(ವಿಕ್ರಾಂತ ಕರ್ನಾಟಕ - ನವೆಂಬರ್ 23, 2007 ರ ಸಂಚಿಕೆಯಲ್ಲಿನ ಬರಹ)
ಅಮೇರಿಕದಲ್ಲಿಯೆ ಹುಟ್ಟಿ ಬೆಳೆದ ಬಾಬ್ಬಿ ಜಿಂದಾಲ್ ಎಂಬ 36 ವರ್ಷದ ಯುವಕ ಅಮೇರಿಕದ ಲೆಕ್ಕಾಚಾರದಲ್ಲಿ ಹಿಂದುಳಿದ ರಾಜ್ಯವೆಂದು ಪರಿಗಣಿತವಾದ ಲೂಸಿಯಾನ ರಾಜ್ಯಕ್ಕೆ ಗವರ್ನರ್ ಆಗಿ ಒಂದೆರಡು ವಾರಗಳ ಹಿಂದೆ ಚುನಾಯಿಸಲ್ಪಟ್ಟ. ಆ ವಾರ್ತೆಯನ್ನು ಎಲ್ಲಾ ಮಾಮೂಲಿ ಸುದ್ದಿಗಳಂತೆ ರಾಯ್ಟರ್ಸ್, ಅಸ್ಸೊಸಿಯೇಟೆಡ್ ಪ್ರೆಸ್ ಮತ್ತಿತರ ಸುದ್ದಿ ಸಂಸ್ಥೆಗಳು ಪತ್ರಿಕಾಲಯಗಳಿಗೆ ಬಿಡುಗಡೆ ಮಾಡಿದವು. ಸಿಲಿಕಾನ್ ಕಣಿವೆ, ಹಾಲಿವುಡ್ ಮುಂತಾದ ವಿಶ್ವಪ್ರಸಿದ್ಧ ಸ್ಥಳಗಳನ್ನು ಹೊಂದಿರುವ, ಅಮೇರಿಕಾದಲ್ಲಿಯೆ ಅತ್ಯಂತ ಶ್ರೀಮಂತ ರಾಜ್ಯವಾದ ಕ್ಯಾಲಿಪೋರ್ನಿಯಾದ ರಾಜ್ಯಪಾಲನಾಗಿ ಒಂದೆರಡು ತಿಂಗಳ ಹಿಂದೆ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಎಂಬ ವಿಶ್ವಪ್ರಸಿದ್ಧ ಆಕ್ಷನ್ ನಟ ಪುನರ್ ಆಯ್ಕೆಗೊಂಡಾಗಲೆ ತಲೆ ಕೆಡಿಸಿಕೊಳ್ಳದ ಇಲ್ಲಿಯ ಮೀಡಿಯ ಬಾಬ್ಬಿ ಜಿಂದಾಲ್ ಆಯ್ಕೆಯ ಬಗ್ಗೆಯೂ ಅಷ್ಟೇನೂ ತಲೆಕೆಡಿಸಿಕೊಳ್ಳಲಿಲ್ಲ.
