(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 29, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)
ಕರ್ನಾಟಕ ರಾಜ್ಯದ ಗೃಹ ಸಚಿವರಾದ ಎಂ.ಪಿ. ಪ್ರಕಾಶ್ 'ಈ ವರ್ಷವೂ ಯಾವುದೇ ಕಾರಣಕ್ಕೂ ಬಾಬಾಬುಡನ್‌ಗಿರಿಯ ಶೋಭಾಯಾತ್ರೆಗೆ ಅವಕಾಶ ಕೊಡುವುದಿಲ್ಲ. ಅದನ್ನು ನಿಷೇಧಿಸುತ್ತೇವೆ' ಎಂದು ಪತ್ರಕರ್ತರಿಗೆ ಹೇಳಿಕೆ ಕೊಡುತ್ತಾರೆ. ಅದಾದ ಒಂದೆರಡು ದಿನಗಳಲ್ಲಿಯೆ ಆ ಖಾತೆಗೆ ಎಳ್ಳಷ್ಟೂ ಸಂಬಂಧವಿಲ್ಲದ, ಆದರೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಉನ್ನತ ಶಿಕ್ಷಣ ಸಚಿವ ಡಿ.ಎಚ್. ಶಂಕರಮೂರ್ತಿ, 'ಅದು ಪ್ರಕಾಶರ ಸ್ವಂತ ಅಭಿಪ್ರಾಯವೇ ಹೊರತು ಸರ್ಕಾರದ ತೀರ್ಮಾನವಲ್ಲ' ಎಂದು ಸ್ಪಷ್ಟಪಡಿಸುತ್ತಾರೆ! ಎಂ.ಪಿ. ಪ್ರಕಾಶ್ ಶಂಕರಮೂರ್ತಿಗೆ 'ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದೆ ಅಷ್ಟೆ' ಎಂದು ತಿಳಿಸಿದ್ದಾರಂತೆ! ಈಗ ನಮ್ಮನ್ನೆ ನಾವು ಕೇಳಿಕೊಳ್ಳೋಣ. ಮಂತ್ರಿಗಳಾದ ಮೇಲೆ ಕೊಡುವ ಹೇಳಿಕೆಗಳಿಗೆ ವೈಯಕ್ತಿಕ ಅಭಿಪ್ರಾಯಗಳಿಲ್ಲ, ಆ ಸ್ಥಾನದಿಂದ ಮಾತನಾಡಿದರೆ ಅದು ಸರ್ಕಾರದ ತೀರ್ಮಾನ ಎಂದು ಅರಿಯಲಾಗದಷ್ಟು ಬೇಜವಾಬ್ದಾರಿ, ತಮ್ಮ ಖಾತೆಯನ್ನು ಸಮರ್ಥಿಸಿಕೊಳ್ಳಲಾಗದಷ್ಟು, ನಿಭಾಯಿಸಲಾಗದಷ್ಟು ಮಹಾಮಹಿಮರನ್ನು ತಮ್ಮ ಮಂತ್ರಿಗಳನ್ನಾಗಿ ಪಡೆಯಲು ಕರ್ನಾಟಕದ ಜನತೆ ಮಾಡಿರುವ ಭಾಗ್ಯವಾದರೂ ಏನು? ಇವರು ನಮ್ಮ ಸಚಿವರಾಗಿ ಇನ್ನೆಷ್ಟು ಕಾಲ ನಮ್ಮ ಹಣೆಬರಹ ತಿದ್ದಬೇಕು?
ಸೋಮವಾರ, ಸೆಪ್ಟೆಂಬರ್ 18 ರಂದು, ಪ್ರಜಾವಾಣಿ ಪತ್ರಿಕೆ 'ಠಾಣೆಯಲ್ಲಿ ಮಂತ್ರಿ ರಂಪಾಟ' ಎಂಬ ಶೀರ್ಷಿಕೆಯಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ರಾಮಚಂದ್ರೇಗೌಡ ಬೆಂಗಳೂರು ನಗರದ ಪೋಲಿಸ್ ಠಾಣೆಯೊಂದಕ್ಕೆ ಹೋಗಿ ರಂಪಾಟ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ ಎಂದು ಪ್ರಕಟಿಸಿದೆ. ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಶಿವಣ್ಣ ಎನ್ನುವವರಿಗೆ ಗೌಡರ ನುಡಿಮುತ್ತು ಹೀಗಿತ್ತಂತೆ: 'ಏನ್ರೀ ಮನೆಗೆ ಬಾ ಅಂತ ಹೇಳಿದರೆ ಬರೋದಿಲ್ವಾ ನೀವು? ನಿಮ್ಮ ಕಮಿಷನರ್ ನೀಲಂ ಅಚ್ಯುತರಾವ್‌ಗೆ ಪೋನ್ ಮಾಡಿದರೆ ಅವರೇ ಒಂದು ಸೆಕೆಂಡ್‌ನಲ್ಲಿ ನಮ್ಮ ಮನೆಗೆ ಬರುತ್ತಾರೆ. ನೀವೇನು ಬಹಳ ಸ್ಮಾರ್ಟ್ ಆಗಿ ಬಿಹೇವ್ ಮಾಡ್ತೀರಾ?' ಇದು ನಿಜವೇ ಆಗಿದ್ದಲ್ಲಿ, ಒಂದು ಸೆಕೆಂಡ್‌ನಲ್ಲಿ ತಂತ್ರಜ್ಞಾನ ಇಲಾಖೆಯ ಮಂತ್ರಿಗಳ ಮನೆಗೆ ಹಾಜರಾಗುವ ಅಚ್ಯುತರಾವ್ ಅವರಂತಹ ದಕ್ಷ, ಚುರುಕು ಕಮಿಷನರ್‌ರನ್ನು ಪಡೆದಿರುವ ಬೆಂಗಳೂರಿನ ಪುಣ್ಯಕ್ಕೆ ಎಣೆಯುಂಟೆ?!
ಆದರೆ, ಹೌದು, ಎಣೆ ಇದೆ ಎನ್ನುತ್ತದೆ ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಕೊಲೆ ಮತ್ತು ದರೋಡೆಗಳು. ಸೆಪ್ಟೆಂಬರ್ ಹನ್ನೊಂದರಿಂದ ಹದಿನೆಂಟರವರೆಗಿನ ದಿನಪತ್ರಿಕೆಗಳನ್ನು ಹರಡಿಕೊಂಡು ಕೂತರೆ ನಿಮಗೆ ಎದ್ದು ಕಾಣಿಸುವ ಸುದ್ದಿಗಳೆಂದರೆ: 'ಬೆಂಗಳೂರನ್ನು ತಲ್ಲಣಗೊಳಿಸಿದ ಭೂ ಮಾಫಿಯಾ - ಬೀದಿ ಕಾಳಗ, ರೌಡಿಗಳ ಹತ್ಯೆ''ನಗರದಲ್ಲಿ ದರೋಡೆಗಳ ಸರಮಾಲೆ' 'ದರೋಡೆಗೆ ಹೊಂಚು: ಐವರು ರೌಡಿಗಳ ಬಂಧನ' `ಬೆಂಗಳೂರಲ್ಲಿ ಒಟ್ಟು ಐದು ಕೊಲೆ' 'ಪಿಸ್ತೂಲ್ ತೋರಿಸಿ ನಗದು, ಚಿನ್ನಾಭರಣ ದರೋಡೆ' 'ಐದು ದರೋಡೆ ಪ್ರಕರಣ' 'ಲೇವಾದೇವಿದಾರನ ಕೊಲೆ: ಪರಾರಿ'
ದಿನಕ್ಕೊಂದರಂತೆ ಎದ್ದು ಕಾಣಿಸುವ ಈ ವರದಿಗಳಲ್ಲಿ ನಮ್ಮ ಗೃಹಖಾತೆ ಹೆಮ್ಮೆ ಪಟ್ಟುಕೊಳ್ಳುವಂತಹುದು ಏನಾದರೂ ಇದ್ದರೆ ಅದು 'ದರೋಡೆಗೆ ಹೊಂಚು: ಐವರು ರೌಡಿಗಳ ಬಂಧನ' ಮಾತ್ರ. ಮೇಲಿನ ಸುದ್ದಿಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ತಕ್ಷಣದ ಕೋಪದಲ್ಲಿ ನಡೆದುಬಿಡುವ ಕೊಲೆಗಳನ್ನು ಸೇರಿಸಿಲ್ಲ. ಈಗ ಮತ್ತೊಮ್ಮೆ ಯೋಚಿಸೋಣ. ಬೆಂಗಳೂರು ನಗರ ಸುರಕ್ಷಿತವಾಗಿದೆಯೆ? ಈ ಪರಿಯಲ್ಲಿ ಅಭಿವೃದ್ಧಿಯಾಗುತ್ತಿರುವ ನಗರವನ್ನು, ಅದರ ಸಂಕೀರ್ಣ ಸುರಕ್ಷತೆಯನ್ನುಗಮನಿಸುವಂತಹ ಮಂತ್ರಿಗಳಾಗಲಿ, ಅಧಿಕಾರಿಗಳಾಗಲಿ, ಮುಖಂಡರಾಗಲಿ ನಮಗೆ ಇಂದು ಇದ್ದಾರೆಯೆ? ನಾವು, ನಮ್ಮ ಹಿರಿಯರು, ನಮ್ಮ ಮಕ್ಕಳು ಮುಂದಕ್ಕೂ ನಿರಾತಂಕವಾಗಿ ಬದುಕುವ ಆಸೆ ಇದೆಯೆ?
ಇನ್ನು ಸೀಡಿ ಪ್ರಕರಣ. ಎರಡೇ ದಿನಗಳ ಅಂತರದಲ್ಲಿ ಎರಡನೇ ಮತ್ತು ಮೂರನೆ ಸೀಡಿ ಸ್ಫೋಟ ಎಂದು ಪತ್ರಿಕೆಗಳು ಪ್ರಕಟಿಸಿದವು. ಹಾಗಾದರೆ, ಮೊದಲ ಸೀಡಿ ಎಲ್ಲಿ ಸ್ಫೋಟವಾಯಿತು? ಜನಾರ್ಧನ ರೆಡ್ಡಿ ಬಳ್ಳಾರಿಯಲ್ಲಿ ತೋರಿಸಿದ್ದು ತಾನೆ? ಹಾಗಿದ್ದಲ್ಲಿ ಎರಡು ಮತ್ತು ಮೂರಕ್ಕೂ ರೆಡ್ಡಿಯೇ ಜವಾಬ್ದಾರರಲ್ಲವೆ? ಹೀಗೆ ಯೋಚಿಸಿಯೆ ಅಲ್ಲವೆ ಪತ್ರಿಕೆಗಳು ಎರಡು ಮತ್ತು ಮೂರನೆ ಸೀಡಿ ಎಂದು ಬರೆದದ್ದು? ಹಾಗಿದ್ದ ಪಕ್ಷದಲ್ಲಿ ನಮ್ಮ ಗೃಹ ಖಾತೆ ಏನು ಮಾಡುತ್ತಿದೆ? ಇವು ನಿಜವಾದ ವೀಡಿಯೊ ಚಿತ್ರವೊ ಇಲ್ಲಾ ಕೃತಕವಾಗಿ ತಯಾರಿಸಿದ್ದೊ ಎಂದು ನಮ್ಮ ಪೋಲಿಸ್ ಇಲಾಖೆ ಇಲ್ಲಿಯವರೆಗೆ ತಿಳಿದುಕೊಳ್ಳಲಾಗಲಿಲ್ಲ ಎಂದರೆ ಇಂತಹ ಅನಾದಿಕಾಲದ ತಂತ್ರಜ್ಞಾನ ಹೊಂದಿರುವವರ ಕೈಯಲ್ಲಿ ನಮ್ಮ ಭವಿಷ್ಯದ ಸುರಕ್ಷತೆಯನ್ನು ಕನಸುವುದಕ್ಕಿಂತ ಹಗಲು ಕನಸು ಬೇರೊಂದಿಲ್ಲ. ಅವು ಕೃತಕವೇ ಆಗಿರಲಿ, ಇಲ್ಲವೆ ನೈಜದ್ದೆ ಆಗಿರಲಿ, ಅವುಗಳ ಮೂಲ ಎಲ್ಲಿಯದು ಎನ್ನುವುದನ್ನು ಪೋಲಿಸ್ ಇಲಾಖೆ ಇಷ್ಟೊತ್ತಿಗೆ ಕಂಡು ಹಿಡಿದು ಜನಕ್ಕೆ ತಿಳಿಸಬೇಕಿತ್ತು. ಅದು ಕೃತಕವೇ ಆಗಿದ್ದಲ್ಲಿ ಈ ಸೀಡಿ ಪ್ರಕರಣ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಕಂಡ ಅತಿ ದೊಡ್ಡ ವಂಚನೆ. ಅಂತಹ ಪಕ್ಷದಲ್ಲಿ ಜನಾರ್ಧನ ರೆಡ್ಡಿ ಬಳ್ಳಾರಿಯ ಮನೆಯಲ್ಲಲ್ಲ, ಅಲ್ಲಿನ ಜೈಲಿನಲ್ಲಿ ಕಂಬಿ ಎಣಿಸಬೇಕು. ಸೀಡಿಯಲ್ಲಿರುವುದು ನಿಜವೇ ಆಗಿದ್ದಲ್ಲಿ ಚೆನ್ನಿಗಪ್ಪ, ಪ್ರಕಾಶ್, ಕುಮಾರ ಸ್ವಾಮಿಯಾದಿಯಾಗಿ ಹತ್ತಾರು ಜನ ತಮ್ಮ ಭ್ರಷ್ಟಾಚಾರ, ಅಧಿಕಾರ ದುರುಪಯೋಗದ ಪ್ರಯಕ್ತ ಬೆಂಗಳೂರಿನ ವಿಧಾನಸೌಧದಲ್ಲಲ್ಲ, ಪರಪ್ಪನ ಅಗ್ರಹಾರದ ಕಾರಾಗೃಹದ ಕತ್ತಲು ಕೋಣೆಯಲ್ಲಿ ತಮ್ಮ ಕೊನೆಗಾಲದ ತನಕ ಕಾಲ ತಳ್ಳಬೇಕು. ಇವೆರಡರಲ್ಲಿ ಒಂದು ಆಗಲೇಬೇಕು. ಇಲ್ಲದಿದ್ದಲ್ಲಿ ಕರ್ನಾಟಕದಲ್ಲಿ ಕಾನೂನು, ನ್ಯಾಯ, ಆಡಳಿತ, ನೈತಿಕತೆ ಸತ್ತಿದೆ ಎಂದೇ ಅರ್ಥ. ನೀವು ಈ ಮಾತಿಗೆ ನಗುತ್ತಿರುವಿರಿ ಎಂದಾದರೆ, ಇವೆಲ್ಲ ನಮ್ಮಲ್ಲಿ ಎಂದೋ ಸತ್ತಿವೆ, ಮತ್ತು ನಮಗೆ ಅವುಗಳ ಅವಶ್ಯಕತೆಯಿಲ್ಲ, ಹಾಗೂ ನಾನು ಅಸಾಧ್ಯವನ್ನು ಬಯಸುವ ಹಗಲುಗನಸಿನ ಆಶಾವಾದಿ ಎಂದರ್ಥ, ಅಲ್ಲವೆ?
ನನ್ನ ಇಲ್ಲಿನ ಐದಾರು ವರ್ಷಗಳ ಅನುಭವ ಮತ್ತು ಈ ದೇಶದಲ್ಲಿನ ಕೆಲವು ನೈಜ ಘಟನೆಗಳನ್ನಾಧರಿಸಿದ ಸಿನೆಮಾ ಮತ್ತು ಡಾಕ್ಯುಮೆಂಟರಿಗಳನ್ನು ನೋಡಿದ ಅನುಭವದ ಮೇಲೆ ಯೋಚಿಸಿದಾಗ ಅನ್ನಿಸುವುದು, ಗಣಿಕಪ್ಪ ಮತ್ತು ಸೀಡಿಯಂತಹ ಘಟನೆ ಇಲ್ಲೇನಾದರು ಜರುಗಿದ್ದರೆ ಟೀವಿ ಮತ್ತು ಪತ್ರಿಕಾ ಮಾಧ್ಯಮವೇ ಸಾಕಿತ್ತು ತಪ್ಪಿತಸ್ಥರನ್ನು ಜೈಲಿಗೆ ಹಾಕಲು. ಇಲ್ಲಿನವರು ಅಷ್ಟೊಂದು ವೃತ್ತಿಪರರು, ದೇಶಭಕ್ತರು, ಸಂವೇದನೆ ಉಳ್ಳವರು. ಕರ್ನಾಟಕದ ಯಾವುದೊ ಮೂಲೆಯಲ್ಲಿ ಕೇವಲ ಹತ್ತಾರು ಜನ ವಿದ್ಯಾರ್ಥಿಗಳು ಮೀಸಲಾತಿ ವಿರೋಧಿ ಪ್ರತಿಭಟನೆ ಮಾಡಿದರೆ ಅದನ್ನೆ ಮುಖಪುಟದ ಮುಖ್ಯ ಸುದ್ದಿ ಮಾಡಿ, ಜನರ ಭಾವನೆಗಳನ್ನು ಕೆರಳಿಸಿ ತಮ್ಮದೇನಾದರೂ ಸ್ವಾರ್ಥ ಇದ್ದರೆ ಅದನ್ನು ಈಡೇರಿಸಿಕೊಳ್ಳುವಂತಹ ಪತ್ರಕರ್ತರು ನಮ್ಮ ನಡುವೆ ಇರುವಾಗ, ಅವರು ಎಷ್ಟು ನಿಜ ಹೇಳಿದರೆ ತಾನೆ ಜನ ನಂಬುತ್ತಾರೆ, ಅಧಿಕಾರಸ್ಥರು ಬೆಚ್ಚುತ್ತಾರೆ? ಇವೆಲ್ಲವನ್ನು ನೋಡಿದರೆ, ನಮ್ಮ ಭವಿಷ್ಯ ಹೇಗಿರಬೇಕು, ನಮ್ಮ ನಾಯಕರು ಹೇಗಿರಬೇಕು, ನಮ್ಮ ನೈತಿಕ ಪ್ರಜ್ಞೆ ಯಾರಾಗಿರಬೇಕು, ಯಾರನ್ನು ನಂಬಬೇಕು, ಯಾರನ್ನು ಓದಬೇಕು ಎಂದೆಲ್ಲ ಯೋಚಿಸಬೇಕಾದ ಸಮಯ ಈಗ ಬಂದು ಬಿಟ್ಟಿದೆ. ಏಕೆಂದರೆ ಈಗ ಕಾಲ ನಿಜವಾಗಲೂ ಕೆಟ್ಟಿದೆ. ರೆಡ್ಡಿ ಅಥವ ಈಗಿನ ಮಂತ್ರಿಮಂಡಲದ ಕೆಲವು ಸದಸ್ಯರು ಕಂಬಿ ಎಣಿಸುವ ತನಕ ಅದು ಕೆಟ್ಟೇ ಇರುತ್ತದೆ.
Sep 17, 2006
ಗೃಹ ಖಾತೆಯೆನ್ನುವುದು ಒಂದಿದೆಯೆ?
Subscribe to:
Post Comments (Atom)
No comments:
Post a Comment