ಬೆಂಗಳೂರಿನ ಐಟಿ ಕ್ಷೇತ್ರದ ಸೋದರ ಸೋದರಿಯರೆ,
ನಿಮ್ಮಂತೆಯೆ ನಾನೂ ಒಬ್ಬ ಸಾಫ್ಟ್ವೇರ್ ಇಂಜಿನಿಯರ್. ನಾನು ನಿಮ್ಮ ಬೆಂಬಲವನ್ನು ಕೋರುತ್ತಿದ್ದೇನೆ. [www.ravikrishnareddy.com]
ಬೆಂಬಲ? ಯಾಕೆ?
"ಕರ್ನಾಟಕದ ರಾಜಕಾರಣದಲ್ಲಿ ಮೌಲ್ಯಗಳಿಗಾಗಿ..."
ಇತ್ತೀಚಿನ ದಿನಗಳಲ್ಲಿನ ಕರ್ನಾಟಕದಲ್ಲಿನ ರಾಜಕಾರಣದ ಕೀಳುಮನರಂಜನೆಯ ನಾಟಕವನ್ನು ಮತ್ತು ಸಂಪೂರ್ಣವಾಗಿ ಇಲ್ಲವಾಗಿಬಿಟ್ಟಿರುವ ರಾಜಕೀಯ ಮೌಲ್ಯಗಳನ್ನು ನೀವೆಲ್ಲ ನೋಡಿಯೇ ಇರುತ್ತೀರ ಎನ್ನುವುದು ನನ್ನ ಖಚಿತ ಅಭಿಪ್ರಾಯ. ಅಧಿಕಾರಲಾಲಸೆ, ಹಣ, ಜಾತಿ, ಮತ್ತು ಕೋಮು ಉನ್ಮಾದಗಳು ಚುನಾವಣಾ ರಾಜಕಾರಣದ ಮುಖ್ಯ ಭಾಗಗಳಾಗಿ ಹೋಗಿವೆ. ಬೆಂಗಳೂರು ನಗರವಂತೂ ರಿಯಲ್ ಎಸ್ಟೇಟ್ ಮತ್ತು ಗಣಿ ದೊರೆಗಳ ಒಡ್ಡೋಲಗವಾಗಿ ಹೋಗಿದೆ.
ಇಂತಹ ಪರಿಸ್ಥಿತಿಯಲ್ಲಿ, ಬರಲಿರುವ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ, ಯಾವ ಅಭ್ಯರ್ಥಿ ಹತ್ತಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿರುವನೊ ಅವನು ಮಾತ್ರ ಗೆಲ್ಲಲಿದ್ದಾನೆ. ಮತದಾರರಿಗೆ ಉಡುಗೊರೆಗಳನ್ನು ಕೊಟ್ಟರೆ ಮಾತ್ರ, ಕೀಳು ಮಟ್ಟದ ಜಾತಿ ಮತ್ತು ಕೋಮು ಭಾವನೆಗಳನ್ನು ಉದ್ಧೀಪಿಸಿದರೆ ಮಾತ್ರ, ಅಂತಿಮವಾಗಿ ನಮ್ಮನ್ನೆಲ್ಲ ಒಡೆದರೆ ಮಾತ್ರ ಅವನು ಗೆಲ್ಲಲಿದ್ದಾನೆ. ಅವನು ಚುನಾಯಿತನಾಗಲು ಇನ್ಯಾವುದೆ ಒಳ್ಳೆಯ ಸಕಾರಣಗಳು ಪರಿಗಣಿತವಾಗುವುದಿಲ್ಲ. ನಮ್ಮ ಜನರೇಷನ್ನಿನ ಮತ್ತು ನಮ್ಮ ಈ ಸಮಕಾಲೀನ ಸಂದರ್ಭದ ಸವಾಲುಗಳನ್ನು ಅರಿಯದ ಜನರೆ ಹೀಗೆ ಚುನಾಯಿತರಾಗಲಿದ್ದಾರೆ.
ಇವರು ಖರ್ಚು ಮಾಡಲಿರುವ ಪ್ರತಿಯೊಂದು ರೂಪಾಯಿಯೂ ಅನೈತಿಕವಾಗಿ ಸಂಪಾದಿಸಿದ, ಕಳ್ಳಮಾರ್ಗಗಳಿಂದ ಮಾಡಿದ, ಯಾವುದೆ ಲೆಕ್ಕಪತ್ರಗಳಿಲ್ಲದ, ಕಪ್ಪುಹಣ. ದುಡ್ಡಿರುವ ಜನ ಈ ಚುನಾವಣೆಯನ್ನು ಕೊಳ್ಳಲಿದ್ದಾರೆ. ಪ್ರತಿಯೊಂದು ರಾಜಕೀಯ ಪಕ್ಷವೂ ನೆಲದ ಕಾನೂನನ್ನು ಮತ್ತು ಜನಮತವನ್ನು ಉಲ್ಲಂಘಿಸಲಿವೆ ಮತ್ತು ಲೇವಡಿ ಮಾಡಲಿದೆ.
