Aug 9, 2007

ಜೀವಜಲಕ್ಕಾಗಿ ೧೬ ದೇಶಗಳಲ್ಲಿ ಓಡುತ್ತಿರುವ ಕೋಲಾರದ ಸುನೀಲ್...

(ವಿಕ್ರಾಂತ ಕರ್ನಾಟಕ - ಆಗಸ್ಟ್ 17, 2007ರ ಸಂಚಿಕೆಯಲ್ಲಿನ ಬರಹ)

  • ನಾವು ನೀರಿನಂತೆ ಓಡುತ್ತೇವೆ. ನೀರಿಗಾಗಿ ಓಡುತ್ತೇವೆ.
  • ನಮ್ಮ ಭೂಮಿಯ ಮೇಲಿನ ಪ್ರತಿ ಐವರಲ್ಲಿ ಒಬ್ಬರನ್ನು ಕಾಡುತ್ತಿರುವ ಸಮಸ್ಯೆಯ ತುರ್ತು-ಸಂದೇಶವನ್ನು ನಾವು ಸಾಗುತ್ತಿರುವ ಪ್ರತಿ ಊರಿನ ಪ್ರತಿಯೊಬ್ಬರಿಗೂ ತಲುಪಿಸಲು ನಾವು ಓಡುತ್ತಿದ್ದೇವೆ.
  • ಶುದ್ಧ ಕುಡಿಯುವ ನೀರು ಇಲ್ಲದೆ ಪ್ರತಿದಿನವೂ ಸಾಯುತ್ತಿರುವ ಮಕ್ಕಳ, ಅಪ್ಪಅಮ್ಮಂದಿರ, 6000 ಮನುಷ್ಯರ ನೆನಪಿಗಾಗಿ ನಾವು ಓಡುತ್ತಿದ್ದೇವೆ.
  • ನಾವು ಓಡುತ್ತಿರುವುದೇಕೆಂದರೆ, ನಮ್ಮ ಉಳಿವಿಗೆ ಅವಶ್ಯವಾದ ನೀರು, ಮತ್ತು ಸಮಯ, ನಮ್ಮ ಕೈಮೀರಿ ಹೋಗುತ್ತಿದೆ.
    ಸಂಕಷ್ಟದೊಂದಿಗೆ ಆರಂಭವಾಗಿ ಭರವಸೆಯೊಂದಿಗೆ ಮುಗಿಯುವ ಕತೆ ಹೇಳಲು ನಾವು ಓಡುತ್ತಿದ್ದೇವೆ.
  • ಈ ಕತೆಯಲ್ಲಿ ನಿಮ್ಮನ್ನೂ ಸೇರಿಸಿಕೊಳ್ಳಲು ಓಡುತ್ತಿದ್ದೇವೆ. ಸಮಸ್ಯೆಗೆ ಪರಿಹಾರ ನೀವೇ ಆಗಿದ್ದೀರಿ. ಬದ್ಧತೆ ಒಂದೆ ನಮಗಿರುವ ಅಡ್ಡಿ.
  • ಇಪ್ಪತ್ತು ವರ್ಷಗಳ ನಂತರ ವಿಶ್ವದ ಬೇರೆಬೇರೆ ಕಡೆಯ 20 ಕೋಟಿ ಜನರಿಗೆ ನೀರು ತರಲು, ಅಂದರೆ ಜೀವ ತರಲು, ನಾವು ಒಟ್ಟಾಗಿ ಕೈಜೋಡಿಸಿದ್ದೇವೆ; ಎಂಬಂತೆ ಮುಗಿಯುವ ಕತೆಯನ್ನು ಹೇಳಲು ನಾವು ಓಡುತ್ತೇವೆ.
  • ನಾವು ನಮ್ಮೊಂದಿಗೆ ಒಯ್ಯುವ ಬಟಾನ್ ಮೇಲೆ ಬರೆದಿರುವ ಧನ್ಯವಾದಪೂರ್ವಕ ಪ್ರಾರ್ಥನೆ ಹೀಗಿದೆ: "ನೀರೆ ಜೀವ;" ಅದಕ್ಕಾಗಿ ನಾವು ಓಡುತ್ತಿದ್ದೇವೆ.
  • "ನಮ್ಮ ಬಾಯಾರಿಕೆಯನ್ನು ತಣಿಸುವ ಮತ್ತು ನಮಗೆ ಶಕ್ತಿ ನೀಡುವ ವಿಶ್ವದ ಎಲ್ಲಾ ನೀರಿಗೂ ನಾವು ಧನ್ಯವಾದ ಅರ್ಪಿಸುತ್ತೇವೆ. ಮಳೆ ಮತ್ತು ಜಲಪಾತಗಳು, ಇಬ್ಬನಿ ಮತ್ತು ತೊರೆಗಳು, ನದಿಗಳು ಮತ್ತು ಸಾಗರಗಳು; ಹೀಗೆ ಅನೇಕ ರೂಪಗಳಲ್ಲಿರುವ ನೀರಿನ ಬಲ ನಮಗೆ ಗೊತ್ತು. ನೀರಿನ ಚೈತನ್ಯಕ್ಕೆ ಒಮ್ಮನಸ್ಸಿನಿಂದ ನಮ್ಮ ಶುಭಕಾಕಾಮನೆಗಳನ್ನು ಮತ್ತು ಧನ್ಯವಾದಗಳನ್ನು ಅರ್ಪಿಸುತ್ತೇವೆ.
  • ಈಗ ನಮ್ಮ ಮನಸ್ಸುಗಳು ಒಂದಾಗಿದೆ."

ರಾತ್ರಿ ಹಗಲೆನ್ನದೆ, ಪ್ರತಿ ಒಂದೆರಡು ಗಂಟೆಗಳಿಗೆ ತಮ್ಮ ಕೈಯಲ್ಲಿಯ ಬಟಾನ್ (ರಿಲೇ ಓಟದಲ್ಲಿ ಕೊಡುವ ದಂಡ) ಅನ್ನು ಇನ್ನೊಬ್ಬರಿಗೆ ದಾಟಿಸುತ್ತ, ಜನರ ಸಮ್ಮುಖದಲ್ಲಿ ಈ ಮೇಲಿನ ಸಂದೇಶವನ್ನು ಗಟ್ಟಿಯಾಗಿ ಹೇಳಿ, ಇಪ್ಪತ್ತು ಜನ ಓಟಗಾರರು ದಿನದ ಇಪ್ಪತ್ತನಾಲ್ಕು ಗಂಟೆಗಳೂ ಸರದಿಯ ಪ್ರಕಾರ ಓಡುತ್ತಿದ್ದಾರೆ. ಈ ಇಪ್ಪತ್ತು ಜನ ಓಟಗಾರರಲ್ಲಿ 23 ವರ್ಷದ ಅಮೇರಿಕನ್ ಹುಡುಗಿ ಎಲ್ಲರಿಗಿಂತ ಚಿಕ್ಕವಳು. ಆಕೆಯ ಸದ್ಯದ ಕರ್ಮಭೂಮಿ ಶ್ರೀಲಂಕ. 60 ವರ್ಷದ ಅಮೇರಿಕನ್ ಒಬ್ಬರು ತಂಡದಲ್ಲಿನ ಹಿರಿಯ ಓಟಗಾರ. 57 ವರ್ಷದ ಇಬ್ಬರು ಓಡುತ್ತಿದ್ದಾರೆ: ಒಬ್ಬರು ಅಮೇರಿಕನ್ ಮಹಿಳೆ ಮತ್ತು ಇನ್ನೊಬ್ಬರು ಹಾಲೆಂಡಿನ ವ್ಯಕ್ತಿ. ಮಿಕ್ಕವರೆಲ್ಲ 30 ರ ಅಸುಪಾಸಿನವರು.

ಒಟ್ಟು ಹನ್ನೆರಡು ದೇಶಗಳ ಇಪ್ಪತ್ತು ಓಟಗಾರರು, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತೊಡಗಿಸಿಕೊಂಡಿರುವ ಅಮೇರಿಕದಲ್ಲಿನ ಬ್ಲೂ ಪ್ಲಾನೆಟ್ ರನ್ ಫೌಂಡೇಷನ್ (blueplanetrun.org) ಆಯೋಜಿಸಿರುವ 95 ದಿಗಳ ನಿರಂತರ ನೀಲ ಗ್ರಹ ಓಟದಲ್ಲಿ ಓಡುತ್ತಿದ್ದಾರೆ. ತಂಡದಲ್ಲಿ ಒಬ್ಬ ಭಾರತೀಯನೂ ಇದ್ದಾನೆ. ಆತ ಕನ್ನಡಿಗನೆ. ನಮ್ಮ ಕೋಲಾರದ ಬಳಿಯ ಹೊಗರಿ ಗ್ರಾಮದ ಯುವಕ. ಹೇಳಬೇಕೆಂದರೆ, ಆತ ಇನ್ನೂ ಮದುವಣಿಗ! ಮದುವೆಯಾದ ಇಪ್ಪತ್ತು ದಿನಗಳಿಗೇ ಓಡಲು ಪ್ರಾರಂಭಿಸಿದ್ದಾನೆ, ಸುನೀಲ್ ಜಯರಾಜ್.


ಕುಡಿಯುವ ನೀರಿನ ಸಮಸ್ಯೆ, ವಿಶೇಷವಾಗಿ ಬಯಲುಸೀಮೆಗಳಲ್ಲಿ ಇವತ್ತಿನದಲ್ಲ. ಜನ ಹೆಚ್ಚಾದಷ್ಟೂ ಈ ಸಮಸ್ಯೆ ಹೆಚ್ಚಾಗುತ್ತದೆ. ಇಪ್ಪತ್ತು ವರ್ಷಗಳ ಹಿಂದೆ ನಮ್ಮ ಹಳ್ಳಿಯ ಕತೆಯನ್ನೇ ತೆಗೆದುಕೊಂಡರೆ, ಬೆಳಕು ಹರಿದ ತಕ್ಷಣ ನಮ್ಮ ಹಳ್ಳಿಯ ಹೆಣ್ಣುಮಕ್ಕಳು ಬಿಂದಿಗೆ ಹಿಡಿದುಕೊಂಡು ಊರಿನ ಹೊರವಲಯದಲ್ಲಿದ್ದ ಬಾವಿಯತ್ತ ಹೊರಡುತ್ತಿದ್ದರು. ಅದು ಕಲ್ಲುಕಟ್ಟಡದ ಬಾವಿ. ಅದಕ್ಕೆ ಮೆಟ್ಟಲುಗಳಿದ್ದವು. ಆ ಬಾವಿಯವರು ತೋಟ ಮಾಡುತ್ತಿದ್ದಿದ್ದರಿಂದ ಯಾವಾಗಲೂ ನೀರು ಇಪ್ಪತ್ತುಮುವ್ವತ್ತು ಅಡಿ ಕೆಳಗೇ ಇರುತ್ತಿತ್ತು. ಪ್ರತಿದಿನ ಮನೆಗೆ ಬೇಕಾದ ನೀರನ್ನು ಅಷ್ಟು ದೂರದಿಂದ ಎರಡು ಮೂರು ಸಲ ಹೋಗಿ ಹೊತ್ತು ತರುತ್ತಿದ್ದರು. ಇದು ಸವರ್ಣೀಯರ ಕತೆ. ಇನ್ನು ದಲಿತರದು ಬೇರೆಯದೇ ಬಾವಿ. ಒಮ್ಮೊಮ್ಮೆ ಈ ಬಾವಿಗಳಿಗೆ ಯಾರಾದರೂ ಹಾರಿ ಆತ್ಮಹತ್ಯೆ ಮಾಡಿಕೊಂಡರೆ ಆ ಬಾವಿಯ ನೀರನ್ನು ಕಾಲಿ ಮಾಡುವ ತನಕ ಇನ್ನೂ ದೂರದ ಬಾವಿಗಳತ್ತ ನೀರೆಯರ ಪಯಣ ಸಾಗುತ್ತಿತ್ತು.

ಈ ಪರಿಸ್ಥಿತಿ ಸುಧಾರಿಸಿದ್ದು ನಜೀರ್‌ಸಾಬ್ ಬೋರ್‌ವೆಲ್‌ಗಳು ಬಂದ ಮೇಲೆಯೆ. ಊರಿನ ಮಧ್ಯೆ ಬೋರ್‌ವೆಲ್ ಹಾಕಿಸಿದರು. ನೀರೇನೊ ಸಿಕ್ಕಿತು; ಆದರದು ಉಪ್ಪು ನೀರು. ಕುಡಿಯುವ ನೀರಿಗೆ ಹಳೆಯ ಪರಿರಿಸ್ಥಿತಿಯೆ ಮುಂದುವರೆಯಿತು. ಮತ್ತೆರಡು-ಮೂರು ವರ್ಷದ ನಂತರ ಇನ್ನೊಂದು ಕೊಳವೆ ಬಾವಿ ಕೊರೆಯಿಸಿ, ಕೈಪಂಪ್ ಹಾಕಿಸಿತು ಸರ್ಕಾರ. ಅದರಲ್ಲಿ ಸಿಹಿನೀರು ಸಿಕ್ಕಿತು. ಇದು ಸವರ್ಣಿಯರಿಗೆ ಮೀಸಲು. ವರ್ಷಗಳ ನಂತರ ದಲಿತರಿಗೆಂದೇ ಇನ್ನೊಂದು ಬೋರ್‌ವೆಲ್ ಹಾಕಿಸಿದರು.

ನಮ್ಮ ರಾಜ್ಯದಲ್ಲಿ ಕೆಲವು ಕಡೆ ಪರಿಸ್ಥಿತಿ ಸುಧಾರಿಸುತ್ತ ಹೋಗಿದ್ದಕ್ಕೆ ಉದಾಹರಣೆಯಾಗಿ ಹತ್ತಾರು ವರ್ಷಗಳ ಹಿಂದೆ ನಮ್ಮೂರಿಗೆ ಓವರ್‌ಹೆಡ್‍ ಟ್ಯಾಂಕ್ ಬಂತು. ದುಡ್ಡಿದ್ದವರು ಮನೆಗಳಿಗೇ ನಲ್ಲಿ ಹಾಕಿಸಿಕೊಂಡರು. ಮಿಕ್ಕವರು ಬೀದಿಯಲ್ಲಿನ ನಲ್ಲಿಗಳ ಮುಂದೆ ಸಾಲು ನಿಂತರು. ಈಗ ಬೋರ್‌ವೆಲ್ ಮೋಟಾರ್ ಕೆಟ್ಟರೂ, ಗ್ರಾಮ ಪಂಚಾಯಿತಿಯವರು ಟ್ಯಾಂಕ್‌ಗಳಲ್ಲಿ ನೀರು ತರಿಸಿ ಜನರ ದಾಹ ಮತ್ತು ಇತರ ಅಗತ್ಯಗಳನ್ನು ತಣಿಸುತ್ತಾರೆ. ನೀರಿನ ಸಮಸ್ಯೆ ಬಂತೆಂದರೆ, ಇತರ ಎಲ್ಲಾ ಸಮಸ್ಯೆಗಳ ಪ್ರಾಮುಖ್ಯತೆ ಕೆಳಗಿಳಿಯುತ್ತದೆ. ಆದರೆ ಕರ್ನಾಟಕದ ಎಲ್ಲಾ ಕಡೆಯೂ ಸ್ಥಿತಿ ಹೀಗೆ ಸುಧಾರಿಸಿಲ್ಲ. ಸಂಡೂರಿನ ತನ್ನ ಹಳ್ಳಿಯಲ್ಲಿ ಮೈಲು ದೂರದಿಂದ ನೀರು ಹೊತ್ತು ತರುತ್ತಿರುವ ನಾಡೋಜೆ, ಬುರ್ರಕಥ ಈರಮ್ಮನ ಚಿತ್ರ ಇತ್ತೀಚೆಗೆ ತಾನೆ ಪತ್ರಿಕೆಯೊಂದರಲ್ಲಿ ಬಂದಿತ್ತು!

ಬಹುಶಃ ಇಂತಹದೇ ಹಳ್ಳಿಯಿಂದ ಬಂದವರಿರಬೇಕು ಸುನೀಲ್ ಸಹ. ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಿಂದ ಇಂಡಸ್ಟ್ರಿಯಲ್ ಇಂಜಿನಿಯರಿಂಗ್‍ನಲ್ಲಿ ಪದವಿ ಗಳಿಸಿರುವ ಇವರು, ಈಗ "ಜಲಸಂಪನ್ಮೂಲ ನಿರ್ವಹಣೆ" ವಿಷಯದ ಮೇಲೆ ಅಮೇರಿಕದ ಮಿಷಿಗನ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್.ಡಿ. ಮಾಡುತ್ತಿದ್ದಾರೆ. ಬಿಹಾರ್, ಬಾಂಗ್ಲಾದೇಶ, ನೇಪಾಳ; ಇವು ತಮ್ಮ ಥೀಸಿಸ್‌ಗಾಗಿ ಅವರು ಕೆಲಸ ಮಾಡುತ್ತಿರುವ ಸ್ಥಳಗಳು. ಹಾಗೆಯೆ ಕೋಲಾರದ "ಸಮಗ್ರ ಗ್ರಾಮೀಣ ಅಭ್ಯುದಯ ಕೇಂದ್ರ" (CFIRD) ದ ಸ್ಥಾಪಕ ಸದಸ್ಯರೊಬ್ಬರಾಗಿ, ಅದರ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಈಗಾಗಲೆ ಮುಕ್ಕಾಲು ಪಾಲು ಓಟವನ್ನು ಪೂರೈಸಿರುವ ಬ್ಲೂ ಪ್ಲಾನೆಟ್ ರನ್ ತಂಡ, ಈಗ ಕಡೆಯ ದಿಗಳ ಓಟವನ್ನು ಅಮೇರಿಕದಲ್ಲಿ ಓಡುತ್ತಿದೆ. ಜೂನ್ 1 ರಂದು ನ್ಯೂಯಾರ್ಕಿನ ವಿಶ್ವಸಂಸ್ಥೆಯ ಕಟ್ಟಡದಿಂದ ಆರಂಭವಾದ ಓಟ, ನಂತರ ಐರ್‌ಲ್ಯಾಂಡ್, ಇಂಗ್ಲೆಂಡ್, ಫ್ರಾನ್ಸ್, ಬೆಲ್ಜಿಯಮ್, ಹಾಲೆಂಡ್, ಜರ್ಮನಿ, ಜೆಕ್ ರಿಪಬ್ಲಿಕ್, ಆಸ್ಟ್ರಿಯ, ಪೋಲೆಂಡ್, ರಷ್ಯ, ಮಂಗೋಲಿಯ, ಚೀನಾ, ಜಪಾನ್‍ಗಳನ್ನೆಲ್ಲ ಸುತ್ತಿಹಾಕಿಕೊಂಡು ಈಗ ಮತ್ತೆ ಅಮೇರಿಕಕ್ಕೆ ಮರಳಿದೆ. ಕೊನೆಯಾಗುವ ಮುಂಚೆ ಕೆನಡಾದಲ್ಲೂ ಓಡಲಿದ್ದಾರೆ. ಒಟ್ಟು 4 ಖಂಡಗಳ, 16 ದೇಶಗಳನ್ನು ಒಳಗೊಂಡ, 24000 ಕಿ.ಮೀ.ಗಳನ್ನು ಸೆಪ್ಟೆಂಬರ್ 4 ರಂದು ಈ ಓಟಗಾರರು ಪೂರೈಸಲಿದ್ದಾರೆ. ಈಗಾಗಲೆ ಸುಮಾರು 18 ಸಾವಿರ ಕಿ.ಮೀ. ಓಟ ಮುಗಿದಿದೆ. ಓಡುವ ದಾರಿಯಲ್ಲಿ ನೀರಿನ, ಅದರಲ್ಲೂ ಕುಡಿಯುವ ನೀರಿನ ಬಗ್ಗೆ ಜಾಗೃತಿ ಮತ್ತು ಹಣಸಂಗ್ರಹಣೆ ಮಾಡುವುದು ಓಟದ ಮುಖ್ಯ ಉದ್ದೇಶ. ಸುಮಾರು 200 ಕೋಟಿ ರೂಪಾಯಿಗಳನ್ನು ಈ 95 ದಿನಗಳ ಓಟದಿಂದ ಒಟ್ಟುಗೂಡಿಸಬೇಕು ಎನ್ನುವುದು ಫೌಂಡೇಷನ್‌ನ ಗುರಿ. ಕನ್ನಡಿಗರದೇ ಆದ ಅಮೇರಿಕದಲ್ಲಿನ ಡಾ ನಾಗರಾಜ್ ಫೌಂಡೇಷನ್‍ನವರು ಸುನೀಲ್ ಓಡಲಿರುವ ಪ್ರತಿ ಮೈಲಿಗೆ ಒಂದು ನೂರು ಡಾಲರ್‌ನಂತೆ, ಒಟ್ಟು 40 ಲಕ್ಷ ರೂಪಾಯಿಗಳನ್ನು ಈಗಾಗಲೆ ಪ್ರಾಯೋಜಿಸಿದ್ದಾರೆ. ವಾರದ ಹಿಂದೆ ಸಿಲಿಕಾನ್ ಕಣಿವೆಯಲ್ಲಿನ ಜೈನ ಮಂದಿರದಲ್ಲಿ ಆಯೋಜಿಸಲಾಗಿದ್ದ ಬಟಾನ್ ಎಕ್ಸ್‌ಚೇಂಜ್ ಕಾರ್ಯಕ್ರಮವೊಂದರಲ್ಲಿಯೆ ನಾಲ್ಕು ಲಕ್ಷ ರೂಪಾಯಿ ಸಂಗ್ರಹವಾಗಿತ್ತು.


ಈ ಓಟದ ವೈಶಿಷ್ಟ್ಯ, ಮೊದಲೆ ಹೇಳಿದಂತೆ ದಿನದ ಇಪ್ಪತ್ತನಾಲ್ಕು ಗಂಟೆಗಳೂ ಓಡುತ್ತಿರುವುದು. ಪ್ರತಿದಿನವೂ 16 ಓಟಗಾರರು ಸರದಿಯ ಪ್ರಕಾರ ಪಾಲ್ಗೊಳ್ಳುತ್ತಾರೆ. ಪ್ರತಿಯೊಬ್ಬರೂ ದಿನವೊಂದಕ್ಕೆ ಸರಾಸರಿ 15-20ಕಿ.ಮೀ. ಓಡುತ್ತಾರೆ; 24 ಗಂಟೆಗಳಲ್ಲಿ ತಂಡ ಸುಮಾರು 350 ಕಿ.ಮೀ. ಓಡಿರುತ್ತದೆ. ಸುನೀಲ್ ಹೇಳುವ ಪ್ರಕಾರ ಈ ಓಟವನ್ನು ಬಹಳ ವ್ಯವಸ್ಥಿತವಾಗಿ, ಯಾವುದೆ ಗೊಂದಲಗಳಿಗೆ ಎಡೆಯಿಲ್ಲದಂತೆ ಆಯೋಜಿಸಿದ್ದಾರೆ. ಅಂದ ಹಾಗೆ, ಈ ಓಟದಲ್ಲಿ ಪಾಲ್ಗೊಳ್ಳಲು ಸುಮಾರು 4000 ಜನ ಇಚ್ಚೆ ವ್ಯಕ್ತಪಡಿಸಿದ್ದರು. ವ್ಯಕ್ತಿಗಳ ಸಮುದಾಯ ಕೆಲಸ ಮತ್ತು ಇತರ ಆಸಕ್ತಿಗಳ ಆಧಾರದ ಮೇಲೆ ಅಂತಿಮವಾಗಿ 20 ಜನರನ್ನು ಆಯ್ಕೆ ಮಾಡಲಾಯಿತು. ಸುನೀಲ್‌ರವರು ಮಾಡುತ್ತಿರುವ ನೀರಿನ ಮೇಲಿನ ಅಧ್ಯಯನ ಮತ್ತು ಸಮಾಜಸೇವಾ ಕೆಲಸಗಳಿಂದಾಗಿ ಆ ಇಪ್ಪತ್ತು ಜನರಲ್ಲಿ ಇವರೂ ಒಬ್ಬರಾಗಲು ಸಾಧ್ಯವಾಯಿತು.

2004 ರಿಂದ ಇಲ್ಲಿಯವರೆಗೆ ಬ್ಲೂ ಪ್ಲಾನೆಟ್ ರನ್ ಫೌಂಡೇಷನ್ ಪ್ರಪಂಚದಾದ್ಯಂತದ 13 ದೇಶಗಳಲ್ಲಿನ ಹಲವಾರು ಎನ್.ಜಿ.ಒ.ಗಳಿಗೆ ಧನಸಹಾಯ ಮಾಡುತ್ತ, ಯೋಜನೆಗಳ ಉಸ್ತುವಾರಿಯನ್ನು ಗಮನಿಸುತ್ತ ಬಂದಿದೆ. ಆಫ್ರಿಕಾ, ದಕ್ಷಿಣ ಅಮೇರಿಕ, ಭಾರತದ ಒರಿಸ್ಸಾ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಇಲ್ಲೆಲ್ಲ, ಈ ಎನ್.ಜಿ.ಒ.ಗಳು 135 ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಒಟ್ಟು ಲಕ್ಷಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಿವೆ. ಎಷ್ಟೋ ಕಡೆ ಒಂದೆರಡು ಲಕ್ಷ ರೂಪಾಯಿಗಳಿಗೆ ಜೀವಮಾನದ ಸಮಸ್ಯೆಗಳು ನಿವಾರಣೆಯಾಗುತ್ತಿವೆ.

ಆಗಸ್ಟ್ ಎರಡರಂದು ಜೈನ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುನೀಲ್ ಬಹಳ ಆಪ್ತವಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅದರಲ್ಲಿ ತಮಾಷೆಯಾಗಿದ್ದದ್ದು ಏನೆಂದರೆ, ಓಟದ ಸಮಯದಲ್ಲಿ ಅವರಿಗೆ ಪ್ರಿಯವಾದ ಉಪ್ಪುಖಾರದ ಊಟಕ್ಕೆ ಖೋತಾ ಆಗಿಬಿಟ್ಟಿರುವುದು! ಕಳೆದ ಆರೇಳು ವರ್ಷಗಳಿಂದ ಪಕ್ಕಾ ಸಸ್ಯಾಹಾರಿಯಾಗಿ ಪರಿವರ್ತನೆಯಾಗಿರುವ ಸುನೀಲ್‌ಗೆ ರಷ್ಯಾದಲ್ಲಿ ಬಹಳ ಕಷ್ಟವಾಯಿತಂತೆ. "ಸಸ್ಯಾಹಾರ ಒದಗಿಸಲು ತೊಂದರೆಯೇನಿಲ್ಲ, ಮೀನು ಮತ್ತು ಕೋಳಿ ಆಗುತ್ತದಲ್ಲ?" ಎಂದರಂತೆ ರಷ್ಯನ್ನರು! ಅಲ್ಲಿ ಊಟ ಬಹಳ ಸಪ್ಪೆಯಾಗಿತ್ತು ಎಂದರು, ಸುನೀಲ್. ರಷ್ಯ, ಚೀನಾ, ಜಪಾನ್‌ನಿಂದ ಮತ್ತೆ ಅಮೇರಿಕಕ್ಕೆ ಮರಳಿದ ಸುನೀಲ್, ಸಿಲಿಕಾನ್ ಕಣಿವೆಯಲ್ಲಿನ ಅನ್ನಸಾಂಬಾರ್ ಹಾಗೂ ಚಪಾತಿಪಲ್ಯಗಳನ್ನು ಸವಿಯುತ್ತ ಖುಷಿಯಾಗಿದ್ದರು!

