಸುತ್ತ, ಪರೋಕ್ಷವಾಗಿ ಎನ್ನುವುದಕ್ಕಿಂತ ನೇರವಾಗಿಯೆ, ಭೈರಪ್ಪನವರನ್ನು "ನೀವು ಮನುಷ್ಯರಂತೆ ಕಾಣಿಸುವುದಿಲ್ಲ," ಎಂದುಬಿಟ್ಟಿದ್ದಾರೆ. ಹೀಗೆ ಹೇಳುವ ಮೂಲಕ ಜೋಗಿ ಒಂದೇ ದಿನದಲ್ಲಿ ತಮ್ಮ ಅರ್ಧಕ್ಕರ್ಧ ಅಭಿಮಾನಿಗಳನ್ನು ಕಳೆದುಕೊಂಡು ಬಿಟ್ಟಿದ್ದಾರೆ ಎಂದರೆ ಅದು ಉತ್ಪ್ರೇಕ್ಷೆ ಅಲ್ಲ ಎಂದುಕೊಳ್ಳುತ್ತೇನೆ. ಅದಕ್ಕೆ ಕೆಲವು ಸಾಕ್ಷಿಗಳು ಆ ಲೇಖನಕ್ಕೆ ಈಗಾಗಲೆ ಬಂದಿರುವ ಪ್ರತಿಕ್ರಿಯೆಗಳಲ್ಲಿಯೆ ಇದೆ. ಕರ್ನಾಟಕದ ಇತ್ತೀಚಿನ ಬೆಳವಣಿಗೆಗಳಿಂದ ಏನಾಗುತ್ತಿದೆ ಅಂದರೆ, people, especially writers, will not have an option to be neutral. They will have to choose between right and wrong.

ಪುಣ್ಯಪುರುಷರೂ, ಸಂತರೂ ಆದವರ ಸನ್ನಿಧಿಯಲ್ಲಿ ಒಬ್ಬ ಮನುಷ್ಯ "ಈ ತಪಸ್ವಿಗಳು ಶಾಪ ಕೊಟ್ಟರು. ಆ ಧರ್ಮದ್ರೋಹಿಗಳು ಬೀದಿಗೆ ಬಿದ್ದರು," ಎಂದುಬಿಟ್ಟ. ಸಂತರು ಗಾಬರಿಬಿದ್ದರು. ನಮ್ಮ ಪುರಾಣಗಳಲ್ಲಿ ಒಂದು ಕಲ್ಪನೆ ಇದೆ. ಅದು, "ಯಾರಿಗಾದರೂ ಕೆಟ್ಟದು ಬಯಸಿದರೆ, ಅಂದರೆ ಶಾಪ ಕೊಟ್ಟರೆ, ಕೊಟ್ಟವರ ತಪ:ಶಕ್ತಿ ಕರಗಿ ಬಿಡುತ್ತದೆ," ಎನ್ನುವುದು. ಹಾಗಾಗಿಯೆ, ಪುರಾಣಗಳಿಂದಲೆ ಹೊಟ್ಟೆಹೊರೆಯುವ ಆ ಸಂತರು ಗಾಬರಿಬಿದ್ದದ್ದು. ಪ್ರಜಾರಾಜ್ಯ ಎಂಬ ಈ ಕಲಿಕಾಲದಲ್ಲಿ ತಮ್ಮ ತಪ:ಶಕ್ತಿ ಕಳೆದುಕೊಳ್ಳಲು ಯಾರು ಇಷ್ಟಪಡುತ್ತಾರೆ, ಅಲ್ಲವೆ? ಜೊತೆಗೆ, ಎದ್ದವರು ಬೀಳುವ, ಬಿದ್ದವರು ಮೇಲೆ ಏಳುವ ಕಾಲ ಇದು. ಅದಕ್ಕಾಗಿಯೆ ಸಂತರು "ಶಾಂತಂ ಪಾಪಂ, ನಾನು ಯಾರಿಗೂ ಶಾಪ ಕೊಡಲಿಲ್ಲ," ಎಂದರಂತೆ. ಪಾಪ ಆ ಸಂತರ ಪರವಾಗಿ ಸುಳ್ಳುಸುಳ್ಳೆ ಏನನ್ನೊ ಹೇಳಿಬಿಟ್ಟ ರಾಮಾನುಯಾಯಿ "ಯದ್ವಾ-ತದ್ವಾ ಈಶ್ವರಪ್ಪ !!" ಬಗ್ಗೆ "ಸುದ್ದಿ ಮಾತು" ಬ್ಲಾಗಿನಲ್ಲಿ ಲೇಖನವೊಂದು ಪ್ರಕಟವಾಗಿತ್ತು. ನಾಲ್ಕೈದು ವರ್ಷಗಳ ಹಿಂದೆ ಇದೇ ಈಶ್ವರಪ್ಪನವರು ಗೋಮಾಂಸ ಭಕ್ಷಕರ ನಾಲಿಗೆ ಸೀಳುವುದಾಗಿ ಹೇಳಿದ್ದರು. ಆಗ ಸಕಾರಣವಾಗಿಯೆ ಭಯಭೀತನಾಗಿದ್ದ ನಾನು ಏನೇನೊ ಕಾರಣಗಳನ್ನು ಕೊಟ್ಟುಕೊಂಡು ನಿರೀಕ್ಷಣಾ ಜಾಮೀನು ಹಾಕಿಕೊಂಡಿದ್ದೆ. ಆ ನಿರೀಕ್ಷಣಾ ಜಾಮೀನು ದಟ್ಸ್‌ಕನ್ನಡದಲ್ಲಿ ಪ್ರಕಟವಾಗಿತ್ತು. ಬಹುಶಃ ಆ ತಾಣದಲ್ಲಿನ ತಾಂತ್ರಿಕ ಸುಧಾರಣೆಗಳಿಂದಾಗಿ ಎರಡು ಮೂರು ವರ್ಷಗಳ ಹಿಂದಿನ ಲೇಖನಗಳು ಅಲ್ಲಿ ಈಗ ಸಿಗುತ್ತಿಲ್ಲ. ಅದಕ್ಕಾಗಿಯೆ ಆ ಜಾಮೀನನ್ನು ಇಲ್ಲಿ ಈಗ ಹಾಕಿಕೊಳ್ಳುವ ಮೂಲಕ (ಸರಿಯಾಗಿ ಐದು ವರ್ಷಗಳ ನಂತರ) ಮತ್ತೆ ನವೀಕರಿಸಿಕೊಳ್ಳುತ್ತಿದ್ದೇನೆ.

ಗೋಹತ್ಯೆ, ಗೋಪಾಲಕರು, ಮತ್ತು ಹಿಂದೂ ಮೂಲಭೂತವಾದಿಗಳು


(ಸ್ವಾತಂತ್ರ್ಯೋತ್ತರದ ಸಂವಿಧಾನಕ್ಕೆ ಹಲವು ತಿದ್ದುಪಡಿ ಮಾಡಿಕೊಂಡಿರುವ ನಾವು, ಸಾವಿರಾರು ವರ್ಷಗಳಷ್ಟು ಹಳೆಯ ಬೈಬಲ್, ಕುರಾನ್, ಮನುಸ್ಮೃತಿ, ಗೀತೆಗಳನ್ನಿಟ್ಟುಕೊಂಡು, ಅವುಗಳಲ್ಲಿರುವ ಎಲ್ಲವನ್ನು ಪಾಲಿಸಬೇಕು ಎಂಬ ಹಠ ಏಕೆ? ಅಕ್ಟೋಬರ್ 30, 2003 -ದಟ್ಸ್‌ಕನ್ನಡ.ಕಾಮ್)

ಅನೀತಿಯೇ ನೀತಿಯಾದ ಸಂದರ್ಭಗಳಲ್ಲಿ, ಸಾರ್ವಕಾಲಿಕ ಹಿತಕ್ಕಿಂತ ತತ್‌ಕ್ಷಣದ ಲಾಭವೇ ಮುಖ್ಯವಾದಾಗ, ಸಮಾಜದ ಸಮಷ್ಟಿ ಹಿತಕ್ಕಿಂತ ವ್ಯಕ್ತಿಯ ಅಥವ ಗುಂಪಿನ ಸ್ವಾರ್ಥವೇ ಹಿರಿದಾದಾಗ ಇಂತಹವು ನಡೆಯುತ್ತಲೇ ಇರುತ್ತವೆ. ಭಾರತದಲ್ಲಿನ ಹಿಂದೂ ಮೂಲಭೂತವಾದಿಗಳು ಕಳೆದ ಒಂದು ವರ್ಷದಿಂದ ಗಟ್ಟಿಯಾಗಿ ಕೂಗುತ್ತಿರುವ ಗೋಹತ್ಯಾ ನಿಷೇಧದ ಕೂಗು ಈ ನಿಟ್ಟಿನಲ್ಲಿ ಮುಂದುವರಿದ ಶೋಷಣೆ. ಅದು ಮತ ಗಳಿಕೆಗಾಗಿ ಜನ ವಿಭೇದೀಕರಣದ ಅಸಹ್ಯ ಚರಮಘಟ್ಟ.

ಭಾರತದ ಬಡ ಗ್ರಾಮೀಣ ಪ್ರದೇಶಗಳಲ್ಲಿ ಗೋಪಾಲನೆ ಎನ್ನುವುದು ಗೋವುಗಳ ಮೇಲಿನ ಭಕ್ತಿಯಿಂದಾಗಲಿ, ಅವುಗಳಿಗೆ ಹಿಂದೂ ಧರ್ಮದ ಹಲವು ಗ್ರಂಥಗಳು ಹೇಳಿರುವಂತೆ ಪವಿತ್ರವೆಂಬ ಕಾರಣದಿಂದಾಗಲಿ ನಡೆಯುವ ಉದ್ಯೋಗವಲ್ಲ. ಒಂದೆರಡು ಎಕರೆಗಳಿರುವ ರೈತ ತನ್ನ ಹೊಲಗದ್ದೆ ಉಳಲು, ಹೆಚ್ಚು ಖರ್ಚು ಮಾಡದೆ ತನಗೆ ಬೇಕಾದ ನೈಸರ್ಗಿಕ ಗೊಬ್ಬರ ಉತ್ಪಾದಿಸಲು ಮತ್ತು ಮನೆಯ ಹಾಲು ಮೊಸರಿನ ಅವಶ್ಯಕತೆಗಳಿಗೆ ಹಸುಗಳನ್ನು, ಎತ್ತುಗಳನ್ನು ಸಾಕುತ್ತಾನೆ.

ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ , ಉದಾಹರಣೆಗೆ, ಕೋಲಾರ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಸುಮಾರು ಮುವ್ವತ್ತು ವರ್ಷಗಳಿಂದೀಚೆಗೆ ನಡೆದ ಮಿಶ್ರತಳಿ ಹಸುಗಳ ಕ್ರಾಂತಿಯಿಂದಾಗಿ, ಕೇವಲ ಮನೆಯ ಶ್ರಮಜೀವಿ ಹೆಣ್ಣುಮಕ್ಕಳೇ ನೋಡಿಕೊಳ್ಳುವ ಒಂದೆರಡು ಹಸುಗಳಿಂದಲೇ ಇಡೀ ಕುಟುಂಬದ ಖರ್ಚು-ವೆಚ್ಚ ನಡೆಯುತ್ತವೆ. ದಿನಕ್ಕೆ ಕೇವಲ ಎರಡು-ಮೂರು ಲೀಟರ್ ಮಾತ್ರ ಹಾಲು ಕೊಡುವ ನಾಟಿ, ಜವಾರಿ ಹಸುಗಳಿಂದ ಮುಕ್ತಿ ಪಡೆದ ಈ ಕಡೆಯ ಗ್ರಾಮೀಣರು, ಹತ್ತು-ಹದಿನೈದು ಲೀಟರ್ ಹಾಲು ಕೊಡುವ ಮಿಶ್ರತಳಿ ಹಸುಗಳನ್ನು ಸಾಕಿ, ಮಾಡುತ್ತಿದ್ದ ಕೆಲಸದಲ್ಲಿಯೇ ಬಡ್ತಿ ಪಡೆದು, ಉತ್ತಮಿಕೆಯನ್ನು ಸಮರ್ಥವಾಗಿ ಸಾಧಿಸಿದ್ದಾರೆ.

ಆದರೆ ಈ ಕ್ರಾಂತಿ ರಾಜ್ಯದ ಎಲ್ಲಾ ಕಡೆಯೂ ಇನ್ನೂ ಪಸರಿಸದೆ, ಉತ್ತರ ಕರ್ನಾಟಕದ ಹಲವು ಕಡೆ ಗೊಡ್ಡು, ಬರಡು, ಪೀಚಲು ಹಸುಗಳನ್ನು ಸಾಕುತ್ತಿರುವ ದೌರ್ಭಾಗ್ಯ, ತಲೆತಲಾಂತರಗಳಿಂದ ಗೂಟಕ್ಕೆ ಹಗ್ಗ ಕಟ್ಟಿಕೊಂಡು ಸುತ್ತುವಂತೆ ಅದೇ ಜಾಗದಲ್ಲಿ ಸುತ್ತುವ ರೈತರು, ಗೋಪಾಲಕರು ಬಹಳಷ್ಟಿದ್ದಾರೆ. ಇವರಿಗೆ ಮಿಶ್ರತಳಿಯ ಹಸುಗಳಿಗೆ ಬಡ್ತಿ ಪಡೆಯಲು ಇರಬಹುದಾದ ದೊಡ್ಡ ತೊಂದರೆಯೇನೆಂದರೆ, ಅದಕ್ಕೆ ಶುರುವಿನಲ್ಲಿ ಬೇಕಾಗುವ ಬಂಡವಾಳ. ಇಂದು ಒಂದು ಒಳ್ಳೆಯ ಮಿಶ್ರತಳಿ ಹಸುವಿನ ಬೆಲೆ ಸರಿಸುಮಾರು ಹತ್ತು-ಹದಿನೈದು ಸಾವಿರ ರೂಪಾಯಿಗಳು. ಹಾಗೆಯೇ ಈ ಹಸುಗಳು ಮೊದಲ ದಿನದಿಂದಲೇ ಆರೈಕೆ ಮತ್ತು ಒಳ್ಳೆಯ ಪಶು ಆಹಾರ ಬೇಡುತ್ತವೆ. ದಕ್ಷಿಣದ ರೈತರು ಈ ಯುದ್ಧವನ್ನು ದೊಡ್ಡ ರೀತಿಯಲ್ಲಿ ಜಯಿಸಿದ್ದು - ಆಗ ಕಡಿಮೆ ಬೆಲೆಗೆ, ರಿಯಾಯಿತಿ-ಸಬ್ಸಿಡಿಯೊಂದಿಗೆ ಸಹಕಾರಿ ಸಂಸ್ಥೆಗಳು ಹಾಗೂ ಬ್ಯಾಂಕುಗಳು ಕೊಡುತ್ತಿದ್ದ ಸಾಲಗಳಿಂದಾಗಿ.

ಕೃಷಿ ಕ್ಷೇತ್ರದ ಯಂತ್ರಕ್ರಾಂತಿ

ಇಂದು ಬೆಂಗಳೂರಿನ ಸುತ್ತ ಮುತ್ತ ವ್ಯವಸಾಯ ಮಾಡುವ ಕೃಷಿಕರು ತಮ್ಮ ಬಹುತೇಕ ಕೃಷಿ ಕೆಲಸಗಳಿಗೆ ಟ್ರ್ಯಾಕ್ಟರನ್ನೇ ಬಳಸುತ್ತಾರೆ. ಅವು ಸ್ವಂತವೇ ಇರಬಹುದು, ಇಲ್ಲವೇ ಗುಂಟೆ-ಎಕರೆ ಲೆಕ್ಕದಲ್ಲಿ ಬಾಡಿಗೆಗೆ ಇರಬಹುದು. ಇಂದು ಇಂತಹ ಕೆಲಸಗಳಿಗೆ ಎತ್ತುಗಳು ಬೇಕೇಬೇಕು ಎನ್ನುವ ಅವಶ್ಯಕತೆಯೇ ರೈತನಿಗೆ ಇಲ್ಲ. ಉಳುವುದರಿಂದ ಹಿಡಿದು ಕಾಳು ಮಾಡುವುದರ ತನಕ (ಬಹುಶಃ ಕುಂಟೆ ಹೊಡೆಯುವುದನ್ನು ಬಿಟ್ಟು) ಟ್ರ್ಯಾಕ್ಟರ್ ಬಳಸುತ್ತಾನೆ. ರಾಗಿ ಪೈರಿನ ತೆನೆಯಿಂದ ರಾಗಿ ಬಿಡಿಸಲು ಮೂರ್‍ನಾಲ್ಕು ದಿನ ಕಲ್ಲಿನ ಗುಂಡಿಗೆ ಎತ್ತುಗಳನ್ನು ಕಟ್ಟಿ ಸುಡುಬಿಸಿಲಿನಲ್ಲಿ ಸುತ್ತಬೇಕಾಗಿದ್ದ ರೈತ, ಅದೇ ಕೆಲಸವನ್ನು ಕೇವಲ ಒಂದೆರಡು ಗಂಟೆಗಳಲ್ಲಿಯೇ ಟ್ರ್ಯಾಕ್ಟರ್‌ನಿಂದ ಮಾಡಿಸಿಕೊಳ್ಳುತ್ತಾನೆ. ಹೀಗೆ ತಾನು ತಲೆ-ತಲಾಂತರದಿಂದ ಅಂಟಿಕೊಂಡಿದ್ದಕ್ಕೆ ಶರಣು ಹೊಡೆದು ಆಧುನಿಕತೆಯನ್ನು, ಅದರ ಸೌಲಭ್ಯಗಳನ್ನು ತನ್ನ ಮತ್ತು ನಾಡಿನ ಅಭಿವೃದ್ಧಿಗೆ ಬಳಸುತ್ತಿದ್ದಾನೆ. ಇದರಿಂದಾಗಿ ಆಗಿರುವ ಪರಿಣಾಮವೇನೆಂದರೆ ಇವತ್ತು ಎಷ್ಟೋ ಹಳ್ಳಿಗಳಲ್ಲಿ ಉಳುವ ಎತ್ತುಗಳೇ ಇಲ್ಲ. ಅವುಗಳ ಸಾಕಣಿಕೆ ಟ್ರ್ಯಾಕ್ಟರ್‌ಗಿಂತ ಹೆಚ್ಚು ದುಬಾರಿಯಾದ್ದರಿಂದ ಅದರ ಅವಶ್ಯಕತೆಯೂ ಇಲ್ಲ.

ಇವುಗಳಿಂದ ನಮಗೆ ಸ್ಪಷ್ಟವಾಗುವುದೇನೆಂದರೆ, ಗೋಪಾಲನೆ ಎನ್ನುವುದು ರೈತ ತನ್ನ ಅವಶ್ಯಕತೆಗಳಿಗೆ ಮಾಡುವ ಉದ್ಯೋಗವೇ ವಿನಹ ಪರಲೋಕಕ್ಕೆ ಪುಣ್ಯ ಕಟ್ಟಿಕೊಂಡು ಹೋಗಬೇಕೆಂಬ ಆಸೆಯಿಂದಂತೂ ಅಲ್ಲ. ಜನರನ್ನು ಭೇದಿಸಲು, ಅಸಂಖ್ಯಾತವಾಗಿ ವರ್ಗೀಕರಿಸಲು ದುಡಿಯುತ್ತಿರುವ ಪವಿತ್ರಾತ್ಮಗಳ ಕಣ್ಣಿಗೆ ಈ ವಿಷಯ ಕಾಣಿಸುವುದಿಲ್ಲ ಎಂಬುದೂ ಸುಳ್ಳು. ತಮ್ಮ ಸ್ವಾರ್ಥವೇ ಮುಖ್ಯವಾಗಿರುವ ಯಾವ ಧರ್ಮದ ಮೂಲಭೂತವಾದಿಗಳಿಗೂ ಸತ್ಯ ಮತ್ತು ವಾಸ್ತವಿಕತೆ ಎಂದೂ ಪರಮ ವೈರಿಗಳೇ. ಹಿಂಸಾತ್ಮಕ ಜಿಹಾದ್ ಹೇಗೆ ಪರಧರ್ಮ ಅಸಹಿಷ್ಣು ಮೂಲಭೂತವಾದಿ ಮುಸಲ್ಮಾನರ ಕೊಳಕು ಅಸ್ತ್ರವೋ, ಹಾಗೆಯೇ ಈ ಗೋಹತ್ಯಾ ನಿಷೇಧವೂ ಜನದ್ರೋಹಿ, ಪರಧರ್ಮ ಪೀಡನೆಯ ಅಸಹ್ಯ ಶೋಷಣಾಸ್ತ್ರ.

