(ವಿಕ್ರಾಂತ ಕರ್ನಾಟಕ - ಫೆಬ್ರವರಿ 15, 2008 ರ ಸಂಚಿಕೆಯಲ್ಲಿನ ಬರಹ)
ಅದು Y2K, ಅಂದರೆ ಇಸವಿ 2000. ನಾನು ಆಗ ಬೆಂಗಳೂರಿನಲ್ಲಿ ಮೊಟೊರೊಲದಲ್ಲಿ ಕೆಲಸ ಮಾಡುತ್ತಿದ್ದೆ. ಎಲ್ಲರಿಗೂ ಗೊತ್ತಿರುವ ಹಾಗೆ ಮೊಟೊರೊಲ ಸೆಲ್ಫೋನ್ಗಳ ಕಂಪನಿ. ಆ ಸಮಯದಲ್ಲಿ ಈ ಮೊಬೈಲ್ ಫೋನುಗಳ ಲೋಕದಲ್ಲಿನ ಒಂದು ಹೊಸ ತಂತ್ರಜ್ಞಾನದ ಬಗ್ಗೆ ಮತ್ತು ಅದನ್ನು ಫೋನಿನಲ್ಲಿ ಅಳವಡಿಸುವ ವಿವಿಧ ಬಗೆಗಳ ಬಗ್ಗೆ, ಗ್ರಾಹಕರಿಗೆ ಕೊಡಬಹುದಾದ ಹೊಸ ತರಹದ ಸೇವೆಗಳ ಬಗ್ಗೆ, ತನ್ಮೂಲಕ ಮೊಬೈಲ್ ಕಂಪನಿಗಳ ಮತ್ತು ಸರ್ವಿಸ್ ಪ್ರೊವೈಡರ್ಗಳ ಆದಾಯ ಹೆಚ್ಚಿಸಿಕೊಳುವ ಹೊಸ ಮಾರ್ಗಗಳ ಬಗ್ಗೆಯೆಲ್ಲ ಆ ಕ್ಷೇತ್ರದಲ್ಲಿ ಚರ್ಚೆಗಳಾಗುತ್ತಿದ್ದವು. ಆಗತಾನೆ ಹೊಸದಾಗಿ ಕೇಳಿಬರುತ್ತಿದ್ದ ಆ ತಂತ್ರಜ್ಞಾನದ ವಿಚಿತ್ರ ಹೆಸರು "ಬ್ಲೂಟೂಥ್".
ಆಮೇಲೆ ಏನೇನೋ ಆಯಿತು; ಅಂದರೆ, ಅಂದುಕೊಂಡಂತೆ ಆಗಲಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು! ಶುರುವಿನಲ್ಲಿ ಬ್ಲೂಟೂಥ್ ತಂತ್ರಜ್ಞಾನದಿಂದ ಏನೆಲ್ಲ ಮಾಡಬಹುದು ಎಂದುಕೊಂಡಿದ್ದರೊ ಅಂತಹುವುದ್ಯಾವುದೂ ಮುಂದಿನ ನಾಲ್ಕೈದು ವರ್ಷಗಳಲ್ಲಿ ಆಗಲಿಲ್ಲ. 2002 ಕ್ಕೆಲ್ಲ ಬಹಳಷ್ಟು ಜನ ಬ್ಲೂಟೂಥ್ನ ಯಶಸ್ಸಿನ ಬಗ್ಗೆ ಆಸೆ ಬಿಟ್ಟುಬಿಟ್ಟರು. ಆದರೆ ತಂತ್ರಜ್ಞಾನವೂ ಒಂದು ರೀತಿಯಲ್ಲಿ ಸಮಯದಂತೆ. ಯಾರಿಗೂ ಕಾಯುವುದಿಲ್ಲ. ಎಲ್ಲಿಯವರೆಗೆ ವಿಜ್ಞಾನಿಗಳು ಕೆಲಸ ಮಾಡುತ್ತಿರುತ್ತಾರೊ, ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿರುತ್ತಾರೊ ಅಲ್ಲಿಯವರೆಗೂ ಅದು ಯಾರಿಗೂ, ಯಾವುದಕ್ಕೂ ಕಾಯದೆ ಅಭಿವೃದ್ಧಿ ಆಗುತ್ತಲೆ ಇರುತ್ತದೆ. ಆರಂಭದಲ್ಲಿ ತಂತ್ರಜ್ಞರು ಪ್ರತಿಯೊಂದು ಬ್ಲೂಟೂಥ್ ಎಲೆಕ್ಟ್ರಾನಿಕ್ ಸಾಧನವೂ ಒಂದು ನಿರ್ದಿಷ್ಟವಾದ, ಬದಲೇ ಆಗದ ಸಂಖ್ಯೆ ಹೊಂದಿರಬೇಕು ಎಂಬ ನಿಯಮ ಇಟ್ಟುಕೊಂಡಿದ್ದರು. ಆದರೆ ಈ ನಿಯಮವೆ ಅದರ ಅಳವಡಿಕೆಗೆ ಕಷ್ಟವಾಗುತ್ತಿತ್ತು. ವಿಚಾರ ಮಾಡಿದ ತಂತ್ರಜ್ಞರು ಆ ನಿಯಮವನ್ನು ಕೈಬಿಟ್ಟರು. ಅವು ಅನಾಮಿಕವಾಗಿಯೂ ಒಬ್ಬರು ಇನ್ನೊಬ್ಬರಿಗೆ ಗಂಟುಹಾಕಿಕೊಳ್ಳಬಹುದು ಎಂದರು. ಬ್ಲೂಟೂಥ್ನ ಕತೆಯೆ ಬದಲಾಗಿ ಹೋಯಿತು.
ಈಗಂತೂ ವೈರ್ಲೆಸ್ ಎಂದರೆ ಏನೆಂದು ಯಾರಿಗೂ ಹೇಳಿಕೊಡಬೇಕಾದ ಅವಶ್ಯಕತೆಯಿಲ್ಲ. ವೈರ್ಲೆಸ್ ಯಾವ ರೀತಿ ಕೆಲಸ ಮಾಡುತ್ತದೆ ಎಂದು ಜನಕ್ಕೆ ಗೊತ್ತಿಲ್ಲದಿದ್ದರೂ, ಸೂಕ್ಷ್ಮವಾದ ಬೆಳಕಿನ ತರಂಗಗಳನ್ನು (ಎಲೆಕ್ಟ್ರೊ-ಮ್ಯಾಗ್ನೆಟಿಕ್ ರೇಡಿಯೊ ವೇವ್ಸ್) ಸೃಷ್ಟಿಸಿ ಒಂದು ಎಲೆಕ್ಟ್ರಾನಿಕ್ ಸಾಧನ/ವಸ್ತು ಇನ್ನೊಂದು ಎಲೆಕ್ಟ್ರಾನಿಕ್ ಸಾಧನದೊಂದಿಗೆ ಯಾವುದೆ ತಂತಿಯ ವ್ಯವಸ್ಥೆ ಇಲ್ಲದೆ ಪರಸ್ಪರ ಸಂಪರ್ಕ ಏರ್ಪಡಿಸಿಕೊಳ್ಳುವ ವ್ಯವಸ್ಥೆ ಅದು ಎನ್ನುವುದು ಬಹುಶಃ ಇತ್ತೀಚಿನ ವಿದ್ಯಾರ್ಥಿಗಳಿಗೆಲ್ಲ ಗೊತ್ತು. ರೇಡಿಯೊ ಹುಟ್ಟಿದ್ದು ಇದೇ ವಿಜ್ಞಾನದಿಂದ. ಬ್ಲೂಟೂಥ್ ತಂತ್ರಜ್ಞಾನಕ್ಕೂ ಇದೇ ಮೂಲ. ಆದರೆ ಬ್ಲೂಟೂಥ್ನ ಗರಿಷ್ಠ ಮಿತಿ ನೂರು ಮೀಟರ್ ಮಾತ್ರ.
