(KKNC ಯ 2005 ರ ಸ್ವರ್ಣಸೇತುವಿಗೆ ಬರೆದಿದ್ದ ಲೇಖನ. ಬ್ಲಾಗ್‌ಗೆ ಏರಿಸುತ್ತಿದ್ದೇನೆ.)
ಮೊನ್ನೆ (2005 ರ) ಜೂನ್‌ನಲ್ಲಿ ಹೆಂಡತಿ ಮತ್ತು ಮಗುವಿನೊಂದಿಗೆ ಭಾರತದ ಪ್ರವಾಸ ಹೋಗಿದ್ದಾಗ ಸುಮಾರು ನಾಲ್ಕು ವಾರಗಳನ್ನು ನನ್ನದೇ ತರಲೆ ತಾಪತ್ರಯಗಳಲ್ಲಿ, ಬರಬಾರದ, ಬಯಸಬಾರದ ಅನುಭವ ಮತ್ತು ಕಷ್ಟಗಳಲ್ಲಿ ಕಳೆದೆ. ಒಳ್ಳೆಯ ಸಮಯ ಇರಲೇ ಇಲ್ಲ ಅಂತಲ್ಲ; ಬೆಲ್ಲಕ್ಕಿಂತ ಬೇವೇ ಹೆಚ್ಚಿತ್ತು. ಹಾಗಾಗಿ, ಉಳಿದ ಒಂದು ವಾರದಲ್ಲಾದರೂ ಒಂದೆರಡು ದಿನ ಮನೆಯವರೆಲ್ಲರ ಜೊತೆ ಎಲ್ಲಾದರೂ ಹೋಗಿಬರೋಣ ಎಂದು ಶನಿವಾರ ಮಧ್ಯಾಹ್ನ ನಮ್ಮ Scorpio ವ್ಯಾನಿನಲ್ಲಿ ಅಮ್ಮ, ಅಣ್ಣ, ಅತ್ತಿಗೆ, ಅಣ್ಣನ ಇಬ್ಬರು ಮಕ್ಕಳು, ನನ್ನ ಹೆಂಡತಿ ಮತ್ತು ನನ್ನ ಒಂಬತ್ತು ತಿಂಗಳ ಮಗುವಿನೊಂದಿಗೆ ಮೈಸೂರಿನತ್ತ ಹೊರಟೆವು; ಯಾವುದೇ ಪೂರ್ವಸಿದ್ದತೆಗಳಿಲ್ಲದೆ. ಬೆಂಗಳೂರು ಹೊಸೂರು ರಸ್ತೆಯಲ್ಲಿರುವ ನನ್ನ ಊರಾದ ಬೊಮ್ಮಸಂದ್ರದಿಂದ ಹೊರಟು ಬೆಂಗಳೂರಿನ ಟ್ರಾಫಿಕ್ ಅನ್ನು ಭೇದಿಸಿಕೊಂಡು ಮೈಸೂರು ರಸ್ತೆ ಸೇರುವಷ್ಟರಲ್ಲಿ ನಮಗೆಲ್ಲಾ ಸಾಕುಸಾಕಾಗಿತ್ತು. ಡಬಲ್ ರೋಡ್ ಆಗುತ್ತಿರುವ ಆ ರಸ್ತೆಯಲ್ಲಿ ವೇಗ ನಿಧಾನಗಳನ್ನು ಅರ್ಥಮಾಡಿಕೊಳ್ಳುತ್ತ ರಾಮನಗರ ದಾಟಿ, ನಾಗೇಗೌಡರ ಪ್ರಸಿದ್ಧ ಜಾನಪದ ಲೋಕದ ಬಳಿಯ ಕಾಮತ್ ಲೋಕರುಚಿಯಲ್ಲಿ ಊಟಕ್ಕೆ ನಿಲ್ಲಿಸಿದೆವು. ಶುಚಿರುಚಿಯ ಜೋಳದ ರೊಟ್ಟಿ ಊಟ. ಮೈತೂಕ ಒಂದೆರಡು ಕೇಜಿ ಹೆಚ್ಚಾಯಿತೇನೋ! ಭಾರವಾದ ಮೈಯಿಂದಲೇ ನಿಧಾನಕ್ಕೆ ಜಾನಪದ ಲೋಕ ಸಂದರ್ಶಿಸಿದೆವು. ನೆನ್ನೆ ಮೊನ್ನೆಯ ಜೀವನ ಶೈಲಿ, ದಿನಬಳಕೆಯ ವಸ್ತುಗಳು ವಸ್ತು ಸಂಗ್ರಹಾಲಯ ಸೇರುತ್ತಿರುವ ವೇಗ ಹಾಗೂ ಬದಲಾಗುತ್ತಿರುವ ಪ್ರಪಂಚದ ದೃಷ್ಟಾಂತ ಈ ಜಾನಪದ ಲೋಕ ಎನ್ನಿಸಿತು.
ಇಲ್ಲಿಂದ ಹೊರಟ ನಮ್ಮ ವಾಹನ ಮುಂದೆ ನಿಂತದ್ದು ಶ್ರೀರಂಗಪಟ್ಟಣದ ಶ್ರೀರಂಗನ ದೇವಸ್ಥಾನದ ಪಕ್ಕದಲ್ಲಿಯೇ ಟಿಪ್ಪು ಕಟ್ಟಿಸಿರುವ ಬಂದೀಖಾನೆಯ ಮುಂದೆ, ಕಾವೇರಿಯ ದಡದಲ್ಲಿ. ಅಲ್ಲಿಂದ ಕಾವೇರಿ ನದಿ, ಅದರ ಮೇಲೆ ಕಟ್ಟಿರುವ ಬಸ್ಸು ರೈಲುಗಳ ಸೇತುವೆಗಳು, ಬೆಂಗಳೂರಿನತ್ತ ಹೊರಟಿದ್ದ ಉದ್ದದ ರೈಲು ವೀಕ್ಷಿಸಿ, ಕೆಂಡದ ಮೇಲೆ ಸುಟ್ಟು, ನಿಂಬೆ ರಸ, ಉಪ್ಪುಮೆಣಸು ಸವರಿದ ಜೋಳವನ್ನು ಮೆಲ್ಲುತ್ತಾ ದೇವಸ್ಥಾನದ ಕಡೆ ಹೊರಟೆವು. ಅಲ್ಲಿ ಕಂಡದ್ದು ಈ "ರಾಮು", ದೈತ್ಯ ಕುದುರೆ. ಇಪ್ಪತ್ತು ರೂಪಾಯಿಗೆ ನೂರಿನ್ನೂರು ಮೀಟರ್ ಸವಾರಿ. ಸರಿ ಎಂದು ಹತ್ತಿ ಕುಳಿತೆ. ಸವಾರಿ ಯಾವಾಗ ಮುಗಿಯುತ್ತದೆಯೋ ಎನ್ನುವಷ್ಟು ಹಿಂಸೆ, ಭಯ ಆಯಿತು. ಲಾಭ ಏನೆಂದರೆ ಅದು ನಡೆಯುತ್ತಿದ್ದಾಗ ಮೇಲೆ ಕುಳಿತಿದ್ದ ನನ್ನ ದೇಹ ಎಗರಿ ಎಗರಿ ಹೊಟ್ಟೆಗೆ ತೀಕ್ಷ್ಣವಾದ ವ್ಯಾಯಾಮ ಮತ್ತು ನಾನೇನಾದರೂ ಕುದುರೆ ಸವಾರಿ ಕಲಿಯಬೇಕಾದರೆ ಬಹುಶಃ ಇತರರಿಗಿಂತ ಹೆಚ್ಚೇ ಶ್ರಮ, ಅಭ್ಯಾಸ ಬೇಕು ಎಂಬ ಜ್ಞಾನೋದಯ.
ವಿರಾಮವಾಗಿ ದೇವಸ್ಥಾನ ನೋಡಿಕೊಂಡು ಆಚೆ ಬರುವಷ್ಟರಲ್ಲಿ ಇನ್ನೊಂದರೆ ತಾಸಿನಲ್ಲಿ ಕತ್ತಲಾಗುವ ಹಾಗೆ ಕಾಣಿಸಿತು. ಆದ್ದರಿಂದ ಬೇಗ ಕನ್ನಂಬಾಡಿ ಸೇರಿಕೊಳ್ಳುವ ಧಾವಂತದಲ್ಲಿ ಹೊರಟು ಅಲ್ಲಿಗೆ ತಲುಪಿ, ಹೊಸದಾಗಿ ಅಣೆಕಟ್ಟೆಯ ಕೆಳಗೇ ಮಾಡಿರುವ ವಾಹನ ನಿಲ್ದಾಣದಲ್ಲಿ ಗಾಡಿ ನಿಲ್ಲಿಸಿ, ತುಂತುರು ಮಳೆಯಲ್ಲಿ ಸಂಗೀತ ಕಾರಂಜಿಯತ್ತ ಹೊರಟೆವು. ಸುಮಧುರ, ಲಾಲಿತ್ಯ ಪೂರ್ಣ, ರಭಸಮಯ ಸಂಗೀತ; ಅದಕ್ಕೆ ತಕ್ಕಂತೆ ಮೈನುಲಿಯುವ, ಬಣ್ಣ ಬಣ್ಣದ ನೀರ್‌ಕಾರಂಜಿ. ದೋಣಿಯಲ್ಲಿ ಕಾರಂಜಿಯ ದಡದಿಂದ ಬೃಂದಾವನದ ದಡಕ್ಕೆ ಬಂದು ಅರೆಬರೆ ವಿದ್ಯುತ್ ಬೆಳಕಿನಲ್ಲಿ ಬೃಂದಾವನ ವೀಕ್ಷಿಸಿದೆವು. ಏನೇ ಹೇಳಿ, ಹಗಲು ಹೊತ್ತಿನಲ್ಲಿ ಕಾಣುವ ಆ ಉದ್ಯಾನವನದ ಸೌಂದರ್ಯ, ಬೆಡಗು, ವೈಶಾಲ್ಯತೆ, ಹಸಿರುಹುಲ್ಲು, ಬಣ್ಣಬಣ್ಣದ ಹೂವುಗಳ ವೈಭವ ರಾತ್ರಿಯ ವಿದ್ಯುತ್ ಬುಡ್ಡಿ ದೀಪಗಳ ಬೆಳಕಿನಲ್ಲಿ ಕಾಣುವುದಿಲ್ಲ.
ಬೃಂದಾವನದಿಂದ ಪಾರ್ಕಿಂಗ್ ಲಾಟ್‌ನತ್ತ ಬರುತ್ತಿದ್ದಾಗ ಅಲ್ಲಿ ಕಾಣಿಸಿದ ಆತ; ಎಂಟು ಅಡಿಯ ಲಂಬೂಜಿ. ಜನ ಅವನ ಪಕ್ಕ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದರು. ನನಗಿಂತ ಎರಡಕ್ಕೂ ಹೆಚ್ಚು ಅಡಿ ಎತ್ತರದವನು. ಅವನ ಪಕ್ಕ ನಿಂತ ಎಲ್ಲರೂ ಕುಬ್ಜರಾಗೇ ಕಾಣಿಸುತ್ತಿದ್ದರು. ಬಹುಶಃ ಪ್ರವಾಸೋದ್ಯಮ ಇಲಾಖೆಯವರು ನಿಲ್ಲಿಸಿರಬಹುದು. ಕನ್ನಡದವನೇ. ನಾನೂ ಹೋಗಿ ಅವನ ಪಕ್ಕ ನಿಂತು, ತಬ್ಬಿಕೊಂಡು ಮಾತನಾಡಿಸಿ ಬಂದೆ. ತಕ್ಷಣಕ್ಕೆ ಜ್ಞಾಪಕಕ್ಕೆ ಬಂದಿದ್ದು ಅಂದಿಗೆ ಎರಡು ಮೂರು ದಿನದ ಹಿಂದೆಯಷ್ಟೇ ಪ್ರಜಾವಾಣಿಯಲ್ಲಿ ಬಂದಿದ್ದ ಒಂದು ಫೋಟೊ. ಆಂಧ್ರಪ್ರದೇಶದ ಮುಖ್ಯಮಂತ್ರಿ ಡಾ. ರಾಜಶೇಖರ ರೆಡ್ಡಿಯವರ ಜೊತೆ ನಿಂತು ಫೋಟೊ ತೆಗೆಸಿಕೊಂಡಿದ್ದ ಎಂಟೂವರೆ ಅಡಿಯ ಇನ್ನೊಬ್ಬ ಲಂಬೂಜಿಯ ಚಿತ್ರ; ಆಕಾಶ ನೋಡುವಂತೆ ತಲೆ ಎತ್ತಿದ್ದ ರೆಡ್ಡಿ, ಮಗುವನ್ನು ನೋಡುವಂತೆ ಕೆಳಗೆ ನೋಡುತ್ತಿದ್ದ ಲಂಬೂ.
ಅಲ್ಲಿಂದ ಒಂದೈವತ್ತು ಅಡಿಗಳ ದೂರದಲ್ಲಿ ಮತ್ಸ್ಯಾಲಯಕ್ಕೆ ಹೋಗುವ ದಾರಿಯ ಪಕ್ಕದಲ್ಲಿದ್ದ ಮೀನು ಕಬಾಬ್ ಹೋಟೆಲಿನ ಮುಂದೆ ನಾನು ಮತ್ತೆ ನನ್ನಣ್ಣ ಕುಳಿತು, ಮಕ್ಕಳು ಹೆಂಗಸರೆಲ್ಲಾ ಮತ್ಸ್ಯಾಲಯ ವೀಕ್ಷಿಸಲು ಹೋಗಿದ್ದರೆ, ಚೆನ್ನಾಗಿ ಉಪ್ಪುಖಾರ ಬೆರೆಸಿ ಕರಿದಿದ್ದ ಮೀನುಗಳ ಮುಳ್ಳನ್ನು ನಿಧಾನವಾಗಿ ಬಿಡಿಸುತ್ತ, ನಮ್ಮ ಜಠರದಲ್ಲಿ ಮತ್ಸ್ಯಗಳಿಗೆ ಆಲಯ ಮಾಡಿಕೊಡುತ್ತ, ಲಂಬೂಜಿಗಳ ಕಷ್ಟಸುಖ ಯೋಚಿಸುತ್ತ ಕುಳಿತೆವು. ಆರೂಕಾಲು ಅಡಿಯ ಬಸ್ಸುಗಳಲ್ಲಿ ಈ ಎಂಟು ಅಡಿಯ ಜನರು ನಿಲ್ಲುವ ಬಗೆ, ಕುಳಿತುಕೊಳ್ಳುವ ಕಷ್ಟ, ಕಾರು ಜೀಪುಗಳಲ್ಲಿ ಮುಂದಿನ ಸೀಟಿನಲ್ಲಿಯೇ ಕೂರಬೇಕಾದ, ಇಲ್ಲವೆ ಹಿಂದಿನ ಸೀಟಿನ ತುಂಬಾ ಒರಗಿ ಕೂರಬೇಕಾದ ಕಷ್ಟದ ಬಗ್ಗೆ, ಮತ್ತಿತರ ನಮಗೆ ಗೊತ್ತಿಲ್ಲದ, ಗೊತ್ತಾಗದ ವಿಚಾರಗಳ ಬಗ್ಗೆ ಲಂಬೂಜಿಯನ್ನು, ಆತನನ್ನು ಮಾತನಾಡಿಸುತ್ತಿದ್ದ ಜನರನ್ನು ಗಮನಿಸುತ್ತ ಮಾತನಾಡಿಕೊಂಡೆವು. ಜೀವನ ಎಷ್ಟು ವಿಸ್ಮಯ, ಅಲ್ಲವೇ?
ಅಷ್ಟೊತ್ತಿಗೆ ಒಂಬತ್ತರ ಮೇಲಾಗಿತ್ತು. ಆದಷ್ಟು ಬೇಗ ನಂಜನಗೂಡು ಸೇರಿಕೊಳ್ಳುವ ಧಾವಂತ. ಮೈಸೂರಿನ ಉತ್ತರಕ್ಕಿರುವ ಕನ್ನಂಬಾಡಿಯಿಂದ ದಕ್ಷಿಣಕ್ಕಿರುವ ನಂಜನಗೂಡಿನತ್ತ ರಾತ್ರಿಯ ಊಟ ಸಹ ಮಾಡದೆ, ಮೈಸೂರಿನ ಒಳಗೆ ದಾರಿ ಕೇಳುತ್ತಾ, ನಂಜನಗೂಡಿನ ದೇವಸ್ಥಾನ ಮುಟ್ಟುವಷ್ಟಕ್ಕೆ ಹತ್ತರ ಮೇಲಾಗಿತ್ತು. ದೇವಸ್ಥಾನದ ಪಕ್ಕದಲ್ಲಿದ್ದ ಛತ್ರದಲ್ಲಿ ಜನಜಂಗುಳಿ. ಯಾವುದೇ ಕೊಠಡಿಗಳನ್ನು ಮುಂಚೆಯೇ ಕಾದಿರಿಸದೇ ಭಂಡ ಧೈರ್ಯದಿಂದ ಹೆಂಗಸರು ಮತ್ತು 7, 4 ಮತ್ತು ಮುಕ್ಕಾಲು ವರ್ಷ ವಯಸ್ಸಿನ ಹೆಣ್ಣು ಮಕ್ಕಳೊಂದಿಗೆ ರೂಮು ವಿಚಾರಿಸಲು ಹೋದಾಗ "ನೋ ವೇಕೆನ್ಸಿ." ನಮಗೆ ನಂಜಿನ, ನಂಜುಂಡ ಅನುಭವ. ಮದುವೆ ಸೀಸನ್ ಬೇರೆ; ವಾರಾಂತ್ಯ ಬೇರೆ ಸಾಲದ್ದಕ್ಕೆ. ಪಟ್ಟಣದ ಒಳಗಿರುವ ಇತರ ನಿವಾಸ, ವಿಲಾಸಗಳಲ್ಲೆಲ್ಲ ಇದೇ ಉತ್ತರ. ಮೈಸೂರು ರಸ್ತೆಯಲ್ಲಿನ ಹೊಯ್ಸಳದಲ್ಲಿಯೂ ಅದೇ ಉತ್ತರ. ಹನ್ನೊಂದಾಗುತ್ತ ಬಂದಿತ್ತು. ಇನ್ನೇನು ಮೈಸೂರಿಗೇ ಹೋಗೋಣ ಎಂದು ಒಂದು ಲಾಡ್ಜಿನ ಮುಂದೆ ನಿಂತು ಯೋಚಿಸುತ್ತಾ ಇದ್ದಾಗ, "ಊಟಿ ಕಡೆಗೆ ಹೋಗುವ ರಸ್ತೆಯಲ್ಲಿ ಒಂದೆರಡು ಕಿಲೋಮೀಟರ್ ಹೋದರೆ ವಿದ್ಯಾನಗರದಲ್ಲಿ ಒಂದು ಲಾಡ್ಜ್ ಇದೆ. ಅಲ್ಲಿ ಪ್ರಯತ್ನಿಸಿ," ಅಂದರು ಒಬ್ಬರು. ಸರಿ, ಕೊನೆಯ ಪ್ರಯತ್ನ ಎಂದು ಹೊರಟೆವು.
ಅವರು ಹೇಳಿದ ಹೆಸರಿನ ಲಾಡ್ಜ್ ಹುಡುಕುತ್ತಾ ಹೊರಟ ನಮಗೆ ಸಿಕ್ಕಿದ್ದು ಇತ್ತೀಚಿಗೆ ತಾನೆ ಹೆಸರು ಬದಲಾಯಿಸಿಕೊಂಡ, ಹೊಸದಾಗಿ ಸುಣ್ಣ ಬಳಿಸಿಕೊಂಡಿದ್ದ ಲಾಡ್ಜ್. ನಮ್ಮ ಅದೃಷ್ಟಕ್ಕೆ ಅಲ್ಲಿ ಮೂರ್ನಾಲ್ಕು ರೂಮುಗಳಿದ್ದವು. ತಲಾ 150 ರೂ. ಊರಿನ ಹೊರಗಿದ್ದ, ಸುತ್ತಮುತ್ತ ಅಷ್ಟೇನೂ ಮನೆಗಳಿಲ್ಲದ, ಸ್ವಲ್ಪ ಭಯ ಹುಟ್ಟಿಸುವ ವಾತಾವರಣವಿದ್ದರೂ, ಬೇರೆ ಯೋಚಿಸದೆ ಮೂರು ರೂಮುಗಳನ್ನು ತೆಗೆದುಕೊಂಡೆವು. ಅಷ್ಟೊತ್ತಿಗೆ ನಮ್ಮಲ್ಲಿ ಒಂದಿಬ್ಬರಿಗೆ ಹಸಿವಿನ ಪರಿವೆ ಆಯಿತು. ಅಲ್ಲಿ ತಿಂಡಿಯ ಹೋಟೆಲ್ ಇಲ್ಲದ್ದರಿಂದ ರೂಮುಗಳನ್ನು ಸಹ ನೋಡದೆ ಮತ್ತೆ ನಂಜನಗೂಡಿಗೆ ಹೂರಟೆವು. ಬಾರುಗಳು ಮಾತ್ರ ತೆರೆದಿದ್ದವು. ಯಾವುದೋ ಒಂದು ಜಾಗದಲ್ಲಿ ಬೇಕರಿ ಮತ್ತು ಒಂದು ಸಣ್ಣ ಹೋಟೆಲ್ ಇನ್ನೇನು ಮುಚ್ಚುವ ಗಡಿಬಿಡಿಯಲ್ಲಿದ್ದವು. ಆದರೂ ಅದು ಹೇಗೋ ಇನ್ನೂ ಬಿಸಿಯಾಗಿದ್ದ ತಟ್ಟೆ ಇಡ್ಲಿ, ರುಚಿಯಾಗಿದ್ದ ಚಟ್ನಿ ಇನ್ನೂ ರುಚಿ ಎನ್ನಿಸಿದವು. ಚಿಕ್ಕ ಮಗುವಿಗೆ ಅಲ್ಲೇ ಸ್ವಲ್ಪ ಹಾಲು ಕಾಯಿಸಿಕೊಂಡು ಲಾಡ್ಜಿಗೆ ಹಿಂದಿರುಗಿದಾಗ ಮಧ್ಯರಾತ್ರಿ.
ಮೊದಲ ಸಲ ಹೋಗಿದ್ದಾಗ ಚೆನ್ನಾಗಿಯೇ ಇದ್ದ ಲಾಡ್ಜಿನ ಮ್ಯಾನೇಜರ್ ಗಿರಾಕಿ ಸಿಕ್ಕ ಖುಷಿಯಲ್ಲಿ ಅಷ್ಟೊತ್ತಿಗೆ ಸರ್ವರೋಗಗಳಿಗೆ ಮದ್ದಾದ ಸಾರಾಯಿ ಪರಮಾತ್ಮನನ್ನು ಹೊಟ್ಟೆಯಲ್ಲಿ ಭದ್ರಪಡಿಸಿಟ್ಟುಕೊಂಡದ್ದು ಗೊತ್ತಾಯಿತು. ಹಾಳಾಗಿ ಹೋಗಲಿ ಎಂದು ಒಂದು ರೂಮಿನಲ್ಲಿ ಅಣ್ಣ ಅತ್ತಿಗೆ, ಮತ್ತೊಂದರಲ್ಲಿ ನಮ್ಮಮ್ಮ, ಅಣ್ಣನ ಚಿಕ್ಕ ಮಕ್ಕಳು, ಮಗದೊಂದರಲ್ಲಿ ನಾನು, ನನ್ನಾಕೆ ಮತ್ತು ನಮ್ಮ ಒಂಬತ್ತು ತಿಂಗಳ ಮಗು ಮಲಗಲು ಸಿದ್ದತೆ ಮಾಡಿಕೊಂಡೆವು. ಆಗ ಬಂದ ಕುಡುಕ ಮ್ಯಾನೇಜರ್ ಹೊರಗೆ ನಿಲ್ಲಿಸಿದ್ದ ನಮ್ಮ ಸ್ಕಾರ್ಪಿಯೊ ವಾಹನವನ್ನು ಒಳಗೆ ನಿಲ್ಲಿಸಲು ಹೇಳಿದ. ಅಲ್ಲಿ ಇದ್ದದ್ದೆ ಏಳೆಂಟಡಿ ಅಗಲದ, ಆದರೆ ೨೦ ಅಡಿ ಉದ್ದದ ಜಾಗ. ಕಸರತ್ತು ಮಾಡಿ ಒಳಗೆ ತಂದು ನಿಲ್ಲಿಸಿದ ಗಾಡಿಯ ಅಕ್ಕಪಕ್ಕ ಮಿಕ್ಕಿದ್ದು ಒಂದೂವರೆ ಅಡಿ ಅಷ್ಟೇ. ಅದಾದ ಐದ್ಹತ್ತು ನಿಮಿಷಗಳಿಗೆ ಇನ್ನೊಂದು ಗಾಡಿ, ಟೊಯೋಟ ಕ್ವಾಲಿಸ್, ಅದೇ ತರಹ ಉಳಿದ ಜಾಗದಲ್ಲಿ ಬಂದು ನಿಂತಿತು. ಅದರಿಂದಲೂ ಸಹ ಇಬ್ಬರೇ ಇಬ್ಬರು ಗಂಡಸರು (ನರಪೇತಲಗಳು ಮತ್ತೂ ಇನ್ನೂ 20-25 ದಾಟದವರು), ಹಾಗೂ ನಾಲ್ಕೈದು ಹೆಂಗಸರು ಮಕ್ಕಳು ಇಳಿದರು. ಮ್ಯಾನೇಜರ್ ಒಳಗಿನಿಂದ ಕಬ್ಬಿಣದ ಷಟರ್‌ನಂತಿದ್ದ ಬಾಗಿಲನ್ನು ಭದ್ರವಾಗಿ ಮುಚ್ಚಿ, ಬೀಗ ಹಾಕಿ, ಹೊರಗಿನಿಂದ ಸೊಳ್ಳೆಯೂ ಬರದ ಹಾಗೆ ಮಾಡಿ ಲಾಡ್ಜ್ ಹೌಸ್‌ಫುಲ್ ಆದ ಖುಷಿಯಲ್ಲಿ ತನ್ನ ಆಫೀಸಿನತ್ತ ಹೊರಟ.
ಉಳಿದ ಐದಾರು ಗಂಟೆಗಳ ರಾತ್ರಿ ಕಳೆದರೆ ಸಾಕು ಎಂದು ಚಿಕ್ಕದಾಗಿದ್ದ ಮಂಚದಲ್ಲಿ ಮಗುವಿಗೆ ತೊಂದರೆಯಾಗದ ರೀತಿಯಲ್ಲಿ ಮಲಗಿದ್ದೇ, ನಿದ್ರಾದೇವಿ ಅಪ್ಪಿಕೊಂಡಳು. ಆ ಸುಖವಾದ ಅಪ್ಪುಗೆಯನ್ನು ಬಿಡಿಸಿದ್ದು ಕರ್ಕಶವಾಗಿ, ಭಯಂಕರ ಸದ್ದು ಮಾಡುತ್ತಾ ಕೇಳಿಸಿದ ಕಾಲಿಂಗ್ ಬೆಲ್‌ನ ಸಂಗೀತ. ಕಣ್ಣು ಬಿಟ್ಟು ನೋಡಿದರೆ ಎಲ್ಲೆಲ್ಲೂ ಕತ್ತಲೆ. ಮತ್ತೆ ಒಂದೆರಡು ಬಾರಿ ಒಂದೆರಡು ನಿಮಿಷಗಳ ಅಂತರದಲ್ಲಿ ಕರೆಗಂಟೆಯ ಕಿರಿಕಿರಿ ಪುನರಾವರ್ತನೆ. ನಿದ್ದೆಗೂ ಎಚ್ಚರಕ್ಕೂ ಮಧ್ಯೆ ಹೊಯ್ದಾಟ. ಆಚೆಯಿಂದ ಬಾಗಿಲು ತೆಗೆಯಿರಿ ಎಂದು ಒಂದಿಬ್ಬರು ಗಂಡಸರ ಹುಯ್ಲಾಟ. ಒಳಗಿನಿಂದ ಉತ್ತರಿಸುವವರೇ ಇಲ್ಲ. ಆಗ ಕೇಳಿಸಿದ್ದು "ಧಢುಂ" ಎಂದು ಕಬ್ಬಿಣದ ಬಾಗಿಲನ್ನು ಜೋರಾಗಿ ಒದ್ದ ಶಬ್ದ. ನಿದ್ದೆ ಪೂರ್ತಿ ಹಾರಿ ಹೋಯಿತು. ಸಮಯ ನೋಡಲು ಕತ್ತಲಿನಲ್ಲಿ ಮೊಬೈಲ್‌ಗೆ ತಡಕಾಡಿ ಅದರಲ್ಲಿ ಯಾವುದೋ ಕೀ ಒತ್ತಿ ನೋಡಿದರೆ ಆಗ ತಾನೇ ಒಂದು ಗಂಟೆಯಾಗಿತ್ತು. ಅಂದರೆ ನಾವು ನಿದ್ದೆಗೆ ಜಾರಿ ಒಂದು ಗಂಟೆಯೂ ಆಗಿಲ್ಲ!
ಆಗ ಶುರುವಾಯಿತು ಭಯ, ಅಧೈರ್ಯ. ಇಷ್ಟು ಸರಿರಾತ್ರಿಯಲ್ಲಿ ಲಾಡ್ಜಿನ ಒಳಗೆ ಹೀಗೆ ಬಲಾತ್ಕಾರದಿಂದ ಬೆದರಿಸಿ ಒಳಗೆ ಬರಲು ಪ್ರಯತ್ನಿಸುತ್ತಿರುವವರು ಯಾರೋ ಕೇಡಿಗಳೆ ಇರಬೇಕು ಎನ್ನಿಸಿತು. ಮತ್ತೆ ಈ ಸಾರಿ ಬಾಗಿಲನ್ನೇ ಹೊಡೆದು ಒಳಗೆ ಬರುವಷ್ಟು ಜೋರಿನಲ್ಲಿ ಬಾಗಿಲನ್ನು ಗುದ್ದಿದ ಶಬ್ದ. ಜೋರಾಗಿ ಬಾಗಿಲು ತೆಗೆಯಲು ಹೆದರಿಸುತ್ತಿದ್ದ ಮಾತು. ಪಕ್ಕದಲ್ಲಿದ್ದ ನನ್ನಾಕೆಗೂ ನಿದ್ದೆ ಹಾರಿಹೋಗಿ, ಭಯ ಹಾರಿಬಂದಿತ್ತು. ಮಗು ಮಾತ್ರ ಈ ಲೋಕ ವ್ಯಾಪಾರದ ಚಿಂತೆಯೇ ಇಲ್ಲದೆ ನಿದ್ದೆ ಮಾಡುತ್ತಿತ್ತು.
ಅಷ್ಟೊತ್ತಿಗೆ ಲಾಡ್ಜಿನ ಒಳಗೆ ಲೈಟ್ ಹಾಕಿ, ಬಹುಶಃ ರೂಮ್ ಬಾಯ್ ಇರಬಹುದು, ಮ್ಯಾನೇಜರ್‌ಗಾಗಿ ಹುಡುಕಲಾರಂಭಿಸಿದ. ಇದು ನಮಗೆ ಗೊತ್ತಾಗಲಿಲ್ಲ. ನಮ್ಮ ರೂಮಿನ ಬಾಗಿಲು ಬಡಿದು ಯಾವುದೋ ಹೆಸರು ಹಿಡಿದು ಕೂಗಿದ. ಭಯಪಟ್ಟವನ ಮೇಲೆ ಸತ್ತ ಸರ್ಪ ಹಾಕಿದ ಅನುಭವ. "ಇಲ್ಲಿ ಅವರ್ಯ್ಯಾರೂ ಇಲ್ಲಾರಿ," ಅಂದೆ ನಾನು, ಏಳದೇ, ಬಾಗಿಲು ತೆಗೆಯದೇ; ಆದರೆ ಪೂರ್ಣ ಎಚ್ಚರದ ಸ್ಥಿತಿಯಲ್ಲಿ. ಪಕ್ಕದ ರೂಮಿನಲ್ಲಿದ್ದ ನಮ್ಮವರ ಬಗ್ಗೆ ಅಷ್ಟೊತ್ತಿಗೆ ಯೋಚನೆ ಭಯಂಕರವಾಗಿ ಪ್ರಾರಂಭವಾಗಿತ್ತು. ಬಾಗಿಲು ತೆಗೆದು ಪಕ್ಕದ ರೂಮುಗಳಿಗೆ ಹೋಗಿ ಮಕ್ಕಳನ್ನು ನೋಡುವುದೇ, ಹೇಗೆ? ಇನ್ನೂ ಸ್ವಲ್ಪ ಹೊತ್ತು ನೋಡೋಣ, ಬಾಗಿಲು ತೆಗೆಯುವುದು ಬೇಡ ಎಂದು ನನ್ನಾಕೆಗೆ ಹೇಳಿದೆ. ಆಕೆ ಮುದುಡಿಕೊಂಡು ಒಂದು ರೀತಿಯ ಎಂದೂ ಇಲ್ಲದ ಭೀತಿಯಲ್ಲಿ ಮಲಗಿದ ಹಾಗೆ ಎನ್ನಿಸಿತು.
ಆಚೆಯಿಂದ ಜೋರು ಮಾಡುವುದು, ಬಾಗಿಲನ್ನು ಒದೆಯುವುದು ನಿರಾತಂಕವಾಗಿ ನಿಲ್ಲದೆ ನಡೆಯುತ್ತಿತ್ತು. ಸುಮಾರು ಹತ್ತು ನಿಮಿಷಗಳಿಂದ ನಡೆಯುತ್ತಿದ್ದರಿಂದ ಬಹುಶಃ ಒಳಗಿದ್ದವರಿಗೆಲ್ಲಾ ನಿದ್ದೆ ಹಾರಿ ಹೋಗಿರಬೇಕು. ನನ್ನ ಮನಸ್ಸು ವಿಪರೀತ ಲೆಕ್ಕಾಚಾರದಲ್ಲಿ ತೊಡಗಿತ್ತು. ನಾವು ಯಾರೋ ಗಂಡಸರೇ ಆಗಿದ್ದರೆ ಏನಾದರೂ ಆಗಲಿ ಅನ್ನಬಹುದಿತ್ತು. ಆದರೆ ಒಂಬತ್ತು ತಿಂಗಳ ಚಿಕ್ಕ ಮಗುವಿನಿಂದ ಹಿಡಿದು ಮುದುಕಿ ಎನ್ನಬಹುದಾದ ಹೆಂಗಸರೆಲ್ಲ ಇದ್ದಾರೆ. ಇದ್ಯಾವ ತರಲೆ ಹುಟ್ಟಿಕೊಳ್ತು ಮಾರಾಯಾ? ಕೇಡಿಗಳೇನಾದರೂ ಲಾಡ್ಜಿನ ಒಳಗೆ ಬಂದುಬಿಡುವ ಪರಿಸ್ಥಿತಿ ಬಂದರೆ ಹೇಗೆ? ಅವರ ಆಲೋಚನೆ ಏನಿದೆ? ಎಷ್ಟು ಜನ ಇದ್ದಾರೆ? ಅವರನ್ನು ನಾವೇ ಎದುರಿಸುವ ಬಗೆ ಹೇಗೆ? ಅವರು ಸ್ಥಳೀಯರೇ ಇರಬೇಕು. ನಾವು ಪರಸ್ಥಳದವರು. ಅವರಿಗಿರುವ ಕೆಲವೊಂದು ಅಡ್ವಾಂಟೇಜಸ್ ನಮಗಿರುವುದಿಲ್ಲ. ಸರಿ. ಎದುರಿಸಲೇಬೇಕಾದ ಪರಿಸ್ಥಿತಿ ಬಂದಾಗ ಆದಷ್ಟು ಬೇಗ ಹೆಂಗಸರು ಮಕ್ಕಳನ್ನೆಲ್ಲಾ ಒಂದು ರೂಮಿನಲ್ಲಿ ಸೇರಿಸಿ ನಾನು ಮತ್ತು ನನ್ನಣ್ಣ ಹೇಗೆ ಅವರನ್ನು ಎದುರಿಸಬೇಕು; ನಾವು ಸ್ಕಾರ್ಪಿಯೊದಲ್ಲಿ ಕುಳಿತು, ಇದ್ದ ಆ ಒಂದೆರಡು ಅಡಿ ಜಾಗದಲ್ಲಿಯೇ ಅವರನ್ನು ಅಟಕಾಯಿಸಿಕೊಳ್ಳಬೇಕು. ಒಳಗೆ ಇರುವ ಇತರರು ಏನಾದರೂ ಉಪಯೋಗಕ್ಕೆ ಬಂದಾರೇ? ಪೋಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿದರೆ ಹೇಗೆ? ಮೊಬೈಲ್ ಏನೋ ಇದೆ, ಒಂದೆರಡು ಸಿಗ್ನಲ್‌ಗಳೂ ಇವೆ, ಆದರೆ ನಂಬರ್? 100 ನಂಬರ್ ಕೆಲಸ ಮಾಡುತ್ತದೆಯೇ? ಅದು ಕೆಲಸ ಮಾಡದೇ ಇದ್ದಾಗ ಉರಿಗೆ ಕಾಲ್ ಮಾಡಿ ಅಲ್ಲಿಂದ ಇಲ್ಲಿಯ ಪೋಲಿಸ್ ಠಾಣೆಗೆ ಹೇಗಾದರೂ ಮಾಡಿ ಸುದ್ದಿ ಮುಟ್ಟಿಸುವ ಸಾಧ್ಯತೆ ಇದೆಯೇ? ಅವೆಲ್ಲಕ್ಕೂ ಸಮಯ ಇದೆಯೇ? ಶರವೇಗದ ಚಿಂತನೆ ಎಂದರೆ ಬಹುಶಃ ನಾನು ಯೋಚಿಸುತ್ತಿದ್ದ ವೇಗವೇ ಇರಬೇಕು!
"ಯಾವನೋ ಅವನು ಧಢ ಧಢ ಅಂತ ಬಾಗಿಲು ತಟ್ತಿರೋದು? ತಲೆಗಿಲೆ ಕೆಟ್ಟಿದೆಯಾ?" ನನ್ನ ಅಣ್ಣನ ಗಡಸು ಕಂಠ ನನ್ನ ಯೋಚನಾಲಹರಿಯನ್ನು ಕತ್ತರಿಸಿತು. ಅಯ್ಯೋ, ಇವರೇಕೆ ಕೋಣೆಯಿಂದ ಆಚೆಗೆ ಬಂದರು, ಎಂದುಕೊಂಡೆ. ನಿದ್ದೆ ಮಾಡುತ್ತಿರುವಾಗ ಯಾರಾದರೂ ಅನವಶ್ಯಕವಾಗಿ ಎಬ್ಬಿಸಿದರೆ, ಕೆರಳಿದ ಸಿಂಹ ಅವರು. ಮೊದಲೇ ತೊಂಬತ್ತೈದು ಕೇಜಿ ತೂಕದ ಬಲಶಾಲಿ ಆಸಾಮಿ. ಮನಸ್ಸು ಮಾಡಿದರೆ ಬಾಗಿಲು ತೆಗೆದು ಎದುರಿಸಲು ಸಿದ್ಧವಾಗುವವರು. ಅವರು ಹಾಗೆ ಇಂತಹದೇ ಪರಿಸ್ಥಿತಿಗಳಲ್ಲಿ ಈ ಮೊದಲು ಮಾಡಿದ್ದೂ ಉಂಟು. ನಾನೇನೋ ಒಳಗಿದ್ದುಕೊಂಡೇ ಇವರನ್ನು ಹೇಗೆ ಎದುರಿಸುವುದು ಎಂದು ಯೋಚಿಸುತ್ತಿದ್ದರೆ ಇವರು ಆಚೆ ಬಂದು ಬಿಟ್ಟಿದ್ದಾರಲ್ಲ? ಇನ್ನು ಯಾವುದು ಏನು ಆಗುತ್ತೋ, ಇವರೇನಾದರೂ ಕಬ್ಬಿಣದ ಬಾಗಿಲು ತೆಗೆದುಬಿಟ್ಟರೆ ನಮಗಿರುವ ಅಡ್ವಾಂಟೇಜ್ ಕಳೆದುಹೋಗಿಬಿಡುತ್ತದೆಯಲ್ಲ ಎಂದುಕೊಂಡು, ಇನ್ನು ಒಳಗಿರುವುದು ಸಲ್ಲ ಎಂದು ನಾನೂ ತಕ್ಷಣ ಬಾಗಿಲು ತೆಗೆದುಕೊಂಡು ಕೊಣೆಯಿಂದ ಹೊರಗೆ ಬಂದೆ.
"ಏಯ್, ಏನಯ್ಯ ನಿನ್ನ ಹೆಸರು?" ಅಣ್ಣ ಗಟ್ಟಿಯಾಗಿ ವಿಚಾರಿಸುತ್ತಿದ್ದರು ಈ ಮೊದಲು ಮ್ಯಾನೇಜರ್‌ನನ್ನು ಹುಡುಕುತ್ತಾ ನನ್ನ ರೂಮಿನ ಬಾಗಿಲು ತಟ್ಟಿದ್ದ, ಸುಮಾರು ಐವತ್ತು ವರ್ಷದ ರೂಮ್ ಬಾಯ್‌ನನ್ನು (ರೂಮ್ ಮ್ಯಾನ್?). ಆತ "ಸುಬ್ರ್ಯ" ಎನ್ನುವಂತೆ ಉತ್ತರಿಸಿದ. ನನಗೆ ಅರ್ಥವಾಗದೆ, ಏನು? ಅಂದೆ. ಮತ್ತೆ ಅದೇ "ಸುಬ್ರ್ಯ" ಎಂದ. ಮೊದಲೇ ಆಚೆ ಗಲಾಟೆ, ಮಧ್ಯೆ ಈತನ ಅರ್ಥವಾಗದ ಹೆಸರು. ರೇಗಿಹೋಯಿತು. "ಅದೇನೋ ಸ್ವಲ್ಪ ನಿಧಾನವಾಗಿ ಸರಿಯಾಗಿ ಹೇಳ್ರಿ," ಗದರಿದೆ. ಆಗ ನಿಧಾನವಾಗಿ "ಸುಬ್ಬರಾಯ" ಎಂದ.
ಅಷ್ಟೊತ್ತಿಗೆ ನಾವು ಮೂವರೂ ಒಳಗೆ ಜೋರಾಗಿ ಮಾತನಾಡುತ್ತಿದ್ದರಿಂದ ಆಚೆ ಬಾಗಿಲು ಒದೆಯುವುದು ನಿಂತಿತ್ತು. "ಆಚೆ ಇರೋರು ಯಾರು ಗೊತ್ತಾ ನಿನಗೆ?" ಎಂದು ಸುಬ್ಬರಾಯರನ್ನು ಅಣ್ಣ ಕೇಳಿದರು. ಆತ ಇಲ್ಲ ಅಂದ. ಮತ್ತೆ ಮ್ಯಾನೇಜರ್ ಎಲ್ಲಿ ಎಂದು ಕೇಳಲು, "ಆಗಲಿಂದ ಎಲ್ಲಾ ಕಡೆ ಹುಡುಕ್ತಿದ್ದೀನಿ. ಯಾವ್ ರೂಮ್‌ನಲ್ಲಿದ್ದಾರೋ ಗೊತ್ತಾಗ್ತಾ ಇಲ್ಲಾ," ಎಂದ. ತಾನು ಕೆಲಸ ಮಾಡುತ್ತಿರುವ ಲಾಡ್ಜಿನಲ್ಲೇ ಎಲ್ಲಿ ಏನಿದೆ, ಏನಾಗ್ತಾ ಇದೆ ಎಂದು ತಿಳಿಯದ ಮುಗ್ಧ. ಈ ಮುನ್ನ ಸಂತೃಪ್ತನಾಗಿದ್ದ ಮ್ಯಾನೇಜರ್‌ನನ್ನು ನೋಡಿದ್ದ ನಮಗೆ ಚೆನ್ನಾಗಿ ಕುಡಿದು ಚಿತ್ತಾಗಿರುವ ಆತ ಈಗ ಸಿಕ್ಕರೂ ಈ ಪ್ರಪಂಚದಲ್ಲಂತೂ ಇರುವುದಿಲ್ಲ ಎನ್ನಿಸಿತು. ಆಗಾಗಲೇ ನನ್ನಣ್ಣನಿಗಿರದ ಭಯ, ಚಳಿ ನೋಡಿ ಅವು ನನ್ನಿಂದಲೂ ದೂರವಾಗಿಬಿಟ್ಟವು.
ಹೊರಗೆ, ಒಳಗೆ ಇಷ್ಟೆಲ್ಲ ಗಲಾಟೆ ನಡೆಯುತ್ತಿದ್ದಾಗ ಅಲ್ಲಿ ಒಂದು ರೂಮಿನ ಬಾಗಿಲು ಸ್ವಲ್ಪ ತೆರೆದಿದ್ದು ಕಾಣಿಸಿತು. ಆದರೆ ಆ ರೂಮಿನಿಂದ ಯಾರೂ ಈಚೆಗೆ ಬಂದಿರಲಿಲ್ಲ. ಇಣುಕಿ ನೋಡಿದರೆ ಇಬ್ಬರು ಗಂಡಸರು ಗಾಢ ನಿದ್ರೆಯಲ್ಲಿದ್ದಾರೆ. ಹೊಸ್ತಿಲ ಪಕ್ಕ ಎರಡು ಮೂರು ಕೋಕ್, ಸೋಡಾ ಮತ್ತು ವ್ಹಿಸ್ಕೀ ಬಾಟಲಿಗಳನ್ನು ಬಿಸಾಕಿದ್ದಾರೆ. "ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ, ಮನೆಯೊಳಗೆ ಮನೆಯೊಡೆಯನಿಲ್ಲ, ಇಲ್ಲಾ, ಕೂಡಲಸಂಗಮದೇವ," ವಚನ ಜ್ಞಾಪಕಕ್ಕೆ ಬಂತು. ಮದಿರೆ ಇಷ್ಟೊಂದು ಮೈಮರೆಸುತ್ತಾಳಾ ಎನ್ನಿಸಿತು. ಮತ್ತೇ, ಕ್ವಾಲಿಸ್ ಗಾಡಿಯಲ್ಲಿ ಕಡೆಯದಾಗಿ ಬಂದ ಇನ್ನೊಂದು ಗುಂಪಿನವರೂ ಯಾರೂ ಆಚೆಗೆ ಬರಲಿಲ್ಲ. ಅವರಿಗೇನಾದರೂ ಹೀಗಾಗಬಹುದು ಎಂಬ ಸುಳಿವೇನಾದರೂ ಇತ್ತಾ?
"ಅವರೇನಾದರೂ ಇನ್ನೊಂದು ಸಲ ಬಾಗಿಲು ಬಡಿದರೆ ಪೋಲಿಸ್ ಸ್ಟೇಷನ್‌ಗೆ ಫೋನ್ ಮಾಡ್ರಿ. ಇಲ್ಲಾ ಅಂದ್ರೆ ನಮ್ಮ ಸೆಲ್ ಫೋನಿಂದ ನಾವೇ ಮಾಡ್ತೀವಿ. ಇಂಥ ಸರಿ ರಾತ್ರೀಲಿ ಬಂದು ಗಲಾಟೆ ಮಾಡಿ ನಿದ್ದೆ ಹಾಳ್ ಮಾಡ್ತಿದ್ದಾರೆ. ಒಳಗೆ ಬಿಡೋದಿಕ್ಕೆ ಈ ತರಹ ಜಬರಿಸ್ತಾ ಇದ್ದಾರೆ ಅಂದರೆ ಏನೋ ಮಾಡೊದಿಕ್ಕೆ ಬಂದಿರೋ ಪಾಕ್ಡಾಗಳೆ ಇರ್ಬೇಕು ಇವರು," ಎಂದೆ ನಾನು ಜೋರಾಗಿ, ಬಾಗಿಲ ಬಳಿ ನಿಂತು ಆಚೆಯೂ ಕೇಳಿಸುವ ಹಾಗೆ. ನಮ್ಮಣ್ಣನವರು, "ಸರಿಯಾಗಿರೋ ಒಂದೆರಡು ದೊಣ್ಣೆ ಸರಿ ಮಾಡಯ್ಯ. ಅವರೇನಾದರೂ ಬಂದು ಇನ್ನೊಂದು ಸಾರಿ ತೊಂದರೆ ಕೊಟ್ಟರೆ ಪೊಲಿಸ್‌ಗೆ ಕರೆಯೋದಷ್ಟೇ ಅಲ್ಲ, ನಾವೇ ನಾಲ್ಕು ಬಿಗಿಯೋಣ. ಯಾರೋ ಕಳ್‌ನನ್ಮಕ್ಕಳಿದ್ಧಾಗ್ ಇದ್ದಾರೆ. ಅವರಿಗೆ ಯಾಕೆ ನಾವು ಭಯ ಪಡಬೇಕು?" ಎಂದರು ಗಂಭೀರವಾಗಿ, ದೃಢಧ್ವನಿಯಲ್ಲಿ.
ಇದೇ ವಿಷಯವನ್ನೇ ಮತ್ತೆ ನಾಲ್ಕಾರು ಬಾರಿ ಪುನರಾವರ್ತಿಸಿ ಮಾತನಾಡುತ್ತ ಹತ್ತು ಹದಿನೈದು ನಿಮಿಷ ಕಳೆದೆವು. ಅಷ್ಟು ಕಾಲವೂ ಆಚೆಯಿಂದ ಯಾವುದೇ ಶಬ್ದ ಬರಲಿಲ್ಲ. ಮುಂದೆ ಏನಾದರೂ ಆದರೆ ಏನು ಮಾಡಬೇಕು ಎಂದು ನಿಶ್ಚಯಿಸಿದ್ದರಿಂದ ನಾವೆಲ್ಲ ಧೈರ್ಯವಾಗಿ ಮಲಗಲು ಹಿಂದಿರುಗಿದೆವು. ಆರಾಮವಾಗಿ ನಿದ್ರಿಸುತ್ತಿದ್ದ ಮಗುವನ್ನು ಬಿಟ್ಟು ಇನ್ನೂ ಭೀತಿಯ ಕಲ್ಪನೆಯಲ್ಲಿದ್ದ ನನ್ನಾಕೆ ನನ್ನತ್ತ ತಿರುಗಿ ಗಟ್ಟಿಯಾಗಿ ತಬ್ಬಿ ಮಲಗಿದಳು. ಉಸಿರಾಟ ಜೋರಾಗಿಯೇ ಕೇಳಿಸುತ್ತಿತ್ತು; ದೀಪ ಆರಿಸಿದ ಕತ್ತಲಿನಲ್ಲಿ. ಇದಾದ ಐದು ನಿಮಿಷಕ್ಕೆಲ್ಲಾ ಆಚೆ ಬೈಕ್ ಸ್ಟಾರ್ಟ್ ಮಾಡಿದ ಶಬ್ಧ ಕೇಳಿಸಿತು. ಪೀಡೆಗಳು ತೊಲಗಿದವು; ಯಾರೋ ಇಬ್ಬರೇ ಬಂದ ಹಾಗೆ ಇದ್ದಾರೆ ಎಂದುಕೊಂಡೆ. ಆದರೂ ನಿರೀಕ್ಷೆಯಲ್ಲಿ ಮುಂದಿನ ಹತ್ತು ಹದಿನೈದು ನಿಮಿಷ ನಿದ್ದೆ ಬರಲಿಲ್ಲ. ನನ್ನ ಹೆಂಡತಿಗೆ ಅಷ್ಟೊತ್ತಿಗೆ ನಿದ್ದೆ ಬಂದಿದ್ದು ಸಡಿಲವಾದ ಅಪ್ಪುಗೆಯಲ್ಲಿ, ತಹಬಂದಿಗೆ ಬಂದಿದ್ದ ಅವಳ ಉಸಿರಾಟದಲ್ಲಿ ಗೊತ್ತಾಗಿತ್ತು. ನನಗೆ ಮತ್ತೆ ಯಾವಾಗ ನಿದ್ದೆ ಬಂತೋ ಗೊತ್ತಾಗಲಿಲ್ಲ. ಎಚ್ಚರ ಆಗಿದ್ದು ಮಾತ್ರ ಮತ್ತೇ ಜೋರಾದ ಶಬ್ದದಿಂದ; ನಮ್ಮ ರೂಮಿನ ಮುಂದೆಯೇ ನಿಲ್ಲಿಸಿದ್ದ ಕ್ವಾಲಿಸ್ ಗಾಡಿ ಸ್ಟಾರ್ಟ್ ಮಾಡಿದ ಸದ್ದಿನಿಂದ. ಕಣ್ಣು ಬಿಟ್ಟು ನೋಡಲು ಇನ್ನೂ ಕಪ್ಪು ಕತ್ತಲೆ. ಎಲ್ಲೋ ಬೆಳಗಿನ ಜಾವ ನಾಲ್ಕೋ ಐದೋ ಇರಬಹುದು. ಬೆಳಗಿಗೆ ಇನ್ನೂ ಸಮಯವಿದ್ದರೂ, ಸ್ವಲ್ಪ ಧೈರ್ಯ ವಿಶ್ವಾಸ ಕುದುರಿದ್ದೇ ಅವರು ಜಾಗ ಖಾಲಿ ಮಾಡುತ್ತಿದ್ದಾರೆ ಎನ್ನಿಸಿತು. ಗಾಡಿ ಆಚೆಗೆ ಹೋದ ತಕ್ಷಣ ಮತ್ತೆ ನಿದ್ದೆ ಬಂತು.
ಮತ್ತೆ ನಾವೆಲ್ಲ ಎದ್ದದ್ದು ಬೆಳಗ್ಗೆ ಚೆನ್ನಾಗಿ ಬೆಳಕಾದ ನಂತರವೇ. ಐದಕ್ಕೇ ಎಬ್ಬಿಸುತ್ತೇನೆ ಎಂದಿದ್ದ ಮ್ಯಾನೇಜರ್ ಮುಖ ತೋರಿಸಿದ್ದು ಗಂಟೆ ಆರಾದ ಮೇಲೇಯೇ, ಅದೂ ಬಿಸಿ ನೀರು ಕಾಯಿಸಿಕೊಡಬೇಕಾ ಎಂದು ಕೇಳುತ್ತಾ. ನಾನು ನಮ್ಮಣ್ಣ ರಾತ್ರಿ ನಡೆದ ಘಟನೆಯನ್ನು, ಕ್ವಾಲಿಸ್ ಬಂದು-ಹೋದ ಸಮಯ ಮತ್ತು ರೀತಿ, ಅದರಲ್ಲಿದ್ದ ಹೆಂಗಸರು ಮತ್ತು ಮಕ್ಕಳು, ಇದ್ದ ಇಬ್ಬರೇ ನರಪೇತಲ ಗಂಡಸರು, ಅವರ ವಯಸ್ಸು, ಮುಂತಾದವನ್ನೆಲ್ಲಾ ಯೋಚಿಸಿಕೊಂಡು, "ರಾತ್ರಿ ಬಂದಿದ್ದವರು ಬಹುಶಃ ಲೋಕಲ್ ಗೂಂಡಾಗಳು. ಆ ಕ್ವಾಲಿಸ್‌ನವರನ್ನು ಎಲ್ಲೋ ನೋಡಿ ಹಿಂಬಾಲಿಸಿ ಬಂದಿದ್ದಾರೆ. ಊರಾಚೆಗೆ ಇರೋ ಈ ಲಾಡ್ಜಿನಲ್ಲಿ ಬಹುಶಃ ಕ್ವಾಲಿಸ್‌ನವರು ಮಾತ್ರ ಇದ್ದಾರೆ, ಬೇರೆ ಯಾರೂ ಇದ್ದ ಹಾಗೆ ಇಲ್ಲ ಅಂದುಕೊಂಡಿರಬೇಕು. ಒಳಗೆ ನುಗ್ಗಿ, ಗಲಭೆ ಎಬ್ಬಿಸಿ, ಕಳ್ಳತನವೋ, ಸುಲಿಗೆಯೋ, ಮತ್ತೆ ಎಂತಹುದೋ ಈ ರಾತ್ರಿಯಲ್ಲಿ ಮಾಡಬಹುದು ಅಂತ ಬಂದು ಆಚೆಯಿಂದ ಬಾಗಿಲು ತೆರೆಸುವುದಕ್ಕೆ ಪ್ರಯತ್ನಿಸಿದ್ದಾರೆ. ಯಾವಾಗ ಇಲ್ಲಿ ನಾವು ಒಳಗಿನಿಂದ ಜೋರಾಗಿ ಮಾತನಾಡಲು ಪ್ರಾರಂಭಿಸಿದೆವೋ ಆಗ ಇಲ್ಲಿ ಬೇರೆಯವರೂ ಇದ್ದ ಹಾಗೆ ಇದ್ದಾರೆ; ಪೋಲಿಸ್, ದೊಣ್ಣೆ ಎಲ್ಲಾ ಮಾತನಾಡುತ್ತಾ ಇದ್ದಾರೆ; ಸಲೀಸಾಗಿ ಏನೂ ಗಿಟ್ಟುವ ಹಾಗೆ ಇಲ್ಲ; ಅಪಾಯಕಾರಿ ಆಗುವ ಸಂಭವ ಇದೆ; ಸಮಯ ಸಂದರ್ಭ ನಮ್ಮ ಅನುಕೂಲಕ್ಕೆ ಇದ್ದ ಹಾಗೆ ಇಲ್ಲ ಎಂದುಕೊಂಡು ಇಲ್ಲಿಂದ ಕಳಚಿಕೊಂಡಿದ್ದಾರೆ." ಎಂಬ ಅಭಿಪ್ರಾಯಕ್ಕೆ ಬಂದು, ಸಧ್ಯ ಅಷ್ಟಕ್ಕೇ ಮುಗಿಯಿತಲ್ಲ ಎಂದು ನಿರಾಳವಾಯಿತು. ಆ ಸಂದರ್ಭವನ್ನು ಮತ್ತೆ ಮತ್ತೆ ಯೋಚಿಸಿ ಪರಾಮರ್ಶಿಸಿದಾಗಲೆಲ್ಲ ನಂಜನಗೂಡಿನ ಆ ರಾತ್ರಿಯ ನಿಗೂಢ ಅದೇ ಅನ್ನಿಸುತ್ತದೆ. ನೀವೇನಂತೀರಿ?
Oct 28, 2008
ನಂಜನಗೂಡಿನಲ್ಲಿ ನಿಗೂಢ ರಾತ್ರಿ
Subscribe to:
Post Comments (Atom)
No comments:
Post a Comment