ಅನ್ವೇಷಣೆಗಳಿಂದ ಪಾಠ ಕಲಿಯಬಾರದೇ?

ಗೋಹತ್ಯಾ ನಿಷೇಧಕ್ಕೆ ಮೂಲಭೂತವಾದಿಗಳು ನೀಡುತ್ತಿರುವ ಕಾರಣ ಗೋಮಾಂಸ ಭಕ್ಷಣೆ ಅಪವಿತ್ರ ಎಂಬುದು. ಹಿಂದುಗಳಿಂದ ಗೋಮಾಂಸ ಸೇವನೆ ಸರಿಯೋ-ತಪ್ಪೋ? ಪವಿತ್ರವೋ-ಅಪವಿತ್ರವೋ? ಇತ್ತೋ-ಇಲ್ಲವೋ ಎನ್ನುವುದು ಇನ್ನೂ ರುಜುವಾತಾಗಿಲ್ಲ. ನಮ್ಮ ಪುರಾತನ ಶಾಸ್ತ್ರಗಳಲ್ಲಿ, ಕಥೆಗಳಲ್ಲಿ, ಇದರ ಬಗೆಗೆ ಪರ-ವಿರೋಧ ಉಲ್ಲೇಖಗಳಿರುವುದು ಸಾಬೀತಾಗಿರುವ ವಿಷಯ. ಐವತ್ತು ವರ್ಷಗಳಿಂದೀಚೆ ಅಂದರೆ ಸ್ವಾತಂತ್ರ್ಯೋತ್ತರದಲ್ಲಿ ಸಂವಿಧಾನಕ್ಕೆ, ಕಾಲಕ್ಕೆ, ನ್ಯಾಯಕ್ಕೆ ತಕ್ಕ ಹಾಗೆ ಹಲವಾರು ಬಾರಿ ತಿದ್ದುಪಡಿ ಮಾಡಿಕೊಂಡಿರುವ ನಾವು ಸಾವಿರಾರು ವರ್ಷಗಳಾಚೆ ಬರೆದವೆನ್ನಲಾದ ಬೈಬಲ್, ಕುರಾನ್, ಮನುಸ್ಮೃತಿ, ಗೀತೆ ಇವುಗಳನ್ನಿಟ್ಟುಕೊಂಡು, ಅವುಗಳಲ್ಲಿರುವ ಎಲ್ಲವನ್ನು, ಇದ್ದದ್ದು ಇದ್ದ ಹಾಗೆ ಅಕ್ಷರಶಃ ಪಾಲಿಸಬೇಕೆನ್ನುವುದು ಅಜ್ಞಾನದ ಪರಮಾತಿರೇಕ.

ನಾಲ್ಕುನೂರು ವರ್ಷಗಳ ಹಿಂದಿನವರೆಗೂ ಜನ ಭೂಮಿ ಚಪ್ಪಟೆಯಾಗಿದೆಯೆಂದೂ, ಸೂರ್ಯ ಭೂಮಿಯ ಸುತ್ತ ಸುತ್ತುವನೆಂತಲೂ, ಚಂದ್ರ ಒಂದು ಗ್ರಹವೆಂತಲೂ ತಿಳಿದಿದ್ದರು. ಚಂದ್ರಮಂಡಲಕ್ಕೆ ಭಾರತೀಯನನ್ನು ಕಳುಹಿಸಬೇಕೆಂದುಕೊಳ್ಳುವ ಈ ಸಮಯದಲ್ಲಿ, ಇಂದು ಲಭ್ಯವಿರುವ ಜ್ಞಾನವನ್ನು ಬಳಸಿಕೊಳ್ಳದೆ, ಶಾಸ್ತ್ರ-ಪುರಾಣಗಳಿಗೆ ಗಂಟು ಬಿದ್ದು ಅದೇ ಸತ್ಯವೆಂದು ಹೇಳುವುದು ಸತ್ಯಕ್ಕೆ, ಜ್ಞಾನಕ್ಕೆ, ವಿಜ್ಞಾನಕ್ಕೆ ಎಸಗುವ ಮಹಾದ್ರೋಹ, ಸ್ವವಿನಾಶಕಾರಿ.

ಗೋಮಾಂಸ ಭಕ್ಷಿಸುವವರು ಇಂದಿನ ಜಗತ್ತಿನಲ್ಲಿ ಶೇ. 80 ಕ್ಕಿಂತ ಹೆಚ್ಚಿರಬಹುದು. ಭಾರತದ ವಿವಿಧ ಕಡೆಗಳಲ್ಲಿ ಹಿಂದುಗಳಲ್ಲಿನ ಕೆಲವು ವರ್ಗದವರು, ಬಡ ನಿರ್ಗತಿಕರು ಅದನ್ನು ತಿನ್ನುತ್ತಾರೆ. ಈಶಾನ್ಯ ಭಾರತದಲ್ಲಿ ಬೌದ್ಧರೂ ಸಹ ಗೋಮಾಂಸ ಭಕ್ಷಕರು. ಬಹುಶಃ ಲಭ್ಯವಿರುವ ಎಲ್ಲಾ ಮಾಂಸಗಳಲ್ಲಿ ಕಡಿಮೆ ಬೆಲೆಗೆ ಸಿಗುವುದೆಂದರೆ ಗೋಮಾಂಸವೇ ಇರಬಹುದು. ಅದರ ಈ ಮಿತಬೆಲೆಯೇ ಅದನ್ನು ಬಯಸುವ ಒಂದು ಕಾರಣ. ಪಾಶ್ಚಿಮಾತ್ಯ ದೇಶಗಳಲ್ಲಿಯೂ ಜನರು, ಅದರಲ್ಲಿ ಕೊಬ್ಬಿನಂಶ ಹೆಚ್ಚಿದ್ದರೂ ಅದನ್ನು ಬಯಸಲು ಮುಖ್ಯ ಕಾರಣ ಅದರ ಬೆಲೆಯೇ.

ಗೋಮಾಂಸ ಭಕ್ಷಣೆಯ ಲಾಭ-ನಷ್ಟಗಳನ್ನು, ನೈತಿಕತೆ-ಧಾರ್ಮಿಕತೆಯನ್ನು ಬದಿಗಿಟ್ಟು, ಗೋಹತ್ಯಾ ನಿಷೇಧದಿಂದ ಉಂಟಾಗಬಹುದಾದ ವಾಣಿಜ್ಯ ಪರಿಣಾಮಗಳನ್ನು ಗಮನಿಸಿದರೆ, ಅವು ಭಾರತದಲ್ಲಿನ ಗೋಪಾಲಕರಿಗೆ, ಗೋಪಾಲನೆಯನ್ನು ಅವಲಂಬಿಸಿ ಬೆಳೆದಿರುವ ಕೈಗಾರಿಕೆ-ಕಾರ್ಮಿಕರಿಗೆ ಮಾರಣಾಂತಿಕ.

ಲಾಭದಾಯಕ ಹಸು ಸಾಕಾಣಿಕೆಗಾಗಿ-

ದೇಶದಲ್ಲಿ ಗೋಹತ್ಯಾ ನಿಷೇಧದ ರೈಲು ಬಂಡಿ ನಿಲ್ಲುವ ಕಟ್ಟಕಡೆಯ ನಿಲ್ದಾಣ ಗೋವು ಮತ್ತು ಗೋಪಾಲನೆಯ ನಿರ್ಮೂಲನೆ. ಇದಕ್ಕೆ ಕೆಳಗಿನ ಕಾರಣಗಳನ್ನು ಸಮರ್ಥನೆಗಾಗಿ ಕೊಡಬಹುದು.

ಮುದಿಯಾದ ಹಸುಗಳನ್ನು ಕಸಾಯಿಖಾನೆಗೆ ಮಾರುವುದು ನೆನ್ನೆ-ಮೊನ್ನೆ ಅಥವ ಮುಸಲ್ಮಾನರು ಬಂದ ನಂತರ ಪ್ರಾರಂಭವಾದ ಕೆಲಸವಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಗಾಂಧೀಜಿ ರಾಮರಾಜ್ಯವೆಂದು ಉದ್ಗರಿಸಿದ ಮೈಸೂರು ಸಂಸ್ಥಾನದಲ್ಲಿಯೂ ರೈತರು ತಮ್ಮ ಅನವಶ್ಯಕ ಹಸುಗಳನ್ನು ಮಾರುತ್ತಿದ್ದರು. ಇದು ರೈತನಿಗೆ ತಾನು ಬದುಕಲು ಮತ್ತು ತನ್ನ ಇತರ ಹಸುಗಳನ್ನು ಬದುಕಿಸಿಕೊಳ್ಳಲು ಇದ್ದ ಏಕೈಕ ದಾರಿ.

ಹಸು ಸಾಕಣಿಕೆಯೆನ್ನುವುದು ಕೊನೆಯ ತನಕ ಲಾಭದಾಯಕವಾದ ಕೆಲಸವಲ್ಲ. ಹಸು ಗರ್ಭ ಕಟ್ಟುವುದು ಮತ್ತು ಹಾಲು ಕರೆಯುವುದನ್ನು ನಿಲ್ಲಿಸಿದ ಐದಾರು ವರ್ಷಗಳ ನಂತರವೂ ಬದುಕಬಹುದು. ಐದಾರು ವರ್ಷಗಳ ಕಾಲ ಪ್ರಾಯಶಃ ನಷ್ಟವಿಲ್ಲದೆ ಸಾಕಿದ ಗೋಪಾಲ, ಅದು ಉಪಯೋಗಕ್ಕೆ ಬಾರದಿದ್ದಾಗಲೂ ನಷ್ಟದಲ್ಲಿ ಅದನ್ನು ಸಾಕುವುದು ಅವಾಸ್ತವ ಮತ್ತು ಅನಪೇಕ್ಷಣೀಯ. ತಮ್ಮ ಖರ್ಚು-ವೆಚ್ಚ, ಲಾಭ-ನಷ್ಟಗಳನ್ನು ಸರಿದೂಗಿಸಿಕೊಳ್ಳಲು ಸಂಘಸಂಸ್ಥೆಗಳು ಆಗಾಗ ಮಾಡುವ ಸಂಬಳ-ಸಾರಿಗೆ-ಸಿಬ್ಬಂದಿ ಕಡಿತದಂತೆಯೇ, ಮುದಿ ಬಿದ್ದ ಹಸುಗಳನ್ನು ಕಸಾಯಿಖಾನೆಗೆ ಮಾರುವುದು ಒಂದು ವ್ಯವಹಾರಿಕ ಕೆಲಸ. ಭಾವನಾತ್ಮಕವಾಗಿ ಅದು ಎಷ್ಟೇ ಕಷ್ಟವಾಗಿದ್ದರೂ, ಕೆಲವು ಸಲ ಬಾಳಿ, ಬದುಕಿ ಉಳಿಯಲು ಮಾಡಲೇಬೇಕಾದ ಅನಿವಾರ್ಯ ಕೆಲಸ. ಇದಾಗದಿದ್ದ ಪಕ್ಷದಲ್ಲಿ ನಮ್ಮ ಯಾವ ರೈತರೂ ಲಾಭದಾಯಕವಾಗಿ ಹಸು ಸಾಕಣಿಕೆ ಮಾಡಲಾಗುವುದಿಲ್ಲ ಮತ್ತು ನಮ್ಮವರ ಹಾಲು ಉತ್ಪಾದನೆಯ ವೆಚ್ಚ ಹೆಚ್ಚಾಗಿ, ಪರದೇಶಗಳಿಂದ ತರಿಸುವ ಹಾಲೇ ನಮ್ಮದರ ದರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತದೆ.

ಗಾಂಧಿ ತಾತನ ಹೆಸರಿನ ಬಲ

ಗೋಹತ್ಯಾ ನಿಷೇಧದ ಮುಂಚೂಣಿಯಲ್ಲಿರುವವರು ಇತ್ತೀಚೆಗೆ ಬಳಸುತ್ತಿರುವ ಹೆಸರು ಗಾಂಧೀಜಿಯದು. ಗಾಂಧಿ ಹೇಳಿದ್ದನ್ನೆಲ್ಲ ಸಾಧುವೇ, ಅಸಾಧುವೇ ಎಂದು ಪ್ರಶ್ನಿಸದೇ ಒಪ್ಪಿಕೊಳ್ಳುವುದು ಪ್ರಜ್ಞಾವಂತಿಕೆಯಲ್ಲ. ಯಾರಿಗೆ ಇಷ್ಟವಾಗಲಿ ಬಿಡಲಿ, ಕಾಲ, ನಿಯಮ ಬದಲಾಗುತ್ತಾ ಇರುತ್ತವೆ. ಹೊಸ ಹೊಸ ಶೋಧನೆಗಳು, ಸತ್ಯಗಳು ಬೆಳಕು ಕಾಣುತ್ತಲೇ ಇರುತ್ತವೆ. ಹಾಗಾಗಿ ಗಾಂಧೀಜಿ, ಅಥವ ಬೇರೇ ಯಾರೇ ಆಗಲಿ, ಅವರು ಹೇಳುವುದೆಲ್ಲವೂ ಕಾಲಾತೀತವಾಗಲು ಸಾಧ್ಯವಿಲ್ಲ. ಆ ವಿಷಯಕ್ಕೆ ಬಂದರೆ ಗಾಂಧೀಜಿ ಹೇಳಿದ್ದನ್ನೆಲ್ಲ ಸ್ವತಂತ್ರ ಭಾರತ ಒಪ್ಪಿಕೊಂಡು ಕಾರ್ಯಗತಗೊಳಿಸಿಲ್ಲ. ಅವುಗಳಿಗೆ ಹಲವಾರು ವ್ಯವಹಾರಿಕ ಕಾರಣಗಳೂ, ಆಯಾಯಾ ಕಾಲದ ಅಗತ್ಯತೆಗಳೂ ಇರಬಹುದು. ಹಾಗಾಗಿ, ಗಾಂಧೀಜಿಯ ನೀತಿ ಮತ್ತು ಕೆಲಸವನ್ನು ದ್ವೇಷಿಸುವ, ಆತನ ಹಂತಕರನ್ನು ಸಮರ್ಥಿಸಿಕೊಳ್ಳುವ ಈ ಮೂಲಭೂತವಾದಿಗಳು, ಗೋ-ವಿಷಯದಲ್ಲಿ ಗಾಂಧಿಯ ಹೆಸರನ್ನು ಮುಂದಕ್ಕೆ ಬಿಡುವುದು ಹೀನಾಯ, ಪರಮಘಾತುಕ, ವಂಚಕತೆಯ ಗೌರೀಶಂಕರ.

ಭಾರತದ ಹಲವು ಕಡೆ ಜಾತ್ಯಾತೀತ ಪಕ್ಷಗಳೂ ಇತ್ತೀಚೆಗೆ ಈ ಮೂಲಭೂತವಾದದ ಅಸ್ತ್ರಗಳನ್ನೇ, ವೋಟಿನ ರಾಜಕಾರಣಕ್ಕೆ ಬಳಸಲು ಯತ್ನಿಸುತ್ತಿರುವುದೂ ಸಹಾ ಇದೇ ರೀತಿಯ ನಿರ್ಲಜ್ಜ ನಡವಳಿಕೆ. ಇಂತಹ ಸಮಯಗಳಲ್ಲಿ ಇವುಗಳ ಸಾಧಕ-ಬಾಧಕಗಳ ಚರ್ಚೆ-ಸಂಶೋಧನೆ, ಮೂಲಭೂತವಾದಿಗಳ, ಶೋಷಕರ ವಿತಂಡತನವನ್ನು ಕ್ರಿಯಾಶಾಲವಾಗಿ ಜನಸಾಮಾನ್ಯರ ಮುಂದಿಡುವ ಜವಾಬ್ದಾರಿ ದೇಶದ ಚಿಂತಕರ, ವಿಶ್ವವಿದ್ಯಾನಿಲಯಗಳ, ಸಂಘ ಸಂಸ್ಥೆಗಳ ಮೇಲಿದೆ. ಜವಾಬ್ದಾರಿಯಿಂದ ಪಲಾಯನ ಮಾಡುವುದೂ ಒಂದು ಹೇಯ ವಂಚನೆ.

ರಾಜ್ಯ ಭಾ.ಜ.ಪ.ದ ಮಾಜಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪನವರು ಈ ಮಧ್ಯೆ ಗೋಹತ್ಯೆ ಮಾಡುವವರ ಕೈಗಳನ್ನು ಕಡಿಯುವುದಾಗಿಯೂ, ಗೋಮಾಂಸ ಭಕ್ಷಕರ ನಾಲಗೆ ತುಂಡರಿಸುವುದಾಗಿಯೂ ಹೇಳಿರುವುದು ವರದಿಯಾಗಿದೆ. ಇದು ಜನರಲ್ಲಿ ಭೇದ, ಭಯ ಬಿತ್ತುವ ದೇಶದ್ರೋಹದ ಕೆಲಸ. ಸ್ವತಃ ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ, ರೈತರ, ಗೋಪಾಲಕರ ಕಷ್ಟಗಳನ್ನು ನೋಡಿರುವ ಇವರು, ಸಮಾಜದ ಹಿತಚಿಂತನೆ ಮರೆತು, ತಮ್ಮ ಒಡೆಯರನ್ನು ಖುಷಿ ಪಡಿಸಲು ಈ ರೀತಿ ಮಾತನಾಡುವುದು ಜನದ್ರೋಹ, ಆತ್ಮದ್ರೋಹ. ನೆಲದ ಕಾನೂನನ್ನು ಗೌರವಿಸದ ವಿದ್ರೋಹ. ಅವರ ಚಿಂತನೆಗಳನ್ನು ವಾಕ್‌ಸ್ವಾತಂತ್ರ್ಯದ ಹಕ್ಕಿನಿಂದಾಗಿ ಕೇಳಿಸಿಕೊಳ್ಳಬಹುದಾದರೂ, ಜನತೆ ಇದನ್ನು ಖಂಡಿಸುವುದು ಮತ್ತು ಕಾನೂನು, ನ್ಯಾಯಪಾಲಕರು ಇವರಂತಹವರಿಗೆ ಎಚ್ಚರಿಕೆ ನೀಡುವುದು ದೇಶದ ಸಾಮರಸ್ಯದ, ಅಭಿವೃದ್ದಿಯ ದೃಷ್ಟಿಯಿಂದ ಅನಿವಾರ್ಯ.

