Aug 26, 2008

ಜಯಪ್ರದ, ವಿಜಯಶಾಂತಿ, ರೋಜಾ, ಬಾಲಕೃಷ್ಣ...

(ಜನವರಿ 2008 ರಲ್ಲಿ ಬರೆದ ಲೇಖನ ಇದು. "ವಿಕ್ರಾಂತ ಕರ್ನಾಟಕ" ವಾರಪತ್ರಿಕೆಯ ಜನವರಿ 18, 2008 ರ ಸಂಚಿಕೆಯ ಮುಖಪುಟ ಲೇಖನವಾಗಿ ಪ್ರಕಟವಾಗಿದೆ. ಚಿರಂಜೀವಿಯ ರಾಜಕೀಯ ಪ್ರವೇಶ ಈಗ "ಪ್ರಜಾ ರಾಜ್ಯಂ" ಪಕ್ಷದ ಆರಂಭದೊಂದಿಗೆ ಆರಂಭವಾಗಿದುವ ಸಂದರ್ಭದಲ್ಲಿ ಇಲ್ಲಿ.)

-ಮೊದಲ ಭಾಗ
-- ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?"

ಆಂಧ್ರದಿಂದ ಹಾರಿಹೋದ ಶಾಕುಂತಲೆ
ಕನ್ನಡದ ಪ್ರೀತಿಯ ಅಣ್ಣಾವ್ರು ನಟಿಸಿರುವ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಕಾಳಿದಾಸನ ಹೆಂಡತಿಯಾಗಿ, ಕವಿಕಲ್ಪನೆಯ ಶಾಕುಂತಲೆಯಾಗಿ, "ಪ್ರಿಯತಮಾ, ಕರುಣೆಯಾ ತೋರೆಯಾ?" ಎಂದು ಕೇಳಿದ ಸುಂದರಿ ಜಯಪ್ರದ ಆಂಧ್ರದ ರಾಜಕೀಯದಲ್ಲಿ ಸಾಕಷ್ಟು ಲಾಭ ಮಾಡಿಕೊಂಡಾಕೆ. ಎನ್.ಟಿ.ಆರ್. ಸತ್ತ ನಂತರ ಜಯಪ್ರದರನ್ನು ರಾಜಕೀಯಕ್ಕೆ ಎಳೆದುಕೊಂಡ ಚಂದ್ರಬಾಬು ನಾಯ್ಡು, ಅವರನ್ನು ತಮ್ಮ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆಯನ್ನಾಗಿ ಮಾಡಿ, ಏಳೆಂಟು ವರ್ಷದ ಹಿಂದಿನ ಚುನಾವಣೆಯಲ್ಲಿ ವ್ಯಾಪಕವಾಗಿ ಪ್ರಚಾರಕ್ಕೆ ಬಳಸಿಕೊಂಡರು. ನಂತರ ತಮ್ಮ ಪಕ್ಷದಿಂದ ಆಕೆಯನ್ನು ರಾಜ್ಯಸಭೆಗೆ ಆರಿಸಿ ಕಳುಹಿಸಿದರು. ಇಪ್ಪತ್ತೈದು ವರ್ಷಗಳ ಹಿಂದೆಯೆ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಜಯಪ್ರದ, ನಾಯ್ಡುವಿನೊಂದಿಗೆ ಭಿನ್ನಾಭಿಪ್ರಾಯ ಬಂದಿದ್ದೆ, ತಕ್ಷಣ ಹಿಂದಿ ರಾಜ್ಯವಾದ ಉತ್ತರಪ್ರದೇಶಕ್ಕೆ ಹೋಗಿ, ಅಲ್ಲಿ ಮುಲಾಯಂ ಸಿಂಗರ ಪಾರ್ಟಿಯಿಂದ ಕಳೆದ ಬಾರಿ ಲೋಕಸಭೆಗೆ ನಿಂತು ಅಲ್ಲಿಯೂ ಆರಿಸಿ ಬಂದರು. ಒಮ್ಮೆ ತೆಲುಗು ಭಾಷೆಯ ದಕ್ಷಿಣದ ರಾಜ್ಯದ ಪ್ರಾದೇಶಿಕ ಪಕ್ಷದಿಂದ ರಾಜ್ಯಸಭೆಗೆ. ಮತ್ತೊಮ್ಮೆ ಹಿಂದಿ ಭಾಷೆಯ ಉತ್ತರದ ರಾಜ್ಯದ ಪ್ರಾದೇಶಿಕ ಪಕ್ಷದಿಂದ ಲೋಕಸಭೆಗೆ. ಹೀಗೆ ಉತ್ತರ-ದಕ್ಷಿಣದಲ್ಲೆಲ್ಲ ತನ್ನ ಸಿನೆಮಾ ಗ್ಲಾಮರ್‌ನಿಂದಾಗಿ ಸಲ್ಲುತ್ತಿರುವ ಈ ನಟಿ, ಈಗಲೂ ಸಿನೆಮಾದಲ್ಲಿ ನಟಿಸುವುದನ್ನು ಬಿಟ್ಟಿಲ್ಲ. ಕೆಲವೆ ವಾರಗಳ ಹಿಂದೆ ಈಕೆ ಕನ್ನಡದಲ್ಲಿ ನಟಿಸಿರುವ "ಈ ಬಂಧನ" ಚಿತ್ರ ಬಿಡುಗಡೆ ಆಗಿದೆ. ನಿಜಕ್ಕೂ ಈ ನಟಿ ತಾನು ಲೋಕಸಭೆಯ ಸದಸ್ಯೆಯಾಗಿ ನಿರ್ವಹಿಸಬೇಕಾದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆಯೆ? ಮನುಷ್ಯನ ಜಾತಿ, ಬಣ್ಣ, ಲಿಂಗ, ಬಾಹ್ಯ ಸೌಂದರ್ಯ, ದುಡ್ಡು, ಬಾಹುಬಲ, ಮುಂತಾದ ಕ್ಷುಲ್ಲಕ ವಿಷಯಗಳನ್ನಷ್ಟೆ ನೋಡಿ, ಅಯೋಗ್ಯರನ್ನೆಲ್ಲ ಆರಿಸುವ ಭಾರತದ ಪ್ರಜೆ ನಿಜಕ್ಕೂ ಜವಾಬ್ದಾರಿಯನ್ನು ತೋರಿಸುತ್ತಿದ್ದಾನೆಯೆ ಎನ್ನುವುದೆ ಬಹುಶಃ ಸರಿಯಾದ ಪ್ರಶ್ನೆ, ಅಲ್ಲವೆ? ಇದೇ ಸಮಯದಲ್ಲಿ, ನೂರಾರು ಅಯೋಗ್ಯರಿರುವ ಶಾಸನಸಭೆಗಳ ವಿಷಯದಲ್ಲಿ ಕೇವಲ ಜಯಪ್ರದಾರ ವಿಷಯಕ್ಕೆ ಈ ಪ್ರಶ್ನೆ ಕೇಳಿದರೆ, ಅದು ಕ್ರೂರವಾಗಿಬಿಡುತ್ತದೆ ಎನ್ನುವುದೂ ಒಪ್ಪಬೇಕಾದದ್ದೆ.

ಅಮ್ಮಾ, ತಾಯೆ, ತೆಲಂಗಾಣ- ವಿಜಯಶಾಂತಿಯ ಮಂತ್ರಪಠಣ
ಕರ್ನಾಟಕ ಏಕೀಕರಣವಾಗುವ ತನಕ ಕನ್ನಡ ಜಿಲ್ಲೆಗಳಾದ ಗುಲ್ಬರ್ಗ, ಬೀದರ್, ರಾಯಚೂರು ಜಿಲ್ಲೆಗಳು ಹೈದರಾಬಾದ್ ರಾಜ್ಯಕ್ಕೆ ಸೇರಿದ್ದವು. ಹಾಗಾಗಿಯೆ ಆ ಭಾಗಕ್ಕೆ ಹೈದರಾಬಾದ್ ಕರ್ನಾಟಕ ಎನ್ನುವುದು. ಹೈದರಾಬಾದ್ ರಾಜ್ಯದಲ್ಲಿ ಇದ್ದ ತೆಲುಗು ಭೂಪ್ರದೇಶವೆ ತೆಲಂಗಾಣ. ಹೈದರಾಬಾದ್ ಕರ್ನಾಟಕದಲ್ಲಿ, ವಿಶೇಷವಾಗಿ ಬೀದರ್‌ನಲ್ಲಿ ನಿಜಾಮರ ಪ್ರಭಾವದಿಂದಾಗಿ ಉರ್ದು-ಮಿಶ್ರಿತ ಕನ್ನಡವಿದೆ. ಅದೇ ರೀತಿ, ತೆಲಂಗಾಣದ ತೆಲುಗಿನಲ್ಲೂ ಉರ್ದುವಿನ ಪ್ರಭಾವ ಸ್ವಲ್ಪ ಹೆಚ್ಚಾಗಿಯೆ ಇದೆ. ಕನ್ನಡ ಸಿನೆಮಾಗಳಲ್ಲಿ ಇನ್‌ಸೆನ್ಸಿಟಿವ್ ನಿರ್ದೇಶಕರು ಹಾಸ್ಯಪ್ರಸಂಗಗಳಿಗೆ ಧಾರವಾಡ ಕನ್ನಡವನ್ನು ಬಳಸುವಂತೆ, ತೆಲುಗು ಚಿತ್ರಗಳಲ್ಲಿ ತೆಲಂಗಾಣ ಭಾಷೋಚ್ಚಾರವನ್ನು ಕಾಮೆಡಿ ಮಾಡಲು ಬಳಸಿಕೊಳ್ಳುತ್ತಾರೆ. ನಮ್ಮ ಹೈದರಾಬಾದ್ ಕರ್ನಾಟಕದಂತೆಯೆ, ತೆಲಂಗಾಣವೂ ಆರ್ಥಿಕವಾಗಿ ಹಿಂದುಳಿದ, ಸಾಮಾಜಿಕ ಅಸಮಾನತೆಗಳು ಹೆಚ್ಚಿರುವ, ಊಳಿಗಮಾನ್ಯ ಪದ್ದತಿ ಪ್ರಬಲವಾಗಿರುವ ಪ್ರದೇಶ. ರಾಯಲಸೀಮೆಯ ರೆಡ್ಡಿಗಳು ಮತ್ತು ಕರಾವಳಿ ಆಂಧ್ರದ ಕಮ್ಮರು ಪ್ರಬಲವಾಗಿರುವ ಆಂಧ್ರದ ರಾಜಕೀಯದಿಂದ ನಮ್ಮ ಸೀಮೆ ಅಭಿವೃದ್ಧಿಯಾಗುತ್ತಿಲ್ಲ ಎಂದು ತೆಲಂಗಾಣದ ಜನರು ಹಲವಾರು ದಶಕಗಳಿಂದ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡುತ್ತಲೆ ಬಂದಿದ್ದಾರೆ.

ಹೀಗೆ ಹೋರಾಡುತ್ತ ಬಂದ ಜನರ ಗುಂಪಿಗೆ ಇತ್ತೀಚಿನ ಸೇರ್ಪಡೆ, ಸಿನೆಮಾ ನಟಿ ವಿಜಯಶಾಂತಿ. ಬೆರಳೆಣಿಕೆಯಷ್ಟು ಕನ್ನಡ ಸಿನೆಮಾಗಳಲ್ಲಿಯೂ ನಟಿಸಿರುವ ವಿಜಯಶಾಂತಿ ಕನ್ನಡ ಸಿನೆಮಾ ಪ್ರೇಕ್ಷಕರಿಗೇನೂ ಅಪರಿಚಿತಳಲ್ಲ. ದಿಲ್ಲಿಯ ಟಫ್‌ಕಾಪ್ ಕಿರಣ್ ಬೇಡಿ ಯವರ ಧೈರ್ಯ-ಸಾಹಸಗಳಿಂದ ಪ್ರೇರಿತವಾದ "ಕರ್ತವ್ಯಂ" ಎಂಬ ಚಿತ್ರದಲ್ಲಿ ಈಕೆ ನಟಿಸಿದ್ದೆ, ಭಾರತದಲ್ಲೆಲ್ಲ ಈಕೆಯನ್ನು "ಆಂಗ್ರಿ ಯಂಗ್ ವುಮನ್," "ಲೇಡಿ ಅಮಿತಾಬ್," ಎಂದೆಲ್ಲ ಗುರುತಿಸುವಂತೆ ಮಾಡಿಬಿಟ್ಟಿತು. ಸಾಧ್ಯವಾದಾಗಲೆಲ್ಲ ನಾಯಕಿ ಪ್ರಧಾನವಾದ, ರಾಜಕೀಯ ಪ್ರೇರಿತವಾದ ಸಿನೆಮಾ ಮಾಡಿಕೊಂಡು ಬಂದ ವಿಜಯಶಾಂತಿಯ ಪೊಲಿಟಿಕಲ್ ಆಕ್ಟಿವಿಸಮ್ಮನ್ನು ಆಕೆಯ ಚಿತ್ರಗಳಿಂದಲೆ ಗುರುತಿಸಬಹುದಾಗಿತ್ತು. ಹತ್ತು ವರ್ಷಗಳ ಹಿಂದೆ ಆಂಧ್ರದಲ್ಲಿ ಅಡಿಪಾಯವೆ ಇಲ್ಲದ ಬಿ.ಜೆ.ಪಿ. ಸೇರಿಕೊಂಡ ತೆಲಂಗಾಣ ಮೂಲದ ಈ ನಟಿ, ಈಗ ಆ ಪಕ್ಷಕ್ಕೆ ಆಂಧ್ರದಲ್ಲಿ ಭವಿಷ್ಯವಿಲ್ಲ ಎಂತಲೊ ಏನೊ, ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಆಗ್ರಹಿಸಿ ಇತ್ತೀಚೆಗೆ ತಾನೆ "ತಾಯಿ ತೆಲಂಗಾಣ ಪಕ್ಷ" ಸ್ಥಾಪಿಸಿದ್ದಾಳೆ. ತನ್ನ ಸಿನೆಮಾಗಳಲ್ಲಿದ್ದ ಸ್ಪಷ್ಟತೆ ಮತ್ತು ಆದರ್ಶವನ್ನು ನಿಜಜೀವನದ ರಾಜಕೀಯಕ್ಕೆ ತರಲಾಗದೆ ಈಕೆ ಏನೆಲ್ಲ ಮಾಡುತ್ತಿದ್ದರೂ ಅದು ಪರಿಣಾಮಕಾರಿಯಾಗಿಲ್ಲ. ತೆಲಂಗಾಣದಲ್ಲಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಪ್ರಬಲವಾಗಿರುವ ಜಾತಿಗಳಾದ ವೆಲಮ ಅಥವ ರೆಡ್ಡಿ ಜಾತಿಗೆ ಸೇರಿಲ್ಲದ ವಿಜಯಶಾಂತಿಗೆ, ಜಾತಿಪ್ರೇಮದ ರಾಜಕಾರಣದಲ್ಲಿ ಗೆಲುವು ಸಿಗುವುದು ಕಷ್ಟವೆ; ಯಾವುದಾದರೂ ಒಳ್ಳೆಯ ಭಾವೋನ್ಮಾದದ ವಿಷಯಾಧಾರಿತ ಸಂದರ್ಭ ಕೂಡಿ ಬರದ ಹೊರತು.