ಆದರೆ ಭೂಮಿಯ ಇನ್ನೊಂದು ಭಾಗದಲ್ಲಿದ್ದ ಭಾರತದಲ್ಲಿನ ಮಾಧ್ಯಮಗಳಿಗೆ ಇದೊಂದು ದೊಡ್ಡ ಸುದ್ದಿ. ಅಮೇರಿಕದಲ್ಲಿ ಎದ್ದ ಟೀ ಕಪ್ಪಿನ ಬಿರುಗಾಳಿ ಭಾರತೀಯರಿಗೆ ಕಾಣಿಸಿದ್ದು ಹಿಂದೂ ಮಹಾಸಾಗರದಲ್ಲಿನ ಚಂಡಮಾರುತವಾಗಿ! ಅನೇಕ ಕೋಮುವಾದಿ ಹಿಂದೂ ಭಕ್ತರೆಲ್ಲ "ಜಿಂದಾಲ್ ಎಂಬ ಭಾರತೀಯ ಮೂಲದ ಮನುಷ್ಯ ಅಮೇರಿಕದ ರಾಜ್ಯವೊಂದಕ್ಕೆ ರಾಜ್ಯಪಾಲನಾಗಿ ಆಯ್ಕೆಯಾದ" ಎಂಬ ಸುದ್ದಿ ಕೇಳಿ ಪುಳಕಗೊಂಡು ಬಿಟ್ಟರು. ತಮ್ಮ ಮತದ ಧ್ವಜ ಅಮೇರಿಕಲ್ಲಿಯೂ ಹಾರಾಡುತ್ತಿದೆ ಎಂದು ಹೆಮ್ಮೆ ಪಟ್ಟಿದ್ದೆ ಪಟ್ಟಿದ್ದು. "ನಮ್ ಹುಡುಗೀರು ಹೋಗಿ ಹೋಗಿ ಸಾಬರನ್ನೆ ಲವ್ ಮಾಡಿ ಮದುವೆ ಆಗ್ತವೆ... ಅವರು ಲವ್ ಮಾಡದಂತೆ ಘೋಷಾ ಹಾಕ್ರಿ, ಕಾವಲು ಕಾಯ್ರಿ... ಸಾಬರ ಮತಕ್ಕೆ, ಆ ಕ್ರಿಶ್ಚಿಯನ್ ಮತಕ್ಕೆ ನಮ್ಮವರು ಕನ್ವರ್ಟ್ ಆಗದಂತೆ ಕಾಪಾಡ್ರೀ... ಅಯ್ಯೋ, ಅಮ್ಮಾ ಅಪ್ಪಾ... ನಮ್ಮ ಮತಾನ ಕಾಪಾಡ್ರಿ..." ಎಂದೆಲ್ಲಾ ಚೀರಾಡುವ ಚಣ್ಣ ತೊಟ್ಟ ಬಾಲಕರೆಲ್ಲ "ಜಿಂದಾಲ್ ಜಿಂದಾಬಾದ್" ಎನ್ನಲಾರಂಭಿಸಿಬಿಟ್ಟರು! ಎಂತಹ ವಿಚಿತ್ರ ನೋಡಿ. ತಾನೆತಾನಾಗಿ ಹಿಂದೂ ಮತದಿಂದ ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡ ಪಕ್ಕಾ ರಾಜಕಾರಣಿಯೊಬ್ಬನನ್ನು ಈ ಹುಸಿ ಹಿಂದೂವಾದಿಗಳು ಭಾರತೀಯ (ಅಂದರೆ ಹಿಂದೂ ಎಂದು ಓದಿಕೊಳ್ಳಬೇಕು) ಪತಾಕೆ ಹಾರಿಸಿದವನು ಎಂದು ರೀಮುಗಟ್ಟಲೆ ಹೊಗಳಲಾರಂಭಿಸಿಬಿಟ್ಟರು. ಕೀಳರಿಮೆ ಎನ್ನುವುದು ಮನುಷ್ಯನನ್ನು ಯಾವ ಪರಿ ಆವರಿಸಿಕೊಳ್ಳುತ್ತದೆ ಎನ್ನುವುದಕ್ಕೆ ಈ ದ್ವಂದ್ವಗಳೆ ಸಾಕ್ಷಿ.
ಈ ಬಾಬ್ಬಿ ಜಿಂದಾಲ್‌ನ ಮೂಲ ಹೆಸರು ಪೀಯುಶ್ ಜಿಂದಾಲ್ ಎಂದು. ಈಗಲೂ ಆತನ ಲೀಗಲ್ ಹೆಸರು ಪೀಯುಶ್ ಜಿಂದಾಲ್ ಎಂದೇ ಇದೆ. ನೆನ್ನೆ ಮೊನ್ನೆ ಈ ದೇಶಕ್ಕೆ ಬಂದಿಳಿದ ಹಲವಾರು ಚೀನೀಯರು, ಭಾರತೀಯರೆ ಇಲ್ಲಿನ ಜನಕ್ಕೆ ಉಚ್ಚಾರ ಮಾಡಲು ಅನುಕೂಲವಾಗಲಿ ಅಂತ ಹೆಸರು ಬದಲಾಯಿಸಿಕೊಳ್ಳುವಾಗ ಇನ್ನು ಹೆಚ್ಚಿಗೆ ಬಿಳಿಯರ ನಡುವೆಯೆ ಬೆಳೆದ ಪೀಯುಶ್ ತನ್ನ ವಿದೇಶಿ ಹೆಸರನ್ನು ಬಾಬ್ಬಿ ಎಂದು ಬದಲಾಯಿಸಿಕೊಂಡಿದ್ದು ಆಶ್ಚರ್ಯವೇನೂ ಅಲ್ಲ. ಆದರೆ ಈತನ ಜೀವನದಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಬೇಕಾದದ್ದು ಒಂದಿದೆ: ಅದು ಆತ ತನ್ನ ಕಾಲೇಜಿನ ದಿನಗಳಲ್ಲಿ ಹಿಂದೂ ಮತದಿಂದ ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗಿದ್ದು.