ಹಸು ಮತ್ತು ನನ್ನ ಅಮ್ಮ

ಕಳೆದ ಮುವ್ವತ್ತು ವರ್ಷಗಳಿಂದ ಹಸುಗಳನ್ನು ಸಾಕುವುದರ ಮೂಲಕ ಕುಟುಂಬದ ಅಭಿವೃದ್ದಿಯಲ್ಲಿ ಗಣನೀಯ ಪಾತ್ರವಹಿಸಿ, ತಾನೂ ಆರ್ಥಿಕವಾಗಿ ಸ್ವಾವಲಂಬಿಯಾಗಿರುವವಳು ನನ್ನ ತಾಯಿ. ತಾನು ದೈಹಿಕವಾಗಿ ದುರ್ಬಲವಾಗುತ್ತಿರುವ ಈ ಸಮಯದಲ್ಲಿಯೂ ಹುಲ್ಲು ಬೂಸಾಗಳ ಖರ್ಚು ವಿಪರೀತವಾಗಿ ಏರುಪೇರಾಗಿ ಹಾಲಿನ ಬೆಲೆ ಹೆಚ್ಚಾಗದೆ ಇರುವ ಸಂದರ್ಭದಲ್ಲಿ, ಇನ್ನೂ ಒಂದು ಹಸುವನ್ನು ಸಾಕಿಕೊಂಡು ಲಾಭದಾಯವಾಗೇ ಏಗುತ್ತಿದ್ದಾಳೆ. (ಅದು ಲಾಭದಾಯಕ ಎನ್ನಲು ನನ್ನ ತರ್ಕ ಏನೆಂದರೆ, ನಷ್ಟವಾಗುವ ಕೆಲಸವನ್ನು ನಿಲ್ಲಿಸುವ ಧೈರ್ಯ ಮತ್ತು ಜಾಣ್ಮೆ ಆಕೆಗಿದೆ. ಆದಾಗ್ಯೂ, ಈ ಉದ್ಯೋಗದಿಂದ ಅವಳಿಗೆ ತಿಂಗಳಿಗಾಗುವ ಲಾಭ ಬಹುಶಃ ಅಮೇರಿಕಾದಲ್ಲಿ ನನ್ನ ಎರಡು ಸಿನೆಮಾ ವೀಕ್ಷಣೆಗೆ ತಗಲುವಷ್ಟು.) ಈ ಹಿನ್ನೆಲೆಯಿಂದಾಗಿ ಚಿಕ್ಕಂದಿನಿಂದಲೂ ನನಗೆ ಹಸುಗಳೊಂದಿಗೆ ಒಡನಾಟ. ನನ್ನ ನಿರಾಳದ, ದುಃಖದ ಹಲವಾರು ಕ್ಷಣಗಳನ್ನು ಅವುಗಳೊಂದಿಗೆ ಕಳೆದಿದ್ದೇನೆ. ದುಃಖವಾದಾಗ ಒಂಟಿಯಾಗಿ ದನಗಳ ಮೈತಡವಿಕೊಂಡು, ಅವುಗಳಿಂದ ನೆಕ್ಕಿಸಿಕೊಂಡು, ದನದ ಕೊಟ್ಟಿಗೆಯಲ್ಲಿ ಕುಳಿತು ಮಲಗಿ ಧ್ಯಾನಿಸಿದ್ದೇನೆ. ರಜಾದಿನಗಳಲ್ಲಿ ಕೊಯಿಲು ಮುಗಿದ ಹೊಲಗದ್ದೆಗಳ ಬಯಲಲ್ಲಿ ಅವುಗಳನ್ನು ಮೇಯಿಸಿಕೊಂಡು ನಿರಾಳವಾಗಿ ಕನ್ನಡದ ಹಲವಾರು ಕಥೆ, ಕಾದಂಬರಿ, ಚರಿತ್ರೆಯನ್ನು ಓದಿದ್ದೇನೆ, ಲೆಕ್ಕ-ಪದಬಂಧಗಳನ್ನು ಬಿಡಿಸಿದ್ದೇನೆ. ನನ್ನಮ್ಮನ ಕಣ್ತಪ್ಪಿಸಿ ಹಸು-ಎಮ್ಮೆಗಳ ಮೇಲೆ ವಿಪರೀತವೆನ್ನುವಷ್ಟು ಭರವಸೆಯನ್ನಿಟ್ಟು ಹಲವಾರು ಸಲ ಪಕ್ಕದ ಚಂದಾಪುರದ ಟೆಂಟಿನಲ್ಲಿ ಸಿನೆಮಾ ನೋಡಿ, ವಾಪಸ್ಸು ಬಂದು ನನ್ನನ್ನು ಮಿಸ್ ಮಾಡಿಕೊಳ್ಳದ ಅವುಗಳನ್ನು ಕಂಡು, ಅಮ್ಮನಿಗೆ ಕಣ್ತಪ್ಪಿಸಿ ವಂಚಿಸಿದ್ದೂ ಸೇರಿ, ಸಂತೋಷವೊ, ದುಃಖವೋ ಪಟ್ಟಿದ್ದಿದೆ.

ಮೂರು ವರ್ಷದ ಹಿಂದೆ ಸುಮಾರು ಹನ್ನೆರಡು ಸಾವಿರ ರೂಪಾಯಿಗಳಿಗೆ ಪಕ್ಕದ ಊರಿನಲ್ಲಿ ಒಂದು ಹಸುವನ್ನು ಖರೀದಿಸಿ, ಅದನ್ನು ಸುಮಾರು ಎರಡು ಮೈಲಿ ನಡೆಸಿಕೊಂಡು ಬಂದು ಅಮ್ಮನಿಗೆ ತೋರಿಸಿದಾಗ, ಅವಳು ಹುಸಿಮುನಿಸು ತೋರಿಸಿ ಅದರ ದೊಡ್ಡ ದೊಡ್ಡ ಮೊಲೆತೊಟ್ಟುಗಳಿಂದ ಹಾಲು ಕರೆಯುವ ಕಷ್ಟದ ಬಗ್ಗೆ ಗೊಣಗಿದ್ದಳು. ಈಗಲೂ ವಾರಕ್ಕೊಮ್ಮೆ ಖಂಡಾಂತರದಿಂದ ಮಾತನಾಡುವಾಗ ನನ್ನ ಒಂದು ಖಾಯಂ ಪ್ರಶ್ನೆ, ಹಸು, ಕರು ಹೇಗಿವೆ ಎಂದು. ಈ ಮೊದಲೆಲ್ಲಾ, ಬೆದೆಗೆ ಬಂದಿರುವ ಬಗ್ಗೆ, ಗರ್ಭ ಕಟ್ಟಿಸಿದ ಬಗ್ಗೆ, ಎಷ್ಟು ಹಾಲು ಕೊಡುತ್ತಿದೆ ಅನ್ನುವುದರ ಬಗ್ಗೆ ಹೇಳುತ್ತಿದ್ದವಳು ಈ ನಡುವೆ, ಒಂದೊಂದಾಗಿ ಗಾಯಗಳಾಗಿ ನಿಷ್ಪ್ರಯೋಜಕವಾಗುತ್ತಿರುವ ಹಸುವಿನ ಮೊಲೆತೊಟ್ಟುಗಳ ಬಗ್ಗೆ, ಬಾತುಕೊಳ್ಳುವ ಅದರ ಕೆಚ್ಚಲು ಮತ್ತು ವೈದ್ಯದ ಬಗ್ಗೆ, ಬಾರದ ಮಳೆ ಮತ್ತು ಹುಲ್ಲಿನ ಕೊರತೆಯ ಬಗ್ಗೆ, ತೂಕದ ಲೆಕ್ಕದಲ್ಲಿ ರಾಗಿ ಹುಲ್ಲು ಮಾರುವ ಬಗ್ಗೆ ನೋವಿನಿಂದ ಹೇಳುತ್ತಾಳೆ. ಲಹರಿಯಲ್ಲಿದ್ದ ದಿನ, "ನಿನಗೆ ಇದೊಂದು ಹಸುವಿನ ಚಿಂತೆ! ಬೇರೆ ಕೆಲಸವಿಲ್ಲವಾ?" ಎಂದು ಅಣಕಿಸುತ್ತಾ ನಗುತ್ತಾಳೆ.


(ಈಗ: ನನ್ನಮ್ಮ ಹಸು ಸಾಕುವುದನ್ನು ನಿಲ್ಲಿಸಿ ಎರಡು ವರ್ಷವಾಯಿತು. ಕಾರಣಗಳು ಹಲವಾರು. ತನ್ನ ಕೊನೆಯ ಹಸುವನ್ನು ಸುಮಾರು ಇಪ್ಪತ್ತು ಸಾವಿರಕ್ಕೊ ಏನೊ ಮಾರಿಕೊಂಡಳಂತೆ. ಊರಿನಲ್ಲಿದ್ದಾಗ ಬೆಳಿಗ್ಗೆ ಎದ್ದು ಹಸುವಿನ ಮುಖ ನೋಡುತ್ತಿದ್ದೆ. ಈಗ ಮಕ್ಕಳು ದಾಯಾದಿಗಳ ಮನೆಗೆ ಹೋಗಿ ಹಾಲು ತರುವುದನ್ನು ಕಂಡಾಗ ಸ್ವಾತಂತ್ರ್ಯವನ್ನೆ ಕಳೆದುಕೊಂಡ ಹಿಂಸೆಯಾಗುತ್ತದೆ. ತನ್ನ ಅನ್ನ-ಹಾಲನ್ನು ತಾನೆ ಬೆಳೆಯುವ ಸ್ವಾವಲಂಬಿ ರೈತನ ಸ್ವಾಭಿಮಾನವನ್ನು ಯಾವುದೂ ಸರಿಗಟ್ಟದು.)

Oct 16, 2008

ವಿಜ್ಞಾನವೇ, ದೇವರನ್ನು ಹುಡುಕಿಕೊಡು...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 24, 2008 ರ ಸಂಚಿಕೆಯಲ್ಲಿನ ಲೇಖನ.)

ಅಮೆರಿಕ ಸರಿಯಾಗಿ 50 ವರ್ಷಗಳ ಹಿಂದೆ (1958) ಭೂಮಿಯ ಕಕ್ಷೆಯನ್ನು ದಾಟಿ ಹೋಗುವಂತಹ ರಾಕೆಟ್ ಉಡಾಯಿಸಿದ್ದು. ಕೃತಕ ಉಪಗ್ರಹವೊಂದು ಚಂದ್ರನನ್ನು ಸುತ್ತು ಹಾಕಿ ಬರುವುದು ಆ ಉಡಾವಣೆಯ ಗುರಿಯಾಗಿತ್ತು. ಆದರೆ ಉಡಾಯಿಸಿದ 77 ಸೆಕೆಂಡುಗಳಲ್ಲಿ, ಭೂಮಿಗಿಂತ ಕೇವಲ 16 ಕಿ.ಮಿ. ಮೇಲೆ ಆ ರಾಕೆಟ್ ಸ್ಫೋಟವಾಗಿ, ಮೊದಲ ಪ್ರಯತ್ನದಲ್ಲೆ ಸೋಲಾಗಿತ್ತು. ಆದರೂ, ಸೋವಿಯತ್ ರಷ್ಯಾಕ್ಕೆ ಸೋಲಬಾರದೆಂಬ ಪೈಪೋಟಿಯಲ್ಲಿ ಅವರು ಮುಂದಿನ ಒಂದೇ ವರ್ಷದಲ್ಲಿ ಮತ್ತೆ ಐದು ಸಲ ಪ್ರಯತ್ನಿಸಿದರು. ಆದರೆ ರಷ್ಯಾದ ರಾಕೆಟ್ 1959 ರಲ್ಲೆ ಚಂದ್ರನನ್ನು ಸುತ್ತಿ ಬಂತು. ಅಮೆರಿಕಕ್ಕೆ ಮೊದಲ ಯಶಸ್ಸು ಸಿಕ್ಕಿದ್ದು 1964 ರಲ್ಲಿ. ಅದಾದ ಕೆಲವೆ ತಿಂಗಳುಗಳಲ್ಲಿ (1965) ರಷ್ಯಾ ಮೊದಲ ಬಾರಿಗೆ ತನ್ನ ರೊಬೊಟ್ ಅನ್ನು ಚಂದ್ರನ ಮೇಲೆಯೆ ಇಳಿಸಿತು. ನಾಲ್ಕು ತಿಂಗಳ ನಂತರ ಅಮೆರಿಕವೂ ಅದನ್ನು ಸಾಧಿಸಿತು. ಆಮೇಲೆ ಆರಂಭವಾಗಿದ್ದು ಚಂದ್ರನ ಮೇಲೆ ಮನುಷ್ಯನನ್ನೆ ಇಳಿಸುವ ರೇಸು. 1968 ರ ಕೊನೆಯಲ್ಲಿ ಮೊದಲ ಬಾರಿಗೆ ಮನುಷ್ಯ ಚಂದ್ರನನ್ನು ಸುತ್ತು ಹಾಕಿಕೊಂಡು ಬಂದ. ಅದಾದ ಏಳೇ ತಿಂಗಳಿಗೆ ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಇಳಿದೆ ಬಿಟ್ಟ. ನಂತರದ ದಿನಗಳಲ್ಲಿ 24 ಅಮೆರಿಕನ್ನರು ಚಂದ್ರನ ಮೇಲೆ ಇಳಿದರು. ಒಟ್ಟು 12 ಜನ ತಮ್ಮ ಅಂತರಿಕ್ಷ ನೌಕೆಯಿಂದ ಕೆಳಕ್ಕಿಳಿದು ಚಂದ್ರನ ಮೇಲೆ ಓಡಾಡಿದರು. Left to right: Armstrong, Collins, Aldrinಕೊನೆಯ ಸಲ ಮನುಷ್ಯ ಚಂದ್ರನ ಮೇಲೆ ಕಾಲಿಟ್ಟದ್ದು 1972 ರಲ್ಲಿ.

ಚಂದ್ರನ ವಿಷಯದ ಮೇಲೆ ಇತ್ತೀಚಿನ ಸುದ್ದಿ ಏನೆಂದರೆ, ಭಾರತವೂ ಚಂದ್ರಯಾನ ಮಾಡುವುದು. ಈ ವಿಷಯದ ಬಗ್ಗೆ ಸ್ವಲ್ಪ ಸಿನಿಕತನದಿಂದ ನೋಡಿದರೆ, ರಷ್ಯಾ 1959 ರಲ್ಲಿಯೆ ಸಾಧಿಸಿದ್ದನ್ನು (ಚಂದ್ರನ ಸುತ್ತ ಕೃತಕ ಉಪಗ್ರಹ ಸುತ್ತುವುದು) ಭಾರತ ಈ ವರ್ಷ ಸಾಧಿಸುತ್ತದಂತೆ. ಅದೆ ರಷ್ಯಾ 1965 ರಲ್ಲಿ ಸಾಧಿಸಿದ್ದನ್ನು (ಚಂದ್ರನ ಮೇಲೆ ಮಾನವರಹಿತ ಯಂತ್ರವನ್ನು ಇಳಿಸುವುದು) ನಮ್ಮವರು 2011 ರಲ್ಲಿ ಸಾಧಿಸುತ್ತಾರಂತೆ. ಅಮೆರಿಕ 1969 ರಲ್ಲಿ ಸಾಧಿಸಿದ್ದನ್ನು (ಚಂದ್ರನ ಮೇಲೆ ಮನುಷ್ಯನನ್ನು ಇಳಿಸುವುದು) 2020 ರಲ್ಲಿ ಸಾಧಿಸುತ್ತಾರಂತೆ.

ಇದರ ಹೊರತಾಗಿ ನೋಡಿದರೆ, ಈ ವಾರ ಭಾರತದ ವೈಜ್ಞಾನಿಕ ಪ್ರಪಂಚಕ್ಕೆ ಹೆಮ್ಮೆಯ ವಾರ. ಇದೇ ಅಕ್ಟೋಬರ್ 22 ರಿಂದ 26 ರ ಒಳಗೆ, ನಮ್ಮ ಇಸ್ರೊ ವಿಜ್ಞಾನಿಗಳು ಅಂದುಕೊಂಡಂತೆ ಎಲ್ಲವೂ ನಡೆದರೆ, ಶ್ರೀಹರಿಕೋಟದಿಂದ ಭಾರತದ ಮೊದಲ "ಚಂದ್ರಯಾನ" ಆರಂಭವಾಗಲಿದೆ. ಉಡಾವಣೆಯ ನಂತರ ಈ ಅಂತರಿಕ್ಷ ನೌಕೆ ಭೂಮಿಯನ್ನು ಎರಡು ಸುತ್ತು ಹಾಕಿ, ನಂತರ ಭೂಕಕ್ಷೆಯನ್ನು ಸೀಳಿಕೊಂಡು ಚಂದ್ರನತ್ತ ಸಾಗುತ್ತದೆ. ಒಟ್ಟು ಐದೂವರೆ ದಿನಗಳ ನಂತರ ಅದು ಚಂದ್ರನ ಕಕ್ಷೆ ಸೇರುತ್ತದೆ. ಮೊದಲಿಗೆ ಚಂದ್ರನಿಗಿಂತ 1000 ಕಿ.ಮಿ. ದೂರದಲ್ಲಿ ಚಂದ್ರನನ್ನು ಸುತ್ತು ಹಾಕುತ್ತದೆ. ನಂತರ ನಿಧಾನವಾಗಿ ಚಂದ್ರನಿಗೆ ಹತ್ತಿರವಾಗುತ್ತ ಹೋಗಿ, Chandrayaan-1 ಕೊನೆಗೆ ಚಂದ್ರನಿಗೆ 100 ಕಿ.ಮಿ. ದೂರದಲ್ಲಿ ಸುತ್ತು ಹಾಕಲಾರಂಭಿಸುತ್ತದೆ. ಹಾಗೆ ಅದು ಸುಮಾರು ಎರಡು ವರ್ಷಗಳ ಕಾಲ ಚಂದ್ರನನ್ನು ಸುತುತ್ತ, ಚಂದ್ರನ ಧ್ರುವಗಳಲ್ಲಿ ಮಂಜು ಇರಬಹುದೆ ಎಂದು ಪರೀಕ್ಷಿಸುತ್ತಿರುತ್ತದೆ.

ಕಳೆದ ಶತಮಾನದಲ್ಲಿಯ ಅಮೆರಿಕ ಮತ್ತು ಸೋವಿಯತ್ ರಷ್ಯಾಗಳ ಮಿಲಿಟರಿ ಪೈಪೋಟಿ ಅಂತರಿಕ್ಷದಲ್ಲೂ ತಮ್ಮ ಸಾರ್ವಭೌಮತೆಯನ್ನು ಸಾಧಿಸುವ ಪೈಪೋಟಿಗೆ ತಿರುಗಿಕೊಂಡಿತ್ತು. ಆದರೆ ಯಾವಾಗ ಅವೆರಡರ ನಡುವೆ ಶೀತಲ ಸಮರ ಮುಗಿಯಿತೊ ಅಂತರಿಕ್ಷದಲ್ಲಿಯ ಪೈಪೋಟಿಯೂ ನಿಂತಿತು. ನಂತರ ಅಮೆರಿಕ ಬೇರೆಬೇರೆ ಗ್ರಹಗಳನ್ನು ಅಭ್ಯಸಿಸುವುದರತ್ತ, ವಿಶೇಷವಾಗಿ ಮಂಗಳ ಗ್ರಹದತ್ತ ತನ್ನ ದೃಷ್ಟಿ ನೆಟ್ಟಿತು.

ರಾಕೆಟ್ ಸೈನ್ಸ್ ಮತ್ತು ಅಂತರಿಕ್ಷ ಯೋಜನೆಗಳು ಅಪಾರವಾದ ಹಣವನ್ನೂ, ಅಷ್ಟೇ ಕರಾರುವಾಕ್ಕಾದ ವೈಜ್ಞಾನಿಕ ಲೆಕ್ಕಾಚಾರಗಳನ್ನೂ ಬೇಡುವ ವಿಭಾಗ. ಕಳೆದ ಶತಮಾನದ ಕೊನೆಕೊನೆಗಂತೂ ಇಂತಹ ವೈಜ್ಞಾನಿಕ ಪ್ರಯೋಗಗಳಿಗೆ ತೆರೆದುಕೊಳ್ಳುವ ಬೌದ್ಧಿಕ ಸಂಪತ್ತಾಗಲಿ, ಆರ್ಥಿಕ ಸಂಪತ್ತಾಗಲಿ ಅಮೆರಿಕ ಬಿಟ್ಟರೆ ಬೇರೆ ಯಾವ ದೇಶಕ್ಕೂ ಇರಲಿಲ್ಲ ಅಂದರೆ ಅದು ಅತಿಶಯೋಕ್ತಿಯಲ್ಲ. Artist's Concept of Rover on Marsಆದರೆ ಈ ಶತಮಾನ ಹೊಸಹೊಸ ಆಟಗಾರರನ್ನು ರಂಗಕ್ಕಿಳಿಸಿದೆ. ಯೂರೋಪಿನ ಮುಂದುವರೆದ ರಾಷ್ಟ್ರಗಳು ಯೂರೋಪಿಯನ್ ಯೂನಿಯನ್ ಮಾಡಿಕೊಂಡು ಸಂಯುಕ್ತವಾಗಿ ಅಂತರಿಕ್ಷದ ಪ್ರಯೋಗಗಳಿಗೆ ಮುಂದಾಗುತ್ತಿವೆ. ಆರ್ಥಿಕ ಮತ್ತು ಮಿಲಿಟರಿ ಶಕ್ತಿಯಾಗಿ ಹೊಮ್ಮಿರುವ ಚೀನಾಕ್ಕೆ ತನ್ನ ಶಕ್ತಿಯನ್ನು ಸಾಬೀತುಪಡಿಸುವ ಮಾರ್ಗವಾಗಿ ಅಂತರಿಕ್ಷ ವಿಜ್ಞಾನ ಕಾಣಿಸುತ್ತಿದೆ. ಅದೆ ಹಾದಿಯಲ್ಲಿರುವ ಭಾರತ ಈಗ ಚೀನಾಕ್ಕಿಂತ ಮೊದಲೆ ತನ್ನ ಉಪಗ್ರಹವನ್ನು ಚಂದ್ರನ ಸುತ್ತ ಸುತ್ತಿಸುವ ಹಾದಿಯಲ್ಲಿದೆ. ಆದರೆ, ಇವರೆಲ್ಲ ಈಗಾಗಲೆ ಮಂಗಳ ಗ್ರಹದಲ್ಲಿ ತನ್ನ ರೊಬೊಟ್ ಇಳಿಸಿರುವ ಅಮೆರಿಕಕ್ಕಿಂತ ಸುಮಾರು ಐದಾರು ದಶಕಗಳಷ್ಟು ಹಿಂದುಳಿದಿದ್ದಾರೆ ಎಂದರೆ ಅದು ಈ ವಿಭಾಗದಲ್ಲಿ ಅಮೆರಿಕದ ಸಾಧನೆಯನ್ನು ತೋರಿಸುತ್ತದೆ.

---X---


ಈಗ, ಈ ವೈಜ್ಞಾನಿಕ ಸಾಧನೆ ಮತ್ತು ಆಲೋಚನೆಗಳನ್ನು ಬಿಟ್ಟು ನಾನು ಸ್ವಲ್ಪ ಸಾಮಾನ್ಯ ಮಾನವ ಸಹಜ ಕುತೂಹಲದಿಂದ ಆಲೋಚಿಸುತ್ತೇನೆ. ಸೂರ್ಯ ಎನ್ನುವ ಬೆಂಕಿ ಉಂಡೆಯ ನಕ್ಷತ್ರ. ಅದನ್ನು ಎಂಟೊ-ಒಂಬತ್ತೊ ಗ್ರಹಗಳು ಸುತ್ತುತ್ತವೆ. ಅವುಗಳಲ್ಲಿ ಕೆಲವು ಗ್ರಹಗಳನ್ನು ಅವಕ್ಕಿಂತ ಸಣ್ಣ ಗ್ರಹಗಳು ಸುತ್ತುತ್ತವೆ. ನಮ್ಮದೆ ಭೂಮಿ ಸೂರ್ಯನೆಂಬ ನಕ್ಷತ್ರವನ್ನೂ, ಚಂದ್ರ ಎಂಬ ಉಪಗ್ರಹ ನಮ್ಮ ಭೂಮಿಯನ್ನೂ ಸುತ್ತುತ್ತದೆ. Solar eclipseಇವೆಲ್ಲ ಎಷ್ಟು ಕರಾರುವಾಕ್ಕಾಗಿ ಒಂದಕ್ಕಿಂತ ಒಂದು ದೂರದಲ್ಲಿ ಇದೆಯೆಂದರೆ, ಭೂಮಿಗೂ ಸೂರ್ಯನಿಗೂ ಮಧ್ಯೆ ಈ ಚಂದ್ರ ಬಂದರೆ ಅದು ಸಂಪೂರ್ಣವಾಗಿ ಸೂರ್ಯನನ್ನು ಮರೆಮಾಡುತ್ತದೆ. ಚಂದ್ರನ ಆಕಾರ ಮತ್ತು ಅಂತರ ಸರಿಯಾಗಿ ಸೂರ್ಯನನ್ನು ನಮ್ಮಿಂದ ಮರೆ ಮಾಡುವಷ್ಟು ಮಾತ್ರ ಇದೆ. ಸ್ವಲ್ಪವೂ ಹೆಚ್ಚಿಲ್ಲ, ಕಮ್ಮಿಯಿಲ್ಲ. ಅದೇ ರೀತಿ, ಸೂರ್ಯನಿಗೂ ಚಂದ್ರನಿಗೂ ಮಧ್ಯೆ ಭೂಮಿ ಬಂದರೆ, ಭೂಮಿಯ ಆಕಾರ ಮತ್ತು ಅದು ಸೂರ್ಯನಿಗಿಂತ ದೂರ ಇರುವ ಅಂತರ, ಒಂದೆ ಒಂದು ಸೂರ್ಯ ಕಿರಣವೂ ಚಂದ್ರನನ್ನು ನೇರವಾಗಿ ಮುಟ್ಟದಷ್ಟು ಕರಾರುವಾಕ್ಕಾಗಿದೆ. ಅಲ್ಲಾ, ಇದೆಲ್ಲ ಹೇಗಾಯಿತು? ಇದು ತನ್ನಷ್ಟಕ್ಕೆ ತಾನು ಆಗಿರುವುದು, ಯಾರೂ ನಿರ್ದಿಷ್ಟ ಉದ್ದೇಶದಿಂದ ಮಾಡಿದ್ದಲ್ಲ ಎಂದುಕೊಳ್ಳಲು ಸಾಧ್ಯವೆ?

ಪಾಪ. ಮನುಷ್ಯನೆಂಬ ಪ್ರಾಣಿ ಸಹಸ್ರಾರು ವರ್ಷಗಳಿಂದ ತಾನು ದೇವರ ಸೃಷ್ಟಿ ಎಂದು ಹೇಳಿಕೊಳ್ಳುತ್ತ ಬಂದ. ವಿಚಿತ್ರ ಏನೆಂದರೆ, ಆ ದೇವರು ಭೂಮಿಯ ಒಂದೊಂದು ಕಡೆ ಇದ್ದವರಿಗೆ ಒಂದೊಂದು ರೀತಿ ಇದ್ದ. ಕೆಲವರು, 'ದೇವರು ಈ ಭೂಮಿ, ಆಕಾಶ, ಪಶುಪಕ್ಷಿ, ಮನುಷ್ಯ ಇತ್ಯಾದಿಗಳನ್ನು ಒಂದು ವಾರದಲ್ಲಿ ಸೃಷ್ಟಿಸಿದ.' ಎಂದರು. The hominoids are descendants of a common ancestor. -Wikipedia.ಇನ್ನೂ ಕೆಲವರು, 'ಹಾಗಲ್ಲ, ಆ ನಿಮ್ಮ ದೇವರು ನಮ್ಮನ್ನು ಸೃಷ್ಟಿಸಲಿಲ್ಲ, ಈ ನಮ್ಮ ದೇವರು ತಲೆಯಿಂದ ಹಿಡಿದು ಕಾಲಿನ ತನಕವೂ ಹೀಗೆ ಸೃಷ್ಟಿಸಿದ.' ಎಂದರು. ಮತ್ತೊಂದಷ್ಟು ಜನ, ' ಎಲ್ಲಿಂದ ಹೇಗೆ ಬಂದೆವು ಅನ್ನುವುದರ ಗೊಡವೆಯೇ ಬೇಡ, ಇಲ್ಲಿ ನಾವು ಹೇಗೆ ಇರಬೇಕು ಎಂದಷ್ಟೆ ಯೊಚಿಸೋಣ,' ಎಂದರು. ಆಗ ಕೆಲವರು, 'ಹಾಗೆ ದೇವರನ್ನು ನಿರಾಕರಿಸುವುದೆ ತಪ್ಪು, ನಾವು ಹೇಳಿದ್ದನ್ನು ಒಪ್ಪಿಕೊಳ್ಳಲೇಬೇಕು,' ಎಂದರು. ಆದರೆ, ಎಲ್ಲರೂ ಒಪ್ಪಿಕೊಳ್ಳುವಂತಹ ಅಭಿಪ್ರಾಯ ಮೂಡದೆ ಇದ್ದುದ್ದರಿಂದ ಕೊನೆಗೆ ಮನುಷ್ಯ ತನ್ನ ಮೂಲಕ್ಕೆ ಇಳಿಯುತ್ತ ಹೋದ. ಕಳೆದ ಒಂದೆರಡು ಶತಮಾನಗಳ ಹಿಂದೆಯಷ್ಟೆ ಅವನು ಕೆಲವು ಆಧಾರಗಳ ಮೂಲಕ, 'ಮನುಷ್ಯನೆ ಏನು, ಭೂಮಿಯ ಮೇಲಿನ ಪ್ರತಿಯೊಂದು ಜೀವಿಯೂ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ವಿಕಾಸವಾಗುತ್ತ ಬಂದಿದೆ; ಈಗ ಮನುಷ್ಯ ಇರುವ ರೂಪದಲ್ಲಿಯೆ ಯಾರೂ ಅವನನ್ನು ನೇರವಾಗಿ ಸೃಷ್ಟಿಸಲಿಲ್ಲ,' ಎಂದ.

Youtubeನಲ್ಲಿ ಈ ಲೇಖನದ ವಾಚನ

ಮೊದಲಿಗೆ ಭೂಮಿಯ ಬಗ್ಗೆಯೂ ಮನುಷ್ಯನ ಕಲ್ಪನೆ ಸರಿ ಇರಲಿಲ್ಲ. "ಭೂಮಿ ಚಪ್ಪಟೆಯಾಗಿದೆ, ಸೂರ್ಯ ಮತ್ತು ಚಂದ್ರರು ಭೂಮಿಯನ್ನು ಸುತ್ತುತ್ತವೆ," ಎನ್ನುತ್ತಿದ್ದರು. ಆದರೆ, ತನ್ನ ಕಾಲಕ್ಕಿಂತ ಮುಂದಿದ್ದ ಬುದ್ಧಿಜೀವಿಯೊಬ್ಬ ಐದುನೂರು ವರ್ಷಗಳ ಹಿಂದೆ "ಭೂಮಿ ಗುಂಡಗಿದೆ ಮತ್ತು ಅದು ಸೂರ್ಯನ ಸುತ್ತ ಸುತ್ತುತ್ತದೆ." ಎಂದ. ಅದರ ಆಧಾರದ ಮೇಲೆ ಕೆಲವರು ಪ್ರಯೋಗಗಳನ್ನು ಮಾಡುತ್ತ ಹೋಗಿ ಏನೇನೊ ಸತ್ಯಗಳನ್ನು ಕಂಡುಕೊಂಡರು. ಕಳೆದ ಐದುನೂರು ವರ್ಷಗಳಲ್ಲಿ ಈ ಸತ್ಯಗಳು ಯಾವ ರೀತಿ ಸ್ಫೋಟಿಸಿದವೆಂದರೆ, ಒಂದೇ ಸ್ಥಳದಲ್ಲಿ ನಿಲ್ಲದೆ ಓಡುತ್ತಿರುವ ಭೂಮಿಯಿಂದ ಹಾರಿದ ಮನುಷ್ಯ ಒಂದೇ ಸ್ಥಳದಲ್ಲಿ ನಿಲ್ಲದೆ ಓಡುತ್ತಿರುವ ಚಂದ್ರನ ಮೇಲೆ ಇಳಿದೇ ಬಿಟ್ಟ. ಚಂದ್ರ ಭೂಮಿಯಿಂದ ಹತ್ತಿರತ್ತಿರ ನಾಲ್ಕು ಲಕ್ಷ ಕಿ.ಮಿ. ದೂರದಲ್ಲಿದ್ದಾನೆ. ಅಷ್ಟು ದೂರವನ್ನೂ ಮನುಷ್ಯ ಕೇವಲ ನಾಲ್ಕೆ ದಿನಗಳಲ್ಲಿ ಕ್ರಮಿಸಿಬಿಟ್ಟ!

ನನ್ನ ಕುತೂಹಲ ಮತ್ತು ಆಸೆ ಪ್ರಾರಂಭವಾಗುವುದೆ ಇಲ್ಲಿನಿಂದ. ಅಲ್ಲಾ, ಇದೆಲ್ಲ ನಮ್ಮನ್ನು ಎಲ್ಲಿಗೆ ಮುಟ್ಟಿಸುತ್ತದೆ? ನಾನಂದುಕೊಳ್ಳುವುದು, "ದೇವರಲ್ಲಿಗೆ." ಈ ಸೃಷ್ಟಿಯ ಸಾಕ್ಷಾತ್ಕಾರ ಮಾಡಿಸುವಲ್ಲಿಗೆ.

ಮನುಷ್ಯ ಮತ್ತು ಇತರ ಪ್ರಾಣಿಗಳು ಭೂಮಿಯ ಮೇಲೆ ಹುಟ್ಟುತ್ತ, ವಿಕಾಸವಾಗುತ್ತ, ನಾಶವಾಗುತ್ತ, Animation (not to scale) of Theia forming in Earth’s L5 point and then, perturbed by gravity, colliding to help form the moon. The animation progresses in one-year steps making Earth appear not to move. The view is of the south pole.- Wikipedia.ಮತ್ತೆ ಇನ್ನೊಂದು ರೀತಿಯಲ್ಲಿ ಹುಟ್ಟುತ್ತ ಹೇಗೆ ಸಾಗಿವೆ ಎನ್ನುವುದನ್ನು ಈಗ ನಾವು ಒಂದು ಹಂತದ ತನಕ ತಿಳಿದುಕೊಂಡಿದ್ದೇವೆ. ಆದರೆ, ಈ ಭೂಮಿಯೆ ಹೇಗೆ ಹುಟ್ಟಿತು ಎನ್ನುವುದು ಇನ್ನೂ ಸ್ಪಷ್ಟವಾಗಿ, ಸರಳವಾಗಿ ಗೊತ್ತಾಗಿಲ್ಲ. ಕೆಲವರು ಈಗಾಗಲೆ ಕೆಲವು ವಾದಗಳನ್ನು ಮಂಡಿಸಿದ್ದಾರೆ. ಆದರೆ, ಇವು ಯಾವುವೂ ಅಷ್ಟು ಸರಳವಾಗಿ ತೋಚುತ್ತಿಲ್ಲ. ನಮ್ಮ ಗೆಲಾಕ್ಸಿಯ ವಿಚಾರ ತೆಗೆದುಕೊಂಡರೆ ಅದರಲ್ಲಿ ನಮ್ಮ ಸೌರಮಂಡಲ ಸಮುದ್ರದಲ್ಲಿನ ಒಂದು ಹನಿಗೆ ಸಮಾನ ಇರಬಹುದು; ಆ ಸೌರಮಂಡಲದಲ್ಲಿ ನಮ್ಮ ಭೂಮಿ ಒಂದು ಹನಿ ಮಾತ್ರದ್ದೇನೊ! ಭೂಮಿಯ ಮೇಲಿನ ಸಹಸ್ರಾರು ಕೋಟಿ ಜೀವಜಂತುಗಳಲ್ಲಿ ಮನುಷ್ಯನೂ ಒಬ್ಬ. ಹಾಗಾದರೆ ಈ ಬ್ರಹ್ಮಾಂಡದಲ್ಲಿ ನಮ್ಮ ಸ್ಥಾನ ಏನು?

ಮತಾಚರಣೆಗಳು ಮತ್ತು ನಂಬಿಕೆಗಳು ಒಬ್ಬೊಬ್ಬರದು ಒಂದೊಂದು ರೀತಿ ಇರಬಹುದು. ಆದರೆ, ಭೂಮಿಯ ಮೇಲಿನ ಎಲ್ಲರಿಗೂ ಸಮಾನವಾಗಿ ಅನ್ವಯಿಸುವುದು ಈ ವಿಜ್ಞಾನ. ಈ ವಿಜ್ಞಾನವೆ ಎಲ್ಲಾ ಮನುಷ್ಯರು ಸರ್ವಸಮ್ಮತವಾಗಿ ಒಪ್ಪುವ ದೇವರ ಅಥವ ಸೃಷ್ಟಿಯ ಮೂಲವನ್ನು ಎಂದಾದರೊಮ್ಮೆ ತೋರಿಸುತ್ತದೆ ಎನ್ನುವ ಆಶಾವಾದ ನನ್ನದು. ಆಗ ನಮ್ಮ ಎಷ್ಟೋ ಸಂಕುಚಿತ ಯೋಚನೆಗಳಿಗೆ ಮತ್ತು ಮಾನವ ನಿರ್ಮಿತ ಸಮಸ್ಯೆಗಳಿಗೆ ಅರ್ಥವೆ ಇರುವುದಿಲ್ಲ. ಆಸ್ತಿಕತೆ ಮತ್ತು ನಿರಾಸಕ್ತಿಗಳ ನಡುವೆ ತೊಳಲಾಡುವ ನಾಸ್ತಿಕನಲ್ಲದ ನಾನು ವಿವಿಧ ಮತಗಳ ಪುರೋಹಿತಶಾಹಿಗಳ ದೇವರಿಗಿಂತ ವಿಜ್ಞಾನದ ದೇವರಿಗೆ ಕಾಯುತ್ತಿದ್ದೇನೆ. ನೀವು?

Oct 9, 2008

Sorry, we are letting you go...

ಊಫ್... ಮತ್ತೆ ಇನ್ನೊಂದು ದಿನ (ಅಕ್ಟೋಬರ್ 9, 08) ಅಮೆರಿಕದ ವಾಲ್ ಸ್ಟ್ರೀಟ್ ಭಯಂಕರವಾಗಿ ಬಿತ್ತು. ಕೊನೆಯ ಒಂದು ಗಂಟೆಯಲ್ಲಿ 450 ಪಾಯಿಂಟ್‌ಗಳ free fall! ಇದು ನಮ್ಮ ಕಾಲದ global meltdown. ಮುಂದಿನ ದಿನಗಳಲ್ಲಿ ಇಡೀ ಪ್ರಪಂಚದ ಆರ್ಥಿಕ ಚಿತ್ರಣವೇ ಬದಲಾಗಲಿದೆ. ಹೊಸ ದಿನಗಳತ್ತ ಹೆಜ್ಜೆ ಇಡುತ್ತಿದೆ ವಿಶ್ವ ವ್ಯವಸ್ಥೆ.

ಕಳೆದ ತಿಂಗಳ ಕೊನೆಯಲ್ಲಿ ಪತ್ರಿಕೆಯೊಂದು "ಅಮೆರಿಕದ ಆರ್ಥಿಕ ಸಮಸ್ಯೆಗಳು ಮತ್ತು ಅದು ಭಾರತದ ಬಿಪಿಒ ಕಂಪನಿಗಳಲ್ಲಿ ಕೆಲಸ ಮಾಡುವವರ ಮೇಲಿನ ಪ್ರಭಾವ"ದ ಬಗ್ಗೆ ಅಭಿಪ್ರಾಯ ಕೇಳಿದ್ದರು. ಅದಕ್ಕೆ ಒಂದು ಚಿಕ್ಕ ಟಿಪ್ಪಣಿಯನ್ನು ಸುಮಾರು ಏಳೆಂಟು ದಿನಗಳ ಹಿಂದೆ ಕಳುಹಿಸಿದ್ದೆ. ಅದು ಹೀಗಿತ್ತು:

ಇತ್ತೀಚಿನ ವಾರಗಳಲ್ಲಿ ಅಮೆರಿಕದ ಅರ್ಥ ವ್ಯವಸ್ಥೆಯಲ್ಲಿ ಸಂಭವಿಸಿದ ಘಟನೆಗಳು ಭಾರತದ ಬಿಪಿಒ ರಂಗಕ್ಕೆ ನಿಜಕ್ಕೂ ಕೆಟ್ಟ ಸುದ್ದಿಯೆ. ಜೊತೆಗೆ, ಇದರ ಪರಿಣಾಮಗಳೂ ಸಹ ಅಲ್ಪಕಾಲಿಕವೇನಲ್ಲ. ಭಾರತದ ಐಟಿ ರಂಗಕ್ಕೆ ಇದರ ಭೀಕರತೆ ತಟ್ಟಲು ಇನ್ನೂ ಮೂರ್ನಾಲ್ಕು ತಿಂಗಳ ಸಮಯ ಹಿಡಿಯಬಹುದು ಮತ್ತು ಅದು ಅಷ್ಟೇನೂ ದಾರುಣವಾಗಿರದೆ ಇರಬಹುದು. ಯಾಕೆಂದರೆ ಸಾಫ್ಟ್‌ವೇರ್ ಇವತ್ತು ಒಂದು ರೀತಿಯಲ್ಲಿ ನಿತ್ಯುಪಯೋಗಿ ವಸ್ತು. ಹಾಗಾಗಿ ಅದಕ್ಕೆ ಬೇಡಿಕೆ ಇದ್ದೇ ಇರುತ್ತದೆ. ಆದರೆ ಅದನ್ನೆ ನಾವು ಬಿಪಿಒಗಳ ವಿಚಾರಕ್ಕೆ ಹೇಳಲಾಗುವುದಿಲ್ಲ. ಬಿಪಿಒಗಳ ಅವಶ್ಯಕತೆ ಇರುವುದೆ ಗ್ರಾಹಕ ಸಂಸ್ಕೃತಿಯಲ್ಲಿ. ಇವತ್ತಿನ ಅಮೆರಿಕನ್ ಗ್ರಾಹಕ ನಿಜಕ್ಕೂ ಸಂಕಷ್ಟದತ್ತ ಜಾರುತ್ತಿದ್ದಾನೆ.

ಲೆಹ್ಮನ್ ಬ್ರದರ್ಸ್, ವಾಷಿಂಗ್ಟನ್ ಮ್ಯೂಚುಯಲ್, ವಾಕೊವಿಯ ಮುಂತಾದ ಅಮೆರಿಕದ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ಕಣ್ಣುಮುಚ್ಚಿಕೊಂಡದ್ದು ಇಲ್ಲವೆ ದಿವಾಳಿಯಾಗಿ ಬೇರೆ ಕಂಪನಿಗಳಿಗೆ ಮಾರಾಟವಾಗಿದ್ದು ಇಲ್ಲಿ ಹಣಕಾಸಿನ ಮುಗ್ಗಟ್ಟನ್ನು ತಂಡೊಡ್ಡಿದೆ. ಹಲವಾರು ವರ್ಷಗಳಿಂದ ಸ್ಥಗಿತಗೊಂಡಿದ್ದ ಅರ್ಥವ್ಯವಸ್ಥೆ ಸಹ ಇದಕ್ಕೆ ಸಹಾಯ ಮಾಡುತ್ತಿದೆ. ಕಂಪನಿಗಳು ಮಾತ್ರವಲ್ಲದೆ ಜನರೂ ಸಹ ಈಗ ಹಣದ ಮುಗ್ಗಟ್ಟನ್ನು ಎದುರಿಸುತ್ತಿದ್ದಾರೆ. ಅವರ ಖರ್ಚು ಮಾಡುವ ತಾಕತ್ತು ದಿನೆದಿನೆ ಕಮ್ಮಿಯಾಗುತ್ತಿದೆ. ಸಾಲ ಸಿಗುವುದೂ ಕಷ್ಟವಾಗುತ್ತಿದೆ. ಇದೇ ಕಾರಣಕ್ಕಾಗಿ ಇಲ್ಲಿಯ ಆಟೊಮೊಬೈಲ್ ಇಂಡಸ್ಟ್ರಿ ಸೆಪ್ಟೆಂಬರ್ ತಿಂಗಳಿನಲ್ಲಿ ಶೇ. 30 ರಷ್ಟು ಕಮ್ಮಿ ವ್ಯಾಪಾರ ಕಾಣುವಂತಾಗಿದೆ. ಇನ್ನು ಇಲ್ಲಿ ಶುರುವಾಗಲಿರುವ ಹಾಲಿಡೆ ಶಾಪ್ಪಿಂಗ್ ಸೀಸನ್ ಸಹ ಕಳೆದ 30 ವರ್ಷಗಳಲ್ಲಿಯೆ ಕೆಟ್ಟದಾದ ಸೀಸನ್ ಆಗಲಿದೆ ಎಂದು ಅರ್ಥತಜ್ಞರು ಹೇಳುತ್ತಿದ್ದಾರೆ.

ಇವೆಲ್ಲವೂ ಅಮೆರಿಕದ ಗ್ರಾಹಕ ಸಂಸ್ಕೃತಿಯಿಂದಾಗಿ ಬೆಳೆದ ಮತ್ತು ಅವರಿಗೆ ಸೇವೆ ಸಲ್ಲಿಸಲೆಂದೆ ಹುಟ್ಟಿಕೊಂಡ ಭಾರತದ ಬಿಪಿಒ ಉದ್ಯಮಕ್ಕೆ ಈಗಿರುವುದಕ್ಕಿಂತ ಹೆಚ್ಚಿನ ಬೇಡಿಕೆ ತರುವುದಿಲ್ಲ. ಇಲ್ಲಿಯ ಜನ ಹೊಸಹೊಸ ಸಾಮಗ್ರಿಗಳನ್ನು ಕೊಳ್ಳುವುದು ಕಡಿಮೆ ಮಾಡಿದಷ್ಟೂ ಅವುಗಳ ಬಗ್ಗೆ ಕಾಲ್ ಸೆಂಟರ್‌ಗಳಿಗೆ ಕಾಲ್ ಮಾಡುವ ಸಾಧ್ಯತೆಯೂ ಕಮ್ಮಿಯಾಗುತ್ತ ಹೋಗುತ್ತದೆ. ಅಮೆರಿಕದ ಸಾಮಾನ್ಯ ಪ್ರಜೆ ಮತ್ತೆ ಖರ್ಚು ಮಾಡಲು ಆರಂಭಿಸುವ ದಿನಗಳೂ ಹತ್ತಿರದಲ್ಲಿಲ್ಲ. ನಿರುದ್ಯೋಗ ಬೇರೆ ಹೆಚ್ಚುತ್ತ ಹೋಗುತ್ತಿದೆ. ದೊಡ್ಡ ಮಟ್ಟದ ಲೇಯಾಫ್‌ಗಳನ್ನೂ ಸಹ ಇನ್ನು ನಿರೀಕ್ಷಿಸಬಹುದು.

ಇದೆಲ್ಲದರ ಪರಿಣಾಮದಿಂದಾಗಿ ಇನ್ನು ಮುಂದಕ್ಕೆ ಅಮೆರಿಕದ ವಾಣಿಜ್ಯ ನೀತಿಗಳೂ ಬದಲಾಗಲಿವೆ. ಈಗಾಗಲೆ ಸರ್ಕಾರ ಒಂದು ಹಂತದ ರಾಷ್ಟ್ರೀಕರಣಕ್ಕೆ ಮುಂದಾಗಿದೆ. ಇದು ಅಮೆರಿಕದ ಹಲವಾರು ಉದ್ದಿಮೆಗಳ ಮೇಲೆ ಅಮೆರಿಕದ ರಾಜಕಾರಣಿಗಳ ಹತೋಟಿಯನ್ನು ಹೆಚ್ಚಿಸಲಿದೆ. ಈ ರಾಜಕಾರಣಿಗಳ ಮುಂದಿನ ಗುರಿ ಆದಷ್ಟು ಹೆಚ್ಚಿನ ಉದ್ಯೋಗಗಳನ್ನು ಇಲ್ಲಿಯೇ ಸೃಷ್ಟಿಸುವುದು ಮತ್ತು ಈಗಾಗಲೆ ಹೊರಕ್ಕೆ ಹೋಗುತ್ತಿರುವ ಉದ್ಯೋಗಗಳಿಗೆ ಕಡಿವಾಣ ಹಾಕುವುದು. ಇವೆಲ್ಲವೂ ಅಮೆರಿಕದ ಔಟ್‌ಸೋರ್ಸಿಂಗ್‌ನಿಂದಾಗಿ ಲಾಭ ಪಡೆಯಲಾರಂಭಿಸಿದ್ದ ಭಾರತಕ್ಕೆ ಮಾತ್ರವಲ್ಲದೆ, ಚೀನಾ, ತೈವಾನ್, ಮಲೇಷಿಯಾಗಳಂತಹ ದೇಶಗಳಿಗೂ ಕೆಟ್ಟ ಸುದ್ಧಿ.

ಮೊದಲೆ ಹೇಳಿದಂತೆ ಭಾರತದ ಸಾಪ್ಟ್‌ವೇರ್ ಉದ್ಯಮಕ್ಕಿಂತ ಬಿಪಿಒ ಉದ್ಯಮಕ್ಕೆ ಇದರ ಪೆಟ್ಟು ಹೆಚ್ಚು. ಈಗಾಗಲೆ ಒಂದು ಹಂತದ ಪ್ರಬುದ್ಧತೆ ಮುಟ್ಟಿಕೊಂಡಿರುವ ಐಟಿ ಉದ್ಯಮ ಈ ಸಂಕಷ್ಟದ ಸಮಯದಲ್ಲಿ ತನ್ನ ಖರ್ಚುವೆಚ್ಚಗಳನ್ನು ಕಮ್ಮಿ ಮಾಡಿಕೊಂಡು ಆಗಲೂ ಲಾಭದಲ್ಲೆ ಇರಲು ಸಾಧ್ಯವಾಗಬಹುದು. ಆದರೆ ಬಿಪಿಒ ರಂಗಕ್ಕೆ ಅಷ್ಟು ಮಾತ್ರದ ಲಕ್ಷುರಿ ಇಲ್ಲ. ಸದ್ದಿಲ್ಲದೆ ಇಲ್ಲಿ ಲೇಯಾಫ್‌ಗಳು ಶುರುವಾಗಬಹುದು. ದೊಡ್ಡ ಕಂಪನಿಗಳು ಚಿಕ್ಕ ಕಂಪನಿಗಳನ್ನು ಕೊಂಡುಕೊಂಡು ಅನಗತ್ಯವಾದ/ದುಬಾರಿ ಹುದ್ದೆಗಳನ್ನು ತೆಗೆಯಬಹುದು. ಇಂತಹ ಪರಿಸ್ಥಿತಿಗೆ ಆ ಉದ್ಯಮದಲ್ಲಿ ಕೆಲಸ ಮಾಡುತ್ತಿರುವವರು ಸಿದ್ಧವಾಗಬೇಕಾಗುತ್ತದೆ.

ಆದರೆ ಈ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಯುವ ಜನಾಂಗ ಮತ್ತು ಅವರ ಪೋಷಕರು ಒಂದನ್ನು ಜ್ಞಾಪಕದಲ್ಲಿಟ್ಟುಕೊಂಡಿರಬೇಕು- ಅದು, ಇವ್ಯಾವುದಕ್ಕೂ ಅವರು ಕಾರಣರಲ್ಲ. ಇದು ಮುಕ್ತ ಅರ್ಥವ್ಯವಸ್ಥೆಯಲ್ಲಿ ನಮ್ಮ ಹತೋಟಿ ಇಲ್ಲದೆ ಘಟಿಸುವ ಕೃತ್ಯಗಳು. ಉದ್ಯೋಗ ಖಾತರಿ ಇವತ್ತಿನ ಸಂದರ್ಭದಲ್ಲಿ ಶೂನ್ಯ. ನೌಕರಿ ಮತ್ತು ಸಂಪಾದನೆ ಸಮುದ್ರದಲ್ಲಿನ ಉಬ್ಬರಗಳ ಏರಿಳಿತದಂತೆಯೆ ಸಹಜವಾದದ್ದು. ಇದಕ್ಕೆ ಯುವಕರು ತಮ್ಮ ಅದೃಷ್ಟವನ್ನು ಹೀಯಾಳಿಸಿಕೊಳ್ಳುವುದಾಗಲಿ, ಪೋಷಕರು ಮಕ್ಕಳು ಏನೋ ತಪ್ಪು ಮಾಡಿದ್ದಾರೆ ಎಂದು ಭಾವಿಸುವುದಾಗಲಿ ಸಲ್ಲದು.

ಪರಿಸ್ಥಿತಿ ಹೀಗೆ ಒಂದೆರಡು ವರ್ಷಗಳಲ್ಲಿಯೆ ಮೇಲೇರುವುದು ಮತ್ತು ಕೆಳಗಿಳಿಯುವುದು ಭಾರತೀಯರಿಗೆ ಒಂದು ರೀತಿಯಲ್ಲಿ ಸಾಂಸ್ಕೃತಿಕ ಆಘಾತ. ಹಾಗಾಗಿ, ವಿಶೇಷವಾಗಿ ಪೋಷಕರು, ತಮ್ಮದಲ್ಲದ ತಪ್ಪಿಗೆ ಕೆಲಸ ಕಳೆದುಕೊಳ್ಳುವ ತಮ್ಮ ಮಕ್ಕಳಿಗೆ ಮನೋಧೈರ್ಯ ನೀಡಬೇಕು. ಸಾಧ್ಯವಾದರೆ ಅವರನ್ನು ಇನ್ನೂ ಹೆಚ್ಚಿನ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಬೇಕು. ಬೇರೆಬೇರೆ ರಂಗಗಳಲ್ಲಿ ಉದ್ಯೋಗ ಹುಡುಕುವಿಕೆಗೆ ಮತ್ತು ಪ್ರಯೋಗಶೀಲತೆಗೆ ಪ್ರೇರೇಪಿಸಬೇಕು. ನೌಕರಿ ಕಳೆದುಕೊಳ್ಳುವ ಯುವಜನಾಂಗವೂ ಅದೇ ರೀತಿ ಯೋಚಿಸಬೇಕು. ಯಾಕೆಂದರೆ ಮತ್ತೆ ಉದ್ಯೋಗಗಳು ಈ ರೂಪದಲ್ಲಲ್ಲವಾದರೂ ಇನ್ನೊಂದು ರೂಪದಲ್ಲಿ ಬಂದೇ ಬರುತ್ತವೆ. ಹಾಗೆ ಬಂದಾಗ ಈಗಾಗಲೆ ಉದ್ಯೋಗದ ಅನುಭವ ಇರುವ ಇವರು ಆ ಉದ್ಯೋಗಗಳನ್ನು ಪಡೆಯಲು ಮೊದಲ ಸಾಲಿನಲ್ಲಿ ಇರುತ್ತಾರೆ. ಭಾರತೀಯರಿಗೆ ಈ ಅನುಭವ ಹೊಸತಾದರೂ ಪಾಶ್ಚಾತ್ಯ ಪ್ರಪಂಚದಲ್ಲಿ ಇಂತಹವು ಕಳೆದ ಶತಮಾನದಲ್ಲಿ ಅನೇಕ ಬಾರಿ ಆಗಿಹೋಗಿದೆ.
ಮೊದಲೆ ಸಾಕಷ್ಟು ನೆಗೆಟಿವ್ ಇದ್ದ ಇದನ್ನು ಬರೆದ ಹತ್ತು ದಿನಗಳ ಒಳಗೇ ಮತ್ತೆ ಇನ್ನೂ ನೆಗೆಟಿವ್ ಆಗಿ ಬರೆಯಬೇಕಾಗಿ ಬಂದಿದೆ. ಯಾವ bailout ಆಗಲಿ, ಪ್ರಪಂಚದಾದ್ಯಂತದ ಕಂಪನಿಗಳ ಬಡ್ಡಿ ಕಡಿತವಾಗಲಿ ಜನ ತಮ್ಮ ಷೇರುಗಳನ್ನು ಕ್ಯಾಶ್ ಮಾಡಿಕೊಳ್ಳುವ ಅಥವ ಬ್ಯಾಂಕಿನಿಂದ ದುಡ್ಡು ತೆಗೆದುಕೊಂಡು ಮನೆಯಲ್ಲಿ ಇಟ್ಟುಕೊಳ್ಳುವ ಧಾವಂತವನ್ನು ಕಮ್ಮಿ ಮಾಡುತ್ತಿಲ್ಲ. ಇವತ್ತು ಅಮೆರಿಕದ ಎಷ್ಟೋ ಕಂಪನಿಗಳ ಬಳಿ ಇರುವ ನಗದು-ದುಡ್ಡು ಅವರ market capitalization ಗಿಂತ ಜಾಸ್ತಿ ಇದೆ ಎಂದರೆ ಅದು ಅಮೆರಿಕದ ಜನ ಸ್ಟಾಕ್‌ಗಳನ್ನು ಕ್ಯಾಶ್ ಮಾಡಿಕೊಳ್ಳುತ್ತಿರುವ ಬಯಕೆಯನ್ನು ಸೂಚಿಸುತ್ತದೆ. ಕೇವಲ ಐದೇ ತಿಂಗಳಿನಲ್ಲಿ ಸ್ಟಾಕ್ ಮಾರ್ಕೆಟ್‍ನಲ್ಲಿ ಹಣಹೂಡಿದ್ದ ಬಹುಪಾಲು ಜನ ತಮ್ಮ paper money ಮಾತ್ರವಲ್ಲದೆ ತಮ್ಮ ಕಷ್ಟಾರ್ಜಿತ ದುಡಿಮೆಯ ಶೇ. 40 ಕ್ಕೂ ಹೆಚ್ಚನ್ನು ಕಳೆದುಕೊಂಡಿದ್ದಾರೆ.

ಸುಮಾರು 7 ತಿಂಗಳ ಹಿಂದೆ "ಐಟಿ ಕ್ಷೇತ್ರಕ್ಕೆ ಬರಲಿದೆಯೆ ಕಷ್ಟದ ದಿನಗಳು?" ಲೇಖನ ಬರೆದದ್ದು. ಆಗ ಅದು ಸಂದೇಹದ ಮುನ್ಸೂಚನೆ ಆಗಿದ್ದರೂ, ಇದೂ ಹೀಗೇ ಆಗುತ್ತದೆ ಎನ್ನುವ ಖಾತರಿ ಇರಲಿಲ್ಲ. ಆದರೆ ಈಗಿನ ವಸ್ತುಸ್ಥಿತಿ ಬೇರೆಯದೇ ಇದೆ. "ಇದು ಕಷ್ಟ ಕಾಲ" ಎಂದು ವರ್ಷಗಟ್ಟಲೆ ಹೇಳಿಸಿಕೊಳ್ಳುವ ದಿನಗಳಿವು.

ಬರಲಿರುವ ಮೂರು ತಿಂಗಳಂತೂ ಪಾಶ್ಚಾತ್ಯ ಜಗತ್ತಿನ ಬಹುತೇಕ ಕಂಪನಿಗಳಿಗೆ ಬಹಳ ಕಷ್ಟದ ದಿನಗಳು. ಈಗಾಗಲೆ ಭಯಭೀತರಾಗಿರುವ ಇಲ್ಲಿನ ಮಧ್ಯಮವರ್ಗದ ಹಬ್ಬದ ಸೀಸನ್‌ನಲ್ಲಿ ಅನಗತ್ಯವಾದದ್ದಕ್ಕೆ ಖರ್ಚು ಮಾಡದೆ, ಹಣದ ಚಲಾವಣೆಯನ್ನು ನಿಲ್ಲಿಸೇ ಬಿಡುವ ಸಾಧ್ಯತೆ ಇದೆ. ಕಳೆದ ನಾಲ್ಕೈದು ದಶಕಗಳಿಂದ ಅನಗತ್ಯವಾದ ಭೌತಿಕ ಸಾಮಾನುಗಳಿಗೆ ಹಣ ಹರಿಸೇ ಬೆಳೆದ ಸಮಾಜ ಇದು. ಹಣ ಖರ್ಚು ಮಾಡಿದಷ್ಟೂ ಮತ್ತೊಂದು ದಾರಿಯಿಂದ ಹಣ ಬರುತ್ತಿದ್ದ ಅರ್ಥವ್ಯವಸ್ಥೆ ಇದು. ಈಗ, ಖರ್ಚು ಮಾಡುವುದಿಲ್ಲ ಎಂದರೆ ಹಣ ಬರುವುದೂ ನಿಲ್ಲುತ್ತದೆ. (ಅಂದರೆ ಸುಲಭವಾಗಿ ಸಾಲ ಸಿಗುವುದಿಲ್ಲ, ನಿರುದ್ಯೋಗಿಗಳಿಗೆ ಬೇಗ ನೌಕರಿ ಸಿಗುವುದಿಲ್ಲ, ಈಗಾಗಲೆ ಕೆಲಸದಲ್ಲಿ ಇರುವವರು ದೊಡ್ಡ ಸಂಖ್ಯೆಯಲ್ಲಿ ಕೆಲಸ ಕಳೆದುಕೊಳ್ಳುತ್ತಾರೆ - ಇವೆಲ್ಲದರಿಂದ ಮತ್ತದೆ ವರ್ತುಲ.)

ಜಾನ್ ಮೆಕೈನ್ ಎಂಬ ಅಮೆರಿಕದ ರಾಜಕಾರಣಿ "fundamentals of American economy are strong," ಎಂದ. ಈಗ, ಒಂದೇ ತಿಂಗಳಿನಲ್ಲಿ ಅದೇ economy ಯ ಕಾರಣದಿಂದ ಆತ ಅಮೆರಿಕದ ಅಧ್ಯಕ್ಷನಾಗುವ ಎಲ್ಲಾ ಬಾಗಿಲುಗಳು ಮುಚ್ಚಿಕೊಂಡು ಬಿಟ್ಟಿವೆ. ಆದರೆ, ನನ್ನ ಪ್ರಕಾರ ಭಾರತದ economy ಗೆ ಅಷ್ಟು ತೊಂದರೆಯಿಲ್ಲ. ಈ ಜಾಗತಿಕ ಅಲ್ಲೋಲಕಲ್ಲೋಲಗಳಿಂದ ಭಾರತದ ಐಟಿ ಕಂಪನಿಗಳ ಗ್ಲಾಮರ್ ಕುಂದಿದರೂ ಮಿಕ್ಕ ಕ್ಷೇತ್ರಗಳಲ್ಲಿ ಭಾರತದ ಜನತೆಗೆ ಅದು ಅಷ್ಟಾಗಿ ತಟ್ಟುವ ಸಾಧ್ಯತೆ ಕಮ್ಮಿ. ಬೆಳವಣಿಗೆಯ ವೇಗ ನಿಧಾನವಾಗಬಹುದು. ಆದರೆ ಇಳಿಯುವ ಸಾಧ್ಯತೆ ಕಮ್ಮಿ. ಯಾಕೆಂದರೆ, ನಾವು ಎಂದೂ ಮೇಲೆ ಹೋಗಿರಲೇ ಇಲ್ಲ. ಮೇಲೆ ಹೋದವರು ಮಾತ್ರ ಇಳಿಯುತ್ತಿರುವ ಪ್ರಕ್ರಿಯೆ ಇದು.

ನನ್ನ ಅನಿಸಿಕೆಯ ಪ್ರಕಾರ, ಮುಂದಿನ ಒಂದು ವರ್ಷದಲ್ಲಿ ಭಾರತದಲ್ಲಿಯ ಅನೇಕ ಐಟಿ-ಬಿಪಿಒ ಕಂಪನಿಗಳು ಕಣ್ಮರೆಯಾಗಲಿವೆ. ಅಂದರೆ ಇವೆಲ್ಲ ದಿವಾಳಿಯಾಗಿ ಹೋಗಲಿವೆ ಅಂತಲ್ಲ. ಬದಲಾಗಿ ಒಬ್ಬರು ಇನ್ನೊಬ್ಬರನ್ನು ಕೊಳ್ಳಲಿದ್ದಾರೆ, ಇಲ್ಲವೆ ಒಂದು ಇನ್ನೊಂದರ ಜೊತೆ ವಿಲೀನವಾಗಲಿವೆ. ಏರುವ ಖರ್ಚು ಮತ್ತು ಕಮ್ಮಿ ಆಗುವ ವರಮಾನ ಕಂಪನಿಯನ್ನು ನಷ್ಟಕ್ಕೆ ತಳ್ಳದಂತೆ ನೋಡಿಕೊಳ್ಳಲು ಕಂಪನಿಗಳು ಮಾಡುವ ಕೆಲಸ ಅದು. ಹಾಗೆ ಮಾಡುವುದರಿಂದ overlap ಆಗುವ ಇಲಾಖೆಗಳಲ್ಲಿ (HR/Payroll/Admin/Sales ಇತ್ಯಾದಿ) ಕೆಲಸ ಮಾಡುವವರ ಸಂಖ್ಯೆಯನ್ನು ಅರ್ಧಕ್ಕರ್ಧ ಇಳಿಸಿಕೊಂಡು, ಕಾಲಾಂತರದಲ್ಲಿ ಕಂಪನಿ ಬೆಳೆಯುವುದಷ್ಟೇ ಅಲ್ಲದೆ ಲಾಭದಲ್ಲೂ ಮುಂದುವರಿಯಬಹುದು. ಎರಡು ದಿನಗಳ ಹಿಂದೆ TCS ಸಿಟಿಬ್ಯಾಂಕ್ ಗ್ರೂಪಿನ e-Serve ಅನ್ನು ಕೊಂಡುಕೊಳ್ಳಲು ಕೇವಲ ಗ್ಯಾರಂಟೀಡ್ ಬ್ಯುಸಿನೆಸ್ ಮಾತ್ರ ಕಾರಣವಲ್ಲದೆ ಇದೂ ಒಂದು ಕಾರಣ. ಇಷ್ಟರಲ್ಲೆ, e-Serve ಕಂಪನಿಯಲ್ಲಿ ಮೇಲೆ ಹೇಳಿದ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಜನ ಕೆಲಸ ಕಳೆದುಕೊಳ್ಳಲಿದ್ದಾರೆ. ಇಂತಹುದು ಇನ್ನು ಮೇಲೆ ಹೆಚ್ಚಲಿದೆ.

ಕಂಪನಿಗಳು ತಮ್ಮ Quarterly ಫಲಿತಾಂಶಗಳನ್ನು ಬಿಡುಗಡೆ ಮಾಡುವ ಜಾತ್ರೆ ಇನ್ನೇನು ಮುಂದಿನ ವಾರದಿಂದ ಆರಂಭವಾಗಲಿದೆ. ಹಾಗೆಯೆ, ಮುಂದಿನ ತ್ರೈಮಾಸಿಕ ಹೇಗೆ ಇರುತ್ತದೆ ಎನ್ನುವುದರ ಮುನ್ಸೂಚನೆಯನ್ನೂ ಅವು ಕೊಡಲಿವೆ. ಅದರ ಜೊತೆಜೊತೆಗೆ, ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ಮತ್ತು ಭಾರತದ ಐಟಿ-ಬಿಪಿಒ ಕಂಪನಿಗಳಲ್ಲಿ ಮ್ಯಾನೇಜರ್ ತನ್ನ ಕೈಕೆಳಗಿನ ನೌಕರನನ್ನು ಮೀಟಿಂಗ್ ರೂಮಿಗೆ ಕರೆದುಕೊಂಡು ಹೋಗಿ, "Sorry, we are letting you go!" ಎನ್ನುವ ದಿನಗಳೂ ಆರಂಭವಾಗಲಿವೆ. ಇದು ತಮಾಷೆಯಲ್ಲ. ಇದನ್ನು ಅಂತರ್ಜಾಲದಲ್ಲಿ ಓದುವ ಬಹುಪಾಲು ಜನರಿಗೆ ನಗುವ ವಿಚಾರವಂತೂ ಅಲ್ಲವೆ ಅಲ್ಲ.

Oct 6, 2008

ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...

ಇಂತಹದೊಂದು ವಿಶ್ವಾಸ ನನಗೆ ಮೊದಲಿನಿಂದಲೂ ಇತ್ತು. ಆರ್ಥಿಕ ಅಭಿವೃದ್ಧಿ ಕೊನೆಗೂ ತಳವರ್ಗಗಳನ್ನೂ, ಗ್ರಾಮಾಂತರವನ್ನೂ ಮುಟ್ಟುತ್ತದೆ ಮತ್ತು ಅದು ಕಾಲಾಂತರದಲ್ಲಿ ಅಂತರ್ಜಾಲದಲ್ಲೂ ಪ್ರತಿಬಿಂಬಿಸುತ್ತದೆ ಎನ್ನುವುದೇ ಆ ವಿಶ್ವಾಸ.

ನಾನು ಬರೆಯಲಾರಂಭಿಸಿದ್ದು 2003 ರಲ್ಲಿ. ಆಗ ನನ್ನಂತಹ ವಿದೇಶದಲ್ಲಿದ್ದವನಿಗೆ ಕನ್ನಡದಲ್ಲಿ ಏನಾದರೂ ಬರೆದರೆ ಪ್ರಕಟಿಸುವ ಅವಕಾಶ ಇದ್ದದ್ದು ದಟ್ಸ್‌ಕನ್ನಡ ವೆಬ್‌ಸೈಟಿನಲ್ಲಿ. ಶಾಮಸುಂದರ್ ಮತ್ತವರ ಬಳಗ ನನ್ನಂತಹ ಅನೇಕ ಭಿನ್ನ ವೈಚಾರಿಕ ಹಿನ್ನೆಲೆ ಇರುವವರಿಗೆಲ್ಲ ವೇದಿಕೆ ಕೊಟ್ಟಿದ್ದರು. ಬಹುಶಃ, ಸಂವಾದಕ್ಕೆ ಆಸ್ಪದವಿದ್ದ ಮೊದಲ ಕನ್ನಡ ತಾಣ ಅದು.

ಅಷ್ಟಿದ್ದರೂ, ಕನ್ನಡ ಅಂತರ್ಜಾಲ ಪ್ರಪಂಚದಲ್ಲಿ ಮೊದಲಿನಿಂದಲೂ ಬಹುಸಂಖ್ಯಾತರಾಗಿದ್ದವರು ಕೋಮುವಾದಿಗಳು , (ಜಾತಿವಾದಿಗಳೂ ಇದರಲ್ಲೆ ಬರುತ್ತಾರೆ) ಮತ್ತು ತಮ್ಮ ಗತಕಾಲದ ಹಿರಿಮೆಯ ಬಗ್ಗೆ (!) ನಾಸ್ಟಾಲ್ಜಿಕ್ ಆಗಿ ಬರೆಯುವ, ಅಂತಹುದನ್ನೆ ಓದುವವರು. ನಾನು ಬರೆಯಲು ಆರಂಭಿಸಿದ ದಿನಗಳಲ್ಲಂತೂ ಇದು ಎದ್ದು ಕಾಣುವ ಹಾಗೆ ಇತ್ತು. ಸಂಸ್ಕೃತಿ, ದೇಶ, ಜಾತಿ, ಮತ, ಮುಂತಾದವುಗಳ ಪರ ಭಾವಾವೇಶದಿಂದ ಬರೆಯುವವರೆ ಅಂತರ್ಜಾಲದಲ್ಲಿ ತುಂಬಿದ್ದ ಸಮಯ ಅದು. ಆ ಸಮಯದಲ್ಲಿ ಇವುಗಳಿಗೆ ಭಿನ್ನವಾಗಿ (ಸಂಕುಚಿತ ಭಾವನೆಗಳನ್ನು ವಿಮರ್ಶಿಸಿ) ಬರೆಯುವವರು ಬೆರಳೆಣಿಕೆ ಮಂದಿ ಮಾತ್ರ ಇದ್ದರು. ಈ "ಜನಪ್ರಿಯ ಸಿದ್ಧಮಾದರಿ"ಗಳಿಗಿಂತ ಬೇರೆಯದಾಗಿ ಬರೆಯಲಾರಂಭಿಸಿದ್ದ ನನಗೆ ಆ ಸಮಯದಲ್ಲಿ ಸಮಾನಮನಸ್ಕರು ಬಹಳ ಕಮ್ಮಿ ಇದ್ದರು. (ಆದರೆ, ಕನ್ನಡ ಬರಹಲೋಕ ಹಾಗೆ ಇರಲಿಲ್ಲ. ಅಲ್ಲಿ ನಡೆಯುತ್ತಿದ್ದ ಚಿಂತನೆಗಳಿಗೂ ಮತ್ತು ಅಂತರ್ಜಾಲದಲ್ಲಿನ ಕನ್ನಡಲೋಕಕ್ಕೂ ಅಪಾರವಾದ ವ್ಯತ್ಯಾಸಗಳಿದ್ದವು. ಕನ್ನಡ ಅಂತರ್ಜಾಲ ಲೋಕ ಕನ್ನಡದ ಚಿಂತನಾಲೋಕದ ಪ್ರತಿಬಿಂಬ ಆಗಿರಲಿಲ್ಲ ಆಗ.)

ಆಗೆಲ್ಲ ನನ್ನಲ್ಲಿ, ಈ ಪರಿಸ್ಥಿತಿ ಯಾವಾಗ ಬದಲಾಗುತ್ತದೆ, ಕನ್ನಡದ ಅಂತರ್ಜಾಲವೂ ನಿಜವಾದ ಕನ್ನಡ-ಪ್ರಪಂಚವನ್ನು ಪ್ರತಿಬಿಂಬಿಸುವುದು ಯಾವಾಗ ಎನ್ನುವ ಪ್ರಶ್ನೆಗಳು ಹುಟ್ಟುತ್ತಿದ್ದವು. ಆ ಪ್ರಶ್ನೆಗಳಿಗೆ ಮೇಲೆ ಹೇಳಿದ ವಿಶ್ವಾಸ ಉತ್ತರವಾಗುತ್ತಿತ್ತು. ಈ ಆರ್ಥಿಕ ಪ್ರಗತಿ ಕೊನೆಗೆ ಎಲ್ಲಾ ವರ್ಗಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ಇಳಿಯಲೇಬೇಕು (ಇಲ್ಲಿ ನೋಡಿ), ಒಟ್ಟಾರೆ ಅದು ನಿಧಾನವಾಗಿ ಎಲ್ಲರನ್ನೂ ಮೇಲಕ್ಕೆತ್ತುತ್ತದೆ (ಇಲ್ಲಿ ನೋಡಿ), ಆಗ ಅದು ಅಂತರ್ಜಾಲದಲ್ಲೂ ಪ್ರತಿಬಿಂಬಿತವಾಗುತ್ತದೆ, ಎನ್ನುವ ಆಶಾವಾದ ಅದು.

ಬಹುಶಃ ಒಂದು-ಎರಡು ವರ್ಷಗಳಿಂದ ನನ್ನ ಆಶಾವಾದ ವಾಸ್ತವವಾಗುತ್ತಿರುವುದನ್ನು ನೋಡುತ್ತಿದ್ದೇನೆ. ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನ ಬಹುತೇಕ ಕನ್ನಡ ಸಾಹಿತಿಗಳಿಗೆ (ಅದರಲ್ಲೂ ಪ್ರಗತಿಪರರೆಂದುಕೊಳ್ಳುವವರಿಗೆ) ’ಇಂಟರ್‍ನೆಟ್ ನೋಡುವುದಿಲ್ಲ, ಇಮೇಲ್ ಗೊತ್ತಿಲ್ಲ,’ ಎನ್ನುವುದು ಬಹಳ ಹೆಮ್ಮೆಯ ವಿಷಯವಾದಂತಿತ್ತು. ತಾವು ಬಡವರ, ದುರ್ಬಲರ, ದಲಿತರ, ಹಿಂದುಳಿದವರ ಪರ ಇದ್ದೇವೆ ಎಂದು ತೋರಿಸಿಕೊಳ್ಳಲು ತಮಗೆ ತಾವೆ ಮಾಡಿಕೊಳ್ಳುವ ಆತ್ಮದ್ರೋಹದಂತೆ ನನಗದು ಕಾಣಿಸುತ್ತಿತ್ತು. ಆದರೆ ಯಾವಾಗ ಕಂಪ್ಯೂಟರ್‌ಗಳು ಮತ್ತು ಇಂಟರ್‌ನೆಟ್ affordable ಆಗುತ್ತಾ ಬಂತು, ಅವರಿಗೂ ಇದರಿಂದ ಆಚೆ ಉಳಿಯಲಾಗಲಿಲ್ಲ, ಆಗುತ್ತಿಲ್ಲ. ಅದರಲ್ಲೂ ವಿಭಿನ್ನ ಹಿನ್ನೆಲೆಯ ಯುವಕರು ಶಿಕ್ಷಣ ಮತ್ತು ನೌಕರಿಯ ಸಾಧ್ಯತೆಗಳಿಂದಾಗಿ ದಿನವೂ ಕಂಪ್ಯೂಟರ್‌ನೊಂದಿಗೇ ಕೆಲಸ ಮಾಡುವಂತಹ ಪರಿಸ್ಥಿತಿ ಉಂಟಾದುದರಿಂದ ಒಂದು ಬಹುದೊಡ್ಡ, ಬಹುಸಂಖ್ಯಾತ ಜನಸಮೂಹವೆ ಇವತ್ತು ಕಂಪ್ಯೂಟರ್‌ಗೆ ತೆರೆದುಕೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಕನ್ನಡ ವೆಬ್‌ಲೋಕ ಬದಲಾಗಿರುವ ಪರಿಸ್ಥಿತಿಯನ್ನು ಅವಲೋಕಿಸಿದರೆ ಸಾಕು, ಇದು ಸ್ಪಷ್ಟವಾಗಿ ಕಾಣಿಸುತ್ತದೆ.

ಯಾವಾಗ ಬ್ಲಾಗುಗಳನ್ನು ಮಾಡಿಕೊಳ್ಳುವುದು ಮುಕ್ತವೂ, ಉಚಿತವೂ, ಸುಲಭವೂ ಆಯಿತೊ ಅಲ್ಲಿಂದೀಚೆಗೆ ನಾನಾ ಹಿನ್ನೆಲೆಯ ಜನ ಕನ್ನಡ ಅಂತರ್ಜಾಲ ಲೋಕಕ್ಕೆ ಅಡಿಯಿಟ್ಟಿದ್ದಾರೆ. ಮೊದಮೊದಲು ಇಲ್ಲಿಯೂ ಕೋಮುವಾದ ಅಥವ ಮತೀಯ ಬಲಪಂಥೀಯತೆಗೆ ಹತ್ತಿರ ಇರುವವರೆ ಹೆಚ್ಚಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಇದ್ದಕ್ಕಿದ್ದಂತೆ ಬದಲಾಗುತ್ತಿದೆ. ನಿಜವಾದ ಕನ್ನಡ ಪ್ರಪಂಚ ಅಂತರ್ಜಾಲದಲ್ಲೂ ಪ್ರತಿಬಿಂಬಿತವಾಗುತ್ತಿದೆ.

ಇದಕ್ಕೆ ಪೂರಕವಾಗಿ ಕೆಲವು ಬ್ಲಾಗುಗಳನ್ನು, ವೆಬ್‌ಸೈಟುಗಳನ್ನು ಉದಾಹರಿಸುತ್ತೇನೆ. ಅಬ್ದುಲ್ ರಷೀದರ "ಕೆಂಡಸಂಪಿಗೆ" ಕನ್ನಡದ ಅಂತರ್ಜಾಲ ಲೋಕಕ್ಕೆ ಪರಿಚಯ ಇಲ್ಲದಿದ್ದವರನ್ನೆಲ್ಲ (ಆದರೆ ಕನ್ನಡದ ಅತಿ ಪ್ರಮುಖ ಬರಹಗಾರರು) ಪರಿಚಯಿಸುತ್ತಿದೆ. ಕುಂ.ವೀ. ಕೆಂಡಸಂಪಿಗೆಗೆಂದೇ ಅಂಕಣ ಬರೆಯುತ್ತಿದ್ದಾರೆ. ಅನಂತಮೂರ್ತಿಯವರೂ ಸಹ. ಇನ್ನು ಸ್ವತಃ ಅಬ್ದುಲ್ ರಷೀದ್, ದೇವನೂರು ಮಹಾದೇವ, ಮೊಗಳ್ಳಿ ಗಣೇಶ್‌ರ ಕತೆ-ಕಾದಂಬರಿಗಳೂ ಪ್ರಕಟವಾಗುತ್ತಿವೆ. ಕವಿ-ಪತ್ರಕರ್ತ ಜಿ.ಎನ್. ಮೋಹನ್ ನಡೆಸುತ್ತಾರೆ ಎನ್ನಲಾದ (ಎಲ್ಲೋ ಓದಿದ್ದು, ಅಧಿಕೃತವಾಗಿ ನನಗೆ ಗೊತ್ತಿಲ್ಲ) "ಅವಧಿ" ಬ್ಲಾಗಿನಲ್ಲೂ ಇಂತಹುದನ್ನೆ ನಾವು ನೋಡುತ್ತೇವೆ. ಡಾ. ನಟರಾಜ್ ಹುಳಿಯಾರ್ ಅಂತರ್ಜಾಲದ ಓದುಗರಿಗೆ ಪರಿಚಯವಾಗಿದ್ದು ಇದೇ ಬ್ಲಾಗಿನಿಂದ.

ಇನ್ನು ಸಂಪದದ ಬಗ್ಗೆ. ಯು.ಆರ್. ಅನಂತಮೂರ್ತಿಯವರ ಋಜುವಾತು ಬ್ಲಾಗಿನಿಂದ ಹಿಡಿದು, ಉದಯವಾಣಿಯ ಇಸ್ಮಾಯಿಲ್‌ರ "ಬರೆವ ಬದುಕಿನ ತಲ್ಲಣ", ಡಿ.ಎಸ್. ನಾಗಭೂಷಣರ "ನಾಗ ಸಂಪದ", ಡಾ. ಕಕ್ಕಿಲಾಯರ "ಆರೋಗ್ಯ ಸಂಪದ", ಇನ್ನೂ ಹಲವಾರು ಬರಹಗಾರರಿಂದ ವೈವಿಧ್ಯಗೊಳ್ಳುತ್ತಿರುವ ತಾಣ, ಸಂಪದ.

ಇವೆಲ್ಲದರ ನಡುವೆ, "ಪಂಚ-ಪಾಂಡವ"ರಿಂದ ನಡೆಸಲ್ಪಡುತ್ತದೆ ಎಂದು ಹೇಳಿಕೊಳ್ಳುವ ಇತ್ತೀಚಿನ "ಸುದ್ದಿ ಮಾತು", ದಿನೇಶ್ ಕುಮಾರ್‍ರ "ದೇಸಿ ಮಾತು", ಮಂಜುನಾಥ ಸ್ವಾಮಿಯವರ "ಹಳ್ಳಿ ಕನ್ನಡ", ಇತ್ಯಾದಿ ಬ್ಲಾಗುಗಳು ಕೋಮುವಾದ ಮತ್ತು ಸಾಮಾಜಿಕ ಅಸಮಾನತೆಗಳ ವಿರುದ್ಧ ಮಾತನಾಡುವವರು ಅಂತರ್ಜಾಲದಲ್ಲಿ ಜಾಸ್ತಿಯಾಗುತ್ತಿರುವುದಕ್ಕೆ ನಿದರ್ಶನಗಳು. ಕೇವಲ ಎರಡು-ಮೂರು ವರ್ಷಗಳ ಹಿಂದೆ ಇಂತಹ ಕನ್ನಡ ಬರಹಗಳು ಮತ್ತು ಅಭಿಪ್ರಾಯಗಳು ಅಪರೂಪವಾಗಿದ್ದದ್ದನ್ನು ಸದ್ಯದ ಸ್ಥಿತಿಗೆ ಹೋಲಿಸಿಕೊಂಡರೆ ಬದಲಾವಣೆಯ ವೇಗವನ್ನೂ, Digital divide ಕುಗ್ಗಿದ್ದನ್ನೂ ಊಹಿಸಬಹುದು.

