Aug 29, 2007

"ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ...

(ವಿಕ್ರಾಂತ ಕರ್ನಾಟಕ - ಸೆಪ್ಟೆಂಬರ್ 7, 2007 ರ ಸಂಚಿಕೆಯಲ್ಲಿನ ಬರಹ)

ಸುಮಾರು ಒಂದೂವರೆ ವರ್ಷದ ಹಿಂದೆ ಸರಿಯಾಗಿ 111 ಪುಟಗಳ ಆ ಪುಸ್ತಕವನ್ನು ಕೈಯಲ್ಲಿ ಹಿಡಿದವನು ಬಹುಶಃ ನಾಲ್ಕೈದು ಗಂಟೆಗಳಲ್ಲಿ ಓದಿ ಮುಗಿಸಿರಬೇಕು. ಆ ಪುಟ್ಟ ಕಾದಂಬರಿಯ ಹೆಸರು "ವಲಸೆ ಹಕ್ಕಿಯ ಹಾಡು." 1995 ರಲ್ಲಿ ಮುದ್ರಣಗೊಂಡದ್ದದು. "ಸ್ವಾತಂತ್ರ್ಯ ಹೋರಾಟಗಾರರಲ್ಲಿಯೆ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ್ದ, ಎಂದೂ ಉತ್ಪ್ರೇಕ್ಷೆ ಮಾಡದೆ ಚಳವಳಿಯನ್ನು ನಿರ್ಲಿಪ್ತವಾಗಿ ನಿರೂಪಿಸುವ, ಹುಟ್ಟು ಹೋರಾಟಗಾರನಲ್ಲದ, ಚಳವಳಿ ಕಾಲದಲ್ಲಿ ದೇಶದ ಉದ್ದಗಲಕ್ಕೆ ಓಡಾಡಿದ ಪ್ರಯಾಣಿಕ"ನನ್ನು ಕಥಾನಾಯಕನಾಗಿ ಹೊಂದಿರುವ ಕಥೆ ಅದು. ಸ್ವಾತಂತ್ರ್ಯೋತ್ತರ ಭಾರತದ ಗ್ರಾಮೀಣ ರಾಜಕೀಯವನ್ನು, ಗ್ರಾಮೀಣ ಬದುಕನ್ನು, ಆ ಪುಟ್ಟ ಕಾದಂಬರಿಯಲ್ಲಿ ವಿಶ್ಲೇಷಿಸಿರುವ, ನಿರೂಪಿಸಿರುವ ರೀತಿ ಅದ್ಭುತವಾದದ್ದು. ಅದನ್ನು ಓದಿ ಮುಗಿಸಿದ ಮೇಲೆ ಆ ಲೇಖಕನೊಡನೆ ಆ ಕೂಡಲೆ ಮಾತನಾಡಬೇಕು ಎಂದು ಬಲವಾಗಿ ಅನ್ನಿಸಿಬಿಟ್ಟಿತು. ಅದಕ್ಕೆ ಮುಖ್ಯ ಕಾರಣ, "ಅರೆ, ನಾನು 'ನ್ಯಾಗಟಿ ಸಿಟಿ ಚಂದರ್' ಎಂದುಕೊಂಡಿದ್ದ ಈ ಲೇಖಕ ನಿಜವಾಗಲೂ ನಾಗತಿಹಳ್ಳಿಯಾತ," ಎನ್ನಿಸಿದ್ದು. ಹೌದು, ಆ "ವಲಸೆ ಹಕ್ಕಿಯ ಹಾಡು"ವಿನ ಕರ್ತೃ, ನಾಗತಿಹಳ್ಳಿ ಚಂದ್ರಶೇಖರ್.