ಸಮಸ್ಯೆಗಳು ನೂರಾರು; ನೂರಾರು ತೆರನವು. ಕೆಲವುಗಳ ಪರಿಹಾರಕ್ಕಂತೂ ಸ್ವಾರ್ಥವನ್ನೆಲ್ಲ ತ್ಯಜಿಸಿ ಕೆಲಸ ಮಾಡಬೇಕಾಗುತ್ತದೆ. ನಮ್ಮ ಕರ್ನಾಟಕದ ಕತೆಯನ್ನೆ ತೆಗೆದುಕೊಂಡರೆ, ಬರಪೀಡಿತ ಪ್ರದೇಶದ ವಿಸ್ತೀರ್ಣದಲ್ಲಿ ರಾಜಸ್ಥಾನ ಬಿಟ್ಟರೆ ನಮಗೇ ನಂತರದ ಸ್ಥಾನ! ಬ್ಲೂ ಪ್ಲಾನೆಟ್ ಫೌಂಡೇಷನ್‌ನ ನಿರ್ದೇಶಕರಲ್ಲೊಬ್ಬರಾದ ರಾಜೇಶ್ ಷಾ ಹೇಳಿದಂತೆ, ಕುಡಿಯುವ ನೀರಿನ ಸಮಸ್ಯೆಯ ನಿವಾರಣೆಯಲ್ಲಿ ತೊಡಗಿಸಿಕೊಳ್ಳುವುದು ಗ್ಲಾಮರಸ್ ಅಲ್ಲ. ಇಂತಹ ಕೆಲಸದಲ್ಲಿ ತೊಡಗಿಸಿಕೊಂಡ ಸುನೀಲ್ ಮತ್ತು ಕರ್ನಾಟಕದಲ್ಲಿ ಹತ್ತಿಪ್ಪತ್ತು ವರ್ಷಗಳಿಂದ ಮಳೆಕೊಯ್ಲು, ಜಲಪೂರಣ, ಜಲಜಾಗೃತಿ ಮುಂತಾದವುಗಳಲ್ಲಿ ತೊಡಗಿಸಿಕೊಂಡಿರುವ ಶಿವಾನಂದ ಕಳವೆ, ಶ್ರೀ ಪಡ್ರೆ, ದೇವರಾಜ್ ರೆಡ್ಡಿ, ಬೆಂಗಳೂರಿನ ರೈನ್ ವಾಟರ್ ಕ್ಲಬ್‌ನ ವಿಶ್ವನಾಥ್, ತಿಪಟೂರಿನ ಬೈಫ್ ಸಂಸ್ಥೆಯ ಜಿ.ಎನ್.ಎಸ್. ರೆಡ್ಡಿ, ಸೂರಿನ CART ಕೇಂದ್ರದ ರವಿಕುಮಾರ್, ಹಾವೇರಿಯ ಚನ್ನಬಸಪ್ಪ ಕೊಂಬ್ಳಿ, ಮುಂತಾದವರೆಲ್ಲ ನಮ್ಮ ಹೆಮ್ಮೆ ಮಾತ್ರವಲ್ಲ, ಆದರ್ಶಗಳೂ ಆಗಬೇಕು.

ಇದೇ ಸಮಯದಲ್ಲಿ ಜವಾಬ್ದಾರಿಯುತ ಸರ್ಕಾರದ ಜವಾಬ್ದಾರಿಯೂ ಒಂದಿದೆ: ಮಳೆನೀರು ಕೊಯ್ಲು, ಜಲಪೂರಣ ಮುಂತಾದವುಗಳ ಬಗ್ಗೆ ವ್ಯವಸ್ಥಿತವಾಗಿ ಜನಜಾಗೃತಿ ಮೂಡಿಸುವ ಕೆಲಸ. ಯೋಗ್ಯರು ಆಡಳಿತ ನಡೆಸುವಾಗ ಹೀಗೆ ಬಯಸಿದರೆ ಹೆಚ್ಚಿಗೆ ಬಯಸಿದಂತೇನೂ ಆಗುವುದಿಲ್ಲ.


ಆದರೆ, ಈಗ?

Aug 5, 2007

ಜೀವಜಲಕ್ಕಾಗಿ ೧೬ ದೇಶಗಳಲ್ಲಿ ಓಡುತ್ತಿರುವ ಸುನಿಲ್ - ವಿಡಿಯೊ ಸಂದರ್ಶನ



- ಇದೇ ವಿಷಯದ ಕುರಿತಾದ ಲೇಖನ ಬರುವ ಶುಕ್ರವಾರದಂದು.

Aug 3, 2007

ಎಂಥವರಿಂದ ಆಳಲ್ಪಡುತ್ತಿದ್ದೇವೆ...

(ವಿಕ್ರಾಂತ ಕರ್ನಾಟಕ - ಆಗಸ್ಟ್ 1೦, ೨೦೦೭ರ ಸಂಚಿಕೆಯಲ್ಲಿನ ಬರಹ)

ನೂರಾರು ಜನ ಶಾಸಕರು ಕುಳಿತು ಕೇಳುತ್ತಿದ್ದಾರೆ. ಹತ್ತಾರು ಜನ ವಿರೋಧ ಪಕ್ಷದ ಶಾಸಕರು ಎದ್ದು ನಿಂತು ಗಲಭೆ ಮಾಡುತ್ತಿದ್ದಾರೆ. ಚರ್ಚೆಗೆ ಉತ್ತರ ಕೊಡಲು ಎದ್ದು ನಿಂತ ಮುಖ್ಯಮಂತ್ರಿ, ಬಲಗೈಯಲ್ಲಿ ಒಂದು ಕಾಗದ ಪತ್ರವನ್ನು ಹಿಡಿದು, ಎಡಗೈಯನ್ನು ಬೀಡುಬೀಸಾಗಿ ಎಸೆಯುತ್ತ, ಎಡಗೈ ತೋರುಬೆರಳು ತೋರಿಸುತ್ತ, ತಮ್ಮ ಒಂದು ನಿಮಿಷದ ಅಮೋಘ ಸಂಭಾಷಣೆಯನ್ನು, ಎದುರು ಪಾರ್ಟಿಯವರ ಅಡೆತಡೆಗಳ ಮಧ್ಯೆ, ಹೀಗೆ ಒಪ್ಪಿಸುತ್ತಾರೆ:

"ಈಗ ನಾನು ಮಾತ್ನಾಡ್ತಿರೋದು ಬರೀ ಪೀಠಿಕೆ ಮಾತ್ರ...
ಬಹಳ ಬಹಳ ಇದೆ ಮಾತಾಡೋದಿಕ್ಕೆ...
ನಾನು ಮಾತನಾಡುವುದನ್ನು ಪೂರ್ತಿ ಮಾಡಿದ ಮೇಲೆ ಚಂದ್ರಬಾಬು,
ಅಸಲಿಗೆ ನಿಮ್ಮ ತಾಯ ಹೊಟ್ಟೆಯಲ್ಲಿ ಅನಗತ್ಯವಾಗಿ ಹುಟ್ಟಿದೆನೇನೊ,
ಈ ಲೋಕಕ್ಕೆ ಬರದೆ ಇದ್ದಿದ್ದರೆ ಚೆನ್ನಾಗಿತ್ತೇನೊ, ಅಂತಂದುಕೊಳ್ತೀಯ ನೀನು...
ಏನಯ್ಯ ನೀನು ಮಾತನಾಡೋದು???
ಕೇಳು, ಕೇಳು, ತೊಳೆದಾಕ್ಬಿಡ್ತೀನಿ ಇವತ್ತು ನಿನ್ನ. ತೊಳೆದಾಕ್ಬಿಡ್ತೀನಿ ನಿನ್ನ.
ನಿಮ್ಮ ತಾಯ ಹೊಟ್ಟೆಯಲ್ಲಿ ಹುಟ್ಟದೆ ಹೋಗಿದ್ರೆ ಚೆನ್ನಾಗಿತ್ತು ಅಂತಂದುಕೊಳ್ತೀಯ, ನೀನು..."


ನಿಮಗೆ ಈಗಾಗಲೆ ಗೊತ್ತಾಗಿರಬಹುದು, ಇದು ಆಂಧ್ರಪ್ರದೇಶದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿಯವರ ಉವಾಚ ಎಂದು. "ವಿರೋಧ ಪಕ್ಷದವರು ನೀಚಾತಿನೀಚ ಆರೋಪಗಳನ್ನು ಮಾಡಿದಾಗ ನಾವು ಪ್ರಜೆಗಳಿಗಾದರೂ ನಮ್ಮ ನೀತಿನಿಜಾಯಿತಿ ಹೇಳಿಕೊಳ್ಳುವ ಅಗತ್ಯ ಇದೆಯೊ ಇಲ್ಲವೊ?" ಎಂದು ಕೇಳುತ್ತ, ಆ ಅಗತ್ಯವನ್ನು ಪೂರ್ತಿ ಮಾಡುವುದಕ್ಕೋಸ್ಕರ ಜುಲೈ ೨೩ ರಂದು ಆಂಧ್ರದ ವಿಧಾನಸಭೆಯಲ್ಲಿ ಅಲ್ಲಿನ ಮುಖ್ಯಮಂತ್ರಿ ತಮ್ಮ ನೀತಿ ನಿಜಾಯಿತಿ ನಿರೂಪಿಸಿಕೊಂಡ ರೀತಿ ಈ ಮೇಲಿನದು!!! ಸದನದಲ್ಲಿ ಮಾಡಿದ ಭಾಷಣಕ್ಕೆ ಎಲ್ಲಿಯೂ ಬಹುವಚನವೆ ಇಲ್ಲ!!!

ಇದೆಲ್ಲ ಆಗಿದ್ದು, ಕರ್ನಾಟಕದ ಬಿ.ಜೆ.ಪಿ. ಎಂ.ಎಲ್.ಸಿ.ಯಾದ ಜನಾರ್ಧನ ರೆಡ್ಡಿಯವರ ಓಬಳಾಪುರಂ ಗಣಿಗೆ ಸಂಬಂಧಿಸಿದ ವಿವಾದದಿಂದಾಗಿ. ಓಬಳಾಪುರಂ ಗಣಿ ವಿಚಾರದಲ್ಲಿ ಮತ್ತು ಜನಾರ್ಧನ ರೆಡ್ಡಿಯವರು ಆಂಧ್ರದಲ್ಲಿ ನಿರ್ಮಿಸಲಿರುವ "ಬ್ರಹ್ಮಣಿ ಸ್ಟೀಲ್ಸ್ ಲಿಮಿಟೆಡ್" ಕಂಪನಿಗೆ ಜಮೀನು ನೀಡುವಲ್ಲಿ ಅವ್ಯವಹಾರಗಳು ನಡೆದಿವೆ ಎಂದು ಆಂಧ್ರದ ವಿರೋಧ ಪಕ್ಷದವರು ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಪ್ರಕಾರ ಜನಾರ್ಧನ ರೆಡ್ಡಿಯವರ ಸ್ಟೀಲ್ ಫ್ಯಾಕ್ಟರಿ ಅಲ್ಲಿನ ಮುಖ್ಯಮಂತ್ರಿಯ "ಬೇನಾಮಿ ಉದ್ದಿಮೆ."

ಆಂಧ್ರದ ಮುಖ್ಯಮಂತ್ರಿ ಹೀಗೆ ವಿಧಾನ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಯನ್ನು ತೊಳೆದ (???) ಮಾರನೆಯ ದಿನ ಚಂದ್ರಬಾಬು ನಾಯ್ಡುವಿನ ತೆಲುಗುದೇಶಂ ಪಕ್ಷದ ವಿದ್ಯಾರ್ಥಿ (?) ಘಟಕ ಕರ್ನಾಟಕದ ಎಂ.ಎಲ್.ಸಿ. ಜನಾರ್ಧನ ರೆಡ್ಡಿಯ ಹೈದರಾಬಾದ್ ಮನೆಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳುತ್ತಾರೆ. ಆ ಸಮಯದಲ್ಲಿ ತೆಲುಗುದೇಶಂ ಕಾರ್ಯಕರ್ತರು ತಮ್ಮ ಮನೆಯ ಮೇಲೆ ಕಲ್ಲೆಸೆದರು ಎಂದು ರೆಡ್ಡಿ ಅಲ್ಲಿನ ಪೋಲಿಸರಿಗೆ ದೂರು ಕೊಡುತ್ತಾರೆ. ಅದೇ ಸಮಯದಲ್ಲಿ ಟಿವಿಯವರ ಮುಂದೆ ಜನಾರ್ಧನ ರೆಡ್ಡಿಯವರು ತೆಲುಗಿನಲ್ಲಿ ಒಪ್ಪಿಸುವ ಸಂಭಾಷಣೆಯ ಅಕ್ಷರಕ್ಷರ ರೂಪ ಇದು:

"ನಾನು ನೀತಿನಿಜಾಯಿತಿಂದ ಕೆಲಸಗಳನ್ನು ಮಾಡುತ್ತಿರುವಾಗ ನಿನಗೆ ಭಯಪಡುವ ಅಗತ್ಯ ಇಲ್ಲ.
ನನ್ನನ್ನು ಭಯಪಡಿಸುತ್ತಿದ್ದೀಯಾ, ನೀನು?
ಇಂಡಸ್ಟ್ರಿ ಮಾಡಬೇಕು ಅಂದುಕೊಂಡು ಬಂದ ನನ್ನನ್ನು ವಾಪಸು ಕಳಿಸಬೇಕು ಅಂದುಕೊಳ್ತೀಯ ನೀನು, ಚಂದ್ರಬಾಬು?
ನೀನು ದ್ರೋಹಿ, ನೀನು ಹಂತಕ, ಎಂದು ನಾನು ಹೇಳಿದೆ. ನಿನ್ನಲ್ಲಿ ಸ್ವಲ್ಪವಾದರೂ ನೀತಿನಿಜಾಯಿತಿ ಇದ್ದರೆ ನೀನು ನಿರಪರಾಧಿ ಎಂದು ಸಾಬೀತು ಪಡಿಸಿಕೊಳ್ಳಬೇಕು.
ನಾಚಿಕೆ ಇಲ್ಲದೀರ ಇವತ್ತು ಹೈದರಾಬಾದಿನಲ್ಲಿ ನನ್ನ ಮನೆಯ ಮೇಲೆ ಕಲ್ಲು ಹೊಡೆಸುತ್ತಿದ್ದೀಯ ಅಂದರೆ ನಾನು ನಿಜವಾಗಲೂ ಹೇಳ್ತಿದ್ದೀನಿ ಚಂದ್ರಬಾಬು, ನೀನು ಈ ರಾಜ್ಯದ ಖೋಜಾ ನಂಬರ್ ಒನ್ ಎಂದು ನಾನು ಹೇಳುತ್ತಿದ್ದೇನೆ."

"ರಾಜ್ಯದ ಜನರೆಲ್ಲರೂ ನಿನಗೆ ಮತಿಭ್ರಮಣೆಯಾಗಿದೆ ಎಂದು ಅಂದುಕೊಳ್ಳುತ್ತಿದ್ದಾರೆ.
ನಿಜವಾಗಲೂ ಹೇಳುತ್ತಿದ್ದೇನೆ, ನಿನ್ನನ್ನು ರಾಜ್ಯದ ಪ್ರಜೆಗಳೆಲ್ಲರೂ ಕಲ್ಲಲ್ಲಿ ಹೊಡೆದು, ನಿನ್ನ ತೆಲುಗುದೇಶಂ ಪಕ್ಷವನ್ನು ಮತ್ತು ನಿನ್ನನ್ನು ಸರ್ವನಾಶ ಮಾಡಿ, ನಿನ್ನನ್ನು ಹಾಳು ಮಾಡುವ ತನಕ ನಾನು ಬಿಡುವುದಿಲ್ಲ.
ಇವತ್ತು ತಮಾಷೆ ಮಾಡ್ತಿದ್ದೀಯ, ನೀನು?
ನನ್ನ ಮನೆಯ ಮೇಲೆ ದಾಳಿ ಮಾಡ್ತೀಯ, ದುರ್ಮಾರ್ಗನೆ?
ಹೈದರಾಬಾದಿನ ನನ್ನ ಮನೆಯ ಮೇಲೆ ಕಲ್ಲು ಹೊಡೆಸ್ತೀಯ? ಕಲ್ಲಲ್ಲಿ ಹೊಡೆಸ್ತೀಯ? ಕೈಲಾಗದ ಖೋಜಾ ನೀನು....."


ಉಫ್..........

ಇದೇನು ಸಿನೆಮಾನಾ? ನಾಟಕವೆ? ಇವರೇನು ಪೌರಾಣಿಕ ನಾಟಕದ ಪಾತ್ರಧಾರಿಗಳೊ, ಜನಸೇವಕರೊ, ರಾಜಕಾರಣಿಗಳೊ, ಉದ್ದಿಮೆದಾರರೊ, ಪಾಳೆಯಗಾರರೊ? ಇವರು ಮೊದಲು ಉದ್ದಿಮೆದಾರರೊ ಅಥವ ಜನಸೇವಕರೊ? ಮೊದಲು ಜನಸೇವಕರೊ ನಂತರ ಉದ್ದಿಮೆದಾರರೊ? ರಾಜಕಾರಣಕ್ಕೆ ಬಂದು ಉದ್ದಿಮೆದಾರರಾದರೊ ಅಥವ ತಮ್ಮ ಉದ್ದಿಮೆಗಳ ಹಿತರಕ್ಷಿಸಿಕೊಳ್ಳಲು ರಾಜಕಾರಣಕ್ಕೆ ಇಳಿದರೊ? ಜನ ವೋಟು ನೀಡುವ ಮುಂಚೆ ಏನನ್ನು ಯೊಚಿಸುತ್ತಾರೆ? ನಮ್ಮ ಪ್ರತಿನಿಧಿಗಳಲ್ಲಿ ಹಣವಂತರೆ ಯಾಕೆ ಬಹಳ ಜನ ಇದ್ದಾರೆ? ಕಾನೂನು ರಚಿಸಬೇಕಾದವರು, ತಿದ್ದಬೇಕಾದವರು ಮಾಡುತ್ತಿರುವ ಕೆಲಸಗಳೇನು?

೬೦ ವರ್ಷಗಳ ಹಿಂದೆ ನಮ್ಮ ಹಿರಿಯರು ಬ್ರಿಟಿಷರ ಆಳ್ವಿಕೆಯಿಂದ ದೇಶವನ್ನು ಬಿಡುಗಡೆ ಮಾಡಿ, ಬೇರೆ ಯಾವ ತರಹದ ಆಡಳಿತ ವ್ಯವಸ್ಥೆಗೂ ತಲೆಬಾಗದೆ, ನಮ್ಮನ್ನು ನಾವೆ ಆಳಿಕೊಳ್ಳುವ, ಸ್ವರಾಜ್ಯದ ನಿಜಾರ್ಥವಾದ "ಪ್ರಜಾಪ್ರಭುತ್ವ" ವ್ಯವಸ್ಥೆಯನ್ನು ನಮಗೆ ನೀಡಿದರು. ಆದರೆ, ಇವತ್ತು ಏನಾಗಿದೆ? ಪಕ್ಕದ ಆಂಧ್ರದ ಮಾತುಗಾರಿಕೆ ನೋಡಿ: ಅಲ್ಲಿ ಈ ಮಾತುಗಾರಿಕೆಗೆ ಮೊದಲ ಮೂಲಕಾರಣ ಹಣದ, ಅಧಿಕಾರದ ಮದ. ಅದೇ ಮದ ಕರ್ನಾಟಕವನ್ನೂ ಆವರಿಸಿಕೊಳ್ಳುತ್ತಿದೆ. ಇವತ್ತು ಕರ್ನಾಟಕದ ಪ್ರಮುಖ ಮೂರೂ ಪಕ್ಷಗಳಲ್ಲಿನ ಬಹುಪಾಲು ನಾಯಕರು ಮತ್ತು ಅವರ ಕುಟುಂಬಗಳು ಕೋಟ್ಯಾಂತರ ರೂ ಆಸ್ತಿಗಳಿಗೆ, ಉದ್ದಿಮೆಗಳಿಗೆ ಒಡೆಯರು. ಇವತ್ತು ಹಣವಿಲ್ಲದೆ ಯಾವ ನಾಯಕರೂ ರಾಜಕೀಯ ಮಾಡುತ್ತಿಲ್ಲ. ಹಣವಿಲ್ಲದೆಯೆ, ಯಾವುದೋ ಒಂದು ಅಲೆ ಅಥವ ವಿಷಯಾಧಾರಿತವಾಗಿ ಗೆಲ್ಲುವ ಒಬ್ಬರು ಇಬ್ಬರೂ ಸಹ ಮುಂದಿನ ಸಲದ ಚುನಾವಣೆಯನ್ನು ಹಣದಿಂದಲೆ ಗೆಲ್ಲುವ ಮಟ್ಟಕ್ಕೆ ಬದಲಾಗುತ್ತಿದ್ದಾರೆ. ಹಣದ ಆಧಾರದ ಮೇಲೆ ನಡೆಯುವ ಇಂತಹ ಅಧಿಕಾರಕ್ಕೆ ಪ್ರಜಾಪ್ರಭುತ್ವ ಎನ್ನಲು ಸಾಧ್ಯವೆ?

ಇನ್ನು, ನಮ್ಮ ನಾಡಿನ ಸರ್ವೋಚ್ಚ ನಾಯಕರಾದ ಮುಖ್ಯಮಂತ್ರಿಗಳಂತೂ ಜನಾದೇಶವಿಲ್ಲದೆ, ಪ್ರಜಾಪ್ರಭುತ್ವವನ್ನು ಅಣಕಿಸುವಂತೆ ನಮ್ಮ ಸರ್ವೋಚ್ಚ ನಾಯಕರಾಗುತ್ತಿದ್ದಾರೆ. ಯಾರಿಗೆ ಮುಖ್ಯಮಂತ್ರಿ ಆಗಬೇಕು ಎಂಬ ಜನಾದೇಶವಿಲ್ಲವೊ ಅವರೆಲ್ಲ ಹಣ ಚೆಲ್ಲಬಲ್ಲ ತಾಕತ್ತಿನಿಂದ ಇಲ್ಲವೆ ನಂಬರ್‌ಗೇಮ್‌ನಿಂದ ಮುಖ್ಯಮಂತ್ರಿ ಆಗುತ್ತ ಬರುತ್ತಿದ್ದಾರೆ. ಕಳೆದ ೩೦ ವರ್ಷಗಳ ನಮ್ಮ ಇತಿಹಾಸ ತೆಗೆದುಕೊಂಡರೆ, ೧೯೭೮ ರಲ್ಲಿ ದೇವರಾಜ್ ಅರಸ್, ೧೯೮೫ ರಲ್ಲಿ ಹೆಗಡೆ, ೧೯೮೯ ರಲ್ಲಿ ವೀರೇಂದ್ರ ಪಾಟೀಲ್, ೧೯೯೪ ರಲ್ಲಿ ದೇವೇಗೌಡ, ೧೯೯೯ ರಲ್ಲಿ ಎಸ್ಸೆಮ್ ಕೃಷ್ಣ ಬಿಟ್ಟರೆ, ಮಿಕ್ಕ ಅವಧಿಗಳಲ್ಲಿ ಮುಖ್ಯಮಂತ್ರಿಯಾದ ಯಾರಿಗೂ "ಇವರೇ ನಮ್ಮ ಮುಖ್ಯಮಂತ್ರಿಗಳಾಗಬೇಕು," ಎಂಬ ನೇರ ಜನಾದೇಶ ಇರಲಿಲ್ಲ. ೧೯೮೦ ರಲ್ಲಿ ಗುಂಡೂರಾವ್, ೧೯೮೩ ರಲ್ಲಿ ರಾಮಕೃಷ್ಣ ಹೆಗಡೆ, ೧೯೮೮ ರಲ್ಲಿ ಬೊಮ್ಮಾಯಿ, ೧೯೯೦ ರಲ್ಲಿ ಬಂಗಾರಪ್ಪ, ೧೯೯೨ ರಲ್ಲಿ ವೀರಪ್ಪ ಮೊಲಿ, ೧೯೯೬ ರಲ್ಲಿ ಜೆ.ಎಚ್. ಪಟೇಲ್, ೨೦೦೪ ರಲ್ಲಿ ಧರಮ್ ಸಿಂಗ್, ೨೦೦೬ ರಲ್ಲಿ ಮುಖ್ಯಮಂತ್ರಿಯಾದ ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿ; ಇವರ್ಯಾರ ಮುಖಂಡತ್ವದಲ್ಲೂ ಅವರ ಪಕ್ಷಗಳಿಗೆ ಜನ ಬಹುಮತ ನೀಡಿಲ್ಲ. ಇವರೆಲ್ಲ ಮುಖ್ಯಮಂತ್ರಿಯಾದದ್ದು, ಇಲ್ಲವೆ ಹೈಕಮಾಂಡ್ ಕೃಪೆಂದಾಗಿ, ಇಲ್ಲವೆ ಜಾಗ ಖಾಲಿ ಬಿದ್ದಿದ್ದರಿಂದಾಗಿ, ಇಲ್ಲವೆ ರಾಜಕಾರಣದಲ್ಲಿಯಷ್ಟೆ ಸಾಧ್ಯವಾಗುವ ತಂತ್ರ-ಕುತಂತ್ರ-ಹಣ ಚೆಲ್ಲಾಟ-ಪ್ರಲೋಭನೆ-ದಾದಾಗಿರಿ-ಮ್ಯೂಸಿಕ್ ಛೇರ್ ಆಟ: ಮುಂತಾದ ಪ್ರಜಾಪ್ರಭುತ್ವ ಎಂದು ಹೇಳಲಿಕ್ಕೇ ಆಗದ ವಿಚಿತ್ರ ಸನ್ನಿವೇಶಗಳಿಂದಾಗಿ. ಇವರಲ್ಲಿ ಕೆಲವರಿಗೆ ತಮ್ಮ ಕೈಲಿ ಬಸಿರು ಮಾಡಲಾಗದಿದ್ದರೂ, ಇನ್ನೊಬ್ಬರು ಮಾಡಿದ ಬಸಿರನ್ನು ತಾವೆ ಮಾಡಿದ್ದು ಎಂದು ಯಾವ ನಾಚಿಕೆಲ್ಲದೆ ಹೇಳಿಕೊಂಡು, ಓಡಿ ಬಂದು ಕುರ್ಚಿ ಹಿಡಿದುಕೊಂಡ ಮಹಾಶಯರು!!!

ಇವುಗಳಿಂದಾಗಿ ಕಮರುತ್ತಿರುವುದು ರಾಜ್ಯದ ರಾಜಕೀಯ-ಸಾಮಾಜಿಕ-ಬೌದ್ಧಿಕ ಪ್ರಗತಿ ಮತ್ತು ಪ್ರಜಾಪ್ರಭುತ್ವದ ಆಶಯಗಳು.

ದೇಶ ಸ್ವತಂತ್ರಗೊಂಡಾಗ ನಮ್ಮ ಹಿರಿಯರು ರಾಷ್ಟ್ರದ ಪ್ರಜೆಗಳಿಗೆ ಕೊಟ್ಟ ಅಧಿಕಾರ ಇವತ್ತು ನಮ್ಮ ದೇಶದ ಮತ್ತು ನಮ್ಮ ರಾಜ್ಯದ ಬಹುಪಾಲು ಕಡೆಗಳಲ್ಲಿ ಹಣವಂತರ, ಶೋಷಕರ, ಜನರ ಸಂವೇದನೆಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವವರ ಕೈಗೆ ಹೋಗಿಬಿಟ್ಟಿದೆ.

ಈಗ, ಸ್ವಾತಂತ್ರ್ಯದ ೬೦ ವರ್ಷಗಳ ನಂತರ, ಹೊಸ "ಸ್ವರಾಜ್ಯ"ದ ಬಗ್ಗೆ ಜನ ಯೋಚಿಸಬೇಕಿದೆ. People got to take back their state and the country. ಅದಕ್ಕೆ ಮಾಡಬೇಕಿರುವುದು ಇಷ್ಟೆ: ಅಧಿಕಾರವನ್ನು ಕೇವಲ ಹಣಚೆಲ್ಲಬಲ್ಲ ತಾಕತ್ತಿರುವವರ ಕೈಗೆ ಕೊಡದೆ, ತಮ್ಮಲ್ಲಿಯ ನೇರವಂತಿಕೆಯ, ಸಮಾಜಸೇವಾಗುಣದ ಜನರ ಕೈಗೆ ನೀಡುವ ಕೆಲಸ. ತಾವು ಮಾಡಿದ ತಪ್ಪಿಗೆ ತಮ್ಮ ಪ್ರತಿನಿಧಿಗಳೆನಿಸಿಕೊಂಡವರನ್ನು ಜನ ದೂರಬಾರದು. ಯಾಕೆಂದರೆ, ಅವರಿಗೆ ಅಧಿಕಾರ ಕೊಡುವವರೆ ಪ್ರಜೆಗಳು.

ಅದಾಗದಿದ್ದರೆ, ಆಂಧ್ರದ ಘಟನೆಗಳು ನಮ್ಮಲ್ಲೂ ಘಟಿಸಲು ಹೆಚ್ಚಿನ ಸಮಯ ಬೇಕಿಲ್ಲ.