Nov 20, 2003

ದೇಶಭಕ್ತರು ಬಾಂಬ್ ಹಿಡಿಯಲೇಬೇಕೆ?

[ನಮ್ಮ ಯುವ ಜನಾಂಗ ದಾರಿ ತಪ್ಪುತ್ತಿರುವುದಾದರೂ ಯಾಕೆ ? ಈ ಅಡ್ಡದಾರಿ ದುರಂತದಲ್ಲಿ ವ್ಯವಸ್ಥೆಯ ಪಾತ್ರವೆಷ್ಟು ? ಮಟ್ಟೆಣ್ಣನವರ್ `ಬಾಂಬ್' ಪ್ರಸಂಗ ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳಲಿಕ್ಕೊಂದು ಸಂದರ್ಭ ಸೃಷ್ಟಿಸಿದೆ. ಈ ಆತ್ಮಾವಲೋಕನ ನಾಳಿನ ಬೆಳಗು ಹೇಗಿರಬೇಕೆಂದು ನಿರ್ಧರಿಸುವ ನಿರ್ಣಾಯಕ ಸಂದರ್ಭವೂ ಹೌದು. ನವೆಂಬರ್ 20, 2003, ದಟ್ಸ್‌ಕನ್ನಡ.ಕಾಮ್]

ಗಿರೀಶ್ ಮಟ್ಟೆಣ್ಣನವರ್; ಕರ್ನಾಟಕದಲ್ಲಿನ ಹೊಸ ಮಿಂಚು, ಜನಸಾಮಾನ್ಯರ ಆಶಾಕಿರಣ. ಮಾಧ್ಯಮಗಳ ಪ್ರಿಯಕರ. ಸಾಹಿತಿಗಳಿಗೆ ನವ ಸ್ಫೂರ್ತಿ. ಬಿಸಿರಕ್ತದ ದೇಶಭಕ್ತರ ಸಮಕಾಲೀನ ಆದರ್ಶ. ಆದರೇನು? ಸಾರ್ವಜನಿಕ ನೆನಪು ಕೆಲಕಾಲ ಮಾತ್ರ ಎನ್ನುವುದೂ ಸತ್ಯವೇ. ಇದಕ್ಕಿಂತ ದೊಡ್ಡ ಘಟನೆ ಘಟಿಸಿದರೆ ಗಿರೀಶ್ ಮತ್ತು ಆತನ ಕೆಲಸ ನೆನಪಿನಿಂದ ಗಾಯಬ್.

ಧಾರವಾಡದಲ್ಲಿ ಪದವಿ ಮುಗಿಸಿದ ಈ ಯುವಕ ಮೈಸೂರಿನ SI ತರಬೇತಿ ಶಿಬಿರದಲ್ಲಿ 5 ನೆ ರ್‍ಯಾಂಕ್ ಪಡೆದಿದ್ದ ಗಟ್ಟಿಮುಟ್ಟು ಪ್ರತಿಭಾಶಾಲಿ. ಅದೇ ಸಮಯದಲ್ಲಿ ರಾಷ್ಟ್ರಗೀತೆಗೆ ಗೌರವ ಕೊಡಲಿಲ್ಲ ಎಂದು ಸಹ ನಾಗರೀಕನಿಗೆ ಬಾರಿಸಿದ್ದ ದೇಶಪ್ರೇಮಿ. ಗೆಳೆಯರ ಪ್ರಕಾರ ಭಾವನಾತ್ಮಕ ಜೀವಿ, ಪ್ರಾಮಾಣಿಕ ಮತ್ತು ರಾಷ್ಟ್ರೀಯ ಪ್ರಜ್ಞೆಯ ಮಹಾನ್ ಹುಚ್ಚ. ಆನಂದ ಮಾರ್ಗಿಗಳ ಗುಂಪಿನ ಸದಸ್ಯ. ದೇಶದ ಅವ್ಯವಸ್ಥೆಗೆ ರಾಜಕಾರಣಿಗಳು ಮತ್ತು ಭ್ರಷ್ಟ ಅಧಿಕಾರಿಗಳು ಕಾರಣವೆಂದೂ, ಅವರನ್ನು ಹೆದರಿಸಿ, ಬೆದರಿಸಿ, ಹಿಂಸೆಯಿಂದ ಕ್ರಾಂತಿ ತರಬಹುದು ಎಂದುಕೊಂಡಿದ್ದ ಕನಸುಗಾರ. ಈ ಕನಸುಗಳನ್ನು ನನಸಾಗಿಸಿಕೊಳ್ಳಲು ಪೋಲಿಸ್ ಅಧಿಕಾರಿಯಾದ ನಂತರವೂ ನಕ್ಸಲೀಯರನ್ನು ಸಂಪರ್ಕಿಸುತ್ತಿದ್ದವ. ಭೂಗತ ಸಂಸ್ಥೆಯನ್ನು ಸ್ಥಾಪಿಸಿ ಕೆಲವು ಸದಸ್ಯರನ್ನು ನೋಂದಾಯಿಸಿದ್ದ, ಸಂಸ್ಥೆಗೆ ಸಾಹಿತ್ಯವನ್ನು ಸಿದ್ಧಪಡಿಸಿದ್ದ. ವೆಬ್ ಸೈಟನ್ನೂ ಸ್ಥಾಪಿಸಿದ್ದ ಎಂದು ಸುದ್ದಿ. ಇದೇ ಸಮಯದಲ್ಲಿ ತನ್ನ ವೃತ್ತಿಯಲ್ಲಿ , ವಿಭಾಗದಲ್ಲಿ ಹೆಸರನ್ನೂ ಪಡೆದಿದ್ದ. ಮಂತ್ರಿ ಧರ್ಮಸಿಂಗರ ಕ್ಷೇತ್ರದ ನರೋಣದಲ್ಲಿ ದುಡಿಯುತ್ತಿದ್ದಾಗ, ರಾಜಕೀಯ ಒತ್ತಡಗಳಿಂದಾಗಿ ವರ್ಗಾವಣೆಗೊಂಡಿದ್ದ. ಕಳ್ಳಖದೀಮರನ್ನು, ರಸ್ತೆಗಳಲ್ಲಿ ಸಿಗರೇಟ್ ಸೇದಿಕೊಂಡು ಹೋಗುವರನ್ನು ಸಾರ್ವಜನಿಕವಾಗಿ ಹೊಡೆಯುತ್ತ, ಈತ ಹೋಗುತ್ತಿದ್ದರೆ ಜನ ಭಯ ಪಡುತ್ತ ಹೋಗುವಂತಹ ವಾತಾವರಣ ಸೃಷ್ಟಿಸಿದ್ದ. ಶಾಸಕರ ಭವನದಲ್ಲಿ ಬಾಂಬ್ ಇಟ್ಟು ತನ್ನ ಸಹೋದ್ಯೋಗಿಗಳಿಂದ ಬಂಧಿತನಾದ. ಸಾಮಾನ್ಯರಿಂದ ಪ್ರಶಂಸಿಸಲ್ಪಟ್ಟ. ಕೆಲವು ರಾಜಕಾರಣಿಗಳಿಂದ ಹೊಗಳಿಸಿಕೊಂಡ. ಕಾನೂನು ಪಾಲನೆಯಲ್ಲಿ ಮತ್ತೆ ಮಂತ್ರಿವರ್ಗದ ಹಸ್ತಕ್ಷೇಪಣೆಯಿಂದ ದೂಷಿಸಲ್ಪಟ್ಟ.

ಆರ್.ಎಸ್.ಎಸ್.ನ ಹೋ.ವೆ.ಶೇಷಾದ್ರಿ ವಿರಚಿತ ಛತ್ರಪತಿ ಶಿವಾಜಿ ವ್ಯಕ್ತಿಪೂಜೆಯ 'ಯುಗಾವತಾರ' ಕಾದಂಬರಿಯನ್ನು ನಾನು ಮೈರಕ್ತ ಉಕ್ಕುತ್ತಿದ್ದಷ್ಟು ಕಾಲ ಹಲವಾರು ಸಲ ಓದಿದ್ದೇನೆ. ನನ್ನ ಸಹಪಾಠಿಯೂ ಆಗಿದ್ದ ರೂಮ್‌ಮೇಟ್‌ಗೆ ಅದನ್ನು ಓದಲು ಕೊಟ್ಟು, ಅವನೂ ಅದನ್ನು ವಿಪರೀತ ಇಷ್ಟಪಟ್ಟು ನಾವಿಬ್ಬರೂ ಅದರ ಬಗ್ಗೆ, ದೇಶ, ಧರ್ಮದ ಬಗ್ಗೆ ಭಾವುಕವಾಗಿ ಚರ್ಚಿಸಿದ್ದೆವು. ನಂತರ ಕಾಲಾಂತರದಲ್ಲಿ ನನ್ನಂತೆಯೇ ಎಲ್ಲೆಲ್ಲೋ ಎದ್ದು ಬಿದ್ದು, ಅವನು ಇದೇ ಗಿರೀಶ್ ಮಟ್ಟೆಣ್ಣವರ್‌ರ ಜೊತೆ ಮೈಸೂರಿನ ತರಬೇತಿ ಶಿಬಿರದಲ್ಲಿ ಸಹಪಾಠಿಯಾಗಿದ್ದ ಎಂದು ಮತ್ತೊಬ್ಬ ಸಹಗೆಳೆಯ ಈ ಮಧ್ಯೆ ವಿಲೇಖಿಸಿದ್ದ.

ಭಾರತದಲ್ಲಿನ ಅನಕ್ಷರಸ್ಥರ ಸಂಖ್ಯೆ 40%. ನಮ್ಮ ಈ ಸಹಭಾರತೀಯರಿಗೆ ರಾಷ್ಟ್ರಗೀತೆಯ ಕಲ್ಪನೆಯಾಗಲಿ, ಅದಕ್ಕೆ ಕೊಡಬೇಕಾದ ಗೌರವವಾಗಲಿ ತಿಳಿದಿರುವ ಸಾಧ್ಯತೆಗಳು ತುಂಬಾ ಕಮ್ಮಿ. ಈ ಲೆಕ್ಕದಲ್ಲಿ ಹತ್ತರಲ್ಲಿ ನಾಲ್ಕು ಜನಕ್ಕಿಂತ ಹೆಚ್ಚು ಮಂದಿಗೆ ಅದರ ಕಲ್ಪನೆಯೇ ಇಲ್ಲಾ ಎನ್ನುವುದು ವಾಸ್ತವ. ಈ ಅವಿದ್ಯಾವಂತ ಬಡವರು ರಾಷ್ಟ್ರಗೀತೆಗೆ ಮೇಲ್ನೋಟಕ್ಕೆ ತೋರುವ ಅಗೌರವ ಅವರ ಅಜ್ಞಾನದಿಂದಲೇ ಹೊರತು ಅವರ ಅಸಡ್ಡೆ, ದೇಶದ್ರೋಹ, ಧಾರ್ಷ್ಟ್ಯದಿಂದಲ್ಲ. ಈ ಅಜ್ಞಾನವನ್ನು ಹೋಗಲಾಡಿಸಲು ಇರುವ ಒಂದೇ ವಿಧಾನ ಜ್ಞಾನ, ವಿದ್ಯೆ. ಆದ್ದರಿಂದ ಬಿಸಿರಕ್ತದ, ಅಧಿಕಾರದ ಮದದಲ್ಲಿ ಹೊಡೆದು ಸಾಧಿಸಿಕೊಳ್ಳಬಹುದು ಎಂಬ ಅಹಂಕಾರದಲ್ಲಿ ಒಬ್ಬ ಸಹನಾಗರೀಕನನ್ನು ಹೊಡೆಯುವುದು ನೈತಿಕ ಅಧಃಪತನ. (ವಿದ್ಯಾವಂತರು ರಾಷ್ಟ್ರಗೀತೆಗೆ ಗೌರವ ನೀಡೇ ನೀಡುತ್ತಾರೆ ಎನ್ನುವುದು ಚರ್ಚಾಸ್ಪದವಾದರೂ, ಅವರಿಗೆ ಅದರ ಕಲ್ಪನೆಯಿದೆ ಎನ್ನುವುದು ಚರ್ಚನೀಯವಲ್ಲ.)

ಇತಿಹಾಸ ಪುನರಾವರ್ತಿಸುತ್ತದೆ ಎನ್ನುವುದು ಕ್ಲೀಷೆ ಇರಬಹುದು ಮತ್ತು ಸುಳ್ಳೂ ಆಗಿರಬಹುದು. ಆದರೆ ಅದು ಕೆಲವೊಂದು ಪಾಠಗಳನ್ನು ಪುನರಾವರ್ತಿಸಿ ಮನದಟ್ಟು ಮಾಡಿಸುತ್ತದೆ. ಜನತಾಂತ್ರಿಕವಾಗಿ ಆಯ್ಕೆಯಾಗಿ ಸರ್ವಾಧಿಕಾರಿಗಳಾಗಿ ಪರಿವರ್ತಿರಾದ ಹಿಟ್ಲರ್ ಮತ್ತು ನಮ್ಮವರೇ ಆದ ಇಂದಿರಾ ಗಾಂಧಿಯವರು ಅವರ ಮಾತೃಭೂಮಿಗೆ ಎಷ್ಟು ಅಪಾಯಕಾರಿಯಾಗುತ್ತಾರೆ ಎನ್ನುವುದು ಆ ಪಾಠಗಳಲ್ಲೊಂದು. ಇಂದಿರಾ ಗಾಂಧಿಯವರು ಜನಾಗ್ರಹಕ್ಕೆ ಮಣಿದು ತಮ್ಮ ತಪ್ಪನ್ನು ತಿದ್ದಿಕೊಂಡರೆ, ಹಿಟ್ಲರ್ ಮಾಡಿದ ದೇಶದ್ರೋಹದಿಂದಾಗಿ, ಅರ್ಧ ಶತಮಾನ ಗತಿಸಿದರೂ, ಜರ್ಮನಿ ಇಂದಿಗೂ ತನ್ನ ನೆಲದಲ್ಲಿ ಅಮೇರಿಕಾದ ಸೈನಿಕರನ್ನು ಸಾಕುತ್ತಿದೆ. ಕಾನೂನು, ಶಾಂತಿ, ನ್ಯಾಯ ಕಾಯುವ ಪೋಲೀಸರಿಗೆ ಕಳ್ಳರು, ಸಮಾಜ ಘಾತುಕರು, ಕಾನೂನು ಉಲ್ಲಂಘಕರು ಹೆದರಬೇಕೇ ವಿನಹ ಜನಸಾಮಾನ್ಯರಲ್ಲ. ಒಬ್ಬ ನಾಗರೀಕ ಅನ್ಯಾಯದ ವಿರುದ್ದ ದೂರು ನೀಡಲು ಠಾಣೆಗೆ ಹೋಗಲು ಹೆದರುವುದರಲ್ಲಿಯೇ ನಾಗರೀಕ ವ್ಯವಸ್ಥೆಯ ಸೋಲಿದೆ. ಯಡ್ರಾಮಿಯಲ್ಲಿಯೋ, ನರೋಣದಲ್ಲಿಯೋ, ಗಿರೀಶರ ಹಿಂದಿನ ಎಸ್.ಐ. ಜನರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿದ್ದು, ಶಾಲಾ ಮಕ್ಕಳು ಸಹ ಪೋಲಿಸ್ ಠಾಣೆಗೆ ನೀರು ಕುಡಿಯಲು ಹೋಗುತ್ತಿದ್ದರು ಎಂದು ಒಂದು ಪತ್ರಿಕೆ ಉಲ್ಲೇಖಿಸಿದೆ. ಈ ತರಹದಿಂದಾಗಿ, ಜನರ ಸಹಕಾರದಿಂದಾಗಿ, ಪೋಲೀಸರು ತಮ್ಮ ಕಾರ್ಯಾಚರಣೆಯಲ್ಲಿ, ನ್ಯಾಯಪಾಲನೆಯಲ್ಲಿ ಗೆಲ್ಲುತ್ತಾರೆ ವಿನಹ ಪ್ರತಿಯೊಬ್ಬರನ್ನು ಹೆದರಿಸಿ ಬೆದರಿಸಿಡುವುದರಿಂದಲ್ಲ.

ಗಿರೀಶ್ ಮತ್ತು ನನ್ನ ಸಮಕಾಲೀನ ಜನಾಂಗ ತುಘಲಕನ ವಿರುದ್ಧ ಹೋರಾಡಿದ ಬುಂದೇಲಖಂಡದ ಛತ್ರಸಾಲನನ್ನು, ಛತ್ರಪತಿ ಶಿವಾಜಿಯನ್ನು, `ಅಜೇಯ' ಚಂದ್ರಶೇಖರ ಆಜಾದ್, ಭಗತ್‌ಸಿಂಗ್, ಸುಭಾಷ್ ಚಂದ್ರ ಬೋಸರನ್ನು ಓದುತ್ತಾ, ಮೆಚ್ಚುತ್ತ, ಆರಾಧಿಸುತ್ತ ಬೆಳೆದದ್ದು. ಸಣ್ಣ ಕಾರಣಕ್ಕೂ ರಕ್ತ ಭುಗಿಲೇಳುವ ಮೀಸೆ ಮೂಡುತ್ತಿದ್ದ ವಯಸ್ಸಿನಲ್ಲಿ ಪ್ರಪಂಚ ರಾಜಕೀಯದಲ್ಲಿ ದೇಶದ ಅನಾಮಿಕ ಸ್ಥಾನವನ್ನು, ಭ್ರಷ್ಟತೆಯನ್ನು, ಸಮಾಜದಲ್ಲಿನ ತಾರತಮ್ಯವನ್ನು, ಬಡತನವನ್ನು, ಒಲಿಂಪಿಕ್ಸ್ ಮತ್ತು ಕ್ರಿಕೆಟ್‌ನಲ್ಲಿ ದೇಶದ ಸೋಲನ್ನು ನೋಡುತ್ತ, ಏನು ಮಾಡಬೇಕೆಂದು ತಿಳಿಯದ, ಕೈಲಾಗದ ಹೊತ್ತಿನಲ್ಲಿ ಆ ಕ್ರಾಂತಿಕಾರಿಗಳಲ್ಲಿ, ವೀರರಲ್ಲಿ ನೈತಿಕ, ಭಾವನಾತ್ಮಕ ಆಶ್ರಯ ಪಡೆದವರು.

ಆದರೆ ಜೀವನ ಒಂದು ಜಂಗಮ ಕ್ರಿಯೆ. ವಯಸ್ಸು ಬೆಳೆದಂತೆ, ಓದು ವಿಸ್ತಾರವಾದಂತೆ, ಅನುಭವ ಪಕ್ವಗೊಂಡಂತೆ, ಗೆಲುವು ಮತ್ತು ಸೋಲುಗಳು ನೆಕ್ಕಿದಂತೆ, ಸತ್ಯ ಮತ್ತು ಆದರ್ಶವಂತರ ಸೋಲೂ ಕಣ್ಣಿಗೆ ಕಾಣಿಸಬೇಕು. ಇಲ್ಲದಿದ್ದಲ್ಲಿ ಬುದ್ಧಿ ಎಲ್ಲೋ ನಿಂತ ನೀರಾಗಿದೆ ಎಂದೇ ಅರ್ಥ. ಚಂದಮಾಮದ ಕಥೆಗಳನ್ನು ಬಾಲ್ಯದ ಮೂರ್ನಾಲ್ಕು ವರ್ಷಗಳು ಓದಿದ ನಂತರ ಸುಧಾ, ತರಂಗ, ರಾಗಸಂಗಮಗಳಿಗೆ ಬೆಳೆಯಬೇಕು. ಯಂಡಮೂರಿ, ಪತ್ತೇದಾರಿಗಳ ನಂತರ ಆನಕೃ, ತರಾಸು, ಭೈರಪ್ಪ, ಲಂಕೇಶ್, ಕಾರಂತ, ಕುವೆಂಪುಗಳಾಚೆ ವಿಸ್ತರಿಸುತ್ತಿರಬೇಕು. ಭಗತ್‌ಸಿಂಗ್ ಇಷ್ಟವಾಗಬೇಕು. ಆತನಿಗೆ ಗಲ್ಲು ತಪ್ಪಿಸದ ಗಾಂಧಿಯೂ ಇಷ್ಟವಾಗಬೇಕು. ಗಾಂಧಿಯಾಚೆಯೂ ದೃಷ್ಟಿ ನೆಡಬೇಕು. ಹರಿಯುವ ನೀರಿಗೆ ದೋಷವಿಲ್ಲ. ಈ ಪಯಣದಲ್ಲಿ ಯಾವುದೇ ಸ್ಥಳದಲ್ಲಿ ಗೂಟ ಬಡಿದುಕೊಂಡು ನಿಂತರೆ ಅದೇ ಸ್ಥಾವರ. ಆಗ ಬೆಳವಣಿಗೆ ನಿಂತ ನೀರಾಗಿ ಗಬ್ಬೇಳುತ್ತದೆ. ವ್ಯಕ್ತಿ, ದೇಶ ಹಿಂದುಳಿಯುತ್ತದೆ. ಮುಂದುವರಿದವರ ಅನಾಸ್ಥೆಯಲ್ಲಿ, ಮರುಕದಲ್ಲಿ, ಹೀಯಾಳಿಕೆಯಲ್ಲಿ, ಶೋಷಣೆಯಲ್ಲಿ ಕಾಲ ಗತಿಸುತ್ತದೆ.

ಹೀಗಾಗದೆ ಬೆಳವಣಿಗೆಯಾಗುತ್ತ ಹೋದಂತೆ ಸತ್ಯ ನಿಚ್ಚಳವಾಗುತ್ತದೆ. ಬೆಟ್ಟದ ಅರೆಕೊರೆಗಳು ಕಾಣಿಸುತ್ತವೆ. ಅಹಿಂಸೆ, ಸಹನೆ, ಸಹ ಭಂಕ್ತಿ, ಸಹ ಬಾಳ್ವಿಕರು ಪ್ರಿಯವಾಗುತ್ತದೆ. ಸಾಂಘಿಕ ಜೀವನ ಮತ್ತು ಅದರ ಯಶಸ್ಸು ಕಾಣಿಸುತ್ತದೆ. ನಾಣ್ಯದ ಎರಡೂ ಕಡೆ ಇರುವ ಸೋಲು-ಗೆಲುವು, ಸತ್ಯಾಸತ್ಯ, ಕಪ್ಪು-ಬಿಳುಪು ಕಾಣಿಸುತ್ತದೆ.

ಪಟೇಲ, ಗೌಡ, ಶ್ಯಾನುಭೋಗರಿಗೆ ಬೇಳೆತುಪ್ಪ, ಕುರಿಕೋಳಿ ಕೊಡುತ್ತ, ಹುಸಿ ಮಾತನಾಡಿ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದ ಸಾಮಂತರು ತಮ್ಮ ಮೇಲಿನ ರಾಜರಿಗೆ ನಡುಬಗ್ಗಿಸಿ ಗುಲಾಮಿತನದಲ್ಲಿ ಕಪ್ಪಕಾಣಿಕೆಗಳ ಲಂಚ ನೀಡುತ್ತಾ ಬಂದ ಇತಿಹಾಸ ನಮ್ಮದು. ಇದರ ಪಳೆಯುಳಿಕೆಯಿಂದಾಗಿಯೇ, ಲಂಚ ಕೊಡುವುದು, ಭ್ರಷ್ಟ ಮಾರ್ಗಗಳಲ್ಲಿ ಕೆಲಸ ಸಾಧಿಸಿಕೊಳ್ಳುವುದು ಸಮರ್ಥನೀಯವಾಗಿಬಿಡುತ್ತದೆ. ಡ್ರೈವಿಂಗ್ ಲೈಸನ್ಸ್ ಪಡೆಯಲು ಕೊಡುತ್ತಿರುವ ಶುಲ್ಕದಲ್ಲಿ, ವಾಹನ, ಜಮೀನುಗಳ ನೊಂದಾವಣೆ ಶುಲ್ಕದಲ್ಲಿಯೇ ಆಯಾಯ ಗುಮಾಸ್ತರುಗಳಿಗೆ, ರಿಜಿಸ್ಟ್ರಾರುಗಳಿಗೆ ಸಂಬಳ-ಸಾರಿಗೆ-ಭತ್ಯೆಗಳು ಸಲ್ಲುತ್ತಿವೆ ಎಂಬ ಸಾಮಾನ್ಯ ಜ್ಞಾನ ಮರೆತು ಹೋಗುತ್ತದೆ. ನಿರುದ್ಯೋಗದಿಂದಾಗಿ ಮತ್ತು ಕೆಲವೇ ಕೆಲವು ಯೋಗ್ಯ ಲಭ್ಯ ಉದ್ಯೋಗಗಳಿಗೆ ಹಲವಾರು ಮಂದಿಯ ಪೈಪೋಟಿಯಿಂದಾಗಿ ಕೆಲವರು ಭ್ರಷ್ಟ ಮಾರ್ಗಗಳಿಂದ ಕೆಲಸ ಹಿಡಿದು, ತಮ್ಮ ನಷ್ಟವನ್ನು ಲಂಚ ರುಷುವತ್ತುಗಳಿಂದ ತುಂಬಿಸಿಕೊಳ್ಳುವುದು ನಮ್ಮ ಕೆಲಸ ಆಗಬೇಕಾದ ಸಮಯದಲ್ಲಿ ಸಹನೀಯವಾಗಿಬಿಡುತ್ತದೆ.

ಇತಿಹಾಸದ ರಾಜರುಗಳಾದ ಅಶೋಕ, ಪುಲಿಕೇಶಿ, ಅಕ್ಬರ್, ಕೃಷ್ಣದೇವರಾಯ ಮತ್ತಿತರ ವ್ಯಕ್ತಿಗಳ ಬಗ್ಗೆ ಗೌರವವಿರಬೇಕು. ಆಗಿದ್ದ ವ್ಯವಸ್ಥೆಯಂತೆ ನಡೆದುಕೊಂಡವರು ಅವರು. ವ್ಯಕ್ತಿ ಸಾಧಿಸಬಹುದಾದ ಸಾಧ್ಯತೆಗಳ ಸ್ಫೂರ್ತಿ ಅವರು. ಕೆಲವರು ವೈಯುಕ್ತಿಕವಾಗಿ ಶ್ರೇಷ್ಠರೂ ಸಹ. ಆದರೆ ಅವರ ವ್ಯವಸ್ಥೆ ಶ್ರೇಷ್ಠವಾಗಲಿ, ಆ ಆಡಳಿತ ಮತ್ತೆ ಈಗ ಬಯಸುವುದಾಗಲಿ ಸಲ್ಲ. ಅಲ್ಲಿ ಇದ್ದದ್ದು ರಾಜನಿಷ್ಠೆಯೆಂಬ ಅಪ್ಪಟ ನಾಯಿನಿಷ್ಠೆ ; ನಡುಬಗ್ಗಿಸಿ ನಡೆಯಬೇಕಾದ ಆತ್ಮಗೌರವವಿಲ್ಲದ ಗುಲಾಮಿತನ. ತಮಗೆ ಬೇಕಾದವರಿಗೊಂದು, ಬೇಡದವರಿಗೊಂದು ಇದ್ದ selective ಸ್ವಜನಪಕ್ಷಪಾತಿ ನ್ಯಾಯ. ಇವರೆಲ್ಲರ ಸಮಯದಲ್ಲಿ ಮತ್ತು 1947 ರ ತನಕವೂ ಮುಂದುವರೆದಿದ್ದ ಜನಸಾಮಾನ್ಯರ, ರೈತರ, ಬಡವರ, ಕೆಳವರ್ಗದವರ, ಮಾತಿಲ್ಲದವರ ಸ್ಥಿತಿಯನ್ನು ಕನ್ನಡದ ಸಾಮಾಜಿಕ ಪ್ರಜ್ಞೆಯ ಮಹಾಕವಿ ಕುವೆಂಪುರವರ 'ರೈತರ ದೃಷ್ಟಿ' ಕವನ ಪರಿಪೂರ್ಣವಾಗಿ ಬಿಂಬಿಸುತ್ತದೆ.

'ಜಾತಿ ಜಾತಿ' ಎಂದು ಬರಿದೆ ಹೋರಾಡಿ,
ಸೋದರರ ಕೊಂದರೌ ಪರಕೀಯರನು ಕರೆದು.
ಕರಿಯರದೊ ಬಿಳಿಯರದೊ ಯಾರದಾದರೆ ಏನು?
ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ.

ವಿಜಯನಗರವೋ? ಮೊಗಲರಾಳ್ವಿಕೆಯೊ? ಇಂಗ್ಲೀಷರೊ?
ಎಲ್ಲರೂ ಜಿಗಣಿಗಳೆ ನಮ್ಮ ನೆತ್ತರಿಗೆ
ಕತ್ತಿ ಪರದೇಶಿಯಾದರೆ ಮಾತ್ರ ನೋವೆ?
ನಮ್ಮವರೆ ಹದಹಾಕಿ ತಿವಿದರದು ಹೂವೆ?

ಪ್ರಜಾಪ್ರಭುತ್ವ ಇಲ್ಲಿಯ ತನಕ ಜಗತ್ತು ಕಂಡ ಸಾಮಾಜಿಕ ಆಡಳಿತಗಳಲ್ಲಿಯೇ ಶ್ರೇಷ್ಠವಾದದ್ದು. ಇದು ಆದರ್ಶವಂತ, ಸಹನೀಯ ಸಮಾಜದ ನಿರ್ಮಾಣಕ್ಕೆ ಮೂಲ. ಇದು ನಿಲ್ಲುವುದು ಒಬ್ಬ ವ್ಯಕ್ತಿಯಿಂದ ಅಲ್ಲ. ಬದಲಿಗೆ ಸಮಾಜದಲ್ಲಿನ ಪ್ರತಿಯೊಬ್ಬರೂ ಪಾಲ್ಗೊಳ್ಳುವುದರಿಂದ. ಇದು ಗಟ್ಟಿಯಾದಷ್ಟೂ ಗುಲಾಮಿತನ ನಶಿಸುತ್ತದೆ, ಜೀತದಾಳುಗಳು ವಿಮುಕ್ತರಾಗುತ್ತಾರೆ, ಜಾತಿ ಮತ ಭೇದಗಳು, ಶೋಷಣೆ ಕ್ಷೀಣಿಸುತ್ತವೆ. ವ್ಯಕ್ತಿ ಮತ್ತು ಪಂಥ ನಿಷ್ಠೆಗಿಂತ ಸಮಾಜ ನಿಷ್ಠೆ ಮುಖ್ಯವಾಗುತ್ತದೆ. ಹಿಂಸೆಯಿಂದ, ಮಿಲಿಟರಿ ಬಲದಿಂದ, ದೌರ್ಜನ್ಯದಿಂದ ಪಡೆಯುವ ಸ್ವಾತಂತ್ರ್ಯ ಮುಂದಿನ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರೋಧಿ, ಶೋಷಣೆಗೆ ನಾಂದಿ ಎಂದೇ ಇರಬಹುದು, ಸುಭಾಷ್ ಚಂದ್ರ ಬೋಸರನ್ನು ಕಾಂಗ್ರೆಸ್ ಅಧ್ಯಕ್ಷ ಪದವಿಯಿಂದ ಗಾಂಧೀಜಿ ಇಳಿಸಿದ್ದು, ಭಗತ್‌ಸಿಂಗರಿಗೆ ಮರಣದಂಡನೆ ತಪ್ಪಿಸಲು ಪ್ರಯತ್ನಿಸದೆ ಹೋದದ್ದು ಮತ್ತು ಗಾಂಧಿ ಎಂಬ ವ್ಯಕ್ತಿ ಪ್ರಜಾಪ್ರಭುತ್ವಕ್ಕಿಂತ ದೊಡ್ಡದಾಗಿ ಬಿಡುವ ಅಪಾಯದಿಂದ ತಾವೂ ಅಧಿಕಾರ ಏರಬಯಸದಿದ್ದು. ಇಲ್ಲಿ ವ್ಯವಸ್ಥೆಗಿಂತ, ನೆಲದ ಕಾನೂನಿಗಿಂತ ಯಾರೂ ಅತೀತರಲ್ಲ.

ಸಾವಿರಾರು ವರ್ಷಗಳ ಕಾಲ ರಾಜರುಗಳಿಂದ, ಪರಕೀಯರಿಂದ ಆಳಲ್ಪಟ್ಟ ಕಾರಣ ಭಾರತದಲ್ಲಿ ವ್ಯಕ್ತಿನಿಷ್ಠೆ, ಸ್ವಾರ್ಥ, ಸ್ವಹಿತಾಸಕ್ತಿಗಳು ಮುಖ್ಯವಾಗಿದೆಯೆ ಹೊರತೂ ಪ್ರಜಾಪ್ರಭುತ್ವದ ನಿಜಸ್ಫೂರ್ತಿ ಇನ್ನೂ ಗಟ್ಟಿಯಾಗಿಲ್ಲ. ಇದಕ್ಕೆ ರಾಜಮಹಾರಾಜರುಗಳ ಗತವೈಭವದ ಆಳ್ವಿಕೆ ಬಯಸುವ, ಪಾಳೆಯಗಾರರ, ಗೌಡಿಕೆಯ ಪ್ರವೃತ್ತಿ ತೋರುವ ಸಿನೆಮಾ ಮೆಚ್ಚುವ, ಬಾಳ ಠಾಕ್ರೆಯ, ಸಂಜಯ ಗಾಂಧಿಯ ಸರ್ವಾಧಿಕಾರತ್ವ ಕನಸುವ, ಮಟ್ಟೆಣ್ಣನವರ್‌ರವರನ್ನು ಬೆಂಬಲಿಸುವ ಮನಸ್ಸುಗಳೇ ಸಾಕ್ಷಿ.

ಇದಕ್ಕೆ ಕಾರಣಗಳು ಹಲವಷ್ಟು. ಮುಖ್ಯವಾಗಿ ಆರ್ಥಿಕ ಬಡತನ, ತಮ್ಮ ಸಹಜ ಹಕ್ಕುಗಳನ್ನು ಚಲಾಯಿಸಲು ಭಯಪಡುವ ಮನಸ್ಸುಗಳು, ವಿದ್ಯಾವಂತರ ಅಲ್ಪತೃಪ್ತಿ, ದುಡಿಮೆಯ ಬೆಲೆ ಅರಿಯದವರ ಸೋಮಾರಿತನ, ಸಮಾಜದಲ್ಲಿನ ಮತಭೇದ, ಬಹುಸಂಖ್ಯಾತ ಅನಕ್ಷರಸ್ಥರ, ಬಡವರ ಅಜ್ಞಾನ. ಕರ್ನಾಟಕದಲ್ಲಿ ಬರದಿಂದಾಗಿ ಹಸುಗಳ ಆಹಾರ ಕೊರತೆ ನೀಗಲು ಸಾವಿರಾರು ಮೈಲಿ ದೂರದ ಹರಿಯಾಣದಿಂದ ಮೇವು ರೈಲಿನಲ್ಲಿ ಇಲ್ಲಿಗೆ ಬರಲು ಸಾಧ್ಯವಾಗಿದ್ದು, ಹೆಗ್ಗಡದೇವನ ಕೋಟೆಯಲ್ಲಿನ ಬರಪೀಡಿತರಿಗೆ ನಾಡು ಮತ್ತು ಸರ್ಕಾರ ಸ್ಪಂದಿಸುವಂತಾಗಿದ್ದು, ಜನರ ಜೀವನಮಟ್ಟ ನಮ್ಮ ಪೂರ್ವಿಕರಿಗಿಂತ ಸುಧಾರಿಸುತ್ತಿರುವ, ಸಹನೀಯವಾಗುತ್ತಿರುವ ಸ್ಥಿತಿ ಉದ್ಭವಿಸುತ್ತಿರುವುದು ಪ್ರಜಾಪ್ರಭುತ್ವದಿಂದಾಗಿ ಎಂಬುದನ್ನು ಮರೆತು ಹುಸಿ ದೇಶಭಕ್ತರು ಸಿನಿಕರಾಗುತ್ತಾರೆ. ವ್ಯವಸ್ಥೆಯನ್ನು ಸುಧಾರಿಸುವ ತಾಳ್ಮೆಯಿಲ್ಲದವರು, ಸೋಲನ್ನು ಸ್ವೀಕರಿಸಲಾಗದ ಗುಣವಿಲ್ಲದವರು ನಾಡಿನೊಳಗಡೆ ಬಾಂಬ್ ಹಿಡಿಯುವ ಆತ್ಮಹತ್ಯಾ ಕ್ರಮಕ್ಕೆ ಮುಂದಾಗುತ್ತಾರೆ. ಜನರಲ್ಲಿ ಬೆರೆಯದೆ ತುಕ್ಕು ಹಿಡಿಯುತ್ತಾರೆ. ಪ್ರಜಾಪ್ರಭುತ್ವ ಮತ್ತು ತಮ್ಮ ನಾಗರೀಕ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಒಂದು ನೈಜ, ಸಾಮಾನ್ಯ ಪ್ರತಿಭಟನೆಗೆ ಮುಂದಾಗದೆ ಯಾರೋ ಅವತರಿಸಿ ಬಂದು ನಮ್ಮನ್ನು ರಕ್ಷಿಸುತ್ತಾರೆ ಎಂಬ ಭ್ರಮೆಗೊಳಗಾಗುತ್ತಾರೆ. ಬೆಣ್ಣೆ ಕೈಲಿಟ್ಟುಕೊಂಡು ತುಪ್ಪಕ್ಕೆ ಊರೆಲ್ಲಾ ಸೋಂಬೇರಿತನದಿಂದ ಅಲೆಯುತ್ತಾರೆ.

ಇನ್ನು ಸುಮತೀಂದ್ರ ನಾಡಿಗರಂತಹ ಸಾಹಿತಿಗಳು ವ್ಯಕ್ತಿಪೂಜೆಯಂತಹ ಅಪ್ಪಟ ಅಕ್ಷರ ವ್ಯಭಿಚಾರಕ್ಕೆ ಇಳಿಯುತ್ತಾರೆ. ಇವರು ಮತ್ತು ಇವರಂತಹವರು ಎಷ್ಟು ಜನ ತಮ್ಮ ಊರಿನಲ್ಲಿ, ವಾರ್ಡಿನಲ್ಲಿ ನಡೆಯುವ ಚುನಾವಣೆಗಳಿಗೆ ನಿಲ್ಲುತ್ತಾರೆ? ಓಟು ಚಲಾಯಿಸುತ್ತಾರೆ? ತಮ್ಮ ಮತ್ತು ತಮ್ಮ ಸಮಾಜಬಾಂಧವರ ಜೀವನ ಸಹನೀಯಗೊಳಿಸಲು ಶ್ರಮಿಸುತ್ತಾರೆ? ಕಂಬಾಲಪಲ್ಲಿಯಲ್ಲಿ ದಲಿತರನ್ನು ಸುಟ್ಟಾಗ, ಕಾಶ್ಮೀರ ಕೊಳ್ಳದಲ್ಲಿ ಹಿಂದೂ-ಸಿಖ್ಖರ ಹತ್ಯೆಯಾದಾಗ, ಗುಜರಾತಿನಲ್ಲಿ ಮುಸ್ಲೀಮರನ್ನು ಕೊಂದಾಗ, ಹೋಗಲಿ ತೀರಾ ಇತ್ತೀಚೆಗೆ ಇನ್ನೂರು ಮೈಲಿ ದೂರದ ಚೆನ್ನೈನಲ್ಲಿ ಜಯಲಲಿತ, ನಿಮಗೆ ಮಟ್ಟೆಣ್ಣನವರ್‌ರವರಂತಹವರ ಸುದ್ಧಿ ನೀಡುವ, ನಿಮ್ಮ ಕವನ ಪ್ರಕಟಿಸುವ ಮಾಹಿತಿ-ಪತ್ರಿಕಾಂಗದ ಕತ್ತು ಹಿಸುಕುತ್ತಿದ್ದಾಗ ನಿಮ್ಮ ಕವನ ನಮಗೆ ಕಾಣಿಸಲಿಲ್ಲ ಸ್ವಾಮಿ. ನಿಮ್ಮ ಮೂರರಲ್ಲಿ ಒಂದು ವಯಸ್ಸಿನ ಗಿರೀಶ್ ಮಟ್ಟೆಣ್ಣನವರ್ ಎಂಬ ವಯಾಗ್ರಕ್ಕೇ ಕಾಯುತ್ತಿದ್ದಿರೇನು? ಹಿಂಸೆಯಿಂದ ಹುಟ್ಟುವ ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ಸಾಹಿತಿಗಳಿಗೆ ಬೆಲೆ ಇಲ್ಲ ಸ್ವಾಮಿ. ತಮ್ಮ ಅಧಿಕಾರ ಉಳಿಸಿಕೊಳ್ಳಲು ಸಹಾಯ ಮಾಡುವ ಲಯಕಾರಿ, ಭಯೋತ್ಪಾದಕ, ಜೀವನಾಶಿ ಅಸ್ತ್ರ ಶೊಧಕ ತಂತ್ರಜ್ಞರಿಗಷ್ಟೇ ಆಗ ಮಣೆ.

ರಾಜಕಾರಣ ಒಂದು ಕಲೆಯೂ ಅಲ್ಲ, ಹೊಲಸೂ ಅಲ್ಲ. ಅದು ಅಂದಿನ ಸಮಾಜದ ಪ್ರತಿಬಿಂಬ ಅಷ್ಟೆ. ಇಲ್ಲಿ ಮುಖ್ಯವಾಗಿ ಬೇಕಾದದ್ದು ಭಂಡತನ. ಕಾರಣ? ಇಲ್ಲಿ ಸೋಲು ಎನ್ನುವುದು ಆಗಾಗ ನೆಕ್ಕುತ್ತ ಹೆಗಲೇರುತ್ತಿರುತ್ತದೆ. ಹತಾಶೆ ಆವರಿಸುತ್ತಿರುತ್ತದೆ. ತಪ್ಪು ಮಾಡಿದರೆ ಅವಮಾನ ಕಣ್ಮುಂದೆಯೂ, ದ್ರೋಹ ಬೆನ್ನ ಹಿಂದೆಯೂ ಇರುತ್ತದೆ. ದುಡಿಮೆಯ, ಜನಸೇವೆಯ ಪ್ರತಿಫಲ ಆಗಾಗ ಮರೀಚಿಕೆಯಾಗಿರುತ್ತದೆ. ಇದು ಯಾರ ವೈಯುಕ್ತಿಕ ಜೀವನದಲ್ಲಿ ಇಲ್ಲ ? ಇವನ್ನು ಸಾರ್ವಜನಿಕವಾಗಿ ಎದುರಿಸಬಲ್ಲವರು ರಾಜಕಾರಣಿಗಳಾಗುತ್ತಾರೆ. ಹೇಡಿಗಳು ಸಮಾಜದ ಸ್ಥಿತಿಗತಿಗಳ ಬಗೆಗೆ ಗೊಣಗುತ್ತಲೇ ಇರುತ್ತಾರೆ; ತನ್ನ ಬಣ್ಣಿಸುತ್ತಾ, ಇದಿರ ಹಳಿಯುತ್ತಾ, ಅನ್ಯರಿಗೆ ಅಸಹ್ಯ ಪಡುತ್ತಾ.

ಇವೆಲ್ಲವುಗಳಿಂದ ನಾಡನ್ನು ರಕ್ಷಿಸುತ್ತ, ದೇಶಭಕ್ತರು ನಾಡಿನೊಳಗಡೆ ಬಾಂಬ್ ಹಿಡಿಯುವ ಸ್ಥಿತಿ ಸೃಷ್ಟಿಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಬಾಂಬ್ ಹಿಡಿದ ದೇಶಭಕ್ತರು ಗಡಿಯಲ್ಲಿ ನಾಡಿಗೆ ನುಗ್ಗಿ ದಾಳಿ ಮಾಡಲು ಯತ್ನಿಸುವ ಶತ್ರುವಿನ ಎದೆಯಲ್ಲಿ ನಾಟಲು ಸದಾ ಸಿದ್ಧರಾಗಿರಬೇಕು. ಇಂತಹ ವಾತಾವರಣ ನಿರ್ಮಿಸಲು ಸರ್ಕಾರ ಮತ್ತು ಸಮಾಜ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಅವಶ್ಯಕವಾಗಿ ಆಗಬೇಕಾದದ್ದು, ಮುಂದಿನ ಜನಾಂಗದ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಯುವಕರಿಗೆ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿಸಲು ಶ್ರೇಷ್ಠ ಶಿಕ್ಷಣ ಮತ್ತು ಅವುಗಳನ್ನು ರಕ್ಷಿಸಿಕೊಳ್ಳಲು, ಅಭಿವೃದ್ಧಿಗೆ ಅವಶ್ಯಕವಾಗಿ ಬೇಕಾದ ಶಾಂತಿ, ಸುವ್ಯವಸ್ಥೆಯ ನ್ಯಾಯಪಾಲನೆ. ಅದಕ್ಕಾಗಿ ಉಪಾಧ್ಯಾಯರುಗಳ ಮತ್ತು ಪೋಲೀಸರ ಪಾತ್ರ ತುಂಬಾ ಹಿರಿದಾದುದು. ಶ್ರೇಷ್ಠ, ಬುದ್ಧಿವಂತ ವಿಶಾಲ ಮನಸ್ಸಿನ ಪದವೀಧರ, ಸ್ನಾತಕೋತ್ತರ ಪದವೀಧರರನ್ನು ಪ್ರಾಥಮಿಕ ಶಾಲೆಗಳ ಉಪಾಧ್ಯಾಯರನ್ನಾಗಿ, ಮುಖ್ಯೋಪಾಧ್ಯಾಯರನ್ನಾಗಿ ಅವಶ್ಯಕ ತರಬೇತಿ ನೀಡಿ ನೇಮಿಸಬೇಕು. ಯಾವುದೇ ಶಾಲೆಯಲ್ಲಿ, ಸ್ಥಳದಲ್ಲಿ ಉಪಾಧ್ಯಾಯರುಗಳ ಕೊರತೆಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು. ನೈಜ ದೇಶಪ್ರೇಮಿ, ಆದರ್ಶವಂತ ಮತ್ತು ಕಿಲಾಡಿತನದಲ್ಲಿ ಕಳ್ಳ-ಖದೀಮರಿಗಿಂತ ಒಂದು ಹೆಜ್ಜೆ ಮುಂದೆ ಇರಬಲ್ಲ ಯುವಕರನ್ನು, ಬುದ್ಧಿವಂತರನ್ನು ಪೋಲೀಸರನ್ನಾಗಿ ನೇಮಿಸಬೇಕು. ಸಮಕಾಲೀನ ಆರ್ಥಿಕ ವ್ಯವಸ್ಥೆಯಲ್ಲಿ ಕನಿಷ್ಠವೆಂದರೂ ಐದಂಕಿಯ ಸಂಬಳ ನೀಡಿ, ಈ ಎರಡೂ ಉದ್ಯೋಗಗಳನ್ನು ಪ್ರತಿಭಾವಂತರ ಪ್ರಥಮ ಆದ್ಯತೆಯ ಉದ್ಯೋಗಗಳಾಗುವಂತೆ, ಇವರಿಗೆ ಯಾವುದೇ ರೀತಿಯ ಕೀಳರಿಮೆ ಮೂಡದಂತೆ ಮತ್ತು ಯಾವುದೇ ರೀತಿಯ ಸಣ್ಣಪುಟ್ಟ ಪ್ರಲೋಭನೆಗಳಿಗೆ ಇವರು ಬಗ್ಗದಂತಿರುವ ಸ್ಥಿತಿ ಸೃಷ್ಟಿಸಬೇಕು. ಇವೆರಡೂ ವಿಭಾಗದಲ್ಲಿನ ನೇಮಕಾತಿಯನ್ನು ಆದಷ್ಟೂ ಪಾರದರ್ಶಕಗೊಳಿಸಿ ವ್ಯವಸ್ಥೆ ಭ್ರಷ್ಟವಾಗದ ರೀತಿಯಲ್ಲಿ ಕಾಯಬೇಕು. ಎಸ್.ಐ ಮಟ್ಟದ ಅರ್ಹತೆ ಮತ್ತು ತರಬೇತಿಯನ್ನು ಎಲ್ಲಾ ಕೆಳಹಂತದ ಕಾನ್ಸ್‌ಟೇಬಲ್‌ಗಳಿಗೆ ವಿಸ್ತರಿಸಬೇಕು. ಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಓಬಿರಾಯನ ಕಾಲದಲ್ಲಿರದೆ ಖದೀಮರಿಗಿಂತ, ಸಮಾಜ ಘಾತುಕರಿಗಿಂತ ಮೇಲಿರುವಂತಾಗಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಆಸ್ತಿ ಅಂತಸ್ತು ಗಮನಿಸದೆ ಎಲ್ಲಾ ನಾಗರೀಕರೊಡನೆ ಸೌಜನ್ಯದಿಂದ, ಸಮಾನ ಗೌರವದಿಂದ ಕಾಣುವುದರ ಅವಶ್ಯಕತೆಯನ್ನು ತಿಳಿಸಿ ಕಲಿಸಬೇಕು.

ಈ ಪ್ರಾಥಮಿಕ ಕ್ರಮಗಳಿಂದಾಗಿ ಶಿಕ್ಷಣ, ಜ್ಞಾನ, ತಂತ್ರಜ್ಞಾನ, ಶಾಂತಿಪಾಲನೆ ಹೆಚ್ಚಿ ಎಲ್ಲಾ ತರಹದ ಉತ್ಪಾದನೆ ತಾನೇ ತಾನಾಗಿ ಬೆಳೆಯುತ್ತದೆ. ತದ ಕಾರಣದಿಂದಾಗುವ ಅಭಿವೃದ್ಧಿ ಇವೆಲ್ಲವುಗಳ ವೆಚ್ಚವನ್ನು ಭರಿಸುವ ಶಕ್ತಿ ನೀಡುತ್ತದೆ. ಪ್ರಜಾಪ್ರಭುತ್ವದ ಬೇರಿಗೆ ಗೊಬ್ಬರ, ನೀರು ತಾಕುತ್ತದೆ.