(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಅಕ್ಟೋಬರ್ 06, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)
ಶಿಕ್ಷಣ ಬಚಾವೊ ಆಂದೋಲನವಂತೆ, ಅದು ವಾರದ ಹಿಂದೆ ಬೆಂಗಳೂರಿನಲ್ಲಿ ಶಿಕ್ಷಣ ಸಂಬಂಧಿ ವಿಚಾರ ಸಂಕಿರಣ ಏರ್ಪಡಿಸಿತ್ತಂತೆ. ಅಲ್ಲಿ ಪ್ರಾಸಂಗಿಕವಾಗಿ ಕರ್ನಾಟಕದ ಉನ್ನತ ಶಿಕ್ಷಣ (?) ಸಚಿವ ಡಿ.ಎಚ್. ಶಂಕರಮೂರ್ತಿ ಟಿಪ್ಪು ಸುಲ್ತಾನನ ಬಗ್ಗೆ ಮಾತನಾಡಿದರಂತೆ. ಅವರ ಪ್ರಕಾರ ಪರ್ಷಿಯನ್ ಅನ್ನು ರಾಜ್ಯ ಭಾಷೆ ಮಾಡಿದ ಟಿಪ್ಪು ಸುಲ್ತಾನನಿಗೆ ರಾಜ್ಯದ ಇತಿಹಾಸದಲ್ಲಿ ಸ್ಥಾನ ಕೊಡಬಾರದಂತೆ! ಆತ ಕನ್ನಡ ವಿರೋಧಿಯಂತೆ. ಬಲವಂತವಾಗಿ ಮತಾಂತರ ಮಾಡಿದನಂತೆ. ಶಂಕರಮೂರ್ತಿ ಇದೆಲ್ಲವನ್ನು ಹೇಳಿರುವುದು ಶಾಲಾ ಬಾಲಕರ ಮುಂದೆ ಎಂದು 'ವಿಜಯ ಕರ್ನಾಟಕ' ದಿನಪತ್ರಿಕೆಯಲ್ಲಿನ ಅಂದಿನ ಕಾರ್ಯಕ್ರಮದ ಚಿತ್ರ ನೋಡಿದರೆ ಗೊತ್ತಾಗುತ್ತದೆ. ಮಕ್ಕಳು ಮೈಸೂರು ಹುಲಿ ಟಿಪ್ಪು ಸುಲ್ತಾನ, ಅವನ ಒಳ್ಳೆಯ ಗುಣಗಳು ಇಂತಿಂತಹವು, ಎಂದೆಲ್ಲ ಓದುತ್ತಿದ್ದರೆ ಅವರ ಶಿಕ್ಷಣ ಮಂತ್ರಿ ಅಲ್ಲಿ ಬಂದು ಯಾರ್ರಿ ಹೇಳಿದ್ದು ಎಂದರೆ ಮಕ್ಕಳಿಗೆ ಪಾಠ ಮಾಡಿದ ಉಪಾಧ್ಯಾಯರು ಓಡುವುದಾದರೂ ಎಲ್ಲಿಗೆ? ಎಂತಹ ವೇದಿಕೆಯಲ್ಲಿ ಎಂತಹ ಮಾತು? ಇವರು ಶಿಕ್ಷಣ, ಅದೂ ಉನ್ನತ ಶಿಕ್ಷಣ ಸಚಿವರು!
ಟಿಪ್ಪು ಸುಲ್ತಾನ ಏನೇ ಇರಬಹುದು, ಆದರೆ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಜನ ಅವನನ್ನು ಒಪ್ಪಿಕೊಂಡದ್ದು ಬ್ರಿಟಿಷರ ವಿರುದ್ಧಹೋರಾಡಿದ ದೇಶಭಕ್ತನನ್ನಾಗಿ. 'ಆನಂದಮಠ' ಕಾದಂಬರಿಯಲ್ಲಿ ವಂದೇಮಾತರಂ ಗೀತೆ ಮುಸ್ಲಿಮರ ಆಡಳಿತವನ್ನು ಕೊನೆಗಾಣಿಸಿದ ಬ್ರಿಟಿಷರನ್ನು ಹೊಗಳುತ್ತ, ತಾಯಿ ಕಾಳಿಯನ್ನು ಸ್ತುತಿಸುತ್ತ ಹಾಡಿದರೆ ನಂತರ ಅದೇ ಗೀತೆಯನ್ನು ಬ್ರಿಟಿಷರ ವಿರುದ್ಧ ಹೋರಾಡಲು ಬಳಸಲಾಯಿತು. ಕಾಲಾಂತರದಲ್ಲಿ ಕಾದಂಬರಿಯಲ್ಲಿನ ಅದರ ಸಂದರ್ಭಕ್ಕಿಂತ ವಂದೇ ಮಾತರಂಎಂಬ ಎರಡು ಪದಗಳಲ್ಲಿರುವ ದೇಶಭಕ್ತಿ ಉತ್ತೇಜಕ ಸ್ಲೋಗನ್ ಗುಣ ಮುಖ್ಯವಾಯಿತು. ಕಾದಂಬರಿ ಓದಿರದ ಬಂಗಾಳಿಗಳು, ಬಂಗಾಳಿಗಳಲ್ಲದವರು, ಅನಕ್ಷರಸ್ಥರು ಅದನ್ನು ತಾಯಿಕಾಳಿಗೆ ವಂದನೆ ಎನ್ನುವ ಅರ್ಥಕ್ಕಿಂತ ತಾಯಿನಾಡಿಗೆ ವಂದನೆ ಎಂಬ ರೀತಿಯಲ್ಲಿ ಬಳಸಿದರು. ಜನಗಣಮನದ ಮೂಲದ ಬಗ್ಗೆ ಏನೇ ಮಾತನಾಡಿದರೂ ನಾವು ಅದನ್ನು ನಮ್ಮ ರಾಷ್ಟ್ರಗೀತೆಯನ್ನಾಗಿ ಮಾಡಿಕೊಂಡಿರುವುದೇಕೆ?
ಇದೇ ರೀತಿಯಲ್ಲಿ ಕೆಲವೊಂದು ಐತಿಹಾಸಿಕ ವ್ಯಕ್ತಿಗಳಿಗೆ ಸಂದರ್ಭಕ್ಕನುಸಾರವಾಗಿ ಕೆಲವು ಮೂಲಭೂತ ನೈತಿಕ ಗುಣಗಳನ್ನು ಆರೋಪಿಸಿ ನೆನೆಸುವುದು, ಸಂದರ್ಭಕ್ಕೆ ಬಳಸಿಕೊಳ್ಳುವುದು ಎಲ್ಲಾ ಕಾಲ, ಸಮಾಜದಲ್ಲಿ ಆಗುವಂತಹುದು. ಟಿಪ್ಪು ಬ್ರಿಟಿಷರನ್ನು ಬಿಟ್ಟು ಇತರೆ ಸ್ಥಳೀಯ ರಾಜರ ವಿರುದ್ಧ ಹೋರಾಡಿ ಮಡಿದಿದ್ದರೆ ಆತನನ್ನು ಯಾರೂ ದೇಶಭಕ್ತ ಎನ್ನುತ್ತಿರಲಿಲ್ಲವೇನೊ. ಕೆಲವು ವೈಜ್ಞಾನಿಕ ಸಿದ್ಧಾಂತಗಳು ಬದಲಾಗುವ ತರಹವೆ ಹೊಸಹೊಸ ಸತ್ಯಗಳು ಹೊರಗೆ ಬಂದಂತೆಲ್ಲ ಇತಿಹಾಸವೂ ಬದಲಾಗುತ್ತಿರುತ್ತದೆ. ಕೆಲವು ವರ್ಷಗಳ ನಂತರ ಟಿಪ್ಪುವಿಗೊ, ಇನ್ನೊಬ್ಬನಿಗೊ ಹಾಗೆ ಆಗಲೂಬಹುದು. ಆಗಲೂ ಸಹ ಅವನ ಕೆಲವು ಗುಣಗಳು ಬದಲಾಗಬಹುದೆ ಹೊರತು ಟಿಪ್ಪುವನ್ನು ಕರ್ನಾಟಕದ, ಭಾರತದ ಇತಿಹಾಸದಿಂದ ತೆಗೆಯಲು ಸಾಧ್ಯವಿಲ್ಲ. ಅದು ಆದ ಪಕ್ಷದಲ್ಲಿ ಸತ್ಯವನ್ನು ಪ್ರಜ್ಞಾಪೂರ್ವಕವಾಗಿ ಮುಚ್ಚಿಟ್ಟಂತೆ. ಎಲ್ಲಾ ಮತಗಳಲ್ಲಿರುವ ಮೂಲಭೂತವಾದಿಗಳು ಮಾತ್ರ ಮಾಡುವ ಕೆಲಸ ಅದು.
ಆದರೆ, ಶಂಕರಮೂರ್ತಿ ಟಿಪ್ಪುವಿನ ವಿಷಯ ಕೆದಕಿರುವುದು ಇತಿಹಾಸದ ಸತ್ಯ ಬಗೆಯಲು ಅಲ್ಲ, ಬದಲಿಗೆ ಜನರಲ್ಲಿ ಭೇದ ಬಿತ್ತಲು, ಭಾವನೆಗಳನ್ನು ಕೆರಳಿಸಲು, ಮತ ರಾಜಕಾರಣಕ್ಕೆ ಒಂದು ಆಯುಧವನ್ನಾಗಿ ಬಳಸಲು. ಇದು ಯಾವ ಜವಾಬ್ದಾರಿಯ ಕೆಲಸ, ಇದೆಂತಹ ದೇಶಭಕ್ತಿ? ಇವರ ಪ್ರಕಾರ ಅಕ್ಬರ್‌ಗೆ ದಿ ಗ್ರೇಟ್ ಎನ್ನಬಾರದಂತೆ. ಅಕ್ಬರ್ ಎಂಬ ಪದದ ಅರ್ಥವೇ ದಿ ಗ್ರೇಟ್ ಎಂದು ಶಂಕರಮೂರ್ತಿಗಳೇ. ನೀವು ಇತಿಹಾಸದ ಪುಟಗಳಲ್ಲಿ ಅಕ್ಬರ್‌ನ ಹೆಸರನ್ನೆ ತಿದ್ದುವ ಬಗ್ಗೆ ಕಾರ್ಯೋನ್ಮುಖರಾಗುವುದು ಒಳ್ಳೆಯದು. ಬಾಬರ್‌ನ ಮೊಮ್ಮಗ ಎಂದು ತಿದ್ದಿಬಿಟ್ಟರೆ ಹೇಗೆ?
ಇಂತಹ ಅಧಿಕ ಪ್ರಸಂಗಿ ಶಿಕ್ಷಣ ಮಂತ್ರಿಯ ಕೆಳಗೆ ಶಿಕ್ಷಣ ಪಡೆಯುತ್ತಿರುವ ನಮ್ಮ ಮಕ್ಕಳು ನಿಜವಾಗಲೂ ನಾಳಿನ ಭವಿಷ್ಯವಾಗುತ್ತಾರಾ? ಅದು ಚೆನ್ನಾಗಿರುತ್ತದಾ? ಸರಿಪಡಿಸಿಕೊಳ್ಳಲು ಕಾಲ ಮಿಂಚಿಲ್ಲ. ಆದರೆ ಅದು ಸದ್ಯಕ್ಕೆ ಆಗುತ್ತದೆಯೆ? ಬಹುಶಃ ಇಲ್ಲ. ಏಕೆಂದರೆ...
ಕಾಂಗ್ರೆಸ್-ಜನತಾದಳ ಸಮ್ಮಿಶ್ರ ಸರ್ಕಾರದ ಧರಂಸಿಂಗ್ ಮತ್ತು ಭಾಜಪ-ಜನತಾದಳದ ಕುಮಾರಸ್ವಾಮಿಯವರನ್ನು ಅದು ಹೇಗೆ ಮುಖ್ಯಮಂತ್ರಿಗಳು ಎಂದು ಕರೆಯಬಹುದೊ ನನಗರ್ಥವಾಗುತ್ತಿಲ್ಲ. ಏಕೆಂದರೆ, ತಮ್ಮ ಮಂತ್ರಿಮಂಡಲದಲ್ಲಿ ದಳಕ್ಕೆ ಸೇರಿದ್ದ ಅರೆಪಾಲು ಮಂತ್ರಿಗಳು ಧರಂ ಸಿಂಗರಿಗೆ ನೇರವಾಗಿ ರಿಪೋರ್ಟ್ ಮಾಡಿಕೊಳ್ಳುತ್ತಿದ್ದರೆ? ಈಗಿನ ಮಂತ್ರಿಮಂಡಲದಲ್ಲಿ ಭಾಜಪಕ್ಕೆ ಸೇರಿರುವ ಮಂತ್ರಿಗಳು ಕುಮಾರಸ್ವಾಮಿಯವರಿಗೆ ರಿಪೋರ್ಟ್ ಮಾಡಿಕೊಳ್ಳುತ್ತಿದ್ದಾರಾ? ಹಾಗೆ ಕಾಣಿಸುವುದಿಲ್ಲ. ಭಾಜಪ ಮಂತ್ರಿಗಳ ವಿಷಯಕ್ಕೆ ಬಂದಾಗ ಕೊನೆಯ ಮಾತು ಯಡಿಯೂರಪ್ಪನವರಿಗೆ ಬಿಟ್ಟದ್ದು, ಇಲ್ಲವೆ ಆ ಪಕ್ಷದ ನಾಯಕರಿಗೆ ಬಿಟ್ಟದ್ದು. ಅವರನ್ನು ತೆಗೆಯುವುದಕ್ಕಾಗಲಿ, ಸೇರಿಸಿಕೊಳ್ಳುವುದಕ್ಕಾಗಲಿ, ಪ್ರಶ್ನಿಸುವುದಕ್ಕಾಗಲಿ ಕುಮಾರಸ್ವಾಮಿಯವರಿಗೆ ಅಧಿಕಾರವಿದ್ದಂತಿಲ್ಲ.
ಹಾಗಾದರೆ, ಮುಖ್ಯಮಂತ್ರಿ ಎಂದು ಕಾಗದದ ಮೇಲಿದ್ದರೂ, ವಾಸ್ತವದಲ್ಲಿ ಕೇವಲ ಅರ್ಧ ಮಂತ್ರಿಮಂಡಲವನ್ನು ಮಾತ್ರ ನಿಭಾಯಿಸಲು ಅಧಿಕಾರವಿರುವ (ಉಪ)ಮುಖ್ಯಮಂತ್ರಿಗಳೇ ಅಲ್ಲವೆ ಇವರು? ಆಲ್‌ಮೋಸ್ಟ್ ಮುಖ್ಯಮಂತ್ರಿಗಳಿದ್ದಷ್ಟು ಅಧಿಕಾರವಿದ್ದ ಉಪಮುಖ್ಯಮಂತ್ರಿಗಳು ಧರಂ ಸಿಂಗ್ ಮತ್ತು ಕುಮಾರ ಸ್ವಾಮಿಯವರು ಎಂದರೆ ತಪ್ಪಾಗುತ್ತದೆಯೆ?
ಒಬ್ಬ ಮಂತ್ರಿಯನ್ನು ಸೇರಿಸಿಕೊಳ್ಳುವ ಅಥವ ಬಿಡುವ ವಿಷಯದಲ್ಲಿ ಮುಖ್ಯಮಂತ್ರಿಗೆ ಸಂಪೂರ್ಣ ಅಧಿಕಾರವಿರಬೇಕು. ಇಲ್ಲದಿದ್ದರೆ ಈಗಿನ ಸಮ್ಮಿಶ್ರ ಸರ್ಕಾರಗಳಲ್ಲಿ ಆಗುತ್ತಿರುವಂತೆ ತಮ್ಮ ಸ್ಥಾನಕ್ಕೆ ನಾಲಾಯಕ್ ಆದ ಮಂತ್ರಿಗಳು ಪಕ್ಷ ರಾಜಕಾರಣದಿಂದಾಗಿ ಮುಂದುವರಿಯುತ್ತಿರುತ್ತಾರೆ. ಅದರಿಂದ ಜನಜೀವನಕ್ಕೆ ಅಪಾಯ, ಅಭಿವೃದ್ಧಿಗೆ ಮಾರಕ. ಬೇರೆ ದೇಶಕ್ಕೆ ನಮ್ಮ ನಾಡಿನ ನೆಲ-ಜಲ-ಜನವನ್ನು ಮಾರಿಕೊಳ್ಳುವುದು ಮಾತ್ರವೆ ದೇಶದ್ರೋಹವಲ್ಲ. ನಮ್ಮದೇ ದೇಶದ ಜನಕ್ಕೆ ಮೋಸ ಮಾಡುವುದು, ಜಾತಿಮತಗಳ ಹೆಸರಿನಲ್ಲಿ ಹಿಂಸೆ ಮಾಡುವುದು, ಭಾವನೆಗಳನ್ನು ಕೆರಳಿಸಿ ಅಪನಂಬಿಕೆ ಹುಟ್ಟಿಸುವುದು, ಸಮಾನತೆಯ ಹೆಸರಿನಲ್ಲಿ ಪ್ರಜಾಪ್ರಭುತ್ವ ವಿರೋಧಿ ಸಿದ್ಧಾಂತದ ಮೇಲೆ ಬಂದೂಕು ಹಿಡಿಯುವುದು, ಸರಿಯಾದ ಆಡಳಿತ ಕೊಡಲಾಗದಿರುವುದು, ಇವೆಲ್ಲವೂ ದೇಶದ್ರೋಹಗಳೆ. ತಮ್ಮ ಮಂತ್ರಿಮಂಡಲದ ಸದಸ್ಯರೆ ಮೇಲುನೋಟಕ್ಕೆ ಇಂತಹ ದೇಶದ್ರೋಹಿ ಕೃತ್ಯದಲ್ಲಿ ತೊಡಗಿರುವಾಗ ಅಂತಹ ಮಂತ್ರಿಯನ್ನು ವಜಾ ಮಾಡುವ ಅಧಿಕಾರ ಮುಖ್ಯಮಂತ್ರಿಗಿಲ್ಲದಿದ್ದರೆ, ಅದಕ್ಕೆ ಯಾರು ಹೊಣೆ? ಮತದಾರರೆ ಇರಬೇಕಲ್ಲವೆ?
ಹಾಗಿದ್ದಲ್ಲಿ, ನಮ್ಮ ಕರ್ನಾಟಕಕ್ಕೆ ಇಡೀ ಮಂತ್ರಿಮಂಡಲದ ಮೇಲೆ ಸಂವಿಧಾನಬದ್ಧವಾದ ಅಧಿಕಾರ ಮತ್ತು ನಿಯಂತ್ರಣ ಹೊಂದಿರಬೇಕಾದ ಮುಖ್ಯಮಂತ್ರಿಗಳ ಅವಶ್ಯಕತೆಯಿಲ್ಲವೆ? ಸಂವಿಧಾನೇತರ ಶಕ್ತಿಗಳು ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಯಾರಿಗೂ ಜವಾಬ್ದಾರರಾಗದಿರುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದೆ? ಮುಂದಿನ ಸಾರಿಯ ವಿಧಾನಸಭಾ ಚುನಾವಣೆಯಲ್ಲಿ ಜನ ಯೋಚಿಸಬೇಕಾದ ವಿಷಯ ಇದು.
Sep 24, 2006
ಮುಖ್ಯಮಂತ್ರಿ ಹೆಸರಿನ ಉಪ ಮುಖ್ಯಮಂತ್ರಿಗಳು-ಧರಂ, ಕುಮಾರ್
Subscribe to:
Post Comments (Atom)
No comments:
Post a Comment