ಸುವಾಸನೆ ಬೀರಲಿದ್ದಾಳೆಯೆ ರೋಜಾ?
ಹಿಂದಿ, ತೆಲುಗು, ತಮಿಳಿನ ಹೀರೋಯಿನ್‌ಗಳನ್ನೆಲ್ಲ ಕನ್ನಡಕ್ಕೆ ಎಳೆದು ತರುವ ರವಿಚಂದ್ರನ್ "ಹೂವಾ ರೋಜಾ ಹೂವಾ, ಹೂವಾ, ನನ್ನ, ಜೀವಾ..." ಎಂದು "ಕಲಾವಿದ" ಚಿತ್ರದಲ್ಲಿ ಗುಲಾಬಿ ಹೂವುಗಳಿಂದ ಶೃಂಗರಿಸಿದ್ದು ನಟಿ ರೋಜಾಳನ್ನು. ಈ ರೋಜಾ ಒಂದಷ್ಟು ಕಾಲ ತೆಲುಗು ಮತ್ತು ತಮಿಳು ಚಿತ್ರರಂಗಗಳೆರಡಲ್ಲೂ ಮಿಂಚಿಬಿಟ್ಟಳು. ಜಯಪ್ರದ ತೆಲುಗುದೇಶದ ಗಡಿ ದಾಟಿ ಉತ್ತರಪ್ರದೇಶದಲ್ಲಿ ಸಮಾಜವಾದಿಯಾದಾಗಿನಿಂದ ಅಂತಹುದೇ ಗ್ಲಾಮರ್‌ನ ಹುಡುಕಾಟದಲ್ಲಿದ್ದ ನಾಯ್ಡು, ಯಾವಾಗ ರೋಜಾಳಿಗೆ ರಾಜಕೀಯದಲ್ಲಿ ಆಸಕ್ತಿ ಇದೆ ಎಂದು ತಿಳಿಯಿತೊ, ತಕ್ಷಣ ತಮ್ಮ ಪಕ್ಷಕ್ಕೆ ಸೆಳೆದುಕೊಂಡು, ಆಕೆಯನ್ನೆ ಮಹಿಳಾ ಘಟಕದ ಅಧ್ಯಕ್ಷೆಯನ್ನಾಗಿ ಮಾಡಿಬಿಟ್ಟರು. ಜಾತಿವಾದಿ ರಾಜಕಾರಣದಲ್ಲಿ ಜಯಪ್ರದಾಳಿಗೆ ಇಲ್ಲದ ಒಂದು ಅಡ್ವಾಂಟೇಜ್ ರೋಜಾಳಿಗಿತ್ತು. ಅದು ಆಕೆ ಪ್ರಬಲವಾದ ರೆಡ್ಡಿ ಜಾತಿಗೆ ಸೇರಿದ್ದದ್ದು. ಅದನ್ನೆ ಉಪಯೋಗಿಸಿ ನಾಯ್ಡು ಕೋಲಾರದ ಪಕ್ಕದ ಚಿತ್ತೂರು ಜಿಲ್ಲೆಯಲ್ಲಿ ಆಕೆಯನ್ನು ಕಳೆದ ಸಲದ ವಿಧಾನಸಭಾ ಚುನಾವಣೆಗೆ ಇಳಿಸಿದರು. ಅದರೆ, ಕಾಂಗ್ರೆಸ್ ಪರ ಅಲೆಯಲ್ಲಿ ರೋಜಾಳ ಸುವಾಸನೆ ಮತದಾರರ ಮೂಗಿಗೆ ಸೋಕಲಿಲ್ಲ. ಇನ್ನೊಂದು ವರ್ಷಕ್ಕೆಲ್ಲ ಬರಲಿರುವ ಚುನಾವಣೆಯಲ್ಲಾದರೂ ರೋಜಾ ಸುವಾಸನೆ ಬೀರಲಿದ್ದಾಳೆಯೆ ಎನ್ನುವುದನ್ನು ನೋಡಬೇಕು. ಆದರೆ, ತಮ್ಮ ಹಣ ಮತ್ತು ಪ್ರಸಿದ್ಧಿಯನ್ನು ಇನ್ನಷ್ಟು ಹಣ ಮತ್ತು ಅಧಿಕಾರ ಲಾಭಕ್ಕಾಗಿ ಉಪಯೋಗಿಸಿಕೊಳ್ಳುವ ಇಂತಹ ಜನರಿಂದ ಜನರ ಜೀವನಮಟ್ಟ ಸುಧಾರಿಸುತ್ತದೆಯೆ ಎನ್ನುವುದು ಕೇಳಲೇ ಬೇಕಾದ ಪ್ರಶ್ನೆ.

ಬಾಲಕೃಷ್ಣ ಆಗುವನೆ ಅನ್ನಗಾರು?
ಅಣ್ಣಾವ್ರು ಎನ್.ಟಿ.ಆರ್. ರ ವಾರಸುದಾರರು ಯಾರು ಎನ್ನುವುದು ಕಳೆದ 25 ವರ್ಷಗಳಲ್ಲಿ ಆಂಧ್ರದಲ್ಲಿ ಪದೆಪದೆ ಕೇಳಿ ಬಂದ ಪ್ರಶ್ನೆ. ಅದಕ್ಕೆ ಒಮ್ಮೆ ಎನ್.ಟಿ.ಆರ್. ಸ್ವತಃ ತಮ್ಮ ಮಗ "ಯುವರತ್ನ" ಬಾಲಕೃಷ್ಣ ಎಂದಿದ್ದರು. ಕೊನೆಗೆ ಆ ವಾರಸುದಾರಿಕೆಯನ್ನು ಅಳಿಯ ಚಂದ್ರಬಾಬು ನಾಯ್ಡು ಕಿತ್ತುಕೊಂಡಾಗ ಅದಕ್ಕೆ ಬಾಲಕೃಷ್ಣನ ಸಮ್ಮತಿ ಇತ್ತು. ಮಾವನಿಗೆ ಬುದ್ಧಿ ಕಲಿಸಲು ಆಗ ಚಂದ್ರಬಾಬು ನಾಯ್ಡುಗೆ ಬಹಳ ಸಹಾಯ ಮಾಡಿದವರು ಅವರ ಷಡ್ಡಕ, ಎನ್.ಟಿ.ಆರ್‌ರ ಹಿರಿಯ ಅಳಿಯ ದಗ್ಗುಬಾಟಿ. ಇದೇ ದಗ್ಗುಬಾಟಿ ಮತ್ತು ಆತನ ಹೆಂಡತಿ ಪುರಂಧರೇಶ್ವರಿ ಕಳೆದ ಚುನಾವಣೆಯಲ್ಲಿ ನಾಯ್ಡುವಿನ ಮೇಲೆ ತಿರುಗಿ ಬಿದ್ದು ಕಾಂಗ್ರೆಸ್ ಸೇರಿದರು. ಆತ್ಮಗೌರವದ ಹೆಸರಿನಲ್ಲಿ ತನ್ನ ಅಪ್ಪ ಯಾವುದನ್ನು ವಿರೋಧಿಸಿದ್ದರೊ ಅದೇ ಪಕ್ಷದಿಂದ ಮಗಳು ಈಗ ಎಂ.ಪಿ.. ಅಷ್ಟೇ ಅಲ್ಲ, ಕೇಂದ್ರದಲ್ಲಿ ಮಂತ್ರಿ ಸಹ. ಕೆಲವೇ ದಿನಗಳ ಹಿಂದೆ ಆಕೆ ಒಂದು ಅಣಿಮುತ್ತನ್ನು ಉದುರಿಸಿದ್ದಾರೆ: ತನ್ನ ಅಪ್ಪನ ನಿಜ ವಾರಸುದಾರ ಈಗಿನ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಎಂದು!

ಚಿರಂಜೀವಿ ಬಿಟ್ಟರೆ ತೆಲುಗು ಸಿನೆಮಾ ರಂಗದಲ್ಲಿ ಹೆಚ್ಚಿನ ಸ್ಟಾರ್‌ಪವರ್ ಇರುವ ನಟ ಬಾಲಕೃಷ್ಣ. ಇತ್ತೀಚೆಗೆ ಬಾಲಕೃಷ್ಣ ತನ್ನ ಮಗಳನ್ನು ನಾಯ್ಡುವಿನ ಮಗನಿಗೆ ಧಾರೆಯೆರೆದು ಕೊಟ್ಟಿದ್ದಾರೆ. ರಾಜಕೀಯಕ್ಕೆ ಬರುವ ಆಕಾಂಕ್ಷೆಗಳು ಆತನಿಗೆ ತೀವ್ರವಾಗಿದ್ದರೂ ಬಹುಶಃ ಚಿತ್ರರಂಗದಲ್ಲಿಯೇ ನಂಬರ್ ಒನ್ ಆಗದ ತಾನು ರಾಜಕೀಯದಲ್ಲಿ ಗೆಲ್ಲುತ್ತೇನೆಯೆ ಎಂಬ ಸಂದೇಹದಿಂದಲೊ ಇಲ್ಲವೆ ಸೂಕ್ತ ಸಮಯಕ್ಕಾಗಿಯೊ ಕಾಯುತ್ತಿರುವಂತಿದೆ. ಇದೇ ಬಾಲಕೃಷ್ಣ ಒಂದೆರಡು ವರ್ಷದ ಹಿಂದೆ ನಿರ್ಮಾಪಕನೊಬ್ಬನ ಮೇಲೆ ಗುಂಡು ಹಾರಿಸಿದ್ದು ಬಾರಿ ಸುದ್ದಿಯಾಗಿತ್ತು. ಆದರೆ ಇಲ್ಲಿಯವರೆಗೂ ಕಾನೂನು ತನ್ನ ಕೆಲಸ ಪೂರೈಸಿದಂತಿಲ್ಲ.

