Oct 2, 2009

"ಹೊರಗಣವರು" - ಈ ವಾದ ಪರಿಪೂರ್ಣವೆ? ನಮಗೆಷ್ಟು ಪ್ರಸ್ತುತ?

[ವಿಕ್ರಾಂತ ಕರ್ನಾಟಕದ ಅಕ್ಟೋಬರ್ 9, 2009 ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.
ಲೇಖನ ಸರಣಿಯ ಹಿಂದಿನ ಲೇಖನಗಳು:
ಮೊದಲನೆಯ ಲೇಖನ: "ಹೊರಗಣವರು" - ಯಶಸ್ಸಿಗೆ ಯಾರೆಲ್ಲಾ, ಏನೆಲ್ಲಾ ಕಾರಣ!
ಎರಡನೆಯದು: ಹುಟ್ಟಿದ ಘಳಿಗೆ ಸರಿ ಇರಬೇಕು...
ಮೂರನೆಯದು: ದಶಸಹಸ್ರ ಗಂಟೆಯೆಂಬ ಪ್ರತಿಭಾ-ನಿಯಮ...
ನಾಲ್ಕನೆಯದು: ಯಾವುದಕ್ಕೂ "ಸಂಸ್ಕಾರ" ಇರಬೇಕ್ರಿ !
ಐದನೆಯದು: ವಿಮಾನ ಅಪಘಾತಗಳಲ್ಲಿ ಭಾಷೆ ಮತ್ತು ಪರಂಪರೆಯ ಪಾತ್ರ
ಆರನೆಯದು: ಗಣಿತಕ್ಕೂ ಭಾಷೆಗೂ, ಗಣಿತಕ್ಕೂ ಭತ್ತದ ಕೃಷಿಗೂ ಎಲ್ಲಿಂದೆಲ್ಲಿಯ ಸಂಬಂಧ?
ಏಳನೆಯದು: ನಮ್ಮ ಬಡಮಕ್ಕಳಿಗೆ ಬೇಸಿಗೆ ರಜೆಗಳು ಬೇಕೆ?]


ಸಮಾಜದ ಜವಾಬ್ದಾರಿಯನ್ನು ನೆನಪಿಸುವಂತಹ ಪುಸ್ತಕಗಳು ನಮ್ಮಲ್ಲಿ ಅಪರೂಪ. ಇನ್ನು, ವ್ಯಕ್ತಿಗತ ಯಶಸ್ಸೆ ಸರ್ವೋಚ್ಚ ಸಾಧನೆ ಎಂದು ಬಿಂಬಿತವಾಗುತ್ತಿರುವ ನಮ್ಮ ಈಗಿನ ಸಂದರ್ಭದಲ್ಲಿ ಸಮಾಜದ ಯಶಸ್ಸು ಮತ್ತು ಸಮಾಜದ ಪಾತ್ರದ ಬಗ್ಗೆ ಚರ್ಚಿಸುವುದೂ ಕಷ್ಟವಾಗುತ್ತಿದೆ. ಅಪರೂಪವಾಗುತ್ತಿದೆ. ಆದರೆ ಇದು ಅಮೆರಿಕದಲ್ಲಿ ಸಾಧ್ಯ. ಮತ್ತು ಇಲ್ಲಿಯ ಸಮಾಜ ಅಂತಹುದನ್ನು ಸ್ವೀಕರಿಸುತ್ತದೆ ಮತ್ತು ಪ್ರಶಂಸಿಸುತ್ತದೆ. ಅದಕ್ಕೆ ’Outliers’ ಇತ್ತೀಚಿನ ಉದಾಹರಣೆ. ಈ ಪುಸ್ತಕದಲ್ಲಿ ಧ್ವನಿತವಾಗಿರುವ ನೈತಿಕ ಸಂದೇಶ, ಅದು ನೆನಪಿಸುವ ಜವಾಬ್ದಾರಿ ಮತ್ತು ಅದಕ್ಕೆ ಪೂರಕವಾಗಿ ಅಲ್ಲಿ ಒದಗಿಸಿರುವ ಪುರಾವೆಗಳೆ ಈ ಪುಸ್ತಕದೆಡೆಗೆ ನನ್ನನ್ನು ಆಕರ್ಷಿಸಿದ್ದು. ಇದರ ಜೊತೆಗೆ, ಈ ಪುಸ್ತಕವನ್ನು ನಮ್ಮ ಸಂದರ್ಭಕ್ಕೂ ಅನ್ವಯಿಸಿಕೊಂಡು ಚರ್ಚಿಸಬಹುದಾದ ಸಾಧ್ಯತೆಯೆ ಇದರ ಬಗ್ಗೆ ಪತ್ರಿಕೆಯಲ್ಲಿ ವಿವರವಾಗಿ ಬರೆಯಲು ನನ್ನನ್ನು ಪ್ರೇರೇಪಿಸಿದ್ದು.

’ಹೊರಗಣವರು’ ಆದ್ಯಂತವಾಗಿ ಏನನ್ನು ಹೇಳುತ್ತದೆ? ’ಯಶಸ್ಸೆನ್ನುವುದು ವ್ಯಕ್ತಿಯೊಬ್ಬನಿಗೆ ಸಿಗುವ ಅವಕಾಶ ಮತ್ತು ಆತನ ಪರಂಪರೆಯ ಉತ್ಪನ್ನವೆ ಹೊರತು ಬೇರೇನಲ್ಲ,’ ಹಾಗು, ’ಇವತ್ತಿನ ಯಶಸ್ಸನ್ನು ನಿರ್ಧರಿಸುವ ಅದೃಷ್ಟದ ಜನ್ಮದಿನಗಳು ಮತ್ತು ಇತಿಹಾಸದ ಆಕಸ್ಮಿಕಗಳಂತಹ ಅದೃಷ್ಟವಕಾಶಗಳು ಮತ್ತು ಕ್ರಮವಿಲ್ಲದ ಅನುಕೂಲಗಳ ಬದಲಿಗೆ ಎಲ್ಲರಿಗೂ ಅವಕಾಶಗಳು ಸಿಗುವಂತಹ ವಾತಾವರಣವನ್ನು ಸಮಾಜ ಪೋಷಿಸಬೇಕು,’ ಎಂದು. ಇದು ಯಶಸ್ಸನ್ನು ಹೊಸತಾದ ರೀತಿಯಲ್ಲಿ ನೋಡುವ ತಾಜಾಚಿಂತನೆ ಎಂದಷ್ಟೆ ಆಗಿಬಿಟ್ಟಿದ್ದರೆ ಇದು ನಮಗೆ ಅಷ್ಟೇನೂ ಮುಖ್ಯವಾಗುತ್ತಿರಲಿಲ್ಲ. ಆದರೆ, ಈ ಪುಸ್ತಕದ ತಿರುಳಿರುವುದು ತನ್ನ ಈ ವಾದಕ್ಕೆ ಪೂರಕವಾಗಿ ಗ್ಲಾಡ್‌ವೆಲ್ ಒದಗಿಸುತ್ತ ಹೋಗುವ ಪುರಾವೆಗಳು ಮತ್ತು ಅಧ್ಯಯನಗಳಲ್ಲಿ. ಇಟಲಿಯ ಹಳ್ಳಿಯೊಂದರಿಂದ ಅಮೆರಿಕಕ್ಕೆ ವಲಸೆ ಬಂದವರ "ಆರೋಗ್ಯಕರ ಹೃದಯ"; ಯೂರೋಪಿನ ಹಲವಾರು ದೇಶಗಳಿಂದ ಅಮೆರಿಕಕ್ಕೆ ವಲಸೆ ಬಂದು ಇಲ್ಲಿ ಅಪಾರ ಪರಿಶ್ರಮ ಮತ್ತು ಕಷ್ಟದಿಂದ ದಿನದ ಊಟ ದೊರಕಿಸಿಕೊಂಡ ಯಹೂದಿಗಳು; ಅದೇ ಯಹೂದಿಗಳ ಮಕ್ಕಳು ಇಲ್ಲಿಯ ಬಿಳಿಯ ವಕೀಲರ ಜನಾಂಗೀಯ ತಾರತಮ್ಯವೂ ಒಂದು ಕಾರಣವಾಗಿ ಯಶಸ್ವಿ ಕಾರ್ಪೊರೇಟ್ ವಕೀಲರಾಗಿ ಬದಲಾದದ್ದು; ಬಿಲ್ ಗೇಟ್ಸ್ ಮತ್ತು ಆತನ ಸಮಕಾಲೀನರಿಗಿದ್ದ ಚಾರಿತ್ರಿಕ ಅವಕಾಶಗಳು; ಅದರಲ್ಲಿ ಕೆಲವು ಜನರಿಗೆ ಇದ್ದ ಕೌಟುಂಬಿಕ ಬೆಂಬಲ; ಸಾಧನೆಗೆ ಮನುಷ್ಯ ವ್ಯಕ್ತಿಗತವಾಗಿ ಹಾಕಬೇಕಾದ ಪರಿಶ್ರಮದ ಅವಧಿ; ಹಾಗೆ ಹಾಕಲು ಆತನಿಗೆ ಇದ್ದಿರಬೇಕಾದ ಸಂಪ್ರದಾಯದ ಪ್ರಭಾವ ಎಂಬ ಪರೋಕ್ಷ ರೋಲ್‌ಮಾಡೆಲ್‌ಗಳು; ಸಮುದಾಯಗಳ ಮೇಲೆ ಭೌಗೋಳಿಕ ಪರಿಸರದ ಪ್ರಭಾವ; ಇಂತಹ ಹಲವಾರು ವಿಚಾರಗಳನ್ನು ಗ್ಲಾಡ್‌ವೆಲ್ ತರ್ಕಬದ್ಧವಾಗಿ ಈ ಪುಸ್ತಕದಲ್ಲಿ ಮಂಡಿಸುತ್ತಾನೆ.

ಈ ವಿಚಾರಗಳನ್ನು ಗಮನಿಸುತ್ತ ಹೋದಂತೆ ನನಗೆ ಇವುಗಳಲ್ಲಿ ಬಹುಪಾಲು ನಮ್ಮದೆ ಭಾರತೀಯ/ಕರ್ನಾಟಕದ ಪರಿಸರಕ್ಕೂ ಹತ್ತಿರ ಎಂದು ತೋರುತ್ತಾ ಹೋಯಿತು. ಬಯಲುಸೀಮೆ ಮತ್ತು ಮಲೆನಾಡಿನ ಜನರಲ್ಲಿಯ ಭಿನ್ನತೆ; ಬಯಲುಸೀಮೆಯ ಒರಟುತನ, ಪಾಳೇಗಾರಿಕೆ; ಜಾತಿ ಮತ್ತು ಬಣ್ಣದಿಂದ ಒದಗುತ್ತಿರುವ ಅನುಕೂಲಗಳು ಹಾಗು ಅನಾನುಕೂಲಗಳು; ಹಳ್ಳಿ ಮಕ್ಕಳು, ವಿಶೇಷವಾಗಿ ಬಯಲುಸೀಮೆಯ ಮಕ್ಕಳ ಶೈಕ್ಷಣಿಕ ಹಿಂದುಳಿದಿರುವಿಕೆ; ಮಕ್ಕಳ ಯಶಸ್ಸಿನಲ್ಲಿ ತಮ್ಮ ಪಾತ್ರ ಅರಿಯದೆ ತಮ್ಮ ಮೂಲಭೂತ ಜವಾಬ್ದಾರಿಯನ್ನೆ ನಿರ್ವಹಿಸಲಾಗದ ಪೋಷಕರು; ಅದಕ್ಕಿರುವ ಅಜ್ಞಾನ; ಅದಕ್ಕೆ ಕಾರಣ ಆಗಿರಬಹುದಾದ ಅವರ ಪರಂಪರೆ; ನಮ್ಮ ಸಂದರ್ಭಕ್ಕೆ ಅನ್ವಯಿಸಿಕೊಳ್ಳಬಹುದಾದ ಇಂತಹ ಹಲವಾರು ವಿಚಾರಗಳ ಬಗ್ಗೆ ಚರ್ಚೆ ಈ ಪುಸ್ತಕದ ಮೂಲಕ ಸಾಧ್ಯ. ಈ ಪುಸ್ತಕದಲ್ಲಿ ಪ್ರಸ್ತಾಪಿಸಿರುವ ಅನೇಕ ವೈಜ್ಞಾನಿಕ ಅಧ್ಯಯನಗಳು ನಮ್ಮಲ್ಲಿ ಈಗಲೂ ಸಾಧ್ಯವಿಲ್ಲ. ಅದಕ್ಕೆ ಪೂರಕವಾದ ವಾತಾವರಣ ನಮ್ಮಲ್ಲಿ ಇಲ್ಲ. ಹೀಗಿರುವಾಗ, ಈ ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ಅಧ್ಯಯನಗಳನ್ನೆ ಆಧಾರವಾಗಿಟ್ಟುಕೊಂಡು, ಆದರೆ ನಮ್ಮ ಪರಿಸರದಲ್ಲಿ ನಿಂತು, ಕೇವಲ ಸಾಮಾನ್ಯ ಜ್ಞಾನದ ಹಿನ್ನೆಲೆಯಲ್ಲಿ ನಾವು ನಮ್ಮ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವೆ? ಅದು ಸಾಧ್ಯ ಎನ್ನಿಸಿದ ಕಾರಣದಿಂದಲೆ, ವಿಶೇಷವಾಗಿ ನಮ್ಮ ಸರ್ಕಾರಿ ಶಾಲೆಗಳಿಗೆ ಹೋಗುವ ಮಕ್ಕಳ ಕುರಿತಾದರೂ ಒಂದು ಚರ್ಚೆ ಅಥವ ನೋಟ ಸಾಧ್ಯವೆ ಎನ್ನುವ ಬಹುಮುಖ್ಯ ಕಾರಣಕ್ಕೆ, ಈ ಪುಸ್ತಕದ ಕುರಿತಾಗಿ ವಿವರವಾಗಿ ಬರೆಯಬೇಕು ಎನ್ನಿಸಿದ್ದು.

ಇಲ್ಲಿ, "ಹೊರಗಣವರು"ನಲ್ಲಿಯ ತರ್ಕ ಮತ್ತು ಆಧಾರಗಳ ಬಗ್ಗೆ ಒಂದು ಮಾತು. ತನ್ನ ವಾದಕ್ಕೆ ಪೂರಕವಾಗಿ ಗ್ಲಾಡ್‌ವೆಲ್ ಒದಗಿಸುವ ತರ್ಕ ಮತ್ತು ಆಧಾರಗಳನ್ನು ಹಿಂದಿನ ಲೇಖನಗಳಲ್ಲಿ ನೀವು ಗಮನಿಸಿರುತ್ತೀರ. ನಿಮ್ಮಲ್ಲಿ ಹಲವರಿಗೆ ಆ ತರ್ಕಗಳು ಪರಿಪೂರ್ಣ ಎನಿಸಿರಲಾರವು. ಅದಕ್ಕೆ ಎರಡು ಕಾರಣಗಳಿರಬಹುದು. ಅದರಲ್ಲಿ, ಮೂಲಭೂತವಾಗಿ ಗ್ಲಾಡ್‌ವೆಲ್‌ನ ಚಿಂತನೆಯಲ್ಲಿಯೆ ದೋಷವಿರುವುದು ಚಿಕ್ಕ ಕಾರಣವಾಗಿದ್ದರೆ, ಆ ಪುಸ್ತಕದಲ್ಲಿರುವ ವಿವರಗಳನ್ನು ಸಬಲವಾಗಿ ಮತ್ತು ಪೂರ್ಣವಾಗಿ ನಿಮ್ಮ ಮುಂದೆ ಇಡದಿರಬಹುದಾದ ನನ್ನ ಮಿತಿಯೆ ದೊಡ್ಡ ಕಾರಣ ಆಗಿರಬಹುದು. ಹಾಗಾಗಿ, ಆ ಪುಸ್ತಕವನ್ನು ಪೂರ್ಣವಾಗಿ ಓದಿಯಷ್ಟೆ ನೀವು ನಿಮ್ಮ ಸ್ವಂತ ಅಭಿಪ್ರಾಯಕ್ಕೆ ಬರುವುದು ಒಳ್ಳೆಯದೆ ಹೊರತು ನನ್ನ ಲೇಖನಗಳಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳ ಪರ/ವಿರುದ್ದ ನಿಲುವಿನ ಮೇಲಲ್ಲ.

ಇನ್ನು, ಈ ಪುಸ್ತಕದ ಮಿತಿಯ ಬಗ್ಗೆ ವ್ಯಕ್ತವಾಗಿರುವ ಕೆಲವು ವಿಮರ್ಶಾತ್ಮಕ ಅಭಿಪ್ರಾಯಗಳು. ಬಹುತೇಕ ವಿಮರ್ಶಕರು ಈ ಪುಸ್ತಕದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನೆ ವ್ಯಕ್ತಪಡಿಸಿದ್ದಾರೆ. ’ಯಶಸ್ಸನ್ನು ಪೋಷಿಸುವಂತಹ ಸಂಸ್ಥೆಗಳನ್ನು ಬೆಳೆಸುವ ವಿಚಾರದಲ್ಲಿ ಕಳೆದ ದಶಕದಲ್ಲಿ (ಅಮೇರಿಕ) ದೇಶ ಬಹಳ ಕಡಿಮೆ ಕೆಲಸ ಮಾಡಿರುವ ಈ ಸಂದರ್ಭದಲ್ಲಿ ಅದರ ಬಗ್ಗೆ ಪುನರ್ ಚಿಂತಿಸಲು ಗ್ಲಾಡ್‌ವೆಲ್ ಈ ಪುಸ್ತಕದ ಮೂಲಕ ಒತ್ತಾಯಿಸುತ್ತಿದ್ದಾನೆ,’ ಎಂದು ನ್ಯೂ ಯಾರ್ಕ್ ಟೈಮ್ಸ್ ಬರೆಯುತ್ತದೆ. ಆದರೆ, ಪುಸ್ತಕವನ್ನು ನಿರಾಕರಿಸುವ ಅಥವ ತೀವ್ರ ವಿಮರ್ಶೆಗೆ ಒಡ್ಡುವ ವಿಮರ್ಶೆಗಳು ನನಗೆ ಕಾಣಲಿಲ್ಲ; ಇದರ ಹೊರತಾಗಿ: ’ಗ್ಲಾಡ್‌ವೆಲ್ ಪೂರ್ಣವಾಗಿ ಬೇರೆಯವರ, ಅಂದರೆ ಸಮಾಜಶಾಸ್ತ್ರಜ್ಞರ, ಮನೋವಿಜ್ಞಾನಿಗಳ, ಅರ್ಥಶಾಸ್ತ್ರಜ್ಞರ, ಇತಿಹಾಸಕಾರರ ಅಧ್ಯಯನದ ಮೇಲೆಯೆ ತನ್ನ ಅಂತಿಮ ನಿರ್ಣಯಗಳಿಗೆ ಬಂದಿದ್ದಾನೆ. ಅಷ್ಟಾದರೂ, ಆ ಅಧ್ಯಯನಗಳ ಹಿಂದಿನ ವಿಧಿವಿಧಾನಗಳ ಬಗ್ಗೆ ಆತ ಚರ್ಚಿಸುವುದಿಲ್ಲ. ಮತ್ತು, ಆ ಅಧ್ಯಯನಗಳಲ್ಲಿ ತನಗೆ ಬೇಕಾದ ವಿಷಯಗಳನ್ನಷ್ಟೆ ಆಯ್ದುಕೊಂಡಿದ್ದಾನೆ. ಹಾಗಾಗಿ, ಆತ ಆ ಅಧ್ಯಯನಗಳಲ್ಲಿ ಗಮನಿಸಿರಬಹುದಾದ ಮತ್ತು ತನ್ನ ವಾದಕ್ಕೆ ಅನುಕೂಲವಾಗದ ಕಾರಣ ನಿರಾಕರಿಸಬಹುದಾದ ವಿಚಾರಗಳ ಬಗ್ಗೆ ಓದುಗರಿಗೆ ಸಂದೇಹ ಉಳಿಯುತ್ತದೆ. ಗ್ಲಾಡ್‌ವೆಲ್‌ನ ಪುಸ್ತಕದಲ್ಲಿ ಕಾಣಿಸುವಷ್ಟು ನೇರವಾಗಿ ನಿಜಜೀವನ ಇರುವುದು ಅಪರೂಪ.’ -Publishers Weekly.

ಈ ಪುಸ್ತಕದ ಕೊನೆಯ ಅಧ್ಯಾಯದಲ್ಲಿ ಬರುವ ಮ್ಯಾಲ್ಕಮ್ ಗ್ಲಾಡ್‌ವೆಲ್ ಮತ್ತು ಆತನ ತಾಯಿಯ ಕತೆಯೊಂದಿಗೆ ಈ ಲೇಖನ ಮುಗಿಸುತ್ತೇನೆ. ಅದೂ ಅವಕಾಶ ಮತ್ತು ಸಂಪ್ರದಾಯಗಳ ಕುರಿತೇ ಆಗಿದೆ. 1784 ರಲ್ಲಿ ಗ್ರೇಟ್ ಬ್ರಿಟನ್ನಿನ ಐರ್‌ಲ್ಯಾಂಡಿನಿಂದ ಒಬ್ಬ ಬಿಳಿಯ ಇಂಗ್ಲೆಂಡ್‌ನ ವಸಾಹುತಾದ ವೆಸ್ಟ್ ಇಂಡೀಸ್‌ನ ಜಮೈಕಾಗೆ ಕಾಫಿ ತೋಟ ಮಾಡಲು ಬರುತ್ತಾನೆ. ಬಂದ ಒಂದಷ್ಟು ದಿನಗಳ ನಂತರ ಅಲ್ಲಿ ಒಬ್ಬ ಕರಿಯ ಗುಲಾಮಳನ್ನು ಕೊಂಡುಕೊಂಡು ತನ್ನ ಉಪಪತ್ನಿಯಾಗಿ ಇಟ್ಟುಕೊಳ್ಳುತ್ತಾನೆ. ಅವಳಿಗೆ ಆತನಿಂದ ಒಂದು ಮಗುವಾಗುತ್ತದೆ. ಇಂತಹ ’ಕುಲಸಂಕರ’ಕ್ಕೆ ಹುಟ್ಟುವವರು ಕರಿಯರಿಗಿಂತ ಸ್ವಲ್ಪ ಬೆಳ್ಳಗಿರುತ್ತಾರೆ. ಆಗಿನ ಗುಲಾಮಿ ದಿನಗಳಲ್ಲಿ ಅಪ್ಪಟ ಕರಿಯರು ಸಾಮಾಜಿಕವಾಗಿ ಎಲ್ಲರಿಗಿಂತ ಕೆಳಗಿನವರು. ಗುಲಾಮರು. ’ಕುಲಸಂಕರ’ರು ಅವರಿಗಿಂತ ಸ್ವಲ್ಪ ಮೇಲ್ಮಟ್ಟದವರು. ಅವರಿಗೆ ಮನೆ ಒಳಗೆ ಕೆಲಸ ಮಾಡುವ ಅವಕಾಶ ಇರುತ್ತದೆ. ಆಗಿನ ವೆಸ್ಟ್ ಇಂಡೀಸ್ ದ್ವೀಪಗಳ ಸಾಮಾಜಿಕ ಸಂಪ್ರದಾಯಗಳ ಪ್ರಕಾರ ತಮ್ಮ ಮನೆಯಲ್ಲಿ ಇದ್ದುದರಲ್ಲಿ ಹೆಚ್ಚಿಗೆ ಬೆಳ್ಳಗಿರುವವರಿಗೆ ಮನೆಯವರು ಹೆಚ್ಚಿಗೆ ಪ್ರೋತ್ಸಾಹ ಮತ್ತು ತ್ಯಾಗ ಮಾಡುತ್ತಿರುತ್ತಾರೆ. ಆತ ಆದಷ್ಟೂ ಮೇಲಕ್ಕೆ ಹೋಗಲಿ ಎನ್ನುವ ಆಸೆ. ಅಂತಹ ವಾತಾವರಣದಲ್ಲಿ, ಆ ಐರ್‌ಲ್ಯಾಂಡಿನ ಬಿಳಿಯನ ಬಹುಪಾಲು ಕರಿಮಗ ತನ್ನಂತೆಯೆ ಇನ್ನೊಬ್ಬ ಕುಲಸಂಕರದವಳನ್ನು ಮದುವೆಯಾಗುತ್ತಾನೆ. ಅವರ ಮೊಮ್ಮಗಳಿಗೆ ಇಬ್ಬರು ಅವಳಿಜವಳಿ ಹೆಣ್ಣುಮಕ್ಕಳು. ಆ ಮಕ್ಕಳಿಗೆ ಆರು ವರ್ಷ ಆಗಿದ್ದಾಗ (1937 ರಲ್ಲಿ) ತಮ್ಮ ದ್ವೀಪಸಮೂಹದ ಜನಗಳ ಉನ್ನತಿಗೆ ಏನೊಂದೂ ಕಾರ್ಯಕ್ರಮ ಹಮ್ಮಿಕೊಳ್ಳದ ಬ್ರಿಟನ್ನಿನ ವಿರುದ್ದ ವೆಸ್ಟ್ ಇಂಡೀಸ್ ಜನ ದಂಗೆ ಏಳುತ್ತಾರೆ. ಆ ದೊಂಬಿಯಲ್ಲಿ 14 ಜನ ಸಾಯುತ್ತಾರೆ. ಆ ಸಾವುನೋವನ್ನು ನೋಡಿ ಬ್ರಿಟಿಷ್ ಸರ್ಕಾರ ಒಂದಷ್ಟು ಶೈಕ್ಷಣಿಕ ಸುಧಾರಣೆಗಳನ್ನು ತರುತ್ತದೆ. 1941 ರಲ್ಲಿ ಉತ್ತಮ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಡುವ ತೀರ್ಮಾನ ಮಾಡುತ್ತದೆ. ಆ ಅವಳಿಜವಳಿ ಮಕ್ಕಳಿಗೆ ಇದೇ ವಿದ್ಯಾರ್ಥಿವೇತನದ ಕಾರಣದಿಂದ ಮಾರನೆಯ ವರ್ಷ ಹೈಸ್ಕೂಲ್ ಓದು ಸಾಧ್ಯವಾಗುತ್ತದೆ. ಅವರು ಇನ್ನೊಂದೆರಡುಮೂರು ವರ್ಷ ಮೊದಲೆ ಹುಟ್ಟಿದ್ದರೆ ಅವರ ಓದು ಅಲ್ಲಿಗೇ ನಿಲ್ಲಬೇಕಿತ್ತು. ಆದರೆ ದಂಗೆಯ ಕಾರಣದಿಂದಾಗಿ ಇವರಿಗೆ ಅವಕಾಶವೊಂದು ಸೃಷ್ಟಿಯಾಯಿತು. ಆ ಸಮಯದಲ್ಲಿ ಇಂಗ್ಲೆಂಡಿನಲ್ಲಿ ಕಾಲೇಜು ಓದಲು ಹೋಗುವ ವಿದ್ಯಾರ್ಥಿಗಳಿಗೆಂದು ವಿಶೇಷ ವಿದ್ಯಾರ್ಥಿವೇತನ ಇರುತ್ತದೆ. ಆದರೆ ಅದು ಒಂದು ವರ್ಷ ವಿದ್ಯಾರ್ಥಿಗಳಿಗೆ ಕೊಡಲ್ಪಟ್ಟರೆ ಇನ್ನೊಂದು ವರ್ಷ ವಿದ್ಯಾರ್ಥಿನಿಯರಿಗೆ. ಈ ಅವಳಿಜವಳಿ ಮಕ್ಕಳು ಹೈಸ್ಕೂಲ್ ಮುಗಿಸುವ ಸಮಯಕ್ಕೆ ಸರಿಯಾಗಿ ಆ ವರ್ಷ ವಿದ್ಯಾರ್ಥಿನಿಯರ ಸ್ಕಾಲರ್‌ಶಿಪ್ ವರ್ಷ. ಅವರಲ್ಲಿ ಒಬ್ಬಳಿಗೆ ವಿದ್ಯಾರ್ಥಿವೇತನ ಸಿಗುತ್ತದೆ. ಇನ್ನೊಬ್ಬಳಿಗೆ ಸಿಗುವುದಿಲ್ಲ. ಅವರಮ್ಮ ಚೀನಿಯೊಬ್ಬನ ಬಳಿ ಸಾಲ ಮಾಡಿ ಅವಳನ್ನೂ ಇಂಗ್ಲೆಂಡಿಗೆ ಕಳುಹಿಸುತ್ತಾಳೆ. ಮಾರನೆ ವರ್ಷ ಅವಳಿಗೂ ಸ್ಕಾಲರ್‌ಶಿಪ್ ಸಿಗುತ್ತದೆ. ಇದೇ ಕಪ್ಪುಹುಡುಗಿ ಇಂಗ್ಲೆಂಡಿನಲ್ಲಿ ಬಿಳಿಯನೊಬ್ಬನನ್ನು ಮದುವೆ ಆಗುತ್ತಾಳೆ. ಆಕೆ ಸ್ವಲ್ಪ ಕಪ್ಪಗಿದ್ದ ಕಾರಣ ಒಮ್ಮೆ ಆ ಕರಿಯ-ಬಿಳಿ ದಂಪತಿಗಳನ್ನು ಲಂಡನ್ನಿನಲ್ಲಿ ಬಾಡಿಗೆ ಮನೆಯಿಂದ ಖಾಲಿ ಮಾಡಿಸಲಾಗಿರುತ್ತದೆ. ನಂತರ ಆ ದಂಪತಿಗಳು ಕೆನಡಾಕ್ಕೆ ಬಂದು ನೆಲಸುತ್ತಾರೆ. ಆ ಜಮೈಕಾ ಮೂಲದ ಕಪ್ಪುಹೆಂಗಸು ಒಬ್ಬ ಯಶಸ್ವಿ ಬರಹಗಾರ್ತಿ ಮತ್ತು ಕೌಟುಂಬಿಕ ಸಲಹೆಗಾರ್ತಿಯಾಗುತ್ತಾಳೆ. ಆಕೆ ತನ್ನ ಈಗಿನ ಸಂತೃಪ್ತ ಜೀವನವನ್ನು ಎರಡು ಶತಮಾನಗಳ ಹಿಂದಿನ ಕುಲಸಂಕರಕ್ಕೆ, ಆಗಿನ ಬಂಧುಬಾಂಧವರ ತ್ಯಾಗಕ್ಕೆ, ತನ್ನ ಅಮ್ಮನ ಕಾಳಜಿಗೆ, ದಂಗೆಯಲ್ಲಿ ಮಡಿದ 14 ಜನರ ಬಲಿದಾನಕ್ಕೆ, ತಾನು ಹುಟ್ಟಿದ ಸರಿಯಾದ ಘಳಿಗೆಗೆ, ತನಗೆ ದೊರಕಿದ ಅವಕಾಶಗಳಿಗೆ ಅರ್ಪಿಸುತ್ತಾಳೆ. ಇದರಲ್ಲಿ ಒಂದು ಹೆಚ್ಚುಕಮ್ಮಿಯಾಗಿದ್ದರೂ ಆಕೆ ಬಹುಶಃ ಅನಾಮಿಕಳಾಗಿ ಜಮೈಕಾದ ಹಳ್ಳಿಗಾಡಿನಲ್ಲಿ ಕಳೆದುಹೋಗಬೇಕಿತ್ತು. ಆಕೆಯ ಮಗನೆ ಮ್ಯಾಲ್ಕಮ್ ಗ್ಲಾಡ್‌ವೆಲ್.

’ಬ್ರಿಟಿಷರು ಭಾರತಕ್ಕೆ ಬರದೇ ಇದ್ದಿದ್ದರೆ ತಾವು ಯಾವುದೋ ಮನೆಯಲ್ಲಿ ಸಗಣಿ ಬಾಚುವ ಕೆಲಸಕ್ಕೆ ಸೀಮಿತಗೊಳ್ಳಬೇಕಿತ್ತು,’ ಎಂದು ಕುವೆಂಪು ಬರೆದಿದ್ದಾರೆಂದು ಎಲ್ಲೋ ಓದಿದ ನೆನಪು. ಈ ಲೇಖನದ ಸಂದರ್ಭದಲ್ಲಿ ಅವರು ಹಲವಾರು ಬಾರಿ ನೆನಪಾಗಿದ್ದಾರೆ...

ಹೊರಗಣವರು ತಾವಾಗಿಯೆ ಮೂಡಿಬರುತ್ತಾರೆ ಎಂಬ ತಪ್ಪುಕಲ್ಪನೆ

"ನಾವು ಯಾರನ್ನು ಉತ್ತಮರು, ಬುದ್ಧಿವಂತರು ಮತ್ತು ಸ್ವಯಂಕೃಷಿಗಳೂ ಆದ ಹೊರಗಣವರು ಎಂದು ಭಾವಿಸುತ್ತೇವೆಯೊ ಅಂತಹವರು ಸಹಜವಾಗಿ ನೆಲದಿಂದ ಮೂಡಿಬರುತ್ತಾರೆ ಎನ್ನುವಂತಹ ತಪ್ಪುಕಲ್ಪನೆಯಲ್ಲಿ ಸಿಕ್ಕಿಕೊಂಡಿದ್ದೇವೆ. ಹುಡುಗನಾಗಿದ್ದ ಬಿಲ್ ಗೇಟ್ಸ್‌ನನ್ನು ನೆನೆಸಿಕೊಂಡು, ಹದಿಮೂರು ವರ್ಷದ ಬಾಲಕನೊಬ್ಬ ಯಶಸ್ವಿಯಾದ ಉದ್ಯಮಿಯಾಗಲು ಈ ಪ್ರಪಂಚ ಆಗಗೊಟ್ಟ ವಿಚಾರವನ್ನು ಕೌತುಕದಿಂದ ನೋಡುತ್ತೇವೆ. ಆದರೆ ಇದೊಂದು ತಪ್ಪು ಪಾಠ. ನಮ್ಮ ಪ್ರಪಂಚ ಕೇವಲ ಒಬ್ಬನೇ ಒಬ್ಬ ಹದಿಮೂರು ವರ್ಷದ ಬಾಲಕನಿಗೆ 1968 ರಲ್ಲಿ ಹಂಚಿಕೊಂಡು ಕೆಲಸ ಮಾಡಬೇಕಿದ್ದ ಕಂಪ್ಯೂಟರ್ ಅನ್ನು ಉಪಯೋಗಿಸಲು ಪರಿಮಿತಿಗಳಿಲ್ಲದ ಅನುಮತಿ ಮತ್ತು ಅವಕಾಶವನ್ನು ಕೊಟ್ಟಿತ್ತು. ಅಂತಹುದೇ ಅವಕಾಶವನ್ನು ಹತ್ತುಲಕ್ಷ ಹುಡುಗರಿಗೆ ಕೊಟ್ಟಿದ್ದರೆ ಇವತ್ತು ಅದೆಷ್ಟು ಮೈಕ್ರೋಸಾಫ್ಟ್‌ಗಳು ಇರುತ್ತಿದ್ದವು? ಉತ್ತಮವಾದ ಪ್ರಪಂಚವೊಂದನ್ನು ನಿರ್ಮಿಸಲು ಇವತ್ತಿನ ಯಶಸ್ಸನ್ನು ನಿರ್ಧರಿಸುವ ಅದೃಷ್ಟದ ಜನ್ಮದಿನಗಳು ಮತ್ತು ಇತಿಹಾಸದ ಆಕಸ್ಮಿಕಗಳಂತಹ ಆಗಾಗ ಸಂಭವಿಸುವ ಅದೃಷ್ಟವಕಾಶಗಳು ಮತ್ತು ಒಂದು ನಿಶ್ಚಿತ ಕ್ರಮವಿಲ್ಲದ ಅನುಕೂಲಗಳ ಸ್ಥಾನದಲ್ಲಿ ಎಲ್ಲರಿಗೂ ಅವಕಾಶಗಳನ್ನು ಕೊಡುವಂತಹ ಸಮಾಜ ಇರಬೇಕು. ಕೆನಡಾದಲ್ಲಿ ವರ್ಷದ ಕೊನೆಯಾರ್ಧದಲ್ಲಿ ಹುಟ್ಟಿದ ಮಕ್ಕಳಿಗಾಗಿಯೆ ಪ್ರತ್ಯೇಕವಾದ ಐಸ್-ಹಾಕಿ ತಂಡಗಳು ಇದ್ದಿದ್ದರೆ ಅಲ್ಲಿ ಇವತ್ತು ಇರುವ ಸಂಖ್ಯೆಯ ಎರಡರಷ್ಟು ಹಾಕಿ ಸ್ಟಾರ್‌ಗಳು ಇರುತ್ತಿದ್ದರು. ಈಗ ಇದನ್ನೆ ಪ್ರತಿಯೊಂದು ಕ್ಷೇತ್ರ ಮತ್ತು ವೃತ್ತಿಯಲ್ಲಿ ಹೀಗೆ ತತ್‌ಕ್ಷಣವೆ ಅರಳಬಹುದಾದ ಪ್ರತಿಭೆಗಳೊಂದಿಗೆ ಗುಣಿಸಿ. ಆಗ ಈ ಪ್ರಪಂಚ ಈಗ ಇರುವುದಕ್ಕಿಂತ ಹೆಚ್ಚು ಶ್ರೀಮಂತ ಪ್ರಪಂಚವಾಗಿರುತ್ತಿತ್ತು." ('Outliers' - ಪು. 268)"

ಲೇಖನ ಸರಣಿಯ ಇತರ ಲೇಖನಗಳು:

4 comments:

Anonymous said...

ರೆಡ್ಡಿಯವರೆ, ಕೆಂಡಸಂಪಿಗೆ ಅಚಾನಕ್ಕಾಗಿ ನಿಂತುಬಿಟ್ಟಿತಲ್ಲ!ಕನ್ನಡಕ್ಕೊಂದೇ ಕೆಂಡಸಂಪಿಗೆ. ಆದುದರಿಂದ ಅದರ ಪುನರುಜ್ಜೀವನಕ್ಕೆ ಎಲರೂ ಸೇರಿ ಶ್ರಮಿಸೋಣ. ನಿಮ್ಮ ದುಡ್ಡಿನಿಂದ ಕೆಂಡಸಂಪಿಗೆಯನ್ನು ಮುಂದುವರೆಸಲು ಸಾಧ್ಯವಿದೆ. ದಯವಿಟ್ಟು ವೆಂಚರ್ ಕ್ಯಾಪಿಟಲ್ ಹಾಕಿ ಕೆಂಡಸಂಪಿಗೆಯನ್ನು ಉಳಿಸಿಕೊಳ್ಳಿ.

Anonymous said...

your twitter messages are disappointingly banal and boring!

Anonymous said...

ಹಿಂದಿನ ಕಾಲದಲ್ಲಿ ಕೆಲಸವಿಲ್ಲದ ಬಡಗಿ ಮಗು ಪುಕಳಿ ಕೆತ್ತುತ್ತಿದ್ದನಂತೆ. ಈ ಕಾಲದ ಸಾಫ್ಟ್‌ವೇರ್ ಬಡಗಿಗಳು ಟ್ವಿಟ್ಟರ್ ಕೆತ್ತುತ್ತಿರುತ್ತಾರೆ! ರವಿಯವರ ಟ್ವಿಟ್ಟರ್ ಉಲಿಗಳನ್ನೇ ನೋಡಿ! ಅವರೆಷ್ಟು ಪುರುಸೊತ್ತಾಗಿ ಕೆತ್ತುತ್ತಿದ್ದಾರೆ ಅಂತ ಸ್ಪಷ್ಟವಾಗುತ್ತದೆ. ಮಾರಾಯರೆ, ನೀವು ಕೆತ್ತಿದ್ದೆಲ್ಲ ಖುರ್ಚಿ ಮೇಜು ಆಗುತ್ತದೆ ಎಂಬ ಭ್ರಮೆಯಲ್ಲೇ ಜೀವನ ಸಾಗಿಸುತ್ತೀರೋ ಹೇಗೆ?

Anonymous said...

Steven Pinker on Malcolm Gladwell: http://www.nytimes.com/2009/11/15/books/review/Pinker-t.html

The reasoning in “Outliers,” which consists of cherry-picked anecdotes, post-hoc sophistry and false dichotomies, had me gnawing on my Kindle.