Feb 20, 2008

ಸಂಸ್ಕಾರ ಕಲಿಯದವರು ಮಾಡುವ ತಿಥಿ ಪಾಠ...

(ವಿಕ್ರಾಂತ ಕರ್ನಾಟಕ - ಫೆಬ್ರವರಿ 29, 2008 ರ ಸಂಚಿಕೆಯಲ್ಲಿನ ಬರಹ)

ಒಂದೆರಡು ವಾರದ ಹಿಂದೆ ಮಂಗಳೂರು ವಿಶ್ವವಿದ್ಯಾಲಯದ ಹಿಂದಿ ಭಾಷೆಯ ಬೃಹಸ್ಪತಿಗಳು ಕನ್ನಡದಿಂದ ಹಿಂದಿಗೆ ಅನುವಾದಗೊಂಡಿರುವ ಸಂಸ್ಕಾರ ಕಾದಂಬರಿಯನ್ನು ನಾನ್-ಡಿಟೈಲ್ಡ್ ಪಠ್ಯವಾಗಿ ತರಗತಿಯಲ್ಲಿ ಬೋಧಿಸಲು ಮುಜುಗರವಾಗುತ್ತದೆ ಎಂದು ತಕರಾರು ತೆಗೆದಿದ್ದರು. ಬಹುಶಃ ಆ ತಕರಾರಿಗೆ ಅನೇಕ ಆಯಾಮಗಳಿರಬಹುದು. ಆ ಎಲ್ಲಾ ಆಯಾಮಗಳ ಮಧ್ಯೆಯೂ ವಿಶ್ವವಿದ್ಯಾಲಯದ ಶಿಕ್ಷಣ ಮಂಡಳಿ ಆ ತಕರಾರನ್ನು ತಾತ್ಕಾಲಿಕವಾಗಿ ತಳ್ಳಿ ಹಾಕಿತು. ಆದರೆ, ಕರ್ನಾಟಕದ ಯಾವುದೆ ದಿನಪತ್ರಿಕೆಯಾಗಲಿ, ಯಾವೊಬ್ಬ ಶಿಕ್ಷಣ ತಜ್ಞರಾಗಲಿ, ಕೊನೆಗೆ ಯಾವೊಬ್ಬ ಪ್ರಮುಖ ಸಾಹಿತಿಯಾಗಲಿ ಆ ವಿಷಯದ ಮೂಲಕ್ಕೆ ಹೋಗಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾಗಲಿ, ಚರ್ಚಿಸಿದ್ದಾಗಲಿ ಇಲ್ಲಿಯವರೆಗೆ ಕಂಡುಬರಲಿಲ್ಲ. ನಾಡು ತನ್ನೆಲ್ಲ ಸೂಕ್ಷ್ಮತೆಗಳನ್ನು, ನಿಷ್ಠುರತೆಯನ್ನು, ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಒಂದು ಸ್ಪಷ್ಟ ಯೋಚನೆಯನ್ನು ಕಳೆದುಕೊಳುತ್ತಿರುವುದನ್ನು ಇಂತಹ ಹಲವಾರು ಘಟನೆಗಳು ಪ್ರತಿಪಾದಿಸುತ್ತವೆ. ಯಾವುದು ಪ್ರಮುಖವಾಗಿ ಚರ್ಚೆಯಾಗಬೇಕೊ ಅವು ಚರ್ಚೆಯಾಗುತ್ತಿಲ್ಲ. ಯಾವುದು ದೀರ್ಘ ಚರ್ಚೆಗೆ ಅನರ್ಹವೊ ಅವು ವಾರಗಟ್ಟಲೆ ಮುಖಪುಟದಲ್ಲಿ ರೋಚಕ ತಲೆಬರಹಗಳೊಂದಿಗೆ ಚರ್ಚೆಗೊಳಪಡುತ್ತಿವೆ.

