Nov 26, 2006

ಶಿರವಿಲ್ಲದವರು ಮಾತ್ರ ಶಿರಸ್ತ್ರಾಣ ಬೇಡವೆನ್ನುತ್ತಾರೆ!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಡಿಸೆಂಬರ್ 8, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಆ ಮುದುಕನ ಹೆಸರು ಜಾರ್ಜ್ ವೆಲ್ಲರ್ ಎಂದು. 2003 ನೆ ಇಸವಿಯಲ್ಲಿ ಆತನ ವಯಸ್ಸು 86 ವರ್ಷ. ಆ ಮುಪ್ಪಾತಿಮುಪ್ಪಿನಲ್ಲೂ ತನ್ನ ಕಾರನ್ನು ತಾನೆ ಓಡಿಸುತ್ತಿದ್ದ! ಕ್ಯಾಲಿಫೋರ್ನಿಯ ರಾಜ್ಯದ ಸಾಂಟಾ ಮೋನಿಕ ಅವನ ಊರು. 2003 ರ ಜುಲೈ ತಿಂಗಳ 16 ರಂದು ಆ ಊರಿನಲ್ಲಿ ವಾರಕ್ಕೊಂದು ದಿನ ನಡೆಯುವ ರೈತರ ಸಂತೆ ನಡೆಯುತ್ತಿತ್ತು. ಹೆಚ್ಚು ಕಮ್ಮಿ ನಮ್ಮ ಊರಿನ ಸಂತೆಗಳಂತೆಯೆ ಇರುತ್ತವೆ ಅವು. ಯಾವುದಾದರು ಮುಖ್ಯ ರಸ್ತೆಯಲ್ಲಿ ಇಲ್ಲವೆ ವಿಶಾಲವಾದ ಪಾರ್ಕಿಂಗ್ ಸ್ಥಳಗಳಲ್ಲಿ ಏರ್ಪಡಿಸಿರುತ್ತಾರೆ. ಈ ಸಂತೆಗಳಲ್ಲಿ ತರಕಾರಿಗಳು ಇನ್ನೂ ತಾಜಾ ಆಗಿಯೆ ಸಿಗುವುದರಿಂದ ಬಹಳ ಜನಪ್ರಿಯ. ತಾವು ಬೆಳೆದದ್ದನ್ನು ಮಧ್ಯವರ್ತಿಗಳ ಸಹಾಯವಿಲ್ಲದೆ ನೇರವಾಗಿ ಮಾರಾಟ ಮಾಡುವ ಅವಕಾಶವಿರುತ್ತದೆ.

ಆ ಪಟ್ಟಣದ ಅರಿಝೋನ ರಸ್ತೆಯಲ್ಲಿ ಸಂತೆ ನಡೆಯುತ್ತದೆ. ರಸ್ತೆಯಾದ್ದರಿಂದ ಸಂತೆ ಪ್ರಾರಂಭವಾಗುವ ಸ್ಥಳದಲ್ಲಿ ಎರಡೂ ಕಡೆ ತಾತ್ಕಾಲಿಕವಾಗಿ ಮರದ ಅಡ್ಡಗಟ್ಟೆಗಳನ್ನು ಇಟ್ಟು ವಾಹನಗಳು ಬರದಂತೆ 'ಸ್ಟಾಪ್' ಸೂಚನಾಫಲಕಗಳನ್ನು ನಿಲ್ಲಿಸಿದ್ದರು. ವೆಲ್ಲರ್ ಅಂದು ತನ್ನ ದೊಡ್ಡ ಕೆಂಪು ಬ್ಯೂಕ್ ಕಾರಿನಲ್ಲಿ ಆ ರಸ್ತೆಗೆ ಬಂದವನೆ, ಬೇರೊಂದು ಕಾರಿನ ಹಿಂಬದಿಗೆ ಗುದ್ದಿ, ಅಡ್ಡವಾಗಿ ನಿಲ್ಲಿಸಿದ್ದ ಮರದ ಅಡ್ಡಗಟ್ಟೆಗಳನ್ನು ದಾಟಿಕೊಂಡು ನೇರವಾಗಿ ಸಂತೆಗೇ ನುಗ್ಗಿಬಿಟ್ಟ. ಮೊದಲೇ ಗಿಜಗುಡುತ್ತಿರುವ ಸ್ಥಳ. ಅಲ್ಲಿ ಗಂಟೆಗೆ 65 ರಿಂದ 95 ಕಿ.ಮಿ. ವೇಗದಲ್ಲಿ ಸುಮಾರು 1000 ಅಡಿ ದೂರ ನಿಲ್ಲದೆ ಓಡಿಸಿದ. ಇಷ್ಟು ದೂರವನ್ನು ಕೇವಲ 10 ಸೆಕೆಂಡುಗಳಲ್ಲಿ ಕ್ರಮಿಸಿದ. ಕೊನೆಗೂ ಕಾರು ನಿಂತದ್ದು ಯಾಕೆಂದರೆ ಅದಕ್ಕೆ ಒಂದು ದೇಹ ಸಿಕ್ಕಿಹಾಕಿಕೊಂಡು ಮುಂದಕ್ಕೆ ಹೋಗಲು ಆಗದ ಪ್ರಯುಕ್ತ!

ನಿರ್ಲಕ್ಷ್ಯವಾಗಿ ಓಡಿಸಿದ ಆ ಹತ್ತು ಸೆಕೆಂಡುಗಳಲ್ಲಿ ಗಾಯಗೊಂಡವರು 63 ಜನ. ಸತ್ತವರು? ಸರಿಯಾಗಿ ಹತ್ತು ಜನ. ಕಾರು ನಿಂತ ಮೇಲೆ ಅದರಿಂದ ಕೋಲು ಊರಿಕೊಂಡು ಇಳಿದ ವೆಲ್ಲರ್ ಯಾವುದೆ ಗಲಿಬಿಲಿಲ್ಲದೆ ಪಕ್ಕ ಇದ್ದವರನ್ನು, "ನಾನು ಎಷ್ಟು ಜನರಿಗೆ ಗತಿ ಕಾಣಿಸಿದೆ?" ಎಂದು ಶಾಂತವಾಗಿ ಕೇಳಿದ!

ನಂತರದ ದಿನಗಳಲ್ಲಿ ವೆಲ್ಲರ್‌ನ ವಕೀಲ ಇದು ಆಕಸ್ಮಿಕವಾಗಿ ಘಟಿಸಿದ ಅಪಘಾತ ಎಂದ. ತಾನು ಆಗ ಕ್ಷೋಭೆಗೊಳಗಾಗಿದ್ದೆ, ಮಾನಸಿಕವಾಗಿ ಜರ್ಝರಿತನಾಗಿದ್ದೆ, ಎಂದು ವೆಲ್ಲರ್ ಹೇಳಿಕೆ ನೀಡಿದ. ಆದರೆ ಪ್ರತ್ಯಕ್ಷದರ್ಶಿಗಳು ಹೇಳಿದ್ದೆ ಬೇರೆ. ಅವರ ಪ್ರಕಾರ, ವೆಲ್ಲರ್ ಬ್ರೇಕನ್ನು ಬಳಸಲೆ ಇಲ್ಲ; ಅವನ ಕಾರಿನ ಮುಂಭಾಗದ ಮೇಲೆ ಅಪಘಾತಕ್ಕೊಳಗಾದ ಜನ ಎಗರಿಬಿದ್ದು ಜಾರಿ ಹೋಗುತ್ತಿದ್ದರೂ ಅವನು ಕಾರನ್ನು ನಿಲ್ಲಿಸದೆ ನುಗ್ಗುತ್ತಿದ್ದ; ಜೊತೆಗೆ, ಪಕ್ಕದಲ್ಲಿದ್ದ ಕಾರುಗಳನ್ನು ಅವಾಯ್ಡ್ ಮಾಡುತ್ತ ನಡುರಸ್ತೆಯಲ್ಲಿಯೇ ಹೋಗುತ್ತಿದ್ದ.

ಇದಾದ ಎರಡು ವಾರಗಳ ನಂತರ ಮೋಟಾರುವಾಹನಗಳ ಇಲಾಖೆ ವೆಲ್ಲರ್‌ನ ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸಿತು. 'ಸಂಪೂರ್ಣ ನಿರ್ಲಕ್ಷ್ಯದಿಂದ ಹತ್ತು ಜನರ ಕೊಲೆಗೆ ಕಾರಣನಾಗಿದ್ದಾನೆ,' ಎಂದು ಅವನ ಮೇಲೆ ಕೇಸು ಹಾಕಲಾತು. ತಾನು ನಿರ್ದೋಷಿ ಎಂದು ವೆಲ್ಲರ್ ನ್ಯಾಯಾಲಯದಲ್ಲಿ ವಾದಿಸಿದ!

ಇಲ್ಲಿನ ನ್ಯಾಯಾಲಯಗಳಲ್ಲಿ ಆರೋಪಿ ದೋಷಿಯೆ ಅಥವ ನಿರ್ದೋಷಿಯೆ ಎಂದು 12 ಜನ ನಾಗರಿಕರಿಂದ ಕೂಡಿದ ನ್ಯಾಯಮಂಡಳಿ ಅಥವ ಜ್ಯೂರಿ ನಿರ್ಧರಿಸುತ್ತದೆ. ಅವರ ತೀರ್ಪಿನ ಆಧಾರದ ಮೇಲೆ, ದೋಯಾಗಿದ್ದ ಪಕ್ಷದಲ್ಲಿ, ಎಷ್ಟು ಶಿಕ್ಷೆ ಕೊಡಬೇಕೆಂದು ನ್ಯಾಯಾಧೀಶ ನಿರ್ಧರಿಸುತ್ತಾನೆ. ವಿಚಾರಣೆಯ ಬಳಿಕ, ವೆಲ್ಲರ್ ದೋಷಿ ಎಂದು ಸರ್ವಾನುಮತದಿಂದ ನ್ಯಾಯಮಂಡಲಿ ಕಳೆದ ತಿಂಗಳಷ್ಟೆ ಘೋಷಿಸಿತು. ಆ ಅಪರಾಧಕ್ಕೆ ನ್ಯಾಯಾಲಯ ಅವನಿಗೆ ಗರಿಷ್ಠ 18 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಿತ್ತು.

ಕಳೆದ ವಾರ ನ್ಯಾಯಾಲಯ ಶಿಕ್ಷೆಯನ್ನು ಪ್ರಕಟಿಸಿತು. ಇನ್ನೆರಡು ವಾರದಲ್ಲಿ 90 ವರ್ಷ ದಾಟಲಿರುವ ವೆಲ್ಲರ್‌ನ ವಯಸ್ಸು ಮತ್ತು ಆರೋಗ್ಯವನ್ನು ಗಣನೆಗೆ ತೆಗೆದುಕೊಂಡು, ಆತ ಜೈಲಿನಲ್ಲಿ ಇರಲು ಲಾಯಕ್ಕಾಗದಷ್ಟು ಆರೋಗ್ಯಹೀನನಾಗಿದ್ದಾನೆ; ಜೈಲಿಗೆ ಕಳುಹಿಸಿದರೆ ಸುಮ್ಮನೆ ಜನರ ತೆರಿಗೆ ಹಣ ಪೋಲು ಮತ್ತು ಜೈಲಿನ ಅಧಿಕಾರಿಗಳಿಗೆ ತಲೆನೋವು ಎಂದು ನಿರ್ಧರಿಸಿ ಮನೆಯಲ್ಲಿಯೆ ಪರಿವೀಕ್ಷಣೆಯಲ್ಲಿಡುವ ಶಿಕ್ಷೆ ವಿಧಿಸಿತು. ಜೊತೆಗೆ ಒಂದು ಲಕ್ಷ ಡಾಲರ್ ದಂಡ ವಿಧಿಸಿತು.

ಈ ಅಪಘಾತ ಆದ ನಂತರ ಮತ್ತು ಈಗ ಹೊಸದಾಗಿ ಮತ್ತೊಮ್ಮೆ ಆ ಸುದ್ಧಿ ನವೀಕರಣಗೊಂಡ ಕಾರಣ, ವಯಸ್ಸಾದ ಚಾಲಕರಿಂದ ಆಗುವ ರಸ್ತೆ ಅಪಘಾತಗಳ ಬಗ್ಗೆ ಮತ್ತು ಅವರಿಗೆ ಯಾವ ವಯಸ್ಸಿಗೆ ಪರವಾನಗಿ ನಿರಾಕರಿಸಬೇಕು ಎನ್ನುವುದರ ಬಗ್ಗೆ ಅಮೇರಿಕದಲ್ಲಿ ಗಂಭೀರವಾದ ಚರ್ಚೆ ಮೊದಲಾಗಿದೆ.

ಟೈಮ್ ವಾರಪತ್ರಿಕೆಯ ಈ ವಾರದ ಸಂಚಿಕೆಯಲ್ಲಿ "ನಾವು ಅರ್ಹವಲ್ಲದ ವಿಷಯಗಳ ಬಗ್ಗೆ ಯಾಕೆ ಚಿಂತೆ ಮಾಡುತ್ತೇವೆ?" ಎಂಬ ಅದ್ಭುತವಾದ ಮುಖಪುಟ ಲೇಖನ ಪ್ರಕಟವಾಗಿದೆ. ಅಲ್ಲಿ ಕೊಟ್ಟಿರುವ ಅಂಕಿಅಂಶ ಮತ್ತು ಅದಕ್ಕಾಗಿ ಮಾಡಿರುವ ಅಧ್ಯಯನ ತಾನು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಪ್ರೀತಿಸುವ ಒಬ್ಬ ದಕ್ಷ, ವೃತ್ತಿಪರ ಪತ್ರಕರ್ತನಷ್ಟೆ ಮಾಡಲು ಸಾಧ್ಯ. ಈ ಲೇಖನದಲ್ಲಿ "ನಾವು ಯಾಕೆ ಭಯಪಡಲರ್ಹವಲ್ಲದ ವಿಷಯಗಳ ಬಗ್ಗೆ ಭಯಪಡುತ್ತೇವೆ... ಹಾಗೂ ಭಯಪಡಬೇಕಾದ ವಿಷಯಗಳನ್ನೇಕೆ ನಿರ್ಲಕ್ಷಿಸುತ್ತೇವೆ" ಎಂದು ಎಂತೆಂತಹ ಸಣ್ಣಪುಟ್ಟ ಎನ್ನಿಸುವಂತಹ ಕಾರಣಗಳಿಗೆ ಎಷ್ಟೊಂದು ಜನ ಸಾಯುತ್ತಾರೆ ಎಂಬಂತಹ ವಿವರಗಳಿವೆ.

  • ಸುಮಾರು 30 ಕೋಟಿ ಜನಸಂಖ್ಯೆಯ ಅಮೇರಿಕದಲ್ಲಿ ನೆಗಡಿ-ಜ್ವರ ಒಂದರಿಂದಲೆ ವರ್ಷಕ್ಕೆ 36000 ಜನ ಸಾಯುತ್ತಾರೆ.
  • ಮೈಯಲ್ಲಿನ ಕೊಬ್ಬಿನಿಂದಾಗಿ ಬರುವ ಹೃದಯ ಸಂಬಂಧಿ ಕಾಲೆಗಳಿಂದ ವರ್ಷಕ್ಕೆ 7 ಲಕ್ಷ ಜನ ಸಾಯುತ್ತಾರೆ.
  • ನಾನಾ ತರಹದ ಅಪಘಾತಗಳಿಂದ ವರ್ಷಕ್ಕೆ ಸುಮಾರು 1 ಲಕ್ಷ ಜನ ಸತ್ತರೆ ನಾನಾ ತರಹದ ಕಾಲೆಗಳಿಂದ 23 ಲಕ್ಷ ಜನ ಸಾಯುತ್ತಾರಂತೆ.

ಅಮೇರಿಕದಲ್ಲಿ ಪ್ರತಿಯೊಬ್ಬ ಕಾರು ಚಾಲಕನೂ ಸೀಟು ಬೆಲ್ಟು ಧರಿಸಬೇಕು. ಬಹುಪಾಲು ರಾಜ್ಯಗಳಲ್ಲಿ ಕಾರಿನಲ್ಲಿರುವ ಪ್ರತಿಯೊಬ್ಬ ಪ್ರಯಾಣಿಕನೂ ಬೆಲ್ಟು ಹಾಕಿಕೊಳ್ಳಬೇಕು. ಈಗ ತಾನೆ ಹುಟ್ಟಿದ ಮಗುವಿನಿಂದ ಹಿಡಿದು 8 ವರ್ಷದ ಕೆಳಗಿನ ಪ್ರತಿ ಮಗುವನ್ನು ಚೈಲ್ಡ್‌ಸೀಟ್‌ನಲ್ಲಿಯೆ ಕೂರಿಸಬೇಕು. ಆ ಸೀಟು ಹಿಂದಿನ ಸೀಟಿನಲ್ಲಿಯೇ ಇರಬೇಕು. 12 ವರ್ಷಕ್ಕಿಂತ ಕಮ್ಮಿ ವಯಸ್ಸಿನ ಪ್ರತಿಯೊಬ್ಬರೂ ಹಿಂದಿನ ಸೀಟಿನಲ್ಲಿಯೆ ಪ್ರಯಾಣಿಸಬೇಕು. ಪ್ರತಿ ರಸ್ತೆಯಲ್ಲಿಯೂ ಗರಿಷ್ಠ ವೇಗದ ಮಿತಿ ಇರುತ್ತದೆ. ಬೈಕ್ ಸವಾರನಿರಲಿ, ಪೆಡಲ್ ತುಳಿಯುವ ಸೈಕಲ್ ಸವಾರನೂ ತಲೆಗೆ ಹೆಲ್ಮೆಟ್ ಹಾಕಿಕೊಳ್ಳಬೇಕು. ಬಹುಪಾಲು ಜನ ದಂಡಕ್ಕೆ ಹೆದರಿಯೊ, ಪೌರಪ್ರಜ್ಞೆಂದಲೊ ರಸ್ತೆನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಇಷ್ಟೆಲ್ಲ ಇದ್ದರೂ ಇಲ್ಲಿ ವರ್ಷಕ್ಕೆ 44000 ಜನ ರಸ್ತೆ ಅಪಘಾತಗಳಿಂದ ಸಾಯುತ್ತಾರೆ!

ಇಂತಹ ಯಾವ ನಿಯಮಗಳೂ ಇಲ್ಲದ, ಇದ್ದರೂ ಸರಿಯಾಗಿ ಪಾಲಿಸದ ನಮ್ಮಲ್ಲಿ ಅಪಘಾತಗಳು ಹೇಗಿರಬೇಡ? ತಲೆಗೆ ಹೆಲ್ಮೆಟ್ ಬೇಡ ಎಂದು ಎಂತೆಂತಹ ಹಾಸ್ಯಾಸ್ಪದ, ಅಸಂಬದ್ದ ಹೇಳಿಕೆಗಳು! ಅಧಿಕಾರದಲ್ಲಿರುವ ರಾಜಕಾರಣಿಗಳಿಗೆ ಹೆಲ್ಮೆಟ್ ಕಡ್ಡಾಯ ಮಾಡುವ ವಿಷಯ ರೋಲ್‌ಕಾಲ್ ಮಾಡಲು ಲಾಯಕ್ಕಾದ ವಿಷಯವಾಗಿದೆಯೆ ಹೊರತು ಜನರ ಪ್ರಾಣ ಉಳಿಸುವ ವಿಷಯವಾಗಿಲ್ಲ. ಸರ್ಕಾರ ಸುರಕ್ಷಾ ವಿಧಾನಗಳನ್ನು ಕಡ್ಡಾಯ ಮಾಡದೆ ಇರುವುದರಿಂದ, ಅನ್ನ ದುಡಿಯುವ ಜನ ಮತ್ತು ಅವರ ಸ್ಫೂರ್ತಿಯಾದ ಅಪ್ಪ, ಅಮ್ಮ, ಹೆಂಡತಿ, ಮಗು, ಗಂಡ, ತಮ್ಮ, ತಂಗಿ, ಅಣ್ಣ, ಅಕ್ಕ, ಹೀಗೆ ಯಾರೆಂದರವರು ರಸ್ತೆ ಆಪಘಾತಗಳಿಗೊಳಗಾಗಿ ಸಾಯುತ್ತಿರುತ್ತಾರೆ ಎಂದು ಗಮನಿಸದೆ, ಯಾರ ಜೀವಕ್ಕೂ ಬೆಲೆಲ್ಲದಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ಪ್ರಜಾಪ್ರಭುತ್ವದಲ್ಲಿ ನಾವುಗಳೆ ಸರ್ಕಾರವಾದ್ದರಿಂದ ನಾವೆ ಜೀವಕ್ಕೆ ಬೆಲೆ ಕೊಡುತ್ತಿಲ್ಲ ಎನ್ನುವುದು ಇಲ್ಲಿ ಹೆಚ್ಚು ಸೂಕ್ತ, ಅಲ್ಲವೆ?

Nov 19, 2006

The name is Bond, ‘Money’ Minting Bond!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಡಿಸೆಂಬರ್ 1, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಇದೇ ನವೆಂಬರ್ 17 ರಂದು ಹೊಸ ಜೇಮ್ಸ್ ಬಾಂಡ್ ಚಲನಚಿತ್ರ 'ಕೆಸೀನೊ ರಾಯೇಲ್' ವಿಶ್ವದಾದ್ಯಂತ ಬಿಡುಗಡೆಯಾಯಿತು. ಈ ಚಿತ್ರ ಜೇಮ್ಸ್ ಬಾಂಡ್ ಚಿತ್ರಪರಂಪರೆಯಲ್ಲಿ ಅನೇಕ ಕಾರಣಗಳಿಗಾಗಿ ವಿಶಿಷ್ಟವಾದುದು. 21 ನೆ ಜೇಮ್ಸ್ ಬಾಂಡ್ ಚಿತ್ರ; ಆದರೆ, ಇಯಾನ್ ಫ್ಲೆಮಿಂಗ್ ಬರೆದ ಜೇಮ್ಸ್ ಬಾಂಡ್ ಕಾದಂಬರಿ ಸರಣಿಯಲ್ಲಿಯ ಮೊಟ್ಟಮೊದಲ ಕಾದಂಬರಿಯ ಮೇಲೆ ಆಧಾರಿತವಾದ ಚಿತ್ರ. ಕಳೆದ ನಾಲ್ಕು ಬಾಂಡ್ ಚಿತ್ರಗಳಲ್ಲಿ ಬಾಂಡ್ ಆಗಿದ್ದ ಪಿಯರ್ಸ್ ಬ್ರಾಸ್ನನ್ ಈ ಚಿತ್ರದಲ್ಲಿ ಇಲ್ಲ. ಇದರಲ್ಲಿ ಬಾಂಡ್ ಆಗಿರುವಾತ ಡೇನಿಯಲ್ ಕ್ರೆಗ್. ಹೊಂಬಣ್ಣದ ಕೂದಲಿನ ಚೆಲುವ. ಬಹುಶಃ ಹಿಂದಿನ ಎಲ್ಲಾ ಬಾಂಡ್‌ಗಳಿಗಿಂತ ಒಳ್ಳೆಯ ದೈಹಿಕ ಮೈಕಟ್ಟು ಹೊಂದಿರುವ ಬಾಂಡ್ ಈತ. ಈ ಚಿತ್ರದ ಮೊದಲ ಹತ್ತು ನಿಮಿಷಗಳ ಮಂಗಗಳಂತೆ ಎಗರೆಗರಿ ಓಡುವ ಛೇಸಿಂಗ್‌ನಲ್ಲಂತೂ ಕನ್‍ವಿನ್ಸಿಂಗ್ ಆಗಿ ಮಾಡಿದ್ದಾನೆ.

ಜೇಮ್ಸ್ ಬಾಂಡ್‌ನ ಸಾಹಸಗಳು ಬೆಳ್ಳಿತೆರೆಯ ಮೇಲೆ ಪ್ರಾರಂಭವಾದದ್ದು 1962 ರಲ್ಲಿ. ಅಲ್ಲಿಂದೀಚೆಗೆ 21 ಚಿತ್ರಗಳು ಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹುಟ್ಟು ಹಾಕಿದೆ. ಭಾರತದಲ್ಲಿಯೂ ಜೇಮ್ಸ್ ಬಾಂಡ್ ಬಹಳ ಜನಪ್ರಿಯ. ನಾನು ಇಲ್ಲಿ ಬೇ ಏರಿಯಾದಲ್ಲಿ ಮೊದಲ ದಿನವೆ ಕೆಸೀನೊ ರಾಯೇಲ್ ನೋಡಲು ಹೋಗಿದ್ದಾಗ, ಅದಕ್ಕೆ ಬಂದಿದ್ದಷ್ಟು ಭಾರತೀಯ ಪ್ರೇಕ್ಷಕರನ್ನು ನಾನು 'ಪೈರೆಟ್ಸ್ ಆಫ್ ದಿ ಕೆರಿಬಿಯನ್', 'ಸ್ಪೈಡರ್ ಮ್ಯಾನ್', 'ಲಾರ್ಡ್ ಆಫ್ ದಿ ರಿಂಗ್ಸ್', 'ಕಿಂಗ್ ಕಾಂಗ್‌' ನಂತಹ ಹಿಟ್ ಚಿತ್ರಗಳನ್ನು ನೋಡಲು ಹೋಗಿದ್ದಾಗಲೂ ನೋಡಿರಲಿಲ್ಲ. ಭಾರತದಲ್ಲಿ ಇಂಗ್ಲಿಷ್ ಸಿನೆಮಾ ಅಥವ ಸಾಹಸಭರಿತ ಸಿನೆಮಾ ನೋಡುವವರಲ್ಲಿ ಜೇಮ್ಸ್ ಬಾಂಡ್ ಎಷ್ಟು ಜನಪ್ರಿಯ ಎಂದು ಈ ಚಿಕ್ಕ ಸ್ಯಾಂಪಲ್ ತೋರಿಸುತ್ತದೆ.

ಇಲ್ಲಿ ಇನ್ನೂ ವಿಶೇಷವಾದದ್ದು ಜೇಮ್ಸ್ ಬಾಂಡ್ ಚಲನಚಿತ್ರಗಳು ಇಲ್ಲಿಯ ತನಕ ಸಂಪಾದಿಸಿರುವ, ಸಂಪಾದಿಸುತ್ತಿರುವ ದುಡ್ಡು ಎಷ್ಟು, ಕೊಟ್ಟಿರುವ, ಕೊಡುತ್ತಿರುವ ಕೆಲಸಗಳು ಎಷ್ಟು ಎಂದು. ಇಲ್ಲಿಯ ತನಕ ಜೇಮ್ಸ್ ಬಾಂಡ್ ಚಲನಚಿತ್ರ ಮಾಡಲು ತೊಡಗಿಸಿರುವ ಹಣ ಸುಮಾರು ಮೂರೂವರೆ ಸಾವಿರ ಕೋಟಿ ರೂಪಾಯಿಗಳು. ಅದು ಗಳಿಸಿರುವುದು 18000 ಕೋಟಿ ರೂಪಾಯಿಗಳು. ಈ ಹಿನ್ನೆಲೆಯಲ್ಲಿ, ಜೇಮ್ಸ್ ಬಾಂಡ್ ಎನ್ನುವುದಕ್ಕಿಂತ ಮನಿ ಬಾಂಡ್ ಎನ್ನುವುದೇ ಸೂಕ್ತ.

ಒಂದು ಚಲನಚಿತ್ರ ಇಂತಹ ಮಟ್ಟದಲ್ಲಿ ಹಣದ ವ್ಯವಹಾರ ಮಾಡಲು ಸಾಧ್ಯವಾಗಿದೆ ಅಂದರೆ, ಅದು ಎಷ್ಟೊಂದು ಜನರಿಗೆ ಉದ್ಯೋಗ, ನೆಮ್ಮದಿ, ಖುಷಿ ಕೊಟ್ಟಿದೆ ಎಂದು ಕೇವಲ ಊಹಿಸಿಕೊಳ್ಳಬಹುದು. ಚಲನಚಿತ್ರ ಉದ್ಯಮ ನೇರವಾಗಿ ಮತ್ತು ಪರೋಕ್ಷವಾಗಿ ಅನೇಕ ಸ್ತರಗಳಲ್ಲಿ ಉದ್ಯೋಗ ಸೃಷ್ಟಿಸುತ್ತದೆ. ಈ ರಂಗಕ್ಕೆ ಬಿಟ್ಟರೆ ಬೇರೆ ಇನ್ಯಾವ ರಂಗಕ್ಕೂ ಈ ಪರಿಯ ತಾಕತ್ತಾಗಲಿ, ಪ್ರಭಾವವಾಗಲಿ, ಆಕರ್ಷಣೆಯಾಗಲಿ ಇಲ್ಲ.

ಇದನ್ನು ನಾವು ನಮ್ಮ ಕನ್ನಡ ಚಿತ್ರರಂಗದ ಹಿನ್ನೆಲೆಯಲ್ಲಿಯೆ ತೆಗೆದುಕೊಳ್ಳಬಹುದು. ಕನ್ನಡ ಚಲನಚಿತ್ರ ನಿರ್ಮಾಪಕರು ವರ್ಷಕ್ಕೆ ಕೇವಲ 70-80 ಕೋಟಿಯಷ್ಟು ಹಣವನ್ನು ಮಾತ್ರ ಕನ್ನಡ ಸಿನೆಮಾ ತಯಾರಿಕೆಯಲ್ಲಿ ತೊಡಗಿಸಿದರೂ, ಈ ಕ್ಷೇತ್ರದ ಉದ್ಯೋಗ ನಿರ್ಮಾಣದ ಪ್ರಭಾವ ಅದರಿಂದಲೂ ಬಹಳಷ್ಟು ಪಟ್ಟು ಆಚೆಗಿದೆ. ಒಂದು ಚಲನಚಿತ್ರ ನಿರ್ಮಾಣವಾಗುತ್ತಿರುವಷ್ಟು ಕಾಲವೂ ನೂರಾರು ಜನರಿಗೆ ಅದು ಉದ್ಯೋಗ ಕೊಟ್ಟಿರುತ್ತದೆ. ನಟಕಲಾವಿದರು, ತಂತ್ರಜ್ಞರು, ಲೈಟ್ ಬಾಯ್‌ಗಳು, ಡ್ರೈವರ್‌ಗಳು, ಊಟ ಸಪ್ಲೈ ಮಾಡುವವರು, ಸೆಟ್ ಹಾಕುವವರು, ಸಂಗೀತಗಾರರು, ಸೃಜನಶೀಲ ಬರಹಗಾರರು ಇತ್ಯಾದಿ. ನಿರ್ಮಾಣದ ನಂತರ ಪ್ರಚಾರದ ಹೆಸರಿನಲ್ಲಿ ನೂರಾರು ಜನ ಮುದ್ರಣ ರಂಗದಲ್ಲಿ, ರಾಜ್ಯದಾದ್ಯಂತ ಭಿತ್ತಿಚಿತ್ರ ಅಂಟಿಸುವುದು, ಅನೇಕ ಕಡೆ ಪ್ರಮೋಟ್ ಮಾಡುವುದು, ಪತ್ರಿಕಾ ಬರಹಗಾರರಿಗೆ ಸುದ್ದಿಸಾಮಗ್ರಿ, ಇತ್ಯಾದಿ ಎಡೆಗಳಲ್ಲಿ ಕೆಲಸ ಮಾಡಿರುತ್ತಾರೆ. ಒಳ್ಳೆಯ ಹಾಡುಗಳಿದ್ದರೆ ಆಡಿಯೊ ಕೆಸೆಟ್, ಸೀಡಿ ಕಂಪನಿಗಳ ಹತ್ತಾರು ಜನರಿಗೆ, ಮಾರುವ ಸಾವಿರಾರು ಅಂಗಡಿಯವರಿಗೆ ಬ್ಯುಸಿನೆಸ್ ಹುಟ್ಟಿರುತ್ತದೆ. ಸಿನೆಮ ಬಿಡುಗಡೆಯಾದ ನಂತರ ರಾಜ್ಯದಾದ್ಯಂತ ನೂರಾರು ಥಿಯೇಟರ್ ಕೆಲಸಗಾರರಿಗೆ ಒಂದು ತೋಪು ಚಿತ್ರ ಕನಿಷ್ಠ ಒಂದು ವಾರ ನೌಕರಿ ಕೊಟ್ಟರೆ, ಒಂದು ಹಿಟ್ ಚಿತ್ರ ತಿಂಗಳುಗಟ್ಟಲೆ ಕೆಲಸ ಕೊಟ್ಟಿರುತ್ತದೆ. ನಂತರ ಟಿವಿ ಪ್ರದರ್ಶನದಿಂದ ಮತ್ತಷ್ಟು ಜನರಿಗೆ ಉದ್ಯೋಗ, ವ್ಯವಹಾರ ಸಿಗುತ್ತದೆ. ವಿಸೀಡಿ, ಡೀವಿಡಿಗಳ ಮಾರಾಟದಿಂದ ಮತ್ತಷ್ಟು ಜನರಿಗೆ ಉದ್ಯೋಗ ಸಿಗುತ್ತದೆ. ಹೊಸ ಥಿಯೇಟರ್‌ಗಳಿಂದ ಕಟ್ಟಡ ನಿರ್ಮಾಣದಲ್ಲಿರುವ ದಿನಗೂಲಿಗಳಿಗೆ ಒಂದಷ್ಟು ದಿನ ನೆಮ್ಮದಿಯ ಖಾತರಿ. (ಬೆಂಗಳೂರಿನಲ್ಲಿ ಥಿಯೇಟರ್‌ಗಳೆಲ್ಲ ಕಾಂಪ್ಲೆಕ್ಸ್‌ಗಳಾದವು ಎನ್ನುವ ಭಯ ಕಳೆದ ನಾಲ್ಕೈದು ವರ್ಷಗಳಲ್ಲಿ ಒಂದೇ ಕಾಂಪ್ಲೆಕ್ಸ್‌ನಲ್ಲಿ ಐದಾರು, ಹತ್ತಾರು ಥಿಯೇಟರ್‌ಗಳಿರುವ ಮಲ್ಟಿಪ್ಲೆಕ್ಸ್‌ಗಳಿಂದಾಗಿ ದೂರವಾಗಿರುವುದು ನಿಜವಲ್ಲವೆ?)

ಇಲ್ಲಿ ಈ ವಿಷಯನ್ನು ಪ್ರಸ್ತಾಪಿಸಲು ಕಾರಣ, ಈ ಮಧ್ಯೆ ಕನ್ನಡ ಚಿತ್ರರಂಗ ವಿಪರೀತ ಗೊಂದಲದಲ್ಲಿದೆ. ನಮ್ಮ ಪತ್ರಿಕೆಯಲ್ಲಿಯೆ ಎರಡು ವಾರಗಳ ಹಿಂದೆ ಇದೇ ವಿಷಯವಾಗಿ ಮುಖಪುಟ ಲೇಖನ ಬಂದಿತ್ತು. ಕೆಲವು ನಿರ್ಮಾಪಕರು ಸಿನೆಮಾ ನಿರ್ಮಿಸುವುದಿಲ್ಲ, ಡಬ್ ಮಾಡುತ್ತೇವೆ ಎನ್ನುತ್ತಿದ್ದಾರೆ. ಕಾರ್ಮಿಕರ ಒಕ್ಕೂಟ ಬಂದ್ ಆಚರಿಸುವುದಾಗಿ ಹೇಳುತ್ತಿದ್ದಾರೆ. ಉದ್ಯಮದ ವೃತ್ತಿಪರತೆ ಅರಿಯದವರು ನಟರಿಗೆ ಆಸಿಡ್ ಹಾಕುವುದಾಗಿ ಬೆದರಿಸುತ್ತಿದ್ದಾರೆ. ಬೆಂಕಿ ಹೊತ್ತಿಕೊಂಡಿರುವ ಸಮಯದಲ್ಲಿ, 'ಉದ್ಯಮದ ಸಮಸ್ಯೆಯನ್ನು ಪರಿಹರಿಸುವುದಾಗಿ ಅಂಬರೀಶ್ ಹೇಳಿದ್ದಾರೆ, ಅವರೆ ಮಾಡಲಿ' ಎಂದು ಸರ್ಕಾರ ರಾಜಕೀಯ ಮಾಡುತ್ತಿದೆ. 'ಸರ್ಕಾರಕ್ಕಿಂತ ವ್ಯಕ್ತಿಗಳು ಒಳ್ಳೆಯ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ,' ಎಂದು ಹೇಳಿದ ನೊಬೆಲ್ ವಿಜೇತ ಅರ್ಥತಜ್ಞ ಮಿಲ್ಟನ್ ಫ್ರೀಡ್‌ಮನ್ ಹೇಳಿಕೆಯನ್ನು ನಮ್ಮ ಸರ್ಕಾರ ಈ ರೀತಿ ಧೃಢಪಡಿಸುತ್ತಿದೆ!

ಈ ವಾರ ತನ್ನ 94 ನೆ ವಯಸ್ಸಿನಲ್ಲಿ ತೀರಿಕೊಂಡ ಐದಡಿ ಎತ್ತರದ ಫ್ರೀಡ್‌ಮನ್ ಹೇಳಿರುವ ಇನ್ನೊಂದು ಮಾತು: 'ಸರ್ಕಾರಗಳು ಉದ್ಯೋಗಗಳನ್ನು ಸ್ಟೃಸುವುದಿಲ್ಲ. ಅವೇನಿದ್ದರೂ ಉದ್ಯೋಗಗಳನ್ನು ಇನ್ನೊಂದು ಕಡೆಗೆ ಸ್ಥಳಾಂತರಿಸುತ್ತವೆ.' ಕನ್ನಡ ಸಿನೆಮಾ ನಿರ್ಮಾಣದಿಂದ ಸೃಷ್ಟಿಯಾಗಿರುವ ಉದ್ಯೋಗ ತನ್ನ ನಿಷ್ಕ್ರಿಯತೆಯಿಂದಾಗಿ ಹಿಂದಿ, ಇಂಗ್ಲಿಷ್, ತೆಲುಗು, ತಮಿಳು ಚಿತ್ರ ರಂಗಕ್ಕೆ ವರ್ಗಾಂತರವಾಗದಂತೆ ಕರ್ನಾಟಕ ಸರ್ಕಾರ ನೋಡಿಕೊಳ್ಳಬೇಕು. ಅದು ಸಾಧ್ಯವಿದೆ ಕೂಡ. ಜಾಗತೀಕರಣದಲ್ಲಿ ಸರ್ಕಾರಗಳು ಉದ್ಯೋಗ ಸೃಷ್ಟಿ ಮಾಡಲಾರವು. ಆದರೆ ಉದ್ಯೋಗ ಸೃಷ್ಟಿಯ ವಾತಾವರಣವನ್ನು ಸಮರ್ಥವಾಗಿ ಸೃಷ್ಟಿಸಬಹುದು. ಈಗಿರುವ ಅವಕಾಶಗಳನ್ನು, ಬರಲಿರುವ ಅವಕಾಶಗಳನ್ನು ಹಾಳು ಮಾಡಬಾರದು.

ಇನ್ನು, ಕೆಸೀನೊ ರಾಯೇಲ್ ಬಗ್ಗೆ ಹೇಳಬೇಕೆಂದರೆ, ಇದೇನೂ ಅಂತಹ ಗ್ರೇಟ್ ಬಾಂಡ್ ಚಿತ್ರವಲ್ಲ. ಹೊಸ ಬಾಂಡ್ ಚಿತ್ರವನ್ನು ಬಯಸುವ ತಕ್ಷಣದ ಹಸಿವನ್ನು ಸ್ವಲ್ಪ ಮಟ್ಟಿಗೆ ತಣಿಸುತ್ತದೆ. ಮೈನವಿರೇಳಿಸುವ ಆಕ್ಷನ್ ಮೊದಲಾರ್ಧದಲ್ಲಿಯೇ ಬಂದು ಕೊನೆಕೊನೆಗೆ ಬೋರು ಹೊಡೆಸುತ್ತಾ ಹೋಗುತ್ತದೆ. ಹಿಂದಿನ ಕೆಲವು ಚಿತ್ರಗಳಲ್ಲಿ ಬಾಂಡ್ ಕೊನೆಯ ಕ್ಷಣದಲ್ಲಿ ಪ್ರಪಂಚವನ್ನು ಉಳಿಸುತ್ತಿದ್ದ. ಈ ಬಾಂಡ್ ಅದನ್ನು ಮಾಡುವುದಿಲ್ಲ. ಭಯೋತ್ಪಾದಕರ ಹಣದ ವ್ಯವಹಾರವನ್ನು ಹೊರಗೆಳೆಯುವ ಎಳೆ ಇದ್ದರೂ ಅದನ್ನೂ ಅಮುಖ್ಯ ಎನ್ನುವಂತೆ ಮಾಡಿಬಿಟ್ಟಿದ್ದಾರೆ. ಶ್ಯಾನ್ ಕಾನರಿಯ ಬಾಂಡ್ ಸಿನೆಮಾಗಳು ಮತ್ತು ಬ್ರಾಸ್ನನ್‌ನ ಗೋಲ್ಡನ್ ಐ, ಡೈ ಅನದರ್ ಡೇ ಗುಂಗಿನಲ್ಲಿರುವವರಿಗೆ ಮೊದಲರ್ಧ ಮಾತ್ರ ಇಷ್ಟವಾಗಬಹುದು. ಆದರೂ, ಚಿತ್ರ ಬಿಡುಗಡೆಯಾದ ಮೂರೇ ದಿನದಲ್ಲಿ ಅಮೇರಿಕ ಒಂದರಲ್ಲೆ 180 ಕೋಟಿ, ಮಿಕ್ಕ 27 ದೇಶಗಳಲ್ಲಿ 190 ಕೋಟಿ ರೂಪಾಯಿಯಷ್ಟು ಟಿಕೆಟ್ ಮಾರಾಟವಾಗಿವೆ! The name is Bond, 'Money' Minting Bond!

Nov 12, 2006

ಬುಷ್ ಹಲ್ಲು ಕಿತ್ತ ಅಮೇರಿಕನ್ನರು

ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ನವೆಂಬರ್ 24, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

ಕಳೆದ ಹದಿನೈದು ವರ್ಷಗಳಿಂದ ನಾನು ನನ್ನೂರಿನ ಗ್ರಾಮ ಪಂಚಾಯಿತಿಯಿಂದ ಹಿಡಿದು ದೇಶದ ಲೋಕಸಭಾ ಚುನಾವಣೆಗಳ ತನಕ ಅತೀವ ಆಸಕ್ತಿಯಿಂದ, ಭಯದಿಂದ, ಆಶಾವಾದದಿಂದ ನೋಡುತ್ತ ಬಂದಿದ್ದೇನೆ. ಈ ಚುನಾವಣೆಗಳಲ್ಲಿ ಗೆದ್ದು ಬರುತ್ತಿದ್ದ ರೌಡಿಗಳಂತಿದ್ದ ಕೆಲವು ಅಭ್ಯರ್ಥಿಗಳನ್ನು, ಅವರ ಪಕ್ಷಗಳನ್ನು, ಅದರ ಮುಖಂಡರುಗಳನ್ನು ನೋಡುತ್ತಿದ್ದಾಗ ಮೊದಮೊದಲು 'ಇದೇನು ಶಿವನೆ, ಇವರ ಅಧಿಕಾರಾವಧಿಯಲ್ಲಿ ಜನ ಬದುಕಲು ಸಾಧ್ಯವೆ, ಸಹನೀಯ ಜೀವನ ಸಾಧ್ಯವೆ, ಭವಿಷ್ಯವುಂಟೆ' ಎಂದೆಲ್ಲ ಭಯವಾಗುತ್ತಿತ್ತು. ಆಗೆಲ್ಲ ತಕ್ಷಣದ ಕಾಲವೆ ಶಾಶ್ವತ ಎನ್ನುವ ನಂಬಿಕೆಯಿತ್ತೇನೊ? ಆದರೆ ಹೀಗೆ ಭಯ, ರೇಜಿಗೆ ಹುಟ್ಟಿಸುತ್ತಿದ್ದ ಗೆದ್ದವರು ಮುಂದಿನ ಚುನಾವಣೆಗಳಲ್ಲಿ ಸೋತು ಈ ಜನತಂತ್ರ ವ್ಯವಸ್ಥೆಯನ್ನು ಮತ್ತೊಂದು ಮಗ್ಗುಲಿನಿಂದ ನೋಡುವಂತೆ ಮಾಡುತ್ತಿತ್ತು. ಆಗ ಗೊತ್ತಾಗುತ್ತಿದ್ದದ್ದು ಜೀವನದ ಕ್ಷಣಿಕತೆ, ಈ ಪ್ರಜಾಪ್ರಭುತ್ವದ ಮಹತ್ವ ಮತ್ತು ಇದರ ಬ್ಯೂಟಿ.

ನಮ್ಮ ಕರ್ನಾಟಕದ ದೊಡ್ಡ ಉದಾಹರಣೆಗಳನ್ನೆ ತೆಗೆದುಕೊಳ್ಳೋಣ:

  • ಗುಂಡೂರಾಯರು ತಮ್ಮ ಅಧಿಕಾರವಧಿಯ ಕೊನೆಯಲ್ಲಿ ಬಂದ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೆ ಸೋತರು.
  • ಜೆ.ಎಚ್. ಪಟೇಲರದು ಸಹ ಹಾಗೆಯೇ ಆಗಿತ್ತು.
  • ಎಸ್ಸೆಮ್ ಕೃಷ್ಣರು ಉಪಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸೋತರು; ನಂತರ ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರ ಬದಲಾಯಿಸಿದರು.
  • ಆರೇಳು ವರ್ಷಗಳ ಹಿಂದೆ ಇನ್ನೇನು ನಾನು ಮುಖ್ಯಮಂತ್ರಿ ಆಗಿಬಿಟ್ಟೆ ಎಂದು ಯಡಿಯೂರಪ್ಪನವರು ಸೂಟುಬೂಟಿನೊಂದಿಗೆ ಸಿದ್ದವಾಗುತ್ತಿದ್ದಾಗ ಶಿಕಾರಿಪುರದ ಜನ ಅವರನ್ನು ಶಾಸಕರನ್ನಾಗಿಯೆ ಮಾಡಲಿಲ್ಲ. (ಹತ್ತು ವರ್ಷಗಳ ಹಿಂದೆ ಈಗಿನ ಕೇರಳದ ಮುಖ್ಯಮಂತ್ರಿಯ ಸ್ಥಿತಿಯೂ ಅದೇ ಆಗಿತ್ತು.)
  • ಹೆಗಡೆಯವರು ಐದಾರು ವರ್ಷ ಮುಖ್ಯಮಂತ್ರಿಗಳಾಗಿ ಉತ್ತರ ಕರ್ನಾಟಕದಲ್ಲಿ ಒಳ್ಳೆಯ ವರ್ಚಸ್ಸು ಹೊಂದಿದ್ದರೂ ಬಾಗಲಕೋಟೆಯಲ್ಲಿ ಸೋತರು.
  • ಇಂತಹ ಉದಾಹರಣೆಗಳಿಗೆ ಶಿಖರಪ್ರಾಯವಾದದ್ದು ತಾವು ಪ್ರಧಾನ ಮಂತ್ರಿಯಾದ ಮೇಲೆ ಬಂದ ಮೊದಲ ಲೋಕಸಭಾ ಚುನಾವಣೆಯಲ್ಲಿಯೆ ದೇವೇಗೌಡರು ಹಾಸನದಲ್ಲಿ ಸೋತಿದ್ದು.
ಮೊದಲೆಲ್ಲ ಐದು ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಜನಪ್ರತಿನಿಧಿಗಳ ಮೌಲ್ಯಮಾಪನ ಈಗ ಅಧಿಕಾರ ವಿಕೇಂದ್ರೀಕರಣದ ಪ್ರಯುಕ್ತ ಪರೋಕ್ಷವಾಗಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರ ಸಭೆ, ಜಿಲ್ಲಾ ಪಂಚಾಯಿತಿ, ವಿಧಾನ ಸಭೆ, ಲೋಕ ಸಭೆ, ಹೀಗೆ ಪ್ರತಿಯೊಂದು ಚುನಾವಣೆಯಲ್ಲಿಯೂ ನಡೆಯುತ್ತಿದೆ. ಸ್ವಲ್ಪ ಹದ್ದು ಮೀರುತ್ತಿದ್ದಾರೆ ಎನ್ನಿಸಿದರೆ ಸಾಕು, ಜನ ಸದ್ದಿಲ್ಲದೆ ಬುದ್ದಿ ಕಲಿಸುತ್ತಾರೆ. ಅಲ್ಲಲ್ಲಿ ಕೆಲವು ಅಪವಾದಗಳಿರಬಹುದು. ಆದರೆ ಜನತಂತ್ರ ವ್ಯವಸ್ಥೆ ಎಂತಹವರಿಗೂ ಚೆಕ್ಸ್ ಅಂಡ್ ಬ್ಯಾಲೆನ್ಸ್ ಇಟ್ಟಿದೆ, ಇಡುತ್ತಿದೆ. ಇದನ್ನೆಲ್ಲ ನೋಡಿದ ಮೇಲೆ, ಈ ವ್ಯವಸ್ಥೆಗೆ ಅಪಾಯ ಎನ್ನಿಸಿದವರು ಎಷ್ಟೇ ಕೂಗಾಡಲಿ, ಎಗರಾಡಲಿ, ಅದೆಲ್ಲ ಮುಂದಿನ ಚುನಾವಣೆಯ ತನಕವಷ್ಟೆ; ಆಗ ಕಾದಿದೆ ಅವರಿಗೆ ಮುದುಕಿ ಹಬ್ಬ. ನಾವು ಅವರನ್ನು ಔಟ್‌ಲಿವ್ ಮಾಡಬೇಕಷ್ಟೆ, ಎನ್ನಿಸದಿರದು.

ಜಾರ್ಜ್ ಬುಷ್ ಕ್ಲಿಂಟನ್‌ರಿಂದ ಅಧಿಕಾರ ಸ್ವೀಕರಿಸಿದ ಒಂದು ತಿಂಗಳ ಹಿಂದೆಯಷ್ಟೆ ನಾನು ಈ ದೇಶಕ್ಕೆ ಮೊದಲ ಸಲ ಬಂದಿದ್ದು. ಅಂದಿನಿಂದ ಜಾರ್ಜ್ ಬುಷ್ ಮತ್ತು ಇಲ್ಲಿನ ರಾಜಕೀಯವನ್ನು ಗಮನಿಸುತ್ತ ಬಂದಿದ್ದೇನೆ. ನಮ್ಮಲ್ಲಿ ಆರೆಸ್ಸೆಸ್ ಮತ್ತು ವಿಎಚ್‌ಪಿಗಳು ಹೊಂದಿರುವಂತಹುದೆ ಸಂಘಟನೆ ಮತ್ತು ಚುನಾವಣೆಯ ಹಿಂದಿನ ದಿನದ ಸಕ್ರಿಯತೆಯನ್ನು ಇಲ್ಲಿನ ಕ್ರೈಸ್ತ ಬಲಪಂಥೀಯರು ಬುಷ್‌ರ ರಿಪಬ್ಲಿಕನ್ ಪಕ್ಷದೆಡೆಗೆ ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಇನ್ನೇನು ಸೋಲುವುದು ಖಚಿತ ಎನ್ನುವಂತಹ ಸ್ಥಿತಿಯಲ್ಲಿ ಆರ್ಥಿಕ ಮತ್ತು ಕರ್ಮಠ ಸಂಪ್ರದಾಯವಾದಿಗಳ ಹಾಗು ಕ್ರಿಶ್ಚಿಯನ್ ಬಲಪಂಥೀಯರ ಆ ಕೊನೆಕ್ಷಣದ ಚುರುಕುತನದಿಂದಾಗಿ ಜಾರ್ಜ್ ಬುಷ್ ಡೆಮೊಕ್ರಾಟಿಕ್ ಪಕ್ಷದ ಜಾನ್ ಕೆರ್ರಿಯ ಮೇಲೆ ಗೆದ್ದರು. ಎರಡನೆ ಅವಧಿಯಲ್ಲಿ ಬುಷ್‌ರು ಇನ್ನೇನು ಮಾಡುತ್ತಾರೊ ಎಂದು ಇಲ್ಲಿನ ಉದಾರವಾದಿಗಳಿಗೆ ಆಗ ಭಯವಾಗಿದ್ದು ನಿಜ. ಆದರೆ, ತಮ್ಮ ಅಪ್ಪ ಗೆಲ್ಲಲಾಗದ ಎರಡನೆ ಅವಧಿಯನ್ನು ನಾನು ಗೆದ್ದು ಸಾಧಿಸಿದೆ ಎನ್ನುವ ತೃಪ್ತಿಯಲ್ಲಿ ಬುಷ್‌ರು ಅಂತಹ ದೊಡ್ಡ ತಪ್ಪುಗಳನ್ನು ಮಾಡಲಾರರು; ಯಾಕೆಂದರೆ, ಅವರು ತಮಾಷೆಯ, ಜೀವನವನ್ನು ಸ್ವಲ್ಪ ಮಜವಾಗಿಯೆ ತೆಗೆದುಕೊಳ್ಳುವ ಮನುಷ್ಯ; ಕಠಿಣ ಪರಿಶ್ರಮಿಯಾಗಲಿ, ದೊಡ್ಡ ಮಹತ್ವಾಕಾಂಕ್ಷಿಯಾಗಲಿ ಅಲ್ಲ, ಎಂದು ನನಗನ್ನಿಸಿತ್ತು.

ಆದರೆ ತಿಂಗಳ ಹಿಂದೆ ನ್ಯೂಸ್‍ವೀಕ್ ವಾರಪತ್ರಿಕೆಯಲ್ಲಿ ಪತ್ರಕರ್ತ ಬಾಬ್ ವುಡ್‌ವರ್ಡ್ ಬರೆದಿರುವ ಇತ್ತೀಚಿನ ಬೆಸ್ಟ್ ಸೆಲ್ಲರ್ "State of Denial" ಪುಸ್ತಕದ ಹತ್ತಿಪ್ಪತ್ತು ಪುಟಗಳನ್ನು ಓದುತ್ತಿದ್ದಾಗ, 'ಓ ಗಾಡ್, ಈ ಮನುಷ್ಯ ತಮ್ಮ ಅಧಿಕಾರವಧಿಯ ಇನ್ನೆರಡು ವರ್ಷಗಳಲ್ಲಿ ಅಮೇರಿಕಾವನ್ನು ಯಾವ ಯಾವ ದೇಶಗಳಿಗೆ ನುಗ್ಗಿಸುತ್ತಾರೊ, ಏನೇನು ಕಾದಿದೆಯೊ,' ಅನ್ನಿಸಿತು. ಯಾಕೆಂದರೆ ಆ ಪುಸ್ತಕದಲ್ಲಿ ಬುಷ್ ಮತ್ತು ಅವರ ಅಂತರಂಗದ ಮಿತ್ರರು ಎಷ್ಟು ಬೇಜವಬ್ದಾರಿಯಿಂದ, ನಿರ್ಲಕ್ಷ್ಯದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಬುಷ್ ಎಷ್ಟೊಂದು ಹುಡುಗಾಟಿಕೆಯ ಮನುಷ್ಯ, ಎಂಬುದರ ಬಗ್ಗೆ ವಿವರವಾದ ಚಿತ್ರಣವಿದೆ. ಅದನ್ನು ಓದಿದ ನಂತರ, ಇಂತಹವರ ಕೈಯಲ್ಲಿ ಎಷ್ಟೊಂದು ಕೋಟ್ಯಾಂತರ ಜನರ ಭವಿಷ್ಯ ಇದೆ ಎಂದು ಭಯವಾಗದೆ ಇರದು. ಆಗ ನನಗೆ ಅನ್ನಿಸಲಾರಂಭಿಸಿದ್ದು, ಈ ಬುಷ್‌ಗೆ ಕಡಿವಾಣ ಇಲ್ಲವೆ ಎಂದು.

ಹಾಗನ್ನಿಸಿದ ಒಂದೆರಡು ವಾರದಲ್ಲಿಯೆ ಅಮೇರಿಕದ ಜನಪ್ರತಿನಿಧಿ ಸಭೆ ಮತ್ತು ಸೆನೆಟ್‌ನ ಕೆಲವು ಸ್ಥಾನಗಳಿಗೆ ನವೆಂಬರ್ ಏಳರಂದು ನಡೆವ ಚುನಾವಣೆಯಲ್ಲಿ ಬುಷ್‌ರ ಪಕ್ಷಕ್ಕೆ ಸೋಲು ಕಾದಿದೆ, ಎರಡೂ ಮನೆಗಳಲ್ಲಿ ಅವರ ಬಹುಮತ ನಷ್ಟವಾಗಲಿದೆ ಎಂದು ಸರ್ವೇಗಳು ಹೇಳಲಾರಂಭಿಸಿದವು. ಆದರೆ 2004 ರ ಅಧ್ಯಕ್ಷ ಚುನಾವಣೆಯಲ್ಲಿ ರಿಪಬ್ಲಿಕನ್ನರು ಹಗಲು ರಾತ್ರಿ ಮಾಡಿದ ಕೆಲಸ, ತಮ್ಮ ಪರ ಇರುವ ಮತದಾರರು ಮತ ಚಲಾಯಿಸಿಯೇ ತೀರುವಂತೆ ಮಾಡಿದ ರೀತಿಯನ್ನು ಗಮನಿಸಿದ್ದವರಿಗೆ ಪಲಿತಾಂಶದ ಬಗ್ಗೆ ಗ್ಯಾರಂಟಿ ಇರಲಿಲ್ಲ. ನವೆಂಬರ್ ಏಳರಂದು ಅಮೇರಿಕ ಜನತೆ ಮಾತನಾಡಿತು. ಈಗ ಕೇಂದ್ರದ ಎರಡೂ ಮನೆಗಳ ಹಿಡಿತ ಡೆಮೊಕ್ರಾಟರ ಕೈಯಲ್ಲಿದೆ. ಬುಷ್‌ರು ತೆಗೆದುಕೊಳ್ಳುವ ದೊಡ್ಡ ಮಟ್ಟದ ನಿರ್ಧಾರಗಳೆಲ್ಲ ಇಲ್ಲಿ ಅಂಗೀಕಾರವಾಗಲೇಬೇಕು. ಅವರು ವೀಟೊ ಚಲಾಯಿಸಬಹುದಾದರೂ ಯಾವುದೇ ಮಸೂದೆಯನ್ನು ಅಥವ ಮಂತ್ರಿಗಳ ನೇಮಕಾತಿಯನ್ನು ಅನೇಕ ದಿನಗಳ filibuster ಚರ್ಚೆಯಲ್ಲಿ ತೊಡಗಿಸಿ ಬುಷ್‌ರ ಕೈಕಟ್ಟಿ ಹಾಕುವ ಅವಕಾಶಗಳು ಡೆಮೊಕ್ರ್ರಾಟರಿಗಿದೆ. ಇಲ್ಲಿಯ ತನಕ ಇರಾಕ್ ವೈಫಲ್ಯದಿಂದ ಹಿಡಿದು ಪ್ರತಿಯೊಂದು ವಿಷಯದಲ್ಲಿಯೂ "my way or the highway" ಎನ್ನುತ್ತಿದ್ದ ಬುಷ್ ಇನ್ನು ಮೇಲೆ ಬೇರೆಯವರ ಅಭಿಪ್ರಾಯಕ್ಕೂ ಬೆಲೆ ಕೊಡಬೇಕಾಗಿದೆ. ಇನ್ನೂ ಎರಡು ವರ್ಷಗಳ ತನಕ ಬುಷ್‌ರಿಗೆ ಕೊಟ್ಟಿದ್ದ ಅಪರಿಮಿತ ಅಧಿಕಾರವನ್ನು ಹೀಗೆ ಪರೋಕ್ಷವಾಗಿ ಅಮೇರಿಕನ್ನರು ಕಿತ್ತು ಹಾಕಿ, ಹದ್ದುಬಸ್ತಿನಲ್ಲಿಡುವ ವ್ಯವಸ್ಥೆ ಮಾಡಿದ್ದಾರೆ. ಇದೇ ಅಲ್ಲವೆ ಪ್ರಜಾಪ್ರಭುತ್ವದ ಸೌಂದರ್ಯ! ಇಲ್ಲಿ ಯಾರೂ ಶಾಶ್ವತವಲ್ಲ, ಅಂತಿಮವೂ ಅಲ್ಲ.

ಇನ್ನೊಂದು ಕಡೆ, "ಕೆಟ್ಟ ವಿದ್ಯಾರ್ಥಿಗಳು ಇರಾಕ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ," ಎಂದು ಬುಷ್‌ರನ್ನು ಉದ್ದೇಶಿಸಿ ಜಾನ್ ಕೆರಿ ಹೇಳಿದ್ದರೂ ನಂತರ ಅದು ತೆಗೆದುಕೊಂಡ ತಿರುವು ಕೆರ್ರಿಯ ಶ್ವೇತಭವನದ ಕನಸನ್ನು ಅಂತ್ಯಗೊಳಿಸಿದಂತಿದೆ. ರಿಪಬ್ಲಿಕನ್ ಪಕ್ಷದಿಂದ ಸಂಭವನೀಯ ಅಧ್ಯಕ್ಷ ಅಭ್ಯರ್ಥಿ ಎನ್ನಿಸಿದ್ದ ಜಾರ್ಜ್ ಅಲ್ಲೆನ್ ಭಾರತೀಯ ಮೂಲದ ವಿದ್ಯಾರ್ಥಿಯನ್ನು 'ಮೆಕಾಕ' (ಪೂರ್ವದ ಕಡೆಯ ಮಂಗ) ಎಂದು ಹಂಗಿಸಿದ್ದರಿಂದ ಸುಲಭವಾಗಿ ಗೆಲ್ಲಬಹುದಾದ ತಮ್ಮ ಸೆನೆಟ್ ಸ್ಥಾನವನ್ನು ಕಷ್ಟ ಪಟ್ಟು ಸೋತಿದ್ದಾರೆ. ಇವುಗಳ ನಡುವೆ, ಈಗ ಸ್ಪೀಕರ್ ಆಗಲಿರುವ ಮೊದಲ ಮಹಿಳೆ ನ್ಯಾನ್ಸಿ ಪೆಲೋಸಿ ಚುನಾವಣೆಗೆ ಮುಂಚೆ ಬುಷ್‌ರನ್ನು ಅಸಮರ್ಥ, ಅಯೋಗ್ಯ ಎಂದು ತೀಕ್ಷ್ಣವಾಗಿ ಟೀಕಿಸಿದ್ದರೂ ಚುನಾವಣೆ ಮುಗಿದ ನಂತರ ಬುಷ್ ಮತ್ತು ಗೆದ್ದ ಡೆಮೊಕ್ರಾಟರು ನಡೆದುಕೊಂಡ ಗೌರವಯುತ ರೀತಿ ಮತ್ತು ತೋರಿಸಿದ ಘನತೆ ನಿಜಕ್ಕೂ ಪ್ರಶಂಸನೀಯ. ಈ ಪ್ರಬುದ್ಧ ನಡವಳಿಕೆಯನ್ನು ನಾವು ಪ್ರಬುದ್ಧ ಪ್ರಜಾಪ್ರಭುತ್ವದಲ್ಲಿ, ಸುಶಿಕ್ಷಿತ ವಾತಾವರಣದಲ್ಲಿ ಮಾತ್ರ ನಿರೀಕ್ಷಿಸಲು ಸಾಧ್ಯ. ಯಾವುದೇ ವ್ಯಕ್ತಿಕೇಂದ್ರಿತ, ವಂಶಕೇಂದ್ರಿತ, ಮತಕೇಂದ್ರಿತ ಪಾಳೆಯಗಾರಿಕೆ ಆಡಳಿತ ವ್ಯವಸ್ಥೆಯಲ್ಲಲ್ಲ.

Nov 5, 2006

ಇದು ಲಂಚಕ್ಕಿಂತ ಪವರ್‌ಪುಲ್ ಕಣ್ರಿ!

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ನವೆಂಬರ್ 17, 2006 ರ ಸಂಚಿಕೆಯಲ್ಲಿ ಪ್ರಕಟವಾದದ್ದು)

"ಲಂಚ ಕೊಡಬೇಡಿ. ದಯವಿಟ್ಟು RTI ಬಳಸಿ. RTI is more powerful than giving bribe. ಬೇರೆಯವರಿಗೂ ಅದರ ಬಗ್ಗೆ ಹೇಳಿ. ಈಗಿನ RTI ಕಮಿಷನರ್ ಈ ಕಾಯ್ದೆಯನ್ನು ತೆಳುಮಾಡಲು, ಅದರ ಹಲ್ಲು ಕಿತ್ತುಹಾಕಲು ಪ್ರಯತ್ನಿಸುತ್ತಿದ್ದಾರೆ. ಮಾಜಿ ಬ್ಯೂರೋಕ್ರಾಟ್ ಆಗಿರುವ ಪ್ರಧಾನಿ ಮನಮೋಹನ್ ಸಿಂಗ್‌ರ ಬೆಂಬಲವೂ ಅಂತಹ ಪ್ರಯತ್ನಗಳಿಗೆ ಇದ್ದಂತಿದೆ. ನೀವು, ಇಲ್ಲಿರುವ NRI ಗಳು, ಭಾರತದ ಪ್ರಧಾನಿಗೆ, ಸೋನಿಯಾ ಗಾಂಧಿಗೆ, ರಾಷ್ಟ್ರಪತಿ ಕಲಮ್‌ರಿಗೆ ದಯವಿಟ್ಟು ಇಮೇಯ್ಲ್ ಮಾಡಿ. ಅವರ ಇಮೇಯ್ಲ್ ವಿಳಾಸ ಇಲ್ಲಿದೆ ನೋಡಿ. ಹಾಗೆಯೇ ಇದರ ಬಗ್ಗೆ ಅಲ್ಲಿನ ಪತ್ರಿಕೆಗಳಿಗೂ ಬರೆಯಿರಿ," ಎಂದು ಕ್ಯಾಲಿಪೋರ್ನಿಯಾದಲ್ಲಿನ ಅಂದಿನ ಸಭೆಯಲ್ಲಿ ಅರವಿಂದ್ ಖೇಜ್ರಿವಾಲ್ ವಿನಂತಿಸಿಕೊಂಡರು. ಇದು ಲಂಚಕ್ಕಿಂತ ಪವರ್‌ಪುಲ್ ಎನ್ನುವುದಕ್ಕೆ ಆಧಾರಪೂರ್ವಕವಾಗಿ ಅನೇಕ ಸತ್ಯ ಘಟನೆಗಳನ್ನು ಹೇಳಿದರು. ಕೆಳಗಿನದು ಅಂತಹ ಒಂದು ಘಟನೆ.

ದೆಹಲಿಯ ದಿನಗೂಲಿಯೊಬ್ಬನ ಹೆಸರು ನನ್ನು ಎಂದು. ಅವನು ತನ್ನ ರೇಷನ್ ಕಾರ್ಡ್ ಅನ್ನು ಕಳೆದುಕೊಂಡ ಪ್ರಯುಕ್ತ 2004 ರ ಜನವರಿಯಲ್ಲಿ ಡೂಪ್ಲಿಕೇಟ್ ಪ್ರತಿಗಾಗಿ ಸಂಬಂಧಪಟ್ಟ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ. ನಿಯಮಗಳ ಪ್ರಕಾರ ಅವನಿಗೆ ಹತ್ತು ದಿನದಲ್ಲಿ ಕಾರ್ಡ್ ದೊರಕಬೇಕಿತ್ತು. ಆದರೆ, ಮೂರು ತಿಂಗಳು ಸಂಬಂಧಿಸಿದ ಇಲಾಖೆಯ ಮೆಟ್ಟಿಲು ಹತ್ತಿಳಿದರೂ ಅವನಿಗೆ ರೇಷನ್ ಕಾರ್ಡ್ ಸಿಗಲಿಲ್ಲ. ಯಾಕೆ ಸಿಗಲಿಲ್ಲ ಅಂದರೆ ಅವನು ಸಂಬಂಧಿಸಿದವರಿಗೆ ಲಂಚವೆಂಬ ಅಮೇಧ್ಯ ತಿನ್ನಿಸದಿದ್ದರಿಂದ ಇರಬಹುದು. ಅವನು ಭಿಕಾರಿಯ ತರಹ ಬೇರೆ ಕಾಣಿಸುತ್ತಿದ್ದದ್ದರಿಂದ ಅನೇಕ ಸಲ ಅವನನ್ನು ಕಛೇರಿಯ ಒಳಗೇ ಬಿಡುತ್ತಿರಲಿಲ್ಲ! ದೆಹಲಿ ರಾಜ್ಯ ಸರ್ಕಾರ 2001 ರಿಂದಲೆ ತನ್ನ ನಾಗರೀಕರಿಗೆ ಮಾಹಿತಿ ಹಕ್ಕನ್ನು ಕೊಟ್ಟಿದೆ. ಮೂರು ತಿಂಗಳ ಅಲೆದಾಟದ ನಂತರ ನನ್ನು ಆ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಅರ್ಜಿ ಒಂದನ್ನು ಬರೆದು ಲಗಾಯಿಸಿದ. ಅದಾದ ನಾಲ್ಕನೆ ದಿನ ಪುಡ್ ಇನ್ಸ್‌ಪೆಕ್ಟರ್ ನೇರವಾಗಿ ನನ್ನುವಿನ ಮನೆಗೇ ಬಂದುಬಿಟ್ಟು, "ನಿಮ್ಮ ರೇಷನ್ ಕಾರ್ಡು ಸಿದ್ಧವಾಗಿದೆ. ದಯವಿಟ್ಟು ಬಂದು ಅದನ್ನು ತೆಗೆದುಕೊಳ್ಳಿ," ಎಂದು ವಿನಂತಿಸಿ ಹೋಗುತ್ತಾನೆ. ಅದನ್ನು ಪಡೆಯಲು ನನ್ನು ಆ ಕಛೇರಿಗೆ ಹೋದರೆ, ಅಲ್ಲಿನ ಹಿರಿಯ ಅಧಿಕಾರಿ ನನ್ನುವನ್ನು ನೇರವಾಗಿ ತನ್ನ ಛೇಂಬರಿಗೆ ಕರೆದುಕೊಂಡು ಹೋಗುತ್ತಾನೆ; ಅದೂ ವಿನಯ ಪೂರ್ವಕವಾಗಿ! ಅಲ್ಲಿ ನನ್ನುವಿಗೆ ಟೀ ಕೊಡಿಸುತ್ತಾನೆ; ರೇಷನ್ ಕಾರ್ಡೂ ಸಮರ್ಪಿಸುತ್ತಾನೆ! ಜೊತೆಗೆ ಒಂದು ವಿನಂತಿಯನ್ನೂ ಮಾಡಿಕೊಳ್ಳುತ್ತಾನೆ: "ದಯವಿಟ್ಟು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ನೀವು ಕೊಟ್ಟಿರುವ ಅರ್ಜಿಯನ್ನು ವಾಪಸು ತೆಗೆದುಕೊಳ್ಳಿ." ಆ ಕಛೇರಿಯ ಸಿಬ್ಬಂದಿಯ ಕಣ್ಣಿನಲ್ಲಿ ಮೂರು ತಿಂಗಳಿನಿಂದಲೂ ಬೀದಿಭಿಕಾರಿಯಾಗಿ ಕಾಣಿಸುತ್ತಿದ್ದ ನನ್ನು ಇದ್ದಕ್ಕಿದ್ದಂತೆ VIP ಆಗಿಬಿಟ್ಟ. ಇಷ್ಟಕ್ಕೂ ತನ್ನ ಅರ್ಜಿಯಲ್ಲಿ ನನ್ನು ಕೇಳಿದ್ದದ್ದು ನಾಲ್ಕೇ ನಾಲ್ಕು ಪ್ರಶ್ನೆಗಳು:

  1. ನಾನು ಇಂತಿಂತಹ ದಿನಾಂಕದಂದು ಡೂಪ್ಲಿಕೇಟ್ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದೇನೆ. ದಯವಿಟ್ಟು ಆ ಅರ್ಜಿಯ ಮೇಲೆ ಇಲ್ಲಿಯವರೆಗೂ ಆಗಿರುವ ಪ್ರತಿದಿನದ ಬೆಳವಣಿಗೆಯನ್ನು ತಿಳಿಸಿ.
  2. ದಯವಿಟ್ಟು ನನ್ನ ಅರ್ಜಿಯ ಮೇಲೆ ಯಾವ್ಯಾವ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಾಗಿತ್ತೊ ಅವರ ಹೆಸರುಗಳನ್ನು ತಿಳಿಸಿ.
  3. ಈ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ರೇಷನ್ ಕಾರ್ಡ್ ಕೊಡದೆ ನಿಯಮಗಳನ್ನು ಉಲ್ಲಂಘಿಸಿದ್ದಾರೆಯೆ? ಹಾಗಿದ್ದಲ್ಲಿ ಅವರ ಮೇಲೆ ಏನು ಕ್ರಮ ಕೈಗೊಳ್ಳಲಾಗುವುದು? ಯಾವ ದಿನಾಂಕದೊಳಗೆ ತೆಗೆದುಕೊಳ್ಳಲಾಗುವುದು?
  4. ನನಗೆ ನನ್ನ ರೇಷನ್ ಕಾರ್ಡು ಎಂದು ಸಿಗುತ್ತದೆ?

ಇಷ್ಟೊಂದು ಬಲಶಾಲಿಯಾದದ್ದು ಈ ಮಾಹಿತಿ ಹಕ್ಕು ಕಾಯ್ದೆ! ಕಳೆದ ವರ್ಷ ಭಾರತದ ಸಂಸತ್ತು ಅಂಗೀಕರಿಸಿದ ಕಾಯ್ದೆಯಡಿಯಲ್ಲಿ ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಾರ್ವಜನಿಕ ಇಲಾಖೆಗಳೂ, ಉದ್ದಿಮೆಗಳೂ ಬರುತ್ತವೆ. ಇಂತಹುದೊಂದು ಕಾಯ್ದೆ ದೇಶದಲ್ಲಿ ಮೊದಲ ಬಾರಿಗೆ ಸಾಧ್ಯವಾದದ್ದು ಅರುಣಾ ರಾಯ್ ಎಂಬ ಮಾಜಿ ಅಧಿಕಾರಿಂದಾಗಿ. ಅರುಣಾರವರೂ ಸಹ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಉತ್ತರ ಪ್ರದೇಶದ ಹಳ್ಳಿಗಳಲ್ಲಿ ಸಮಾಜ ಸೇವೆ ಮತ್ತು ಜನಜಾಗೃತಿ ಮೂಡಿಸುವ ಕೆಲಸಗಳಲ್ಲಿ ಬಹಳ ಹಿಂದಿನಿಂದಲೂ ತೊಡಗಿದ್ದಾರೆ. ಅವರ ಕಾರ್ಯವ್ಯಾಪ್ತಿಯಲ್ಲಿನ ಗ್ರಾಮಸ್ಥರು ತಮ್ಮ ಕನಿಷ್ಠ ವೇತನವಾದ 22 ರೂಪಾಯಿಯನ್ನು ತಮಗೆ ಪೂರ್ತಿಯಾಗಿ ಕೊಡಬೇಕು ಎಂದು 1990 ರಲ್ಲಿ ಅಲ್ಲಿನ ಭ್ರಷ್ಟ ಅಧಿಕಾರಿಗಳನ್ನು ಕೇಳುತ್ತಾರೆ. ಆದರೆ ಆ ಅಧಿಕಾರಿಗಳು, ನೀವು ಸರಿಯಾಗಿ ಕೆಲಸ ಮಾಡಿಲ್ಲ, ಆದ್ದರಿಂದ ನಿಮಗೆ ಕೊಡುವುದು ಕೇವಲ 11 ರೂಪಾಯಿ ಎಂದು ಹೇಳುತ್ತಾರೆ. ಆಗ ಅರುಣಾ ರಾಯ್‌ರ ಮುಂದಾಳತ್ವದಲ್ಲಿ ಆ ಜನ, ನಮಗೆ ನೀವು 11 ರೂಪಾಯಿ ಮಾತ್ರ ನೀಡುತ್ತಿರುವ ದಾಖಲೆಗಳನ್ನು ತೋರಿಸಿ, ಎನ್ನುತ್ತಾರೆ! ಆದರೆ ಆ ಭ್ರಷ್ಟರು, ಆ ದಾಖಲೆಗಳೆಲ್ಲ ರಹಸ್ಯವಾದವು, ಅವನ್ನೆಲ್ಲ ತೋರಿಸಲಾಗದು ಎಂದು ಕೆಂಪು ಪಟ್ಟಿಯನ್ನು ಎಳೆಯುತ್ತಾರೆ. ನಮ್ಮ ಹೆಸರು, ನಮ್ಮ ಸಹಿ, ನಮ್ಮ ಕೂಲಿಯ ವಿವರ ಎಲ್ಲವೂ ಇರುವ ಆ ದಾಖಲೆಗಳು ಅದು ಹೇಗೆ ರಹಸ್ಯ ದಾಖಲೆಗಳಾಗುತ್ತವೆ ಎಂದು ಆ ಜನ ಕೇಳಲಾರಂಭಿಸಿದ ಮೇಲೆ ಅದೇ ತರಹ ದೇಶದಾದ್ಯಂತ ಮಾಹಿತಿ ಹಕ್ಕಿಗಾಗಿ ಒತ್ತಾಯ ಪ್ರಾರಂಭವಾಗುತ್ತದೆ. ನಮ್ಮ ದೇಶದ ಸುಪ್ರೀಂ ಕೋರ್ಟು 1976 ರಲ್ಲಿಯೇ ಮಾಹಿತಿ ಹಕ್ಕು ಮೂಲಭೂತ ಹಕ್ಕಿನ ಒಂದು ಭಾಗ ಎನ್ನುವ ತೀರ್ಪನ್ನು ನೀಡಿರುತ್ತದೆ. ಆ ಆಧಾರದ ಮೇಲೆ ಅನೇಕ ರಾಜ್ಯ ಸರ್ಕಾರಗಳು ಆ ಕಾಯ್ದೆಯನ್ನು ಜಾರಿಗೆ ತರುತ್ತವೆ. ಕರ್ನಾಟಕದಲ್ಲಿಯೂ ಇದು ಮೂರ್ನಾಲ್ಕು ವರ್ಷಗಳ ಹಿಂದಿನಿಂದಲೆ ಇದೆಯಂತೆ. 2004 ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದ ಮೇಲೆ ಅರುಣಾ ರಾಯ್ ಸೋನಿಯಾ ಗಾಂಧಿಗೆ ಇಂತಹುದೊಂದು ಕಾಯ್ದೆಯ ದೇಶವ್ಯಾಪ್ತಿ ಅಗತ್ಯತೆಯ ಬಗ್ಗೆ ತಿಳಿಸಿದ ಮೇಲೆ ಸೋನಿಯಾರ ವಿಶೇಷ ಮುತುವರ್ಜಿಯಿಂದಾಗಿ ಕಳೆದ ವರ್ಷ ಪಾರ್ಲಿಮೆಂಟ್ ಅದನ್ನು ಅಂಗೀಕರಿಸುತ್ತದೆ.

ಇದನ್ನು ಬಳಸಲು ನೀವು ಮಾಡಬೇಕಾದದ್ದು ಇಷ್ಟೆ: ಸಂಬಂಧಿಸಿದ ಇಲಾಖೆಯ ಮಾಹಿತಿ ಅಧಿಕಾರಿಯ ಬಳಿ ನಿಮಗೆ ಬೇಕಾದ ಮಾಹಿತಿಯನ್ನು ಕೇಳಿ ಅರ್ಜಿ ಕೊಡಿ. ಅರ್ಜಿಯ ಜೊತೆಗೆ ಕೇವಲ ಹತ್ತು ರೂಪಾಯಿಯ ಫೀಜು ಕಟ್ಟಬೇಕು. ಸಂಬಂಧಿಸಿದ ಅಧಿಕಾರಿ ನಿಮಗೆ 30 ದಿನದಲ್ಲಿ ಮಾಹಿತಿ ಕೊಡಬೇಕು. ಇಲ್ಲದಿದ್ದಲ್ಲಿ ಆತನ ವೇತನದಲ್ಲಿ ಪ್ರತಿದಿನ 250 ರೂಪಾಯಿ ಕಡಿತವಾಗುತ್ತ ಹೋಗುತ್ತದೆ. ತಪ್ಪು ಮಾಹಿತಿ ಕೊಟ್ಟರೆ 25000 ರೂಪಾಯಿ ದಂಡ ಬೀಳುತ್ತದೆ. ನಿಮ್ಮ ಊರಿನ ರಸ್ತೆ, ಶಾಲೆಯ ಕಾಮಗಾರಿ ಲೆಕ್ಕದಿಂದ ಹಿಡಿದು, ನಿಮಗೆ ವಿದ್ಯುತ್ ಇಲಾಖೆ ಇನ್ನೂ ಕೊಡದಿರುವ ಕನೆಕ್ಷನ್, ತಾಲ್ಲೂಕಾಫೀಸಿನವರು ಸತಾಸುತ್ತಿರುವ ಪ್ರಮಾಣಪತ್ರಗಳು, ನಿಮ್ಮ ಶಾಸಕ ಖರ್ಚು ಮಾಡುತ್ತಿರುವ ಶಾಸಕ ನಿಧಿಯ ಬಾಬತ್ತು, ಇತ್ಯಾದಿಗಳನ್ನು ಕೇವಲ ಹತ್ತು ರೂಪಾಯಿಯಲ್ಲಿ ತೆಗೆದುಕೊಳ್ಳಬಹುದು. ಮಾಹಿತಿ ಸಿಕ್ಕ ಮೇಲೆ ಅದನ್ನು ಏನು ಮಾಡಬೇಕು ಎಂದು ನಿಮಗೇ ಗೊತ್ತಾಗುತ್ತದೆ. 50 ರೂಪಾಯಿಯ ಕೆಲಸಕ್ಕೆ 500 ತೋರಿಸಿದ್ದರೆ ತಕ್ಷಣ ಆ ಮಾಹಿತಿಯ ಪ್ರಕಾರ ಲೋಕಾಯುಕ್ತರಿಗೆ ದೂರು ನೀಡಿದರೆ, ಯಾಕೆ ನಮ್ಮಲ್ಲಿ ಭ್ರಷ್ಟಾಚಾರ ಕಮ್ಮಿಯಾಗದು, ಅಲ್ಲವೆ? ನಾವು ಸಿನಿಕರಾಗಬೇಕಾದದ್ದಿಲ್ಲ! ಸಿನಿಕರಲ್ಲದ ವೆಂಕಟಾಚಲರಂತಹವರು ನಮ್ಮ ನಡುವೆ ಇಲ್ಲವೆ? ಕಸ ಗುಡಿಸಲು ನಾವೂ ಪಾಲ್ಗೊಳ್ಳಬೇಕಷ್ಟೆ.