Aug 29, 2007

"ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ...

(ವಿಕ್ರಾಂತ ಕರ್ನಾಟಕ - ಸೆಪ್ಟೆಂಬರ್ 7, 2007 ರ ಸಂಚಿಕೆಯಲ್ಲಿನ ಬರಹ)

ಸುಮಾರು ಒಂದೂವರೆ ವರ್ಷದ ಹಿಂದೆ ಸರಿಯಾಗಿ 111 ಪುಟಗಳ ಆ ಪುಸ್ತಕವನ್ನು ಕೈಯಲ್ಲಿ ಹಿಡಿದವನು ಬಹುಶಃ ನಾಲ್ಕೈದು ಗಂಟೆಗಳಲ್ಲಿ ಓದಿ ಮುಗಿಸಿರಬೇಕು. ಆ ಪುಟ್ಟ ಕಾದಂಬರಿಯ ಹೆಸರು "ವಲಸೆ ಹಕ್ಕಿಯ ಹಾಡು." 1995 ರಲ್ಲಿ ಮುದ್ರಣಗೊಂಡದ್ದದು. "ಸ್ವಾತಂತ್ರ್ಯ ಹೋರಾಟಗಾರರಲ್ಲಿಯೆ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ್ದ, ಎಂದೂ ಉತ್ಪ್ರೇಕ್ಷೆ ಮಾಡದೆ ಚಳವಳಿಯನ್ನು ನಿರ್ಲಿಪ್ತವಾಗಿ ನಿರೂಪಿಸುವ, ಹುಟ್ಟು ಹೋರಾಟಗಾರನಲ್ಲದ, ಚಳವಳಿ ಕಾಲದಲ್ಲಿ ದೇಶದ ಉದ್ದಗಲಕ್ಕೆ ಓಡಾಡಿದ ಪ್ರಯಾಣಿಕ"ನನ್ನು ಕಥಾನಾಯಕನಾಗಿ ಹೊಂದಿರುವ ಕಥೆ ಅದು. ಸ್ವಾತಂತ್ರ್ಯೋತ್ತರ ಭಾರತದ ಗ್ರಾಮೀಣ ರಾಜಕೀಯವನ್ನು, ಗ್ರಾಮೀಣ ಬದುಕನ್ನು, ಆ ಪುಟ್ಟ ಕಾದಂಬರಿಯಲ್ಲಿ ವಿಶ್ಲೇಷಿಸಿರುವ, ನಿರೂಪಿಸಿರುವ ರೀತಿ ಅದ್ಭುತವಾದದ್ದು. ಅದನ್ನು ಓದಿ ಮುಗಿಸಿದ ಮೇಲೆ ಆ ಲೇಖಕನೊಡನೆ ಆ ಕೂಡಲೆ ಮಾತನಾಡಬೇಕು ಎಂದು ಬಲವಾಗಿ ಅನ್ನಿಸಿಬಿಟ್ಟಿತು. ಅದಕ್ಕೆ ಮುಖ್ಯ ಕಾರಣ, "ಅರೆ, ನಾನು 'ನ್ಯಾಗಟಿ ಸಿಟಿ ಚಂದರ್' ಎಂದುಕೊಂಡಿದ್ದ ಈ ಲೇಖಕ ನಿಜವಾಗಲೂ ನಾಗತಿಹಳ್ಳಿಯಾತ," ಎನ್ನಿಸಿದ್ದು. ಹೌದು, ಆ "ವಲಸೆ ಹಕ್ಕಿಯ ಹಾಡು"ವಿನ ಕರ್ತೃ, ನಾಗತಿಹಳ್ಳಿ ಚಂದ್ರಶೇಖರ್.

ಆದರೆ, ಅಂದು ನಾಗತಿಹಳ್ಳಿಯವರ ಜೊತೆ ಮಾತನಾಡಲಾಗಲಿಲ್ಲ. ಬಹುಶಃ ಅದಾದ ಒಂದೆರಡು ತಿಂಗಳಿಗೆ ಅವರ "ಅಮೃತಧಾರೆ" ಸಿನಿಮಾ ಬಿಡುಗಡೆಯಾಯಿತು. ಅದು ಸಿಲಿಕಾನ್ ಕಣಿವೆಯ ಸ್ಯಾನ್ ಹೋಸೆಯಲ್ಲಿ ಬಿಡುಗಡೆಯಾಗುವಷ್ಟರಲ್ಲಿ ಕನ್ನಡದ ದಿನಪತ್ರಿಕೆಗಳಲ್ಲಿ ಅದರ ವಿಮರ್ಶೆಗಳು ಬಂದುಬಿಟ್ಟಿದ್ದವು. ಬಹುತೇಕ ವಿಮರ್ಶೆಗಳು ಅದನ್ನು ಅತ್ಯದ್ಭುತ ಚಿತ್ರ, ಮಹೋನ್ನತ ಚಿತ್ರ ಎಂದೆಲ್ಲ ಬಣ್ಣಿಸಿದ್ದ ನೆನಪು. ಅಷ್ಟೊತ್ತಿಗೆ ನನಗೆ ಕನ್ನಡ ಚಿತ್ರವಿಮರ್ಶೆಗಳ "ತಲೆಹಿಡುಕತನ"ದ ಪರಿಚಯ ಆಗಿತ್ತು. ದಟ್ಟದರಿದ್ರ ಸಿನಿಮಾದ ಪುಟಗೋಸಿ ಡೈಲಾಗ್‌ಗಳಿಗೆಲ್ಲ ಆಧ್ಯಾತ್ಮ, ನೈತಿಕತೆ, ಆದರ್ಶ ಮುಂತಾದ ಸಾರ್ವಕಾಲಿಕ ಗುಣಗಳನ್ನು ಆರೋಪಿಸಿ, ರಂಗುರಂಗಾಗಿ ಬರೆದು "ಪೇಯ್ಡ್" ಜಾಹಿರಾತನ್ನು ಚಿತ್ರವಿಮರ್ಶೆಯ ಹೆಸರಿನಲ್ಲಿ ಪ್ರಕಟಿಸುವುದನ್ನು ನೋಡಿದ್ದ ನನಗೆ "ಅಮೃತಧಾರೆ"ಯ ಬಗೆಗೂ ಸ್ವಲ್ಪ ಸಂದೇಹವಿತ್ತು. ಆದರೆ, ಯಾವಾಗ ನಾಗತಿಹಳ್ಳಿಯವರು, "ಈ ಚಿತ್ರಕ್ಕಾಗಿ ನನ್ನ ಪ್ರತಿಭೆಯನ್ನೆಲ್ಲ ಬಸಿದಿದ್ದೇನೆ," ಎನ್ನುವಂತಹ ಮಾತನ್ನು ಆಡಿದರೊ, ಈ ಚಿತ್ರವನ್ನು ನೋಡಲು ನಿಜಕ್ಕೂ ಎದುರು ನೋಡುತ್ತಿದ್ದೆ.

ಅದೊಂದು ನಿಜಕ್ಕೂ ಮೀಡಿಯೋಕರ್ ಚಿತ್ರ. ಅಂತಃಸ್ಸತ್ವವಿಲ್ಲದ, ಅವಾಸ್ತವ ಡೈಲಾಗ್‌ಗಳ, ಪರಕೀಯ, ನಾಟಕೀಯ ಚಿತ್ರ. ಅಮಿತಾಬ್ ಬಚ್ಚನ್, ರಮ್ಯ, ಧ್ಯಾನ್‍ಗಳಿರುವ ದೃಶ್ಯವಂತೂ ಅಪ್ಪಟ Con Job. ಅಮಿತಾಬ್ ಕೈಯ್ಯಲ್ಲಿ ಒಂದು ಡೈಲಾಗ್ ಹೊಡೆಸಿ, ಅವರಿಲ್ಲದ ಸಮಯದಲ್ಲಿ ಮೇಲೆ ನೋಡಿಕೊಂಡು ರಮ್ಯ ಮಾತನಾಡುವುದನ್ನು ಅಮಿತಾಬ್‌ರೊಡನೆ ರಮ್ಯ ಸಂಭಾಷಿಸುತ್ತಿರುವ ದೃಶ್ಯ ಎನ್ನುವಂತೆ ಚಿತ್ರೀಕರಿಸಿ, ಅದನ್ನೆಲ್ಲ ಅಮೆಚೂರಿಷ್ ಆಗಿ ತೋರಿಸಿ, "ಅಮಿತಾಬ್ ನಟಿಸಿದ ಕನ್ನಡದ ಅತ್ಯಮೋಘ ಚಿತ್ರ, ನನ್ನ ಪ್ರತಿಭೆಯನ್ನೆಲ್ಲ ಬಳಸಿ ತೆಗೆದ ಚಿತ್ರ," ಎಂದೆಲ್ಲ ಹೇಳಿಕೊಂಡ ಆ ಚಿತ್ರವನ್ನು ನೋಡಿ ನನಗಂತೂ, "ಇಲ್ಲ, ಕಳೆದ ಹತ್ತುಹದಿನೈದು ವರ್ಷದಲ್ಲಿ ಇವರು ನಿಜಕ್ಕೂ ಕಳೆದು ಹೋಗಿದ್ದಾರೆ, ಇವರು ನಾಗತಿಹಳ್ಳಿ ಚಂದ್ರಶೇಖರ ಅಲ್ಲ, ಅವರೀಗ ನ್ಯಾಗಟಿ ಸಿಟಿ ಚಂದರ್ ಎಂಬ ಪರಕೀಯ," ಎನ್ನಿಸಿಬಿಟ್ಟಿತು.

ಇದಾದ ಮೂರ್ನಾಲ್ಕು ತಿಂಗಳಿಗೆಲ್ಲ ಸ್ವತಃ ನಾಗತಿಹಳ್ಳಿಯವರೆ ನನ್ನ ಅನಿಸಿಕೆಗೆ ಅಂತಿಮ ಮೊಳೆ ಹೊಡೆದುಬಿಟ್ಟರು. ಹೇಗೆಂದರೆ, "ನನ್ನ ಜೀವನದ ಆಶೆಗಳಲ್ಲಿ ಒಂದಾದ ಮರ್ಸಿಡಿಸ್-ಬೆನ್ಜ್ ಅನ್ನು ಕೊಂಡುಕೊಂಡಿದ್ದೇನೆ. ಎಷ್ಟೆಷ್ಟೊ ಕಷ್ಟ ಪಟ್ಟೆ, ಈಗಲೂ ಕಾಲ ಹಾಗೆ ಇದೆಯ?" ಎನ್ನುವಂತಹ ತಮ್ಮ ಬಡತನದ, ಕಷ್ಟಕಾಲದ ದಿನಗಳನ್ನು ವೈಭವೀಕರಿಸಿಕೊಂಡ, ಮತ್ತು ಈಗಿನ ಶ್ರೀಮಂತಿಕೆಯನ್ನು ತೋರಿಸಿಕೊಳ್ಳುವ ಕೀಳರಿಮೆ ಎನ್ನಬಹುದಾದ ಮಾತುಗಳನ್ನು ಸಾರ್ವಜನಿಕವಾಗಿ ಪತ್ರಿಕೆಗಳಲ್ಲಿ ಹೇಳಿಕೊಳ್ಳುವ ಮೂಲಕ.

ಬೆಂಗಳೂರಿನಲ್ಲಿ ಬಿಡುಗಡೆಯಾದ ದಿನವೆ ಇಲ್ಲಿ ಅಮೇರಿಕದ ಸಿಲಿಕಾನ್ ಕಣಿವೆಯಲ್ಲಿಯೂ ನಾಗತಿಹಳ್ಳಿಯವರ ಇತ್ತೀಚಿನ ಚಿತ್ರ "ಮಾತಾಡ್ ಮಾತಾಡು ಮಲ್ಲಿಗೆ" ಬಿಡುಗಡೆಯಾಗಿದೆ. ಇಲ್ಲಿ ಯಾವುದೆ ಕನ್ನಡ ಚಿತ್ರ ಬಂದರೂ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಬೇಕೆಂಬ ಒಂದೇ ಕಾರಣಕ್ಕೆ ಎಲ್ಲಾ ಸಿನಿಮಾಗಳನ್ನು ನೋಡಲು ಪ್ರಯತ್ನಿಸುವ ನಾನು ಇದನ್ನು ತಪ್ಪಿಸಿಕೊಳ್ಳುವ ಹಾಗೆಯೆ ಇರಲಿಲ್ಲ. ಸಿನಿಮಾಗೆ ಹೋಗುವ ಮುನ್ನ ಭಾನುವಾರದ ಕನ್ನಡ ದಿನಪತ್ರಿಕೆಗಳ ವಿಮರ್ಶೆಯನ್ನು ಓದಿದ್ದೆ. ಪ್ರಜಾವಾಣಿಯಲ್ಲಿ ಸ್ನೇಹಿತ ಚ.ಹ. ರಘುನಾಥ ಚಿತ್ರವಿಮರ್ಶೆ ಮಾಡಿದ್ದರು. ಬೇರೆ ಕೆಲವು ಪತ್ರಿಕೆಗಳ ಚಿತ್ರವಿಮರ್ಶಕರ ರೀತಿಯ ಓದುಗರಿಗೆ ತಲೆಹಿಡಿಯುವ ಬರಹವಲ್ಲ ಇವರದು. "ಜಾಗತೀಕರಣವನ್ನು ವ್ಯಾಖ್ಯಾನಿಸಲು ನಾಗತಿಹಳ್ಳಿ ಚಿಟ್ಟೆಯ ರೂಪಕವನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಆದರೆ ಚಿತ್ರಕ್ಕೆ ಸಂಬಂಧಿಸಿದಂತೆ ಅವರ ಸೃಜನಶೀಲತೆ ಈ ರೂಪಕಕ್ಕಷ್ಟೆ ಮೀಸಲಾದಂತಿದೆ. ಉಳಿದಂತೆ, ಮಲ್ಲಿಗೆ ಅರಳುವ ಮೌನದಲ್ಲಿ ನೋಡುಗನ ಕಾಡಬೇಕಿದ್ದ ವಾಸ್ತವ ಜಗತ್ತಿನ ಆತಂಕಗಳು ಭಾವುಕತೆಯ ಆರ್ಭಟದಲ್ಲಿ ಕೊನೆಗೊಳ್ಳುತ್ತವೆ." ಎಂದಿದ್ದರು ರಘುನಾಥ. ಒಟ್ಟಿನಲ್ಲಿ, ಉತ್ತಮ ಅಭಿನಯದ, ಚಂದ್ರೇಗೌಡರ ಕಟ್ಟೆಪುರಾಣದ ಪಾತ್ರಗಳಿರುವ, ಮಲ್ಲಿಗೆ ಅರಳುವಷ್ಟು ಸಹಜವಾಗಿಲ್ಲದ ಚಿತ್ರ ಎಂದಿದ್ದರೂ, ಎಲ್ಲಿಯೂ ಕೆಟ್ಟ ಚಿತ್ರ ಎಂದಾಗಲಿ, ಮಹೋನ್ನತ ದೃಶ್ಯಕಾವ್ಯ ಎಂಬಂತಹ ಅತ್ಯುಗ್ರ ಗುಣವಿಶೇಷಣಗಳಾಗಲಿ ಇರಲಿಲ್ಲ.

ಊರೆಲ್ಲ ನಾಗಮಂಗಲದ ಭಾಷೆ ಮಾತನಾಡುತ್ತ ದಕ್ಷಿಣ ಕರ್ನಾಟಕದ ಕಡೆಯವರಂತೆ ಪಂಚೆ ಉಟ್ಟ ರೈತರಿದ್ದರೆ ನಾಯಕ ಮಾತ್ರ ಕಚ್ಚೆ ಉಟ್ಟ, ದಿನವೂ ಬಣ್ಣಬಣ್ಣದ ರುಮಾಲು ತೊಟ್ಟ, ಕೆಂಚುಗಡ್ಡದ, ಕೆಸರೆ ಅಂಟಿರದ ಕೋಮಲ ಕೈಗಳ, ಫ್ಯಾsಬ್‌ಇಂಡಿಯಾದ ಜುಬ್ಬಾಗಳ ರೂಪದರ್ಶಿ!! ಗ್ರಾಮ್ಯ ಕನ್ನಡ ಮಾತನಾಡುವ, ಅಷ್ಟೇನೂ ಹೊರಗಿನ ಪ್ರಪಂಚದ ಪರಿಚಯವಿಲ್ಲದ ಆತನ ಹೆಂಡತಿ ಗಂಡನಿಗೆ ಧೈರ್ಯ ತುಂಬಲು ಮೂರ್ನಾಲ್ಕು ಸಲ ಪಾಶ್ಚಿಮಾತ್ಯ ಜೆಷ್ಚರ್ ಆದ ಥಂಬ್ಸ್ ಅಪ್ ಮಾಡುತ್ತಾಳೆ!!! ಗ್ರಾಫಿಕ್ ಮಳೆ ಸುರಿಯುತ್ತದೆ; ಯಾರೂ ನೆನೆಯುವುದಿಲ್ಲ. ನಿರ್ಜೀವ ಗ್ರಾಫಿಕ್ಸ್ ಚಿಟ್ಟೆಗಳು ಹಾರಾಡುತ್ತವೆ. ಇನ್ನೂ ಹಲವು ಓರೆಕೋರೆಗಳು...

ಆದರೆ ಇವು ಯಾವುವೂ ನಮ್ಮ ನ್ಯಾಗಟಿ ಸಿಟಿ "ಮಾತಾಡ್ ಮಾತಾಡು ಮಲ್ಲಿಗೆ"ಯಿಂದ ಮತ್ತೆ ನಾಗತಿಹಳ್ಳಿಯತ್ತ ಮುಖ ಮಾಡಿದ್ದಾರೆ ಎನ್ನುವುದನ್ನು ಅಲ್ಲಗಳೆಯುವುದಿಲ್ಲ. ಚಂದ್ರೇಗೌಡರ ಕಟ್ಟೆಪುರಾಣದ ಪಾತ್ರಗಳನ್ನು ಚಿತ್ರದಲ್ಲಿ ಬಳಸಿರುವ ದೃಷ್ಟಿಯಾಗಲಿ, ತೆಗೆದುಕೊಂಡಿರುವ ರೈತರ ಜಮೀನು ಸ್ವಾಧೀನದ ವಿಷಯವಾಗಲಿ, ಅಲ್ಲಲ್ಲಿ ಬರುವ ಸಮಕಾಲೀನ ವಿಷಯಗಳ ಬಗೆಗಿನ ಸಮಾಜಚಿಂತಕನ ಕಾಮೆಂಟ್‌ಗಳಾಗಲಿ, ರೂಪಕಗಳನ್ನು ಬಳಸುವ ರೀತಿಯಾಗಲಿ, ಸಮಕಾಲೀನ ಕನ್ನಡ ಚಿತ್ರಜಗತ್ತಿನಲ್ಲಿ ಕೇವಲ ಸೂಕ್ಷ್ಮ ಬರಹಗಾರ ನಾಗತಿಹಳ್ಳಿ ಮಾತ್ರ ಮಾಡಬಲ್ಲರು. ಅಮೇರಿಕ-ಅಮೇರಿಕದ ತರುವಾಯ ಮಾತೆತ್ತಿದರೆ ಶ್ರೀಮಂತ ಎನ್ನಾರೈ ಸ್ನೇಹಿತರ ಬಗ್ಗೆ ಮಾತನಾಡುವ, ಮರ್ಸಿಡಿಸ್ ಕೊಂಡದ್ದನ್ನು ಊರಿಗೆಲ್ಲ ಹೇಳಿಕೊಂಡು ಬರುವ, ಅವಾಸ್ತವಿಕ ಚಿತ್ರಗಳನ್ನು ಕೊಡುತ್ತ ಬಂದ, ಕೀಳರಿಮೆಯ ನಿರ್ದೇಶಕರ ತರಹವೆ ಮಾತೆತ್ತಿದರೆ ಹಾಡುಗಳಲ್ಲಿ ಫಾರಿನ್‍ಗೆ ಜಂಪ್ ಮಾಡುತ್ತಿದ್ದ ನಾಗತಿಹಳ್ಳಿಯವರು ಈ ಚಿತ್ರದಲ್ಲಿ ಮತ್ತೆ ಮಣ್ಣಿಗೆ ಮರಳುವ ಪ್ರಯತ್ನ ಮಾಡಿದ್ದಾರೆ.

ಮಣ್ಣಿನ ಮಗನೇ ಆದ ನಾಗತಿಹಳ್ಳಿಯವರು ವರ್ತಮಾನದಲ್ಲಿ ಸಲ್ಲಬೇಕು ಎನ್ನುವ ಕೀರ್ತಿ-ಐಶ್ವರ್ಯಗಳ ಮಹಾನ್ ಆಮಿಷವನ್ನು ಈಗಲಾದರೂ ಮೀರಬೇಕಿದೆ. ಎಂದಿಗೂ ಸಲ್ಲುವ ಪ್ರತಿಭೆ ಇರುವ ನಾಗತಿಹಳ್ಳಿಯವರು ಒಮ್ಮೆ ತಾವೇ ಬರೆದ (ಇತ್ತೀಚಿನ ಪ್ರೇಮಪತ್ರಗಳಲ್ಲ!) ಪುಟ್ಟಕ್ಕನ ಮೆಡಿಕಲ್ ಕಾಲೇಜು, ವಲಸೆ ಹಕ್ಕಿಯ ಹಾಡುಗಳನ್ನು ಓದಿ, ತಮ್ಮನ್ನೆ ತಾವು ಪುನರ್‌ಶೋಧಿಸಿಕೊಳ್ಳಬೇಕಿದೆ. ಸಾಮಾಜಿಕ ಕಾಳಜಿಯುಳ್ಳ ನಾಗತಿಹಳ್ಳಿಯವರು ಸಹವಾಸ ದೋಷದಿಂದ ಕೆಡದಿದ್ದರೆ, ತಮ್ಮ ಶ್ರೀಮಂತಿಕೆಯ ಈ ಕಾಲದಲ್ಲಿ ತಾವು ಮಾಡುವ ಪ್ರತಿ ಸಿನಿಮಾವೂ ಕೋಟ್ಯಾಂತರ ರೂಗಳ ಬಜೆಟ್‌ದೇ ಆಗಿರಬೇಕು ಮತ್ತು ಅದು ಕಮರ್ಷಿಯಲ್ ಆಗಿ ಗೆಲ್ಲಲೇ ಬೇಕು ಎನ್ನುವ ಹಠ ಇಟ್ಟುಕೊಳ್ಳದಿದ್ದರೆ, ಅವರಿಗೇ ಆದ ಒಂದು ಸಾಂಸ್ಕೃತಿಕ ನಾಯಕತ್ವ ಕರ್ನಾಟಕದಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಅಂಬರೀಷೋತ್ತರ ಮಂಡ್ಯ ರಾಜಕೀಯದಲ್ಲಿ ರಾಜಕೀಯ ನಾಯಕತ್ವವೂ ಸಾಧ್ಯವಾಗಬಹುದು. ಆದರೆ ಇದಕ್ಕೆಲ್ಲ ನಾಗತಿಹಳ್ಳಿಯತ್ತ ಮುಖ ಮಾಡಿರುವ ಅವರು ಊರನ್ನು ಮುಟ್ಟಬೇಕಿದೆ. ಇಲ್ಲದಿದ್ದರೆ, ಐದತ್ತು ವರ್ಷಗಳ ನಂತರ ತಮ್ಮ ಶ್ರೀಮಂತ ಬಂಗಲೆಯಲ್ಲಿ, ರೋಲ್ಸ್‌ರಾಯ್ಸ್‍ನಲ್ಲಿ ಜೀವನ ಕಳೆಯುವ ವೇಸ್ಟೆಡ್ ಪ್ರತಿಭೆ ಅವರದಾಗುವ ಅಪಾಯ ಇದೆ.

ಇದೇ ಸಮಯದಲ್ಲಿ, ಯಾಕೋ ನಾಗತಿಹಳ್ಳಿಯವರ ಇತ್ತೀಚಿನ ಮಹಾಕಾವ್ಯವನ್ನು ನೋಡಿ ಕಣ್ಣಲ್ಲಿ ನೀರು ಸುರಿಸಿದವರಾಗಲಿ, ಭಾವೋದ್ವೇಗಕ್ಕೆ ಒಳಗಾಗಿ ಅವರನ್ನು ತಬ್ಬಿಕೊಂಡು, ಅದನ್ನೆಲ್ಲ ಬರೆದವರಾಗಲಿ ಕಾಣಲಿಲ್ಲ!!! ಮುಂದಿನ ಒಂದೆರಡು ವಾರಗಳಲ್ಲಿ ಆಗಬಹುದು; ಆಗದೆಯೂ ಇರಬಹುದು. ಆದರೆ, ಒಳ್ಳೆಯ ಚಿತ್ರ ಮತ್ತು ಅದರ ಕಮರ್ಷಿಯಲ್ ಸಕ್ಸೆಸ್ ಈ ಎಲ್ಲಾ ತಂತ್ರ, ಗುಂಪುಗಾರಿಕೆ, ಸ್ವಜನಪಕ್ಷಪಾತಗಳನ್ನು ಮೀರಿದ್ದು. ನಾಗತಿಹಳ್ಳಿಯತ್ತ ಮುಖ ಮಾಡಿರುವ ಒಂದು ಕಾಲದ ಪರಿಸರವಾದಿ, ಶಿವರಾಮ ಕಾರಂತರ ಚುನಾವಣೆಯಲ್ಲಿ ಮಹಾನ್ ಆಶಾವಾದದಿಂದ ಓಡಾಡಿದ ಯುವಕ ಚಂದ್ರಶೇಖರರಿಗೆ ಇವನ್ನು ಯಾರೇನೂ ಹೇಳಬೇಕಾಗಿಲ್ಲ.

ಅನ್‍ಲೆಸ್, ಅವರೇ ಪ್ರಜ್ಞಾಪೂರ್ವಕವಾಗಿ ಮರೆತಿದ್ದರೆ ಮತ್ತು ಅದನ್ನು ಅವರ ನೈಜ ಹಿತೈಷಿಗಳು ಒತ್ತಿ ಹೇಳದೇ ಹೋಗಿಬಿಟ್ಟಿದ್ದರೆ...

"ವಲಸೆ ಹಕ್ಕಿಯ ಹಾಡು"ವಿನ ಮುನ್ನುಡಿಯಲ್ಲಿ ನಾಗತಿಹಳ್ಳಿ ಹೀಗೆ ಬರೆಯುತ್ತಾರೆ: "ಈ ದೇಶದ ದುರಂತವೆಂದರೆ ವ್ಯಕ್ತಿಯ ಎಲ್ಲ ಶಕ್ತಿ ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳದೆ-ಅರ್ಥ ಮಾಡಿಕೊಳ್ಳುವುದಿರಲಿ ಅವನ ಕ್ರಿಯಾಶೀಲತೆಯ ಬೇರನ್ನೆ ಕಿತ್ತುಹಾಕಿ-ನಿಷ್ಕ್ರಿಯಗೊಳಿಸಿ ಅವನನ್ನು ಜಡಗೊಂಡ ನಿರುಪಯುಕ್ತ ಮನುಷ್ಯನನ್ನಾಗಿಸುವುದು. ಯಾವ ವ್ಯವಸ್ಥೆ ಮನುಷ್ಯನಿಗೆ ಅನಂತ ಸಾಧ್ಯತೆಗಳ ದ್ವಾರವನ್ನು ತೆರೆಯುವುದಿಲ್ಲವೋ ಅಲ್ಲಿ ವ್ಯಕ್ತಿ ಸಿನಿಕನೂ, ಸೋಮಾರಿಯೂ ಹೊಣೆಗೇಡಿಯೂ ಆಗುತ್ತಾನೆ." ಕನ್ನಡದ ಒಂದು ಮಣ್ಣಿನ ಪ್ರತಿಭೆ ವರ್ತಮಾನದ ಲೌಕಿಕದಲ್ಲಿ ಸಲ್ಲಬೇಕು ಎನ್ನುವ ಹಠದಲ್ಲಿ ತನ್ನನ್ನೆ ತಾನು ಅರ್ಥಮಾಡಿಕೊಳ್ಳದೆ, ಈ ಅನಂತ ಸಾಧ್ಯತೆಗಳ ಸಮಯದಲ್ಲಿ ತನ್ನ ಕ್ರಿಯಾಶಕ್ತಿಯನ್ನು ಗೌಣವಾಗಿ ನೋಡುತ್ತಿದೆ ಎನ್ನಿಸಿದ್ದರಿಂದ ಇಷ್ಟೆಲ್ಲ ಹೇಳಬೇಕಾಯಿತು.

Aug 22, 2007

"ನನ್ನ" ಜನ ಮಾತ್ರ ನನ್ನ ಮಾನ ಪ್ರಾಣ ಧನ ???

(ವಿಕ್ರಾಂತ ಕರ್ನಾಟಕ - ಆಗಸ್ಟ್ 31, 2007 ರ ಸಂಚಿಕೆಯಲ್ಲಿನ ಬರಹ)

ಚಿಂತಕ ಡಿ. ಆರ್. ನಾಗರಾಜ್ ಕನ್ನಡಪ್ರಭದ ತಮ್ಮ "ವಾಗ್ವಾದ" ಅಂಕಣದಲ್ಲಿ ಬಹುಶಃ ಒಂದೆರಡು ದಶಕದ ಹಿಂದೆ ಬರೆದದ್ದಿದು: "(ಕನ್ನಡ ಸಂಶೋಧನೆಯ) ಈಗಿನ ನಿಜವಾದ ಸಮಸ್ಯೆ ಎಂದರೆ, ಸಂಶೋಧನಾಕಾಂಕ್ಷಿಗಳನ್ನು ತರಬೇತುಗೊಳಿಸುವ ಜತೆಗೆ ಅವರ ಮಾರ್ಗದರ್ಶಕರಿಗೂ ತರಬೇತು ನೀಡಬೇಕಾದ ಅಗತ್ಯ. ... ಮಾರ್ಗದರ್ಶಕರ ಅರ್ಹತೆಗಳನ್ನು ನಿಷ್ಠುರವಾಗಿ ಮೌಲ್ಯಮಾಪನ ಮಾಡುವ ಸ್ಥಿತಿಯೇ ಇಲ್ಲ. ... ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಇರುವ ಅನೇಕಾನೇಕ ಅಂಗೀಕೃತ ಪಿ‌ಎಚ್.ಡಿ., ಗೈಡ್‌ಗಳು ತಮ್ಮ ಇಡೀ ಜೀವಮಾನದಲ್ಲಿ ಒಂದು ಲೇಖನವನ್ನು ಬರೆದಿಲ್ಲ. ಇನ್ನು ಪುಸ್ತಕಗಳ ಮಾತು ದೂರವೇ ಆಯಿತು. ಈ ಮಂದಿಯನ್ನು ಕೂಡಾ ನಾವು ಹಂಗಿಸಿ ಫಲವಿಲ್ಲ. ಆಕಾಂಕ್ಷಿಗಳ ಒತ್ತಡಕ್ಕೆ ಶರಣಾಗಿ ಅರ್ಜಿಗಳ ಮೇಲೆ ಅವರು ರುಜು ಹಾಕ ಬೇಕಾಗುತ್ತದೆ. ಪರಸ್ಪರ ಅಸಹಾಯಕತೆಯ ವಿಷವರ್ತುಲದಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು, ವಿಶ್ವವಿದ್ಯಾಲಯ ಎಲ್ಲವು ಬಿದ್ದು ನರಳುತ್ತಿವೆ." ('ಸಂಸ್ಕೃತಿ ಕಥನ' ಪುಟ-೬೮.)

ಈಗಲೂ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ಮಟ್ಟ ಹೇಗಿದೆ ಎನ್ನುವುದರ ಬಗ್ಗೆ "ಜ್ಞಾನದ ವಿಜ್ಞಾನದ ಕಲೆಯೈಸಿರಿ ಸಾರೋದಯ ಧಾರಾನಗರಿ"ಯಲ್ಲಿನ ಕರ್ನಾಟಕ ವಿಶ್ವವಿದ್ಯಾಲಯಕ್ಕೆ "ವಿಶ್ವವಿನೂತನ ವಿದ್ಯಾಚೇತನ ಸರ್ವಹೃದಯ ಸಂಸ್ಕಾರಿ" ಎಂಬ ಘಟಿಕೋತ್ಸವ ಗೀತೆ ಬರೆದ ಕವಿ ಚೆನ್ನವೀರ ಕಣವಿಯವರಿಗೆ ಯಾರೇನೂ ಹೇಳಬೇಕಿಲ್ಲ. ಅರ್ಥಶಾಸ್ತ್ರ-ತಂತ್ರಜ್ಞಾನ-ವಿಜ್ಞಾನ-ಗಣಿತ ಮುಂತಾದ "ಆಧುನಿಕ" ವಿಷಯಗಳ ಬಗ್ಗೆ ಕನ್ನಡದಲ್ಲಿ ಸಂಶೋಧನೆ ಆಗುತ್ತಿದೆಯೆ ಎನ್ನುವುದು ಯಾರಿಗಾದರೂ ಸಂದೇಹವೆ. ಕನ್ನಡದಲ್ಲಿ ಸಂಶೋಧನೆ ಅಂತೇನಾದರೂ ಆಗುತ್ತಿದ್ದರೆ ಅದು ಸಾಮಾಜಿಕ ಮತ್ತು ಸಾಹಿತ್ಯ-ಕಲೆ-ಸಂಸ್ಕೃತಿ ಇತ್ಯಾದಿಗಳಿಗೆ ಸಂಬಧಿಸಿದ ವಿಷಯಗಳ ಮೇಲೆಯೆ ಇರುತ್ತದೆ. ಆ ಸಂಶೋಧನೆಗಳ ಬಗ್ಗೆಯಾದರೂ ಸಾರಸ್ವತ ಲೋಕದಲ್ಲಿ ಗಂಭೀರ ಚರ್ಚೆ ಆಗುತ್ತಿದೆಯೆ ಎಂದರೆ ಆದೂ ಸಂದೇಹವೆ.

ಸಮಕಾಲೀನ ಸಂಶೋಧನೆಯ ದುಸ್ಥಿತಿ ಹೀಗಿರುವಾಗ, ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡ ಒಬ್ಬ ಲೇಖಕ ಒಂದು ಸಂದೇಹದ ಎಳೆಯನ್ನು ಆಧರಿಸಿ ಬರೆದ ಸಂಶೋಧನೆ ಎನ್ನಬಹುದಾದ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲು ಕವಿ ಕಣವಿಯಂತವರು ಒತ್ತಾಯಿಸುತ್ತಾರೆ ಮತ್ತು ಮುಟ್ಟುಗೋಲು ಹಾಕಿಕೊಂಡ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತಾರೆ ಎಂದರೆ ಅದಕ್ಕಿರಬಹುದಾದ ಒಂದೆ ಕಾರಣ, "ತಮ್ಮ ಜಾತಿಯ ಮೇಲ್ಗಾರಿಕೆಗೆ ಇದು ಸವಾಲು" ಎಂಬ "ಜಾತಿವಾದಿ ಕಾರಣ" ಮಾತ್ರ. ಆದರೆ ತಮ್ಮ ಜಾತಿವಾದವನ್ನು ಮಾತೆ ಮಹಾದೇವಿ, ಖಂಡ್ರೆಯರಂತೆ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲೂ ಅಗದ ಕಣವಿಯವರು ವಿಕ್ರಾಂತದ "ಮಲ್ಲಿ" ಜಾತಿಯ ದುರ್ವಾಸನೆಯಿಂದ ಕೂಡಿದ್ದಾರೆ ಎಂದು ಪತ್ರ ಬರೆಯುತ್ತಾರೆ!!!

ಕಣವಿಯವರು ಕಳೆದ ವಾರ ನಮ್ಮ ಪತ್ರಿಕೆಗೆ ಬರೆದ ಪತ್ರದಲ್ಲಿ, ನಮ್ಮ ಪತ್ರಿಕೆಯಲ್ಲಿಯೆ ಪ್ರಕಟವಾದ ಡಿ.ಎಸ್. ನಾಗಭೂಷಣ್‌ರವರ ಲೇಖನವೊಂದನ್ನು ಉಲ್ಲೇಖಿಸಿದ್ದಾರೆ. ಬಂಜಗೆರೆಯವರು ತಮ್ಮ "ಆನು ದೇವಾ ಹೊರಗಣವನು" ಪುಸ್ತಕವನ್ನು ಹಿಂತೆಗೆದುಕೊಂಡಿದ್ದಕ್ಕೆ ಕೊಟ್ಟ ಕಾರಣಗಳ ಪ್ರಾಮಾಣಿಕತೆಯ ಬಗ್ಗೆ ನಾಗಭೂಷಣರವರು ಆ ಲೇಖನದಲ್ಲಿ ಸಂದೇಹ ವ್ಯಕ್ತಪಡಿಸಿದ್ದರು. ಆದರೆ, ನಮ್ಮ ಕನ್ನಡನಾಡಿನ ಪ್ರಸಿದ್ಧ "ಡಿಬೇಟರ್‌ಗಳು" ಮಾಡುವಂತೆ, ಆ ಲೇಖನದಲ್ಲಿ ತಮಗೆ ಬೇಕಾದ ವಾದವನ್ನು ಮಾತ್ರ ಕಣವಿಯವರು ಉಲ್ಲೇಖಿಸಿದ್ದಾರೆ. ನಾಗಭೂಷಣ್‌ರವರು ಈ ಮುಂಚೆಯೆ ಆನು ದೇವಾದ ಬಗ್ಗೆ ವಿಕ್ರಾಂತ ಕರ್ನಾಟಕದಲ್ಲಿ ವಿಮರ್ಶಾತ್ಮಕ ಲೇಖನ ಬರೆದು, "ಬಂಜಗೆರೆಯವರ ಅಧ್ಯಯನದಲ್ಲಿ ಯಾವುದೋ ಒಂದು ಬಹುಮುಖ್ಯ ಆಯಾಮ ಪರಿಶೀಲನೆಯಿಂದ ತಪ್ಪಿಸಿಕೊಂಡಂತಿದೆ ಎಂದೆನ್ನಿಸದಿರದು. ಆದರೆ ಈ ಯಾವ ಕೊರತೆಯೂ ಬಂಜಗೆರೆಯವರ ವಾದದ ಆಶಯವನ್ನು ಅನುಮಾನಾಸ್ಪದಗೊಳಿಸಲಾರದು." ಎಂದು ಹೇಳಿದ್ದಾರೆ. ಅಷ್ಟಾದರೂ, ಈ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವರೆಲ್ಲೂ ಬೆಂಬಲಿಸಿಲ್ಲ. ಆದರೆ ನಾಗಭೂಷಣ್‌ರ ಆಶಯವನ್ನು ನಿರ್ಲಕ್ಷಿಸಿ ಅವರ ಲೇಖನದ ಒಂದು ವಾಕ್ಯವನ್ನು ತಮ್ಮ ವಾದದ ಸಮರ್ಥನೆಗೆ ಬಳಸಿಕೊಳ್ಳುವ ಕಣವಿಯವರದು ಡಿಬೇಟರ್‌ಗಳ ತಂತ್ರವಲ್ಲದೆ ಬೇರೆ ಆಗಲು ಸಾಧ್ಯವೆ?

ಯಾರಾದರೂ ಜಾತಿವಾದಿಗಳಾಗಿದ್ದರೆ ಅದಕ್ಕೆ ಕಾರಣ ಅವರಿಗೆ ತಮ್ಮ ಜಾತಿಯ ಬಗ್ಗೆ ಅಹಂಕಾರದಿಂದ ಪ್ರೇರಿತ ಹೆಮ್ಮೆ ಮತ್ತು ಜಾತಿಬಲದಿಂದ ತನ್ನಿಂತಾನೆ ಬರುವ ಕೆಲವು ಅನುಕೂಲಗಳು. ಈಗ ಹಿಂದುಳಿದವರು, ದಲಿತರೂ ಸಹ ಉಗ್ರ ಜಾತಿವಾದಿಗಳಾಗುತ್ತಿದ್ದರೆ ಅದಕ್ಕೂ ಕಾರಣ ದುರ್ಬಲ ವರ್ಗಗಳಿಗೆ ಕೊಡಲಾಗುತ್ತಿರುವ ಕೆಲವು ಸವಲತ್ತುಗಳೆ. ಆದರೆ, ದೇಶದಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯ ರಭಸ ನೋಡಿದರೆ ಈ ಸವಲತ್ತುಗಳ ಆಯಸ್ಸು ಇನ್ನು ೨೦-೩೦ ವರ್ಷ ಇದ್ದರೆ ಹೆಚ್ಚು. ಹಾಗಾಗಿ, ಇವರ ಜಾತಿವಾದ ತಾತ್ಕಾಲಿಕವಾದದ್ದು. ಆದರೆ, ಸುಲಭ ಜೀವನದ ಆಶೆ ಮತ್ತು ಅಹಂಕಾರಗಳನ್ನು ಕಳೆದುಕೊಳ್ಳದೆ ಇದ್ದರೆ ಸವರ್ಣೀಯರು ಮತ್ತು ಮೇಲ್ಜಾತಿ ಎನ್ನಿಸಿಕೊಂಡವರ ಸುಪಿರಿಯಾರಿಟಿ ಜಾತಿವಾದಕ್ಕೆ ಸಾವಿಲ್ಲ.

ಮುಕ್ಕಾಲು ಶತಮಾನದ ಹಿಂದಿನ ಈ ಅಹಂಕಾರ ಮತ್ತು ಮೌಢ್ಯದ ಬಗ್ಗೆ ಕುವೆಂಪು ಹೀಗೆ ಬರೆಯುತ್ತಾರೆ: "ನಾನು ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಬರೆದಾಗ ಎಂತೋ ಅಂತೆಯೇ ಅಮಲನ ಕಥೆ ಬರೆದಾಗಲೂ (೧೯೨೪) ಕೆಲವು ಬ್ರಾಹ್ಮಣರು ನಾನು ಬ್ರಾಹ್ಮಣನೆ ಇರಬೇಕೆಂದು ವಾದಿಸಿದರಂತೆ. ಅವರ ಪ್ರಕಾರ ಬ್ರಾಹ್ಮಣ ಜಾತಿಯಲ್ಲಿ ಹುಟ್ಟದವನಿಗೆ ಕಾವ್ಯ ಬರೆಯುವುದು ಸಾಧ್ಯವೇ ಇಲ್ಲ. .... ಬ್ರಾಹ್ಮಣನಲ್ಲದವನಿಗೆ ಅಂತಹ ವ್ಯಕ್ತಿತ್ವವಾಗಲಿ, ಕಾವ್ಯರಚನಾ ಶಕ್ತಿಯಾಗಲಿ, ಅಲಭ್ಯವೆಂದು ಆಗಿನ ಕಾಲದವರ, ಅದರಲ್ಲಿಯೂ ಉಚ್ಚವರ್ಗದವರ ಭಾವನೆಯಾಗಿತ್ತು. .... ಕೆಲವರು ನನ್ನನ್ನು ಅಯ್ಯಂಗಾರಿ ಎಂದು ಮತ್ತೆ ಕೆಲವರು ಸಾಹಿತ್ಯ ರಚನೆ ಬ್ರಾಹ್ಮಣನಲ್ಲದವನಿಗೆ ಸಾಧ್ಯವಿಲ್ಲವಾದ್ದರಿಂದ ನಾನು ಬ್ರಾಹ್ಮಣನೇ ಇರಬೇಕೆಂದು ಭಾವಿಸಿದ್ದರು." ('ಅನಿಕೇತನ' ಪುಟ-೫೩೨)

ಇದಾದ ಮುಕ್ಕಾಲು ಶತಮಾನದ ನಂತರವೂ ನಮ್ಮ ಜಾತಿ ಅಹಂಕಾರಗಳು ಕಮ್ಮಿ ಆಗಿಲ್ಲ. ಸ್ಯಾನ್ ಪ್ರಾನ್ಸಿಸ್ಕೋದ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿರುವ ಕನ್ನಡಿಗ ಪೃಥ್ವಿದತ್ತ ಚಂದ್ರಶೋಭಿ ನಮ್ಮ ಪತ್ರಿಕೆಯ ಓದುಗರಿಗೂ ಪರಿಚಿತರೆ. ಪೃಥ್ವಿಗೆ ಮತ್ತು ನನಗೆ ಇಬ್ಬರಿಗೂ ಗೊತ್ತಿರುವ ಒಬ್ಬ ಕನ್ನಡಿಗ ಇಲ್ಲಿ ಅಮೆರಿಕದಲ್ಲಿದ್ದಾನೆ. ಆತ ಕನ್ನಡ, ಇಂಗ್ಲಿಷ್ ಚೆನ್ನಾಗಿ ಓದಿಕೊಂಡಂತೆ ಕಾಣಿಸುತ್ತದೆ. ಸಾಪ್ಟ್‌ವೇರ್ ತಂತ್ರಜ್ಞನಾದ ಆತ ಇಲ್ಲಿಯೆ ಮಾಸ್ಟರ್ ಡಿಗ್ರಿ ಸಹ ಮಾಡಿದ್ದಾನೆ. ಪೃಥ್ವಿಯ ಪಾಂಡಿತ್ಯದ ಬಗ್ಗೆ ಆತನಿಗೆ ವಿಪರೀತ ಗೌರವ ಇತ್ತು ಎಂದು ಕಾಣಿಸುತ್ತದೆ. ಆತ ಒಮ್ಮೆ ಮೈಸೂರಿನಲ್ಲಿಯ ಪರಿಚಿತರ ಮನೆಗೆ ಹೋಗಿದ್ದಾನೆ. ಆ ಮನೆಯವರು ಅದೂ ಇದೂ ಮಾತನಾಡುತ್ತ ಅಮೆರಿಕದಲ್ಲಿರುವ ಪೃಥ್ವಿ ತಮ್ಮ ನೆಂಟ ಎಂದು ಹೇಳಿದ್ದಾರೆ. ಅದನ್ನು ಕೇಳಿದ ಈತ, "ಹೌದೇನ್ರಿ? ಸಾಧ್ಯಾನೇ ಇಲ್ಲ. ಆ ಇಂಟೆಲಿಜೆನ್ಸ್/ಪಾಂಡಿತ್ಯ ಬ್ರಾಹ್ಮಣನಲ್ಲದೆ ಬೇರೆಯವರಿಗೆ ಬರೋದಿಕ್ಕೆ ಸಾಧ್ಯಾನೆ ಇಲ್ಲ," ಎಂದನಂತೆ!!! ಈತ ಈ ಆಧುನಿಕ ಸಮಾಜದ ಸ್ಯಾಂಪಲ್ಲು...

ಬಹುಶ: ಬಂಜಗೆರೆಯವರು ಕುವೆಂಪುರವರು ಹೇಳಿದ್ದರ ಬಗ್ಗೆ ಮತ್ತು ಅಂಬೇಡ್ಕರ್ ಕುರಿತೂ ಜನ ಹೀಗೆಯೆ ಮಾತನಾಡಿಕೊಳ್ಳುತ್ತಿದ್ದ ಬಗ್ಗೆ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿರಬಹುದು. ಅದನ್ನೆ ಆಧರಿಸಿ ಪುಣ್ಯಾತ್ಮರೊಬ್ಬರು "ಬಂಜಗೆರೆಯವರು ಕುವೆಂಪು ಮತ್ತು ಅಂಬೇಡ್ಕರ್‌ರ ಹುಟ್ಟಿನ ಬಗ್ಗೆ ಕೀಳಾಗಿ ಬರೆದಿದ್ದಾರೆ. ಅವರೆಲ್ಲ ಅಕ್ರಮ ಸಂತಾನಕ್ಕೆ ಹುಟ್ಟಿದವರು ಎನ್ನುವ ರೀತಿಯಲ್ಲಿ ಹೇಳುತ್ತಾರೆ," ಎಂದೆಲ್ಲ ಪಿತೂರಿಯ ಲೇಖನವನ್ನು ಬರೆದು ಕನ್ನಡದ ದಿನಪತ್ರಿಕೆಗೆ ಕಳುಹಿಸುತ್ತಾರೆ. ಆ ಪತ್ರಿಕೆಯವರು ಬೇಜವಾಬ್ದಾರಿಂದ ಅದನ್ನು ಸೆಂಟರ್ ಪೇಜ್‌ನಲ್ಲಿ ಪ್ರಕಟಿಸುತ್ತಾರೆ. ಆ "ಸಂಶೋಧನಾತ್ಮಕ ಲೇಖನ"ಕ್ಕೆ ಕಣವಿಯಂತವರು ಆ ಪತ್ರಿಕೆಗೆ ಮರು ಉತ್ತರ ಬರೆದದ್ದಾಗಲಿ, ಅದು ಪ್ರಕಟವಾಗಿದ್ದಾಗಲಿ ಕಾಣಲಿಲ್ಲ.

ತಾವು ಜಾತಿವಾದಿ ಅಲ್ಲ ಎನ್ನುತ್ತ ಪತ್ರಿಕೆಗೆ ಪ್ರತಿಕ್ರಿಸಿದ ಕಣವಿಯವರು ಈ ಪ್ರಕರಣದಲ್ಲಿ ಒಂದು ಅಂಶವನ್ನು ಮರೆತಂತೆ ಕಾಣಿಸುತ್ತದೆ: ಮುಟ್ಟುಗೋಲಿನ ವಿರುದ್ದ ಬರೆದ ಮತ್ತು ಮಾತನಾಡಿದ ಕನ್ನಡದ ಕೆಲವು ವಾರಪತ್ರಿಕೆಗಳ ಸಂಪಾದಕರು ಮತ್ತು ಹಲವಾರು ಪ್ರಮುಖ ಲೇಖಕರು "ಲಿಂಗಾಯತ"ರೆ ಆಗಿದ್ದರು. ತಮ್ಮ ಪ್ರೀತಿಯ ಕವಿ ಕಣವಿಯವರ ವೈಚಾರಿಕ ದಾರಿದ್ರ್ಯದ ಬಗ್ಗೆ ಬೇಸರದಿಂದ, ಸಿಟ್ಟಿನಿಂದ ಬರೆದ ವಿಕ್ರಾಂತ ಕರ್ನಾಟಕದ "ಮಲ್ಲಿ"ಯ ಪೂರ್ವಜರು ಸಹ ಬಸವಣ್ಣನನ್ನು ಒಪ್ಪಿಕೊಂಡವರೆ. ಬಸವಣ್ಣ ಹೇಗೆ ತನ್ನದೆ ಸಮಾಜದ ಕ್ಷುಲ್ಲಕ ನಡವಳಿಕೆಯ ವಿರುದ್ದ ಹೋರಾಡಿದ ಎಂಬ ಪ್ರಚಲಿತ ಕತೆಯಂತೆಯೆ ಇವರೂ ಸಹ ತಮ್ಮದೇ (?) ಸ್ವಜಾತಿ ಮತಾಂಧರ ವಿರುದ್ದ ಧ್ವನಿಯೆತ್ತಿದವರು. ಬಸವಣ್ಣನ ನಿಜ ವಾರಸುದಾರರಿದ್ದರೆ ಅವರು ಇವರೆ.



ವಿಚಾರಮಂಟಪ.ನೆಟ್‌ಗೆ ಸಾವಿರಾರು ವಚನಗಳನ್ನು ಅಪ್‍ಲೋಡ್ ಮಾಡುತ್ತ ಮೂರ್‍ನಾಲ್ಕು ತಿಂಗಳು ಕಳೆದಿದ್ದ ನನಗೆ ಬಸವಣ್ಣ ಯಾವ ಜಾತಿಯಾದರೂ ಹೆಚ್ಚಿಲ್ಲ, ಕಮ್ಮಿಯಿಲ್ಲ. ಹೇಳಬೇಕೆಂದರೆ, ಬಸವಣ್ಣ (ಬ್ರಾಹ್ಮಣನಲ್ಲದೆ ಹೋದರೂ ಇತರ ಸವರ್ಣೀಯ) ಮೇಲ್ಜಾತಿಯವನಾಗದೆ ಇದ್ದಿದ್ದರೆ ಈಗಿನಷ್ಟು ಉದಾರವೂ ಸಹನಶೀಲವೂ ಆಗಿರದಿದ್ದ ಆಗಿನ ಕಾಲದಲ್ಲಿ ತನ್ನ ಮುವ್ವತ್ತರ ವಯಸ್ಸಿಗೆಲ್ಲ ಆ ಮಟ್ಟದ ಸಾಮಾಜಿಕ ಕ್ರಾಂತಿ ಉಂಟು ಮಾಡಲು ಅಸಾಧ್ಯವಿತ್ತೇನೊ ಎನ್ನುವ ಅಭಿಪ್ರಾಯ ನನ್ನದು. ಇದು ಕುವೆಂಪುರವರ ಪ್ರತಿಭೆಯ ಬಗ್ಗೆ ಎತ್ತಿದ ಪ್ರಶ್ನೆಯಂತಲ್ಲ. ಬದಲಿಗೆ ಬಸವಣ್ಣನ ಕಾಲದ ಸಾಮಾಜಿಕ ಪರಿಸ್ಥಿತಿಯ ಬಗೆಗಿನ ಪ್ರಶ್ನೆ. ಹಾಗಾಗಿ, ಬಂಜಗೆರೆಯವರ ವಾದ ನಿಜವಾದರೆ ಅದನ್ನು ಒಪ್ಪಿಕೊಳ್ಳಲು ನನಗ್ಯಾವ ಸಮಸ್ಯೆ ಇಲ್ಲವಾದರೂ, ಅದು ಸತ್ಯ ಎಂದು ಸಾಬೀತಾಗುವ ತನಕ ಬಸವಣ್ಣ ಬ್ರಾಹ್ಮಣನೆ ಇರಬೇಕು ಎನ್ನುವ ನಂಬಿಕೆ ಮತ್ತು ಬಂಜಗೆರೆಯವರ ವಾದದ ಮೇಲಿನ ನನ್ನ ಸಂದೇಹ ಮುಂದುವರೆಯುತ್ತದೆ. ಈ ಕಾರಣದಿಂದಲೆ ಕಳೆದ ಹದಿನೈದು ವರ್ಷಗಳಿಂದ ವಚನಸಾಹಿತ್ಯದ ಅಧ್ಯಯನದಲ್ಲಿ ತೊಡಗಿರುವ ಪೃಥ್ವಿಯವರ ಅಭಿಪ್ರಾಯ ಕೇಳಲು ನಾನು ಕಾತುರನಾಗಿದ್ದೆ.

ಪೃಥ್ವಿ ಎರಡು ತಿಂಗಳ ಹಿಂದೆ ಮೈಸೂರಿಗೆ ಹೊರಟಿದ್ದರು. ಆ ಸಮಯದಲ್ಲಿ ಅವರನ್ನು, "ಬಸವಣ್ಣ ಮಾದಿಗನಾಗಿರಲು ಸಾಧ್ಯವೆ? ನಿಮ್ಮ ಇಲ್ಲಿಯತನಕದ ಅಧ್ಯಯನದ ಆಧಾರದ ಮೇಲೆ ಏನನ್ನಿಸುತ್ತದೆ?" ಎಂದು ಕೇಳಿದ್ದೆ. ಆಗ ಅವರು ಆನುದ್ ಏವಾವನ್ನು ಇನ್ನೂ ಓದಿರಲಿಲ್ಲ. "ಆ ಸಾಧ್ಯತೆಗಳಿಲ್ಲ. ಮೈಸೂರಿನ ನನ್ನ ಪರಿಚಿತರು ಸಹ ಬಂಜಗೆರೆ ಹೇಳುವುದು ನಿಜ ಅನ್ನಿಸುತ್ತದೆ, ವಾದ ಕಂಪೆಲ್ಲಿಂಗ್ ಆಗಿದೆ ಎಂದು ಹೇಳುತ್ತಿದ್ದಾರೆ. ಆದರೆ ನನಗೆ ಹಾಗನ್ನಿಸುವುದಿಲ್ಲ. ಮೈಸೂರಿಗೆ ಹೋದ ತಕ್ಷಣ ಅದನ್ನು ಓದಿ ವಿಕ್ರಾಂತ ಕರ್ನಾಟಕದಲ್ಲಿ ದೀರ್ಘವಾಗಿ ಬರೆಯುತ್ತೇನೆ," ಎಂದರು. ಮೈಸೂರಿಗೆ ಬಂದ ಮೇಲೆ ಅದನ್ನು ಮೂರ್ನಾಲ್ಕು ಸಲ ಓದಿ, ವಿಜಯ್ ಟೈಮ್ಸ್‌ನ ಮಾಜಿ ಸಂಪಾದಕ ಕೃಷ್ಣ ಪ್ರಸಾದ್‌ರ "ಚುರುಮುರಿ.ಕಾಮ್" ಬ್ಲಾಗಿನಲ್ಲಿ ಪುಟ್ಟ ವಿಡಿಯೊ ಅಭಿಪ್ರಾಯ ದಾಖಲಿಸಿದರು. ಅವರ ಪ್ರಕಾರ:

"ಬಂಜಗೆರೆಯವರು ಇತಿಹಾಸದ ಬಗ್ಗೆ, ಅದರಲ್ಲೂ ಬಸವಣ್ಣ, ವಚನಸಾಹಿತ್ಯ, ವಚನಚಳವಳಿಗಳ ಹಿನ್ನೆಲೆಯಲ್ಲಿ ಒಂದು ಐತಿಹಾಸಿಕ ನಂಬಿಕೆಯನ್ನು ಇಟ್ಟುಕೊಂಡು ತಮ್ಮ ಅಧ್ಯಯನವನ್ನು ಅದಕ್ಕೆ ಫ್ರೇಮ್ ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಭಾರತದ ನಾಗರೀಕತೆ, ಹಿಂದೂ ಧರ್ಮ, ಜಾತಿವ್ಯವಸ್ಥೆ ಮುಂತಾದುವುಗಳಲ್ಲಿ ಪ್ರತಿಕ್ರಿಯೆ, ಪ್ರತಿರೋಧ, Social Criticism ಇವೆಲ್ಲಾ ಬಂದಿರುವುದು ಮತ್ತು ಸಾಧ್ಯ ಆಗಿರುವುದು ಹಿಂದುಳಿದ ಜನಾಂಗಗಳಿಂದ ಮಾತ್ರ ಎನ್ನುವ ನಂಬಿಕೆಯನ್ನಿಟ್ಟುಕೊಂಡು ಅವರು ಅಧ್ಯಯನವನ್ನು ಪ್ರಾರಂಭಿಸುತ್ತಿದ್ದಾರೆ. ಆ ಕಾರಣದಿಂದಲೆ ಅವರ ಮಿಕ್ಕೆಲ್ಲ ಪ್ರಶ್ನೆಗಳು, ಅಧ್ಯಯನಗಳನ್ನೆಲ್ಲ ಆ ಒಂದು ನಂಬಿಕೆಗೆ ಸೇರಿಸಿ ಸಮಾಗಮ ಮಾಡುವ ಒಂದು ಸರ್ಕಸ್ ತರದಲ್ಲಿ ನಮಗೆ ಬಹಳ ಸಲ ಕಾಣಿಸುತ್ತದೆ. ... ಬಂಜಗೆರೆಯವರು ಕೇವಲ ಸೆಕೆಂಡರಿ ಆಧಾರಗಳನ್ನೆ ಬಳಸಿ, ಅವುಗಳಲ್ಲಿನ ಕೆಲವು ಸಮಸ್ಯೆಗಳನ್ನೆ ಆಧಾರವಾಗಿ ಇಟ್ಟುಕೊಂಡಿದ್ದಾರೆಯೆ ವಿನಹ ಬಸವಣ್ಣನ ಬದುಕಿನ ಬಗೆಗಿನ ಯಾವುದೆ ಕಥಾನಕವನ್ನು ತಮ್ಮ ವಾದಕ್ಕೆ ಬಳಸಿಕೊಂಡಿಲ್ಲ. ಅದರಿಂದಾಗಿ ಇಡೀ ಪುಸ್ತಕದಲ್ಲಿ ಹಲವಾರು ಕಡೆ ಸಮಸ್ಯಾತ್ಮಕ ಹೇಳಿಕೆಗಳು ಕಂಡು ಬರುತ್ತವೆ. .... ಜಾಳುಜಾಳಾದ ಹೇಳಿಕೆಗಳನ್ನು ಇಡೀ ಪುಸ್ತಕದುದ್ದಕ್ಕೂ ಪ್ರತಿಪುಟದಲ್ಲೂ ಗುರುತಿಸುತ್ತ ಹೋಗಬಹುದು. ಇದರ ಜೊತೆಗೆ, ಸ್ವಲ್ಪಮಟ್ಟಿಗೆ ಅವಸರದ ಬರವಣಿಗೆಯಂತೆ, ಬಹಳ ಕಡೆ ಆಧಾರಗಳಿಲ್ಲದೆ, Speculative Claims ಮಾಡಿರುವ ಹಾಗೆ ಕಾಣಿಸುತ್ತದೆ. ನನ್ನ ಹದಿನೈದು ವರ್ಷಗಳ ಅಧ್ಯಯನದ ಹಿನ್ನೆಲೆಯಲ್ಲಿ ಹೇಳಬಹುದಾದರೆ, ಬಂಜಗೆರೆಯವರ ವಾದ ಕೆಲವು ಸಲ ಬೇಜವಾಬ್ದಾರಿ ಚಿಂತನೆಯ (Sloppy thinking), ಗೊಂದಲಕಾರಿ ತರ್ಕದ, ಹಲವಾರು ಕಡೆ ತಪ್ಪು ಊಹೆ ಎನ್ನುವಂತವುಗಳ ಕಾಂಬಿನೇಷನ್ ತರಹ ಕಾಣಿಸುತ್ತದೆ.

ಇಷ್ಟೆಲ್ಲ ಹೇಳಿದರೂ ಎರಡು ಅಂಶಗಳನ್ನು ಇಲ್ಲಿ ಪ್ರಸ್ತಾಪ ಮಾಡಬೇಕು. ಮೊದಲನೆಯದು: ಬಂಜಗೆರೆಯವರ ಮುಖ್ಯವಾದ ಪ್ರಾರಂಭಿಕ ಅಂಶದ ಬಗ್ಗೆ ನನಗೆ ಸಹಾನುಭೂತಿ ಇದೆ. ಇತಿಹಾಸದ ಮೇಲಿನ ನನ್ನ ವಿಶ್ಲೇಷಣೆಯಲ್ಲೂ ಬಹಳ ಮುಖ್ಯವಾದ ಅಂಶವದು. ಅದು, ವೀರಶೈವ ಜನಾಂಗ, ವೀರಶೈವ ಇತಿಹಾಸ, ವಚನ ಚಳವಳಿ, ಇವುಗಳ ಸಾಂಸ್ಕೃತಿಕ ಸ್ಮೃತಿ ಹೇಗಿರಬೇಕು ಅನ್ನುವುದು. ಎರಡನೆಯದು: ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದೇ ಕಾರಣದಿಂದ ಇದು ಚರ್ಚೆ ಆಗಬೇಕು ಎನ್ನುವ ಕಾರಣಕ್ಕಷ್ಟೆ ಅಲ್ಲದೆ ಈ ತರಹದ ಚರ್ಚೆಗಳು ನಮ್ಮಲ್ಲಿ ವಿವರವಾಗಿ ನಡೆಯಬೇಕು. ಈ ಹಿನ್ನೆಲೆಯಲ್ಲಿ, ಈ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎನ್ನುವ ಬೇಡಿಕೆಗಳು, ಡಿಮ್ಯಾಂಡ್‌ಗಳು ಸಾಧುವಲ್ಲ ಎಂದು ನಾವು ಸ್ಪಷ್ಟವಾಗಿ ಹೇಳಬೇಕು. ಕೆಟ್ಟ ಪುಸ್ತಕ, ಬೇಜವಾಬ್ದಾರಿ ಬರವಣಿಗೆ ಆಗುತ್ತಿದೆ ಎಂದು ಅನ್ನಿಸುತ್ತಿದ್ದಾಗಲೂ ಸಹ ಅವುಗಳಿಗೆ ತಾರ್ಕಿಕ ವಿಧಾನಗಳಿಂದ ಪ್ರತಿಕ್ರಿಯಿಸಬೇಕೆ ಹೊರತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನೆ, ಪುಸ್ತಕ ಬರೆಯುವ ಹಕ್ಕನ್ನೆ ಕಸಿದಿಟ್ಟುಕೊಳ್ಳಬೇಕು ಎನ್ನುವುದು ಸರಿಯಾದ ಬೇಡಿಕೆ ಆಗುವುದಿಲ್ಲ. ಒಂದು ಆರೋಗ್ಯಪೂರ್ಣ ಚರ್ಚೆ ಹೇಗೆ ಮುಂದುವರೆಯಬೇಕು ಎನ್ನುವುದರ ಬಗ್ಗೆ ನಮ್ಮೆಲ್ಲರ ಗಮನ ಇರಬೇಕೆ ಹೊರತು ಲೇಖಕರನ್ನೆ ಹೊಡೆಯುವುದು, ಅವರ ಮೇಲೆ ಹಲ್ಲೆ ಮಾಡುವುದು, ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅಲ್ಲ." (churumuri.com, ೧೩/೦೬/೦೭)

ಬಂಜಗೆರೆಯವರ ವಾದ ತಪ್ಪಾಗಿದ್ದರೆ ಅದನ್ನು ಸಾಬೀತು ಪಡಿಸಲು ಈ ರೀತಿಯ ದಾರಿಗಳಿವೆ; ಸಮಯವಿದೆ. ಆದರೆ, ಮುಟ್ಟುಗೋಲಿನ ಉತ್ತರಾರ್ಧದ ಸಂದರ್ಭದಲ್ಲಿ ಮುಖ್ಯವಾಗಿರುವುದು ಮುಟ್ಟುಗೋಲು ಸರಿಯೆ, ತಪ್ಪೆ, ಎಂದಷ್ಟೆ. "ನನ್ನ ಮಾನ ಪ್ರಾಣ ಧನ ನನ್ನ ದೇಶದ ಜನರು" ಎಂದ ಕವಿ ಕಣವಿ ಮುಟ್ಟುಗೋಲಿನ ಪರ ಇದ್ದಾರೆ. ಅವರು ಯಾಕೆ ಇದ್ದಾರೆ ಎನ್ನುವುದು ಇಲ್ಲಿ ಅಪ್ರಸ್ತುತ. ಅವರು ಯಾವ ಅರ್ಥದಲ್ಲಿ ಏನನ್ನು ಹೇಳಿದರೂ ಅವರು ಮತಾಂಧರ ಪರ ಇರುವುದು ಬದಲಾಗುವುದಿಲ್ಲ.


ಸಂಶೋಧನೆಯ ಮೊದಲ ಹಂತವೆ ವಿಷಯ ಮಂಡನೆ. ನಂತರ ಅದರ ಸರಿತಪ್ಪುಗಳ ವಿಶ್ಲೇಷಣೆ ಮತ್ತು ಪರಿಷ್ಕರಣೆ. ವಿಷಯ ಮಂಡನೆಗೇ ಈ ರೀತಿ ಅಡ್ಡಿಪಡಿಸಿದರೆ, ಸಂಶೋಧನೆ ಎನ್ನುವುದು ಎಂದಾದರೂ ಸಾಧ್ಯವೆ? ಪ್ರಪಂಚಕ್ಕೆಲ್ಲ ಬೆಳಕಾದರೂ ನಮಗೆ ಬೆಳಕು ಬೇಡ ಎನ್ನುವ ಕಗ್ಗಾಡಿನವರಾಗ್ಗುವುದಿಲ್ಲವೆ ನಾವು? ಕಣವಿಯವರು ಕನ್ನಡದ ಸಂಶೋಧನೆಯ ಎರಡು "ಆದರ್ಶಪ್ರಾಯ" ಘಟನೆಗಳ ಬಗ್ಗೆ ಬರೆಯುತ್ತಾರೆ. ಆದರೆ ಆನು ದೇವಾಗೆ ಸಂಬಂಧಪಟ್ಟ ವಿಚಾರದಲ್ಲಿ ಮುಟ್ಟುಗೋಲಿನ ಪರ ಇರುವವರ ಪ್ರತಿಕ್ರಿಯೆಗಳೆಲ್ಲ ಸಿಟ್ಟಿನ, ಉದ್ರೇಕಕಾರಿ ಪ್ರಕಟಣೆಗಳು; ಹೇಳಿಕೆಗಳು. ಇವರಲ್ಲಿ ಎಷ್ಟೋ ಜನ ಪುಸ್ತಕ ಓದಿದಂತೆಯೆ ಕಾಣಿಸುವುದಿಲ್ಲ. ಪುಸ್ತಕವನ್ನು ಹಲವಾರು ಸಲ ಓದಿ, ಬಂಜಗೆರೆಯವರ ವಾದದಲ್ಲಿ ಲೋಪಗಳಿವೆ ಎಂದು ಪ್ರತಿಕ್ರಿಸಿದ ನಾಗಭೂಷಣ್, ಪೃಥ್ವಿ, ಮುಂತಾದವರೆಲ್ಲ ಮುಟ್ಟುಗೋಲಿನ ವಿರುದ್ದ ಇರುವವರು. "ಬಸವಪಥ" ಪತ್ರಿಕೆಯಲ್ಲಿನ ಲೇಖನಗಳು "ಆನು ದೇವಾದಲ್ಲಿನ ಆಧಾರರಹಿತ ಸಂಗತಿಗಳನ್ನು ಸಂಶೋಧನಾತ್ಮಕವಾಗಿ ಎತ್ತಿ ತೋರಿಸುತ್ತವೆ," ಎನ್ನುತ್ತಾರೆ ಕವಿ. ಸರಿ, ಹಾಗೆಂದ ಮಾತ್ರಕ್ಕೆ ಒಂದು ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎನ್ನುವುದು ಎಷ್ಟು ಸರಿ? ಈಗ ಲೇಖಕರು ಹಿಂತೆಗೆದುಕೊಂಡಿರುವುದು ತಮ್ಮ ವಾದದಲ್ಲಿ ತಪ್ಪಿದೆ ಎಂದು ಬೇರೆಯವರು ಪ್ರಮಾಣಪೂರ್ವಕವಾಗಿ ತೋರಿಸಿದ್ದಾರೆ ಎಂಬ ಕಾರಣಕ್ಕಾಗಿ ಅಲ್ಲ; ಬದಲಿಗೆ ಉಕ್ಕೇರುತ್ತಿರುವ ಅಸಹನೆಯನ್ನು ಶಮನಗೊಳಿಸಲು ಮತ್ತು ಕೆಲವರು ಈ ಘಟನೆಯಿಂದ ದುರ್ಲಾಭ ಪಡೆದುಕೊಳ್ಳದೆ ಇರಲು. ಕಣವಿಯವರಿಗೆ ಇವು ಯಾವುವೂ ಮುಖ್ಯವಾಗುವುದಿಲ್ಲ. ಅವರಿಗೆ ಪುಸ್ತಕದ ಮುಟ್ಟುಗೋಲಿನ ಮೇಲೆ ಆಸಕ್ತಿದೆಯೆ ಹೊರತು ಲೇಖಕರು ಯಾವ ಸಂದರ್ಭದಲ್ಲಿ, ಯಾವ ಕಾರಣಕ್ಕಾಗಿ ಹಿಂತೆಗೆದುಕೊಂಡರು ಎನ್ನುವುದಲ್ಲ.

ನನ್ನ ದೇಶ ನನ್ನ ಜನ
ನನ್ನ ಮಾನ ಪ್ರಾಣ ಧನ
...
...
ಮೈಕೊಡವಿದೆ ಮೂಕ ಜನ
ಕೈಹಿಡಿಯಿರಿ ನಾಕು ಜಣ
ಎದ್ದೇಳಲಿ ಎಲ್ಲ ಗುಣ
ಸಮೃದ್ಧ ಬಾಳಿಗೆ....


ಎಂದ ಕವಿಗೆ ಆನು ದೇವಾದ ಮುಟ್ಟುಗೋಲಿನ ಬೇಡಿಕೆ/ಸಮರ್ಥನೆ ಯೋಗ್ಯವಲ್ಲ.



ವಿಡಿಯೊ ಪ್ರಸ್ತುತಿ - ಭಾಗ ೧

ವಿಡಿಯೊ ಪ್ರಸ್ತುತಿ - ಭಾಗ ೨

Aug 16, 2007

ಕೈಗೆಟುಕಲಿರುವ ಸಂಜೀವಿನಿಗಳು...

(ವಿಕ್ರಾಂತ ಕರ್ನಾಟಕ - ಆಗಸ್ಟ್ 17, 2007ರ ಸಂಚಿಕೆಯಲ್ಲಿನ ಬರಹ)

ಎಲ್ಲೆಂದರಲ್ಲಿ ಕಾಲೆತ್ತಲು ಹೋಗುವ ಕಚ್ಚೆಹರುಕರಿಗಷ್ಟೆ ಏಡ್ಸ್ ಬರುವುದಿಲ್ಲ. ಒಬ್ಬ ಇಲ್ಲವೆ ಒಬ್ಬಳು ಈಗಾಗಲೆ ಏಡ್ಸ್ ಹೊಂದಿರುವವಳ/ನ ಬಳಿ ಯಾವುದೊ ಅನೈತಿಕ ಕೆಲಸ ಮಾಡಲು ಹೋಗಿ ಅಂಟಿಸಿಕೊಂಡು ಬಿಟ್ಟಿರಬಹುದು. ಆದರೆ, ಏಡ್ಸ್‌ಪೀಡಿತನಿಂದ ಅವನ ಮುಗ್ಧ ಹೆಂಡತಿಗೆ, ಏಡ್ಸ್‌ಪೀಡಿತೆಯಿಂದ ಅವಳ ಮುಗ್ಧ ಗಂಡನಿಗೆ, ದಾಂಪತ್ಯ ಜೀವನದಲ್ಲಿ ಸಹಜವಾದ ಅಸುರಕ್ಷಿತ (ಕಾಂಡೋಮ್ ಇಲ್ಲದ) ಲೈಂಗಿಕ ಸಂಪರ್ಕದಿಂದಲೂ ಅದು ಬಂದು ಬಿಡುತ್ತದೆ. ಇನ್ನು, ಗೊತ್ತಿದ್ದೊ ಗೊತ್ತಿಲ್ಲದೆಯೊ ಗರ್ಭಿಣಿಯಾಗುವ ಏಡ್ಸ್‌ಪೀಡಿತೆ, ತನ್ನ ನಿಷ್ಪಾಪಿ ಮಗುವಿಗೆ ಅದರ ಜನ್ಮದಿನದಂದೆ ಏಡ್ಸ್ ಅನ್ನು ದಯಪಾಲಿಸಿ ಬಿಟ್ಟಿರುತ್ತಾಳೆ. ಒಬ್ಬರು ಬಳಸಿದ ಸಿರಿಂಜ್ ಅನ್ನು ಇನ್ನೊಬ್ಬರು ಬಳಸಿಬಿಡುವ ಸಂದರ್ಭಗಳಲ್ಲೂ ಏಡ್ಸ್ ಅಂಟಬಹುದು. ಹೀಗೆ, ಇಂದು ಏಡ್ಸ್ ಎನ್ನುವುದು ಬಹುಜನರೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡವರಿಗೆ ಮಾತ್ರ ಅಂಟುವ, ಅಥವ ವೇಶ್ಯಾವೃತ್ತಿಯಲ್ಲಿ ತೊಡಗಿಕೊಂಡವರಿಗೆ ಮತ್ತು ಅವರ ಗಿರಾಕಿಗಳಿಗೆ ಮಾತ್ರ ಅಂಟುವ ಕಾಲೆಯಾಗಿ ಉಳಿದಿಲ್ಲ.

ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನೆ ಕೊಲ್ಲುವ, ಸಾಮಾನ್ಯ ಜ್ವರವನ್ನೂ ತಡೆದುಕೊಳ್ಳಲಾಗದಷ್ಟು ದೇಹವನ್ನು ದುರ್ಬಲ ಮಾಡಿಬಿಡುವ ಈ ಮಾರಿ ಆಫ್ರಿಕಾದ ಹಲವು ದೇಶಗಳಲ್ಲಿಯಂತೂ ಹೆಮ್ಮಾರಿಯಾಗಿ ಬಿಟ್ಟಿದೆ. ಇಂದು ಪ್ರಪಂಚದಲ್ಲಿನ ಸುಮಾರು 4 ಕೋಟಿ ಜನಕ್ಕೆ ಏಡ್ಸ್ ಇದೆ. ಕಳೆದ ವರ್ಷ ಇದನ್ನು ಅಂಟಿಸಿಕೊಂಡವರ ಸಂಖ್ಯೆ 43 ಲಕ್ಷವಂತೆ. ಈ ಕಾಯಿಲೆಯಿಂದ ಪ್ರತಿ ವರ್ಷ ಸಾಯುತ್ತಿರುವವರ ಸಂಖ್ಯೆಯೆ 30 ಲಕ್ಷ ಮುಟ್ಟುತ್ತಿದೆ. ಅಂದರೆ ದಿನಕ್ಕೆ 8000 ಜನ ಇದರಿಂದ ಸಾಯುತ್ತಿದ್ದಾರೆ. ಗಾಂಧಿ ಮೆಟ್ಟಿದ ದಕ್ಷಿಣ ಆಫ್ರಿಕಾದಲ್ಲಿ ಪ್ರತಿ ಐವರಲ್ಲಿ ಒಬ್ಬ ಏಡ್ಸ್ ಪೀಡಿತನಾಗಿದ್ದರೆ (ಅಲ್ಲಿ 55 ಲಕ್ಷ ಜನಕ್ಕೆ ಏಡ್ಸ್ ಇದೆ!), ಗಾಂಧಿ ಹುಟ್ಟಿದ ಭಾರತದಲ್ಲಿ 20 ರಿಂದ 36 ಲಕ್ಷ ಜನಕ್ಕೆ ಏಡ್ಸ್ ಇದೆ ಎಂದು ಅಂದಾಜು. ಏಡ್ಸ್‌ಪೀಡಿತರ ಸಂಖ್ಯೆಯ ದೃಷ್ಟಿಯಿಂದ ದಕ್ಷಿಣ ಆಫ್ರಿಕ ಬಿಟ್ಟರೆ ನಂತರದ ಸ್ಥಾನ ಭಾರತದ್ದೆ. ಈ ಕಾಯಿಲೆ ಅಂಟಿಸಿಕೊಂಡವರಲ್ಲಿ ದಕ್ಷಿಣ ಭಾರತದವರೆ ಹೆಚ್ಚು!

ಇನ್ನು ನಮ್ಮ ಕರ್ನಾಟಕವನ್ನೆ ತೆಗೆದುಕೊಂಡರೆ, ಜನಸಂಖ್ಯೆಯ ಶೇ. 1 ರಷ್ಟು ಜನರಿಗೆ ಏಡ್ಸ್ ಇದೆ ಎಂದು ಅಂದಾಜು. ಸಮೀಕ್ಷೆಯೊಂದರ ಪ್ರಕಾರ, ಕರ್ನಾಟಕದಲ್ಲಿನ ಪ್ರತಿ ಐದು ವೇಶ್ಯೆಯರಲ್ಲಿ ಒಬ್ಬಳಿಗೆ ಏಡ್ಸ್ ಇದೆಯಂತೆ!

ಹೀಗೆ, ಈ ಕಾಯಿಲೆ ಎಲ್ಲಾ ತರಹದ ಜನರಿಗೆ ಬರಬಹುದಾದ ಕಾಯಿಲೆ ಆಗಿಬಿಟ್ಟಿದೆ ಮತ್ತು ದಿನದಿನವೂ ಇದರ ಪರಿಣಾಮ ತೀವ್ರವಾಗುತ್ತ ಹೋಗುತ್ತಿದೆ. ಉಚಿತ ಕಾಂಡೋಮ್ ಹಂಚುವುದು ಮತ್ತು ಸುರಕ್ಷಿತ ಲೈಂಗಿಕತೆಯ ಬಗೆಗಿನ ಶಿಕ್ಷಣ ಕೊಡುವುದು ಈ ರೋಗ ಹೊಸಬರಿಗೆ ಅಂಟುವುದನ್ನು ಬಹುಮಟ್ಟಿಗೆ ತಡೆಯಬಹುದು ಇಲ್ಲವೆ ನಿಧಾನಿಸಬಹುದು. ಆದರೆ ಈಗ ಎಲ್ಲರ ಮುಂದಿರುವ ದೊಡ್ಡ ಪ್ರಶ್ನೆ, ಪ್ರತಿದಿನ 8000 ಜನರನ್ನು ಬಲಿತೆಗೆದುಕೊಳ್ಳುತ್ತಿರುವ, ಮದ್ದೇ ಇಲ್ಲದ ಕಾಯಿಲೆ ಎನ್ನಿಸಿಕೊಂಡಿರುವ ಇದಕ್ಕೆ ಪರಿಣಾಮಕಾರಿ ಮದ್ದು ಕಂಡು ಹಿಡಿಯುವುದು ಮತ್ತು ಈಗ ಇದ್ದಿರಬಹುದಾದ ಮದ್ದನ್ನು ಸಾಮಾನ್ಯರಿಗೂ ಸುಲಭವಾಗಿ ಎಟುಕುವಂತೆ ಮಾಡುವುದು.

ಭಾರತದ ಬಹುಸಂಖ್ಯಾತ ಬಡಜನತೆಗೆ ತಿಂಗಳಿಗೆ ಸಾವಿರ ರೂಪಾಯ ಆದಾಯವೂ ಇರುವುದಿಲ್ಲ. ಇನ್ನು, ಅದು ಹೇಗಾದರೂ ಇರಲಿ, ಈ ಕಾಯಿಲೆ ಅಂಟಿಕೊಂಡು ಬಿಟ್ಟರೆ, ಮೊದಲ ಹಂತದ ಔಷಧಿಗಳಿಗೇ ತಿಂಗಳಿಗೆ 3-4 ಸಾವಿರ ರೂಪಾಯಿ ಬೇಕು. ಕಾಯಿಲೆ ಏನಾದರೂ ಎರಡನೆ ಮತ್ತು ಮೂರನೆ ಹಂತಕ್ಕೆ ಹೋಗಿಬಿಟ್ಟರೆ ಔಷಧಿಯ ವೆಚ್ಚ ತಿಂಗಳಿಗೆ 5000 ದಿಂದ 30000 ದ ತನಕ ಏರುತ್ತದೆ. ಬಡಜನ ಹೇಗೆ ತಾನೆ ಇದನ್ನು ಭರಿಸಿಯಾರು? ಹಾಗಾಗಿಯೆ, ಭಾರತ, ಥಾಯ್‌ಲ್ಯಾಂಡ್, ಆಫ್ರಿಕಾ ಖಂಡ, ಬ್ರೆಜಿಲ್ ಮುಂತಾದ ತೃತೀಯ ಜಗತ್ತಿನ ದೇಶಗಳಲ್ಲಿ ಅಲ್ಲಿನ ಬಡಜನತೆಗೆ ಏಡ್ಸ್ ಔಷಧಿಯನ್ನು ಒದಗಿಸುವ ಕೆಲಸವನ್ನು ಸರ್ಕಾರಗಳೆ ಮಾಡುತ್ತಿವೆ. ಈಗ ಮೊದಲ ಹಂತದ ಔಷಧಿಗಳನ್ನು ಮಾತ್ರ ಕೆಲವು ಸರ್ಕಾರಗಳು ಉಚಿತವಾಗಿ ಒದಗಿಸುತ್ತಿವೆ. ಥಾಯ್‌ಲ್ಯಾಂಡ್ ಸರ್ಕಾರ ಈಗಾಗಲೆ ಪ್ರತಿವರ್ಷ ಸುಮಾರು 400 ಕೋಟಿ ರೂಪಾಯಿಗಳನ್ನು ಏಡ್ಸ್ ಔಷಧಿಗಳಿಗೆ ಖರ್ಚು ಮಾಡುತ್ತಿದೆ. ಇದೇ ಲೆಕ್ಕಾಚಾರದಲ್ಲಿ ಭಾರತ ಸರ್ಕಾರ ಸಹ ಬಹುಶಃ ನೂರಾರು ಕೋಟಿ ಖರ್ಚು ಮಾಡುತ್ತಿರಬಹುದು.

ಮೊದಲೆಲ್ಲ ಮದ್ದಿಲ್ಲದ ಕಾಲೆ ಎಂದೇ ಹೇಳಲಾಗುತ್ತಿದ್ದ ಏಡ್ಸ್‌ಗೆ ಈಗೀಗ ಕೆಲವು ಔಷಧಿಗಳು ಲಭ್ಯವಿವೆ. ಅಮೇರಿಕದ ಹಲವಾರು ಔಷಧ ಕಂಪನಿಗಳು ನೂರಾರು ಕೋಟಿಗಳನ್ನು ಸಂಶೋಧನೆಯಲ್ಲಿ ತೊಡಗಿಸಿ ಹಲವಾರು ಔಷಧಿಗಳನ್ನು ಕಂಡುಹಿಡಿದಿದ್ದಾರೆ. ಸಂಪೂರ್ಣವಾಗಿ ತಡೆಗಟ್ಟುತ್ತದೆ, ಇಲ್ಲವೆ ಸಂಪೂರ್ಣವಾಗಿ ವಾಸಿ ಮಾಡುತ್ತದೆ ಎನ್ನುವ ಔಷಧಿಯನ್ನು ಇನ್ನೂ ಅಭಿವೃದ್ಧಿಪಡಿಸಲಾಗದೆ ಇದ್ದರೂ, ಏಡ್ಸ್ ಕಾಲೆಯ ವಿರುದ್ದ ಹೋರಾಡಬಲ್ಲಂತ ಹತ್ತಾರು ಔಷಧಿಗಳು ಇಂದು ಮಾರುಕಟ್ಟೆಯಲ್ಲಿ ದೊರಕುತ್ತವೆ. ಆದರೆ ಇವು ಯಾವುವೂ ಅಗ್ಗ ಅಲ್ಲ. ಅಮೇರಿಕದಂತಹ ಶ್ರೀಮಂತ ದೇಶಗಳ ಜನರಿಗೂ ಈ ಔಷಧಿಗಳು ದುಬಾರಿ. ಕೇವಲ ಏಡ್ಸ್ ಔಷಧಗಳ ಮಾರುಕಟ್ಟೆಯೆ ಇಂದು 16000 ಕೋಟಿ ರೂಪಾಯಿ ದಾಟುತ್ತಿದೆ.

ಈ ಔಷಧಿಗಳು ಇನ್ನೂ ದುಬಾರಿಯಾಗಿಯೆ ಇರಲು ಮುಖ್ಯ ಕಾರಣ, ಅವುಗಳಿಗಿರುವ ಪೇಟೆಂಟ್‌ಗಳು. ಜನರಿಗೆ ಅಗತ್ಯವಾದ ಕೆಲವೊಂದು ಸಂಶೋಧನೆಗಳನ್ನು ಕೆಲವು ವ್ಯಕ್ತಿಗಳು ಯಾವುದೆ ಫಲಾಫಲ ಅಪೇಕ್ಷೆಯಿಲ್ಲದೆ ಮಾಡಬಲ್ಲರು. ಆದರೆ ದೊಡ್ಡದೊಡ್ಡ ವ್ಯವಹಾರಿಕ ಕಂಪನಿಗಳು ಸಂಶೋಧನೆ ಮಾಡುವುದು ತಮ್ಮ ಸಂಶೋಧನೆಗಳನ್ನು ಮಾರಾಟ ಮಾಡುವುದರಿಂದ ಅಪಾರ ಹಣ ಗಳಿಸಬಹುದು ಎಂಬ ಒಂದೆ ಕಾರಣಕ್ಕಾಗಿ. ಅದಕ್ಕಾಗಿಯೆ ಅವರು ನೂರಾರು ಕೋಟಿಗಳನ್ನು ಸಂಶೋಧನೆಯಲ್ಲಿ ತೊಡಗಿಸುತ್ತಾರೆ. ಕೆಲವೊಮ್ಮೆ ಆ ಸಂಶೋಧನೆಗಳಿಗೆ ಯಶಸ್ಸು ಸಿಕ್ಕಿದಾಗ ಕೂಡಲೆ ಅದನ್ನು ಪೇಟೆಂಟ್ ಮಾಡಿಕೊಳ್ಳುತ್ತಾರೆ. ಲೇಖನ, ಕತೆ, ಕವಿತೆ, ಕಾದಂಬರಿ, ಸಿನೆಮಾ, ಮುಂತಾದ ಸೃಜನಶೀಲ ಕಾರ್ಯಗಳಿಗೆ ಕಾಪಿರೈಟ್ ಇರುವಂತೆ ಸಂಶೋಧನೆಗಳಿಗೆ ಇರುವ ಕಾಪಿರೈಟ್ ಈ ಪೇಟೆಂಟ್‌ಗಳು. R&D ಗೆಂದು ನೂರಾರು ಕೋಟಿ ಖರ್ಚು ಮಾಡುವ ಸಂಸ್ಥೆಗಳ ಸಂಶೋಧನೆಯನ್ನು ಇನ್ನೊಬ್ಬರು ರಾತ್ರೋರಾತ್ರಿ ನಕಲು ಮಾಡಿ, ಆ ಮೂಲಕ ಮೂಲಕಂಪನಿ ದಿವಾಳಿ ಏಳದಂತೆ ನೋಡಿಕೊಳ್ಳಲು ಈ ಪೇಟೆಂಟ್ ಕಾನೂನುಗಳು ಸಹಾಯ ಮಾಡುತ್ತವೆ.

ಈ ಪೇಟೆಂಟ್ ರಕ್ಷಣೆ ಇಲ್ಲದಿದ್ದರೆ ಏನಾಗಬಹುದು ಎಂದು ನೋಡೋಣ: ನಮ್ಮ ದೇಶದಲ್ಲಿ ಮಾರುತಿ-800 ಈಗಲೂ ಬಹುಮಾರಾಟದ, ಅಗ್ಗ ಬೆಲೆಯ ಕಾರು. ಈಗ ಅದಕ್ಕೆ ಪ್ರತಿಸ್ಪರ್ಧಿಯಾಗಿ ಟಾಟಾ ರವರು ಲಕ್ಷ ರೂಪಾಯಿಯ ಕಾರನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇದಕ್ಕಾಗಿ ಟಾಟಾ ರವರು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ತಮ್ಮದೇ ಒಂದು ಸ್ವದೇಶಿ ಇಂಜಿನ್ ಅನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಟಾಟಾ ರವರು ಈ ಕಾರನ್ನು ಇನ್ನು ಒಂದೆರಡು ವರ್ಷದಲ್ಲಿ ಮಾರುಕಟ್ಟೆಗೆ ಬಿಡುತ್ತಾರೆ ಎಂದಿಟ್ಟುಕೊಳ್ಳೋಣ. ಅದು ಮಾರುಕಟ್ಟೆಗೆ ಬಂದ ದಿನವೇ ಮಾರುತಿ ಕಂಪನಿಯ ಇಂಜಿನಿಯರ್ ಒಬ್ಬ ಟಾಟಾದವರ ಕಾರನ್ನು ಬಿಚ್ಚಿ ಅದನ್ನು ಹೇಗೆ ಮಾಡಿದ್ದಾರೆ ಎಂದು ಅಧ್ಯಯನ ಮಾಡಿ, ಅವರೂ ಅಂತಹದೇ ಕಾರನ್ನು, ಅಷ್ಟೇ ಖರ್ಚಿನಲ್ಲಿ ತಯಾರಿಸಲು ಅಷ್ಟೇನೂ ಕಷ್ಟವಾಗುವುದಿಲ್ಲ. ಇದನ್ನು ರಿವರ್ಸ್ ಇಂಜಿನಿಯರಿಂಗ್ ಎನ್ನುತ್ತಾರೆ. ಆದರೆ ಟಾಟಾದವರಿಗೆ ತಮ್ಮ ಕಾರನ್ನು ತಮ್ಮ ಅನುಮತಿಯಿಲ್ಲದೆ ಬೇರೆ ಯಾರೂ ನಕಲಿ ಮಾಡಬಾರದು ಎಂಬಂತಹ ಕಾನೂನಿನ ರಕ್ಷಣೆ ಇಲ್ಲದೆ ಹೋದರೆ, ಮಾರುತಿಯವರು ಟಾಟಾದವರ ಕಾರನ್ನೆ ನಕಲು ಮಾಡಿ ಅವರಿಗೇ ಚಳ್ಳೆಹಣ್ಣು ತಿನ್ನಿಸಿಬಿಡಬಹುದು. ಆಗ ಟಾಟಾದವರು ಸಂಶೋಧನೆಗೆಂದು ಖರ್ಚು ಮಾಡಿದ ಹಣ ಎಂದಿಗೂ ವಾಪಸು ಬರುವುದಿಲ್ಲ. ಎಲ್ಲರೂ ಹೀಗೇ ಮಾಡಿಬಿಟ್ಟರೆ ಹೊಸಹೊಸ ಸಂಶೋಧನೆಗಳನ್ನು ಮಾಡಲು ಉತ್ತೇಜನದ ವಾತಾವರಣ ಇರುವುದಿಲ್ಲ ಎಂದೇ ಸರ್ಕಾರಗಳು ಈ ಪೇಟೆಂಟ್ ಕಾನೂನುಗಳನ್ನು ಜಾರಿಗೆ ತಂದಿರುವುದು. ಪೇಟೆಂಟ್ ಕಾನೂನು ಮೂಲಸಂಶೋಧಕರಿಗೆ 20 ವರ್ಷಗಳ ಕಾಲ ಹಕ್ಕುಸ್ವಾಮ್ಯ ನೀಡಿರುತ್ತದೆ. ಪೇಟೆಂಟ್ ಅವಧಿ ಮುಗಿದ ನಂತರ ಯಾರು ಬೇಕಾದರೂ ಅದನ್ನು ನಕಲಿ ಮಾಡಲು ಸ್ವತಂತ್ರರು. ಪೇಟೆಂಟ್ ಆದ ಸಂಶೋಧನೆಯ ಪ್ರತಿ ವಿವರವೂ ಸಾರ್ವಜನಿಕವಾಗಿ ಮೊದಲನೆ ದಿನದಿಂದಲೆ ಲಭ್ಯ ಇದ್ದರೂ, ಅವಧಿಗಿಂತ ಮೊದಲೆ ಅದನ್ನು ನಕಲು ಮಾಡಬೇಕೆಂದರೆ ಅದಕ್ಕೆ ಮೂಲ ಕಂಪನಿ/ವ್ಯಕ್ತಿಯ ಅನುಮತಿ ಬೇಕು. ಅಂತರರಾಷ್ಟ್ರೀಯ ವಾಣಿಜ್ಯ ಒಪ್ಪಂದಗಳ ಪ್ರಕಾರ, ಒಂದು ದೇಶದಲ್ಲಿ ಮಾಡಿಕೊಂಡ ಪೇಟೆಂಟ್‌ಗೆ ಬೇರೆ ದೇಶಗಳಲ್ಲೂ ರಕ್ಷಣೆ ಇರುತ್ತದೆ.

ಏಡ್ಸ್ ರೋಗದ ಔಷಧಿಗಳು ಈಗಲೂ ತುಟ್ಟಿಯಾಗಿಯೇ ಇರಲು ಈ ಪೇಟೆಂಟ್‌ಗಳೇ ಕಾರಣ. ಏಡ್ಸ್ ರೋಗಕ್ಕೆ ಅಗತ್ಯವಾದ ಮಾತ್ರೆಗಳನ್ನು ಅಮೇರಿಕದ ಫೈಜರ್, ಗ್ಲ್ಯಾಕ್ಸೊಸ್ಮಿತ್‌ಕ್ಲೈನ್, ಮರ್ಕ್ ಮುಂತಾದ ಕಂಪನಿಗಳು ಅಭಿವೃದ್ಧಿ ಪಡಿಸಿ, ಅವುಗಳನ್ನು ಪೇಟೆಂಟ್ ಮಾಡಿಸಿಕೊಂಡು, ಆ ಔಷಧಗಳನ್ನು ತಾವು ಮಾತ್ರ ತಯಾರಿಸುತ್ತ ತಮಗಿಷ್ಟ ಬಂದ ಬೆಲೆಗೆ ಮಾರುತ್ತಿದ್ದಾರೆ. ಆದರೆ ಭಾರತದ ರ್‍ಯಾನ್‌ಬಾಕ್ಸಿ, ರೆಡ್ಡಿ ಲ್ಯಾಬ್ಸ್‌ನಂತಹ ಫಾರ್ಮಸ್ಯೂಟಿಕಲ್ಸ್ ಕಂಪನಿಗಳು ಈ ಔಷಧಗಳನ್ನು ವಿದೇಶಿ ಕಂಪನಿಗಳ ಕಾಲು ಭಾಗದ ಬೆಲೆಗೆ ತಯಾರಿಸಬಹುದು! ಆದರೆ ಆ ಔಷಧಿಗಳ ಮೇಲಿನ ಪೇಟೆಂಟ್‌ಗಳಿಂದಾಗಿ ಇವರು ಹಾಗೆ ಮಾಡಲಾಗದು.

ಆದರೆ ಔಷಧಿ ಎನ್ನುವುದು ಕಾರಿನಂತಹ ಲಕ್ಷುರಿ ವಸ್ತು ಅಲ್ಲವಲ್ಲ? ಜೀವದ ಪ್ರಶ್ನೆ ಬಂದಾಗ ಪೇಟೆಂಟ್ ಅನ್ನು ಎಷ್ಟೆಂದು ಪಾಲಿಸುವುದು? ಇನ್ನು, ಏಡ್ಸ್ ಔಷಧಗಳು ಕಾಯಿಲೆಪೀಡಿತರ ಕೈಗೆಟುಕುವಂತೆ ಮಾಡುವಲ್ಲಿ ಸರ್ಕಾರಗಳೇ ನೇರ ಪಾತ್ರ ವಹಿಸುತ್ತಿವೆ. ಹಾಗಾಗಿಯೆ, ಥಾಯ್‌ಲ್ಯಾಂಡ್ ಮತ್ತು ಬ್ರೆಜಿಲ್ ದೇಶಗಳು ಇತ್ತೀಚೆಗೆ ತಾನೆ ಕೆಲವು ಏಡ್ಸ್ ಔಷಧಿಗಳ ಪೇಟೆಂಟ್ ಅನ್ನು ಅತಿಕ್ರಮಿಸಿ ಯಾರು ತಮಗೆ ಆ ಔಷಧಿಗಳನ್ನು ಅಗ್ಗವಾಗಿ ತಯಾರಿಸಿಕೊಡಬಲ್ಲರೊ ಅವರಿಂದ ಕೊಳ್ಳಲು ಆರಂಭಿಸುತ್ತಿವೆ. ಥಾಯ್‌ಲ್ಯಾಂಡ್ ತನ್ನ ದೇಶದ ಪಬ್ಲಿಕ್ ಸೆಕ್ಟರ್ ಕಂಪನಿಯಿಂದ ಈ ಔಷಧಿಯನ್ನು ಅರ್ಧ ಖರ್ಚಿನಲ್ಲಿ ತಯಾರಿಸಿಕೊಳ್ಳುವುದಾಗಿ ಘೋಷಿಸಿದೆ. ಬ್ರೆಜಿಲ್ ಈಗಾಗಲೆ ಭಾರತದ ರ್‍ಯಾನ್‌ಬಾಕ್ಸಿ ಫಾರ್ಮಸ್ಯೂಟಿಕಲ್ಸ್‌ನಿಂದ ಏಡ್ಸ್ ಔಷಧಿ ಗುಳಿಗೆಗಳನ್ನು ಕೊಳ್ಳುತ್ತಿದೆ.

ಈ ಸುದ್ದಿ ಮತ್ತು ಔಷಧ ಪ್ರಪಂಚದಲ್ಲಿನ ಇತ್ತೀಚಿನ ಕೆಲವು ಬೆಳವಣಿಗೆಗಳು ರ್‍ಯಾನ್‌ಬಾಕ್ಸಿ, ರೆಡ್ಡೀಸ್ ನಂತಹ ಭಾರತದ ದೊಡ್ಡ ಔಷಧ ತಯಾರಿಕಾ ಕಂಪನಿಗಳಿಗೆ ನಿಜಕ್ಕೂ ಆಶಾದಾಯಕವಾದವು. ಏಡ್ಸ್ ಹೆಮ್ಮಾರಿಯಿಂದಾಗಿ ಕೆಲವು ದೇಶಗಳು ತಾವು ಪೇಟೆಂಟ್‌ಗಳನ್ನು ಕೇರ್ ಮಾಡುವುದಿಲ್ಲ ಎಂದು ಹೇಳುತ್ತಿರುವುದು ಭಾರತದ ಈ ಕಂಪನಿಗಳಿಗೆ ಹೊಸಹೊಸ ಬಾಗಿಲುಗಳನ್ನು ತೆರೆಯಲಿದೆ. ಈಗಿನ ಸದ್ಯದ ಸ್ಥಿತಿಯಲ್ಲೂ ಈ ಕಂಪನಿಗಳೇನೂ ಸಣ್ಣಮಟ್ಟದ ಕಂಪನಿಗಳಲ್ಲ. ರ್‍ಯಾನ್‌ಬಾಕ್ಸಿಯ ಈ ವರ್ಷದ ಆದಾಯ 6536 ಕೋಟಿ ರೂಪಾಯಿ ಆಗಿದ್ದರೆ, ಡಾ|| ರೆಡ್ಡೀಸ್ ನವರದು 6313 ಕೋಟಿ! ವರ್ಷದಿಂದ ವರ್ಷಕ್ಕೆ ಇವುಗಳ ಆದಾಯ ಬೆಳೆಯುತ್ತಲೆ ಹೋಗುತ್ತಿದೆ. ಹಾಗೆಯೆ ಕೆಲವು ಅತಿ ಬೆಲೆಯ ಔಷಧಿಗಳ ಪೇಟೆಂಟ್ ಎಕ್ಸ್‌ಪೈರ್ ಆಗುತ್ತಿರುವುದು, ಜನರಿಕ್ ಡ್ರಗ್ಸ್ ತಯಾರಿಸುವ ಈ ಕಂಪನಿಗಳ ಭವಿಷ್ಯವನ್ನು ಇನ್ನೂ ಉಜ್ವಲಗೊಳಿಸಲಿದೆ.

ಅಮೇರಿಕದ ಜನತೆ ತಮ್ಮ ಔಷಧಗಳಿಗೆಂದು ಒಂದು ವರ್ಷದಲ್ಲಿ ಖರ್ಚು ಮಾಡುವ ಹಣ 11000 ಶತಕೋಟಿ ರೂಪಾಯಿಗಳು!!! (275 ಶತಕೋಟಿ ಡಾಲರ್‍‍‌ಗಳು.) ಇದರಲ್ಲಿನ ಬಹುಪಾಲು ದುಬಾರಿ ಬೆಲೆಯ ಪೇಟೆಂಟೆಡ್ ಔಷಧಿಗಳಿಗೇ ಹೋಗುತ್ತದೆ. ಐಟಿ ಕ್ಷೇತ್ರದಲ್ಲಿನ ಭಾರತದ ಕೊಡುಗೆಯಿಂದ ಹೆಚ್ಚಿನ ಲಾಭ ಪಡೆದುಕೊಳ್ಳುತ್ತಿರುವವರೇನೊ ಅಮೇರಿಕದ ದೊಡ್ಡ ದೊಡ್ಡ ಕಂಪನಿಗಳು. ಇಲ್ಲಿನ ಜನಸಾಮಾನ್ಯರಿಗೆ ಅದರ ನೇರ ಲಾಭ ಅಷ್ಟೇನೂ ಇಲ್ಲ. ಹೇಳಬೇಕೆಂದರೆ ಔಟ್‌ಸೋರ್ಸಿಂಗ್‌ನಿಂದಾಗಿ ಕೆಲವರು ತಮ್ಮ ಕೆಲಸಗಳನ್ನೆ ಕಳೆದುಕೊಂಡಿರಬೇಕು. ಹಾಗಾಗಿಯೆ ಇಲ್ಲಿನ ರಾಜಕಾರಣಿಗಳು ಭಾರತಕ್ಕೆ ಮಾಡುವ ಔಟ್‌ಸೋರ್ಸಿಂಗ್ ಅನ್ನು ಆಗಾಗ ಗುಮ್ಮನ ತರಹ ಮುಂದಕ್ಕೆ ಮಾಡುತ್ತಿರುತ್ತಾರೆ. ಆದರೆ, ಜನರಿಕ್ (ಮುಕ್ತವಾಗಿ ತಯಾರಿಸಬಹುದಾದ, ಹಕ್ಕುಸ್ವಾಮ್ಯವಿಲ್ಲದ) ಔಷಧಗಳನ್ನು ತಯಾರಿಸುವ ಭಾರತದ ಔಷಧ ಕಂಪನಿಗಳಿಂದ ನೇರ ಲಾಭ ಪಡೆಯುವವರು ಮಾತ್ರ ಅಮೇರಿಕದ ಸಾಮಾನ್ಯ ಜನತೆ!!

ಇದಕ್ಕೆ ಇಲ್ಲಿದೆ ನೋಡಿ ಒಂದು ಉದಾಹರಣೆ: ಆಂಬಿಯನ್ ಎನ್ನುವುದು ನಿದ್ರಾಹೀನತೆ ಇರುವವರು ತೆಗೆದುಕೊಳ್ಳುವ ಜನಪ್ರಿಯ ಔಷಧ ಗುಳಿಗೆ. ಅದರ ಒಂದು ತಿಂಗಳ ಪ್ರಿಸ್ಕ್ರಿಪ್ಷನ್‌ಗೆ ಈಗ ತಗಲುತ್ತಿರುವ ಖರ್ಚು 5000 ರೂಪಾಯಿಗಳು. ಆದರೆ ಇದರ ಪೇಟೆಂಟ್ ಈ ವರ್ಷಕ್ಕೇ ಕೊನೆಯಾಗಲಿದೆ. ಹಕ್ಕುಸ್ವಾಮ್ಯವಿಲ್ಲದ ಜನರಿಕ್ ಔಷಧವಾಗಿ ಈ ಗುಳಿಗೆ ಸಿಗಲು ಆರಂಭವಾದೊಡನೆ ಅದಕ್ಕೆ ತಗಲುವ ಮಾಸಿಕ ವೆಚ್ಚ 1800 ರೂಪಾಯಿಗೆ ಇಳಿಯಲಿದೆ! ಆಂಬಿಯನ್ ಜೊತೆಜೊತೆಗೆ ರಕ್ತದೊತ್ತಡದ ನಾಲ್ಕು ಔಷಧಗಳ ಮತ್ತು ಇನ್ನೂ ಹಲವು ಔಷಧಗಳ ಹಕ್ಕುಸ್ವಾಮ್ಯ ಇದೇ ವರ್ಷ ಕೊನೆಯಾಗಲಿದೆ. ಮುಂದಿನ ಐದು ವರ್ಷಗಳಲ್ಲಿ ಹೀಗೆ ಹಕ್ಕುಸ್ವಾಮ್ಯ ಕಳೆದುಕೊಂಡು ಜನರಿಕ್ ಔಷಧ ರೂಪದಲ್ಲಿ ಲಭ್ಯವಾಗಲಿರುವ ಔಷಧಗಳ ಸಂಖ್ಯೆ ಸುಮಾರು 65!

ಇನ್ನು, ಇದೆಲ್ಲದರಿಂದ ನಮಗೇನು ಲಾಭ, ಅಂತೀರ? ಔಷಧ ಕ್ಷೇತ್ರದಲ್ಲಿ ಅಷ್ಟೇನೂ ದೊಡ್ಡಮಟ್ಟದ ಸಂಶೋಧನೆಗಳನ್ನು ಮಾಡಿ ದೊಡ್ಡದೊಡ್ಡ ಔಷಧಗಳನ್ನು ಕಂಡುಹಿಡಿಯಲಾಗದೆ ಇದ್ದರೂ ಜನರಿಕ್ ಔಷಧಗಳನ್ನು ಅಗ್ಗದ ಬೆಲೆಯಲ್ಲಿ ತಯಾರಿಸಲು ನಮ್ಮ ಭಾರತದ ಔಷಧ ಕಂಪನಿಗಳು ಸಮರ್ಥರು. ಈ ಮೇಲಿನ ಬೆಳವಣಿಗೆಗಳಿಂದಾಗಿ ಇವರ ಉತ್ಪಾದನೆ, ಆದಾಯ ಮತ್ತು ಉದ್ಯೋಗಸೃಷ್ಟಿ ಜೊತೆಜೊತೆಗೆ ಬೆಳೆಯಲಿದೆ. ಆ ಲಾಭವನ್ನು ಅವರು ಬರಲಿರುವ ದಿನಗಳಲ್ಲಿ R&D ಗೂ ಹಾಕಬಹುದು. ಇನ್ನು, ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳಾ ಎನ್ನುವ ಹಳೆಯ ಕಾಲದ ಗಾದೆಯಂತೆ, ಅಮೇರಿಕದಲ್ಲಿ ಅಗ್ಗವಾದ ಪರಿಣಾಮಕಾರಿ, ಆಧುನಿಕ ಔಷಧಿಗಳು ನಮ್ಮ ದೇಶದ ಜನರಿಗೂ ಕೈಗೆಟುಕುವ ಬೆಲೆಗೆ ಸಿಗಬಹುದು.

ಈ ಔಷಧಿಗಳ ವಿಚಾರದಲ್ಲಿ ಹೇಗೆ ನೋಡಿದರೂ ನಮಗೆ ಲಾಭ ಇದೆ.

ಆದರೆ ಈ ಲಾಭವನ್ನು ನಮ್ಮ ಔಷಧ ಕಂಪನಿಗಳು ಮತ್ತೊಂದು ಎತ್ತರಕ್ಕೆ ಏರಿ ಹೋಗಲು ಬಳಸಿಕೊಳ್ಳುತ್ತವೊ ಅಥವ ಐಟಿ ಕ್ಷೇತ್ರದ ದೊಡ್ಡವರು R&D ಗೆ ಹೆಚ್ಚಿನ ದುಡ್ಡು ಹಾಕದೆ ದಿನತಳ್ಳುತ್ತಿರುವಂತೆ ಇವರೂ ರಿಸ್ಕ್ ತೆಗೆದುಕೊಳ್ಳದೆ ಹೋಗಿಬಿಡುತ್ತಾರೊ ಎನ್ನುವುದೆ ಮುಂದಿನ ಕುತೂಹಲ...

Aug 9, 2007

ಜೀವಜಲಕ್ಕಾಗಿ ೧೬ ದೇಶಗಳಲ್ಲಿ ಓಡುತ್ತಿರುವ ಕೋಲಾರದ ಸುನೀಲ್...

(ವಿಕ್ರಾಂತ ಕರ್ನಾಟಕ - ಆಗಸ್ಟ್ 17, 2007ರ ಸಂಚಿಕೆಯಲ್ಲಿನ ಬರಹ)

  • ನಾವು ನೀರಿನಂತೆ ಓಡುತ್ತೇವೆ. ನೀರಿಗಾಗಿ ಓಡುತ್ತೇವೆ.
  • ನಮ್ಮ ಭೂಮಿಯ ಮೇಲಿನ ಪ್ರತಿ ಐವರಲ್ಲಿ ಒಬ್ಬರನ್ನು ಕಾಡುತ್ತಿರುವ ಸಮಸ್ಯೆಯ ತುರ್ತು-ಸಂದೇಶವನ್ನು ನಾವು ಸಾಗುತ್ತಿರುವ ಪ್ರತಿ ಊರಿನ ಪ್ರತಿಯೊಬ್ಬರಿಗೂ ತಲುಪಿಸಲು ನಾವು ಓಡುತ್ತಿದ್ದೇವೆ.
  • ಶುದ್ಧ ಕುಡಿಯುವ ನೀರು ಇಲ್ಲದೆ ಪ್ರತಿದಿನವೂ ಸಾಯುತ್ತಿರುವ ಮಕ್ಕಳ, ಅಪ್ಪಅಮ್ಮಂದಿರ, 6000 ಮನುಷ್ಯರ ನೆನಪಿಗಾಗಿ ನಾವು ಓಡುತ್ತಿದ್ದೇವೆ.
  • ನಾವು ಓಡುತ್ತಿರುವುದೇಕೆಂದರೆ, ನಮ್ಮ ಉಳಿವಿಗೆ ಅವಶ್ಯವಾದ ನೀರು, ಮತ್ತು ಸಮಯ, ನಮ್ಮ ಕೈಮೀರಿ ಹೋಗುತ್ತಿದೆ.
    ಸಂಕಷ್ಟದೊಂದಿಗೆ ಆರಂಭವಾಗಿ ಭರವಸೆಯೊಂದಿಗೆ ಮುಗಿಯುವ ಕತೆ ಹೇಳಲು ನಾವು ಓಡುತ್ತಿದ್ದೇವೆ.
  • ಈ ಕತೆಯಲ್ಲಿ ನಿಮ್ಮನ್ನೂ ಸೇರಿಸಿಕೊಳ್ಳಲು ಓಡುತ್ತಿದ್ದೇವೆ. ಸಮಸ್ಯೆಗೆ ಪರಿಹಾರ ನೀವೇ ಆಗಿದ್ದೀರಿ. ಬದ್ಧತೆ ಒಂದೆ ನಮಗಿರುವ ಅಡ್ಡಿ.
  • ಇಪ್ಪತ್ತು ವರ್ಷಗಳ ನಂತರ ವಿಶ್ವದ ಬೇರೆಬೇರೆ ಕಡೆಯ 20 ಕೋಟಿ ಜನರಿಗೆ ನೀರು ತರಲು, ಅಂದರೆ ಜೀವ ತರಲು, ನಾವು ಒಟ್ಟಾಗಿ ಕೈಜೋಡಿಸಿದ್ದೇವೆ; ಎಂಬಂತೆ ಮುಗಿಯುವ ಕತೆಯನ್ನು ಹೇಳಲು ನಾವು ಓಡುತ್ತೇವೆ.
  • ನಾವು ನಮ್ಮೊಂದಿಗೆ ಒಯ್ಯುವ ಬಟಾನ್ ಮೇಲೆ ಬರೆದಿರುವ ಧನ್ಯವಾದಪೂರ್ವಕ ಪ್ರಾರ್ಥನೆ ಹೀಗಿದೆ: "ನೀರೆ ಜೀವ;" ಅದಕ್ಕಾಗಿ ನಾವು ಓಡುತ್ತಿದ್ದೇವೆ.
  • "ನಮ್ಮ ಬಾಯಾರಿಕೆಯನ್ನು ತಣಿಸುವ ಮತ್ತು ನಮಗೆ ಶಕ್ತಿ ನೀಡುವ ವಿಶ್ವದ ಎಲ್ಲಾ ನೀರಿಗೂ ನಾವು ಧನ್ಯವಾದ ಅರ್ಪಿಸುತ್ತೇವೆ. ಮಳೆ ಮತ್ತು ಜಲಪಾತಗಳು, ಇಬ್ಬನಿ ಮತ್ತು ತೊರೆಗಳು, ನದಿಗಳು ಮತ್ತು ಸಾಗರಗಳು; ಹೀಗೆ ಅನೇಕ ರೂಪಗಳಲ್ಲಿರುವ ನೀರಿನ ಬಲ ನಮಗೆ ಗೊತ್ತು. ನೀರಿನ ಚೈತನ್ಯಕ್ಕೆ ಒಮ್ಮನಸ್ಸಿನಿಂದ ನಮ್ಮ ಶುಭಕಾಕಾಮನೆಗಳನ್ನು ಮತ್ತು ಧನ್ಯವಾದಗಳನ್ನು ಅರ್ಪಿಸುತ್ತೇವೆ.
  • ಈಗ ನಮ್ಮ ಮನಸ್ಸುಗಳು ಒಂದಾಗಿದೆ."

ರಾತ್ರಿ ಹಗಲೆನ್ನದೆ, ಪ್ರತಿ ಒಂದೆರಡು ಗಂಟೆಗಳಿಗೆ ತಮ್ಮ ಕೈಯಲ್ಲಿಯ ಬಟಾನ್ (ರಿಲೇ ಓಟದಲ್ಲಿ ಕೊಡುವ ದಂಡ) ಅನ್ನು ಇನ್ನೊಬ್ಬರಿಗೆ ದಾಟಿಸುತ್ತ, ಜನರ ಸಮ್ಮುಖದಲ್ಲಿ ಈ ಮೇಲಿನ ಸಂದೇಶವನ್ನು ಗಟ್ಟಿಯಾಗಿ ಹೇಳಿ, ಇಪ್ಪತ್ತು ಜನ ಓಟಗಾರರು ದಿನದ ಇಪ್ಪತ್ತನಾಲ್ಕು ಗಂಟೆಗಳೂ ಸರದಿಯ ಪ್ರಕಾರ ಓಡುತ್ತಿದ್ದಾರೆ. ಈ ಇಪ್ಪತ್ತು ಜನ ಓಟಗಾರರಲ್ಲಿ 23 ವರ್ಷದ ಅಮೇರಿಕನ್ ಹುಡುಗಿ ಎಲ್ಲರಿಗಿಂತ ಚಿಕ್ಕವಳು. ಆಕೆಯ ಸದ್ಯದ ಕರ್ಮಭೂಮಿ ಶ್ರೀಲಂಕ. 60 ವರ್ಷದ ಅಮೇರಿಕನ್ ಒಬ್ಬರು ತಂಡದಲ್ಲಿನ ಹಿರಿಯ ಓಟಗಾರ. 57 ವರ್ಷದ ಇಬ್ಬರು ಓಡುತ್ತಿದ್ದಾರೆ: ಒಬ್ಬರು ಅಮೇರಿಕನ್ ಮಹಿಳೆ ಮತ್ತು ಇನ್ನೊಬ್ಬರು ಹಾಲೆಂಡಿನ ವ್ಯಕ್ತಿ. ಮಿಕ್ಕವರೆಲ್ಲ 30 ರ ಅಸುಪಾಸಿನವರು.

ಒಟ್ಟು ಹನ್ನೆರಡು ದೇಶಗಳ ಇಪ್ಪತ್ತು ಓಟಗಾರರು, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತೊಡಗಿಸಿಕೊಂಡಿರುವ ಅಮೇರಿಕದಲ್ಲಿನ ಬ್ಲೂ ಪ್ಲಾನೆಟ್ ರನ್ ಫೌಂಡೇಷನ್ (blueplanetrun.org) ಆಯೋಜಿಸಿರುವ 95 ದಿಗಳ ನಿರಂತರ ನೀಲ ಗ್ರಹ ಓಟದಲ್ಲಿ ಓಡುತ್ತಿದ್ದಾರೆ. ತಂಡದಲ್ಲಿ ಒಬ್ಬ ಭಾರತೀಯನೂ ಇದ್ದಾನೆ. ಆತ ಕನ್ನಡಿಗನೆ. ನಮ್ಮ ಕೋಲಾರದ ಬಳಿಯ ಹೊಗರಿ ಗ್ರಾಮದ ಯುವಕ. ಹೇಳಬೇಕೆಂದರೆ, ಆತ ಇನ್ನೂ ಮದುವಣಿಗ! ಮದುವೆಯಾದ ಇಪ್ಪತ್ತು ದಿನಗಳಿಗೇ ಓಡಲು ಪ್ರಾರಂಭಿಸಿದ್ದಾನೆ, ಸುನೀಲ್ ಜಯರಾಜ್.


ಕುಡಿಯುವ ನೀರಿನ ಸಮಸ್ಯೆ, ವಿಶೇಷವಾಗಿ ಬಯಲುಸೀಮೆಗಳಲ್ಲಿ ಇವತ್ತಿನದಲ್ಲ. ಜನ ಹೆಚ್ಚಾದಷ್ಟೂ ಈ ಸಮಸ್ಯೆ ಹೆಚ್ಚಾಗುತ್ತದೆ. ಇಪ್ಪತ್ತು ವರ್ಷಗಳ ಹಿಂದೆ ನಮ್ಮ ಹಳ್ಳಿಯ ಕತೆಯನ್ನೇ ತೆಗೆದುಕೊಂಡರೆ, ಬೆಳಕು ಹರಿದ ತಕ್ಷಣ ನಮ್ಮ ಹಳ್ಳಿಯ ಹೆಣ್ಣುಮಕ್ಕಳು ಬಿಂದಿಗೆ ಹಿಡಿದುಕೊಂಡು ಊರಿನ ಹೊರವಲಯದಲ್ಲಿದ್ದ ಬಾವಿಯತ್ತ ಹೊರಡುತ್ತಿದ್ದರು. ಅದು ಕಲ್ಲುಕಟ್ಟಡದ ಬಾವಿ. ಅದಕ್ಕೆ ಮೆಟ್ಟಲುಗಳಿದ್ದವು. ಆ ಬಾವಿಯವರು ತೋಟ ಮಾಡುತ್ತಿದ್ದಿದ್ದರಿಂದ ಯಾವಾಗಲೂ ನೀರು ಇಪ್ಪತ್ತುಮುವ್ವತ್ತು ಅಡಿ ಕೆಳಗೇ ಇರುತ್ತಿತ್ತು. ಪ್ರತಿದಿನ ಮನೆಗೆ ಬೇಕಾದ ನೀರನ್ನು ಅಷ್ಟು ದೂರದಿಂದ ಎರಡು ಮೂರು ಸಲ ಹೋಗಿ ಹೊತ್ತು ತರುತ್ತಿದ್ದರು. ಇದು ಸವರ್ಣೀಯರ ಕತೆ. ಇನ್ನು ದಲಿತರದು ಬೇರೆಯದೇ ಬಾವಿ. ಒಮ್ಮೊಮ್ಮೆ ಈ ಬಾವಿಗಳಿಗೆ ಯಾರಾದರೂ ಹಾರಿ ಆತ್ಮಹತ್ಯೆ ಮಾಡಿಕೊಂಡರೆ ಆ ಬಾವಿಯ ನೀರನ್ನು ಕಾಲಿ ಮಾಡುವ ತನಕ ಇನ್ನೂ ದೂರದ ಬಾವಿಗಳತ್ತ ನೀರೆಯರ ಪಯಣ ಸಾಗುತ್ತಿತ್ತು.

ಈ ಪರಿಸ್ಥಿತಿ ಸುಧಾರಿಸಿದ್ದು ನಜೀರ್‌ಸಾಬ್ ಬೋರ್‌ವೆಲ್‌ಗಳು ಬಂದ ಮೇಲೆಯೆ. ಊರಿನ ಮಧ್ಯೆ ಬೋರ್‌ವೆಲ್ ಹಾಕಿಸಿದರು. ನೀರೇನೊ ಸಿಕ್ಕಿತು; ಆದರದು ಉಪ್ಪು ನೀರು. ಕುಡಿಯುವ ನೀರಿಗೆ ಹಳೆಯ ಪರಿರಿಸ್ಥಿತಿಯೆ ಮುಂದುವರೆಯಿತು. ಮತ್ತೆರಡು-ಮೂರು ವರ್ಷದ ನಂತರ ಇನ್ನೊಂದು ಕೊಳವೆ ಬಾವಿ ಕೊರೆಯಿಸಿ, ಕೈಪಂಪ್ ಹಾಕಿಸಿತು ಸರ್ಕಾರ. ಅದರಲ್ಲಿ ಸಿಹಿನೀರು ಸಿಕ್ಕಿತು. ಇದು ಸವರ್ಣಿಯರಿಗೆ ಮೀಸಲು. ವರ್ಷಗಳ ನಂತರ ದಲಿತರಿಗೆಂದೇ ಇನ್ನೊಂದು ಬೋರ್‌ವೆಲ್ ಹಾಕಿಸಿದರು.

ನಮ್ಮ ರಾಜ್ಯದಲ್ಲಿ ಕೆಲವು ಕಡೆ ಪರಿಸ್ಥಿತಿ ಸುಧಾರಿಸುತ್ತ ಹೋಗಿದ್ದಕ್ಕೆ ಉದಾಹರಣೆಯಾಗಿ ಹತ್ತಾರು ವರ್ಷಗಳ ಹಿಂದೆ ನಮ್ಮೂರಿಗೆ ಓವರ್‌ಹೆಡ್‍ ಟ್ಯಾಂಕ್ ಬಂತು. ದುಡ್ಡಿದ್ದವರು ಮನೆಗಳಿಗೇ ನಲ್ಲಿ ಹಾಕಿಸಿಕೊಂಡರು. ಮಿಕ್ಕವರು ಬೀದಿಯಲ್ಲಿನ ನಲ್ಲಿಗಳ ಮುಂದೆ ಸಾಲು ನಿಂತರು. ಈಗ ಬೋರ್‌ವೆಲ್ ಮೋಟಾರ್ ಕೆಟ್ಟರೂ, ಗ್ರಾಮ ಪಂಚಾಯಿತಿಯವರು ಟ್ಯಾಂಕ್‌ಗಳಲ್ಲಿ ನೀರು ತರಿಸಿ ಜನರ ದಾಹ ಮತ್ತು ಇತರ ಅಗತ್ಯಗಳನ್ನು ತಣಿಸುತ್ತಾರೆ. ನೀರಿನ ಸಮಸ್ಯೆ ಬಂತೆಂದರೆ, ಇತರ ಎಲ್ಲಾ ಸಮಸ್ಯೆಗಳ ಪ್ರಾಮುಖ್ಯತೆ ಕೆಳಗಿಳಿಯುತ್ತದೆ. ಆದರೆ ಕರ್ನಾಟಕದ ಎಲ್ಲಾ ಕಡೆಯೂ ಸ್ಥಿತಿ ಹೀಗೆ ಸುಧಾರಿಸಿಲ್ಲ. ಸಂಡೂರಿನ ತನ್ನ ಹಳ್ಳಿಯಲ್ಲಿ ಮೈಲು ದೂರದಿಂದ ನೀರು ಹೊತ್ತು ತರುತ್ತಿರುವ ನಾಡೋಜೆ, ಬುರ್ರಕಥ ಈರಮ್ಮನ ಚಿತ್ರ ಇತ್ತೀಚೆಗೆ ತಾನೆ ಪತ್ರಿಕೆಯೊಂದರಲ್ಲಿ ಬಂದಿತ್ತು!

ಬಹುಶಃ ಇಂತಹದೇ ಹಳ್ಳಿಯಿಂದ ಬಂದವರಿರಬೇಕು ಸುನೀಲ್ ಸಹ. ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಿಂದ ಇಂಡಸ್ಟ್ರಿಯಲ್ ಇಂಜಿನಿಯರಿಂಗ್‍ನಲ್ಲಿ ಪದವಿ ಗಳಿಸಿರುವ ಇವರು, ಈಗ "ಜಲಸಂಪನ್ಮೂಲ ನಿರ್ವಹಣೆ" ವಿಷಯದ ಮೇಲೆ ಅಮೇರಿಕದ ಮಿಷಿಗನ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್.ಡಿ. ಮಾಡುತ್ತಿದ್ದಾರೆ. ಬಿಹಾರ್, ಬಾಂಗ್ಲಾದೇಶ, ನೇಪಾಳ; ಇವು ತಮ್ಮ ಥೀಸಿಸ್‌ಗಾಗಿ ಅವರು ಕೆಲಸ ಮಾಡುತ್ತಿರುವ ಸ್ಥಳಗಳು. ಹಾಗೆಯೆ ಕೋಲಾರದ "ಸಮಗ್ರ ಗ್ರಾಮೀಣ ಅಭ್ಯುದಯ ಕೇಂದ್ರ" (CFIRD) ದ ಸ್ಥಾಪಕ ಸದಸ್ಯರೊಬ್ಬರಾಗಿ, ಅದರ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಈಗಾಗಲೆ ಮುಕ್ಕಾಲು ಪಾಲು ಓಟವನ್ನು ಪೂರೈಸಿರುವ ಬ್ಲೂ ಪ್ಲಾನೆಟ್ ರನ್ ತಂಡ, ಈಗ ಕಡೆಯ ದಿಗಳ ಓಟವನ್ನು ಅಮೇರಿಕದಲ್ಲಿ ಓಡುತ್ತಿದೆ. ಜೂನ್ 1 ರಂದು ನ್ಯೂಯಾರ್ಕಿನ ವಿಶ್ವಸಂಸ್ಥೆಯ ಕಟ್ಟಡದಿಂದ ಆರಂಭವಾದ ಓಟ, ನಂತರ ಐರ್‌ಲ್ಯಾಂಡ್, ಇಂಗ್ಲೆಂಡ್, ಫ್ರಾನ್ಸ್, ಬೆಲ್ಜಿಯಮ್, ಹಾಲೆಂಡ್, ಜರ್ಮನಿ, ಜೆಕ್ ರಿಪಬ್ಲಿಕ್, ಆಸ್ಟ್ರಿಯ, ಪೋಲೆಂಡ್, ರಷ್ಯ, ಮಂಗೋಲಿಯ, ಚೀನಾ, ಜಪಾನ್‍ಗಳನ್ನೆಲ್ಲ ಸುತ್ತಿಹಾಕಿಕೊಂಡು ಈಗ ಮತ್ತೆ ಅಮೇರಿಕಕ್ಕೆ ಮರಳಿದೆ. ಕೊನೆಯಾಗುವ ಮುಂಚೆ ಕೆನಡಾದಲ್ಲೂ ಓಡಲಿದ್ದಾರೆ. ಒಟ್ಟು 4 ಖಂಡಗಳ, 16 ದೇಶಗಳನ್ನು ಒಳಗೊಂಡ, 24000 ಕಿ.ಮೀ.ಗಳನ್ನು ಸೆಪ್ಟೆಂಬರ್ 4 ರಂದು ಈ ಓಟಗಾರರು ಪೂರೈಸಲಿದ್ದಾರೆ. ಈಗಾಗಲೆ ಸುಮಾರು 18 ಸಾವಿರ ಕಿ.ಮೀ. ಓಟ ಮುಗಿದಿದೆ. ಓಡುವ ದಾರಿಯಲ್ಲಿ ನೀರಿನ, ಅದರಲ್ಲೂ ಕುಡಿಯುವ ನೀರಿನ ಬಗ್ಗೆ ಜಾಗೃತಿ ಮತ್ತು ಹಣಸಂಗ್ರಹಣೆ ಮಾಡುವುದು ಓಟದ ಮುಖ್ಯ ಉದ್ದೇಶ. ಸುಮಾರು 200 ಕೋಟಿ ರೂಪಾಯಿಗಳನ್ನು ಈ 95 ದಿನಗಳ ಓಟದಿಂದ ಒಟ್ಟುಗೂಡಿಸಬೇಕು ಎನ್ನುವುದು ಫೌಂಡೇಷನ್‌ನ ಗುರಿ. ಕನ್ನಡಿಗರದೇ ಆದ ಅಮೇರಿಕದಲ್ಲಿನ ಡಾ ನಾಗರಾಜ್ ಫೌಂಡೇಷನ್‍ನವರು ಸುನೀಲ್ ಓಡಲಿರುವ ಪ್ರತಿ ಮೈಲಿಗೆ ಒಂದು ನೂರು ಡಾಲರ್‌ನಂತೆ, ಒಟ್ಟು 40 ಲಕ್ಷ ರೂಪಾಯಿಗಳನ್ನು ಈಗಾಗಲೆ ಪ್ರಾಯೋಜಿಸಿದ್ದಾರೆ. ವಾರದ ಹಿಂದೆ ಸಿಲಿಕಾನ್ ಕಣಿವೆಯಲ್ಲಿನ ಜೈನ ಮಂದಿರದಲ್ಲಿ ಆಯೋಜಿಸಲಾಗಿದ್ದ ಬಟಾನ್ ಎಕ್ಸ್‌ಚೇಂಜ್ ಕಾರ್ಯಕ್ರಮವೊಂದರಲ್ಲಿಯೆ ನಾಲ್ಕು ಲಕ್ಷ ರೂಪಾಯಿ ಸಂಗ್ರಹವಾಗಿತ್ತು.


ಈ ಓಟದ ವೈಶಿಷ್ಟ್ಯ, ಮೊದಲೆ ಹೇಳಿದಂತೆ ದಿನದ ಇಪ್ಪತ್ತನಾಲ್ಕು ಗಂಟೆಗಳೂ ಓಡುತ್ತಿರುವುದು. ಪ್ರತಿದಿನವೂ 16 ಓಟಗಾರರು ಸರದಿಯ ಪ್ರಕಾರ ಪಾಲ್ಗೊಳ್ಳುತ್ತಾರೆ. ಪ್ರತಿಯೊಬ್ಬರೂ ದಿನವೊಂದಕ್ಕೆ ಸರಾಸರಿ 15-20ಕಿ.ಮೀ. ಓಡುತ್ತಾರೆ; 24 ಗಂಟೆಗಳಲ್ಲಿ ತಂಡ ಸುಮಾರು 350 ಕಿ.ಮೀ. ಓಡಿರುತ್ತದೆ. ಸುನೀಲ್ ಹೇಳುವ ಪ್ರಕಾರ ಈ ಓಟವನ್ನು ಬಹಳ ವ್ಯವಸ್ಥಿತವಾಗಿ, ಯಾವುದೆ ಗೊಂದಲಗಳಿಗೆ ಎಡೆಯಿಲ್ಲದಂತೆ ಆಯೋಜಿಸಿದ್ದಾರೆ. ಅಂದ ಹಾಗೆ, ಈ ಓಟದಲ್ಲಿ ಪಾಲ್ಗೊಳ್ಳಲು ಸುಮಾರು 4000 ಜನ ಇಚ್ಚೆ ವ್ಯಕ್ತಪಡಿಸಿದ್ದರು. ವ್ಯಕ್ತಿಗಳ ಸಮುದಾಯ ಕೆಲಸ ಮತ್ತು ಇತರ ಆಸಕ್ತಿಗಳ ಆಧಾರದ ಮೇಲೆ ಅಂತಿಮವಾಗಿ 20 ಜನರನ್ನು ಆಯ್ಕೆ ಮಾಡಲಾಯಿತು. ಸುನೀಲ್‌ರವರು ಮಾಡುತ್ತಿರುವ ನೀರಿನ ಮೇಲಿನ ಅಧ್ಯಯನ ಮತ್ತು ಸಮಾಜಸೇವಾ ಕೆಲಸಗಳಿಂದಾಗಿ ಆ ಇಪ್ಪತ್ತು ಜನರಲ್ಲಿ ಇವರೂ ಒಬ್ಬರಾಗಲು ಸಾಧ್ಯವಾಯಿತು.

2004 ರಿಂದ ಇಲ್ಲಿಯವರೆಗೆ ಬ್ಲೂ ಪ್ಲಾನೆಟ್ ರನ್ ಫೌಂಡೇಷನ್ ಪ್ರಪಂಚದಾದ್ಯಂತದ 13 ದೇಶಗಳಲ್ಲಿನ ಹಲವಾರು ಎನ್.ಜಿ.ಒ.ಗಳಿಗೆ ಧನಸಹಾಯ ಮಾಡುತ್ತ, ಯೋಜನೆಗಳ ಉಸ್ತುವಾರಿಯನ್ನು ಗಮನಿಸುತ್ತ ಬಂದಿದೆ. ಆಫ್ರಿಕಾ, ದಕ್ಷಿಣ ಅಮೇರಿಕ, ಭಾರತದ ಒರಿಸ್ಸಾ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಇಲ್ಲೆಲ್ಲ, ಈ ಎನ್.ಜಿ.ಒ.ಗಳು 135 ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಒಟ್ಟು ಲಕ್ಷಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಿವೆ. ಎಷ್ಟೋ ಕಡೆ ಒಂದೆರಡು ಲಕ್ಷ ರೂಪಾಯಿಗಳಿಗೆ ಜೀವಮಾನದ ಸಮಸ್ಯೆಗಳು ನಿವಾರಣೆಯಾಗುತ್ತಿವೆ.

ಆಗಸ್ಟ್ ಎರಡರಂದು ಜೈನ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುನೀಲ್ ಬಹಳ ಆಪ್ತವಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅದರಲ್ಲಿ ತಮಾಷೆಯಾಗಿದ್ದದ್ದು ಏನೆಂದರೆ, ಓಟದ ಸಮಯದಲ್ಲಿ ಅವರಿಗೆ ಪ್ರಿಯವಾದ ಉಪ್ಪುಖಾರದ ಊಟಕ್ಕೆ ಖೋತಾ ಆಗಿಬಿಟ್ಟಿರುವುದು! ಕಳೆದ ಆರೇಳು ವರ್ಷಗಳಿಂದ ಪಕ್ಕಾ ಸಸ್ಯಾಹಾರಿಯಾಗಿ ಪರಿವರ್ತನೆಯಾಗಿರುವ ಸುನೀಲ್‌ಗೆ ರಷ್ಯಾದಲ್ಲಿ ಬಹಳ ಕಷ್ಟವಾಯಿತಂತೆ. "ಸಸ್ಯಾಹಾರ ಒದಗಿಸಲು ತೊಂದರೆಯೇನಿಲ್ಲ, ಮೀನು ಮತ್ತು ಕೋಳಿ ಆಗುತ್ತದಲ್ಲ?" ಎಂದರಂತೆ ರಷ್ಯನ್ನರು! ಅಲ್ಲಿ ಊಟ ಬಹಳ ಸಪ್ಪೆಯಾಗಿತ್ತು ಎಂದರು, ಸುನೀಲ್. ರಷ್ಯ, ಚೀನಾ, ಜಪಾನ್‌ನಿಂದ ಮತ್ತೆ ಅಮೇರಿಕಕ್ಕೆ ಮರಳಿದ ಸುನೀಲ್, ಸಿಲಿಕಾನ್ ಕಣಿವೆಯಲ್ಲಿನ ಅನ್ನಸಾಂಬಾರ್ ಹಾಗೂ ಚಪಾತಿಪಲ್ಯಗಳನ್ನು ಸವಿಯುತ್ತ ಖುಷಿಯಾಗಿದ್ದರು!

ಸಮಸ್ಯೆಗಳು ನೂರಾರು; ನೂರಾರು ತೆರನವು. ಕೆಲವುಗಳ ಪರಿಹಾರಕ್ಕಂತೂ ಸ್ವಾರ್ಥವನ್ನೆಲ್ಲ ತ್ಯಜಿಸಿ ಕೆಲಸ ಮಾಡಬೇಕಾಗುತ್ತದೆ. ನಮ್ಮ ಕರ್ನಾಟಕದ ಕತೆಯನ್ನೆ ತೆಗೆದುಕೊಂಡರೆ, ಬರಪೀಡಿತ ಪ್ರದೇಶದ ವಿಸ್ತೀರ್ಣದಲ್ಲಿ ರಾಜಸ್ಥಾನ ಬಿಟ್ಟರೆ ನಮಗೇ ನಂತರದ ಸ್ಥಾನ! ಬ್ಲೂ ಪ್ಲಾನೆಟ್ ಫೌಂಡೇಷನ್‌ನ ನಿರ್ದೇಶಕರಲ್ಲೊಬ್ಬರಾದ ರಾಜೇಶ್ ಷಾ ಹೇಳಿದಂತೆ, ಕುಡಿಯುವ ನೀರಿನ ಸಮಸ್ಯೆಯ ನಿವಾರಣೆಯಲ್ಲಿ ತೊಡಗಿಸಿಕೊಳ್ಳುವುದು ಗ್ಲಾಮರಸ್ ಅಲ್ಲ. ಇಂತಹ ಕೆಲಸದಲ್ಲಿ ತೊಡಗಿಸಿಕೊಂಡ ಸುನೀಲ್ ಮತ್ತು ಕರ್ನಾಟಕದಲ್ಲಿ ಹತ್ತಿಪ್ಪತ್ತು ವರ್ಷಗಳಿಂದ ಮಳೆಕೊಯ್ಲು, ಜಲಪೂರಣ, ಜಲಜಾಗೃತಿ ಮುಂತಾದವುಗಳಲ್ಲಿ ತೊಡಗಿಸಿಕೊಂಡಿರುವ ಶಿವಾನಂದ ಕಳವೆ, ಶ್ರೀ ಪಡ್ರೆ, ದೇವರಾಜ್ ರೆಡ್ಡಿ, ಬೆಂಗಳೂರಿನ ರೈನ್ ವಾಟರ್ ಕ್ಲಬ್‌ನ ವಿಶ್ವನಾಥ್, ತಿಪಟೂರಿನ ಬೈಫ್ ಸಂಸ್ಥೆಯ ಜಿ.ಎನ್.ಎಸ್. ರೆಡ್ಡಿ, ಸೂರಿನ CART ಕೇಂದ್ರದ ರವಿಕುಮಾರ್, ಹಾವೇರಿಯ ಚನ್ನಬಸಪ್ಪ ಕೊಂಬ್ಳಿ, ಮುಂತಾದವರೆಲ್ಲ ನಮ್ಮ ಹೆಮ್ಮೆ ಮಾತ್ರವಲ್ಲ, ಆದರ್ಶಗಳೂ ಆಗಬೇಕು.

ಇದೇ ಸಮಯದಲ್ಲಿ ಜವಾಬ್ದಾರಿಯುತ ಸರ್ಕಾರದ ಜವಾಬ್ದಾರಿಯೂ ಒಂದಿದೆ: ಮಳೆನೀರು ಕೊಯ್ಲು, ಜಲಪೂರಣ ಮುಂತಾದವುಗಳ ಬಗ್ಗೆ ವ್ಯವಸ್ಥಿತವಾಗಿ ಜನಜಾಗೃತಿ ಮೂಡಿಸುವ ಕೆಲಸ. ಯೋಗ್ಯರು ಆಡಳಿತ ನಡೆಸುವಾಗ ಹೀಗೆ ಬಯಸಿದರೆ ಹೆಚ್ಚಿಗೆ ಬಯಸಿದಂತೇನೂ ಆಗುವುದಿಲ್ಲ.


ಆದರೆ, ಈಗ?

Aug 5, 2007

ಜೀವಜಲಕ್ಕಾಗಿ ೧೬ ದೇಶಗಳಲ್ಲಿ ಓಡುತ್ತಿರುವ ಸುನಿಲ್ - ವಿಡಿಯೊ ಸಂದರ್ಶನ



- ಇದೇ ವಿಷಯದ ಕುರಿತಾದ ಲೇಖನ ಬರುವ ಶುಕ್ರವಾರದಂದು.

Aug 3, 2007

ಎಂಥವರಿಂದ ಆಳಲ್ಪಡುತ್ತಿದ್ದೇವೆ...

(ವಿಕ್ರಾಂತ ಕರ್ನಾಟಕ - ಆಗಸ್ಟ್ 1೦, ೨೦೦೭ರ ಸಂಚಿಕೆಯಲ್ಲಿನ ಬರಹ)

ನೂರಾರು ಜನ ಶಾಸಕರು ಕುಳಿತು ಕೇಳುತ್ತಿದ್ದಾರೆ. ಹತ್ತಾರು ಜನ ವಿರೋಧ ಪಕ್ಷದ ಶಾಸಕರು ಎದ್ದು ನಿಂತು ಗಲಭೆ ಮಾಡುತ್ತಿದ್ದಾರೆ. ಚರ್ಚೆಗೆ ಉತ್ತರ ಕೊಡಲು ಎದ್ದು ನಿಂತ ಮುಖ್ಯಮಂತ್ರಿ, ಬಲಗೈಯಲ್ಲಿ ಒಂದು ಕಾಗದ ಪತ್ರವನ್ನು ಹಿಡಿದು, ಎಡಗೈಯನ್ನು ಬೀಡುಬೀಸಾಗಿ ಎಸೆಯುತ್ತ, ಎಡಗೈ ತೋರುಬೆರಳು ತೋರಿಸುತ್ತ, ತಮ್ಮ ಒಂದು ನಿಮಿಷದ ಅಮೋಘ ಸಂಭಾಷಣೆಯನ್ನು, ಎದುರು ಪಾರ್ಟಿಯವರ ಅಡೆತಡೆಗಳ ಮಧ್ಯೆ, ಹೀಗೆ ಒಪ್ಪಿಸುತ್ತಾರೆ:

"ಈಗ ನಾನು ಮಾತ್ನಾಡ್ತಿರೋದು ಬರೀ ಪೀಠಿಕೆ ಮಾತ್ರ...
ಬಹಳ ಬಹಳ ಇದೆ ಮಾತಾಡೋದಿಕ್ಕೆ...
ನಾನು ಮಾತನಾಡುವುದನ್ನು ಪೂರ್ತಿ ಮಾಡಿದ ಮೇಲೆ ಚಂದ್ರಬಾಬು,
ಅಸಲಿಗೆ ನಿಮ್ಮ ತಾಯ ಹೊಟ್ಟೆಯಲ್ಲಿ ಅನಗತ್ಯವಾಗಿ ಹುಟ್ಟಿದೆನೇನೊ,
ಈ ಲೋಕಕ್ಕೆ ಬರದೆ ಇದ್ದಿದ್ದರೆ ಚೆನ್ನಾಗಿತ್ತೇನೊ, ಅಂತಂದುಕೊಳ್ತೀಯ ನೀನು...
ಏನಯ್ಯ ನೀನು ಮಾತನಾಡೋದು???
ಕೇಳು, ಕೇಳು, ತೊಳೆದಾಕ್ಬಿಡ್ತೀನಿ ಇವತ್ತು ನಿನ್ನ. ತೊಳೆದಾಕ್ಬಿಡ್ತೀನಿ ನಿನ್ನ.
ನಿಮ್ಮ ತಾಯ ಹೊಟ್ಟೆಯಲ್ಲಿ ಹುಟ್ಟದೆ ಹೋಗಿದ್ರೆ ಚೆನ್ನಾಗಿತ್ತು ಅಂತಂದುಕೊಳ್ತೀಯ, ನೀನು..."


ನಿಮಗೆ ಈಗಾಗಲೆ ಗೊತ್ತಾಗಿರಬಹುದು, ಇದು ಆಂಧ್ರಪ್ರದೇಶದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿಯವರ ಉವಾಚ ಎಂದು. "ವಿರೋಧ ಪಕ್ಷದವರು ನೀಚಾತಿನೀಚ ಆರೋಪಗಳನ್ನು ಮಾಡಿದಾಗ ನಾವು ಪ್ರಜೆಗಳಿಗಾದರೂ ನಮ್ಮ ನೀತಿನಿಜಾಯಿತಿ ಹೇಳಿಕೊಳ್ಳುವ ಅಗತ್ಯ ಇದೆಯೊ ಇಲ್ಲವೊ?" ಎಂದು ಕೇಳುತ್ತ, ಆ ಅಗತ್ಯವನ್ನು ಪೂರ್ತಿ ಮಾಡುವುದಕ್ಕೋಸ್ಕರ ಜುಲೈ ೨೩ ರಂದು ಆಂಧ್ರದ ವಿಧಾನಸಭೆಯಲ್ಲಿ ಅಲ್ಲಿನ ಮುಖ್ಯಮಂತ್ರಿ ತಮ್ಮ ನೀತಿ ನಿಜಾಯಿತಿ ನಿರೂಪಿಸಿಕೊಂಡ ರೀತಿ ಈ ಮೇಲಿನದು!!! ಸದನದಲ್ಲಿ ಮಾಡಿದ ಭಾಷಣಕ್ಕೆ ಎಲ್ಲಿಯೂ ಬಹುವಚನವೆ ಇಲ್ಲ!!!

ಇದೆಲ್ಲ ಆಗಿದ್ದು, ಕರ್ನಾಟಕದ ಬಿ.ಜೆ.ಪಿ. ಎಂ.ಎಲ್.ಸಿ.ಯಾದ ಜನಾರ್ಧನ ರೆಡ್ಡಿಯವರ ಓಬಳಾಪುರಂ ಗಣಿಗೆ ಸಂಬಂಧಿಸಿದ ವಿವಾದದಿಂದಾಗಿ. ಓಬಳಾಪುರಂ ಗಣಿ ವಿಚಾರದಲ್ಲಿ ಮತ್ತು ಜನಾರ್ಧನ ರೆಡ್ಡಿಯವರು ಆಂಧ್ರದಲ್ಲಿ ನಿರ್ಮಿಸಲಿರುವ "ಬ್ರಹ್ಮಣಿ ಸ್ಟೀಲ್ಸ್ ಲಿಮಿಟೆಡ್" ಕಂಪನಿಗೆ ಜಮೀನು ನೀಡುವಲ್ಲಿ ಅವ್ಯವಹಾರಗಳು ನಡೆದಿವೆ ಎಂದು ಆಂಧ್ರದ ವಿರೋಧ ಪಕ್ಷದವರು ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಪ್ರಕಾರ ಜನಾರ್ಧನ ರೆಡ್ಡಿಯವರ ಸ್ಟೀಲ್ ಫ್ಯಾಕ್ಟರಿ ಅಲ್ಲಿನ ಮುಖ್ಯಮಂತ್ರಿಯ "ಬೇನಾಮಿ ಉದ್ದಿಮೆ."

ಆಂಧ್ರದ ಮುಖ್ಯಮಂತ್ರಿ ಹೀಗೆ ವಿಧಾನ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಯನ್ನು ತೊಳೆದ (???) ಮಾರನೆಯ ದಿನ ಚಂದ್ರಬಾಬು ನಾಯ್ಡುವಿನ ತೆಲುಗುದೇಶಂ ಪಕ್ಷದ ವಿದ್ಯಾರ್ಥಿ (?) ಘಟಕ ಕರ್ನಾಟಕದ ಎಂ.ಎಲ್.ಸಿ. ಜನಾರ್ಧನ ರೆಡ್ಡಿಯ ಹೈದರಾಬಾದ್ ಮನೆಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳುತ್ತಾರೆ. ಆ ಸಮಯದಲ್ಲಿ ತೆಲುಗುದೇಶಂ ಕಾರ್ಯಕರ್ತರು ತಮ್ಮ ಮನೆಯ ಮೇಲೆ ಕಲ್ಲೆಸೆದರು ಎಂದು ರೆಡ್ಡಿ ಅಲ್ಲಿನ ಪೋಲಿಸರಿಗೆ ದೂರು ಕೊಡುತ್ತಾರೆ. ಅದೇ ಸಮಯದಲ್ಲಿ ಟಿವಿಯವರ ಮುಂದೆ ಜನಾರ್ಧನ ರೆಡ್ಡಿಯವರು ತೆಲುಗಿನಲ್ಲಿ ಒಪ್ಪಿಸುವ ಸಂಭಾಷಣೆಯ ಅಕ್ಷರಕ್ಷರ ರೂಪ ಇದು:

"ನಾನು ನೀತಿನಿಜಾಯಿತಿಂದ ಕೆಲಸಗಳನ್ನು ಮಾಡುತ್ತಿರುವಾಗ ನಿನಗೆ ಭಯಪಡುವ ಅಗತ್ಯ ಇಲ್ಲ.
ನನ್ನನ್ನು ಭಯಪಡಿಸುತ್ತಿದ್ದೀಯಾ, ನೀನು?
ಇಂಡಸ್ಟ್ರಿ ಮಾಡಬೇಕು ಅಂದುಕೊಂಡು ಬಂದ ನನ್ನನ್ನು ವಾಪಸು ಕಳಿಸಬೇಕು ಅಂದುಕೊಳ್ತೀಯ ನೀನು, ಚಂದ್ರಬಾಬು?
ನೀನು ದ್ರೋಹಿ, ನೀನು ಹಂತಕ, ಎಂದು ನಾನು ಹೇಳಿದೆ. ನಿನ್ನಲ್ಲಿ ಸ್ವಲ್ಪವಾದರೂ ನೀತಿನಿಜಾಯಿತಿ ಇದ್ದರೆ ನೀನು ನಿರಪರಾಧಿ ಎಂದು ಸಾಬೀತು ಪಡಿಸಿಕೊಳ್ಳಬೇಕು.
ನಾಚಿಕೆ ಇಲ್ಲದೀರ ಇವತ್ತು ಹೈದರಾಬಾದಿನಲ್ಲಿ ನನ್ನ ಮನೆಯ ಮೇಲೆ ಕಲ್ಲು ಹೊಡೆಸುತ್ತಿದ್ದೀಯ ಅಂದರೆ ನಾನು ನಿಜವಾಗಲೂ ಹೇಳ್ತಿದ್ದೀನಿ ಚಂದ್ರಬಾಬು, ನೀನು ಈ ರಾಜ್ಯದ ಖೋಜಾ ನಂಬರ್ ಒನ್ ಎಂದು ನಾನು ಹೇಳುತ್ತಿದ್ದೇನೆ."

"ರಾಜ್ಯದ ಜನರೆಲ್ಲರೂ ನಿನಗೆ ಮತಿಭ್ರಮಣೆಯಾಗಿದೆ ಎಂದು ಅಂದುಕೊಳ್ಳುತ್ತಿದ್ದಾರೆ.
ನಿಜವಾಗಲೂ ಹೇಳುತ್ತಿದ್ದೇನೆ, ನಿನ್ನನ್ನು ರಾಜ್ಯದ ಪ್ರಜೆಗಳೆಲ್ಲರೂ ಕಲ್ಲಲ್ಲಿ ಹೊಡೆದು, ನಿನ್ನ ತೆಲುಗುದೇಶಂ ಪಕ್ಷವನ್ನು ಮತ್ತು ನಿನ್ನನ್ನು ಸರ್ವನಾಶ ಮಾಡಿ, ನಿನ್ನನ್ನು ಹಾಳು ಮಾಡುವ ತನಕ ನಾನು ಬಿಡುವುದಿಲ್ಲ.
ಇವತ್ತು ತಮಾಷೆ ಮಾಡ್ತಿದ್ದೀಯ, ನೀನು?
ನನ್ನ ಮನೆಯ ಮೇಲೆ ದಾಳಿ ಮಾಡ್ತೀಯ, ದುರ್ಮಾರ್ಗನೆ?
ಹೈದರಾಬಾದಿನ ನನ್ನ ಮನೆಯ ಮೇಲೆ ಕಲ್ಲು ಹೊಡೆಸ್ತೀಯ? ಕಲ್ಲಲ್ಲಿ ಹೊಡೆಸ್ತೀಯ? ಕೈಲಾಗದ ಖೋಜಾ ನೀನು....."


ಉಫ್..........

ಇದೇನು ಸಿನೆಮಾನಾ? ನಾಟಕವೆ? ಇವರೇನು ಪೌರಾಣಿಕ ನಾಟಕದ ಪಾತ್ರಧಾರಿಗಳೊ, ಜನಸೇವಕರೊ, ರಾಜಕಾರಣಿಗಳೊ, ಉದ್ದಿಮೆದಾರರೊ, ಪಾಳೆಯಗಾರರೊ? ಇವರು ಮೊದಲು ಉದ್ದಿಮೆದಾರರೊ ಅಥವ ಜನಸೇವಕರೊ? ಮೊದಲು ಜನಸೇವಕರೊ ನಂತರ ಉದ್ದಿಮೆದಾರರೊ? ರಾಜಕಾರಣಕ್ಕೆ ಬಂದು ಉದ್ದಿಮೆದಾರರಾದರೊ ಅಥವ ತಮ್ಮ ಉದ್ದಿಮೆಗಳ ಹಿತರಕ್ಷಿಸಿಕೊಳ್ಳಲು ರಾಜಕಾರಣಕ್ಕೆ ಇಳಿದರೊ? ಜನ ವೋಟು ನೀಡುವ ಮುಂಚೆ ಏನನ್ನು ಯೊಚಿಸುತ್ತಾರೆ? ನಮ್ಮ ಪ್ರತಿನಿಧಿಗಳಲ್ಲಿ ಹಣವಂತರೆ ಯಾಕೆ ಬಹಳ ಜನ ಇದ್ದಾರೆ? ಕಾನೂನು ರಚಿಸಬೇಕಾದವರು, ತಿದ್ದಬೇಕಾದವರು ಮಾಡುತ್ತಿರುವ ಕೆಲಸಗಳೇನು?

೬೦ ವರ್ಷಗಳ ಹಿಂದೆ ನಮ್ಮ ಹಿರಿಯರು ಬ್ರಿಟಿಷರ ಆಳ್ವಿಕೆಯಿಂದ ದೇಶವನ್ನು ಬಿಡುಗಡೆ ಮಾಡಿ, ಬೇರೆ ಯಾವ ತರಹದ ಆಡಳಿತ ವ್ಯವಸ್ಥೆಗೂ ತಲೆಬಾಗದೆ, ನಮ್ಮನ್ನು ನಾವೆ ಆಳಿಕೊಳ್ಳುವ, ಸ್ವರಾಜ್ಯದ ನಿಜಾರ್ಥವಾದ "ಪ್ರಜಾಪ್ರಭುತ್ವ" ವ್ಯವಸ್ಥೆಯನ್ನು ನಮಗೆ ನೀಡಿದರು. ಆದರೆ, ಇವತ್ತು ಏನಾಗಿದೆ? ಪಕ್ಕದ ಆಂಧ್ರದ ಮಾತುಗಾರಿಕೆ ನೋಡಿ: ಅಲ್ಲಿ ಈ ಮಾತುಗಾರಿಕೆಗೆ ಮೊದಲ ಮೂಲಕಾರಣ ಹಣದ, ಅಧಿಕಾರದ ಮದ. ಅದೇ ಮದ ಕರ್ನಾಟಕವನ್ನೂ ಆವರಿಸಿಕೊಳ್ಳುತ್ತಿದೆ. ಇವತ್ತು ಕರ್ನಾಟಕದ ಪ್ರಮುಖ ಮೂರೂ ಪಕ್ಷಗಳಲ್ಲಿನ ಬಹುಪಾಲು ನಾಯಕರು ಮತ್ತು ಅವರ ಕುಟುಂಬಗಳು ಕೋಟ್ಯಾಂತರ ರೂ ಆಸ್ತಿಗಳಿಗೆ, ಉದ್ದಿಮೆಗಳಿಗೆ ಒಡೆಯರು. ಇವತ್ತು ಹಣವಿಲ್ಲದೆ ಯಾವ ನಾಯಕರೂ ರಾಜಕೀಯ ಮಾಡುತ್ತಿಲ್ಲ. ಹಣವಿಲ್ಲದೆಯೆ, ಯಾವುದೋ ಒಂದು ಅಲೆ ಅಥವ ವಿಷಯಾಧಾರಿತವಾಗಿ ಗೆಲ್ಲುವ ಒಬ್ಬರು ಇಬ್ಬರೂ ಸಹ ಮುಂದಿನ ಸಲದ ಚುನಾವಣೆಯನ್ನು ಹಣದಿಂದಲೆ ಗೆಲ್ಲುವ ಮಟ್ಟಕ್ಕೆ ಬದಲಾಗುತ್ತಿದ್ದಾರೆ. ಹಣದ ಆಧಾರದ ಮೇಲೆ ನಡೆಯುವ ಇಂತಹ ಅಧಿಕಾರಕ್ಕೆ ಪ್ರಜಾಪ್ರಭುತ್ವ ಎನ್ನಲು ಸಾಧ್ಯವೆ?

ಇನ್ನು, ನಮ್ಮ ನಾಡಿನ ಸರ್ವೋಚ್ಚ ನಾಯಕರಾದ ಮುಖ್ಯಮಂತ್ರಿಗಳಂತೂ ಜನಾದೇಶವಿಲ್ಲದೆ, ಪ್ರಜಾಪ್ರಭುತ್ವವನ್ನು ಅಣಕಿಸುವಂತೆ ನಮ್ಮ ಸರ್ವೋಚ್ಚ ನಾಯಕರಾಗುತ್ತಿದ್ದಾರೆ. ಯಾರಿಗೆ ಮುಖ್ಯಮಂತ್ರಿ ಆಗಬೇಕು ಎಂಬ ಜನಾದೇಶವಿಲ್ಲವೊ ಅವರೆಲ್ಲ ಹಣ ಚೆಲ್ಲಬಲ್ಲ ತಾಕತ್ತಿನಿಂದ ಇಲ್ಲವೆ ನಂಬರ್‌ಗೇಮ್‌ನಿಂದ ಮುಖ್ಯಮಂತ್ರಿ ಆಗುತ್ತ ಬರುತ್ತಿದ್ದಾರೆ. ಕಳೆದ ೩೦ ವರ್ಷಗಳ ನಮ್ಮ ಇತಿಹಾಸ ತೆಗೆದುಕೊಂಡರೆ, ೧೯೭೮ ರಲ್ಲಿ ದೇವರಾಜ್ ಅರಸ್, ೧೯೮೫ ರಲ್ಲಿ ಹೆಗಡೆ, ೧೯೮೯ ರಲ್ಲಿ ವೀರೇಂದ್ರ ಪಾಟೀಲ್, ೧೯೯೪ ರಲ್ಲಿ ದೇವೇಗೌಡ, ೧೯೯೯ ರಲ್ಲಿ ಎಸ್ಸೆಮ್ ಕೃಷ್ಣ ಬಿಟ್ಟರೆ, ಮಿಕ್ಕ ಅವಧಿಗಳಲ್ಲಿ ಮುಖ್ಯಮಂತ್ರಿಯಾದ ಯಾರಿಗೂ "ಇವರೇ ನಮ್ಮ ಮುಖ್ಯಮಂತ್ರಿಗಳಾಗಬೇಕು," ಎಂಬ ನೇರ ಜನಾದೇಶ ಇರಲಿಲ್ಲ. ೧೯೮೦ ರಲ್ಲಿ ಗುಂಡೂರಾವ್, ೧೯೮೩ ರಲ್ಲಿ ರಾಮಕೃಷ್ಣ ಹೆಗಡೆ, ೧೯೮೮ ರಲ್ಲಿ ಬೊಮ್ಮಾಯಿ, ೧೯೯೦ ರಲ್ಲಿ ಬಂಗಾರಪ್ಪ, ೧೯೯೨ ರಲ್ಲಿ ವೀರಪ್ಪ ಮೊಲಿ, ೧೯೯೬ ರಲ್ಲಿ ಜೆ.ಎಚ್. ಪಟೇಲ್, ೨೦೦೪ ರಲ್ಲಿ ಧರಮ್ ಸಿಂಗ್, ೨೦೦೬ ರಲ್ಲಿ ಮುಖ್ಯಮಂತ್ರಿಯಾದ ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿ; ಇವರ್ಯಾರ ಮುಖಂಡತ್ವದಲ್ಲೂ ಅವರ ಪಕ್ಷಗಳಿಗೆ ಜನ ಬಹುಮತ ನೀಡಿಲ್ಲ. ಇವರೆಲ್ಲ ಮುಖ್ಯಮಂತ್ರಿಯಾದದ್ದು, ಇಲ್ಲವೆ ಹೈಕಮಾಂಡ್ ಕೃಪೆಂದಾಗಿ, ಇಲ್ಲವೆ ಜಾಗ ಖಾಲಿ ಬಿದ್ದಿದ್ದರಿಂದಾಗಿ, ಇಲ್ಲವೆ ರಾಜಕಾರಣದಲ್ಲಿಯಷ್ಟೆ ಸಾಧ್ಯವಾಗುವ ತಂತ್ರ-ಕುತಂತ್ರ-ಹಣ ಚೆಲ್ಲಾಟ-ಪ್ರಲೋಭನೆ-ದಾದಾಗಿರಿ-ಮ್ಯೂಸಿಕ್ ಛೇರ್ ಆಟ: ಮುಂತಾದ ಪ್ರಜಾಪ್ರಭುತ್ವ ಎಂದು ಹೇಳಲಿಕ್ಕೇ ಆಗದ ವಿಚಿತ್ರ ಸನ್ನಿವೇಶಗಳಿಂದಾಗಿ. ಇವರಲ್ಲಿ ಕೆಲವರಿಗೆ ತಮ್ಮ ಕೈಲಿ ಬಸಿರು ಮಾಡಲಾಗದಿದ್ದರೂ, ಇನ್ನೊಬ್ಬರು ಮಾಡಿದ ಬಸಿರನ್ನು ತಾವೆ ಮಾಡಿದ್ದು ಎಂದು ಯಾವ ನಾಚಿಕೆಲ್ಲದೆ ಹೇಳಿಕೊಂಡು, ಓಡಿ ಬಂದು ಕುರ್ಚಿ ಹಿಡಿದುಕೊಂಡ ಮಹಾಶಯರು!!!

ಇವುಗಳಿಂದಾಗಿ ಕಮರುತ್ತಿರುವುದು ರಾಜ್ಯದ ರಾಜಕೀಯ-ಸಾಮಾಜಿಕ-ಬೌದ್ಧಿಕ ಪ್ರಗತಿ ಮತ್ತು ಪ್ರಜಾಪ್ರಭುತ್ವದ ಆಶಯಗಳು.

ದೇಶ ಸ್ವತಂತ್ರಗೊಂಡಾಗ ನಮ್ಮ ಹಿರಿಯರು ರಾಷ್ಟ್ರದ ಪ್ರಜೆಗಳಿಗೆ ಕೊಟ್ಟ ಅಧಿಕಾರ ಇವತ್ತು ನಮ್ಮ ದೇಶದ ಮತ್ತು ನಮ್ಮ ರಾಜ್ಯದ ಬಹುಪಾಲು ಕಡೆಗಳಲ್ಲಿ ಹಣವಂತರ, ಶೋಷಕರ, ಜನರ ಸಂವೇದನೆಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವವರ ಕೈಗೆ ಹೋಗಿಬಿಟ್ಟಿದೆ.

ಈಗ, ಸ್ವಾತಂತ್ರ್ಯದ ೬೦ ವರ್ಷಗಳ ನಂತರ, ಹೊಸ "ಸ್ವರಾಜ್ಯ"ದ ಬಗ್ಗೆ ಜನ ಯೋಚಿಸಬೇಕಿದೆ. People got to take back their state and the country. ಅದಕ್ಕೆ ಮಾಡಬೇಕಿರುವುದು ಇಷ್ಟೆ: ಅಧಿಕಾರವನ್ನು ಕೇವಲ ಹಣಚೆಲ್ಲಬಲ್ಲ ತಾಕತ್ತಿರುವವರ ಕೈಗೆ ಕೊಡದೆ, ತಮ್ಮಲ್ಲಿಯ ನೇರವಂತಿಕೆಯ, ಸಮಾಜಸೇವಾಗುಣದ ಜನರ ಕೈಗೆ ನೀಡುವ ಕೆಲಸ. ತಾವು ಮಾಡಿದ ತಪ್ಪಿಗೆ ತಮ್ಮ ಪ್ರತಿನಿಧಿಗಳೆನಿಸಿಕೊಂಡವರನ್ನು ಜನ ದೂರಬಾರದು. ಯಾಕೆಂದರೆ, ಅವರಿಗೆ ಅಧಿಕಾರ ಕೊಡುವವರೆ ಪ್ರಜೆಗಳು.

ಅದಾಗದಿದ್ದರೆ, ಆಂಧ್ರದ ಘಟನೆಗಳು ನಮ್ಮಲ್ಲೂ ಘಟಿಸಲು ಹೆಚ್ಚಿನ ಸಮಯ ಬೇಕಿಲ್ಲ.