ಕಾಲೇಜಿನ ದಿನಗಳಲ್ಲಿಯೆ ಕ್ರಿಶ್ಚಿಯನ್ ಮತಕ್ಕೆ ಮತಾಂತರನಾಗುವ ಅವಶ್ಯಕತೆ ಅಥವ ಆಲೋಚನೆ ಬಾಬ್ಬಿ ಜಿಂದಾಲ್‌ಗೆ ಬಂದಾದ್ದರೂ ಹೇಗೆ ಎನ್ನುವ ಪ್ರಶ್ನೆ ನಾವು ಹಾಕಿಕೊಂಡರೆ ಆ ವಯಸ್ಸಿನಲ್ಲಿಯೆ ಈತನಿಗೆ ಯಾವ ಹೆಜ್ಜೆ ಇಟ್ಟರೆ ತಾನು ಅಮೇರಿಕದ ಬಹುಸಂಖ್ಯಾತ ಕ್ರಿಶ್ಚಿಯನ್ ಸಮಾಜದಲ್ಲಿ, ಅಂದರೆ ಇಲ್ಲಿಯ ಮುಖ್ಯವಾಹಿನಿಯಲ್ಲಿ ಒಂದಾಗಬಹುದು ಎನ್ನುವ ದೂರದೃಷ್ಟಿ ಇದ್ದದ್ದು ಗೊತ್ತಾಗುತ್ತದೆ. ಕ್ರಿಶ್ಚಿಯನ್ ಮೂಲಭೂತವಾದಿಗಳು ಗಣನೀಯವಾಗಿರುವ ಲೂಸಿಯಾನಾದಂತಹ ರಾಜ್ಯದಲ್ಲಿ ಕ್ರಿಶ್ಚಿಯನ್ ಆಗುವುದರಿಂದ ತನಗೆ ಇಲ್ಲಿಯ ಬಿಳಿಹುಡುಗಿಯರೊಡನೆ ಡೇಟಿಂಗ್ ಸುಲಭ ಮತ್ತು ಹಾಗೆಯೆ ತನ್ನ ಭವಿಷ್ಯದ ರಾಜಕೀಯ ಆಕಾಂಕ್ಷೆಗಳಿಗೂ ಒಳ್ಳೆಯದು ಎನ್ನುವ ಒಂದು ಗಟ್ಟಿ ನಂಬಿಕೆ ಬಾಬ್ಬಿಗೆ ಇತ್ತು ಎಂದು ಕಾಣಿಸುತ್ತದೆ. ಅದಕ್ಕಾಗಿಯೆ ಆತ ಮತಾಂತರವಾಗಿದ್ದು ಎಂದು ಹೇಳಬಹುದೆ ಹೊರತು ಆತನಿಗೆ ನಿಜಕ್ಕೂ ಆಧ್ಯಾತ್ಮದ ಅವಶ್ಯಕತೆ ಇತ್ತೆ ಎನ್ನುವುದು ಸಂದೇಹ. ತನಗೆ ದೆವ್ವ ಅಥವ ಸೈತಾನ ಆವರಿಸಿಕೊಂಡ ಬಗ್ಗೆ, ಹೇಗೆ ಕ್ರಿಶ್ಚಿಯನ್ ಮತ ಹಿಂದೂ ಮತಕ್ಕಿಂತ ಭಿನ್ನ ಮತ್ತು ಉತ್ತಮ ಎಂಬ ಬಗ್ಗೆ, ಕ್ರಿಶ್ಚಿಯನ್ನನಾಗಿ ತಾನು ಪಡೆದ ಪುನರ್ಜನ್ಮದ ಬಗ್ಗೆ, ಬಾಬ್ಬಿ ಜಿಂದಾಲ್ ಏನೆಲ್ಲಾ ಬರೆದರೂ (www.jindalonreligion.com) ಅವೆಲ್ಲ ಪೊಳ್ಳು, ಅಪ್ರಾಮಾಣಿಕ ಚಿಂತನಗಳು ಎಂದೆ ನಾನು ಭಾವಿಸುತ್ತೇನೆ. ತನ್ನ ಸ್ನಾತಕೋತ್ತರ ಪದವಿಗೆ ಪೊಲಿಟಿಕಲ್ ಸೈನ್ಸ್ ಆರಿಸಿಕೊಂಡ ಪ್ರತಿಭಾವಂತ ವಿದ್ಯಾರ್ಥಿ ಬಾಬ್ಬಿಗೆ, ಕ್ರಿಶ್ಚಿಯನ್ ಅಲ್ಲದವನಿಗೆ ಈ ದೇಶದ ರಾಜಕೀಯದಲ್ಲಿ ಒಳ್ಳೆಯ ಭವಿಷ್ಯವಿಲ್ಲ ಎಂದು ಕಲ್ಪಿಸಿಕೊಳ್ಳುವುದು ಕಷ್ಟವಲ್ಲ.
ಇದನ್ನು ನಾವು ಅಮೇರಿಕದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಾಟ್ ಪಕ್ಷದಿಂದ ಸ್ಪರ್ಧಿಸಲು ಪ್ರಯತ್ನಿಸುತ್ತಿರುವ ಬರಾಕ್ ಒಬಾಮ ಎಂಬ ಕಪ್ಪುತಂದೆ-ಬಿಳಿತಾಯಿಯ ಕಪ್ಪುಮಗನ ರಾಜಕೀಯ ನಡೆಗಳ ಹಿನ್ನೆಲೆಯಿಂದಲೂ ಗಮನಿಸಬಹುದು. ಬರಾಕ್ ಒಬಾಮಗೆ ಇಟ್ಟಿರುವುದು ಆತನ ತಂದೆಯ ಹೆಸರನ್ನೆ. ಆದರೆ ತನ್ನ ಮುಸಲ್ಮಾನ ತಂದೆಯ ಪೂರ್ಣ ಹೆಸರಾದ "ಬರಾಕ್ ಹುಸೇನ್ ಒಬಾಮ" ಎಂಬ ಹೆಸರಿನಲ್ಲಿ ಬರುವ "ಹುಸೇನ್" ತನ್ನ ಹೆಸರಿನಲ್ಲಿ ಬಾರದಂತೆ ವಿಶೇಷ ಮುತುವರ್ಜಿ ವಹಿಸುವುದರ ಮತ್ತು ತಾನೊಬ್ಬ ಮಹಾನ್ ಕ್ರಿಶ್ಚಿಯನ್ ಮತಾನುಯಾಯಿ, ಪ್ರತಿವಾರ ಚರ್ಚಿಗೆ ಹೋಗುವ ಆಸ್ತಿಕ ಎಂಬಂತೆ ತೋರಿಸುವುದರ ಹಿಂದಿನ ಹೆಚ್ಚಿನಂಶ ರಾಜಕೀಯ ತಂತ್ರಗಾರಿಕೆಯೆ ಹೊರತು ಮತ್ತೇನೂ ಅಲ್ಲ. ಈ ದೇಶ ಎಷ್ಟೇ ಉದಾರ ದೇಶ ಎನ್ನಿಸಿದರೂ ದಕ್ಷಿಣದ ಹಲವಾರು ರಾಜ್ಯಗಳಲ್ಲಿ ನೀವು ಕೋಮುವಾದಿ ಕ್ರಿಶ್ಚಿಯನ್‌ರನ್ನು ತೃಪ್ತಿಪಡಿಸದಿದ್ದರೆ ಚುನಾವಣೆ ಗೆಲ್ಲುವುದು ಅಸಂಭವವೆ. ಹಾಗಾಗಿ, ಬರಾಕ್ ಒಬಾಮನಷ್ಟೆ ಮಹತ್ವಾಕಾಂಕ್ಷಿಯಂತೆ ಕಾಣುವ ಬಾಬ್ಬಿ ಜಿಂದಾಲ್ ಮತಾಂತರದಿಂದ ಪ್ರಾರಂಭಿಸಿ ಈವರೆಗಿನ ತನ್ನ ಪ್ರತಿಯೊಂದು ಹೆಜ್ಜೆಯನ್ನೂ ಲೆಕ್ಕಾಚಾರಯುತವಾಗಿ ಇಟ್ಟಿರುವುದು ಆತನ ರಾಜಕೀಯ ಮಹತ್ವಾಕಾಂಕ್ಷೆಯನ್ನು ತೋರಿಸುತ್ತದೆ.
ಇನ್ನೂ ಚಿಕ್ಕ ವಯಸ್ಸಿನ ಬಾಬ್ಬಿಗೆ ಇನ್ನೂ ಕನಿಷ್ಠ 30 ವರ್ಷಗಳ ಸಕ್ರಿಯ ರಾಜಕಾರಣದ ಅವಕಾಶವಿದೆ. ಅದರಲ್ಲಿ ಮುಂದಿನ ಎಂಟು ವರ್ಷಗಳನ್ನು ಆತ ಲೂಸಿಯಾನಾದ ರಾಜ್ಯಪಾಲನಾಗಿ (ನಾಲ್ಕು ವರ್ಷಗಳ ನಂತರ ಪುನರಾಯ್ಕೆಗೊಂಡ ಪಕ್ಷದಲ್ಲಿ) ಮುಂದುವರೆಯಬಹುದು. ನಂತರ ಆತನ ರಾಜಕೀಯ ಜೀವನ ಏನಾಗಬಹುದು ಎಂದು ಯೋಚಿಸಿದರೆ, ಈ ಮನುಷ್ಯ ತನ್ನ ಮುಂದಿನ ಹೆಜ್ಜೆಗಳನ್ನು ಇನ್ನೂ ಹುಷಾರಾಗಿ ಇಟ್ಟಲ್ಲಿ ಈ ದೇಶದ ರಾಷ್ಟ್ರಾಧ್ಯಕ್ಷನಾಗುವ ತನಕವೂ ಬೆಳೆಯಬಹುದಾದ ಸಾಧ್ಯತೆ ಇದೆ ಎನ್ನಬಹುದು. ಮತ್ತು ಅದು ಸಾಧ್ಯವೂ ಆಗಬಹುದು. ಏಕೆಂದರೆ, ಅಮೇರಿಕದ ಭವಿಷ್ಯದ ರಾಜಕಾರಣದಲ್ಲಿ ಕನಿಷ್ಠ ಉಪರಾಷ್ಟ್ರಪತಿ ಸ್ಥಾನಕ್ಕಾದರೂ ತನ್ನದೆ ಪಕ್ಷದ ಅಥವ ಡೆಮಾಕ್ರಾಟ್ ಪಕ್ಷದ ವೈಲ್ಡ್‌ಕಾರ್ಡ್ ಆಗುವ ಯೋಗ್ಯತೆಗಳೆಲ್ಲಾ ಈತನಲ್ಲಿ ಇವೆ.
2008 ರ ಕೊನೆಗೆ ಈಗಿನ ಅಧ್ಯಕ್ಷ ಜಾರ್ಜ್ ಬುಷ್‌ನ ಆಡಳಿತ ಕೊನೆಯಾಗುತ್ತದೆ. ನಮ್ಮ ಭಾರತದ ನಿರ್ಲಜ್ಜ ವಂಶಪಾರಂಪರ್ಯವನ್ನು ಈ ದೇಶದ ಜನರೂ ಸುಲಭವಾಗಿ ಒಪ್ಪಿಕೊಳ್ಳುತ್ತಾರೆ ಎನ್ನುವ ಸ್ವಲ್ಪ ಆಸೆಯಿದ್ದಿದ್ದರೂ ಜಾರ್ಜ್ ಬುಷ್‌ನ ತಮ್ಮ ಜೆಬ್ ಬುಷ್ ಮುಂದಿನ ವರ್ಷದ ಚುನಾವಣೆಗೆ ನಿಲ್ಲುತ್ತಿದ್ದ ಎನ್ನುವುದು ನನ್ನ ನಂಬಿಕೆ. ಜೆಬ್ ಬುಷ್ ಅಮೇರಿಕದ ದೊಡ್ಡ ರಾಜ್ಯಗಳಲ್ಲಿ ಒಂದಾದ ಫ್ಲಾರಿಡಾದ ರಾಜ್ಯಪಾಲನಾಗಿ 1999-2007 ರ ತನಕ ಎರಡು ಅವಧಿಗೆ ಚುನಾಯಿತನಾಗಿದ್ದ. ಇಲ್ಲಿ ಮೂರನೆ ಬಾರಿಗೆ ಸ್ಪರ್ಧಿಸುವಂತಿಲ್ಲ. ಈಗ ಆತನ ಮುಂದಿರುವ ಹುದ್ದೆ ರಾಷ್ಟ್ರಪತಿ ಹುದ್ದೆಯೆ. "ನನ್ನ ತಮ್ಮ ಅತ್ಯುತ್ತಮ ಅಧ್ಯಕ್ಷನಾಗುತ್ತಾನೆ," ಎಂದು ಅಣ್ಣ ಈಗಾಗಲೆ ತಮ್ಮನ ಬಗ್ಗೆ ಹೇಳಿಯಾಗಿದೆ. ಮುಂದಿನ ವರ್ಷದ ಚುನಾವಣೆಯಲ್ಲಿ ಉಪಾಧ್ಯಕ್ಷನಾಗಿ ನಿಲ್ಲುವುದನ್ನು ಜೆಬ್ ಬುಷ್ ತಳ್ಳಿ ಹಾಕಿಲ್ಲ. ಅದಾಗದಿದ್ದರೂ ಇನ್ನು ನಾಲ್ಕು ವರ್ಷಗಳಲ್ಲಿ ಅಥವ ಎಂಟು ವರ್ಷಗಳಲ್ಲಿ ಜೆಬ್ ಬುಷ್ ಚುನಾವಣೆಗೆ ನಿಲ್ಲುವುದು ಗ್ಯಾರಂಟಿಯೆ. ನನಗನ್ನಿಸುವ ಪ್ರಕಾರ ಈಗ ಅಮೇರಿಕದ ಸಂಪ್ರದಾಯವಾದಿ ಪಕ್ಷವಾಗಿರುವ ಬುಷ್‌ನ ರಿಪಬ್ಲಿಕನ್ ಪಕ್ಷಕ್ಕೆ ಬಾಬ್ಬಿ ಜಿಂದಾಲ್‌ನಂತಹ ಬಿಳಿಯನಲ್ಲದ, ಆದರೆ ಸಂಪೂರ್ಣ ಕರಿಯನೂ ಅಲ್ಲದ ಮನುಷ್ಯ ಉಪರಾಷ್ಟ್ರಪತಿ ಹುದ್ದೆಗೆ ಸೂಕ್ತ ಅಭ್ಯರ್ಥಿ. ಬಾಬ್ಬಿ ಜಿಂದಾಲ್ ಏನಾದರೂ ಮುಂದಿನ ದಿನಗಳಲ್ಲಿ ಸ್ವಲ್ಪ ಉದಾರವಾದಿ ಧೋರಣೆಗಳನ್ನು ಬೆಳೆಸಿಕೊಂಡು ಡೆಮಾಕ್ರಾಟ್ ಪಕ್ಷಕ್ಕೆ ಪಕ್ಷಾಂತರ ಮಾಡಿದರೂ ರಾಜ್ಯಪಾಲ ಹುದ್ದೆಗಿಂತ ಮೇಲಿನದಾದ ಉಪರಾಷ್ಟ್ರಪತಿ/ರಾಷ್ಟ್ರಪತಿ ಹುದ್ದೆಗೆ ಅಲ್ಲಿಯೂ ವೈಲ್ಡ್ ಕಾರ್ಡ್ ಆಗುವ ಸಾಧ್ಯತೆ ಇದ್ದೇ ಇದೆ.