ಬಾಲಕೃಷ್ಣ ನಟಿಸಿದ "ಸಮರಸಿಂಹ ರೆಡ್ಡಿ" ತೆಲುಗಿನಲ್ಲಿ ರಾಯಲಸೀಮೆಯ ರಕ್ತಪಾತದ ಫ್ಯಾಕ್ಷನಿಸಮ್ ಮತ್ತು ಪಾಳೆಯಗಾರಿಕೆಯ ಫಾರ್ಮುಲಾ ಕತೆಗಳಿಗೆ ದಾರಿ ಮಾಡಿಕೊಟ್ಟಿತು. ಅಲ್ಲಿಯವರೆಗೂ ರೆಡ್ಡಿ ಎಂಬ ಜಾತಿಸೂಚಕ ಪಾತ್ರಗಳನ್ನು ಪೋಷಿಸದೆ ಇದ್ದ ತೆಲುಗು ಸಿನೆಮಾಗಳಲ್ಲಿ ಇದ್ದಕ್ಕಿದ್ದಂತೆ ನಾಯಕನಟರೆಲ್ಲ ರೆಡ್ಡಿ ಎಂಬ ಹೆಸರಿನ ಪಾತ್ರಗಳಲ್ಲಿ ನಟಿಸಿಬಿಟ್ಟರು. ಸಣ್ಣಪುಟ್ಟ ನಾಯಕರಿಂದ ಹಿಡಿದು ಸೂಪರ್‌ಸ್ಟಾರ್‌ಗಳೆಲ್ಲ ಇದೇ ತರಹದ ಚಿತ್ರಗಳನ್ನು ಮಾಡಲಾರಂಭಿಸಿಬಿಟ್ಟರು. ಇದು ಎಷ್ಟರ ಮಟ್ಟಿಗೆ ಹಬ್ಬಿಬಿಟ್ಟಿತೆಂದರೆ ಸ್ವತಃ ಮೆಗಾಸ್ಟಾರ್ ಚಿರಂಜೀವಿ ಇದೇ ಫಾರ್ಮುಲಾದ ಮೇಲೆ "ಇಂದ್ರ" ಎನ್ನುವ ಸಿನೆಮಾ ಮಾಡಬೇಕಾಗಿ ಬಂತು. ಆದರಲ್ಲಿ ನಾಯಕನ ಹೆಸರು ಇಂದ್ರಸೇನ ರೆಡ್ಡಿ! ಈಗಲೂ ಆ ತರಹದ ಚಿತ್ರಗಳು ಬರುವುದು ನಿಂತಿಲ್ಲ. ಆದರೆ ಅಬ್ಬರ ಕಮ್ಮಿಯಾದಂತಿದೆ.


ಮೊದಲ ಭಾಗ
- ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?"

ಪೂರಕ ಓದಿಗೆ:
- ತೆಲುಗು ಸಿನೆಮಾ ರಂಗದಲ್ಲಿ ಕನ್ನಡಿಗರು
- ಕಾನೂನಿಗೆ ವಿರುದ್ಧವಾದರೂ ಇಬ್ಬರು ಹೆಂಡಿರು ಇರಲೇಬೇಕು

No comments: