ಕರ್ನಾಟಕದ ಇವತ್ತಿನ ದೊಡ್ಡ ಸಮಸ್ಯೆ ಕೋಮುವಾದ ಎನ್ನುವುದು ನನ್ನ ನಂಬಿಕೆ. ಕಳೆದ ಹಲವಾರು ದಶಕಗಳಲ್ಲಿ ಕರ್ನಾಟಕ ಕಂಡ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಪ್ರಗತಿಯನ್ನೆಲ್ಲ ಇವತ್ತಿನ ಕೋಮುವಾದ ನಾಶ ಮಾಡುತ್ತಿದೆ.
ಆಧುನಿಕ ಶಿಕ್ಷಣ, ಪ್ರಜಾಪ್ರಭುತ್ವ ಮತ್ತು ಇತ್ತೀಚಿನ ಆರ್ಥಿಕ ಬೆಳವಣಿಗೆ ನಮ್ಮ ನೆಲದ ಅನೇಕ ಸಮಸ್ಯೆಗಳನ್ನು ಇಲ್ಲವಾಗಿಸುತ್ತಿದೆ. ಜನ, ಅವರ ಮನಸ್ಸು, ಅಭಿಪ್ರಾಯಗಳು ಹೆಚ್ಚುಹೆಚ್ಚು ಚಲನಶೀಲವೂ ಸಹನಶೀಲವೂ ಆಗುತ್ತಿದೆ. ದುಡಿದೇ ಬದುಕಬೇಕಾದ ಯುವಕ-ಯುವತಿಯರು ಸಂಕೋಲೆಗಳನ್ನು ಮತ್ತು ಸಂಕುಚಿತತೆಗಳನ್ನು ಕಳೆದುಕೊಳ್ಳುತ್ತಾ ನಡೆದಿದ್ದಾರೆ. ಆದರೆ ಹಳೆಯ ವ್ಯವಸ್ಥೆಯಿಂದ ಯಾರು ಯಾರು ಲಾಭ ಮಾಡಿಕೊಳ್ಳುತ್ತಿದ್ದರೊ ಅವರು ಇದನ್ನು ಪರಿಭಾವಿಸುವ ರೀತಿಯೆ ಬೇರೆ. ಹಿಂದೂ-ಕೋಮುವಾದವನ್ನು ಪ್ರಚೋದಿಸುವವರು ಮತ್ತು ಅದರ ಹಿಂಭಾಗದ ಇಂಜಿನ್‌ಗಳು ಇವರೆ. (ಮುಸಲ್ಮಾನ/ಕ್ರಿಶ್ಚಿಯನ್ ಕೋಮುವಾದಕ್ಕೆ ಕಾರಣಗಳು ಬೇರೆಯೆ ಇವೆ.)
ಈ ಕೋಮುವಾದದ ನಿಜವಾದ ಅಪಾಯ ಇರುವುದು ಅದು ತರಲಿರುವ status-quo ನಲ್ಲಿ, ನಿಲ್ಲಿಸಲಿರುವ ಎಲ್ಲಾ ತರಹದ ಸಂವಾದದಲ್ಲಿ ಮತ್ತು ಒಂದು ವರ್ಗ ಇನ್ನೊಂದು ವರ್ಗವನ್ನು ಶೋಷಿಸುವುದು ಸರಿ ಎನ್ನುವ ಪ್ರಚೋದನೆಯಲ್ಲಿ.
ಗಾಂಧೀಜಿ ಕೇವಲ ಬ್ರಿಟಿಷರ ವಿರುದ್ಧ ಹೋರಾಡಲಿಲ್ಲ. ಆತ ನಮ್ಮದೇ ದೇಶದ ದುಷ್ಟಶಕ್ತಿಗಳ ವಿರುದ್ಧವೂ ಹೋರಾಡಿದ. ಸಮಾಜದ ದುಷ್ಟತೆಯ ವಿರುದ್ಧ ಹೋರಾಡುತ್ತಲೆ ವ್ಯಕ್ತಿಯ ದುಷ್ಟತೆಯ ವಿರುದ್ಧವೂ ಹೋರಾಡಿದ. ಅದು ಅನೇಕ ರಣಾಂಗಣಗಳಲ್ಲಿ ಏಕಕಾಲದಲ್ಲಿ ಮಾಡುತ್ತಿದ್ದ ಯುದ್ಧ. ಆದರೆ "ಅಂತರಂಗ ಶುದ್ಧಿ"ಗಿಂತ "ಬಹಿರಂಗ ಶುದ್ಧಿ"ಗೇ ಮಹತ್ವ ಕೊಟ್ಟ ಸಂಕುಚಿತ ಮನೋಭಾವದ ಕೋಮುವಾದಿಗಳು ಗಾಂಧೀಜಿಯ ಹತ್ಯೆ ಮಾಡುತ್ತಾರೆ. ಆ ಹಂತಕ ಪಡೆ ಇನ್ನೂ ವಿಶ್ರಮಿಸಿಲ್ಲ.
ಆದರೆ, ಗಾಂಧೀಜಿ ಭಾರತದಲ್ಲಿ ಹುಟ್ಟಿದ ಒಬ್ಬ ವ್ಯಕ್ತಿ ಮಾತ್ರವಲ್ಲ. ಭಾರತದ ಅಂತಃಸತ್ವವೆ, ಭಾರತದ ನೈಜರೂಪವೆ ಗಾಂಧೀಜಿ. ದುಷ್ಟತೆಯ ವಿರುದ್ಧ ಭರತಭೂಮಿಯಲ್ಲಿ ನಡೆದ ಶತಶತಮಾನಗಳ ಹೊರಾಟ ಕಳೆದ ಶತಮಾನದಲ್ಲಿ ಗಾಂಧೀಜಿಯ ರೂಪದಲ್ಲಿ ಪ್ರಕಟವಾಯಿತು. ಪರರನ್ನು (ರಾಷ್ಟ್ರ -ರಾಷ್ಟ್ರಗಳನ್ನು/ಸಮುದಾಯ -ಸಮುದಾಯಗಳನ್ನು/ವ್ಯಕ್ತಿ -ವ್ಯಕ್ತಿಗಳನ್ನು) ಆಕ್ರಮಿಸಿಕೊಳ್ಳುವುದರ ವಿರುದ್ಧದ ಭಾರತದ ಹೋರಾಟವೆ ಗಾಂಧೀಜಿ.
ಗಾಂಧೀಜಿಯ ಹಂತಕ ಪಡೆ ಗಾಂಧಿ ಹುಟ್ಟಿದ ಊರಿನಿಂದ ಹಿಡಿದು ಗಾಂಧಿ ಬಂದಿದ್ದ ಮಂಗಳೂರಿನವರೆಗೂ ಇತ್ತೀಚಿನ ದಿನಗಳಲ್ಲಿ ಸಕ್ರಿಯವಾಗಿ, ರಾಜಾರೋಷವಾಗಿ ಓಡಾಡುತ್ತಿದ್ದೆ. ತಮ್ಮ ದುಷ್ಟಮನಸ್ಸಿನ ಚಿಂತನೆಗಳ ಬಿತ್ತನೆಗೆ ನೆಲ ಹಸನು ಮಾಡುತ್ತಿದೆ. ವಿಶ್ರಾಂತಿಯಿಲ್ಲದೆ ಈ ರಕ್ತಾಬೀಜಾಸುರ ಸಂತತಿ ಬೆಳೆಯುತ್ತಿದೆ. ಆದರೆ, ಹೇಗೆ ಗಾಂಧೀಜಿಯ ಹಂತಕ ಪಡೆ ವಿಶ್ರಮಿಸುವುದಿಲ್ಲವೊ ಹಾಗೆಯೆ ಆ ದುಷ್ಟತೆಯ ವಿರುದ್ಧದ ಭಾರತದ ಪ್ರತಿರೋಧ ಮತ್ತು ಹೋರಾಟವೂ ನಡೆಯುತ್ತಿರುತ್ತದೆ ಮತ್ತು ಅಂತಿಮ ಗೆಲುವು ಭಾರತದ್ದೆ ಆಗಿರುತ್ತದೆ. ಇದು ಗೌತಮ ಬುದ್ಧನ ಮೂಲಕ, ಬಸವಣ್ಣನ ಮೂಲಕ, ಸೂಫಿ ಸಂತರ -ಫಕೀರರ ಮೂಲಕ, ತಾರತಮ್ಯ ಸಲ್ಲದೆಂದು ಪದ್ಯಗಳಿಂದ ಹೇಳಿಕೊಟ್ಟ ಸರ್ವಜ್ಞ-ವೇಮನ-ತಿರುವಳ್ಳುವರ್-ಕುವೆಂಪುರಂತಹ ಕವಿಗಳ ಮೂಲಕ, ತಮ್ಮದೇ ಜನರ ದುಷ್ಟತೆಯ ವಿರುದ್ಧ ಕಾಲಕಾಲಕ್ಕೆ ಧ್ವನಿಯೆತ್ತಿದ ಅಸಂಖ್ಯಾತ ಹುತಾತ್ಮರ ಮೂಲಕ, ಗಾಂಧೀಜಿಯ ಮೂಲಕ ಸಾಬೀತಾಗುತ್ತ ಬಂದಿದೆ.
ಇವತ್ತಿನ ಗಾಂಧಿ ಜಯಂತಿಯ ಸಂದರ್ಭದಲ್ಲಿ ಗಾಂಧೀಜಿ ಹೇಗೆ ಬದುಕಿದ, ಯಾವ ಕಾರಣಗಳಿಗಾಗಿ ಹತ್ಯೆಯಾದ, ಆತನ ತ್ಯಾಗ ಮತ್ತು ಜೀವನ ನಮಗೆ ಯಾವ ತರಹದ ಸ್ಫೂರ್ತಿ ಮತ್ತು ಸ್ಪಷ್ಟತೆ ನೀಡಬೇಕು ಎಂದು ಆಲೋಚಿಸುತ್ತ, ನಾನು ಹಿಂದೊಮ್ಮೆ ಬರೆದಿದ್ದ ಈ ಲೇಖನವನ್ನು ಮತ್ತೊಮ್ಮೆ ಓದುತ್ತ ಕುಳಿತಿದ್ದೇನೆ:
ಮಹಾತ್ಮ ಹುತಾತ್ಮನಾದಂದು...
ಮಹಾತ್ಮ ಗಾಂಧಿ ಎಂದಷ್ಟೆ ಕರೆಸಿಕೊಳ್ಳುತ್ತಿದ್ದ ಆತ ಜನವರಿ 30, 1948ರ ಶುಕ್ರವಾರದ ದಿನ ಸತ್ತಾಗ ಶ್ರೀಮಂತಿಕೆ, ಆಸ್ತಿ, ಪದವಿ, ಅಧಿಕಾರದ ಹುದ್ದೆ, ಪಾಂಡಿತ್ಯದ ಹೆಚ್ಚುಗಾರಿಕೆ, ವೈಜ್ಞಾನಿಕ ಸಾಧನೆ, ಅಥವ ಯಾವುದೇ ಕಲೆಯ ವರ ಇಲ್ಲದಿದ್ದ ಒಬ್ಬ ಖಾಸಗಿ ಪ್ರಜೆ. ಆದರೂ, ಸರ್ಕಾರ ಮತ್ತು ಸೇನಾಪಡೆ ಎಪ್ಪತ್ತೆಂಟು ವರ್ಷದ, ಲಂಗೋಟಿಯಲ್ಲಿದ್ದ ಕಂದು ಬಣ್ಣದ ಚಿಕ್ಕ ಮನುಷ್ಯನಿಗೆ ಗೌರವ ಸಲ್ಲಿಸಿದರು. ಭಾರತ ಸರ್ಕಾರಕ್ಕೆ 3441 ಪತ್ರಗಳು, ಎಲ್ಲವೂ ಸ್ವಯಂಪ್ರೇರಿತವಾಗಿ, ಸಹಾನುಭೂತಿ ವ್ಯಕ್ತಪಡಿಸಿ, ವಿದೇಶಗಳಿಂದ ಬಂದವು. ನೀತಿವಂತ ಗಾಂಧಿಯ ಜೀವನವನ್ನು ಹಂತಕನ ಗುಂಡುಗಳು ಅಂತ್ಯಗೊಳಿಸಿದಾಗ ಅಷ್ಟೇನೂ ನೈತಿಕ ಶ್ರೀಮಂತಿಕೆಯಿಂದ ಕೂಡಿರದ ನಾಗರಿಕತೆ ಮತ್ತಷ್ಟು ಬಡವಾಯಿತು. "ಮಹಾತ್ಮ ಗಾಂಧಿ ಇಡೀ ಮನುಕುಲದ ಮನಸ್ಸಾಕ್ಷಿಯ ವಕ್ತಾರರಾಗಿದ್ದರು," ಎಂದರು ಅಮೇರಿಕಾ ದೇಶದ ವಿದೇಶಾಂಗ ಮಂತ್ರಿ ಜನರಲ್ ಜಾರ್ಜ್ ಮಾರ್ಷಲ್.
ಪೋಪ್ ಪಿಯುಸ್, ಟಿಬೆಟ್ಟಿನ ದಲೈ ಲಾಮ, ಕ್ಯಾಂಟೆರ್ಬರಿಯ ಆರ್ಚ್‌ಬಿಷಪ್, ಲಂಡನ್‌ನ ಮುಖ್ಯ ರಬ್ಬೈ, ಇಂಗ್ಲೆಂಡಿನ ರಾಜ, ರಾಷ್ಟ್ರಪತಿ ಟ್ರೂಮನ್, ಚಿಯಾಂಗ್ ಕೈ-ಷೆಕ್, ಫ್ರಾನ್ಸ್‌ನ ರಾಷ್ಟ್ರಪತಿ, ಅಷ್ಟ್ಯಾಕೆ, ಪ್ರಪಂಚದ ಎಲ್ಲಾ ಅತಿ ಮುಖ್ಯ ರಾಷ್ಟ್ರಗಳ (ಸೋವಿಯತ್ ರಷ್ಯ ಬಿಟ್ಟು) ಮತ್ತು ಬಹುಪಾಲು ಸಣ್ಣ ರಾಷ್ಟ್ರಗಳ ಮುಖ್ಯಸ್ಥರು ಗಾಂಧಿಯ ಅಂತ್ಯಕ್ಕೆ ಸಾರ್ವಜನಿಕವಾಗಿ ದುಃಖ ವ್ಯಕ್ತಪಡಿಸಿದರು.
ಫ್ರೆಂಚ್ ಸಮಾಜವಾದಿ ಲ್ಯೋನ್ ಬ್ಲಮ್ ಲಕ್ಷಾಂತರ ಜನರಿಗೆ ಅನ್ನಿಸಿದ್ದನ್ನು ಕಾಗದದ ಮೇಲೆ ಬರೆದಿಳಿಸಿದ. "ನಾನು ಗಾಂಧಿಯನ್ನು ಎಂದೂ ನೋಡಲಿಲ್ಲ. ನನಗೆ ಆತನ ಭಾಷೆ ತಿಳಿದಿಲ್ಲ. ಆತನ ದೇಶದಲ್ಲಿ ಎಂದೂ ಕಾಲಿಡಲಿಲ್ಲ. ಆದರೂ, ತುಂಬ ಹತ್ತಿರದವರನ್ನು ಕಳೆದುಕೊಂಡರೆ ಆಗುವಷ್ಟು ದುಃಖ ಆಗುತ್ತಿದೆ. ಈ ಅಸಾಧಾರಣ ಮನುಷ್ಯನ ಸಾವಿನಿಂದಾಗಿ ಇಡೀ ಪ್ರಪಂಚವೇ ಶೋಕಾಚರಣೆಯಲ್ಲಿ ಮುಳುಗಿದೆ."
ಪ್ರೊಫೆಸರ್ ಆಲ್ಬರ್‍ಟ್ ಐನ್‌ಸ್ಟೀನ್ ದೃಢವಾಗಿ ಹೇಳಿದ್ದು : "ಒಂದು ಶಕ್ತಿಶಾಲಿ ಜನಬೆಂಬಲವನ್ನು ಕೇವಲ ವಾಡಿಕೆಯ ರಾಜಕೀಯ ತಂತ್ರ ಮತ್ತು ಕುತಂತ್ರಗಳಿಂದ ಮಾತ್ರವಲ್ಲದೆ ಜೀವನದ ಅತ್ಯುತ್ತಮ ನೈತಿಕ ಮಟ್ಟದ ನಡವಳಿಕೆಯಿಂದಲೂ ಕಟ್ಟಬಹುದು ಎಂದು ಖಚಿತ ಉದಾಹರಣೆಯ ಮುಖಾಂತರ ಗಾಂಧಿ ತೋರಿಸಿಕೊಟ್ಟರು."
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತನ್ನ ಸದಸ್ಯರು ಸತ್ತ ಮನುಷ್ಯನಿಗೆ ಗೌರವ ಸೂಚಿಸಲಿಕ್ಕಾಗಿ ಕಲಾಪವನ್ನು ಕೆಲಕಾಲ ಸ್ಥಗಿತಗೊಳಿಸಿತು. ಬ್ರಿಟಿಷ್ ಪ್ರತಿನಿಧಿ ಫಿಲಿಪ್ ನೋಯೆಲ್‌ಬೆಕರ್ ಗಾಂಧಿಯನ್ನು "ಕಡುಬಡವನ, ಏಕಾಂಗಿಯ ಮತ್ತು ಸೋತವನ ಸ್ನೇಹಿತ," ಎಂದು ವರ್ಣಿಸಿ "ಗಾಂಧಿಯ ಮಹತ್ಸಾಧನೆಗಳು ಇನ್ನು ಮುಂದೆಯೂ ಬರಲಿವೆ." ಎಂದು ಪ್ರತಿಪಾದಿಸಿದ.
ಭದ್ರತಾ ಮಂಡಳಿಯ ಅನ್ಯ ಸದಸ್ಯರು ಗಾಂಧಿಯ ಆಧ್ಯಾತ್ಮಿಕ ಗುಣಗಳನ್ನು ಶ್ಲಾಘಿಸಿ ಶಾಂತಿ ಮತ್ತು ಅಹಿಂಸೆಯಡೆಗೆ ಆತನ ನಿಷ್ಠೆಯನ್ನು ಪ್ರಶಂಸಿಸಿದರು. ಸೋವಿಯತ್ ಒಕ್ಕೂಟದ ಆಂಡ್ರ್ಯಿಗ್ರಾಮಿಕೊ ಗಾಂಧಿಯನ್ನು ಭಾರತದ ಉನ್ನತ ರಾಜಕೀಯ ನಾಯಕರೊಲ್ಲಬ್ಬರೆಂದು ವರ್ಣಿಸಿ ಆತನ ಹೆಸರು ಸುದೀರ್ಘ ಸಮಯ ತೆಗೆದುಕೊಂಡ ಭಾರತದ ಜನರ ರಾಷ್ಟ್ರೀಯ ವಿಮೋಚನಾ ಹೋರಾಟದ ಜೊತೆಗೆ ಎಂದಿಗೂ ಜೋಡಿಸಲ್ಪಡುತ್ತದೆ ಎಂದರು. ಸೋವಿಯತ್ ಉಕ್ರೇನ್‌ನ ಪ್ರತಿನಿಧಿ ಟಾರಾಸೆಂಕೊ ಸಹ ಗಾಂಧಿಯ ರಾಜಕಾರಣವನ್ನು ಒತ್ತುಕೊಟ್ಟು ಹೇಳಿದರು.
ವಿಶ್ವಸಂಸ್ಥೆ ತನ್ನ ಧ್ವಜವನ್ನು ಅರ್ಧ ಕೆಳಗಿಳಿಸಿತು.
ಮಾನವತೆ ತನ್ನ ಧ್ವಜವನ್ನು ಪೂರ್ತಿ ಇಳಿಸಿತು.
ಗಾಂಧಿಯ ಸಾವಿಗೆ ಜಗತ್ತಿನಾದ್ಯಂತದ ಪ್ರತಿಕ್ರಿಯೆಯೇ ಒಂದು ಮುಖ್ಯ ನೈಜಸಾಕ್ಷಿ; ಅದು ವ್ಯಾಪಕವಾಗಿ ಹರಡಿದ್ದ ಮನೋಭಾವ ಮತ್ತು ಅಗತ್ಯವನ್ನು ಅಭಿವ್ಯಕ್ತಗೊಳಿಸಿತು. ನ್ಯೂಯಾರ್ಕ್‌ನ ಪತ್ರಿಕೆಯ ಆಲ್ಬರ್ಟ್ ಡ್ಯೂಶ್ಚ್, "ಗಾಂಧಿಯ ಸಾವಿಗೆ ಪೂಜ್ಯಭಾವನೆಯಿಂದ ಪ್ರತಿಸ್ಪಂದಿಸಿದ ಜಗತ್ತಿಗೆ ಇನ್ನೂ ಸ್ವಲ್ಪ ಭರವಸೆಯಿದೆ." ಎಂದು ಘೋಷಿಸಿ- "-ನವದೆಹಲಿಯ ದುರಂತವನ್ನು ಹಿಂಬಾಲಿಸಿದ ಆಘಾತ ಮತ್ತು ಪರಿತಾಪ ನಾವು ಸಂತತ್ವವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೂ ಅದನ್ನು ಗೌರವಿಸುತ್ತೇವೆ ಎಂಬುದನ್ನು ತೋರಿಸಿಕೊಟ್ಟಿತು." ಎಂದರು.
ಅಮೇರಿಕಾದ ಸೆನೆಟರ್ ಆರ್ಥರ್ ವ್ಯಾಂಡೆನ್‌ಬರ್ಗ್ ಹೇಳಿದ್ದು, "ವಿನಯಶೀಲತೆ ಮತ್ತು ಸರಳ ಸತ್ಯಗಳನ್ನು ಗಾಂಧಿ ಸಾಮ್ರಾಜ್ಯಗಳಿಗಿಂತ ಶಕ್ತಿಶಾಲಿಯನ್ನಾಗಿ ಮಾಡಿದರು." ಕಾದಂಬರಿಗಾರ್ತಿ ಪರ್ಲ್ ಬಕ್ ಗಾಂಧಿಯ ಹತ್ಯೆಯನ್ನು "ಮತ್ತೊಂದು ಶಿಲುಬೆಗೇರಿಕೆ" ಎಂದು ವರ್ಣಿಸಿದರು. ನ್ಯಾಯಾಧೀಶ ಫೆಲಿಕ್ಸ್ ಫ್ರಾಂಕ್‌ಫರ್ಟರ್ ಅದನ್ನು "ಪ್ರಪಂಚದ ಸತ್ಯ ಪಡೆಗಳ ವಿರುದ್ಧದ ಅತಿ ಕ್ರೂರ ಹೊಡೆತ," ಎಂದರು.
ಗಾಂಧಿಯನ್ನು ಪ್ರಶಂಸಿಸುತ್ತಿದ್ದ ಆಡಳಿತಗಾರ ಮತ್ತು ರಾಜಕಾರಣಿಗಳಿಗೆ ತಮ್ಮ ಸ್ವಂತವೇ ನ್ಯೂನತೆಗಳನ್ನು ಕನಿಷ್ಠ ನೆನಪಿಸುವಷ್ಟಾದರೂ ಆಗಿದ್ದರಾತ.
ಕ್ಯಾಲಿಫೋರ್ನಿಯಾದ ಹದಿಮೂರು ವರ್ಷದ ಹುಡುಗಿ ಒಂದು ಕಾಗದದಲ್ಲಿ ಬರೆದಳು: "ಗಾಂಧಿಯ ಸಾವನ್ನು ಕೇಳಿ ನನಗೆ ನಿಜವಾಗಿಯೂ ದಾರುಣ ದುಃಖವಾಯಿತು. ಆತನ ಬಗ್ಗೆ ನನಗೆ ಅಷ್ಟೊಂದು ಆಸಕ್ತಿಯಿದೆ ಎಂದು ಎಂದೂ ಅಂದುಕೊಂಡಿರಲಿಲ್ಲ. ಆದರೆ ಆ ಮಹಾನ್ ವ್ಯಕ್ತಿಯ ಸಾವಿನಿಂದ ನನಗೆ ಎಷ್ಟು ಅಸಂತೋಷವಾಗಿದೆ ಎಂದು ಈಗ ತಿಳಿಯಿತು."
ನ್ಯೂಯಾರ್ಕಿನಲ್ಲಿ, ಹನ್ನೆರಡು ವರ್ಷದ ಹುಡುಗಿ ಅಡಿಗೆ ಮನೆಗೆ ಉಪಹಾರ ಸ್ವೀಕರಿಸಲು ಹೋಗಿದ್ದಳು. ಚಾಲನೆಯಲ್ಲಿದ್ದ ರೇಡಿಯೊ ಗಾಂಧಿಗೆ ಗುಂಡಿಟ್ಟ ಸುದ್ದಿ ತಂದಿತು. ಅದೇ ಕ್ಷಣದಲ್ಲಿ, ಆ ಚಿಕ್ಕ ಹುಡುಗಿ, ಮನೆಕೆಲಸದವಳು, ಮತ್ತು ತೋಟದ ಮಾಲಿ ಪ್ರಾರ್ಥನಾ ಸಭೆ ನಡೆಸಿದರು, ಪ್ರಾರ್ಥಿಸಿದರು ಮತ್ತು ಅತ್ತರು. ಅದೇ ರೀತಿ, ಪ್ರಪಂಚದಾದ್ಯಂತ ಲಕ್ಷಾಂತರ ಜನ ಗಾಂಧಿಯ ಸಾವನ್ನು ವೈಯುಕ್ತಿಕ ನಷ್ಟವೆಂಬಂತೆ ಶೋಕಿಸಿದರು. ಅವರಿಗೆ ಯಾಕೆಂದು ಅಷ್ಟೇನೂ ಸರಿಯಾಗಿ ತಿಳಿದಿರಲಿಲ್ಲ; ಆತ ಏನನ್ನು ಪ್ರತಿನಿಧಿಸಿದ್ದ ಎಂದೂ ಸಹ ಚೆನ್ನಾಗಿ ಗೊತ್ತಿರಲಿಲ್ಲ. ಆದರೆ ಆತ "ಒಳ್ಳೆಯ ಮನುಷ್ಯ"ನಾಗಿದ್ದ ಮತ್ತು ಒಳ್ಳೆಯವರು ವಿರಳ.
ಸರ್ ಸ್ಟಾಫರ್ಡ್ ಕ್ರಿಪ್ಸ್ ಬರೆಯುತ್ತಾರೆ, "ಲೌಕಿಕ ವಸ್ತುಗಳ ಮೇಲೆ ಶಕ್ತಿಯುತ ಚೈತನ್ಯವನ್ನು ಇಷ್ಟು ಬಲಯುತವಾಗಿ ಮತ್ತು ಸಮಂಜಸವಾಗಿ ಯಾವುದೇ ಸಮಯದಲ್ಲಾಗಲಿ ಅಥವ ಕನಿಷ್ಠ ಇತ್ತೀಚಿನ ಇತಿಹಾಸದಲ್ಲಾಗಲಿ ಪ್ರದರ್ಶಿಸಿದ ಮತ್ತೊಬ್ಬ ವ್ಯಕ್ತಿ ನನಗೆ ತಿಳಿದಿಲ್ಲ." ಇದನ್ನೇ ತಾವು ಶೋಕಿಸುತ್ತಿದ್ದಾಗ ಜನ ಗ್ರಹಿಸಿದ್ದು. ಅವರ ಸುತ್ತಮುತ್ತೆಲ್ಲ ಲೌಕಿಕ ವಸ್ತುಗಳು ಅಲೌಕಿಕ ಚೈತನ್ಯಕ್ಕಿಂತ ಬಲವಾಗಿದ್ದವು. ಆತನ ಮಿಂಚಿನಂತಹ ದಿಢೀರ್ ಸಾವು ವಿಶಾಲ ಕತ್ತಲನ್ನು ಅನಾವರಣಗೊಳಿಸಿತು. ಆತನ ನಂತರ ಜೀವಿಸಿದ ಯಾರೂ ಸತ್ಯವಂತ ಜೀವನವನ್ನು ಜೀವಿಸುವುದಕ್ಕಾಗಿ, ಕಕ್ಕುಲತೆ, ಸ್ವವ್ಯಕ್ತಿನಾಶ, ವಿನಯಶೀಲತೆ, ಸೇವೆ ಮತ್ತು ಅಹಿಂಸೆಯನ್ನು ಸುದೀರ್ಘ ಕಾಲ, ಪ್ರಬಲ ಶತ್ರುಗಳ ವಿರುದ್ಧದ ಕಷ್ಟಮಯ ಹೋರಾಟವನ್ನು, ಆತನಷ್ಟು ಕಠಿಣವಾಗಿ ಪ್ರಯತ್ನಿಸಲಿಲ್ಲ ಮತ್ತು ಅಷ್ಟು ಯಶಸ್ಸು ಪಡೆಯಲಿಲ್ಲ. ತನ್ನ ದೇಶದಲ್ಲಿನ ಬ್ರಿಟಿಷ್ ಆಡಳಿತದ ವಿರುದ್ಧ ಮತ್ತು ತನ್ನ ದೇಶದ್ದೇ ಜನರ ದುಷ್ಟತೆಯ ವಿರುದ್ಧ ಆತ ತೀವ್ರವಾಗಿ ಮತ್ತು ನಿರಂತರವಾಗಿ ಹೋರಾಡಿದ. ಆದರೆ ಯುದ್ದದ ಮಧ್ಯದಲ್ಲಿ ತನ್ನ ಕೈಗಳನ್ನು ಪವಿತ್ರವಾಗಿಟ್ಟುಕೊಂಡ. ಮತ್ಸರವಿಲ್ಲದೆ, ಢೋಂಗಿತನವಿಲ್ಲದೆ, ಅಥವ ದ್ವೇಷವಿಲ್ಲದೆ ಹೋರಾಡಿದ.
***
ಈ ಮೇಲಿನ ಸಾಲುಗಳು 1950 ರಲ್ಲಿ ಪ್ರಕಟವಾದ, ಲೂಯಿ ಫಿಷರ್ ಎಂಬ ಪಾಶ್ಚಾತ್ಯ ಲೇಖಕ ಬರೆದ "The Life of Mahatma Gandhi" ಪುಸ್ತಕದ ಒಂದೆರಡು ಪುಟಗಳಲ್ಲಿ ಬರುವ ವಾಕ್ಯಗಳು. ಈ ಪುಸ್ತಕವನ್ನು ಆತ ಬರೆದದ್ದು ಇಂಗ್ಲೀಷ್ ಬಲ್ಲ ಅಮೇರಿಕನ್ ಹಾಗೂ ಪಾಶ್ಚಾತ್ಯ ಓದುಗರನ್ನು ಗಮದಲ್ಲಿಟ್ಟುಕೊಂಡು. ಆದ್ದರಿಂದ ಅಮೇರಿಕನ್ನರಿಗೆ ಅಥವ ಪಾಶ್ಚಾತ್ಯರಿಗೆ ಪ್ರಸ್ತುತ ಮತ್ತು ಪರಿಚಿತವಿರುವ, ಅವರಿಗೆ ಮುಖ್ಯವೆನಿಸುವ ವ್ಯಕ್ತಿ-ವಿಷಯಗಳನ್ನು ತೆಗೆದುಕೊಂಡು ಆ ದೃಷ್ಟಿಕೋನದಲ್ಲಿ ನಿರೂಪಿಸಿರುವುದು.Youtubeನಲ್ಲಿ ಈ ಲೇಖನದ ವಾಚನ
ಶರಣರ ಗುಣವನ್ನು ಮರಣದಲ್ಲಿ ನೋಡೆಂಬಂತೆ, ಮೋಹನದಾಸ ಗಾಂಧಿ ಸತ್ತಾಗ ಜಗತ್ತು ಪ್ರತಿಕ್ರಿಯಿಸಿದ ರೀತಿ ಅನನ್ಯ. ಆದರೆ ಇಲ್ಲಿ ಆ ಅನನ್ಯತೆಗೆ ಕೇವಲ ಒಳ್ಳೆಯವರು ವಿರಳ ಎಂಬುದಷ್ಟೇ ಕಾರಣವಲ್ಲ ಎನ್ನುವುದು ಸ್ವಲ್ಪ ಆಲೋಚಿಸಿದರೆ ಎಲ್ಲರಿಗೂ ತಿಳಿಯುವ ಸರಳ ಸತ್ಯ. ಐವತ್ತಾರು ವರ್ಷಗಳ ಹಿಂದೆ ಗಾಂಧಿ ಸತ್ತ ದಿನವನ್ನು ಹುತಾತ್ಮರ ದಿನಾಚರಣೆಯನ್ನಾಗಿಸಿ ಕೈತೊಳೆದುಕೊಳ್ಳುವುದಕ್ಕಿಂತ ಸಮಕಾಲೀನ ಅಗತ್ಯಗಳಿಗೆ ತಕ್ಕಂತೆ ಗಾಂಧೀವಾದವನ್ನು ಸಾಣೆ ಹಿಡಿದುಕೊಂಡರೆ ಎಷ್ಟೋ ಸಮಸ್ಯೆಗಳಿಗೆ ನೀತಿಯುಕ್ತ, ಸತ್ಯ ಉತ್ತರ ಸಿಗುತ್ತದೆ.
ನಮ್ಮ ಅನಂತಾನಂತ ಅವತಾರಾಚಾರ್ಯ ಪುರುಷರು(?) ಹೇಳಿದಷ್ಟು ಕಠಿಣವಾಗಲಿ, ಅಮೂರ್ತವಾಗಿಯಾಗಲಿ ಗಾಂಧಿಯ ಚಿಂತನೆಗಳು ಇಲ್ಲ. ಹಾಗೆಯೇ ಗಾಂಧಿ ಹೇಳಿದ ಪ್ರತಿ ಅಕ್ಷರವೂ ಸರಿ, ಅದನ್ನು ಸಮಕಾಲೀನಕ್ಕೆ ತಕ್ಕಂತೆ ಪರಿಷ್ಕರಿಸಿ ಅಳವಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂಬ ಮುಲ್ಲಾ ಮಠಾಧೀಶರ ಸ್ವತ್ತಾಗಿಯೂ ಗಾಂಧಿ ಉಳಿದಿಲ್ಲ. ತನ್ನೆಲ್ಲ ಹುಳುಕಗಳ ಜೊತೆಗೆ ಸಾರ್ವಜನಿಕವಾಗಿ ಜೀವಿಸಿದ, ಲೇಖಕ ಫಿಷರ್ ಹೇಳುವಂತೆ ಸ್ವವ್ಯಕ್ತಿನಾಶಕ್ಕೆ (self-effacement) ಶ್ರಮಿಸಿದವನ ವ್ಯಕ್ತಿಪೂಜೆ ಮಾಡುವವರು ಅಪಹಾಸ್ಯಕ್ಕೆ ಈಡಾಗುವುದು ಸಹಜ. ಆದ್ದರಿಂದ ಗಾಂಧಿ-ಬುದ್ಧರ ಪುನರವತಾರಕ್ಕಾಗಿ ಕಾಯಬೇಕು ಎಂಬ ನಿರಾಶಾ ಮತ್ತು ಅಸಹಾಯಕ ಸ್ಥಿತಿಯಲ್ಲಿ ಬಿದ್ದು ಹೊಸ ಮಾರ್ಗಗಳನ್ನು ಹುಡುಕುವ, ಹುಟ್ಟು ಹಾಕುವ ಕೆಲಸ ಮಾಡದೆ ಗಾಂಧಿ-ಬುದ್ಧರಿಗೆ ಕಾಯುವುದು ಕರುಣಾಜನಕವೆನಿಸುವ ಸ್ಥಿತಿ. ಇತಿಹಾಸದ ಮಟ್ಟಿಗೆ ಹೇಳುವುದಾದರೆ ಮತ್ತೆ ನಾ ಬರುವೆ ಎಂದು ಇವರ್ಯಾರೂ ಹೇಳಿಲ !!! ಸತ್ತವರಿಗೆ ಕಾಯುತ್ತಾ ಕೂರುವುದು ಮನುಷ್ಯಜಾತಿಯ ಕ್ರಿಯಾಶಕ್ತಿಯನ್ನೇ ಶಂಕಿಸಿದಂತೆ.
ನಮ್ಮ ದಾರಿ ನಾವೇ ಹುಡುಕಿಕೊಳ್ಳಬೇಕು. ಯಾಕೆಂದರೆ ಹುತಾತ್ಮರು ಪ್ರೇತಾತ್ಮರಲ್ಲ.
(2004 ಜನವರಿ 30 ರಂದು ದಟ್ಸ್‌ಕನ್ನಡದಲ್ಲಿ ಮತ್ತು ನನ್ನ "ಜಿಜ್ಞಾಸಾಗಂಗೆಯ ದಡದ ಕಾಲ್ದಾರಿಯಲ್ಲಿ" ಪುಸ್ತಕದಲ್ಲಿ ಪ್ರಕಟಿತವಾಗಿದೆ.)
5 comments:
neenu bardiddnannu neene odu.. Jayanagaradalli ninge bidda votes are in 3 digits.. remeber that.. Bandbitta dodda buddhi heloke...
ಗಾಂಧೀಜಿಯವರ ಕುರಿತು ನೀವು ಹಿಂದೆ ಬರೆದಿದ್ದ ಲೇಖನ ಹಾಗು ಈಗ ಅದಕ್ಕೆ ಸೇರಿಸಿರುವ ಅಂಶಗಳೆಲ್ಲ ಪ್ರಸ್ತುತವಾಗಿವೆ. ಗಾಂಧಿ ಹತ್ಯೆ ಮಾಡಿದವರ ನೀಚ ಮನಸ್ಥಿತಿ ಹೇಗಿರುತ್ತದೆ ಎಂಬುದಕ್ಕೆ ಹೆಸರಿಲ್ಲದ ಮಹಾತ್ಮ ಮೇಲೆ ನೀಡಿರುವ ಪ್ರತಿಕ್ರಿಯೆಯೇ ಸಾಕ್ಷಿ. ಇಂಥ ದುರುಳರನ್ನು ನಿರ್ಲರ್ಕ್ಷಿಸಿ ನಿರ್ಭಯವಾಗಿ ಬರೆಯುವವರ ಸಂಖ್ಯೆ ಹೆಚ್ಚಾಗಬೇಕಿದೆ. ಗಾಂಧಿಹತ್ಯೆಕೋರರು ನೀವು ಹೇಳಿದಂತೆ ಇನ್ನೂ ಜೀವಂತವಾಗಿದ್ದಾರೆ, ಮಾತ್ರವಲ್ಲ ಅವರ ಸಂತತಿ ಹೆಚ್ಚಾಗುತ್ತಲೇ ಇದೆ. ಅವರನ್ನು ಜನಸಾಮಾನ್ಯರೇ ನಿಗ್ರಹಿಸುವ ಕಾಲ ದೂರವೇನೂ ಇಲ್ಲ.
ಈ “ಕೋಮುವಾದ” ಪರಿಹಾರವಾಗಬೇಕಾದ್ರೆ ಇರೋದು ಒಂದೇ ದಾರಿ ಹೊಡೆದೋ ಬಡಿದೋ ದುಡ್ಡುಕೊಟ್ಟೋ ಹೆಂಗಾದ್ರೂ ಸರಿ, ಪ್ರಪಂಚದಲ್ಲಿರೋರ್ನೆಲ್ಲಾ ಕ್ರಿಶ್ಚಿಯನ್ ಮತಕ್ಕೆ ಕನ್ವರ್ಟ್ ಮಾಡಿಬಿಡೋದು. ಅಗಲಾದ್ರೂ ಈ ಮತೀಯ ಗಲುಭೆಗಳು ಕಡಿಮೆಯಾಗತ್ತಾ ನೋಡಬೇಕು.
ಹಿಂದೂಗಳನ್ನ, ಬೌದ್ಧಮತದವ್ರನ್ನ ಹೇಗಾದ್ರೂ ಮಾಡಿ ಕನ್ವರ್ಟ್ ಮಾಡಬಹುದು ಬಿಡಿ. ಅವ್ರದ್ದೇನು ಅಷ್ಟು ಪ್ರತಿರೋಧ ಇರಲ್ಲ. ಎಷ್ಟಿದ್ರೂ ಬಡವರು. ಅಮೇರಿಕಾದ ರೊಕ್ಕ ಸ್ವಲ್ಪ ಖರ್ಚು ಮಾಡಿದ್ರೆ ಸಾಕು. ಮತಾಂತರವಾಗಿ ಹೋಗ್ತಾರೆ. ಆದ್ರೆ ಮುಸಲ್ಮಾನರನ್ನ, ಯಹೂದಿಗಳನ್ನ ಕನ್ವರ್ಟ್ ಮಾಡೋದೇ ಒಂದು ದೊಡ್ಡ ತೊಂದರೆ. ಧರ್ಮದ ವಿಷಯದಲ್ಲಿ ಅವರು ತುಂಬಾ ಜಿಗುಟು. ಪ್ರಪಂಚದ ಬುದ್ದಿಜೀವಿಗಳೆಲ್ಲಾ ಒಟ್ಟುಗೂಡಿ ಈ ಸಮಸ್ಯೆಗೆ ಪರಿಹಾರ ಹುಡುಕಬೇಕು.
ಗಾಂಧೀಜಿ ಒಂದು ತಪ್ಪು ಮಾಡಿದರು. ಅವರೇನಾದ್ರೂ ಕ್ರಿಶ್ಚಿಯನ್ ಗೆ ಮತಾಂತರವಾಗಿಬಿಟ್ಟಿದ್ರೆ ಅವರ ಹೆಸರು ಹೇಳಿಕೊಂಡು ಇಂದು ಅರ್ಧಕ್ಕರ್ಧ ಭಾರತ ಕ್ರಿಶ್ಚಿಯನ್ ಆಗಿಬಿಟ್ಟಿತುತ್ತಿತ್ತು. ಅವರಿಗೆ ನೋಬೆಲ್ ಪ್ರೈಜಿನ ಆಸೆ ತೋರಿಸಿ ಕ್ರೈಸ್ತಮತಕ್ಕೆ ಕನ್ವರ್ಟ್ ಮಾಡಲು ಕ್ರೈಸ್ತ ಬಂಧುಗಳು ಪ್ರಯತ್ನಿಸಬೇಕಿತ್ತು.
ಅಲೆಕ್ಸಾಂಡರ್ (ಅಲಿಯಾಸ್ ರಾಜು).
good on Raviit is really thought provoking keep it up
Hai
Gandhi bagge poorvgrhapidita manasugalu mathra anonymous hesarinalli baiidu bareyodhu. Thumbha uttamavada lekhana. Pls nanna blog kadegu omme bheti kodi.
bahumukhi.blogspot.com
Nagendra.Trasi
Post a Comment