Jul 30, 2009

ಮಾರ್ಥಾ ಸ್ಟುವರ್ಟಳೂ, ಕೃಷ್ಣಯ್ಯ ಶೆಟ್ಟಿಯೂ...

[ಈ ಲೇಖನಕ್ಕೆ "ದೊಡ್ಡ ಹಗರಣಗಳಿಲ್ಲ; ಅಕ್ರಮವಾಗಿ ಶ್ರೀಮಂತರಾಗುತ್ತಿರುವ ರಾಜಕಾರಣಿಗಳಿಗೆ ಕಮ್ಮಿ ಇಲ್ಲ." ಎಂಬ ಶೀರ್ಷಿಕೆ ಕೊಟ್ಟಿದ್ದೆ. ಅದು ಅದೇ ಹೆಸರಿನಲ್ಲಿ ವಿಕ್ರಾಂತ ಕರ್ನಾಟಕದ ಆಗಸ್ಟ್ 7, 2009ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ವಿಷಯದ ಗಾಂಭೀರ್ಯಕ್ಕೆ ಅದು ಸೂಕ್ತವಾದ ಹೆಸರು. ಆದರೆ, ಈ ಶೀರ್ಷಿಕೆ ಸ್ವಲ್ಪ ಕ್ಯಾಚ್ಚಿ ಎನ್ನಿಸಿದ್ದರಿಂದ ಇಲ್ಲಿ ಬ್ಲಾಗ್‌ನಲ್ಲಿ ಬದಲಾಯಿಸಿದ್ದೇನೆ. - ರವಿ...]

ಕಳೆದ ಹತ್ತು ವರ್ಷಗಳಿಂದ ಕರ್ನಾಟಕ ಸರ್ಕಾರದ ಒಳಗೆ ಮತ್ತು ಅದರ ಸುತ್ತಮುತ್ತ ನಡೆದ ಹಗರಣಗಳನ್ನು ನೆನಪಿಸಿಕೊಳ್ಳಿ... ಹೇಗೆ ತಾನೆ ಅಷ್ಟು ಸುಲಭವಾಗಿ ನೆನಪಾದೀತು? ಇಲ್ಲ, ನಾನು Public memory is short ಎಂಬ ಗಾದೆಯ ಆಧಾರದ ಮೇಲೆ ನಿಮ್ಮನ್ನು ಚುಡಾಯಿಸುತ್ತಿಲ್ಲ. ನಿಜಕ್ಕೂ ನಮಗೆ ಗೊತ್ತಾದ, ಜನಮಾನಸಕ್ಕೆ ಗಂಭೀರ ಎನ್ನಿಸಿದಂತಹ, ಸರ್ಕಾರವೆ ಬೀಳುವಂತಹ ಹಗರಣಗಳು ನಡೆದದ್ದು ಕಮ್ಮಿಯೆ. ಛಾಪಾ ಕಾಗದದ ಹಗರಣ, ಅಕ್ಕಿ ಹಗರಣ,... ದೊಡ್ಡ ಹಗರಣಗಳನ್ನು ನೆನಪಿಸಿಕೊಳ್ಳುತ್ತ ನನ್ನ ನೆನಪೂ ಅಲ್ಲಿಗೇ ನಿಲ್ಲುತ್ತದೆ.

ಈಗ ಕಳೆದ ಹತ್ತೇ ವರ್ಷಗಳಲ್ಲಿ ಶ್ರೀಮಂತಿಕೆಯ ಅನೇಕ ಮಜಲುಗಳನ್ನು ದಾಟಿದ ಕರ್ನಾಟಕದ ರಾಜಕಾರಣಿಗಳ ವಿಚಾರಕ್ಕೆ ಬರೋಣ. ಇವತ್ತಿನ ಯಾವುದೆ ಪ್ರಸಿದ್ಧ ರಾಜಕಾರಣಿಯನ್ನು, ಶಾಸಕನನ್ನು, ಮಂತ್ರಿಯನ್ನು ತೆಗೆದುಕೊಂಡರೂ ಅವರು ತಾವು ರಾಜಕೀಯಕ್ಕೆ ಅಥವ ಅಧಿಕಾರಕ್ಕೆ ಬರುವ ಮೊದಲು ಇದ್ದ ಆರ್ಥಿಕ ಸ್ಥಿತಿಯಲ್ಲಿ ಇವತ್ತು ಇಲ್ಲ. ಇಲ್ಲಿ ಬೆರಳೆಣಿಕೆಯಷ್ಟು ಅಪವಾದಗಳಿರಬಹುದು. ಅವನ್ನು ಸದ್ಯದ ಚರ್ಚೆಯಲ್ಲಿ ಉಪೇಕ್ಷಿಸೋಣ. ಇವತ್ತು ಕನಿಷ್ಠ ಹತ್ತಿಪ್ಪತ್ತು ರಾಜಕಾರಣಿಗಳಾದರೂ ಒಬ್ಬೊಬ್ಬರೂ ಸಾವಿರ ಕೋಟಿಗಿಂತ ಬೆಲೆ ಬಾಳುತ್ತಾರೆ. ಒಂದಿಬ್ಬರು (ವ್ಯಕ್ತಿ ಅಥವ ಕುಟುಂಬಗಳು) ಡಾಲರ್ ಲೆಕ್ಕದಲ್ಲೂ ಬಿಲಿಯನೇರ್‌ಗಳಾಗಿರಬಹುದು (ಸುಮಾರು 5000 ಕೋಟಿ ರೂಪಾಯಿ.) ಇನ್ನು ರೂಪಾಯಿ ಬಿಲಿಯನೇರ್ (ಶತಕೋಟಿ) ಗಳಂತೂ ಸುಲಭವಾಗಿ ನೂರು ದಾಟಬಹುದು. ಇವರಲ್ಲಿ ಬಹುಪಾಲು ಜನ ಸಾಮಾನ್ಯ ಹಿನ್ನೆಲೆಯಿಂದ ಬಂದವರು. ಒಂದಷ್ಟು ಜನ ಆಗರ್ಭ ಶ್ರೀಮಂತರೂ ಇರಬಹುದು. ಆದರೆ ಅವರ ಉದ್ದಿಮೆ ಅಥವ ಆದಾಯಗಳು ನೂರಾರು ಕೋಟಿ ಮುಟ್ಟುವ ಹಾಗೇನೂ ಇದ್ದಿರಲಾರದು.

ಇಷ್ಟಾದರೂ, ಅದು ಹೇಗೆ ನಮ್ಮ ಹಾಲಿ-ಮಾಜಿ ಶಾಸಕರು, ಮಂತ್ರಿಗಳು, ಸಂಸದರು ಈ ಪರಿಯಲ್ಲಿ ಶ್ರೀಮಂತರಾದರು? ಆಗುತ್ತಿದ್ದಾರೆ? ಯಾವುದೊ ಸರ್ಕಾರಿ ಯೋಜನೆಯಲ್ಲಿ ಅಥವ ಇನ್ಯಾವುದೊ ಇಲಾಖೆಯಲ್ಲಿ ಜನರ ದುಡ್ಡಿಗೆ ಮೋಸ ಮಾಡಿದ್ದಾರೆ ಎಂದು ಹೇಳೋಣ ಎಂದರೆ, ಅಂತಹ ಹಗರಣಗಳೂ ಕಾಣಿಸುತ್ತಿಲ್ಲ. ಹಾಗಾದರೆ, ಇನ್ಯಾವ ಪವಾಡಗಳನ್ನು ಮಾಡಿ, ಜಾದೂ ಮಾಡಿ, ಇವರು ಇಷ್ಟು ಹಣ ಗಳಿಸಿದ್ದು, ಗಳಿಸುತ್ತಿರುವುದು?

ಮಾರ್ಥಾ ಸ್ಟುವರ್ಟ್ ಎನ್ನುವ ಅಮೆರಿಕನ್ ಮಹಿಳೆ ಇವತ್ತು ಸುಮಾರು 3000 ಕೋಟಿ ರೂಪಾಯಿಗೂ ಮೀರಿದ ಸಂಪತ್ತಿನ ಒಡತಿ. ಹಲವು ಪುಸ್ತಕಗಳನ್ನು ಬರೆದಿರುವ, ಟಿವಿಯಲ್ಲಿ ಟಾಕ್ ಷೋ ನಡೆಸುತ್ತಿದ್ದ, ಮ್ಯಾಗಝೀನ್ ಒಂದರ ಮತ್ತು ಹಲವಾರು ವ್ಯವಹಾರ-ಉದ್ದಿಮೆಗಳ ಒಡತಿಯೂ ಆಗಿರುವ ಈಕೆ ಅಮೆರಿಕದ ಪ್ರಸಿದ್ಧ ಹೆಂಗಸರಲ್ಲಿ ಒಬ್ಬಳು. ಫ್ಯಾಷನ್ ಉದ್ದಿಮೆಯಲ್ಲೂ ದೊಡ್ಡ ಹೆಸರು. 1999ರಲ್ಲಿ ಷೇರು ಮಾರುಕಟ್ಟೆಗೆ ಬಿಟ್ಟ ತನ್ನ ಕಂಪನಿಯ ಷೇರುಗಳ ಲೆಕ್ಕಾಚಾರದಲ್ಲಿ ರಾತ್ರೋರಾತ್ರಿ ಬಿಲಿಯನೇರ್ ಸಹ ಆಗಿದ್ದಳು. ಆದರೆ ನಾನು ಈಗ ಪ್ರಸ್ತಾಪಿಸಲಿರುವುದು ಆಕೆಯ ಸಾಧನೆ ಅಥವ ಯಶಸ್ಸುಗಳ ಕತೆಯನ್ನಲ್ಲ. ತನ್ನ ಯಶಸ್ಸಿನ ಉತ್ತುಂಗದಲ್ಲಿ, ಸಾವಿರಾರು ಕೋಟಿಗಳ ಒಡತಿಯಾಗಿದ್ದ ಸಮಯದಲ್ಲಿ, ಕೇವಲ 20 ಲಕ್ಷ ರೂಪಾಯಿಯ ನಷ್ಟ ಸರಿದೂಗಿಸಿಕೊಳ್ಳಲು ಆಕೆ ಒಂದು ತಪ್ಪು ಮಾಡಿದಳು. ಅದಕ್ಕಾಗಿ 2004 ರಲ್ಲಿ ಐದು ತಿಂಗಳು ಜೈಲಿನಲ್ಲಿದ್ದಳು. ಬಿಡುಗಡೆಯಾದ ನಂತರ ಮತ್ತೆ ಐದು ತಿಂಗಳು ತನ್ನದೆ ಮನೆಯಲ್ಲಿ ಗೃಹಬಂಧನದಲ್ಲಿದ್ದಳು ಮತ್ತು ಆ ಸಮಯದಲ್ಲಿ ಆಕೆಯ ಕಾಲಿಗೆ ಆಕೆ ಯಾವ ಸಮಯದಲ್ಲಿ ಎಲ್ಲಿ ಇದ್ದಾಳೆ ಎಂದು ಟ್ರ್ಯಾಕ್ ಮಾಡಬಲ್ಲ ಎಲೆಕ್ಟ್ರಾನಿಕ್ ತಾಯಿತವೊಂದನ್ನು ಕಟ್ಟಲಾಗಿತ್ತು. ಅದಾದ ನಂತರವೂ ಆಕೆ ಐದು ವರ್ಷಗಳ ಕಾಲ ಯಾವುದೆ ಕಂಪನಿಯ ಮುಖ್ಯಸ್ಥೆ ಆಗದಂತೆ ಅಥವ ಯಾವುದೆ ಕಂಪನಿಯ ನಿರ್ದೇಶಕ ಹುದ್ದೆ ಒಪ್ಪಿಕೊಳ್ಳಲಾಗದಂತೆ ನಿರ್ಬಂಧ ಹೇರಲಾಯಿತು. ಈಗಲೂ ಸುಮಾರು 3000 ಕೋಟಿ ರೂಪಾಯಿಗೂ ಮೀರಿದ ಆಸ್ತಿಯ ಒಡತಿಯಾಗಿರುವ ಈ ಪ್ರಸಿದ್ಧ ಮಹಿಳೆಗೆ ಕಳೆದ ವರ್ಷ ತಾನೆ ಬ್ರಿಟಿಷ್ ಸರ್ಕಾರ ತನ್ನ ದೇಶಕ್ಕೆ ವೀಸಾ ಸಹಾ ನಿರಾಕರಿಸಿತ್ತು.

ಇಷ್ಟಕ್ಕೂ ಆಕೆ ಮಾಡಿದ ತಪ್ಪಾದರೂ ಏನು?

ಷೇರು ಮಾರುಕಟ್ಟೆಯಲ್ಲಿರುವ ಸಾರ್ವಜನಿಕ ಕಂಪನಿಗಳು ತಮ್ಮ ಹಿರಿಯ ಅಧಿಕಾರಿಗಳಿಗೆ, ಮುಖ್ಯ ನೌಕರರಿಗೆ, ಮತ್ತು ನಿರ್ದೇಶಕ ಮಂಡಳಿಯ ನಿರ್ದೇಶಕರಿಗೆ ಕೇವಲ ಸಂಬಳವನ್ನಷ್ಟೆ ಅಲ್ಲದೆ ಬೋನಸ್ ರೀತಿಯಲ್ಲಿ ಒಂದಷ್ಟು ಷೇರುಗಳನ್ನೂ ನೀಡಿರುತ್ತದೆ. ಇದು ಸಾವಿರಗಳಿಂದ ಲಕ್ಷಗಳನ್ನು ದಾಟುತ್ತದೆ; ಅವರವರ ಯೋಗ್ಯತೆಯ ಮೇಲೆ. ತಮ್ಮದೇ ಕಂಪನಿಯ ಆ ಷೇರುಗಳನ್ನು ಕಂಪನಿಯ ಲಾಭನಷ್ಟದ ಬಗ್ಗೆ ಅರಿವಿರುವ ಹಿರಿಯ ಅಧಿಕಾರಿಗಳು ಮತ್ತು ನಿರ್ದೇಶಕರು ಯಾವಾಗಲೆಂದರೆ ಆಗ ಮಾರಾಟ ಮಾಡುವ ಹಾಗೆ ಇಲ್ಲ. ‘ಕಂಪನಿ ಈ ತ್ರೈಮಾಸಿಕದಲ್ಲಿ ಲಾಭ ಮಾಡಿದೆ, ಆ ವಿಚಾರ ಇನ್ನೂ ಹೊರಗಿನವರಿಗೆ ಗೊತ್ತಿಲ್ಲ, ಗೊತ್ತಾದ ನಂತರ ಷೇರುಗಳ ಬೆಲೆ ಮೇಲೆ ಹೋಗುತ್ತದೆ, ಲಾಭ ಮಾಡಿಕೊಳ್ಳಲು ಇದೇ ಸಮಯ, ಹಾಗಾಗಿ ಒಂದಷ್ಟು ಷೇರುಗಳನ್ನು ಈಗಿನ ಕಮ್ಮಿ ಬೆಲೆಗೆ ಕೊಂಡುಕೊಳ್ಳೋಣ,’ ಎಂದೆಲ್ಲ ಲೆಕ್ಕ ಹಾಕಿ ಅವರು ತಕ್ಷಣವೆ ಷೇರುಗಳನ್ನು ಕೊಳ್ಳುವ ಹಾಗೆ ಇಲ್ಲ. ಅದೇ ರೀತಿ ತಮ್ಮ ಕಂಪನಿ ನಷ್ಟದ ಹಾದಿಯಲ್ಲಿರುವ ಲಕ್ಷಣಗಳು ಗೊತ್ತ್ತಾದರೆ ಮತ್ತು ಅವರಿಗೆ ಗೊತ್ತಿರುವ ವಿಚಾರಗಳು ಬಹಿರಂಗವಾದ ಮೇಲೆ ಅವರ ಕಂಪನಿಯ ಷೇರಿನ ಬೆಲೆ ಇಳಿಯುತ್ತದೆ ಎನ್ನುವ ಸೂಕ್ಷ್ಮಗಳು ಗೊತ್ತಾದಾಗಲೂ ತಮ್ಮಲ್ಲಿರುವ ಷೇರುಗಳನ್ನು ಕೂಡಲೆ ಮಾರುವ ಹಾಗೂ ಇಲ್ಲ. ಅದು ಅನೈತಿಕ. ತಮ್ಮ ಸ್ಥಾನದ ಬಲದಿಂದ ತಮಗೆ ಗೊತ್ತಾದ ವಿಚಾರವೊಂದನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುವ ಹೀನ, ಮೌಲ್ಯರಹಿತ, ಅನೈತಿಕ ನಡವಳಿಕೆ (Unethical) ಅದು. ಕಂಪನಿಯೊಂದರ ಷೇರುಗಳನ್ನು ಕೊಂಡುಕೊಂಡಿರುವ ಸಾರ್ವಜನಿಕರಿಗೆ ಎಸಗುವ ಮಹಾವಂಚನೆ. ಅದನ್ನು ಬ್ಯುಸಿನೆಸ್ ಪ್ರಪಂಚದ ಪರಿಭಾಷೆಯಲ್ಲಿ Insider Trading ಎನ್ನುತ್ತಾರೆ. ಯಾರಾದರೂ ಹಾಗೆ ಮಾಡಿದ್ದು ಸಾಬೀತಾದರೆ ಅದೊಂದು ಕ್ರಿಮಿನಲ್ ಅಪರಾಧ. ಅದಕ್ಕೆ ಜೈಲು ಶಿಕ್ಷೆಯೂ ಆಗುತ್ತದೆ.

ಮಾರ್ಥಾ ಸ್ಟುವರ್ಟ್ ಎಸಗಿದ ಅಪರಾಧವೂ ಅದೇನೆ. 2001ನೇ ಇಸವಿಯ ಸುಮಾರಿನಲ್ಲಿ ಇಮ್ಕ್ಲೋನ್ ಎನ್ನುವ ಕಂಪನಿಯ ಬೋರ್ಡಿನಲ್ಲಿ ಆಕೆ ನಿರ್ದೇಶಕಿ ಆಗಿದ್ದಳು. ಅದೊಂದು ದಿನದ ಮೀಟಿಂಗ್‌ನಲ್ಲಿ ಆ ಕಂಪನಿಯ ವೈದ್ಯಕೀಯ ಉತ್ಪನ್ನವೊಂದಕ್ಕೆ ಸರ್ಕಾರದ ಪರವಾನಗಿ ಸಿಕ್ಕಿಲ್ಲ ಎಂಬ ವಿಚಾರ ಆಕೆಗೂ ಸೇರಿದಂತೆ ಆ ಕಂಪನಿಯ ಮುಖ್ಯ ಮಂದಿಗೆಲ್ಲ ಗೊತ್ತಾಯಿತು. ಅದರಲ್ಲಿ ಒಂದಷ್ಟು ಜನ ಅಂದೇ ತಮ್ಮ ಷೇರುಗಳನ್ನು ಮಾರಿಕೊಂಡರು. ತನಗೆ ಆಗಬಹುದಾಗಿದ್ದ 45 ಸಾವಿರ ಡಾಲರ್‌ಗಳ ನಷ್ಟವನ್ನು ನಿವಾರಿಸಿಕೊಳ್ಳಲು ಸ್ವತಃ ಬಿಲಿಯನೇರ್ ಆಗಿದ್ದ ಮಾರ್ಥಾಳೂ ಆ ಕಂಪನಿಯ ತನ್ನ ಷೇರುಗಳನ್ನು ಮಾರಿಬಿಡಲು ಕೂಡಲೆ ತನ್ನ ಏಜೆಂಟನಿಗೆ ತಿಳಿಸಿದಳು. ಮಾರನೆಯ ದಿನ ಆ ಕಂಪನಿಯ ಉತ್ಪನ್ನಕ್ಕೆ ಪರವಾನಗಿ ಸಿಕ್ಕಿಲ್ಲದ ವಿಚಾರ ಬಹಿರಂಗವಾಯಿತು. ಒಂದೇ ದಿನದಲ್ಲಿ ಆ ಕಂಪನಿಯ ಷೇರುಗಳ ಬೇಲೆ ಶೇ.18 ರಷ್ಟು ಬಿದ್ದು ಹೋಯಿತು. ಅಂದಿನ ಹಿಂದಿನ ದಿನ ಕೆಲವು Insiders ತಮ್ಮ ಷೇರುಗಳನ್ನು ಮಾರಾಟ ಮಾಡಿರುವ ವಿಚಾರ ನಂತರದ ದಿನಗಳಲ್ಲಿ ಬಯಲಿಗೆ ಬಂತು. ಮಾರ್ಥಾ ಏನೇನೊ ನಾಟಕ ಆಡಿದಳು. ಆದರೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಆಕೆಯಿಂದಾಗಲಿಲ್ಲ. ತನ್ನ ಆ ಅನೈತಿಕ ಕೃತ್ಯಕ್ಕೆ ಈಗಲೂ ಆಕೆ ಶಿಕ್ಷೆ ಅನುಭವಿಸುತ್ತಿದ್ದಾಳೆ. ದುಡ್ಡಿನ ವಿಚಾರದಲ್ಲಿ ಅದೊಂದು ಸಣ್ಣ ಮೊತ್ತದ ತಪ್ಪು. ಆದರೆ ಮೌಲ್ಯ, ನೀತಿ, ಮತ್ತು ನೈತಿಕತೆಯ ದೃಷ್ಟಿಯಿಂದ ಅದೊಂದು ಗಂಭೀರ ಅಪರಾಧ. ತಮ್ಮ ಸ್ಥಾನಬಲವನ್ನು ಸ್ವಂತಲಾಭಕ್ಕೆ ಬಳಸಿಕೊಳ್ಳುವ ಹೀನಾತಿಹೀನ ನಡವಳಿಕೆ. (ನಮ್ಮಲ್ಲಿ ಕೆಲವರಿಗೆ ಈ ಪದಬಳಕೆ ಮತ್ತು ಈ ಅಭಿಪ್ರಾಯ ಕಠೋರವೆಂದೂ, ಮಾರ್ಥಾ ಸ್ಟುವರ್ಟ್ ಮಾಡಿದ್ದು ಅಂತಹ ದೊಡ್ಡ ತಪ್ಪೇನೂ ಅಲ್ಲವೆಂದೂ ಅನ್ನಿಸಿದರೆ, ಹಾಗೆ ಅನ್ನಿಸುವುದು ಅಸಹಜ ಎಂದೇನೂ ನಾನು ಭಾವಿಸುವುದಿಲ್ಲ. ದುರದೃಷ್ಟಕರ ವಾತಾವರಣ ಇದು. ಅದಕ್ಕೆ ಕಾರಣಗಳನ್ನು ನ್ಯಾಯ-ಮೌಲ್ಯ-ನೈತಿಕತೆಯನ್ನು ನಮ್ಮಲ್ಲಿ ಪರಿಭಾವಿಸಿರಬಹುದಾದ ಮತ್ತು ಶಿಕ್ಷಣದ ಗುಣಮಟ್ಟದ ನೆಲೆಯಲ್ಲಿ ಗುರುತಿಸಬೇಕು.)

ಈಗ, ಮಾರ್ಥಾ ಸ್ಟುವರ್ಟ್‌ಳ ಹಗರಣವನ್ನು ಮೂಲವಾಗಿ ಇಟ್ಟುಕೊಂಡು ನಮ್ಮಲ್ಲಿ ಒಂದೆರಡು ವಾರದ ಹಿಂದೆ ತಾನೆ ಬಯಲಿಗೆ ಬಂದ ಕೃಷ್ಣಯ್ಯ ಶೆಟ್ಟಿ ಮತ್ತು ಶಿಡ್ಲಘಟ್ಟ ಭೂಹಗರಣವನ್ನು ವಿಶ್ಲೇಷಿಸೋಣ. ಸರ್ಕಾರದಲ್ಲಿ ಯಾವಯಾವ ಯೋಜನೆಗಳು ಯಾವಯಾವ ಸ್ಥಳದಲ್ಲಿ ಎಂತಹ ಸಮಯದಲ್ಲಿ ಅನುಷ್ಠಾನಕ್ಕೆ ಬರಲಿವೆ ಎನ್ನುವ ವಿಚಾರಗಳು ಕೆಲವು ಹಿರಿಯ ಅಧಿಕಾರಿಗಳಿಗೂ, ಮಂತ್ರಿಗಳಿಗೂ, ಮುಖ್ಯಮಂತ್ರಿಗಳಿಗೂ, ಅವರ ಹಿಂಬಾಲಕರಿಗೂ, ಮತ್ತು ಒಂದಷ್ಟು ಶಾಸಕರಿಗೂ ನಿಖರವಾಗಿ ಗೊತ್ತಾಗುತ್ತದೆ. ತಕ್ಷಣವೆ ಈ ಗುಂಪಿನಲ್ಲಿರುವ ಖದೀಮರು ಯೋಜನೆಯೊಂದು ಅನುಷ್ಠಾನಕ್ಕೆ ಬರಲಿರುವ ಸುತ್ತಮುತ್ತಲ ಸ್ಥಳವನ್ನು ತುಂಬ ಅಗ್ಗವಾಗಿ ರಾತ್ರೋರಾತ್ರಿ ತಮ್ಮ ಸಂಬಂಧಿಗಳ ಹೆಸರಿನಲ್ಲಿ, ಹಿಂಬಾಲಕರ ಹೆಸರಿನಲ್ಲಿ, ಬೇನಾಮಿ ಹೆಸರಿನಲ್ಲಿ, ಕೊಂಡುಕೊಂಡುಬಿಡುತ್ತಾರೆ. ನಂತರ ಅದೇ ಜಮೀನನ್ನು ತಮ್ಮದೆ ಸುಪರ್ದಿಯಲ್ಲಿರುವ ಸರ್ಕಾರಕ್ಕೆ ಅಸಹಜವಾದ ಬೆಲೆಗೆ, "ಮಾರುಕಟ್ಟೆ ಬೆಲೆ" ಎಂಬ ಹೆಸರಿನಲ್ಲಿ ಮಾರಿಬಿಡುತ್ತಾರೆ. ವಿಶ್ವವಿದ್ಯಾಲಯಗಳು, ವಿಮಾನ ನಿಲ್ದಾಣಗಳು, ಕೈಗಾರಿಕಾ ಪ್ರದೇಶಗಳು, ಗೃಹಮಂಡಳಿ ಭೂಸ್ವಾಧೀನಗಳ ಜಮೀನೆಲ್ಲ ಸ್ವಾಧೀನದ ಸಮಯಕ್ಕೆ ಈ ಖದೀಮ ಗುಂಪಿನವರದೇ ಆಗಿರುತ್ತದೆ. ಮತ್ತೆ ಎಷ್ಟೋ ಸಲ ಸರ್ಕಾರಿ ಯೋಜನೆಗಳು ಕಾರ್ಯರೂಪಕ್ಕೆ ಬರುವುದೆ ಕೆಲವು ಪಟ್ಟಭದ್ರರ ಜಮೀನು ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಇರುವ ಕಾರಣದಿಂದ. ಶಿಡ್ಲಘಟ್ಟದಲ್ಲಾಗಿದ್ದೂ ಇದೆ. ಅಣ್ಣನ ಇಲಾಖೆಗೆ ಜಮೀನು ಬೇಕಾದ ವಿವರ ತಮ್ಮನಿಗೆ ತಿಳಿಸಲಾಯಿತು ಅಥವ ಗೊತ್ತಾಯಿತು. ಮಂತ್ರಿಯ ತಮ್ಮ ಸ್ವತಃ ತಾನೇ ಹೋಗಿ ವ್ಯಾಪಾರಕ್ಕೆ ನಿಂತರು. ರೈತನಿಂದ ಆರು ಕಾಸಿಗೆ ಕೊಂಡು ಅರವತ್ತು ಕಾಸಿಗೆ ಅಣ್ಣನ ಇಲಾಖೆಗೆ ಮಾರಿದರು. ನೈತಿಕತೆ ಮತ್ತು ಅಧಿಕಾರದುರುಪಯೋಗದ ಹಿನ್ನೆಲೆಯಿಂದ ಇದನ್ನು ನೀವು ಗಮನಿಸದೆ ಹೋದರೆ ಈ ಇಡೀ ಪ್ರಕರಣದಲ್ಲಿ ತಪ್ಪಾದರೂ ಎಲ್ಲಿದೆ?

ಇಂತಹ ಅನೈತಿಕ ಕೆಲಸಗಳನ್ನು ಮಾಡುವ Insiderಗಳನ್ನು ದಾಖಲೆಯ ಸಮೇತ ಕಂಡುಹಿಡಿಯುವಂತಹ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಜೊತೆಗೆ, ಇಂತಹ ಕೃತ್ಯಗಳು ಅನೈತಿಕ ಹಾಗೂ ಶಿಕ್ಷಿಸಲು ಅರ್ಹವಾದವು ಎಂದು ನಮ್ಮ ಬಹುಸಂಖ್ಯಾತ ಸಮಾಜ ಇನ್ನೂ ಭಾವಿಸಿಲ್ಲ. ಹಾಗಾಗಿ ಇಂತಹುದೆ ಹಗಲುದರೋಡೆಗಳು ಕಳೆದ ಹತ್ತಿಪ್ಪತ್ತು ವರ್ಷಗಳ "ಅಭಿವೃದ್ಧಿ ಶಕೆ"ಯಲ್ಲಿ ನಿರ್ಬಾಧಿತವಾಗಿ ನಡೆದುಕೊಂಡು ಬರುತ್ತಿವೆ. ಈ ಭೂವ್ಯವಹಾರಗಳು ಅಧಿಕಾರಸ್ಥರು ಅಕ್ರಮವಾಗಿ ಹಣ ಮಾಡುವ ಒಂದು ಮಾರ್ಗವಷ್ಟೆ. ತಮ್ಮ ಸ್ಥಾನಬಲವನ್ನು Unethical ಆಗಿ ಬಳಸಿಕೊಂಡು ಕಾನೂನಿನ ಕೈಗೆ ಸಿಕ್ಕಿಹಾಕಿಕೊಳ್ಳದೆ ದುಡ್ಡು ಮಾಡುವ ಅನೇಕ ಮಾರ್ಗಗಳು ಸರ್ಕಾರದ ಒಳಗೆ ಮತ್ತು ಹೊರಗೆ ಇವೆ. ಹಾಗಾಗಿಯೆ, ಸಿಕ್ಕಿಹಾಕಿಕೊಳ್ಳುವಂತಹ ಹಗರಣಗಳನ್ನು ಮಾಡದೆ ಇವತ್ತಿನ ನಮ್ಮ ರಾಜಕಾರಣಿಗಳು ತಮ್ಮ ಅಧಿಕಾರ ದುರುಪಯೋಗದ ಖದೀಮತನದಿಂದ ಕೋಟ್ಯಾಂತರ ದುಡ್ಡು ಮಾಡುತ್ತಲೆ ಇದ್ದಾರೆ. ಅದೇ ದುಡ್ಡಿನ ಬಲದಿಂದ ಪ್ರಜಾಪ್ರಭುತ್ವವನ್ನು ಮತ್ತು ಸಮಾಜದ ಮೌಲ್ಯಗಳನ್ನು ದುರ್ಬಲಗೊಳಿಸುತ್ತಲೆ ಹೋಗುತ್ತಿದ್ದಾರೆ.

ವಿಪರ್ಯಾಸವೇನೆಂದರೆ, ಇದನ್ನೆಲ್ಲ ಘಟ್ಟಿಸಿ ಕೇಳಬೇಕಾದ, ಜನತೆಯನ್ನು Educate ಮಾಡಬೇಕಾದ ವಿರೋಧಪಕ್ಷದವರೂ ಅದೇ ಮಾರ್ಗದಲ್ಲಿ ಸಾಗಿ ಬಂದಿದ್ದಾರೆ!




ಇದೇ ಲೇಖನಕ್ಕೆ ಸಂಬಂಧಿಸಿದ ಟಿಪ್ಪಣಿ "ಅತಿ ದೌರ್ಭಾಗ್ಯದ ಹಾಲಿ ವಿಧಾನಸಭೆ",
ಬೇರೆಯದೇ ಲೇಖನವಾಗಿ ಇಲ್ಲಿ ಇದೆ.

1 comment:

aniruddha said...

hi ravi.. i read ur article.. its very good.. hey i wanna start one kannada blog.. so could u help me doin that?? pls??