ಈ ವಿವಾದದಲ್ಲಿ ನನಗನ್ನಿಸಿದ ಮಟ್ಟಿಗೆ ಇಡೀ ಕರ್ನಾಟಕದಲ್ಲಿ ಯಾವೊಬ್ಬ ಚಿಂತಕನೂ ಎತ್ತದ, ಯಾವುದೆ ಕನ್ನಡ ಪತ್ರಿಕೆಯಲ್ಲಿ ಪ್ರಸ್ತಾಪವಾಗದ ಪ್ರಶ್ನಾ-ಚಿಂತನೆಗಳನ್ನು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿರುವ ಕನ್ನಡಿಗರೊಬ್ಬರು ಚುರುಮುರಿ.ಕಾಮ್ ಎಂಬ ಇಂಗ್ಲಿಷ್ ಬ್ಲಾಗಿನಲ್ಲಿ ವಾರದ ಹಿಂದೆಯೆ ಎತ್ತಿದ್ದಾರೆ. ಮೈಸೂರಿನ ಡಾ. ಪೃಥ್ವಿ ದತ್ತ ಚಂದ್ರ ಶೋಭಿ ನಮ್ಮ ಪತ್ರಿಕೆಯ ಓದುಗರಿಗೂ ಪರಿಚಿತರೆ. ಇವರ ತಂದೆ ಮತ್ತು ತಾಯಿ ಇಬ್ಬರೂ ಕಾಲೇಜು ಅಧ್ಯಾಪಕರು. ಇವರ ತಂದೆ ಎನ್. ಬೋರಲಿಂಗಯ್ಯನವರು ಮೈಸೂರಿನ ಯುವರಾಜ ಕಾಲೇಜಿನ ಪ್ರಿನ್ಸಿಪಾಲರಾಗಿ ನಿವೃತ್ತರಾದವರು. ಇವರ ತಾಯಿ ಶ್ರೀಮತಿ ಸರಸ್ವತಿ ಮೈಸೂರಿನ ಹಲವಾರು ಕಾಲೇಜುಗಳಲ್ಲಿ ಕನ್ನಡ ಸಾಹಿತ್ಯ ಬೋಧಿಸಿದವರು. ಪೃಥ್ವಿಯೂ ಚರಿತ್ರೆ, ಸಾಹಿತ್ಯ ಮತ್ತು ಮಾನವಿಕ ಶಾಸ್ತ್ರಗಳ ಅಧ್ಯಾಪಕರು. "ಸಂಸ್ಕಾರ ಒಂದು ಅತ್ಯುತ್ತಮ ಕಾದಂಬರಿಯಾಗಿದ್ದರೂ ವಿದ್ಯಾರ್ಥಿಗಳಿಗೆ ಅನುವಾದಿತ ಕೃತಿಯೊಂದನ್ನು ಹಿಂದಿ ಭಾಷೆಯ ಪಠ್ಯವಾಗಿ ಮಾಡುವ ದರ್ದು ಏನಿದೆ? ಶ್ರೀಲಾಲ್ ಶುಕ್ಲರಂತಹ ಹಿಂದಿ ಲೇಖಕರ ಪುಸ್ತಕವೊಂದನ್ನು ಪಠ್ಯವಾಗಿ ಇಟ್ಟಿದ್ದರೆ ಅದು ಹೆಚ್ಚು ವಿದ್ಯಾರ್ಥಿ ಪರವಾಗಿರುತ್ತಿತ್ತು," ಎನ್ನುವ ಪೃಥ್ವಿ ಮುಂದಕ್ಕೆ ಹೇಳುವ ಮಾತುಗಳು ನಮ್ಮ ಶೈಕ್ಷಣಿಕ ವ್ಯವಸ್ಥೆಯ ಮೂಲಸಮಸ್ಯೆಯತ್ತ ಬೆರಳು ತೋರುತ್ತದೆ.

"ನಮ್ಮ ಕಾಲೇಜು ಅಧ್ಯಾಪಕರು ಒಂದು ಕಾದಂಬರಿಯನ್ನು ಬೋಧಿಸುವ ವಿಧಾನದಿಂದಾಗಿಯೆ ಈ ವಿವಾದ ತಲೆಯೆತ್ತಿದೆ ಎಂದುಕೊಳ್ಳುತ್ತೇನೆ. ನಾನು ಇದನ್ನು ತಮಾಷೆಯಾಗಿ ಬರೆಯುತ್ತಿಲ್ಲ. ಏನೆಂದರೆ, ನಮ್ಮ ಬಹಳಷ್ಟು ಅಧ್ಯಾಪಕರು ಕಾದಂಬರಿಯ ಪ್ರತಿ ವಾಕ್ಯವನ್ನೂ ಓದುತ್ತಾರೆ ಮತ್ತು ಆ ವಾಕ್ಯವನ್ನು ವಿವರಿಸುತ್ತಾರೆ. ಕಾದಂಬರಿಯೊಂದನ್ನು ಈ ರೀತಿ ಬೋಧಿಸುತ್ತ ಸಮಯ ಕೊಂದುಬಿಡುತ್ತಾರೆ. ಹಾಗೆಯೆ ವಿದ್ಯಾರ್ಥಿಗಳೂ ಪರೀಕ್ಷೆಗೆ ಮುಂಚೆ ಏನನ್ನೂ ಓದುವುದಿಲ್ಲ. ಯಾವುದನ್ನೂ ಮೊದಲೆ ಓದಿಕೊಳ್ಳದೆ, ಪೂರ್ವಸಿದ್ಧತೆಯಿಲ್ಲದೆ ತರಗತಿಗೆ ಬರುತ್ತಾರಾದ್ದರಿಂದ ಚರ್ಚೆ ಮಾಡುವುದು ಅಸಾಧ್ಯವಾಗಿಬಿಡುತ್ತದೆ. ಭಾಷೆ ವಿಷಯಕ್ಕೆ ಯಾವುದೆ ಪ್ರಾಕ್ಟಿಕಲ್ಸ್ ಇಲ್ಲ ನೋಡಿ. ಹಾಗಾಗಿ ಏನೂ ಮಾಡದೆ ಅವರೂ ಬಚಾವಾಗಿಬಿಡಬಹುದು.

"ನಾನು ಸಂಸ್ಕಾರವನ್ನು ಬೋಧಿಸುವಾಗ ಆ ಕಾದಂಬರಿಯ ಮೇಲೆ ಅಬ್ಬಬ್ಬ ಎಂದರೆ 3-6 ಗಂಟೆ ಮಾತ್ರ ವ್ಯಯಿಸುತ್ತೇನೆ. ನನ್ನ ವಿದ್ಯಾರ್ಥಿಗಳು ಅದನ್ನು ಮೊದಲೆ ಓದಿರಬೇಕು. ಆಮೇಲೆ ಏನಿದ್ದರೂ ಅದರಲ್ಲಿರುವ ವಿಷಯಗಳ ಬಗ್ಗೆ ಚರ್ಚೆ ಮಾತ್ರ. ಹೌದು, ಆ ಚರ್ಚೆ ಪ್ರಾಣೇಶಾಚಾರ್ಯ ಮತ್ತು ಚಂದ್ರಿಯ ಸಂಬಂಧವನ್ನು ಕುರಿತೂ ಇರುತ್ತದೆ. ನಾನು ಗಂಡಸು ಎನ್ನುವ ವಿಷಯ ಮತ್ತು ನಾನು ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಿದ್ದೇನೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ ಎನ್ನುವುದೇನೊ ನಿಜ. ಹಾಗೆಯೆ ಇಲ್ಲಿ ಎತ್ತಲಾಗಿರುವ ಕೆಲವು ತಕರಾರುಗಳೂ ನನಗೆ ಅರ್ಥವಾಗುತ್ತವೆ.

"ತನ್ನ ಕನ್ನಡ ಸಾಹಿತ್ಯದ ತರಗತಿಯಲ್ಲಿ ಶಭರಶಂಕರವಿಲಾಸ ಅಥವ ಭರತೇಶವೈಭವ ವನ್ನು ಪಾಠ ಮಾಡಬೇಕಾಗಿ ಬಂದಾಗ ನನ್ನಮ್ಮ ವ್ಯಕ್ತಪಡಿಸುತ್ತಿದ್ದ ಕೆಲವು ಅಭಿಪ್ರಾಯಗಳು ನನಗೆ ನೆನಪಾಗುತ್ತವೆ. ಅದನ್ನು ಪಾಠ ಮಾಡಬೇಕಾಗಿ ಬಂದಾಗಲೆಲ್ಲ ಅವರಿಗೆ ಮುಜುಗರವಾಗುತ್ತಿತ್ತು. ಆದರೆ ಆ ಪರಿಸ್ಥಿತಿಯಿಂದ ಹಿಮ್ಮೆಟ್ಟದೆ, ಈ ಪಠ್ಯದಿಂದ ವಿದ್ಯಾರ್ಥಿಗಳು ಮುಖ್ಯವಾಗಿ ಏನನ್ನು ಕಲಿಯಬೇಕಾಗಿದೆ ಎನ್ನುವುದರತ್ತ ತಮ್ಮ ಗಮನವನ್ನು ಅವರು ಕೇಂದ್ರೀಕರಿಸುತ್ತಿದ್ದರು.

"ಕನ್ನಡ ಕಾವ್ಯಗಳನ್ನು ಬೋಧಿಸಿರುವ ಯಾವುದೆ ಅಧ್ಯಾಪಕಿಯನ್ನು ಕೇಳಿನೋಡಿ. ಕನ್ನಡ ಕವಿಗಳ ಶೃಂಗಾರ ರಸದ ವರ್ಣನೆ ಬಹುಪಾಲು ಸಮಯದಲ್ಲಿ ಸ್ತ್ರೀಯೊಬ್ಬಳ ದೇಹದ ವಿಶದ ವರ್ಣನೆ, ಇಲ್ಲವೆ ನಾಯಕನ ಲೈಂಗಿಕ ವಿಜೃಂಭಣೆ, ಇಲ್ಲವೆ ಅದೇ ತರಹದ ಮತ್ತೇನೋ ಆಗಿರುತ್ತದೆ. ಕನ್ನಡದ ಕಾವ್ಯ ಬೋಧನೆಯ ಅಗತ್ಯಗಳಲ್ಲಿ ಒಂದಾದ ಕವಿಕಲ್ಪನೆ ಮತ್ತು ಕಾವ್ಯದಲ್ಲಿ ಶೃಂಗಾರ ಬರುವ ರೀತಿಯನ್ನು ಅಧ್ಯಾಪಕಿಯೊಬ್ಬಳು ತನ್ನ ತರಗತಿಯಲ್ಲಿ ಚರ್ಚಿಸಬೇಕಾದರೆ ಆ ಎಲ್ಲಾ ಅಶ್ಲೀಲ ಪದ್ಯಗಳ ಕುರಿತು ಮಾತನಾಡಿರಬೇಕಿರುತ್ತದೆ.

"ಈ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಹಿಂದಿ ಅಧ್ಯಾಪಕರು ತಮ್ಮ ಸಂಕೋಚಗಳಿಂದ ಹೊರಬರುವಂತೆ ಆಗ್ರಹಿಸಲು ನನಗೆ ಮನಸ್ಸು ಬಹಳ ತುಡಿಯುತ್ತದೆ. ಆದರೆ ಬದಲಿಗೆ ಆ ಅಧ್ಯಾಪಕರು ತಮ್ಮ ಬೋಧನಾಕ್ರಮದ ಬಗ್ಗೆಯೆ ಮರುಚಿಂತನೆ ಮಾಡಬೇಕಾಗಿದೆ ಎಂದು ಹೇಳಬಯಸುತ್ತೇನೆ. ಅವರು ತರಗತಿಯಲ್ಲಿ ಈ ಅಶ್ಲೀಲ ಭಾಗಗಳನ್ನು ವಾಕ್ಯವೂ ಬಿಡದಂತೆ ಓದುವುದು ಹೇಗೆ ಎಂದು ತಲೆಕೆಡಿಸಿಕೊಳ್ಳದೆ, ಆ ಪಠ್ಯದ ವಿಷಯ ಮತ್ತು ಅದರ ಉದ್ದೇಶಗಳ ಬಗ್ಗೆ ಗಮನ ಹರಿಸಬೇಕಿದೆ.

"ಈಗ ಆ ಕಾದಂಬರಿಯಲ್ಲಿರುವ ಅಶ್ಲೀಲತೆ, ಸ್ತನಗಳ ಕುರಿತಿರುವ ಉಲ್ಲೇಖಗಳು ಮತ್ತು ಲೈಂಗಿಕತೆಯ ಅತಿವಿವರಣೆಯ ಬಗ್ಗೆ ಸ್ವಲ್ಪ ಚರ್ಚೆ ಮಾಡೋಣ. ಅವು ಬಂದಿರುವ ಸಂದರ್ಭಗಳು ಯಾವುದು? ಹಲವಾರು ವಿಷಯಗಳನ್ನು ಪ್ರತಿಪಾದಿಸುವ ಸಂಸ್ಕಾರ ಅತಿಮುಖ್ಯವಾಗಿ ಎರಡು ವಿಷಯಗಳನ್ನು ಪ್ರತಿಪಾದಿಸುತ್ತದೆ: ಮೊದಲನೆಯದು, ಜಾತಿಗಳನ್ನು ಮೀರಿದ ಲೈಂಗಿಕ ಸಂಪರ್ಕ ಮಾತ್ರ ಜಾತೀಯತೆಯನ್ನು ಒಡೆಯುತ್ತದೆ ಮತ್ತು ಎರಡನೆಯದು, ಶೂದ್ರ ಸ್ತ್ರೀಯೊಬ್ಬಳು (ಈ ವಿಷಯದಲ್ಲಿ ಚಂದ್ರಿ) ಅಪಾರ ಚೈತನ್ಯದ ಲೌಕಿಕ ಜನಾಂಗವೊಂದನ್ನು ಪ್ರತಿನಿಧಿಸುತ್ತಾಳೆ.

"ಈ ಕಾದಂಬರಿಯಲ್ಲಿ ತನ್ನ ಸಮುದಾಯವನ್ನು ಕಟುವಾಗಿ ಚಿತ್ರಿಸಿರುವುದರ ಕುರಿತು ಮಾಧ್ವ ಸಮುದಾಯ ಮೊದಲಿನಿಂದಲೂ ಅಸಂತೋಷದಿಂದಿರುವುದು ನಿಜವಾದರೂ ನನಗನ್ನಿಸಿದ ಮಟ್ಟಿಗೆ ಅನಂತಮೂರ್ತಿಯವರ ಕ್ರಾಂತಿಕಾರಿ ಒಳನೋಟಗಳು ಅಂತರ್ಜಾತೀಯ (ಲೈಂಗಿಕ) ಸಂಬಂಧಗಳನ್ನು, ಅವು ವೈವಾಹಿಕವಾಗಿರಲಿ ಇಲ್ಲವೆ ಅವಿವಾಹಿತವಾಗಿರಲಿ, ಸಮರ್ಥನೀಯ ಮಾಡುವುದು ಮತ್ತು ಪ್ರತಿಷ್ಠಾಪನೆ ಮಾಡುವುದಾಗಿತ್ತು. ಪ್ರಾಣೇಶಾಚಾರ್ಯ-ಚಂದ್ರಿಯರ ಸಂಬಂಧವನ್ನು ಪ್ರಮುಖವಾಗಿ ಈ ಸಾಮಾಜಿಕ ಅಗತ್ಯದ ಹಿನ್ನೆಲೆಯಿಂದ ನೋಡಬೇಕಿದೆ.

"ಹಾಗಾಗಿ, ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಮೀರಿಹೋಗಲು ಈ ರೀತಿಯಿಂದ (ಕೇವಲ ಲೈಂಗಿಕ ಸಂಪರ್ಕಗಳು ಮಾತ್ರ ಜಾತಿ ಬೇಲಿಗಳನ್ನು ಮುರಿಯಬಲ್ಲವು) ಸಾಧ್ಯ ಎಂಬ ಅನಂತಮೂರ್ತಿಯವರ ವಾದವನ್ನು ಮುಂದಿಟ್ಟುಕೊಂಡು ಅನಂತಮೂರ್ತಿಯವರೊಡನೆ ನಾವು ಸಂವಾದ ಮಾಡುತ್ತಿಲ್ಲವಾದರೆ, ಇನ್ನೇನನ್ನು ನಾವು ನಮ್ಮ ಯುವಕರೊಡನೆ ತರಗತಿಗಳಲ್ಲಿ ಚರ್ಚೆ ಮಾಡಬಲ್ಲೆವೊ ನನಗೆ ಗೊತ್ತಾಗುತ್ತಿಲ್ಲ.

"ಮಂಗಳೂರು ವಿಶ್ವವಿದ್ಯಾಲಯದ ಹಿಂದಿ ಅಧ್ಯಾಪಕರು ಈ ವಿಷಯಗಳನ್ನು ತಮ್ಮ ತರಗತಿಗಳಲ್ಲಿ ಎತ್ತುತ್ತಿಲ್ಲವಾದರೆ, ಅವರಿಗೆ ಸಂಸ್ಕಾರ ದಲ್ಲಿ ಕಾಣಿಸುವುದೆಲ್ಲ ಲೈಂಗಿಕ ಕ್ರಿಯೆಗಳ ವಿವರಣೆಗಳು ಮಾತ್ರವಾದರೆ ಹಾಗೂ ಅವರ ಚಿಂತೆಯೆಲ್ಲ ಇಂತಹ ಅಧ್ಯಾಯಗಳನ್ನು ಹೇಗಪ್ಪಾ ಪಾಠ ಮಾಡುವುದು ಎನ್ನುವುದೇ ಆದರೆ, ಅವರು ಯಾವುದಾದರೂ ಬೇರೆಯೆ ತರಹದ ಉದ್ಯೋಗವನ್ನು ಹುಡುಕಿಕೊಳ್ಳಬೇಕು.

"ಸಂಸ್ಕಾರ ಎತ್ತುವ ಕೆಲವೊಂದು ವಿಷಯಗಳು ನಮ್ಮ ಕಾಲದ ಹಲವಾರು ಅತಿಮುಖ್ಯ ಪ್ರಶ್ನೆಗಳು. ಅವುಗಳ ಬಗ್ಗೆ ನಮ್ಮ ಅಭಿಪ್ರಾಯಗಳು ಏನೇ ಇರಲಿ, ಅವನ್ನು ನಾವು ಎತ್ತಬೇಕು ಮತ್ತು ನಮ್ಮ ತರಗತಿಗಳಲ್ಲಿ ಅವುಗಳ ಬಗ್ಗೆ ಚರ್ಚಿಸಬೇಕು. ಆ ಸಮಯದಲ್ಲಿ ಒಬ್ಬ ಅಧ್ಯಾಪಕ ಜಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಂಡರೂ ಅಥವ ಬ್ರಾಹ್ಮಣ ಸ್ತ್ರೀಯರ ಬಗ್ಗೆ ಅಥವ ಮಾಧ್ವ ಸಮುದಾಯದ ಬಗ್ಗೆ ಅನಂತಮೂರ್ತಿಯವರ ಚಿತ್ರಣ ತಪ್ಪುತಪ್ಪಾಗಿದೆ ಎಂದು ಹೇಳಿದರೂ ನನಗದು ಮುಖ್ಯವಲ್ಲ. ಅದು ಖಂಡಿತವಾಗಿಯೂ ಸಮರ್ಥನೀಯವಾದದ್ದೆ. ಅದರೆ, ಈ ವಿಷಯಗಳನ್ನು 19-20 ವರ್ಷ ವಯಸ್ಸಿನ ಯುವಕಯುವತಿಯರ ಜೊತೆ ಭಾಷೆ ಮತ್ತು ಸಾಹಿತ್ಯದ ತರಗತಿಯಲ್ಲಿ ಚರ್ಚಿಸಲು ನಿರಾಕರಿಸುವುದನ್ನು ಮಾತ್ರ ಒಪ್ಪಿಕೊಳ್ಳಲಾಗದು. ಅದು ಆ ವಿದ್ಯಾರ್ಥಿಗಳಿಗೆ ಮಾಡುವ ಅಪಚಾರ ಮತ್ತು ಅವರ ಪ್ರಬುದ್ಧತೆ ಮತ್ತು ಸಾಮರ್ಥಗಳ ಕೀಳೆಣಿಕೆ ಮಾಡಿದಂತೆ.

"ಈ ವಿಷಯದಲ್ಲಿ ನನಗೆ ನೋವುಂಟು ಮಾಡುತ್ತಿರುವ ಸಂಗತಿ ಎಂದರೆ ಇಲ್ಲಿ ಎದ್ದು ಕಾಣಿಸುವ ಮಡಿವಂತಿಕೆ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಮತ್ತು ಇತರ ಅನೇಕ ಉತ್ತಮ ಕೃತಿಗಳಲ್ಲಿ ಕೂಡಾ ತಪ್ಪು ಹುಡುಕುವುದು ಇದೆ ಸಂಕುಚಿತ ಮನೋಭಾವ.

"What offends me is that we pick faltu fights over the real ones we ought to be concerned about. And this fight is as faltu as it gets."

---X---

ಈ ಪುಸ್ತಕವನ್ನು ಹಿಂದೆಗೆದುಕೊಳ್ಳಬಾರದು ಎನ್ನುವ ನಿರ್ಣಯ ಪ್ರಕಟಿಸಿರುವ ವಿಶ್ವವಿದ್ಯಾಲಯದ ಶಿಕ್ಷಣ ಮಂಡಳಿ ಇದ್ದುದರಲ್ಲಿ ಯೋಗ್ಯವಾದ ನಿರ್ಣಯವನ್ನೆ ತೆಗೆದುಕೊಂಡಿದೆ. ಆದರೆ ಹಾಗೆ ಹಿಂದೆಗೆದುಕೊಳ್ಳದೆ ಇರಲು ಆ ಮಂಡಳಿ ಕೊಟ್ಟಿರುವ ಒಂದು ಕಾರಣ, "ಈ ಹಂತದಲ್ಲಿ ಪುಸ್ತಕವನ್ನು ಹಿಂತೆಗೆದುಕೊಂಡರೆ ಅದರಿಂದ ಲೇಖಕರಿಗೆ ಅವಮಾನ ಮಾಡಿದಂತಾಗುತ್ತದೆ." ಎಂದು. ಇಂತಹ ಕಡುಪ್ರಾಮಾಣಿಕರನ್ನು ಪಡೆದ ನಾಡು ಧನ್ಯವಾಯಿತು! ಅಲ್ಲ, ಇವರ ನಿಷ್ಠೆ ಯಾರ ಕಡೆಗೆ ಇದೆ ನೋಡಿ. ವಿದ್ಯಾರ್ಥಿಗಳಿಗಾಗಲಿ, ಸಮಾಜಕ್ಕಾಗಲಿ, ಶಿಕ್ಷಣಕ್ಕಾಗಲಿ ಇವರ ನಿಷ್ಠೆ ಇಲ್ಲ. ಇವರ ನಿಷ್ಠೆ ಇರುವುದು ಲೇಖಕರಿಗೆ. ಒಂದು ಪ್ರಬುದ್ಧ ಸಮಾಜದಲ್ಲಿ, ಸತ್ಯದೊಡನೆ ಮುಖಾಮುಖಿಯಾಗಲು ಸಿದ್ಧವಿರುವ ವ್ಯವಸ್ಥೆಯಲ್ಲಿ ಒಬ್ಬ ಲೇಖಕನಿಗೆ ಈ ಮಾತಿಗಿಂತ ಬೇರೆಯ ಅವಮಾನ ಬೇರೊಂದು ಇರುವುದಿಲ್ಲ. ಇಂತಹ ಅನರ್ಹ ಶಿಕ್ಷಣ ಮಂಡಳಿಗಳು ಸಿದ್ಧಪಡಿಸುವ ಪಠ್ಯಗಳು ಮತ್ತು ಶಿಕ್ಷಣಕ್ರಮ ನಮ್ಮ ವಿದ್ಯೆ ಮತ್ತು ಚಿಂತನೆಯನ್ನು ಉದ್ದೀಪಿಸುವುದಿಲ್ಲ, ಬದಲಿಗೆ ನಮ್ಮನ್ನು ಪಾಳೆಯಗಾರಿಕೆ ಮತ್ತು ಕುರುಡು ಹಿಂಬಾಲಿಕೆಯತ್ತ ನಡೆಸುತ್ತದೆ.

ಲೇಖನದ ವಿಡಿಯೊ ಪ್ರಸ್ತುತಿ

ಸಂಸ್ಕಾರ ಎನ್ನುವ ಪದವನ್ನು ನಮ್ಮಲ್ಲಿ ಸಭ್ಯ, ನಾಗರಿಕ ವರ್ತನೆ ಅಥವ, ನಾಲ್ಕು ಜನರಿಗೆ ಅಪಚಾರ ಮಾಡದ, ಅಪಕಾರ ಮಾಡದ ನಡವಳಿಕೆ ಎನ್ನುವ ಅರ್ಥದಲ್ಲೂ ಬಳಸುತ್ತಾರೆ. ಹುಟ್ಟಿನ ಮೇಲೆ ಮನುಷ್ಯನ ಸಂಸ್ಕಾರವನ್ನು ಅಳೆಯಬಹುದು, ಹುಟ್ಟು ಮನುಷ್ಯನ ಸಂಸ್ಕಾರವನ್ನು ನಿರ್ಧರಿಸುತ್ತದೆ ಎನ್ನುವುದು ಹೀನಾಯ ಚಿಂತನೆ. ಮನುಷ್ಯ ತನ್ನ ಸುತ್ತಮುತ್ತಲ ಸಮಾಜದಿಂದ, ವ್ಯವಸ್ಥೆಯಿಂದ, ತಾನು ಬೆಳೆಸಿಕೊಳ್ಳುವ ಅರಿವಿನ ಪ್ರಭಾವದಿಂದ ತನ್ನ ಸಂಸ್ಕಾರವನ್ನು ಪಡೆಯುತ್ತಾನೆ. ಅಂದರೆ, ಸಂಸ್ಕಾರವನ್ನು ಕಲಿಯುತ್ತಾನೆ. ಇಂತಹ ಸಂಸ್ಕಾರವನ್ನು ಕಲಿತಿಲ್ಲದ ಕೆಲವು ಅಧ್ಯಾಪಕರು ಮಾಡುವ 'ಸಂಸ್ಕಾರ' ಕಾದಂಬರಿಯ ಪಾಠ, ಪಾಠವಲ್ಲ. ಬದಲಿಗೆ ಅದು ತಿಥಿಯ ಪಾಠ. ಹಾಗು ಪಾಠ ಕಲಿಸುವ ತಮ್ಮ ಸ್ವಧರ್ಮದ ತಿಥಿ.

2 comments:

Supreeth.K.S said...

ರವಿಯವರೆ ಒಳ್ಳೆಯ ಲೇಖನ, ನಮ್ಮ ಬಹುತೇಕ ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಈ ಸಂಗತಿ ಅಷ್ಟಾಗಿ ಚರ್ಚೆಗೆ ಬರದಿದ್ದರೂ ನಾನು ಗಮನಿಸಿದ ಹಾಗೆ ಕನ್ನಡ ಪ್ರಭದ ಸಾಪ್ತಾಹಿಕ ಪುರವಣೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು.

Anonymous said...

ಪ್ರಿಯ ರವಿ ಅವರೇ,

ಈ ವಿಷಯದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದಾದ ಸಹಜವಾಗಿ ಕುತೂಹಲ ಮೂಡಿತ್ತು, ಆದರೆ ನಾನು 'ಸಂಸ್ಕಾರ' ಓದಿಲ್ಲವಾದ್ದರಿಂದ ಹೆಚ್ಚಾಗಿ ಏನು ತಿಳಿಯಲಿಲ್ಲ. ನಿಮ್ಮ ಲೇಖನದಲ್ಲಿ ಸಂಸ್ಕಾರದ ಪ್ರತಿ ಆಯಾಮಕ್ಕೂ ಬೆಳಕು ಚಲ್ಲಿದ್ದಿರಿ ಅನ್ನೊದು ನನ್ನ ಅರಿವು. ಸಂಸ್ಕಾರವನ್ನ ಓದಿ ಪ್ರತಿಕ್ರಯಿಸುವೆ.

ವಂದನೆಗಳು,
-ಅಮರ