May 11, 2007

ಮಹಿಮಾ "ಗಾಂಧಿ", ಕ್ರಿಯಾಶೀಲ ಕೃಷ್ಣ...

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮೇ 25, 2007 ರ ಸಂಚಿಕೆಯಲ್ಲಿನ ಲೇಖನ)

ಕಳೆದ ವರ್ಷ ಪತ್ರಿಕೆಯನ್ನು ಆರಂಭಿಸುವುದಕ್ಕೆಂದು ಬೆಂಗಳೂರಿನಲ್ಲಿದ್ದಾಗ ನಮ್ಮ ಪತ್ರಿಕೆಯ ಪ್ರಕಾಶಕರಾದ ನನ್ನಣ್ಣ ಸುರೇಶ್ ಮತ್ತು ನಾನು ಕರ್ನಾಟಕದ ರಾಜಕೀಯ ಕುರಿತು ಮಾತನಾಡುತ್ತಿದ್ದೆವು. ವಿಷಯ ಎಲ್ಲೆಲ್ಲೊ ಹೋಗಿ ಮಹಿಮಾ ಪಟೇಲ್ ಹತ್ತಿರ ಬಂತು. ನನ್ನಣ್ಣ ಆಗ ಹೇಳಿದ್ದು,

"ಹೇ, ಈ ಮಹಿಮಾ ಪಟೇಲ್ ವಿಚಾರ ಗೊತ್ತೇನೊ? ಆ ಮನುಷ್ಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ 'ನಾನು ಯಾರಿಗೂ ಹೆಂಡ ಹಂಚುವುದಿಲ್ಲ, ದುಡ್ಡೂ ಹಂಚುವುದಿಲ್ಲ. ಹಾಕೋ ಹಾಗಿದ್ರೆ ಹಾಕಿ, ಬಿಟ್ರೆ ಬಿಡಿ,' ಎಂದು ಓಪನ್ ಆಗಿ ಹೇಳಿ, ಹಾಗೆಯೆ ಪ್ರಚಾರ ಮಾಡಿ, ಇಡೀ ಕರ್ನಾಟಕದಲ್ಲಿ ಹಣ-ಹೆಂಡ ಹಂಚದೆ ಗೆದ್ದ ಏಕೈಕ ಶಾಸಕ,"
ಎಂದರು. ನನಗೆ ಶಾಕ್ ಆಗಿ ಹೋಯಿತು.

ಸುಮಾರು ಏಳೆಂಟು ವರ್ಷ ಹಳ್ಳಿಗಳಲ್ಲಿನ ಕೆಳಹಂತದ ರಾಜಕಾರಣ ಕಂಡವನು ನಾನು. ಗ್ರಾಮ-ತಾಲ್ಲೂಕು-ಜಿಲ್ಲಾ ಪಂಚಾಯಿತಿ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಹಣ-ಹೆಂಡ-ಜಾತಿಯೆ ಗೆಲ್ಲಲು ಬೇಕಾದ ಮೂಲಭೂತ ಸಂಪನ್ಮೂಲಗಳು. ಭ್ರಷ್ಟ ಮಾರ್ಗಗಳಿಂದ ಓಟನ್ನು ಕೊಳ್ಳುವ ತಂತ್ರ-ಕುತಂತ್ರಗಳದೇ ಇಲ್ಲಿ ಮೇಲುಗೈ. ಲೋಕಸಭಾ ವ್ಯಾಪ್ತಿ ಬಹಳ ದೊಡ್ಡದಾಗಿರುವುದರಿಂದ ಹಾಗು ಬಹುಪಾಲು ಮತದಾರರಿಗೆ ಸಂಸದನ ಜೊತೆ ನೇರ ಸಂಪರ್ಕ ಇಲ್ಲದೆ ಇರುವುದರಿಂದ ಅಲ್ಲಿ ಮಾತ್ರ ಅಷ್ಟಿಷ್ಟು ಪಕ್ಷ, ಸಿದ್ಧಾಂತ ಕೆಲಸ ಮಾಡುತ್ತದೆ.

ಹಾಗಾಗಿಯೆ ನನಗೆ ಮಹಿಮಾ ಪಟೇಲರ ವಿಷಯಕ್ಕೆ ಶಾಕ್ ಆಗಿದ್ದು. ಇಲ್ಲಿದ್ದರೂ ನಾನು ಪ್ರತಿದಿನ ಮೂರ್ನಾಲ್ಕು ಕನ್ನಡ ಪತ್ರಿಕೆಗಳನ್ನು ಓದುತ್ತೇನಾದರೂ ಮಹಿಮಾರ ಈ ಗಾಂಧಿವಾದದ ಬಗ್ಗೆ ಗೊತ್ತೇ ಆಗಿರಲಿಲ್ಲ. ಜನರಲ್ಲಿ ಆದರ್ಶಗಳನ್ನು ಬೆಳೆಸುವಂತಹ, ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಅದನ್ನು ಮೆಚ್ಚುವಂತಹ ಹವಾಮಾನವೇ ನಮ್ಮಲ್ಲಿ ಇಲ್ಲ ಎನ್ನಿಸುತ್ತದೆ. ನನಗೆ ಮಹಿಮಾರ ಬಗ್ಗೆ ಹೆಚ್ಚಿಗೆ ಗೊತ್ತಿಲ್ಲ. ಬದುಕಿರುವ ತನಕ ಜೆ.ಎಚ್.ಪಟೇಲರು ತಮ್ಮ ಮಕ್ಕಳನ್ನು ರಾಜಕಾರಣದಲ್ಲಿ ಪ್ರೋತ್ಸಾಹಿಸಲಿಲ್ಲ. ಅಪ್ಪನ ಸಾವಿನ ನಂತರ ಮಹಿಮಾ ಪಟೇಲರು ಜೆ.ಡಿ.ಎಸ್.ಗೆ ಬಂದು ಶಾಸಕರಾಗಿದ್ದಾರೆ. ಈಗ ದೆಹಲಿಯಲ್ಲಿ ರಾಜ್ಯದ ಪ್ರತಿನಿಧಿಯಾಗಿದ್ದಾರೆ. ಈ ವಾರ ನಮ್ಮ ಪತ್ರಿಕೆಗೆ ಕೊಟ್ಟಿರುವ ಸಂದರ್ಶನದಲ್ಲಿ "ವಾರಕ್ಕೆ ಎರಡು ದಿನ ದೆಹಲಿಯಲ್ಲಿದ್ದು ಕೆಲಸ ಮಾಡುತ್ತೇನೆ," ಎಂದಿದ್ದಾರೆ. ಅಲ್ಲಿ ಅದೇನು ಸಾಧಿಸುತ್ತಾರೊ ಗೊತ್ತಿಲ್ಲ. ಕಾರಿಗನೂರನ್ನು ಹೇಗೆ ಅಭಿವೃದ್ಧಿ ಮಾಡಿದ್ದಾರೊ ಗೊತ್ತಿಲ್ಲ. ವಿಧಾನಸಭೆಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಮಾತನಾಡಿದ್ದು ಗೊತ್ತಾಗಿಲ್ಲ. ಮುಂದಕ್ಕೂ ಹೀಗೆ ಒಳ್ಳೆಯ ಮಾರ್ಗಗಳನ್ನು ಅನುಸರಿಸುತ್ತಾರೊ, ಇಲ್ಲ ರಾಜಿ ಮಾಡಿಕೊಂಡು ಭ್ರಷ್ಟರಾಗಿಬಿಡುತ್ತಾರೊ, ಅದೂ ಗೊತ್ತಿಲ್ಲ.

ಆದರೆ, ನಮ್ಮ ಭ್ರಷ್ಟಾತಿಭ್ರಷ್ಟ ಚುನಾವಣಾ ವ್ಯವಸ್ಥೆಯಲ್ಲಿ ಹಣ-ಹೆಂಡ ಹಂಚುವುದಿಲ್ಲ ಎಂದು ಘೋಷಿಸಿ, ಅದೇ ರೀತಿ ನಡೆದುಕೊಂಡು, ಗಾಂಧಿ ಮಾರ್ಗದಲ್ಲಿ ಗೆದ್ದು ಬಂದಿರುವ ಒಂದೇ ಕಾರಣ ಸಾಕು ಅವರನ್ನು ತಲೆಯ ಮೇಲಿಟ್ಟುಕೊಂಡು ಮೆರೆಸಲು. ಕರ್ನಾಟಕದ 224 ಕ್ಷೇತ್ರಗಳಲ್ಲಿ ಇವರೊಬ್ಬರೇ ಹಾಗೆ ವಿಧಾನಸಭೆ ಪ್ರವೇಶಿಸಿರುವುದು. ಹಾಗೆಂದು ಇದನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ತಮ್ಮ ತಂದೆತಾಯಿಯವರ ಹೆಸರಿನ ಮೇಲೆ, ಮನೆತನದ ರಾಜಕೀಯ ಬಲದ ಬುನಾದಿಯ ಮೇಲೆ ರಾಜಕಾರಣಕ್ಕೆ ಬರುವವರಿಗೆ ಅವರದೇ ಆದ ಅಡ್ವಾಂಟೇಜಸ್ ಇರುತ್ತವೆ. ಇವತ್ತು ಕರ್ನಾಟಕದ ವಿಧಾನಸಭೆಯಲ್ಲಿ ಮಹಿಮಾರಿಂದ ಹಿಡಿದು ಎಚ್.ಡಿ. ರೇವಣ್ಣ, ಕುಮಾರಸ್ವಾಮಿ, ಕೃಷ್ಣ ಭೈರೇಗೌಡ, ಸುಧಾಕರ್ ರೆಡ್ಡಿ, ಪರಿಮಳಾ ನಾಗಪ್ಪ, ಕುಮಾರ್ ಬಂಗಾರಪ್ಪ, ಪ್ರಕಾಶ್ ಖಂಡ್ರೆ, ಡಿ.ಆರ್. ಪಾಟೀಲ್, ದಿನೇಶ್ ಗುಂಡೂರಾವ್, ನಾಗಮಣಿ ನಾಗೇಗೌಡ, ವಿಜಯಲಕ್ಷ್ಮಮ್ಮ ಬಂಡಿಸಿದ್ದೇಗೌಡ, ತನ್ವೀರ್ ಸೇಟ್, ಹೀಗೆ ಇನ್ನೂ ಅನೇಕರು ಇದ್ದಾರೆ. ಮಹಿಮಾ ಪಟೇಲ್ ಮಾಡಿದ್ದನ್ನು ಇವರಲ್ಲಿ ಕನಿಷ್ಠ ಹತ್ತು ಜನ ಮಾಡಿದರೆ ಸಾಕು, ಇನ್ನುಳಿದ 214 ಶಾಸಕರು ತಮ್ಮ ಅನೈತಿಕ ಚುನಾವಣೆಗಳ ಬಗ್ಗೆ ಜಿಗುಪ್ಸೆ ಪಟ್ಟುಕೊಂಡು ಕರ್ನಾಟಕದ ರಾಜಕೀಯ ಚಿತ್ರವನ್ನೆ ಬದಲಾಯಿಸಿಬಿಡುತ್ತಾರೆ. ಈಗಲೂ ಸಹ ಕರ್ನಾಟಕದ ಪ್ರತಿಯೊಬ್ಬ ಶಾಸಕನೂ ಮಹಿಮಾ ಪಟೇಲ್ ಎದುರಿಗೆ ಬಂದ ತಕ್ಷಣ ತಾನು ಚುನಾವಣೆಯಲ್ಲಿ ಗೆದ್ದು ಬರಲು ಮಾಡಿದ ಅನೈತಿಕ ಕೆಲಸಗಳಿಗೆ ನಾಚಿಕೆ ಪಟ್ಟುಕೊಳ್ಳಬೇಕು.

ಕಳೆದ ತಿಂಗಳು ಬೆಂಗಳೂರಿನಲ್ಲಿದ್ದಾಗ ನಮ್ಮ ಪತ್ರಿಕೆಯ ಮಲ್ಲನಗೌಡರೊಂದಿಗೆ ವಿಧಾನಸಭೆಯ ಕಲಾಪ ವೀಕ್ಷಿಸಲು ಹೋಗಿದ್ದೆ. ಅದೊಂದು ಅಪ್ಪಟ ನಾಟಕ ಪ್ರದರ್ಶನ. ತಾವು ಅಲ್ಲಿ ಏನು ಮಾಡುತ್ತಿದ್ದೇವೆ ಎಂಬ ಪ್ರಾಥಮಿಕ ಜ್ಞಾನವೂ ಇಲ್ಲದ, ಹಸಿಹಸಿ ಸುಳ್ಳು ಹೇಳುವ, ಜೋಕರ್ ನಟರುಗಳೆ ಹೆಚ್ಚಿರುವ ನಾಟಕ ತಂಡ ಎನ್ನಿಸಿಬಿಟ್ಟಿತು. ಬಳ್ಳಾರಿಯಲ್ಲಿ ತಮ್ಮದೇ ಸರ್ಕಾರದ ವಿರುದ್ದ ಧರಣಿ ಕುಳಿತಿದ್ದ ಸಚಿವ ಶ್ರೀರಾಮುಲು ಬಗ್ಗೆ ರಾಜ್ಯದ ಗೃಹಸಚಿವ ಎಂ.ಪಿ. ಪ್ರಕಾಶ್ ಎಂತಹ ಅಪ್ಪಟ ಸುಳ್ಳು ಹೇಳಿದರೆಂದರೆ, ಅದನ್ನು ಕೇಳಿ ಕಾಂಗ್ರೆಸ್‌ನ ಶಾಸಕರೊಬ್ಬರು ಕೇಳಿಯೇ ಬಿಟ್ಟರು: "ಸ್ವಾಮಿ, ಪ್ರಕಾಶ್ ಸಾಹೇಬರೆ, ತಾವು ಓದಿದ ಶಾಲೆಯ ಅಡ್ರೆಸ್ ಕೊಡಿ. ನಿಮ್ಮ ಹಾಗೆ ಮಾತನಾಡುವುದನ್ನು ನಾವೂ ಸ್ವಲ್ಪ ಹೋಗಿ ಕಲಿತು ಬರುತ್ತೇವೆ!!" ಇದನ್ನೆಲ್ಲ ಗಮನಿಸಿಯೆ ಇರಬೇಕು ಮೂರ್ನಾಲ್ಕು ವಾರದ ಹಿಂದೆ ಪ್ರಕಾಶರು "ನಾನು ರಾಜಕಾರಣದಿಂದ ನಿವೃತ್ತಿ ಪಡೆಯುತ್ತೇನೆ," ಎಂದು ಹೇಳಿದ್ದನ್ನು ಜನ ಗಂಭೀರವಾಗಿ ಪರಿಗಣಿಸದೆ ಹೋಗಿದ್ದು. ಈಗ ಮತ್ತೆ ವಾರದ ಹಿಂದೆ, "ನನಗೆ ಚುನಾವಣಾ ರಾಜಕೀಯ ಬೇಡ. ಆದರೆ ರಾಜಕಾರಣದಲ್ಲಿ ಸಕ್ರಿಯನಾಗಿರುತ್ತೇನೆ," ಎಂದು ಪ್ಲೇಟ್ ಬದಲಾಯಿಸಿದ್ದಾರೆ. ಇದರರ್ಥ, ನನ್ನನ್ನು ರಾಜ್ಯಸಭಾ ಎಂ.ಪಿ.ಯನ್ನಾಗಿಯೋ, ಎಮ್.ಎಲ್.ಸಿ.ಯನ್ನಾಗಿಯೋ ಮಾಡ್ರಪ್ಪ ಎಂಬ ಕೋರಿಕೆಯೆ? ಪ್ರಕಾಶರೇ ವಿವರಣೆ ನೀಡಬೇಕು.

ನಿಮಗೆ ಕೃಷ್ಣ ಭೈರೇಗೌಡ ಎಂಬ ವೇಮಗಲ್ ಕ್ಷೇತ್ರದ ಯುವ ಶಾಸಕರ ಬಗ್ಗೆ ಗೊತ್ತಿರಬಹುದು. ಮಾಜಿ ಕೃಷಿ ಸಚಿವ ಭೈರೇಗೌಡರ ಮಗ. ಜಿದ್ದಾಜಿದ್ದಿಯ, ಜಾತಿ ರಾಜಕೀಯಕ್ಕೆ ಹಾಗು ಫ್ಯಾಕ್ಷನಿಸಮ್‌ಗೆ ಹೆಸರಾದ ಕೋಲಾರ ಜಿಲ್ಲೆಯವರು. ಅಮೇರಿಕದಲ್ಲಿ ಒಂದಷ್ಟು ವರ್ಷ ಇದ್ದು, ಮಹಿಮಾರಂತೆ ತಂದೆಯ ಮರಣದ ನಂತರ ಕಾಂಗ್ರೆಸ್‌ಗೆ ಹೋಗಿ ಚುನಾವಣೆಗೆ ನಿಂತವರು. ಅಂದಿನ ಕಲಾಪದಲ್ಲಿ ಮೂರ್ನಾಲ್ಕು ಸಲ ಎದ್ದು ನಿಂತು ನೇರವಾಗಿ, ವಸ್ತುನಿಷ್ಠವಾಗಿ ಮಾತನಾಡಿದರು. ಚುರುಕಾದ, ಸರಳವಾಗಿ ಕಾಣುವ, ಒಳ್ಳೆಯ ಭವಿಷ್ಯ ಇರುವ ರಾಜಕಾರಣಿಯಂತೆ ಕಂಡರು. ಕಾಂಗ್ರೆಸ್‌ನ ದೈತ್ಯಾದಿದೈತ್ಯ ಶಾಸಕರೆಲ್ಲ ತಮ್ಮ ವೈಯಕ್ತಿಕ ಸಮಸ್ಯೆಗಳನ್ನೆ ರಾಜ್ಯದ ಸಮಸ್ಯೆ ಎಂದು ಗೋಳಾಡುತ್ತಿದ್ದಾಗ ಕೃಷ್ಣ ಭೈರೇಗೌಡರು ಜನಪರ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು. ಸೂಕ್ತ ಸಮಯದಲ್ಲಿ ಕಾಮೆಂಟ್ ಮಾಡುತ್ತಿದ್ದರು. ಆದರೆ ಈ ಕಾಂಗ್ರೆಸ್‌ನ ವೃದ್ಧನಾರಿಯರು ಇಂತಹವರಿಗೆ ಹೆಚ್ಚು ಜವಾಬ್ದಾರಿ ಕೊಡುವುದು, ಪ್ರೋತ್ಸಾಹಿಸುವುದು ನಿಜಕ್ಕೂ ಕನಸಿನ ಮಾತು. ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಎಲ್ಲಾ ಈಕ್ವೇಶನ್ಸ್ ಬದಲಾಗಬಹುದಲ್ಲ?

ಇಂದಿನ ನಮ್ಮ ಸುದ್ದಿಮಾಧ್ಯಮಗಳ ಅಜೆಂಡಾ ಒಳ್ಳೆಯದನ್ನು, ಒಳ್ಳೆಯವರನ್ನು ಗುರುತಿಸಬೇಕು, ಪ್ರೋತ್ಸಾಹಿಸಬೇಕು ಎನ್ನುವುದಕ್ಕಿಂತ, ಯಾವಾಗಲೂ ಕೆಟ್ಟದ್ದನ್ನೆ ದೊಡ್ಡದು ಮಾಡಿ, ಅನಾದರ್ಶಗಳನ್ನು ವೈಭವೀಕರಿಸಿ, ಒಳ್ಳೆಯವರೆ ಇಲ್ಲ ಎಂದು ಹೇಳುವುದೇ ಆಗಿದೆ ಎನಿಸುತ್ತದೆ. ಧರಮ್‌ಸಿಂಗ್, ಖರ್ಗೆ, ದೇವೇಗೌಡ, ಯಡಿಯೂರಪ್ಪರಿಗಿಂತ ಜನ ತಿಳಿದುಕೊಳ್ಳಬೇಕಾದ್ದು ಮಹಿಮಾ ಏನು ಮಾಡಿದರು, ಕೃಷ್ಣ ಭೈರೇಗೌಡ ಏನಂದರು ಎನ್ನುವುದು. ಇಂತಹ ಒಂದಷ್ಟು ಆದರ್ಶವಾದಿಗಳಿಗೆ, ಕ್ರಿಯಾಶೀಲರಿಗೆ "ಭೇಷ್ ಕಣಪ್ಪ" ಎಂದು ಆಗಾಗ ಅನ್ನುತ್ತಿದ್ದರೆ ಮಿಕ್ಕ ರಾಜಕಾರಣಿಗಳು ನಾಚಿಕೆ ಪಟ್ಟುಕೊಂಡು ಅಲ್ಪಸ್ವಲ್ಪವಾದರೂ ತಿದ್ದಿಕೊಳ್ಳುತ್ತಾರೆ. ಈಗ ನಮ್ಮ ಪತ್ರಿಕೆ ಮಾಡಬೇಕಿರುವುದೂ ಅದನ್ನೆ. ನೀವೇನಂತೀರಿ?

No comments: