Nov 17, 2009

ದುಡ್ಡು-ಸಮಯ-ಪ್ರಭಾವ ಇಲ್ಲದಿದ್ದರೆ ನ್ಯಾಯ ಕೇಳಬಾರದು. ಎಲ್ಲೂ...

ನ್ಯಾಯ ಪಡೆದುಕೊಳ್ಳುವ ಬಗ್ಗೆ ಇನ್ನೊಂದು ಮಾತು.

ಹಣ-ಅಧಿಕಾರ-ಪ್ರಭಾವ-ವಶೀಲಿಗಳ ಮೇಲೆ ನಡೆಯುತ್ತಿರುವ ಸಮಾಜಗಳಲ್ಲಿ ಇವು ಇಲ್ಲದ ವ್ಯಕ್ತಿಗಳು ನ್ಯಾಯ ಕೇಳಬಾರದು. ಅವು ದಕ್ಕುವುದಿಲ್ಲ. ಅನ್ಯಾಯಕ್ಕೆ ಒಳಗಾಗುವ ಪರಿಸ್ಥಿತಿಯಿಂದ ತಪ್ಪಿಸಿಕೊಂಡು ಮನೆ-ಮಕ್ಕಳು ಸುತ್ತ ಓಡಾಡುವುದೆ ಕ್ಷೇಮ. ಅನ್ಯಾಯ ಎಸಗಿದವರು ನಿಮಗಿಂತ ಕಮ್ಮಿ ಬಲಿಷ್ಠರಾಗಿದ್ದರೆ ಮಾತ್ರ ನ್ಯಾಯ ಪಡೆಯಲು ಅವಕಾಶ ಉಂಟು.

ಓಪ್ರಾ ವಿನ್‍ಫ್ರೇ ಒಮ್ಮೆ ತನ್ನ ಶೋನಲ್ಲಿ ನಾನು ಬರ್ಗರ್ ತಿನ್ನುವುದಿಲ್ಲ ಎನ್ನುವಂತಹ ಮಾತನ್ನು ಆಡಿದ್ದಕ್ಕೆ ಮಾಂಸಕ್ಕಾಗಿ ದನ ಸಾಕುವ ಅಮೆರಿಕದ ದೊಡ್ಡ ರೈತರುಗಳು ಆಕೆಯನ್ನು ಕೋರ್ಟಿಗೆ ಎಳೆದಿದ್ದರು. ಓಪ್ರಾ ಮೂರು ಸಲ ಸಾಕ್ಷಿಕಟ್ಟೆಯಲ್ಲಿ ನಿಂತು ವಿಚಾರಣೆಗೆ ಉತ್ತರಿಸಬೇಕಾಯಿತು. ಮೂರ್ನಾಲ್ಕು ವರ್ಷಗಳ ನಂತರ ನ್ಯಾಯಲಯ ಆಕೆ ದನದ ಮಾಂಸವನ್ನು ಹೀನಾಯಿಸಲಿಲ್ಲ ಎಂದು ಆಕೆಯ ಪರವಾಗಿ ತೀರ್ಪು ನೀಡಿತು. ಓಪ್ರಾ ಗಟ್ಟಿಗಿತ್ತಿ-ಎಲ್ಲಾ ತರದಲ್ಲೂ.

ಮೋ ಪಾರ್ರ್ ಎನ್ನುವ ಅಮೆರಿಕದ ಅರೆ ರೈತ ತನ್ನ ನೆರೆಯ ರೈತರಿಗೆ ಬೀಜ ಸಂಸ್ಕರಣೆ ಮಾಡಿಕೊಡುವಾತ. ಆತನ ಕೆಲಸದಿಂದ ತಮಗೆ ನಷ್ಟವಾಗುತ್ತಿದೆ ಮತ್ತು ಮೋಸವಾಗುತ್ತಿದೆ ಎಂದು ಮೊನ್ಸಾಂಟೊ ಬೀಜಕಂಪನಿ ಆತನ ಮೇಲೆ ದಾವೆ ಹಾಕಿತು. ಆತನೂ ವಕೀಲರನ್ನಿಟ್ಟ. ಕಾನೂನು ವೆಚ್ಚಗಳನ್ನು ಭರಿಸಲಾರದೆ ಒಂದಷ್ಟು ದಿನಗಳ ನಂತರ ಮೊನ್ಸಾಂಟೋ ಕಂಪನಿಯ ಷರತ್ತುಗಳಿಗೆ ಶರಣಾದ. ಆತನಿಗೂ ಹಣ-ಸಮಯ ಇದ್ದಿದ್ದರೆ ಆತನೂ ಗೆಲ್ಲುತ್ತಿದ್ದನೇನೊ! ಆದರೆ ಮೊನ್ಸಾಂಟೊ ಅವನಿಗಿಂತಲೂ ಬಲಿಷ್ಠ ಶಕ್ತಿ-ಎಲ್ಲಾ ವಿಧದಲ್ಲೂ.



ಪರಿಸ್ಥಿತಿ ಹೆಚ್ಚುಕಮ್ಮಿ ಎಲ್ಲಾ ಕಡೆಯೂ ಹಾಗೆಯೆ. ಹೇಡಿ ತನಗಿಂತ ಬಲಿಷ್ಠರನ್ನು ಎದುರು ಹಾಕಿಕೊಳ್ಳಲಾರ. ಜಾಣರೂ. ಅದೇ ಒಂದು ಸಾಮಾಜಿಕ ಮೌಲ್ಯ.

Nov 15, 2009

ಗೆಳೆಯ, ನಿನ್ನ ಕೊಲೆಗೆ ನ್ಯಾಯ ಸಿಗದು. ಕ್ಷಮಿಸು. ಆದರೂ...

ಸರಿಯಾಗಿ ಹತ್ತು ವರ್ಷಗಳ ಸ್ನೇಹ. 1999 ರ ಇಂತಹುದೇ ದಿನಗಳಲ್ಲಿ ಹತ್ತಿರವಾಗಿದ್ದು. ರಕ್ತಸಂಬಂಧಿಕನಲ್ಲ. ಆಸ್ತಿಪಾಸ್ತಿ ವಿಷಯ ಬಿಟ್ಟು ಮಿಕ್ಕೆಲ್ಲದರಲ್ಲೂ ಅಣ್ಣನಂತಿದ್ದ. ಮೂರ್ನಾಲ್ಕು ದಿನಗಳ ಹಿಂದೆ ಕಣ್ಮರೆಯಾಗಿ ಹೋದ. ಲೋಕಕ್ಕೆ ವಿಷಯ ಇಂದು ಗೊತ್ತಾಯಿತು. ಆತನ ಕೊಲೆಯಾಗಿದೆ. ನಮ್ಮ ವ್ಯವಸ್ಥೆಯ ಭ್ರಷ್ಟಾಚಾರದ ವಿರುದ್ಧ ತನ್ನದೆ ನೆಲೆಯಲ್ಲಿ ಮಾಡುತ್ತಿದ್ದ ಹೋರಾಟ ಆತನ ಬಲಿ ತೆಗೆದುಕೊಂಡಿತು. ಆದರೆ ಅದು ಹಾಗೆ ದಾಖಲಾಗುವುದಿಲ್ಲ. ಈಗ ನಾನು ಮಾಡದ ಹೊರತು.

ಮಂತ್ರಿ ಮತ್ತು ಅತನ ಹಿಂಬಾಲಕರು ದುಷ್ಟನೊಬ್ಬನ ಬಳಿ ಹಣ ತೆಗೆದುಕೊಂಡು ದಾಖಲೆಗಳನ್ನು ಬದಲಾಯಿಸಿ ರಾತ್ರೋರಾತ್ರಿ ಭ್ರಷ್ಟಾಚಾರದ ಕೆಲಸ ಮಾಡದೆ ಹೋಗಿದ್ದರೆ ವಿಷಯ ಇಲ್ಲಿಯ ತನಕ ಹೋಗುತ್ತಿರಲಿಲ್ಲ. ಆ ವಿಷಯದ ಬಗೆಗಿನ ವ್ಯಕ್ತಿಗಳ ನಡುವಿನ ವೈಯಕ್ತಿಕ ಬಡಿದಾಟಗಳಲ್ಲಿ ಗೆಳೆಯನೂ ಪಾಲು ತೆಗೆದುಕೊಂಡ. ಕೊಲೆಗಡುಕನ ನ್ಯಾಯಬಾಹಿರ ಕೆಲಸಗಳು, ಫೋರ್ಜರಿ, ಆತ ಲಂಚ ಕೊಟ್ಟ ಮಂತ್ರಿಯ ವಿವರ, ಆತನಿಗೆ ಸಹಕರಿಸಿದ ಅಧಿಕಾರಿ ವರ್ಗ, ಇವೆಲ್ಲ ಲೋಕಾಯುಕ್ತಕ್ಕೂ ಗೊತ್ತಿತ್ತು. ಆದರೆ ಇಂತಹುವುಗಳಿಗೆ ನಮ್ಮಲ್ಲಿ ಶಿಕ್ಷೆ ಇಲ್ಲ. ದುಷ್ಟನನ್ನು ಈ ವ್ಯವಸ್ಥೆ ತಡೆಯಲಿಲ್ಲ. ಸಮಾಜ ಬಹಿಷ್ಕರಿಸಲಿಲ್ಲ. ಇವೆಲ್ಲ ಗೊತ್ತಾಗದ ಗೆಳೆಯ ಆತನನ್ನು ನಾನು ತಡೆದೆ ಎಂದುಕೊಂಡ. ಆದರೆ, ನಗುನಗುತ್ತಲೆ ಸಂಜೆಯೆಲ್ಲ ಜೊತೆಗಿದ್ದ ಕೊಲೆಗಡುಕ ಅದೇ ದಿನ ಮುಗಿಸಿಬಿಟ್ಟ. ಸಾಯಿಸುವುದಕ್ಕಿಂತ ಒಂದೆರಡು ಗಂಟೆಗಳ ಮೊದಲಷ್ಟೆ ತಾನು ಸಾಯಿಸಲಿರುವವನ ಮಗನನ್ನು ಅವನೆದುರೇ ಮುದ್ದಾಡಿದ್ದ. ಕೊಂಡಾಡಿದ್ದ. ಬಹುಶ: ಇನ್ನೊಂದೆರಡು ಗಂಟೆಗಳ ನಂತರ ಅನಾಥನಾಗಲಿರುವ ಆತನನ್ನು ನೋಡುತ್ತ ಆಡಿದ ವ್ಯಂಗ್ಯದ ಮಾತುಗಳು ಅವು. ಗೊತ್ತುಮಾಡಿಕೊಳ್ಳಬೇಕಿದ್ದವ ತನ್ನ ಮುಗ್ಧತೆಯಲ್ಲಿ ಮೈಮರೆತ. ಅಪ್ಪನನ್ನು ಕಳೆದುಕೊಂಡವ ಜೀವಮಾನ ಮರೆಯಲಾರ.