ಭಾರತ ದೇಶದ ಚುನಾವಣಾ ಆಯೋಗವು ವಿಧಾನಸಭೆಯ ಚುನಾವಣೆಗೆ ಒಬ್ಬ ಅಭ್ಯರ್ಥಿ ೧೫ ಲಕ್ಷ ರೂಪಾಯಿಗಳಗಿಂತ ಹೆಚ್ಚಿಗೆ ಖರ್ಚು ಮಾಡಬಾರದೆಂಬ ಕಾನೂನಿನ ಮಿತಿಯನ್ನು ವಿಧಿಸಿದೆ. ಅದರೆ, ಬಹುಪಾಲು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅದರ ಹತ್ತರಷ್ಟನ್ನು ಖರ್ಚು ಮಾಡಲಿದ್ದಾರೆ. ಮತ್ತು ಬೆಂಗಳೂರಿನಲ್ಲಂತೂ ಕೆಲವು ಅಭ್ಯರ್ಥಿಗಳು ಆ ಕಾನೂನು ಮಿತಿಯ ನೂರು ಪಟ್ಟಿಗಿಂತಲೂ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದಾರೆ. ಅನೈತಿಕವಾಗಿ ಮಾಡಿದ, ಲೆಕ್ಕಾಜಮಾ ಇಲ್ಲದ, ಕಪ್ಪುಹಣವನ್ನೆ ಇವರು ಖರ್ಚು ಮಾಡಲಿದ್ದಾರೆ ಮತ್ತು ಇನ್ನೂ ಹೆಚ್ಚಿಗೆ ಅದೇ ತರಹದ ಕೆಟ್ಟಹಣವನ್ನು ಸಂಪಾದಿಸುವ ಉದ್ದೇಶ ಹೊಂದಿದ್ದಾರೆ ಎನ್ನುವುದರ ಬಗ್ಗೆ ನೀವು ಯಾವುದೆ ಸಂಶಯ ಇಟ್ಟುಕೊಳ್ಳಬೇಡಿ. ಇದು ನ್ಯಾಯಯುತವಾದ ಚುನಾವಣೆಯಲ್ಲ. ಈ ವ್ಯವಸ್ಥೆಯಲ್ಲಿ, ಈ ಸಂದರ್ಭದಲ್ಲಿ, ಯಾವೊಬ್ಬ ಪ್ರಾಮಾಣಿಕ ಮನುಷ್ಯನೂ ಚುನಾವಣೆಗೆ ನಿಂತು ಗೆಲ್ಲಲಾರ.
ಮಾನವ ಇತಿಹಾಸದಲ್ಲಿ ಸಮಾನತೆ ಮತ್ತು ಪ್ರಜಾರಾಜ್ಯದ ಮೌಲ್ಯಗಳನ್ನು ಎತ್ತಿಹಿಡಿದ ಅತಿದೊಡ್ಡ ಮಹಾತ್ಮರಲ್ಲಿ ಒಬ್ಬನಾದ ಅಬ್ರಹಾಮ್ ಲಿಂಕನ್ ಒಮ್ಮೆ ಹೀಗೆ ಅಂದಿದ್ದಾನೆ: "ಪ್ರತಿಭಟಿಸಬೇಕಾದ ಸಮಯದಲ್ಲಿ ಮೌನವಾಗಿಬಿಡುವ ಪಾಪ ಕೆಲಸವನ್ನು ಮಾಡುವ ಮನುಷ್ಯರು ಹೇಡಿಗಳು."
ಈ ಸಂದರ್ಭದಲ್ಲಿ, ಭಾರತದ ನಾಗರಿಕರಾಗಿ, ನಮ್ಮ ಜವಾಬ್ದಾರಿಗಳು ತಾನೆ ಏನು? ಈ ಸವಾಲಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಕೇವಲ "ಬಾಯುಪಚಾರದ" ಮಾತುಗಳನ್ನು ಹೇಳುವ ಮೂಲಕವೆ? ಸಿನಿಕರಾಗಿ, ಸ್ವಾರ್ಥಿಗಳಾಗಿ ಇರುವುದರ ಮೂಲಕವೆ? ಅಥವ, ನಮ್ಮ ಹಕ್ಕುಗಳನ್ನು ಮತ್ತು ಜವಾಬ್ದಾರಿಗಳನ್ನು ತಿಳಿದುಕೊಂಡು, ಧರ್ಮಯುತವಾದ ಹಾದಿಯನ್ನು ತುಳಿಯುವುದರ ಮೂಲಕವೆ?
೩ ಲಕ್ಷಕ್ಕಿಂತಲೂ ಹೆಚ್ಚಿಗೆ ಇರುವ ಬೆಂಗಳೂರಿನ ಐಟಿ ಉದ್ಯೋಗಿಗಳು ಈ ಸಂದರ್ಭದಲ್ಲಿ ಏನು ಮಾಡಲಿದ್ದಾರೆ?
ನಾವು ಕೇವಲ ಸುಮ್ಮನೆ, ಸಂಬಂಧವಿಲ್ಲದ ರೀತಿಯಲ್ಲಿ ಇದ್ದುಬಿಡಲು ಸಾಧ್ಯವಿಲ್ಲ ಎಂದು ನಾನು ಖಚಿತವಾಗಿ ಭಾವಿಸುತ್ತೇನೆ. ಈಗ ನಾವು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಹೋದರೆ ಅದು ಬಹುದೊಡ್ಡ ಪಾಪಕಾರ್ಯ ಮತ್ತು ಅದು ನಾವು ಹುಟ್ಟಿಬೆಳೆದ, ನಾವು ದುಡಿದು ಜೀವನ ಸಾಗಿಸುತ್ತಿರುವ, ತೆರಿಗೆ ಕಟ್ಟುತ್ತಿರುವ, ನಮ್ಮ ಮಕ್ಕಳು ಬೆಳೆಯುತ್ತಿರುವ ಮತ್ತು ಅವರು ತಮ್ಮ ಜೀವನವನ್ನು ಕಳೆಯಲಿರುವ ಬೆಂಗಳೂರು ಮತ್ತು ಕರ್ನಾಟಕಕ್ಕೆ ಎಸಗುವ ದ್ರೋಹ ಎಂದು ನಾನು ಭಾವಿಸುತ್ತೇನೆ. ಕಳ್ಳರು, ಸುಳ್ಳರು, ಕ್ರಿಮಿನಲ್ಗಳು, ಸಮಾಜಘಾತುಕ ಶಕ್ತಿಗಳು, ಸಣ್ಣಮನಸ್ಸಿನ ಜನರೂ ನಮ್ಮ ಪ್ರತಿನಿಧಿಗಳಾಗುವುದನ್ನು ನಾವು ಭರಿಸಲು ಸಾಧ್ಯವೆ?