ಆದರೆ, ಅಂದು ನಾಗತಿಹಳ್ಳಿಯವರ ಜೊತೆ ಮಾತನಾಡಲಾಗಲಿಲ್ಲ. ಬಹುಶಃ ಅದಾದ ಒಂದೆರಡು ತಿಂಗಳಿಗೆ ಅವರ "ಅಮೃತಧಾರೆ" ಸಿನಿಮಾ ಬಿಡುಗಡೆಯಾಯಿತು. ಅದು ಸಿಲಿಕಾನ್ ಕಣಿವೆಯ ಸ್ಯಾನ್ ಹೋಸೆಯಲ್ಲಿ ಬಿಡುಗಡೆಯಾಗುವಷ್ಟರಲ್ಲಿ ಕನ್ನಡದ ದಿನಪತ್ರಿಕೆಗಳಲ್ಲಿ ಅದರ ವಿಮರ್ಶೆಗಳು ಬಂದುಬಿಟ್ಟಿದ್ದವು. ಬಹುತೇಕ ವಿಮರ್ಶೆಗಳು ಅದನ್ನು ಅತ್ಯದ್ಭುತ ಚಿತ್ರ, ಮಹೋನ್ನತ ಚಿತ್ರ ಎಂದೆಲ್ಲ ಬಣ್ಣಿಸಿದ್ದ ನೆನಪು. ಅಷ್ಟೊತ್ತಿಗೆ ನನಗೆ ಕನ್ನಡ ಚಿತ್ರವಿಮರ್ಶೆಗಳ "ತಲೆಹಿಡುಕತನ"ದ ಪರಿಚಯ ಆಗಿತ್ತು. ದಟ್ಟದರಿದ್ರ ಸಿನಿಮಾದ ಪುಟಗೋಸಿ ಡೈಲಾಗ್‌ಗಳಿಗೆಲ್ಲ ಆಧ್ಯಾತ್ಮ, ನೈತಿಕತೆ, ಆದರ್ಶ ಮುಂತಾದ ಸಾರ್ವಕಾಲಿಕ ಗುಣಗಳನ್ನು ಆರೋಪಿಸಿ, ರಂಗುರಂಗಾಗಿ ಬರೆದು "ಪೇಯ್ಡ್" ಜಾಹಿರಾತನ್ನು ಚಿತ್ರವಿಮರ್ಶೆಯ ಹೆಸರಿನಲ್ಲಿ ಪ್ರಕಟಿಸುವುದನ್ನು ನೋಡಿದ್ದ ನನಗೆ "ಅಮೃತಧಾರೆ"ಯ ಬಗೆಗೂ ಸ್ವಲ್ಪ ಸಂದೇಹವಿತ್ತು. ಆದರೆ, ಯಾವಾಗ ನಾಗತಿಹಳ್ಳಿಯವರು, "ಈ ಚಿತ್ರಕ್ಕಾಗಿ ನನ್ನ ಪ್ರತಿಭೆಯನ್ನೆಲ್ಲ ಬಸಿದಿದ್ದೇನೆ," ಎನ್ನುವಂತಹ ಮಾತನ್ನು ಆಡಿದರೊ, ಈ ಚಿತ್ರವನ್ನು ನೋಡಲು ನಿಜಕ್ಕೂ ಎದುರು ನೋಡುತ್ತಿದ್ದೆ.

ಅದೊಂದು ನಿಜಕ್ಕೂ ಮೀಡಿಯೋಕರ್ ಚಿತ್ರ. ಅಂತಃಸ್ಸತ್ವವಿಲ್ಲದ, ಅವಾಸ್ತವ ಡೈಲಾಗ್‌ಗಳ, ಪರಕೀಯ, ನಾಟಕೀಯ ಚಿತ್ರ. ಅಮಿತಾಬ್ ಬಚ್ಚನ್, ರಮ್ಯ, ಧ್ಯಾನ್‍ಗಳಿರುವ ದೃಶ್ಯವಂತೂ ಅಪ್ಪಟ Con Job. ಅಮಿತಾಬ್ ಕೈಯ್ಯಲ್ಲಿ ಒಂದು ಡೈಲಾಗ್ ಹೊಡೆಸಿ, ಅವರಿಲ್ಲದ ಸಮಯದಲ್ಲಿ ಮೇಲೆ ನೋಡಿಕೊಂಡು ರಮ್ಯ ಮಾತನಾಡುವುದನ್ನು ಅಮಿತಾಬ್‌ರೊಡನೆ ರಮ್ಯ ಸಂಭಾಷಿಸುತ್ತಿರುವ ದೃಶ್ಯ ಎನ್ನುವಂತೆ ಚಿತ್ರೀಕರಿಸಿ, ಅದನ್ನೆಲ್ಲ ಅಮೆಚೂರಿಷ್ ಆಗಿ ತೋರಿಸಿ, "ಅಮಿತಾಬ್ ನಟಿಸಿದ ಕನ್ನಡದ ಅತ್ಯಮೋಘ ಚಿತ್ರ, ನನ್ನ ಪ್ರತಿಭೆಯನ್ನೆಲ್ಲ ಬಳಸಿ ತೆಗೆದ ಚಿತ್ರ," ಎಂದೆಲ್ಲ ಹೇಳಿಕೊಂಡ ಆ ಚಿತ್ರವನ್ನು ನೋಡಿ ನನಗಂತೂ, "ಇಲ್ಲ, ಕಳೆದ ಹತ್ತುಹದಿನೈದು ವರ್ಷದಲ್ಲಿ ಇವರು ನಿಜಕ್ಕೂ ಕಳೆದು ಹೋಗಿದ್ದಾರೆ, ಇವರು ನಾಗತಿಹಳ್ಳಿ ಚಂದ್ರಶೇಖರ ಅಲ್ಲ, ಅವರೀಗ ನ್ಯಾಗಟಿ ಸಿಟಿ ಚಂದರ್ ಎಂಬ ಪರಕೀಯ," ಎನ್ನಿಸಿಬಿಟ್ಟಿತು.

ಇದಾದ ಮೂರ್ನಾಲ್ಕು ತಿಂಗಳಿಗೆಲ್ಲ ಸ್ವತಃ ನಾಗತಿಹಳ್ಳಿಯವರೆ ನನ್ನ ಅನಿಸಿಕೆಗೆ ಅಂತಿಮ ಮೊಳೆ ಹೊಡೆದುಬಿಟ್ಟರು. ಹೇಗೆಂದರೆ, "ನನ್ನ ಜೀವನದ ಆಶೆಗಳಲ್ಲಿ ಒಂದಾದ ಮರ್ಸಿಡಿಸ್-ಬೆನ್ಜ್ ಅನ್ನು ಕೊಂಡುಕೊಂಡಿದ್ದೇನೆ. ಎಷ್ಟೆಷ್ಟೊ ಕಷ್ಟ ಪಟ್ಟೆ, ಈಗಲೂ ಕಾಲ ಹಾಗೆ ಇದೆಯ?" ಎನ್ನುವಂತಹ ತಮ್ಮ ಬಡತನದ, ಕಷ್ಟಕಾಲದ ದಿನಗಳನ್ನು ವೈಭವೀಕರಿಸಿಕೊಂಡ, ಮತ್ತು ಈಗಿನ ಶ್ರೀಮಂತಿಕೆಯನ್ನು ತೋರಿಸಿಕೊಳ್ಳುವ ಕೀಳರಿಮೆ ಎನ್ನಬಹುದಾದ ಮಾತುಗಳನ್ನು ಸಾರ್ವಜನಿಕವಾಗಿ ಪತ್ರಿಕೆಗಳಲ್ಲಿ ಹೇಳಿಕೊಳ್ಳುವ ಮೂಲಕ.

ಬೆಂಗಳೂರಿನಲ್ಲಿ ಬಿಡುಗಡೆಯಾದ ದಿನವೆ ಇಲ್ಲಿ ಅಮೇರಿಕದ ಸಿಲಿಕಾನ್ ಕಣಿವೆಯಲ್ಲಿಯೂ ನಾಗತಿಹಳ್ಳಿಯವರ ಇತ್ತೀಚಿನ ಚಿತ್ರ "ಮಾತಾಡ್ ಮಾತಾಡು ಮಲ್ಲಿಗೆ" ಬಿಡುಗಡೆಯಾಗಿದೆ. ಇಲ್ಲಿ ಯಾವುದೆ ಕನ್ನಡ ಚಿತ್ರ ಬಂದರೂ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಬೇಕೆಂಬ ಒಂದೇ ಕಾರಣಕ್ಕೆ ಎಲ್ಲಾ ಸಿನಿಮಾಗಳನ್ನು ನೋಡಲು ಪ್ರಯತ್ನಿಸುವ ನಾನು ಇದನ್ನು ತಪ್ಪಿಸಿಕೊಳ್ಳುವ ಹಾಗೆಯೆ ಇರಲಿಲ್ಲ. ಸಿನಿಮಾಗೆ ಹೋಗುವ ಮುನ್ನ ಭಾನುವಾರದ ಕನ್ನಡ ದಿನಪತ್ರಿಕೆಗಳ ವಿಮರ್ಶೆಯನ್ನು ಓದಿದ್ದೆ. ಪ್ರಜಾವಾಣಿಯಲ್ಲಿ ಸ್ನೇಹಿತ ಚ.ಹ. ರಘುನಾಥ ಚಿತ್ರವಿಮರ್ಶೆ ಮಾಡಿದ್ದರು. ಬೇರೆ ಕೆಲವು ಪತ್ರಿಕೆಗಳ ಚಿತ್ರವಿಮರ್ಶಕರ ರೀತಿಯ ಓದುಗರಿಗೆ ತಲೆಹಿಡಿಯುವ ಬರಹವಲ್ಲ ಇವರದು. "ಜಾಗತೀಕರಣವನ್ನು ವ್ಯಾಖ್ಯಾನಿಸಲು ನಾಗತಿಹಳ್ಳಿ ಚಿಟ್ಟೆಯ ರೂಪಕವನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಆದರೆ ಚಿತ್ರಕ್ಕೆ ಸಂಬಂಧಿಸಿದಂತೆ ಅವರ ಸೃಜನಶೀಲತೆ ಈ ರೂಪಕಕ್ಕಷ್ಟೆ ಮೀಸಲಾದಂತಿದೆ. ಉಳಿದಂತೆ, ಮಲ್ಲಿಗೆ ಅರಳುವ ಮೌನದಲ್ಲಿ ನೋಡುಗನ ಕಾಡಬೇಕಿದ್ದ ವಾಸ್ತವ ಜಗತ್ತಿನ ಆತಂಕಗಳು ಭಾವುಕತೆಯ ಆರ್ಭಟದಲ್ಲಿ ಕೊನೆಗೊಳ್ಳುತ್ತವೆ." ಎಂದಿದ್ದರು ರಘುನಾಥ. ಒಟ್ಟಿನಲ್ಲಿ, ಉತ್ತಮ ಅಭಿನಯದ, ಚಂದ್ರೇಗೌಡರ ಕಟ್ಟೆಪುರಾಣದ ಪಾತ್ರಗಳಿರುವ, ಮಲ್ಲಿಗೆ ಅರಳುವಷ್ಟು ಸಹಜವಾಗಿಲ್ಲದ ಚಿತ್ರ ಎಂದಿದ್ದರೂ, ಎಲ್ಲಿಯೂ ಕೆಟ್ಟ ಚಿತ್ರ ಎಂದಾಗಲಿ, ಮಹೋನ್ನತ ದೃಶ್ಯಕಾವ್ಯ ಎಂಬಂತಹ ಅತ್ಯುಗ್ರ ಗುಣವಿಶೇಷಣಗಳಾಗಲಿ ಇರಲಿಲ್ಲ.

ಊರೆಲ್ಲ ನಾಗಮಂಗಲದ ಭಾಷೆ ಮಾತನಾಡುತ್ತ ದಕ್ಷಿಣ ಕರ್ನಾಟಕದ ಕಡೆಯವರಂತೆ ಪಂಚೆ ಉಟ್ಟ ರೈತರಿದ್ದರೆ ನಾಯಕ ಮಾತ್ರ ಕಚ್ಚೆ ಉಟ್ಟ, ದಿನವೂ ಬಣ್ಣಬಣ್ಣದ ರುಮಾಲು ತೊಟ್ಟ, ಕೆಂಚುಗಡ್ಡದ, ಕೆಸರೆ ಅಂಟಿರದ ಕೋಮಲ ಕೈಗಳ, ಫ್ಯಾsಬ್‌ಇಂಡಿಯಾದ ಜುಬ್ಬಾಗಳ ರೂಪದರ್ಶಿ!! ಗ್ರಾಮ್ಯ ಕನ್ನಡ ಮಾತನಾಡುವ, ಅಷ್ಟೇನೂ ಹೊರಗಿನ ಪ್ರಪಂಚದ ಪರಿಚಯವಿಲ್ಲದ ಆತನ ಹೆಂಡತಿ ಗಂಡನಿಗೆ ಧೈರ್ಯ ತುಂಬಲು ಮೂರ್ನಾಲ್ಕು ಸಲ ಪಾಶ್ಚಿಮಾತ್ಯ ಜೆಷ್ಚರ್ ಆದ ಥಂಬ್ಸ್ ಅಪ್ ಮಾಡುತ್ತಾಳೆ!!! ಗ್ರಾಫಿಕ್ ಮಳೆ ಸುರಿಯುತ್ತದೆ; ಯಾರೂ ನೆನೆಯುವುದಿಲ್ಲ. ನಿರ್ಜೀವ ಗ್ರಾಫಿಕ್ಸ್ ಚಿಟ್ಟೆಗಳು ಹಾರಾಡುತ್ತವೆ. ಇನ್ನೂ ಹಲವು ಓರೆಕೋರೆಗಳು...

ಆದರೆ ಇವು ಯಾವುವೂ ನಮ್ಮ ನ್ಯಾಗಟಿ ಸಿಟಿ "ಮಾತಾಡ್ ಮಾತಾಡು ಮಲ್ಲಿಗೆ"ಯಿಂದ ಮತ್ತೆ ನಾಗತಿಹಳ್ಳಿಯತ್ತ ಮುಖ ಮಾಡಿದ್ದಾರೆ ಎನ್ನುವುದನ್ನು ಅಲ್ಲಗಳೆಯುವುದಿಲ್ಲ. ಚಂದ್ರೇಗೌಡರ ಕಟ್ಟೆಪುರಾಣದ ಪಾತ್ರಗಳನ್ನು ಚಿತ್ರದಲ್ಲಿ ಬಳಸಿರುವ ದೃಷ್ಟಿಯಾಗಲಿ, ತೆಗೆದುಕೊಂಡಿರುವ ರೈತರ ಜಮೀನು ಸ್ವಾಧೀನದ ವಿಷಯವಾಗಲಿ, ಅಲ್ಲಲ್ಲಿ ಬರುವ ಸಮಕಾಲೀನ ವಿಷಯಗಳ ಬಗೆಗಿನ ಸಮಾಜಚಿಂತಕನ ಕಾಮೆಂಟ್‌ಗಳಾಗಲಿ, ರೂಪಕಗಳನ್ನು ಬಳಸುವ ರೀತಿಯಾಗಲಿ, ಸಮಕಾಲೀನ ಕನ್ನಡ ಚಿತ್ರಜಗತ್ತಿನಲ್ಲಿ ಕೇವಲ ಸೂಕ್ಷ್ಮ ಬರಹಗಾರ ನಾಗತಿಹಳ್ಳಿ ಮಾತ್ರ ಮಾಡಬಲ್ಲರು. ಅಮೇರಿಕ-ಅಮೇರಿಕದ ತರುವಾಯ ಮಾತೆತ್ತಿದರೆ ಶ್ರೀಮಂತ ಎನ್ನಾರೈ ಸ್ನೇಹಿತರ ಬಗ್ಗೆ ಮಾತನಾಡುವ, ಮರ್ಸಿಡಿಸ್ ಕೊಂಡದ್ದನ್ನು ಊರಿಗೆಲ್ಲ ಹೇಳಿಕೊಂಡು ಬರುವ, ಅವಾಸ್ತವಿಕ ಚಿತ್ರಗಳನ್ನು ಕೊಡುತ್ತ ಬಂದ, ಕೀಳರಿಮೆಯ ನಿರ್ದೇಶಕರ ತರಹವೆ ಮಾತೆತ್ತಿದರೆ ಹಾಡುಗಳಲ್ಲಿ ಫಾರಿನ್‍ಗೆ ಜಂಪ್ ಮಾಡುತ್ತಿದ್ದ ನಾಗತಿಹಳ್ಳಿಯವರು ಈ ಚಿತ್ರದಲ್ಲಿ ಮತ್ತೆ ಮಣ್ಣಿಗೆ ಮರಳುವ ಪ್ರಯತ್ನ ಮಾಡಿದ್ದಾರೆ.

ಮಣ್ಣಿನ ಮಗನೇ ಆದ ನಾಗತಿಹಳ್ಳಿಯವರು ವರ್ತಮಾನದಲ್ಲಿ ಸಲ್ಲಬೇಕು ಎನ್ನುವ ಕೀರ್ತಿ-ಐಶ್ವರ್ಯಗಳ ಮಹಾನ್ ಆಮಿಷವನ್ನು ಈಗಲಾದರೂ ಮೀರಬೇಕಿದೆ. ಎಂದಿಗೂ ಸಲ್ಲುವ ಪ್ರತಿಭೆ ಇರುವ ನಾಗತಿಹಳ್ಳಿಯವರು ಒಮ್ಮೆ ತಾವೇ ಬರೆದ (ಇತ್ತೀಚಿನ ಪ್ರೇಮಪತ್ರಗಳಲ್ಲ!) ಪುಟ್ಟಕ್ಕನ ಮೆಡಿಕಲ್ ಕಾಲೇಜು, ವಲಸೆ ಹಕ್ಕಿಯ ಹಾಡುಗಳನ್ನು ಓದಿ, ತಮ್ಮನ್ನೆ ತಾವು ಪುನರ್‌ಶೋಧಿಸಿಕೊಳ್ಳಬೇಕಿದೆ. ಸಾಮಾಜಿಕ ಕಾಳಜಿಯುಳ್ಳ ನಾಗತಿಹಳ್ಳಿಯವರು ಸಹವಾಸ ದೋಷದಿಂದ ಕೆಡದಿದ್ದರೆ, ತಮ್ಮ ಶ್ರೀಮಂತಿಕೆಯ ಈ ಕಾಲದಲ್ಲಿ ತಾವು ಮಾಡುವ ಪ್ರತಿ ಸಿನಿಮಾವೂ ಕೋಟ್ಯಾಂತರ ರೂಗಳ ಬಜೆಟ್‌ದೇ ಆಗಿರಬೇಕು ಮತ್ತು ಅದು ಕಮರ್ಷಿಯಲ್ ಆಗಿ ಗೆಲ್ಲಲೇ ಬೇಕು ಎನ್ನುವ ಹಠ ಇಟ್ಟುಕೊಳ್ಳದಿದ್ದರೆ, ಅವರಿಗೇ ಆದ ಒಂದು ಸಾಂಸ್ಕೃತಿಕ ನಾಯಕತ್ವ ಕರ್ನಾಟಕದಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಅಂಬರೀಷೋತ್ತರ ಮಂಡ್ಯ ರಾಜಕೀಯದಲ್ಲಿ ರಾಜಕೀಯ ನಾಯಕತ್ವವೂ ಸಾಧ್ಯವಾಗಬಹುದು. ಆದರೆ ಇದಕ್ಕೆಲ್ಲ ನಾಗತಿಹಳ್ಳಿಯತ್ತ ಮುಖ ಮಾಡಿರುವ ಅವರು ಊರನ್ನು ಮುಟ್ಟಬೇಕಿದೆ. ಇಲ್ಲದಿದ್ದರೆ, ಐದತ್ತು ವರ್ಷಗಳ ನಂತರ ತಮ್ಮ ಶ್ರೀಮಂತ ಬಂಗಲೆಯಲ್ಲಿ, ರೋಲ್ಸ್‌ರಾಯ್ಸ್‍ನಲ್ಲಿ ಜೀವನ ಕಳೆಯುವ ವೇಸ್ಟೆಡ್ ಪ್ರತಿಭೆ ಅವರದಾಗುವ ಅಪಾಯ ಇದೆ.

ಇದೇ ಸಮಯದಲ್ಲಿ, ಯಾಕೋ ನಾಗತಿಹಳ್ಳಿಯವರ ಇತ್ತೀಚಿನ ಮಹಾಕಾವ್ಯವನ್ನು ನೋಡಿ ಕಣ್ಣಲ್ಲಿ ನೀರು ಸುರಿಸಿದವರಾಗಲಿ, ಭಾವೋದ್ವೇಗಕ್ಕೆ ಒಳಗಾಗಿ ಅವರನ್ನು ತಬ್ಬಿಕೊಂಡು, ಅದನ್ನೆಲ್ಲ ಬರೆದವರಾಗಲಿ ಕಾಣಲಿಲ್ಲ!!! ಮುಂದಿನ ಒಂದೆರಡು ವಾರಗಳಲ್ಲಿ ಆಗಬಹುದು; ಆಗದೆಯೂ ಇರಬಹುದು. ಆದರೆ, ಒಳ್ಳೆಯ ಚಿತ್ರ ಮತ್ತು ಅದರ ಕಮರ್ಷಿಯಲ್ ಸಕ್ಸೆಸ್ ಈ ಎಲ್ಲಾ ತಂತ್ರ, ಗುಂಪುಗಾರಿಕೆ, ಸ್ವಜನಪಕ್ಷಪಾತಗಳನ್ನು ಮೀರಿದ್ದು. ನಾಗತಿಹಳ್ಳಿಯತ್ತ ಮುಖ ಮಾಡಿರುವ ಒಂದು ಕಾಲದ ಪರಿಸರವಾದಿ, ಶಿವರಾಮ ಕಾರಂತರ ಚುನಾವಣೆಯಲ್ಲಿ ಮಹಾನ್ ಆಶಾವಾದದಿಂದ ಓಡಾಡಿದ ಯುವಕ ಚಂದ್ರಶೇಖರರಿಗೆ ಇವನ್ನು ಯಾರೇನೂ ಹೇಳಬೇಕಾಗಿಲ್ಲ.

ಅನ್‍ಲೆಸ್, ಅವರೇ ಪ್ರಜ್ಞಾಪೂರ್ವಕವಾಗಿ ಮರೆತಿದ್ದರೆ ಮತ್ತು ಅದನ್ನು ಅವರ ನೈಜ ಹಿತೈಷಿಗಳು ಒತ್ತಿ ಹೇಳದೇ ಹೋಗಿಬಿಟ್ಟಿದ್ದರೆ...

"ವಲಸೆ ಹಕ್ಕಿಯ ಹಾಡು"ವಿನ ಮುನ್ನುಡಿಯಲ್ಲಿ ನಾಗತಿಹಳ್ಳಿ ಹೀಗೆ ಬರೆಯುತ್ತಾರೆ: "ಈ ದೇಶದ ದುರಂತವೆಂದರೆ ವ್ಯಕ್ತಿಯ ಎಲ್ಲ ಶಕ್ತಿ ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳದೆ-ಅರ್ಥ ಮಾಡಿಕೊಳ್ಳುವುದಿರಲಿ ಅವನ ಕ್ರಿಯಾಶೀಲತೆಯ ಬೇರನ್ನೆ ಕಿತ್ತುಹಾಕಿ-ನಿಷ್ಕ್ರಿಯಗೊಳಿಸಿ ಅವನನ್ನು ಜಡಗೊಂಡ ನಿರುಪಯುಕ್ತ ಮನುಷ್ಯನನ್ನಾಗಿಸುವುದು. ಯಾವ ವ್ಯವಸ್ಥೆ ಮನುಷ್ಯನಿಗೆ ಅನಂತ ಸಾಧ್ಯತೆಗಳ ದ್ವಾರವನ್ನು ತೆರೆಯುವುದಿಲ್ಲವೋ ಅಲ್ಲಿ ವ್ಯಕ್ತಿ ಸಿನಿಕನೂ, ಸೋಮಾರಿಯೂ ಹೊಣೆಗೇಡಿಯೂ ಆಗುತ್ತಾನೆ." ಕನ್ನಡದ ಒಂದು ಮಣ್ಣಿನ ಪ್ರತಿಭೆ ವರ್ತಮಾನದ ಲೌಕಿಕದಲ್ಲಿ ಸಲ್ಲಬೇಕು ಎನ್ನುವ ಹಠದಲ್ಲಿ ತನ್ನನ್ನೆ ತಾನು ಅರ್ಥಮಾಡಿಕೊಳ್ಳದೆ, ಈ ಅನಂತ ಸಾಧ್ಯತೆಗಳ ಸಮಯದಲ್ಲಿ ತನ್ನ ಕ್ರಿಯಾಶಕ್ತಿಯನ್ನು ಗೌಣವಾಗಿ ನೋಡುತ್ತಿದೆ ಎನ್ನಿಸಿದ್ದರಿಂದ ಇಷ್ಟೆಲ್ಲ ಹೇಳಬೇಕಾಯಿತು.

1 comment:

Vens said...

ರವೀಯವರೇ,
ನಿಮ್ಮ ಬ್ಲಾಗ್ ನನಗೆ ಈಗ ಹೊಸದಾಗಿ ಸಿಕ್ಕಿತು, ಆದ್ದರಿಂದ ನಿಮ್ಮ ಲೇಖನಗಳು ಹಳೇಯವೋ, ಹೊಸದೋ ನೋಡದೆ ನನಗೆ ಹಿಡಿಸಿದವು, ಕಾಮೆಂಟಿಸಬೇಕೆನಿಸಿದವನ್ನು ಮಾಡುತ್ತಿದ್ದೇನೆ.
ಅಂದಹಾಗೆ,
ನಾನು ನಾಗತಿಯವರ ಲೇಖನ ಓದುವಾಗ, ಅದು ಓದಿಸಿಕೊಂಡು ಹೋಗುವ ರೀತಿ, ವಿಷಯ ಎಲ್ಲವೂ ಬಹಳ ಚೆನ್ನಾಗಿರುತ್ತಿದ್ದವು. ಆದರೆ ಅದೇ ರೀತಿಯ್ ಸೆಳೆತ, ಹಿಡಿತ ಅವರಿಗೆ ಎಂದೂ ಅವರ ಚಿತ್ರಗಳಲ್ಲಿ ಮೂಡಿಬರಲಿಲ್ಲ. ಆದರೆ ಅವರು ತಮ್ಮ ಲೇಖನಗಳಲ್ಲಿ, ಸಂದರ್ಶನಗಳಲ್ಲಿ ಕನ್ನಡ ಚಿತ್ರ ಕಾಳಜಿ, ಗುಣಮಟ್ಟ ಇತರ ಹೇಳಿಕೆಗಳು ಅವರು ಗುಣಮಟ್ಟದ ನಿರ್ದೇಶಕರಿರಬೇಕು ಎನ್ನುವಂತೆ ಮಾಡಿಬಿಟ್ಟಿದ್ದವು. ನಮಗೂ ಪಾಪ ಗುಣಮಟ್ಟ ಅದೂ ಇದೂ ಏನೇನೊ ಹೇಳ್ತಾ ಇರ್ತಾರೆ ಕಮರ್ಶಿಯಲ್ ಎಸ್ಟಾಬ್ಲಿಷ್ ಆದರೆ ಕನ್ನಡಕ್ಕೆ ಒಂದಷ್ಟು ಓಳ್ಳೆ ಚಿತ್ರ ಕೊಡ್ತಾರೆನೋ ಅನಿಸುತ್ತಿತ್ತು. ಆದರೆ ಅಮೃತಧಾರೆ ನೋಡಿದ ಮೇಲೆ ನನಗೆ ನಿಜವಾಗಲೂ "ಚಿತ್ರಹಿಂಸೆ" ಅಂದರೇನೆಂದು ಆರ್ಥವಾಯಿತು, ಹುಹ್.... ರವಿ ಬೆಳಗೆರೆ ಬೇರೆ ಮಿತ್ರ ಕರ್ತವ್ಯ ಬದ್ದರಾಗಿ ಅಮೃತಧಾರೆ ಯನ್ನು ಹಾಯ್ ನ ಮುಖಪುಟಕ್ಕೆ ಹಾಕಿದರು. ಅಂದಹಾಗೆ ನಾನು ನೋಡಿದಮೇಲೆ ಬೇರೆಯವರಿಗೂ ಹೀಗೆ ಚಿತ್ರಹಿಂಸೆಯಾಯಿತು ಎಂಬುದು ಕಂಡುಬಂತು. ಜೊತೆಗೆ ಸಿನಿಮಾ ಚೆನ್ನಾಗಿದೆ ಎಂದವರು ಸಿಕ್ಕರು. ಹಾಗೆ ನೋಡಿದರೆ ಗೌರಿಲಂಕೇಶ್ ಉತ್ತಮ ನಿರ್ದೇಶಕಿ ಅವರು ಒಳ್ಳೆಯ ಚಿತ್ರಗಳನ್ನು ನೀಡಿದ್ದಾರೆ, ಆದರೆ ಅವರೆಲ್ಲೂ ಅಷ್ಟಾಗಿ ಚಿತ್ರನಿರ್ದೇಶನದ ಬಗ್ಗೆ, ಕನ್ನಡ ಚಿತ್ರರಂಗದ ಸ್ಥಿತಿಗತಿಯ ಬಗ್ಗೆ ಸಂತಾಪಸೂಚಕ ಮಾತನಾಡುತ್ತ ತಮ್ಮನ್ನು ಹೈಲೈಟ್ ಮಾಡುವುದು ಕಂಡುಬರುವುದಿಲ್ಲ. ಅವರ "ಪ್ರೀತಿ ಪ್ರೇಮ ಪ್ರಣಯ" ಹಾಗೂ "ಅಕ್ಕ" ಸುಂದರ ಚಿತ್ರಗಳು.