ನನ್ನ ಹಿಂದಿನ "ಗಾಂಧೀಜಿಯ ಹಂತಕ-ಪಡೆ ವಿಶ್ರಮಿಸುವುದಿಲ್ಲ. ಭಾರತವೂ..." ಲೇಖನದಲ್ಲಿ ಬರೆದಂತೆ, ಆಧುನಿಕ ಶಿಕ್ಷಣ, ಪ್ರಜಾಪ್ರಭುತ್ವ ಮತ್ತು ಇತ್ತೀಚಿನ ಆರ್ಥಿಕ ಬೆಳವಣಿಗೆ ನಮ್ಮ ನೆಲದ ಅನೇಕ ಸಮಸ್ಯೆಗಳನ್ನು ಇಲ್ಲವಾಗಿಸುತ್ತಿದೆ. ಬದಲಾಗುತ್ತಿರುವ ಕನ್ನಡ ಅಂತರ್ಜಾಲ ಲೋಕ ಮತ್ತು ಆ ಬದಲಾವಣೆಗಳ ಮೂಲಕಾರಣ ಅದಕ್ಕೆ ಒಂದಷ್ಟು ಸಮರ್ಥನೆ (ನಮ್ಮ ಪರಿಧಿಯಲ್ಲಿ) ಒದಗಿಸುತ್ತದೆ.

ಆದರೆ, ಸದ್ಯದ ಜಾಗತಿಕ ಅರ್ಥವ್ಯವಸ್ಥೆಯಲ್ಲಿನ ಅಲ್ಲೋಲಕಲ್ಲೋಲಗಳು ಈ ಪ್ರಗತಿಯ ದೀರ್ಘಕಾಲೀನತೆಯ ಬಗ್ಗೆಯೇ ಒಂದಷ್ಟು ಸಂಶಯಗಳನ್ನು ಹುಟ್ಟಿಸಲಾರಂಭಿಸಿದೆ. ನಮ್ಮ ಐಟಿ-ಕೇಂದ್ರಿತ ನೌಕರಿಗಳಲ್ಲಿರುವ ಯುವಜನಾಂಗ ನೌಕರಿ ಕಳೆದುಕೊಳ್ಳಲು ಆರಂಭಿಸಿದಾಗ (ಅದರ ಬಗ್ಗೆ ಮುಂದಿನ ಲೇಖನದಲ್ಲಿ ಬರೆಯುತ್ತೇನೆ), ಅಥವ ಐಟಿ ನೌಕರಿಗಳು ಸುಲಭವಾಗಿ ಸಿಗದೆ ಹೋದಾಗ ಸಹ, ಈ ಡಿಜಿಟಲ್ ಡಿವೈಡ್ ಹೀಗೆಯೆ ಕುಗ್ಗಲಿ ಎನ್ನುವ ಆಶಾಭಾವನೆ ನನ್ನದು.

(ಇತ್ತೀಚಿನ ದಿನಗಳಲ್ಲಿ ಬದಲಾದ ಪರಿಸ್ಥಿತಿಯ ಬಗ್ಗೆ ಬರೆದಿದ್ದರಿಂದ, ಆರೇಳು ವರ್ಷಗಳ ಹಿಂದೆಯೆ ಪರ್ಯಾಯ ಧ್ವನಿಯಾಗಿ ಮೂಡಿಬಂದ ಕನ್ನಡಸಾಹಿತ್ಯ.ಕಾಮ್‌ನ ಬಗ್ಗೆ ಬರೆಯಲು ಹೋಗಿಲ್ಲ. ಅದಕ್ಕೆ ಕನ್ನಡ ಅಂತರ್ಜಾಲ ಲೋಕದಲ್ಲಿ ಅದರದೆ ಆದ ಸ್ಥಾನ ಮತ್ತು ಇತಿಹಾಸವಿದೆ. ಬದಲಾಗುತ್ತಿರುವ ಸ್ಥಿತಿಯನ್ನು ಗುರುತಿಸುವುದಕ್ಕಾಗಿ ಮತ್ತು ದಾಖಲು ಮಾಡುವುದಕ್ಕಾಗಿ ಈ ಲೇಖನ ಬರೆದಿದ್ದೇನೆ.)

Oct 1, 2008

ಗಾಂಧೀಜಿಯ ಹಂತಕ-ಪಡೆ ವಿಶ್ರಮಿಸುವುದಿಲ್ಲ. ಭಾರತವೂ...

ಕರ್ನಾಟಕದ ಇವತ್ತಿನ ದೊಡ್ಡ ಸಮಸ್ಯೆ ಕೋಮುವಾದ ಎನ್ನುವುದು ನನ್ನ ನಂಬಿಕೆ. ಕಳೆದ ಹಲವಾರು ದಶಕಗಳಲ್ಲಿ ಕರ್ನಾಟಕ ಕಂಡ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಪ್ರಗತಿಯನ್ನೆಲ್ಲ ಇವತ್ತಿನ ಕೋಮುವಾದ ನಾಶ ಮಾಡುತ್ತಿದೆ.

ಆಧುನಿಕ ಶಿಕ್ಷಣ, ಪ್ರಜಾಪ್ರಭುತ್ವ ಮತ್ತು ಇತ್ತೀಚಿನ ಆರ್ಥಿಕ ಬೆಳವಣಿಗೆ ನಮ್ಮ ನೆಲದ ಅನೇಕ ಸಮಸ್ಯೆಗಳನ್ನು ಇಲ್ಲವಾಗಿಸುತ್ತಿದೆ. ಜನ, ಅವರ ಮನಸ್ಸು, ಅಭಿಪ್ರಾಯಗಳು ಹೆಚ್ಚುಹೆಚ್ಚು ಚಲನಶೀಲವೂ ಸಹನಶೀಲವೂ ಆಗುತ್ತಿದೆ. ದುಡಿದೇ ಬದುಕಬೇಕಾದ ಯುವಕ-ಯುವತಿಯರು ಸಂಕೋಲೆಗಳನ್ನು ಮತ್ತು ಸಂಕುಚಿತತೆಗಳನ್ನು ಕಳೆದುಕೊಳ್ಳುತ್ತಾ ನಡೆದಿದ್ದಾರೆ. ಆದರೆ ಹಳೆಯ ವ್ಯವಸ್ಥೆಯಿಂದ ಯಾರು ಯಾರು ಲಾಭ ಮಾಡಿಕೊಳ್ಳುತ್ತಿದ್ದರೊ ಅವರು ಇದನ್ನು ಪರಿಭಾವಿಸುವ ರೀತಿಯೆ ಬೇರೆ. ಹಿಂದೂ-ಕೋಮುವಾದವನ್ನು ಪ್ರಚೋದಿಸುವವರು ಮತ್ತು ಅದರ ಹಿಂಭಾಗದ ಇಂಜಿನ್‌ಗಳು ಇವರೆ. (ಮುಸಲ್ಮಾನ/ಕ್ರಿಶ್ಚಿಯನ್ ಕೋಮುವಾದಕ್ಕೆ ಕಾರಣಗಳು ಬೇರೆಯೆ ಇವೆ.)

ಈ ಕೋಮುವಾದದ ನಿಜವಾದ ಅಪಾಯ ಇರುವುದು ಅದು ತರಲಿರುವ status-quo ನಲ್ಲಿ, ನಿಲ್ಲಿಸಲಿರುವ ಎಲ್ಲಾ ತರಹದ ಸಂವಾದದಲ್ಲಿ ಮತ್ತು ಒಂದು ವರ್ಗ ಇನ್ನೊಂದು ವರ್ಗವನ್ನು ಶೋಷಿಸುವುದು ಸರಿ ಎನ್ನುವ ಪ್ರಚೋದನೆಯಲ್ಲಿ.

ಗಾಂಧೀಜಿ ಕೇವಲ ಬ್ರಿಟಿಷರ ವಿರುದ್ಧ ಹೋರಾಡಲಿಲ್ಲ. ಆತ ನಮ್ಮದೇ ದೇಶದ ದುಷ್ಟಶಕ್ತಿಗಳ ವಿರುದ್ಧವೂ ಹೋರಾಡಿದ. ಸಮಾಜದ ದುಷ್ಟತೆಯ ವಿರುದ್ಧ ಹೋರಾಡುತ್ತಲೆ ವ್ಯಕ್ತಿಯ ದುಷ್ಟತೆಯ ವಿರುದ್ಧವೂ ಹೋರಾಡಿದ. ಅದು ಅನೇಕ ರಣಾಂಗಣಗಳಲ್ಲಿ ಏಕಕಾಲದಲ್ಲಿ ಮಾಡುತ್ತಿದ್ದ ಯುದ್ಧ. ಆದರೆ "ಅಂತರಂಗ ಶುದ್ಧಿ"ಗಿಂತ "ಬಹಿರಂಗ ಶುದ್ಧಿ"ಗೇ ಮಹತ್ವ ಕೊಟ್ಟ ಸಂಕುಚಿತ ಮನೋಭಾವದ ಕೋಮುವಾದಿಗಳು ಗಾಂಧೀಜಿಯ ಹತ್ಯೆ ಮಾಡುತ್ತಾರೆ. ಆ ಹಂತಕ ಪಡೆ ಇನ್ನೂ ವಿಶ್ರಮಿಸಿಲ್ಲ.

ಆದರೆ, ಗಾಂಧೀಜಿ ಭಾರತದಲ್ಲಿ ಹುಟ್ಟಿದ ಒಬ್ಬ ವ್ಯಕ್ತಿ ಮಾತ್ರವಲ್ಲ. ಭಾರತದ ಅಂತಃಸತ್ವವೆ, ಭಾರತದ ನೈಜರೂಪವೆ ಗಾಂಧೀಜಿ. ದುಷ್ಟತೆಯ ವಿರುದ್ಧ ಭರತಭೂಮಿಯಲ್ಲಿ ನಡೆದ ಶತಶತಮಾನಗಳ ಹೊರಾಟ ಕಳೆದ ಶತಮಾನದಲ್ಲಿ ಗಾಂಧೀಜಿಯ ರೂಪದಲ್ಲಿ ಪ್ರಕಟವಾಯಿತು. ಪರರನ್ನು (ರಾಷ್ಟ್ರ -ರಾಷ್ಟ್ರಗಳನ್ನು/ಸಮುದಾಯ -ಸಮುದಾಯಗಳನ್ನು/ವ್ಯಕ್ತಿ -ವ್ಯಕ್ತಿಗಳನ್ನು) ಆಕ್ರಮಿಸಿಕೊಳ್ಳುವುದರ ವಿರುದ್ಧದ ಭಾರತದ ಹೋರಾಟವೆ ಗಾಂಧೀಜಿ.

ಗಾಂಧೀಜಿಯ ಹಂತಕ ಪಡೆ ಗಾಂಧಿ ಹುಟ್ಟಿದ ಊರಿನಿಂದ ಹಿಡಿದು ಗಾಂಧಿ ಬಂದಿದ್ದ ಮಂಗಳೂರಿನವರೆಗೂ ಇತ್ತೀಚಿನ ದಿನಗಳಲ್ಲಿ ಸಕ್ರಿಯವಾಗಿ, ರಾಜಾರೋಷವಾಗಿ ಓಡಾಡುತ್ತಿದ್ದೆ. ತಮ್ಮ ದುಷ್ಟಮನಸ್ಸಿನ ಚಿಂತನೆಗಳ ಬಿತ್ತನೆಗೆ ನೆಲ ಹಸನು ಮಾಡುತ್ತಿದೆ. ವಿಶ್ರಾಂತಿಯಿಲ್ಲದೆ ಈ ರಕ್ತಾಬೀಜಾಸುರ ಸಂತತಿ ಬೆಳೆಯುತ್ತಿದೆ. ಆದರೆ, ಹೇಗೆ ಗಾಂಧೀಜಿಯ ಹಂತಕ ಪಡೆ ವಿಶ್ರಮಿಸುವುದಿಲ್ಲವೊ ಹಾಗೆಯೆ ಆ ದುಷ್ಟತೆಯ ವಿರುದ್ಧದ ಭಾರತದ ಪ್ರತಿರೋಧ ಮತ್ತು ಹೋರಾಟವೂ ನಡೆಯುತ್ತಿರುತ್ತದೆ ಮತ್ತು ಅಂತಿಮ ಗೆಲುವು ಭಾರತದ್ದೆ ಆಗಿರುತ್ತದೆ. ಇದು ಗೌತಮ ಬುದ್ಧನ ಮೂಲಕ, ಬಸವಣ್ಣನ ಮೂಲಕ, ಸೂಫಿ ಸಂತರ -ಫಕೀರರ ಮೂಲಕ, ತಾರತಮ್ಯ ಸಲ್ಲದೆಂದು ಪದ್ಯಗಳಿಂದ ಹೇಳಿಕೊಟ್ಟ ಸರ್ವಜ್ಞ-ವೇಮನ-ತಿರುವಳ್ಳುವರ್‌-ಕುವೆಂಪುರಂತಹ ಕವಿಗಳ ಮೂಲಕ, ತಮ್ಮದೇ ಜನರ ದುಷ್ಟತೆಯ ವಿರುದ್ಧ ಕಾಲಕಾಲಕ್ಕೆ ಧ್ವನಿಯೆತ್ತಿದ ಅಸಂಖ್ಯಾತ ಹುತಾತ್ಮರ ಮೂಲಕ, ಗಾಂಧೀಜಿಯ ಮೂಲಕ ಸಾಬೀತಾಗುತ್ತ ಬಂದಿದೆ.

ಇವತ್ತಿನ ಗಾಂಧಿ ಜಯಂತಿಯ ಸಂದರ್ಭದಲ್ಲಿ ಗಾಂಧೀಜಿ ಹೇಗೆ ಬದುಕಿದ, ಯಾವ ಕಾರಣಗಳಿಗಾಗಿ ಹತ್ಯೆಯಾದ, ಆತನ ತ್ಯಾಗ ಮತ್ತು ಜೀವನ ನಮಗೆ ಯಾವ ತರಹದ ಸ್ಫೂರ್ತಿ ಮತ್ತು ಸ್ಪಷ್ಟತೆ ನೀಡಬೇಕು ಎಂದು ಆಲೋಚಿಸುತ್ತ, ನಾನು ಹಿಂದೊಮ್ಮೆ ಬರೆದಿದ್ದ ಈ ಲೇಖನವನ್ನು ಮತ್ತೊಮ್ಮೆ ಓದುತ್ತ ಕುಳಿತಿದ್ದೇನೆ:

ಮಹಾತ್ಮ ಹುತಾತ್ಮನಾದಂದು...


ಮಹಾತ್ಮ ಗಾಂಧಿ ಎಂದಷ್ಟೆ ಕರೆಸಿಕೊಳ್ಳುತ್ತಿದ್ದ ಆತ ಜನವರಿ 30, 1948ರ ಶುಕ್ರವಾರದ ದಿನ ಸತ್ತಾಗ ಶ್ರೀಮಂತಿಕೆ, ಆಸ್ತಿ, ಪದವಿ, ಅಧಿಕಾರದ ಹುದ್ದೆ, ಪಾಂಡಿತ್ಯದ ಹೆಚ್ಚುಗಾರಿಕೆ, ವೈಜ್ಞಾನಿಕ ಸಾಧನೆ, ಅಥವ ಯಾವುದೇ ಕಲೆಯ ವರ ಇಲ್ಲದಿದ್ದ ಒಬ್ಬ ಖಾಸಗಿ ಪ್ರಜೆ. ಆದರೂ, ಸರ್ಕಾರ ಮತ್ತು ಸೇನಾಪಡೆ ಎಪ್ಪತ್ತೆಂಟು ವರ್ಷದ, ಲಂಗೋಟಿಯಲ್ಲಿದ್ದ ಕಂದು ಬಣ್ಣದ ಚಿಕ್ಕ ಮನುಷ್ಯನಿಗೆ ಗೌರವ ಸಲ್ಲಿಸಿದರು. ಭಾರತ ಸರ್ಕಾರಕ್ಕೆ 3441 ಪತ್ರಗಳು, ಎಲ್ಲವೂ ಸ್ವಯಂಪ್ರೇರಿತವಾಗಿ, ಸಹಾನುಭೂತಿ ವ್ಯಕ್ತಪಡಿಸಿ, ವಿದೇಶಗಳಿಂದ ಬಂದವು. ನೀತಿವಂತ ಗಾಂಧಿಯ ಜೀವನವನ್ನು ಹಂತಕನ ಗುಂಡುಗಳು ಅಂತ್ಯಗೊಳಿಸಿದಾಗ ಅಷ್ಟೇನೂ ನೈತಿಕ ಶ್ರೀಮಂತಿಕೆಯಿಂದ ಕೂಡಿರದ ನಾಗರಿಕತೆ ಮತ್ತಷ್ಟು ಬಡವಾಯಿತು. "ಮಹಾತ್ಮ ಗಾಂಧಿ ಇಡೀ ಮನುಕುಲದ ಮನಸ್ಸಾಕ್ಷಿಯ ವಕ್ತಾರರಾಗಿದ್ದರು," ಎಂದರು ಅಮೇರಿಕಾ ದೇಶದ ವಿದೇಶಾಂಗ ಮಂತ್ರಿ ಜನರಲ್ ಜಾರ್ಜ್ ಮಾರ್ಷಲ್.

ಪೋಪ್ ಪಿಯುಸ್, ಟಿಬೆಟ್ಟಿನ ದಲೈ ಲಾಮ, ಕ್ಯಾಂಟೆರ್ಬರಿಯ ಆರ್ಚ್‌ಬಿಷಪ್, ಲಂಡನ್‌ನ ಮುಖ್ಯ ರಬ್ಬೈ, ಇಂಗ್ಲೆಂಡಿನ ರಾಜ, ರಾಷ್ಟ್ರಪತಿ ಟ್ರೂಮನ್, ಚಿಯಾಂಗ್ ಕೈ-ಷೆಕ್, ಫ್ರಾನ್ಸ್‌ನ ರಾಷ್ಟ್ರಪತಿ, ಅಷ್ಟ್ಯಾಕೆ, ಪ್ರಪಂಚದ ಎಲ್ಲಾ ಅತಿ ಮುಖ್ಯ ರಾಷ್ಟ್ರಗಳ (ಸೋವಿಯತ್ ರಷ್ಯ ಬಿಟ್ಟು) ಮತ್ತು ಬಹುಪಾಲು ಸಣ್ಣ ರಾಷ್ಟ್ರಗಳ ಮುಖ್ಯಸ್ಥರು ಗಾಂಧಿಯ ಅಂತ್ಯಕ್ಕೆ ಸಾರ್ವಜನಿಕವಾಗಿ ದುಃಖ ವ್ಯಕ್ತಪಡಿಸಿದರು.

ಫ್ರೆಂಚ್ ಸಮಾಜವಾದಿ ಲ್ಯೋನ್ ಬ್ಲಮ್ ಲಕ್ಷಾಂತರ ಜನರಿಗೆ ಅನ್ನಿಸಿದ್ದನ್ನು ಕಾಗದದ ಮೇಲೆ ಬರೆದಿಳಿಸಿದ. "ನಾನು ಗಾಂಧಿಯನ್ನು ಎಂದೂ ನೋಡಲಿಲ್ಲ. ನನಗೆ ಆತನ ಭಾಷೆ ತಿಳಿದಿಲ್ಲ. ಆತನ ದೇಶದಲ್ಲಿ ಎಂದೂ ಕಾಲಿಡಲಿಲ್ಲ. ಆದರೂ, ತುಂಬ ಹತ್ತಿರದವರನ್ನು ಕಳೆದುಕೊಂಡರೆ ಆಗುವಷ್ಟು ದುಃಖ ಆಗುತ್ತಿದೆ. ಈ ಅಸಾಧಾರಣ ಮನುಷ್ಯನ ಸಾವಿನಿಂದಾಗಿ ಇಡೀ ಪ್ರಪಂಚವೇ ಶೋಕಾಚರಣೆಯಲ್ಲಿ ಮುಳುಗಿದೆ."

ಪ್ರೊಫೆಸರ್ ಆಲ್ಬರ್‍ಟ್ ಐನ್‌ಸ್ಟೀನ್ ದೃಢವಾಗಿ ಹೇಳಿದ್ದು : "ಒಂದು ಶಕ್ತಿಶಾಲಿ ಜನಬೆಂಬಲವನ್ನು ಕೇವಲ ವಾಡಿಕೆಯ ರಾಜಕೀಯ ತಂತ್ರ ಮತ್ತು ಕುತಂತ್ರಗಳಿಂದ ಮಾತ್ರವಲ್ಲದೆ ಜೀವನದ ಅತ್ಯುತ್ತಮ ನೈತಿಕ ಮಟ್ಟದ ನಡವಳಿಕೆಯಿಂದಲೂ ಕಟ್ಟಬಹುದು ಎಂದು ಖಚಿತ ಉದಾಹರಣೆಯ ಮುಖಾಂತರ ಗಾಂಧಿ ತೋರಿಸಿಕೊಟ್ಟರು."