ನಾನು ಮೌನವಾಗಿ ಇದ್ದುಬಿಡಲು ನಿರ್ಧರಿಸಿಲ್ಲ. ನಾನು ನನ್ನ ಅಭಿಪ್ರಾಯವನ್ನು, ನಮ್ಮೆಲ್ಲರ ಅಭಿಪ್ರಾಯವನ್ನು ಎಲ್ಲರಿಗೂ ಕೇಳಿಸಬೇಕೆಂದು ನಿರ್ಧರಿಸಿದ್ದೇನೆ.
ನಾನು ಯಾರು?
ನನ್ನ ಹೆಸರು ರವಿ ಕೃಷ್ಣಾ ರೆಡ್ಡಿ. ೩೩ ವರ್ಷ ವಯಸ್ಸು. ನಾನು ಬೊಮ್ಮಸಂದ್ರ ಎಂಬ ಬೆಂಗಳೂರು ನಗರ ಜಿಲ್ಲೆಗೆ ಸೇರಿದ ಹಳ್ಳಿಯವನು. ನನ್ನ ಪ್ರಾಥಮಿಕ ಶಿಕ್ಷಣವನ್ನು ನಮ್ಮ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ, ಕನ್ನಡ ಮಾಧ್ಯಮದಲ್ಲಿ ಮಾಡಿದೆ. ನಂತರದ ದಿನಗಳಲ್ಲಿ ಬೆಂಗಳೂರಿನ ಯುವಿಸಿಇ ಇಂದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ನಲ್ಲಿ ಬಿಇ ಮತ್ತು ಎಮ್ಇ ಮಾಡಿದೆ. ಕಳೆದ ೬ ವರ್ಷಗಳಿಂದ ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ.
ನಾನು ಬೆಂಗಳೂರಿನಿಂದ ದೂರ ಇದ್ದರೂ, ಭಾರತದಲ್ಲಿ, ಅದರಲ್ಲೂ ಪ್ರಮುಖವಾಗಿ ಕರ್ನಾಟಕದಲ್ಲಿ ನಾವು ಎದುರಿಸುತ್ತಿರುವ ಸವಾಲುಗಳ ಬಗ್ಗೆ, ಮತ್ತು ಪ್ರಗತಿಪರ ವಿಷಯಗಳ ಬಗ್ಗೆ ಕನ್ನಡದಲ್ಲಿ ಬರೆಯುತ್ತ, ಚರ್ಚಿಸುತ್ತ ಬಂದಿದ್ದೇನೆ. ನನ್ನ ಬಹುಪಾಲು ಬರವಣಿಗೆಗಳು ಅಂತರ್ಜಾಲದಲ್ಲಿ ಪ್ರಕಟವಾಗಿದ್ದು, ಅವುಗಳ ಲಿಂಕ್ಗಳು ಈ ಬ್ಲಾಗಿನಲ್ಲಿ ಸಿಗುತ್ತವೆ.
೨೦೦೬ ರಲ್ಲಿ "ವಿಕ್ರಾಂತ ಕರ್ನಾಟಕ" ಎಂಬ ಕನ್ನಡ ವಾರಪತ್ರಿಕೆಯನ್ನೂ ಆರಂಭಿಸಿದೆ. ನನ್ನ ನಿಲುವು, ಕಾಳಜಿ, ಆಶಯ, ಆದರ್ಶಗಳನ್ನು ನನ್ನ ಲೇಖನಗಳನ್ನು ಓದುವುದರ ಮೂಲಕ ನೀವು ಅರ್ಥ ಮಾಡಿಕೊಳ್ಳಬಹುದು.
ಅಮೆರಿಕದಲ್ಲಿ ಸಿಲಿಕಾನ್ ಕಣಿವೆಯ ಕನ್ನಡ ಸಂಬಂಧಿ ಚಟುವಟಿಕೆಗಳಲ್ಲಿ ನಾನು ಸಕ್ರಿಯವಾಗಿ ಪಾಲ್ಗೊಳ್ಳುತ್ತ ಬಂದಿದ್ದೇನೆ. ಅಮೆರಿಕದಲ್ಲಿರುವ ಪ್ರಮುಖ ಕನ್ನಡ ಸಂಘಗಳಲ್ಲಿ ಒಂದಾದ "ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟ" ದ ಕಾರ್ಯದರ್ಶಿಯಾಗಿ (೨೦೦೪) ಮತ್ತು ಅಧ್ಯಕ್ಷನಾಗಿ (೨೦೦೫) ಸೇವೆ ಸಲ್ಲಿಸಿದ್ದೇನೆ.
ಬರಲಿರುವ ಚುನಾವಣೆಯಲ್ಲಿ ನಾನೇನು ಮಾಡಲಿದ್ದೇನೆ?
ನಾನು ಬೆಂಗಳೂರಿನ ಒಂದು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಅದು ಬಹುಶಃ ಜಯನಗರ ಅಥವ ಬಿ.ಟಿ.ಎಮ್ ಲೇಯೌಟ್ ಅಥವ ಅಂತಹುದೆ ಅತಿಹೆಚ್ಚು ವಿದ್ಯಾವಂತ ಜನರನ್ನು ಹೊಂದಿರುವ ಕ್ಷೇತ್ರವಾಗಲಿದೆ.
ರಾಜಕಾರಣದಲ್ಲಿ ಹೊಸತರಹದ ಸಂವಾದವನ್ನು ಆರಂಭಿಸುವ ನಿಟ್ಟಿನಲ್ಲಿನ ಒಂದು ಪ್ರಯತ್ನ ನನ್ನ ಈ ಉಮೇದುವಾರಿಕೆ. ಯಾವುದೆ ತರಹದ ಉದ್ಯಮ, ಜಾತಿ, ಕೋಮು, ಮುಂತಾದುವುಗಳ ಪ್ರಭಾವಕ್ಕೆ ಒಳಗಾಗದೆ, ಕರ್ನಾಟಕದ ಜನತೆಯನ್ನು ಪ್ರತಿನಿಧಿಸಲು ಯೋಗ್ಯವಾದ, ಕರ್ನಾಟಕದ ಶಾಸನಸಭೆಯಲ್ಲಿ ಚರ್ಚಿಸಲು ಮತ್ತು ಸಾರ್ವಜನಿಕ ಹಿತಾಸಕ್ತಿಯ ಯೋಜನೆಗಳನ್ನು ರೂಪಿಸುವ ಅಗತ್ಯವಾದ ಅರ್ಹತೆಗೆ ನನ್ನ ಜೀವನಾನುಭವಗಳು ನನ್ನನ್ನು ಸಿದ್ಧಪಡಿಸಿವೆ ಎಂದು ನಂಬಿದ್ದೇನೆ. ನಗರ ಕರ್ನಾಟಕದ, ಅದರಲ್ಲೂ ಮುಖ್ಯವಾಗಿ ಬೆಂಗಳೂರು ನಗರ ಎದುರಿಸುತ್ತಿರುವ ಸವಾಲುಗಳು ಪ್ರಾಮಾಣಿಕತೆ ಮತ್ತು ಹೊರಜಗತ್ತಿನ ಅನುಭವಗಳನ್ನು ಬಯಸುತ್ತದೆ.
ಈ ಚುನಾವಣೆಗೆ ಬೇಕಾಗುವ ಪೂರಾ ಹಣವನ್ನು ಸಾರ್ವಜನಿಕರಿಂದಲೆ, ಅದರಲ್ಲೂ ಮುಖ್ಯವಾಗಿ ನಾನು ಸುಲಭವಾಗಿ ಗುರುತಿಸಿಕೊಳ್ಳಬಹುದಾದ ಮತ್ತು ಅಧುನಿಕ ತಂತ್ರಜ್ಞಾನಗಳಿಂದ ಸುಲಭವಾಗಿ ಸಂಪರ್ಕ ಏರ್ಪಡಿಸಿಕೊಳ್ಳಲು ಸಾಧ್ಯವಿರುವ ಐಟಿ ಉದ್ಯೋಗಿಗಳಿಂದಲೆ ದೇಣಿಗೆ ಸಂಗ್ರಹಿಸಲು ತೀರ್ಮಾನಿಸಿದ್ದೇನೆ. ಚುನಾವಣೆಗೆಂದು ಗರಿಷ್ಠ ಮಿತಿಯಾದ ೧೫ ಲಕ್ಷವನ್ನಷ್ಟೆ ವೆಚ್ಚ ಮಾಡಲಿದ್ದೇನೆ. ಇದಕ್ಕಿಂತ ಹೆಚ್ಚಿನ ಹಣವನ್ನು ನಾವು ಸಂಗ್ರಹಿಸಲು ಸಾಧ್ಯವಾದರೆ ಅದನ್ನು ಕರ್ನಾಟಕದಾದ್ಯಂತ ಮೌಲ್ಯ ವ್ಯವಸ್ಥೆಯನ್ನು ಮತ್ತು ಪ್ರಜಾಪ್ರಭುತ್ವವನ್ನು ಬಲಗೊಳ್ಳಿಸಲು ಬಳಸಲಿದ್ದೇವೆ. ಪ್ರತಿ ದೇಣಿಗೆಯನ್ನೂ ವೆಬ್ಸೈಟಿನಲ್ಲಿ ಪ್ರಕಟಿಸಲಿದ್ದೇವೆ. ಪ್ರತಿಯೊಂದು ಪೈಸೆಗೂ ಲೆಕ್ಕ ಇರಲಿದೆ ಮತ್ತು ಪ್ರತಿ ಪೈಸೆಯೂ ಜವಾಬ್ದಾರಿಯಿಂದ ಮೌಲಿಕವಾಗಿ ಖರ್ಚು ಮಾಡಲ್ಪಡುತ್ತದೆ.
ಈ ನಿಟ್ಟಿನಲ್ಲಿನ ನನ್ನ ಪಯಣ ಏಪ್ರಿಲ್ ೧೪, ೨೦೦೮ ರಂದು ಆರಂಭವಾಗಲಿದೆ. ಆ ದಿನ ವಿಧಾನಸೌಧದ ಮುಂದೆ ಇರುವ ಭಾರತದ ಸಂವಿಧಾನದ ಶಿಲ್ಪಿಯಾದ ಡಾ. ಬಿ.ಆರ್. ಅಂಬೇಡ್ಕರ್ರವರ ಪ್ರತಿಮೆಗೆ ಗೌರವ ಸಲ್ಲಿಸುವುದರ ಮೂಲಕ ಆರಂಭವಾಗಲಿದೆ. ಅದಾದ ನಂತರ, ಈ ಉದ್ದೇಶವನ್ನು ಬೆಂಬಲಿಸಲಿರುವ ಸಮಾನ-ಮನಸ್ಕ ಸ್ನೇಹಿತರೊಡನೆ ಮತ್ತು ಹಿರಿಯರೊಡನೆ ಸಂವಾದದಲ್ಲಿ ತೊಡಗಿಕೊಳ್ಳಲಿದ್ದೇನೆ. ಅದೇ ವಾರದಲ್ಲಿ ಐಟಿ ಕ್ಷೇತ್ರದ ನನ್ನ ಸೋದರಸೋದರಿಯರಿಂದ ತನು-ಮನ-ಧನದ ಬೆಂಬಲವನ್ನು ಕೋರಿ ಎಲೆಕ್ಟ್ರಾನಿಕ್ ಸಿಟಿ, ಐಟಿ ಪಾರ್ಕ್, ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ಗಳಲ್ಲಿ ಓಡಾಡಲಿದ್ದೇನೆ.
ಏಪ್ರಿಲ್ ಕೊನೆಯ ವಾರದಲ್ಲಿ ಸಾರ್ವಜನಿಕ ಬದುಕಿನಲ್ಲಿ ಸಂಪೂರ್ಣ ಮೌಲ್ಯಗಳನ್ನು ಆಗ್ರಹಿಸಿ, "ಮೌಲ್ಯಾಗ್ರಹ"ದ ಹೆಸರಿನಲ್ಲಿ ಮೂರು ದಿನಗಳ ಉಪವಾಸ ಸತ್ಯಾಗ್ರಹವನ್ನು ಮಾಡಲಿದ್ದೇನೆ. "ನ್ಯಾಯಬದ್ಧ ಪ್ರಜಾಪ್ರಭುತ್ವ"ದಲ್ಲಿ ನಂಬಿಕೆಯಿರುವ ಮತ್ತು "ರಾಜಕಾರಣದಲ್ಲಿ ಮೌಲ್ಯ ಮತ್ತು ನೀತಿಗಳನ್ನು" ಬಯಸುವ ಸಮಾನಮನಸ್ಕರನ್ನು ಈ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಈ ಮೂಲಕ ಆಹ್ವಾನಿಸುತ್ತಿದ್ದೇನೆ.
ಅದಾದ ನಂತರ, ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಮತ್ತು ಬೆಂಗಳೂರಿನ ಇತರ ಭಾಗಗಳಲ್ಲಿ, ಸಾಧ್ಯವಾದರೆ ಕರ್ನಾಟಕದ ಇತರೆ ಕಡೆಗಳಲ್ಲಿಯೂ ಜನತೆಯೊಡನೆ ಸಂವಾದದಲ್ಲಿ ತೊಡಗಿಕೊಳ್ಳುತ್ತೇನೆ ಮತ್ತು ಅವರೊಡನೆ ನಮ್ಮ ಭವಿಷ್ಯದ ಬಗ್ಗೆ ಚರ್ಚಿಸಲಿದ್ದೇನೆ.
ಐಟಿ ಜನರು ಸ್ವಾರ್ಥಿಗಳು ಮತ್ತು ಸ್ವಂತದ್ದನ್ನು ಮಾತ್ರವೆ ಯೋಚಿಸುವವರು
ನಾನು ನನ್ನ ಈ ಯೋಜನೆಗಳನ್ನು ನನ್ನ ಸ್ನೇಹಿತರೊಡನೆ ಹಂಚಿಕೊಂಡಾಗ, ಅವರಲ್ಲಿ ಬಹುಪಾಲು ಜನ ಹೇಳಿದ್ದೇನೆಂದರೆ, "ಈ ಐಟಿಯವರನ್ನು ನಂಬಬೇಡಿ. ಅವರು ಸ್ವಂತದ್ದನ್ನು ಮಾತ್ರ ಯೋಚಿಸುವವರು ಮತ್ತು ಇತರೆ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದವರು. ಅವರು ನಿಮ್ಮನ್ನು ಬೆಂಬಲಿಸುವುದಿಲ್ಲ. ಅವರು ಬಂದು ನಿಮಗೆ ವೋಟು ಹಾಕುವುದಿಲ್ಲ. ಅವರು ಕೇರ್ ಮಾಡುವುದೆಲ್ಲ ಅವರ ಕೆಲಸ, ದುಡ್ಡು, ಮತ್ತು ಜೀವನದಲ್ಲಿನ ಲಕ್ಷುರಿಗಳ ಬಗ್ಗೆ ಮಾತ್ರ. ಅಕಸ್ಮಾತ್ ಏನಾದರೂ ಹೇಳಿದರೆ ಅದು ಕೇವಲ ಬಾಯುಪಚಾರದ ಮಾತು ಮಾತ್ರ." ...!? ಸ್ವತಃ ನಾನೂ ಸಾಫ್ಟ್ವೇರ್ ಇಂಜಿನಿಯರ್ ಆಗಿರುವುದರಿಂದ ಬಹುಪಾಲು ಸಮಯದಲ್ಲಿ ಆ ತರಹದ ಗುಣಾರೋಪಕ್ಕೆ ನನ್ನ ಅಸಮ್ಮತಿ ತೋರುತ್ತೇನೆ ಮತ್ತು ಆ ತರಹದ ಮಾತುಗಳು ತಲೆಬುಡ ಇಲ್ಲದವು ಎನ್ನುವುದನ್ನು ಸಾಬೀತು ಮಾಡಲು ಹೊರಡುತ್ತೇನೆ. ಈ ಸಂದರ್ಭದಲ್ಲಿ "ನಾವೂ ಕೂಡ ಸಂವಾದದಲ್ಲಿ ಪಾಲ್ಗೊಳ್ಳಬಲ್ಲೆವು ಮತ್ತು ನಮಗೂ ಸಾಮಾಜಿಕ ಜವಾಬ್ದಾರಿಗಳಿವೆ" ಎನ್ನುವುದನ್ನು ನಾವು ಸಾಮೂಹಿಕವಾಗಿ ಸಾಬೀತು ಪಡಿಸಬಲ್ಲವೆಂಬ ಆಶಾವಾದ ನನ್ನದು.
ಈ ಪಯಣದಲ್ಲಿ ನಾನು ಸಿನಿಕರಿಂದ ಲೇವಡಿಗೊಳಗಾಗುವದಷ್ಟೆ ಅಲ್ಲದೆ, ನನ್ನನ್ನು ವೈಯಕ್ತಿಕವಾಗಿ ತಿಳಿದಿಲ್ಲದವರಿಂದ, ನನ್ನ ಆದರ್ಶ, ನಿಲುವು, ಕಾಳಜಿ ಮತ್ತು ಸಿದ್ಧಾಂತಗಳನ್ನು ತಿಳಿದಿಲ್ಲದೆ ಇರುವವರಿಂದ ಅನೇಕ ತರಹದ ಪ್ರಶ್ನೆಗಳಿಗೆ ಮತ್ತು ಅನೇಕ ತರಹದ ಪರೀಕ್ಷೆಗಳಿಗೆ ಒಳಗಾಗಲಿದ್ದೇನೆ. ಇದು ಬಹಳ ಕಠಿಣವಾದ, ದುರ್ಗಮವಾದ ಪ್ರಯಾಣವಾಗಲಿದೆ. ಈ ಪ್ರಯಾಣ ಅನೇಕ ತರಹದ ವೈಯಕ್ತಿಕ ತ್ಯಾಗಗಳನ್ನು ಬಯಸಲಿದೆ.
ನನ್ನನ್ನು ಯಾಕೆ ಚುನಾಯಿಸಬೇಕು? ಚುನಾಯಿತನಾದರೆ ನಾನೇನು ಮಾಡುತ್ತೇನೆ?
ಇಷ್ಟು ದಿನವೂ ಕೆಟ್ಟವರಲ್ಲಿ ಕಡಿಮೆ ಕೆಟ್ಟವನನ್ನು ಚುನಾಯಿಸಿ ಎಂತಲೆ ಹೇಳಿಸಿಕೊಂಡಿದ್ದೇವೆ ನಾವು. ಈ ಉಪದೇಶದಿಂದಾಗಿಯೆ ನಾವು ನೀತಿ ಮತ್ತು ಮೌಲ್ಯಗಳಲ್ಲಿ ರಾಜಿಮಾಡಿಕೊಳ್ಳುವಚಿತಾಯಿತು ಎಂದು ನಾನು ಖಂಡಿತವಾಗಿ ಭಾವಿಸುತ್ತೇನೆ. ಅಷ್ಟೆ ಅಲ್ಲದೆ, ಇದು ಯಾವುದೆ ಕನಿಷ್ಠ ಮೌಲ್ಯಗಳಿಲ್ಲದ ರಾಜಕೀಯ ವ್ಯವಸ್ಥೆಯನ್ನು ಸೃಷ್ಟಿಸಿದೆ. ನಾವು ಇನ್ನು ಮುಂದೆ ಈ ದಾರಿಯನ್ನು ತುಳಿಯುವುದು ಬೇಡವೆ ಬೇಡ. ಪ್ರತಿಸಲವೂ, ಎಲ್ಲಾ ಕಡೆಯೂ ನಾವು ಸರಿಯಾದುದನ್ನು ಮಾಡೋಣ ಮತ್ತು ಸರಿಯಾದುದನ್ನೇ ಮಾಡೋಣ.
- ನೀವು ನಿಮ್ಮ ಕ್ಷೇತ್ರದಲ್ಲಿ ಕಾನೂನನ್ನು ಪಾಲಿಸಿದ, ನಿಮ್ಮ ಪರವಾಗಿ ಮತ್ತು ಎಲ್ಲರ ಪರವಾಗಿ ಹೋರಾಡಬಲ್ಲ, "ಸರಿಯಾದ" ಅಭ್ಯರ್ಥಿಯನ್ನು ಚುನಾಯಿಸಲು ಕೇಳಿಕೊಳ್ಳುತ್ತೇನೆ. ನಾನು ಚುನಾವಣೆಗೆ ನಿಲ್ಲಲಿರುವ ಕ್ಷೇತ್ರದ ಜನತೆಗೂ ನಾನು ಅದೇ ಅವಕಾಶವನ್ನು ಖಂಡಿತವಾಗಿಯೂ ಕಲ್ಪಿಸಲಿದ್ದೇನೆ. ನಾನು ಎತ್ತಲಿರುವ ವಿಷಯಗಳು, ಹೇಗೆ ಈ ಚುನಾವಣೆಯನ್ನು ಎದುರಿಸಲಿದ್ದೇನೆ, ಮತ್ತು ಹೇಗೆ ಸಮಸ್ಯೆಗಳಿಗೆ ಪರಿಹಾರ ಹುಡುಕಲಿದ್ದೇನೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ವಿಷದವಾಗಿ ಹಂಚಿಕೊಳ್ಳಲಿದ್ದೇನೆ.
- ಜನಪ್ರತಿನಿಧಿಯಾಗಿ ನನ್ನ ಜೀವನವನ್ನು ಕರ್ನಾಟಕದ ಜನತೆಯ ಶ್ರೇಯೋಭಿವೃದ್ಧಿಗೆ ಮುಡಿಪಾಗಿಡುತ್ತೇನೆ. ಈ "ಶ್ರೇಯೋಭಿವೃದ್ಧಿ" ಕೇವಲ ಆರ್ಥಿಕ ಅಭಿವೃದ್ಧಿ ಮಾತ್ರವಲ್ಲ, ಬದಲಿಗೆ ಅದು ಸಾಮಾಜಿಕ-ಆರ್ಥಿಕ-ಶೈಕ್ಷಣಿಕ-ತಂತ್ರಜ್ಞಾನಗಳನ್ನೊಳಗೊಂಡ ಸರ್ವತೋಮುಖ ಅಭಿವೃದ್ಧಿ. ಬರಲಿರುವ ದಿನಗಳಲ್ಲಿ ಭಾರತದ ಪಾತ್ರ ಮತ್ತು ಜವಾಬ್ದಾರಿಗಳು ಗಣನೀಯವಾಗಿ ಏರಲಿವೆ. ನಮಗೆ ಹುದ್ದೆ ಮತ್ತು ಅಧಿಕಾರದೊಂದಿಗೆ ಬರುವ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಳ್ಳುವ ಜನ ಬೇಕು. ನಮ್ಮ ಜನರನ್ನು ನಾವು ಆ ದಿಕ್ಕಿನಲ್ಲಿ ತಯಾರು ಮಾಡಬೇಕಿದೆ.