ಕೊಲೆಗಡುಕನ ಹತ್ತಿರ ಲಂಚ ತೆಗೆದುಕೊಂಡ ಸಚಿವನಿಗೆ ಈ ಸಾವು ನೋವು ಗೊತ್ತೇ ಆಗದಿರಬಹುದು. ಕೊಲೆಗಡುಕನನ್ನು ವಿಚಾರಣೆ ಮಾಡುವಾಗ ಆತನ ಪರವಾಗಿ ಫೋಲಿಸರೊಂದಿಗೆ ಮಾತನಾಡಿದ ಮಾಜಿ ಸಚಿವನಿಗೆ ತಾನು ಎಂತಹುದಕ್ಕೆ ಬೆಂಬಲಿಸುತ್ತಿದ್ದೇನೆ ಎನ್ನುವುದು ಗೊತ್ತಿದ್ದೂ ಮಾಡಿರಬಹುದು. ನಮ್ಮ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆ ಕ್ರೂರವೂ, ಅಮಾನುಷವೂ ಆಗಿ ಹೋಗಿದೆ. ಭ್ರಷ್ಟಾಚಾರ ಈಗ ಸಮಸ್ಯೆಯೇ ಅಲ್ಲ. ಹಾಗೆಯೆ, ರಾಜಕೀಯ ಒತ್ತಡ ಹಾಕದೆ ಹೋಗಿದ್ದರೆ, ರಾಜಕಾರಣಿಯೊಬ್ಬ ಪೋಲಿಸ್ ಅಧಿಕಾರಿಯೊಬ್ಬನಿಗೆ ಫೋನ್ ಮಾಡಿ ಏನೋ ನೋಡ್ರಿ ಎನ್ನದೆ ಹೋಗಿದ್ದರೆ ಪೋಲಿಸರು ಕೊಲೆಗಡುಕನನ್ನು ಮಾತನಾಡಿಸಲೂ ಹೋಗುತ್ತಿರಲಿಲ್ಲ. ಅವರಿಗೆ ಗೊತ್ತಿದ್ದರೂ. ಈಗಲೂ ಅವನು ಹೊರಗೇ ಇರುತ್ತಿದ್ದ. ಈಗಲೂ ಎಷ್ಟು ದಿನ ಒಳಗಿರುತ್ತಾನೆ ಎನ್ನುವ ಖಾತ್ರಿ ಇಲ್ಲ. ಶಿಕ್ಷೆ ಆದಾಗಲೆ ಶಿಕ್ಷೆ ಆದ ಖಾತ್ರಿ. ಇಡೀ ಸಮಾಜ ದುಡ್ಡು, ಬಲ, ಮತ್ತು ಪ್ರಭಾವದ ಮೇಲೆ ನಡೆಯುತ್ತಿದೆ. ಅನ್ಯಾಯ ಎಸಗಲೇನೊ ಅದು ಬೇಕು. ಆದರೆ ನ್ಯಾಯ ಕೇಳುವುದಕ್ಕಂತೂ ಅದಕ್ಕಿಂತ ಹೆಚ್ಚಿಗೆ ಬೇಕು.

ಇಂತಹ ವಿರೋಧಾಭಾಸಗಳ ನಡುವೆ ನ್ಯಾಯ ಕೇಳುವವನು ಇವತ್ತು ನಗೆಪಾಟಲು; ಅವನಿಗೆ ಬಲ, ಹಣ, ಪ್ರಭಾವವಿಲ್ಲದ ಹೊರತು. ನಮ್ಮ ಜನಪ್ರಿಯ ಮಾಧ್ಯಮಗಳು, ಜನಪ್ರಿಯ ಕಲೆಗಳು, ನಮ್ಮ ಆದರ್ಶಪ್ರಾಯರು, ಸದ್ಯದ ಸಮಾಜದ ಸ್ಥಿತಿ, ಎಲ್ಲವೂ ನಿಸ್ಸಹಾಯಕರನ್ನು, ನ್ಯಾಯವಂತರನ್ನು, ಪ್ರಾಮಾಣಿಕರನ್ನು, ಬಡವರನ್ನು, ಹಂಗಿಸುತ್ತ, ಕುಗ್ಗಿಸುತ್ತ, ಧೈರ್ಯಗೆಡಿಸುತ್ತ, ನೀತಿಗೆಡಿಸುತ್ತ ಸಾಗುತ್ತಿದೆ. ವೈಯಕ್ತಿಕ ಲಾಭ ನೋಡಿಕೊಳ್ಳದ ಯಾವೊಬ್ಬನೂ, ಲಾಭವಿಲ್ಲದ ಯಾವೊಂದು ಕೆಲಸವೂ, ಇಂದು ತಿರಸ್ಕಾರಕ್ಕೆ ಅರ್ಹ.

ಇವತ್ತು ನ್ಯಾಯ-ನೀತಿ-ಪ್ರಾಮಾಣಿಕತೆಯ ಬಗ್ಗೆ ಮಾತನಾಡುವ ಅನೇಕ ಶ್ರೀಮಂತರು ನಮ್ಮ ನಡುವೆ ಇದ್ದಾರೆ. ಹಲವರು ಅಂತರರಾಷ್ಟೀಯ ಮಟ್ಟದಲ್ಲಿ ಭಾಷಣ ಮಾಡಬಲ್ಲವರು. ಆದರೆ, ಕೋಟ್ಯಾಂತರ ರೂಪಾಯಿಗಳ ಲೆಕ್ಕದಲ್ಲಿ ದುಡ್ಡು ಮಾಡುತ್ತಿರುವ ಯಾವೊಬ್ಬ ಭಾರತೀಯನೂ ಇವತ್ತು ಭ್ರಷ್ಟಾಚಾರದ ಸೋಂಕಿಲ್ಲದೆ ಅಷ್ಟೊಂದು ದುಡ್ಡು ಮಾಡಲು ಸಾಧ್ಯವಿಲ್ಲ. ಭ್ರಷ್ಟಾಚಾರ ತಮ್ಮ ಎದುರಿಗೇ ನಡೆಯುತ್ತಿದ್ದರೂ ಯಾವೊಬ್ಬ ನೀತಿಕಳ್ಳರೂ whistleblowers ಆಗುತ್ತಿಲ್ಲ. ತಮ್ಮ ಹತ್ತಿರ ಲಂಚ ಇಸಿದುಕೊಳ್ಳುವ ಕಳ್ಳನಿಂದಲೆ ಸಾರ್ವಜನಿಕವಾಗಿ ಹೊಗಳಿಸಿಕೊಂಡು, ಅವನ ಜೊತೆಯೆ ವೇದಿಕೆ ಹಂಚಿಕೊಳ್ಳುತ್ತಾರೆ. ಆರ್ಥಿಕವಾಗಿ ಮತ್ತು ಪ್ರಭಾವಿಯಾಗಿ ಬಲಿಷ್ಠರಾದ ಇವರೆಲ್ಲ ಪ್ರತಿಭಟಿಸಬೇಕಾದ ಸಮಯದಲ್ಲಿ ಪ್ರತಿಭಟಿಸಿದ್ದರೆ ದುಷ್ಟ ಮಂತ್ರಿಗೆ ಲಂಚ ಕೊಡುವ ಅವಕಾಶ ಸೃಷ್ಟಿಯಾಗುತ್ತಿರಲಿಲ್ಲ. ಸಮಾಜದಲ್ಲಿ ನೈತಿಕತೆ ಮತ್ತು ಮೌಲ್ಯ ಬೆಳೆಸಲು ಈ ಕಳ್ಳರು ಏನೊಂದೂ ತ್ಯಾಗ ಮಾಡುತ್ತಿಲ್ಲ. ಕಷ್ಟ ತೆಗೆದುಕೊಳ್ಳುತ್ತಿಲ್ಲ. ಮಾಡುವವರನ್ನು ಸಮಾಜ ತುಳಿತುಳಿದು ಅಪ್ಪಚ್ಚಿ ಮಾಡುತ್ತಿದೆ. ನ್ಯಾಯ ಕೊಡುವವನೂ, ಅನ್ಯಾಯ ಮಾಡುವವನೂ ಒಬ್ಬನೇ ಆಗಿದ್ದಾರೆ. ಅನ್ಯಾಯದಲ್ಲಿ, ಭ್ರಷ್ಟತೆಯಲ್ಲಿ ಪಾಲುದಾರರಾದವರೆ ತಾವು ಮಾಡುತ್ತಿರುವ ಕೆಲಸ ಭ್ರಷ್ಟಾಚಾರವನ್ನು ತಡೆಗಟ್ಟುತ್ತದೆ ಎಂದು ಲೋಕಕ್ಕೆ ಸಾರುತ್ತಿದ್ದಾರೆ. ವೈಯಕ್ತಿಕವಾಗಿ ಇವನ್ನೆಲ್ಲ ಕಂಡು ಅನುಭವಿಸದ ಮುಗ್ಧರು ಇವೆಲ್ಲ ಗೊತ್ತಾಗದೆ ತಮ್ಮ ಪ್ರಾಮಾಣಿಕತೆ ಮತ್ತು ಮುಗ್ಧತೆಯ ಅಹಂಕಾರದಲ್ಲಿ ಇದ್ದಾರೆ.

ಗೆಳೆಯನ ಸಾವಿಗೆ ಯಾವ ನ್ಯಾಯಾಲಯದ ನ್ಯಾಯತೀರ್ಮಾನವೂ ನ್ಯಾಯ ಒದಗಿಸುವುದಿಲ್ಲ. ಆದರೆ ಮತ್ತೊಂದು ಜೀವದ ಪ್ರಾಣ ತೆಗೆಯಬಲ್ಲವರು ಹಾಗೆ ಮಾಡುವುದನ್ನು ತಡೆಯುವ ವ್ಯವಸ್ಥೆ ಸೃಷ್ಟಿಸಲು ಹೋರಾಡುತ್ತಿರುವ ಅನೇಕ ಸಜ್ಜನರ ಹೋರಾಟಕ್ಕೆ ನನ್ನ ಪಾಲೂ ಹಾಕದಿದ್ದರೆ ನಾನು ದ್ರೋಹಿ. ನನ್ನ ಮಕ್ಕಳಿಗೆ ಮತ್ತು ಸ್ನೇಹಿತನ ಮಗನಿಗೆ ತಮ್ಮೆದುರೇ ಓಡಾಡುವ ಕೊಲೆಗಡುಕನನ್ನು ತೋರಿಸಿ, 'ನೋಡಿ, ಆತನಿಗೆ ಈ ವ್ಯವಸ್ಥೆ ಶಿಕ್ಷೆ ವಿಧಿಸಲಿಲ್ಲ' ಎಂದು ಹೇಳುವಂತಹ ನಿಕೃಷ್ಟ ಸ್ಥಿತಿಯೊಂದನ್ನು ನಾನು ಭರಿಸಲಾರೆ. ಅವರು ನ್ಯಾಯಾಲಯ ಮತ್ತು ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆ ನಿರಾಶಾವಾದಿಗಳಾಗುವಂತೆ ಮಾಡಲಾರೆ. ಅದು ನನ್ನ ತಲೆಮಾರಿಗೇ ಸಾಕು.

Nov 9, 2009

ನೆರೆ ಮತ್ತು ಪರಿಹಾರದ ರೀತಿ-ನೀತಿಯ ಕುರಿತಾಗಿ ಮಾತುಕತೆ...

ನೆರೆ ಬಂತು. ಅದರ ಹಿಂದೆಯೆ ಲಕ್ಷಾಂತರ ಜನರ ಬಾಳು ಬೀದಿಗೆ ಬಂತು. ನಾಡು ಮರುಗಿತು. ಹಲವರು ಪ್ರಾಮಾಣಿಕವಾಗಿಯೆ ತನು-ಮನ-ಧನದ ಸಹಾಯ ನೀಡಿದರು. ಸರ್ಕಾರವೆ ದೇಣಿಗೆ ಕೇಳಿಕೊಂಡು ಬೀದಿಗೆ ಬಂತು. ಪರಿಹಾರ ಕಾರ್ಯ ನಡೆಸಲು ಮತ್ತು ಆ ಮೂಲಕ ಪ್ರತಿಷ್ಠೆ ಬೆಳೆಸಿಕೊಳ್ಳಲು ಪೈಪೋಟಿ ಆರಂಭವಾಯಿತು. ನೆರೆ ಮತ್ತು ಇನ್ನೊಬ್ಬರ ನೋವು-ಅಸಹಾಯಕತೆ ಸಹ ದುರುಳರ ಆಟದಲ್ಲಿ ದಾಳವಾಯಿತು. ಪಣವಾಯಿತು.

ಇದು ಸಾಮಾಜಿಕ ಮತ್ತು ರಾಜಕೀಯ ನೆಲೆಯಲ್ಲಿ ಕರ್ನಾಟಕಕ್ಕೆ ನಾಚಿಕೆಗೇಡಿನ ಸಂದರ್ಭ. ಸದ್ಯದ ಸ್ಥಿತಿಗೆ ರಾಜಕಾರಣಿಗಳನ್ನು ದೂರುವುದು ಬಹಳ ಸುಲಭ. ಆದರೆ ಅದು ಆತ್ಮವಂಚನೆ ಕೂಡ. ಇಂತಹ ಮೃಗೀಯ ಅರಣ್ಯ ನ್ಯಾಯದ ಪರಿಸ್ಥಿತಿ ನಿರ್ಮಾಣದಲ್ಲಿ ತಮ್ಮ ಪಾಲೂ ಇರುವುದನ್ನು ಜನ ಮರೆಯಬಾರದು.

ಇಂತಹ ಕತ್ತಲ ಪರಿಸ್ಥಿತಿಯಲ್ಲಿ, ಬೆಳಕಿನ ಸಮಯಕ್ಕಾಗಿ ಒಂದು ಕೆಂಡ ಕಾಪಿಟ್ಟುಕೊಳ್ಳುವುದೆ ಪ್ರಯಾಸದ ಕೆಲಸ. ಪ್ಲೇಟೊ ಸ್ಥಾಪಿಸಿದ "ಅಕಾಡೆಮಿ"ಯನ್ನು ದೊರೆ ಜಸ್ಟೀನಿಯನ್ ಕ್ರಿ.ಶ. 529 ರಲ್ಲಿ ಮುಚ್ಚುವುದರೊಂದಿಗೆ ಯೂರೋಪಿನಲ್ಲಿ ಕಗ್ಗತ್ತಲ ಯುಗ ಆರಂಭವಾಯಿತು ಎಂದು ಕೆಲವರು ಆಭಿಪ್ರಾಯ ಪಡುತ್ತಾರೆ. ಆಧುನಿಕ ಮತ್ತು ಪ್ರಬುದ್ಧ ಚಿಂತನೆಗಳು ಕನ್ನಡದಲ್ಲಿ ನೆಲೆಕಂಡುಕೊಳ್ಳುವುದೆ ಕಷ್ಟವಾಗುತ್ತಿದೆ ಇತ್ತೀಚೆಗೆ. ಚಿಂತನೆ ಮತ್ತು ಮೌಲ್ಯಗಳು ಒಂದು ರೀತಿಯಲ್ಲಿ ಹಿಮ್ಮೊಗವಾಗಿ ಚಲಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕೆಲವು ಕಠಿಣ ಮತ್ತು ನೇರಪ್ರಶ್ನೆಗಳನ್ನು ಕೇಳಿಕೊಳ್ಳುವಂತಹ ಸಂದರ್ಭವನ್ನು ಬೆಂಗಳೂರಿನ "ಸಂವಹನ" ತಂಡ ನಿರ್ಮಿಸಿಕೊಂಡಿದೆ. ಈ ಗೋಷ್ಠಿ ನೆರೆ ಮತ್ತು ಪರಿಹಾರದ ಸುತ್ತಮುತ್ತ ಇದ್ದರೂ ಅಲ್ಲಿ ಕರ್ನಾಟಕದ ಹಾಲಿ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯೂ ವಿಮರ್ಶೆಗೆ ಒಳಗಾಗುವುದನ್ನು ನಾವು ಸಕಾರಣವಾಗಿಯೆ ಊಹಿಸಬಹುದು.ಈ ಕಾರ್ಯಕ್ರಮವನ್ನು ಪತ್ರಿಕೆಗಳು ಎಷ್ಟು ವಿಸ್ತಾರವಾಗಿ ವರದಿ ಮಾಡುತ್ತವೆಯೋ ಗೊತ್ತಿಲ್ಲ. ಹಾಗಾಗಿ, ಅಲ್ಲಿ ಚರ್ಚೆಗೆ ಒಳಪಡುವ ವಿಚಾರಗಳನ್ನು ಪೂರ್ಣಪ್ರಮಾಣದಲ್ಲಿ ಕೇಳಲಾಗದ ಖೇದ ನನ್ನದು.

ಈ ಕಾರ್ಯಕ್ರಮದ ಬಗ್ಗೆ ಪತ್ರಕರ್ತ "ದೇಸಿಮಾತಿ"ನ ದಿನೇಶ್ ಕುಮಾರ್ ಬರೆದಿರುವ ಲೇಖನ ಇಲ್ಲಿದೆ.

ಗೋಷ್ಠಿಯ ವಿವರಗಳು.