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತನ್ನ ಸದಸ್ಯರು ಸತ್ತ ಮನುಷ್ಯನಿಗೆ ಗೌರವ ಸೂಚಿಸಲಿಕ್ಕಾಗಿ ಕಲಾಪವನ್ನು ಕೆಲಕಾಲ ಸ್ಥಗಿತಗೊಳಿಸಿತು. ಬ್ರಿಟಿಷ್ ಪ್ರತಿನಿಧಿ ಫಿಲಿಪ್ ನೋಯೆಲ್‌ಬೆಕರ್ ಗಾಂಧಿಯನ್ನು "ಕಡುಬಡವನ, ಏಕಾಂಗಿಯ ಮತ್ತು ಸೋತವನ ಸ್ನೇಹಿತ," ಎಂದು ವರ್ಣಿಸಿ "ಗಾಂಧಿಯ ಮಹತ್ಸಾಧನೆಗಳು ಇನ್ನು ಮುಂದೆಯೂ ಬರಲಿವೆ." ಎಂದು ಪ್ರತಿಪಾದಿಸಿದ.

ಭದ್ರತಾ ಮಂಡಳಿಯ ಅನ್ಯ ಸದಸ್ಯರು ಗಾಂಧಿಯ ಆಧ್ಯಾತ್ಮಿಕ ಗುಣಗಳನ್ನು ಶ್ಲಾಘಿಸಿ ಶಾಂತಿ ಮತ್ತು ಅಹಿಂಸೆಯಡೆಗೆ ಆತನ ನಿಷ್ಠೆಯನ್ನು ಪ್ರಶಂಸಿಸಿದರು. ಸೋವಿಯತ್ ಒಕ್ಕೂಟದ ಆಂಡ್ರ್ಯಿಗ್ರಾಮಿಕೊ ಗಾಂಧಿಯನ್ನು ಭಾರತದ ಉನ್ನತ ರಾಜಕೀಯ ನಾಯಕರೊಲ್ಲಬ್ಬರೆಂದು ವರ್ಣಿಸಿ ಆತನ ಹೆಸರು ಸುದೀರ್ಘ ಸಮಯ ತೆಗೆದುಕೊಂಡ ಭಾರತದ ಜನರ ರಾಷ್ಟ್ರೀಯ ವಿಮೋಚನಾ ಹೋರಾಟದ ಜೊತೆಗೆ ಎಂದಿಗೂ ಜೋಡಿಸಲ್ಪಡುತ್ತದೆ ಎಂದರು. ಸೋವಿಯತ್ ಉಕ್ರೇನ್‌ನ ಪ್ರತಿನಿಧಿ ಟಾರಾಸೆಂಕೊ ಸಹ ಗಾಂಧಿಯ ರಾಜಕಾರಣವನ್ನು ಒತ್ತುಕೊಟ್ಟು ಹೇಳಿದರು.

ವಿಶ್ವಸಂಸ್ಥೆ ತನ್ನ ಧ್ವಜವನ್ನು ಅರ್ಧ ಕೆಳಗಿಳಿಸಿತು.

ಮಾನವತೆ ತನ್ನ ಧ್ವಜವನ್ನು ಪೂರ್ತಿ ಇಳಿಸಿತು.

ಗಾಂಧಿಯ ಸಾವಿಗೆ ಜಗತ್ತಿನಾದ್ಯಂತದ ಪ್ರತಿಕ್ರಿಯೆಯೇ ಒಂದು ಮುಖ್ಯ ನೈಜಸಾಕ್ಷಿ; ಅದು ವ್ಯಾಪಕವಾಗಿ ಹರಡಿದ್ದ ಮನೋಭಾವ ಮತ್ತು ಅಗತ್ಯವನ್ನು ಅಭಿವ್ಯಕ್ತಗೊಳಿಸಿತು. ನ್ಯೂಯಾರ್ಕ್‌ನ ಪತ್ರಿಕೆಯ ಆಲ್ಬರ್ಟ್ ಡ್ಯೂಶ್ಚ್, "ಗಾಂಧಿಯ ಸಾವಿಗೆ ಪೂಜ್ಯಭಾವನೆಯಿಂದ ಪ್ರತಿಸ್ಪಂದಿಸಿದ ಜಗತ್ತಿಗೆ ಇನ್ನೂ ಸ್ವಲ್ಪ ಭರವಸೆಯಿದೆ." ಎಂದು ಘೋಷಿಸಿ- "-ನವದೆಹಲಿಯ ದುರಂತವನ್ನು ಹಿಂಬಾಲಿಸಿದ ಆಘಾತ ಮತ್ತು ಪರಿತಾಪ ನಾವು ಸಂತತ್ವವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೂ ಅದನ್ನು ಗೌರವಿಸುತ್ತೇವೆ ಎಂಬುದನ್ನು ತೋರಿಸಿಕೊಟ್ಟಿತು." ಎಂದರು.

ಅಮೇರಿಕಾದ ಸೆನೆಟರ್ ಆರ್ಥರ್ ವ್ಯಾಂಡೆನ್‌ಬರ್ಗ್ ಹೇಳಿದ್ದು, "ವಿನಯಶೀಲತೆ ಮತ್ತು ಸರಳ ಸತ್ಯಗಳನ್ನು ಗಾಂಧಿ ಸಾಮ್ರಾಜ್ಯಗಳಿಗಿಂತ ಶಕ್ತಿಶಾಲಿಯನ್ನಾಗಿ ಮಾಡಿದರು." ಕಾದಂಬರಿಗಾರ್ತಿ ಪರ್ಲ್ ಬಕ್ ಗಾಂಧಿಯ ಹತ್ಯೆಯನ್ನು "ಮತ್ತೊಂದು ಶಿಲುಬೆಗೇರಿಕೆ" ಎಂದು ವರ್ಣಿಸಿದರು. ನ್ಯಾಯಾಧೀಶ ಫೆಲಿಕ್ಸ್ ಫ್ರಾಂಕ್‌ಫರ್ಟರ್ ಅದನ್ನು "ಪ್ರಪಂಚದ ಸತ್ಯ ಪಡೆಗಳ ವಿರುದ್ಧದ ಅತಿ ಕ್ರೂರ ಹೊಡೆತ," ಎಂದರು.

ಗಾಂಧಿಯನ್ನು ಪ್ರಶಂಸಿಸುತ್ತಿದ್ದ ಆಡಳಿತಗಾರ ಮತ್ತು ರಾಜಕಾರಣಿಗಳಿಗೆ ತಮ್ಮ ಸ್ವಂತವೇ ನ್ಯೂನತೆಗಳನ್ನು ಕನಿಷ್ಠ ನೆನಪಿಸುವಷ್ಟಾದರೂ ಆಗಿದ್ದರಾತ.

ಕ್ಯಾಲಿಫೋರ್ನಿಯಾದ ಹದಿಮೂರು ವರ್ಷದ ಹುಡುಗಿ ಒಂದು ಕಾಗದದಲ್ಲಿ ಬರೆದಳು: "ಗಾಂಧಿಯ ಸಾವನ್ನು ಕೇಳಿ ನನಗೆ ನಿಜವಾಗಿಯೂ ದಾರುಣ ದುಃಖವಾಯಿತು. ಆತನ ಬಗ್ಗೆ ನನಗೆ ಅಷ್ಟೊಂದು ಆಸಕ್ತಿಯಿದೆ ಎಂದು ಎಂದೂ ಅಂದುಕೊಂಡಿರಲಿಲ್ಲ. ಆದರೆ ಆ ಮಹಾನ್ ವ್ಯಕ್ತಿಯ ಸಾವಿನಿಂದ ನನಗೆ ಎಷ್ಟು ಅಸಂತೋಷವಾಗಿದೆ ಎಂದು ಈಗ ತಿಳಿಯಿತು."

ನ್ಯೂಯಾರ್ಕಿನಲ್ಲಿ, ಹನ್ನೆರಡು ವರ್ಷದ ಹುಡುಗಿ ಅಡಿಗೆ ಮನೆಗೆ ಉಪಹಾರ ಸ್ವೀಕರಿಸಲು ಹೋಗಿದ್ದಳು. ಚಾಲನೆಯಲ್ಲಿದ್ದ ರೇಡಿಯೊ ಗಾಂಧಿಗೆ ಗುಂಡಿಟ್ಟ ಸುದ್ದಿ ತಂದಿತು. ಅದೇ ಕ್ಷಣದಲ್ಲಿ, ಆ ಚಿಕ್ಕ ಹುಡುಗಿ, ಮನೆಕೆಲಸದವಳು, ಮತ್ತು ತೋಟದ ಮಾಲಿ ಪ್ರಾರ್ಥನಾ ಸಭೆ ನಡೆಸಿದರು, ಪ್ರಾರ್ಥಿಸಿದರು ಮತ್ತು ಅತ್ತರು. ಅದೇ ರೀತಿ, ಪ್ರಪಂಚದಾದ್ಯಂತ ಲಕ್ಷಾಂತರ ಜನ ಗಾಂಧಿಯ ಸಾವನ್ನು ವೈಯುಕ್ತಿಕ ನಷ್ಟವೆಂಬಂತೆ ಶೋಕಿಸಿದರು. ಅವರಿಗೆ ಯಾಕೆಂದು ಅಷ್ಟೇನೂ ಸರಿಯಾಗಿ ತಿಳಿದಿರಲಿಲ್ಲ; ಆತ ಏನನ್ನು ಪ್ರತಿನಿಧಿಸಿದ್ದ ಎಂದೂ ಸಹ ಚೆನ್ನಾಗಿ ಗೊತ್ತಿರಲಿಲ್ಲ. ಆದರೆ ಆತ "ಒಳ್ಳೆಯ ಮನುಷ್ಯ"ನಾಗಿದ್ದ ಮತ್ತು ಒಳ್ಳೆಯವರು ವಿರಳ.

ಸರ್ ಸ್ಟಾಫರ್ಡ್ ಕ್ರಿಪ್ಸ್ ಬರೆಯುತ್ತಾರೆ, "ಲೌಕಿಕ ವಸ್ತುಗಳ ಮೇಲೆ ಶಕ್ತಿಯುತ ಚೈತನ್ಯವನ್ನು ಇಷ್ಟು ಬಲಯುತವಾಗಿ ಮತ್ತು ಸಮಂಜಸವಾಗಿ ಯಾವುದೇ ಸಮಯದಲ್ಲಾಗಲಿ ಅಥವ ಕನಿಷ್ಠ ಇತ್ತೀಚಿನ ಇತಿಹಾಸದಲ್ಲಾಗಲಿ ಪ್ರದರ್ಶಿಸಿದ ಮತ್ತೊಬ್ಬ ವ್ಯಕ್ತಿ ನನಗೆ ತಿಳಿದಿಲ್ಲ." ಇದನ್ನೇ ತಾವು ಶೋಕಿಸುತ್ತಿದ್ದಾಗ ಜನ ಗ್ರಹಿಸಿದ್ದು. ಅವರ ಸುತ್ತಮುತ್ತೆಲ್ಲ ಲೌಕಿಕ ವಸ್ತುಗಳು ಅಲೌಕಿಕ ಚೈತನ್ಯಕ್ಕಿಂತ ಬಲವಾಗಿದ್ದವು. ಆತನ ಮಿಂಚಿನಂತಹ ದಿಢೀರ್ ಸಾವು ವಿಶಾಲ ಕತ್ತಲನ್ನು ಅನಾವರಣಗೊಳಿಸಿತು. ಆತನ ನಂತರ ಜೀವಿಸಿದ ಯಾರೂ ಸತ್ಯವಂತ ಜೀವನವನ್ನು ಜೀವಿಸುವುದಕ್ಕಾಗಿ, ಕಕ್ಕುಲತೆ, ಸ್ವವ್ಯಕ್ತಿನಾಶ, ವಿನಯಶೀಲತೆ, ಸೇವೆ ಮತ್ತು ಅಹಿಂಸೆಯನ್ನು ಸುದೀರ್ಘ ಕಾಲ, ಪ್ರಬಲ ಶತ್ರುಗಳ ವಿರುದ್ಧದ ಕಷ್ಟಮಯ ಹೋರಾಟವನ್ನು, ಆತನಷ್ಟು ಕಠಿಣವಾಗಿ ಪ್ರಯತ್ನಿಸಲಿಲ್ಲ ಮತ್ತು ಅಷ್ಟು ಯಶಸ್ಸು ಪಡೆಯಲಿಲ್ಲ. ತನ್ನ ದೇಶದಲ್ಲಿನ ಬ್ರಿಟಿಷ್ ಆಡಳಿತದ ವಿರುದ್ಧ ಮತ್ತು ತನ್ನ ದೇಶದ್ದೇ ಜನರ ದುಷ್ಟತೆಯ ವಿರುದ್ಧ ಆತ ತೀವ್ರವಾಗಿ ಮತ್ತು ನಿರಂತರವಾಗಿ ಹೋರಾಡಿದ. ಆದರೆ ಯುದ್ದದ ಮಧ್ಯದಲ್ಲಿ ತನ್ನ ಕೈಗಳನ್ನು ಪವಿತ್ರವಾಗಿಟ್ಟುಕೊಂಡ. ಮತ್ಸರವಿಲ್ಲದೆ, ಢೋಂಗಿತನವಿಲ್ಲದೆ, ಅಥವ ದ್ವೇಷವಿಲ್ಲದೆ ಹೋರಾಡಿದ.

***

ಈ ಮೇಲಿನ ಸಾಲುಗಳು 1950 ರಲ್ಲಿ ಪ್ರಕಟವಾದ, ಲೂಯಿ ಫಿಷರ್ ಎಂಬ ಪಾಶ್ಚಾತ್ಯ ಲೇಖಕ ಬರೆದ "The Life of Mahatma Gandhi" ಪುಸ್ತಕದ ಒಂದೆರಡು ಪುಟಗಳಲ್ಲಿ ಬರುವ ವಾಕ್ಯಗಳು. ಈ ಪುಸ್ತಕವನ್ನು ಆತ ಬರೆದದ್ದು ಇಂಗ್ಲೀಷ್ ಬಲ್ಲ ಅಮೇರಿಕನ್ ಹಾಗೂ ಪಾಶ್ಚಾತ್ಯ ಓದುಗರನ್ನು ಗಮದಲ್ಲಿಟ್ಟುಕೊಂಡು. ಆದ್ದರಿಂದ ಅಮೇರಿಕನ್ನರಿಗೆ ಅಥವ ಪಾಶ್ಚಾತ್ಯರಿಗೆ ಪ್ರಸ್ತುತ ಮತ್ತು ಪರಿಚಿತವಿರುವ, ಅವರಿಗೆ ಮುಖ್ಯವೆನಿಸುವ ವ್ಯಕ್ತಿ-ವಿಷಯಗಳನ್ನು ತೆಗೆದುಕೊಂಡು ಆ ದೃಷ್ಟಿಕೋನದಲ್ಲಿ ನಿರೂಪಿಸಿರುವುದು.


Youtubeನಲ್ಲಿ ಈ ಲೇಖನದ ವಾಚನ

ಶರಣರ ಗುಣವನ್ನು ಮರಣದಲ್ಲಿ ನೋಡೆಂಬಂತೆ, ಮೋಹನದಾಸ ಗಾಂಧಿ ಸತ್ತಾಗ ಜಗತ್ತು ಪ್ರತಿಕ್ರಿಯಿಸಿದ ರೀತಿ ಅನನ್ಯ. ಆದರೆ ಇಲ್ಲಿ ಆ ಅನನ್ಯತೆಗೆ ಕೇವಲ ಒಳ್ಳೆಯವರು ವಿರಳ ಎಂಬುದಷ್ಟೇ ಕಾರಣವಲ್ಲ ಎನ್ನುವುದು ಸ್ವಲ್ಪ ಆಲೋಚಿಸಿದರೆ ಎಲ್ಲರಿಗೂ ತಿಳಿಯುವ ಸರಳ ಸತ್ಯ. ಐವತ್ತಾರು ವರ್ಷಗಳ ಹಿಂದೆ ಗಾಂಧಿ ಸತ್ತ ದಿನವನ್ನು ಹುತಾತ್ಮರ ದಿನಾಚರಣೆಯನ್ನಾಗಿಸಿ ಕೈತೊಳೆದುಕೊಳ್ಳುವುದಕ್ಕಿಂತ ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಗಾಂಧೀವಾದವನ್ನು ಸಾಣೆ ಹಿಡಿದುಕೊಂಡರೆ ಎಷ್ಟೋ ಸಮಸ್ಯೆಗಳಿಗೆ ನೀತಿಯುಕ್ತ, ಸತ್ಯ ಉತ್ತರ ಸಿಗುತ್ತದೆ.

ನಮ್ಮ ಅನಂತಾನಂತ ಅವತಾರಾಚಾರ್ಯ ಪುರುಷರು(?) ಹೇಳಿದಷ್ಟು ಕಠಿಣವಾಗಲಿ, ಅಮೂರ್ತವಾಗಿಯಾಗಲಿ ಗಾಂಧಿಯ ಚಿಂತನೆಗಳು ಇಲ್ಲ. ಹಾಗೆಯೇ ಗಾಂಧಿ ಹೇಳಿದ ಪ್ರತಿ ಅಕ್ಷರವೂ ಸರಿ, ಅದನ್ನು ಸಮಕಾಲೀನಕ್ಕೆ ತಕ್ಕಂತೆ ಪರಿಷ್ಕರಿಸಿ ಅಳವಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ಮುಲ್ಲಾ ಮಠಾಧೀಶರ ಸ್ವತ್ತಾಗಿಯೂ ಗಾಂಧಿ ಉಳಿದಿಲ್ಲ. ತನ್ನೆಲ್ಲ ಹುಳುಕಗಳ ಜೊತೆಗೆ ಸಾರ್ವಜನಿಕವಾಗಿ ಜೀವಿಸಿದ, ಲೇಖಕ ಫಿಷರ್ ಹೇಳುವಂತೆ ಸ್ವವ್ಯಕ್ತಿನಾಶಕ್ಕೆ (self-effacement) ಶ್ರಮಿಸಿದವನ ವ್ಯಕ್ತಿಪೂಜೆ ಮಾಡುವವರು ಅಪಹಾಸ್ಯಕ್ಕೆ ಈಡಾಗುವುದು ಸಹಜ. ಆದ್ದರಿಂದ ಗಾಂಧಿ-ಬುದ್ಧರ ಪುನರವತಾರಕ್ಕಾಗಿ ಕಾಯಬೇಕು ಎಂಬ ನಿರಾಶಾ ಮತ್ತು ಅಸಹಾಯಕ ಸ್ಥಿತಿಯಲ್ಲಿ ಬಿದ್ದು ಹೊಸ ಮಾರ್ಗಗಳನ್ನು ಹುಡುಕುವ, ಹುಟ್ಟು ಹಾಕುವ ಕೆಲಸ ಮಾಡದೆ ಗಾಂಧಿ-ಬುದ್ಧರಿಗೆ ಕಾಯುವುದು ಕರುಣಾಜನಕವೆನಿಸುವ ಸ್ಥಿತಿ. ಇತಿಹಾಸದ ಮಟ್ಟಿಗೆ ಹೇಳುವುದಾದರೆ ಮತ್ತೆ ನಾ ಬರುವೆ ಎಂದು ಇವರ್ಯಾರೂ ಹೇಳಿಲ !!! ಸತ್ತವರಿಗೆ ಕಾಯುತ್ತಾ ಕೂರುವುದು ಮನುಷ್ಯಜಾತಿಯ ಕ್ರಿಯಾಶಕ್ತಿಯನ್ನೇ ಶಂಕಿಸಿದಂತೆ.

ನಮ್ಮ ದಾರಿ ನಾವೇ ಹುಡುಕಿಕೊಳ್ಳಬೇಕು. ಯಾಕೆಂದರೆ ಹುತಾತ್ಮರು ಪ್ರೇತಾತ್ಮರಲ್ಲ.

(2004 ಜನವರಿ 30 ರಂದು ದಟ್ಸ್‌ಕನ್ನಡದಲ್ಲಿ ಮತ್ತು ನನ್ನ "ಜಿಜ್ಞಾಸಾಗಂಗೆಯ ದಡದ ಕಾಲ್ದಾರಿಯಲ್ಲಿ" ಪುಸ್ತಕದಲ್ಲಿ ಪ್ರಕಟಿತವಾಗಿದೆ.)