ಆದರೆ ಬಾಬ್ಬಿಯ ಬಗ್ಗೆ ಭಾರತ ಮತ್ತು ಇಲ್ಲಿರುವ ಭಾರತೀಯರು ಏನಾದರೂ ಆಸೆ ಇಟ್ಟುಕೊಳ್ಳುವುದು ಮಾತ್ರ ಮೂರ್ಖತನ. ಇಲ್ಲಿರುವ ಭಾರತೀಯರನ್ನು ಬಾಬ್ಬಿ ಕೇವಲ ತನ್ನ ಚುನಾವಣೆಗೆ ಹಣಸಂಗ್ರಹ ಮಾಡಿಕೊಳ್ಳಲು ಉಪಯೋಗಿಸಿಕೊಳ್ಳುತ್ತಾನೆಯೆ ಹೊರತು ಅವರೊಂದಿಗೆ ಈತ ಯಾವ ಕಾರಣಕ್ಕೂ ಹೆಚ್ಚಿಗೆ ಗುರುತಿಸಿಕೊಳ್ಳಲು ಹೋಗುವುದಿಲ್ಲ. ಅದು ಆತನ ರಾಜಕೀಯ ಭವಿಷ್ಯಕ್ಕೆ ಒಳ್ಳೆಯದಲ್ಲ. ಈಗಾಗಲೆ ಆತ ಅದನ್ನೆ ಮಾಡಿದ್ದಾನೆ. ಜೊತೆಗೆ ಎಲ್ಲಾ "ನವಮತಾಂತರಿ" ಗಳೂ ಮಾಡುವಂತೆ ತಾನು ಇತರೆಲ್ಲ ಕ್ರಿಶ್ಚಿಯನ್ನರಿಗಿಂತ ಪ್ಯೂರ್ ಕ್ರಿಶ್ಚಿಯನ್ ಎಂದು ತೋರಿಸಿಕೊಳ್ಳುವ ಕೀಳರಿಮೆ ಇರುವುದರಿಂದ ಅದು ಬಹುಸಂಖ್ಯಾತ ಹಿಂದೂ ಭಾರತೀಯರಿಗೆ ಪಥ್ಯವಾಗುವುದು ಕಷ್ಟವೆ. ಇನ್ನು ಪಕ್ಕಾ ಕೆರಿಯರ್ ರಾಜಕಾರಣಿಯಾದ ಬಾಬ್ಬಿ ಜಿಂದಾಲ್ ಬಗ್ಗೆ ಕೇವಲ ಭಾರತೀಯ ಮೂಲದ ರಾಜಕಾರಣಿ ಎಂದಷ್ಟೆ ಭಾವಿಸಬೇಕೆ ಹೊರತು ಅದಕ್ಕಿಂತ ಹೆಚ್ಚಿನದನ್ನು ಆತನಲ್ಲಿ ನಾವು ಬಯಸಬಾರದು. ಎಲ್ಲಿಯವರೆಗೆ ತನ್ನ ಭಾರತೀಯ ಮೂಲ ಲಾಭಕರವಲ್ಲವೊ ಅಲ್ಲಿಯವರೆಗೆ ಈ ಮನುಷ್ಯ ಭಾರತದ ಬಗ್ಗೆ ಮಾತನಾಡುವುದನ್ನೂ ಸಹ ನಾವು ನಿರೀಕ್ಷಿಸಬಾರದು. ಬಾಬ್ಬಿ ಜಿಂದಾಲ್ ಇಲ್ಲಿಯವರೆಗೂ ಮೇಲಿನ ಹುದ್ದೆಗಳಿಗೆ ಹೋಗುವ ತನ್ನ ಸಾಮರ್ಥವನ್ನು, ರಾಜಕೀಯ ನಾಯಕತ್ವವನ್ನು ತೋರಿಸಿದ್ದಾನೆಯೆ ಹೊರತು ಆತನ ಬಗ್ಗೆ ಹೆಮ್ಮೆ ಪಡಬಲ್ಲ ಆದರ್ಶ ಗುಣಗಳನ್ನಲ್ಲ.
ಆದರೆ, ಈತನಿಗೆ ಇನ್ನೂ ಸುಧೀರ್ಘ ಭವಿಷ್ಯ ಇರುವುದರಿಂದ ಅದನ್ನಾಗಲಿ, ಈತನನ್ನಾಗಲೀ ಯಾವ ಕಾರಣಕ್ಕೂ ತಳ್ಳಿ ಹಾಕುವಂತಿಲ್ಲ.
No comments:
Post a Comment