Dec 24, 2006

ಅಣ್ವಸ್ತ್ರ ಒಪ್ಪಂದಕ್ಕೆ ವಿರೋಧವೇಕೆ?

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಜನವರಿ 5, 2007 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಇಬ್ಬರು ಬದ್ಧ ವಿರೋಧಿಗಳು ಒಂದು ವಿಷಯದ ಮೇಲೆ ಸಹಮತ ವ್ಯಕ್ತಪಡಿಸುವುದು ಬಹಳ ಅಪರೂಪ. ಅಮೇರಿಕದ ಸೆನೆಟ್ ಭಾರತದೊಂದಿಗಿನ ಹೊಸ ಅಣ್ವಸ್ತ್ರ ಒಪ್ಪಂದಕ್ಕೆ ಅನುಮೋದನೆ ನೀಡಿ, ಜಾರ್ಜ್ ಬುಷ್ ಅದಕ್ಕೆ ಸಹಿ ಹಾಕಿದ ನಂತರ ಭಾರತದಲ್ಲಿ ಎಡಪಂಥೀಯ ಕಮ್ಯುನಿಸ್ಟ್ ಪಕ್ಷಗಳು ಹಾಗು ಬಲಪಂಥೀಯ ಬಿಜೆಪಿ ಆ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿದವು. ಇಂತಹುದು ಅಪರೂಪವಾದರೂ ಇದರಲ್ಲಿ ಆಶ್ಚರ್ಯ ಪಡುವಂತಹುದು ಏನೂ ಇಲ್ಲ. ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ಕೊಟ್ಟಿರುವ ಎಡಪಂಥೀಯರಿಗೆ ಅಮೇರಿಕವನ್ನು ವಿರೋಧಿಸುವುದೆ ಮುಖ್ಯ ಅಜೆಂಡ. ಕಾಳಜಿಯಿಂದ, ಭಾವೋನ್ಮಾದತೆಯಿಂದ, ಸಭೆ ಒಪ್ಪಿಕೊಳ್ಳುವಂತೆ ಮಾತನಾಡಲು ಕಮ್ಯುನಿಸ್ಟರಿಗೆ ಅಮೇರಿಕ ಮತ್ತು ಕಾರ್ಮಿಕರು ಬೇಕೆ ಬೇಕು. ಇನ್ನು ಅಮೇರಿಕದ ಅನೇಕ ವಿಚಾರಧಾರೆಗಳನ್ನು ಒಪ್ಪಿಕೊಳ್ಳುವ ಭಾಜಪ ಈಗ ವಿರೋಧ ಪಕ್ಷದ ಸ್ಥಾನದಲ್ಲಿದೆ. ಸರ್ಕಾರ ಮಾಡುವ ಪ್ರತಿಯೊಂದನ್ನೂ ಏನೋ ತಪ್ಪು ಹುಡುಕಿ ಟೀಕಿಸುವುದು ಅವರಿಗೆ ಆಸ್ತಿತ್ವದ ಪ್ರಶ್ನೆ. ಉತ್ತರ ಪ್ರದೇಶದ ಚುನಾವಣೆ ಹತ್ತಿರ ಬಂದಿರುವ ಈ ಸಮಯದಲ್ಲಿ ದೇಶಕ್ಕೆ ಹಾನಿ ಎಂದು ತಿರುಚಿಯೊ ಪರಚಿಯೊ ಹೇಳಬಹುದಾದ ಯಾವ ಅವಕಾಶವನ್ನೂ ಅವರು ಕಳೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ.

ಭಾರತ ಮೊಟ್ಟ ಮೊದಲ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದು ಸೆಪ್ಟೆಂಬರ್ 7, 1972 ರಲ್ಲಿ, ಇಂದಿರಾ ಗಾಂಧಿಯವರ ಸರ್ಕಾರದ ನೇತೃತ್ವದಲ್ಲಿ. ಇದಾದ ನಂತರ ಮತ್ತೊಂದು ಪರೀಕ್ಷೆ ನಡೆಸಲು ಸಾಧ್ಯವಾಗಿದ್ದು 26 ವರ್ಷಗಳ ನಂತರವೆ, 1998 ರಲ್ಲಿ. ಈ 26 ವರ್ಷಗಳ ನಡುviನ ಅವಧಿಯಲ್ಲಿ ಮತ್ತೊಂದು ಅಣು ಪರೀಕ್ಷೆ ನಡೆಸಲು ಭಾರತ ರಹಸ್ಯವಾಗಿ ಪ್ರಯತ್ನಿಸುತ್ತಲೆ ಇತ್ತು. 1982, 1995, ಹಾಗೂ 1997 ರಲ್ಲಿ ಪರೀಕ್ಷೆ ಮಾಡಬೇಕು ಎಂದು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ಅಮೇರಿಕದ CIA ಗೆ ಅದು ಉಪಗ್ರಹಗಳ ಮೂಲಕ ಗೊತ್ತಾಗಿ ಭಾರತ ಆ ಸಾಹಸಕ್ಕೆ ಕೈ ಹಾಕದಂತೆ ಪ್ರತಿಬಾರಿಯೂ ಅಮೇರಿಕ ತಡೆದಿತ್ತು.

ಹಿಂದಿನ ಈ ಎಲ್ಲಾ ಒತ್ತಡಗಳನ್ನು ತಿಳಿದಿದ್ದ ಭಾರತೀಯ ಸೇನೆ, ಭಾಭಾ ಅಣು ಸಂಶೋಧನಾ ಕೇಂದ್ರ ಮತ್ತು DRDO ದ ವಿಜ್ಞಾನಿಗಳು, ಅಮೇರಿಕದ ಹದ್ದಿನ ಕಣ್ಣನ್ನು ತಪ್ಪಿಸಿ ಪರೀಕ್ಷೆ ನಡೆಸುವ ಯೋಜನೆಯೊಂದಿಗೆ 1998 ರಲ್ಲಿ ಸಿದ್ದವಾದರು. ಆಗ ಇದ್ದದ್ದು ವಾಜಪೇಯವರ ಸರ್ಕಾರ. ಈ ಬಾರಿ ಎಲ್ಲ ರೀತಿಯಿಂದಲೂ ಅಮೇರಿಕದ ಗೂಢಾಚಾರಿ ಕಣ್ಣುಗಳಿಗೆ ಚಳ್ಳೆಹಣ್ಣು ತಿನ್ನಿಸುವಲ್ಲಿ ಸಫಲರಾಗಿ ಯಾವುದೇ ಸುಳಿವು ನೀಡದಂತೆ ಮೇ 11, 1998 ರಂದು ಅಣ್ವಸ್ತ್ರ ಪರೀಕ್ಷೆ ನಡೆಸಿಯೇ ಬಿಟ್ಟರು. ಎರಡು ದಿನದ ನಂತರ, ಅಂದರೆ ಮೇ 13 ರಂದು ಮತ್ತೊಮ್ಮೆಯೂ ಭೂಮಿಯ ಒಳಗೆ ಅಣು ಬಾಂಬ್ ಸಿಡಿಸುವಲ್ಲಿ ಯಶಸ್ವಿಯಾದರು. ರಾಷ್ಟ್ರೀಯತೆಯ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದ್ದ ಭಾಜಪದವರು ಇದು ತಮ್ಮದೇ ಸಾಧನೆ ಎಂದು ಸಾರಿಕೊಂಡರು. ಆದರೆ ಇದು ಒಂದು ಪಕ್ಷದ ಸರ್ಕಾರ ಮಾಡಿದ್ದು ಎನ್ನುವುದಕ್ಕಿಂತ ಭಾರತದ ಸರ್ಕಾರ ವರ್ಷಾನುಗಟ್ಟಲೆ ಚಾಲ್ತಿಯಲ್ಲಿಟ್ಟಿದ್ದ ಯೋಜನೆ ಇದಾಗಿದ್ದು, ಅದು ಯಶಸ್ವಿಯಾಗಿದ್ದು ಮಾತ್ರ 1998 ರಲ್ಲಿ ಎನ್ನುವುದಷ್ಟೆ ನಿಜ. ಇದನ್ನೆಲ್ಲ ಇಂಡಿಯಾ ಟುಡೆ ಇಂಗ್ಲಿಷ್ ವಾರಪತ್ರಿಕೆಯ ಸಂಪಾದಕರಾದ ರಾಜ್ ಚೆಂಗಪ್ಪ "WEAPONS OF PEACE" ಎಂಬ ತಮ್ಮ ಪುಸ್ತಕದಲ್ಲಿ ವಿವರವಾಗಿ ದಾಖಲಿಸಿದ್ದಾರೆ. ಅಂದ ಹಾಗೆ, 1998 ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆದಾಗ DRDO ದ ಮುಖ್ಯಸ್ಥರಾಗಿದ್ದವರು ಹಾಗು ಆ ಪರೀಕ್ಷೆಯ ಸಮಯದಲ್ಲಿ ಉಸ್ತುವಾರಿ ಮಾಡುವಾಗ ಮಿಲಿಟರಿ ಸಮವಸ್ತ್ರ ಧರಿಸಿ ಪೋಖ್ರಾನ್ ಸಂದರ್ಶಿಸುತ್ತಿದ್ದವರು ಈಗಿನ ರಾಷ್ಟ್ರಪತಿಗಳಾದ ಅಬ್ದುಲ್ ಕಲಮ್‌ರು.

ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿದ 15 ದಿನಕ್ಕೆಲ್ಲ ಪಾಕಿಸ್ತಾನವೂ ಅಣ್ವಸ್ತ್ರ ಪರೀಕ್ಷೆ ನಡೆಸಿತು. ಎರಡೂ ದೇಶಗಳ ಮೇಲೆ ಪಾಶ್ಚಾತ್ಯ ದೇಶಗಳು ಅನೇಕ ರೀತಿಯ ದಿಗ್ಬಂಧನಗಳನ್ನು ಹೇರಿದವು. ಅಣು ಸಂಬಂಧಿ ಸಂಶೋಧನೆ ಹೊರತು ಪಡಿಸಿ ಮಿಕ್ಕವುಗಳ ಮೇಲೆ ಈ ದಿಗ್ಬಂಧನಗಳು ಭಾರತದ ಮೇಲೆ ಮತ್ಯಾವ ದೊಡ್ಡ ಪರಿಣಾಮಗಳನ್ನೂ ಬೀರಲಿಲ್ಲ. ಅದಕ್ಕೆ ಕಾರಣ ಭಾರತದಲ್ಲಿ ಅಷ್ಟೊತ್ತಿಗೆ ಬೆಳವಣಿಗೆಯಲ್ಲಿದ್ದ ಉದಾರೀಕರಣ ಮತ್ತು ಆರ್ಥಿಕ ಅಭಿವೃದ್ಧಿ. ಭಾರತದಿಂದ ಲಾಭ ಮಾಡಿಕೊಳ್ಳುವ ಯಾವ ಅವಕಾಶವನ್ನೂ ಬಹುರಾಷ್ಟ್ರೀಯ ಕಂಪನಿಗಳು ಕಳೆದುಕೊಳ್ಳಲು ಇಷ್ಟ ಪಡದ ಕಾರಣದಿಂದ ಭಾರತಕ್ಕೂ ಲಾಭವಾಯಿತು. ಸಾಫ್ಟ್‌ವೇರ್, ಷೇರು ಮಾರುಕಟ್ಟೆ, ಮೂಲಭೂತ ಸೌಕರ್ಯ ಇಲ್ಲೆಲ್ಲ ವಿದೇಶಿ ಕಂಪನಿಗಳು ತೊಡಗಿಕೊಂಡವು. ಅಮೇರಿಕ ಒಂದೊಂದೆ ದಿಗ್ಬಂಧನವನ್ನು ತೆಗೆಯುತ್ತ ಬಂತು. ಆದರೆ ಅಣು ಸಂಶೋಧನೆಗೆ ಸಂಬಂಧಿಸಿದಂತೆ ತನ್ನ ನಿಲುವುಗಳನ್ನು ಸಡಿಲಿಸಲಿಲ್ಲ. ಹಾಗಾಗಿ ಆ ವಿಷಯದಲ್ಲಿ ಭಾರತಕ್ಕೆ ಅಪಾರ ಹಿನ್ನಡೆ, ನಷ್ಟವಾಗಿದ್ದು ನಿಜ. ಯಾಕೆಂದರೆ, ಅಣು ಸಂಶೋಧನೆಂದ ಕೇವಲ ಮಿಲಿಟರಿ ಅಸ್ತ್ರಗಳನ್ನು ಮಾತ್ರ ತಯಾರಿಸಲಾಗುವುದಿಲ್ಲ. ಬದಲಿಗೆ ಅದನ್ನು ವಿದ್ಯುತ್ ಉತ್ಪಾದನೆಯಂತಹ ಜನಸಾಮಾನ್ಯರ ಉಪಯೋಗಕ್ಕೂ ಬಳಸಬಹುದು. ಇದಕ್ಕೆಲ್ಲ ಬೇಕಾದಷ್ಟು ತಂತ್ರಜ್ಞಾನವಾಗಲಿ, ಬೃಹತ್ ಯಂತ್ರಗಳಾಗಲಿ, ಯುರೇನಿಯಮ್‌ನಂತಹ ಕಚ್ಚಾವಸ್ತುವಾಗಲಿ ಭಾರತದ ಬಳಿ ಇರಲಿಲ್ಲ. ದಿಗ್ಬಂಧನದ ಕಾರಣದಿಂದ ಇದನ್ನು ಅಂತರ್ರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ಮುಕ್ತ ಮಾರುಕಟ್ಟೆಯಲ್ಲಿಯೂ ಕೊಳ್ಳುವ ಹಾಗಿರಲಿಲ್ಲ. ಹೀಗಾಗಿ ಈ ದಿಗ್ಬಂಧನವನ್ನು ಕನಿಷ್ಠ ಸಿವಿಲ್ ಉದ್ದೇಶಗಳಿಗಾದರೂ ತೆರವು ಗೊಳಿಸುವುದು ಭಾರತಕ್ಕೆ ಅತ್ಯವಶ್ಯವಾಗಿತ್ತು.

ಈ ಮಧ್ಯೆ ಅಮೇರಿಕಕ್ಕೂ ಇದನ್ನು ತೆರವು ಮಾಡದೆ ವಿಧಿ ಇರಲಿಲ್ಲ. ಭಾರತ ಮತ್ತು ಚೀನಾದ ಆರ್ಥಿಕತೆ ಬೆಳೆಯುತ್ತಿರುವಂತೆ ಈ ದೇಶಗಳ ತೈಲ ಅವಶ್ಯಕತೆಯೂ ಹೆಚ್ಚಾಗುತ್ತಿದೆ. ಅದು ತೈಲದ ಬೆಲೆ ಹೆಚ್ಚಾಗುವಂತೆ ಮಾಡುವುದರ ಜೊತೆಗೆ ಅಮೇರಿಕ ಮಧ್ಯಪ್ರಾಚ್ಯದ ಮುಸ್ಲಿಮ್ ರಾಷ್ಟ್ರಗಳ ಮೇಲಿನ ಅವಲಂಬನೆಯೂ ಹೆಚ್ಚಾಗುವಂತೆ ಮಾಡುತ್ತಿದೆ. ಮಧ್ಯಪ್ರಾಚ್ಯದಲ್ಲಿ ಭಯೋತ್ಪಾದಕತೆ ಮತ್ತು ಮುಸ್ಲಿಮ್ ಉಗ್ರವಾದವನ್ನು ಕಮ್ಮಿ ಮಾಡಿ, ಅಲ್ಲಿ ನಿಧಾನವಾಗಿ ಪ್ರಜಾಪ್ರಭುತ್ವವನ್ನು ಪೋಷಿಸಬೇಕೆಂಬ ಅಮೇರಿಕದ ದೂರಾಲೋಚನೆಗೂ ಇದು ಅಡ್ಡಗಾಲು ಹಾಕುತ್ತಿದೆ. ಇರಾನ್‌ನಂತಹ ಮೂಲಭೂತವಾದಿ ರಾಷ್ಟ್ರವನ್ನು ಸಹ ಎದುರು ಹಾಕಿಕೊಳ್ಳುವ ಕಂಫರ್ಟಬಲ್ ಸ್ಥಿತಿಯಲ್ಲಿ ಅಮೇರಿಕ ಇಲ್ಲ. ಹೀಗಾಗಿ, ಭಾರತದ ತೈಲದ ಮೇಲಿನ ಅವಲಂಬನೆ ಕಮ್ಮಿಯಾಗಿ, ಅದು ಅಣು ವಿಜ್ಞಾನವನ್ನು ಶಕ್ತಿಮೂಲಕ್ಕೆ ಬಳಸಿಕೊಳ್ಳುವುದಾದರೆ ಅದು ಅಮೇರಿಕಕ್ಕೂ ಅಪೇಕ್ಷಣೀಯ. ಅದರ ಜೊತೆಗೆ ಭಾರತಕ್ಕೆ ಬೇಕಾದ ಯುರೇನಿಯಮ್ ಮಾರಾಟದಿಂದ, ಯಂತ್ರ ಮತ್ತು ತಂತ್ರಜ್ಞಾನದ ಮಾರಾಟದಿಂದ ಅಮೇರಿಕದ ಅನೇಕ ಬಹುರಾಷ್ಟ್ರೀಯ ಕಂಪನಿಗಳಿಗೆ ಶತಕೋಟಿಗಟ್ಟಲೆ ಡಾಲರ್‌ಗಳ ವ್ಯಾಪಾರ ಆಗಿಯೇ ತೀರುತ್ತದೆ. ಅದರಿಂದ ಅಮೇರಿಕದ ಆರ್ಥಿಕ ಬೆಳವಣಿಗೆಗೂ ಲಾಭ. ಅವರಿಗೆ ಈ ಒಪ್ಪಂದದಿಂದ ಕಳೆದುಕೊಳ್ಳುವುದು ಏನೂ ಇಲ್ಲ.

ಇನ್ನು ನಮಗೆ: ನಮಗೂ ಕಳೆದುಕೊಳ್ಳುವುದು ಏನೂ ಇಲ್ಲ ಎಂದೇ ಹೇಳಬೇಕು. ಈ ಒಪ್ಪಂದದ ಪ್ರಕಾರ ಸಿವಿಲ್ ಉದ್ದೇಶದ ಅಣುಕೇಂದ್ರಗಳನ್ನಷ್ಟೆ ಅಮೇರಿಕ ಸರ್ಕಾರ ಪರಿಶೀಲಿಸಲು ಸಾಧ್ಯ. ಪರಿಶೀಲನಾ ಪಟ್ಟಿಯಲ್ಲಿ ಭಾರತದ ಮಿಲಿಟರಿ ಪ್ಲಾಂಟ್‌ಗಳು ಸೇರಿಲ್ಲ. ಆ ಸಾರ್ವಭೌಮತೆಯನ್ನು ಸರ್ಕಾರ ಉಳಿಸಿಕೊಂಡಿದೆ. ಇನ್ನು, ನಾವು ಅಣು ಬಾಂಬ್ ಹೊಂದಿದ ಮಾತ್ರಕ್ಕೆ ಯಾರನ್ನು ಬೇಕಾದರೂ ಹೆದರಿಸಬಹುದು ಎನ್ನುವುದು ಬಾಲಿಶ ಚಿಂತನೆ. ಈ ಹೊಸ ಯುಗದಲ್ಲಿ ಒಂದು ಬಲಿಷ್ಠ ದೇಶ ಇನ್ನೊಂದು ದೇಶದ ಅಧಿಕಾರಸ್ಥರನ್ನು ಕೆಳಗಿಳಿಸಬಹುದೆ ಹೊರತು ಇಡೀ ದೇಶವನ್ನು ಅಲ್ಲಿನ ಜನರಿಗೆ ವಿರೋಧವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಭಾರತ ಈಗ ಮಾಡಬೇಕಿರುವುದು ಎಲ್ಲಾ ರೀತಿಂದಲೂ ತಾನು ಸ್ವಾವಲಂಬನೆ ಸಾಧಿಸುವುದು, ಜನರ ಜೀವನ ಮಟ್ಟ ಸುಧಾರಿಸಿ ಅವರಲ್ಲಿ ಇನ್ನೊಂದು ದೇಶಕ್ಕೆ ತಲೆಬಾಗದ ರಾಷ್ಟ್ರೀಯತೆ ಬೆಳೆಸುವುದು, ಹಾಗೂ ಕನಿಷ್ಠ ಕೆಲವಾದರೂ ದೇಶಗಳು ಆರ್ಥಿಕವಾಗಿ ತನ್ನ ಮೇಲೆ ಅವಲಂಬನೆ ಬೆಳೆಸಿಕೊಳ್ಳುವಂತೆ ಮಾಡುವುದು. ಆಗ ನಮ್ಮ ಯುದ್ಧವನ್ನು ಅವರೇ ಮಾಡುತ್ತಾರೆ. ಅಮೇರಿಕದ ಯುದ್ಧವನ್ನು ಇಂಗ್ಲೆಂಡ್, ಆಸ್ಟ್ರೇಲಿಯ, ಇಟಲಿ, ಕೆನಡ, ಮತ್ತಿತರ ನ್ಯಾಟೋ ರಾಷ್ಟ್ರಗಳು ಮಾಡುವಂತೆ!

ಅಂದ ಹಾಗೆ: ಇಂತಹ ರಾಷ್ಟ್ರೀಯ ವಿಷಯಗಳನ್ನೆಲ್ಲ ಗಂಭೀರವಾಗಿ ಚರ್ಚಿಸಬಲ್ಲಂತಹ ಒಬ್ಬರೇ ಒಬ್ಬ ಎಂ.ಪಿ.ಯನ್ನಾದರೂ ನಾವು ಕರ್ನಾಟಕದಿಂದ ಆರಿಸಿದ್ದೇವಾ? ಸಂದೇಹ! ಇಲ್ಲದಿದ್ದರೆ, What a shame!

No comments: