(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮೇ 11, 2007 ರ ಸಂಚಿಕೆಯಲ್ಲಿನ ಲೇಖನ)
ಇವು ಅಂತರಂಗ ಮತ್ತು ಬಹಿರಂಗ ಶುದ್ಧಿಗಾಗಿ ಬಸವಣ್ಣ ಇತ್ತ ಸಪ್ತ ಸೂತ್ರಗಳು. ಬೈಬಲ್ ಕತೆಗಳ ಪ್ರಕಾರ, ಇದೇ ತರಹದ "ಹತ್ತು ಕಟ್ಟಳೆಗಳು" (Ten Commandments) ಯಹೂದಿ ಮೂಲದ ಮೋಸಸ್‌ಗೆ ದೇವರೇ ಬರೆದು ಕೈಗಿತ್ತನೆಂದು ಪ್ರತೀತಿ. ಅವು ಯಾವುವೆಂದರೆ:
ಇವನ್ನು ದೈವಾಜ್ಞೆಯೆಂತಲೊ, ಕಟ್ಟಳೆಯೆಂತಲೊ ಎಂದುಕೊಳ್ಳುವುದಕ್ಕಿಂತ, ಮೂರನೆಯ ಮತ್ತು ಕೊನೆಯ ಆರು ಸೂತ್ರಗಳು ನಾಗರಿಕ ಸಮಾಜದ ಉನ್ನತಿ ಮತ್ತು ಶಾಂತಿಗಾಗಿ ಹಾಗು ಅಂತರಂಗ, ಬಹಿರಂಗ ಶುದ್ಧಿಗಾಗಿ ಎಲ್ಲರೂ ಮತಾತೀತವಾಗಿ ಒಪ್ಪಬಹುದಾದ, ಪಾಲಿಸಬಹುದಾದ ಸೂತ್ರಗಳು ಎಂದು ಭಾವಿಸುವುದೆ ಸರಿಯಾದದ್ದು. ಬಸವಣ್ಣ ಹೇಳುವುದು ಇದನ್ನೇ ಅಲ್ಲವೆ?
ಆಧ್ಯಾತ್ಮ ಪ್ರಪಂಚದಲ್ಲಿ ತೊಡಗಿಕೊಂಡ ಅನುಭಾವಿಗಳಿಗೆ, ನಿಜಜೀವನದ ಸವಾಲುಗಳಿಂದ ದೂರ ಉಳಿದವರಿಗೆ ತಾವು ಇನ್ನೊಬ್ಬರಿಗೆ ಕೇಡು ಬಗೆಯದೆ ಬದುಕಲು ಮೇಲಿನ ಸರಳವಾದ ಸೂತ್ರಗಳೆ ಸಾಕು. ಆದರೆ, ವೈರುಧ್ಯಗಳಿಂದ ತುಂಬಿದ ಜೀವನದಲ್ಲಿ, ಹೆಜ್ಜೆ ಹೆಜ್ಜೆಗೆ ಸಿನಿಕತೆ ಹೆಚ್ಚಿಸುವಂತಹ ಘಟನೆಗಳೆ ನಡೆಯುತ್ತಿರುವ ಸಮಯದಲ್ಲಿ ಮೇಲಿನ ಎಲ್ಲಾ ಹೇಳಿಕೆಗಳು ಜನಸಾಮಾನ್ಯರಿಗೆ ಕೇವಲ ಹೇಳಿಕೆಗಳಾಗಿ ಉಳಿದುಬಿಡುತ್ತವೆ. ಮಾಡಬಾರದ್ದು ಮಾಡಿ ಯಶಸ್ಸು ಸಾಧಿಸಿದವರ ಹಾಗೂ ನ್ಯಾಯವಾಗಿ ಬದುಕಿ ಸೋಲುಂಡವರ ಉದಾಹರಣೆಗಳು ಕಣ್ಣ ಮುಂದೆ ಬಂದಾಗ ಜನ ಹಿಂಬಾಲಿಸುವುದು ಗೆದ್ದವರನ್ನೆ ಹೊರತು ನ್ಯಾಯ ನೀತಿ ಎಂದುಕೊಂಡು ಸೋತವರನ್ನು ಅಲ್ಲ. ಅದು ವಾಸ್ತವ. ಹಾಗಿರುವಾಗ, ನ್ಯಾಯವಾಗಿಯೆ ಬದುಕಿ ಎಂದು ಜನರನ್ನು ಹುರಿದುಂಬಿಸುವುದು ಹೇಗೆ? ಜನರನ್ನು, ವಿಶೇಷವಾಗಿ ಯುವಕರನ್ನು ಆಶಾವಾದಿಗಳಾಗಿರುವಂತೆ, ನ್ಯಾಯ-ನೈತಿಕತೆ ಪಾಲಿಸುವಂತೆ, ಶ್ರಮಜೀವಿಗಳಾಗುವಂತೆ, ತಮ್ಮ ಪ್ರಯತ್ನವನ್ನು ನಿಲ್ಲಿಸದಂತೆ, ಸುತ್ತಮುತ್ತಲ ಜನ ಸ್ವಾರ್ಥಿಗಳಾಗಿದ್ದರೂ ಸಮಾಜದ ಒಳಿತಿಗಾಗಿಯೆ ಚಿಂತಿಸುವಂತೆ ಮಾಡುವುದು ಹೇಗೆ? ಪ್ರಪಂಚ ಎಷ್ಟೇ ಕೆಟ್ಟದ್ದಿರಲಿ ನಾವು ಮಾತ್ರ ಒಳ್ಳೆಯದನ್ನು ಮಾಡುತ್ತ ಮುಂದುವರಿಯಬೇಕು ಎಂದು ಜನರಿಗೆ ಸರಳವಾಗಿ, ಪ್ರಾಮಾಣಿಕವಾಗಿ ಹೇಳುವುದು ಹೇಗೆ?
ಇದೇ ತರಹದ ಪ್ರಶ್ನೆಗಳನ್ನು 1968 ರಲ್ಲಿ 19 ವರ್ಷದ ಕಾಲೇಜು ಹುಡುಗನೊಬ್ಬ ಹಾಕಿಕೊಂಡ. ಆತನ ಹೆಸರು ಕೆಂಟ್ ಕೀತ್. ಆತ ಓದುತ್ತಿದ್ದದ್ದು ಅಮೇರಿಕದ ಅತಿ ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ. ಅದು ಅರವತ್ತರ ದಶಕ. ಅಮೇರಿಕದ ಇತಿಹಾಸದಲ್ಲಿ ವಿಯೆಟ್ನಾಮ್ ಯುದ್ಧದಿಂದ ಹಿಡಿದು ಅವರದೇ ನೆಲದಲ್ಲಿ ಶುರುವಾದ ನಾಗರಿಕ ಹಕ್ಕುಗಳ ಹೋರಾಟದ ಸಮಯ. ಎಲ್ಲೆಲ್ಲೂ ಕ್ಷೋಭೆ; ಸಂಘರ್ಷ. ಚಳವಳಿಯಲ್ಲಿ ತೊಡಗಿದ್ದ ಕಾಲೇಜು ವಿದ್ಯಾರ್ಥಿಗಳು ಕಟ್ಟಡಗಳನ್ನು ಆಕ್ರಮಿಸಿಕೊಂಡು, ಪೋಲಿಸರತ್ತ ಕಲ್ಲು ಎಸೆಯಲು ಹಿಂದೆ ಮುಂದೆ ನೋಡದ ವರ್ಷಗಳು. ಆದರೆ ಈ ಹಿಂಸಾತ್ಮಕ ಸಂಘರ್ಷವನ್ನು ಇಷ್ಟ ಪಡದ ಕೆಂಟ್ ಅನೇಕ ಕಡೆ ಇದೇ ವಿಚಾರವಾಗಿ ಭಾಷಣ ಮಾಡುತ್ತಿದ್ದ. ಪರರ ಒಳಿತುಗಳನ್ನು ಕುರಿತು ಆಲೋಚಿಸುವಂತೆಯೂ, ಇಡೀ ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುವುದಕ್ಕಿಂತ ವ್ಯವಸ್ಥೆಯ ಮುಖಾಂತರವೆ ಸಾಧಿಸಬೇಕಾದ ಬದಲಾವಣೆಗಳನ್ನು ಸಾಧಿಸಿಕೊಳ್ಳಬೇಕೆಂದು ಹೇಳುತ್ತಿದ್ದ. ಆಗ ಆತ ಗಮನಿಸಿದ ಇನ್ನೊಂದು ಮುಖ್ಯ ಅಂಶವೆಂದರೆ, ಸ್ವಲ್ಪ ಕಷ್ಟವಾದರೆ ಅಥವ ಸೋಲು ಎದುರಾದರೆ ಸಾಕು ಆದರ್ಶವಾದಿ, ಕ್ರಿಯಾಶೀಲ, ಸಜ್ಜನ ಯುವಕರು ಬೇಗನೆ ಸೋಲೊಪ್ಪಿಕೊಂಡು ಸುಮ್ಮನಾಗಿಬಿಡುತ್ತಿದ್ದರು. ಮತ್ತೆ ಪ್ರಯತ್ನಿಸುತ್ತಿರಲಿಲ್ಲ. ಪ್ರಯತ್ನಿಸುತ್ತಲೆ ಇರಲು ಅವರಿಗೆ ಆಳವಾದ, ಆತ್ಮಕ್ಕೆ ಇಳಿಯುವಂತಹ ಪ್ರಬಲವಾದ ಕಾರಣಗಳು ಬೇಕಾಗಿದ್ದವು.
ಇದನ್ನೆಲ್ಲ ಗಮದಲ್ಲಿಟ್ಟುಕೊಂಡು ಕೆಂಟ್ ತನ್ನ ಪ್ರೌಢಶಾಲೆಯ ವಿದ್ಯಾರ್ಥಿ ನಾಯಕರಿಗೆ "ಮೌನ ಕ್ರಾಂತಿ: ವಿದ್ಯಾರ್ಥಿ ಸಂಘಗಳಲ್ಲಿ ಕ್ರಿಯಾಶೀಲ ನಾಯಕತ್ವ" ಎನ್ನುವ ಬುಕ್‌ಲೆಟ್ ಅಥವ ಕೈಪಿಡಿ ಒಂದನ್ನು ಬರೆದ. ಅದನ್ನು 1968 ರಲ್ಲಿ ಹಾರ್ವರ್ಡ್ ಸ್ಟೂಡೆಂಟ್ ಏಜನ್ಸೀಸ್ ಪ್ರಕಟಿಸಿತು. ಆ ಕೈಪಿಡಿಯ ಎರಡನೇ ಅಧ್ಯಾಯದಲ್ಲಿ ಆತ ಜೀವನದ ಅತಿ ಮುಖ್ಯ ಸವಾಲಿನ ಬಗ್ಗೆ ಬರೆದಿದ್ದ: "ಬೇರೆಯವರು ನಮ್ಮ ಒಳ್ಳೆಯತನವನ್ನು ಗೌರವಿಸದಿದ್ದರೂ ನಾವು ಮಾತ್ರ ಯಾವಾಗಲೂ ಯಾವುದು ಸರಿಯಾದದ್ದೊ, ಒಳ್ಳೆಯದ್ದೊ, ನಿಜವಾದದ್ದೊ ಅದನ್ನೆ ಮಾಡಬೇಕು," ಎನ್ನುವುದೆ ಆ ಸವಾಲು. ಅದಕ್ಕೆ ಆತ "Paradoxical Commandments" (ವೈರುದ್ಧ್ಯದ, ವಿರೋಧಾಭಾಸದ, ವ್ಯತಿರಿಕ್ತ, ವಿರುದ್ಧೋಕ್ತಿ ಕಟ್ಟಳೆಗಳು) ಎಂದು ಹೆಸರಿಸಿದ. ಇಲ್ಲಿನ ವಿರೋಧಾಭಾಸ ಏನೆಂದರೆ, ಬದುಕಿನಲ್ಲಿ ನಮ್ಮ ನಿಯಂತ್ರಣದಲ್ಲಿಲ್ಲದ ಅನೇಕವು ನಡೆಯುತ್ತಲೆ ಇರುತ್ತವ್: ಸರ್ಕಾರ, ಸಮಾಜ, ಜನರ ಮೋಸ, ಶೋಷಣೆ, ಯುದ್ಧ ಇತ್ಯಾದಿ. ಆದರೆ ನಾವು ಏನು ಮಾಡಬೇಕು, ಹೇಗೆ ಮಾಡಬೇಕು ಎನ್ನುವುದು ನಮ್ಮ ನಿಯಂತ್ರಣದಲ್ಲಿರುವುದು. ಸಮಾಜದ ಕೆಟ್ಟದ್ದಕ್ಕೆ ನಮ್ಮ ಒಳ್ಳೆಯತನ ಉತ್ತರವಾಗಬೇಕೆ ಹೊರತು ಕೆಟ್ಟದ್ದನ್ನು ಮಾಡುವುದಲ್ಲ. ಇಂತಹ ವೈರುದ್ಧ್ಯಗಳನ್ನೆಲ್ಲ ಯೋಚಿಸಿ ಕೆಂಟ್ ಕೀತ್ ಎಂಬ ಕೇವಲ 19 ವರ್ಷದ ಹುಡುಗ ಬರೆದ ಸರಳವಾದ, ಆಳವಾದ, ಜೀವನಪ್ರೀತಿಯ ಸಾಲುಗಳು ಹೀಗಿವೆ:
- ಜನರು ತರ್ಕಹೀನರು, ಯುಕ್ತಾಯುಕ್ತ ಪರಿಜ್ಞಾನ ಇಲ್ಲದವರು, ಹಾಗೂ ಸ್ವಾರ್ಥಿಗಳು.
ಏನೇ ಇರ್‍ಲಿ, ಅವರನ್ನು ಪ್ರೀತಿಸಿ.. - ನೀವು ಒಳ್ಳೆಯದನ್ನು ಮಾಡಿದರೆ ಜನ ನೀವು ಸ್ವಾರ್ಥದ ದುರುದ್ದೇಶಗಳನ್ನಿಟ್ಟುಕೊಂಡು ಮಾಡುತ್ತಿದ್ದೀರಿ ಎಂದು ನಿಂದಿಸುತ್ತಾರೆ.
ಏನೇ ಹೇಳ್ಲಿ, ಒಳ್ಳೆಯದನ್ನು ಮಾಡಿ. - ನೀವು ಜೀವನದಲ್ಲಿ ಯಶಸ್ವಿಯಾದರೆ ನಿಮಗೆ ಖೋಟಾ ಸ್ನೇಹಿತರು, ನಿಜವಾದ ಶತೃಗಳು ಸಿಗುತ್ತಾರೆ.
ಆದ್ರೂ, ಯಶಸ್ವಿಯಾಗಿ. - ನೀವು ಇಂದು ಮಾಡುವ ಒಳ್ಳೆಯ ಕೆಲಸವನ್ನು ಜನ ನಾಳೆ ಮರೆತುಬಿಡುತ್ತಾರೆ.
ಆದ್ರೂ, ಒಳ್ಳೆಯದನ್ನು ಮಾಡಿ - ಪ್ರಾಮಾಣಿಕತೆ ಮತ್ತು ಮುಕ್ತಮನಸ್ಸು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ.
ಏನೇ ಆಗ್ಲಿ, ಪ್ರಾಮಾಣಿಕರಾಗಿ, ಮುಕ್ತಮನಸ್ಸಿನಿಂದ ಇರಿ - ಅತ್ಯುನ್ನತವಾದ ದೊಡ್ಡದೊಡ್ಡ ಆಲೋಚನೆಗಳ ಉನ್ನತ ಮನುಷ್ಯರನ್ನು ಕೀಳು ಆಲೋಚನೆಗಳ ಸಣ್ಣ ಜನರು ಹೊಡೆದುರುಳಿಸಬಹುದು.
ಆದ್ರೂ, ದೊಡ್ಡದಾಗಿಯೆ ಆಲೋಚಿಸಿ - ಜನ ದುರ್ಬಲರ, ದಲಿತರ ಬಗ್ಗೆ ವಿಶ್ವಾಸ ತೋರುತ್ತಾರೆ, ಆದರೆ ಸಬಲರನ್ನೆ ಹಿಂಬಾಲಿಸುತ್ತಾರೆ.
ಹಾಗಿದ್ರೂ, ಕೆಲವಾದರೂ ದಲಿತ-ದುರ್ಬಲರ ಪರ ಹೋರಾಡಿ - ನೀವು ವರ್ಷಗಳ ಕಾಲ ಕಟ್ಟಿದ್ದು ರಾತ್ರೋರಾತ್ರಿ ಹಾಳುಗೆಡವಲ್ಪಡಬಹುದು.
ಏನೇ ಆಗ್ಲಿ, ಕಟ್ಟಿಯೇ ಕಟ್ಟಿ - ಜನಕ್ಕೆ ನಿಜವಾಗಲೂ ಸಹಾಯ ಬೇಕು, ಆದರೆ ನೀವು ಅವರಿಗೆ ಸಹಾಯ ಮಾಡಿದರೆ ಅವರು ನಿಮ್ಮ ಮೇಲೆಯೆ ಆಕ್ರಮಣ ಮಾಡಬಹುದು.
ಆದ್ರೂ, ಜನಕ್ಕೆ ಸಹಾಯ ಮಾಡಿ - ನಿಮ್ಮೆಲ್ಲ ಒಳ್ಳೆಯದನ್ನು ನೀವು ಜಗತ್ತಿಗೇ ನೀಡಿದ್ದರೂ ಅವರು ನಿಮ್ಮ ಹಲ್ಲುದುರಿಸಬಹುದು.
ಆದ್ರೂ, ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ.
1997 ರಲ್ಲಿ ಮದರ್ ಥೆರೆಸ ತೀರಿಕೊಂಡರು. ಆ ಸಮಯದಲ್ಲಿ ಕೆಂಟ್ ತಮ್ಮ ರೋಟರಿ ಕ್ಲಬ್ಬಿನ ಮೀಟಿಂಗ್‌ಗೆ ಹೋಗಿದ್ದರು. ಅಲ್ಲಿ ಅವರ ಸಹಸದಸ್ಯರೊಬ್ಬರು ಮದರ್‌ರ ನೆನಪಿಗಾಗಿ ಮದರ್ ಥೆರೆಸ ರಚಿಸಿರುವ ಎನಿವೆ ಪದ್ಯವನ್ನು ಓದುವುದಾಗಿ ಹೇಳಿ ಅದನ್ನು ಓದಿದರು. ಅದು ಸ್ವತಃ ಕೆಂಟ್ ಬರೆದಿದ್ದ ಪ್ಯಾರಡಾಕ್ಸಿಕಲ್ ಕಮ್ಯಾಂಡ್‌ಮೆಂಟ್ಸ್!!! ಕೆಂಟ್‌ರಿಗೆ ಆಘಾತವಾಗಿದ್ದು ಸಹಜ. ಅದಾದ ಮೇಲೆ ಕೆಂಟ್ ಅದನ್ನು ತಾವೆ ಬರೆದಿದ್ದು ಎಂದು ಘೋಷಿಸಿಕೊಂಡು, ಅದನ್ನೇ ವಿಸ್ತರಿಸಿ "Anyway – The Paradoxical Commandments – Finding Personal Meaning in a Crazy World" ಎಂಬ ಪುಸ್ತಕವನ್ನು 2002 ರಲ್ಲಿ ಪ್ರಕಟಿಸಿದರು. ಅದಾದ ಮೇಲೆ "Do It Anyway" ಎಂಬ ಇನ್ನೊಂದು ಪುಸ್ತಕವನ್ನೂ ಬರೆದರು. ತಮ್ಮ ಸುತ್ತಮುತ್ತಲಿನ ಪ್ರಪಂಚ ಎಲ್ಲವನ್ನೂ ಭ್ರಷ್ಟ ಮಾಡಲು ಹವಣಿಸುತ್ತಿದ್ದರೂ ತಾವು ಭ್ರಷ್ಟರಾಗದೆ ಇರಲು ಪ್ರಪಂಚದ ನಾನಾ ಕಡೆಯ ಲಕ್ಷಾಂತರ ಜನ ಇಂದು ಈ ಪುಸ್ತಕಗಳನ್ನು ಓದುತ್ತಿದ್ದಾರೆ. ಸಿನಿಕ ಪ್ರಪಂಚದಲ್ಲಿ ತಾವು ಒಳ್ಳೆಯದನ್ನು ಮಾತ್ರ ಮಾಡುತ್ತಿರಲು ತೀರ್ಮಾನಿಸುತ್ತಿದ್ದಾರೆ. ಇದನ್ನು ಓದುವ ಅನೇಕರಿಗೆ ಆಧ್ಯಾತ್ಮಿಕ ಪಯಣದಲ್ಲಿ ಪಾಲ್ಗೊಂಡಂತೆ.
(ಸಂಪಾದಕರ ನೋಟ್:)
ಬನ್ನಿ, ನಾವೂ ಈ ಪಯಣದಲ್ಲಿ ಪಾಲ್ಗೊಳ್ಳೋಣ.
ಪ್ರಪಂಚದ ಕೆಟ್ಟದ್ದನ್ನು, ದುಷ್ಟತೆಯನ್ನು ನಮ್ಮಲ್ಲಿರುವ ಒಳ್ಳೆಯತನ ಹಾಗು ಉತ್ತಮ ಗುಣಗಳಿಂದ ಎದುರಿಸಿದಾಗ ಹುಟ್ಟುವ ವಿವೇಕ, ಘನತೆ ಮತ್ತು ಆತ್ಮಸಂತೋಷವನ್ನು ಕೆಂಟ್ ಕೀತ್‌ರ "Anyway" ಪುಸ್ತಕ ಸರಳವಾಗಿ, ಉದಾಹರಣೆಗಳ ಮೂಲಕ ನಿರೂಪಿಸುತ್ತದೆ. ಜೀವನದ ಬಗ್ಗೆ ಆಶಾವಾದವನ್ನು ಕಳೆದುಕೊಳ್ಳದೆ, ನಮ್ಮಲ್ಲಿನ ಒಳ್ಳೆಯತನಗಳು ಬಾಹ್ಯ ಒತ್ತಡಗಳಿಂದ ನಷ್ಟವಾಗದಂತೆ ಕಾಪಾಡಿಕೊಳ್ಳಲು, ಇನ್ನೂ ಹೆಚ್ಚಿನ ನೈತಿಕತೆಯಿಂದ ಬಾಳುವಂತೆ, ಬದುಕನ್ನು ಗಾಢವಾಗಿ ಪ್ರೀತಿಸುವಂತೆ ಹುರಿದುಂಬಿಸುವ ಈ ಪುಸ್ತಕವನ್ನು ರವಿಯವರು ಕನ್ನಡಕ್ಕೆ ಅನುವಾದಿಸುತ್ತಿದ್ದಾರೆ. ಮುಂದಿನ ವಾರದಿಂದ ಅದನ್ನು ಧಾರಾವಾಹಿಯಾಗಿ ನಿಮ್ಮ ಮೆಚ್ಚಿನ ವಿಕ್ರಾಂತ ಕರ್ನಾಟಕದಲ್ಲಿ ಪ್ರಕಟಿಸುತ್ತಿದ್ದೇವೆ. ತಾವು ಎಂದಿನಂತೆ ಅದನ್ನು ಒಲವಿನಿಂದ ಸ್ವೀಕರಿಸುತ್ತೀರಿ ಎನ್ನುವ ನಂಬಿಕೆ ನಮ್ಮದು.
1 comment:
Raviyavare,
We had read this in our email forwards long ago,, but I never know all the story lying behind this...
Thanks for revealing this to us.
Regards
Post a Comment