(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಜುಲೈ 20, 2007 ರ ಸಂಚಿಕೆಯಲ್ಲಿನ ಲೇಖನ)
ಇದೇ ಜುಲೈ ನಾಲ್ಕರಂದು ಅಮೇರಿಕ ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಂಡಿತು. ಅದರ ಮಾರನೆಯ ದಿನ ಅಮೇರಿಕದ ನ್ಯೂಸ್ ವೆಬ್‌ಸೈಟುಗಳಲ್ಲಿ ಸಾಕಷ್ಟು ಜನಪ್ರಿಯಯವಾದ, ವಿಶ್ವಾಸಾರ್ಹವಾದ CNN.com ಗೆ ಹೋದಾಗ ಆಶ್ಚರ್ಯವಾಯಿತು. ಅಂದಿನ ಅವರ ಮೇಜರ್ ನ್ಯೂಸ್‌ನ ಹೆಡ್ಡಿಂಗ್ ಏನಿತ್ತೆಂದರೆ, ಸಮಾಜದಿಂದ ತಿರಸ್ಕೃತಗೊಂದ ವಿಧವೆಯರು ಸಾಯಲು ಈ ನಗರಕ್ಕೆ ಬರುತ್ತಾರೆ. ಅದರ ಕೆಳಗೆ ಉತ್ತರ ಭಾರತದ ವಯಸ್ಸಾದ ಹಿಂದೂ ವಿಧವೆಯೊಬ್ಬಳ ಚಿತ್ರ. ಜುಲೈ ೫ ರ ಹಗಲಿನ ಹಲವಾರು ಗಂಟೆಗಳ ಕಾಲ ಆ ವೆಬ್‌ಸೈಟಿನಲ್ಲಿ ಮುಖ್ಯಸುದ್ದಿಯಾಗಿದ್ದ ಈ ಲೇಖನದ ಒಳಗೆ ಹೋದರೆ, ಮುಖ್ಯಾಂಶಗಳು ಎಂದು ಈ ಕೆಳಗಿನ ಸಾಲುಗಳು ಇದ್ದವು.
- ಭಾರತದ ಹಿಂದೂ ವಿಧವೆಯರು ಪುನರ್ವಿವಾಹವಾಗುವಂತಿಲ್ಲ; ಅವರು ತಳೆಬೋಳಿಸಿಕೊಳ್ಳಬೇಕು, ಬಿಳಿಯ ಬಟ್ಟೆ ಉಡಬೇಕು
- ನಿನಗೆ ಬಹಳ ವಯಸ್ಸಾಗಿಬಿಟ್ಟಿದೆ, ಎಲ್ಲಿಯಾದರೂ ಹೋಗಿಬಿಡು ಎಂದು ತನ್ನ ಮಗ ಹೇಳಿದ ಎಂದು ವಿಧವೆಯೊಬ್ಬಳು ತಿಳಿಸಿದಳು
- ಸ್ತ್ರೀ ಗುಂಪೊಂದು ಬದಲಾವಣೆಗೆ ಪ್ರಯತ್ನಿಸುತ್ತಿದೆ, ಹಾಗೂ ವಿಧವೆಯರಿಗೆ ಆಶ್ರಯ ಕಲ್ಪಿಸುತ್ತಿದೆ
- ಭಾರತದಲ್ಲಿ 4 ಕೋಟಿ ವಿಧವೆಯರಿದ್ದಾರೆ ಎಂದು ಅಂದಾಜು
ಸುಮಾರು 55000 ಜನಸಂಖ್ಯೆಯ ಕೃಷ್ಣನ ಮಥುರೆಯ ಪಕ್ಕದ ಬೃಂದಾವನ ನಗರದಲ್ಲಿ ಸುಮಾರು 15000 ವಿಧವೆಯರು ಸಾವನ್ನು ಎದುರು ನೋಡುತ್ತ ಅಲ್ಲಿಯ ಬೀದಿಗಳಲ್ಲಿ ವಾಸಿಸುತ್ತಿದ್ದಾರೆ ಎನ್ನುತ್ತದೆ ಈ ಲೇಖನ. ಆ ಊರಿನಲ್ಲಿ ಇದು ನಿಜವೇನೊ. ಆದರೆ, ಲೇಖನ ಓದಿದ ಮೇಲೆ ಇಡೀ ಭಾರತದ ಹಿಂದೂ ಸಮಾಜದಲ್ಲಿ ವಯಸ್ಸಾದ ವಿಧವೆಯರನ್ನೆಲ್ಲ ಮನೆ ಬಿಟ್ಟು ಓಡಿಸಲಾಗುತ್ತದೆ, ಅವರೆಲ್ಲ ಹೀಗೆ ತಲೆಬೋಳಿಸಿಕೊಂಡು, ಬಿಳಿಯ ಸೀರೆ ಉಟ್ಟು ಬೀದಿಗಳಲ್ಲಿ ಬದುಕುತ್ತಾರೆ ಎನ್ನುವ ಕಲ್ಪನೆ ಬರುತ್ತದೆ. ಇದು ಹಾಸ್ಯಾಸ್ಪದವೊ, ಲೇಖಕನ ಅಜ್ಞಾನವೊ, ಇಲ್ಲವೆ ಇಂತಹ ಸ್ಟೀರಿಯೋಟೈಪ್‌ಗಳನ್ನು ಸುಮ್ಮನೆ ಒಪ್ಪಿಕೊಂಡು ಬಿಡುವ ಜನರ ಪರಿಮಿತಿಯೊ, ಅಥವ ಎಲ್ಲವೂ? ಮುಸ್ಲಿಮರೆಲ್ಲರ ಪ್ರಥಮ ನಿಯತ್ತು ಅವರ ಮತ ಎಂಬ ಸ್ಟೀರಿಯೋಟೈಪ್ ನಮ್ಮಲ್ಲಿನ ಕೂಪಮಂಡೂಕಗಳಿಗೆ ಹೇಗಿದೆಯೊ ಅದೇ ರೀತಿ ಭಾರತ ಎಂದರೆ ಇದು, ಅಲ್ಲಿನ ಜನರೆಲ್ಲ ಹೀಗೆ ಎನ್ನುವ ಸ್ಟೀರಿಯೋಟೈಪ್ ಪಾಶ್ಚಾತ್ಯ ದೇಶಗಳ ಕೂಪಮಂಡೂಕಗಳಲ್ಲಿದೆ.
ರಾಜ್‌ಕುಮಾರ್‌ರ ಶವವನ್ನು ಮಣ್ಣು ಮಾಡಿದ್ದನ್ನು ಇಲ್ಲಿ ಟಿವಿಯಲ್ಲಿ ನೋಡಿದ ಬೆಂಗಳೂರಿನ ಕನ್ನಡ ಹೆಣ್ಣೊಂದು, "ಅದು ಯಾಕೆ ರಾಜ್‌ಕುಮಾರ್‌ರನ್ನು ಹೂತಿದ್ದು?" ಎಂದು ಅದೇನೊ ವಿಚಿತ್ರ ಘಟನೆ ಎನ್ನುವಂತೆ ನನಗೆ ಕೇಳಿದ್ದಳು! ಹಿಂದೂಗಳಲ್ಲಿ ಹಿಂದೆ ಇದ್ದ ಸತಿ ಪದ್ದತಿಯನ್ನು ಈಗ ನಿವಾರಿಸಲಾಗಿದೆ ಎಂದು ಯಾರೊ ಒಬ್ಬ ಕನ್ನಡ ಫ಼ೋರಮ್‌ವೊಂದರಲ್ಲಿ ಬರೆದಿದ್ದ. ಈತನ ಮಾತಿನ ಅರ್ಥ ಇದನ್ನು ಇತ್ತೀಚೆಗೆ ನಿವಾರಿಸಿಕೊಳ್ಳುವ ತನಕ ಭಾರತದ ಎಲ್ಲಾ ಕಡೆಯ ಹಿಂದೂ ವಿಧವೆಯರು ಸತಿ ಹೋಗುತ್ತಿದ್ದರು, ಅಂತಹ ಅಮಾನವೀಯ ಕ್ರಿಯೆಯನ್ನು ಕೈಬಿಟ್ಟು ಹಿಂದೂ ಸಮಾಜ ಸುಧಾರಣೆಯಾಗಿದೆ ಎಂಬಂತಿತ್ತು. ಹೇಳಬೇಕೆಂದರೆ, ಭಾರತದೊಳಗೇ ಇರುವ ಕರ್ನಾಟಕದಲ್ಲಿ ಸತಿ ಹೋಗಿದ್ದನ್ನು, ಅದು ಜೀವನ ಪದ್ದತಿಯಾಗಿದ್ದನ್ನು ನಾವೆಲ್ಲೂ ಕೇಳಿಲ್ಲ. ಹಾಗಿರುವಾಗ ಹಿಂದೂಗಳೆಲ್ಲ ಸತಿ ಹೋಗುತ್ತಿದ್ದರು ಎನ್ನುವುದು ಹೇಗೆ ಸರಿಯಾಗುತ್ತದೆ? ಕರ್ನಾಟಕದ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಲಿಂಗಾಯತರನ್ನು ಸತ್ತಾಗ ಸುಡುವುದಿಲ್ಲ. ಎರಡನೆ ಸ್ಥಾನದ ಒಕ್ಕಲಿಗರಲ್ಲಿರುವುದೂ (ಮಲೆನಾಡ ಒಕ್ಕಲಿಗರನ್ನು ಹೊರತುಪಡಿಸಿ) ಮಣ್ಣು ಮಾಡುವ ಶವಸಂಸ್ಕಾರವೆ. ಮೂರನೆ ಸ್ಥಾನದಲ್ಲಿರುವ ಕುರುಬರಲ್ಲೂ, ಮುಸ್ಲಿಮರಲ್ಲೂ ಸುಡುವ ಪದ್ದತಿ ಇಲ್ಲ. ಕರಾವಳಿ ಮತ್ತು ಮಲೆನಾಡ ದಲಿತರನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ಕಡೆ ಅವರನ್ನೂ ಹೂಳುವುದೆ ಪದ್ದತಿ. ಹಾಗೆ ನೋಡಿದರೆ, ಕರ್ನಾಟಕದ ಜನಸಂಖ್ಯೆಯ ಶೇ. 70 ಕ್ಕೂ ಹೆಚ್ಚಿನವರ ಶವಸಂಸ್ಕಾರ ಎಂದರೆ, ಮಣ್ಣು ಮಾಡುವುದು. ಹಾಗಿರುವಾಗ ಇವರಲ್ಲೆಲ್ಲ ಸತಿ ಹೇಗೆ ಸಾಧ್ಯ? ಸಿನೆಮಾಗಳಲ್ಲಿ ಸ್ಟೀರಿಯೋಟೈಪಿಕ್ ಆಗಿ ತೋರಿಸುವ ಶವದಹನದ ಚಿತ್ರಗಳನ್ನು ನೋಡಿ ಬೆಳೆದ, ಒಂದು ಪರಿಧಿಯ ಆಚೆ ಅನುಭವವಿಲ್ಲದ ಜನಕ್ಕೆ ಹೂಳುವುದು ಯಾರದೋ ಅಪರೂಪದ ವಿಚಿತ್ರ ಸಂಪ್ರದಾಯದಂತೆ ಕಾಣಿಸುತ್ತದೆ.
ಯಾರೊ ಒಬ್ಬ ಏನೋ ಮಾಡಿದ್ದಕ್ಕೆ ಅವನ ತರಹ ಇರುವ ಎಲ್ಲರೂ ಹಾಗೆ ಎಂದು ಜನ ಅಂದುಕೊಂಡು ಬಿಡುತ್ತಾರಲ್ಲ, ಅದಕ್ಕಿಂತ ದಡ್ಡತನ ಬೇರೊಂದಿಲ್ಲ. ಐಸೊಲೇಟೆಡ್ ಕೇಸುಗಳನ್ನು ಸಾರ್ವತ್ರಿಕ ಮಾಡಿಬಿಡುವ ಬರಹಗಳು, ವಾದಗಳು ಬಹಳ ಅಪಾಯಕಾರಿ. ಮೈಸೂರಿನ ಒಬ್ಬ ಅಯ್ಯಂಗಾರಿ ಬ್ರಾಹ್ಮಣ ಯುವಕ ದೆಹಲಿಯ ಜವಹರ್‌ಲಾಲ್ ನೆಹರೂ ವಿವಿಯಲ್ಲಿ ಓದಿ, ಮಲೆನಾಡಿನಲ್ಲಿ ನಕ್ಸಲೀಯನಾಗಿ ಅಲೆಯುತ್ತ, ಕೊನೆಗೆ ಪೋಲಿಸರಿಂದ ಹತವಾಗಿ ಬಿದ್ದ ತಕ್ಷಣ ಅಯ್ಯಂಗಾರಿಗಳನ್ನು, ಬ್ರಾಹ್ಮಣರನ್ನು, ಮೈಸೂರಿನವರನ್ನು, ಜೆ.ಎನ್.ಯು.ನಲ್ಲಿ ಓದಿದದವರನ್ನೆಲ್ಲ ನಕ್ಸಲೀಯರು ಎನ್ನಲು ಸಾಧ್ಯವೆ? ಹೊಟ್ಟೆ ತುಂಬಿದ ಮುಸ್ಲಿಮನೊಬ್ಬ ದಾವಣಗೆರೆಯ ಬಿ.ಡಿ.ಟಿ.ಯಲ್ಲಿ ಇಂಜಿನಿಯರಿಂಗ್ ಮಾಡಿ, ಅಲ್ಲಿಂದ ಇಂಗ್ಲೆಂಡಿಗೆ ಹೋಗಿ ಮತೀಯ ಅಫೀಮು ಕುಡಿದು ಮತಾಂಧನಾದ ಮಾತ್ರಕ್ಕೆ ಭಾರತದ ಮುಸ್ಲಿಮರೆಲ್ಲ, ಅಥವ ಬಿ.ಡಿ.ಟಿ.ಯಲ್ಲಿ ಓದಿದವರೆಲ್ಲ ಕೋಮುವಾದಿಗಳಾಗಿ ಬಿಟ್ಟರೆ? ಮಲೆನಾಡಿನ ಒಕ್ಕಲಿಗ ಕುಟುಂಬದಲ್ಲಿ ಹುಟ್ಟಿದ ಕುವೆಂಪು ಮೂಢನಂಬಿಕೆಗಳನ್ನು ಬಿಡಬೇಕು, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು, ಜಾತೀಯತೆ ತೊರೆಯಬೇಕು ಎಂದು ಹೇಳಿ, ಅವರ ಒಬ್ಬ ಮಗ ಅಂತರ್ಜಾತೀಯ ವಿವಾಹವಾಗಿ, ಇನ್ನೊಬ್ಬ ಮಗ ಅಂತರ್ಮತೀಯ ವಿವಾಹವಾದ ಮಾತ್ರಕ್ಕೆ ಮಲೆನಾಡ ಒಕ್ಕಲಿಗರೆಲ್ಲ, ಕುವೆಂಪು ಓದಿದ ಕನ್ನಡಿಗರೆಲ್ಲ ನಿರಂಕುಶಮತಿಗಳಾಗಿಬಿಟ್ಟರಾ? ಪ್ರಗತಿಶೀಲರಾಗಿಬಿಟ್ಟರಾ? ಬಂಜಗೆರೆಯವರ ಪುಸ್ತಕ ನಿಷೇಧಿಸಬೇಕು ಎಂದು ಕೆಲವು ಲಿಂಗಾಯತ ಫ಼್ಯಾಸಿಸ್ಟ್‌ಗಳು ಹೇಳಿದ ಮಾತ್ರಕ್ಕೆ ಎಲ್ಲಾ ಲಿಂಗಾಯತರೂ ಹಾಗೆಯೇ ಏನು? ಹಾಗಿದ್ದರೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವ, ಫ಼್ಯೂಡಲ್ ವ್ಯವಸ್ಥೆಯನ್ನು, ಜಾತಿ ಅಹಂಕಾರವನ್ನು ವಿರೋಧಿಸುವ ಅನೇಕ ಲಿಂಗಾಯತ ಪತ್ರಕರ್ತರು, ಬರಹಗಾರರು ಬಂಜಗೆರೆಯವರಿಗೆ ನೈತಿಕ ಬೆಂಬಲ ನೀಡುತ್ತಿರುವುದು ಸುಳ್ಳೆ?
ಒಂದು ಬಣ್ಣದವನೊ, ಬಣದವನೊ, ಜಾತಿಯವನೊ, ಊರಿನವನೊ, ನಾಡಿನವನೊ ಏನೊ ಒಂದು ಮಾಡಿದಾಕ್ಷಣ ಅವನಂತಿರುವವರನ್ನೆಲ್ಲ, ಅವನ ತರಹದ ಹಿನ್ನೆಲೆ ಇರುವವರನ್ನೆಲ್ಲ ಹಾಗೆಯೆ ಎಂದು ಭಾವಿಸುವುದು, ಸಂಶಯ ಪಿಶಾಚಿಗಳಾಗಿ ಬಿಡುವುದು, ಪೂರ್ವಾಗ್ರಹಕ್ಕೊಳಗಾಗುವುದು ಯಾವ ಬುದ್ಧಿವಂತಿಕೆ? ಯಾರದೊ ಕೌಟುಂಬಿಕ ಜೀವನ ಚೆನ್ನಾಗಿಲ್ಲ ಎನ್ನುವುದೆ ಮದುವೆಯಾಗದೆ ಹೋಗುವುದಕ್ಕೆ ಕಾರಣವಾಗುವುದು ಸರಿಯೆ? ಯಾರೊ ಎಲ್ಲಿಯೋ ತಮ್ಮ ವಯಸ್ಸಾದ ವಿಧವೆ ತಾಯಿಯನ್ನು ಬೃಂದಾವನದ ಬೀದಿಯಲ್ಲಿ ತೊರೆದು ಹೋದ ಮಾತ್ರಕ್ಕೆ ಎಲ್ಲಾ ಮಕ್ಕಳೂ ಹಾಗೆ ಮಾಡುತ್ತಾರೆ ಎಂದುಕೊಂಡುಬಿಟ್ಟರೆ ನಮ್ಮ ತೊದಲು ಮಾತಿನ ಮಗುವನ್ನು ಪ್ರೀತಿಸಲು ಸಾಧ್ಯವೆ? ವಿಶ್ವಾಸವಿಲ್ಲದ, ಆಶಾವಾದವಿಲ್ಲದ, ಪ್ರೀತಿಯಿಲ್ಲದ ನಾಳೆಯನ್ನು ಎದುರು ನೋಡುವುದಾದರೂ ಹೇಗೆ?
2 comments:
ರವಿಯವರೇ,
ನಾನು ಇದೇ ಮೊದಲ ಬಾರಿ ನಿಮ್ಮ ಬ್ಲಾಗಿಗೆ 'ಕೆಂಡಸಂಪಿಗೆ'ಯ ಮೂಲಕ ಬಂದೆ.
ಆದರೆ ಬಂದು ನಿಮ್ಮ ಹೆಸರು ನಿಮ್ಮ ಚಿತ್ರ ಕೂಡ ನೋಡಿದಾಕ್ಷಣ ಎಲ್ಲೋ ಓದಿದ ನೆನಪಾಯಿತು.
ಸುಮಾರು ಹೊತ್ತು ತಲೆ ಕೆರೆದುಕೊಂಡು ನೆನಪಿಸಿದ ಮೇಲೆ ಅನಿಸಿತು ನೀವು thatskannada ದಲ್ಲಿ ಬಂದ 'ಎದೆಯ....' ಕಾದಂಬರಿಯ ಅನುವಾದಕರು ಎನ್ನುವದು.
i guess i am right.
ನಿಮ್ಮ ಇತರ ಬರಹಗಳನ್ನೂ ಓದಿದೆ. ಎಲ್ಲವೂ ವಿಚಾರಕ್ಕೊಳಪಡಿಸುವ ಬರಹಗಳು.
ನನಗೆ ನಿಮ್ಮ "ಸ್ಟೀರಿಯೋಟೈಪ್‌ಗಳನ್ನು ನಂಬಿದರೆ ಜೀವನಪ್ರೀತಿ ಸಾಧ್ಯವೆ?" ಬರಹ ಹಿಡಿಸಿತು.
ಪ್ರಮುಖವಾಗಿ ಅದರಲ್ಲಿ ಬಂದ ಈ ಸಾಲು "ಐಸೊಲೇಟೆಡ್ ಕೇಸುಗಳನ್ನು ಸಾರ್ವತ್ರಿಕ ಮಾಡಿಬಿಡುವ ಬರಹಗಳು, ವಾದಗಳು ಬಹಳ ಅಪಾಯಕಾರಿ"
ನೀವು ಇಲ್ಲಿ ಬರೆದ ಎಲ್ಲ ಉದಾಹರಣೆಗಳೂ ತುಂಬಾ ಸೂಕ್ತವಾದವುಗಳು.
ಇವತ್ತು ಭಾರತದಲ್ಲಿ ಈ ಐಸೊಲೇಟೆಡ್ ಕೇಸುಗಳನ್ನು ಸಾರ್ವತ್ರಿಕ ಮಾಡಿಬಿಡುವ ಬರಹಗಳು, ವಾದಗಳು ಮತ್ತು ಅವುಗಳನ್ನು ಸಮರ್ಥಿಸುವವದೂ ಕೂಡ ಹೆಚ್ಚಾಗಿಬಿಟ್ಟಿದೆ.
ಇಂದು ಅತ್ಯಂತ ಜೋರಾಗಿ ಪ್ರಗತಿಪಥದತ್ತ ಹೆಜ್ಜೆ ಹಾಕುತ್ತಿರುವ ನಮ್ಮ ದೇಶಕ್ಕೆ ದೊಡ್ಡ ಗಂಡಾಂತರ ಅಂದರೆ ಈ 'ಐಸೊಲೇಟೆಡ್' ಪ್ರಜೆಗಳು ಅನಿಸುತ್ತೆ ನನಗೆ.
ಇತ್ತಿತ್ತಲಾಗಿ ಪ್ರತಿಯೊಂದು ವಿಚಾರವೂ ಒಂದು ಐಸೊಲೇಟೆಡ್ ಗುಂಪನ್ನು ಹುಟ್ಟಿಹಾಕುತ್ತಿದೆ, ಮತ್ತು ಒಂದಕ್ಕೊಂದು ವಿರೋಧಾಭಾಸಗಳನ್ನು ಜನರೂ ಹುಟ್ಟಿಹಾಕುತ್ತಿದ್ದಾರೆ.
ನಿಮ್ಮೊಂದಿಗೆ ನನಗೆ ಬಹುದಿನದಿಂದ ಕಾಡುತ್ತಿರುವ ವಿಚಾರದ ಅನಿಸಿಕೆಗಳನ್ನು ಹಂಚಿಕೊಳ್ಳೋಣ ಅನಿಸಿತು. ಬರೆದೆ.
ಹೀಗೆ ಬರೆಯುತ್ತಿರಿ ಮತ್ತು ನಿಮ್ಮನ್ನು ಐಸೊಲೇಟೆಡ್ ಬರಹಗಳ ಗುಂಪಿಗೆ ಸೇರಿಸಿಕೊಳ್ಳಬೇಡಿ ಎಂದು ವಿನಂತಿಸುತ್ತ,
ಮತ್ತೆ ನಿಮ್ಮ ಬ್ಲಾಗಿಗೆ ಭೇಟಿ ಕೊಡುವೆ.
-ಎಮ್.ಡಿ
"ಐಸೊಲೇಟೆಡ್ ಕೇಸುಗಳನ್ನು ಸಾರ್ವತ್ರಿಕ ಮಾಡಿಬಿಡುವ ಬರಹಗಳು, ವಾದಗಳು ಬಹಳ ಅಪಾಯಕಾರಿ" - ಸತ್ಯವಾದ ಮಾತು. ನೀವು ಇಲ್ಲಿ ಹೇಳಿದ್ದರಲ್ಲಿ ಎಲ್ಲೂ ಕೂಡ ಉತ್ಪ್ರೇಕ್ಷೆ ಇಲ್ಲ.
ಆದರೆ ನನಗಿರೋದು ಒಂದೇ ಒಂದು ಹೆದರಿಕೆ...ಐಸೊಲೇಟೆಡ್ ಕೇಸುಗಳು ಯಾವುದೋ ಧರ್ಮದಲ್ಲಷ್ಟೇ ಅಲ್ಲ...ಎಲ್ಲ ಜನಾಂಗ, ಸಂಸ್ಥೆ, ನಾಡುಗಳಲ್ಲೂ ಕೂಡ ನಡೆಯುತ್ತಿವೆ. ಈ ತರಹದ ಬರಹಗಳನ್ನು ಪ್ರತಿ ಒಬ್ಬರ ಪ್ರಜ್ಞ್ಯಾವಂತ ತಿರಸ್ಕರಿಸಬೇಕು.
ಕಾರಣ ಇಸ್ಟೇ- ನಿಮ್ಮ ಇನ್ನೊಂದು ಲೇಖನದಲ್ಲಿ ನೀವೇ ಹೇಳಿದಂತೆ - ಇತಿಹಾಸವನ್ನ ಪ್ರತೀಕಾರದ ಮೂಲಕ ತೀರಿಸಿಕೊಳ್ಳಬಾರದು. ಇದು ನೂರಕ್ಕೆ ನೂರರಷ್ಟು ನಿಜ. ಇತಿಹಾಸದಿಂದ ಮಾನವ ಜನಾಂಗ ಕಲಿಯಬೇಕು ಇಲ್ಲದಿದ್ದರೆ ಇತಿಹಾಸ ಪುನರಾವರ್ತನೆ ಆಗುತ್ತದೆ. ಮೊನ್ನೆ ಮೊನ್ನೆ ಅಸ್ಟೆ ನಾನು ಬೆಂಗಳೂರಿನ ಕೆಲವು ಕಡೆ ಸ್ವಲ್ಪ ಗೋಡೆ ಬರಹ ಹಾಗು ಪೋಸ್ಟರ್ ಗಳನ್ನ ನೋಡಿದೆ ಬರಹ ಹೀಗಿತ್ತು 'December ದ್ರೋಹದ ದಿನ' ಅಥವಾ ಇಂಗ್ಲೀಷಿನಲ್ಲಿ 'Demolition of .. - LEST WE FORGET' ಅಂತ ದೊಡ್ಡದಾಗಿ ಬರೆದಿತ್ತು - ಎಲ್ಲ ಮರೆತು ಆರಾಮವಾಗಿ ಜೀವನ ನಡೆಸುತ್ತಿರುವ ಜನರನ್ನ ಬದಿದೆಬ್ಬುಸುವ ಆದರೆ ಕೆಟ್ಟ ಯೋಚನೆಗಳಿಗೆ ರಹದಾರಿ ಮಾಡಿ ಕೊಡುವ ಬರಹ ವಲ್ಲವೇ ಇದು?
ಸಂತೋಷದ ವಿಚಾರವೆಂದರೆ ಯಾವುದೇ ಅಹಿತಕರ ಘಟನೆ ಇರಲಿ ಯಾವುದೇ ಪತ್ರಿಕೆ ಕೂಡ ಇದನ್ನ ಸುದ್ದಿ ಮಾಡಲಿಲ್ಲ ಹಾಗು ಈ ತರಹದ ಬರಹಗಳು ಸುದ್ದಿ ಆಗಬಾರದು ಕೂಡ. ಅದೇ ಪ್ರಮಾಣದ ಸಂತೋಷ ಆಗಿದ್ದು ಅಲ್ಲಿಯ ಜನರನ್ನ ನೋಡಿದಾಗ. ಏನೂ ಆಗೇ ಇಲ್ಲವೆಂಬಂತೆ ಜನಜೀವನ ನಡೆದಿತ್ತು.
ನನ್ನ ಕಳವಳವೆಂದರೆ - ಅಲ್ಲೂ ಕೂಡ ಪ್ರಜ್ಞ್ಯಾವಂತರು ಈ ತರಹದ ಬರಹಗಳು ಗೋಡೆಗೆ ಬರದಂತೆ ತಡೆಯಲಿಲ್ಲ ಎಂಬುದು. ಈ ತರಹದ ಗೋಡೆ ಬರಹಗಳು ಕೂಡ ಐಸೊಲೇಟೆಡ್ ಕೆಸುಗಳೇ ಅಲ್ವ?. ಇರಲಿ ಈ ತರಹದ ಕೇಸುಗಳು ಇನ್ನು ಮುಂದೆ ಎಲ್ಲೂ, ಯಾವುದೇ ಧರ್ಮದಲ್ಲೂ, ರಾಜ್ಯದಲ್ಲೂ, ನಾಡಿನಲ್ಲೂ ಅಥವಾ ಭಾಷೆಯಲ್ಲೋ ಕೂಡ ಆಗುವುದು ಬೇಡ. ನಾವೇ ನಮ್ಮಲ್ಲಿ ಭಿನ್ನಮತೀಯಗಳಾಗಿ ಮೂರನೆಯವರಿಗೆ ಲಾಭ ಮಾಡಿಕೊಳ್ಳುವುದಕ್ಕೆ ಅವಕಾಶ ಕೊಡುವುದು ಬೇಡ.
ಏನೇ ಆಗಲಿ ಐಸೊಲೇಟೆಡ್ ಕೆಸುಗಳನ್ನ ಮರೆತು ಎಲ್ಲರು ಮುಂದೆ ಹೋಗೋಣ.
Post a Comment