Sep 12, 2007

ಧರೆಯೆ ಹತ್ತಿ ಉರಿಯುವಾಗ ಎಲ್ಲಿ ಓಡಿ ಹೋಗುವೆ?

(ವಿಕ್ರಾಂತ ಕರ್ನಾಟಕ - ಸೆಪ್ಟೆಂಬರ್ 21, 2007 ರ ಸಂಚಿಕೆಯಲ್ಲಿನ ಬರಹ)

ಭೂತಾಯಿಯ ತಾಪಮಾನ ಏರುತ್ತಿರುವ ವಿಷಯ ಇವತ್ತು ಕೇವಲ ಭವಿಷ್ಯದ ಪೀಳಿಗೆಯ ಬಗ್ಗೆ ಕಾಳಜಿ ಇರುವವರ ಅಥವ ತಾವು ತೆರಳುವಾಗ ತಾವು ಬಂದಾಗ ಹೇಗಿತ್ತೊ ಅದಕ್ಕಿಂತ ಉತ್ತಮವಾದ ಸ್ಥಿತಿಯಲ್ಲಿ ಈ ನಿಸರ್ಗವನ್ನು ಬಿಟ್ಟು ಹೋಗಬೇಕು ಎಂದು ಹಂಬಲಿಸುವ ಸಜ್ಜನರ ಕಾಳಜಿ ಮಾತ್ರವಾಗಿ ಉಳಿದಿಲ್ಲ. ಜಾತಿ, ಮತ, ವರ್ಣ ಶ್ರೇಷ್ಠತೆ ಎಂದೆಲ್ಲ ಸಂಕುಚಿತವಾಗಿ ಕನವರಿಸುವ ಧರ್ಮಲಂಡರೆಲ್ಲ ಈಗ ಪರಿಸರ ಪರಿಸರ ಎಂದು ಕನವರಿಸುವಷ್ಟು ಭೂಮಿ ಬಿಸಿಯಾಗುತ್ತಿದೆ.

ಕನ್ನಡದ ದಿನಪತ್ರಿಕೆಯೊಂದರಲ್ಲಿ ಪರಿಸರದ ಬಗ್ಗೆ ಮತಾಂಧರೊಬ್ಬರು ಬರೆದಿರುವ ಸಾಲುಗಳು ಇವು: "ಇಂದು ಪರಿಸರ ಸಂರಕ್ಷಣೆಯ ಬಗ್ಗೆ ಅನೇಕ ಯೋಜನೆಗಳನ್ನು ಹಾಕಲಾಗುತ್ತಿದೆ. ಇದು ಬರಿಯ ಜನಮೆಚ್ಚುಗೆ ಗಳಿಸುವ ನಾಟಕವಾಗಿದೆಯೇ ಹೊರತು ಕಾರ್ಯ ರೂಪದಲ್ಲಿ ಏನೂ ಆಗುತ್ತಿಲ್ಲ. ಅನೇಕ ಸಾಂಕ್ರಾಮಿಕ ರೋಗಗಳಿಂದ ಜನರು ನರಳುತ್ತಿದ್ದಾರೆ. ಪ್ರಪಂಚದ ತಾಪಮಾನವು ಸತತವಾಗಿ ದಿನೇ ದಿನೇ ಹೆಚ್ಚುತ್ತಿದೆ. ಗಾಳಿ ಮತ್ತು ನೀರು ಕಲುಷಿತವಾಗಿದೆ. ಆದರೂ ಯಾರಿಗೂ ಅದರ ಪರಿವೆಯೇ ಇಲ್ಲವಾಗಿದೆ. ಶಿವಾಜಿಯು ಪರಿಸರದ ಬಗ್ಗೆ ಎಂದೂ ಭಾಷಣವನ್ನಾಗಲೀ ಉಪದೇಶವನ್ನಾಗಲೀ ಮಾಡುವ ಗೋಜಿಗೆ ಹೋಗಲಿಲ್ಲ. ಆದರೆ ಅವನ ಪ್ರತಿಯೊಂದು ನಡೆ ನುಡಿಯೂ ಪರಿಸರದ ರಕ್ಷಣೆಯಲ್ಲಿಯೇ ಮಗ್ನವಾಗಿರುತ್ತಿದ್ದಿತು. ಹೇರಳವಾಗಿ ಮರಗಳನ್ನು ಕಡಿದು ಹಡಗು ನಿರ್ಮಾಣ ಮಾಡಬಹುದಾಗಿದ್ದಿತು. ಆದರೆ ಎಂದೂ ಒಂದು ಮರವನ್ನು ಕಡಿಯುವ ಯೋಚನೆಯನ್ನು ಮಾಡಲಿಲ್ಲ."

ಇಂದಿನ ಗ್ಲೋಬಲ್ ವಾರ್ಮಿಂಗ್‌ಗೆ ಮೂಲ ಕಾರಣ ಎನ್ನಬಹುದಾದದ್ದು ಯೂರೋಪಿನಲ್ಲಿ ಆರಂಭವಾದ ಕೈಗಾರಿಕಾ ಕ್ರಾಂತಿ. ಆದರೆ ಶಿವಾಜಿಯ ಕಾಲದಲ್ಲಿ ಆ ಕ್ರಾಂತಿ ಇನ್ನೂ ಆರಂಭವೇ ಆಗಿರಲಿಲ್ಲ! ಆದರೂ ಶಿವಾಜಿಯನ್ನು ಹೊಗಳುವ ಭರದಲ್ಲಿ ಕೆಲವರು ಶಿವಾಜಿ ಹಡಗು ನಿರ್ಮಾಣ ಮಾಡದೆ ಇದ್ದದ್ದಕ್ಕೆ ಪರಿಸರದ ಬಗ್ಗೆ ಶಿವಾಜಿಗೆ ಇದ್ದ ಕಾಳಜಿಯೇ ಮೂಲಕಾರಣ ಎಂದು ಆರೋಪಿಸುತ್ತಿದ್ದಾರೆ. ಸತ್ಯ ಮತ್ತು ವಾಸ್ತವದ ಬಗ್ಗೆ ಇದನ್ನು ಬರೆದಿರುವವರ ಜ್ಞಾನದ ಮಟ್ಟ ಏನೇ ಇದ್ದರೂ, ಪರಿಸರ ಮಾಲಿನ್ಯ ಎನ್ನುವುದು ಈಗಿನ ಅತಿಮುಖ್ಯ ಸಮಸ್ಯೆ ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಈಗಿನ ಸಮಸ್ಯೆಗೆ ಶಿವಾಜಿಯ ಬಳಿ ಮೂರು ಶತಮಾನದ ಮೊದಲೆ ಉತ್ತರವಿತ್ತು ಎಂದುಬಿಟ್ಟರೆ ಶಿವಾಜಿಗೆ ಚಾರಿತ್ರಿಕ ಅಪಮಾನ ಮಾಡಿದಂತಾಗುವುದಿಲ್ಲ, ಬದಲಿಗೆ ಹೊಗಳಿದಂತಾಗುತ್ತದೆ ಎಂದುಕೊಂಡು ಬಿಟ್ಟಿದ್ದಾರಷ್ಟೆ ಈ ಪುಣ್ಯಾತ್ಮರು. ಅದನ್ನು ಹಾಸ್ಯಪ್ರವೃತ್ತಿಯ ಆ ಪತ್ರಿಕೆಯ ಸುಜ್ಞಾನಿ ಸಂಪಾದಕರು ಪ್ರಕಟಿಸಿಬಿಟ್ಟಿದ್ದಾರೆ!

"ಭೂತಾಪಮಾನದ ಏರಿಕೆಯಿಂದಾಗಿ ಇಡೀ ಮಾನವ ಜಾತಿಯೆ ಇಂದು ಅಪಾಯಕ್ಕೆ ಸಿಲುಕಿದೆ. ಬೃಹತ್ ಕಂಪನಿಗಳ ಕೈಗಾರಿಕೆಗಳು ಹೊರಸೂಸುತ್ತಿರುವ ತ್ಯಾಜ್ಯಗಳೆ ಈ ತಾಪಮಾನದ ಏರಿಕೆಗೆ ಪ್ರಮುಖ ಕಾರಣ. ಜನರ ಮೇಲಿನ ಈ ರೀತಿಯ ನಿರ್ಲಜ್ಜ ದಾಳಿಯ ಹೊರತಾಗಿಯೂ ಪಶ್ಚಿಮದ ನಾಯಕರು, ಅದರಲ್ಲೂ ವಿಶೇಷವಾಗಿ ಬುಷ್, ಬ್ಲೇರ್, ಸರ್ಕೋಜಿ ಮತ್ತು ಬ್ರೌನ್ ಇವರುಗಳು ಜನರ ಬುದ್ಧಿವಂತಿಕೆಯನ್ನು ಅಣಕ ಮಾಡುವಂತೆ ಈಗಲೂ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದಾರೆ."

ಇದನ್ನು ಯಾರೊ ಮಾನವ ಪ್ರೇಮಿ ನಾಯಕನೊ, ಅಥವ ಬದ್ಧತೆಯುಳ್ಳ (ಸಮಾಜ)ವಿಜ್ಞಾನಿಯೊ ಹೇಳಿದ ಮಾತು ಎಂದುಕೊಳ್ಳಬೇಡಿ. ಹೀಗಂದಾತ ಮತದ ಅಫೀಮು ತಿಂದ ಬಿನ್ ಲ್ಯಾಡೆನ್! ಗ್ಲೋಬಲ್ ವಾರ್ಮಿಂಗ್ ಬಗ್ಗೆ ಮಾತನಾಡಿದರೆ ತನ್ನ ಬಗ್ಗೆ ಒಂದಷ್ಟು ಸದಭಿಪ್ರಾಯ ಹುಟ್ಟಬಹುದು ಎಂದುಕೊಂಡು ಆ ಪುಣ್ಯಾತ್ಮ ಹೀಗಂದನೊ, ಅಥವ ಅಫ್ಘನಿಸ್ತಾನದ ಬೆಟ್ಟಗಳಲ್ಲಿ ನೆಲ ಬಿಸಿಯಾಗುತ್ತಿರುವ ಅನುಭವ ಸ್ವತಃ ಆತನಿಗೇ ಆಗುತ್ತಿದೆಯೊ ಏನೊ, ಯಾರಿಗೆ ಗೊತ್ತು!

ಹೀಗೆ ಇವತ್ತು ದುಷ್ಟರು ಶಿಷ್ಟರಿಗೆ ಸರಿಸಮಾನವಾಗಿ ಭೂ ತಾಪಮಾನದಲ್ಲಿ ಏರಿಕೆ ಆಗುತ್ತಿರುವುದರ ಬಗ್ಗೆ ಮತ್ತು ಅದರಿಂದ ಆಗಬಹುದಾದ ವಿನಾಶದ ಬಗ್ಗೆ ಭಯಪಡುತ್ತಿದ್ದಾರೆ.

ವಿಜ್ಞಾನಿಗಳ ಪ್ರಕಾರ ಭೂಮಿಯ ತಾಪಮಾನದ ಏರಿಕೆ ಮತ್ತು ಇಳಿಕೆ ಭೂಮಿಯ ಇತಿಹಾಸದಲ್ಲಿ ಅನೇಕ ಸಾರಿ ಆಗಿಹೋಗಿದೆ. ಸೂರ್ಯನನ್ನು ಸುತ್ತ್ತುವ ಭೂಮಿಯ ಕಕ್ಷೆಯಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೂ ತಾಪಮಾನದಲ್ಲಿ ವೈಪರೀತ್ಯಗಳು ಉಂಟಾಗುತ್ತವೆ. ಎಚ್ಚರವಾಗುವ ಅಗ್ನಿಪರ್ವತಗಳಿಂದಲೂ ಏರಿಳಿತಗಳು ಉಂಟಾಗಬಹುದು. ಹಾಗೆಯೆ ವಾತಾವರಣದಲ್ಲಿನ ಆವಿ, ಇಂಗಾಲದ ಡೈ‌ಆಕ್ಸೈಡ್, ಓಜೋನ್, ಮಿಥೇನ್ ಮತ್ತು ನೈಟ್ರಸ್ ಆಕ್ಸೈಡ್ ಅನಿಲಗಳ ಪ್ರಮಾಣದಲ್ಲಿ ಏರುಪೇರಾದರೂ ಭೂಮಿಗೆ ಚಳಿಜ್ವರ ಬರಬಹುದು. ಇವೆಲ್ಲವೂ ಮಾನವನ ಪಾತ್ರ ಇಲ್ಲದೆಯೆ ಆಗುವಂತಹವು. ಆದರೆ ಭೂಮಿಯ ಇತಿಹಾಸದಲ್ಲಿ ಬಹುಶಃ ಇದೇ ಮೊದಲ ಭಾರಿಗೆ ಮನುಷ್ಯ ವಾತಾವರಣದಲ್ಲಿನ ಉಷ್ಣಾಂಶ ಏರುಪೇರಿಗೆ ನೇರ ಕಾರಣ ಆಗುತ್ತಿದ್ದಾನೆ ಎನ್ನಬಹುದು. ಸಹಸ್ರಾರು ವರ್ಷಗಳಿಂದ ವಾತಾವರಣದಲ್ಲಿನ ಇಂಗಾಲದ ಡೈ‌ಆಕ್ಸೈಡ್‌ನ ಪ್ರಮಾಣ ಇಳಿಯುತ್ತ ಬಂದಿದ್ದರೆ ಕಳೆದ ಐದಾರು ದಶಕಗಳಲ್ಲಿ ಅದು ಏರುತ್ತ ಹೋಗಿದೆ. ಇದಕ್ಕೆ ಕಳೆದೆರಡು ಶತಮಾನಗಳ ಕೈಗಾರಿಕಾ ಕ್ರಾಂತಿಯೆ ಕಾರಣ.

ಭೂಮಿಯ ತಾಪಮಾನದ ಏರಿಕೆಯಿಂದಾಗಿ ಜನಜೀವನಕ್ಕೆ ಕೆಡುಕು ಕಾದಿದೆಯೆ ಹೊರತು ಒಳಿತು ಮಾತ್ರ ಇಲ್ಲ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ. ಸಮುದ್ರ ಉಕ್ಕೇರಬಹುದು; ಅತಿವೃಷ್ಟಿ ಅನಾವೃಷ್ಟಿ ಆಗಬಹುದು; ವಿಪರೀತ ಚಳಿ, ವಿಪರೀತ ಸೆಕೆ ಆಗಬಹುದು; ಕೆಲವು ಕಡೆ ನೀರೇ ಸಿಗದೆ ಹೋಗಬಹುದು; ಮತ್ತು ಕೆಲವು ಕಡೆ ಯಾವಾಗಲೂ ತೇವ ಇದ್ದುಬಿಡಬಹುದು; ಇವೆಲ್ಲವುಗಳಿಂದಾಗಿ ಜೀವಕೋಟಿಗೆ ನಾನಾ ತರಹದ ಕಾಯಿಲೆಕಸಾಲೆಗಳು ಬರಬಹುದು.

ಈ ನಿಧಾನಪ್ರಳಯದ ಸಮಯ ಮತ್ತು ಅದರ ಪ್ರಮಾಣ ಯಾವ ಮಟ್ಟದ್ದು ಎಂದು ಖರಾರುವಾಕ್ಕಾಗಿ ಹೇಳಲಾಗದಿದ್ದರೂ ಈಗ ಮನುಷ್ಯ ಹೋಗುತ್ತಿರುವ ದಾರಿ ಸರಿ ಇದ್ದಂತಿಲ್ಲ. ಮೊದಲಿನಂತೆ ಆಗಬೇಕಾದರೆ ನೂರಿನ್ನೂರು ವರ್ಷಗಳ ಹಿಂದೆ ಮನುಷ್ಯ ನಿಸರ್ಗವನ್ನು ಹೇಗೆ ಉಪಯೋಗಿಸಿಕೊಳ್ಳುತ್ತಿದ್ದನೊ ಆ ಮಟ್ಟಕ್ಕೆ ಈಗ ಮಾನವ ಹಿಂದಿರುಗಬೇಕೇನೊ. ಆದರೆ, ಈ ಜನಸಂಖ್ಯೆಯ ಪ್ರಮಾಣ, ತಂತ್ರಜ್ಞಾನದಲ್ಲಿ ಹಿಂದಿರುಗಲಾಗದಷ್ಟು ಬೆಳವಣಿಗೆಗಳಾಗಿರುವುದು, ಸಾಲದೆಂಬಂತೆ ಅಣುಬಾಂಬ್‌ಗಳ ಮೇಲೆ ಬೆರಳಿಟ್ಟು ಕೂತಿರುವ ಹಿಂಸಾವಿನೋದಿ ಹೇಡಿಗಳು... ಇಡೀ ಮನುಷ್ಯ ಜಾತಿಯೆ ಒಟ್ಟಾಗದಿದ್ದರೆ ಹಲವಾರು ಜೀವಜಾತಿಗಳ ಜೊತೆಗೆ ಮಾನವಜಾತಿಯೂ ಇಲ್ಲವಾಗಿ ಬಿಡುವ ಕಾಲಘಟ್ಟದಲ್ಲಿ ನಾವಿರುವಂತಿದೆ.

ಮಹಾಭಾರತದಲ್ಲಿ ಒಂದು ಪ್ರಸಂಗ ಬರುತ್ತದೆ. ಯಕ್ಷರಿಂದ ದುರ್ಯೋಧನನನ್ನು ಬಿಡಿಸಿಕೊಂಡು ಬರಲು ಭೀಮನಿಗೆ ಹೇಳುವ ಯುಧಿಷ್ಠಿರ ಸಮಾನ ಶತ್ರುವಿನ ಬಗ್ಗೆ ಒಂದು ಉದಾಹರಣೆ ಕೊಡುತ್ತಾನೆ: "ನಾವು ನಾವೆ ಇರುವಾಗ ನಾವು ಐವರು, ಅವರು ನೂರು. ಬೇರೊಬ್ಬರು ದಂಡೆತ್ತಿ ಬಂದಾಗ ನಾವು ನೂರೈವರು." ಬಿನ್ ಲ್ಯಾಡೆನ್‌ನಂತಹ ಆಧುನಿಕ ಕಾಲದ ರಾಕ್ಷಸ ಸಹ ಮನುಷ್ಯ ಜಾತಿಗೆ ಬಂದಿರುವ ಸಮಾನ ವಿಪತ್ತಿನ ಬಗ್ಗೆ ಮಾತನಾಡುತ್ತಿರುವುದನ್ನು ಕಂಡಾಗ ಎಲ್ಲರೂ ಒಟ್ಟಾಗುತ್ತಿದ್ದಾರೆ ಎಂದೆನಿಸದಿರದು. ಈ ಸಮಸ್ಯೆಯ ಸಂಕೀರ್ಣತೆಯಿಂದಾಗಿ ಎಲ್ಲರಿಗಿಂತ ಹೆಚ್ಚಾಗಿ ವಿಶ್ವದ ರಾಜಕೀಯ ನಾಯಕತ್ವ ಮಾತ್ರ ಇದನ್ನು ಪರಿಣಾಮಕಾರಿಯಾಗಿ ಎದುರುಗೊಳ್ಳಬಹುದು. ಆದರೆ, ಆಡಳಿತವನ್ನು ಆರ್ಥಿಕಪ್ರಗತಿಯ ದೃಷ್ಟಿಯಿಂದಷ್ಟೆ ನೋಡುತ್ತಿರುವ ಪಾಶ್ಚಾತ್ಯ ಪ್ರಜಾಪ್ರಭುತ್ವ ಸರ್ಕಾರಗಳು, ಅವರನ್ನೆ ಹಿಂಬಾಲಿಸುತ್ತಿರುವ ತೃತೀಯ ಜಗತ್ತಿನ ರಾಷ್ಟ್ರಗಳು, ನೈತಿಕತೆಯ ದನಿ ಕಳೆದುಕೊಳ್ಳುತ್ತಿರುವ ಅಥವ ಕಳೆದುಕೊಂಡಿರುವ ವಿಶ್ವ ನಾಯಕತ್ವ; ಇವೆಲ್ಲವೂ ಬೇರೆಯ ವಾಸ್ತವವನ್ನೆ ಹೇಳುತ್ತಿವೆ.

ಆಗಾಗ ಸಹಜವಾಗಿ ತಾನೆ ಬಿಸಿಯಾಗಿ ಶಾಂತವಾಗುವ ಭೂಮಿಗೆ ಬೇರೊಬ್ಬರು ಅಂದರೆ ಮನುಷ್ಯನೂ ಬೆಂಕಿ ಹಚ್ಚಲು ಸಾಧ್ಯವಿದ್ದಂತಿದೆ. ಆದರೆ ಅದಕ್ಕೆ ಬೆಂಕಿ ಹಚ್ಚುವ ಮೊದಲು ಮನುಷ್ಯ ಯೋಚಿಸಬೇಕಿದೆ. ಯಾಕೆಂದರೆ ಇದು ತನ್ನ ತಲೆಯ ಮೇಲೆ ಕೈ‌ಇಟ್ಟುಕೊಂಡ ಭಸ್ಮಾಸುರನ ಕತೆಯಂತೆ. ತನಗೆ ದೊರೆತಿರುವ ವರದ (ಇಲ್ಲಿ ಶಾಪ ಎನ್ನುವುದೇ ಸೂಕ್ತ) ಮಹಿಮೆ ನೋಡಲು ಅವನೇ ಇರುವುದಿಲ್ಲ...

No comments: