Mar 22, 2007

ಅಲ್ಲಿ ಪ್ರತಿಭಾ ಶೋಧ, ಇಲ್ಲಿ ಪ್ರತಿಭಾ ಸಮಾಧಿ???

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಏಪ್ರಿಲ್ 6, 2007 ರ ಸಂಚಿಕೆಯಲ್ಲಿನ ಲೇಖನ)

"ನೀವು ಏನು ಮಾಡಬೇಕು ಎಂದುಕೊಂಡಿದ್ದೀರೊ ಅದು ಅಸಾಧ್ಯ ಎಂದು ನಿಮಗನ್ನಿಸಿದರೂ, ಅದನ್ನು ಮಾಡಲು ಮುಂದಾಗಿ. ಯಾಕೆಂದರೆ, ನೀವು ಏನೇನು ಸಾಧಿಸಲು ಸಾಧ್ಯ ಎಂದು ಎಷ್ಟೋ ಸಲ ಗೊತ್ತೇ ಇರುವುದಿಲ್ಲ."

ಎರಡು ಮೂರು ವಾರದ ಹಿಂದೆ ಹೀಗೆ ಹೇಳಿದ್ದು ಯಾರೊ ವಯಸ್ಸಾದ ದೊಡ್ಡ ಮನುಷ್ಯರಾಗಲಿ, ಪರ್ಸನಾಲಿಟಿ ಡೆವಲಪ್‌ಮೆಂಟ್ ಗುರುವಾಗಲಿ, ಅಥವ ಆಧ್ಯಾತ್ಮದ ಹುಸಿ ವೇಷಗಳಲ್ಲಿರುವ ದೊಡ್ಡಬುದ್ಧಿಯವರಾಗಲಿ ಅಲ್ಲ! ಆಕೆಯ ಹೆಸರು ಮೇರಿ ಮಾಸ್ಟರ್‌ಮನ್. ಆಕೆಯ ವಯಸ್ಸು ಇನ್ನೂ 17. ಈ ಲಂಗದಾವಣಿ ವಯಸ್ಸಿನ ಹೆಣ್ಣುಮಗಳು ಕಳೆದ ವರ್ಷ ಅಮೇರಿಕದ ಖಗೋಳಶಾಸ್ತ್ರ ಸೊಸೈಟಿಯ ವಾರ್ಷಿಕ ಸಮ್ಮೇಳನದಲ್ಲಿ, ಭಾರತೀಯ ವಿಜ್ಞಾನಿ ಕುಲಕ್ಕೆ ಹೆಮ್ಮೆ ಉಂಟುಮಾಡುವ 'ರಾಮನ್ ಎಫ಼ೆಕ್ಟ್' ಮೇಲೆ ಪ್ರೆಸೆಂಟೇಷನ್ ಕೊಟ್ಟವಳು! ಹಾಗೆಯೆ, 2006 ರ "ರಾಷ್ಟ್ರೀಯ ಕಿರಿಯ ಖಗೋಳಶಾಸ್ತ್ರಜ್ಞ" ಪ್ರಶಸ್ತಿಯನ್ನೂ ಪಡೆದಾಕೆ. ಈಗ, ತೀರಾ ಇತ್ತೀಚೆಗೆ, ಇದೇ ಮಾರ್ಚ್‌ನಲ್ಲಿ, ಇಂಟೆಲ್‌ನ 2007 ರ ಪ್ರತಿಷ್ಠಿತ ವಿಜ್ಞಾನ ಪ್ರತಿಭಾ ಶೋಧದಲ್ಲಿ ಮೊದಲ ಸ್ಥಾನ ಪಡೆದಿದ್ದಾಳೆ.

ಸ್ಪೆಕ್ಟ್ರೊಗ್ರ್ಯಾಫ಼್ ಎನ್ನುವುದು ವರ್ಣಪಟಲ ದರ್ಶಕದಲ್ಲಿ (spectroscope) ಕಾಣಿಸುವ ವಿದ್ಯುದಯಸ್ಕಾಂತ ತರಂಗಗಳ ಛಾಯಾಚಿತ್ರ ತೆಗೆಯುವ ವೈಜ್ಞಾನಿಕ ಉಪಕರಣ. ಅಪರಾಧ ತನಿಖೆ, ವೈದ್ಯಕೀಯ, ಚಿತ್ರಕಲಾ ವಿಶ್ಲೇಷಣೆ, ಹೀಗೆ ಅನೇಕ ಪ್ರಾಕಾರಗಳಲ್ಲಿ ಸ್ಪೆಕ್ಟ್ರೊಗ್ರ್ಯಾಫ಼್ ಅನ್ನು ಉಪಯೋಗಿಸಲಾಗುತ್ತದೆ. ವಾಣಿಜ್ಯ ಬಳಕೆಗಳಿಗೆಗೆ ಉಪಯೋಗಿಸುವ ಒಂದು ಉತ್ತಮ ಉಪಕರಣಕ್ಕೆ ಸುಮಾರು 10 ಲಕ್ಷದಿಂದ ಹಿಡಿದು 45 ಲಕ್ಷ ರೂಪಾಯಿಯ ತನಕ ಬೆಲೆಯಿದೆ. ಆದರೆ, ಅಂತಹುದೇ ಉಪಕರಣವನ್ನು ಮೇರಿ ತಯಾರಿಸಿದ್ದು ಮಾತ್ರ ಕೇವಲ 13 ಸಾವಿರ ರೂಪಾಯಿ ಆಜುಬಾಜಿನಲ್ಲಿ!

ತಾನು ತಯಾರಿಸಿದ ಸ್ಪೆಕ್ಟ್ರೋಗ್ರ್ಯಾಫ಼್‌ಗೆ ಬೇಕಾದ ಮೆಕಾನಿಕಲ್ ಬಿಡಿ ಭಾಗಗಳನ್ನು ಸ್ವತಃ ಮೇರಿಯೆ ತಯಾರಿಸಿಕೊಂಡಿದ್ದು! ಹಾಗೆಯೆ ಅದರಲ್ಲಿ ಆಪ್ಟಿಕ್ಸ್ ಭಾಗಗಳನ್ನು ಸೂಕ್ತವಾಗಿ ಕೂರಿಸಿದ್ದು ಸಹ ಆಕೆಯೆ. ಮಾಮೂಲಿ ಕ್ಯಾಮೆರಾ ಒಂದರ ಲೆನ್ಸ್, ಮೈಕ್ರೊಸ್ಕೋಪ್, ಮತ್ತು ಬೆಳಕಿಗಾಗಿ ಲೇಸರ್ ಉಪಯೋಗಿಸಿ ಪರಮಾಣುವಿನ ಫೋಟಾನ್‌ಗಳನ್ನು ಬೇರ್ಪಡಿಸಿ, ಅವುಗಳ ತರಂಗಾಂತರಗಳನ್ನು ಮಾಪನ ಮಾಡುವಲ್ಲಿ ಯಶಸ್ವಿಯಾದಳು. ಈಗಾಗಲೆ ಪ್ರಕಟವಾಗಿರುವ ಕೆಲವೊಂದು ದಿನಬಳಕೆಯ ವಸ್ತುಗಳ ತರಂಗಾಂತರ ಮಾಪನಗಳ ಜೊತೆ ತನ್ನ ಉಪಕರಣದಿಂದ ಕಂಡುಹಿಡಿದ ಮೌಲ್ಯಗಳನ್ನು ಮೇರಿ ಪರೀಕ್ಷಿಸಿದಾಗ ಅವು ಸರಿಯಾಗಿಯೇ ಇದ್ದವು. ಒಂದೇ ವ್ಯತ್ಯಾಸ ಏನೆಂದರೆ, ವಿಜ್ಞಾನಿಗಳು ಈ ಮಾಪನಗಳನ್ನು ಮೇರಿ ತಯಾರಿಸಿದ ಉಪಕರಣಕ್ಕಿಂತ ನೂರಿನ್ನೂರು ಪಟ್ಟು ಹೆಚ್ಚಿನ ಬೆಲೆಯ ಉಪಕರಣದಲ್ಲಿ ಕಂಡುಹಿಡಿದಿದ್ದರು!

"ಸೈನ್ಸ್ ಸರ್ವಿಸ್" ಎಂಬ ಅಮೇರಿಕದ ಲಾಭರಹಿತ ಸಂಸ್ಥೆ 1942 ರಲ್ಲಿ ಪ್ರಾರಂಭಿಸಿದ ವಿಜ್ಞಾನ ಪ್ರತಿಭಾ ಶೋಧ, 1998 ರಲ್ಲಿ ಇಂಟೆಲ್ ಕಂಪನಿ ಪ್ರಾಯೋಜಕತ್ವ ವಹಿಸಿಕೊಂಡ ಮೇಲೆ ಇಂಟೆಲ್ ವಿಜ್ಞಾನ ಪ್ರತಿಭಾ ಶೋಧ ಎಂದಾಯಿತು. ಇದನ್ನು ಅನಧಿಕೃತವಾಗಿ ಜೂನಿಯರ್ ನೋಬೆಲ್ ಪ್ರಶಸ್ತಿ ಎಂದೂ ಕರೆಯುತ್ತಾರೆ. ಪ್ರತಿ ವರ್ಷ ಈ ಸ್ಪರ್ಧೆಗೆ ಸುಮಾರು 1500 ಕ್ಕೂ ಹೆಚ್ಚು ಹೈಸ್ಕೂಲ್ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪೇಪರ್‌ಗಳು ಕಳುಹಿಸುತ್ತಾರೆ. ಅದರಲ್ಲಿ ಅತ್ಯುತ್ತಮ 40 ಜನರನ್ನು ಜನವರಿ ತಿಂಗಳಿನಲ್ಲಿ ಫೈನಲ್‌ಗೆ ಆರಿಸಲಾಗುತ್ತದೆ. ಮಾರ್ಚ್‌ನಲ್ಲಿ ಈ ನಲವತ್ತೂ ಜನರನ್ನು ಅಮೇರಿಕದ ರಾಜಧಾನಿಗೆ ಕರೆಸಿಕೊಂಡು ಇಂಟರ್‌ವ್ಯೂ ಮಾಡಿ, ಮೊದಲ ಹತ್ತು ಸ್ಥಾನಗಳಿಗೆ ಆಯ್ಕೆ ಮಾಡುತ್ತಾರೆ. ಮೊದಲ ಸ್ಥಾನ ಪಡೆದವರಿಗೆ 1 ಲಕ್ಷ ಡಾಲರ್‌ಗಳ ಕಾಲೇಜು ವಿದ್ಯಾರ್ಥಿವೇತನವಾದರೆ ಉಳಿದ ಒಂಬತ್ತು ವಿದ್ಯಾರ್ಥಿಗಳಿಗೆ 75000 ದಿಂದ 20000 ಡಾಲರ್ ತನಕ ವಿದ್ಯಾರ್ಥಿವೇತನ ಪ್ರಶಸ್ತಿಗಳಿರುತ್ತವೆ.

ಈ ಸ್ಪರ್ಧೆಯಲ್ಲಿ ಅಮೇರಿಕದಲ್ಲಿನ ಭಾರತೀಯ ಮೂಲದವರೂ ಇಲ್ಲದೆ ಇಲ್ಲ. 2006 ರಲ್ಲಿ 40 ಜನ ಫೈನಲಿಸ್ಟ್‌ಗಳಲ್ಲಿ ಮೂವರು ವಿದ್ಯಾರ್ಥಿಗಳು ಭಾರತೀಯ ಮೂಲದವರಾಗಿದ್ದರೆ, ಈ ವರ್ಷ 4 ವಿದ್ಯಾರ್ಥಿಗಳಿದ್ದರು!

ಆದರೆ, ಇದೇ ಸಮಯದಲ್ಲಿ ಭಾರತದಲ್ಲಿಯೂ ಇಂತಹ ವಿಜ್ಞಾನ ಪ್ರತಿಭಾ ಶೋಧಗಳು, ಸ್ಪರ್ಧೆಗಳು ಇವೆಯೆ ಎನ್ನುವುದು ಸಂದೇಹ. ಇದ್ದರೂ ಅವುಗಳ ಗುಣಮಟ್ಟ ಮತ್ತು ಅವಕ್ಕೆ ಸಿಗುವ ಪ್ರಚಾರ ಸಂದೇಹಾಸ್ಪದ. ಯಾಕೆಂದರೆ, ಅಮೇರಿಕದ ಪ್ರತಿಭಾ ಸ್ಪರ್ಧೆಯಲ್ಲಿ ವಿಜೇತರಾದವರ ಬಗ್ಗೆ ಇಲ್ಲಿನ ರಾಷ್ಟ್ರೀಯ ಟಿವಿ, ರಾಷ್ಟ್ರೀಯ ಪತ್ರಿಕೆಗಳೆಲ್ಲ ಸುದ್ದಿ ಬಂದರೆ, ನಮ್ಮಲ್ಲಿ ಇಂತಹ ಸ್ಪರ್ಧೆಯಲ್ಲಿ ಗೆದ್ದವರು ತಾವೆ ತಮ್ಮ ಸ್ನೇಹಿತರಿಗೆ ಮುಜುಗರದಲ್ಲಿ ಹೇಳಿಕೊಳ್ಳಬೇಕೇನೊ!!? ಅದೂ ಅಲ್ಲದೆ, ಗಣಿತ ಅಥವ ವಿಜ್ಞಾನದಲ್ಲಿ ಆಸಕ್ತಿಯಿರುವ ಭಾರತದಲ್ಲಿನ ಪ್ರತಿ ಯೋಗ್ಯ ವಿದ್ಯಾರ್ಥಿಯ ತಂದೆತಾಯಿಯರ ಪರಮ ಗುರಿ, ತಮ್ಮ ಮಗುವನ್ನು ಡಾಕ್ಟರ್ ಇಲ್ಲವೆ ಇಂಜಿನಿಯರ್ ಮಾಡುವುದು!

ಇದರಿಂದ ಏನಾಗುತ್ತಿದೆ ಅಂದರೆ, ಭೌತಶಾಸ್ತ್ರದಲ್ಲಿ ನೊಬೆಲ್ ಪಡೆದ ಸಿ.ವಿ. ರಾಮನ್‌ರ ಸಂಶೋಧನೆಯ ಮೇಲೆ ಅಮೇರಿಕದ ಹೈಸ್ಕೂಲ್ ವಿದ್ಯಾರ್ಥಿಗಳು ಮರುಸಂಶೋಧನೆ ಮಾಡುತ್ತಿದ್ದರೆ, ನಮ್ಮಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ರ್‍ಯಾಂಕ್ ಬರುವ ವಿದ್ಯಾರ್ಥಿಗಳೆಲ್ಲ ಉದ್ಯೋಗ ಖಾತರಿಯ ಇಂಜಿನಿಯರಿಂಗ್ ಸೇರುತ್ತಿದ್ದಾರೆ. ಕಳೆದ ಮೂರ್ನಾಲ್ಕು ದಶಕಗಳಲ್ಲಿ ಹೀಗೆ ಇಂಜಿನಿಯರಿಂಗ್ ಸೇರಿಕೊಂಡ ರ್‍ಯಾಂಕ್ ವಿಜೇತರಲ್ಲಿ ಕೆಲವರು ಅದೃಷ್ಟದಿಂದ, ಕೆಲವರು ಪರಿಶ್ರಮದಿಂದ, ಮತ್ತೆ ಕೆಲವರು ಚಾಣಾಕ್ಷತನದಿಂದ ದುಡ್ಡು ಮಾಡಿದ್ದು ಬಿಟ್ಟರೆ, ಬಹುತೇಕ ಜನ ಈಗಲೂ ಅಲ್ಲಿಗಲ್ಲಿಗೆ ಸರಿಹೋಗುವ ಉದ್ಯೋಗದಲ್ಲಿ ಕಾಲ ಹಾಕುತ್ತಿದ್ದಾರೆ. ಸಂಶೋಧನೆಗೆ ಇಳಿದು ನಿಜಕ್ಕೂ ಹೆಸರು ಮಾಡಿದ ಭಾರತೀಯರು ಬೆರಳೆಣಿಕೆಯಷ್ಟು. ಇದೇ ಸಮಯದಲ್ಲಿ, ಇಂಟೆಲ್ ವಿಜ್ಞಾನ ಪ್ರತಿಭಾ ಶೋಧದಲ್ಲಿ ಪಾಲ್ಗೊಂಡವರಲ್ಲಿ ಆರು ವಿದ್ಯಾರ್ಥಿಗಳು ಮುಂದಕ್ಕೆ ಸಂಶೋಧನೆ ಮುಂದುವರೆಸಿ ನೋಬೆಲ್ ಪಡೆದರೆ, ಹತ್ತು ಜನ ಪ್ರತಿಷ್ಠಿತ ಮೆಕಾರ್ಥರ್ ಫೆಲೋಷಿಪ್ ಪಡೆದಿದ್ದಾರೆ. ಜೊತೆಗೆ 30 ಜನ ಅಮೇರಿಕದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಗೆ ಚುನಾಯಿತರಾಗಿದ್ದಾರೆ!

ಎಸ್ಸೆಸ್ಸೆಲ್ಸಿಯಲ್ಲಿ, ಪಿಯುಸಿಯಲ್ಲಿ ರ್‍ಯಾಂಕ್ ಬರಬೇಕೆಂದರೆ ನಿಜಕ್ಕೂ ಕಷ್ಟ ಪಡಬೇಕು. ಬರುವುದು ನಿಜವಾಗಲೂ ಹೆಮ್ಮೆಯ ವಿಷಯ. ಆದರೆ, ಕೇವಲ ಇಂಜಿನಿಯರಿಂಗ್ ಇಲ್ಲವೆ ಮೆಡಿಕಲ್ ಸೀಟು ಗಿಟ್ಟಿಸಿಕೊಳ್ಳಬೇಕೆಂಬ ಒಂದೇ ಉದ್ದೇಶದಿಂದ ವಿಜ್ಞಾನದ ಮೇಲೆ ಆಸಕ್ತಿ ಕರಗಿ ಹೋಗಿ ರ್‍ಯಾಂಕ್ ಗಳಿಸುವವರು ಕೇವಲ ಹೈಟೆಕ್ ಕೂಲಿಗಳಾಗುತ್ತಾರೆ. ವಿಜ್ಞಾನಿಗಳಾಗುವ ಯೋಗ್ಯತೆಯುಳ್ಳ ಕೆಲವರು ಹೀಗೆ ಅಯೋಗ್ಯರಾಗುತ್ತಿದ್ದಾರೆ. ರಾಷ್ಟ್ರದ ಬೌದ್ಧಿಕ ಅಥವ ವೈಜ್ಞಾನಿಕ ಸಂಪತ್ತಿಗೆ ಇದರಿಂದ ನಷ್ಟ. ಅದು ಅವರಿಗಾಗಲಿ, ನಾಡಿಗಾಗಲಿ ಹೆಮ್ಮೆಯ ವಿಚಾರವೇನಲ್ಲ.

ಇನ್ನು ವಿದೇಶಗಳಲ್ಲಿ ಇಂಟೆಲ್‌ನಂತಹ ಸಂಸ್ಥೆಗಳು ಅವರವರ ನಾಡಿನ ಬೌದ್ಧಿಕ ಸಂಪತ್ತನ್ನು ಹೆಚ್ಚಿಸಲು ಹೀಗೆ ತೊಡಗಿರುವಾಗ ನಮ್ಮಲ್ಲಿನ ಹೆಮ್ಮೆಯ ಕಂಪನಿಗಳಿಗೆ ಚೆನ್ನಾಗಿ ಕೋಡ್ ಕುಟ್ಟುವ ಇಂಜಿನಿಯರ್‌ಗಳು ಬೇಕೆ ಹೊರತು ಸ್ವತಃ ತಾವೆ ಸ್ಕಾಲರ್‌ಶಿಪ್ ಕೊಟ್ಟು ವಿಜ್ಞಾನ ಮತ್ತು ಸಂಶೋಧನೆಯತ್ತ ಒಂದಷ್ಟು ಬುದ್ಧಿವಂತ ಮನಸ್ಸುಗಳನ್ನು ತಿರುಗಿಸಿ, ಅವರನ್ನು ಹುರಿದುಂಬಿಸುವ ಉಸಾಬರಿ ಯಾಕೆ ತಾನೆ ಬೇಕು? ಅವರಿಗೆ ಬೇಕಾಗಿರುವ ಇಂಜಿನಿಯರ್‌ಗಳನ್ನು ಸರ್ಕಾರ ಮತ್ತು ಸಮಾಜ ಸ್ವತಃ ಉತ್ಪಾದಿಸಿ ಕೊಡುತ್ತಿರುವಾಗ ಲಾಭವನ್ನೆಲ್ಲ ಮಹಲು ಕಟ್ಟಲು ಉಪಯೋಗಿಸದೆ ವೈಜ್ಞಾನಿಕ ಮನಸ್ಸತ್ವ ಕಟ್ಟಲು ಉಪಯೋಗಿಸುವುದು ಒಳ್ಳೆಯ ಇನ್‌ವೆಸ್ಟ್‌ಮೆಂಟ್ ಅಲ್ಲ, ಅಲ್ಲವೆ?

Mar 10, 2007

ಮಟಮಟ ಮಧ್ಯಾಹ್ನದಲ್ಲಿ ಏಕಾಂಗಿ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮಾರ್ಚ್ 23, 2007 ರ ಸಂಚಿಕೆಯಲ್ಲಿನ ಲೇಖನ)

ಅದು ಎರಡನೆ ಮಹಾಯುದ್ಧದ ಸರಿಸುಮಾರು. ಯೂರೋಪ್‌ನಲ್ಲಿ ಹಿಟ್ಲರ್‌ನ ನಾಟ್ಜಿಗಳು ಹತ್ಯಾಕಾಂಡ ಮಾಡುತ್ತ, ಜನಾಂಗೀಯ ದ್ವೇಷ ಬಿತ್ತುತ್ತ ವಿಶ್ವವನ್ನೆ ಆಪೋಶನ ತೆಗೆದುಕೊಳ್ಳಲು ರಣರಂಗಕ್ಕೆ ಇಳಿದಿದ್ದ ಸಮಯ. ಅಮೇರಿಕದಲ್ಲಿಯೂ ಹಿಟ್ಲರ್‌ನ ಪ್ರಭಾವ ಅಷ್ಟೊ ಇಷ್ಟೊ ಇಣುಕಲು ಪ್ರಾರಂಭವಾಗಿತ್ತು. ಯಾಕೆಂದರೆ, ಅಮೇರಿಕದಲ್ಲಿನ ಯೂರೋಪಿಯನ್ ವಲಸೆಗಾರರಲ್ಲಿ ಅಷ್ಟೊತ್ತಿಗೆ ಜರ್ಮನ್ ಮೂಲದವರೆ ಅಧಿಕವಾಗಿದ್ದರು. ಹಾಗಾಗಿ, ಅಮೇರಿಕದಲ್ಲಿನ ನಾಟ್ಜಿ ಪ್ರಭಾವವನ್ನು ಕಂಡುಹಿಡಿಯಲು ಮತ್ತು ಹಣಿಯಲು 1938 ರಲ್ಲಿ ಅಮೇರಿಕ ಅಥವ ಅಮೇರಿಕ ಪ್ರತಿಪಾದಿಸುವ ಮೌಲ್ಯಗಳನ್ನು ವಿರೋಧಿಸುವಂತಹ ವಿದ್ರೋಹಕಾರಿ ಚಟುವಟಿಕೆಗಳನ್ನು ಪತ್ತೆ ಮಾಡುವ ಸಂಸದೀಯ ಸಮಿತಿಯೊಂದರ (House Committee on Un-American Activities) ರಚನೆಯಾಯಿತು. ಆ ಸಮಿತಿ ಪ್ರಾರಂಭದಲ್ಲಿ ಅಷ್ಟೇನೂ ಸಾಧಿಸಲಿಲ್ಲ.

ಎರಡನೆ ವಿಶ್ವಯುದ್ಧ ಮುಗಿದ ಮೇಲೆ ಅಮೇರಿಕಕ್ಕೆ ವಿರುದ್ಧವಾಗಿ ಕಮ್ಯುನಿಸ್ಟ್ ರಷ್ಯ ಬಲವಾಯಿತು. ಅಮೇರಿಕದಲ್ಲಿ ಮೊದಲಿನಿಂದಲೂ ಪ್ರಜಾಪ್ರಭುತ್ವದ ಬಗ್ಗೆ ಸಕಾರಣವಾದ ಹೆಮ್ಮೆ ಹಾಗೂ ಯಾವುದೇ ತರಹದ ಸರ್ವಾಧಿಕಾರದ ಬಗ್ಗೆ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಕಟ್ಟುಪಾಡು ಹಾಕುವ ವ್ಯವಸ್ಥೆಯ ಬಗ್ಗೆ ಹೀನಾಯ. ಕಮ್ಯುನಿಸಮ್‌ನಲ್ಲಿ ಪ್ರಜಾಪ್ರಭುತ್ವಕ್ಕೆ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಆಸ್ಪದವೆ ಇಲ್ಲ. ಹಾಗಾಗಿ, ನಾಟ್ಜಿಗಳ ಮೇಲಿನ ಭಯ ಮತ್ತು ದ್ವೇಷ ರಷ್ಯ ಮತ್ತು ಅದರ ಕಮ್ಯುನಿಸಮ್‌ನ ಮೇಲೆ ಬಿತ್ತು. ಮೇಲಿನ ಸಂಸದೀಯ ಸಮಿತಿ ಆಗ ಅಮೇರಿಕದಲ್ಲಿ ಕಮ್ಯುನಿಸಮ್ ಪರ ಕೆಲಸ ಮಾಡುವವರ ಅಥವ ಸಹಾನುಭೂತಿ ತೋರಿಸುವವರ ವಿರುದ್ಧ ತನಿಖೆ ಮಾಡಲಾರಂಭಿಸಿತು.

ಪ್ರಪಂಚದ ಯಾವುದೆ ದೇಶದಲ್ಲಿನ ಸಿನೆಮಾ ಮಾಧ್ಯಮಕ್ಕಿಂತ ಅಮೇರಿಕದ ಹಾಲಿವುಡ್ ಸಿನೆಮಾಗಳು ಬಹಳ ಬಲಶಾಲಿ, ಪ್ರಭಾವಶಾಲಿ. ಇದಕ್ಕೆ ಕಾರಣ ಹಾಲಿವುಡ್ ಕನಸುಗಳನ್ನು ಮಾರುವ ಕಾರ್ಖಾನೆಯಾಗಿರುವುದಕ್ಕಲ್ಲ. ಬದಲಿಗೆ, ಅತ್ಯುತ್ತಮವಾದ, ಜನರ ಜೀವನವನ್ನು, ನಡತೆಯನ್ನು ಪ್ರತಿಬಿಂಬಿಸುವ ನೈಜ ಚಲನಚಿತ್ರಗಳಿಗಾಗಿ; ಆಶಾವಾದವನ್ನು, ಜೀವನಪ್ರೀತಿಯನ್ನು, ಸಹಿಷ್ಣುತೆಯನ್ನು ಹರಡುವಂತಹ ಚಿತ್ರಗಳಿಗಾಗಿ; ಸತ್ಯವನ್ನು ಕೆಲವೊಮ್ಮೆ ನೇರವಾಗಿ, ಕೆಲವೊಮ್ಮೆ ಕಲಾವಂತಿಕೆಯಿಂದ ಬಿಂಬಿಸುವುದಕ್ಕಾಗಿ. ನಮ್ಮಲ್ಲಿ ಈಗ ಜಾತಿವಾದಿಗಳಿಂದ, ಕೋಮುವಾದಿಗಳಿಂದ ಬುದ್ಧಿಜೀವಿಗಳೆಂದು ಗೇಲಿಗೊಳಗಾಗುವ ಎಲ್ಲಾ ತರಹದ ಉದಾರವಾದಿ ಚಿಂತಕರ, ವ್ಯವಸ್ಥೆಯ ಹುಳುಕಗಳ ಬಗ್ಗೆ ಮಾತನಾಡುವ ಬಂಡುಕೋರ ಜನ ಹಾಲಿವುಡ್ಡಿನಲ್ಲಿ ಮೊದಲಿನಿಂದಲೂ ಇದ್ದರು. ಸಂಸದೀಯ ಸಮಿತಿ 1947 ರಲ್ಲಿ ಹಾಲಿವುಡ್ಡಿನ ಇಂತಹವರನ್ನು ಅಮೇರಿಕನ್ ವಿರೋಧಿ ಹೆಸರಿನಲ್ಲಿ ವಿಚಾರಣೆ ಮಾಡಲು ಪ್ರಾರಂಭಿಸಿತು.

ಕೆಲವರು ವಿಚಾರಣಾ ಸಮಿತಿಯ ಜೊತೆ ಮಾತನಾಡಿದರು. ಕೆಲವರು ನಿರಾಕರಿಸಿದರು. ನಿರಾಕರಿಸಿದ ಹತ್ತು ಜನರಿಗೆ ಸಮಿತಿ ಜೈಲು ಶಿಕ್ಷೆ ವಿಧಿಸಿತು. "ಹಾಲಿವುಡ್ ಟೆನ್" ಎಂದು ಕರೆಸಿಕೊಂಡ ಆ ಹತ್ತು ಜನರನ್ನು ಅವರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಸ್ಟುಡಿಯೋಗಳು ಕೆಲಸದಿಂದ ಕಿತ್ತು ಹಾಕಿದವು. ಮುಂದಿನ ದಿನಗಳಲ್ಲಿ ತಮ್ಮ ದೇಶಭಕ್ತಿಯನ್ನು ಸಾಬೀತು ಮಾಡಿಕೊಳ್ಳಲು ಕಮ್ಯುನಿಸಮ್ ಪರ ಎಂದುಕೊಂಡ ನೂರಾರು ಜನರನ್ನು ಸ್ಟುಡಿಯೋಗಳು ಕೆಲಸದಿಂದ ತೆಗೆದುಹಾಕಿದವು. ಸಿನೆಮಾ ರಂಗದಲ್ಲಿ ತೊಡಗಿಸಿಕೊಂಡಿದ್ದ ಅವರೆಲ್ಲ ಕೆಲಸವಿಲ್ಲದೆ ಬೀದಿ ಪಾಲಾಗಿ, ಅನೇಕ ರೀತಿಯ ಮಾನಸಿಕ, ಆರ್ಥಿಕ ಹಿಂಸೆ ಅನುಭವಿಸಿದ್ದು, ಅವರ ಜೊತೆ ಯಾರೂ ಗುರುತಿಸಿಕೊಳ್ಳದಂತೆ, ಮಾತನಾಡಲೂ ಆಗದಂತೆ ಆದದ್ದು ಇತಿಹಾಸ. ಹಾಲಿವುಡ್ಡಿನಲ್ಲಿ ಆಗ ಭಯ ಎಷ್ಟಿತ್ತೆಂದರೆ ಕಪ್ಪು ಪಟ್ಟಿಗೆ ಸೇರಿದ ಜನರ ಸ್ನೇಹಿತರು ರಾತ್ರೋರಾತ್ರಿ ಅಪರಿಚಿತರಾಗಿಬಿಟ್ಟರು. ಮೆಕಾರ್ಥಿಸಮ್ ಕಾಲ ಎಂದೆ ಕುಖ್ಯಾತಿ ಪಡೆದ ಆ ಸಮಯದಲ್ಲಿ ಕಮ್ಯುನಿಸಮ್ ಪರ ಸಹಾನುಭೂತಿಯಿದ್ದ ಚಾರ್ಲಿ ಚಾಪ್ಲಿನ್‌ನಂತಹ ಮೇರು ನಟನಿಗೂ ಕೆಲಸ ಕೊಡುವವರಿಲ್ಲದೆ ಆತ ಅಮೇರಿಕದಿಂದ ಇಂಗ್ಲೆಂಡ್‌ಗೆ ಮರಳಬೇಕಾಯಿತು. ಬ್ಲ್ಯಾಕ್ ಲಿಸ್ಟ್ ಆದವರ ಪರ ಮತ್ತು ವಿರೋಧವಾಗಿ ಹಾಲಿವುಡ್ ಮುಂದೆ ಹತ್ತಾರು ವರ್ಷಗಳ ಕಾಲ ಇಭ್ಭಾಗವಾಗಿಯೆ ಇತ್ತು.

ಆದರೆ ಈ ಕಲಾವಿದರ, ಸಾಹಿತಿಗಳ, ಚಿಂತಕರ ಗುಣವೆ ಒಂದು ತರಹ. ಭಾರತದಲ್ಲಿ 1975 ರ ತುರ್ತುಪರಿಸ್ಥಿತಿಯ ಸಮಯದಲ್ಲಿ ರಾಜಕಾರಣಿಗಳು ಹಾಗೂ ಕೆಲವು ಸಾಹಿತಿಗಳು ಬಹಿರಂಗವಾಗಿ ವಿರೋಧಿಸಿ ಜೈಲು ಪಾಲಾಗಿದ್ದರೆ, ಇನ್ನು ಕೆಲವು ಸಾಹಿತಿಗಳು, ಪತ್ರಕರ್ತರು ಗೊತ್ತೂ ಗೊತ್ತಿಲ್ಲದಂತೆ ಸೂಕ್ಷ್ಮವಾಗಿ ಎಮರ್ಜೆನ್ಸಿಯ ವಿಚಾರ ಎತ್ತುತ್ತಿದ್ದನ್ನು, ಜನರನ್ನು ಚಿಂತನೆಗೆ ಹಚ್ಚುತ್ತಿದ್ದದ್ದನ್ನು ನಾವು ನೋಡಿದ್ದೇವೆ. ಹಾಲಿವುಡ್ಡಿನಲ್ಲಿಯೂ ಮೆಕಾರ್ಥಿಸಮ್ ವಿರುದ್ದ ಇಂತಹುದೆ ಸದ್ದಿಲದ, ಕಲಾವಂತಿಕೆಯ ವಿರೋಧ ಆರಂಭವಾಯಿತು. 1952 ರಲ್ಲಿ ಅಂತಹ ಸಮುದ್ರಮಂಥನದಿಂದ ಉದಯಿಸಿದ್ದು "ಹೈ ನೂನ್" ಎಂಬ 85 ನಿಮಿಷಗಳ ಅಮೃತಧಾರೆ; ಜನರ ಕಪ್ಪು ಬಿಳುಪು ನಡತೆಯನ್ನು ಎತ್ತಿ ತೋರಿಸುವ ಕಪ್ಪು ಬಿಳುಪು ಚಿತ್ರ. ಇದನ್ನು ಬರೆದು, ನಿರ್ಮಿಸಿದವನು ಸಂಸದೀಯ ಸಮಿತಿಯಿಂದ ಸ್ವತಃ ವಿಚಾರಣೆಗೊಳಗಾಗಿದ್ದ ಕಾರ್ಲ್ ಫ಼ೋರ್‌ಮನ್ ಎನ್ನುವವನು. ಆ ಚಿತ್ರ ಹಾಲಿವುಡ್ಡಿನ ಆಗಿನ ಸ್ವಾರ್ಥ ಬುದ್ಧಿಯನ್ನು ಒಂದು ರೀತಿಯಲ್ಲಿ ಪ್ರತಿಬಿಂಬಿಸಿದ್ದರಿಂದ ಹಾಗೂ ಎಲ್ಲಾ ಕಾಲದಲ್ಲೂ ಎಲ್ಲಾ ಸ್ಥಳದಲ್ಲೂ ಒಮ್ಮೊಮ್ಮೆ ಜನರು ಅತೀವ ಸ್ವಾರ್ಥಪರತೆಯಿಂದ ಕೃತಘ್ನರಾಗಿಬಿಡುವ, ತಮ್ಮ ಜವಾಬ್ದಾರಿಗೆ ಜಾಣಕುರುಡಾಗಿಬಿಡುವ ಸಾರ್ವಕಾಲಿಕ ಸತ್ಯದ ಕತೆಯಿದ್ದುದ್ದರಿಂದ ಅದು ಬಿಡುಗಡೆಯಾದ 55 ವರ್ಷಗಳಾದರೂ ಇನ್ನೂ ಪ್ರಸ್ತುತವಾಗಿ, ಹಾಲಿವುಡ್ಡಿನ ಅತ್ಯುತ್ತಮ ಚಿತ್ರಗಳ ಸ್ಥಾನದಲ್ಲಿ ಜಾಗವನ್ನು ಪಡೆದುಕೊಂಡಿದೆ.

ಆಗ ಸಮಯ ಬೆಳಿಗ್ಗೆ 10:35. ಆ ಸಣ್ಣ ಪಟ್ಟಣದ ಪೋಲಿಸ್ ಮುಖ್ಯಸ್ಥನಾದ ವಿಲ್ ಕೇನ್ ಎಂಬುವವನ ಮದುವೆ ನಡೆಯುತ್ತಿದೆ. ಊರಿನ ಜನರ ಸಮ್ಮುಖದಲ್ಲಿ ಮದುವೆಯಾಗುವ ಕೇನ್, ತಾನು ಪೋಲಿಸ್ ಕೆಲಸವನ್ನು ಬಿಡುತ್ತಿದ್ದೇನೆಯೆಂತಲೂ, ಅಂದೇ ತನ್ನ ಕೆಲಸದ ಕೊನೆ ದಿನವೆಂತಲೂ ಘೋಷಿಸುತ್ತಾನೆ. ಅರಾಜಕವಾಗಿದ್ದ ಊರಿನಲ್ಲಿ ಕಾನೂನು ಮತ್ತು ಶಾಂತಿ ನೆಲೆಸಲು ಕೇನ್ ಕಾರಣನಾಗಿದ್ದಿದ್ದರಿಂದ, ಆತನನ್ನು ಗೌರವಿಸುತ್ತಿದ್ದ ಜನರೆಲ್ಲರೂ ಆತನ ಮುಂದಿನ ದಾಂಪತ್ಯ ಜೀವನ ಸುಮಧುರವಾಗಿರಲಿ ಎಂದು ಹಾರೈಸುತ್ತಾರೆ. ಆ ಸಮಯದಲ್ಲಿ ಒಂದು ಟೆಲಿಗ್ರಾಮ್ ಬರುತ್ತದೆ. ವಿಲ್ ಕೇನ್ ಈ ಹಿಂದೆ ಬಂಧಿಸಿದ್ದ, ವಿಚಾರಣೆಯ ಸಮಯದಲ್ಲಿ ಮರಣದಂಡನೆಯ ಶಿಕ್ಷೆಗೆ ಒಳಗಾಗಿದ್ದ ಖೈದಿಯೊಬ್ಬನಿಗೆ ಕ್ಷಮಾದಾನವಾಗಿದೆ ಎಂತಲೂ, ಬೇರೊಂದು ಊರಿನ ಜೈಲಿನಲ್ಲಿದ್ದ ಅವನು ಮಧ್ಯಾಹ್ನ 12 ಘಂಟೆಯ ರೈಲಿನಲ್ಲಿ ಈ ಊರಿಗೆ ಬರುತ್ತಿದ್ದಾನೆಂತಲೂ ಅದರಲ್ಲಿರುತ್ತದೆ. ಆ ಅಪರಾಧಿ ಹಿಂದೆ ಊರಿನ ಜನರಿಗೆ ದುಸ್ವಪ್ನವಾಗಿ ಕಾಡಿದ್ದ ರೌಡಿ. ಮದುವೆಗೆ ನೆರೆದಿದ್ದ ಜನರಿಗೆ ಅಷ್ಟರಲ್ಲಿ ಆ ರೌಡಿಯ ಸಹಚರರು ಆತನಿಗಾಗಿ ರೈಲ್ವೆ ಸ್ಟೇಷನ್‌ನಲ್ಲಿ ಕಾಯುತ್ತಿದ್ದಾರೆ ಎಂತಲೂ, ಅವನು ಇಳಿದ ತಕ್ಷಣ ವಿಲ್ ಕೇನ್‌ನನ್ನು ಕೊಂದು ಸೇಡು ತೀರಿಸಿಕೊಳ್ಳಲಿದ್ದಾರೆಂತಲೂ ತಿಳಿಯುತ್ತದೆ. ಕೇನ್ ಊರಿನಲ್ಲಿಯೆ ಉಳಿದರೆ ಗನ್ ಫೈಟ್ ಖಡಾಖಂಡಿತವೆಂದು ಎಲ್ಲರಿಗೂ ಅರಿವಾಗುತ್ತದೆ

ತಕ್ಷಣ ಊರಿನ ಜನರೆಲ್ಲರೂ ಕೇನ್ ಈ ಕೂಡಲೆ ಊರು ಬಿಟ್ಟು ಹೋಗಿ ಮುಂದಾಗುವ ಅಪಾಯದಿಂದ ತಪ್ಪಿಸಿಕೊಳ್ಳಬೇಕೆಂದು ಸಲಹೆ ನೀಡುತ್ತಾರೆ. ಆಗ ತಾನೆ ಅವನನ್ನು ಮದುವೆಯಾದ ಆತನ ಹೆಂಡತಿಯೂ ಅದನ್ನೆ ಹೇಳುತ್ತಾಳೆ. ಅವನು ಬರದಿದ್ದರೆ ಮಧ್ಯಾಹ್ನದ ಅದೇ ರೈಲಿನಲ್ಲಿ ತಾನು ಅವನನ್ನು ಬಿಟ್ಟು ಹೋಗಲಿರುವುದಾಗಿ ಹೇಳುತ್ತಾಳೆ. ಆದರೆ ಕೇನ್‌ನ ಮನಸ್ಸಾಕ್ಷಿ ಅದಕ್ಕೆ ಒಪ್ಪುವುದಿಲ್ಲ. ನಾಲ್ಕು ಜನರ ಆ ರೌಡಿ ಪಡೆಯನ್ನು ಎದುರಿಸುವುದಾಗಿ ನಿರ್ಧರಿಸುತ್ತಾನೆ.

ಸಮಯ ಬಂದಾಗ ಸಹಾಯ ಪಡೆದ ಜನ ಹೇಗೆ ಕೃತಘ್ನರಾಗುತ್ತಾರೆ ಹಾಗೂ ತನ್ನನ್ನು ಸಾಯಿಸಲೆಂದೆ ಬಂದವರನ್ನು ಕೇನ್ ಹೇಗೆ ಎದುರಿಸುತ್ತಾನೆ ಎನ್ನುವುದೆ ಮುಂದಿನ ಕತೆ. ರೌಡಿಗಳನ್ನು ಎದುರಿಸಲು ತನಗೆ ಸಹಾಯ ಮಾಡಬೇಕೆಂದು ಕೇನ್ ಗನ್ನು ಹಿಡಿಯುವ ಯೋಗ್ಯತೆಯಿರುವ ಊರಿನ ಪ್ರತಿಯೊಬ್ಬರನ್ನೂ ಕೇಳಿಕೊಳ್ಳುತ್ತಾನೆ. ಪ್ರಾಣಭಯದಿಂದ ಯಾರೂ ಆತನ ಸಹಾಯಕ್ಕೆ ಮುಂದಾಗುವುದಿಲ್ಲ. ಆತನ ಸಹಾಯಕ ಪೋಲಿಸ್ ಮುಖ್ಯಸ್ಥನೂ ತನ್ನ ಕೈಲಾಗದೆಂದು ಕೈಯೆತ್ತಿ ಬಿಡುತ್ತಾನೆ. ಅವನಿಂದಲೆ ರಕ್ಷಣೆ ಪಡೆದ ಯಾವೊಬ್ಬ ನಾಗರಿಕನೂ ಅವನಿಗಾಗಿ ಗನ್ನು ಹಿಡಿಯಲು ಮುಂದೆ ಬರುವುದಿಲ್ಲ. ಹೆಂಡತಿಯೂ ರೈಲಿಗೆ ಹೋಗಲು ಸಿದ್ದತೆ ಮಾಡಿಕೊಳ್ಳಲು ಹೋಗಿಬಿಡುತ್ತಾಳೆ. ಒಬ್ಬನೆ ಒಬ್ಬ ಗಂಡಸಿನ ಆಯುಧದ ನೆರವಾಗಲಿ, ನೈತಿಕ ಬೆಂಬಲವಾಗಲಿ ಇಲ್ಲದ ಕೇನ್ ಏಕಾಂಗಿಯಾಗಿ ಬಿಡುತ್ತಾನೆ. ಕೊನೆಗೂ ಮಧ್ಯಾಹ್ನ ಹನ್ನೆರಡು ಗಂಟೆ ಹೊಡೆಯುತ್ತದೆ. ಟ್ರೈನ್ ಬರುತ್ತದೆ. ರೌಡಿ ಇಳಿಯುತ್ತಾನೆ. ಇತರ ಮೂವರೊಡನೆ ಊರಿನೊಳಕ್ಕೆ ನಡೆದು ಬರುತ್ತಾನೆ. ತನ್ನನ್ನು ಕೊಲ್ಲಲೆಂದು ಬಂದ ಆ ನಾಲ್ವರನ್ನೂ ಸಮಯ ಸಂದರ್ಭ ಸಾಧಿಸಿ ಕೇನ್ ಏಕಾಂಗಿಯಾಗಿ ಸಾಯಿಸುತ್ತಾನೆ. ನಂತರ, ಇಡೀ ಊರಿನ ಕೃತಘ್ನ ಜನರತ್ತ ಹೀನಾಯವಾಗಿ ನೋಡಿ, ಪೋಲಿಸ್ ಕೆಲಸದ ಗುರುತಾಗಿ ಸಿಕ್ಕಿಸಿಕೊಂಡಿದ್ದ ನಕ್ಷತ್ರವನ್ನು ಮಣ್ಣಿಗೆಸೆದು, ತನ್ನ ಹೆಂಡತಿಯೊಡನೆ ಊರು ಬಿಟ್ಟು ಹೋಗುತ್ತಾನೆ.

ಸುಮಾರು ಒಂದೂ ಮುಕ್ಕಾಲು ಘಂಟೆಯ ಕತೆ 1 ಘಂಟೆ 25 ನಿಮಿಷಗಳ ಕಾಲ ರಿಯಲ್ ಟೈಮ್‌ನಲ್ಲಿ ನಡೆಯುತ್ತದೆ. ಗನ್ ಫ಼ೈಟ್ ಇರುವುದು ಸಹ ಕೊನೆಯ ಹತ್ತು ನಿಮಿಷಗಳು ಮಾತ್ರ. ಅದ್ಭುತವಾದ ಈ ಚಿತ್ರಕ್ಕೆ ನಾಲ್ಕು ಆಸ್ಕರ್ ಪ್ರಶಸ್ತಿಗಳೂ ದೊರೆತಿವೆ. ಕೇನ್‌ನ ಪಾತ್ರದಲ್ಲಿ ಹಾಲಿವುಡ್ಡಿನ ಪ್ರಖ್ಯಾತ ನಟ ಗ್ಯಾರಿ ಕೂಪರ್ ನಟಿಸಿದ್ದಾನೆ ಎನ್ನುವುದಕ್ಕಿಂತ ಜೀವಿಸಿಬಿಟ್ಟಿದ್ದಾನೆ.

ಇಲ್ಲೊಂದು ವಿಶಿಷ್ಟವಾದ ವಿಷಯವಿದೆ: ಕೂಪರ್‌ನ ಸಹಜ ನಟನೆಗೆ ಆಸ್ಕರ್ ಪ್ರಶಸ್ತಿ ದೊರಕಿತು. ಆದರೆ ಕಾರಣಾಂತರಗಳಿಂದ ಅದನ್ನು ಸ್ವೀಕರಿಸಲು ಆತನಿಗೆ ಸ್ವತಃ ಹೋಗಲಾಗಲಿಲ್ಲ. ಆತನ ಪರವಾಗಿ ಅದನ್ನು ಸ್ವೀಕರಿಸಿದ್ದು ಆತನ ಗೆಳೆಯನಾದ ಮತ್ತೊಬ್ಬ ಹಾಲಿವುಡ್ ಲೆಜೆಂಡ್ ಜಾನ್ ವೇಯ್ನ್. ಕಮ್ಯುನಿಸಮ್‌ನ ಬದ್ಧ ವಿರೋಧಿಯಾದ ಜಾನ್ ವೇಯ್ನ್ ಈ ಚಿತ್ರವನ್ನು ಮೆಚ್ಚಿಕೊಳ್ಳಲಿಲ್ಲ. ಇದೊಂದು ಅಪ್ಪಟ Un-American ಚಿತ್ರ ಎಂದು ಹೇಳಿದ. ಹೇಳಿ ಆತ ಸುಮ್ಮನೆ ಕೂಡಲಿಲ್ಲ. ಹೈ ನೂನ್‌ಗೆ ಉತ್ತರವಾಗಿ ಏಳು ವರ್ಷಗಳ ನಂತರ ತಾನೆ ಇನ್ನೊಂದು ಅಮೋಘವಾದ ಚಿತ್ರದಲ್ಲಿ ನಟಿಸಿಬಿಟ್ಟ. ಆ ಚಿತ್ರದ ಹೆಸರು ರಿಯೊ ಬ್ರಾವೊ. ಅದರಲ್ಲಿ ಪೋಲಿಸ್ ಮುಖ್ಯಸ್ಥ ತನ್ನ ಸಹೋದ್ಯೋಗಿಗಳ ಮತ್ತು ಇತರರ ನೆರವಿನಿಂದ ದುಷ್ಟರನ್ನು ಸದೆ ಬಡೆಯುತ್ತಾನೆ.

ಈಗ ಹೈ ನೂನ್ ಚಿತ್ರವನ್ನು ನೋಡಿದರೆ ನಮಗೆ ಮೇಲ್ನೋಟಕ್ಕೆ ಆಗಿನ ಕಾಲದ ಸೂಕ್ಷಗಳೇನೂ ಗೊತ್ತಾಗುವುದಿಲ್ಲ. ಸ್ವಾರ್ಥಿಗಳಾಗಿ ಬಿಟ್ಟ ಜನ ನ್ಯಾಯಯುತವಾದ ಕೆಲಸಕ್ಕಾಗಿ ಹೇಗೆ ಮುಂದೆ ಬರುವುದಿಲ್ಲ ಎನ್ನುವುದಷ್ಟೆ ಗೊತ್ತಾಗಬಹುದು. ಆದರೆ, ಕತೆ ಬರೆದ ಫ಼ೋರ್‌ಮನ್‌ನ ಪ್ರಕಾರ ಆ ಚಿತ್ರ ಆಗಿನ ಬುದ್ಧಿಜೀವಿಗಳ ನಿಷ್ಕ್ರಿಯತೆ ಮತ್ತು ಹಾಲಿವುಡ್ಡಿನ ಜನ ಹೇಗೆ ತಮ್ಮವರ ಬೆಂಬಲಕ್ಕೆ ನಿಲ್ಲದೆ ಮೂಕರಾಗಿಬಿಟ್ಟದ್ದರ ಸಾಂಕೇತಿಕ ನಿರೂಪಣೆ. ಆ ಇತಿಹಾಸದ ಸಂದರ್ಭದಲ್ಲಿ ಹೈ ನೂನ್ ಅನ್ನು ನೋಡಿದಾಗ ಅದು ಅನೇಕ ಒಳನೋಟಗಳನ್ನು ಕೊಡುತ್ತದೆ. ಚಿಂತನೆಗೆ ಹಚ್ಚುತ್ತದೆ. ಸಮಾಜಕ್ಕೆ ವಿಮುಖವಾಗಿ ಹಿಂದೆ ನಾವೂ ಸ್ವಾರ್ಥಿಗಳಾಗಿದ್ದರೆ ಅದನ್ನು ನೆನಪಿಸುತ್ತದೆ. ಮುಂದೆ ಎಂದಾದರೂ ಕೃತಘ್ನರಾಗುವ ಪರಿಸ್ಥಿತಿ ಬಂದರೆ ತಕ್ಷಣ ಏರು ಹೊತ್ತಿನಲ್ಲಿ ಏಕಾಂಗಿಯಾದವನ ನೆನಪಾಗುತ್ತದೆ; ಅವನನ್ನು ಏಕಾಂಗಿ ಮಾಡದ ತೀರ್ಮಾನ ಮೂಡುತ್ತದೆ.

Mar 4, 2007

ಗಿಡಿಯೆನ್ನನ ಕಹಳೆ

(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ಮಾರ್ಚ್ 16, 2007 ರ ಸಂಚಿಕೆಯಲ್ಲಿನ ಲೇಖನ)

ಯಹೂದಿಗಳ ಪೌರಾಣಿಕ ಕತೆಯಲ್ಲಿ ಗಿಡಿಯೆನ್ ಎನ್ನುವವನು ದೇವರ ಆದೇಶದ ಮೇಲೆ ದುಷ್ಟಸಂಹಾರ ಮಾಡುವವನು. ತನ್ನ ಸೈನಿಕರಿಗೆ ಮಣ್ಣಿನ ಮಡಕೆ, ದೊಂದಿ, ಮತ್ತು ಒಂದು ಕಹಳೆಕೊಂಬು ಕೊಟ್ಟು, ರಾತ್ರೋರಾತ್ರಿ ಶತೃಸೈನಿಕರಲ್ಲಿ ಗೊಂದಲವೆಬ್ಬಿಸಿ ಗಿಡಿಯೆನ್ ದುಷ್ಟರನ್ನು ಸೋಲಿಸುತ್ತಾನೆ. ಯಹೂದಿಗಳ ಹೀಬ್ರೂ ಭಾಷೆಯಲ್ಲಿ ಗಿಡಿಯೆನ್ ಎಂದರೆ ನಾಶ ಮಾಡುವವನು ಇಲ್ಲವೆ ಭೀಮಬಲದ ಸೈನಿಕ ಎಂಬ ಅರ್ಥವಿದೆ.

ಅಮೇರಿಕದಲ್ಲಿನ ಫ಼್ಲಾರಿಡಾ ರಾಜ್ಯದಲ್ಲಿ 1961 ಜೂನ್ 3 ರಂದು ಕ್ಲಾರೆನ್ಸ್ ಅರ್ಲ್ ಗಿಡಿಯೆನ್ ಎನ್ನುವವನನ್ನು ಬಾರ್ ಒಂದಕ್ಕೆ ನುಗ್ಗಿ ಕೆಲವು ಬಿಯರ್ ಮತ್ತು ಸೋಡಾ ಬಾಟಲ್‌ಗಳನ್ನು ಹಾಗೂ 5 ಡಾಲರ್ ಚಿಲ್ಲರೆ ಹಣವನ್ನು ಕದ್ದ ಅರೋಪದ ಮೇಲೆ ಪೋಲಿಸರು ಬಂಧಿಸುತ್ತಾರೆ. ಐವತ್ತು ವರ್ಷದ ಗಿಡಿಯೆನ್ ನಿಜವಾಗಲೂ ಬಡವ. ಆತನಿಗೆ ತನ್ನ ಪರವಾಗಿ ವಾದಿಸಲು ಲಾಯರ್ ಒಬ್ಬನನ್ನು ಇಟ್ಟುಕೊಳ್ಳುವ ತಾಕತ್ತಿರುವುದಿಲ್ಲ. ನಿನ್ನ ಕೇಸನ್ನು ನೀನೆ ವಾದಿಸಿಕೊ ಎಂದು ಕೋರ್ಟು ಸೂಚಿಸುತ್ತದೆ. ವೃತ್ತಿಪರ ಲಾಯರ್‌ಗಳ ಮುಂದೆ ಇವನದ್ಯಾವ ವಾದ? ಬಂಧನದ ಎರಡು ತಿಂಗಳ ನಂತರ ಜಡ್ಜು ಅವನಿಗೆ ಆ ತಪ್ಪಿಗೆ ಗರಿಷ್ಠಶಿಕ್ಷೆಯಾದ 5 ವರ್ಷಗಳ ಜೈಲುವಾಸ ವಿಧಿಸುತ್ತಾನೆ.

ಜೈಲಿನಲ್ಲಿ ಗಿಡಿಯೆನ್ ಸುಮ್ಮನೆ ಕೂರುವುದಿಲ್ಲ. ಅಮೇರಿಕದ ಕಾನೂನು ವ್ಯವಸ್ಥೆಯನ್ನು ಓದಲು ಪ್ರಾರಂಭಿಸುತ್ತಾನೆ. ಅದರಲ್ಲಿ ಅವನಿಗೆ ತನಗೆ ಶಿಕ್ಷೆ ವಿಧಿಸಿರುವ ಜಡ್ಜು ತನ್ನ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಿರುವುದು ಗೊತ್ತಾಗುತ್ತದೆ. ಕೂಡಲೆ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಎಫ಼್.ಬಿ.ಐ. ಗೆ ಮತ್ತು ರಾಜ್ಯದ ಹೈಕೋರ್ಟಿಗೆ ಪತ್ರ ಬರೆಯುತ್ತಾನೆ. ಅವರಿಂದ ಯಾವುದೆ ಉತ್ತರ ಬರುವುದಿಲ್ಲ. ಗಿಡಿಯೆನ್ ನೇರವಾಗಿ ಅಮೇರಿಕ ದೇಶದ ಸುಪ್ರೀಮ್‌ಕೋರ್ಟಿಗೇ ಐದು ಪುಟಗಳ ಕಾಗದ ಬರೆಯುತ್ತಾನೆ. ಜೈಲಿಗೆ ಬಂದ ನಾಲ್ಕು ತಿಂಗಳಿನಲ್ಲಿಯೆ ಇವೆಲ್ಲವನ್ನೂ ಮಾಡುತ್ತಾನೆ. ಕಾಗದ ನೋಡಿದ ಸುಪ್ರೀಮ್‌ಕೋರ್ಟು ಗಿಡಿಯೆನ್ನನ ವಾದವನ್ನು ಪರಿಶೀಲಿಸಲು ಒಪ್ಪಿಕೊಂಡು ವಿಚಾರಣೆಯನ್ನು ಒಂದು ವರ್ಷದ ನಂತರ ಆರಂಭಿಸುತ್ತದೆ. ಗಿಡಿಯೆನ್ನನ ಪರವಾಗಿ ವಾದಿಸಲು ವಕೀಲರನ್ನು ಕೋರ್ಟೆ ನೇಮಿಸುತ್ತದೆ. ವಾದ-ಪ್ರತಿವಾದದ ನಂತರ, ಗಿಡಿಯೆನ್ನನ ವಿರುದ್ಧದ ಮೊಕದ್ದಮೆಯಲ್ಲಿ ನ್ಯಾಯಾಲಯ ಆತನ ಪರವಾಗಿ ವಾದಿಸಲು ವಕೀಲನನ್ನು ನೇಮಿಸದೆ ಇರುವುದರಿಂದ ಆತನ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಸುಪ್ರೀಮ್ ಕೋರ್ಟಿನ ಒಂಬತ್ತೂ ನ್ಯಾಯಾಧೀಶರು ಸರ್ವಾನುಮತದಿಂದ ಒಪ್ಪಿಕೊಂಡು, ತನ್ನ ಪರವಾಗಿ ವಕೀಲನನ್ನು ಇಟ್ಟುಕೊಳ್ಳುವ ಆರ್ಥಿಕ ತ್ರಾಣವಿಲ್ಲದ ಪ್ರತಿಯೊಬ್ಬ ಕ್ರಿಮಿನಲ್ ಆರೋಪಿಗೂ ನ್ಯಾಯಾಲಯಗಳು ವಕೀಲನನ್ನು ಒದಗಿಸಬೇಕು ಎಂಬ ಆದೇಶ ನೀಡುತ್ತದೆ.

ಈ ತೀರ್ಪು ಅಮೇರಿಕದ ನ್ಯಾಯ ವ್ಯವಸ್ಥೆಯಲ್ಲಿ ಒಂದು ಮಹತ್ವದ ತೀರ್ಪು. ಹೀಗೆ ತೀರ್ಪು ಬಂದ ಕೂಡಲೆ ಫ಼್ಲಾರಿಡಾ ರಾಜ್ಯಸರ್ಕಾರ ಪುನರ್‌ವಿಚಾರಣೆಯ ಖರ್ಚು ಉಳಿಸಲು ಗಿಡಿಯೆನ್ನನ ತರಹವೆ ವಕೀಲನಿಲ್ಲದೆ ಶಿಕ್ಷೆಗೊಳಗಾಗಿದ್ದ 2000 ಕೈದಿಗಳನ್ನು ಬಿಡುಗಡೆ ಮಾಡಿಬಿಡುತ್ತದೆ. ಆದರೆ ಗಿಡಿಯೆನ್ ಬಿಡುಗಡೆಗೆ ಒಪ್ಪಿಕೊಳ್ಳುವುದಿಲ್ಲ. ಮತ್ತೆ ತನ್ನ ಕೇಸನ್ನು ವಿಚಾರಣೆ ಮಾಡಲು ಕೇಳಿಕೊಳ್ಳುತ್ತಾನೆ. ಈ ಸಲ ಕೋರ್ಟು ಆತನಿಗೆ ಸರ್ಕಾರಿ ವೆಚ್ಚದಲ್ಲಿ ವಕೀಲನನ್ನು ಒದಗಿಸುತ್ತದೆ. ಪೋಲಿಸರು ಮತ್ತು ಸರ್ಕಾರಿ ವಕೀಲರು ಅವನ ಕಳ್ಳತನ ಸಾಬೀತು ಮಾಡಲು ಈ ಬಾರಿ ವಿಫಲರಾಗುತ್ತಾರೆ. ವಾದಪ್ರತಿವಾದದ ನಂತರ ನ್ಯಾಯಮಂಡಳಿ ಕೇವಲ ಒಂದು ಗಂಟೆಯ ಸಮಾಲೋಚನೆಯಲ್ಲಿ ಗಿಡಿಯೆನ್ ನಿರಪರಾಧಿ ಎನ್ನುವ ತೀರ್ಮಾನಕ್ಕೆ ಬರುತ್ತದೆ. ಎರಡು ವರ್ಷಗಳ ಜೈಲು ವಾಸದ ನಂತರ ಗಿಡಿಯೆನ್ ನಿರಪರಾಧಿಯಾಗಿ ಹೊರಬರುತ್ತಾನೆ.

ಅಮೇರಿಕದ ಕಳೆದ ಅರ್ಧಶತಮಾನದ ರಾಜಕೀಯ ಇತಿಹಾಸವನ್ನು ತೆಗೆದುಕೊಂಡರೆ, ಈ ದೇಶದ ಬಹುಸಂಖ್ಯಾತ ಜನ ಕೇವಲ ಇಬ್ಬರು ರಾಜಕಾರಣಿಗಳ ಅನಿರೀಕ್ಷಿತ ಸಾವಿಗೆ ಮಮ್ಮಲಮರುಗಿ, ಅಕ್ಷರಶಃ ಗೋಳಾಡಿ ಕಣ್ಣೀರಿಟ್ಟಿದ್ದಾರೆ. ಅವರಿಬ್ಬರೂ ಸಹಸ್ರಾರು ಜನರ ಎದುರಿಗೆ ಐದು ವರ್ಷಗಳ ಅಂತರದಲ್ಲಿ ಕೊಲೆಯಾದವರು. ಇಬ್ಬರೂ ಅಣ್ಣತಮ್ಮಂದಿರು. ಅಣ್ಣ ಜಾನ್ ಕೆನ್ನೆಡಿ, ತಮ್ಮ ಬಾಬ್ಬಿ ಅಥವ ರಾಬರ್ಟ್ ಕೆನ್ನೆಡಿ. ಅಣ್ಣ ಅಮೇರಿಕದ ಅಧ್ಯಕ್ಷನಾಗಿದ್ದಾಗ ಕೊಲೆಯಾದರೆ, ತಮ್ಮ ಅಧ್ಯಕ್ಷ ಚುನಾವಣೆಗೆ ನಿಂತು, ಇನ್ನೇನು ಗೆಲ್ಲುವುದು ಖಡಾಖಂಡಿತ ಎನ್ನುವ ಪರಿಸ್ಥಿತಿಯಲ್ಲಿ ಕೊಲೆಯಾಗುತ್ತಾನೆ. ಸಾಯುವಾಗ ಅಣ್ಣನಿಗೆ 46 ವರ್ಷ ವಯಸ್ಸಾಗಿದ್ದರೆ ಬಾಬ್ಬಿಗೆ ಕೇವಲ 43 ವರ್ಷ ವಯಸ್ಸು. ಕಳೆದ ಅರ್ಧಶತಮಾನದ ಭಾರತದ ಇತಿಹಾಸವನ್ನು ಗಮನಿಸಿದರೆ ನಮಗೆ ಬಾಬ್ಬಿಯಂತಹ ಬುದ್ಧಿವಂತ, ನಿಷ್ಠುರ, ನೈತಿಕ ನಿಲುವುಗಳ ಪ್ರಾಮಾಣಿಕ ರಾಜಕಾರಣಿ ಕಾಣಸಿಗುವುದು ಅಪರೂಪ. ಕೇವಲ 35 ವರ್ಷ ವಯಸ್ಸಿಗೇ ಅಣ್ಣನ ಸರ್ಕಾರದಲ್ಲಿ ಅಮೇರಿಕದ ಕಾನೂನು ಮಂತ್ರಿಯಾಗುವ ಬಾಬ್ಬಿ, ಕೇವಲ 3 ವರ್ಷಗಳ ತನ್ನ ಅಧಿಕಾರವಧಿಯಲ್ಲಿ ದೊಡ್ಡದೊಡ್ಡ ಮಾಫ಼ಿಯಾಗಳನ್ನು, ಭೂಗತ ಲೋಕದ ವ್ಯವಸ್ಥಿತ ಅಪರಾಧಗಳನ್ನು ಮಟ್ಟ ಹಾಕಿದ್ದೆ ಅಲ್ಲದೆ, ಕಪ್ಪುಜನರ ನಾಗರಿಕ ಹಕ್ಕುಗಳ ಹೋರಾಟಕ್ಕೆ ಬೆಂಬಲ ಕೊಡುತ್ತಾನೆ.

ಗಿಡಿಯೆನ್ನನ ಬಿಡುಗಡೆಯ ನಂತರ ಬಾಬ್ಬಿ ಕೆನ್ನೆಡಿ ಈ ಕೇಸಿನ ಬಗ್ಗೆ ಹೀಗೆ ಹೇಳುತ್ತಾನೆ: "ಫ಼್ಲಾರಿಡಾದ ಕ್ಲಾರೆನ್ಸ್ ಗಿಡಿಯೆನ್ ಎಂಬ ಸಾಧಾರಣ ಆರೋಪಿ ಜೈಲಿನಲ್ಲಿ ಕುಳಿತು ಪೆನ್ನು ಮತ್ತು ಪೇಪರ್ ಹಿಡಿದು ಸುಪ್ರೀಮ್ ಕೋರ್ಟಿಗೆ ಒಂದು ಕಾಗದ ಬರೆಯದೆ ಹೋಗಿದ್ದರೆ, ಹಾಗೂ ತನಗೆ ಪ್ರತಿದಿನವೂ ಬರುವ ರಾಶಿರಾಶಿ ಕಾಗದಗಳಲ್ಲಿ ಆ ಕಾಗದದ ಪ್ರಾಮುಖ್ಯತೆಯನ್ನು ನೋಡುವ ತೊಂದರೆಯನ್ನು ಸುಪ್ರೀಮ್ ಕೋರ್ಟು ತೆಗೆದುಕೊಳ್ಳದೆ ಹೋಗಿದ್ದರೆ, ಅಮೇರಿಕದ ಬೃಹತ್ ಕಾನೂನು ವ್ಯವಸ್ಥೆ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಹೋಗುತ್ತಿತ್ತು. ಆದರೆ, ಗಿಡಿಯೆನ್ ಆ ಕಾಗದ ಬರೆದ; ಕೋರ್ಟು ಅದನ್ನು ನೋಡಿತು. ತಾನು ಮಾಡಿರದ ತಪ್ಪಿಗೆ ಎರಡು ವರ್ಷ ಜೈಲುವಾಸ ಅನುಭವಿಸಿ, ನಂತರ ಸಮರ್ಥ ವಕೀಲನ ಸಹಾಯದಿಂದ ಗಿಡಿಯೆನ್ ನಿರಪರಾಧಿ ಎಂದು ಸಾಬೀತಾಗಿ ಬಿಡುಗಡೆಯಾದ. ಹಾಗೂ, ಅಮೇರಿಕದ ಇಡೀ ನ್ಯಾಯಾಂಗ ಚರಿತ್ರೆಯ ದಿಕ್ಕೆ ಬದಲಾಯಿತು."


ಲೇಖನಿಯೆಂಬ ಆಧುನಿಕ ಕಾಲದ ಕಹಳೆಯನ್ನು ಮೊಳಗಿಸಿದ ಈ ಗಿಡಿಯೆನ್ನನ ಕೋರ್ಟು ಕತೆಯನ್ನು 1980 ರಲ್ಲಿ ಗಿಡಿಯೆನ್ನನ ಕಹಳೆ ಎಂಬ ಹೆಸರಿನಲ್ಲಿ ಸಿನೆಮಾ ಮಾಡಲಾಯಿತು. ಹಾಲಿವುಡ್ಡಿನ ಪ್ರತಿಭಾವಂತ, ಸಹಜನಟರಲ್ಲಿ ಒಬ್ಬನಾದ ಹೆನ್ರಿ ಫ಼ಾಂಡ ಈ ಚಿತ್ರದಲ್ಲಿ ಅಮೋಘವಾದ ಅಭಿನಯ ನೀಡಿದ್ದಾನೆ. ಈ ದೇಶ ತನ್ನ ದೇಶದ ಇತಿಹಾಸವನ್ನು, ತನ್ನ ಹೀರೋಗಳನ್ನು ಮುಂದಿನ ಜನಾಂಗಕ್ಕೆ ತಿಳಿಯಪಡಿಸುವುದು, ದಾಖಲು ಮಾಡುವುದು ಇಂತಹ ವಸ್ತುನಿಷ್ಠ ಐತಿಹಾಸಿಕ ಚಿತ್ರಗಳ ಮೂಲಕ.