ಯಾವಾಗ ಒಂದು ಬ್ಲೂಟೂಥ್ ಸಾಧನ (Device) ಇನ್ನೊಂದು ಬ್ಲೂಟೂಥ್ ಸಾಧನದೊಂದಿಗೆ ಅನಾಮಿಕವಾಗಿಯೂ ಸಂಪರ್ಕ ಏರ್ಪಡಿಸಿಕೊಳ್ಳುವಂತೆ ಮಾಡಿಬಿಟ್ಟರೊ ಬ್ಲೂಟೂಥ್ ಕಡಿಮೆ ದೂರದ ನಿಸ್ತಂತು ಸಂಪರ್ಕಕ್ಕೆ ವರದಾನವಾಗಿ ಹೋಯಿತು; ವಿಶೇಷವಾಗಿ ಮೊಬೈಲ್ ಫೋನ್ಗಳ ಹ್ಯಾಂಡ್ಸ್-ಫ್ರೀ ಹೆಡ್ಸೆಟ್ಗಳಿಗೆ. ಇತ್ತೀಚಿನ ಎರಡು-ಮೂರು ವರ್ಷಗಳಲ್ಲಿ ಬಂದ ಬಹುತೇಕ ಮೊಬೈಲ್ ಫೋನುಗಳಲ್ಲಿ ಬ್ಲೂಟೂಥ್ ಸೌಕರ್ಯ ಇದೆ. ಈ ಫೋನಿನ ಜೊತೆಗೆ ನೀವು ಒಂದು ಹ್ಯಾಂಡ್ಸ್_ಫ್ರೀ ಬ್ಲೂಟೂಥ್ ಹೆಡ್ಸೆಟ್ ತೆಗೆದುಕೊಂಡರೆ ನಿಮ್ಮ ಫೋನನ್ನು ಜೇಬಿನಲ್ಲಿ ಇಟ್ಟುಕೊಂಡು, ಎರಡೆ ಇಂಚು ಉದ್ದದ ಹೆಡ್ಸೆಟ್ ಅನ್ನು ಕಿವಿ ಮೇಲೆ ಹೂವು ಇಟ್ಟುಕೊಂಡಂತೆ ಇಟ್ಟುಕೊಂಡು ಫೋನ್ ಸಂಭಾಷಣೆ ನಡೆಸಬಹುದು. (ಆದರೆ ಆ ಸಂಭಾಷಣೆಯ ಸಮಯದಲ್ಲಿ ನೀವು ಒಂದಕ್ಕಂತೂ ಸಿದ್ಧವಾಗಿರಬೇಕು. ಅದು ಆಗಾಗ ಜನ ನಿಮ್ಮನ್ನು ಡಿಸ್ಟರ್ಬ್ ಮಾಡಿಬಿಡುತ್ತಾರೆ. ಅವರೇನೂ ಬೇಕೆಂದು ಮಾಡುವುದಿಲ್ಲ. ಆದರೆ ಅವರಿಗೆ ನೀವು ಫೋನಿನಲ್ಲಿ ಮಾತನಾಡುತ್ತಿದ್ದೀರೆಂದು ಗೊತ್ತೇ ಆಗುವುದಿಲ್ಲ. ಯಾಕೆಂದರೆ ಈ ಹೆಡ್ಸೆಟ್ ಅವರಿಗೆ ಕಾಣದಂತೆ ನಿಮ್ಮ ಕಿವಿಯ ಮೇಲೆ ಕುಳಿತಿರುತ್ತದಾದ್ದರಿಂದ. ಹಾಗೆಯೆ, ಸುಮ್ಮನೆ ಗಾಳಿಯಲ್ಲಿ ಮಾತನಾಡುತ್ತ, ನಗುತ್ತ, ರೇಗುತ್ತ, ಕಿಚಾಯಿಸುತ್ತ ಹೋಗುತ್ತಿರುವ ನಿಮ್ಮನ್ನು ಅರೆಹುಚ್ಚನೆಂದು ಭಾವಿಸುವ ಜನರ ನೋಟಕ್ಕೂ ನೀವು ಗುರಿಯಾಗುತ್ತಿರುತ್ತೀರ!)
ಇತ್ತೀಚಿಗೆ ಬಂದಿರುವ ಬ್ಲೂಟೂಥ್ನ ಹೊಸ ಉಪಯೋಗ ಮಾತ್ರ ಈ ಮೊಬೈಲ್ ಫೋನಿನ ಪ್ರಪಂಚಕ್ಕಿಂತ ಬೇರೆಯದೆ ಆದದ್ದು. 2003 ರಲ್ಲಿ ಇರಾಕಿನ ಮೇಲೆ ದಂಡೆತ್ತಿ ಹೋದ ಅಮೆರಿಕ ಇಲ್ಲಿಯವರೆಗೂ ತನ್ನ 3945 ಸೈನಿಕರನ್ನು ಕಳೆದುಕೊಂಡಿದೆ. ಇದೇ ಸಮಯದಲ್ಲಿ ಸುಮಾರು 88000 ಇರಾಕಿ ನಾಗರಿಕರು ಸತ್ತಿದ್ದಾರೆ ಎಂದು ಕೆಲವು ವರದಿಗಳು ಹೇಳಿದರೆ, ಮತ್ತೆ ಕೆಲವು 11 ಲಕ್ಷ 68 ಸಾವಿರ ನಾಗರಿಕರು ಸತ್ತಿದ್ದಾರೆ ಎನ್ನುತ್ತಿವೆ. ಇನ್ನು ಗಾಯಗೊಂಡ ಅಮೆರಿಕನ್ ಸೈನಿಕರ ಸಂಖ್ಯೆ 29000 ಎಂದು ಅಂದಾಜು. ಅಂದರೆ ಒಬ್ಬ ಸೈನಿಕ ಸಾಯುವಷ್ಟರಲ್ಲಿ 8 ಜನ ಸೈನಿಕರು ಕೈಕಾಲು ಅಥವ ಇನ್ನೆಂತಹುದೊ ಕಳೆದುಕೊಂಡಿದ್ದಾರೆ. ಹಾಗೆಯೆ ಬಹುಶಃ ಲಕ್ಷಾಂತರ ಇರಾಕಿ ನಾಗರಿಕರೂ ಕೈಕಾಲು ಕಳೆದುಕೊಂಡಿರಬಹುದು.
ಗಾಯಗೊಂಡವರನ್ನು ಅಥವ ಕೈಕಾಲು ಕಳೆದುಕೊಂಡವರನ್ನು, ಇವರಿಗೆ ಒಂದೆ ಕೈ ಹೋಗಿದೆ, ಇವರಿಗೆ ಒಂದೆ ಕಾಲು ಹೋಗಿದೆ, ಎರಡು ಕಾಲು ಹೋದವರಿಗೆ ಹೋಲಿಸಿದರೆ ಇವರು ಅದೃಷ್ಟವಂತರು ಎಂದು ವಿಂಗಡಿಸುವುದು ಅಮಾನವೀಯ. ಆದರೆ ಎರಡೂ ಕಾಲುಗಳನ್ನು ಕಳೆದುಕೊಂಡವರ ನಿತ್ಯದ ಜೀವನ ಮಾತ್ರ ಬಹಳ ಕಷ್ಟತಮವಾದದ್ದು ಹಾಗೂ ಇತರೆಲ್ಲರಿಗಿಂತ ಹೆಚ್ಚಿಗೆ ಪರಾವಲಂಬಿಯಾದದ್ದು ಎಂದು ಅರ್ಥೈಸಿಕೊಳ್ಳುವುದು ತಪ್ಪಾಗಲಾರದು. ಎಷ್ಟೊ ಸಮಯದಲ್ಲಿ ಅಂತಹವರು ತಮ್ಮ ಎಲ್ಲಾ ಸಾಮರ್ಥ್ಯಗಳನ್ನು ಮರೆತು ಕಾಲ ತಳ್ಳುವುದೆ ಹೆಚ್ಚು. ಆದರೆ, ಇತ್ತೀಚಿನ ದಿನಗಳಲ್ಲಿ ಎರಡೂ ಕಾಲು ಕಳೆದುಕೊಂಡಿರುವ ಇಬ್ಬರು ಅಮೆರಿಕನ್ ಸೈನಿಕರಿಗೆ ವಿಜ್ಞಾನಿಗಳು ಹೊಸ ತಂತ್ರಜ್ಞಾನದ ಕೃತಕ ಕಾಲುಗಳನ್ನು ತೊಡಿಸಿ ಮಾಡುತ್ತಿರುವ ಪ್ರಯೋಗ ಅನೇಕ ಕಾರಣಗಳಿಗೆ ಆಶಾದಾಯಕವಾಗಿದೆ.
ಇರಾಕಿನಲ್ಲಿ ಪಹರೆ ಮಾಡುತ್ತಿದ್ದ ಅಮೆರಿಕದ ಜೊಶುವ ಬ್ಲೈಲ್ ಎಂಬ ಸೈನಿಕನ ವಾಹನದ ಕೆಳಗೆ ಬಾಂಬೊಂದು 2006 ರ ಅಕ್ಟೋಬರ್ನಲ್ಲಿ ಸ್ಫೋಟಗೊಂಡಿತು. ಬ್ಲೈಲ್ ತೀವ್ರವಾಗಿ ಗಾಯಗೊಂಡ. ಅವನ ಗಾಯಗಳು ತೀವ್ರಸ್ವರೂಪದ್ದಾಗಿದ್ದವು. ಆತ ಬದುಕುಳಿಯುವಷ್ಟರಲ್ಲಿ ಆತನ ಪೃಷ್ಠದಲ್ಲಿ 32 ಪಿನ್ನುಗಳಿದ್ದವು. ಬೆನ್ನುಹುರಿಯ ಮೂಳೆಗಳಿಗೆ ಸಪೋರ್ಟ್ ಕೊಡುವ ಪೆಲ್ವಿಸ್ ಅನ್ನು 6 ಇಂಚಿನ ಸ್ಕ್ರೂ ಹಿಡಿದಿಟ್ಟುಕೊಂಡಿತ್ತು. ಎರಡೂ ತೊಡೆಗಳು ಸರಿಯಾಗಿ ಅರ್ಧದಲ್ಲಿ ತುಂಡಾಗಿದ್ದವು.
ಹೀಗೆ ಕಾಲುಗಳೇ ಇಲ್ಲದಾಗಿ ಹೋದ ಆ ಸೈನಿಕ ಇತ್ತೀಚೆಗೆ ಮತ್ತೆ ನಡೆಯಲಾರಂಭಿಸಿದ್ದಾನೆ. ಆದರೆ ಈ ನಡಿಗೆ ಮೊದಲಿನಷ್ಟು ಸಹಜವಾಗಿ, ಸುಲಭವಾಗಿ ಇಲ್ಲವಾದರೂ, ಇತ್ತೀಚಿನ ಎಲ್ಲಾ ಕೃತಕ ಕಾಲುಗಳಿಗಿಂತ ಸ್ವಲ್ಪ ಹೆಚ್ಚಿಗೇ ಸಲೀಸಾಗಿದೆ. ಈಗ ಲಭ್ಯವಿರುವ ಲೇಟೆಸ್ಟ್ ಕೃತಕ ಕಾಲುಗಳೂ ಬಹಳ ಹೈಟೆಕ್ ಆದವುಗಳೆ. ಹಾಕಿಕೊಂಡವನು ತನ್ನ ತೊಡೆಗಳಲ್ಲಿನ ಸ್ನಾಯುಗಳನ್ನು ಕದಲಿಸುವ ತೀಕ್ಷ್ಣತೆಯ ಮೇಲೆ ಈ ಹೈಟೆಕ್ ಕಾಲುಗಳು ಕೆಲಸ ಮಾಡುತ್ತವೆ. ಆದರೆ ಒಂದು ಕೃತಕ ಕಾಲು ಇನ್ನೊಂದು ಕೃತಕ ಕಾಲಿನ ಜೊತೆ ಮಾತನಾಡಬೇಕಾದರೆ ಅವೆರಡಕ್ಕೂ ವೈರ್ ಸಂಪರ್ಕ ಇರಬೇಕಿತ್ತು ಮತ್ತು ಅವಕ್ಕೆ ಕಂಪ್ಯೂಟರ್ನಿಂದ ವೈರ್ ಜೋಡಿಸಿ ಪ್ರೋಗ್ರಾಮ್ ಮಾಡಬೇಕಿತ್ತು. ಜೊತೆಗೆ ಈ ಕೃತಕ ಕಾಲುಗಳನ್ನು ಚಲಾಯಿಸಬೇಕಾದರೆ ಸ್ನಾಯುಗಳನ್ನು ಬಹಳವೆ ಕದಲಿಸಬೇಕಿತ್ತು. ಆದರೆ, ಬ್ಲೈಲ್ನ ತೊಡೆಗಳಿಗೆ ಜೋಡಿಸಲಾಗಿರುವ ಎರಡೂ ಕೃತಕ ಕಾಲುಗಳಲ್ಲಿ ಈಗ ಬ್ಲೂಟೂಥ್ ಚಿಪ್ಗಳಿವೆ. ಅವೆರಡೂ ಒಂದು ಇನ್ನೊಂದರ ಜೊತೆ ಮಾತನಾಡಿಕೊಳ್ಳುವಂತೆ ವೈರ್ಲೆಸ್ ಆಗಿ ಪ್ರೋಗ್ರಾಮ್ ಮಾಡಲಾಗಿದೆ. ನಮ್ಮ ಕಾಲುಗಳು ಮಾಡುವಂತೆಯೆ ಅವೂ ಒಂದು ಇನ್ನೊಂದನ್ನು ಅನುಕರಿಸುತ್ತವೆ; ಅನುಸರಿಸುತ್ತವೆ; ಏರಿಳಿತಗಳಲ್ಲಿ ತಮ್ಮ ವೇಗವನ್ನು ಹೊಂದಿಸಿಕೊಳ್ಳುತ್ತವೆ. ಹಾಗಾಗಿಯೆ ಸ್ನಾಯುಗಳ ಚಲನವನ್ನು ಕಮ್ಮಿ ಬೇಡುತ್ತವೆ. ಧರಿಸಿದವರು ವ್ಯಾಯಾಮ ಮಾಡುವಷ್ಟು ತೀವ್ರವಾಗಿ ತಮ್ಮ ಸ್ನಾಯುಗಳನ್ನು ಕದಲಿಸಬೇಕಿಲ್ಲ.
ಮನುಷ್ಯ ಕೈಕಾಲುಗಳನ್ನು ಯುದ್ಧದಲ್ಲಿ ಮಾತ್ರವೆ ಕಳೆದುಕೊಳ್ಳಬೇಕಿಲ್ಲ. ರಸ್ತೆ ಅಪಘಾತದಲ್ಲಿ ಅನೇಕ ತರಹದ ಮಾರಣಾಂತಿಕ ಗಾಯಗಳಾಗುತ್ತವೆ. ಅಪಘಾತಗಳಲ್ಲಿ ಬದುಕುಳಿದವರು ಎಷ್ಟೋ ಸಲ ತಮ್ಮ ಕೈಕಾಲುಗಳನ್ನು ಕಳೆದುಕೊಂಡಿರುತ್ತಾರೆ. ದ್ವಿಚಕ್ರವಾಹನಗಳು ಹೆಚ್ಚಿರುವ ನಮ್ಮಲ್ಲಂತೂ ಎಷ್ಟೋ ಸಲ ಲಾರಿಬಸ್ಸುಗಳ ಕೆಳಗೆ ಸಿಕ್ಕಿಹಾಕಿಕೊಂಡು ಕಾಲುಗಳು ನಜ್ಜುಗುಜ್ಜಾಗಿ ನರಳಾಡುತ್ತಿರುವವರನ್ನು ಹೈವೇಗಳಲ್ಲಿ ಹೆಚ್ಚಾಗಿ ಓಡಾಡುವವರು ಒಮ್ಮೆಯಾದರೂ ನೋಡಿರುತ್ತಾರೆ. ಇನ್ನು ಕಟ್ಟಡಗಳು ಕುಸಿದೊ ಇಲ್ಲವೆ ಕಾರ್ಖಾನೆಗಳಲ್ಲಾಗುವ ಅವಘಡದಲ್ಲಿಯೊ ಜನ ತಮ್ಮ ತಪ್ಪಿಲ್ಲದೆ ಅಂಗಾಂಗಗಳನ್ನು ಕಳೆದುಕೊಂಡಿರುತ್ತಾರೆ. ಈಗೀಗ ಕೃಷಿಯಲ್ಲಿಯೂ ಯಂತ್ರಗಳ ಬಳಕೆ ಜಾಸ್ತಿ ಆಗಿ ರೈತನೂ ಈಗ ಮೊದಲಿನಷ್ಟು ಸುರಕ್ಷಿತನಾಗಿಲ್ಲ. ಇನ್ನು ನಿಸರ್ಗವೆ ಒಮ್ಮೊಮ್ಮೆ ಕೈಕಾಲು ಮುರಿಯುತ್ತದೆ - ಭೂಕಂಪದ ರೂಪದಲ್ಲಿ, ಚಂಡಮಾರುತ, ಸುಂಟರಗಾಳಿಗಳ ವೇಷದಲ್ಲಿ. ಈ ಹಿನ್ನೆಲೆಯಲ್ಲಿ ನಾವು ವಿಜ್ಞಾನ ನಿರ್ಭಾಗ್ಯ ಮಾನವನ ಜೀವನವನ್ನು ಸಹನೀಯ ಮಾಡಲು ಸಹಕರಿಸುತ್ತಿರುವುದನ್ನು ಗಮನಿಸಬೇಕು. ಮೊದಲನೆ ವಿಶ್ವಯುದ್ಧದ ಸಮಯದಲ್ಲಿ ವಿಮಾನಗಳು ಶತ್ರುಸೈನ್ಯದ ಮೇಲೆ ದಾಳಿಮಾಡಲು ಅತ್ಯುತ್ತಮ ಸಾಧನಗಳು ಎಂಬಂತೆ ಬಳಕೆಗೆ ಬಂದಿದ್ದು. ಆದರೆ ಅದೇ ವಿಮಾನಯಾನ ಇವತ್ತು "ಅತಿ ಸುರಕ್ಷಿತ ಸಾರಿಗೆ ವ್ಯವಸ್ಥೆ" ಎಂದು ಹೆಸರಾಗಿದೆ. ಈಗ ಇರಾಕಿನಲ್ಲಿನ ಯುದ್ಧವೂ ಪಾಶ್ಚಾತ್ಯ ದೇಶಗಳಲ್ಲಿ ಅನೇಕ ಹೊಸ ವೈಜ್ಞಾನಿಕ ಪ್ರಯೋಗಗಳಿಗೆ ಮತ್ತು ಅವುಗಳ ಸಾರ್ವಜನಿಕ ಅಳವಡಿಕೆಗೆ ಕಾರಣವಾಗುತ್ತಿದೆ. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಈ Speedy ಅಳವಡಿಕೆಗೆ ಮತ್ತು ಎಷ್ಟೋ ಸಂಶೋಧನೆಗಳಿಗೆ ಯುದ್ಧವೇ ಕಾರಣವಾಗುವುದು ಮಾತ್ರ ಚರಿತ್ರೆಯ ಕ್ರೂರವ್ಯಂಗ್ಯ; ವಿಷಾದನೀಯ.
1 comment:
ರವಿಯವರೇ,
“ಆದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಈ Speedy ಅಳವಡಿಕೆಗೆ ಮತ್ತು ಎಷ್ಟೋ ಸಂಶೋಧನೆಗಳಿಗೆ ಯುದ್ಧವೇ ಕಾರಣವಾಗುವುದು ಮಾತ್ರ ಚರಿತ್ರೆಯ ಕ್ರೂರವ್ಯಂಗ್ಯ; ವಿಷಾದನೀಯ.”
ನಿಮ್ಮ ಮಾತು ನಿಜ. ಆವಶ್ಯಕತೆಗಳೇ ಸಂಶೋಧನೆಗಳ ತಾಯಿ ಎಂದು ಹೇಳಿಲ್ಲವೇ? ದೇಶವೊಂದಕ್ಕೆ ಅಪಾಯ ಎದುರಾದಾಗಲೇ ಅದರ ಜನರ ಗರಿಷ್ಟ ಮಟ್ಟದ ಸಾಧನೆ ವ್ಯಕ್ತವಾಗಿವುದು.
Post a Comment