(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 5, 2008 ರ ಸಂಚಿಕೆಯಲ್ಲಿನ ಲೇಖನ.)
ಮೂರು ವರ್ಷಗಳ ಹಿಂದೆ ಸ್ನೇಹಿತರೊಬ್ಬರು ಒಂದು ಕನ್ನಡ ಕಾದಂಬರಿಯನ್ನು ಓದಲು ತಂದುಕೊಟ್ಟರು. ನಾನೇನೂ ಕೇಳಿರಲಿಲ್ಲ. ಚೆನ್ನಾಗಿದೆ, ಓದಿ, ಎಂದು ಅವರೆ ಕೊಟ್ಟಿದ್ದು. ಆರಂಭಿಸಿದಾಗಿನಿಂದ ಬಹುಶಃ ಎಷ್ಟು ಸಾಧ್ಯವೊ ಅಷ್ಟು ಬೇಗ ಓದಿ ಮುಗಿಸಿದ ನೆನಪು. ಮಂಗಳೂರಿನ ಸುತ್ತಮುತ್ತ ಸ್ವಾತಂತ್ರ್ಯಪೂರ್ವದ ಸಮಯದಲ್ಲಿ ನಡೆಯುವ ಕತೆ ಅದು. ಬ್ರಾಹ್ಮಣರ ಮನೆಯ ಹುಡುಗಿಯೊಬ್ಬಳು ಮುಸ್ಲಿಂ ಯುವಕನನ್ನು ಪ್ರೇಮಿಸಿ ಮದುವೆಯೂ ಆಗುವ ಕತೆ. ಮಂಗಳೂರಿನ ಸುತ್ತಮುತ್ತ ಇವತ್ತು ಇರುವ ಜನಾಂಗದ್ವೇಷವನ್ನು ನೆನಸಿಕೊಂಡರೆ ಇವತ್ತಿನ ಸಂದರ್ಭದಲ್ಲಿ ಮೈನಡುಗಿಸುವ ಕಲ್ಪನೆ ಅದು. ಈ ಕತೆಗೆ ಹಿನ್ನೆಲೆಯಾಗಿ ಇರುವುದು ಗಾಂಧೀಜಿ ಮಂಗಳೂರಿಗೆ ಬರುವ ಎಳೆ. ಗಾಂಧೀಜಿಯ ಆಗಮನ ಯಾವಯಾವ ಜನವರ್ಗದಲ್ಲಿ ಯಾವಯಾವ ತರಹದ ತಲ್ಲಣಗಳನ್ನೂ, ಪಲ್ಲಟಗಳನ್ನೂ, ಮೌನಕ್ರಾಂತಿಯನ್ನೂ ಮಾಡುತ್ತದೆ ಎನ್ನುವುದನ್ನು ಅದ್ಭುತವಾಗಿ ತೋರಿಸುವ ಕಾದಂಬರಿ ಅದು. ಒಂದು ಐತಿಹಾಸಿಕ ಘಟನೆಯನ್ನು ಎಳೆಯಾಗಿ ಇಟ್ಟುಕೊಂಡು ಅದರ ಸುತ್ತ ಕಾದಂಬರಿ ಕಟ್ಟುವುದು ಕನ್ನಡದಲ್ಲಿ ಬಹಳ ಕಮ್ಮಿ. ಲೇಖಕರು ತೆಗೆದುಕೊಂಡ ವಿಷಯ, ಅದಕ್ಕೆ ಅವರು ಅಂತಿಮವಾಗಿ ಕೊಟ್ಟ ಅಂತ್ಯ, ಅವರ ಚಿಂತನೆಗಳು, ಆಲೋಚನೆಗಳು ಆದರ್ಶಪ್ರಾಯವಾದವು. ಅಲ್ಲಿಯವರೆಗೂ ನಾನು ಆ ಲೇಖಕರ ಹೆಸರನ್ನೇ ಕೇಳಿರಲಿಲ್ಲ ಎನ್ನುವುದು ನನಗೆ ಒಂದು ರೀತಿಯ ಅವಮಾನದ ವಿಷಯವಾಗಿಬಿಟ್ಟಿತು. ಆ ಕಾದಂಬರಿಯ ಹೆಸರು, "ಗಾಂಧಿ ಬಂದ." ಬರೆದವರು, "ತುಳುನಾಡಿನ ಹೆಣ್ತನದ ಸ್ವಾಭಿಮಾನಿ ದೇವತೆ 'ಸಿರಿ'ಯ ಖಾಸಾ ತಂಗಿಯಂತಿರುವ" ಎಚ್. ನಾಗವೇಣಿ.
ಎರಡು ತಿಂಗಳ ಹಿಂದೆ ನಡೆದ ಪದ್ಮಪ್ರಿಯಾರ ಪ್ರಕರಣ ನಿಮಗೆ ನೆನಪಿರಬಹುದು. ಈ ಪ್ರಕರಣ ಕರ್ನಾಟಕದಲ್ಲಿನ ನ್ಯಾಯಾಂಗ ಮತ್ತು ಪೊಲಿಸ್ ವ್ಯವಸ್ಥೆ ತನ್ನ ನೀಚ ಮಟ್ಟದಲ್ಲಿ ಇರುವುದನ್ನು ಎತ್ತಿ ತೋರಿಸಿದ್ದಷ್ಟೇ ಅಲ್ಲದೆ, ನಮ್ಮ ಸಮಾಜದಲ್ಲಿ ಪ್ರಗತಿಪರ ಚಿಂತನೆಗೆ ಯಾವ ಮಟ್ಟದ ಹಿನ್ನಡೆ ಆಗಿದೆ ಎನ್ನುವುದನ್ನೂ ತೋರಿಸಿತು. ಹೆಂಗಸೊಬ್ಬಳ ಆತ್ಮಹತ್ಯೆ ಪ್ರಕರಣದ ಮೂಲಕ ಇಡೀ ಸಮಾಜದ ಸದ್ಯದ ಪರಿಸ್ಥಿತಿಯ Snapshot ಕೊಟ್ಟ ಘಟನೆ ಅದು. ಆ ಸಮಯದಲ್ಲಿ ಕರ್ನಾಟಕದ ಅನೇಕ ಲೇಖಕರು ಹಲವಾರು ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ನನ್ನ ಪ್ರಕಾರ ಆ ಇಡೀ ಘಟನೆಗೆ ನಮ್ಮದೇ ನೆಲದ ಉದಾಹರಣೆಯೊಂದಿಗೆ ಸಮರ್ಥವಾದ ಉತ್ತರ ಮತ್ತು ತಾರ್ಕಿಕ ಪರಿಹಾರ ಕೊಟ್ಟವರು ಡಾ. ನಾಗವೇಣಿ. ಪದ್ಮಪ್ರಿಯರ ಪ್ರಕರಣವನ್ನು ವಿಶ್ಲೇಷಿಸುತ್ತ ಅವರು ಬರೆದ "ಹೆಣ್ಣಿಗೆ ಬೇಕೆ 'ದಾರಿದೀಪ'?" ಇಡೀ ನಾಡಿನ ಹೆಣ್ಣುಮಕ್ಕಳಿಗೆ ದಾರಿದೀಪವಾಗಬೇಕಿರುವ ಲೇಖನ. ಅದರಲ್ಲಿ ತುಳುನಾಡಿನ ಪಾಡ್ದನದ (ಜನಪದ ಮೌಖಿಕ ಕಾವ್ಯ) ಕತೆಯೊಂದನ್ನು ಉದಾಹರಿಸುತ್ತ ಸ್ವಾಭಿಮಾನಿ ಮತ್ತು ಸ್ವಾಯತ್ತ ಸಮಾಜದಲ್ಲಿ ಪದ್ಮಪ್ರಿಯ ಪ್ರಕರಣ ಹೇಗೆ ಕೊನೆಯಾಗಬೇಕಿತ್ತು ಎಂದು ಹೇಳುತ್ತಾರೆ. ಆ ಪಾಡ್ದನದ ಸ್ಥೂಲ ಕತೆ ಅವರದೆ ಬರವಣಿಗೆಯಲ್ಲಿ ಹೀಗಿದೆ:
"ಕೌಟುಂಬಿಕ ನಿಯತಿಯನ್ನು ಮುರಿದ ಗಂಡನಿಗೆ, ಹೆಂಡತಿ ಶಾಸ್ತ್ರ ಸಮ್ಮತವಾಗಿ ಬರ (ವಿಚ್ಚೇದನ) ಹೇಳಿ, ಆತನನ್ನು ತನ್ನ ಬದುಕಿನಿಂದ ಸಂಪೂರ್ಣ ನಿರಾಕರಿಸುವ ಮೂಲಕ -ಸಮಾಜದ ಸ್ಥಾಪಿತ ವ್ಯವಸ್ಥೆಯನ್ನು ಧಿಕ್ಕರಿಸಿ- ಮತ್ತೆ ಮರುಮದುವೆಯಾಗಿ ಸುಭದ್ರವಾದ ಹೊಸ ಬದುಕನ್ನು ರೂಪಿಸಿಕೊಳ್ಳುವಲ್ಲಿ, ತುಳುವ ಸಮಾಜದ ಮಹಿಳೆಯರಿಗೆ ಮಾದರಿಯಾಗಿ ನಿಂತವಳು- ಈ ಮೌಖಿಕ ಮಹಾಕಾವ್ಯದ ಸಾಂಸ್ಕೃತಿಕ ವೀರೆ ತುಳುನಾಡಿನ ಸಿರಿ.ಕನ್ನಡದ ಇವತ್ತಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ಅನೇಕ ಖಾಲಿ ಕೊಡಗಳು ವಿಪರೀತ ಎನ್ನುವಷ್ಟು ಗದ್ದಲ ಮಾಡುತ್ತಿವೆ. ಮೀಡಿಯೋಕರ್ಗಳೆಲ್ಲ ಸ್ಟಾರ್ಗಳಾಗಿ ಬಿಟ್ಟಿದ್ದಾರೆ. ಇದಕ್ಕೆ ಕಳೆದ ಒಂದೆರಡು ದಶಕಗಳಲ್ಲಿ ಬದಲಾಗಿರುವ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಜೊತೆಜೊತೆಗೆ ಹೊಸದಾಗಿ ಹುಟ್ಟಿರುವ ಓದುಗ ವರ್ಗವೂ ಕಾರಣ. ಇನ್ನೂ ಸ್ಪಷ್ಟ ಮಾಡಿಕೊಂಡಿಲ್ಲದ ಚಿಂತನೆಗಳ ಮತ್ತು ಪ್ರಬುದ್ಧವಾಗಿಲ್ಲದ ಆಲೋಚನೆಗಳ ಈ ಹೊಸ ಯುವ ಓದುಗ ವರ್ಗವನ್ನು ಪ್ರಭಾವಿಸುವ ಮತ್ತು ದಾರಿತಪ್ಪಿಸುವ ಒಂದು ದುಷ್ಟಕೂಟವೆ ಇವತ್ತು ಕನ್ನಡದಲ್ಲಿದೆ. ಸಾಮಾಜಿಕ ಕಾಳಜಿಗಳಾಗಲಿ, ಪ್ರಾಮಾಣಿಕ ಬದ್ಧತೆಯಾಗಲಿ ಇಲ್ಲದ ಈ ಜನರ ನಡುವೆ ನಮಗೆ ಇವೆಲ್ಲವೂ ಇರುವ ಲೇಖಕರು ಮುಖ್ಯವಾಗುತ್ತಾರೆ. ಹಾಗಾಗಿಯೆ, ಬಹುಶಃ ಕನ್ನಡದ ಹತ್ತು ಅತ್ಯುತ್ತಮ ಕಾದಂಬರಿಗಳಲ್ಲಿ ಒಂದನ್ನು ಬರೆದ ಡಾ. ನಾಗವೇಣಿಯವರು ಈ ಸಂದರ್ಭದಲ್ಲಿ ನಮಗೆ ಕಾದಂಬರಿಗಾರ್ತಿಯಾಗಿಯಷ್ಟೇ ಅಲ್ಲದೆ ಸಮಕಾಲೀನಕ್ಕೆ ಪ್ರತಿಕ್ರಿಯಿಸುವವರಾಗಿಯೂ ಪ್ರಸ್ತುತರು. ಅವರ "ವಸುಂಧರೆಯ ಗ್ಯಾನ" ಪುಸ್ತಕದಲ್ಲಿಯ "ಬರಿದಾಗುತ್ತಿರುವ ನನ್ನ ಪ್ರೀತಿಯ ಕಡಲು" ಲೇಖನ ನಮ್ಮ ರಾಜ್ಯದ ಹೈಸ್ಕೂಲು ಅಥವ ಕಾಲೇಜಿನ ತರಗತಿಗಳಲ್ಲಿ ಚರ್ಚಿಸಬೇಕಾದ ಲೇಖನ. ಲಿಂಗ, ಕೋಮು, ಮತ್ತು ವರ್ಣಭೇದಗಳನ್ನು ಮೀರಿದ ಉತ್ತಮವಾದ ಒಂದು ಸ್ವಾಭಿಮಾನಿ ಸಮಾಜ ಕಟ್ಟಲು ಇವರಂತಹ ಚಿಂತನಶೀಲ ಲೇಖಕರ ಅವಶ್ಯಕತೆ ಇಡೀ ಸಮಾಜಕ್ಕೆ ಎಂದಿಗೂ ಇರುತ್ತದೆ.
"ತುಳುವ ಸ್ತ್ರೀ ಸಮುದಾಯಕ್ಕೆ ಹೊಸ ಮೌಲ್ಯವನ್ನು ಕಟ್ಟಿಕೊಡುವ ಸಲುವಾಗಿಯೇ ಈ ಸಮಾಜಕ್ಕೆ ಒಂದು ಮೌಲ್ಯವಾಗಿ ಕಾಣಿಸಿಕೊಂಡ ಸಿರಿ- ಗಂಡನ ವಿಷಯಲಂಪಟತನವನ್ನು ಸಾರ್ವಜನಿಕವಾಗಿ ಪ್ರಶ್ನಿಸಿ ಪ್ರತಿಭಟಿಸಿ, ಸಾಮಾಜಿಕ ನ್ಯಾಯಪಂಚಾಯತಿಯ ಸಂದರ್ಭದಲ್ಲಿ ಕೈ ಹಿಡಿದ ಗಂಡನೇ ಎದುರಾಳಿ ಪಕ್ಷದ ಪರವಹಿಸಿ, ಹೆಂಡತಿಗೇ ದ್ರೋಹ ಬಗೆದಾಗ ಆ ನೀತಿಗೆಟ್ಟ ಗಂಡನಿಗೆ ಆ ದಿನವೇ ವಿಚ್ಛೇದನ ನೀಡಿ, ಆತನ ಪೌರುಷಕೆ ಸವಾಲೆಸೆದು..... ಮರುಮದುವೆಯಾಗುವ ಮೂಲಕ, ಅಲಕ್ಷಿತ ಸಮುದಾಯದಲ್ಲಿ ಆಕೆ ಒಂದು ಹೊಸ ಮಾದರಿ ವ್ಯವಸ್ಥೆಯನ್ನು ನಿರ್ಮಿಸಿದ ಪರಿ... ಈ ಪಾಡ್ದನದ ಕಥಾ ಹಂದರದಲ್ಲಿ (ಅದೆಷ್ಟು) ದಿಟ್ಟವಾಗಿ ಅರಳಿದೆ....."
ಆದರೆ, ಇತ್ತೀಚಿನ ದಿನಗಳಲ್ಲಿ ನನ್ನಲ್ಲಿ ಅಪಾರವಾದ ಹೆಮ್ಮೆ ಮತ್ತು ಆತ್ಮವಿಮರ್ಶೆಯನ್ನು ಹುಟ್ಟಿಸಿದ, ನನ್ನ ಮಗಳಿಗೂ ವೈಚಾರಿಕ ಆದರ್ಶವಾಗಬೇಕೆಂದು ನಾನು ಬಯಸಿದ ಈ ನನ್ನ ಮೆಚ್ಚಿನ ಲೇಖಕಿಯೊಂದಿಗೆ ಸಹಮತವಾಗದ ವಿಚಾರಧಾರೆ ಅವರು ಕಳೆದ ವಾರ ಪತ್ರಿಕೆಯ "ಸ್ತ್ರೀಮತ" ಅಂಕಣಕ್ಕೆ ಬರೆದ "ಸ್ನೇಹಕ್ಕೆ ಬೇಕಿಲ್ಲ ಸಂಬಂಧಗಳ ಕವಚ." ಇಡೀ ರಾಜ್ಯದ "ಮಹಿಳಾ ಸಂಕುಲದ ಏಕೈಕ ಪ್ರತಿನಿಧಿಯಾಗಿ ಸಂಪುಟದಲ್ಲಿರುವ" ಶೋಭಾ ಕರಂದ್ಲಾಜೆ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ನೇಹದ ಬಗ್ಗೆ ಬರೆಯುತ್ತ ಅವರು ಸಮರ್ಥಿಸಿಕೊಳ್ಳುವ ವ್ಯಕ್ತಿ ಮತ್ತು ವಿಚಾರಗಳು ಗಾಬರಿ ಹುಟ್ಟಿಸುವಂತಹವು. ದುರಂತ ಏನೆಂದರೆ, ಯಾವಯಾವುದನ್ನು ಶೋಭಾರವರು ಮಂತ್ರಿಯಾಗಿದ್ದುಕೊಂಡು ಮಾಡಬೇಕು ಎಂದು ಸ್ತ್ರೀಸಂಕುಲದ ಪರವಾಗಿ ನಾಗವೇಣಿಯವರು ಆಶಿಸುತ್ತಾರೊ ಅದನ್ನು ಮಾಡಲಾಗದ ಸ್ಥಿತಿಯಲ್ಲಿ ಶೋಭಾರವರು ಇರುವುದು. ಅದಕ್ಕೆ ಅವರು ಹೆಣ್ಣು ಎಂಬುದು ಕಾರಣವಲ್ಲ. ಬದಲಿಗೆ ಅವರಿಗಿಲ್ಲದ ವೈಚಾರಿಕತೆ ಮತ್ತು ಅರ್ಹತೆ. ಅವೆರಡೂ ಅವರಿಗೆ ಇದ್ದಿದ್ದೆ ಆದರೆ ಅವರು ಇವತ್ತು ಇರುವ ಉತ್ತಮ ಸ್ಥಿತಿಯಲ್ಲಿ (ಅಧಿಕಾರ) ಮತ್ತು ಕೆಟ್ಟ ಸ್ಥಿತಿಯಲ್ಲಿ (ಸಂಪುಟದಲ್ಲಿಯ "ಏಕೈಕ" ಮಹಿಳೆ ಎಂಬ ಅವಮಾನಕಾರಿ ಹೆಗ್ಗಳಿಕೆ ಮತ್ತು ಅಸಮಾನತೆ ಬೋಧಿಸುವ ಫ್ಯಾಸಿಸ್ಟ್ ಸಿದ್ಧಾಂತ) ಇರುತ್ತಿರಲಿಲ್ಲ.
ಯಡಿಯೂರಪ್ಪನವರ ಜೊತೆ ಅವರಿಗೆ ಇರಬಹುದಾದ ಅಥವ ಇಲ್ಲದಿರಬಹುದಾದ ಸಂಬಂಧವನ್ನು ಬದಿಗಿಟ್ಟು ಮಂತ್ರಿಯಾದಾಗಿನಿಂದ ಶೋಭಾರವರ ಕಾರ್ಯವೈಖರಿಯನ್ನು ನೋಡಿದರೂ ಅವರಲ್ಲಿ ಎದ್ದು ಕಾಣಿಸುವುದು ಅವೈಜ್ಞಾನಿಕ ಮತ್ತು ಅಪ್ರಜಾಸತ್ತಾತ್ಮಕ ನಡವಳಿಕೆ. ಮೈಸೂರು ದಸರಾ ವಿಷಯದಲ್ಲಿ ಅವರ ಹೇಳಿಕೆಗಳನ್ನು ಮತ್ತು ದೇಶವಿದೇಶಗಳ ಮಹಾರಾಜರನ್ನು ಕರೆದು ಸನ್ಮಾನಿಸುವಂತಹ ಕ್ರಾಂತಿಕಾರಿ ಆಲೋಚನೆಗಳನ್ನು ಕೇಳಿದಾಗ ಅವರಿಗೆ ಇರಬಹುದಾದ ಪ್ರಾಥಮಿಕ ಜ್ಞಾನದ ಬಗ್ಗೆಯೇ ಸಂಶಯ ಬರುತ್ತದೆ. ಇಂತಹವರನ್ನು ನಮ್ಮ ನಾಡಿನ ಹೆಣ್ಣುಮಕ್ಕಳ ಆಶಾಕಿರಣ ಎಂದು ಭಾವಿಸಿಬಿಟ್ಟರೆ ನಿಜಕ್ಕೂ ನಾವು ಹಿಮ್ಮುಖವಾಗಿ ಚಲಿಸುತ್ತಿದ್ದೇವೆ.
ಇಷ್ಟಕ್ಕೂ ನಮ್ಮ ನಾಡಿನ ಹೆಣ್ಣುಮಕ್ಕಳಿಗೆ ರಾಜಕೀಯದಲ್ಲಿ ಆದರ್ಶವಾಗಬೇಕಾದವರು, ಸ್ಫೂರ್ತಿಯಾಗಬೇಕಾದವರು ಅನೇಕರಿದ್ದಾರೆ. ಶೋಭಾರವರಿಗಿಂತ ಮೊದಲೆ ಅನೇಕ ಮಹಿಳೆಯರು ಕರ್ನಾಟಕದಲ್ಲಿ ಮಂತ್ರಿಗಳಾಗಿ, ಸಭಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಇಂದಿರಾ ಗಾಂಧಿ ೪೦ ವರ್ಷಗಳ ಹಿಂದೆಯೇ ದೇಶದ ಅತ್ಯುನ್ನತ ಹುದ್ದೆ ಕೈಗೆತ್ತಿಕೊಂಡರು. ಈಗಲೂ ದೇಶದಲ್ಲಿ ಮೂವರು ಮಹಿಳಾ ಮುಖ್ಯಮಂತ್ರಿಗಳಿದ್ದಾರೆ. ಇವರೆಲ್ಲರೂ ಶೋಭಾರವರಂತೆ ಗ್ರಾಮೀಣ ಹಿನ್ನೆಲೆಯಿಂದ ಬಂದಿಲ್ಲ ಎನ್ನುವುದೊ ಅಥವ ಅವರಂತಹ ಬಡತನದ ಹಿನ್ನೆಲೆ ಇಲ್ಲ ಎನ್ನುವುದೊ ಅವರನ್ನು ಅನರ್ಹರನ್ನಾಗಿ ಅಥವ ಕಡಿಮೆ ಸಾಧಕರನ್ನಾಗಿ ಮಾಡುವುದಿಲ್ಲ.
ಈ ಸಮಯದಲ್ಲಿ ಯಡಿಯೂರಪ್ಪ ಮತ್ತು ಶೋಭಾರವರ ಸ್ನೇಹ ಅಥವ ಸಂಬಂಧವನ್ನು ನಿರ್ಲಕ್ಷಿಸಿ, (ಅದು ಎಷ್ಟೇ ಉದಾರವೂ ಪ್ರಶಂಸನೀಯವೂ ಆಗಿದ್ದರೂ) ಅವರು ಕರ್ನಾಟಕದ ಪ್ರಜೆಗಳಿಗೆ ಸ್ಫೂರ್ತಿಗೆ ಅರ್ಹವಾದ, ಜವಾಬ್ದಾರಿಯುತವಾದ ಆಡಳಿತ ನೀಡಬಲ್ಲರೆ ಎನ್ನುವುದನ್ನಷ್ಟೆ ಗಮನಿಸಬೇಕು. ಆ ಜವಾಬ್ದಾರಿಯುತ ಆಡಳಿತದಲ್ಲಿ ಅವರ ವೈಯಕ್ತಿಕ ನಡವಳಿಕೆಯೂ ಸೇರಿರುತ್ತದೆ ಎನ್ನುವುದನ್ನು ನಾವು ಮರೆಯಬಾರದು. ಮಾದರಿಯಾಗಲು ಅವರಿಗಿರಬಹುದಾದ ಅರ್ಹತೆ ಎಲ್ಲಿಯವರೆಗೆ ಸಾಬೀತಾಗುವುದಿಲ್ಲವೊ ಅಲ್ಲಿಯ ತನಕ ವೈಯಕ್ತಿಕ ಸ್ನೇಹ, ನಿಷ್ಠೆ ಮುಂತಾದ ಭಾವನಾತ್ಮಕ ವಿಷಯಗಳನ್ನು ನಿರ್ಲಕ್ಷಿಸಿ, ವಿಮರ್ಶಿಸುತ್ತಿರಬೇಕು. ಭಾವನಾತ್ಮಕ ವಿಷಯಗಳ ಆಧಾರದ ಮೇಲೆ ನೀಡುವ ರಿಯಾಯಿತಿ ಪ್ರಜಾಪ್ರಭುತ್ವದಲ್ಲಿ ವಿಮರ್ಶೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಅಸ್ತ್ರವಾಗಿಬಿಡುತ್ತದೆ. ಆ ಸ್ವ್ವಾತಂತ್ರ್ಯವನ್ನು ಒತ್ತೆಯಿಟ್ಟುಕೊಳ್ಳುವ ಹಕ್ಕು ಯಾರಿಗೂ ಇಲ್ಲ.
TiE (The Indus Entrepreneurs) ಎನ್ನುವುದು ಅಮೆರಿಕದಲ್ಲಿರುವ ಭಾರತೀಯ ಉದ್ಯಮಿಗಳು 1992 ರಲ್ಲಿ ಹುಟ್ಟುಹಾಕಿದ ಒಂದು ಲಾಭರಹಿತ ಸಂಸ್ಥೆ. ಕರ್ನಾಟಕದ ಕುಮಾರ್ ಮಳವಳ್ಳಿ, ದೇಶ್ ದೇಶಪಾಂಡೆ, ಬಿ.ವಿ. ಜಗದೀಶ್ ಮುಂತಾದ ಯಶಸ್ವಿ ಉದ್ಯಮಿಗಳು ಇದರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಈ ಸಂಸ್ಥೆಯ ಮೂಲ ಉದ್ದೇಶ ಅಮೇರಿಕದಲ್ಲಿ ನೆಲಸಿರುವ ಭಾರತೀಯರಿಗೆ ಅವರೇನಾದರೂ ಹೊಸ ಉದ್ಯಮಗಳನ್ನು, ಕಂಪನಿಗಳನ್ನು ಸ್ಥಾಪಿಸಬೇಕು, ಅದಕ್ಕೆ ಬಂಡವಾಳವನ್ನು ಆಕರ್ಷಿಸಬೇಕು ಎನ್ನುವ ಉದ್ದೇಶವಿದ್ದಲ್ಲಿ, ಅವರಿಗೆ ಬೇಕಾದ ಎಲ್ಲಾ ರೀತಿಯ ಮಾರ್ಗದರ್ಶನ ನೀಡಲು, ತನ್ಮೂಲಕ ಹೆಚ್ಚು ಹೆಚ್ಚು ಭಾರತೀಯರು ಅಮೆರಿಕದ ಕಾರ್ಪೊರೇಟ್ ಜಗತ್ತಿನಲ್ಲಿ ಯಶಸ್ವಿ ಉದ್ಯಮಿಗಳಾಗಲು, ಸಹಾಯ ಮಾಡುತ್ತದೆ. ಅದರ ಜೊತೆಗೆ ಇಲ್ಲಿಯವರಿಗೆ ಭಾರತದಲ್ಲಿ ಬಂಡವಾಳ ತೊಡಗಿಸಲು ಇರುವ ಅವಕಾಶಗಳೇನು, ಯಾವ ಯಾವ ರಾಜ್ಯಗಳಲ್ಲಿ ಏನೇನು ಸೌಲಭ್ಯಗಳಿವೆ, ಹೆಚ್ಚಿನ ಬೆಳವಣಿಗೆಗೆ ಎಲ್ಲೆಲ್ಲಿ ಅವಕಾಶಗಳಿವೆ ಎಂದು ತಿಳಿಸಲು ಸೆಮಿನಾರುಗಳನ್ನು ಏರ್ಪಡಿಸುತ್ತದೆ. ತಮ್ಮ ತಮ್ಮ ರಾಜ್ಯಗಳಿಗೆ ಇಲ್ಲಿಂದ ಬಂಡವಾಳ ಆಕರ್ಷಿಸಲು ಬರುವ ಮಂತ್ರಿ, ಮುಖ್ಯಮಂತ್ರಿಗಳಂತಹ ನಿಯೋಗಗಳಿಗೆ ಅಮೆರಿಕದಲ್ಲಿ TiE ಒಂದು ಉತ್ತಮ ವೇದಿಕೆ.
ಇಡೀ ಕಾರ್ಯಕ್ರಮದ ಇಂಪ್ರೆಸಿವ್ ಘಟ್ಟ ಮುಂದಿನ 20 ನಿಮಿಷಗಳದು. ಕರ್ನಾಟಕದಲ್ಲಿನ ಅವಕಾಶಗಳು, ಉದ್ದಿಮೆಗಳು, ವಾತಾವರಣ, ಅನುಕೂಲಗಳು, ಇವೆಲ್ಲವನ್ನೂ ಪ್ರತಿಬಿಂಬಿಸುವ 10 ನಿಮಿಷಗಳ ವಿಡಿಯೊ ಚಿತ್ರ ನಿಜಕ್ಕೂ ಅದ್ಭುತವಾಗಿತ್ತು. ಬಹಳ ವೃತ್ತಿನೈಪುಣ್ಯದಿಂದ ಸಿದ್ಧಪಡಿಸಲಾಗಿತ್ತು. ಅದು ಎಷ್ಟೊಂದು ಪರಿಣಾಮಕಾರಿಯಾಗಿ ಇತ್ತೆಂದರೆ, ಅದಾದ ನಂತರ ಮಾತನಾಡಿದ IAS ಅಧಿಕಾರಿ ಕೆ.ಎಮ್. ಶಿವಕುಮಾರ್ ಅದರಲ್ಲಿ ಬಂದಿರುವುದನ್ನೆಲ್ಲ ಅಕ್ಷರಶಃ ನಂಬಬೇಡಿ ಎಂಬ ಹಿತವಚನ ಹೇಳಿದರು! ಶಿವಕುಮಾರ್ ಬಹಳ ಚೆನ್ನಾಗಿ ತಿಳಿದುಕೊಂಡು, ಸಿದ್ಧವಾಗಿ ಬಂದಿದ್ದರು. ಅವರು ಮಾತನಾಡಿದ ರೀತಿ ಹಾಗೂ ಹೇಳಿದ ಕೆಲವು ವಿಚಾರಗಳು, ಉದಾಹರಣೆಗೆ, "ಇಲ್ಲಿಯ ಸಿಲಿಕಾನ್ ಕಣಿವೆಯಲ್ಲಿ ಗರಾಜಿನಲ್ಲಿ ಪ್ರಾರಂಭಿಸಿ, ನಂತರ ದೈತ್ಯ ಕಂಪನಿಗಳಾದ ಉದಾಹರಣೆಗಳು ನಿಮಗೆ ಗೊತ್ತು. ಅವು ಇಲ್ಲಿ ಘಟಿಸಿದವು. ಅಂತಹುದೇ ಕಥೆಗಳು ಈಗ ಬೆಂಗಳೂರಿನಲ್ಲಿ ಪ್ರತಿನಿತ್ಯ ಘಟಿಸುತ್ತಿವೆ," ಎಂಬಂತಹ ಯಶಸ್ಸಿನ ಕತೆಗಳು ಬಹಳ ಪರಿಣಾಮಕಾರಿಯಾಗಿದ್ದವು. ಸಭೆಗೆ ಬಂದಿದ್ದವರು ಏನು ತಿಳಿದುಕೊಳ್ಳಬೇಕು ಎಂದು ಬಂದಿದ್ದರೊ ಅದನ್ನಷ್ಟೆ ಅವರು ಬಹಳ ಚೆನ್ನಾಗಿ ಹೇಳುತ್ತಿದ್ದರೆ, ಮಾನ್ಯ ಉಪಮುಖ್ಯಮಂತ್ರಿಗಳು ತಮ್ಮ ಪಾಳೆಯಗಾರಿಕೆ ಗತ್ತಿನಲ್ಲಿ ಮಧ್ಯದಲ್ಲಿಯೇ ತಮ್ಮ ಎಡಗೈ ಎತ್ತಿ, "ಪ್ರಶ್ನೆಗಳನ್ನು ತೆಗೆದುಕೊಳ್ಳೋಣ, ನಿಲ್ಲಿಸಿ," ಎಂದುಬಿಟ್ಟರು! ಉಪಮುಖ್ಯಮಂತ್ರಿಗಳಿಗೆ ಸಭಾಮರ್ಯಾದೆ ಅರ್ಥವಾಗಲಿಲ್ಲ ಎಂದರೆ ಹೇಗೆ? ಇದೇನು ರಾಜರ ಆಸ್ಥಾನವೊ ಅಥವ ಪ್ರಜಾಪ್ರಭುತ್ವವೊ? ಯಡಿಯೂರಪ್ಪನವರ ಧಾರ್ಷ್ಟ್ಯದಿಂದ ಇರಿಸುಮುರಿಸಾದ ಶಿವಕುಮಾರ್ ಮಧ್ಯಕ್ಕೆ ಮಾತು ನಿಲ್ಲಿಸಿಬಿಟ್ಟರು. ಆದರೆ ಆದ ಅವಮಾನದ ಸೇಡನ್ನು ಕೊನೆಯಲ್ಲಿ ಬೇರೆ ರೀತಿ ತೀರಿಸಿಕೊಂಡರು!
ಬಂದಿದ್ದವರಲ್ಲಿ ಕರ್ನಾಟಕ ಉದ್ಯೋಗ ಮಿತ್ರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಎಲ್. ಶಿವಾನಂದ ಮಾತ್ರ ಸ್ವಲ್ಪ ಚುರುಕಾಗಿ, ನಗುಮುಖದಿಂದ ಮಾತನಾಡುತ್ತ, ತಮ್ಮ ವಿಸಿಟಿಂಗ್ ಕಾರ್ಡ್ ಹಂಚುತ್ತ, ವಿವರಣೆ ಬಯಸಿದವರಿಗೆ ವಿವರಣೆ ನೀಡುತ್ತ ಓಡಾಡುತ್ತಿದ್ದರು. ಪ್ರಶ್ನೋತ್ತರ ಮುಗಿದ ಮೇಲೆ ಕೆಲವು ಅನಿವಾಸಿ ಕನ್ನಡಿಗರೊಂದಿಗೆ ಕಟ್ಟಾ ನಾಯ್ಡ ಬಹಳ ಚೆನ್ನಾಗಿ, ಕ್ರಮಬದ್ಧವಾಗಿ ಮಾತನಾಡುತ್ತಿದ್ದರು. ತಮ್ಮ ಇಲಾಖೆಗೆ ಅವಶ್ಯಕವಿರುವ ಕೆಲವು ಕನ್ನಡ ಪರಿಭಾಷೆಗಳನ್ನು ಚೆನ್ನಾಗಿ ಕಲಿತಿದ್ದರು. ಇವರಿಗೆ ತೊಡಕಿದ್ದದ್ದೆಲ್ಲ ಇಂಗ್ಲಿಷಿನದೆ. ದುಬಾಷಿ ಇಟ್ಟುಕೊಂಡರೆ ತಮ್ಮ ಬಾಡಿಲ್ಯಾಂಗ್ವೇಜ್ನಿಂದಲೆ ಜನರನ್ನು ಪ್ರಭಾವಿತಗೊಳಿಸಬಹುದು, ತನ್ಮೂಲಕ ತಮ್ಮ ಹುದ್ದೆಗೆ ಇನ್ನೂ ಹೆಚ್ಚಿನ ನ್ಯಾಯ ಸಲ್ಲಿಸಬಹುದು ಎಂದು ಇವರಿಗೆ ಹೇಳುವವರು ಇಲ್ಲವೆ? ಇಡೀ ಸಭೆಯಲ್ಲಿ ಕಮ್ಮಿ ಪದ ಖರ್ಚು ಮಾಡಿದವರೆಂದರೆ ಸಚಿವ ಶಿವಾನಂದ ನಾಯ್ಕ! ಅದೂ ಸಭೆ ಮುಗಿದ ನಂತರ ಇದ್ದ ಅನೌಪಚಾರಿಕ ಮಾತುಕತೆಯಲ್ಲಿ, ಒಂದಿಬ್ಬರೊಡನೆ ಮಾತ್ರ.
ಕನ್ನಡದ ಪ್ರೀತಿಯ ಅಣ್ಣಾವ್ರು ನಟಿಸಿರುವ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಕಾಳಿದಾಸನ ಹೆಂಡತಿಯಾಗಿ, ಕವಿಕಲ್ಪನೆಯ ಶಾಕುಂತಲೆಯಾಗಿ, "ಪ್ರಿಯತಮಾ, ಕರುಣೆಯಾ ತೋರೆಯಾ?" ಎಂದು ಕೇಳಿದ ಸುಂದರಿ ಜಯಪ್ರದ ಆಂಧ್ರದ ರಾಜಕೀಯದಲ್ಲಿ ಸಾಕಷ್ಟು ಲಾಭ ಮಾಡಿಕೊಂಡಾಕೆ. ಎನ್.ಟಿ.ಆರ್. ಸತ್ತ ನಂತರ ಜಯಪ್ರದರನ್ನು ರಾಜಕೀಯಕ್ಕೆ ಎಳೆದುಕೊಂಡ ಚಂದ್ರಬಾಬು ನಾಯ್ಡು, ಅವರನ್ನು ತಮ್ಮ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆಯನ್ನಾಗಿ ಮಾಡಿ, ಏಳೆಂಟು ವರ್ಷದ ಹಿಂದಿನ ಚುನಾವಣೆಯಲ್ಲಿ ವ್ಯಾಪಕವಾಗಿ ಪ್ರಚಾರಕ್ಕೆ ಬಳಸಿಕೊಂಡರು. ನಂತರ ತಮ್ಮ ಪಕ್ಷದಿಂದ ಆಕೆಯನ್ನು ರಾಜ್ಯಸಭೆಗೆ ಆರಿಸಿ ಕಳುಹಿಸಿದರು. ಇಪ್ಪತ್ತೈದು ವರ್ಷಗಳ ಹಿಂದೆಯೆ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಜಯಪ್ರದ, ನಾಯ್ಡುವಿನೊಂದಿಗೆ ಭಿನ್ನಾಭಿಪ್ರಾಯ ಬಂದಿದ್ದೆ, ತಕ್ಷಣ ಹಿಂದಿ ರಾಜ್ಯವಾದ ಉತ್ತರಪ್ರದೇಶಕ್ಕೆ ಹೋಗಿ, ಅಲ್ಲಿ ಮುಲಾಯಂ ಸಿಂಗರ ಪಾರ್ಟಿಯಿಂದ ಕಳೆದ ಬಾರಿ ಲೋಕಸಭೆಗೆ ನಿಂತು ಅಲ್ಲಿಯೂ ಆರಿಸಿ ಬಂದರು. ಒಮ್ಮೆ ತೆಲುಗು ಭಾಷೆಯ ದಕ್ಷಿಣದ ರಾಜ್ಯದ ಪ್ರಾದೇಶಿಕ ಪಕ್ಷದಿಂದ ರಾಜ್ಯಸಭೆಗೆ. ಮತ್ತೊಮ್ಮೆ ಹಿಂದಿ ಭಾಷೆಯ ಉತ್ತರದ ರಾಜ್ಯದ ಪ್ರಾದೇಶಿಕ ಪಕ್ಷದಿಂದ ಲೋಕಸಭೆಗೆ. ಹೀಗೆ ಉತ್ತರ-ದಕ್ಷಿಣದಲ್ಲೆಲ್ಲ ತನ್ನ ಸಿನೆಮಾ ಗ್ಲಾಮರ್ನಿಂದಾಗಿ ಸಲ್ಲುತ್ತಿರುವ ಈ ನಟಿ, ಈಗಲೂ ಸಿನೆಮಾದಲ್ಲಿ ನಟಿಸುವುದನ್ನು ಬಿಟ್ಟಿಲ್ಲ. ಕೆಲವೆ ವಾರಗಳ ಹಿಂದೆ ಈಕೆ ಕನ್ನಡದಲ್ಲಿ ನಟಿಸಿರುವ "ಈ ಬಂಧನ" ಚಿತ್ರ ಬಿಡುಗಡೆ ಆಗಿದೆ. ನಿಜಕ್ಕೂ ಈ ನಟಿ ತಾನು ಲೋಕಸಭೆಯ ಸದಸ್ಯೆಯಾಗಿ ನಿರ್ವಹಿಸಬೇಕಾದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆಯೆ? ಮನುಷ್ಯನ ಜಾತಿ, ಬಣ್ಣ, ಲಿಂಗ, ಬಾಹ್ಯ ಸೌಂದರ್ಯ, ದುಡ್ಡು, ಬಾಹುಬಲ, ಮುಂತಾದ ಕ್ಷುಲ್ಲಕ ವಿಷಯಗಳನ್ನಷ್ಟೆ ನೋಡಿ, ಅಯೋಗ್ಯರನ್ನೆಲ್ಲ ಆರಿಸುವ ಭಾರತದ ಪ್ರಜೆ ನಿಜಕ್ಕೂ ಜವಾಬ್ದಾರಿಯನ್ನು ತೋರಿಸುತ್ತಿದ್ದಾನೆಯೆ ಎನ್ನುವುದೆ ಬಹುಶಃ ಸರಿಯಾದ ಪ್ರಶ್ನೆ, ಅಲ್ಲವೆ? ಇದೇ ಸಮಯದಲ್ಲಿ, ನೂರಾರು ಅಯೋಗ್ಯರಿರುವ ಶಾಸನಸಭೆಗಳ ವಿಷಯದಲ್ಲಿ ಕೇವಲ ಜಯಪ್ರದಾರ ವಿಷಯಕ್ಕೆ ಈ ಪ್ರಶ್ನೆ ಕೇಳಿದರೆ, ಅದು ಕ್ರೂರವಾಗಿಬಿಡುತ್ತದೆ ಎನ್ನುವುದೂ ಒಪ್ಪಬೇಕಾದದ್ದೆ.
ಸತ್ತ ಮೇಲೆ ಇಡೀ ದೇಶ ರಾಜೀವ್ ಗಾಂಧಿಯ ಕೈಗೆ ಮೂರನೆ ಎರಡರಷ್ಟು ಬಹುಮತ ಕೊಟ್ಟರೆ, ಆಂಧ್ರದಲ್ಲಿ ಜನ ಕ್ಯಾರೇ ಎನ್ನಲಿಲ್ಲ. ಅದು ಯಾವ ಮಟ್ಟಕ್ಕೆಂದರೆ, ಆ ಲೋಕಸಭೆಯಲ್ಲಿ ತೆಲುಗು ದೇಶಂ ಎನ್ನುವ ಒಂದೇ ರಾಜ್ಯದಲ್ಲಿರುವ ಪ್ರಾದೇಶಿಕ ಪಕ್ಷ ಇಡೀ ದೇಶಕ್ಕೆ ಅಧಿಕೃತ ವಿರೋಧ ಪಕ್ಷವಾಗಿತ್ತು!
ಸೂಪರ್ಸ್ಟಾರ್ ನಟ ಡಿಸ್ಕೊ ಶಾಂತಿ ಎಂಬ ಕ್ಯಾಬರೆ ನರ್ತಕಿಯೊಂದಿಗೆ "ಬಂಗಾರು ಕೋಡಿ ಪೆಟ್ಟ" ಎಂಬ ಹಾಡಿಗೆ ಹೆಜ್ಜೆ ಹಾಕಿದ ರೀತಿ ಬಹುಶಃ ಇಡೀ ದಕ್ಷಿಣ ಭಾರತದ ಯುವಜನಾಂಗ ಆ ಹಾಡಿನಿಂದ ರೋಮಾಂಚಿತರಾಗುವಂತೆ ಮಾಡಿಬಿಟ್ಟಿತು. ಅಲ್ಲಿಯವರೆಗಿನ ತೆಲುಗಿನ ಎಲ್ಲಾ ದಾಖಲೆಗಳನ್ನು ಮುರಿದ ಆ ಚಿತ್ರ ಚಿರಂಜೀವಿಯನ್ನು ಆಗಿನ ಪ್ರಸಿದ್ಧ ಇಂಗ್ಲಿಷ್ ವಾರಪತ್ರಿಕೆ "ಇಂಡಿಯಾ ಟುಡೆ" ಮುಖಪುಟದಲ್ಲಿ ಪ್ರತಿಷ್ಠಾಪಿಸಿ, ಆ ಪತ್ರಿಕೆ ಚಿರಂಜೀವಿಯನ್ನು "ಬಿಗ್ಗರ್ ದ್ಯಾನ್ ಬಚ್ಚನ್" ಎಂದು ಘೋಷಿಸುವಂತೆ ಮಾಡಿಬಿಟ್ಟಿತು.
"ಪದ್ಮಭೂಷಣ" ಚಿರಂಜೀವಿಯ ಕೌಟುಂಬಿಕ ವಿಷಯಕ್ಕೆ ಬಂದರೆ, ಆತ ಮದುವೆ ಆಗಿರುವುದು ತೆಲುಗಿನ ಪೋಷಕ-ಹಾಸ್ಯ ನಟರಲ್ಲಿ ಒಬ್ಬರಾಗಿದ್ದ ಅಲ್ಲು ರಾಮಲಿಂಗಯ್ಯನವರ ಮಗಳನ್ನು. ಆಲ್ಲು ರಾಮಲಿಂಗಯ್ಯ ನಟನೆಯಲ್ಲಿ ಮತ್ತು ಹಾವಭಾವದಲ್ಲಿ ನಮ್ಮ ಕನ್ನಡದ ಮುಸುರಿ ಇದ್ದಂತೆ. ಆದರೆ ಅವರು "ಬ್ರಿಟಿಷರೆ, ಭಾರತ ಬಿಟ್ಟು ತೊಲಗಿ" ಚಳವಳಿಯಲ್ಲಿ ಪಾಲ್ಗೊಂಡು ಜೈಲಿಗೆ ಹೋಗಿದ್ದ ಸ್ವಾತಂತ್ರ್ಯ ಹೋರಾಟಗಾರ ಸಹ. ಅರ್ಧ ಶತಮಾನದಲ್ಲಿ ಸಾವಿರಕ್ಕೂ ಹೆಚ್ಚಿನ ತೆಲುಗು ಚಿತ್ರಗಳಲ್ಲಿ ನಟಿಸಿದ್ದ ಆ ಹಿರಿಯ ನಟನ ಅನುಭವ ಮತ್ತು ಶ್ರೇಯೋಭಿಲಾಷೆ ಅಳಿಯ ಚಿರಂಜೀವಿಗೆ ಸಿಕ್ಕಿದ್ದು ಒಂದು ರೀತಿಯಲ್ಲಿ ಅದೃಷ್ಟವೆ.
ಚಿರಂಜೀವಿಯ ಮೊದಲ ತಮ್ಮ ನಾಗೇಂದ್ರ ಬಾಬು ಅಷ್ಟೇನೂ ಯಶಸ್ವಿಯಾಗದ ನಟ. ತನ್ನ ಒರಟು ಮುಖದಿಂದಾಗಿ ಪೋಷಕ ಅಥವ ವಿಲ್ಲನ್ ಪಾತ್ರಗಳಿಗೆ ಸೀಮಿತವಾಗಿದ್ದು ಈಗ ನಿರ್ಮಾಪಕನಾಗಿದ್ದಾನೆ. ಕೊನೆಯ ತಮ್ಮ ಪವನ್ ಕಲ್ಯಾಣ್. ಮಾತೆತ್ತಿದರೆ ಬಿರುದಾಂಕಿತರಾಗಿ ಬಿಡುವ ಸಿನೆಮಾ ರಂಗದಲ್ಲಿ ಆತನಿಗಿರುವ ಬಿರುದು "ಪವರ್ ಸ್ಟಾರ್." ಇತ್ತೀಚಿನ ತೆಲುಗು ಯುವನಟರಲ್ಲಿ ಬಹಳ ಭರವಸೆಯ, ಪ್ರಯೋಗಶೀಲ, ಜನಪ್ರಿಯ ನಾಯಕನಟ. ಜೀವನದಲ್ಲಿಯೂ ಒಂದು ರೀತಿಯಲ್ಲಿ ಪ್ರಯೋಗಶೀಲನೆ. ಹತ್ತು ವರ್ಷಗಳ ಹಿಂದೆಯೆ ಈತನಿಗೆ ಮದುವೆ ಆಗಿ ಒಂದು ಮಗುವೂ ಇತ್ತು. ಆದರೆ ಹೆಂಡತಿಯಿಂದ ಬೇರೆ ಇದ್ದು, ತನ್ನ ಸಹನಟಿಯೊಂದಿಗೆ ವಾಸವಾಗಿದ್ದ. ಎರಡನೆ ಮದುವೆ ಮಾಡಿಕೊಂಡ ಎಂದೂ ಸುದ್ದಿಯಾಗಿತ್ತು. ಆಗ ಮೊದಲ ಹೆಂಡತಿ ಎರಡನೆ ಮದುವೆ ಮಾಡಿಕೊಂಡಿದ್ದಾನೆ ಎಂದು ಕೋರ್ಟಿಗೆ ಹೋದಳು. ಎಚ್ಚರಗೊಂಡ ಈತ ಈಗ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಒಮ್ಮೆ ಆತ ಆಂಧ್ರಪ್ರದೇಶದ ಡೆಕ್ಕನ್ ಹೆರಾಲ್ಡ್ ಆದ "ಡೆಕ್ಕನ್ ಕ್ರಾನಿಕಲ್"ನ ಪತ್ರಕರ್ತರ ಮೇಲೆ ಕೈಮಾಡಿ ಅದೊಂದು ದೊಡ್ಡ ರಾದ್ಧಾಂತವೆ ಆಗಿ ಹೋಗಿತ್ತು. ಇತ್ತೀಚೆಗೆ ತಾನೆ ಒಂದು ಕೋಟಿ ಹಣ ಹೂಡಿ "Common Man Protection Force" ಎಂಬ ಸಾಮಾಜಿಕ ಸೇವಾ ಸಂಸ್ಥೆ ಬೇರೆ ಸ್ಥಾಪಿಸಿದ್ದಾನೆ.
ಅಷ್ಟೆ ಮುಖ್ಯವಾದದ್ದು ಆ ಪೈಪೋಟಿಯ ಸಮಯದಲ್ಲಿ ಆತ ತೋರಿಸಿದ ಪ್ರಬುದ್ಧ ನಡವಳಿಕೆ.
ಮುಂದಕ್ಕೆ ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವಯುತವಾಗಿ ಪಾಲ್ಗೊಳ್ಳಬೇಕಾದರೆ ಏನೇನು ಬೇಕು ಮತ್ತು ಈ ಕೂಡಲೆ ಏನೇನು ಮಾಡಬೇಕು ಎನ್ನುವುದು ಈ ಸಂದೇಶಗಳಲ್ಲಿ ಒಂದು. ಅದೇ ರೀತಿ ಮುಂದಿನ ದಿನಗಳಲ್ಲಿ ಸರ್ಕಾರದ ಬೆಂಬಲ ಇಲ್ಲದಿದ್ದರೂ ನಮ್ಮ ಕ್ರೀಡಾಪಟುಗಳು ಗೆಲ್ಲಬಲ್ಲ ಸಾಧ್ಯತೆಗಳ ಬಗ್ಗೆ ಮತ್ತು ಅದಕ್ಕೆ ಕಾರಣವಾಗುವ ಅವರ ಆರ್ಥಿಕ ಹಿನ್ನೆಲೆಯ ಬಗ್ಗೆಯೂ ಸೂಕ್ಷ್ಮವಾಗಿ ತಿಳಿಸುತ್ತದೆ. ಭಾರತ ಈಗ ಹದಿನೈದು ಇಪ್ಪತ್ತು ವರ್ಷಗಳ ಹಿಂದಿನ ಬರೀ ಬಡವರ ಭಾರತ ಅಲ್ಲ. ಈಗಿನ ಮೇಲ್ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗ ವಿಸ್ತಾರಗೊಂಡಿದೆ. ಅನೇಕ ಶ್ರೀಮಂತರಿರುವ ಈ ಸಂದರ್ಭದಲ್ಲಿ ತಮ್ಮ ವಾರಿಗೆಯವರಿಗಿಂತ ಭಿನ್ನವಾದದ್ದನ್ನು ಮಾಡಲು ಈ ವರ್ಗ ಹಪಹಪಿಸುತ್ತಿದೆ. ಅವುಗಳಲ್ಲಿ ಒಂದು ತಮ್ಮ ಮಕ್ಕಳನ್ನು ಕ್ರೀಡಾಪಟುಗಳನ್ನಾಗಿ ಮಾಡುವುದು. ಅಭಿನವ್ ಬಿಂದ್ರಾ, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ, ಯುವರಾಜ್ ಸಿಂಗ್, ಜೀವ್ ಮಿಲ್ಖಾ ಸಿಂಗ್; ಹೀಗೆ ಇವತ್ತಿನ ಅನೇಕ ಕ್ರೀಡಾಪಟುಗಳು ಶ್ರೀಮಂತ ಮನೆತನದ ಹಿನ್ನೆಲೆ ಉಳ್ಳವರು. ಇವರ ಪೋಷಕರು ತಮ್ಮ ಮಕ್ಕಳಿಗೆ ಬೇಕಾದ ಕ್ರೀಡಾ ಸೌಲಭ್ಯಗಳಿಗಾಗಿ ಎಷ್ಟು ದುಡ್ಡು ಬೇಕಾದರೂ ಖರ್ಚು ಮಾಡಬಲ್ಲವರು. ತರಬೇತಿಗಾಗಿ ಯಾವ ದೇಶಕ್ಕೆ ಬೇಕಾದರೂ ಕಳುಹಿಸಬಲ್ಲ ಆರ್ಥಿಕ ಚೈತನ್ಯ ಇರುವವರು. ಆದರೆ, ಇಂತಹ ಕುಟುಂಬಗಳಿಂದ ಬರುವ ಕ್ರೀಡಾಪಟುಗಳು ಟೀಮ್ವರ್ಕ್ ಇಲ್ಲದ, ಒಬ್ಬೊಬ್ಬರೆ ಆಡಬಹುದಾದ ಆಟಗಳಿಗೇ ಬಹುಪಾಲು ಸೀಮಿತವಾಗುತ್ತಾರೆ. ವಿಶ್ವದರ್ಜೆಯ ತರಬೇತಿ, ಕುಟುಂಬದ ಪ್ರೋತ್ಸಾಹ, ಮತ್ತು ತಮ್ಮ ವೈಯಕ್ತಿಕ ಪರಿಶ್ರಮ ಹಾಗು ಮಹತ್ವಾಕಾಂಕ್ಷೆಗಳಿಂದಾಗಿ ಮುಂದಿನ ವರ್ಷಗಳಲ್ಲಿ ಹಲವಾರು ಅಭಿನವ್ ಬಿಂದ್ರಾರು ಏಕಸ್ಪರ್ಧಿ ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ನಾವು ಎದುರು ನೋಡಬಹುದು.