- ನಾನು ಕರ್ನಾಟಕದ ಜನತೆಯ ಶ್ರೇಯೋಭಿವೃದ್ಧಿಗೆ ಹೋರಾಡುತ್ತಿರುತ್ತೇನೆ. ಕೆಲವು ಶ್ರೀಮಂತರಿಂದ ಮತ್ತು ಅಧಿಕಾರವಿರುವವರಿಂದ ಯಾವಾಗಲೂ ಉಲ್ಲಂಘಿಸಲ್ಪಡುವ ಕಾನೂನುಗಳನ್ನು, ಅವರು ಇನ್ನು ಮುಂದೆ ಉಲ್ಲಂಘಿಸಲಾಗದಂತೆ, ಎಲ್ಲರೂ ಸಮಾನವಾಗಿ ನೆಲದ ಕಾನೂನನ್ನು ಪಾಲಿಸುವಂತಹ ನ್ಯಾಯಬದ್ಧ ವ್ಯವಸ್ಥೆಗಾಗಿ ಕಾನೂನು ವ್ಯವಸ್ಥೆಯೊಂದಿಗೆ ಕೂಡಿ ಕೆಲಸ ಮಾಡುತ್ತೇನೆ.
- ಶ್ರೀಮಂತರು ಮತ್ತು ಬಲಶಾಲಿಗಳು ಕ್ರಿಮಿನಲ್ ಕೆಲಸಗಳನ್ನು ಮಾಡಿಯೂ ಬಚಾವಾಗಿಬಿಡುವ ನಮ್ಮ ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಲು ಸೂಕ್ತ ಕಾನೂನುಗಳನ್ನು ರಚಿಸುವ ಕ್ರಿಯೆಯಲ್ಲಿ ಪಾಲುದಾರನಾಗುತ್ತೇನೆ.
- ನಮ್ಮ ಜನತೆ ಮತ್ತು ನಮ್ಮ ಜನಾಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ಶಾಸನಸಭೆಯಲ್ಲಿ ಯಾವಾಗಲೂ ಚರ್ಚೆಗೆ ಎತ್ತಿಕೊಳ್ಳುತ್ತೇನೆ ಮತ್ತು ಅವು ಪರಿಹಾರವಾಗುವ ನಿಟ್ಟಿನಲ್ಲಿ ತಾರ್ಕಿಕ ಅಂತ್ಯ ಕಾಣುವಂತೆ ಶ್ರಮಿಸುತ್ತೇನೆ.
- ಎಲ್ಲರಿಗೂ ಸಮಾನತೆ ಮತ್ತು ನ್ಯಾಯವನ್ನು ಒದಗಿಸುವ ಪ್ರಜಾಸತ್ತಾತ್ಮಕ, ಪ್ರಗತಿಪರ, ಉದಾರ ಮೌಲ್ಯಗಳ ಪರ ಹೋರಾಡುತ್ತೇನೆ.
- ನಾನು ಮಹಾತ್ಮ ಗಾಂಧಿಯ ದಾರಿಯನ್ನು, ಸತ್ಯ ಮತ್ತು ಧರ್ಮದ ಹಾದಿಯನ್ನು ಅನುಸರಿಸುತ್ತೇನೆ.
- ನಮ್ಮ ನೆಲದ ಅತ್ಯುತ್ತಮ ಚಿಂತಕರೊಡನೆ ಮತ್ತು ಸಾಮಾಜಿಕ ಕಾರ್ಯಕರ್ತರೊಡನೆ ನಾವು ಮುಂದಕ್ಕೆ ಅನುಸರಿಸಬೇಕಾದ ದಾರಿ ಮತ್ತು ಚಿಂತನೆಗಳ ಬಗ್ಗೆ ನಿಯಮಿತವಾಗಿ ಸಂವಾದದಲ್ಲಿ ತೊಡಗಿಕೊಂಡು ಅವರ ಸಹಯೋಗದೊಂದಿಗೆ ರೂಪುರೇಷೆಗಳನ್ನು ರೂಪಿಸುತ್ತೇನೆ.
- ನಮ್ಮ ಪ್ರೀತಿಯ ಭಾರತ ದೇಶದ ಸಂವಿಧಾನ ಸೂಚಿಸಿರುವಂತಹ ಪ್ರಜಾಪ್ರಭುತ್ವದ ನೈಜ ಸಿದ್ಧಾಂತಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ.
- ಜೀವನದ ಎಲ್ಲಾ ಅಂಗಗಳಲ್ಲಿಯೂ ನೀತಿಗೆ ಮತ್ತು ನ್ಯಾಯಕ್ಕೆ ಹೋರಾಡುವ ಎಲ್ಲರಿಗೂ ನನ್ನ ಬೆಂಬಲವನ್ನು ಕೊಡುತ್ತೇನೆ.
ನೀವು ಹೇಗೆ ತೊಡಗಿಕೊಳ್ಳಬಹುದು ಮತ್ತು ಬೆಂಬಲಿಸಬಹುದು:
ಈ ಚಳವಳಿಯ, ಪ್ರಕ್ರಿಯೆಯ ನಿಜ ಪಾಲುದಾರರು ನೀವುಗಳೆ. ನಿಮ್ಮ ದೇಣಿಗೆ ಹಣವನ್ನು ಮತ್ತು ಅಭಿಪ್ರಾಯಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ:
"ರವಿ ಕೃಷ್ಣಾ ರೆಡ್ಡಿ"
ನಂ. ೭೦೫, ೧೩ ನೇ ಕ್ರಾಸ್, ೩೨ ನೆ ಮುಖ್ಯರಸ್ತೆ,
ಜೆ.ಪಿ.ನಗರ ಮೊದಲ ಹಂತ
ಬೆಂಗಳೂರು - ೫೬೦೦೭೮
ದಯವಿಟ್ಟು "ರಾಜಕಾರಣದಲ್ಲಿ ಮೌಲ್ಯಗಳಿಗಾಗಿ" ಎಂದು ಚೆಕ್ನ ಕಾಮೆಂಟ್ ಬಾಕ್ಸಿನಲ್ಲಿ ಬರೆಯಿರಿ.
ನೀವು ಇಂಟರ್ನೆಟ್ ಮೂಲಕವೂ ಧನಸಹಾಯ ಮಾಡಬಹುದು: ಇಲ್ಲಿ ಕ್ಲಿಕ್ ಮಾಡಿ.
ದೇಣಿಗೆ ಕೊಡುವುದರ ಮೂಲಕ ನೀವು ಈ ನಿಬಂಧನೆಗಳನ್ನು ಒಪ್ಪಿಕೊಳ್ಳುತ್ತಿದ್ದೀರಿ:
೧. ನಿಮಗೆ ಕನಿಷ್ಠ ೧೮ ವರ್ಷ ವಯಸ್ಸಾಗಿದೆ ಮತ್ತು ನೀವು ಭಾರತದ ಪ್ರಜೆಯಾಗಿದ್ದೀರಿ.
೨. ಇದು ನಿಮ್ಮದೆ ಹಣ. ಇನ್ನೊಬ್ಬರ ಪರವಾಗಿ ನೀವು ಈ ದೇಣಿಗೆ ಕೊಡುತ್ತಿಲ್ಲ.
ವಿನಮ್ರ ಸೂಚನೆ: ಯಾವುದೆ ಅನಾಮಿಕ ದೇಣಿಗೆಯನ್ನು ಸ್ವೀಕರಿಸುವುದಿಲ್ಲ. ಎಲ್ಲಾ ಧನಸಹಾಯಗಳಿಗೂ ಲೆಕ್ಕಪತ್ರಗಳಿರುತ್ತವೆ ಮತ್ತು ಅದು ವೆಬ್ಸೈಟಿನಲಿ ಪ್ರಕಟಿಸಲ್ಪಡುತ್ತದೆ. ಅದು ಸೂಕ್ತ ಸಮಯದಲ್ಲಿ (ಒಂದೆರಡು ದಿನದಲ್ಲಿ) ಪ್ರಕಟವಾಗದೆ ಇದ್ದಲ್ಲಿ ದಯವಿಟ್ಟು ಸಂಪರ್ಕಿಸಿ.
ನಿಮಗೆ ಈ ಉದಾತ್ತವಾದ ಉದ್ದೇಶದಲ್ಲಿ ಮತ್ತು ಈ ಪ್ರಕ್ರಿಯೆಯಲ್ಲಿ ನೇರವಾಗಿ ಪಾಲ್ಗೊಳ್ಳುವ ಮನಸ್ಸಿದ್ದರೆ ದಯವಿಟ್ಟು ನಮಗೆ ಪತ್ರ ಅಥವ ಇಮೇಲ್ ಮಾಡಿ: volunteer@ravikrishnareddy.com
ಎಲ್ಲಾ ತರಹದ ಅಭಿಪ್ರಾಯಗಳಿಗೆ ಸ್ವಾಗತವಿದೆ. ದಯವಿಟ್ಟು ಈ ಇಮೇಲ್ಗೆ ಬರೆಯಿರಿ: feedback@ravikrishnareddy.com
"ಪ್ರತಿಭಟಿಸಬೇಕಾದ ಸಮಯದಲ್ಲಿ ಮೌನವಾಗಿಬಿಡುವ ಪಾಪ ಕೆಲಸವನ್ನು ಮಾಡುವ ಮನುಷ್ಯರು ಹೇಡಿಗಳು." - ಅಬ್ರಹಾಮ್ ಲಿಂಕನ್
"ಬಲವಿರುವುದು ಭಯವಿಲ್ಲದ ಮನಸ್ಥಿತಿಯಲ್ಲಿ; ನಮ್ಮ ದೇಹದಲ್ಲಿರುವ ಮಾಂಸ ಮತ್ತು ಖಂಡಗಳ ಗಾತ್ರದಲ್ಲಲ್ಲ." - ಮಹಾತ್ಮ ಗಾಂಧಿ
"ನೀವು ಈ ಜಗತ್ತಿನಲ್ಲಿ ಬಯಸುವ ಬದಲಾವಣೆ ಮೊದಲು ನಿಮ್ಮಿಂದಲೆ ಆಗಲಿ." - ಮಹಾತ್ಮ ಗಾಂಧಿ
4 comments:
ರವಿ,
ಬಡಬಡನೆ ನಿಮ್ಮ ಬರಹವನ್ನು ಓದು ಮುಗಿಸಿದೆ. ಒಂದು ಕ್ಷಣ ಅವಾಕ್ಕಾದೆ. ಮತ್ತೊಮ್ಮೆ ನಿಧಾನವಾಗಿ ಓದಿದೆ.
ಒಬ್ಬರಾದರೂ ಕೊನೆಗೆ ದನಿ ಎತ್ತಿದರಲ್ಲ ಅಂತ ಖುಶಿಯಾಯಿತು.
ನಾವೆಲ್ಲರೂ ನಿಮ್ಮೊಂದಿಗಿದ್ದೇವೆ.
-ಎಮ್.ಡಿ
ರವಿ ಅವರೇ,
ಎಲ್ಲರಿಗು ಪಕ್ಕದ ಮನೆಯವನೆ ಭಗತ್ ಸಿಂಗ್ ಆಗ್ಬೇಕು ಅನ್ನೋ ಈ ಕಾಲದಲ್ಲೂ ನಿಮ್ಮನ್ತವರೊಬ್ಬರು ಈ ರೀತಿಯ ಹೆಜ್ಜೆ ಇಡ್ತಾ ಇರೋದು ನಿಜಕ್ಕೂ ಶ್ಲಾಗನೀಯ. ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ ಇದ್ದೆ ಇದೆ .
Ullas
another like minded person.
http://kannadathinktank.blogspot.com/2008/04/blog-post_18.html
Mr Ravi....
proud to know that u have taken sucha step. i wish u all the best...
Post a Comment