ಬಹುಶಃ ಅರ್ಧಕ್ಕಿಂತ ಹೆಚ್ಚಿನ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುವವರೆ ಇರುವುದಿಲ್ಲ. ಇಡೀ ದೇಶದಾದ್ಯಂತ ಈಜು ಕಲಿತಿರುವ ಹೆಣ್ಣುಮಕ್ಕಳೆ ಸಾವಿರ-ಲಕ್ಷಗಳಲ್ಲಿರುವಾಗ ನಮ್ಮ ಹೆಣ್ಣುಮಕ್ಕಳು ಸಿಂಕ್ರೊನೈಸ್ಡ್ ಈಜು ಇರಲಿ, ಮಾಮೂಲಿ ಈಜು ಸ್ಪರ್ಧೆಗೆ ಅರ್ಹತೆ ಗಳಿಸುವುದೂ ಒಂದು ದೊಡ್ಡ ಸಾಧನೆಯೆ. ವಿಶಿಷ್ಟ ಸಾಂಸ್ಕೃತಿಕ ಹಿನ್ನೆಲೆ ಮತ್ತು ಅಷ್ಟೇ ವಿಶಿಷ್ಟವಾದ ಸಂಗೀತ ಬೇಕಾದ ರ್ಹಿದಮಿಕ್ ಜಿಮ್ನ್ಯಾಸ್ಟಿಕ್ನ ಕತೆಯೂ ಇದೆ.
ವಾಟರ್ ಪೋಲೊ, ಬೇಸ್ಬಾಲ್, ಕುದುರೆಸವಾರಿ, ಕಯಾಕ್, ರೋಯಿಂಗ್, ಬೀಚ್ ವಾಲಿಬಾಲ್, ಮುಂತಾದ ಅನೇಕ ಆಟಗಳನ್ನು ಆಡುವ ಎಷ್ಟು ಭಾರತೀಯ ಮಹಿಳೆಯರಿದ್ದಾರೆ? ಇದ್ದರೂ ಇವರು ಶ್ರೀಮಂತ ವರ್ಗಕ್ಕೆ ಸೇರಿದವರಾಗಿರುತ್ತಾರೆ ಮತ್ತು ಖಯಾಲಿಗೆ ಆಡುವವರಾಗಿರುತ್ತಾರೆಯೆ ಹೊರತು ನೈಜ ಕ್ರೀಡಾಪಟುಗಳು ಎಷ್ಟು ಜನ ಸಿಗುತ್ತಾರೆ?
ತಮ್ಮ ದೇಶದಲ್ಲಿ ಎಲ್ಲವೂ ಚೆನ್ನಾಗಿದೆ, ಹಾಲುತುಪ್ಪ ಉಕ್ಕಿಹರಿಯುತ್ತಿದೆ ಎಂದು ಹೊರದೇಶಗಳಿಗೆ ಅವು ಸಂದೇಶಗಳನ್ನು ಕೊಡುವುದೆ ಕ್ರೀಡೆಗಳಲ್ಲಿ ಗೆಲ್ಲುವ ಮೂಲಕ! ಇದು ಇತಿಹಾಸದುದ್ದಕ್ಕೂ ನಿರೂಪಿತವಾಗಿದೆ. ಇನ್ನು ಮುಂದುವರೆದ ದೇಶಗಳಲ್ಲಿ ಅದು ಎಂತಹ ಗ್ಲಾಮರ್ ಇಲ್ಲದ ಕ್ರೀಡೆ ಆಗಿದ್ದರೂ, ಆ ಕ್ರೀಡೆಯ ಕ್ರೀಡಾಪಟು ಅದರಲ್ಲಿ ಉತ್ತಮವಾಗಿದ್ದರೆ ಅವನು ಅದರಿಂದಲೆ ಜೀವನ ರೂಪಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಆತನಿಗೆ ಆರಂಭದಿಂದಲೆ ಪ್ರಾಯೋಜಕರು, ಕೋಚ್ಗಳೂ, ಕುಟುಂಬದ ಬೆಂಬಲವೂ ಸಿಗುತ್ತದೆ. ಓದು, ಕಾಲೇಜು, ಡಿಗ್ರಿ, ನೌಕರಿ, ಮುಂತಾದುವುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಆತ/ಆಕೆ ಪೂರ್ಣಪ್ರಮಾಣದ ತರಬೇತಿಯಲ್ಲಿ ತೊಡಗಿಕೊಳ್ಳಬಹುದು.
ಆದರೆ, ನಮ್ಮಲ್ಲಿ? ಎಲ್ಲೋ ಕೆಲವು ಶ್ರೀಮಂತ ರೆಸಿಡೆನ್ಸಿ ಶಾಲೆಗಳಲ್ಲಿ ಕ್ರೀಡೆಗಳಿಗೆ ಪ್ರಾಮುಖ್ಯತೆ ಕೊಡುತ್ತಾರೆಯೆ ಹೊರತು ಬಹುಸಂಖ್ಯಾತ ಶಾಲೆಗಳಲ್ಲಲ್ಲ. ಒಬ್ಬ ಕ್ರೀಡಾಪಟು ಈ ತರಹದ ಆಟದಲ್ಲಿ ಯೋಗ್ಯನಿದ್ದಾನೆ ಎಂದು ಗೊತ್ತಾಗುವಷ್ಟರಲ್ಲಿ ಆತನ ಸಾಮರ್ಥ್ಯ ಇಳಿಮುಖವಾಗುವ ವಯಸ್ಸಾಗಿಬಿಟ್ಟಿರುತ್ತದೆ. ಹಾಗೆಯೆ, ನಾನು ಆಡುವ ಆಟದ ಮೂಲಕವೆ ನನ್ನ ಜೀವನ ರೂಪಿಸಿಕೊಳ್ಳುತ್ತೇನೆ ಎನ್ನುವ ಸ್ಥಿತಿ ಭಾರತದ ಬಹುಪಾಲು ಅಗ್ರ ಕ್ರೀಡಾಪಟುಗಳಿಗೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಕ್ರೀಡಾಪಟುಗಳು ಈ ರೀತಿಯ ವೈಯಕ್ತಿಕ ಸಮಸ್ಯೆಗಳಿಲ್ಲದ ಅನ್ಯದೇಶಗಳ ಕ್ರೀಡಾಪಟುಗಳ ವಿರುದ್ಧ ಗೌರವಯುತವಾಗಿ ಸ್ಪರ್ಧಿಸುವುದಾದರೂ ಹೇಗೆ?
ಸರ್ಕಾರಿ ಕೃಪಾಪೋಷಣೆ ಇಲ್ಲದಿದ್ದರೂ ಜಾರ್ಖಂಡ್ನಂತಹ ಹಿಂದುಳಿದ ರಾಜ್ಯದಿಂದ ಬಂದಂತಹ ಸಾಮಾನ್ಯ ಹಿನ್ನೆಲೆಯ ಧೋನಿ ಇವತ್ತು ಭಾರತದ ನಂಬರ್ ಒನ್ ಆಟಗಾರ. ಧೋನಿಯಂತಹ ಅನೇಕರು ಕ್ರಿಕೆಟ್ನಲ್ಲಿ ಸಿಗುತ್ತಾರೆ. ಗಲ್ಲಿಗಲ್ಲಿಗಳಲ್ಲಿ, ಸಣ್ಣ ಮೈದಾನಗಳಲ್ಲಿ, ಸುಸಜ್ಜಿತ ಸ್ಟೇಡಿಯಮ್ಗಳಲ್ಲಿ, ಎಲ್ಲಿ ಬೇಕಾದರೂ ಆಡಬಲ್ಲ, ಆಡಲು ಸಹಆಟಗಾರರೂ ಸಿಗುವ ಅಪ್ಪಟ ಸಮುದಾಯ ಕ್ರೀಡೆ ಅದು. ಚೆನ್ನಾಗಿ ಆಡುವವರನ್ನು ಗುರುತಿಸುವ, ಅವರನ್ನು ಮೇಲಕ್ಕೆತ್ತುವ ಒಂದು ನೈಸರ್ಗಿಕ ವ್ಯವಸ್ಥೆಯೂ ಅದರಲ್ಲಿದೆ; ಅದರ ಗ್ಲಾಮರ್ನಿಂದಾಗಿ. ಐಪಿಎಲ್, ಐಸಿಎಲ್ಗಳಿಂದಾಗಿ ಅನೇಕ ಸ್ಥಳೀಯ ಆಟಗಾರರೂ ಈ ಕ್ರೀಡೆಯಿಂದಲೆ ಜೀವನ ರೂಢಿಸಿಕೊಳ್ಳುವ ಸಂದರ್ಭ ಸೃಷ್ಟಿ ಆಗುತ್ತಿದೆ. ಒಲಿಂಪಿಕ್ಸ್ ಅಸಾಮರ್ಥ್ಯದ ನಡುವೆಯೂ ವಿಶ್ವಮಟ್ಟದಲ್ಲಿ ನಮ್ಮ ಸಾಧನೆ ಮತ್ತು ಕೊಡುಗೆಯ ಬಗ್ಗೆ ನಾವು ಹೆಮ್ಮೆ ಪಡಬಹುದಾದ ಆಟ ಕ್ರಿಕೆಟ್.
ಇತ್ತೀಚೆಗೆ ಸ್ನೇಹಿತರೊಬ್ಬರು ಒಂದು ವಿಷಯ ಹೇಳುತ್ತಿದ್ದರು. ಅದು ಕತೆಯೊ, ಕಟ್ಟುಕತೆಯೊ, ಅಥವ ವಾಸ್ತವವೊ ಹೇಳುವುದು ಸ್ವಲ್ಪ ಕಷ್ಟವೆ. ವಿಷಯ ಏನೆಂದರೆ, ಕಳೆದ ಐದತ್ತು ವರ್ಷಗಳಲ್ಲಿ ಕರ್ನಾಟಕ ರಾಜಕೀಯ ರಂಗದ ಮೇಲೆ ಮುಂಚೂಣಿಗೆ ಬಂದುಬಿಟ್ಟಿರುವ ಗಣಿದೊರೆಗಳಾದ ಜನಾರ್ಧನ ರೆಡ್ಡಿ ಮತ್ತವರ ಕುಟುಂಬದವರಿಗೆ ಇಷ್ಟು ಐಶ್ವರ್ಯ ಹೇಗೆ ಬಂತು ಎನ್ನುವುದು. ನಾಡಿನ ಜನತೆಗೆ ಗೊತ್ತಿರುವಂತೆ ರೆಡ್ಡಿಯವರ ತಂದೆ ಕರ್ನಾಟಕ ಸರ್ಕಾರದ ಪೋಲಿಸ್ ಇಲಾಖೆಯಲ್ಲಿದ್ದವರು. ಕತೆ ಆರಂಭವಾಗುವುದು ಅವರು ಹಂಪಿಯಲ್ಲಿ ದಫೇದಾರ್ ಆಗಿದ್ದಾಗಿನಿಂದ. ಆ ಸಮಯದಲ್ಲಿ ಹಾಳು ಹಂಪಿಯಲ್ಲಿ ನಿಧಿ ಹುಡುಕಾಟ ಸಾಮಾನ್ಯವಾಗಿತ್ತಂತೆ. ಯಾರಿಗೊ ಎಲ್ಲಿಯೊ ಏನೊ ಸಿಕ್ಕಿತು ಎಂಬಂತಹ ಸುದ್ದಿಗಳು ಕೇಳಿಬರುತ್ತಿತ್ತಂತೆ; ಆಗ ಹೀಗೆಯೆ ಯಾರೊ ಕೂಲಿಯವನಿಗೆ ನಿಧಿ ಸಿಕ್ಕಿತು; ಅದನ್ನು ರೆಡ್ಡಿಯವರ ದಫೇದಾರ್ ತಂದೆ ವಶಪಡಿಸಿಕೊಂಡು ತಮ್ಮ ಮನೆಗೆ ಹೊತ್ತೊಯ್ದರು; ಇದೇ ಅವರ ಶ್ರೀಮಂತಿಕೆಯ ಮೂಲ, ಎಂದು
ಹಂಪಿಯ ಸುತ್ತಮುತ್ತ ಆ ದಫೇದಾರರ ಕಾಲದ ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎನ್ನುವುದೆ ಆ ವಿಷಯ.
ಮೊದಲ ಶತಮಾನದ ಸಮಯದಲ್ಲಿ ಸುಮಾರು 20 ಸಾವಿರ ಜನಸಂಖ್ಯೆಯ ನಗರ ಅದು. ಯೋಜನಾಬದ್ಧವಾಗಿ, ರೋಮನ್ ವಾಸ್ತಿಶಿಲ್ಪದ ಪ್ರಕಾರ ಕಟ್ಟಲ್ಪಟ್ಟ ನಗರ. ಇಂತಹ ಪಟ್ಟಣ ಹೆಚ್ಚೂಕಮ್ಮಿ 17 ಶತಮಾನಗಳ ಕಾಲ ಮಣ್ಣಿನಲ್ಲಿ, ಬೂದಿಯಲ್ಲಿ ಹೂತುಹೋಗಿತ್ತು. ಅದು ಹೀಗೆ ಪಾಳುಬೀಳುವಂತಾಗಲು ಯಾರೂ ದಾಳಿ ಮಾಡಲಿಲ್ಲ. ಬೆಂಕಿ ಹಚ್ಚಲಿಲ್ಲ. ಭೂಕಂಪವಾಗಲಿಲ್ಲ. ಪ್ರಳಯವಾಗಲಿಲ್ಲ. ಹಾಗೆಯೆ ಒಂದು ರೀತಿಯಲ್ಲಿ ಈ ಎಲ್ಲವೂ ನಿಜ. ನಿಸರ್ಗವೆ ಅದರ ಕಾರಣಕರ್ತೃ. ಅದು ಕ್ರಿ.ಶ. 78. ಆ ನಗರಕ್ಕೆ ಹೊಂದಿಕೊಂಡು ಇದ್ದ ಮೌಂಟ್ ವಿಸೂವಿಯಸ್ ಪರ್ವತ ಮುನಿಸಿಕೊಂಡಿತು. ಮೊದಲು ಭೂಕಂಪವಾಯಿತು. ನಂತರ ಪರ್ವತ ಬೆಂಕಿ ಉಗುಳಿತು. ಕಾಕತಾಳೀಯವೆಂಬಂತೆ ಅದು ಆರಂಭವಾಗಿದ್ದು ಮಾತ್ರ ಸ್ಥಳೀಯ ರೋಮನ್ ಜನ ತಮ್ಮ ಅಗ್ನಿದೇವತೆಯ ಹಬ್ಬ ಮಾಡಿದ ಮಾರನೆಯ ದಿನ.
ಅಗ್ನಿಪರ್ವತ ಅನೇಕ ತಿಂಗಳುಗಳ ಕಾಲ ಬೆಂಕಿ ಮತ್ತು ಬೂದಿಯನ್ನು ಉಗುಳಿತು. ಹಲವರು ಇದ್ದ ಜಾಗದಲ್ಲಿಯೆ ಬೂದಿಯಲ್ಲಿ ಮುಚ್ಚಿಹೋಗಿ ಸತ್ತುಹೋದರು. ದಪ್ಪ ಪದರುಗಳ ಬೂದಿ ನಿಧಾನವಾಗಿ ನಗರವನ್ನು ಮುಚ್ಚುತ್ತ ಬಂತು. ಬದುಕುಳಿದವರು ಊರನ್ನು ತೊರೆದು ಹೋದರು. ಇಡೀ ಊರು ನಿರ್ಮಾನುಷವಾಯಿತು. ಕಾಲಾಂತರದಲ್ಲಿ ಇಂತಹ ಊರು ಇಲ್ಲಿತ್ತು, ಅದರ ಇತಿಹಾಸ ಇದು ಎನ್ನುವುದೆ ಸುತ್ತಮುತ್ತಲಿನ ಜನರಿಗೆ ಮರೆತು ಹೋಗುವಷ್ಟು ಕಣ್ಮರೆಯಾಗುತ್ತ ಬಂತು. ಆ ಊರು ಮತ್ತು ಅದರ ಸುತ್ತಲಿನ ಇನ್ನೂ ಒಂದೆರಡು ನಗರಗಳು ಹೀಗೆಯೆ ಸುಮಾರು 12 ವಿವಿಧ ಬಗೆಯ ಮಣ್ಣಿನ ಪದರಗಳಲ್ಲಿ ಹೂತುಹೋದವು.
ಆ ಉತ್ಖನನದ ಸಮಯದಲ್ಲಿ ಸಿಕ್ಕ 2000 ವರ್ಷಗಳ ಹಿಂದಿನ ಕಾಮಪ್ರಚೋದಕ ವರ್ಣಭಿತ್ತಿಚಿತ್ರಗಳದೆ ಒಂದು ದೊಡ್ಡ ಕತೆ! ನೇಪಲ್ಸ್ನಲ್ಲಿರುವ ಅವಶೇಷಗಳ ಮ್ಯೂಸಿಯಮ್ನ ರಹಸ್ಯ ಕೋಣೆಯಲ್ಲಿ ಇಟ್ಟಿರುವ ಆ ವರ್ಣಚಿತ್ರಗಳನ್ನು ನೋಡಲು ಚಿಕ್ಕವರಿಗೆ ಈಗಲೂ ಪ್ರವೇಶವಿಲ್ಲ! ಅನೇಕ ವರ್ಷಗಳ ಕಾಲ ವಯಸ್ಕರಿಗೂ ಇರಲಿಲ್ಲ!
ಅತಿಯಾದ ಪ್ರವಾಸೋದ್ಯಮ ಮತ್ತು ಪ್ರವಾಸಿಗರು. ಕೆಲವು ಪ್ರವಾಸಿಗರು ಗೋಡೆಯ ಮೇಲಿನ ಭಿತ್ತಿಚಿತ್ರಗಳ ಪದರವನ್ನು ಕಿತ್ತು ಅಥವ ಕೈಗೆ ಸಿಕ್ಕದ್ದನ್ನು ಬಾಚಿಕೊಂಡು ಒಯ್ಯುತ್ತಿದ್ದಾರಂತೆ.
ಫ್ರೆಡರಿಕ್ ಮ್ಯಾರಿಯಟ್ ಎನ್ನುವ ಲೇಖಕ ಅದ್ಭುತವಾಗಿ ಬರೆದಿದ್ದಾನೆ. ಅದನ್ನು ಈಗಿನ ಲಕ್ಷಾಂತರ ಕನ್ನಡಿಗರು ಓದಿಯೂ ಇದ್ದಾರೆ. ಹೇಗೆಂದರೆ, ಆ ಕಾದಂಬರಿಯನ್ನು ಗೋಪಾಲಕೃಷ್ಣ ಅಡಿಗರು ಕನ್ನಡಕ್ಕೆ
ಕಳೆದ ಏಳೆಂಟು ಶತಮಾನಗಳಿಂದ ಯೂರೋಪಿನ ಅನೇಕ ದೇಶಗಳಲ್ಲಿ ಕಂಡುಬರುವ, ಚಮತ್ಕಾರಿಕ ಟ್ರಿಕ್ಗಳನ್ನು, ಮ್ಯಾಜಿಕ್ಗಳನ್ನು ಮಾಡುತ್ತ, ಗುಂಪುಗುಂಪಾಗಿ ಅಲೆದಾಡುವ ಕಂದುಬಣ್ಣದ ಅಲೆಮಾರಿ ಜನಾಂಗವೆ ಜಿಪ್ಸಿಗಳು. ಬೇರೆಬೇರೆ ದೇಶಗಳಲ್ಲಿ ಬೇರೆಬೇರೆ ಹೆಸರಿನಲ್ಲಿ ಕರೆಯಲ್ಪಡುವ ಇವರನ್ನು ಸಾಮಾನ್ಯವಾಗಿ ಗುರುತಿಸುವುದು ರೋಮಾ ಜಿಪ್ಸೀಗಳು ಎಂದು. ಸ್ವಲ್ಪ ಈಜಿಪ್ಟ್ನವರಂತೆ ಕಾಣುತ್ತಿದ್ದುದ್ದರಿಂದ ಇಜಿಪ್ಸೀಯರು, ಜಿಪ್ಸಿಗಳು ಎಂದಾಯಿತು ಎನ್ನುತ್ತಾರೆ ಕೆಲವರು. ಶತಮಾನಗಳ ಕಾಲ ಇವರು ಯಾರು ಮತ್ತು ಯೂರೋಪಿಗೆ ಎಲ್ಲಿಂದ ಬಂದರು ಎನ್ನುವುದು ಅಷ್ಟು ಖಚಿತವಾಗಿ ಯಾರಿಗೂ ಗೊತ್ತಿರಲಿಲ್ಲ. ಆದರೆ ಸುಮಾರು ಇನ್ನೂರು ವರ್ಷಗಳ ಹಿಂದೆ ಒಬ್ಬ ಭಾಷಾಶಾಸ್ತ್ರಜ್ಞ ಜಿಪ್ಸಿಗಳ ರೊಮಾನಿ ಭಾಷೆಗೂ ಮತ್ತು ಕೆಲವು ಭಾರತೀಯ ಭಾಷೆಗಳಿಗೂ ಇದ್ದ ಸಾಮ್ಯತೆಗಳನ್ನು ಗಮನಿಸಿ, ಇವರು ಭಾರತೀಯ ಮೂಲದವರಿರಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ.
ಆದರೆ, ಇದು ಕೇವಲ ಭಾಷಾ ಅಧ್ಯಯನದಿಂದ ಮಾತ್ರ ಹೊರಬಂದ ಅಭಿಪ್ರಾಯಗಳು. ಭಾಷೆ ಒಂದು ರೀತಿ ಜಂಗಮವಾದ್ದರಿಂದ ಮತ್ತು ಈ ಜನಾಂಗವೂ ಅಲೆಮಾರಿ ಜಂಗಮ ಜನಾಂಗವಾದ್ದರಿಂದ ಇದಿಷ್ಟೇ ಪುರಾವೆ ಇವರು ಭಾರತೀಯ ಮೂಲದವರು ಎಂದು ಖಡಾಖಂಡಿತವಾಗಿ ಸಾಬೀತು ಮಾಡುವುದಿಲ್ಲವಲ್ಲ? ಹಾಗೆ ಅದು ಸಾಬೀತಾದದ್ದು ಮಾತ್ರ ತೀರಾ ಇತ್ತೀಚಿಗೆ; ಅದೂ 1990 ರಿಂದೀಚೆಗೆ. ಅದೂ ಹೇಗೆಂದರೆ, ಈ ಜಿಪ್ಸೀಗಳಿಗೆ ಬರುವ ಕೆಲವು ಕಾಯಿಲೆ ಮತ್ತು ಡಿಎನ್ಎ ಪುರಾವೆಗಳಿಂದ. ಯೂರೋಪು, ಅಮೆರಿಕಗಳಲ್ಲೆಲ್ಲ ಹರಡಿರುವ ಜಿಪ್ಸೀಗಳಿಗೆ ಒಂದು ರೀತಿಯ ಸ್ನಾಯು ದೌರ್ಬಲ್ಯದ ಕಾಯಿಲೆ ಬರುತ್ತದೆ. ಈ ವಿಶಿಷ್ಟ ಕಾಯಿಲೆ ಭಾರತೀಯ ಮೂಲದ ಜನರಿಗೆ ಬಿಟ್ಟರೆ ಬೇರೆಯವರಿಗೆ ಬರುವುದಿಲ್ಲ. ಹಾಗೆಯೆ, ಬಹುಪಾಲು ಜಿಪ್ಸಿಗಳಲ್ಲಿರುವ ಒಂದು ಬಗೆಯ ಕ್ರೋಮೊಸೋಮ್ ಮತ್ತು ಮೈಟೊಕಾಂಡ್ರಿಯಲ್ ಡಿಎನ್ಎ ಭಾರತದ ಉಪಖಂಡದವರಲ್ಲಿ ಮಾತ್ರ ಕಂಡುಬರುತ್ತದೆ.
ಇವರು ಭಾರತೀಯ ಮೂಲದವರು ಎನ್ನುವುದು ವೈಜ್ಞಾನಿಕವಾಗಿ ಖಚಿತವಾದರೂ, ಇಲ್ಲಿಂದ ಯೂರೋಪಿಗೆ ಹೇಗೆ ಹೋದರು ಎನ್ನುವುದಕ್ಕೆ ಖಚಿತ ಉತ್ತರಗಳಿಲ್ಲ. ಹತ್ತನೆ ಶತಮಾನದಲ್ಲಿ ಇರಾನಿನ ಘಜ್ನಿ ಮೊಹಮ್ಮದ್ ಸುಮಾರು ಐದು ಲಕ್ಷ ಹಿಂದುಗಳನ್ನು ಗುಲಾಮರನ್ನಾಗಿ ತನ್ನ ದೇಶಕ್ಕೆ ಎಳೆದುಕೊಂಡು ಹೋದ; ಇವತ್ತಿನ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿರುವ ದುರ್ಗಮ ಬೆಟ್ಟಗಳಲ್ಲಿ ಇವರನ್ನು ಎಳೆದುಕೊಂಡು ಹೋಗುವಾಗ ಅನೇಕ ಸಾವುನೋವುಗಳಾದವು; ಹಾಗಾಗಿಯೆ ಆ ಬೆಟ್ಟಗಳಿಗೆ ಹಿಂದುಕುಷ್ ಪರ್ವತಗಳು ಎಂಬ ಹೆಸರು ಬಂದಿದ್ದು; ಹಾಗೆ ದಾಳಿಕೋರರು ಎಳೆದುಕೊಂಡು ಹೋದ ಭಾರತೀಯರೆ ಜಿಪ್ಸೀಗಳು ಎನ್ನುತ್ತಾರೆ ಕೆಲವು ಇತಿಹಾಸತಜ್ಞರು. ಮತ್ತೆ ಕೆಲವರು, ಈ ಜಿಪ್ಸೀಗಳು ಕೆಳಜಾತಿಯ ಹಿಂದೂಗಳಾಗಿದ್ದರು; ಇಸ್ಲಾಮಿನ ಆಕ್ರಮಣವನ್ನು ತಡೆಯಲು ಇವರನ್ನು ಸೈನ್ಯಕ್ಕೆ ಸೇರಿಸಿ, ಕ್ಷತ್ರಿಯ ಜಾತಿಗೆ ಬಡ್ತಿ ನೀಡಿ, ಮುಸ್ಲಿಮ್ ದಾಳಿಕೋರರ ವಿರುದ್ಧ ಹೋರಾಡಲು ಪಶ್ಚಿಮಕ್ಕೆ ಕಳುಹಿಸಲಾಯಿತು, ಎನ್ನುತ್ತಾರೆ.
ಅವರು ಯಾವುದೆ ಕಾರಣದಿಂದ ಹೊರಹೋಗಿದ್ದರೂ, ಭಾರತದಿಂದ ಹೋದ ನಂತರ ಅವರಿಗೆ ಇಲ್ಲಿನ ಸಂಪರ್ಕ ಸಂಪೂರ್ಣ ಕಳಚಿಹೋಗಿ, ನಂತರ ಅವರು ಒಂದು ವಿಭಿನ್ನ ಗುಂಪಾಗಿ ಯೂರೋಪಿನಲ್ಲಿ ತಲೆಯೆತ್ತಿದ್ದು ಮಾತ್ರ ನಿಜ.
ಕಳೆದ ತಿಂಗಳು ವಿಶ್ವಸಮುದಾಯದಲ್ಲಿ ಇಟಲಿ ಸುದ್ದಿ ಮಾಡಿದ್ದು ಇದೇ ಕಾರಣಕ್ಕೆ. ತನ್ನದೇ ಸದಸ್ಯ ರಾಷ್ಟ್ರವಾದ ಇಟಲಿಯ ಈ ಕೃತ್ಯವನ್ನು ಯೂರೋಪಿಯನ್ ಯೂನಿಯನ್ನ ಪಾರ್ಲಿಮೆಂಟ್ ಖಚಿತ ಮಾತುಗಳಲ್ಲಿ ಖಂಡಿಸಿತು. ಇಟಲಿಯಲ್ಲಿ ಮತ್ತೆ ತಲೆ ಎತ್ತುತ್ತಿರುವ ಫ್ಯಾಸಿಸ್ಟ್ ನೀತಿಯ ಪುರಾವೆ ಇದು ಎಂದರು ಅಲ್ಲಿಯ ಕೆಲವರು. ಯೂರೋಪಿನಲ್ಲಿ ಚಿಗುರೊಡೆಯುತ್ತಿರುವ ರೇಸಿಸಮ್ನ ಕುರುಹು ಇದು ಎಂದರು. ಇದೇ ಸಮಯದಲ್ಲಿ ಇನ್ನೂ ಒಂದು ಘಟನೆ ನಡೆಯಿತು. ಎರಡು ವಾರದ ಹಿಂದೆ ಇಟಲಿಯ ಬೀಚೊಂದರಲ್ಲಿ ಇಬ್ಬರು ಜಿಪ್ಸಿ ಹುಡುಗಿಯರು ನೀರಾಟ ಆಡುತ್ತ ಸಮುದ್ರದ ನೀರಿನಲ್ಲಿ ಮುಳುಗಿ ಪ್ರಾಣಕಳೆದುಕೊಂಡರು. ನಂತರ ಅವರ ಶವಗಳನ್ನು ಮೇಲಕ್ಕೆತ್ತಿ ಮರಳಿನ ಮೇಲೆ ಸ್ವಲ್ಪಕಾಲ ಮಲಗಿಸಲಾಯಿತು. ಆ ಸಮಯದಲ್ಲಿ ಕೆಲವು ಬಿಳಿಯ ಇಟಾಲಿಯನ್ನರು ಶವಗಳಿಂದ ಅನತಿ ದೂರದಲ್ಲಿ ತಮ್ಮ ಪಾಡಿಗೆ ತಾವು ಸೂರ್ಯಸ್ನಾನ ಮಾಡುತ್ತ, ವಿರಾಮದ ಮೋಜು ಅನುಭವಿಸುತ್ತ, ಏನೂ ಆಗಿಯೆ ಇಲ್ಲವಂತೆ ಕುಳಿತಿದ್ದರು. ಅವರ ಈ ವರ್ತನೆಯ ಫೋಟೋಗಳು ಮಾರನೆ ದಿನ ಇಟಲಿಯ ದಿನಪತ್ರಿಕೆಗಳಲ್ಲಿ ಕಾಣಿಸಿಕೊಂಡವು. ಇಟಲಿಯ ಸಜ್ಜನರು ಸಿಡಿದೆದ್ದರು. ಉಗ್ರಮಾತುಗಳಲ್ಲಿ ತಮ್ಮದೇ ಜನರ ವರ್ತನೆಯನ್ನು ಖಂಡಿಸಿದರು. ಇಟಲಿ ಈಗ ಅಂತಃಸಾಕ್ಷಿಯ ಪ್ರಶ್ನೋತ್ತರದಲ್ಲಿ ತೊಡಗಿಕೊಂಡಿದೆ. ಇವು ಅಲ್ಲಿಯ ತಲ್ಲಣಗಳು... ಭಾರತೀಯ ಮೂಲದ ವಿಶ್ವಜನಾಂಗವೊಂದು ಇನ್ನೂ ಅನುಭವಿಸುತ್ತಿರುವ ತಾರತಮ್ಯಗಳು...

